ಭಾಮಿನಿ
ಭೂಮಿಪತಿ ಕೇಳ್ ಬಳಿಕ ವಿಪ್ರ |
ಸ್ತೋಮಕಿತ್ತನು ತುರಗಗಜರಥ |
ಹೇಮದಾನಗಳಿಂದ ನಮಿಸಿದನಾ ತತ್‌ಕ್ಷಣದಿ ||
ಕೋಮಲಶರೀರದೊಳಗರ್ಧವ |
ನಾ ಮಹೀಸುರಗೀವೆನೆಂಬತಿ |
ಪ್ರೇಮದಲಿ ಸೂಚಿಸಿದನಂಗವನಾಗ ಬಂಧಿಸಲು          || ೧೭೪ ||

ಕಂದ
ತ್ವರಿತದೊಳೆನ್ನಯ ತನುವಂ |
ಸರಿ ಪೋಳೆರಡಂ ಗೆಯ್ಯಿರಿಯೆಂದಾeಪಿಸು ||
ತಿರಲಾಸಮಯದೊಳಾತನ |
ತರುಣಿ ಕುಮುದ್ವತಿ ಬಂದಿಂತೆಂದಳ್ ಮುದದಿಂ         || ೧೭೫ ||

ರಾಗ ಮಾರವಿ ಅಷ್ಟತಾಳ
ಬಿನ್ನಪವನು ಲಾಲಿಸೆಲೊ ಪ್ರಾಣನಾಥ |
ಇನ್ನು ನೀ ತಿಳಿಯಲಿಲ್ಲವೆ ಹರಿಮಾತ ||
ತನ್ನ ದೇಹಾರ್ಧವೆಂದರೆ ಪುರುಷರಿಗೆ |
ಮುನ್ನ ಶಾಸ್ತ್ರೋಕ್ತದಿ ಸ್ತ್ರೀಯರು ಕಡೆಗೆ || ಕೇಳಿರೈ ಮಾತ ಕೇಳಿರೈ         || ೧೭೬ ||

ವಾಮಾಂಗವೆಂಬುದು ತಾನಾಯಿತದಕೆ |
ನೀ ಮೆಯ್ಯ ಭಾಗಿಸಿಕೊಡುವುದಿದೇಕೆ ||
ಪ್ರೇಮದೊಳೆನ್ನಯ ತನುವನ್ನು ಕೊಡಲು |
ತಾ ಮುಂದೆ ಸದ್ಗತಿಯಯ್ದುವೆನೆನಲು || ಕೇಳಿರೈ ಮಾತ ಕೇಳಿರೈ          || ೧೭೭ ||

ಈ ಮಾತುಗಳ ಕೇಳಿ ವಿಪ್ರನಾ ಕಿವಿಗೆ
ಆ ಮಹೀಸುರನೆಂದ ಮಗುಳಾವನಿಪಗೆ ||
ಹೇ ಮಯೂರಧ್ವಜ ಕೇಳೆನ್ನ ಸೊಲ್ಲ |
ವಾಮಾಂಗವೆಂದೆನ್ನೊಳಾಡಿದುದಿಲ್ಲ || ಕೇಳಿರೈ ಮಾತ ಕೇಳಿರೈ             || ೧೭೮ ||

ತನುವಿನೊಳ್ ದಕ್ಷಿಣಭಾಗವ ತಿಂದು |
ತನಯನ ಬಿಡುವೆನೆಂದಾಡಿತೆಂದು ||
ಎನಲಿಂತು ಕೇಳುತ ನೃಪನ ಸಂಭವನು |
ವಿನಯದಿ ಕೊಳ್ಳೆಂದ ತನ್ನ ದೇಹವನು || ಕೇಳಿರೈ ಮಾತ ಕೇಳಿರೈ          || ೧೭೯ ||

ತಾಪಸನಿಂತೆಂದ ಸತಿಸುತರೆಮಂದು |
ಆ ಪಾಪಿ ಪೇಳಲಿಲ್ಲವೊ ತನ್ನೊಳೆಂದು ||
ಈ ಪರಿಯಳುಕುವುದಾದಮೇಲಿನ್ನು |
ಪೋಪೆನೆನ್ನುತ ಪೇಳಲಾ ಧರಣಿಪನು || ಕೇಳಿರೈ ಮಾತು ಕೇಳಿರೈ         || ೧೮೦ ||

ವಾರ್ಧಕ
ಏಕೆ ಪೋಗುವೆ ವಿಪ್ರ ಸತಿಸುತರನೀವುದಿ |
ಲ್ಲೀ ಕಾಯಮಂ ಕೊಡುವೆನೆಂದ ನುಡಿಗವಗುಣವ |
ಸೋಕುವುದೆ ಸೈರಿಸೆಲ್ಲಿಗೆ ಪೋಗಬೇಡೆನುತಲೊಡಬಡಿಸಿ ಭೂಸುರನನು ||
ಭೂಕಾಂತ ದೃಢದಿಂದ ತೀಕ್ಷ್ಣ ಕರಪತ್ರಮಂ |
ಆ ಕುಮುದ್ವತಿಯ ಕೂಡಿಂತೆಂದ ಕಾಂತೆ ಕೇಳ್ |
ನೀ ಕುಮಾರನ ಕೂಡಿ ಕೊಂಡೆನ್ನ ಪೋಳೆರಡು ಸಮನಾಗಿ ಸೀಳೆಂದನು   || ೧೮೧ ||

ಭಾಮಿನಿ
ಹೇ ಮಹಿಪ ಕೇಳ್ ಪತಿಯನುಜ್ಞೆಯೊ |
ಳಾ ಮಗನ ತಾ ಕೂಡಿ ಕೊಂಡತಿ |
ಪ್ರೇಮದಿಂ ಮಸ್ತಕವ ಸೀಳ್ತಿರೆ ರಾಮ ರಾಮೆನುತ ||
ಕಾಮಪಿತ ಫಲುಗುಣರು ಬೆರಗಿಡ |
ಲಾ ಮಹಾಸ್ಥಾನದಲಿ ನೃಪತಿ ಶಿ |
ರೋಮಣಿಯನೀಕ್ಷಿಸುತ ಹಾ ಹಾಯೆಂದು ಜನ ಮರುಗೆ            || ೧೮೨ ||

ಕಂದ
ಧರಣಿಪ ಕೇಳೈ ಸತಿಸುತರ್ |
ಸರಸರನರಿವುತ್ತಿರಲಾಜನಪನ ಶಿರಮಂ ||
ಧರಣೀಶನ ವಾಮಾಕ್ಷಿಯೊಳ್ |
ಸುರಿಯಲ್ ಜಲ ಭೂಸುರನದ ಕಂಡಿಂತೆಂದಂ           || ೧೮೩ ||

ರಾಗ ಸಾವೇರಿ ಅಷ್ಟತಾಳ
ಏಳಯ್ಯ ಶಿಷ್ಯ ಹೇಳಯ್ಯ |
ಏಳಯ್ಯ ಪೋಗುವ ದಾನ ಬೇಡಿಂದು |
ಹಾಳಾದೆವಿವನ ಮಾತನು ಕೇಳಿ ನಿಂದು || ಏಳಯ್ಯ || ಪ ||

ಅತ್ತು ಕರೆದು ಕೊಡುವವನ ದಾನವನು |
ಎತ್ತಿ ಪಾಣಿಯ ಮುಟ್ಟುವರೆ ಬುಧರದನು ||
ಅತ್ತ ಕೇಸರಿ ತನ್ನ ಪುತ್ರನ ತಿನಲಿ |
ಇತ್ತಲೀ ಧರಣೀಶ ಸ್ವಸ್ಥದೊಳಿರಲಿ || ಏಳಯ್ಯ || ೧೮೪ ||

ಬಲ್ಲೆ ನಾನಿವ ಜೀವಗಳ್ಳನೆಂಬುದನು |
ಅಲ್ಲಿ ಪೇಳಿದೆ ಸಿಂಹ ಎನ್ನಭೀಷ್ಟವನು ||
ಇಲ್ಲಿ ಇಷ್ಟಾರ್ಥವಾಗುವುದೆಂದು ಬಂದೆ |
ಇಲ್ಲಿ ನಿಲ್ಲಲು ಮನವೆಳೆವದು ಹಿಂದೆ || ಏಳಯ್ಯ           || ೧೮೫ ||

ಆಗ ತನ್ನಲಿ ತೀರದೆನಬಾರದಿತ್ತೆ |
ಈಗ ಸೀಳುವ ನೋವಿಗಳುವನು ಮತ್ತೆ ||
ಹೀಗೆಂಬುದರಿಯದೆ ಬಂದೆನಿಂದೆನುತಾ |
ಪೋಗುವೆನೆನುತ ಪೊರಟು ಶಿಷ್ಯ ಸಹಿತ || ಏಳಯ್ಯ    || ೧೮೬ ||

ರಾಗ ಕೇದಾರಗೌಳ ಅಷ್ಟತಾಳ
ಬೆರಗಾದಳಾ ಕುಮುದ್ವತಿಯು ಮಹೀಸುರ |
ಪೊರಟು ಪೋಪುದ ಕಾಣುತ ||
ಅರುಹಿದಳ್ ಪತಿಗೆ ನಿಮ್ಮೆಡದ ಆ ಕಣ್ಣೊಳು ನೀರು |
ಸುರಿಯಿತೆನುತ ವಿಪ್ರನು    || ೧೮೭ ||

ತೆರಳಿದನಳುತ ಕೊಡುವ ದಾನ ಬೇಡೆಂದು |
ಬರಿದೆ ಕೊಯಿಸಿದೆಯೆನಲು ||
ಮರುಗುತಲವನಿಪ ಕರೆ ತಿಳುಹುವೆನೆನ |
ಲರಸಿಯು ಪೋಳಗೂಡಿ    || ೧೮೮ ||

ಪಿಡಿದುಕೊಂಡಾತ್ಮಜನನು ಕಳುಹಲು ಬೇಗ |
ನಡೆದರುಣಧ್ವಜನು ||
ಬಿಡದೆ ವಿನಯದಿಂದ ಪೋಗಬೇಡೆನುತೊಡ |
ಬಡಿಸೆ ವಿಪ್ರನು ಬಂದನು   || ೧೮೯ ||

ಬರಲು ಮಹೀಸುರಗೆಂದನು ಭೂಮಿಪ |
ಕರಪತ್ರ ಹತಿಗಳುಕಿ ||
ಬರಲಿಲ್ಲ ಕಂಬನಿ ದಕ್ಷಿಣಭಾಗವು |
ಪರರುಪಕಾರವಾಯ್ತು       || ೧೯೦ ||

ಒಂದು ಪೋಳ್ ವ್ಯರ್ಥವಾಯ್ತೆಂಬುದರಿಂದೀಗ |
ಬಂದಿತು ಜಲವೆನಗೆ ||
ಇಂದಿರೆಯರಸ ಮೆಚ್ಚಿದೆನೆಂದು ಕಾರುಣ್ಯ |
ದಿಂದ ಮೈದಡವಿದನು       || ೧೯೧ ||

ಭೂತಳಾಧಿಪ ಕೇಳು ನಿನ್ನ ಪರೀಕ್ಷಿಸ |
ಲೀತೆರದಲಿ ಬಂದೆನು ||
ಈತನುರ್ಜುನ ತಾನು ಮುರವೈರಿಯೆನುತಲಿ |
ಪ್ರೀತಿಯೊಳ್ ತೋರಿದನು || ೧೯೨ ||

ವಾರ್ಧಕ
ಹೊಳೆಹೊಳೆವ ಮಣಿಮಕುಟ ಮಕರಕುಂಡಲಯುಗದ |
ಸುಳಿಗುರುಳು ನೊಸಲ ಕಸ್ತುರಿಯ ಚಾತುರ್ಭುಜದ |
ಎಳೆನಗೆಯ ವಿವಿಧ ನಾಸಿಕದ ಪೀತಾಂಬರದ ಕೊರಳ ತುಳಸಿಯ ಮಾಲೆಯ ||
ಥಳಥಳಿಪ ದಂತಪಂಕ್ತಿಯ ಕಮಲಲೋಚನದ |
ಗಳದ ಮೂರೇಖೆಗಳ ಸುಂದರದ ವರದಿವ್ಯ |
ನಳಿನನಾಭನ ಚೆಲುವ ಮೂರ್ತಿಯಂ ನೋಡಿ ಮಿಗೆ ಧರಣಿಪಂ ಜಯವೆಂದನು      || ೧೯೩ ||

ರಾಗ ಸಾವೇರಿ ಅಷ್ಟತಾಳ
ಪಾಹಿ ಮಾಂ ದೇವ ಪಾಹಿ ಮಾಂ || ಪ ||
ದೇವ ಮಾಂ ಪಾಹಿ ದೇವಕಿ ನಂದನ | ಪಾಹಿ ಮಾಂ ದೇವ ಪಾಹಿ ಮಾಂ || ಅ ||

ಮಾಧಜಾಚ್ಯುತ ಮಧುಕೈಟಭವೈರಿ |
ವೇದಗೋಚರ ಹರಿ ಕೇಶವ ಶೌರಿ ||
ಕ್ರೋಧವರ್ಜಿತ ಶರಣಾಗತ ರಕ್ಷ |
ಸಾಧುಸಜ್ಜನಪಾಲ ಪಾಂಡವಪಕ್ಷ || ಪಾಹಿ ಮಾಂ        || ೧೯೪ ||

ಯಾದವ ಕುಲಕಮಲಾಂಬುಜಮಿತ್ರ |
ವೇದಗೋಚರವಿಷ್ಣು ನೀಲಾಭಗಾತ್ರ |
ಆದಿಮೂರುತಿ ಪರಬ್ರಹ್ಮಸ್ವರೂಪ |
ಓ ದಯಾಂಬುಧಿ ಪಾಹಿ ಕೀರ್ತಿಕಲಾಪ || ಪಾಹಿ ಮಾಂ            || ೧೯೫ ||

ಶಂಬರಾರಿಯ ಪಿತ ಫಲುಗುಣಮಿತ್ರ |
ಅಂಬರಚರ ಮನು ಮುನಿಜನಸ್ತೋತ್ರ ||
ಅಂಬುಜನಾಭ ಶ್ರೀನಿವಾಸದೇವ |
ನಂಬಿದ ಭಕ್ತ ಸಮೂಹ ಸಂಜೀವ | ಪಾಹಿ ಮಾಂ         || ೧೯೬ ||

ಶುಕ್ರಶಿಷ್ಯಾಂತಕ ಫಣಿರಾಜ ಶಯನ |
ಶಕ್ರಾದಿಸನ್ನುತ ಪಂಕಜನಯನ ||
ಚಕ್ರಕೌಮೋದಕಿಧರ ವನಮಾಲ |
ವಿಕ್ರಮಾಂಕಿತ ಬಹು ಫಲುಗುಣಶೀಲ | ಪಾಹಿ ಮಾಂ    || ೧೯೭ ||

ವಾರ್ಧಕ
ಹರಿಯ ಮಂಗಳ ಚಾರುಮೂರ್ತಿಯಂ ಕೀರ್ತಿಯಂ |
ಧರಣಿಪಂ ನೋಡಿ ನಲಿದಾಡುತಂ ಪಾಡುತಂ |
ಕರವ ಮುಗಿದೊಂದನೆಯ ಮಾಡುವಂ ಬೇಡುವಂ ಕಣ್ದಣಿಯೆ ಮುರಹರನನು ||
ಹರಿಪದವ ಬೆರಸುವಾಸಕ್ತಿಯಿಂ ಭಕ್ತಿಯಿಂ |
ಮರೆತು ದೇಹವನಯ್ದೆ ಸಂಧಿಸುತ ವಂದಿಸುತ |
ಹರುಷಾಮೃತಾಬ್ಧಿಯೊಳ್ ಮುಳುಗುವಂ ಮೊಳಗುವಂ ಜಯ ಜಯನಿನಾದದಿಂದ  || ೧೯೮ ||

ರಾಗ ಕಾಂಭೋಜಿ ಝಂಪೆತಾಳ
ಜನಪನೀ ಪರಿಯಿಂದ ನುತಿಗೆಯ್ವುತಿರಲಾಗ |
ವನಜಾಸನನ ಜನಕ ಮುದದಿ ||
ವಿನಯದಿಂ ಮನ್ನಿಸುತಲಿಂತೆಂದನೆಲೆ ಭೂಪ |
ನಿನಗೆ ಮೆಚ್ಚಿದೆ ದೇಹವೀವೆ || ೧೯೯ ||

ತವ ತನುಜ ನಿನ್ನೆ ಸಂಗ್ರಾಮದಲಿ ಬಂದೆಮ್ಮ |
ದಿವಿಜ ಪತಿಜನ ತನ್ನ ಸಹಿತ ||
ಜವಗೆಡಿಸಿ ಬಂದ ಸಾಹಸಕೆ ಮೆಚ್ಚಿದೆನಯ್ಯ |
ಭುವನದೊಳು ಸರಿಯುಂಟೆ ನಿನಗೆ  || ೨೦೦ ||

ಧಾತ್ರಿಪತಿ ಕೇಳ್ ದ್ವಿಹಯವಿಹುದು ನಿನ್ನಯ ಪುತ್ರ |
ಮಿತ್ರರನು ಕರಕೊಂಡು ಮುದದಿ ||
ಅತ್ರ ಸಂತೋಷದಲಿ ಮುಗಿಸೆನಲು ಕೇಳ್ದು ಶತ |
ಪತ್ರಲೋಚನನಿಗಿಂತೆಂದ  || ೨೦೧ ||

ಪೊರೆಯೊಳಗ್ನಿಜ್ವಾಲೆಯಿರುತಿರಲು ಬಿಸಿಜಲವ |
ನರಸುವರೆ ಹಿಮವನೋಡಿಪರೆ ||
ಪರಮಪಾವನಮೂರ್ತಿ ನಿನ್ನ ದರುಶನವೆನಗೆ |
ದೊರಕೊಂಡ ಮೇಲಿನ್ನು ಕ್ರತುವೆ     || ೨೦೨ ||

ಎನ್ನ ಬಿನ್ನಪವನವಧರಿಸು ಕರುಣಾಂಬುಧಿಯೆ |
ಎನ್ನ ಸತಿಸುತರೆನ್ನ ಗೃಹವ ||
ಎನ್ನೊಳಿಹ ರಾಜ್ಯವನು ಎನ್ನ ಸರ್ವಸ್ವವನು |
ನಿನ್ನ ಪದಕರ್ಪಿಸಿದೆನೆನಲು || ೨೦೩ |

ಭಾಮಿನಿ
ಪರಮಪಾವನಮೂರ್ತಿ ಲಾಲಿಸು |
ನರಗೆ ಭಕ್ತಿಯು ತೋರಿ ತದನಂ |
ತರದಿ ಸೇನೆಯು ಸಹಿತ ಮೂರ್ ದಿನವಿದ್ದು ಪ್ರೀತಿಯಲಿ ||
ತುರಗವೆರಡನು ಬಿಡಿಸಿಕೊಂಡತಿ |
ಹರುಷದಿಂದಾ ನೃಪತಿ ಸಹಿತಲೆ |
ಪೊರಟರಲ್ಲಿಂ ಮುಂದೆ ಪೋಗುವ ಹಯದೊಡನೆ ಭಟರು          || ೨೦೪ ||

ರಾಗ ಮಧ್ಯಮಾವತಿ ಅಷ್ಟತಾಳ
ಮಂಗಲಂ ಮಂಗಲಂ || ಮಹೇಶ್ವರಿಗೆ || ಪ ||

ಮಾರನಯ್ಯನ ಮಾತ | ಮಿರದೆ ಗೋಕುಲ |
ಭೂವರೇಣ್ಯನುದರದಲಿ ಪುಟ್ಟಿ ||
ಧೀರ ಕಂಸಗೆ ತನ್ನ ಘೋರ ರೂಪವ ತೋರಿ |
ಹಾರಿದೆ ಗಗನಕ್ಕೆ ಸೇರಿದೆ ಧರೆಗೆ || ಮಂಗಲಂ           || ೨೦೫ ||

ಅಷ್ಟ ಭುಜಗಳಿಂದ | ದುಷ್ಟ ಮಹಿಷನ ಕೊಂದು |
ಸೃಷ್ಟಿಯ ಪರಿಪಾಲಿಪ ಮಾತೆಗೆ ||
ಕಷ್ಟ ಬಂದರ ಮನ | ದಿಷ್ಟವ ಪಾಲಿಪ |
ವಿಷ್ಟರಶ್ರವಾನುಜೆ ಶ್ರೇಷ್ಠಳಿಗೆ || ಮಂಗಲಂ     || ೨೦೬ ||

ಧರೆಯೊಳು ಕುಂಜರ | ಗಿರಿಯೊಳು ನೆಲಸಿದ |
ಪರಮಾತ್ಮಸಹಭವೆ ಗಿರಿಜಾತೆಗೆ ||
ಚರಣ ನಂಬಿದರನ್ನು | ಕರುಣದಿ ಸಲಹುವ |
ಕರುಣಾಸಾಗರೆ ದುರ್ಗಾಂಬಿಕೆಗೆ  || ಮಂಗಲಂ           || ೨೦೭ ||

ಯಕ್ಷಗಾನ ತಾಮ್ರಧ್ವಜನ ಕಾಳಗ ಮುಗಿದುದು
ಶ್ರೀಕೃಷ್ಣಾರ್ಪಣಮಸ್ತು