ವಾರ್ಧಕ

ಅರಸ ಕೇಳ್ ಭೀಷ್ಮ ವಿದುರಾದಿಗಳ ವಚನಮಂ |
ಕುರುಪತಿಯು ಮಾರ್ದೊಡನೆ ಕರೆಸಿದಂ ಹತ್ತು ಸಾ |
ವಿರ ಕರಿಘಟಾವಳಿಯ ಸುವರೂಥವೆಂಟುಸಾವಿರ ಹಯಂ ಪತ್ತುಕೋಟಿ ||
ಬರಿಸಿದಂ ಬಹಳ ಚತುರಂಗ ಬಲಮಂ ಕೂಡೆ |
ನೆರಪಿದಂ ಚೆಲ್ವಗಣಿಕಾಂಗನಾಜಾಲಮಂ |
ತರಿಸಿದಂ ಭಂಡಾರದಿಂದ ವಸ್ತ್ರಾಭರಣಮಂ ಕೊಟ್ಟನವರಿಗೊಲಿದು || 84 ||

ಸ್ಮರನುರುಬೆಗಾನುವ ಪ್ರವೀಣೆಯರ್ ಜಾಣೆಯರ್ |
ತರತರದೊಳೆಸೆವ ಸುಕುಮಾರಿಯರ್ ನಾರಿಯರ್ |
ಮೆರೆಪ ಷೋಡಶಕಳಾವಂತೆಯರ್ ಕಾಂತೆಯರ್ ಮತ್ತಗಜಗಾಮಿನಿಯರು ||
ಮಿರುಪ ಚಂದ್ರಾರ್ಧನಿಭನಿಟಿಲೆಯರ್ ಕುಟಿಲ್‌ಯರ್ |
ನಿರುಪಮ ಸುವರ್ಣತನುರುಚಿರೆಯರ್ ಪ್ರಚುರೆಯರ್ |
ಸರಸ ಸಲ್ಲಾಪಸಂಪನ್ನೆಯರ್ ಕನ್ನೆಯರ್ ಶಂಗರಿಸಿ ನಡೆತಂದರು || 85 ||

ಕೆಲಬರೇರ್ದರನೇಕ ಕರಿಗಳಂ ಹರಿಗಳಂ |
ಕೆಲಬರಂದಣದೊಳಾನಂದದಿಂ ಚಂದದಿಂ |
ದುಲಿವ ನಾನಾ ವಾದ್ಯಘೋಷದಿಂ ತೋಷದಿಂ ರಥಪತಾಕೆಗಳೊಗ್ಗಿಲಿ ||
ಕೆಲಬರಾಡುವರು ಸಮ್ಮೇಳದಿಂ ಕೇಳದಿಂ |
ಕೆಲಬರೆಸೆದರು ಚಮರ ಛತ್ರದಿಂ ಚಿತ್ರದಿಂ |
ದಲಗು ವಿದ್ವತ್ಸಭಾಮಧ್ಯದಿಂ ಚೋದ್ಯದಿಂ ಕುರುರಾಯ ನಯ್ತಂದನು || 86 ||

ರಾಗ ಹರಾಜು ಏಕತಾಳ

ಬೇಟೆಯ ನೆವದಿ ಬಂದ ವನಕೆ | ಕುರುರಾಯ ಘನಕೆ |
ಬೇಟೆಯ ನೆವದಿ ಬಂದ ವನಕೆ || ಪ ||

ಮಾಟಿನ ಜವನೆಯ | ರಾಟವ ನೋಡುತ |
ಕಾಟಕಜನಸಹ | ಬೂಟಕತನದಿ || ಬೇಟೆಯ || 87 ||

ಭೇರಿ ತಂಬಟೆ ಕಹ | ಳಾರವ ಕೊಂಬು ನ |
ಗಾರಿಯ ಕೂಡಿ ಸ | ವಾರಿಯ ಹೊರಟ || ಬೇಟೆಯ || 88 ||

ಪೊಗಳುವ ಪಾಠಕ | ರುಗಳ ಸಮೂಹದಿ |
ಸುಗುಣ ಪಾಂಡವ ರೊಳು | ಜಗಳವಾಡುವರೆ || ಬೇಟೆಯ || 89 ||

ಭಾನುಮತಿಯು ಸಹಿ | ತಾನಂದದಿ ರವಿ |
ಸೂನು ಶಕುನಿಗಳ | ತಾನೊಡಗೊಂಡು || ಬೇಟೆಯ || 90 ||

ಅಶುಭೋಕ್ತದಿ ವಾ | ಯಸವೆರಡಿದಿರಲಿ |
ಮಸೆದಾಡುತಲೆಡ | ದೆಸೆಗೈದಿದವು ಬೇಟೆಯ || 91 ||

ಅವಶಕುನವ ಕೌ | ರವ ತಣಕೆಣಿಸುತ |
ತವಕದಿ ಮನದು | ತ್ಸವದಲಿ ಬಂದ || ಬೇಟೆಯ || 92 ||

ವಾರ್ಧಕ

ಜನಮೇಜಯಕ್ಷಿತೀಶನೆ ಕೇಳ್ ಸುಯೋಧನಂ |
ಘನಘೋಷಯಾತ್ರೆ ನೆವದಿಂ ಪೊರಟು ದ್ವೈತಕಾ |
ನನಕಾಗಿ ಬಂದಲ್ಲಿ ಬೀಡಿಕೆಯನುಂ ಬಿಟ್ಟು ತುರುವಿಂಡುಗಳನೀಕ್ಷಿಸಿ ||
ಮನಕೆ ಬಂದಂತೆ ಮಗಬೇಟೆಯಾಡಲ್ ಸತೀ |
ಜನಜಾಲಮಲ್ಲಿಹ ಮುನಿವ್ರಜಕುಪದ್ರವಂ |
ಜನಪನಾಜ್ಞೆಯೊಳೆಸಗುತಿರ್ದರದನೇನೆಂಬೆನಾಶ್ಚರ್ಯಮಾಗೆಸೆದುದು || 93 ||

ಭಾಮಿನಿ

ರೂಢಿಪತಿ ಕೇಳ್ ಭಾನುಮತಿಯೊಡ |
ಗೂಡಿ ಪೊರಟಳು ನೂರು ಸಾವಿರ |
ಗಾಡಿಗಾತಿಯರುಗಳನಾ ವನದೊಳಗೆ ವೈಭವದಿ ||
ಕೂಡಿ ಕದಡಿದರಖಿಳ ಮುನಿಜನ |
ಮಾಡುತಿರ್ಪ ಸಮಾಧಿಸರಸಿಯ |
ನೀಡಿರಿದು ಬಲು ಚೇಷ್ಟೆಗೈದರು ಮದದ ಮೋಡಿಯಲಿ || 94 ||

ರಾಗ ನಾದನಾಮಕ್ರಿಯೆ ಅಷ್ಟತಾಳ

ತಪವಿರುತಿಹ ಮುನಿವರರನ್ನು | ಕಂಡು | ವಿಪರೀತವಾದ ಹಾಸ್ಯಗಳನ್ನು ||
ಕಪಣತನದಿ ಮಾಡುತಿರ್ದರು | ಯೋ | ಗಿಪರ ಕಾಣುತ ಕಾಲೊಳೊದ್ದರು || 95 ||

ಕಡುವದ್ಧೋಪಾಧ್ಯರ ಕೈಯಲಿ | ಗಡ್ಡ | ಹಿಡಿದೆಳೆದರು ದಿಂಡತನದಲಿ ||
ಕುಡಿಮೊಲೆಯಿಂದೆದೆಗಿರಿದರು | ಅತ್ತ | ಬಿಡಿ ಮುದುಕರನೆಂದು ಜರೆದರು || 96 ||

ಬ್ರಹ್ಮಾಚಾರಿಗಳ ಕಂಡಪ್ಪುತ | ಬಲು | ಹೆಮ್ಮೆಯಿಂದಲಿ ನೀತಿ ತಪ್ಪುತ ||
ತಮ್ಮ ಬಾಯೊಳಗಿರ್ದ ತಾಂಬೂಲ | ಇಕ್ಕೋ | ಒಮ್ಮೆ ಕೊಳ್ಳೆನುತಿರೆ ಮುನಿಜಾಲ || 97 ||

ಕೋಪದಿ ನುಡಿದರಿದೇನಿರೇ | ನಮ | ಗೀ ಪಾಟಿ ಮಾಡಲು ಬಂದಿರೆ ||
ಶಾಪಿಸುವೆವು ಬೇಡವೆಂದರು | ಚೆಲ್ವ | ರೂಪಿಣಿಯರು ಮಗುಳೆಂದರು || 98 ||

ಕಡೆಗಣ್ಣಿನಲಗಿ ನಿಂದಿರಿವೆವು | ನೀವು | ಕೊಡುವ ಶಾಪಂಗಳ ತರಿವೆವು ||
ದಢಗೆಡಿಸುತ ಮಾಯಾಬಲೆಗಳ | ವೊಡ್ಡಿ | ಹಿಡಿವೆವೆಂದರು ಮುನಿಮಗಗಳ || 99 ||

ವಾರ್ಧಕ

ಉದಧಿವಸನೇಶ ಕೇಳದುಭುತವನಿತ್ತಲುಂ |
ಸುದತಿಯರ ದಂಡು ಮತ್ತೊದಗಿ ಬಂದುರವಣಿಸಿ |
ಮದನಸುರಗಿಯೊಳಿರಿದು ಮದುಪಾಶದಿಂ ಬಿಗಿದು ತುದಿನಯನಶರವನೆಸೆದು ||
ಬದಿಯೊತ್ತಿ ಸೆಲೆ ನಖಾಯುಧವೆತ್ತಿ ಪೊಯ್ಯಲಂ |
ದೆದೆಯಾರಿ ಮುನಿಗಳಾ ಕದನಕಿದಿರಾಗದೋ |
ಡಿದರೆಲ್ಲರೊಂದಾಗಿ ಪದುಮಸಖಸುತನಣುಗಗೊದರಿದರು ಬದುಕಿಸೆನುತ || 100 ||

ರಾಗ ಸಾರಂಗ ಅಷ್ಟತಾಳ

ಕೇಳಯ್ಯ ಧರ್ಮರಾಯ | ನಮ್ಮೆಲ್ಲರ | ಗೋಳುಗುಟ್ಟಿಸಿದರಯ್ಯ ||
ಕೇಳಯ್ಯ  || ಪ ||

ಯಾವ ರಾಯರ ಕಡೆಯ | ನಾರಿಯರೊಯೆಂ | ದಾವರಿಯೆವು ಪರಿಯ ||
ಕೋವಿದ ತಪಗಳ ಕೆಡಿಸಿ ಬಾಯೆಂಜಲ |
ಭಾವಕಿಯರು ನಮ್ಮ ಬಾಯ್ಗಿಟ್ಟು ನಲಿದರು || ಕೇಳಯ್ಯ ||101 ||

ಯಜ್ಞಸೂತ್ರವ ಹರಿದು | ನಾವೆಸಗುವ | ಯಜ್ಞಕ್ಕೆ ನೀರೆರೆದು ||
ಅಜ್ಞಾನಿಗಳು ಬಲು ಭಂಗಬಡಿಸಿದರು |
ಪ್ರಾಜ್ಞವಂತನೆ ಬುದ್ಧಿಯನು ಪೇಳಿನ್ನಾದರು || ಕೇಳಯ್ಯ || 102 ||

ಎನಲೆಂದನಬಲೆಯರು | ಬಂದವರೆಮ್ಮ | ಜನಪನ ಕಡೆಯವರು ||
ಮುನಿವುದೇತಕೆ ಮುಂದೆ | ಗುಣವುಂಟೆನುತ ಮುನಿ |
ಜನರ ಸಂತೈಸಿದ ಸಾಮದೊಳವನೀಂದ್ರ || ಕೇಳಯ್ಯ || 103 ||

ಭಾಮಿನಿ

ನೋಡುತಲಿ ಕಲಿಭೀಮ ಖತಿಯಿಂ |
ದೌಡಗಚ್ಚುತ ಕುರುಬಲವನೀ |
ಡಾಡಿ ಹೊಯ್ವೆನೆನುತ್ತಲೂರಿದ ನಿಜಗದಾಯುಧವ ||
ರೂಢಿಪತಿ ಕಂಡಾಗ ಸನ್ನೆಯ |
ಮಾಡುತತಿ ಮಧುರೋಕ್ತಿಯಲಿ ಕೊಂ |
ಡಾಡಿ ತಮ್ಮನನಪ್ಪಿಪೇಳಿದ ನೀತಿಮಾರ್ಗವನು || 104 ||

ರಾಗ ನೀಲಾಂಬರಿ ಧ್ರುವ ಝಂಪೆತಾಳ

ತಮ್ಮ ಬಾರಯ್ಯ | ತವಕವೇನಯ್ಯ |
ಒಮ್ಮೆ ತಾಳಯ್ಯ | ಒರೆವೆ ಕೇಳಯ್ಯ ||
ಧರ್ಮವರಿಯದೆ | ನಡೆವ ಮೂರ್ಖರು |
ತಮ್ಮ ದೋಷಕೆ | ತಾವೆ ಪೋಪರು || 105 ||

ಎಂದು ಭೀಮನ | ಸಂತವಿಟ್ಟನು |
ನೊಂದ ಮುನಿಗಳಿ | ಗಭಯ ಕೊಟ್ಟನು ||
ಅಂದು ಕೌರವ | ನಂಬುಕ್ರೀಡೆಗೆ |
ಇಂದುಮುಖಿಯರ | ಕರೆದನರ್ತಿಗೆ || 106 ||

ರಾಗ ದೇಶಿ ಅಷ್ಟತಾಳ

ಬಂದರಾಕ್ಷಣ ವರ ಜಲಕ್ರೀಡೆಗೆ |
ಮಂದಹಾಸದೊಳಿಂದುವದನೆಯ | ರಂದುಗೆಯು ಝಣರೆನ್ನಲು || 107 ||

ಕರದಿ ಶಾಲೆಯ ನೆರಿವಿಡಿದೊಯ್ಯನೆ |
ಸೆರಗ ನೇವರಿಸುತ್ತ ಸೊಬಗಿಲಿ | ಕುರುಳ ತಿದ್ದುವ ಭರದೊಳು || 108 ||

ಸೆಳೆ ನಡು ಬಳಕುತ್ತಿರೆ ಶೋಭಿಪ |
ಕಳಶಕುಚದತಿಭಾರದಿಂದಲಿ | ನಳಿನಮುಖಿಯರು ನಗುತಿರೆ || 109 ||

ಕೊರಳ ಮುತ್ತಿನಹಾರಗಳೆಸೆಯಲು |
ಮೆರೆವ ಮಣಿಮಯದೋಲೆ ಕರ್ಣದಿ | ಮಿರುಗುತಿರೆ ತರತರದಲಿ  || 110 ||

ಮುಡಿದ ಪುಷ್ಪದ ಪರಿಮಳಕಳಿಗಳ |
ಗಡಣವೈತರೆ ಝೇಂಕರಿಸಿ ಬೆಂ | ಗಡೆಯಲಬಲೆಯರೊಗ್ಗಿಲಿ || 111 ||

ಅರಸನರ್ಧಾಂಗಿ ವರಭಾನುಮತಿಯು ಕೂ |
ಡುರುತರದಿ ಶೋಭಿಸುವ ಶತಸಾ | ವಿರದ ಸತಿಯರ ಮಧ್ಯದಿ || 112 ||

ವಾರ್ಧಕ

ಅನಿಮಿಷೋದರನಣುಗೆಯುದರದೊಳು ಜನಿಸಿರ್ದ |
ಘನಮಹಿಮ ನೆನಗಿದುರುತರ ಕಥಾಕೌತುಕದೊ |
ಳಿನಿತು ವೈಚಿತ್ರ್ಯದಿಂದೊಪ್ಪುವಾನಂದದೊಳಗುತ್ತಮೋತ್ತಮ ಪುರುಷನ ||
ಸನುಮಾನಿಸುವ ಸನ್ಮತಾಭಿಧಾನದೊಳೆಸೆವ |
ವನವಿದೆಂದಬುಜಾಕ್ಷಿಯರ್ ತಾವೆ ತಮ್ಮೊಡನೆ |
ವಿನಯದಿಂ ಮಾತಾಡುತೈದಿದರ್ ಕುರುರಾಯನೊಡನೆ ಜಲಕೇಳಿಗಾಗಿ ||113||

ಪರಿಪರಿಯ ಫಲದ ವಕ್ಷಾಳಿಯಿಂ ಗಾಳಿಯಿಂ |
ಪರಿಮಳಿಪ ನಾನಾ ಸುಗಂಧದಿಂ ಚಂದದಿಂ |
ದುರುತರದೊಳಿಸೆದಿರ್ಪ ಶುಕಗಳಿಂ ಪಿಕಗಳಿಂ ಮೊರೆದು ಝೇಂಕರಿಸುತಿರುವ ||
ತರತರ ಮಿಳಿಂದನಿಕುರುಂಬದಿಂ ರಂಭದಿಂ |
ಪರಮಪಾವನ ಶುಚಿಸ್ಥಳಗಳಿಂ ಕೊಳಗಳಿಂ |
ಸುರರ ಸಂಸರ್ಗಮಾದೊಲವಿನಿಂ ನಲವಿನಿಂ ಗಾಂಧರ್ವವನವೆಸೆದುದು ||114||

ಭಾಮಿನಿ

ಅರಸ ಕೇಳಿಂತೆಸೆವ ವಿಪಿನಕೆ |
ಕುರುಪತಿಯು ನಡೆತಂದು ಶತಸಾ |
ವಿರ ಸತೀಜನಸಹಿತ ಪಟುಭಟರುಗಳ ಬೊಬ್ಬೆಯಲಿ ||
ಬರುಬರುತ ಬಾಗಿಲೊಳು ತಡೆದರು |
ಸುರಭಟರು ಗರ್ಜಿಸುತ ನೀವಾ |
ರುರವಣೆಯೊಳಪೊಗುವಿರೆನುತಡ್ಡೈಸಿದರು ಬಿಡದೆ ||115||

ರಾಗ ಪಂಚಾಗತಿ ಮಟ್ಟೆತಾಳ

ಧರಣಿಪತಿಯೆ ಲಾಲಿಸಾಗ | ಸುರಭಟಾಳಿ ತಡೆವುತಿರಲು |
ಮುರಿದು ಮುಂದೆ ನೂಕಿತಿವರ | ವರಚತುರ್ಬಲ ||
ಕುರುಕ್ಷೀತಿಶನೀಗ ನಮ್ಮ | ದೊರೆಯು ವಾರಿಕೇಳಿಗಾಗಿ |
ತೆರಳಿ ಬರುವ ತಡೆವರ್ಯಾರು | ಮರಳಿರೆಂದರು ||116||

ಎಲವೊ ಖೇಚರಾಧಿಪತಿಯ | ಚೆಲುವ ವನವಿದಿಲ್ಲಿ ನಿಮಗೆ |
ಸಲಿಲಕ್ರೀಡೆಗಾಗದೆಂದ | ರಲಗುವೀರರು ||
ಸಲುಗೆಯೇನಿದೆಮ್ಮ ಕೂಡೆ | ತೊಲಗೆನುತ್ತ ಕುರುಮಹೀಶ |
ತಿಲಕನಧಟ ಶೂರರೆಂದ | ರುಲಿದು ಖತಿಯಲಿ ||117||

ತೆಗೆತೆಗೆನುತ ತಳಿಯ ಮುರಿದು | ಹೊಗಿಸಿದರು ಸಮಸ್ತ ಬಲವ |
ನುಗಿದು ಭುಜ ಬಲಾಢ್ಯರಂದು | ವಿಗಡತನದಲಿ ||
ಬಗೆಯ ಕಾಂಬೆನೆನುತಲಾಯು | ಧಗಳ ನಾಂತು ನಿಂದರಾಗ |
ಜಗಳವಾದುದವರಿಗಿವರಿ | ಗಗಡುತನದಲಿ ||118||

ಆನೆ ಕುದುರೆ ರಥಗಳಖಿಳ | ಸೇನೆ ಷಡುರಥಾದಿಗಳನು |
ಹಾನಿಗೈದು ಹಳಚುತಿರ್ದ | ರಾನಿಕೆಗಳಲಿ ||
ಭಾನುತನುಜ ಮುಖ್ಯ ರಥಿಕ | ರಾನುತಿದಿರೊಳಮರಭಟರ |
ತ್ರಾಣದಿಂದ ಹೊಯ್ದರಾಗ | ಕೇಣಗೊಳ್ಳದೆ ||119||

ಕೋಲಗರೆದು ಖೇಚರೇಂದ್ರ | ನಾಳುಗಳನು ಹೊರಗೆ ನೂಕಿ |
ಸಾಲುಪೌಜು ಪೊಕ್ಕುದತಿ ವಿ | ಶಾಲ ಘೋಷದಿ ||
ಮೇಲು ಹರುಷದಿಂದ ಕುರುನ | ಪಾಲನಮರವನದೊಳೆಸೆದ |
ನಾ ಲತಾಂಗಿಯರ ಸಮೇಳ | ಕೇಳದಿಂದಲಿ ||120||

ಭಾಮಿನಿ

ಅರಸ ಕೇಳ್ ಗಂಧರ್ವರಾಯನ |
ಚರರು ಬಳಿಕಾ ವಿಪಿನದಿಂದಲಿ |
ಪೊರಟು ತರರಿಸುತ್ತ ಬಂದತಿ ಭರದೊಳೀಕ್ಷಿಸುತ ||
ಎರಗುತಾಕ್ಷಣ ಚಿತ್ರಸೇನನೊ |
ಳರುಹಿದರು ನಿಮ್ಮುಪವನಾಂತವ |
ಕುರುಮಹೀಪತಿ ಸೂರೆಗೊಂಡನೆನುತ್ತ ಭೀತಿಯಲಿ ||121||

ರಾಗ ಮುಖಾರಿ ಏಕತಾಳ

ಕೇಳಯ್ಯ ಚಿತ್ರಸೇನದೊರೆಯೆ | ಸೌಭಾಗ್ಯದ ಸಿರಿಯೆ |
ಕೇಳಯ್ಯ ಚಿತ್ರ ಸೇನದೊರೆಯೆ ||ಪಲ್ಲವಿ||

ಮಗಬೇಟೆಗಾಗಿ ಬಂದು ವನಕೆ | ಮುನಿಗಳನೆಲ್ಲ |
ಬೆಗಡುಗೊಳಿಸುತಟ್ಟಿ ಘನಕೆ ||
ಅಗಡು ಗುಣಂಗಳ | ಮುಗುದೆಯರೆಲ್ಲರು |
ಸೊಗಸಿಂದಲಿ ನೆರೆ | ದೊಗುಮಿಗೆ ಹರುಷದಿ |
ಬಗೆಯಲಿ ಜಲಕ್ರೀ | ಡೆಗೆ ಬರೆ ವಿಪಿನವ |
ಹೊಗಗೊಡದಿರಲತಿ | ಜಗಳವ ಗೈದರು || ಕೇಳಯ್ಯ ||122||

ಹಾಣಾಹಾಣಿಯಲಿ ಹೊಯ್ದಡಿದೆವು | ಮುಂದೊತ್ತಿ ಬರುವಾ |
ಸೇನೆ ಷಡುರಥರ ನೀಡಾಡಿದೆವು ||
ಕಾಣುತಲಾ ರವಿ | ಸೂನುವೆಂಬುವ ಮದ |
ದಾನೆ ಕುದುರೆ ರಥ | ವಾನಿಸುತಲೆ ಬಲು |
ಬಾಣವ ಕರೆವುತ | ತ್ರಾಣದಿ ಸುಭಟರ |
ಪ್ರಾಣವ ಕೊಂಡರ | ದೇನೆಂದೊರೆವೆವು || ಕೇಳಯ್ಯ ||123||

ಕದಳೀ ಖರ್ಜೂರ ದ್ರಾಕ್ಷೆಗಿಡವ | ಕಪಿತ್ಥ ಜಂಬು |
ಬದರೀ ದಾಳಿಂಬ ಮಾದಲ ಬುಡವ ||
ಪದಹತಿಯಲಿ ಪುಡಿ | ಗೆದರಿ ತಟಾಕಗ |
ಳುದಕವ ಕೆಡಿಸುತ | ಲಧಮರು ಬಲುತರ |
ಕದನದಿ ಹಿಡಿದಾ | ಯುಧಗಳ ಸೆಳಕೊಂ |
ಡೆದೆಗೆಡಿಸಿದರೈ | ಮದಮುಖತನದಿ || ಕೇಳಯ್ಯ ||124||

ಭಾಮಿನಿ

ಕೇಳು ಜನಮೇಜಯ ಧರಿತ್ರೀ |
ಪಾಲ ವನಚರರೆಂದ ವಾರ್ತೆಯ |
ನಾಲಿಸುತ ಕಿಡಿಗೆದರಿದನು ಕಲಿ ಚಿತ್ರಸೇನಾಖ್ಯ ||
ಮೇಳವಿಸಿ ಬಲು ಯಕ್ಷರಾಕ್ಷಸ |
ಜಾಲವನು ಕಳುಹಿದನು ಕುರುೂ |
ಪಾಲಕನ ಬಲು ಬಲವ ಬನದಿಂದಟ್ಟಿರೆಂದೆನುತ ||125||

ರಾಗ ಮಾರವಿ ಏಕತಾಳ

ಧರಣಿಪ ಕೇಳ್ ಖೇ | ಚರಪತಿಯೆಂದುದ |
ಚರರಾಲಿಸುತಲೆ | ಭರದಿ ಮುದ್ಗರ ಧನು |
ಶರ ತೋಮರಗಳ | ಧರಿಸಿ ಕ್ಷಣಾರ್ಧದಿ |
ಪರಿಪರಿ ವಿಭವದಿ | ಧರೆಗಿಳಿದೊಯ್ಯನೆ | ಬಂದರಾಗ ||126||

ಆರೆಲವೋನ | ಮ್ಮಾರಣ್ಯವ ಬಲು |
ಸೂರೆಯ ಮಾಡಿದ | ಚೋರರೆನುತ ಸುರ |
ವೀರರು ಗಜ ಹೊಂ | ದೇರು ಹಯಂಗಳ |
ಧಾರಿಣಿಗುರುಳಿಸು | ತಾರುಭಟಿಯಲಿ | ಬಂದರಾಗ ||127||

ಪಿಡಿವ ಭಟರ ತಲೆ | ಗಡಿದುರುಳಿಸಿ ಸೆರೆ |
ವಿಡಿಯುತ ರಥಿಕರ | ಕೆಡಹಿ ಮಹೋಗ್ರದಿ |
ಫಡಯೆನುತಲಿ ಘುಡು | ಘುಡಿಸುತ ಪಡೆ ಸದೆ |
ಬಡಿದರು ನಿಮಿಷದಿ | ಬಿಡದರಿಭಟರು | ಏನನೆಂಬೆ ||128||

ವಾರ್ಧಕ

ಇಟ್ಟಣಿಸಿ ಬರುವ ಮದದಾನೆಯಂ ಸೇನೆಯಂ |
ಕುಟ್ಟಿದರ್ ಕವಿವ ಕಟ್ಟಾಳ್ಗಳಂ ಸಾಲ್ಗಳಂ |
ಮೆಟ್ಟಿದರ್ ಕುದುರೆಗಳ ಕೊರಳ್ಗಳಿಂ ಸರಳ್ಗಳಿಂದ ಬಿಟ್ಟರಾವುತರನೆಲ್ಲ ||
ಸಷ್ಟಿಗಡಗೆಡೆದರತ್ಯುಗ್ರದಿಂದ ಶೀಘ್ರದಿಂ |
ದಿಟ್ಟತನದಿಂದಲಾ ರಣದೊಳಂ ಕ್ಷಣದೊಳಂ |
ದುಷ್ಟಕೌರವಬಲದ ಪಂಥಮಂ ಶಾಂತಮಂ ಮಾಡಿದರ್ ಕೂಡೆ ಹೊಯ್ದು ||129||