ಯಕ್ಷಗಾನದ ಹಾಡುಗಳ ಬಗ್ಗೆ ಯೋಚಿಸುವಾಗ ಛಂದಸ್ಸು ಮತ್ತು ಲಯದ ಕುರಿತಾಗಿ ವಿವೇಚಿಸಲೇಬೇಕಾಗುತ್ತದೆ. ಯಕ್ಷಗಾನದ ಹಾಡುಗಾರಿಕೆಯಲ್ಲಿ ಲಯವು ಅತ್ಯಂತ ಪ್ರಧಾನವಾದುದೆಂದು ಬೇರೆ ಹೇಳಬೇಕಾಗಿಲ್ಲ. ಹಾಡುಗಾರನನ್ನೂ, ಮೃದಂಗ ಚೆಂಡೆವಾದಕರನ್ನೂ, ನೃತ್ಯಕಲಾವಿದನನ್ನೂ ಏಕಸೂತ್ರತೆಯಿಂದ ಮೇಳ ಗೊಳಿಸುವುದು ಈ ಲಯವೇ ಆಗಿದೆ. ವಿವಿಧ ತಾಳಗಳ ಅಂತರ್ನಿಹಿತ ಆಧಾರವೇ ‘ಲಯ’ವೆಂಬುದನ್ನು ಇಲ್ಲಿ ಮರೆಯಬಾರದು. ಇದು ಸುಸೂತ್ರವಾಗಿ ಪ್ರಕಟವಾಗಬೇಕಾದರೆ, ಯಕ್ಷಗಾನದ ಪದ್ಯಗಳು ಛಂದೋಬದ್ಧವಾಗಿರಬೇಕಾಗುತ್ತದೆ. ಛಂದೋಬದ್ಧವಾದ ರಚನೆಯಲ್ಲಿ ಮಾತ್ರ ಅದರ ಅವಯವಗಳು ಅರ್ಥಾತ್ ಛಂದಃಖಂಡಗಳು ಅನ್ಯೋನ್ಯ ಕಾಲ ಸಮತ್ವದಿಂದ ಕೂಡಿರುತ್ತವೆ. ಈ ಕಾಲಸಮತ್ವವೇ ಲಯ, ಇದುವೇ ತಾಳಕ್ಕೆ ಆಧಾರ. ಛಂದೋರಚನೆಯ ಅವಯವಗಳಲ್ಲಿ ಕಾಲಸಮತ್ವವಿಲ್ಲದಿದ್ದಾಗ ಅಲ್ಲಿ ತಾಳವೇ ಇರುವುದಿಲ್ಲ. ತಾಳಕ್ಕೆ ಹೊಂದದ ರಚನೆಯಲ್ಲಿ ಲಯವೂ ಇರುವುದಿಲ್ಲ. ಇದನ್ನೇ ವಿದ್ವಾಂಸರು ‘ಕಾಲ ಸಮತ್ವವೇ ಲಯ; ಕಾಲದ ಅಳತೆಯೇ ತಾಳ’ ಎಂದು ಸೂತ್ರೀಕರಿಸಿದ್ದು. ಯಕ್ಷಗಾನದ ಛಂದೋರಚನೆಗಳು ಲಯಾನ್ವಿತವಾಗಿರುವ ಕಾರಣದಿಂದಲೇ ತಾಳಬದ್ಧತೆಗೂ ಅವು ಒಪ್ಪಿಕೊಳ್ಳುವುದು. ಯಕ್ಷಗಾನದ ಛಂದೋಗತಿ ಎಂಬುದು ವಿವಿಧ ತಾಳಾವರ್ತಗಳಿಗೆ ಹೊಂದಿಕೆಯಾಗುವ ಕಾಲಸಮತ್ವದ ಸಮಗತಿ ಎಂಬುದನ್ನು ಗಮನಿಸಬೇಕು. ಗತಿ ಎಂಬುದು ಛಂದೋಗುಣವನ್ನು ಹೇಳುವಂತಹುದೇ. ಛಂದಸ್ಸಿನ ಆಪಾತರಮಣೀಯತೆಯೆಂಬುದು ಛಂದೋಗತಿಯ ಸೌಂದರ್ಯವೇ ಆಗಿದೆ. ಯಕ್ಷಗಾನ ಛಂದಸ್ಸಿನ ವಿವಿಧ ವಿನ್ಯಾಸಗಳನ್ನು ಪರಿಚಯಿಸಿಕೊಂಡಾಗ ಯಕ್ಷಗಾನ ಛಂದೋಗತಿಯ ಮನೋಹರತೆ ವೇದ್ಯವಾಗುತ್ತದೆ.

ವಿವಿಧ ರಸಾಭಿವ್ಯಂಜನೆಯ ದೃಷ್ಟಿಯಿಂದ ಯಕ್ಷಗಾನದ ಪದ್ಯಬಂಧಗಳು ಅನೇಕ ರಾಗತಾಳಗಳ ಆಶ್ರಯ ಪಡೆದಿವೆ. ಖ್ಯಾತ ಕರ್ಣಾಟಕ ವೃತ್ತಗಳೊಂದಿಗೆ ಕರ್ಣಾಟ ವಿಷಯ ಜಾತಿ ಬಂಧಗಳನ್ನು ಯಕ್ಷಗಾನ ಕಾವ್ಯಗಳಲ್ಲಿ ನಾವು ನೋಡಬಹುದು. ಆದರೆ ಯಕ್ಷಗಾನ ಛಂದಸ್ಸು ಎಂದರೆ ಕೇವಲ ಇಷ್ಟೇ ಅಲ್ಲ. ಯಕ್ಷಗಾನ ಕವಿಗಳು ತಮ್ಮ ಸ್ವೋಪಜ್ಞತೆಯಿಂದ ಪಾದ, ಪ್ರಾಸ, ಅನುಪ್ರಾಸ, ವಡಿ, ವರಣ, ಅನುಪದ, ಶಿಖಾಪದ ಮುಂತಾದ ವೈದಗ್ಧ್ಯ ಭಂಗಿಭಣಿತಿಯಿಂದ ಅನೇಕ ಹೊಸ ಛಂದೋಬಂಧಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ವಿವಿಧ ಛಂದೋಬಂಧಗಳನ್ನು ಹೆಸರಿಸುವುದಕ್ಕಾಗಿ ಯಕ್ಷಗಾನ ಕವಿಗಳು ರಾಗ-ತಾಳಗಳ ಶೀರ್ಷಿಕೆಗಳನ್ನೇ ಬಳಸಿರುವುದು ವಿಶೇಷವಾಗಿದೆ. ಸೌರಾಷ್ಟ್ರ-ತ್ರಿವುಡೆ, ಕಾಂಭೋದಿ-ಝಂಪೆ, ಕೇದಾರಗಳ-ಅಷ್ಟ, ಮಾರವಿ-ಏಕ, ನೀಲಾಂಬರಿ-ರೂಪಕ, ಮುಂತಾದ ಸೂಚನೆಗಳಲ್ಲಿ ಛಂದೋಬಂಧದ ಪ್ರತ್ಯೇಕ ಕಲ್ಪನೆಯಿದೆ. ಈ ಸೂಚನೆಯ ಹಿಂದೆ, ನಿಶ್ಚಿತರಾಗತಾಳಗಳಲ್ಲಿ ಹಾಡುವುದಕ್ಕಿಂತಲೂ ಮುಖ್ಯವಾಗಿ ಪದ್ಯವಿನ್ಯಾಸದ ಆಕೃತಿನಿರ್ಣಯ ಕಂಡುಬರುತ್ತದೆ. ಇವುಗಳಲ್ಲಿ ಪ್ರತಿಯೊಂದು ಒಂದರಂತೆ ಇನ್ನೊಂದಿರದ ವಿನ್ಯಾಸ ವಿಶೇಷ. ಪಾರ್ತಿಸುಬ್ಬನು ಹೇಳುವ ‘ಬತ್ತೀಸಾಕೃತಿ ರಾಗತಾಳವಿಧದಿಂ’ ಎಂಬ ಸೂಚನೆಯನ್ನು ಗಮನಿಸಿದರೆ, ಅವನ ಕಾಲದಲ್ಲಿ ಯಕ್ಷಗಾನದಲ್ಲಿ ಇಂತಹ ಮೂವತ್ತೆರಡು ಛಂದೋಬಂಧಗಳು ಇದ್ದಿರಬಹುದೆಂದು ಊಹಿಸಲು ಸಾಧ್ಯವಿದೆ.

ಯಕ್ಷಗಾನ ಕಾವ್ಯಗಂಗೆ ಅಕ್ಷರಛಂದಸ್ಸು, ಮಾತ್ರಾಛಂದಸ್ಸು, ಅಂಶಛಂದಸ್ಸುಗಳೆಂಬ ಮೂರು ಮುಖ್ಯ ಕವಲುಗಳಲ್ಲಿ ಹರಿಯುತ್ತದೆ. ಕೆಲವು ಕಡೆ ಅಂಶ ಮತ್ತು ಮಾತ್ರಾ ಮಿಶ್ರಿತ ಛಂದೋಬಂಧಗಳಿಂದಲೂ ಕಂಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಛಂದಸ್ಸು ದಾಸ ಸಾಹಿತ್ಯದ ಛಂದೋಬಂಧಗಳಿಗೂ ಪ್ರೇರಣೆ ನೀಡಿದೆ ಎಂಬುದನ್ನು ಮರೆಯಬಾರದು. ಯಕ್ಷಗಾನ ಛಂದಸ್ಸಿನ ವಿವಿಧ ವಿನ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನವೋದಯಕಾಲದ ಹೊಸಗನ್ನಡ ಛಂದಸ್ಸು ಕೂಡಾ ಅದರ ಪಡಿಯಚ್ಚು ಎಂಬುದರಲ್ಲಿ ಅನುಮಾನವಿಲ್ಲ. ಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ಯಕ್ಷಗಾನ ಛಂದಸ್ಸಿನ ಸಕೃದ್ದರ್ಶನ ಅತ್ಯಂತ ಪ್ರಾಮುಖ್ಯವಾದುದೆಂಬುದು ಮಹತ್ತ್ವದ ಅಂಶ.

ಅಕ್ಷರ ಛಂದಸ್ಸು :

ಛಂದಸ್ಸಿನ ಚರಿತ್ರೆಯಲ್ಲಿ ಅಕ್ಷರ ಛಂದಸ್ಸು ತುಂಬಾ ಪ್ರಾಚೀನವಾದುದು. ವೇದಗಳಲ್ಲಿ ಪ್ರಯುಕ್ತವಾಗಿರುವ ತ್ರಿಷ್ಟುಪ್, ಅನುಷ್ಟುಪ್, ಬೃಹತೀ, ಜಗತೀ, ಗಾಯತ್ರೀ ಇತ್ಯಾದಿ ಛಂದಸ್ಸುಗಳು ಅಕ್ಷರ ಸಂಖ್ಯಾ ನಿಯಮದಿಂದ ಕೂಡಿದ ಕಾರಣ ಇವುಗಳನ್ನು ‘ಅಕ್ಷರ ಛಂದಸ್ಸು’ ಎಂದು ಕರೆಯಲಾಗುತ್ತದೆ. ಪದ್ಯಪಾದವೊಂದರಲ್ಲಿ ಇಷ್ಟು ಅಕ್ಷರಗಳಿರಬೇಕೆಂದೂ, ಆ ಅಕ್ಷರಗಳ ಗುರುಲಘು ವಿನ್ಯಾಸ ಹೀಗೆಯೇ ಇರಬೇಕೆಂದೂ ನಿರ್ಬಂಧಿಸುವ ವ್ಯವಸ್ಥೆ ಇಲ್ಲಿಯದು. ಈ ವಿನ್ಯಾಸಗಳಲ್ಲಿ ಛಂದಃಖಂಡಗಳ ನಡುವೆ ಕಾಲ ಸಮತ್ವ ಸಿದ್ಧಿಸುವುದಿಲ್ಲ. ಹಾಗಾಗಿ ತಾಳವ್ಯವಸ್ಥೆಗೆ ಇವುಗಳು ಅಳವಡದೆ ಕೇವಲ ಆಲಾಪನಾಯುಕ್ತವಾದ ಗಾನವಿಧಾನಕ್ಕೆ ಒಪ್ಪುತ್ತವೆ. ರಸಪೋಷಣೆಗೆ ಸಹಕಾರಿಯಾಗುವಂತೆ ಸಾಹಿತ್ಯವನ್ನು ಭಾವಪ್ರದವಾಗಿ ಹಾಡಲು ಇಲ್ಲಿ ಸುಲಭ. ಯಕ್ಷಗಾನ ಪ್ರಸಂಗಗಳಲ್ಲಿ ದೇವತಾಸ್ತುತಿ, ಕಥಾಮುಖ, ಸನ್ನಿವೇಶ ಸೂಚನೆ, ಮುಂತಾದ ಕಡೆಗಳಲ್ಲಿ ಮಾತ್ರ ಅಕ್ಷರವೃತ್ತಗಳ ಬಳಕೆ ಕಂಡುಬರುತ್ತದೆ. ಶಾರ್ದೂಲ ವಿಕ್ರೀಡಿತ, ಮತ್ತೇಭವಿಕ್ರೀಡಿತ, ಚಂಪಕಮಾಲೆ, ಉತ್ಪಲಮಾಲೆ, ಸ್ರಗ್ಧರೆ, ಮಹಾಸ್ರಗ್ಧರೆ, ಮಾಲಿನೀ, ಮಲ್ಲಿಕಾಮಾಲೆ, ಮಂದಾಕ್ರಾಂತಾ, ಭುಜಂಗವಿಜೃಂಭಿತ, ವಸಂತತಿಲಕ ಮುಂತಾದ ಅಕ್ಷರವೃತ್ತಗಳನ್ನು ಯಕ್ಷಗಾನದಲ್ಲಿ ಗಮನಿಸಬಹುದು.

ಶಾರ್ದೂಲ ವಿಕ್ರೀಡಿತ ವೃತ್ತ-

ಮಾರೀಚಂ. ಮೃಗವಾ. ಗಿಪಂಚ. ವಟಿಗಂ. ಬಂದಲ್ಲಿ. ಓಡಾಡ. ಲೂ |
ಸೌರಮ್ಯ. ತಿಶಯ. ಪ್ರಧಾನ. ಕರಮಂ. ಕಂಡಾಗ. ಳಾಜಾನ. ಕೀ |
ಚೋರತ್ವಂ. ಗಳಮಾ. ಯದಾಕೃ. ತಿಯಿದೆಂ. ದಾಕಾಂತೆ. ತಾಕಾಣ. ದೇ |
ನಾರೀ ವಿ. ಸ್ಮಿತೆಯಾ. ಗಿಕಾಂತ. ನೆಡೆಗಂ. ಬಂದಾಗ. ಳಿಂತೆಂದ. ಳೂ ||
(ಪಂಚವಟಿ)

ವಸಂತತಿಲಕ ವೃತ್ತ-

ಶ್ರೀರಾಮ. ಚಂದ್ರರ. ಘುನಂದ ನರಾಜ ವರ್ಯಾ |
ರಾಜೇಂದ್ರ. ರಾಜಸು. ರನಾಯ ಕರಾಘ. ವೇಶಾ |
ರಾಜಾಧಿ. ರಾಜಗು. ಣಚಂದಿ. ರರಾಮ. ಭದ್ರಾ |
ದಾಸೋಸ್ಮ್ಯ. ಹಂಚ ಭ. ವತಃಶ. ರಣಾಗ. ತೋಸ್ಮೀ. ||
(ಸೇತು ಬಂಧನ)

ಮಾಲಿನೀ ವೃತ್ತ-

ಸರಸಿ. ಜದಳ. ನೇತ್ರಂಚಾ. ರುವಕ್ತ್ರಂ. ಪವಿತ್ರಂ |
ಸುರಜ. ನಪರಿ. ಪಾಲಂಕಾ ಲಕಾಲಂ. ವಿಶಾಲಂ |
ಸುರಮು. ನಿಜನ. ವಂದ್ಯಂಸ. ತ್ಯಸಂಧಂ. ಮುಕುಂದಂ |
ಸುರಚಿ. ರತನು. ಭಾಸಂ ರಾ. ಘವೇಶಂ. ಮಹೇಶಂ ||
(ರಾವಣವಧೆ)

ಯಕ್ಷಗಾನ ಕಾವ್ಯಗಳಲ್ಲಿ ಕಂಡುಬರುವ ‘ಕೇಕಯ ವೃತ್ತ’ವೆಂಬ ವೃತ್ತ ವಿಶೇಷವನ್ನು ಇಲ್ಲಿ ವಿವೇಚಿಸಬೇಕು.

ಮುನಿವರನಿನಿತೆಂದಾ. ಮಾತ್ರದೊಳ್ ಗಂಗೆಯಲ್ಲೀ |
ಘನಜಪತಪದಿಂದಾ. ಇರುತಿರ್ದರಾ ಸಮಯದೊಳ್ |
ಜನಪಸುಮತಿರಾಜಂ. ಬಂದವರ ಕಂಡುಧೀರಂ |
ವಿನುತರು ನಮಿಪಾಗಾ. ಮುನಿಗೆತಾ ಪೇಳ್ದನಿಂತೂ ||
(ಸೀತಾ ಕಲ್ಯಾಣ)

ಇದು ಮಾಲಿನೀ ವೃತ್ತದ ಕಿಂಚಿತ್ ಪರಿವರ್ತಿತ ರೂಪ. ಮಾಲಿನೀ ವೃತ್ತದ ಎಂಟನೇ ಸ್ಥಾನವನ್ನೂ ಹಾಗೂ ಪಾದಾಂತ್ಯಸ್ಥಾನವನ್ನೂ ಬಿಟ್ಟು, ಉಳಿದೆಡೆಗಳಲ್ಲಿ ಕಂಡುಬರುವ ಗುರುವಿನ ಬದಲು ಎರಡು ಲಘುಗಳನ್ನು ಸಂಯೋಜಿಸಿದ ವಿನೂತನ ವೃತ್ತವಿದು. ಇದನ್ನು ಯಕ್ಷಗಾನ ಕವಿಗಳ ಸ್ವಯಂಶೋಧವೆಂದೇ ಹೇಳಬೇಕಾಗುತ್ತದೆ. ಪ್ರತಿಪಾದದ ಉತ್ತರಾರ್ಧದಲ್ಲಿ ‘-U-’ ಎಂದು ಇರಬೇಕಾಗಿದ್ದ ವಿನ್ಯಾಸವು ‘ಇರುತಿರ್ದ’, ‘ಬಂದವರ’, ‘ಮುನಿಗೆತಾ’- ಮುಂತಾಗಿ ಪಂಚಮಾತ್ರಾ ಮೌಲ್ಯಧಾರಣೆ ಮಾಡಿರುವುದನ್ನು ಗಮನಿಸಿದಾಗ, ಅಕ್ಷರವೃತ್ತಗಳು ಮಾತ್ರಾಗತಿಗೆ ಹೊರಳುವ ಸಂದರ್ಭದಲ್ಲಿ ಈ ವೃತ್ತ ಬಳಕೆಗೆ ಬಂದಿರಬೇಕೆಂದು ತರ್ಕಿಸಬಹುದು.

ಆದರೆ ಕೆಲವು ಅಕ್ಷರವೃತ್ತಗಳ ಗುರುಲಘು ವಿನ್ಯಾಸಗಳಲ್ಲಿ ಅಂತರ್ನಿಹಿತವಾಗಿರುವ ಕಾಲಸಮತ್ವವನ್ನು ಕಾಣಬಹುದು. ಇಂತಹ ವೃತ್ತ ಪಾದಗಳನ್ನು ಯಕ್ಷಗಾನ ಕವಿಗಳು ಬೇರೆಬೇರೆ ತಾಳಗಳಿಗೆ ಅನ್ವಯಿಸುವಂತೆ ಎರಕಹೊಯ್ದು ವಿನೂತನ ಪದ್ಯ ಬಂಧಗಳನ್ನು ನಿರ್ಮಿಸಿಕೊಂಡಿದ್ದಾರೆ.

ಜನಕಸುತೇ
ಜನವಿನುತೇ
ಮನಸಿಜ ಮೋ
ಹನೆ ರುಚಿರೇ || (ಪಂಚವಟಿ)

-ಈ “ಸರಸಿರುಹವೃತ್ತ”ದ ನಾಲ್ಕು ಪಾದಗಳಲ್ಲಿಯೂ ಒಂದೇ ರೀತಿಯ ಗುರು ಲಘುವಿನ್ಯಾಸವನ್ನು ಕಾಣಬಹುದು. ಈ ಪದ್ಯ-ಬಂಧದ ಪಾದಾದಿಯ ಎರಡು ಲಘುಗಳ ಬದಲಿಗೆ ಒಂದು ಗುರುವನ್ನಿರಿಸಿದ ಪದ್ಯವಿನ್ಯಾಸಗಳು ಕಂಡುಬರುತ್ತವೆ. ಆಗ ಅದನ್ನು ‘ಸೌಂದರ ವೃತ್ತ’ ಎನ್ನಲಾಗುತ್ತದೆ.

ರಾಘವ ಕೇ
ಳೀ ಪಥದೀ
ಸಾಗಿದರೇ
ನೀ ಮುದದೀ || (ಪಂಚವಟಿ)

ಈ ಎರಡೂ ಪದ್ಯ ಬಂಧಗಳ ಮಾತ್ರಾಮೌಲ್ಯದಲ್ಲಿ ವ್ಯತ್ಯಾಸವಿಲ್ಲದಿರುವುದರಿಂದ ಒಂದೇ ತಾಳಕ್ಕೆ ಅವುಗಳು ಅಳವಡುತ್ತವೆ.

ವಾರಿಜಾಂಬಕಾ
ಧಾರಿಣೀ-ಪತೇ
ಮಾರಸನ್ನಿಭಾ
ಮಂಜುಳಾಕರಾ || (ಕುಶಲವರ ಕಾಳಗ)

ಇದು ‘ನಂದಕ’ವೆಂಬ ವೃತ್ತ. ಇದರ ಮಾತ್ರಾಮೌಲ್ಯವನ್ನು “೩ + ೩ + ಗುರು” ಎಂದು ವಿಭಜಿಸಿಕೊಂಡು ಈ ಕೆಳಗಿನ ಪದ್ಯವನ್ನು ಹೆಣೆಯಲಾಗಿದೆ-

ಒಡಲು. ಸುಡುತಿ. ದೇ
ತಾಪ. ಹೆಚ್ಚಿ. ದೇ
ಕಡಲ. ಶಯನ. ನೇ
ಕಾಯೊ. ಕರುಣ. ದೀ ||
(ಕರ್ಣಾರ್ಜುನ ಕಾಳಗ)

ಲಲಿತಪದ, ಕುಟ್ಮಲಮಯೂರ, ವಿಚಿತ್ರಲಲಿತ, ವನಮಯೂರ, ಲಯಗ್ರಾಹಿ ಮೊದಲಾದ ವೃತ್ತಗಳು ಅಕ್ಷರವೃತ್ತಗಳಾದರೂ, ಅವುಗಳನ್ನು ಮಾತ್ರಾತ್ಮಕವಾಗಿ ವಿಂಗಡಿಸಿದರೆ ಒಂದೇ ಛಂದೋಗತಿಗೆ ಅವುಗಳು ಹೊಂದಿಕೊಳ್ಳುತ್ತವೆ.

ತಾಳಕ್ಕೆ ಅಳವಡದ, ಕೇವಲ ಆಲಾಪನೆಗೆ ಹೊಂದಿಕೊಳ್ಳುವ ಅಕ್ಷರವೃತ್ತಗಳ ಛಂದೋಗತಿಯನ್ನು ‘ವಿಷಯಗತಿ’ ಎಂದು ಕರೆದರೆ, ತಾಳದ ಪ್ರಸ್ತಾರಕ್ಕೆ ಹೊಂದುವ ಅಕ್ಷರ ವೃತ್ತಗಳನ್ನು ‘ಸಮಗತಿ’ ಎಂದು ಹೆಸರಿಸಬಹುದು. ನಾಗವರ್ಮನ ಛಂದೋಂಬುಧಿಯ ವಿವಿಧ ವೃತ್ತಗಳಲ್ಲಿ ಹುದುಗಿದ ಈ ಗತಿಸ್ಫುರಣೆಯನ್ನು ಯಕ್ಷಗಾನ ಕವಿಗಳು ಸಂಶೋಧಿಸಿ, ವಿವಿಧ ಪದ್ಯಬಂಧಗಳನ್ನಾಗಿ ಮಾರ್ಪಡಿಸಿರಬೇಕು. ತಮ್ಮ ಈ ಸಂಶೋಧಿತ ಛಂದೋಬಂಧಗಳಿಗೆ ವಿವಿಧ ರಾಗ ತಾಳಗಳನ್ನೇ ನಾಮಕರಣ ಮಾಡಿ, ಯಕ್ಷಗಾನ ಛಂದಸ್ಸಿನ ಅನನ್ಯತೆಗೆ ಕಾರಣರಾದರು. ಯಕ್ಷಗಾನದ “ಸುರುಟಿ-ಏಕ” ವೆಂಬ ಛಂದೋಬಂಧ, ‘ಆಮಳ’ವೆಂಬ ಅಕ್ಷರವೃತ್ತದ ಪರಿವರ್ತಿತರೂಪ. ಯಕ್ಷಗಾನದ ‘ನವರೋಜು-ಏಕ’ ಪದ್ಯದ ಮೊದಲ ಎರಡು ಪಾದಗಳು ‘ಚಿತ್ತವೃತ್ತ’ದ “ಧಾತ್ರೀ ಚಂದ್ರೇಂದುಧರಂ” ಎಂಬ ಪಾದದ ಮಾತ್ರಾನ್ವಿತ ಸ್ವರೂಪವೇ ಆಗಿದೆ. ಹೀಗೆ ತಮ್ಮ ಕಲ್ಪನಾ ವಿಲಾಸದಿಂದ ವಿವಿಧ ಛಂದೋಬಂಧಗಳನ್ನು ಸೃಷ್ಟಿಸಿದ ಯಕ್ಷಗಾನ ಕವಿಗಳ ಪ್ರತಿಭೆ ಅಪ್ರತಿಮವಾದುದು. ಏಕತಾನತೆಯ ಕನ್ನಡ ಕಾವ್ಯಕ್ಕೆ ವಿವಿಧ ಛಂದೋಗತಿಯ ಹಾಸುಬೀಸುಗಳನ್ನು ನೀಡಿ ಬಹುಮುಖಿಯಾದ ಪರಿಣಾಮ ರಮಣೀಯತೆಯನ್ನು ಉಂಟುಮಾಡುವಲ್ಲಿ ಅವರ ಕೊಡುಗೆ ಅಪಾರವಾದುದು.

ಮಾತ್ರಾ ಛಂದಸ್ಸು :

ಮಾತ್ರೆ ಎಂದರೆ “ಪರಿಮಾಣ” ಎಂದರ್ಥ. ಈ ಮಾತ್ರಾಪರಿಮಾಣದಿಂದ ಪದ್ಯದಲ್ಲಿರುವ ಅಕ್ಷರಗಳನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಅಳೆಯಬಹುದು. ಒಂದು ಮಾತ್ರೆ ಎಂದರೆ ಒಂದು ಲಘುವನ್ನು ಉಚ್ಚರಿಸುವ ಕಾಲಾವಕಾಶ ಎನ್ನಬಹುದು. ಕನ್ನಡದ ಮಾತ್ರಾಗತಿಯನ್ನು ಉತ್ಸಾಹ, ಮಂದಾನಿಲ ಮತ್ತು ಲಲಿತವೆಂದು ಮೂರುವಿಧವಾಗಿ ವಿಂಗಡಿಸಬಹುದು. ಇವುಗಳಲ್ಲಿ ಉತ್ಸಾಹವು ತ್ರಿಮಾತ್ರಾಗತಿಯನ್ನೂ, ಮಂದಾನಿಲವು ಚತುರ್ಮಾತ್ರಾಗತಿಯನ್ನು, ಲಲಿತವು ಪಂಚಮಾತ್ರಾಗತಿಯನ್ನೂ ಸೂಚಿಸುತ್ತದೆ. ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಗತಿಯನ್ನು ತ್ರಿಪುಟವೆಂದೂ ಎರಡು ತ್ರಿಕಗಳ ಸಂಯೋಗದಿಂದ ೨ + ೨ + ೨ ಎಂದಾಗುವ ಗತಿಯನ್ನು ಅಧಿಕೋತ್ಸಾಹವೆಂದೂ, ಎರಡು ಚತುಷ್ಕಗಳು ಏಕೀಭವಿಸಿ ೩+೫ ಅಥವಾ ೫+೩ ಎಂದಾಗುವುದನ್ನು ಮಂದಾನಿಲ ಪ್ರಭೇದವೆಂದೂ ಕರೆಯಲಾಗುತ್ತದೆ.

ಉತ್ಸಾಹಲಯ
ಶಂಕರಾಭರಣ-ಮಟ್ಟೆ
ಎಲವೊ. ಪಾರ್ಥ. ಕೇಳು. ನೀನು.                                             ೩. ೩. ೩. ೩.
ಕಳವಿ. ನಲ್ಲಿ. ಸಿಂಧು. ನೃಪನ.                                               ೩. ೩. ೩. ೩.
ಗೆಲಿದ. ಪರಿಯಿ. ದಲ. ನೋಡು.                                             ೩. ೩. ೩. ೩.
ನಿಲ್ಲು. ಸಮರ. ಕೆ ||                                                           ೩. ೩. ಗು.
(ಕರ್ಣಾರ್ಜುನ ಕಾಳಗ)

ಪಂಚಾಗತಿ-ಮಟ್ಟೆ
ಪರಶು. ರಾಮ. ದತ್ತ. ಶರವ. ತೆಗೆದು. ಹೊಡೆಯ. ಲು.                ೩.೩.೩.೩.೩.೩.ಗು
ಉರಿಯ. ನುಗುಳು. ತೈದೆ. ಹರಿಯ. ಹಣೆಗೆ. ನಾಂಟ. ಲೂ             ೩.೩.೩.೩.೩.೩.ಗು
ಪೊರಳಿ. ದುವುತು. ರಂಗ. ಹನುಮ. ನಳುಕೆ. ಸ್ಯಂದ. ನ                 ೩.೩.೩.೩.೩.೩.ಗು
ತಿರುಗ. ಲಸುರ. ಹರನ. ನೊಸಲು. ಬಿರಿದು ದಾಕ್ಷ. ಣ ||                ೩.೩.೩.೩.೩.೩.ಗು
(ಭೀಷ್ಮಪರ್ವ)

ತುಜಾವಂತು-ಮಟ್ಟೆ
ಹರನೆ. ನೀನು. ನೇತ್ರ. ವೆರಡಿ. ದೆ | ಮತ್ತೆ ಶ್ರೀ                             ೩.೩.೩.೩.ಗು|೩.೩
ಹರಿಯು. ನೋಡೆ. ಯುಗ್ಮ. ಭುಜವಿ. ದೆ ||                               ೩.೩.೩.೩.ಗು|೩.೩
ವರವಿ. ರಿಂಚಿ. ಎನಲು. ನಿನಗೆ |                                               ೩.೩.೩.೩.
ಶಿರವ. ದೊಂದೆ. ತೋರ್ಪು. ದೀಗ |                                          ೩.೩.೩.೩.
ಪರಮ. ಪೌರು. ಷಂಗ.ಳನ್ನು                                                ೩.೩.೩.೩.
ಮೆರೆಸು. ತಿರುವೆ. ಬರಿದೆ. ಗರ್ವ. ದಿ | ಭಲರೆ. ಭಲರೆ.                    ೩.೩.೩.೩.ಗು|೩.೩
ಹರಿಹ. ರಾದ್ಯ. ರಿಂದ. ಲಧಿಕ. ದಿ ||                                         ೩.೩.೩.೩.ಗು|೩.೩
(ರುಕ್ಮಾಂಗದ ಚರಿತ್ರೆ)

ಮಂದಾನಿಲ ಲಯ
ಸುರುಟಿ-ಏಕ

ನಿನ್ನಯ. ಬಲುಹೇ. ನು| ಮಾರುತಿ                                         ೪.೪. ಗು. | ೪.
ಯನ್ನು ನಿ. ರೀಕ್ಷಿಪೆ. ನು ||                                                    ೪.೪. ಗು. |

—-
ಗು = ಗುರು

ಸಣ್ಣವ. ಅರ್ಜುನ. ಚಿಣ್ಣರು. ಯಮಳರು. |                             ೪.೪.೪.೪
ಇನ್ನೀ. ಭೀಮನ. ಎನ್ನಿದಿ. ರಿಗೆಬಿಡು ||                                     ೪.೪.೪.೪
(ಗದಾಪರ್ವ)

ಭೈರವಿ-ಏಕ
ಹಲಧರ. ನೆಂದುದ. ಕೇಳಿ | ಕುರು                                            ೪.೪. ೩ | ೨
ಕುಲಪತಿ. ಸಂಶಯ. ತಾಳಿ ||                                                  ೪.೪.೩. ||
ಬಲರಾ. ಮನೊಳರು. ಹಿದನು | ಮನ                                      ೪.೪.೩ | ೨
ಒಲಿಸುತ. ಕೌರವ. ತಾನು ||                                                  ೪.೪.೩. ||
(ಕೃಷ್ಣ ಸಂಧಾನ)

ನವರೋಜು-ಏಕ
ಎಂಥಾ. ಸುಂದರ. ಇವನೂ | ನಾ                                             ೪.೪.೪. | ೨
ನೆಂತಿವ ನಾಪೊಂ. ದುವೆನು ||                                                 ೪.೪.೪. |
ಕಂತುವಿ. ನಿಂಶತ. ಮಡಿಸೊಬ. ಗುಳ್ಳವ                                    ೪.೪.೪.೪.
ಎಂತಿವ. ನನ್ನಜ. ಸೃಜಿಸಿದ. ಭಲರೇ ||                                     ೪.೪.೪.೪.
(ಶನೀಶ್ವರ ಮಹಾತ್ಮೆ)

ಮಾರವಿ-ಏಕ
ಎಲ್ಲಿ. ರ್ಪುದುಮೊದ. ಲೀಸು. ಜ್ಞಾನವು                                    ೪.೪.೪.೪.
ವಲ್ಲಭ. ನೀಪೇ. ಳು |                                                         ೪.೪.ಗು.
ಸಲ್ಲಿಸು. ವೆನುವಾಂ. ಛಿತಗಳ. ನೆಂದೆನ                                     ೪.೪.೪.೪.
ಗಲ್ಲಿಯೆ. ವಂಚಿಸಿ. ದೆ ||                                                      ೪.೪. ಗು.
(ರುಕ್ಮಾಂಗದ ಚರಿತ್ರೆ)

ಇದು ‘ಅಕ್ಕರಿಕೆ’ ಮತ್ತು ‘ವಿದಳಿತಸರಸಿಜ ವೃತ್ತ’ಕ್ಕೆ ಸಮಾನವಾಗಿದೆ.

ಆರ್ಯಾಸವಾಯಿ
ಎಲೆಮಾ. ನವನೀ. ಸಲೆಕ್ಕೆ. ಚಳಕದಿ                                          ೪.೪.೪.೪.
ಬಲಿದಿಹ. ಸೇತುವ. ದೇನಾ. ಯ್ತು||                                        ೪.೪.೪.ಗು.
ಬಲಿಮುಖ. ರೈನಾವ್. ಬಲುಭಟ. ರೈನೀವ್                             ೪.೪.೪.೪.
ಸಲುವುದೆ. ನಿಮಗೀ. ಪೌರುಷ. ವು ||                                       ೪.೪.೪.ಗು.
(ಶರಸೇತು ಬಂಧನ)

ಇದು ಶರಷಟ್ಪದಿಯ ಲಕ್ಷಣವನ್ನೇ ಹೋಲುವ ರಚನೆ.

ಕಂದಪದ್ಯ
ಧರಣಿಯ. ಸಂತೈ. ಸುತ್ತಂ |
ಸುರರೆ. ಲ್ಲರಕೂ. ಡಿಕೊಂಡು. ಬಂದ. ಲ್ಲಿಂದಂ ||
ಸರಸಿಜ. ಸಂಭವ. ನಾಪಾಲ್ |
ಶರಧಿಯ. ತಡಿಯ. ಲ್ಲಿನಿಂದು. ಹರಿಶರ. ಣೆಂದಂ ||
(ಕೃಷ್ಣ ಚರಿತೆ)

ಬಿತ್ತರಿ. ಸುವುದೇ. ನುಪಟಳ |
ವಿತ್ತಸು. ರರದೂ. ರುತಲಾ. ತ್ರಿದಶರು. ಭಯದಿಂ ||
ಮೊತ್ತದೊ. ಳುಂ ತ. ಮ್ಮಾಳ್ದನ |
ಹತ್ತಿರ. ಬಂದೆರ. ಗುತಲೆಂ. ದರ್‌ನಿಜ. ಪರಿಯಂ ||
(ಕುಮಾರವಿಜಯ)

ಯಕ್ಷಗಾನದ ಕಂದಪದ್ಯಗಳಲ್ಲಿ ಹೆಚ್ಚಿನವು ನಿಯಮಬದ್ಧವಾದ ರಚನೆಗಳೇ ಆದರೂ ಕೆಲವು ಕಂದಪದ್ಯಗಳಲ್ಲಿ ‘ಜಗಣನಿಯಮೋಲ್ಲಂಘನೆ’ ಕಂಡುಬರುತ್ತದೆ. ಮೇಲಿನ ಎರಡನೆಯ ಉದಾಹರಣೆಯಲ್ಲಿ ಮುದ್ದಣನಂತಹ ಪಂಡಿತ ಕವಿಯೇ ಉದ್ದೇಶಪೂರ್ವಕ ಕಂದಪದ್ಯದ ಜಗಣ ನಿಯಮವನ್ನು ಉಲ್ಲಂಘಿಸಿದುದು ಕಂಡುಬರುತ್ತದೆ. ಕಂದಪದ್ಯದ ಚತುರ್ಮಾತ್ರಾಗತಿಯು ಏಕತಾಳದ ಚತುರಶ್ರ ಗತಿಗೆ ಹೊಂದುವುದರಿಂದ, ಯಕ್ಷಗಾನ ಕವಿಗಳು ಈ ಪರಿವರ್ತನೆಯನ್ನು ಮಾಡಿಕೊಂಡರೆಂದು ತಿಳಿಯಬೇಕಾಗುತ್ತದೆ. ಕಂದಪದ್ಯವನ್ನು ಎಷ್ಟೋ ಸಂದರ್ಭದಲ್ಲಿ ಯಕ್ಷಗಾನದ ಭಾಗವತರು ಸತಾಲಗಾಯನಕ್ಕೆ ಹೊಂದಿಸುತ್ತಾರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಲಲಿತ ಲಯ
ಕೇದಾರಗೌಳ-ಝಂಪೆ

ನಳಿನಾಕ್ಷಿ. ಕೇಳೆಈ. ಗ | ನರನೊಡನೆ                                          ೫.೫. ಗು | ೫
ಕಲಹಕೈ. ದುವೆನುಬೇ. ಗ ||                                                  ೫.೫. ಗು ||
ಕಳವಳಿಸ. ಬೇಡಮನ. ದಿ | ಕುಂತಿಸುತ                                      ೫.೫. ಗು | ೫
ಗಳುಕುವವ. ನಲ್ಲರಣ. ದಿ ||                                                ೫.೫. ಗು ||
(ಸುಧನ್ವಕಾಳಗ)

ಭೈರವಿ-ಝಂಪೆ
ಎಲವೊ ಸಂ. ಜಯಕೇಳು |                                                    ೫.೫.
ಏನಪೇ. ಳಲಿ ನಿನಗೆ |                                                           ೫.೫.

—-
ಪ=ಪದ್ಮಗಣ.

ತಲೆಯಕಡಿ. ವೆನು ಪಾಂಡು |                                                 ೫.೫.
ತನಯರನು. ನಾಳೆ ||                                                           ೫.ಪ.
(ಗದಾಪರ್ವ)

ಕಾಂಭೋದಿ-ಝಂಪೆ
ಈಸಕಲ. ಸಭೆಯೆದ್ದಿ. ದಿರ್ಗೊಳುತ. ಲೆರಗಿದು ಸ |                      ೫.೫.೫.೫.
ದಾಶಿವನು. ಏಳದಿರು. ತಿಹನು ||                                             ೫.೫. ಪ. |
ಈಶತಾ. ನೆಂದೆಂಬ. ಹಂಕಾರ. ದಿಂದಿವನಿ |                                 ೫.೫.೫.೫.
ಗೀಸು ಗ. ರ್ವವುದೊರಕಿ. ತಲ್ಲ ||                                           ೫.೫. ಪ. ||
(ಗಿರಿಜಾ ಕಲ್ಯಾಣ)

ತುಜಾವಂತು-ಝಂಪೆ
ಅರರೆ ಏ. ನಾಶ್ಚರ್ಯ. ವಿಪಿನಮ. ಧ್ಯದೊಳೀಗ |                        ೫.೫.೫.೫.
ತರಳರಳು. ತಿಹಧ್ವನಿಯು. ಕೇಳಿಸುತ. ಲಿಹುದು ||                      ೫.೫.೫.ಪ.
ಬರಿದೆ ಮನ. ಸಿನಭ್ರಮೆಯೊ. ತರುಣಿಸುತ. ರೊಡಗೂಡಿ |              ೫.೫.೫.೫.
ತೆರಳುತಿಹ. ಮಾರ್ಗಂಗ. ಳೀಯೆಡೆಯೊ. ಳಿಹುದೊ ||                    ೫.೫.೫. ಪ ||
(ಚಂದ್ರಹಾಸ ಚರಿತ್ರೆ)

ಕುಸುಮ ಷಟ್ಪದಿ
ನಗಧರನಿ. ಗಫಹರಗೆ                                                           ೫.೫.
ಖಗರಾಜ. ರೂಢನಿಗೆ                                                           ೫.೫.
ಭೃಗುಜಗ. ರ್ವಾಪಹಾ. ರಗೆಗೋಪ.ಗೆ |                                   ೫.೫.೫. ಗು.
ಮಗುವನು. ದ್ಧರಿಸಿ ಮೂ                                                    ೫.೫.
ಜಗವಸಲ. ಹಿದ ಉಡುಪಿ                                                     ೫.೫.
ಯಗಣಿತಾ. ನಂದಶ್ರೀ. ಕೃಷ್ಣ ದೊರೆ. ಗೆ ||                                ೫.೫.೫. ಗು. ||
(ರತ್ನಾವತೀ ಕಲ್ಯಾಣ)

ವಾರ್ಧಕ ಷಟ್ಪದಿ
ಕಾಮಿನಿಯ. ಕಠಿಣತರ. ವಾಕ್ಯಮಂ. ಕೇಳ್ದುಶ್ರೀ |                        ೫.೫.೫.೫.
ರಾಮರಾ. ಮಾ ಎಂದು. ಕರ್ಣವೆರ. ಡಂ ಮುಚ್ಚಿ |                       ೫.೫.೫.೫.
ಭೂಮಿಯೊಳ. ಗೇಳಾಜ್ಞೆ. ಯಂಬರೆದಿ. ದಂಮೀರಿ.                        ೫.೫.೫.೫.
ಮುಂದಡಿಯ. ನಿಡದಿರೆಂ. ದೂ ||                                ೫.೫. ಗು ||
ಸೋಮಾರ್ಕ. ಭೂಮಿದೇ. ವಿಯಸಾಕ್ಷಿ. ಯಾಗಿಟ್ಟು |                   ೫.೫.೫.೫.
ತಾಮನದಿ. ನೊಂದುಕೊಂ. ಡಾಕ್ಷಣದೊ. ಳೈದಿದಂ |                    ೫.೫.೫.೫.

—-
ಪ =ಪದ್ಮಗಣ.

ರಾಮಚಂ. ದ್ರನಪಾದ. ದೆಡೆಗಿತ್ತ. ಲಾದವೃ.                              ೫.೫.೫.೫.
ತ್ತಾಂತಂಗ. ಳಂ ಲಾಲಿ. ಸೀ ||                                     ೫.೫. ಗು ||