ರಾಗ ಸೌರಾಷ್ಟ್ರ ತ್ರಿವುಡೆತಾಳ
ಎತ್ತ ನೋಡಿದಡತ್ತ ಕತ್ತಲೆ | ಸುತ್ತಿಕೊಳಲಂಗನೆಯರನುವೋ |
ವುತ್ತ ಬರೆ ಮನ್ಮಥನು ಕತ್ತಿಯ | ಕಿತ್ತುಕೊಂಡು            || ೧೧೪ ||

ಆ ರಜನಿಯೊಳು ವಿಜಯ ಸಹಿತ ಮು | ರಾರಿ ಪೊಗಲಾ ರತ್ನಪುರವನು |
ಊರೊಳೆಲ್ಲರು ನಿದ್ರೆಗೆಯ್ದಿರೆ | ಮಾರಹತಿಗೆ    || ೧೧೫ ||

ಕೇರಿಕೇರಿಯೊಳಲ್ಲಿಗಲ್ಲಿಗೆ | ಚಾರುಜಲರುಹ ವದನೆಯರುಗಳು |
ಕಾರುಗತ್ತಲೆಯೊಳಗೆ ಕುರುಹನು | ತೋರದಂತೆ         || ೧೧೬ ||

ಉಟ್ಟು ದಿವ್ಯಾಂಬರವ ಕಂಚುಕ | ತೊಟ್ಟು ನೂಪುರ ಕಡಗ ಕಂಕಣ |
ವಿಟ್ಟು ಸಕಲಾಭರಣವೆಲ್ಲವ | ಕಟ್ಟಿ ಜಡೆಯ     || ೧೧೭ ||

ಬಟ್ಟೆಯಲಿ ಬರಲಂಜಿ ದಾರಿಯ | ಬಿಟ್ಟು ಕಾಣಿಸದಂತೆ ಮೇಲ್‌ಮುಸು |
ಕಿಟ್ಟುಕೊಂಡಯ್ತಪ್ಪ ಚದುರೆಯ | ರೆಷ್ಟ ಪೇಳ್ವೆ  || ೧೧೮ ||

ಅಲುಗಿದರೆ ಆಭರಣ ನಿದ್ರೆಯೊಳ್ | ಮಲಗಿದವರೆಚ್ಚರುವರೆನುತಲೆ |
ತೊಲಗುತಿರ್ದರು ಮೆಲ್ಲನಂಗಜ | ನೊಲವಿನಿಂದ         || ೧೧೯ ||

ಹುಚ್ಚು ಗೊಳುತಲೆ ತಮ್ಮ ತಮ್ಮನು | ನೆಚ್ಚಿಕೊಂಡಿಹ ವಿಟರೆಡೆಗೆ ಬಹು |
ದಚ್ಯುತಾರ್ಜುನರೀಕ್ಷಿಸುತಲೀ | ಮುಚ್ಚುಮರೆಯ          || ೧೨೦ ||

ವಾರ್ಧಕ
ಹೊಳೆವ ಕದಪಿನ ವಿವಿಧ ಮನ್ನೆಯರ್ ಕನ್ನೆಯರ್ |
ತಳುವದಯ್ತಹ ಮಂದಹಾಸೆಯರ್ ಬಾಸೆಯರ್ |
ಕಲಶಕುಚಪೂರ್ಣೇಂದುವದನೆಯರ್ ಸದನೆಯರ್ ಸಕಲಸಂಪದಗಳುಳ್ಳ ||
ತೊಳಗಿ ಬೆಳಗುವ ಲೋಚನಾಂತೆಯರ್ ಕಾಂತೆಯರ್ |
ನಳಿನದಳನೇತ್ರವಯ್ಯಾರಿಯರ್ ನಾರಿಯರ್ |
ತೊಳತೊಳಗುತಮರಾಂಗನಾಮಣಿನಿಚಯದಂತೆ ಭೃಂಗನಿಭಕುಂತಳೆಯರು        || ೧೨೧ ||

ಹರಿಮಧ್ಯೆಯರ್ ಕೀರವಾಣಿಯರ್ ವೇಣಿಯರ್ |
ಉರಗನೊಲು ಕಲಹಂಸಯಾನೆಯರ್ ಗಾನೆಯರ್ |
ಗುರುಪಯೋಧರಚಾರುಯುಗಳೆಯರ್ ಗಿಗಳೆಯರ್ ಕನಕಮಣಿಸುಂದರಿಯರು ||
ತರತರದೊಳೆಸೆವ ಸರದೊತ್ತುಗಳ್ ಮುತ್ತುಗಳ್ |
ಪರಿಪರಿಯ ರತುನದಾಭರಣಗಳ್ ಕಿರಣಗಳ್ |
ಕರೆಕರೆದು ಪೇಳ್ವವೋಲಿರುತಿರಲ್ ಬರುತಿರಲ್ ಮುಸುಗಿತ್ತು ಕತ್ತಲೆಯೊಳು          || ೧೨೨ ||

ಕರಚರಣಸರ್ವಾಂಗಭಾಸೆಯರ್ ತೋಷೆಯರ್ |
ಮೆರೆವುತಿಹ ಸರ್ವ ಶೃಂಗಾರೆಯರ್ ಜಾರೆಯರ್ |
ಮುರಿಮುರಿದು ನೋಡುತ್ತಲಲ್ಲಿದಂತೆಲ್ಲದಂ ಕುಟಿಲ ಕುಂತಳೆಗೊರ್ವನ ||
ಬಿಡುಮುಡಿಗೆ ಮುಡಿದ ಪೂಮಾಲೆಯಂ ಬಾಲೆಯಂ |
ಬಡನಡುವು ಬಳುಕುತಾನಂದದಿಂ ಚಂದದಿಂ |
ಅಡಿಗಡಿಗೆ ಕರಗಿ ಬೆಂಡಾಗುವಳ್ ಬಾಗುವಳ್ ಹಲವ ಚಿತ್ತದೊಳೆಣಿಸುವಳ್           || ೧೨೩ ||

ಒಡೆಯನೊಡನೊಡನೆ ಮೊಗವಧ್ವಾನಕ್ಕೆ ಮನವುಕ್ಕೆ |
ಅಡಿಯಿಡುತ ಬೆದರಿ ಬಹಳಾಚೆಯಿಂ ಈಚೆಯಿಂ |
ಕಡುಬೆಡಗಿ ನಿರ್ಭಯವ ತೋರುವಳ್ ಜಾರುವಳ್ ಕಾದಿರುವ ಕಾಂತನೆಡೆಗೆ ||
ಘಲ್ಲುಘಲ್ಲೆಂಬ ಕಿರುಗೆಜ್ಜೆಯಿಂ ಹೆಜ್ಜೆಯಿಂ |
ಮೆಲ್ಲನಡಿಯಿಡುತಯ್ದು ಉಡುಗೆಯಂ ತೊಡುಗೆಯಿಂ |
ನಿಲ್ಲುನಿಲ್ಲುತ ಚಮತ್ಕೃತಿಯನುಂ ಗತಿಯನುಂ ಸರಿಗಾಣೆನೆಂಬಂತಿರೆ       || ೧೨೪ ||

ರಾಗ ನೀಲಾಂಬರಿ ಆದಿತಾಳ
ಬಾರನೇತಕೆ ನಲ್ಲ | ಮಿರಿ ನಡೆದುದಿಲ್ಲ |
ಮಾರ ತಾನುಳಿಸನಲ್ಲ | ಮಹಾಪರಾಧವಾಯ್ತೆ            || ೧೨೫ ||

ನಡುವಿರುಳಿಗೆ ಬಂದೆ | ನಡತೆಯೆಂಬುದಕಿಂದೆ |
ತಡೆಯಬಹುದೆ ನೀನಿಂದೆ | ಮಹಾಪರಾಧವಾಯ್ತೆ        || ೧೨೬ ||

ನೀತಿ ತಪ್ಪಿರಲಿಲ್ಲ | ಪ್ರೀತಿಯು ಕೆಡಲಿಲ್ಲ |
ಯಾತಕೊ ಶಿವನೆ ಬಲ್ಲ | ಮಹಾಪರಾಧವಯ್ತೆ || ೧೨೭ ||

ಸರಸಿಜಾಂಬಕಿ ನೀನು | ಮರುಗುವ ಪರಿಯೇನು |
ಮರೆಯದಿಲ್ಲಿಗೆ ಬಂದೆನು | ಮಹಾಪರಾಧವಾಯ್ತೆ         || ೧೨೮ ||

ಪನ್ನಗನಿಭವೇಣಿ | ಎನ್ನ ಮೋಹದ ಕಣಿ |
ಮನ್ನಿಸೆ ತರುಣೀಮಣಿ | ಮಹಾಪರಾಧವಾಯ್ತೆ            || ೧೨೯ ||

ಹರುಷದೊಳಪ್ಪುತ | ಗುರುಕುಚಕೊತ್ತುತ |
ಸರಸಚುಂಬನಗೆಯ್ವುತ | ಮಹಾಪರಾಧವಾಯ್ತೆ          || ೧೩೦ ||

ವಚನ
ಇಂತಿರಲಾಸಮಯದಿ ಸೋಮೋದಯವಾಯ್ತು ರಾತ್ರಿಯೊಳಂ ಈ ಮಹಾಕಾರ್ಯಕ್ಕೊದಗಿದ ವಿಟರೋಳ್ ಮತ್ತಾ ಕಾಮಿನಿಯರ್ ಪೇಳ್ದರ್ ನಮ್ರತಿಯಿಂ –

ರಾಗ ಕಾಂಭೋಜಿ ಅಷ್ಟತಾಳ
ಬೆಳಗಾಗ ಬಂತು ಪೋಗುವೆನು | ಹೊತ್ತು |
ಗಳೆಯದೆ ಕಳುಹಿಸೊ ಕಾಯ್ದು ಮಾನವನು || ಬೆಳಗಾಗ ಬಂತು || ಪ ||

ಅಕ್ಕರಿಂದಪ್ಪಲಿಲ್ಲಿಲ್ಲಿ ಸಣ್ಣ | ಮಕ್ಕಳಳುವರೇನೋ ಕಾಣದಿನ್ನಲ್ಲಿ |
ಚಿಕ್ಕ ಬುದ್ಧಿಯ ಮಾಡದೆನ್ನ | ಮಂದಿ |
ರಕ್ಕೆ ಕಳುಹಿಸಯ್ಯ ರೂಪುಸಂಪನ್ನ || ಬೆಳಗಾಗ ಬಂತು            || ೧೩೧ ||

ಅತ್ತೆ ಕಂಡರೆ ಬೈವಳೇನೊ | ಮನೆ | ವತ್ತಲಿ ತಳವಾರಕಟ್ಟಿಯು ಕಾಣೊ ||
ಚಿತ್ತ ಬೆದರಿಬಹುದೆನಗೆ | ಬಂದು |
ಹೊತ್ತು ಬಹಳವಾಯಿತರುಹುವೆ ನಿನಗೆ || ಬೆಳಗಾಗ ಬಂತು      || ೧೩೨ ||

ಗಂಡನ ಮರೆಸಿ ಬಂದಿಹೆನು | ಆತ | ಕಂಡರೆ ಕೋಪದೊಳುಳಿಸ ಪ್ರಾಣವನು ||
ಡೆಂಡೆಣಿಸುತ ಕಯ್ಯ ಮುಗಿವೆ | ಎನ್ನ |
ಭಂಡು ಮಾಡದೆ ಬಿಟ್ಟರನುದಿನ ಬರುವೆ || ಬೆಳಗಾಗ ಬಂತು     || ೧೩೩ ||

ದ್ವಿಪದಿ
ಇಂತು ನಾನಾವಿಧಗಳಿಂದಲಾ ಪುರದಿ |
ಚಿಂತಿತಾರ್ಥವ ಸಲಿಸಿಕೊಳುತ ತಾಮಸದಿ    || ೧೩೪ ||

ನಿಟಿಲವನ್ನೇವರಿಸುತಂಗುಲಿಯ ತುದಿಯ |
ತುಟಿವಿಡಿದು ನೋಡುತ್ತ ಕುಚಯುಗಳದೆಡೆಯ            || ೧೩೫ ||

ಮಿರಿದ ನಖಕ್ಷತಕೆ ವಿಟನ ಬೈವುತ್ತ |
ಯಾರು ಕಾಣದವೋಲು ಬರುತಿರಲು ಮತ್ತಾ  || ೧೩೬ ||

ಮಣಿ ಮಣಿದು ವೃತ್ತಕುಚತಟವನೀಕ್ಷಿಸುತ |
ಮುನಿಮುನಿದು ನಾಳೆ ಬಹೆ ತಾಳು ತಾಳೆನುತ          || ೧೩೭ ||

ಕಟಿಗೆ ನಿರಿಯಂ ಸೇರಿಸುತ್ತ ವಿನಯದೊಳು |
ಕುಟಿಲ ಕುಂತಳೆಯರಾಲಯಕೆ ಬರುತಿರಲು   || ೧೩೮ ||

ಕೆಲರು ಸಂಯೋಗದಿಂ ಕೆಲರು ವಿರಹಗಳಿಂ |
ಕೆಲರು ಸತ್ಕಥೆಗಳಿಂ ಕೆಲರು ಹಾಸ್ಯಗಳಿಂ      || ೧೩೯ ||

ಕೆಲರು ಸಲ್ಲಾಪದಿಂ ಕೆಲರ್ವಿರೋಧಿಗಳಿಂ |
ಕೆಲಬರಾನಂದದಿಂ ಕೆಲರು ಶಾಸ್ತ್ರಂಗಳಿಂ      || ೧೪೦ ||

ಬಿಗಿಯಪ್ಪಿಕೊಂಡಿರ್ದ ನಾರಿಯರೆದೆಗಳ್ |
ಧಿಗಿಲೆಂಬವೋಲ್ ಕೂಗೆ ಕೂಡೆ ಕುಕ್ಕುಟಗಳ್ || ೧೪೧ ||

ಸೂತನಿಗೆ ಕಾಲಿಲ್ಲ ರಥವ ನಡೆಸಲ್ಕೆ |
ಆ ತುರಗವೇಳುಜೋಡಾಗಿ ಮಾಡಲ್ಕೆ          || ೧೪೨ ||

ಒಂದು ಗಾಲಿಯು ರಥಕೆ ಲೋಕಯಾತ್ರೆಯನು |
ಮುಂದೆತಾನೊಲ್ಲದಡೆ ತೀರದೆಂಬುದನು       || ೧೪೩ ||

ಕಾಲವಶವನು ಮಿರಬಹುದೆ ಎಂಬುದನು |
ಮೂಲೋಕಕೆಚ್ಚರಿಸುವಂತೆ ಭಾಸ್ಕರನು        || ೧೪೪ ||

ಮೂಡಿದನು ಪೂರ್ವಾಚಲಾದ್ರಿಶಿಖರದಲಿ |
ವೋಡಿತು ತಮಸ್ತೋಮ ಕೂಡೆ ನಿಮಿಷದಲಿ   || ೧೪೫ ||

ವಾರ್ಧಕ
ಇತ್ತಲುದಯಂ ಗೆಯ್ಯೆ ರವಿ ಮಯೂರಧ್ವಜಂ |
ಅತ್ತ ಸಂಧ್ಯಾವಿಧಿಯನನುಕರಿಸಿಕೊಂಡು ಪುರು |
ಷೋತ್ತಮನ ದರುಶನಕೆ ಬಹ ಗಮನದಿಂದ ನಿಜಸುತ ತನ್ನ ಮಂತ್ರಿಸಹಿತ ||
ಚಿತ್ತಹರುಷಿತನಾಗಿ ಕುಳ್ಳಿರಲ್ಕನಿತರೊಳ್ |
ಚಿತ್ತಜನ ಪಿತ ವೃದ್ಧಭೂಸುರಾಕಾರದಿಂ |
ಪತ್ತಿಸೋರ್ವಂ ಬಾಲಶಿಷ್ಯಸಹಿತಯ್ತಂದು ಸ್ವಸ್ತ್ಯಸ್ತು ನಿಮಗೆಂದನು           || ೧೪೬ ||

ರಾಗ ನೀಲಾಂಬರಿ ರೂಪಕತಾಳ
ಮತ್ತಲೆ ಧರಣೀಶಶಾರ್ದೂಲ ನಿನಗಾಗ |
ಲುತ್ತರೋತ್ತರವೆನೆ ನೃಪನು ||
ಚಿತ್ತದೊಳ್ ಬೆದರುತಲಿದಿರೆದ್ದು ವಂದಿಸು |
ತತ್ಯಾಸನರ್ಘ್ಯೋಪಚರಿಸಿ || ೧೪೭ ||

ಎಂದನು ವಂದನೆಯಿಂದ ಮೊದಲು ಸ್ವಸ್ತಿ |
ಎಂದರೆ ವಿಪ್ರ ಪ್ರಾಣಿಯನು ||
ಕೊಂದನಲ್ಲದೆ ಶಾಪವೇತಕಂಜಿದರೆ ಹೇ |
ಳೆಂದಡಿಂತೆಂದನಾ ದ್ವಿಜನು           || ೧೪೮ ||

ಪರಸಲಾಗದು ನಮಸ್ಕಾರದಿಂ ಮುಂಚೆ ಭೂ |
ಸುರನ್ಯಾಯಯೆಂಬುದು ಸರಿಯು ||
ಪಿರಿದು ಸಂಕಟದಿಂದ ಬಂದಾ ನಿಮಿತ್ತದೊ |
ಳರಸಗೆ ಬಿನ್ನಪಗೆಯ್ದು       || ೧೪೯ ||

ಸರಸದೆಯಿರುವಾತ ಮುಂಚಿತವಾಗಿಯೆ |
ಧರಣೀಶವಂದಿತನಾಗಿ ||
ಹರುಷದಿಂದೀಗಾಶೀರ್ವಾದ ಮಾಡಲು |
ದುರಿತಮೇನಿದಕವನೀಶ    || ೧೫೦ ||

ಕೋಪಿಸಬೇಡ ನೀ ಮಹದಾನವೆಸಗಿಹ |
ಭೂಪನೆನುತ ಶಿಷ್ಯ ಸಹಿತ ||
ಈ ಪುಣ್ಯಕ್ರತುಶಾಲೆಯೆಡೆಗೆ ಬಂದಿಹೆನೆಂಬ |
ತಾಪಸಗಿಂತೆಂದನರಸ     || ೧೫೧ ||

ಹೇ ವಿಪ್ರ ನಿನಗೇತರೊಳಗಾಸೆಯಾಗಿಹು |
ದೀವೆನನೃತವಿಲ್ಲಾ ನುಡಿಗೆ ||
ಯಾವುದರ್ತಿಯು ಪೇಳೆನಲ್ಕೆ ವೃತ್ತಾಂತವ |
ಭೂವಿಬುಧನು ವಿವರಿಸಿದ   || ೧೫೨ ||

ರಾಗ ಶಂಕರಾಭರಣ ಅಷ್ಟತಾಳ
ಧರಣಿಪತಿಯೆ ಕೇಳು ಪೇಳ್ವೆ | ಭೂಮಿಪಾಲ | ಧರ್ಮ |
ಪುರ ವಿರೋಧವನ್ನು ಪೇಳ್ವೆ | ಭೂಮಿಪಾಲ ||
ತರಳ ಕೃಷ್ಣಶರ್ಮನೆಂಬ | ಭೂಮಿಪಾಲ | ಓರ್ವ |
ನಿರಲಾತನ ವೈವಾಹಕ್ಕೆ | ಭೂಮಿಪಾಲ        || ೧೫೩ ||

ಲಾಲಿಸೈ ಇನ್ನೊಂದಾಶ್ಚರ್ಯ | ಭೂಮಿಪಾಲ | ಸತ್ಯ |
ಶೀಲನಲಿ ಒಳ್ಳಿತೊಂದ | ಭೂಮಿಪಾಲ ||
ಬಾಲಕಿಯ ವೈವಾಹವಾಗಿ | ಭೂಮಿಪಾಲ | ಎನ್ನ |
ಬಾಲಕನ ಕೂಡಿಕೊಂಡು | ಭೂಮಿಪಾಲ        || ೧೫೪ ||

ಬರುವ ಮಾರ್ಗದಲ್ಲಿ ಒಂದು | ಭೂಮಿಪಾಲ | ಸಿಂಹ |
ತರಳನನ್ನು ಪಿಡಿದುದಯ್ಯ | ಭೂಮಿಪಾಲ ||
ಎರಗಿದತಿಶಯಕ್ಕೆ ಬೆದರಿ | ಭೂಮಿಪಾಲ | ನೃಕೇ |
ಸರಿಯ ಸ್ಮರಣೆ ಬಿಡದಿದ್ದೆ ನಾ | ಭೂಮಿಪಾಲ || ೧೫೫ ||

ಗಾಸಿಮಾಡದಾಕೇಸರಿಯು | ಭೂಮಿಪಾಲ | ಅತಿ |
ಹಾಸದಿಂದ ಪೇಳ್ದುದಿನಿತು | ಭೂಮಿಪಾಲ |
ಭೂಸುರ ಕೇಳ್ ನಿನಗೆ ಸುತನ | ಭೂಮಿಪಾಲ || ಅಭಿ |
ಲಾಷೆ ಬೇಡ ಪೋಗೆಂದುದು | ಭೂಮಿಪಾಲ   || ೧೫೬ ||

ಅತಿ ದುಃಖಿತನಾಗಿ ಪೇಳ್ವೆ | ಭೂಮಿಪಾಲ | ಮುಂದೆ |
ಗತಿಯ ಕಾಣಿಸಲ್ಕಿಂತೆಂದೆ | ಭೂಮಿಪಾಲ ||
ಸುತನ ದಯದಿ ಬಿಟ್ಟು ಕಳುಹಿ | ಭೂಮಿಪಾಲ | ಮೃಗ |
ಪತಿಯೆ ತನ್ನ ಭಕ್ಷಿಸೆಂದೆ | ಭೂಮಿಪಾಲ        || ೧೫೭ ||

ಮರುಳು ಮಹೀಸುರನೆ ಕೇಳು | ಭೂಮಿಪಾಲ | ತಾನು |
ಮರಣವ ಬಿಟ್ಟೆನೆಂಬುವಗೆ | ಭೂಮಿಪಾಲ ||
ಬರುವುದುಂಟೆ ಕಂಟಕವು | ಭೂಮಿಪಾಲ | ಎಂದು |
ಕರಣದೊಳಿಂತೆಂದುದಯ್ಯ | ಭೂಮಿಪಾಲ     || ೧೫೮ ||

ಅಳಬೇಡ ವ್ಯರ್ಥದೊಳೆಂದು | ಭೂಮಿಪಾಲ | ನಿನ್ನ |
ಬಳಿಗೆ ಬೀಳುಕೊಟ್ಟುದಯ್ಯ | ಭೂಮಿಪಾಲ ||
ಕಳುಹುದೆನ್ನ ಶಿಷ್ಯಸಹಿತ ಭೂಮಿಪಾಲ | ಮನ |
ಬಳಲಿ ಬೆದರುತಲಿ ಬಂದೆ | ಭೂಮಿಪಾಲ      || ೧೫೯ ||

ರಾಗ ಮಾರವಿ ಏಕತಾಳ
ಭೂಸುರನೆಂದುದ ಕೇಳ್ದೆಂದನು ಬಳಿ | ಕಾಶಿಖಿಕೇತನನು ||
ಕೇಸರಿಗಾಹ ಪ್ರಯೋಜನವೇನದ | ನಾ ಸಲಿಸುವೆನೆಂದ           || ೧೬೦ ||

ಜನಪ ನೀ ಕೇಳದನುಸಿರಲು ನಿನ್ನಯ | ಮನಸಿಗೊಡಂಬಡದು ||
ತನಯನು ಸಾಯುವನೆಂಬುದಕೋಸುಗ | ಎನಬೇಕಾಗಿಹುದು   || ೧೬೧ ||

ತನುಸಂಕಟವಹುದಾದುದಾಗಲಿ ಯೆನ್ನ | ತನಯನ ಬಿಟ್ಟೆನ್ನ ||
ತನು ಮೆಲು ಸಿಂಹವೆ ಪುತ್ರನ ಮೇಲ್ ದಯ | ಮನಸಾಗೆಂದೆಡೆಯ        || ೧೬೨ ||

ನೀನತಿ ತಪದಿಂದೊಣಗಿಯೆ ಬಡಮುದಿ | ಗೂನಿದು ಸ್ಥಿರವಲ್ಲ ||
ತಾನೊಲ್ಲೆನುಯೆನೆ ಚಿಂತಿಸಿ ಮುಂದಿದ | ಕೇನುಪಾಯವ ಗೆಯ್ವೆ || ೧೬೩ ||

ಎನುತಿರೆ ತನ್ನನು ಕರೆದತಿ ಕರುಣದೊ | ಳಿನಿತೆಂದುದು ಸಿಂಹ ||
ಜನಪತಿಯಾದ ಮಯೂರಧ್ವಜನೆಡೆ | ಗನುಮಾನಿಸದಯ್ದಿ         || ೧೬೪ ||

ಈ ಮಗನಾಸೆಯು ನಿನಗಿರೆ ಬೇಗದೊ | ಳಾ ಮಹೀವಲ್ಲಭನ ||
ಕೋಮಲ ಮೈಭಾಗವ ತಂದೀಯೆನೆ | ನಾ ಮನದಲಿ ನೋಡಿ    || ೧೬೫ ||

ಎತ್ತಣ ಮಾತಿದು ದೇಹಾರ್ಧವ ತೆಗೆ | ದಿತ್ತಪರ್ ಯಾರೆನಲು ||
ಮತ್ತದಕುಪಮೆಯ ವಿವರಿಸಿ ನಿನ್ನಯ | ಹತ್ತಿರೆ ಕಳುಹಿದುದು       || ೧೬೬ ||

ಸುತ್ಯಾಗಿಯು ತಾನಾಡಿದ ಮಾತಿಗೆ | ಪ್ರತ್ಯುತ್ತರವಿಲ್ಲ ||
ನಿತ್ಯದಿ ಪರರುಪಕಾರಿಯು ಪೋಗೆನೆ | ಸತ್ಯವೆನುತ ಬಂದೆ        || ೧೬೭ ||

ರಾಗ ಕೇದಾರಗೌಳ ಅಷ್ಟತಾಳ
ಹಿಂದೆ ಭೂಸುರನೋರ್ವನು | ಹತಾಸುತ | ನೆಂದಡೆ ರಾಘವನು ||
ಅಂದು ರಕ್ಷಿಸಲಿಲ್ಲವೆ | ರಾಘವಗೆ ನೀ | ನಿಂದು ಸಾಟಿಯಲ್ಲವೆ     || ೧೬೮ ||

ಕೇಸರಿ ಗಾತ್ಮಜನು | ಆ ಸಿಂಹನೆಂದೀ | ಯಾಸವ ಪೇಳಿದನು ||
ಆ ಸಿಂಹನಿಗೆ ದೇಹವ | ಇತ್ತರೆ ನೀನೀ | ಗಾ ಪುತ್ರ ತನಗುಳಿವ   || ೧೬೯ ||

ಎಂಬ ಕೃಪೆಯನು ಮಾಡು | ಮತ್ತಲ್ಲಾರು | ನಂಬರ್ ಬೇಡೆಂದು ಬಿಡು ||
ಹಂಬಲಿಸದೆ ತನಗೆ | ಕ್ಷಿಪ್ರದಲಿ ಪೇ | ಳೆಂಬ ಮಹೀಸುರಗೆ         || ೧೭೦ ||

ಪಾರ್ಥಿವತಿಲಕ ತಾನು | ನೋಡಿದನು ನಿ | ರರ್ಥಕ ತನುವಿದನು ||
ವ್ಯರ್ಥಗೆಯ್ಸಿದರೇನಿದು | ಕೊಟ್ಟರೆ ಸುಪ್ರೀ | ತ್ಯರ್ಥ ಶ್ರೀಹರಿಗಹುದು         || ೧೭೧ ||

ಏಕೆ ಚಿಂತಿಪೆ ವಿಪ್ರನೆ | ಲೋಕೋದ್ಧಾರ | ಕೀ ಕಾಯವನು ಕೊಡನೆ ||
ಅ ಕೇಸರಿಯು ತಿನ್ನಲಿ | ಮುಂದಕೆ ಬಹು | ಪ್ರಖ್ಯಾತಿಯು ಬರಲಿ  || ೧೭೨ ||

ವಾರ್ಧಕ
ಅರಿದರ್ಧ ದೇಹಮಂ ಕೊಡುವೆ ನಿನಗೆಂದು ಭೂ |
ಸುರಗಭಯವಿತ್ತು ಗಂಗಾತೋಯಮಂ ತರಿಸಿ |
ಹರುಷದಿಂ ಮಜ್ಜನವ ಗೆಯ್ದು ಸಾಲಗ್ರಾಮತೀರ್ಥಮಂ ಕೈಗೊಂಡನು ||
ತರುಣತುಲಸಿಯ ದಂಡಮಾಲಿಕೆಯನಾಂತು ನಿಜ |
ಕೊರಳೊಳಗೆ ಬಳಿಕ ಮುಖ ಮಂಟಪಕೆ ಬಂದಲ್ಲಿ |
ನೆರೆದಿಹ ಸಮೂಹಕಾನಂದದಿಂದೆರಗಿ ಸಾಷ್ಟಾಂಗದಿಂ ವಂದಿಸಿದನು        || ೧೭೩ ||