ರಾಗ ನಾದನಾಮಕ್ರಿಯೆ ಅಷ್ಟತಾಳ
ಚಾಪಬಾಣವನನಿರುದ್ಧನು | ಸುಪ್ರ | ತಾಪದಿಂ ತೆಗೆದುಕೊಂಡೆದ್ದನು ||
ಕೋಪದೊಳಿದಿರಾಗಿ ನಿಂದನು | ಬಳಿ | ಕೀಪರಿಯಲಿ ಕರೆದೆಂದನು          | ೪೯ ||

ಎಲವೊ ಸೆಣಸಲೆಂದು ಕವಿಯದೆ | ನಮ್ಮ | ಕೆಲದೊಳ್ ವಿಚಾರಿಸಿ ತಿಳಿಯದೆ ||
ಮಲೆತಿದಿರಾದೆಯ ಬೆಚ್ಚೆನು | ಎನ್ನ | ಬಲುಹು ನೋಡೆನುತಸ್ತ್ರವೆಚ್ಚನು     || ೫೦ ||

ಬಲ್ಲೆ ಬಲ್ಲೆನು ಭಟಹನು ನಿನ್ನ | ಬಾಣ | ನಲ್ಲಿ ಯುದ್ಧವ ಮಾಡಿದೆ ಮುನ್ನ ||
ವಲ್ಲಭೆಗೋಸುಗ ಸೆರೆಯೊಳು | ಬಿದ್ದ | ಖುಲ್ಲ ಹೋಗೆನುತಸ್ತ್ರವೆಸೆಯಲು    || ೫೧ ||

ಹಿಂದಣ ರಗಳೆಯನೆಂಬುದು | ಏಕೊ | ಇಂದಿನ ಸಮರದಿ ಕಾಂಬುದು ||
ಎಂದು ನಾನಾಸ್ತ್ರವ ಕೊಚ್ಚಿದ | ಮುಳಿ | ಸಿಂದ ಬಾಣಗಳನ್ನು ಮುಚ್ಚಿದ     || ೫೨ ||

ಲಂಗಿ ಬಿಲ್ ಬತ್ತಳಿಕೆಗಳನ್ನು | ತುರ | ಗಂಗಳು ರಥ ಸಾರಥಿಯನ್ನು ||
ಹಿಂಗದಿನಿತನೆಲ್ಲ ಕಡಿದನು | ಚಾತು | ರಂಗಬಲದ ಮೇಲೆ ನಡೆದನು       || ೫೩ ||

ವಾರ್ಧಕ
ಪರಬಲವ ಪೊಕ್ಕು ಹರಿರವದಿಂದ ಜವದಿಂದ |
ಪರಿಪರಿಯಮೋಘತರ ಶರದಿಂದ ಭರದಿಂದ |
ತರತರದೊಳಿರುವಶ್ವ ಪಙ್ತಿಗಳ ದಂತಿಗಳ ತರಿತರಿದು ಕೆಡಹಲಾಗ ||
ಪರಿವುತಿರಲರುಣಜಲ ಕಾಯದೊಳ್ ಪಾಯದೊಳ್ |
ಪೊರಳುತಿರೆ ಸೇನೆಯಸು ಹಾರುತಿರೆ ಚೀರುತಿರೆ |
ತುರಗಶುಂಡಾಲಗತಿಹೊಡಕುಗಳ ಮಿಡುಕುಗಳನೇನೆಂಬೆನದ್ಭತವನು     || ೫೪ ||

ರಾಗ ಶಂಕರಾಭರಣ ಮಟ್ಟೆತಾಳ
ಪೃಥ್ವಿಪತಿಯೆ ಲಾಲಿಸಯ್ಯ | ಹಸ್ತಿಹಯರಥ |
ಪತ್ತಿಗಳನು ಕೆಡಹಲಾಗ | ಚಿತ್ತಜನಸುತ ||
ಮತ್ತೆ ತಾಮ್ರಧ್ವಜನು ಕೋಪ | ವೆತ್ತು ರಥವನು |
ಹತ್ತಿ ಚಾಪಶರವ ಕರದೊ | ಳೆತ್ತಿ ಪಿಡಿದನು    || ೫೫ ||

ಅಡಿಗೆಯಡಿಗೆ ಚಾತುರಂಗ | ಬಿಡದೆ ಮುಸುಕಿತು |
ಉಡುಗಣಂಗಳದುರಿತದ್ರಿ | ಕಡಲು ಕುದಿಯಿತು ||
ನಡುಗಿತವನಿ ಭಾನುಬಿಂಬ | ವಡಸಿ ಕತ್ತಲೆ |
ಕಡೆಗೆ ಘೋರಮಾಗೆ ಕದನ | ಫಡ ಫಡೆನುತಲೆ           || ೫೬ ||

ಸರಳ ತೂರುತಿರಲು ಪಂಚ | ಶರನ ಪುತ್ರನ |
ಕರೆದು ಕೋಪದಿಂದ ಪೇಳ್ದ | ಅರುಣಕೇತನ ||
ಹರಿಯ ಪೌತ್ರನೆಂದು ಬಿಟ್ಟ | ರುರವಣಿಗೆಯನು ||
ಮೆರೆವೆಯಾ ಎನುತ್ತ ಭರದಿ | ಶರವ ಸುರಿದನು           || ೫೭ ||

ಭಾಮಿನಿ
ಬಿದ್ದನಾ ಶರಜಾಲದೊಳಗನಿ |
ರುದ್ಧ ಮೂರ್ಛಿತನಾಗೆ ಕಾಣುತ |
ಸಿದ್ಧ ಪಟುಭಟರುಗಳ ಸೋಲಿಸಿ ಮುಂದಕಯ್ತರಲು ||
ಇದ್ದನಾ ಫಲುಗುಣನ ಬಲದಿ ಪ್ರ |
ಸಿದ್ಧ ಭಟರೊಳಗಣ ವೃಷಧ್ವಜ |
ನೆದ್ದು ನಾನಿಹೆ ಎಲ್ಲಿಗಯ್ದುವೆಯೆನುತಲಿದಿರಾದ            || ೫೮ ||

ರಾಗ ಭೈರವಿ ಏಕತಾಳ
ನಿರ್ಭಯದಿಂ ರಣಮಲ್ಲ | ಮುಳಿ | ದಬ್ಬರಿಸುತ ನಿಜ ಬಿಲ್ಲ ||
ತೆಬ್ಬನು ಬಿಗಿದವನಾಗಿ | ಎಬ್ಬಿ | ಬೊಬ್ಬಿರಿದನು ಇದಿರಾಗಿ          || ೫೯ ||

ಹೊಳೆಹೊಳೆವಂಬನು ಕಿತ್ತ | ಜನ | ಕಳವಳಗೊಳುತಿರೆ ಮತ್ತ ||
ಬಲುತರ ಕೋಪನಿಸ್ವನದಿ | ಕಡು | ಗಲಿಯಾಗುತ್ತಲಿ ಮನದಿ      || ೬೦ ||

ಅನಿರುದ್ಧನ ಪರಿಯೆಂದು | ನಿನ್ನ | ಮನಸಿಗೆ ತರಬೇಡಿಂದು ||
ಅನುವರದಾಸೆಯ ಬಿಟ್ಟು | ಕಯ್ಯ | ಧನುಶರವನು ಸುಮ್ಮನಿಟ್ಟು || ೬೧ ||

ಬಿಡು ನಮ್ಮ ತುರಗವನೆನಲು | ನಿನ್ನ | ಪಡೆದವ ಬರಬೇಕೆನಲು ||
ಕಿಡಿಕಿಡಿಯಾಗುತಲಿವನು | ಶರ | ವಿಡೆ ಪುಡಿಗೆಯ್ಯಲ್ಕವನು        || ೬೨ |

ಭಾಮಿನಿ
ಏರುತಿರ್ದನು ಬಿಡದೆ ಕರ್ಣಜ | ಚೂರುಮಾಡುತ್ತಿರಲು ರಥವನು |
ನೂರುಪರಿಯಂತರದಿ ಕಾಣುತ ಕೋಪವನು ತಾಳ್ದು ||
ಮೂರು ಬಾಣಗಳಿಂದ ಕೀಲಿಸಿ | ಸಾರುತಿರೆ ಕೃಷ್ಣಾರ್ಜುನರ ಕಲಿ |
ವೀರನಾದನುಸಾಲ್ವ ತಡೆದಡ್ಡಯಿಸುತಿಂತೆಂದ            || ೬೩ ||

ರಾಗ ಸೌರಾಷ್ಟ್ರ ಏಕತಾಳ
ಎಲ್ಲಿಗಯ್ವೆಯೆಲವೊ ಮುಂದೆ | ನಿಲ್ಲು ನಿಲ್ಲೆನ್ನುತ್ತ ಕೋಪ |
ದಲ್ಲಿ ಕಣೆಯ ತೆಗೆದೆಸುತ | ಭುಲ್ಲವಿಸಿದ         || ೬೪ ||

ಕಿಚ್ಚಿನಂತೆ ಬರುವ ಶರವ | ಕೊಚ್ಚುತ್ತೆಂದನೆಲವೊ ತನಗೆ |
ಕೆಚ್ಚೆದೆಯೊಳಿದಿರಾದೆಯ | ಹುಚ್ಚ ರಕ್ಕಸ        || ೬೫ ||

ಹುಚ್ಚನಲ್ಲ ನಿನ್ನ ಕರುಳ | ನುಚ್ಚುನುರಿಯ ಮಾಡಿ ಗಣರ |
ಮೆಚ್ಚಿಸುವೆ ನೋಡೆನುತ್ತ | ಎಚ್ಚನಸ್ತ್ರವ          || ೬೬ ||

ಎಂದ ಮಾತ ಕೇಳ್ದು ರೋಷದಿಂದ ತಾಮ್ರಕೇತು ಸರಳಿ |
ನಿಂದ ಮೂರ್ಛೆಗೆಯ್ಸಿ ಖಳನ | ನಿಂದನಾಚೆಗೆ || ೬೭ ||

ವಾರ್ಧಕ
ಅರಸ ಕೇಳೀ ಪರಿಯಲನಿರುದ್ಧನನುಸಾಲ್ವ |
ತರಣಿನಂದನನಸುತ ಪ್ರದ್ಯುಮ್ನ ಹಂಸಕೇ |
ತುರುಪರಾಕ್ರಮಿ ಬಭ್ರುವಾಹನಾದ್ಯಮಿತಬಲ ಸಾಂಬ ಸಾತ್ಯಕಿ ಮುಖ್ಯರ ||
ಧುರದೊಳ್ ಪಲಾಯನಂ ಗೆಯ್ಸಿ ಹರಿರವದಿಂದ |
ಬರಲನಿತರೊಳ್ ಪಾರ್ಥ ಚಾಪಶರಮಂ ತುಡುಕಿ |
ಸರಳಸೈವರೆಯಲ್ಕೆ ನಗುತ ತಾಮ್ರಧ್ವಜಂ ಫಲುಗುಣನೊಳಿಂತೆಂದನು    || ೬೮ ||

ರಾಗ ಕೇದಾರಗೌಳ ಅಷ್ಟತಾಳ
ಸುರರೆರೆಯನ ಸುಕುಮಾರನೆ ಕೇಳೆಲೊ | ಹರಿಯ ಸಹಾಯದಲಿ ||
ಧುರದಿ ದಿಗ್ವಿಜಯವ ಪಡೆದು ಬಂದಿಹೆನೆಂಬ | ಗರುವಿಕೆಯನು ತಳೆದು     || ೬೯ ||

ಬಂಧುಹತ್ಯದೋಷ ಕಳೆಯಲು ತುರಗ ಬೇ | ಕೆಂದು ಯೋಚಿಸಿ ಮನದಿ ||
ಕೊಂದು ಕಳೆಯಬೇಡ ವ್ಯರ್ಥದಿ ಪ್ರಾಣವ | ಪಿಂದಣ ಪೌರುಷದಿ || ೭೦ ||

ಸಿರಿಯ ವಲ್ಲಭನಿಂದಲಹುದೇನೊ ನೀನಿಂದು | ಪರಧನದಲಿ ಧರ್ಮವ ||
ಮರುಳೆ ಮಾಡಿದರೇನು ಬರಿದೋಡೆಯಲ್ ತೃಷೆ | ಹರಿವುದೆ ಹೋಗೆನಲು           || ೭೧ ||

ರಾಗ ಆರ್ಯ ಸವಾಯ್
ಇಂತಾ ತಾಮ್ರಧ್ವಜನಾಡಿದ ನುಡಿ |
ಕೌಂತೇಯನು ತಾ ಕೇಳುತ ರೋಷದಿ ||
ಆಂತುಂ ಧನು ಕಾಮಾರಿಯೆನಲ್ಕೆ |
ನಿಂತಾಡಿದನವನೊಂದುತ್ತರಮಂ    || ೭೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮೂಢಮತಿ ಕೇಳೆಲವೊ ಧನಮನ | ಕೂಡಿ ಹೊಂದಿದ ದುರಿತಗಳ ನೀ |
ಡಾಡಬೇಕಲ್ಲದೆ ನಿರರ್ಥದಿ | ಮಾಡಬಹುದೆ    || ೭೩ ||

ಹಲವು ಪರಿಯಲಿ ನಿತ್ಯ ತೃಪ್ತನ | ಒಲಿಸಬೇಕೆಂಬುದನು ಮನದಲಿ |
ತಿಳಿಯದಧಮನೆನುತ್ತಲಾಕ್ಷಣ | ಸೆಳೆದನಂಬ || ೭೪ ||

ರಾಗ ಶಂಕರಾಭರಣ ತ್ರಿವುಡೆತಾಳ
ನರನು ಕೋಪದಿಂದಲಾಗ ಸುರಿಯೆ ಶರವನು |
ತುರಗಗಜವು ಸಹಿತ ಧರಣಿಗುರುಳಲಾತನು ||
ಭರದಿ ಪೊಸ ವರೂಥವೇರಿ ಬರಲು ಕೋಪಿಸಿ |
ಮುರಿದ ರಥ ಸಹಸ್ರಮಾಗೆ ಕೆರಳಿ ಘರ್ಜಿಸಿ    || ೭೫ ||

ಕಿಡಿಯನುಗುಳುತಸ್ತ್ರವೆಸೆಯೆ ಸಿಡಿಲು ಗಿರಿಯೊಳು |
ಹೊಡೆಯದವೋಲು ಬಿದ್ದ ವಿಜಯ ಬಡಿದು ಕಾಲ್ಗಳು ||
ಗುಡುಗುಡಿಸುತಲೆದ್ದನೊಡನೆ ತುಡುಕುತಂಬನು |
ಕಡಿದನವನು ಪಿಡಿವ ಧನುವ ನಡುವೆಯದರನು          || ೭೬ ||

ಕರದ ಚಾಪ ಮುರಿಯೆ ಹಲುವ ಮೊರೆದು ಬಿಲುವನು |
ತ್ವರಿತದಿಂದ ಪಿಡಿದು ಬೊಬ್ಬಿರಿವುತೆಚ್ಚನು ||
ನರನ ತೇರು ಯೋಜನೊಂದು ತಿರುಗಿ ಬಂದುದು |
ಮರಳಿ ವಿಜಯನೆಸುಗೆಗಂಬರವ ಸಾರ್ದುದು || ೭೭ ||

ಬಣಗು ಬಡವೆಯೆಂದುಕೊಳುತ ಘನಶರೌಘದಿ |
ಸೆಣಸುತಿರ್ದರೇನನೆಂಬೆ ಕಣನ ಮಧ್ಯದಿ ||
ಕಣಿಲು ಕಟಿಲುಯೆನುತ ಹೊಡೆವ ಕಣೆಯ ರಭಸಕೆ |
ಪೆಣನಮೆದೆಯು ಬೀಳಲಮಿತ ಕಣನೊಳಗಲಕೆ           || ೭೮ ||

ವಾರ್ಧಕ
ಧರಣೀಶ ಕೇಳ್ ವಿಜಯನಸ್ತ್ರದಿಂ ಶಸ್ತ್ರದಿಂ |
ತೆರಪುಗಾಣಿಸದೆ ಕವಿವಾನೆಯಂ ಸೇನೆಯಂ |
ಕೊರಳ ಬಳೆಗಳಚುವಂತೆಚ್ಚಿದಂ ಕೊಚ್ಚಿದಂ ದ್ವಿಶತಮಕ್ಷೋಹಿಣಿಯನು ||
ಸರಳಮೊನೆಯಿಂ ಚಿಗಿಯೆ ರುಂಡಗಳ್ ಮುಂಡಗಳ್ |
ಉರುಳುತಿರೆ ತಾಪದೊಳ್ ಕಣನೊಳಗೆ ಪೆಣನೊಳಗೆ |
ಕರುಳನುಗಿದುಗಿದು ಶಾಕಿನಿ ಡಾಕಿನಿಯ ನಿವಹ ಮೆರೆದು ಮೆರೆದೋವುತಿರಲು       || ೭೯ ||

ರಾಗ ಶಂಕರಾಭರಣ ಮಟ್ಟೆತಾಳ
ನಾಶವಾದ ಬಲವ ಕಂಡು | ರೋಷದಿಂದಲರುಣಕೇತ |
ಈಸು ಬಲುಹೆ ತನ್ನೊಳೆನುತ | ಸೂಸಲಂಬನು ||
ಅ ಸರಳ್ಗಳಿಂದ ಸೇನೆ | ಗಾಸಿಯಗಿ ಬಹಳ ಜೀವ |
ದಾಸೆಗಳೆವುತಿರಲು ನಿರ್ಜ | ರೇಶನಣುಗನು  || ೮೦ ||

ಸೂತ ರಥದ ತುರಗಗಳನು | ಧಾತುಗೆಡಿಸುತಯ್ದೆ ಬಂದ |
ಖ್ಯಾತರಾದ ಸಾಂಬ ಮಿನ | ಕೇತನಾದ್ಯರ ||
ಘಾತಿಸುತ್ತಲಿರಲು ಬಳಿಕ | ಪೂತುಮಝರೆಯೆನುತಲಿಂದ್ರ |
ಜಾತ ಕಡಿದನವನ ಧನುವ | ಖಾತಿಯಿಂದಲಿ  || ೮೧ ||

ಕರದ ಧನುವ ಖಂಡಿಸಲ್ಕೆ | ತೆರಳಿ ಬಂದು ನರನ ರಥವ |
ಧರಿಸಿಕೊಂಡು ಚಿಗಿದು ನಭದಿ | ತಿರುಪಿ ಧರಣಿಗೆ ||
ಭರದಿ ವಿಜಯಗನಿತರೊಳಗೆ | ಸರಸಿಜಾಕ್ಷ ಕಾಣುತಭಯ |
ಕರವ ತೋರುತಾ ವರೂಥ | ಯಿರಿಸಿ ಸ್ವಸ್ಥಕೆ || ೮೨ ||

ಮಂದರಾದ್ರಿ ಧರನು ನರನಿ | ಗೆಂದನಿವನ ಬಲುಹಿನುರಿದು |
ನಂದಿಸಲ್ಕೆ ಪೇಳ್ವೆ ಕೇಳ | ದೊಂದು ಬಗೆಯನು ||
ಒಂದು ಕಡೆಯೊಳಾನುಯೆಸುವೆ | ಒಂದುಮುಖದಿ ನೀನು ನಿಲುವು |
ದೆಂದು ವಿಜಯಗರುಪಿ ರಣಕೆ | ನಿಂದರಿರ್ವರು            || ೮೩ ||

ಅಸುರಹರನು ಶಾರ್ಙ್ಗ ಪಿಡಿದು | ವಿಶಿಖ ಕರೆವುತಿರಲು ಭರದೊ
ಳಸಮ ಬಲಕಿರೀಟಿ ಬಂದು | ದೆಸೆಯೊಳೆಸೆದಿರೆ |
ಮುಸುಕುವಸ್ತ್ರಗಳನು ರೌದ್ರ | ರಸದಿ ಭುಜವನೊದರಿಸುತ್ತ |
ಕುಸುರಿದರಿದು ಕೆಡಹಿ ಮೂದ | ಲಿಸುತಲೀರ್ದನು        || ೮೪ ||

ಭಾಮಿನಿ
ಶ್ರೀರಮಣನೊಡನೆಂದನಾಗ ಮ |
ಯೂರಕೇತನನಣುಗನೆಲೆ ಹರಿ |
ಬೇರೆ ನೀ ಬಿಲ್‌ಪಿಡಿದು ಕಾದುತವಿತ್ತಲರ್ಜುನನ ||
ಗಾರುಮಾಡದಿರಕಟ ವಿಜಯನ |
ಸಾರಥಿತ್ವವ ನಡೆಸಿ ಸಾಹಸ |
ದೋರು ತನ್ನೊಳೆನಲ್ಕೊಡಂಬಟ್ಟನು ಮುರಾಂತಕನು  || ೮೫ ||

ರಾಗ ಭೈರವಿ ಏಕತಾಳ
ಹರಿ ನಿಜತೇರನು ಬಿಟ್ಟು | ಬಂದು | ನರನ ರಥದೊಳಡಿಯಿಟ್ಟು ||
ತುರಗವ ಚಪ್ಪರಿಸುತ್ತ | ಅತಿ | ಹರುಷದೊಳಂಬ ತೆಗೆದಿತ್ತ         || ೮೬ ||

ನರ ಗಾಂಡೀವವ ಧರಿಸೆ | ಕಡು | ಭರದಿಂದಸ್ತ್ರವಸುರಿಸೆ ||
ಅರುಣಧ್ವಜ ಕಂಡಾಗ | ತರಿ | ತರಿ ದೊಟ್ಟಿದನತಿಬೇಗ  || ೮೭ ||

ಅಚ್ಯುತಗಂಬನುಹತ್ತೆ | ತೆಗೆ | ದೆಚ್ಚನು ನರಗರುವುತ್ತೆ ||
ಮುಚ್ಚಿದ ಪರಸೇನೆಯನು | ಕಂ | ಡಚ್ಚರಿಗೊಳುತರ್ಜುನನು      || ೮೮ ||

ತೇರನು ಮುರಿದಡುಕಿದನು | ಹಯ | ಸಾರಥಿಗಳ ಕೆಡಹಿದನು ||
ಮಿರಿತು ಎಂಬುದ ಕಂಡು | ಗಜ | ವೇರಿದನತಿ ಭಯಗೊಂಡು    || ೮೯ ||

ಕಂಗಳು ಕಡುಗೆಂಪೇರೆ | ಭಟ | ರಂಗಕೆ ಶರಗಳ ತೋರೆ ||
ಭಂಗಿಸುತಿರೆ ಫಲುಗುಣನು | ಸಮ | ರಂಗದಿ ಮರೆದೊರಗಿದನು || ೯೦ ||

ವಾರ್ಧಕ
ಭೂಪಾಲ ಕೇಳ್ ಸವ್ಯಸಾಚಿ ಮೈಮರೆಯಲಾ |
ಟೋಪದಿಂದಾಹವಕೆ ನಿಲ್ವ ಭಟರೆಲ್ಲ ಸಂ |
ತಾಪಸಂಗತರನಿತರೆಂಬುದಂ ಕಂಡು ದನುಜಾರಾತಿ ನಿಜ ಚಕ್ರವ ||
ಕೋಪದಿಂ ಪಿಡಿದಯ್ತರಲ್ಕೆ ತಾಮ್ರಧ್ವಜಂ |
ಚಾಪಕರಯುತನಾಗಿ ಬೊಬ್ಬಿರಿದು ರೌದ್ರದಿಂ |
ದಾ ಪುಷ್ಪಶರನ ಪಿತಗಿದಿರಾದನುರವಣಿಸುತೇವೇಳ್ವೆ ಸಾಹಸವನು         || ೯೧ ||

ರಾಗ ಪಂಚಾಗತಿ ಮಟ್ಟೆತಾಳ
ತುರಗಗಜವರೂಥ ಸಹಿತ | ತರುಬಿ ಬರಲು ಹರಿಯು ಕಂಡು |
ಕರದೊಳಿಹ ಸುದರ್ಶನವನು | ತಿರುಪಿಬಿಟ್ಟನು ||
ಕೊರೆದುದಮಿತಸೇನೆವುರುಳು | ತಿರಲು ಕಂಡು ಕೋಪದಿಂದ |
ಲರುಣಕೇತ ಪೇಳ್ದನಸುರ | ಹರನೊಳಿನಿತನು            || ೯೨ ||

ಪಡೆಯನೆಲ್ಲ ಕಡಿದು ಬಿಡುವ | ಗೊಡವೆಯಾಕೆ ಹಿಂದೆ ನರಗೆ |
ದುಡಿದ ಪುಣ್ಯವಿತ್ತು ಕಷ್ಟ | ಬಡುವೆ ಸುಮ್ಮನೆ ||
ಕಡೆಯ ಮಾತು ನುಡಿವೆ ಕೇಳು | ಪಿಡಿದು ನಿಮ್ಮನೀರ್ವರನ್ನು |
ತೊಡಗಿದಧ್ವರವನು ಮುದದಿ | ನಡೆಸಿಕೊಂಬೆನು         || ೯೩ ||

ಎಂದ ಮಾತು ದಿಟವೊಸಟೆಯ | ದೆಂಬಬಗೆಯ ಕಾಂಬೆನುತ್ತ |
ಲಂದು ಹರಿಯಬಳಿಗೆ ಭರದಿ | ಬಂದುಪಿಡಿದನು
ಒಂದು ಕರದಿ ಕೈಗಳೆರಡು | ಒಂದು ಕರದಿ ಚರಣಯುಗವ |
ನೊಂದುಗೂಡಿ ವಿಜಯನೆಡೆಗೆ | ಸಂದುಬರುತಿರೆ         || ೯೪ ||

ನಾಗರಾಜಶಯನ ನರಗೆ | ಕೂಗಿ ಪೇಳ್ದ ನಿನ್ನ ಪಿಡಿಯ |
ಲೀಗ ಬರುವನೀಮಹಾಸ್ತ್ರ | ಬೇಗ ತೊಡುಯೆನೆ ||
ಆಗ ತುಡುಕುವನಿತರೊಳಗೆ | ಪೋಗಿ ಭುಜದಿ ಕೆಡಹಿ ಕೊಡಹಿ |
ಚೀಗುವಂತೆ ಬಿಗಿಯೆ ಮೂರ್ಛೆ | ಯಾಗಿ ಬಿದ್ದನು         || ೯೫ ||

ವಾರ್ಧಕ
ಈ ತೆರದೊಳರಸ ಕೇಳರ್ಜುನಮುರಾರಿಗಳ್ |
ಧಾತುಗೆಡಲಾಮೇಲೆ ಕಾಳಗಂಗೊಡುವ ವಿ |
ಖ್ಯಾತ ಪೌರುಷರಾಗಿ ನಿಲ್ವರಂ ಕಾಣದಿರಲಾ ತಾಮ್ರಕೇತು ಬಳಿಕ ||
ಆ ತುರಗಮಂ ತೆಗೆದುಕೊಂಡು ರಣದೊಳಗುಳಿದ |
ಚಾತುರಂಗವು ತನ್ನ ಮಂತ್ರಿಸಹಿತಯ್ತಂದು |
ತಾತನಿದಿರೊಳ್ ನಿಂದು ಹಯವೆರಡ ಮುಂದಿಡಲ್ ನಿಜಸುತನೊಳಿಂತೆಂದನು     || ೯೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ
ತರುಣ ಬಂದೆ ಇದೇನು ಕ್ಷಿಪ್ರದಿ | ತಿರುಗಿತೀ ಹಯ ವರುಷ ತುಂಬದೆ |
ತುರಗ ಮತ್ತೊಂದಾರದೆನೆ ಪಿತ | ಗೆರಗಿ ಪೇಳ್ದ           || ೯೭ ||

ತಾತ ಕೇಳು ಸುಧಾಂಶು ಕುಲಸಂ | ಜಾತಧರ್ಮಜ ಯಜ್ಞಹಯ ಶ್ರೀ |
ನಾಥ ಸಹಿತಯ್ತಂದಿಹನು ಪುರು | ಹೂತ ಸುತನು       || ೯೮ ||

ಕಟ್ಟಿ ಹಯವನವರ್ಗೆ ಕಾಳಗ | ಗೊಟ್ಟು ಬಂದೆನೆನಲ್ಕೆ ಸಂಶಯ |
ಬಟ್ಟು ನಕುಲಧ್ವಜನನೀಕ್ಷಿಸೆ | ಗುಟ್ಟ ಪೇಳ್ದ      || ೯೯ ||

ರಾಗ ಕಾಂಭೋಜಿ ಝಂಪೆತಾಳ
ಜೀಯ ಕೇಳ್ ಪುಸಿಯಲ್ಲ ಗಜಪುರಾಧಿಪ ಧರ್ಮ |
ರಾಯನಧ್ವರದ ಹಯವಿದನು ||
ಕಾಯಬಂದಿಹ ವಿಬುಧವಲ್ಲಭನು ಹರಿಸುತ ಸ |
ಹಾಯದಿಂದಮಿತಬಲಸಹಿತ           || ೧೦೦ ||

ಆಯಿತಾಹವ ಬಭ್ರುವಾಹನಾದಿಗಳನೊ |
ತ್ತಾಯದಿಂ ಸದೆಬಡಿದುರುಳ್ಚಿ ||
ಆ ಯಮಜನನುಜಾತನಸುವನೊಪ್ಪಂಗೆಡಿಸಿ |
ತೋಯಜದಳಾಂಬಕನ ಗೆಲಿದು      || ೧೦೧ ||

ಸಾಯದಂತೀರ್ವರಡಗೆಡಹಿ ಮತ್ತೊಡನೆ ಕೌಂ |
ತೇಯನ ತುರಂಗವನು ಕೊಂಡು ||
ನೋಯದಯ್ತಂದಿಹನು ನಿನ್ನ ಮಗ ಪೇಳ್ದ ನುಡಿ |
ಬಾಯ ಪೌರುಷವಲ್ಲ ಕೇಳು            || ೧೦೨ ||

ರಾಗ ಕೇದಾರಗೌಳ ಝಂಪೆತಾಳ
ಇಂತು ಸಚಿವನು ಪೇಳಲು | ಆ ನುಡಿಗೆ | ಚಿಂತಿಸುತ ನಿಜಮನದೊಳು ||
ಮಂತ್ರಿಯೊಡನಿಂತೆಂದನು | ಕೆಡಿಸಿದನು | ಚಿಂತಿತಾರ್ಥವ ತನುಜನು     || ೧೦೩ ||

ಯಾತಕೀ ಯಜ್ಞವೆನಗೆ | ಖಗಪತಿವ | ರೂಥನನು ಬಿಟ್ಟು ಮನೆಗೆ ||
ಈ ತುರಗವನು ತಂದನು | ಎನುತ ತನು | ಜಾತನನು ಬೈದೆಂದನು      || ೧೦೪ ||

ಪರಮ ಪಾವನ ತುಳಸಿಯ | ತೊರೆದಣುಗ | ಪರಮಳಿಪ ಸುಮಮಾಲೆಯ ||
ಧರಿಸಿದಂದದಿ ಹಯವನು | ತಂದಿತ್ತೆ | ಮರುಳೆ ಇನ್ನೇನೆಂಬೆನು || ೧೦೫ ||

ಅರಿಯದೇ ಎನಗೆ ನೀನು | ಮಗನಲ್ಲ | ತುರಗದಿಂದಾಹುದೇನು ||
ನರಮುರಾರಿಗಳಾವೆಡೆ | ಇಹರೆಂದು | ತ್ವರಿತದಲಿ ತೋರಿಸು ನಡೆ         || ೧೦೬ ||

ಕಡೆಯಾಯ್ತು ಯಜ್ಞ ಸಾಕು | ವಾಜಿಯನು | ಪೊಡೆಯತ್ತದಾರ್ಗೆ ಬೇಕು ||
ಬುಡಕೆ ಬಂದಿಹ ಹರಿಯನು | ಬಿಟ್ಟನೆನು | ತಡಿಗಡಿಗೆ ಚಿಂತಿಸಿದನು         || ೧೦೭ ||

ವಾರ್ಧಕ
ಹರಿಣಾಂಕಕುಲತಿಲಕ ಕೇಳ್ ಮಯೂರಧ್ವಜಂ |
ಮರುಗುತೀಪರಿಯಲಸುರಾಂತಕನ ಪಾದಮಂ |
ಹರುಷದಿಂ ಕಣ್ಣಾರೆ ಕಾಣಬಹುದೆನುತಲಾ ದಿನ ಕಳೆವುತಿರಲಿತ್ತಲು ||
ಧುರದ ಕಣನೊಳ್ ಮುರಧ್ವಂಸಿಗರಿವಾಯ್ತು ಮೈ |
ಮರೆದ ಜೀಮೂತವಾಹನಕುಮಾರರಿಗೆಚ್ಚ |
ರರಿಕೆಯಾಗಲ್ ಮೂರ್ಛೆಗೊಂಡ ಬಲಮೇಳಲ್ಕೆ ಹರಿ ನರನೊಳಿಂತೆಂದನು           || ೧೦೮ ||

ರಾಗ ಕೇದಾರಗೌಳ ಅಷ್ಟತಾಳ
ನೋಡಿದೆಯಾ ಪಾರ್ಥ ತಾಮ್ರಕೇತನು ನಮ್ಮ | ಮಾಡಿದ ಘಾತವನು ||
ಕೂಡೆ ಕೊಂಡೊಯ್ದನು ತುರಗವ ನಿಜಪುರ | ಕಾಡಲಿನ್ನೇನದನು || ೧೦೯ ||

ಒಂದುಪಾಯವನು ನಾನರುಹುವೆನದಕೆ ನೀ | ನಿಂದು ಬಾಯೆನ್ನೊಡನೆ ||
ಮಂದಿಯು ಬೀಡಾಗಿ ಬರಲಿ ಮೆಲ್ಲಗೆ ನಾವು | ಮುಂದೆ ಪೋಗುವುದೆಂದನು           || ೧೧೦ ||

ದಾನವಾಂತಕನೆಂದ ಮಾತ ಪುರಂದರ | ಸೂನು ಲಾಲಿಸಿ ಮುದದಿ ||
ತಾನು ಒಡಂಬಟ್ಟನದಕೆ ಸಂತಸಗೊಂಡು | ಸೇನೆಯ ಹಿಂದುಳಿಸಿ           || ೧೧೧ ||

ಶ್ರೀಪತಿಫಲುಗುಣರೀರ್ವರು ತಮ್ಮಯ | ರೂಪುಗಾಣಿಸದಂದದಿ ||
ತಾಪಸ ವೇಷವನಾಂತು ದೇಸಿಕರಂತೆ | ಆ ಪುರಕಯ್ತಂದರು    || ೧೧೨ ||

ದಾರಿಪಿಡಿದು ರತ್ನನಗರಿಗೆ ಬರುತಿರೆ | ವಾರಿಜಬಾಂಧವನು ||
ಸಾರಿದ ಪಶ್ಚಿಮಗಿರಿಯನಿತ್ತಲು ಅಂಧ | ಕಾರ ಕವಿದು ಬರಲು     || ೧೧೩ ||