ರಾಗ ಶಂಗಾರಿ ಏಕತಾಳ

ಚರರು ನೀವ್ ಬಂದುದು ಲೇಸಾಯಿತಿದು ನಿಮ್ಮ |
ವರು ನಮಗಿನ್ನೇನಹಿತರೇ ||
ಮೆರೆವ ದುಶ್ಯಲೆ ಜಯದ್ರಥ ಮೊದಲಾದರ್ಗೆ |
ನಿರತ ಸೌಖ್ಯವೆ ನಿಮ್ಮೂರೊಳಗೆ ||257||

ಈ ಪಟ್ಟೆ ಪೀತಾಂಬರಗಳೇಕೆ ಗಂಧಾನು |
ಲೇಪನವೇಕೆ ಸುವ್ರತೆಗೆ ||
ಭೂಪರಿಗೊಪ್ಪಿಸಿ ಬರುವರೀ ಕಾಡ ಸ |
ಮೀಪ ದೊಳಿರಿಯೆಂದಳಬಲೆ ||258||

ಬಡವನೇ ನಮ್ಮ ಭೂಪತಿ ಬೇರೆ ರಮಣರಿ |
ಗುಡುಗೊರೆಯನು ಕಳುಹುವನು |
ತೊಡುವುದೆಂದೆನೆ ಕೇಳಿ ಗರ್ಜಿಸಿ ದ್ರೌಪದಿ |
ನಡೆದಳು ತಳಿರಮಂಟಪಕೆ ||259||

ಭಾಮಿನಿ

ವಸುಮತೀಶನೆ ಲಾಲಿಸಾಕ್ಷಣ |
ಮಸುಳಿತವದಿರ ಮೋರೆ ಕಾರ್ಯದ |
ಬೆಸಗು ಹತ್ತದೆ ಬಂದು ಪೇಳ್ದರಸಾಧ್ಯವೆಂದೆನುತ ||
ಉಸುರುತಿರಲುಬ್ಬಣ ಕಠಾರಿಯ |
ನಸಮಚಿತ್ತನು ಧರಿಸಿ ತಾನೀ |
ಕ್ಷಿಸುವೆನೆನುತಲೆ ಬಂದನಾ ಪಾಂಚಾಲೆಯಿದ್ದೆಡೆಗೆ ||260||

ರಾಗ ಸಾಂಗತ್ಯ ರೂಪಕತಾಳ

ಬರವ ಕಾಣುತ ಮುನಿನಿಕರವೆಚ್ಚರಿಸಲು |
ಬ್ಬರಿಸೆ ಪಾಂಚಾಲನಂದನೆಯು ||
ಮುರಿದೆದ್ದು ಒಳಗೈದುತಿರಲಂಜಲ್ಯಾಕೆ ಬಂ |
ದಿರುವೆ ಜಯದ್ರಥನೆಂದ ||261||

ಮತಿವಂತ ಕೇಳು ನೀ ನಮಗಣ್ಣನಾದ ಮೇ |
ಲತಿ ಭೀತಿಯೇನು ನಿನ್ನೊಡನೆ ||
ಪತಿಶೂನ್ಯಗಹವೆಂಬುದನು ಬಲ್ಲೆಯದರಿಂದ |
ಪತಿವ್ರತೆಯರಿಗೀ ಲಕ್ಷಣವು ||262||

ಪೇಳುವದೇನು ನಿನ್ನ ಪತಿವ್ರತಾಶೀಲವ |
ನಾಳುವರೈವರು ಬಿಡದೆ ||
ಸೂಳೆಯರ್ಗಾದರೊಬ್ಬನೆ ಪುರುಷನೆಂ |
ದಾಳ್ವರ್ ಬಿಂಕದೊಳೆನುತಿರ್ದ ||263||

ಹರನಾಜ್ಞೆಯಿಂದ ಪುರುಷರೈವರಾದರು |
ಮರುಳೆ ನೀನೇನದ ಬಲ್ಲೆ ||
ಇರಬಾರದಿವ ನಮ್ಮ ಹಿತಶತ್ರುವೆನುತಲೆ |
ತಿರುಗಿ ಪೋಪಳ ಕಾಣುತೆದ್ದ ||264||

ವಾರ್ಧಕ

ವಸುಧೀಶ ಲಾಲಿಸೈ ಖೂಳನಿಂತೆಂದು ಗ |
ರ್ಜಿಸುತೇಳುತಿರಲಂದು ಮಿಡುಕಿದಳು ಭಯದೊಳಾ |
ಶಶಿವದನೆ ಪರ್ಣಮಂದಿರವನೊಳವೊಕ್ಕಡಡ ಹಾಯ್ದು ಬಿಡುಮುಡಿಯನೆಳೆದು ||
ಕುಸುಬಿ ಬರಸೆಳೆಯಲೊರಲಿದಳೆಮಜ ಹಾ ಭೀಮ |
ನಸಮಬಲ ಪಾರ್ಥ ಹಾಯೆಂದಡಲ್ಲಿಂದ ಪೊರ |
ಡಿಸಿಕೊಂಡವಂ ನೂಕುತೆಳತರಲ್ ಕೂಗಿದಳ್ ಕಲ್ಮರಂ ಕರಗುವಂತೆ ||265||

ಭಾಮಿನಿ

ಆ ಸಮಯದಲಿ ಸುಜನತತಿಯ |
ಡ್ಡೈಸಿದರೆ ಖಂಡೆಯವನಾ ಖಳ |
ಬೀಸುತಲೆ ಬೇಗದಲಿ ಪೊಕ್ಕನು ಸತಿಸಹಿತ ಪಡೆಯ ||
ತೋಷದಲಿ ರಥದೊಳಗಿರಿಸಿಕೊಂ |
ಡಾ ಸಮರ್ಥನು ಗಮಿಸುತಿರೆ ಘನ |
ಘೋಷದಲಿ ಕೂಗಿದಳು ದ್ರುಪದಜೆ ಕನಲಿ ಕಂಗೆಡುತ ||266||

ರಾಗ ಭೈರವಿ ಆದಿತಾಳ

ಪುರುಷರಿಲ್ಲದ ವೇಳ್ಯದೊಳು | ಬಂದು | ಸರಸವಾಡುತ ಗರ್ವದೊಳು ||
ತುರುಬು ಹಿಡಿದು ಕುಸುಬೆಳೆದು | ಕೊಂ | ಡಿರದೊಯ್ವನು ಬರಸೆಳೆದು ||267||

ಪಾಂಡುನಪಾಲನ ಸೊಸೆಯ | ವರ | ಪಾಂಡವರೈವರರಸಿಯ ||
ಲಂಡದಶಾಸ್ಯನ ತೆರದಿ | ಎಳೆ | ಕೊಂಡೊಯ್ಯುವನತಿ ಭರದಿ ||268||

ಧೌಮ್ಯಾದಿ ಮುನೀಂದ್ರರಿರಾ | ಶ್ರುತಿ | ಗಮ್ಯಶಾಸ್ತ್ರಜ್ಞರಿರ ||
ಘಮ್ಮನೆ ರಥವನು ತಡೆಸಿ | ಎನ್ನ | ಧರ್ಮದ ಸೆರೆಯನು ಬಿಡಿಸಿ ||269||

ಖೂಳ ಜಯದ್ರಥ ಬಂದು | ಎನ್ನ | ಕೋಳುಗೊಂಡೊಯ್ವ ತಾನಿಂದು ||
ನೀಲಾಂಗನೆ ಸಲಹೆಂದು | ವರ | ಬಾಲಕಿ ಮರುಗಿದಳಂದು ||270||

ಭಾಮಿನಿ

ಇಂತು ದುಃಖಿಸುತಿರಲಿಕಾ ಸಮ |
ಯಾಂತರದಿ ವರಧೌಮ್ಯಮುನಿಪನು |
ತಾಂ ತಳುವದೈತಂದನಬಲೆಯ ಮೊರೆಯ ಕೇಳುತಲೆ ||
ಚಿಂತಿಸುತ ರಕ್ಷೋಘ್ನಸೂತ್ರವ |
ನಂತರಿಸದಡಿಗಡಿಗೆ ಜಪಿಸುತ |
ನಿಂತು ಪೇಳಿದನೆಲೆ ಜಯದ್ರಥ ಬೇಡ ಬಿಡುಯೆನುತ ||271||

ರಾಗ ನಾದನಾಮಕ್ರಿಯೆ ಅಷ್ಟತಾಳ

ಏತಕೊಯ್ವೆಯೊ ದ್ರುಪದಜೆಯನು | ಬಿಡು |
ಘಾತಕತನದ ಚಿತ್ತವ ನೀನು ||
ನೀತವೆ ನಿನ್ನನುಜಾತೆಯ | ಇಂಥಾ |
ರೀತಿಯೊಳೊಯ್ವರೆ ಖ್ಯಾತೆಯ ||272||

ಆರು ಕೊಟ್ಟರು ಈ ವಿಚಾರವ | ಅತ್ತ |
ಸಾರೊ ಸುಮ್ಮನೆ ಮುದಿಹಾರುವ ||
ಮೋರೆಯಿಲ್ಲದ ಮಾತನಾಡದೆ | ನಿನ್ನಾ |
ಚಾರದೊಳಿರು ಇತ್ತ ನೋಡದೆ ||273||

ಬಡವರೆ ಭೀಮಾರ್ಜುನಾದ್ಯರು | ನಿನ್ನ |
ಬಿಡುವರೆ ಅಮಿತ ಬಲಾಢ್ಯರು ||
ಕೆಡಬೇಡ ಪಾಂಡವರರಸಿಯ | ಬಿಟ್ಟು |
ನಡೆದರೊಳ್ಳಿತು ನೋಡು ನೀತಿಯ ||274||

ಗೆಡ್ಡೆಯ ತಿಂದು ಜೀವಿಸುವಗೆ | ಇಂಥಾ |
ವೊಡ್ಡಾವಡ್ಡಿಯ ಪೇಳ್ವುದ್ಯಾರಿಗೆ ||
ಅಡ್ಡಿಯ ಮಾಡದೆ ನಡೆಯೆಂದು | ಮಾತ |
ಸಡ್ಡೆ ಮಾಡದೆ ತಾ ಸಾಗಿದನಂದು ||275||

ವಾರ್ಧಕ

ಪಥಿವೀಂದ್ರ ಕೇಳ್ ಧೌಮ್ಯಮನಿವರಂ ಖತಿಗೊಂಡು |
ರಥವು ಮುಂಬರಿಯದಂದದೊಳು ದಿಗ್ಭಂಧನವ |
ನತಿಶಯದೊಳೆಸಗಿ ದ್ರೌಪದಿಗೆ ಧೈರ್ಯವನಿತ್ತು ಗಮಿಸಿದಂ ವಹಿಲದಿಂದ ||
ಯತಿವರಂ ಮಿಗೆ ಶಿಷ್ಯತತಿಸಹಿತ ನಡೆತರಲ್ |
ವಿತರಣಮಗಬೇಟೆಯಂ ಬಿಟ್ಟು ಬಂದರ |
ದ್ಭುತ ಘೋಷವೇನಿದೆಂದಾಶ್ಚರ್ಯಮಂಗೊಳಲ್ಕರುಹಿದರು ಮುನಿಗಳೊದರಿ ||276||

ರಾಗ ಬೇಗಡೆ ಏಕತಾಳ

ಲಾಲಿಸು ಯುಧಿಷ್ಠಿರರಾಯ | ಇಂದಾದ ಪರಿಯ |
ಪೇಳುವೆವು ಸುಶೀಲ ಕೌಂತೇಯ || ಪಲ್ಲವಿ ||

ಶೀಲಗುಣಸಂಪನ್ನೆ ವರ ಪಾಂ |
ಚಾಲೆ ಜಾನಕಿಯಾದಳಿಂದಿಲಿ |
ಖೂಳ ದಶಮುಖನಾದ ಸಿಂಧುನ |
ಪಾಲನಿಂದಿನ ರಾಜಕಾರ್ಯವ || ಲಾಲಿಸು  || ಅನು ಪಲ್ಲವಿ ||

ಮೇಲೆ ರಾಘವ | ಶೀಲಶೌರ್ಯದ | ತೋಳಬಿಂಕವದು |
ತೋರಿಸಿ | ಕಾಳಗದಿ ರಿಪು | ಜಾಲವನು ನಿ | ರ್ಮೂಲವೆಸಗುವುದು |
ಸತ್ತ್ವವಿ | ಶಾಲರೆಂಬರೆ | ಲೋಲನೇತ್ರೆಯ | ತೋಳಬಿಡಿಸುವದು |
ಬಗೆಯಿಂ | ದೇಳಿರೆನಲದ | ಕೇಳಿ ಕೋಪವ |
ತಾಳಿ ಬೇಗದಿ | ಧಾಳಿಯಿಟ್ಟರು |
ಬಾಳನೇತ್ರನ | ಪೋಲುತಿಹಕ |
ಟ್ಟಾಳುಭೀಮ ಕ | ರಾಳಪಾರ‌್ಥರು || ಲಾಲಿಸು ||277||

ಭಾಮಿನಿ

ಮೈದುನನ ಮೈಸಹಸಕೀ ಹುಲು |
ಕೈದುಗಳೆ ಸಾಕೆನುತ ಭುಜಗಳ |
ಹೊಯ್ದು ಬೆಂಬೊತ್ತಿದರು ನಿಮಿಷದೊಳಾ ಜಯದ್ರಥನ ||
ಐದಿದರು ಸಲೆ ಭಂಡ ನಿಲ್ಲೆಂ |
ದೈದುಮುಖನಂತಬ್ಬರಿಸುತಡ |
ಹಾಯ್ದು ಪಾರ್ಥನು ಬಿಟ್ಟ ನಾ ಮೋಹರಕೆ ಪಿಂಗಳಿಯ ||278||

ರಾಗ ಭೈರವಿ ಮಟ್ಟೆತಾಳ

ನರನ ಬಾಣವ | ತರಿದು ಸೈಂಧವ |
ತಿರುಗಿ ನಿಂದನು | ಕೆರಳುತೆಂದನು  ||279||

ಭಂಡರವದಿರು | ಬಗೆಯದಧಟರು |
ಕೊಂಡು ಮುಸುಕಿರೋ | ಕೋಲಗರೆಯಿರೋ ||280||

ಎಂದು ರಥವನು | ಸಿಂಧುಭೂಪನು |
ಮುಂದೆ ನಡೆಸುತ | ಮುತ್ತಿರೆನ್ನುತ ||281||

ಸರಳ ಮಳೆಯನು | ಕರೆಯೆ ಭೀಮನು |
ಮರನ ಮುರಿದನು | ಬೆರಸಿ ಹೊಯ್ದನು ||282||

ವಾರ್ಧಕ

ಅರಸ ಕೇಳಖಿಳ ಮದದಾನೆಯಂ ಸೇನೆಯಂ |
ಬೆರಸಿ ಧೂಳೀಪಟಲವೆಸಗಿದಂ ಮಸಗಿದಂ |
ತರುಬುವತಿರಥರನಪ್ಪಳಿಸಿದಂ ಕಳಿಸಿದಂ ಜವನೂರಿಗರೆಕ್ಷಣದೊಳು ||
ಹರನಂತೆ ಭುಜಸುಪ್ರತಾಪದಿಂ ಕೋಪದಿಂ |
ಉರಿಯ ನುಗುಳುತ ಸಿಂಹನಾದದಿಂ ಭೇದದಿಂ |
ಪರಬಲವನಟ್ಟಿ ಸೀಳ್ದೊಟ್ಟಿದಂ ಮೆಟ್ಟಿದಂ ಭೀಮನರೆನಿಮಿಷದೊಳಗೆ ||283||

ರಾಗ ಪಂಚಾಗತಿ ಮಟ್ಟೆತಾಳ

ನಾರಿಮಣಿಯೆ ಬೆದರಬೇಡ | ವೀರರಿದಕೊ ಬಂದೆವೀಗ |
ಚೋರ ನಿಲ್ಲೆನುತ್ತ ಖತಿಯೊ | ಳಾರುಭಟಿಸುತ ||
ಭಾರಿ ವಕ್ಷವೆತ್ತಿ ವರಸ | ಮೀರತನುಜನವನ ರಥವ |
ಹಾರಿಸುತ್ತ ಹೊಯ್ದರಮರ | ವಾರ ಬೆದರಲು ||284||

ತರಹರಿಸುತ ಸಿಂಧುಭೂಪ | ನುರಿಯನುಗುಳುತಾಗ ಘೋರ |
ಶರದೊಳೆಚ್ಚ ನನಿಲಸುತನ | ನಿರದೆ ಖತಿಯೊಳೂ ||
ನರನು ಬಿಟ್ಟ ಶಸ್ತ್ರನಿಕರ | ದುರುಬೆಗಾನಲಾರದಿರಲು |
ಮರುತಸುತನು ಸೆಳೆದುಕೊಂಡ | ಕರದ ಧನುವನು ||285||

ಸೆಳೆದಡಾಯುಧದಲಿ ನಿಂತು | ನಿಲುಕಿ ಹೊಯ್ದಡಾತನನಿತ |
ರೊಳಗೆ ಭಲ್ಲೆಯವನು ಚಿಮ್ಮು | ತಳವಿಯಿಂದಲಿ ||
ಕಳಚಿ ದಂಡದಿಂದ ಹೊಯ್ದು | ಹೊಳದು ವೈರಿಶಿರವನೆಳೆದು |
ಸೆಳೆವ ಸಮಯಕೆಂದನಾಗ | ನಿಲಿಸಿ ಫಲುಗುಣ ||286||

ಇವನ ಕೊಲ್ಲಬೇಡವಣ್ಣ | ನವರ ಬಳಿಗೆ ಕಟ್ಟಿ ಒಯ್ವು |
ದವನಿಗೊದ್ದು ಕೆಡಹಿ ಭರದ | ತಿವಿದು ಕುನ್ನಿಯ ||
ಯುವತಿ ರಥದೊಳಿರಲಿಧೌಮ್ಯ | ಜವದಿ ರಥವ ನಡೆಸಲೆನುತ |
ಪವನಸುತನ ಖತಿಯ ನಿಲಿಸಿ | ಬವರಮುಖದಲಿ ||287||

ಭಾಮಿನಿ

ಕೊಲ್ಲದಾಗ ಜಯದ್ರಥನ ಬಿಗಿ |
ದುಲ್ಲಸದಿ ಭೀಮಾರ್ಜುನರು ಹೆಂ |
ಗಳ್ಳವಿದ್ಯವನಾರು ಕಲಿಸಿದರಧಮ ನಿನಗೆನುತ ||
ಖುಲ್ಲ ಕೌರವ ಬೆಸಸಿದನೊ ನಿ |
ನ್ನಲ್ಲೆ ಮಾಯವೊ ಪೇಳೆನುತ ಮಿಗೆ |
ಬಿಲ್ಲಕೊಪ್ಪಿಲಿ ತಿವಿದು ತಂದರು ಧರ್ಮಜನ ಹೊರೆಗೆ ||288||

ರಾಗ ಪಂಚಾಗತಿ ಏಕತಾಳ

ಏನಿರಯ್ಯ | ಭೀಮಾರ್ಜುನರಿ | ದೇನಿರಯ್ಯ || ಪಲ್ಲವಿ ||

ಏನಿರಯ್ಯ ಬಲು | ಮಾನವಂತರಿಗವ |
ಮಾನವ ಮಾಡಿದ | ಹೀನಗುಣಗಳಿ || ದೇನಿರಯ್ಯ  || ಅನು ಪಲ್ಲವಿ ||

ಬರಬಾರದು ತಾನರಿಯದಿದಕೆ ಬಂ |
ದರೆ ಈ ಪರಿ ಹೆಡಮುರಿಯ ಬಿಗಿವರೇ ||
ಹರ ಹರ ನೊಂದನು ಧೊರೆಯಲ್ಲವೆ ನಿ |
ಷ್ಕರುಣಿಗಳೈ ನೀವರಿವುದು ಗುಣದಿ || ಏನಿರಯ್ಯ ||289||

ಜೀಯ ಹಸಾದವು ಸಾಯ ಬಡಿವೆನೀ |
ನಾಯಿಯನೀ ಪರಿ ಮಾಯಮದಾಂಧನ ||
ಕಾಯವಿಡಲು ಕುರುರಾಯನಾಗುವನೆಂ |
ದಾಯುಧಗೊಂಡರೆ ವಾಯುಜಗೆಂದನು || ಏನಿರಯ್ಯ ||290||

ಮದಮುಖನೀತನ ವಧಿಸಿದಡನುಜೆಯು |
ವಿಧವೆಯಾಗಳೆ ಮೋಹದ ಗಾಂಧಾರಿ ||
ಉದರಕು ಕುಂತಿಯ ಉದರಕು ಭೇದವೆ |
ಕದನ ಮುಖದಿ ಸಿಕ್ಕಿದವನ ಕೊಲುವುದಿ || ದೇನಿರಯ್ಯ ||291||

ಭಾಮಿನಿ

ಇಂತು ಧರ್ಮಜನೆಂದಡಾ ಮುನಿ |
ಸಂತತಿಯು ಸಲೆ ಧರ್ಮಶಾಸ್ತ್ರವ |
ನುಂ ತಿಳಿದು ಸೂಕ್ಷ್ಮದಲಿ ಭೀಮಾರ್ಜುನರಿಗುಸಿರಿದರು ||
ಸಂತತವು ಬಹುಮಾನವಂತಗೆ |
ಪಂಥವಳಿದವಮಾನವಾದರೆ |
ಬಂತವಗೆ ನಿರ್ದೇಹತನವದು ನೋಡಿ ದಿಟವೆನುತ ||292||

ರಾಗ ದಿವಾಳಿ ಏಕತಾಳ

ಏನ ಹೇಳಲಿ ನಪನ ಪಾಡ | ಭೀಮ |
ಸೇನ ಮಾಡಿದ ನಗೆಗೇಡ ||
ಮೌನಿಗಳುಕ್ತಿ ನಿ | ಧಾನವೆನುತ ನಿಜ |
ಮಾನಿನಿಗಳ್ಳನ | ಮಾನವಳಿದುದನೇನ ||293||

ಮಸೆದ ಕಠಾರಿಯ ಹಣಿಗೆಯಿಂದ | ತಲೆಯ |
ನೊಸೆದು ಬಾಚಿದ ನುಣ್ಬೋಳಿಂದ ||
ಹಸನಾಗುರೆ ಬೋ | ಳಿಸುತಿರೆ ಮುನಿತತಿ |
ಕುಶಲದಿ ಘೋಳೆಂ | ದೆಸೆದುದು ಭರದಿ || ಏನ ||294||

ವಾರ್ಧಕ

ಬಿಟ್ಟನಾ ಭೀಮನಾಮೇಲವನ ತೋಳ ಹಿಂ |
ಗಟ್ಟುಗಳನೆಲೆ ಕುನ್ನಿನಿಲದಿನ್ನು ನಡೆಯೆನುತ |
ಲಟ್ಟಿದರೆ ಬಂದನತಿ ದುಮ್ಮಾನದಿಂ ನೊಂದು ಬಾಡಿ ಬಸವಳಿವುತಂದು ||
ಕಟ್ಟಕಡೆಗೇನೆಂಬೆನಾ ಜಯದ್ರಥನಂದು |
ಬೆಟ್ಟದಿಂದವನಿಗುರುಳಲೊ ನಂಜುಗೊಳಲೊ ಕ |
ಲ್ಕಟ್ಟಿ ಮಡುವಿಂಗೆ ಧುಮುಕಲೊಯೆಂದು ಬಹಳ ಕಂಗೆಟ್ಟು ಮಿಡುಕುತಲೆಂದನು ||295||

ಭಾಮಿನಿ

ಚಿಂತಿಸಿದಡೇನಹುದು ಭಜಿಸುವೆ |
ನಂತಕಾಂತಕನಂಘ್ರಿಗಳನು ಮ |
ಹಾಂತ ವರಗಳ ಪಡೆದು ಬಡಿದುರುಳಿಚುವೆನೈವರನು ||
ಭ್ರಾಂತಿಯೇ ಬಿಡುತನ್ನನೆನುತ ಶಿ |
ವಾಂತರಂಗಸ್ಥಾನವಿಮಳಾ |
ಸ್ವಾಂತನೇಕಾಗ್ರದಲಿ ಭಜಿಸಿದನಂದು ಶಂಕರನ ||296||

ರಾಗ ಭೈರವಿ ತ್ರಿವುಡೆತಾಳ

ಭಜಿಸುತಿರ್ದ | ಶಿವನನು | ಭಜಿಸುತಿರ್ದ || ಪಲ್ಲವಿ ||

ಭಜಿಸಿದನು ಭವಭಯವಿಹರಣನ | ಭುಜಗರತ್ನಾಭರಣನ |
ರಜತಪರ್ವತಮಂದಿರನ ದಶ | ಭುಜನ ಭೂತಾಧೀಶನ |
ವಿಜಯವಾಂಛಿತದಾಯಕನ ಸಾ | ಮಜನಿಶಾಚರನಾಶನ |
ಗಜಮುಖಾದ್ಯರ ಪಡೆದ ದೇವನ | ಭಜಕಜನಸಂಜೀವನ ಭವನ || ಭಜಿಸುತಿರ್ದ ||297||

ಬಾಣ ದಶಶಿರಮುಖ್ಯ ದನುಜ | ಶ್ರೇಣಿಗೊಲಿದ ಮಹಾತ್ಮನ |
ಪ್ರಾಣಸತಿಗರ್ಧಾಂಗವಿತ್ತ ಪ್ರ | ವೀಣನುನ್ನತರೂಪನ |

ಏಣಲಾಂಛನಗಭಯವಿತ್ತ ಪು | ರಾಣಪುರುಷೋತ್ತುಂಗನು |
ಸ್ಥಾಣುವೆನಿಪ ಮಹೇಶ್ವರನ ಕ | ಲ್ಯಾಣಗುಣಕಾಯನ ಪರೇಶನ || ಭಜಿಸುತಿರ್ದ ||298||

ಆಸನವ ಬಲಿದಿಂದ್ರಿಯಂಗಳ | ವಾಸನೆಯ ನೀಡಾಡುತ |
ಶ್ವಾಸವನು ಬಂಧಿಸುತ ದಹರಾ | ಕಾಶವನು ನೆರೆ ನೋಡುತ |
ನಾಸಿಕಾಗ್ರವ ಮೀರಿ ತನುವೆಂ | ಬಾಸೆಯನು ಹೊರದೂಡುತ |
ಶ್ರೀ ಸದಾಶಿವನಡಿಯ ಭಕ್ತಿಯೊ | ಳೋಸರಿಸದೆ ಜಯದ್ರಥಾಖ್ಯನು || ಭಜಿಸುತಿರ್ದ ||299||

ರಾಗ ಮಾರವಿ ಏಕತಾಳ

ಅವನಿಪ ಕೇಳಾ ಖಳನೀ ಪರಿಯಲಿ | ಶಿವನನು ಭಜಿಸುತಿರೆ ||
ತವಕದೊಳೈತಂದೆಂದನು ಗೌರೀ | ಧವನೊಲಿದಾಕ್ಷಣದಿ ||300||

ಮೆಚ್ಚಿದೆ ತಪಸಿಗೆ ಪೇಳ್ ನಿನ್ನಯ ಮನ | ದಿಚ್ಛೆಯನೆಂದೆನುತ ||
ಸಚ್ಚಿನ್ಮಯನಭಯವ ಕೊಡುತಿರೆ ಕ | ಣ್ಮುಚ್ಚಿ ನಿರೀಕ್ಷಿಸುತ ||301||

ಈಡಾಡಿದನವನಿಯೊಳೊಡಲನು ಕೊಂ | ಡಾಡುತ ಪರಶಿವನ ||
ನೀಡಿ ಕರವ ಸಾಷ್ಟಾಂಗದಿ ವಂದನೆ | ಮಾಡುತ ಪೊಗಳಿದನು ||302||

ವಾರ್ಧಕ

ಜಯ ಕರಿವದನಜನಕ ಕಾಲಕಾಲ ಸುಶೀಲ |
ಜಯ ಕಿರೀಟೋಜ್ಜ್ವಲಿತ ದಿವ್ಯಕೀರ್ತಿವಿಲಲಿತ |
ಜಯ ಕುಮುದಸಖಕಿರಣ ಭವಕೂಪಸಂ ಹರಣ ಜಯ ಕೇಶವಪ್ರಿಯ ಶಿವ ||
ಜಯತು ಕೈಲಾಸಗಿರಿವಾಸ ಕೋಮಲ ವೇಷ |
ಜಯತು ಕೌತುಕಚರಿತ ಮದನಾರಿ ನಿರ್ದುರಿತ |
ಜಯ ಕದನ ಕರ್ಕಶಮಹಾಭೀಮ ನಿಸ್ಸೀಮ ಜಯವೆಂದು ಸ್ತುತಿಗೈದನು ||303||

ರಾಗ ಪಂತುವರಾಳಿಗೌಳ ಏಕತಾಳ

ವರವ ನೀಡೊಲಿದು ನೀ | ಪಾಲಸಯ್ಯ |
ಹರ ಶಂಭು ಶಂಕರ | ದೇವ ಸಂಜೀವ || ವರವ  || ಪಲ್ಲವಿ ||

ಪಾಂಡವರೈವರ ಪರಿಭವಿಸುವ ವರ |
ವಂಡಜ ವಾಹನನಯ್ಯನೆ ದಯದಿ || ವರವ ||304||

ಮಂಗಳಕರನೆ ಶ್ರೀ | ಗಂಗಾಧರನೆ |
ಕಂಗಳು ಮೂರುಳ್ಳ | ದೊರೆಯೆ ನೀ ಕ್ಷಿಪ್ರದಿ || ವರವ ||305||

ಬೇಡಿದ ವರವ | ಬೇಸರದೀವ |
ರೂಢಿಗೊಡೆಯ ನಿನ್ನ | ಮರೆಯಹೊಕ್ಕೆನು ದೇವ || ವರವ ||306||

ಭಾಮಿನಿ

ಎಲೆ ಧರಾಧೀಶ್ವರನೆ ಕೇಳಾ |
ಖಳನು ಬೇಡಿದ ವರಕೆ ನಗುತಲೆ |
ಕಲಿಮಲಜ್ಞ ಕೃಪರ್ದಿ ನುಡಿದನು ಸತಿಯ ಮೊಗ ನೋಡಿ ||
ಲಲನೆ ಕೇಳೀ ಸಿಂಧುಭೂಪನು |
ಬಲುತರೋನ್ನತ ವರವ  ಬಯಸಿದ |
ನಳಿಯರಾ ಪಾಂಡವರು ತನ್ನ ಸಹಾಯವುಂಟೆನುತ ||307||