ಶಾರ್ದೂಲವಿಕ್ರೀಡಿತಂ
ಶ್ರೀ ಲಕ್ಷ್ಮೀವದನಾಬ್ಜಚಂಚಲತನುಂ eನಪ್ರದಂ ಕೇವಲಂ
ಲೋಲೈಶ್ವರ್ಯಸಮಸ್ತದೇವನಿಲಯಂ ಅಶ್ರಾಂತವಂದೇಶ್ರಿತಾ |
ಗಾಲಂಬಾನ್ವಿತಯುಗ್ಮಪಾದಭಜನಂ ಬ್ರೂಯಾಮಿ ತುಭ್ಯನ್ನಮಃ
ಸಾಲೋಕ್ಯಾಭ್ಯುದಯಂ ಪರಾತ್ಪರನಿತಾಂತಾಮೋಘಸಂತೋಷಮಂ ||  ||೧||

ರಾಗ ನಾಟಿ ಝಂಪೆತಾಳ
ಶರಣು ಗಿರಿಜಾಪುತ್ರ ಶರಣು ಪರಮಪವಿತ್ರ |
ಶರಣು ಪುಣ್ಯಚರಿತ್ರ ಶರಣು ಹರಿಮಿತ್ರ || ಪ ||

ಶಿತಿಕಂಠಸುಕುಮಾರ ಶ್ರುತಿಪುರಾಣವಿದೂರ |
ಸತತ ನಂಬಿದ ಭಕ್ತವಿತತಿಯಾಸಕ್ತ ||
ಸತಿವಿಹೀನ ಸುಶ್ರಾಂತಪ್ರತಿಮ ಬಲಗುಣವಂತ |
ನುತಪದಾಂಬುಜವಿಘ್ನ ದುರಿತಾಹಭಗ್ನ          || ೨ ||

ಭುಜಗಭೂಷಣದೇವ ಅಜವಿಬುಧಮುನಿಸೇವ |
ತ್ರಿಜಗಪಾವನನಾಮ ಸುಜನಜನ ಪ್ರೇಮ ||
ಭುಜಚತುಷ್ಕಕಧಾರಿ ಗಜವಕ್ತ್ರ ಭವಹಾರಿ |
ಭಜಕಕುಲಗೀರ್ವಾಣ ಕುಜನರ ಕೃಪಾಣ        || ೩ ||

ಒಡಲು ಪರ್ವತತೋರ ದೃಢಭಕ್ತಭವದೂರ |
ಕಡುಚೆಲುವ ಗಣನಾಥ ಪೊಡವಿಪ್ರಖ್ಯಾತ ||
ಬಿಡದೆ ನಂಬಿದೆ ನಿನ್ನ ಕಡು ದಯದಿ ಸಲಹೆನ್ನ |
ಕೊಡು ಮತಿಯ ವಿಘ್ನೇಶ ತಡೆಯದಘನಾಶ   || ೪ ||

ವಾರ್ಧಕ
ಜಯ ನಮೋ ರಜತಾದ್ರಿವಾಸಾಯ ಈಶಾಯ |
ಜಯ ನಮೋ ವಿಷ್ಣು ವನಮಾಲಾಯ ನೀಲಾಯ |
ಜಯ ನಮೋ ಭವದುರಿತ ಭಂಗಾಯ ಲಿಂಗಾಯ ಜಯ ಭುಜಗಭೂಷಣಾಯ ||
ಜಯ ನಮೋ ವೈಕುಂಠಸದನಾಯ ಮದನಾಯ |
ಜಯ ನಮೋ ಸುಪ್ರೇಮ ರಾಮಾಯ ಭೀಮಾಯ |
ಜಯ ನಮೋ ವರದಿವ್ಯಕಾಂತಾಯ ಶಾಂತಾಯ ಜಯ ಜಯ ತ್ರಿವಿಕ್ರಮಾಯ      || ೫ ||

ರಾಗ ತೋಡಿ ಅಷ್ಟತಾಳ
ಈಶ ವಂದಿತಜನಪೋಷ ಕರುಣನಿಧೆ | ರಕ್ಷಿಸೆನ್ನ |
ಶೇಷಶಯನ ಲಕ್ಷ್ಮೀಶ ದಯಾಂಬುಧಿ | ರಕ್ಷಿಸೆನ್ನ ||
ದೋಷರಹಿತ ಜಗದೀಶ ತ್ರಿಪುರಹರ | ರಕ್ಷಿಸೆನ್ನ |
ನಾಶರಹಿತ ನೀಲಭೂಷ ದುರಿತಹರ | ರಕ್ಷಿಸೆನ್ನ           || ೬ ||

ಮಂದರ ಧರ ಮುನಿವೃಂದವಂದಿತಪದ | ರಕ್ಷಿಸೆನ್ನ |
ನಂದಿವಾಹನ ನಿತ್ಯಾನಂದ ಸದಾಶಿವ | ರಕ್ಷಿಸೆನ್ನ ||
ಸಿಂಧುಶಯನ ಅರವಿಂದದಳಾಂಬಕ | ರಕ್ಷಿಸೆನ್ನ |
ಇಂದುಶೇಖರ ಭಕ್ತಬಂಧು ತ್ರಿಯಂಬಕ | ರಕ್ಷಿಸೆನ್ನ       || ೭ ||

ವೇದಗೋಚರ ನಾರದಾದಿವಂದಿತ ಮೃಡ | ರಕ್ಷಿಸೆನ್ನ |
ಕ್ರೋಧವರ್ಜಿತ ಗಿರಿಜಾಧವ ದೇವೇಶ | ರಕ್ಷಿಸೆನ್ನ ||
ಸಾಧುಸುಶೀಲ ದಾಮೋದರ ಕೇಶವ | ರಕ್ಷಿಸೆನ್ನ |
ಆದಿ ಮಧ್ಯಾಂತರಹಿತ ಪುಂಡರೀಕಾಕ್ಷ | ರಕ್ಷಿಸೆನ್ನ        || ೮ ||

ವಾರ್ಧಕ
ಈಶನಂ ನಮಿತಜನಪೋಷನಂ ಪನ್ನಗವಿ |
ಭೂಷನಂ ತ್ರೈಪುರ ವಿನಾಶನಂ ದ್ಯುಮಣಿಸಂ |
ಕಾಶನಂ ನಿಖಿಳದೇವೇಶನಂ ಭಜಿಪೆ ಪರಮೇಶನಂ ಮನ್ಮನದೊಳು ||
ವೀರನಂ ವಿನಮಿತೋದ್ಧಾರನಂ ನಿರ್ಗುಣಾ |
ಕಾರನಂ ಜಗತಿಗಾಧಾರನಂ ಕಲ್ಮಷವಿ |
ದೂರನಂ ದನುಜಸಂಹಾರನಂ ವಿಕ್ರಮೋದ್ಧಾರನಂ ಮತಿಯನಿಬರಿಗೆ      ||೯||

ಸ್ಮರಿಸುವೆನು ಮುದದಿ ಗಿರಿಜಾತೆಯಂ ಮಾತೆಯಂ |
ಸುರಮಖವಿನಾಶನನ ಕಾಂತೆಯಂ ಶಾಂತೆಯಂ
ದುರುಳಶುಂಭ ನಿಶುಂಭವೈರಿಯಂ ಗೌರಿಯಂ ಚರಣಕಭಿವಂದಿಸುವೆನು
ಸುರುಚಿರಾಲಂಕಾರ ಭೂಷಿತೆಯ ತೋಷಿತೆಯ |
ಶರಣರಿಷ್ಟಾರ್ಥಪ್ರದಾಯಕಿಯ ನಾಯಕಿಯ |
ಪರಮಸತ್ಯಾಚಾರಮಂದಿರೆಯ ಇಂದಿರೆಯ ಭಜಿಪೆ ನಾ ಮನ್ಮನದೊಳು  || ೧೦ ||

ಭಾಮಿನಿ
ಸರಸಿಜಾಸನನಂಘ್ರಿಕಮಲವ |
ಸ್ಮರಿಸಿ ವರಶಾರದೆಯನರ್ಚಿಸಿ |
ಪರಮಭಕ್ತಿಯೊಳನಿಮಿಷರ ಕೊಂಡಾಡಿ ಮನದೊಳಗೆ ||
ಗುರುಹಿರಿಯರನು ಭಜಿಸಿ ರತ್ನಾ |
ಪುರದ ಮಧ್ಯದಿ ಮೆರೆವ ಕಾಮಿತ |
ವರದ ಶ್ರೀವೇಂಕಟನ ಪದಯುಗಳವನು ಭಾವಿಸುತ    || ೧೧ ||

ದ್ವಿಪದಿ
ಇಂತು ಗುರುಮೊದಲಾದ ಇಷ್ಟದೇವತೆಯ |
ಸಂತಸದಿ ಕೊಂಡಾಡಿ ಬೇಡಿ ಸನ್ಮತಿಯ       || ೧೨ ||

ಸರ್ವಋಷಿಗಳ ಪದಕೆ ಮಣಿದು ಭಕ್ತಿಯಲಿ |
ಪೂರ್ವಸತ್ಕವಿಗಳ್ಗೆ ನಮಿಸಿ ಹರುಷದಲಿ         || ೧೩ ||

ಭಾರತಾಮೃತದಿ ಹಯಮೇಧ ಪರ್ವದಲಿ |
ವೀರತಾಮ್ರಧ್ವಜನ ಕೂಡೆ ಸಮರದಲಿ           || ೧೪ ||

ನರನು ಸೆಣಸಿದ ಕಥೆಯ ಯಕ್ಷಗಾನದಲಿ |
ವಿರಚಿಸೆನುತಪ್ಪಣೆಯನೊಂದು ದಿವಸದಲಿ     || ೧೫ ||

ಮಮ ಪುರೋಹಿತನಿತ್ತನೀ ಪ್ರಬಂಧವನು |
ನಮಿಸಿ ಶ್ರೀವೆಂಕಟಗೆ ನಿರ್ಮಿಸಿದೆನಿದನು       || ೧೬ ||

ವಾರ್ಧಕ
ಕರುಣಾಬ್ಧಿ ವೇಂಕಟೇಶ್ವರನೆನ್ನ ಜಿಹ್ವೆಯೋಳ್ |
ಒರೆಸಿ ತಾನೊರೆದಂತೆ ಪೇಳ್ವೆನಿದ ಕರುಣದಿಂ |
ದೊರೆದು ತಿಳಿದವನಲ್ಲ ಪ್ರಾಸ ಲಘುಗಣ ಸುರಾಸುರಗಳೆಂಬುದನೊಂದನು ||
ಕರುಣದಿಂ ಸತ್ಕವಿಗಳಿದರ ತಪ್ಪನು ತಿದ್ದಿ
ಧರಣಿಯೊಳ್ ಮೆರೆಸಬೇಕೆಂದು ಬಿನ್ನಪಗೆಯ್ವ |
ವರಪುತ್ರರಪರಾಧಮಂ ಪಿತನು ಕ್ಷಮಿಸುವಂದದೊಳಿದಂ ಕೇಳ್ವುದೊಲಿದು            || ೧೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕುಮುದಸಖವಂಶದೊಳಗುದಿಸಿದ | ಅಮಿತಬಲ ಜನಮೇಜಯಂಗಾ |
ಸುಮತಿ ಜೈಮಿನಿಮುನಿಕುಲೇಶನು | ಮಮತೆಯಿಂದ   || ೧೮ ||

ವರಮಹಾ ಭಾರತಪುರಾಣದಿ | ತುರಗಮೇಧಾಧ್ವರದ ಪರ್ವವ |
ನರುಹುತಿರಲಿಂತೆಂದನಂದಾ | ಧರಣಿಪತಿಯು           || ೧೯ ||

ಕಡುಪರಾಕ್ರಮಿ ವಿಜಯನಶ್ವವ | ತಡೆದು ತಾಮ್ರಧ್ವಜನು ಮುಂದಕೆ |
ಬಿಡದೆ ಸತ್ತ್ವದಿ ಕಟ್ಟಿ ಕದನದಿ | ಕಡುಹ ಮೆರೆದ            || ೨೦ ||

ವಿಸ್ತರಿಪುದಾ ಕಥೆಯನೆನುತಲೆ | ಹಸ್ತಿನಗರಾಧಿಪನು ತಾ ನಿಜ |
ಮಸ್ತಕವ ಚಾಚಿರಲು ಚರಣಕೆ | ಹಸ್ತದಿಂದ     || ೨೧ ||

ಎತ್ತಿ ಹರುಷದೊಳಪ್ಪಿ ಕೊಂಡಾ | ಡುತ್ತ ಸತ್ಕಥನವನು ವರಮುನಿ |
ಪೋತ್ತಮನು ಪೇಳ್ತೊಡಗಿದನು ಪ್ರಿಯ | ಚಿತ್ತನಾಗಿ       || ೨೨ ||

ವಾರ್ಧಕ
ಸೋಮಕುಲಸಂಜಾತ ಲಾಲಿಸೈ ಕಥನವನು |
ಭೂಮಿಪಾಗ್ರಣಿ ಯುಧಿಷ್ಠಿರನು ತಮ್ಮಂದಿರೊಳ್ |
ಪ್ರೇಮದಿಂದಿರುತೊಂದು ದಿನ ಚಿಂತಿಸುತ್ತಿರ್ದ ಬಂಧುಜನಹತ್ಯವೆಂಬ ||
ಆ ಮಹತ್ತಾದಂತ ದುರಿತ ಲೇಪಿಸಿತೆಂದು |
ತಾ ಮರುಗಿ ಚಿಂತಿಸುವ ಸಮಯದೊಳಗಲ್ಲಿಗೆ ಮ |
ಹಾಮುನಿಪನಾದ ವೇದವ್ಯಾಸಮುನಿಪತಿಯು ತೋಷದಿಂ ನಡೆತಂದನು  || ೨೩ ||

ರಾಗ ಕೇದಾರಗೌಳ ಅಷ್ಟತಾಳ
ಬಂದ ವೇದವ್ಯಾಸರನು ಕಾಣುತನುಜಾತ | ರಿಂದ ಯುಧಿಷ್ಠಿರನು ||
ವಂದಿಸಿ ಭಕ್ತಿಯೊಳರ್ಚಿಸಲಾಗ ಇಂ | ತೆಂದನು ಮುನಿನಾಥನು  || ೨೪ ||

ವಸುಮತಿಪತಿ ನಿನ್ನ ವದನದ ಕಾಂತಿಯು | ಹಸಗೆಟ್ಟ ಬಗೆಯದೇನು ||
ಉಸಿರೆಂದು ಕಾರುಣ್ಯದಿಂದವನೀಶನ | ಬೆಸಗೊಳಲಿಂತೆಂದನು  || ೨೫ ||

ಭೂತಳದೊಳಗೇಕೆ ಒಡಲಿದು ವಿಧಿ ಮುನಿ | ನಾಥನೆ ಚಿತ್ತವಿಸು ||
ಖ್ಯಾತಿಯಿಂದಲೆ ಗುರುಗೋತ್ರಜರನು ಕೊಂದ | ಪಾತಕಕ್ಕೊಳಗಾದೆನು    || ೨೬ ||

ಹೀನಜನ್ಮವನಿಲ್ಲಿ ಪೊರೆದು ಸಫಲವೇನು | ಈ ನಗರಿಯನು ಬಿಟ್ಟು ||
ಕಾನನವಾಸಕ್ಕೆ ಪೋಗಿ ಧ್ಯಾನಿಸುವೆನು | ಶ್ರೀನಾಥನಡಿಗಳನು   || ೨೭ ||

ರಾಗ ಶಂಕರಾಭರಣ ತ್ರಿವುಡೆತಾಳ
ಇಂದುಕುಲಜನೆ ಪೇಳ್ವೆ ಕೇಳಾ |
ನೊಂದು ಹರಚಿತ ಪೂರ್ವದಲಿ ಮಹಿ |
ನಂದನೆಯನೊಯ್ದಾಸುರಾದ್ಯರ | ಕೊಂದು ರಘುಜ      || ೨೮ ||

ಮೇದಿನಿಯಲನುಕರಿಸಿದನು ಹಯ |
ಮೇಧಯಜ್ಞವ ನಡೆಸಲವನೋ |
ಪಾದಿಯಲಿ ನಿನಗೀ ದುರಿತಹರ | ಮಾದಪುದೆಲೈ        || ೨೯ ||

ತುರಗವಿಹುದದು ಯವ್ವನಾಶ್ವನ |
ಪುರದೊಳಗೆ ಪವನಜನ ಕಳುಹಿಸಿ |
ತರಿಸಿಕೊಂಡೀ ವ್ರತವ ಬಿಡದಾ | ಚರಿಸುತಾಗ            || ೩೦ ||

ಇಂತು ಮಾಳ್ಪುದೆನುತ್ತರುಹಿ ಮುನಿ |
ತಾಂ ತವಕದಿಂ ತೆರಳಲಿತ್ತಲು |
ದಂತಿನಗರಾಧಿಪನು ತನ್ನಯ | ಚಿಂತೆಗಳೆದು || ೩೧ ||

ವಾರ್ಧಕ
ಜನಪ ಕೇಳ್ ಕುದುರೆಯಂ ತರಲಾ ನೃಪಂ ಪವನ |
ತನುಜ ಕರ್ಣಜ ಮೇಘನಾದರಂ ಕಳುಹಲವ |
ರನುವರದೊಳೆಚ್ಚಾಡಿ ಕಲಿಯವ್ವನಾಶ್ವನಂ ಗೆಲಿದವನ ಅಶ್ವಸಹಿತ ||
ಘನಹರುಷದಿಂದ ತಂದೊಪ್ಪಿಸಲ್ ಧರ್ಮಜಂ |
ವನಜನಾಭನ ನೇಮಗೊಂಡು ನರ ಧುರಕಯ್ದಿ |
ಎನುತಷ್ಟ ಬಿರುದುಗಳ ಬರೆದಶ್ವ ಮಸ್ತಕಕೆ ಕಟ್ಟಿ ಪೂಜಿಸಿ ಬಿಟ್ಟರು            || ೩೨ ||

ರಾಗ ಮಾರವಿ ಏಕತಾಳ
ಧಾರಿಣೀಪತಿ ಕೇಳ್ ವಾರುವರಕ್ಷೆಗೆ ಮು | ರಾರಿಯ ಮೈದುನನು ||
ವೀರನುಸಾಲ್ವನಿರುದ್ಧ ಕರ್ಣಜರೆಂಬ | ಧೀರರಲೆಲ್ಲರು ಸಹಿತ      || ೩೩ ||

ಪೊರಟರು ಸೇನೆಯು ನಡೆವ ಭರಕೆ ಭೂಮಿ | ಬಿರಿವುತಿರಲು ಮುಂದೆ ||
ತುರಗವು ತನ್ನಯ ಇಚ್ಛೆಯೊಳಗೆ ಸಂ | ಚರಿಸಲು ತಾಮುಂದೆ    || ೩೪ ||

ಕಲಿನೀಲಧ್ವಜತಡೆಯಲ್ಕಾತನ | ಗೆಲಿದು ಹಂಸಧ್ವಜನ ||
ಬಲಸಹಿತವನನು ಜೋಡಿಸಿ ಒಡಗೊಂಡು | ನಲಿವುತ ಮಣಿಪುರಕೆ          || ೩೫ ||

ಬರಲಶ್ವವ ತಾ ತಡೆದು ಕಿರೀಟಿಯ | ತರಳನ ಒಡಗೊಂಡು ||
ಹರುಷದೊಳಯ್ತರಲಯ್ದಿತು ಹಯ ರತ್ನಾ | ಪುರವರ ನೃಪನೆಡೆಗೆ            || ೩೬ ||

ವಾರ್ಧಕ
ಭೂರಮಣ ಕೇಳಿನ್ನು ಮುಂದೆ ವರ್ಣಿಸುವೆಂ ಮ |
ಯೂರಧ್ವಜಂ ಮಖವ ಮೊದಲೇಳ ಮುಗಿಸಿ ಮುಂ |
ದಾರಂಭಮಂ ಗೆಯ್ದು ಕುದುರೆಯಂ ಬಿಟ್ಟಿರಲ್ ನಿಜಸುತನ ರಕ್ಷೆಯಿಂದ ||
ದಾರಿಯೊಳ್ ವಾಜಿಯೆರಡಂ ಕೂಡೆ ಮಂತ್ರಿ ಕಂ |
ಡಾರಶ್ವಮೆನುತದರ ಫಣೆಯ ಪಟಹವ ನೋಡಿ |
ಭೂರಮಣ ಧರ್ಮಜನ ಬಿರುದುಗಳ ವಿಸ್ತರವನೊಡೆಯನಿಗೆ ಕೇಳಿಸಿದನು  || ೩೭ ||

ರಾಗ ಕಾಂಭೋಜಿ ಝಂಪೆತಾಳ
ಸುತ್ಯಾಗಿ ಶುಚಿ ಸರ್ವರುಪಕಾರಿ ಭುವನಜನ |
ಸ್ತುತ್ಯ ನಿರ್ಮಲಚಿತ್ತ ಶೂರ ||
ಸತ್ಯಭಾಷಿತ ಕರುಣನಿಧಿ ಕಮಲದಳನಯನ |
ಭೃತ್ಯ ಸಿರಿಸಂಪನ್ನನಾದ    || ೩೮ ||

ಹಸ್ತಿನಾಪುರದರಸು ಧರ್ಮಜನ ಕ್ರತು ಹಯ ಸ |
ಮಸ್ತ ಧರಣೀಶ್ವರರು ತಮ್ಮ ||
ಹಸ್ತ ಬಲ್ಪಿದ್ದರದ ಕಟ್ಟಿಕೊಂಡಿರಲೆನುತ |
ವಿಸ್ತರಿಸಿ ಬರೆದಿರುವ ಪಟಹ            || ೩೯ |

ಈ ತೆರದಿ ವಾಚಿಸಲು ಕೇಳಿ ಮನದಲಿ ತಾಮ್ರ |
ಕೇತನುರೆ ಕೋಪವನು ತಾಳ್ದು ||
ಆ ತುರಗವನು ಕಟ್ಟಿ ಮಂತ್ರಿಯೊಡನೆಂದನು ಮ |
ಹೀತಳಾಧಿಪ ಕೇಳು ಬಳಿಕ || ೪೦ ||

ರಾಗ ರೇಗುಪ್ತಿ ಅಷ್ಟತಾಳ
ಕೇಳಯ್ಯಾ ನಕುಲಧ್ವಜಮಂತ್ರಿ |
ಕಾಳಗಕೆ ಚತುರಂಗಬಲವನು | ಮೇಳವಿಸಪೇಳೆಂದನು | ಕೇಳಯ್ಯ        || ೪೧ ||

ಬದ್ಧವಾಯಿತು ನಾರದರೆಂದುದು |
ಯುದ್ಧ ದೊರಕಿತು ವಿಜಯ ಸಾಂಬನಿ | ರುದ್ಧ ಮೊದಲಾದವರೊಳು | ಕೇಳಯ್ಯ     || ೪೨ ||

ಹಿಂದೆ ಏಳೆಜ್ಞವಾಯಿತೆಮ್ಮಯ್ಯಗೆ |
ಮುಂದಣಧ್ವರವಿದಕೆ ಶ್ರೀಗೋ | ವಿಂದ ಸಂಯುಕ್ತಾದುದು | ಕೇಳಯ್ಯ       || ೪೩ ||

ವಾರ್ಧಕ
ಇಂತೆಂದು ಮಂತ್ರಿಯೊಳ್ ಪೇಳಿ ತಾಮ್ರಧ್ವಜಂ |
ಕುಂತೀಸುತಾದ್ಯರೊಡನೆಚ್ಚಾಡಬೇಕೆಂಬ |
ಸಂತಸವ ತಾಳ್ದು ನಿಜಸೈನಿಕವನರ್ಧಚಂದ್ರಾಕೃತಿಯೊಳ್ ನಿಲಿಸಿಕೊಂಡು ||
ನಿಂತಿರಲ್ ಕುದುರೆಯನು ಸಾಲ್ವಾದಿ ಪಟುಭಟರ್ |
ತಂತಮಗೆ ಬಿಡಿಸಿಕೊಂಬುಬ್ಬರದೊಳಿದಿರಾಗೆ |
ಕಂತುಪಿತ ಪೌರುಷಾಗ್ರಣಿ ಧರ್ಮಜಾನುಜನ ಕರೆದು ಬಳಿಕಿಂತೆಂದನು    || ೪೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಲಾಲಿಸರ್ಜುನ ಪರಮವೈಷ್ಣವ | ಮೌಳಿಯಾತ್ಮಜನತಿಪರಾಕ್ರಮ |
ಕಾಳಗದೊಳಿದಿರಾದಡೀತನು | ಸೋಲನೆನುತ           || ೪೫ ||

ನಾಗವೈರಿವರೂಥ ಪೇಳ್ತಿರ | ಲಾಗ ತಾಮ್ರಧ್ವಜನು ಮುಂದಕೆ |
ಸಾಗಿ ಶಾರ್ಙ್ಗವ ತುಡುಕಿ ರಣಕನು | ವಾಗು ನೀನು      || ೪೬ ||

ನರನ ಮೇಲ್ ಕೃಪೆಯುಳ್ಳಡಾತನ | ತುರಗವನು ಕಟ್ಟಿಹೆನು ಬಿಡಿಸನು |
ವರದ ಮುಖದಿಂದೆನುತಲಾಕ್ಷಣ | ಕರೆದನಂಬ            || ೪೭ ||

ಭಾಮಿನಿ
ಎಚ್ಚನಸ್ತ್ರವನೆಲ್ಲವರ ಮೇಲ್ |
ಮುಚ್ಚುವಂದದೊಳೆಣಿಕೆಯೊಳು ಹರಿ |
ಬೆಚ್ಚೆ ಫಲುಗುಣ ಬೆರಗುವಟ್ಟಿರಲುಳಿದ ಪಟುಭಟರು ||
ಹೆಚ್ಚಿ ರೋಷಾವೇಶರಾಗಿರ |
ಲಚ್ಯುತನ ಸುತನಣುಗನವುಡನು |
ಕಚ್ಚಿ ಬೊಬ್ಬಿರಿವುತ್ತ ರೌದ್ರದಿ ಸಮರಕನುವಾದ            || ೪೮ ||