ಭಾಮಿನಿ

ಅರಸ ಕೇಳ್ ಕುರುಪತಿಯ ಮುಂಬಲ |
ಮುರಿವುತಿರಲದೊಳಗೆ ಸುಭಟರು |
ಭರದೊಳೈತಂದರುಹಿದರು ಸಂಗರದೊಳತಿರಥರ ||
ಹುರುಳು ಗೆಡಿಸಿದರೆಂದು ಕೇಳುತ |
ಬೆರಳ ಮೂಗಿನೊಳಿಟ್ಟು ಚಿಂತಿಸಿ |
ತೆರಳಲಕ್ಷೋಹಿಣಿಯ ನಾಯಕರೆಂದನನುಜರಿಗೆ ||130||

ರಾಗ ಪಂತುವರಾಳಿ ಮಟ್ಟೆತಾಳ

ಕೇಳಿರೈ ಸಹೋದರಾದ್ಯರು ||ಪಲ್ಲವಿ||

ತಡವ ಮಾಡ | ದೇಳಿ ಸಮರದಲಿ್ಲ ನಿಮ್ಮ |
ತೋಳುಬಲುಹ ತೋರಿ ಬಿಡದೆ || ಕೇಳಿರೈ ||ಅ. ಪಲ್ಲವಿ||

ಹೊಡೆದು ಖೇಚರಾಧಿಪತಿಯ | ಪಡೆಯನೆಲ್ಲ ಕೆಡಹಿ ಭರದಿ |
ಕಡುಹ ತೋರಿ ಸಿಕ್ಕಿದವರ | ಬಿಡಿಸಿಕೊಂಡು ಬನ್ನಿರೀಗ || ಕೇಳಿರೈ ||131||

ಆನೆ ಕುದುರೆ ರಥಗಳಖಿಳ | ಸೇನೆಗಳನು ರಣದೊಳಿಂದು |
ಹಾನಿಮಾಡಿದರಿಭಟರ ವಿ | ತಾನವನ್ನು ಸವರಿ ಬೇಗ || ಕೇಳಿರೈ ||132||

ಎಂದ ನಪನ ಮಾತಿಗನುಜ | ರೆಂದರಖಿಳ ಖಚರ ಬಲವ |
ಮುಂದುಗೆಡಿಸಿ ಬರುವೆವೆನುತ | ನಿಂದು ಭುಜವ ಹೊಯ್ದರಂದು || ಕೇಳಿರೈ ||133||

ರಾಗ ಆಹೇರಿ ಝಂಪೆತಾಳ

ಸಮರಕನುವಾಗೆದ್ದರಾಗ | ನಪಗೆ |
ನಮಿಸಿ ದುಶ್ಶಾಸನಾದ್ಯತಿರಥರು ಬೇಗ || ಸಮರ  ||ಪಲ್ಲವಿ||

ಪರಶು ಪಟ್ಟಸ ವಜ್ರ ಕುಂತ ತೋಮರ ಖಡ್ಗ |
ಸುರಗಿ ಶೂಲ ಮುಸುಂಡಿ ಭಿಂಡಿವಾಳ ಕಪಾಣ |
ಹರಿಗೆ ಹಲಗೆ ಶರಾಸನಸ್ತ್ರಾದಿ ಕೈದುಗಳ |
ಧರಿಸಿ ನಡೆತಂದರಾಕ್ಷಣದಿ | ಬಿಡದೆ |
ಬೆರಸಿ ಹೊಯ್ದರು ಖಚರ ಬಲವನಾ ರಣದಿ || ಸಮರ ||134||

ತೋರಿರೋ ಗಾಂಧರ್ವಪತಿಯ ನಮ್ಮಯ ಬಲವ |
ಗಾರುಮಾಡಿದ ಗರುವರಾರೆನುತಲಬ್ಬರಿಸಿ |
ವಾರಣ ವರೂಥ ಹಯವೇರಿ ಹೂಂಕರಿಸುತ್ತಲೆ |
ಸಾರಿ ಷಡುರಥರ ಚೆಂಡಾಡಿ | ಹೊಕ್ಕು |
ಹೋರಿ ಹೊಡೆದರು ಯಕ್ಷರಾಕ್ಷಸರ ನೋಡಿ || ಸಮರ ||135||

ಘುಡುಘುಡಿಸುತಾರ್ಭಟಿಸಿ ಝಡಿದು ಮುಂದೊತ್ತುತಿಹ |
ಕಡುಗಲಿಗಳಾರ್ಭಟೆಯ ತಡೆಯದಾ ಖಚರಬಲ |
ನಡೆದುದಭ್ರವನಡರಿ ಬಿಡದೆ ತಮ್ಮೊಡೆಯನೊಳು |
ನುಡಿದರಾಗಾಹವದ ಪರಿಯ | ಕೇಳ್ದು |
ಕಿಡಿಗೆದರುತಿರ್ದನಾ ಗಂಧರ್ವರಾಯ || ಸಮರ ||136||

ಕಂದ

ಸಮರದೊಳಾದುಪಟಳಮಂ |
ಕ್ರಮದಿಂ ಕೇಳ್ದೊಡನೆ ಚಿತ್ರಸೇನಂ ಭರದಿಂ ||
ಅಮರಾಧೀಶ್ವರನಿಂ ಗಭಿ |
ನಮಿಸುತ ಪೇಳ್ದ ಕೌರವನೆಸಗಿದ ದುಸ್ಥಿತಿಯಂ ||137||

ರಾಗ ನವರೋಜು ಆದಿತಾಳ

ಕೇಳು ನಿರ್ಜರರಾಯ | ನಾ | ಪೇಳುವುದೆಲ್ಲವ ಜೀಯ || ಕೇಳು ||ಪಲ್ಲವಿ||

ಖೂಳ ಕೌರವ ಬಂದು | ತನ್ನ | ಪಾಳೆಯ ಸಹಿತಲಿಂದು ||
ಧಾಳಿವಡೆದು ಮುನಿ | ಜಾಲವ ದ್ವೈತವ |
ನಾಳಿಯಿಂದೆಬ್ಬಿಸಿ ಗೋಳುಗುಟ್ಟಿಸಿದನು || ಕೇಳು ||138||

ಜಲಕ್ರೀಡೆಗೆಂದೆನುತ | ಬಲು | ಜಲಜಾಕ್ಷಿಯರು ಸಹಿತ ||
ಮಲೆತು ನಮ್ಮಯ ವನ | ದಲಿ ಖಚರೌಘವ |
ಕೊಲುತಟ್ಟಿದನಿದೆ | ಬಲುಹಿ ನಿಂದಾತನು || ಕೇಳು ||139||

ಯಕ್ಷರಾಕ್ಷಸಪಡೆಯ | ಕೇ | ಳ್ದಾಕ್ಷಣವಟ್ಟಿದೆನೊಡೆಯ ||
ಈಕ್ಷಿಸುತಲಿ ಜಗ | ಚಕ್ಷುಜ ಮುಖ್ಯರು |
ಶಿಕ್ಷಿಸಿ ಖೇಚರ | ಲಕ್ಷವ ಗೆಲಿದರು || ಕೇಳು ||140||

ಭಾಮಿನಿ

ಚಿತ್ರಸೇನನ ನುಡಿಯ ಕೇಳುತ |
ಗೋತ್ರರಿಪು ನಗುತೆಂದನಾಗ ವಿ |
ಚಿತ್ರವಾಯ್ತಿದು ನರರು ನಿಮ್ಮನು ಗೆಲಿದು ಮೇಲಿನ್ನು ||
ಕತ್ರಿಮದ ಮೋಡಿಯಲಿ ಪಾಂಡುಸು |
ಪುತ್ರರನು ಸೋಲಿಸಿ ಸಮಸ್ತ ಧ |
ರಿತ್ರಿಯನು ಸೆಳೆಕೊಂಡಧಮರನು ಬಿಡದಿರೀಗೆಂದ ||141||

ರಾಗ ಕಾಂಭೋಜಿ ಝಂಪೆತಾಳ

ವರಚಿತ್ರಸೇನ ಕೇಳನುವಾಗು ಸಂಗರಕೆ |
ಬರಹೇಳು ಯಕ್ಷರಾಕ್ಷಸರ ||
ಮೆರೆವ ಕಿಂಪುರುಷ ಕಿನ್ನರ ಗುಹ್ಯಕಾದಿಗಳ |
ಧುರಕೆ ಸನ್ನಹವಾಗಲೀಗ ||142||

ಶಾಕಿನಿಯರಖಿಳ ಢಾಕಿನಿ ಭೂತಗಣ ಸಹಿತ |
ನೂಕಲಾಹವಕೆ ಚೂಣಿಯಲ್ಲಿ ||
ಆಕೆವಾಳರ ಭಯಂಕರಿಸಿ ನಲಿವುತ ರಕ್ತ |
ದೋಕುಳಿಯನಾಡಲಾ ರಣದಿ ||143||

ತರಣಿಸುತ ಸೌಬಲಾದ್ಯರ ಬಿಡದೆ ಜವಗೆಡಿಸಿ |
ಕುರುಬಲವ ಮುರಿದು ನುಗ್ಗರದು ||
ದುರುಳ ಕೌರವನಾತನನುಜಾದಿ ನಪರ ಹೆಡ |
ಮುರಿ ಕಟ್ಟಿ ತಾರೆಂದ ನಗುತ ||144||

ಈ ರೀತಿಯಿಂದ ಶಚಿಯರಸಪ್ಪಣೆಗೊಡಲು |
ಭೂರಿ ಮಾರ್ಬಲ ಸಹಿತಲಂದು ||
ವೀರವಿಕ್ರಮ ಚಿತ್ರಸೇನ ಮಣಿಮಯ ರಥವ |
ನೇರಿ ಪೊರಮಟ್ಟನಾಹವಕೆ ||145||

ರಾಗ ಭೈರವಿ ತ್ರಿವುಡೆತಾಳ

ಅರಸ ಕೇಳ್ ಖಚರೇಂದ್ರನಾಜ್ಞೆಗೆ | ನೆರೆದುದಾಹವಕಾಗಿ ಶತ ಸಾ |
ವಿರ ಭಟರು ತಮತಮಗೆ ಬೇಕಾ | ಗಿರುವ ಬತ್ತೀಸಾಯುಧಂಗಳ |
ಧರಿಸಿ ಕವಿ ಕವಿಯೆನುತ ಸಿಡಿಲಿನ | ಮರಿಗಳಂತಾರ್ಭಟಗಳಿಂದಂ |
ಬರಪಥವನಿಳಿದಂದು ಪೊಕ್ಕರು | ಕುರುಕುಲಾಂಬುಧಿ ಕದಡಿತಾಕ್ಷಣ |
ವೇನನೆಂಬೆ | ಸಾಹಸ | ವೇನನೆಂಬೆ ||146||

ಆರೆಲವೊ ಗಂಧರ್ವಬಲವನು | ಗಾರುಮಾಡಿದಗರುವರೆನುತಲೆ |
ಸಾರಿ ಷಡುರಥರುಗಳ ತರಿದು | ಬ್ಬೇರಿ ಹೊಕ್ಕಿರಿದಾಡಿದರು ಕೈ |
ಮೀರಿ ಕಾದುವ ಕಲಿಗಳಸುವನು | ಹೀರಿ ಹಿಂಡಿದರಾ ರಣದಿ ಸುರ |
ವೀರರಾರ್ಭಟೆಗಾರಿದರು ಹೆ | ಮ್ಮಾರಿಗೌತಣವಾದುದನು ನಾ |
ನೇನನೆಂಬೆ | ಸಾಹಸ | ವೇನನೆಂಬೆ ||147||

ವಾರ್ಧಕ

ಜಡಿದು ಮುಂದೊತ್ತುವರ ನೂಕಿದರ್ ತಾಕಿದರ್ |
ನುಡಿದ ಕೈವಾರರಂ ಕೊಚ್ಚಿದರ್ ಚುಚ್ಚಿದರ್ |
ತಡೆವ ಕರಿಘಟೆಗಳಂ ಕೆಡಹಿದರ್ ಮಡುಹಿದರ್ ಗರ್ವವೆಗ್ಗಳಭಟರನು ||
ಅಡಹಾಯ್ದು ಶೌರ್ಯ ಪ್ರತಾಪದಿಂ ಕೋಪದಿಂ |
ಹಿಡಿಹಿಡಿಯಿರೆನುತಲಬ್ಬರಿಸುತಂ ಹರಿಸುತಂ |
ಬಿಡದೆ ಬೆಂಬೊತ್ತಿ ಕುರುವೀರರಂ ಶೂರರಂ ಹೊಯ್ದರದನೇವೇಳ್ವೆನು ||148||

ಭಾಮಿನಿ

ಅರಸ ಕೇಳಾ ಖಚರಭಟರ |
ಬ್ಬರಕೆ ನಿಲ್ಲದೆ ಕೌರವರ ಬಲ |
ಮುರಿದು ಹಿಂದೋಡುತಿರೆ ಕಂಡಾ ಕರ್ಣ ಮೊದಲಾದ ||
ಧುರವಿಜಯರೈತಂದು ಹೊಕ್ಕರು |
ಸರಳಮಳೆಗರೆವುತಲೆ ಮಿಗೆ ಖೇ |
ಚರಬಲವ ಹಿಮ್ಮೆಟ್ಟಿಸುತ ಹೊಯ್ದಡಿದರು ರಣದಿ ||149||

ರಾಗ ಶಂಕರಾಭರಣ ರೂಪಕತಾಳ

ಧರಣಿಪತಿಯೆ ಕೇಳು ಖಚರಬಲವ ಮುರಿವುತ |
ತಿರುಗುತಿರಲು ಚಿತ್ರಸೇನನಾಗ ಕಾಣುತ ||
ಭರದಿ ರಥವ ಮುಂದೆ ನೂಕಿ ಧನುವ ಧರಿಸುತ |
ಸರಳಮಳೆಯ ಕರೆದನಾಗ ಫಡ ಫಡೆನ್ನುತ ||150||

ಹೊಕ್ಕು ಹೊಯ್ದ ಧೊರೆ ಕುಮಾರಕರ ಶಿರಂಗಳ |
ದಿಕ್ಕುದೆಸೆಗೆ ತೂರಿಸಿದನು ಬರಲು ರಥಂಗಳ ||
ತಿಕ್ಕಿ ತಿಂಬೆನೆಂದು ಬರುವ ಭುಜಬಲಾಢ್ಯರ |
ಸೊಕ್ಕ ಮುರಿದು ಸೋಲಿಸಿದನನೇಕ ರಥಿಕರ ||151||

ಆರುಭಟಿಸಿ ಬರುವ ಕುರುನಪಾಲನನುಜರ |
ಗಾರುಗೆಡಿಸು ತಟ್ಟಿದನು ವಿರೋಧಿಸುಭಟರ ||
ವಾರಣಾಶ್ವಗಳಲಿ ಕುಳಿತು ಕಾದುತಿಪ್ಪರ |
ಕ್ರೂರಶರದಿ ಕೆಡಹಿ ಮೂದಲಿಸಿದನೆಲ್ಲರ ||152||

ಭಾಮಿನಿ

ವಸುಮತೀಶನೆ ಲಾಲಿಸನಿತರೊ |
ಳಸಮಬಲ ದುಶ್ಶಾಸನಾದ್ಯರು |
ಬಿಸಜಸಖಸುತ ಕರ್ಣ ಚಿತ್ರಾಂಗದರು ಮೊದಲಾಗಿ ||
ಎಸುಗೆಗಾರರು ಚಿತ್ರಸೇನನ |
ಮುಸುಕಿದರು ಶಸ್ತ್ರಾಸ್ತ್ರದಲಿ ಬಳಿ |
ಕುಸಿರಲೇನನಿತುವನು ಕಡಿದಿಂತೆಂದ ಖಚರೇಂದ್ರ ||153||

ರಾಗ ಭೈರವಿ ಅಷ್ಟತಾಳ

ಕರ್ಣನೆಂಬವನೆ ನೀನು | ನಿನ್ನುಗ್ರವ |
ನಿರ್ಣಯಿಸಲು ಬಂದೆನು ||
ಪನ್ನತಿಕೆಯ ತೋರು ತೋರೆನುತೆಚ್ಚನು |
ಬಣ್ಣಿಪೆನೇನದನು ||154||

ಎಚ್ಚಶರೌಘವನು | ಕಾಣುತಲಾಗ |
ಕೊಚ್ಚುತೆಂದನು ಕರ್ಣನು ||
ಮೆಚ್ಚುವರಿದಕೆ ನಿರ್ಜರರ ಸೂಳೆಯರೆಂದು |
ಚುಚ್ಚಿದ ಕಣೆಯನಂದು ||155||

ಎಲವೊ ರಾಧೇಯ ಕೇಳು | ನಿನ್ನಯ ಕೈ |
ಚಳಕವ ಕಂಡೆ ತಾಳು ||
ಬಲೆಗಾರರೊಡನಾಡಿದಂದವಿದಲ್ಲೆಂದು |
ಬಿಲು ತುಂಡಿಸಿದ ತೀವ್ರದಿ ||156||

ಧನುವ ಖಂಡಿಸಲು ಬೇಗ | ಕರ್ಣನು ಪ್ರತಿ |
ಧನುವ ಕೊಂಡೆದ್ದನಾಗ ||
ಗುಣಿಸುವ ಸರಿಗಮ ಪದನಿಸವಲ್ಲೆನು |
ತಣಕದಿ ತೆಗೆದೆಚ್ಚನು ||157||

ರವಿಜನಿಟ್ಟಂಬುಗಳ | ಖಂಡಿಸಿ ಮತ್ತೆ |
ಕವಿದೆಚ್ಚನಸ್ತ್ರಗಳ ||
ತವಕದಿ ಕಡಿಯಲು ಶಕುನಿ ತಾನಿದಿರಾಂತು |
ಹವಣಿಸಲೆಂದನಿಂತು |158||

ಈತನೆ ಸೌಬಲನು | ಪಾಂಡವರನು |
ದ್ಯೂತದಿ ಗೆಲಿದವನು ||
ಘಾತಕಿ ಫಡ ಇದಿರಾಗೆಂದು ತೆಗೆದೆಚ್ಚು |
ಧಾತುಗೆಡಿಸಿದನಂದು ||159||

ವಾರ್ಧಕ

ತರಣಿಸುತನಿಂಗೈದು ಕಲಿ ಸಿಂಧುನಪಗಾರು |
ನೆರೆ ಕಳಿಂಗನಿಗೇಳು ಚಿತ್ರಾಂಗದಂಗೆಂಟು |
ವರ ಸುಶರ್ಮನಿಗೆರಡು ದುಶ್ಶಾಸಗೈವತ್ತು ದುರಿಯೋಧನಂಗೆ ನೂರು ||
ಭರದಿ ಮಿಕ್ಕವರಿಗೆರಡೆರಡು ಶರ ಬಿಟ್ಟು ಬೊ |
ಬ್ಬಿರಿದು ಕುರುಸೇನೆಯಂ ಬೇನೆಗೊಳಿಸುತ ರಣದಿ |
ವಿರಥರಂ ಮಾಡಲ್ಕೆ ಕಲಿಕರ್ಣನಾ ಚಿತ್ರಸೇನನಂ ತಡೆದೆಂದನು ||160||

ರಾಗ ಭೈರವಿ ಏಕತಾಳ

ಎಲೆ ಖಚರಾಧಿಪ ಕೇಳು | ಫಡ | ತೊಲಗದಿದಿರು ನಿಲು ತಾಳು ||
ಬಲವನು ಜೈಸಿದ ಘನವ | ಈಗ | ನಿಲಿಸುವೆನೆನುತಲಿ ಧನುವ ||161||

ಗಾಢದಿ ಕೊಂಡರ್ಕಜನು | ಮಿಗೆ | ಪೂಡಿದ ತಿಮಿರಾಸ್ತ್ರವನು ||
ಜೋಡಿಸಿ ಬಿಡುತಿರಲಾಗ | ತಡ | ಮಾಡದೆ ಖೇಚರ ಬೇಗ ||162||

ಕೊಂಡಿನಶರವನು ಬಿಡಲು | ಮುಂ | ಕೊಂಡಾಗದನಡಗಿಸಲು ||
ಕೊಂಡದ್ರಿಯ ಬಾಣವನು | ಬಿಡೆ | ಖಂಡಿಸೆ ವಜ್ರದೊಳದನು ||163||

ಮಲೆತನಲಾಸ್ತ್ರವ ಬಿಡಲು | ಮಿಗೆ ಗೆಲಿದನು ವರುಣಾಸ್ತ್ರದೊಳು ||
ಸಲೆ ಮೇಘಾಸ್ತ್ರವನೆಸಲು | ವಾಯು | ಹಿಳುಕದೊಳದ ಹಾರಿಸಲು ||164||

ವಾರ್ಧಕ

ಧರಣೀಶ ಕೇಳು ಭುಜಗಾಸ್ತ್ರಮಂ ಬಿಡಲದರ |
ಗರುಡಾಸ್ತ್ರದಿಂ ಗೆಲ್ದು ಖಚರೇಂದ್ರನಾತನಂ |
ವಿರಥನಂ ಮಾಡಲ್ಕೆ ದುರಿಯೋಧನಂ ಬಂದು ತಡೆದ ನಡಹಾಯ್ದು ಬಿಡದೆ ||
ಎರಡು ಶರದಿಂ ಚಿತ್ರಸೇನನ ವರೂಥಮಂ |
ಧರೆಯಿಂದ ನಭಕೊತ್ತಲಾಧರಿಸುತನಿತರೊಳು |
ಕರದ ಧನುವಂ ಮುರಿದು ದಿವ್ಯಾಸ್ತ್ರದಿಂದವನ ರಥವನುಂ ಪುಡಿಗೈದನು ||165||

ರಾಗ ಶಂಕರಾಭರಣ ಪಂಚಾಗತಿ ಮಟ್ಟೆತಾಳ

ರಥವು ಮುರಿಯಲಾಗ ಪ್ರತಿಸು | ರಥವನೇರಿ ಧನುವ ಕೊಂಡು |
ಖತಿಯೊಳೆಚ್ಚನಾಗ ಕುರುನ | ಪತಿ ಮಹಾಸ್ತ್ರವ ||
ಮಥಿಸಿ ಬಾಣವೊಂದರಿಂದ | ಧತಿಗೆಡಿಸಲೆದ್ದು ಖಚರ |
ಪತಿಯ ಬಡಿದನಂದು ವಿಶಿಖ | ಖತಿಯೊಳರಸನು ||166||

ಚಿತ್ರಸೇನ ಮೂರ್ಛೆಗೊಳಲು | ಚಿತ್ರವೆನುತ ಖಚರಕೋಟಿ |
ಮುತ್ತಿತಾಗ ಕೋಟಿಯಾಗಿ | ಧಾತ್ರಿಪತಿಯನು ||
ಎತ್ತ ಪೋಗಗೊಡದೆ ಶರವ | ಕೆತ್ತಿಸುತಲೆ ಹೊಕ್ಕು ಹೊಯ್ದು |
ತೆತ್ತಿಗರನು ಕರೆಸು ಕರೆಸೆ | ನುತ್ತ ಕವಿದರು ||167||

ಮುಂದುಗೆಟ್ಟು ನಪತಿ ಧೈರ್ಯ | ಗುಂದಲನುಜರೆಲ್ಲ ಭರದಿ |
ಬಂದು ಹೊಕ್ಕರಮರಭಟರು | ಸಂದಣಿಗಳಲಿ ||
ಅಂದುಖಚರಪತಿಯನೇಮ | ದಿಂದ ಬಾಹುಯುಗವ ಸೆಳೆದು |
ಬಂಧಿಸಿದರು ಹಯದ ವಾಘೆ | ಯಿಂದ ಮಂತ್ರಿಸಿ ||168||

ವಾರ್ಧಕ

ರಾಯದಳವಂ ಮುರಿದು ಖಚರೇಂದ್ರನಂದು ಕುರು |
ರಾಯನಂ ಕಟ್ಟಿ ಬಿಗಿದನುಜರಂ ಕೊಂಡು ಸುರ |
ರಾಯನೆಡೆಗೈದನಿತ್ತಲು ಬಳಿಕ ಕುರುಬಲಂ ಘೋಳೆಂದು ಮರುಗುತಿರಲು ||
ರಾಯ ಕೇಳನಿಲಜಂ ಹರುಷದೊಳಿರಲು ದ್ರುಪದ |
ರಾಯನಾತ್ಮಜೆ ವಿಲಾಸಂಬಡಲ್ಕಾ ಧರ್ಮ |
ರಾಯನಂದೊಲಿದು ಚಿಂತಿಸುತರ್ದನಿಂದುವಂಶದ ಕೋಳು ಹೋಯಿತೆನುತ ||169||

ಭಾಮಿನಿ

ಆ ಸಮಯದಲಿ ಭಾನುಮತಿ ದು |
ಶ್ಶಾಸನಾದ್ಯರ ಕಾಂತೆಯರು ಚಿಂ |
ತಾಸಮುದ್ರದೊಳಳಲುತಿರ್ದರದೇನ ಬಣ್ಣಿಪೆನು ||
ಏಸು ಬಲವಿದ್ದೇನು ಫಲವಾ |
ಯ್ತೀ ಶಕುನಿ ಕರ್ಣಾದಿ ಸುಭಟರು |
ಕೈಸೆರೆಯ ಕೊಟ್ಟರು ಕುರು ಕ್ಷಿತಿಪತಿಯನೆಂದೆನುತ ||170||

ರಾಗ ಆನಂದಭೈರವಿ ಆದಿತಾಳ

ದ್ರೋಣ ಭೀಷ್ಮರಿರಲೀ ಪರಿಯ | ಕಾಣುತ ಪರಬಲಕೆ ಸೆರೆಯ |
ಕೊಡುವರೇ | ನೋಡಿ | ಬಿಡುವರೇ ||171||

ಸಿಕ್ಕದವರೆಂದವರವಜ್ಞೆ | ವಕ್ಕಣಿಸಲಿನ್ನೇನಾಜ್ಞೆ |
ಗೈವರೋ | ಎಲ್ಲಿ | ಗೊಯ್ವರೋ ||172||

ಇಂತೆಂದು ಕಾಂತೆಯರೆಲ್ಲ | ಚಿಂತಿಸಿದುದ ಶಿವನೆ ಬಲ್ಲ |
ನೊಂದರು | ಹಲುಬಿ | ಬೆಂದರು ||173||

ಭಾಮಿನಿ

ಜನಪ ಕೇಳಾ ಭಾನುಮತಿ ಸಹಿ |
ತಿನಿತು ದುಃಖದಿ ಕರಗುತಲೆ ಮೈ |
ದುನರ ಹೆಂಡಿರವೆರಸಿ ಪಾಂಡವರೆಡೆಗೆ ನಡೆತಂದು ||
ಘನತರದ ಕ್ಲೇಶದಲಿ ಯಮನಂ |
ದನನ ಚರಣಾಬ್ಜದಲಿ ಧೊಪ್ಪನೆ |
ವನಿತೆ ಬಿದ್ದೊರಳಿದಳು ಕರುಣೆಯ ರಕ್ಷಿಸೆಂದೆನುತ ||174||

ರಾಗ ಕೇದಾರಗೌಳ ಅಷ್ಟತಾಳ

ನಯನಾಂಬುಧಾರೆಯೊಳಂಘ್ರಿಯ ತೊಳೆವುತ್ತ | ಭಯರಸಭಕ್ತಿಯಲಿ ||
ಪ್ರಿಯನ ಪ್ರಾಣವ ಕಾಯಬೇಕೆಂದು ನುತಿಸಿದಳ್ | ದಯವಂತ ಧರ್ಮಜನ ||175||

ಹುಳಿಗೆ ಹಾಲಳುಕಿದರಳಿವುದೆ ಕ್ಷೀರಾಬ್ಧಿ | ಬಲು ಸತ್ಯಾಧಿಕರು ನೀವು ||
ಖಳರು ನಮ್ಮವರಿಂದುಕುಲತಿಲಕನೆ ಕಾಯೆಂ | ದಳಲಿದಳ್ ಭಾನುಮತಿ ||176||

ನಾವು ಸರ್ವಾಪರಾಧಿಗಳೆಂದು ಜನರೆಲ್ಲ | ತಾವೆ ಬಲ್ಲರು ಸ್ಥಿತಿಯ ||
ನೀವು ಗುಣಾಢ್ಯರು ಕ್ಷಮಿಸಿಕೊಂಡರಸನ | ಕಾವುದೆಂದಳಲಿದಳು ||177||

ರಾಯರಿಗರುಹವ್ವ ತಾಯೆ ದ್ರೌಪದಿ ಪಿರಿ | ದಾಯಾಸಬಡಿಸಿದರು ||
ನೋಯಿಸೆ ಗಂಧ ಗುಣಾಯುತ ಬಿಡುವುದೆ | ಕಾಯಬೇಕಿಂದಿನಲಿ ||178||

ಎಂದು ನಾನಾಪರಿಯಿಂದ ದುಃಖಿಸುತಲೆ | ಮುಂದಡಗೆಡೆದಿರಲು ||
ಇಂದುವದನೆ ಏಳೇಳೆಂದಭಯವನಿತ್ತ | ನಂದು ಧರ್ಮಜ ನಗುತ ||179||

ಭಾಮಿನಿ

ಭೂಮಿಪತಿ ಕೇಳ್ ಭಾನುಮತಿಯನು |
ಪ್ರೇಮದಲಿ ಪಿಡಿದೆತ್ತಿ ಬಳಿಕಾ |
ಭೀಮಸೇನನ ಕರೆದು ಕರುಣಿಗಳರಸನುಸಿರಿದನು ||
ಸೋಮವಂಶಜ ಕೋಲುಹೋದುದು |
ನೀ ಮನವ ಮಾಡೆನಲು ಖಳನಿ |
ರ್ನಾಮ ಮಾರುತಿ ಕರವ ಮುಗಿದಿಂತೆಂದನಗ್ರಜಗೆ ||180||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಣ್ಣನವರಿಂತುಸಿರಿದರೆ ನಾ | ಬಣ್ಣಿಸುವೆನೇನಿದಕೆ ನಮ್ಮನ |
ರಣ್ಯಕಟ್ಟಿದ ಗುಣವ ಮರೆತಿರೆ | ಮಿಣ್ಣನಿಂದು ||181||

ಸೆರೆಯ ಸಿಕ್ಕಿದರೆಂದು ನಿಮ್ಮನು | ಮರೆಯ ಹೊಕ್ಕಳಲುವರು ಮಡದಿಯ |
ರುರಗನಿಗೆ ಹಾಲೆರೆದು ಫಲವೇ | ನರಿತು ನೋಡೈ ||182||

ಎಂದು ಭೀಮನು ಖತಿಗೊಳಲು ಕರೆ | ದೆಂದ ನರನಿಗೆ ನಿನ್ನ ಹದನೇ |
ನೆಂದು ಯಮಸುತನಾಗ ಮನದೊಳು | ನೊಂದುಕೊಳುತ ||183||

ಒಡನುಣೆನು ಕೌರವರನೆಲ್ಲರ | ಬಿಡಿಸದನಕೆಂದೆನಲು ಫಲುಗುಣ |
ನಡರಿ ರಥವನು ನಡೆಸಿದನು ಧನು | ವಿಡಿದು ಭರದಿ ||184||

ವಾರ್ಧಕ

ಅರಸ ಕೇಳರ್ಜುನಂ ಪೊರಡಲ್ಕೆ ಖೇಚರಂ |
ಮುರಿದು ಕುರುಸೇನೆಯನ್ನಿರದೆ ಕೂಡೈತರಲ್ |
ತರುಬಿದಂ ಗಾಂಡೀವ ವರಧನುವನಂದು ಝೇಂಕರಿಸುತತಿ ವಹಿಲದಿಂದ ||
ಉರುಹುವೆನು ಗಾಂಧರ್ವಲೋಕಮಂ ಬಿಡು ಸೆರೆಯ |
ನರಸ ಕೌರವನನೆಂದಬ್ಬರಿಸಿ ಫಲುಗುಣಂ |
ಸರಳಿಂದ ತಡೆಗಟ್ಟಿದಂ ಚಿತ್ರಸೇನನ ಮಹಾರಥವನಾ ಪಥದೊಳು ||185||

ಭಾಮಿನಿ

ಆ ಖಚರಪತಿ ನರನ ಶರವ ನಿ |
ರಾಕರಿಸಿ ನಭಕೇರಿದನು ಲೋ |
ಕೈಕವೀರರ ಗೆಲಿದೆನೆಂಬುಬ್ಬರದ ಗರ್ವದಲಿ ||
ಪಾಕಶಾಸನಸುತನು ರಥವನು |
ನೂಕಿ ಗಗನಾಂಗಣದಿ ತಡೆವುತ |
ನೇಕ ಶರಗಳ ಕವಿಸಿ ಕೆಡಹಿದ ಯಕ್ಷ ರಾಕ್ಷಸರ ||186||

ರಾಗ ಮಾರವಿ ಏಕತಾಳ

ತಿರುಗುತಲಾ ಖೇಚರಪತಿ ಪಾರ್ಥನ | ಶರಗಳ ಖಂಡಿಸುತ ||
ಸರಸೋಕ್ತಿಯಲಿಂತರುಹಿದ ನಿನ್ನ | ಬ್ಬರಗಳ ನಿಲಿಸೆನುತ ||187||

ಮರುಳೋ ಮೂರ್ಖನೊ ಶೌರ್ಯದ ಪಿತ್ತವು | ಶಿರಕಡರಿತೊ ನಿನಗೆ ||
ಸರಳನು ಸರಿ ಮಾಡದಿರುಸಿರುವೆನವ | ಧರಿಸೆನ್ನಯ ನುಡಿಯ ||188||

ಹುಲಿಯನು ಮುರಿದೊತ್ತಲು ಪಶುಗಳ ಸಂ | ಕುಲಕೇನುಪಹತಿಯೊ ||
ತಳುವದೆ ವಾಯಸಕುಲವಳಿದರೆ ಕೋ | ಗಿಲೆಗೇನೊಡಲುರಿಯೊ ||189||

ಖಳರನು ಕೊಪ್ಪರಿಸಲು ಸಜ್ಜನರಿಗೆ | ತಲೆವೇದನೆಯೇನು ||
ಕುಲಕಂಟಕ ಕೌರವನನು ಕಟ್ಟಿದ | ರಳಲೇನೈ ನಿನಗೆ ||190||

ಹೋದರೆ ಮಾರಿಯ ಮನೆಯೊಳು ಕರೆತಂ | ದಾದರಿಸುವರುಂಟೆ ||
ಬೋಧದೊಳೀಕ್ಷಿಸಿ ತೆರಳೆಲರ್ಜುನ | ಮೂದಲಿಸುತ ನುಡಿದ ||191||

ಭಾಮಿನಿ

ಫಡ ಫಡೆಲವೋ ಖಚರ ನಿನ್ನಯ |
ನುಡಿಯ ಚಾತುರ್ಯಗಳ ಬಲ್ಲೆನು |
ನಡೆಯದೆಮ್ಮೊಳು ಸುರಪುರದ ಸೂಳೆಯರ ಸುಧೆ ಕುಡಿವ ||
ಕಡುಗಲಿಗಳಿರ್ದಲ್ಲಿ ಮೆರೆಸೆಂ |
ದೊಡನೆಸೆಯೆ ಬಲು ಕಾಳಕೂಟದ |
ಕಡಲಿನಂತರಿಭಟನ ಕವಿದವು ಪಾರ್ಥನಂಬುಗಳು ||192||

ಕಂದ

ಫಲುಗುಣನುರುತರ ಶರಮಂ |
ತಳುವದೆ ತರಿದಾಗ ಖಚರಪತಿ ನಯದಿಂದಂ ||
ವಲವೈರಿಯ ಸುತಗೆಂದಂ |
ಛಲಮಂ ಬಿಡು ನಿರ್ದಯನಾಗದಿರೆನುತಾಗಂ ||193||

ರಾಗ ಮಾರವಿ ಅಷ್ಟತಾಳ

ಕೇಳು ಕೇಳೈ ಪಾರ್ಥ | ಕೋಪಿಸಿಕೊಳದಿರು ವ್ಯರ್ಥ |
ಪೇಳುವೆನೀತನಧೂರ್ತ | ಗುಣವ ಧುರಸಮರ್ಥ ||ಪಲ್ಲವಿ||

ಮಡದಿ ಮಕ್ಕಳು ಹಿತವಂತರು ಮ | ತ್ತೊಡ ಹುಟ್ಟಿದವರು ಕೂಡಿ |
ಬಿಡದೀ ಭಾಗ್ಯವ ತೋರಲು ನಿಮಗೆಂ | ದೊಡನೆಲ್ಲರು ಮಾತಾಡಿ ||
ಪಡೆಸಹಿತಲೆ ವಿಪಿನಕೆ ಬಂದನು ಬಹು | ಬಡಿವಾರಂಗಳ ಮಾಡಿ |
ಕೆಡಿಸಿದ ನಮ್ಮುಪವನವನು ಖಚರರ | ಹುಡಿ ಗಟ್ಟಿದನತಿ ಖೋಡಿ || ಕೇಳು ||194||

ಅದು ಕಾರಣ ನಿನ್ನಯ್ಯನು ನೇಮಿಸಿ | ಕದನಕೆ ಕಳುಹಿದನಿಂದು |
ಮದಮುಖರನು ರಣದೊಳು ಭಂಗಿಸಿ ನಿ | ಲ್ಲದೆ ಕ್ಷಿಪ್ರದಿ ತಾರೆಂದು ||

ವದಗಿದೆ ನಿಮ್ಮಯ ಪಕ್ಷದಿ ಬಲಸಹಿ | ತಿದಿರಾಗಹಿತರಕೊಂದು |
ಅಧಮರನೊಯ್ದರೆ ನೀನೇತಕೆ ತಡೆ | ದದುಭುತ ಮಾಡುವೆ ಬಂದು || ಕೇಳು ||195||

ರಾಗ ಮಧ್ಯಮಾವತಿ ಏಕತಾಳ

ಕೇಳು ಖಚರೇಂದ್ರ ನಾನೆಂಬ ನುಡಿಯ |
ಪೇಳುವುದಹುದಹುದಿವದಿರ ಸ್ಥಿತಿಯ || ಕೇಳು  ||ಪಲ್ಲವಿ||

ಮೇದಿನೀಪತಿ ಧರ್ಮರಾಯನ ಮತವಿದು |
ಪಾದಾಕ್ರಾಂತರಾದವರ ಕಾಯಬೇಕೆಂದು ||
ಶೋಧಿಸಿ ನೋಡು ಕ್ಷತ್ರಿಧರ್ಮ ಪದ್ಧತಿಯಿದು |
ವೈದಲ್ಲದೆ ಬಿಡೆನು ಒಪ್ಪಿಕೊಡು ನೀನು || ಕೇಳು ||196||

ಅವರವರ ದುಷ್ಕರ್ಮದೊಳಗವರಳಿವರು |
ಭವಣೆಯು ನಮಗೇನು ಬಿಡಿಸೆಂದನು ||
ಭುವನಸಂಜೀವ ನಮ್ಮಯ ಭಾವ |
ರವಿಗೆ ಕತ್ತಲೆ ಬಂದು ಕವಿವದುಂಟೆಂದು || ಕೇಳು ||197||

ನಿನಗೆ ನಿರ್ಜರಪತಿಯ ನೇಮ ಕಟ್ಟುವುದೆಂದು |
ಎನಗಣ್ಣನಾಜ್ಞೆಯು ಬಿಡಿಸಿ ತಾರೆಂದು ||
ಸನುಮತವಿದು ನೋಡು ಸೆರೆಯ ಬಿಟ್ಟು ಮಾತಾಡು |
ಅನುವಾಗಲ್ಲದಡಿಂದು ಸಮರಕೆ ನಿಂದು || ಕೇಳು ||198||

ವಾರ್ಧಕ

ಪೊಡವೀಶ ಕೇಳರ್ಜುನಂ ಪೇಳ್ದ ನುಡಿಗವಂ |
ಒಡಬಡುತಲಂದು ಕೂಡೈತಂದು ಯಮಜನಂ |
ಬಿಡದೆ ಕಂಡರ್ತಿಯಿಂದ ಮಾತಾಡಿ ಬರುವೆನೆಂದೈತಂದರುತ್ಸಹದೊಳು ||
ತಡೆಯದೈತಂದು ತರಣಿಜಪುತ್ರನಿದಿರೊಳಡ |
ಗೆಡೆದನಿಪ್ಪತ್ತಾರುಮಂದಿ ಸಹಜಾತರುಗ |
ಳೊಡನೆ ಕುರುಪತಿಯನುಂ ಚಿತ್ರಸೇನ ವಿಲಾಸದೊಳಗೆಂದನವನಿಪತಿಗೆ ||199||

ರಾಗ ಸುರುಟಿ ಆದಿತಾಳ

ಕೇಳು ಧರ್ಮರಾಯ | ಪರಮಕ | ಪಾಳು ಹರಿಪ್ರೀಯ ||
ಸೋಲವಿದೆಮ್ಮಯ ನಿಮ್ಮಾಜ್ಞೆಯ ಪರಿ |
ಪಾಲಕರೀ ಭೀಮಾರ್ಜುನ ವೀರರು || ಕೇಳು ||200||

ಖೂಳರಿವಂದಿರನು | ಬಿಟ್ಟರೆ | ಮೇಲಾಗುವರಿನ್ನು ||
ಸೀಳಿಸುತಿದ್ದನು ಸಿಟ್ಟಿನೊಳಿಂದ್ರನು |
ಬಾಳಿಸಿದಿರಲೈ ಭಾಗ್ಯವಿಹೀನರ || ಕೇಳು ||201||

ವಿಷಧರನಂತಿವರು | ವರ್ಮದ | ವಿಷವನು ಬಿಟ್ಟಿರರು ||
ಉಸಿರುವುದೇನೆಲ್ಲವ ಬಲ್ಲವರೊಳು |
ಕುಶಲವು ನಮ್ಮಲ್ಲಿರಲೈ ನಿಮ್ಮದು || ಕೇಳು ||202||