ಯಕ್ಷಗಾನದ ವಿಶಿಷ್ಟ ಅಂಶಬಂಧಗಳು

ಕಾಪಿ-ಅಷ್ಟ

ಇವಳ್ಯಾವ. ಲೋಕದ.ಸತಿಯೋ | ಮತ್ತೀ                                  ವಿ.ವಿ.ಬ್ರ. | ಬ್ರ
ಯುವತಿಯ. ಪಡೆದವ.ಳೇನ್ ಪುಣ್ಯ.ವತಿಯೋ ||                       ವಿ.ವಿ.ವಿ.ಬ್ರ ||
|| ಪ ||

ರತಿಯಸೌಂ.ದರ್ಯವಂ.ತಿರಲಿ | ಸುರ                                       ವಿ.ವಿ.ಬ್ರ.|ಬ್ರ
ಸತಿಯರ. ಸೊಬಗುತಾ.ನಾಚೆಯೊ.ಳಿರಲಿ ||                                ವಿ.ವಿ.ಬ್ರ. ||
ಪೃಥಿವಿಯೊ.ಳಿನಿತುರೂ.ಪಿಲ್ಲ | ದ್ರುಪದ                                 ವಿ.ವಿ.ವಿ. | ಬ್ರ.
ಸುತೆಯಕಂ.ಡರಿವೆಈ. ಪರಿಯಂದವಿಲ್ಲ ||                                ವಿ.ವಿ.ವಿ.ಬ್ರ ||
(ವಿರಾಟಪರ್ವ)

ಸಾರಂಗ-ಅಷ್ಟ

ಕರೆತರ. ಬೇಕವಳ | ಕಾ.ಮನ ಮದ                                          ವಿ.ರು. | ಮೂ.ವಿ
ಕರಿಯಂತೆ. ತೋರ್ಪವಳ ||                                                    ವಿ.ರು. ||
ಅರಸಂಚೆ.ಗಮನೆಯ                                                           ವಿ.ವಿ.
ಹರಿಯಕ್ಷ. ಮಧ್ಯೆಯ                                                          ವಿ.ವಿ.
ಮರಿದುಂಬಿ. ಗುರುಳೆಯ                                                      ವಿ.ವಿ.
ವರಪದ್ಮ. ಗಂಧಿಯ ||                                                        ವಿ.ವಿ. ||
(ದೇವೀ ಮಹಾತ್ಮೆ)

ಭೈರವಿ-ಅಷ್ಟ

ಸಾಕುಸಾ. ಕತ್ತಸಾ. ರೋ | ನೀ-ನೆನಗೆ ವಿ                                    ವಿ.ವಿ.ಗು | ಮೂ.ವಿ
ವೇಕವ. ಪೇಳದಿ.ರೋ ||                                                       ವಿ.ವಿ.ಗು.
ಆಕೆವಾ. ಳರ ಪಕ್ಷ. ಪಾತದಿ. ಸುಮ್ಮನಿ                                      ವಿ.ವಿ.ವಿ.ವಿ
ದೇಕಿಂತು ಕುಣಿದಪೆ. ಯೊ ||                                                  ವಿ.ವಿ.ಗು ||
(ಸುಭದ್ರಾ ಕಲ್ಯಾಣ)

ವೃಂದಾವನ ಸಾರಂಗ-ಅಷ್ಟ

ಕಾರೆಂಬ. ಕತ್ತಲೆ. ಕವಿಯಲು. ದಶದಿಕ್ಕು                                   ವಿ.ವಿ.ವಿ.ವಿ.
ಭೋರೆಂದು. ಮಳೆಹೊಯ್ಯು. ತಿರಲಾಗ || ಶ್ವೇತ                       ವಿ.ವಿ.ವಿ. || ಬ್ರ
ದ್ವಾರದೊ. ಳಾಲಿವಿಂ. ಡಿಗೆ ಬೇಗ || ಕಳಚಿ                                ವಿ.ವಿ.ವಿ. || ಬ್ರ
ದಾರಿಯಾ.ಯಿತುಶೌರಿ. ಬರುವಾಗ || ಕಾಣು                             ವಿ.ವಿ.ವಿ. || ಬ್ರ
ತಿರುವಾಗ || ಕಾವ                                                              ವಿ. || ಬ್ರ
ಲವರಾಗ || ನಿದ್ರೆ                                                                ವಿ. || ಬ್ರ
ಭಾರಿಸ.ಲೆಚ್ಚರಿ.ಲ್ಲದಯೋಗ || ಸೂತ್ರ                                   ವಿ.ವಿ.ವಿ. || ಬ್ರ
ಧಾರಿಯ. ಮಹಿಮೆಯಿಂ. ದಲಿ ಬೇಗ ||                                     ವಿ.ವಿ.ವಿ. ||
(ಕೃಷ್ಣ ಚರಿತೆ)

ಬೇಗಡೆ-ಅಷ್ಟ

ಬಂದನು. ಮುರಹರ. ನಾಗ | ಶಕ್ರ                                           ವಿ. ವಿ. ಬ್ರ. | ಬ್ರ
ನಂದನ. ನೆಡೆಗತಿ. ಬೇಗ ||                                                     ವಿ.ವಿ.ಬ್ರ. ||
ವೃಂದಾರ. ಕರುಭಕ್ತಿ.                                                          ವಿ.ವಿ.
ಯಿಂದಲಾ. ಕಾಶದಿ                                                             ವಿ.ವಿ.
ಮಂದಾರ. ಸುಮವೃಷ್ಟಿ                                                      ವಿ.ವಿ.
ಯಂಧರೆ. ಗಿಳಿಸಲು ||                                                          ವಿ.ವಿ. ||
(ಸುಭದ್ರಾ ಕಲ್ಯಾಣ)

ಕೇದಾರಗೌಳ-ಅಷ್ಟ

ಹರುಷದಿ. ಕೇಳಣ್ಣ. ಸುರಪನ. ವನವನ್ನು                                ವಿ.ವಿ.ವಿ.ವಿ
ಉರುಹುವ. ವೇಳೆಯಲಿ.                                                      ವಿ.ರು
ನರಗೆಸಾ. ರಥಿಯಾದ ನಂತೆಬೃ.ಹನ್ನಳೆ                                     ವಿ.ವಿ.ವಿ.ವಿ.
ಪರಮಸಾ. ಹಸಿಗನಂತೆ ||                                                     ವಿ.ರು. ||
(ವಿರಾಟ ಪರ್ವ)

ಆನಂದ ಭೈರವಿ-ಅಷ್ಟ

ಏನಾಯಿ.ತೆಲೆನೀರೆ ಏಕೆದುಃ.ಖಿಸುವೆ ನಿ-                                     ವಿ.ವಿ.ವಿ.ವಿ.
ನ್ನಾನನ. ದಾಸಿರಿ. ಕಂದಿದೇ. ತಕೆ ಇಂಥಾ                                    ವಿ.ವಿ.ವಿ.ವಿ.
ಹಾನಿಯಾ. ರಿಂದಾಯಿತು || ಮಂ-ಡೆಯಲಿಧೂ                           ವಿ.ರು. | ಮೂ.ವಿ
ಳೇನಿದೆ.ಲ್ಲಿಂದ ಬಂದು || ಪೇ-ಳೆನ್ನೊಳ್ ನಿ                               ವಿ.ರು. | ಮೂ.ವಿ
ದಾನವ. ನೆನಲೆಂದ.ಳತಿ ದುಃಖ.ದಿಂದಲಿ ||                                 ವಿ.ವಿ.ವಿ.ವಿ ||
(ವಿರಾಟ ಪರ್ವ)

ತ್ರಿಮೂರ್ತಿ ಗಣಗಳ ವಿವಿಧ ಸಂಯೋಜನೆಯಿಂದ, ಪಾದ-ವರಣ-ಪ್ರಾಸ-ಯತಿ-ಯಮಕ ಮುಂತಾದ ಸೊಗಸಿನಿಂದ ಯಕ್ಷಗಾನದ ಅಂಶಬಂಧಗಳು ಶೋಭಿಸುತ್ತವೆ. ಪ್ರತಿಯೊಬ್ಬ ಕವಿಯೂ ತನ್ನದೇ ಆದ ಹೊಸ ಸಾಧ್ಯತೆಗಳನ್ನು ಆವಿಷ್ಕರಿಸಿ, ವಿನೂತನ ಛಂಧೋಬಂಧಗಳಿಗೆ ಕಾರಣನಾಗಿದ್ದಾನೆ. ಈ ವೈಶಿಷ್ಟ್ಯದಿಂದಾಗಿ ಸತಾಲ ಗಾಯನದಲ್ಲಿ ಅಂಶಬಂಧಗಳ ಅಪಾರ ಸಾಧ್ಯತೆಗಳು ಅನಾವರಣಗೊಳ್ಳುತ್ತವೆ.

ಅಂಶ-ಮಾತ್ರಾ ಗಣಮಿಶ್ರಣ

ಯಕ್ಷಗಾನ ಛಂದಸ್ಸಿನ ವಿಶಿಷ್ಟ ಗುಣಲಕ್ಷಣಗಳಲ್ಲಿ ಅಂಶಗಣ ಮತ್ತು ಮಾತ್ರಾ ಗಣಗಳ ಛಂದೋಮಿಶ್ರಣವೂ ಒಂದು. ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಕಂಡು ಬಾರದೇ ಇರುವ ಈ ಪ್ರಯೋಗ ವೈಶಿಷ್ಟ್ಯ ಯಕ್ಷಗಾನ ಕಾವ್ಯಗಳಲ್ಲಿ ನಮ್ಮನ್ನು ತನ್ನ ಗತಿರೋಚಕತೆಯಿಂದ ಬೆರಗುಗೊಳಿಸುತ್ತದೆ. ಪದ್ಯದ ಪೂರ್ವಾರ್ಧದಲ್ಲಿ ಅಂಶಗಣಗಳಿಂದ ಕೂಡಿದ್ದು, ಉತ್ತರಾರ್ಧದಲ್ಲಿ ಮಾತ್ರಾಗಣ ವಿನ್ಯಾಸವನ್ನು ಪಡೆಯುವ ಈ ವಿಶಿಷ್ಟ ಛಂದೋಗತಿ, ಕನ್ನಡ ಛಂದಸ್ಸಿನ ಚರಿತ್ರೆಯಲ್ಲೇ ಅನುಪಮವಾದ ಸೃಷ್ಟಿ.

ಮುಖಾರಿ-ಏಕ

ಅವಧರಿ.ಸಯ್ಯ ಮೌನಿ. ನಾಥ| ನಿ. ನ್ನೆಡೆಗೆ ವರುಣ                      ವಿ.ಬ್ರಬ್ರಬ್ರ| ಮೂ.ಬ್ರ.ಬ್ರ
ಭುವನದಿಂ. ಬಂದೆ.ನಯ್ಯ. ಖ್ಯಾತ ||                                       ವಿ.ಬ್ರಬ್ರಬ್ರ ||
ವಿವರವ. ನೊರೆವೆನು. ಎಮ್ಮೊಡೆ. ಯನುವೈ                              ೪.೪.೪.೪
ಭವದೆ.ಮಹಾಸ. ತ್ರವಕೈ. ಕೊಳುವನು ||                                  ೪.೪.೪.೪. ||
(ಕಾಯಕಲ್ಪ)

ಕಲ್ಯಾಣಿ-ಆದಿ

ಬೆದರಲೇ. ತಕೆ ನಾರಿ ||                                                         ವಿ.ವಿ. |
ಮಾ.ರನಕಠಾರಿ                                                                  ಮೂ-ರು
ಬೆದರಲೇ. ತಕೆ ನಾರಿ ||                                                         ವಿ. ವಿ. ||
ಬೆದರ. ಲೇಕೆನಾ. ಬದಿಯೊ. ಳಿರಲು ನೀ                                     ೩.೫.೩.೫
ನಿದಬಿಡು. ಮನದಲಿ. ಮುದವನು. ತಳೆದೂ ||                            ೪.೪.೪.೪ ||
(ರತ್ನಾವತೀ ಕಲ್ಯಾಣ)

ಪಂತುವರಾಳಿ-ಏಕ

ಕ್ಷೀರನಿ.ಧಿಯೆ ವಾಸವು ||                                                       ವಿ. ರು ||
ಮೆ-ರೆವಜಗ                                                                      ಮೂ-ವಿ
ಮೂರುನಿ. ನ್ನಾಧೀನವು ||                                                    ವಿ. ರು ||
ಶ್ರೀರಮೆ. ಯೇಸತಿ. ವಾರಿಜ. ಮಾರ್ಗಣ                                    ೪.೪.೪.೪
ಶಾರದೆ. ವರರು ಕು.ಮಾರಕ.ರೆಲೆ ವೃಂ                                     ೪.೪.೪.೪
ದಾರಕ.ರೆಲ್ಲ ಪ.ದಾರ. ವಿಂದವನು                                         ೪.೪.೩.೫
ಸೇರಿರು. ತಿರಲವಿ. ಚಾರವಿ. ದೇನಿದು ? ||                                 ೪.೪.೪.೪ ||
(ದ್ರೌಪದೀ ಪ್ರತಾಪ)

ಕಾಂಭೋದಿ-ಅಷ್ಟ

ಮಂತ್ರಿಗ.ಳಿರಕೇಳಿ.ರೀಗ | ಶ್ರೀ                                                 ವಿ.ವಿ. ಬ್ರ | ಮೂ
ಕಾಂತನ. ಕಾಣುವ. ಯೋಗ ||                                                ವಿ.ವಿ.ಬ್ರ ||
ಬಂತುಮ. ತ್ಪುಣ್ಯವ. ನೇನೆಂಬೆ. ವಹಿಲದಿ                                ವಿ.ವಿ.ವಿ.ವಿ
ಕುಂತಿ. ಸುತನ. ಧ್ವರದ.ಹಯತ-                                            ೩.೪.೩.೪
ನ್ನಂತೆ. ತಾನೇ. ಬಂದಿ. ತಿಲ್ಲಿಗೆ ||                                            ೩.೪.೩.೪ ||
(ಸುಧನ್ವ ಕಾಳಗ)

ಘಂಟಾರವ-ಅಷ್ಟ

ತಾಳಿ.ಪರ್ವತ. ಪೊತ್ತುಕ.ಲ್ಮರಗಳ                                           ಬ್ರ. ವಿ. ವಿ. ವಿ.
ಸ್ಥೂಲ. ದೇಹವು. ಸುರುಟಿ.ದುದುಕೈ                                      ೩.೪.೩.೪
ಕಾಲು.ಗಳು ಒಳ.ಸರಿದ. ವೂ ||                                              ೩.೪.೩ ಗು ||
(ಶರಸೇತು ಬಂಧನ)

ಛಂದೋಗತಿ

ಅಕ್ಷರಛಂದಸ್ಸು, ಮಾತ್ರಾಛಂದಸ್ಸು ಮತ್ತು ಅಂಶಛಂದಸ್ಸುಗಳಲ್ಲಿ ಯಕ್ಷಗಾನದ ವಿವಿಧ ಪದ್ಯಬಂಧಗಳು ಮೆಯ್ವೆತ್ತಿರುವುದನ್ನು ಈಗಾಗಲೇ ಗಮನಿಸಿದ್ದೇವೆ. ಅಕ್ಷರ ಛಂದಸ್ಸಿನಲ್ಲಿ ಕೆಲವೆಡೆ ಮಾತ್ರ ವ್ಯಕ್ತವಾಗುವ ಕಾಲಸಮತ್ವದಿಂದಾಗಿ ಮಾತ್ರಾ ಛಂದಸ್ಸಿನ ತಾಳನಿಯಮವು ಅಲ್ಲಿಯೂ ಅನ್ವಯಿಸುತ್ತದೆ. ಕಾಲಸಮತ್ವವಿರುವ ಛಂದೋಗತಿಯನ್ನು ‘ಆವರ್ತಗತಿ’ ಎಂದು ಕರೆಯಲಾಗುತ್ತದೆ. ವಿವಿಧತಾಳಗಳ ಆವರ್ತಕ್ಕೆ ಅವುಗಳು ಹೊಂದಿಕೊಳ್ಳುತ್ತವೆ ಎಂದೇ ಇದರ ಅರ್ಥ. ಹೆಚ್ಚಿನ ಅಕ್ಷರವೃತ್ತಗಳ ಗುರುಲಘು ವಿನ್ಯಾಸಗಳಲ್ಲಿ ಕಾಲಸಮತ್ವವಿಲ್ಲದಿರುವುದರಿಂದ ಆ ಛಂದೋಗತಿಯನ್ನು ‘ಅಕ್ಷರಗತಿ’ ಎಂದು ಹೆಸರಿಸಬಹುದು. ಯಕ್ಷಗಾನ ಪದ್ಯಗಳಲ್ಲಿ ಲಯಪ್ರತೀತಿಯನ್ನುಂಟು ಮಾಡುವಲ್ಲಿ ಮಾತ್ರಾಸಮತೆಯೇ ಆಧಿಕ್ಯವಹಿಸಿದೆ ಎಂದೆನಿಸುತ್ತದೆ. ಪ್ರತಿಯೊಂದು ಛಂದಃಖಂಡದ ಆವರ್ತಗಳು ನಿರ್ದಿಷ್ಟ ತಾಳಾವರ್ತಕ್ಕೆ ಹೊಂದುವುದರಿಂದ, ಅಲ್ಲಿಯ ಛಂದೋಗತಿ ಸುಲಭ ವೇದ್ಯವಾಗುತ್ತದೆ.

ಲಯವನ್ನು ದ್ರುತ, ಮಧ್ಯ ಮತ್ತು ವಿಲಂಬಿತವೆಂದು ಮೂರುಬಗೆಯಾಗಿ ಪರಿಗ್ರಹಿಸಿದರೆ, ಅಲ್ಲಿ ಆರು ಭೇದಗಳುಂಟಾಗುತ್ತವೆ. ಮೂರು ಮಾತ್ರಾಕಾಲದ ದ್ರುತಾವರ್ತಗತಿ, ಚತುರ್ಮಾತ್ರಾಕಾಲದ ಮಧ್ಯಾವರ್ತಗತಿ, ಪಂಚಮಾತ್ರಾಕಾಲದ ವಿಲಂಬಿತಾವರ್ತಗತಿಗಳೊಂದಿಗೆ, ದ್ರುತಮಧ್ಯಾವರ್ತಗತಿ (೩+೪), ದ್ರುತವಿಲಂಬಿತಗತಿ (೩+೫) ಮತ್ತು ಮಧ್ಯವಿಲಂಬಿತಗತಿ (೪+೫)ಗಳೆಂಬ ಗತಿಭೇದಗಳಲ್ಲಿ ಕೊನೆಯದನ್ನು ಅಗ್ರಾಹ್ಯವೆಂದು ಪರಿಗಣಿಸಲಾಗಿದೆ.

ಶಂಕರಾಭರಣ-ಮಟ್ಟೆ, ತುಜಾವಂತು-ಮಟ್ಟೆ, ಪಂಚಾಗತಿ-ಮಟ್ಟೆ ಗಳಂತಹ ರಚನೆಗಳು ದ್ರುತಾವರ್ತಗತಿಗೆ ಉದಾಹರಣೆಗಳಾದರೆ, ಸುರುಟಿ-ಏಕ, ಭೈರವಿ-ಏಕ, ನವರೋಜು-ಏಕ ಮುಂತಾದವುಗಳು ಚತುರ್ಮಾತ್ರಾಗಣಗಳ ರಚನೆಯೆನಿಸಿ, ಮಧ್ಯಾವರ್ತಗತಿ ಎನಿಸುತ್ತವೆ. ಕಾಂಭೋದಿ-ಝಂಪೆ, ಕೇದಾರಗೌಳ- ಝಂಪೆ, ಭೈರವಿ-ಝಂಪೆ ಇತ್ಯಾದಿ ಪಂಚಮಾತ್ರಾಗಣಬದ್ಧ ಛಂದೋಬಂಧಗಳನ್ನು ವಿಲಂಬಿತಾವರ್ತಗತಿ ಎನ್ನಬಹುದು. ಸೌರಾಷ್ಟ್ರ-ತ್ರಿವುಡೆ, ಮಧ್ಯಮಾವತಿ-ತ್ರಿವುಡೆ, ಶಂಕರಾಭರಣ-ತ್ರಿವುಡೆ ಮೊದಲಾದ ಪದ್ಯಬಂಧಗಳು ದ್ರುತಮಧ್ಯಾವರ್ತಗತಿಗೆ ಮಾದರಿಗಳು. ಭಾಮಿನೀ ಷಟ್ಪದಿಯನ್ನು ಸತಾಲವಾಗಿ ಹಾಡಿದಾಗಲೂ ಇದೇ ಛಂದೋಗತಿ ವೇದ್ಯವಾಗುತ್ತದೆ. ಚತುರ್ಮಾತ್ರಾಗಣದಲ್ಲಿ ‘ಗಣಪರಿವೃತ್ತಿ’ ಉಂಟಾದಾಗ ಅರ್ಥಾತ್ ಎರಡು ಚತುರ್ಮಾತ್ರಾಗಣಗಳ ಬದಲು ಒಂದು ತ್ರಿಮಾತ್ರಾಗಣ ಮತ್ತು ಒಂದು ಪಂಚಮಾತ್ರಾಗಣಗಳು ಏಕೀಭವಿಸಿದಾಗ ದ್ರುತ ವಿಲಂಬಿತಾವರ್ತಗತಿ ಉನ್ಮೀಲಿಸುತ್ತದೆ.

ಛಂದೋಗತಿಯ ಕಾಲಸಮತ್ವವನ್ನು ಗುರುಲಘುವಿನ್ಯಾಸಸಮತೆ ಎಂದೋ, ಮಾತ್ರಾಸಮತೆ ಎಂದೋ ಕರೆದಾಗ, ಅಕ್ಷರಛಂದಸ್ಸು ಹಾಗೂ ಮಾತ್ರಾಛಂದಸ್ಸುಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡ ಹಾಗೆ ಭಾಸವಾಗುತ್ತದೆ. ಹಾಗಾದರೆ ಯಕ್ಷಗಾನದ ತ್ರಿಮೂರ್ತಿಗಣಗಳಿಂದ ಕೂಡಿದ ಅಂಶಛಂದೋ ಬಂಧಗಳ ಲಯದ ಸ್ಪುರಣೆಯನ್ನು ಹೇಗೆ ವ್ಯಾಖ್ಯಾನಿಸಬೇಕೆಂಬ ಪ್ರಶ್ನೆ ಉಳಿಯುತ್ತದೆ. ಏಕೆಂದರೆ ತ್ರಿಮೂರ್ತಿಗಣಗಳಲ್ಲಿ ಗುರುಲಘು ವಿನ್ಯಾಸದ ಸಮತೆಯಾಗಲೀ, ಮಾತ್ರಾಮೌಲ್ಯ ಸಮತೆಯಾಗಲೀ ಕಂಡುಬರುವುದಿಲ್ಲ. ಆದರೆ ಶ್ರಾವಣರೂಪದಲ್ಲಿ ಬ್ರಹ್ಮಗಣವು ನಾಲ್ಕು ಮಾತ್ರೆಯದೂ, ವಿಷ್ಣು ಗಣವು ಆರುಮಾತ್ರೆಯದೂ, ರುದ್ರಗಣವು ಎಂಟುಮಾತ್ರೆಯದೂ ಆಗುತ್ತದೆಂಬ ವಿಚಾರವನ್ನು ಮನಸ್ಸಿಗೆ ತಂದುಕೊಂಡರೆ ಸ್ವಲ್ಪಮಟ್ಟಿಗೆ ಸಮಾಧಾನ ದೊರೆಯುತ್ತದೆ. ಕರ್ಷಣಶೀಲವಾದ ಈ ಅಂಶಗಣಗಳ ಛಂದೋಗತಿಯನ್ನು ಲಯಗ್ರಾಹಿ ಮನಸ್ಸು ಮಾತ್ರ ಅರ್ಥೈಸಬಲ್ಲುದು. ಯಕ್ಷಗಾನದಲ್ಲಿ ಸಾಂಗತ್ಯವನ್ನು ರೂಪಕತಾಳದಲ್ಲೇ ಹಾಡುವಕ್ರಮವಿರುವುದರಿಂದ, ಸಾಂಗತ್ಯದ ವಿಷ್ಣುಗಣಗಳು ಆರುಮಾತ್ರಾಮೌಲ್ಯ ಉಳ್ಳವುಗಳೆಂಬ ಗತಿಪ್ರಜ್ಞೆ ಯಕ್ಷಗಾನ ಕವಿಗಳಿಗಿದೆ ಎಂದ ಹಾಗಾಯಿತು. ಆದರೆ ಬ್ರಹ್ಮಗಣವು ಚಾಕ್ಷುಷರೂಪದಲ್ಲಿ ತನ್ನ ಅಂಶಸ್ಥಾನದಲ್ಲಿ ಲಘುವನ್ನು ಪಡೆದಿರುವಾಗ UUU ; ಮತ್ತು-U ಎಂಬ ರೂಪಗಳಲ್ಲಿ ಚತುರ್ಮಾತ್ರಾ ಮೌಲ್ಯಧಾರಣೆ ಹೇಗೆಂಬುದು ತೊಡಕಾಗಬಹುದು. ಆದರೂ ಗೇಯರೂಪದಲ್ಲಿ ಅದು ಸತ್ಯವೆಂಬುದನ್ನು ಯಕ್ಷಗಾನ ಪದ್ಯಗಳು ಸಮರ್ಥಿಸುತ್ತವೆ.

ಉದಾ

ತರುಣಿ. ಬಾರೆ. ಮೊಗವ. ತೋರೆ
ಜರೆದೆ. ನಿನ್ನ. ನೆಂದು ||
ಕೆರಳ.ದೆನಗಾ.ನಂದ. ಪಡಿಸೆ
ಕರುಣ.ದಿಂದ.ಲಿಂದು ||
(ವಿಶ್ವಾಮಿತ್ರ ಪ್ರತಾಪ)
ಕೆಟ್ಟ. ಜೂಜ. ನಾಡಿ. ಇಂಥ
ಬಟ್ಟೆ. ಯಾಯ್ತು. ಬೇಡ. ಗಯನ
ಬಿಟ್ಟು. ಕಳುಹಿ.ಸಯ್ಯಾ. ಕಯ್ಯ
ಮುಗಿವೆ. ನೂ ಕಾಂ.ತಾ ||
(ಕೃಷ್ಣಾರ್ಜುನ ಕಾಳಗ)

ಈ ಬಂಧಗಳು ತ್ರಿಶ್ರಗತಿಯಲ್ಲಿ ಪ್ರಯುಕ್ತವಾಗದೆ, ಚತುರಶ್ರಗತಿಯಲ್ಲೇ ಇರುವುದನ್ನು ಇಲ್ಲಿ ಗಮನಿಸಬೇಕು. ತ್ರಿಶ್ರಗತಿಯಿಂದ ಉದ್ದೇಶಿತ ರಸಾಭಿವ್ಯಂಜನೆ ಸಾಧ್ಯವಾಗುವುದಿಲ್ಲ ಎಂಬುದು ಗಮನಾರ್ಹ ವಿಚಾರ. ಹಾಗೆಯೇ ಏಕತಾಳ ಆದಿತಾಳಗಳಲ್ಲೇ ರುದ್ರಗಣಬಂಧಗಳನ್ನು ಹೆಚ್ಚಾಗಿ ಹಾಡುತ್ತಾರೆಂಬುದನ್ನು ಇಲ್ಲಿ ಮರೆಯಬಾರದು. ಅಂಶಗಣಗಳ ಈ ರೀತಿಯ ಕಾಲಸಮತ್ವವನ್ನು ‘ಉಚ್ಚಾರ ಸಮತೆ’ ಎಂದು ಕರೆಯುವುದು ಹೆಚ್ಚು ಅರ್ಥಪೂರ್ಣ.

ಗತಿಭೇದದಿಂದ ತಾಳಭೇದ

ಯಕ್ಷಗಾನ ಛಂದೋಗತಿಯಲ್ಲಿ ಉಂಟಾಗುವ ವ್ಯತ್ಯಾಸದಿಂದ ಲಯಾನ್ವಿತವಾದ ಪದ್ಯಗಳ ತಾಳದಲ್ಲಿ ವ್ಯತ್ಯಾಸವಾಗುತ್ತದೆ. ಕೇವಲ ವೃತ್ತದ ಗತಿಯ ಬದಲಾವಣೆಯಿಂದ ಬೇರೆಯೇ ಆದ ವೃತ್ತವೊಂದು ಹುಟ್ಟಿಕೊಳ್ಳುತ್ತದೆ ಎಂಬ ಅಭಿಪ್ರಾಯವು ಪಿಂಗಳನಷ್ಟು ಪ್ರಾಚೀನವಾದುದು. ಹದಿನಾರು ಮಾತ್ರಾಮೌಲ್ಯದ ವೃತ್ತಪಾದವೊಂದು ‘೮ ಲಘು + ೬ ಲಘು + ೧ ಗುರು’ ಎಂಬ ವಿನ್ಯಾಸದಲ್ಲಿದ್ದಾಗ “ಮಣಿಗುಣನಿಕರ” ವೆಂದೂ, “೬ ಲಘು + ೬ ಲಘು + ೨ ಲಘು + ೧ ಗುರು” ಎಂದಾದಾಗ ‘ಮಾಲಾವೃತ್ತ’ ವೆಂದೂ ಪ್ರತೀತವಾಗುತ್ತದೆ. ಮಣಿಗುಣನಿಕರವು ಆದಿತಾಳದಲ್ಲೂ, ಮಾಲಾವೃತ್ತವು ರೂಪಕತಾಳದಲ್ಲೂ ಪ್ರವಹಿಸಬಲ್ಲುದು. ಇದನ್ನು ಈ ಕೆಳಗಿನ ಉದಾಹರಣೆಯಿಂದ ಸ್ಪಷ್ಟಪಡಿಸಿಕೊಳ್ಳಬಹುದು.

ಇನಿಯನ ಮನದಲಿ. ನೆನೆಯುತ ದಣಿ. ದಳ್
ವನಿತೆಯಳೊರಗುತ. ಕನಸಿನ ಜಗ. ದೊಳ್
ಮನವಿಹಗವ. ನಡರುತಲರೆ. ಚಣದೊಳ್
ಅನಿಮಿಷರೆರೆ. ಯನಸಭೆಯೊಳ. ಸರಿದಳ್ ||
(ದೀಕ್ಷಾ ಕಂಕಣ)

ಇಲ್ಲಿ ಮೊದಲ ಎರಡು ಪಾದಗಳು ಆದಿತಾಳದಲ್ಲೂ, ಅನಂತರದ ಎರಡು ಪಾದಗಳು ರೂಪಕತಾಳದಲ್ಲೂ ಪ್ರಸ್ತರಿಸಲ್ಪಟ್ಟಿವೆ. ಒಂದೇ ಛಂದಸ್ಸು ಭಿನ್ನಗತಿಗಳಲ್ಲಿ ಚಲಿಸಿ ವಿಭಿನ್ನತಾಳಾಶ್ರಯಿಗಳಾಗುತ್ತವೆ. ಚಿತ್ರಕವಿತಾ ಪ್ರಭೇದಗಳಲ್ಲಿ ಒಂದೆನಿಸಿದ ‘ಉಭಯ ಸಮಾನಬಂಧ’ಗಳೂ ಇದೇ ಗತಿರೋಚಕತ್ವವನ್ನುಂಟುಮಾಡುತ್ತವೆ.

ಉದಾ –

ಕೇದಾರಗೌಳ-ಅಷ್ಟತಾಳ

ಮಘವನಾ.ತ್ಮಜೆನಮಿ. ಸುತಬಾಲ. ಕಿಯ ಬಗೆ
ಬಗೆಯ ಸೊ.ಗಸಿಗಳುತ ||
ನೆಗೆದಳಂ. ಬರದಪ.ಥದಿ ಮೌನಿ.ವರ ದುಗು
ಡಗಳ ತೊ.ರೆದುಮನದಿ ||
(ಶುಕ್ರ ಸಂಜಿವಿನೀ)

ಕೇದಾರಗೌಳ-ಝಂಪೆತಾಳ

ಮಘವನಾ. ತ್ಮಜೆನಮಿಸು.ತ | ಬಾಲಕಿಯ
ಬಗೆಬಗೆಯ ಸೊಗಸಿಗಳು.ತ ||
ನೆಗೆದಳಂ. ಬರದಪಥ. ದಿ. | ಮೌನಿವರ
ದುಗುಡಗಳ. ತೊರೆದು ಮನ.ದಿ ||

ಇಲ್ಲಿ ಒಂದೇ ಪದ್ಯವು ವಿಭಿನ್ನ ಗಣನಿಯಮದಿಂದಾಗಿ ಬೇರೆ ಬೇರೆ ಛಂದಃಶರೀರವನ್ನು ಧರಿಸಿದೆ. ವಿಷ್ಣುಗಣಗಳು ಪಂಚಮಾತ್ರಾಗಣಕ್ಕೆ ಅಳವಟ್ಟು ಛಂದೋಗತಿಯಲ್ಲಿ ಭಿನ್ನಧರ್ಮಾನುಸಾರಿಯಾಗಿವೆ. ಈ ಕೆಳಗಿನ ಪದ್ಯಬಂಧದಲ್ಲಿ ಅದೇ ವಿಷ್ಣುಗಣಗಳು ಚತುರ್ಮಾತ್ರಾಗತಿಗೆ ಅಳವಡುವುದನ್ನು ಗಮನಿಸಬಹುದು. ಛಂದೋಗತಿಯಲ್ಲಿ ಉಂಟಾದ ಈ ಭೇದವು ಆತ್ಯಂತಿಕವಾಗಿ ತಾಳಾವರ್ತದಲ್ಲಿ ಪರಿಣಾಮಬೀರಿ ಭಿನ್ನತಾಳದಲ್ಲಿ ಪ್ರಕಟವಾಗುವುದು ಇಲ್ಲಿ ಗಮನಾರ್ಹ.

ಸಾಂಗತ್ಯ-ರೂಪಕತಾಳ

ಮುಂದರಿ.ದಿಹುದು ವ.ಸುಂಧರೆ. ಗುರುಗಳೆ
ಹಿಂದಕ್ಕೇ. ಕೆಳೆವಿರಿ.ಸೆಳೆದು ||
ಎಂದಿಗು.ಕಾಣದು. ದಂದಿಗೆ.ಬಿಟ್ಟೆವು
ಇಂದೀಬಾ.ಳಲಿಸುಖ.ವಿಹುದು ||
(ಶುಕ್ರ ಸಂಜೀವಿನೀ)

ಆರ್ಯಾಸವಾಯಿ-ಏಕತಾಳ

ಮುಂದರಿ. ದಿಹುದು ವ. ಸುಂಧರೆ. ಗುರುಗಳೆ
ಹಿಂದ.ಕ್ಕೇಕೆಳೆ.ವಿರಿಸೆಳೆ.ದು ||
ಎಂದಿಗು. ಕಾಣದು. ದಂದಿಗೆ. ಬಿಟ್ಟೆವು
ಇಂದೀ. ಬಾಳಲಿ. ಸುಖವಿಹು.ದು ||

ಕೆಲವೊಮ್ಮೆ ಒಂದೇ ಪದ್ಯಬಂಧವನ್ನು ಬೇರೆ ಬೇರೆ ತಾಳಗಳಲ್ಲಿ ಹಾಡಲು ಸಾಧ್ಯವಾಗುತ್ತದೆ. ಛಂದೋಗತಿಯಲ್ಲಿರುವ ವಿಶಿಷ್ಟಗುಣದಿಂದ ಮಾತ್ರ ಈ ಪರಿವರ್ತನೆಗಳು ಸಾಧ್ಯ. ಉದಾ-

೧)    ಚಿನ್ನದ ಹಸೆ. ಮಣೆಯಾಮೇ. ಲೇ
ಪನ್ನಗವೇ. ಣಿಯ ಕುಳ್ಳಿರಿ. ಸೀ
೨)    ಚಿನ್ನದ. ಹಸೆಮಣೆ. ಯಾಮೇ. ಲೇ
ಪನ್ನಗ. ವೇಣಿಯ. ಕುಳ್ಳಿರಿ. ಸೀ
೩)    ಚಿನ್ನದ ಹಸೆ. ಮಣೆಯಾ. ಮೇಲೇ
ಪನ್ನಗವೇ. ಣಿಯ ಕು. ಳ್ಳಿರಿಸೀ

‘ಸೀತಾಸ್ವಯಂವರ’ ಯಕ್ಷಗಾನ ಪ್ರಸಂಗದ ಈ ಪದ್ಯದಲ್ಲಿ ಕ್ರಮವಾಗಿ ಷಣ್ಮಾತ್ರಾಗತಿ, ಚತುರ್ಮಾತ್ರಾಗತಿ ಮತ್ತು ೬ + ೪ + ೪ ಎಂಬ ಪೂರ್ಣತ್ರಿಪುಟಗತಿಗಳಿಂದಾಗಿ ವಿಭಿನ್ನಛಂದೋಗತಿಗಳುಂಟಾಗುತ್ತವೆ. ಇವುಗಳು ಕ್ರಮವಾಗಿ ರೂಪಕ ತಾಳ, ಏಕತಾಳ ಮತ್ತು ಧ್ರುವತಾಳಗಳಲ್ಲಿ ಮೂಡಿಬಂದು ಯಕ್ಷಗಾನದ ಬಹು ಮುಖೀ ಸಾಧ್ಯತೆಯನ್ನು ಸಾಕ್ಷಾತ್ಕರಿಸುತ್ತದೆ.

ಛಂದೋಗತಿಪ್ರಜ್ಞೆಯ ದೋಷದಿಂದಾಗಿ ಪದ್ಯಗಳ ಅಪಪಾಠವೂ ಹರಿದು ಬರುತ್ತದೆ ಎಂಬುದನ್ನು ಮರೆಯಬಾರದು. ಪಾರ್ತಿಸುಬ್ಬನ ರಚನೆಯೊಂದು ಇಂತಹ ಅಚಾತುರ್ಯಕ್ಕೆ ಇಂಬಾಗಿರುವುದನ್ನು ವಿಶೇಷವಾಗಿ ಗಮನಿಸಬೇಕು.

ಮಾರೀಚನಿ. ಶಾಚರ. ಸಂತತ
ವೀರಮನೋಹರ. ವಿಕ್ರಮ. ಶೌರ್ಯ
ಮಾರಾಂಗಶ. ರೀರಮ. ನೋಹರ
ಚಾರುಗುಣಗ. ಭೀರ ಉ. ದಾರಾ ||
(ಪಂಚವಟಿ)

ಇಲ್ಲಿರುವುದು ೬+೪+೪ ಎಂಬ ಧ್ರುವತಾಳಗತಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಪದ್ಯದ ಎರಡನೇ ಪಾದದ ಮೊದಲಗಣ ಆರು ಮಾತ್ರೆಗಳಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲದೆ ‘ಮನೋಹರ’ ಎಂಬ ಪದಪ್ರಯೋಗ ಮೂರನೇ ಪಾದದಲ್ಲಿ ಮತ್ತೆ ಬಳಕೆಯಾಗಿರುವುದರಿಂದಲೂ, ಎರಡುಕಡೆ ಒಂದೇ ಪದದ ಬಳಕೆ ಔಚಿತ್ಯವಲ್ಲದಿರುವುದರಿಂದಲೂ ಛಂದೋದೋಷದ ಸ್ಥಾನದಲ್ಲಿ ಬೇರೊಂದು ಪದಪ್ರಯೋಗ ಇದ್ದಿರಬೇಕೆಂದು ತರ್ಕಿಸಬಹುದು. ಇದು ಗತಿಪ್ರಜ್ಞೆಯ ದೋಷದಿಂದಾಗಿ ಉಂಟಾಗಿರುವ ಅಪಪಾಠವೆಂಬುದರಲ್ಲಿ ಅನುಮಾನವಿಲ್ಲ. ಸದ್ಯಕ್ಕೆ ಬೇರೆ ಪಾಠಾಂತರಗಳು ದೊರೆಯುವತನಕ ಅದನ್ನು ‘ವೀರೋಚಿತ’ ಎಂದಿಟ್ಟುಕೊಳ್ಳಬಹುದು.

ಛಂದೋಗತಿ ಮತ್ತು ಭಾಷಾಗತಿ

ಲಯಾನ್ವಿತ ಪದ್ಯವೊಂದರಲ್ಲಿ ಸಾಹಿತ್ಯಕ ಪದಪುಂಜಗಳ ಗತಿಗೂ ಹಾಗೂ ಆ ಪದ್ಯದ ಛಂದಃಖಂಡಗಳ ಗತಿಗೂ ಸಾಹಚರ‍್ಯ ಇರಲೇಬೇಕು. ಇದನ್ನೇ ಸಾಹಿತ್ಯ-ಸಂಗೀತಗಳ ಸಮನ್ವಯವೆನ್ನುವುದು. ಭಾಷಾಪದ ಮತ್ತು ಛಂದಃಪದಗಳ ಗತಿಯಲ್ಲಿ ಪರಸ್ಪರ ಮೈತ್ರಿ ಇಲ್ಲದೇ ಹೋದಾಗ ಪದ್ಯಗತಿಗೆ ತೊಡಕಾಗುತ್ತದೆ. ತಾಳಾನುಗುಣವಾಗಿ ಹಾಡಿದಾಗ ಸಾಹಿತ್ಯದ ಅರ್ಥ ಕೆಡುತ್ತದೆ. ಸಾಹಿತ್ಯವು ಕೆಡದಂತೆ ಭಾಷಾಗತಿಯ ಕಡೆಗೆ ಗಮನ ಕೊಟ್ಟರೆ ತಾಳಾವರ್ತದಲ್ಲಿ ಗತಿಭಂಗವುಂಟಾಗುತ್ತದೆ. ಯಕ್ಷಗಾನದ ಸಂದರ್ಭದಲ್ಲಿ ಈ ಎರಡೂ ಗತಿಗಳ ಅನ್ಯೋನ್ಯತೆ ಅತ್ಯಂತ ಅವಶ್ಯವೆಂದು ಬೇರೆ ಹೇಳಬೇಕಾಗಿಲ್ಲ.

ಸೌರಾಷ್ಟ್ರ-ತ್ರಿವುಡೆ

ಯಾಕೆ. ಬಯಸಿದೆ. ತಾಯೆ. ವಿಪಿನವ
ಸಾಕೆ. ಸಾಕೇ. ತಾಪು. ರವಾಸ
ನೀಕ. ಳುಹಿಬಾ. ರೆಂದು. ನೂಕಿದ
ಕಾಕು. ಸ್ಥನು ||

ಇಲ್ಲಿ ಪದ್ಯದ ಎರಡು ಮತ್ತು ನಾಲ್ಕನೇ ಚರಣಗಳಲ್ಲಿ ಛಂದೋದೋಷ ಉಂಟಾಗಿದೆ. ‘ರವಾಸ’ ಎಂಬ ಲಗಾದಿ ಗಣಸಂಯೋಜನೆಯಿಂದ ಹಾಗೂ ಪದ್ಯದ ಕೊನೆಯಲ್ಲಿ ೩+೪ ಎಂಬ ಗಣವಿಭಜನೆ ಅಸಾಧ್ಯವಾಗಿರುವುದರಿಂದ ತ್ರಿಪುಟಲಯ ಎಡವುತ್ತದೆ. ಇದನ್ನು ಈ ರೀತಿ ಸರಿಪಡಿಸಬಹುದು-

ಯಾಕೆ. ಬಯಸಿದೆ. ತಾಯೆ. ವಿಪಿನವ
ಸಾಕೆ. ಸಾಕೇ. ತದೊಳು. ವಾಸವು
ನೀಕ. ಳುಹಿಬಾ. ರೆಂದು. ರಾಘವ
ನೂಕೆ. ಬಂದೇ ||

ಕೆಲವೊಮ್ಮೆ ಯತಿನಿಯಮೋಲ್ಲಂಘನೆಯಿಂದಲೂ ಲಯದ ಸುಭಗತೆಗೆ ಭಂಗವುಂಟಾಗುತ್ತದೆ. ‘ಯತಿ ವಿಲಂಘನದಿಂದರಿದಲ್ತೆ ಕನ್ನಡಂ’ ಎಂಬ ಕೇಶಿರಾಜನ ಮಾತನ್ನು ವಿತಾಲಗಾಯನಕ್ಕೆ ಸಂಬಂಧಿಸಿದುದೆಂದು ಭಾವಿಸಬೇಕು. ಪಂಪನೇ ಮೊದಲಾದ ಕವಿಗಳು ಖ್ಯಾತಕರ್ಣಾಟಕವೃತ್ತಗಳ ಪಾದಾಂತ್ಯದಲ್ಲಿ ಯತಿವಿಲಂಘನ ಮಾಡಿದ್ದರೂ, ಅವುಗಳು ಸತಾಲರಚನೆಗಳಲ್ಲ ಎಂಬುದನ್ನು ಮರೆಯಬಾರದು. ಪಾರ್ತಿಸುಬ್ಬನಂತಹ ಯಕ್ಷಗಾನಕವಿಗಳೂ ಅಂತಹ ಯತಿ ನಿಯಮೋಲ್ಲಂಘನೆ ಮಾಡಿದ್ದುಂಟು.

ಮತ್ತೇಭವಿಕ್ರೀಡಿತ ವೃತ್ತ

ವರಮಂತ್ರೀಶ್ವರನೆಂದಡಾ ದಶರಥಂ ಆನಂದದಿಂ ಮಿಂದು ಭೂ-
ಸುರಶ್ರೇಷ್ಠಾದ್ಯರ ವಂದಿಸುತ್ತ ಮುನಿಯಂ ಕರೆತಂದು ಸುಮುಹೂರ್ತದೀ ||
………………………………………………
………………………………………………                   (ಪುತ್ರಕಾಮೇಷ್ಠಿ)

‘ಯತಿಃ ಸರ್ವತ್ರಪಾದಾಂತೇ’ ಎಂಬ ಪುರಾತನೋಕ್ತಿಯಂತೆ ಪಾದಾಂತ್ಯದಲ್ಲಿ ನಿಲುಗಡೆ ಇರುವುದು ಸ್ವಾಗತಾರ್ಹ. ಖಂಡಪ್ರಾಸದ ಅತಿಶಯತೆಗಾಗಿ ಕನ್ನಡ ಕವಿಗಳು ಯತಿಭಂಗವನ್ನು ಮಾಡಿದ್ದರೂ ಅಂತಹ ರಚನೆಗಳು ನಿರಾವರ್ತಗತಿಗೆ ಸಂಬಂಧಿಸಿದ್ದೆಂಬುದನ್ನು ತಿಳಿಯಬೇಕಾಗುತ್ತದೆ. ಯಕ್ಷಗಾನದ ಸತಾಲಬಂಧಗಳಲ್ಲೂ ಯತಿಯು ಅಪೇಕ್ಷಣೀಯವೆಂಬುದನ್ನು ಮರೆಯಬಾರದು.

ನವರೋಜು-ಆದಿತಾಳ

ವನವಿದಕೇ ಪತಿಯಾದ |
ದನುಜ ಹಿಡಿಂಬನ ಸೋದ ||
ರನುಜೆಹಿಡಿಂಬೆಯೆಂ | ಬನುಪಮ ನಾಮದಿಂ |
ದೆನಗೆಲೆಯಪ್ರತಿ | ಘನತರ ಮಹಿಮಾ ||
(ಹಿಡಿಂಬಾ ವಿವಾಹ)

ಇಲ್ಲಿ ಎರಡನೇ ಪಾದಾಂತ್ಯದಲ್ಲಿ ನಿಲುಗಡೆ ಕೊಟ್ಟಾಗ ಭಾಷಾಗತಿಗೆ ಭಂಗ ಉಂಟಾಗುತ್ತದೆ. ಭಾಷಾಗತಿಗೆ ಅನುಗುಣವಾಗಿ ಹಾಡಿದರೆ. ‘ನವರೋಜು-ಆದಿ’ಯ ಯಕ್ಷಗಾನ ಛಂದೋಗತಿಗೆ ತೊಂದರೆಯಾಗುತ್ತದೆ. ಭೈರವಿ-ಏಕ, ನಾದನಾಮ ಕ್ರಿಯೆ-ಅಷ್ಟ, ಕೇದಾರಗೌಳ-ಝಂಪೆ ಇತ್ಯಾದಿ ಛಂದೋಬಂಧಗಳೂ ಇದೇ ರೀತಿಯ ಪಾದಾಂತ್ಯಯತಿಯನ್ನು ಅಪೇಕ್ಷಿಸುತ್ತವೆ. ಕಾಂಭೋದಿ-ಝಂಪೆ, ಕೇದಾರಗೌಳ-ಅಷ್ಟ, ಸಾಂಗತ್ಯ-ರೂಪಕ ಮುಂತಾದ ಯಕ್ಷಗಾನ ಛಂದಸ್ಸುಗಳಲ್ಲಿ ಸಮಪಾದಾಂತ್ಯಯತಿ ಅವಶ್ಯ. ಭೈರವಿಝಂಪೆಗೆ ಮಾತ್ರ ಪದಗರ್ಭರಚನೆ ಹೊಂದಿಕೆಯಾಗಿ, ಪದ್ಯಾಂತ್ಯದ ನಿಲುಗಡೆ ಒಪ್ಪುತ್ತದೆ. ಉದಾ-

ಸಕಲ ದೇಶದ ನೃಪಾ-
ಲಕರಿಗೋಲೆಯನು ಚಾ-
ರಕರ ಮುಖದಲಿ ವಿವಾ-
ಹಕೆ ಬರೆಸಿ ಕಳುಹು ||
(ಸುಭದ್ರಾ ಕಲ್ಯಾಣ)

ಇಲ್ಲಿ ಪ್ರತಿಪಾದದಲ್ಲಿ ಪದದ ಅಂತರಾಳದಲ್ಲಿ ತಾಳಾವರ್ತ ಸಂಧಿಸಿ, ಪದಗರ್ಭ ಉಂಟಾಗುತ್ತದೆ. ಇದು ಸಂಗೀತಶಾಸ್ತ್ರದ ಲಕ್ಷಣಗಳಲ್ಲೊಂದು. ಛಂದೋಗತಿ-ಭಾಷಾಗತಿಗಳೆರಡರ ಸುಂದರ ನೆಯ್ಗೆಯಿಂದ ಪದ್ಯರಚನೆ ಸಾಹಿತ್ಯದ ಸೊಬಗಿನ ಜೊತೆಗೆ ಸಂಗೀತಾನಂದವನ್ನೂ ನೀಡಬಲ್ಲದು. ಯಕ್ಷಗಾನ ಪದ್ಯಗಳಲ್ಲಿ ಈ ಎರಡರ ಸಾಮರಸ್ಯ ಬಹುತೇಕ ಯಶಸ್ವಿಯಾಗಿದೆ ಎಂದೇ ತೋರುತ್ತದೆ.

ಛಂದೋಮೀಮಾಂಸೆ

ಯಕ್ಷಗಾನ ಛಂದೋಗತಿಯನ್ನು ಛಂದೋಮೀಮಾಂಸೆಯ ಹಿನ್ನೆಲೆಯಲ್ಲಿ ವಿವೇಚಿಸಿದಾಗಲೇ ಅದರ ಶ್ರೇಷ್ಠತೆಯ ಅರಿವಾಗುವುದು. ಏಕೆಂದರೆ ಯಕ್ಷಗಾನದ ಪದ್ಯಗಳು ಕೇವಲ ಹಾಡುವುದಕ್ಕಾಗಿ ಇರುವುದು ಅಲ್ಲವಷ್ಟೇ. ಆ ಗಾಹನವು ನಾಟ್ಯಕ್ಕೆ ಹೊಂದಿಕೊಳ್ಳುವುದರ ಜೊತೆಗೆ ನವರಸಗಳ ಅಭಿನಯಕ್ಕೆ ಸಹಕಾರಿ ಯಾಗಿಯೂ ಮೂಡಿಬರಬೇಕಾದ ಅಗತ್ಯವಿದೆ. ಈ ಕಾರಣದಿಂದಾಗಿ ಯಕ್ಷಗಾನ ಛಂದೋಗತಿಯಲ್ಲಿ ವೈವಿಧ್ಯದ ಅಪೇಕ್ಷೆ ಹೆಚ್ಚು. ಕುಮಾರವ್ಯಾಸನ ಗದುಗಿನ ಭಾರತದಲ್ಲಿ ಭಾಮಿನೀಷಟ್ಪದಿಯನ್ನು ಹಾಗೂ ಲಕ್ಷ್ಮೀಶನ ಜೈಮಿನಿಭಾರತದಲ್ಲಿ ವಾರ್ಧಕ ಷಟ್ಪದಿಯನ್ನು ಬಳಸಿದುದರಿಂದ ಗಮಕವಾಚನದಲ್ಲಿ ಛಂದೋಗತಿಯ ಏಕತಾನತೆಯನ್ನು ಗಮನಿಸಬಹುದು. ಇದೇ ಮಾತು ಭರತೇಶ ವೈಭವ, ಹರಿಶ್ಚಂದ್ರ ಕಾವ್ಯ, ನಳಚರಿತ್ರೆ, ತೊರವೆ ರಾಮಾಯಣಗಳಿಗೂ ಅನ್ವಯಿಸುತ್ತದೆ. ರನ್ನ-ಪಂಪ- ನಾಗಚಂದ್ರರ ಕಾವ್ಯಗಳಲ್ಲಿ ಚಂಪೂಶೈಲಿ ಇರುವುದರಿಂದ ವಿವಿಧ ಛಂದೋಗತಿ ವೇದ್ಯವಾದರೂ, ಅಕ್ಷರಛಂದಸ್ಸಿನ ಸೀಮಿತ ಲಯರೇಖೆಗಳು ಒಂದು ರೀತಿಯಲ್ಲಿ ಗೇಯತೆಗೆ ಕಡಿವಾಣ ಹಾಕುತ್ತದೆ ಎಂದರೆ ತಪ್ಪಾಗಲಾರದು. ಯಕ್ಷಗಾನ-ದಾಸ ಸಾಹಿತ್ಯಗಳಾದರೋ ಈತೆರನಾದ ವಿತಾಲಗಾಯನ ಕೃತಿಗಳಲ್ಲ. ಅವುಗಳ ಛಂದೋ ಬಂಧಗಳು ಅಕ್ಷರ-ಮಾತ್ರಾ-ಅಂಶಲಯಗಳ ವಿವಿಧ ವಿನ್ಯಾಸಗಳಲ್ಲಿ ಮೆಯ್ ತಳೆಯುವುದರಿಂದ ಗಾನವೈವಿಧ್ಯಕ್ಕೆ ಹೆಚ್ಚು ಅವಕಾಶ ಮಾಡಿ ಕೊಡುತ್ತವೆ. ಸಂದರ್ಭಕ್ಕೆ ತಕ್ಕ ಛಂದಸ್ಸನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ‍್ಯದಿಂದಾಗಿ ಛಂದೋಗತಿಯಲ್ಲಿ ಸೂಕ್ತವಾದ ಬಾಗುಬಳುಕುಗಳನ್ನು ತರಲಿಕ್ಕೂ ಸಾಧ್ಯ. ಇದನ್ನೇ ಛಂದೋಮೀಮಾಂಸೆ ಎಂದು ಕರೆಯುವುದು. ವೀರರಸ ಪ್ರತಿಪಾದನೆಗೆ ದ್ರುತಗತಿಯ ‘ಶಂಕರಾಭರಣ-ಮಟ್ಟೆ’ಯಂತಹ ರಚನೆಯನ್ನೋ, ತ್ವರಿತಮಧ್ಯ ಗತಿಯ ಮಾರವಿ-ಏಕ, ಭೈರವಿ-ಏಕ ಛಂದಸ್ಸನ್ನೋ ಆಯ್ಕೆ ಮಾಡಿಕೊಂಡರೆ ಪರಿಣಾಮ ಹೆಚ್ಚು. ಶೃಂಗಾರಕ್ಕೆ ನವ ರೋಜು-ಏಕ, ಕಾಪಿ-ಅಷ್ಟ ಬಂಧಗಳು ಮನೋಹರ. ಭಯಭೀಭತ್ಸಗಳಿಗೆ ವಿಲಂಬಿತಗತಿಯ ಕಾಂಭೋದಿ-ಝಂಪೆ, ಭೈರವಿ-ಝಂಪೆಗಳೂ, ಕರುಣಾರಸಕ್ಕೆ ಸಾಂಗತ್ಯ-ರೂಪಕ, ನೀಲಾಂಬರಿ-ರೂಪಕದ ವಿನ್ಯಾಸಗಳೂ ಹೆಚ್ಚು ಒಪ್ಪುತ್ತವೆ.

ಏತಕೆಬಂ.ದೆನು ತಾನೀ
ಪಾತಕಿ ಮಾ.ಡುವ ಯಜ್ಞದ
ರೀತಿಯನೊಂ. ದರಿಯದೆ ಬಂ
ದೀತೆರನಾ.ದುದಲಾ ||
(ಗಿರಿಜಾಕಲ್ಯಾಣ)
ಅದರಿಂದಲೆ. ನಿನ್ನನು ಕಾ
ವ್ಯದ ಮೊದಲಿಗೆ. ಪ್ರಾರ್ಥಿಸಿದೆನು
ಮಧುಪುರಗಣ.ನಾಥನೆತವ
ಪದಕೆ ನಮೋ.ಎಂಬೇ ||
(ಕುಶಲವರ ಕಾಳಗ)

ಇಲ್ಲಿ ಕ್ರಮವಾಗಿ ಶೋಕ ಮತ್ತು ಭಕ್ತಿಯ ಭಾವಗಳಿಗೆ ೨+೨+೨ ಎಂಬ ಸಂಕಲಿತ ದ್ರುತಾವರ್ತಗತಿ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಕೆಲವೆಡೆ ಒಂದೇ ಛಂದೋಬಂಧವನ್ನು ವಿಭಿನ್ನಛಂದೋಗತಿಯಲ್ಲಿ ಹಾಡಿ ವಿವಿಧರಸಾಭಿವ್ಯಕ್ತಿಯನ್ನುಂಟುಮಾಡಲೂ ಸಾಧ್ಯವಿದೆ. ಉದಾ:

ಭೈರವಿ-ಏಕ

ಕರೆಸೂ. ತತ್ವಕೆ. ಹರಿಯ | ಧ್ವಜ
ಕಿರಿಸೋ. ಕಾಡಿನ. ಕಪಿಯ ||
ಬರಿಸುಬೆಂ. ಬಲಕೆ. ಶಿವನ | ನೀ
ಕರೆಸೂ. ತಲೆಕಾ. ವವನ ||
(ದ್ರೌಪದೀ ಪ್ರತಾಪ)

ಇದನ್ನೇ ‘ನವರೋಜು-ಏಕ’ದ ಧಾಟಿಯಲ್ಲಿ ಹಾಡಬಹುದು. ಭೈರವಿ-ಏಕದ ಪ್ರತಿಪಾದದ ಎರಡನೇ ಚತುರ್ಮಾತ್ರಾಗಣದ ಆದಿಯಲ್ಲಿ ಗುರುವಿದ್ದರೆ ಮಾತ್ರ ಈ ಗಾಯನಕ್ರಮ ಸಾಧ್ಯ. ನವರೋಜು-ಏಕದ ಲಯರೇಖೆ ಆ ದೀರ್ಘಾಕ್ಷರ ಗುಂಫನದಲ್ಲೇ ಇದೆ ಎಂಬುದು ಗಮನಾರ್ಹ. ಆದರೆ ನವರೋಜು-ಏಕದ ಬಂಧವನ್ನು ಭೈರವಿ-ಏಕದಲ್ಲಿ ಸುಲಭವಾಗಿಯೇ ಹಾಡಬಹುದು. ಆದರೆ ಭೈರವಿ-ಏಕ ವೀರರಸಕ್ಕೆ ಒಪ್ಪುವ ಛಂದೋಗತಿ ಎಂಬುದು ಅಷ್ಟೇ ಮುಖ್ಯ. ಮೇಲಿನ ಪದ್ಯವನ್ನು ಭೈರವಿ-ಏಕದಲ್ಲಿ ಹಾಡಿದರೆ ವೀರರಸ ಚೆನ್ನಾಗಿ ಪ್ರತಿಪಾದಿತವಾಗುತ್ತದೆಯಾದರೂ, ಅದನ್ನು ನವರೋಜು-ಏಕದ ಛಂದೋಗತಿಯಲ್ಲಿ ಹಾಡಿದರೆ ವ್ಯಂಗ್ಯ-ವಿಡಂಬನೆಗಳ ಭಾವಾಭಿವ್ಯಕ್ತಿ ಇತೋಪ್ಯತಿಶಯವಾಗಿ ಪ್ರಕಟವಾಗುತ್ತದೆ ಎಂಬುದನ್ನು ಕಲಾಪರಿಶ್ರಮ ಉಳ್ಳವರು ಗ್ರಹಿಸಬಲ್ಲರು.

ಭೈರವಿ-ಏಕ

ದುಃಖಿಸಬೇಡೆಲೆ ತಂಗಿ | ಇದ
ಲೆಕ್ಕಿಸದಿರ್ ಭದ್ರಾಂಗಿ ||
ಎಕ್ಕತುಳದೆ ಸುರಪಡೆಯ | ಮುರಿ
ದಿಕ್ಕುವೆ ಶೈಮಿನಿಯೆಡೆಯ ||
(ಕುಮಾರವಿಜಯ)

ಇದನ್ನು ನವರೋಜು-ಏಕದಲ್ಲಿ ಹಾಡಿದರೆ ಸಂತೈಸುವ ಭಾವವನ್ನು ಚೆನ್ನಾಗಿ ಪ್ರತಿಬಿಂಬಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ಯಕ್ಷಗಾನದ ಪದ್ಯಬಂಧಗಳು ಛಂದೋಮೀಮಾಂಸೆಯನ್ನು ಆಶ್ರಯಿಸಿದೆ ಎಂದು ಹೇಳಬೇಕಾಗುತ್ತದೆ. ಯಾವ ಛಂದೋಗತಿ ಯಾವ ರೀತಿಯ ಭಾವಾಭಿವ್ಯಂಜನೆಗೆ ಯೋಗ್ಯವೆಂಬುದನ್ನು ವಿವೇಚಿಸಿ, ಅದಕ್ಕೆ ತಕ್ಕ ರಾಗತಾಳದಲ್ಲಿ ಹಾಡಿದಾಗ ಯಕ್ಷಗಾನ ಕಾವ್ಯ ಸಾರ್ಥಕವಾಗುತ್ತದೆ. ವಿವಿಧ ರೀತಿಯ ಯಕ್ಷಗಾನ ಛಂದೋಬಂಧಗಳನ್ನು ಕವಿಯು ಸಂಯೋಜಿಸುವಾಗ ಆ ಸಂದರ್ಭದ ರಸನಿರೂಪಣೆಗೆ ಅದು ಎಷ್ಟು ಹೊಂದಿಕೊಳ್ಳುತ್ತದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಛಂದೋಗತಿ ಮತ್ತು ಛಂದೋಮೀಮಾಂಸೆಯ ಸಮಪಾಕದಿಂದ ಯಕ್ಷಗಾನ ಛಂದಸ್ಸು ಬುದ್ಧಿಭಾವಗಳ ಸಮತೂಕ ಸಾಧಿಸುತ್ತದೆ ಎಂಬುದು ಮಹತ್ತ್ವದ ಅಂಶ.