ಶಾರ್ದೂಲವಿಕ್ರೀಡಿತ

ಶ್ರೀಮನ್ಮಾರುತನಂದನಾರ್ಚಿತಪದಂ ಶಾಂತಂ ರಮಾವಲ್ಲಭಂ
ಸೋಮಾದಿತ್ಯ ಸಹಸ್ರಕೋಟಿರುಚಿರಂ ಸುಜ್ಞಾನದೇವಂ ಹರಿಮ್ |
ಕಾಮಾರಾತಿಸಖಂ ಕರೀಂದ್ರವರದಂ ಕಾರುಣ್ಯಕಲ್ಪದ್ರುಮಂ
ಭೀಮಂ ಭಕ್ತಜನಾನುತಾಪಶಮನಂ ಶ್ರೀಕೃಷ್ಣದೇವಂ ಭಜೇ || || 1 ||

ರಾಗ ನಾಟಿ ರೂಪಕತಾಳ

ಶ್ರೀಗಣಾಧೀಶ್ವರ ಗಜಾನನ | ಯೋಗಿಹತ್ಪದ್ಮಾಸನ ||
ಭಾಗವತಜನ ಭಯನಿವಾರಣ | ನಾಗಭೂಷ ನಿರಂಜನ ||
ಶರಣು ಶರಣು || 2 ||

ವಿಘ್ನ ಕುಲ ಜೀಮೂತಮಾರುತ | ವಿಘ್ನಘನಸಿಂಹ್ವಾಯತ ||
ವಿಘ್ನವಿಪಿನಕುಠಾರ ಶುಭಕರ | ವಿಘ್ನಹರ ಲಂಬೋದರ ||
ಶರಣು ಶರಣು || 3 ||

ಮಧುರತರ ಜಂಬೂಫಲಾಶನ | ವಿಜಿತ ಮೂಷಕವಾಹನ ||
ತ್ರಿದಶವಂದಿತ ಕುಡುಮಪುರ ವರ | ಸದನವಿಭು ದ್ವೈಮಾತುರ ||
ಶರಣು ಶರಣು || 4 ||

ವಾರ್ಧಕ

ದುರುಳಗಜದಾನವಧ್ವಂಸನಂ ಹಂಸನಂ |
ತರುಣಾರ್ಕಶತಕೋಟಿ ಧಾಮನಂ ಭೀಮನಂ |
ಗಿರಿಶನಂ ವಿದ್ಯಾಸಮುದ್ರನಂ ರುದ್ರನಂ ವರಮಹಾ ಗಂಗಾರ್ದ್ರನಂ ||
ಸುರುಚಿರಶಶಾಂಕಾರ್ಧಚೂಡನಂ ಪ್ರೌಢನಂ |
ಬಿರುದಾಂತ ಭೂತಗಣವರ್ಗನಂ ಭರ್ಗನಂ |
ಮೆರೆವ ಕುಡುಮಪುರಾಧಿವಾಸನಂ ಈಶನಂ ಸ್ಮರಿಸಿ ಕತಿಯಂ ಪೇಳ್ವೆನು  || 5 ||

ಪವನಸಂಜಾತನಂ ರಾಘವನ ದೂತನಂ |
ಭುವನೈಕಚರಿತನಂ ಸಾಮಗುಣಭರಿತನಂ |
ದಿವಿಜರಿಪುಮಥನನಂ ವರಪುಣ್ಯ ಕಥನನಂ ವೀರನಂ ಧುರಧೀರನಂ ||
ಭುವನತ್ರಯಾಪ್ತನಂ ಮೂಜಗದ್ವ್ಯಾಪ್ತನಂ |
ರವಿಕೋಟಿತೇಜನಂ ವಿಜಿತಕುರುರಾಜನಂ |
ವಿವಿಧವಿದ್ವಜ್ಞನಂ ಶ್ರೀಪೂರ್ಣಪ್ರಜ್ಞನಂ ತುತಿಸಿ ಮತಿಯಂ ಪಡೆವೆನು || 6 ||

ಭಾಮಿನಿ

ಇಂದಿರೆಗೆ ತಲೆವಾಗಿ ಪರಮಾ |
ನಂದಭಕ್ತಿಯೊಳಜನ ಧ್ಯಾನಿಸಿ |
ವಂದಿಸುವೆ ಶಾರದೆಗೆ ಶಕ್ರಾದ್ಯಮರರಿಂಗೆರಗಿ ||
ನಾಂದಿಯೊಳು ವರವ್ಯಾಸ ಮುನಿಪದ |
ದ್ವಂದ್ವಕಾನತನಾಗಿ ಕವಿಗಳ |
ಸಂದಣಿಯ ಸಂಸ್ತುತಿಸಿ ಪೇಳುವೆ ನೀ ಕಥಾಮತವ || 7 ||

ದ್ವಿಪದಿ

ಶ್ರೀಮಹಾಭಾರತಪುರಾಣಕಥನದಲಿ |
ಭೂಮಿಪತಿ ಕುರುನಪಾಲಕನ ವಿಪಿನದಲಿ || 8 ||

ಚಿತ್ರಸೇನಾಖ್ಯ ಗಂಧರ್ವ ಕೋವಿದನು |
ಸುತ್ರಾಮನಾಜ್ಞೆಯಲಿ ಕೊಂಡೊಯ್ಯಲವನು || 9 ||

ಧರ್ಮಜನ ನೇಮದಿಂದಲಿ ಧನಂಜಯನು |
ಧರ್ಮದಲಿ ತಂದು ಬಿಡಿಸಿರ್ದ ಕಥನವನು || 10 ||

ಪೇಳುವೆನು ತಿಳಿದಂತೆ ಯಕ್ಷಗಾನದಲಿ |
ಕೇಳಿ ತಪ್ಪಿರೆ ತಿದ್ದಿ ಮೆರೆಸಿ ಧರಣಿಯಲಿ || 11 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಜವಂಶಲಲಾಮನಹ ಜನ | ಮೇಜಯಕ್ಷಿತಿಪಾಲನಿಗೆ ಮುನಿ |
ರಾಜ ವೈಶಂಪಾಯನಾಖ್ಯ ವಿ | ರಾಜಿಸುತಲಿ || 12 ||

ಭಾರತಾಮತ ಸಾರವನು ವಿ | ಸ್ತಾರದಲಿ ಪೇಳ್ತಿರಲು ಪುನರಪಿ |
ಧಾರಣೀಶನು ತನ್ಮುನೀಂದ್ರನ | ಚಾರು ಪದಕೆ || 13 ||

ನಮಿಸಿ ಕೇಳ್ದನು ಚಿತ್ರಸೇನನು | ಕುಮತಿ ಕುರುಭೂಪತಿಯನೊಯ್ಯಲು |
ಗಮಿಸಿ ಫಲುಗುಣ ತಂದು ಬಿಡಿಸಿದ | ವಿಮಲ ಕಥೆಯ || 14 ||

ಸಾಂಗದಿಂ ಪೇಳೆನುತ ನಪ ಸ | ರ್ವಾಂಗಪುಳಕಿತನಾಗಿ ಕೇಳಲು |
ಮುಂಗಥೆಯ ಮುನಿ ಪೇಳ್ದ ಶಶಿಕುಲ | ಪುಂಗವಂಗೆ || 15 ||

ರಾಗ ಭೈರವಿ ಝಂಪೆತಾಳ

ಜನಮೇಜಯಕ್ಷಿತೀ | ಶನೆ ಕೇಳು ಪಾಂಡವರ |
ಘನತರದ ಚರಿತೆಗಳ | ನನುರಾಗದಿಂದ || 16 ||

ಕಾಮ್ಯಕಾರಣ್ಯದಲಿ | ಧೌಮ್ಯಾಶ್ರಮದೊಳು ಘನ |
ರಮ್ಯದಿಂ ನಿಮ್ಮವರು | ನಿರ್ಮಲದೊಳಿರುತ || 17 ||

ದಯಗೈದ ಸೂರ್ಯನ | ಕ್ಷಯಪಾತ್ರೆಯಿಂದ ಬುಧ |
ಚಯವ ಸಲಹುತಲೆ ನಿ | ರ್ಭಯದೊಳಿರುತಿರಲು || 18 ||

ವರಪತಿವ್ರತೆಯಾದ | ತರುಣಿ ದ್ರೌಪದಿಸಹಿತ |
ಹರಿಯ ಧ್ಯಾನಿಸುತಲಿ | ರ್ದರು ನಿರಂತರದಿ || 19 ||

ಖ್ಯಾತರಲ್ಲಿಯ ಮುನಿ | ವ್ರಾತ ಸಹಿತಲಿ ಪಾಂಡು |
ಜಾತರೈತಂದರೆಮು | ನಾತೀರದೆಡೆಗೆ || 20 ||

ಮಲ್ಲಸಾಹಸವಂತ | ರಲ್ಲಿ ತೀರ್ಥಾಚರಣೆ |
ಯುಲ್ಲಸದೊಳಿರಲು ಶ್ರೀ | ವಲ್ಲಭನ ದಯದಿ || 21 ||

ವಾರ್ಧಕ

ಪೃಥ್ವೀಂದ್ರ ಕೇಳ್ ಧೌಮ್ಯಮುಖ್ಯರೊಡನಿಂತು ಭೂ |
ಪೋತ್ತಮರಿರಲ್ಕೆ ತಾನಿಭಪುರಿಯೊಳನುದಿನಂ |
ಧೂರ್ತ ಕೌರವನುರುತರೈಶ್ವರ್ಯದಿಂದಿರ್ದನಾಪ್ತಜನಸಹಿತಲಂದು ||
ಮತ್ತಲ್ಲಿಗಮಲ ದೂರ್ವಾಸಮುನಿಪಂ ಬರ |
ಲ್ಕತ್ಯಧಿಕ ಸಂಭ್ರಮದೊಳಾತನಂ ಮನ್ನಿಸಲ್ |
ಚಿತ್ತದೊಳಗಿರ್ದುದಂ ಕೇಳು ಮೆಚ್ಚಿದೆನೆನಲು ಕುರುರಾಯನಿಂತೆಂದನು || 22 ||

ಮುನಿರಾಯ ಕೇಳ್ ಪಾಂಡುತನುಜಾತರಿಪ್ಪ ಕಾ |
ನನಕಾಗಿ ಪೋಪುದವರುಂಡಾದ ಮೇಲೆ ಭೋ |
ಜನವಾಗಬೇಕೆನಲ್ಕುಪಚರಿಸದಿರೆ ಕೋಪದಿಂ ಶಾಪವಿತ್ತು ಬಿಡದೆ ||
ಎನಗಿದೊಂದುಪಕಾರಮಂ ಮಾಡಬೇಕು ನೀ |
ವೆನೆ ಕೇಳ್ದು ಯೋಗಿಪಂ ಶಿಷ್ಯರಂ ಕೂಡಿಕೊಂ |
ಡನುವಾಗಿ ಮರುದಿವಸ ಮಧ್ಯಾಹ್ನವಾದ ಬಳಿಕೈತಂದರವನ ಬಳಿಗೆ || 23 ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಬಂದ ವರದೂರ್ವಾಸಮುನಿಪನ | ಚಂದದಿಂದಿದಿರ್ಗೊಂಡು ಮನ್ನಣೆ |
ಯಿಂದ ದರ್ಭಾಸನವನಿತ್ತಾ | ನಂದದಿಂದರ್ಚಿಸಿದನು |
ಧರ್ಮರಾಯ || 24 ||

ಅಡಿಗಡಿಗೆ ಧೌಮ್ಯಾದಿ ುುನಿಗಳ | ಗಡಣವೆರಗಲು ಮನ್ನಿಸುತ ಮುನಿ |
ಮಡನು ಪೇಳ್ದನು ಶಿಷ್ಯಜನಸಹಿ | ತೊಡನೆ ಹಸಿದೆವೆನುತ್ತಲಿ |
ಭೂಪನೊಡನೆ || 25 ||

ಕೇಳಿ ಧರ್ಮಜ ಧೈರ್ಯಗುಂದದೆ | ಹೇಳಿದನು ಸ್ನಾನಾದಿಗಳ ಮುನಿ |
ಜಾಲಸಹಿತೆಸಗುವುದೆನಲ್ಕದ | ನಾಲಿಸುತಲವರೆದ್ದರು |
ನದಿಯ ಬಳಿಗೆ || 26 ||

ಭಾಮಿನಿ

ಅರಸ ಕೇಳಾ ಮುನಿಗಳೆಮುನೆಗೆ |
ತೆರಳಲಿತ್ತಲು ಧರ್ಮಜನು ತರ |
ಹರಿಸಿದನು ಸತಿಯುಂಡಳೆಂಬುದನರಿತು ಭೀತಿಯಲಿ ||
ಉರಿಹೊಡೆದ ಕೆಂದಾ ವರೆಯವೋಲ್ |
ಕರಿಕುವರಿದುದು ಮೊಗವು ನಾನಾ |
ಪರಿಯೊಳಳಲಿದನಾ ಯುಧಿಷ್ಠಿರನಧಿಕ ದುಗುಡದಲಿ || 27 ||

ರಾಗ ನೀಲಾಂಬರಿ ರೂಪಕತಾಳ

ಏನ ಮಾಡಲಿ ನಾನೀ | ಯತಿಗಳ ಸಂತೈಸಲು ಬಲು |
ಹಾನಿಯು ಬಂತಲ್ಲ ಮುಂ | ದೇನೆಸಗುವೆ ಶಿವನೆ || 28 ||

ಮಾನಿನಿಯುಂಡಾಳೆಂಬುದ | ನರಿಯದೆ ಮಾತನು ಕೊಟ್ಟೆನು |
ಸ್ನಾನವ ವಿರಚಿಸಿ ಮುನಿಗಳು | ಬರಲಿನ್ನೇನ್ ಗತಿಯೊ || 29 ||

ಆಡಿದ ಮಾತಿಗೆ ಧರ್ಮಜ | ತಪ್ಪಿದನೆಂಬಪಕೀರ್ತಿಯು |
ರೂಢಿಯೊಳಾಯಿತು ಶಿವ ಶಿವ | ಪೇಳುವೆನಾರ್ಗಿನ್ನು || 30 ||

ಏನೆಂದಾ ಋಷಿ ಶಾಪವ | ಕೊಡುವೆನೊ ನಾನಿದನರಿಯೆನು |
ದಾನವವೈರಿಯೆ ಬಲ್ಲನು | ಹರ ಚಿತವಿದಕಯ್ಯೋ || 31 ||

ಬೆಟ್ಟಾರಣ್ಯದೊಳಿರ್ದರು | ಬಿಡದಲ್ಲಾ ಪ್ರಾರಬ್ಧವು |
ಕೆಟ್ಟೆನು ನಾನಿಂದಿನೊಳೆನು | ತಳಲಿದ ಧರ್ಮಜನು || 32 ||

ಭಾಮಿನಿ

ಇಂತೆನುತ ಯಮಸಂಭವನು ಬಲು |
ಚಿಂತಿಸುತ ಮರುಗಿದನು ಮನದಿ ಕು |
ಲಾಂತಕನು ತಾನಾದೆನೆನುತಲಿ ಬಿಗಿದ ಬೆರಗಿನಲಿ ||
ಅಂತರವನರಿತಾಗ ಭೀಮ ಮ |
ಹಾಂತ ರೋಷಾವೇಶದಲಿ ಕ |
ಲ್ಪಾಂತ ರುದ್ರನ ತೆರದಿ ಗದೆ ಗೊಂಡೆಂದನೀ ತೆರದಿ || 33 ||

ರಾಗ ಮಾರವಿ ಏಕತಾಳ

ಅಗ್ರಜ ಬಿಡು ಬಿಡು ಚಿಂತೆಯನೀಗ ಸ | ಮಗ್ರ ಸುರಾಧಿಪನ ||
ಸ್ವರ್ಗದ ದುರ್ಗವ ಬಡಿದೆಳೆತರುವೆನು | ಶೀಘ್ರದಿ ಸುರಪಶುವ || 34 ||

ಶೂಲಿಯೆ ಬಂದಡ್ಡೈಸಲಿ ತಡೆಯಲಿ | ಕಾಲನೆ ಬರಲಿಂದು ||
ಆಲಸ್ಯವ ಮಾಡದೆ ತಹೆ ಮುನಿಜನ | ಜಾಲ ತಪ್ತಿಪಡಲಿ || 35 ||

ಎನಲೆಂದರು ಧೌಮ್ಯಾದಿ ಮುನಿಂದ್ರರು | ಜನಪನಿಗಾಕ್ಷಣದಿ ||
ಇನಿತ್ಯಾತಕೆ ಮುರಮಥನನ ಚರಣವ | ನೆನೆಯ ಬಾರದೆ ಬೇಗ | 36 ||

ಯುವತೀಮಣಿಗಕ್ಷಯವಸ್ತ್ರವನಿ | ತ್ತವಗಡದಲಿ ಕಾಯ್ದ ||
ಭುವನಾನಂದನಿಧಿಯ ನಂಬಿ ಹರಿಗೆ | ಭವಣೆ ಬರುವುದುಂಟೆ || 37 ||

ಎಂದ ಮಹಾತ್ಮರ ವಚನದಿ ದ್ರೌಪದಿ | ನಿಂದೇಕದಢದಿ ||
ವಂದಿಸುತಲೆ ಸಂಸ್ತುತಿ ಗೈದಳು ಗೋ | ವಿಂದನೆ ಗತಿಯೆನುತ || 38 ||

ವಾರ್ಧಕ

ಜಯ ಜಯ ಜಗದ್ಭರಿತ ಲೋಕಪಾವನಚರಿತ |
ಜಯ ಜಯ ರಮಾಕಾಂತ ಸಕಲ ಸದ್ಗುಣವಂತ |
ಜಯ ಜಯ ಸರೋಜಾಕ್ಷ ಭಕ್ತಜನ ಸಂರಕ್ಷ ಜಯ ಜಯ ಶ್ರೀಮುಕುಂದ ||
ಜಯ ಜಯ ಸುರೋತ್ತುಂಗ ವಿಧತಶಂಖ ರಥಾಂಗ |
ಜಯ ಜಯಾಘವಿದೂರ ಸಕಲ ಸದ್ಗುಣಹಾರ |
ಜಯ ಜಯ ಘನಶ್ಯಾಮ ದುಷ್ಟಕಂಸವಿರಾಮ ಜಯತೆಂದಳಿಂದುವನೆ || 39 ||

ಭಾಮಿನಿ

ಹಿಂದೆ ಕಾಯ್ದವ ನೀನೆ ಕಂಟಕ |
ಬಂದ ವೇಳ್ಯದೊಳಂಬರೀಷನ |
ನೆಂದಿಗಾದರು ನಿನ್ನ ಹೊಂದಿರ್ದವರ ಬಹುಭಾರ ||
ಸಿಂಧುಶಯನನೆ ನಿನಗಿದಲ್ಲದೆ |
ಬಂದು ಕಾಯ್ವ ಕಾಣೆನೆನುತರ |
ವಿಂದಮುಖಿ ಧ್ಯಾನಿಸಲು ಮೈದೋರಿದನು ಮುರವೈರಿ || 40 ||

ರಾಗ ಕೇದಾರಗೌಳ ಝಂಪೆತಾಳ

ಬಂದ ಭವಭಯನಾಶನು | ದ್ರೌಪದಿಯ | ಮುಂದೆ ನಿಂದೊಲಿದೆಂದನು ||
ಬಂದವಚಿದಾಪತ್ತನು | ಬೇಗುಸಿರಿ | ರೆಂದು ಕರುಣದಿ ಕೇಳ್ದನು || 41 ||

ಬಸಿವ ಕಂಬನಿಯಿಂದಲಿ | ಯಮಜಾದ್ಯ | ರುಸಿರುತೆರಗಿದರಡಿಯಲಿ ||
ಋಷಿಯ ಸಂತೈಸಲಾಗಿ | ನಿಮ್ಮ ಧ್ಯಾ | ನಿಸಿದೆವಾವೆಲ್ಲ ಮರುಗಿ || 42 ||

ಎನಲು ದ್ರೌಪದಿಯ ಕರೆದು | ಕ್ಷುತ್ತು ಬಹ | ಳೆನುತ ಕಂಸಾರಿ ಒಲಿದು ||
ವಿನಯದಿಂ ಕೇಳುತಿರಲು | ನಿಜ ಪಾತ್ರೆ | ಯನು ಬಳಿದು ತಂದಿತ್ತಲೂ || 43 ||

ಕೊಂಡ ಶ್ರೀಹರಿಯು ಕರದಿ | ಶೇಷಾನ್ನ | ವುಂಡು ಹರುಷಿಸಲು ಭರದಿ ||
ಹಿಂಡು ಶಿಷ್ಯರು ಸಹಿತಲೆ | ದೂರ್ವಾಸ | ನುಂಡರಿತನಿದನಾಗಲೆ || 44 ||

ಭಾಮಿನಿ

ಭೂತಳಾದಿಪ ಲಾಲಿಸಷ್ಟಾ |
ಶೀತಿಸಾವಿರ ಶಿಷ್ಯಜನಸಹಿ |
ತಾತುಮಗೆ ಸಂತುಷ್ಟಿಯಾಗಿಯೆ ತೇಗುತಡಿಗಡಿಗೆ ||
ಖ್ಯಾತ ಮುನಿವರನೆದ್ದು ಬಂದು ಸ |
ನಾತನನ ಕಂಡಪ್ಪಿದನು ಪರ |
ಮಾತುಮನೆ ನಿನ್ನಮಿತ ಮಹಿಮೆಯನರಿವರಾರೆಂದ || 45 ||

ರಾಗ ಮಧ್ಯಮಾವತಿ ಏಕತಾಳ

ಆಲಿಸಾಲಿಸು ಗೋಪಿಬಾಲ ಗೋಪಾಲ | ಲೀಲಾವಿನೋದಿ ಸುಶೀಲ |
ಶ್ರೀಲೋಲ || ಅಲಿ || ಪ ||

ಹರಿಯೆ ಲಾಲಿಸು ನಿನ್ನ ಮರೆಹೊಕ್ಕ ಜನರಿಗೆ |
ದುರಿತ ಹೊದ್ದುವುದುಂಟೆ ಕರುಣಾಸಾಗರನೆ ||
ವರ ಪಾಂಡುಸುತರಿಗೆ ನಿರತ ನೀ ವಜ್ರಪಂ |
ಜರನಾಗಿ ಕಾಯ್ದಿರ್ಪೆ ಸರಿಯುಂಟೆಯವರ್ಗೆ ||  || 46 ||

ಖೂಳ ಕೌರವನೆಂದ ಮಾತಿಗೋಸುಗ ಬಂದು |
ಪೇಳಿದೆನಲ್ಲದೆ ಬೇರುಂಟೆ ಕಪಟ ||
ಪಾಲಿಸು ತಪ್ಪಾಯಿತೆನುತಲಾಕ್ಷಣ ಮುನಿ |
ಪಾಲನುದ್ದಂಡ ಸ್ತೋತ್ರವ ಗೈವುತಿರಲು ||  || 47 ||

ಆರೋಗಣೆಯ ಮಾಳ್ಪುದೆನಲೆಂದ ಯಮಜಗೆ |
ಮಾರಮಣಗೆ ತಪ್ತಿಯಾಗಲಾಯ್ತೆಮಗೆ ||
ಬೇರಿಗೆರೆದ ಮೇಲೆ ನೀರೇಕೆ ಶಾಖೆಗೆ |
ಬೇರುಂಟೆ ಮತವೆಂದು ತೆರಳಿದನಂದು ||  || 48 ||

ಭಾಮಿನಿ

ನಪತಿ ಕೇಳಾ ಮುನಿಪನುಗ್ರವ |
ನಪಹರಿಸಿ ಪಾಂಡವರ ಮನ್ನಿಸಿ |
ಕಪಟನಾಟಕನೊಲಿದು ಬಿಜಯಂಗೈದ ದ್ವಾರಕೆಗೆ ||
ವಿಪುಳಹದಯರಿರಲ್ಕೆ ಕಾಮ್ಯಕ |
ವಿಪಿನದಿಂದಲಿ ಪೊರಟು ವಿಪ್ರಾ
ಧಿಪನು ಬಂದನು ಚಿಂತಿಸುತ ಧತರಾಷ್ಟ್ರನರಮನೆಗೆ || 49 ||

ರಾಗ ಸಾಂಗತ್ಯ ರೂಪಕತಾಳ

ಬಂದ ಮುನಿಪನ ಮನ್ನಿಸಿ ಬಹುತರ ಭಕ್ತಿ |
ಯಿಂದಲಾ ಧೃತರಾಷ್ಟ್ರನಪನು ||
ಅಂದವನೊಡನೆ ತಾ ಬೆಸಗೊಂಡ ಬಂದುದೆ |
ಲ್ಲಿಂದೆನುತಧಿಕ ಪ್ರೀತಿಯಲಿ || 50 ||

ಅರಸಗಾ ದ್ವಿಜನೆಂದ ಕಾಮ್ಯಕಾವನದಿಂದ |
ಭರದಿಂದ ಬಂದೆ ತಾನೆನಲು ||
ಸರಸಗುಣಾಢ್ಯರು ಪಾಂಡುನಂದನರಲ್ಲೆಂ |
ತಿರುವರು ಪೇಳೆನಲೆಂದ || 51 ||

ಇಂದುವಂಶಜ ಭೂಪೋತ್ತಮ ಕೇಳು ವರಪಾಂಡು |
ನಂದನರಾ ವನದೊಳಗೆ ||
ಕಂದಮೂಲಗಳಾಹಾರಗಳಿಂದ ಧೌಮ್ಯಮು |
ನೀಂದ್ರನಾಶ್ರಮದೊಳಗಿಹರು || 52 ||

ಗಿರಿಗಹ್ವರಗಳಲ್ಲಿ ಚರಿಸುತ್ತ ದಿನವನು |
ತ್ತರಿಸುತಲಾ ಭೀಮಾರ್ಜುನರು ||
ಹರಿಣಾಕ್ಷಿ ದ್ರೌಪದಿ ಮುನಿವಧುಗಳ ಕೂಡಿ |
ಹರಿಧ್ಯಾನದಿಂದಿರುತಿಹಳು || 53 ||

ಎಂದ ಮಾತನು ಕೇಳಿ ಧತ ರಾಷ್ಟ್ರವತಿಕ್ಲೇಶ |
ದಿಂದ ಭೂಸುರನ ಬೀಳ್ಗೊಂಡು ||
ನೊಂದುಕೊಂಡನು ಬಲುಬಗೆಯಿಂದ ತರಳರ್ಗೆ |
ಬಂದ ಭವಣೆಗಳ ನೆನೆದು || 54 ||

ರಾಗ ನೀಲಾಂಬರಿ ಏಕತಾಳ

ಈ ವಿಧಿಯಾಯ್ತೆ ಯಮಜಗೆ | ಇಂಥಾ ಮಕ್ಕಳು | ಸಾವಿರವಿದ್ದೆನಗೆ ||
ಭಾವಿಕರವರು ಜಗಕೆ | ಅಪಕೀರ್ತಿ ಮುಂದೆ | ತೀವಿತು ಕುರುಕುಲಕೆ || 55 ||

ತಂದೆಯಿಲ್ಲದ ಮಕ್ಕಳಾ | ಕಾನನಕಟ್ಟು | ತಿಂದು ದೇಶಕೋಶಗಳ ||
ಚಂದದಿಂದಾಳುತಿರ್ಪರು | ಎಂಥಾ ದುರ್ಗುಣ | ರೆಂದಾಡದಿಹರೆ ಜನರು || 56 ||

ಸುಡಲಿ ಸುತರ ಭಾಗ್ಯವ | ಅಯ್ಯಯ್ಯ ವಿಧಿಯೆ | ಕಡೆಗೆ ಕಂಡೆನು ಯೋಗ್ಯವ ||
ಕೆಡುಕರೊಳಿಹುದರಿಂದ | ಪ್ರಾಣವ | ಬಿಡುವ ಬುದ್ಧಿಯೆ ಲೇಸೆಂದ || 57 ||

ಭಾಮಿನಿ

ಇಂತು ಚಿಂತಾಕ್ರಾಂತನಾಗಿ ಮ |
ಹಾಂತ ದುಃಖವನಾಂತು ನಪ ತ |
ನ್ನಂತರಂಗದಿ ಮರುಗುತಿರ್ದನು ಬಾಡಿ ಬಸವಳಿದು ||
ಎಂತು ಬಣ್ಣಿಪೆನವನ ದುಗುಡವ |
ನಂತಕನ ಪಿತನಣುಗ ಮಾಯಾ |
ಮಂತ್ರಗಾರುಡಿ ಶಕುನಿ ಸಹ ಬಂದರಸಗರುಹಿದರು || 58 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭೇದವೇಕೆಲೆ ಜೀಯ ನಾವಪ |
ರಾಧಿಗಳು ನಿನ್ನವರವರು ಬಲು |
ಸಾಧುಗಳು ಪಾಂಡವರೆನುತ ಮನ | ಕಾಧರಿಸಿದೆ || 59 ||

ಅವಧಿಯೊಳು ನಿನ್ನವರಿಗತಿ ಸುಖ |
ಅವಧಿ ದಾಟಿದ ಮರುದಿವಸ ಪಾಂ |
ಡವರ ಸಾಹಸ ವರಿಯಬಹುದೈ | ವಿವರವಾಗಿ || 60 ||

ಸತ್ಯಕೋಸುಗ ವಸುಮತಿಯನವ |
ರೊತ್ತೆಯಿಟ್ಟರು ಧರ್ಮರಾಯನ |
ಚಿತ್ತವತ್ತಿಯೊಳೆರಡಿಹುದು ನೀ | ಮತ್ತೆ ನೋಡೈ || 61 ||

ಎಂದೆನುತ ಧತರಾಷ್ಟ್ರಭೂಪಗೆ |
ಬಂದ ಚಿಂತೆಯ ಪರಿಹರಿಸಿ ನಡೆ |
ತಂದು ಕೌರವಗರುಹಿದರು ಸಾ | ನಂದದಿಂದ || 62 ||

ಈ ಸಮಯದಲಿ ಪಾಂಡುಸುತರು ನಿ |
ವಾಸವಾಗಿಹ ವನಕೆ ತೆರಳುವ |
ಘೋಷ ಯಾತ್ರೆಯ ನೆವದೊಳೆಂದರು | ತೋಷದಿಂದ || 63 ||

ಭಾಮಿನಿ

ಎಂದು ಕಲಿಕರ್ಣಾದಿ ಸುಭಟರು |
ಚಂದದಿಂ ನಪವರಗೊರೆಯೆ ತ |
ಮ್ಮಂದಿರಹ ದುಶ್ಶಾಸನಾದ್ಯರ ಮೊಗವನೀಕ್ಷಿಸುತ ||
ಮಂದಹಾಸದೊಳೆಂದನಾ ಯಮ |
ನಂದನಾದ್ಯರಿಗೆಮ್ಮ ಭಾ್ಯಾ |
ನಂದಕರವನು ತೋರ್ಪಡಿದುವೇ ಸಮಯವೆಂದೆನುತ || 64 ||

ರಾಗ ಕಾಂಭೋಜಿ ಝಂಪೆತಾಳ

ಕೇಳಿರನುಜಾತರಿರ ಮನಸಿನಾಲೋಚನೆಯ |
ಪೇಳುವೆನು ನಿಮ್ಮೊಳತಿ ಮುದದಿ ||
ಲೀಲೆಯಲಿ ಮಗಬೇಟೆಗಾಗಿ ಪೋಗುವ ಧೌಮ್ಯ |
ನಾಲಯದ ವನಕೆ ವೈಭವದಿ || 65 ||

ಕರಿಘಟಾವಳಿ ರಥ ಸಹಸ್ರ ಹಯಕೋಟಿಗಳ |
ತರಿಸಿ ಶಂಗರಿಸಿ ತವಕದಲಿ ||
ಮೆರೆವ ಗಣಿಕಾಂಗನೆಯರೊಡನೆ ಬರಹೇಳು ನಿಜ |
ತರುಣಿಯರು ಸಹಿತ ಠೀವಿಯಲಿ || 66 ||

ಘೋಷಯಾತ್ರೆಯ ನೆವದಿ ಪೋಗಿ ನಾವಾ ವನದಿ |
ತೋಷದಲಿ ಮಗಬೇಟೆಯಾಡಿ ||
ಭೂಷಣದಿ ಮೆರೆವಾಗ ಮಾರಿ ಬಂದರೆ ಭೀಮ |
ವಾಸವಾತ್ಮಜರನುರೆ ಸದೆದು || 67 ||

ಬಡಿದು ನಕುಲಾದಿಗಳ ಕೆಡಿಸಿ ಋಷಿವನವ ಸೆರೆ |
ಹಿಡಿದು ದ್ರೌಪದಿಯ ದಾಸಿಯರ ||
ಗಡಣದಲಿ ಕೂಡಿಸುವ ತಡೆಯದನುವಾಗಲೆಂ |
ದೊಡನೆ ಬಂದೆರಗಿದರು ಪಿತಗೆ || 68 ||

ಕಂದ

ಅಡಿಗೆರಗಿದ ನಿಜಸುತನಂ |
ಪಿಡಿದೆತ್ತುತ ಮುದದೊಳಾಗಲಂಧ ನಪಾಲಂ ||
ನುಡಿದನಿದೇನೈ ಹರುಷೋ |
ದ್ಘಡಣೆಯೆನಲ್ಕೆಂದನೊಡನೆ ಕುರುಕುಲತಿಲಕಂ || 69 ||

ರಾಗ ಕೇದಾರಗೌಳ ಅಷ್ಟತಾಳ

ತಾತ ಲಾಲಿಸು ಮಗಬೇಟೆಗೈದುವೆನನು |
ಜಾತರು ಸಹಿತೀಕ್ಷಣ ||
ಪ್ರೀತಿಯಿಂದಪ್ಪಣೆ ಕೊಡಬೇಕೆಂದೆನುತಲೆ |
ಕಾತರದಿಂ ಕೇಳಿದ || 70 ||

ಬೇಟೆಯ ನೆವದಿ ಪೋಗುವುದರಿೆನು ಮರು |
ಳಾಟವೇತಕೆ ನಿಮಗೆ ||
ಮಾಟಾದ ಭೀಮ ಫಲ್ಗುಣರಿರ್ಪರಲ್ಲಿ ಕೊಂ |
ದಾಟವಪ್ಪುದು ತಪ್ಪದು || 71 ||

ಆಗದಾಗದು ಕುಂತಿಸುತರಿಪ್ಪ ವಿಪಿನಕೆ |
ಪೋಗಿ ಪೊಯ್ದಡದಿರಿ ||
ಯೋಗಿಗಳಾಶ್ರಮ ಕೆಡಿಸದಿರೆನೆ ತಲೆ |
ವಾಗಿ ತಾತನಿಗೆಂದನು || 72 ||

ತಂದೆ ಕೇಳಾದಡೆ ಪಾಂಡುಸುತರು ಮಾರಿ |
ಬಂದರಲ್ಲವರೊಡನೆ ||
ಕೊಂದಾಡಿಕೊಳ್ಳದೆ ಬರುವೆವೆನುತ ನಯ |
ದಿಂದಲಪ್ಪಣೆಗೊಂಡನು || 73 ||

ಭಾಮಿನಿ

ರಾಯ ಕೇಳಂದಿನಲಿ ಕುರುಕುಲ |
ರಾಯ ತಂದೆಯನೊಡಬಡಿಸಿ ಬಲು |
ನಾಯಕರಿಗುಡುಗೊರೆಯ ಕೊಟ್ಟನನೇಕಸಂಖ್ಯೆಯಲಿ ||
ಆಯತವನರಿತಾಗ ಗುರು ಗಾಂ |
ಗೇಯ ಕೃಪ ವಿದುರಾದಿಗಳು ನಿನ |
ಗಾಯವಲ್ಲೆಂದರುಹಿದರು ನಯನೀತಿಮಾರ್ಗವನು || 74 ||

ರಾಗ ಕಾಪಿ ಅಷ್ಟತಾಳ

ಕುರುರಾಯ ಕೇಳೆಮ್ಮ ಸೊಲ್ಲ | ನೀನು |
ತೆರಳಿಪೊಗುವದರಿತೆವು ತರವಲ್ಲ || ಕುರು || ಪ ||

ಭೀಮಾರ್ಜುನರಿಹರು | ಅಲ್ಲಿ |
ಜಗಳವಪ್ಪುದು ತಪ್ಪದಪ್ಪ ನಿನ್ನವರು ||
ಅಗಡು ಬುದ್ಧಿಯನೆ ಮಾಡುವರು | ಇದು |
ಸೊಗಸಲ್ಲ ಮುನಿಗಳು ಮುನಿದು ಶಾಪಿಪರು || ಕುರು || 75 ||

ಬರುವವರಲ್ಲ ನಾವಿದಕೆ | ನಮ್ಮ |
ಬರಿದೆ ನೀ ದೂರಿಕೊಳ್ಳಲುಬೇಡೆಂಬುದಕೆ ||
ಸರಿಬಂತಾದರೆ ನೋಡು ಮನಕೆ | ಸತಿ |
ಯರು ಸಹ ಪೋಗದಿರ್ ಕಾಮ್ಯಕಾ ವನಕೆ || ಕುರು || 76 ||

ಆದರಿಸಯ್ಯ ಸಂಪನ್ನ | ಇಂಥ |
ಭೇದ ಪಾಂಡವರೊಳು ತರವಲ್ಲ ಕರ್ಣ ||
ಹಾದಿ ತಪ್ಪುವರೆ ಮೋಹನ್ನ | ಮಾರಿ |
ಪೋದರೆ ರಣಭಂಗ ತಪ್ಪದು ಮುನ್ನ || 77 ||

ಭಾಮಿನಿ

ಉದಧಿವಸನೇಶ್ವರನೆ ಕೇಳಾ |
ವಿದುರಭೀಷ್ಮಾದಿಗಳ ಕೋವಿದ |
ವಿದಿತ ನೀತಿಯ ಮಾತನರಿಯದೆ ಕರ್ಣ ಶಕುನಿಗಳು ||
ಮದಮುಖತ್ವದೊಳೆಂದರೊಯ್ಯನೆ |
ಕದನಕಿವರಳುಕುವರು ಕುಳಿತುಂ |
ಬುದಕೆ ಯೋಗ್ಯತೆಯವರು ನೋಡೆನುತಾಗ ಕೌರವಗೆ || 78 ||

ರಾಗ ಯರಕಲಕಾಂಭೋಜಿ ಝಂಪೆತಾಳ

ಲಾಲಿಸು ಭೂಪ ಲಾಲಿಸು || ಪ ||

ಲಾಲಿಸಿ ಕೇಳೆಮ್ಮ ಮಾತ ಕೌರವ ನಾಥ |
ಜಾಲವಿದಲ್ಲ ನಿಶ್ಚಯವಾಗಿ |
ಪಾಂಡುಸುತರ ಸಹಾಯ ಬಿಡರು |
ಕಂಡುದುದು ನಾವು ಪೇಳಿದೆವಿಂತು |
ಇದು ಕೊಂಡೆಯವಲ್ಲ | ವೀಕ್ಷಿಸು ಹೊಂತು || ಲಾಲಿಸು || 79 ||

ಇವರುಂಡುಂಡು ಕುಳಿತು ದಿನವು ಸಂತು |
ವಡಗೊಂಡು ಸಮರಕೆ ಬಾರರು ನಿಂತು |
ಪಂಥವನಾಂತು | ಪೇಳಲಿನ್ನೆಂತು | ಅರಿದೆ ನೀ ಭ್ರಾಂತು | ನೀನು |
ಕಂಡ ಕಾರ್ಯಕ್ಕೆ ವಿಘ್ನಗಳ ಯೋಚಿಸುವರು |
ಗಂಡುಗಲಿಗೆ ನಾಚಿಕೆ ತೋರಿ ಪೇಳ್ವರು || ಲಾಲಿಸು || 80 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ರವಿಸುತ ಶಕುನಿಗಳು ಖತಿ |
ಯಾಂತು ಕೌರವನೊಡನೆ ಪೇಳಲು |
ಅಂತರಂಗವನರಿತೊರೆದರತಿ | ಸಂತಸದಲಿ || 81 ||

ಭೂಪ ಕೇಳೀ ಪರಿಯ ಶೌರ್ಯಪ್ರ |
ತಾಪವಿರೆ ಭಯವೇನು ನಿನ್ನಾ |
ಳಾಪವಿದ್ದಂತೆಸಗು ನಿನಗೆ ಸ | ಮಾಪರವರು || 82 ||

ಎಂದು ಗುರುಭೀಷ್ಮಾದಿಗಳು | ನಲ |
ವಿಂದ ಪಿಂತಿರುಗಲ್ಕೆ ಕೌರವ |
ಮುಂದೆ ಬರುವುದನರಿಯದಂದು ಮ | ದಾಂಧ ತನದಿ || 83 ||