ರಾಗ ಮಾರವಿ ಏಕತಾಳ

ಈ ಪರಿಯಲಿ ಕುಂಭಜನು | ಪೇಳುತ | ಕೋಪದೊಳೇರಿದ ರಥನು ||
ಕಾಪಾಡುತ ಸೇನೆಯನು | ಧೈರ್ಯದಿ | ಚಾಪವ ಪಿಡಿದೆತ್ತಿದನು  || ೭೫ ||

ಪಾರ್ಥನೆ ಕೇಳ್ ನೀ ನಮ್ಮಾ | ನೀಕಿಯ | ಸ್ವಾರ್ಥಕೆ ಸವರಿದೆ ವರ್ಮಾ ||
ವರ್ಥಿಯಿಂದಲಿ ನಾ ಬೊಮ್ಮ | ನಸ್ತ್ರದಿ | ಕತ್ತರಿಸಿದೆ ನೋಡ್‌ಮುನ್ನ || ೭೬ ||

ಕತ್ತರಿಸಿದ ಕಣೆಗಳನು | ಕಾಣುತ | ಗೋತ್ರಾರಿಯ ಸುತ ತಾನು ||
ಸತ್ತ್ವದಿ ಗುರುಭೂಸುರನ | ಸೂತನ | ಯತ್ನದಿ ಮೈಮರೆಸಿದನು  || ೭೭ ||

ಕಂಡಾಕ್ಷಣ ದ್ವಿಜವರನು | ಶೌರ್ಯದಿ | ಭಂಡಿಯ ನಡೆಸುತ ತಾನು ||
ಪಂಡಿತ ನೀನಹುದೆನುತ | ಪಡೆಯನು | ಚಂಡಾಡಿದ ಪೊಗಳುತ್ತ  || ೭೮ ||

ಮೆಚ್ಚಿದೆ ಫಲುಗುಣ ನಿನ್ನ | ಸಾರಥಿ | ಯಚ್ಚುತವಾಘೆಯ ಮುನ್ನ ||
ಬೆಚ್ಚದೆ ಕತ್ತರಿಸಿದೆನು | ಸಾಹಸ | ವೆಚ್ಚವ ಮಾಡುವುದಿನ್ನು  || ೭೯ ||

ಭಾಮಿನಿ

ಕಲಶಜನ ಸಾಹಸಕೆ ಕೃಷ್ಣನು |
ತಲೆಯ ತೂಗುತಲಾಗ ಬಲು ಮೂ |
ದಲಿಸಿ ಪಾರ್ಥನೊಳೆಂದ ಗುರುವರ ಗೆಯ್ದ ಸಾಹಸವ ||
ನೆಲನ ಬಯಸುವೆ ವೈರಿಗಳ ಕೊಳು |
ಗುಳದಿ ಜಯಿಸದೆ ಹೇಡಿಯಂದದೊ |
ಳಳುಕುವುದು ಸರಿಯಲ್ಲ ನೋಡೆನಲೆಂದನಾ ದ್ರೋಣ  || ೮೦ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪರಮಪುರುಷನೆ ಕೇಳು ಪಾರ್ಥನೊ | ಳರುಹಿದುದ ನಾನೆಲ್ಲ ಬಲ್ಲೆನು ||
ಕರುಣವುಭಯತರಲ್ಲಿ ಸಮ ನಿನ | ಗಿರುವುದಿಂದು  || ೮೧ ||

ನರನ ಸಾರಥಿಯಾಗಿ ಸರ್ವರ | ಧುರದಿ ಕೊಲಿಸುವುದಾವ ನೀತಿಯು |
ಶರಣರಲಿ ನೀಚೋಚ್ಛಭಾವವ  | ಮೆರೆವುದೇನೈ  || ೮೨ ||

ಭಕ್ತನಲ್ಲವೆ ನಿನಗೆ ನಾ ಪರ | ಮಾತ್ಮ ನೀನಾಗಿರಲು ಶಿಷ್ಟರ |
ಪೊತ್ತವನು ತಾನೆಂಬ ಬಿರುದುಗ | ಳೆತ್ತ ತೆಗೆದೆ  || ೮೩ ||

ಅಂತಿರಲಿ ನಡತೆಗಳ್ ಜಗದೊಳೇ | ಕಾಂತ ಭಕ್ತರು ಪಾಂಡವರು ನಿಜ |
ಕಂತುಜನಕನು ಬಿಡನು ಬಿರುದುಗ | ಳಿಂತು ಧುರದಿ  || ೮೪ ||

ಹರಿಯೆ ನೀ ನೋಡೀಗ ಜರಠನ | ಧುರಪರಾಕ್ರಮವೆಂದು ಪಾರ್ಥನೊ |
ಳರುಹಿದನು ನೀನಂದು ಕಲಿತಿಹ | ತರಗಳಲ್ಲ  || ೮೫ ||

ಭಾರ್ಗವಾಸ್ತ್ರವ ತೆಗೆದು ಭೂಸುರ | ಮಾರ್ಗಣದಿ ತಾ ಜಪಿಸಿ ಬಿಡುತಿರೆ ||
ಭೋರ್ಗುಡಿಸುತಿರಲಗ್ನಿ ಪರಿಯೊಳ್ | ಸ್ವರ್ಗಪಥದಿ  || ೮೬ ||

ಪಾರ್ಥ ವಿಸ್ಮಯಗೊಂಡು ಸೈನ್ಯದ | ಪಾರ್ಥಿವರಿಗುತ್ಸಾಹಗೊಳಿಸಿ ಸ ||
ರ್ವಾಸ್ತ್ರಘಾತಕ ವೈಷ್ಣವಾಸ್ತ್ರದಿ | ವ್ಯರ್ಥಗಯ್ವೆ  || ೮೭ ||

ಇಂತು ಮಂತ್ರಿಸಿ ಬಿಟ್ಟ ಮಾರ್ಗಣ | ವೆಂತು ಪೋದುದೊ ಸಮರಮಧ್ಯದೊ |
ಳಂತರಂಗದೊಳಾಗ ಪಾರ್ಥನು | ಚಿಂತಿಸುತ್ತ  || ೮೮ ||

ಇರಲು ಯದುವರ ಕಂಡು ತನ್ನಯ | ಕರದ ವಾಘೆಯ ಬಿಸುಟು ಪಾರ್ಥನ |
ಶರ ನಿರರ್ಥಕವಾಗಲದ ತಾ | ಕರದಿ ಪಿಡಿದು  || ೮೯ ||

ಕೊರಳಿನೊಳಗಾ ಭಾರ್ಗವಾಸ್ತ್ರವ | ಧರಿಸುತಿರೆ ಹರಿ ಹಾರದಂದದೊಳ್ |
ನರನು ಬಿನ್ನವಿಸಿದನು ವೈರಿಯ | ಶರವ ನೀವು ||  || ೯೦ ||

ಧರಿಸುವರೆ ಕಾರಣವಿದೇನೆನೆ | ಹರಿಯು ನರನೊಡನೆಂದ ಶರಣರ ||
ಪೊರೆವೆನುದರದಿ ಸರ್ವವನು ನಾ ನಾ | ಶ್ಚರಿಯವಲ್ಲ  || ೯೧ ||

ಪಗೆಯವರ ಜಯಿಸುವಡೆ ಪೂರ್ವದೊ | ಳಗಜೆಯಿತ್ತೈಷಿಕವ ಬೇಗದೊಳ್ ||
ತೆಗೆಯೆನಲು  ಕೇಳ್ದಾಗ ಪಾರ್ಥನು | ಸೊಗಸಿನಿಂದ  || ೯೨ ||

ಬಿಡಲು ಕಂಗೆಟ್ಟಾಗ ಕುರುಬಲ | ಪೊಡವಿಯಲಿ ಮೈಮರೆಯಲಿತ್ತಲು |
ಕೊಡನ ಸುತ ಪಿಂತಿರುಗೆ ಕೌರವ | ನಡುವೆ ನುಡಿದ  || ೯೩ ||

ಭಾಮಿನಿ

ಏನನೆಂಬೀ ರಣದಿ ಪಾರ್ಥನ |
ಬಾಣಕಂಗವನಿತ್ತು ಬಲುಬಲ |
ಕ್ಷೆಣಿಪಾಲಾಯ್ತಿನ್ನು ಷಡುರಥರೆಲ್ಲಿಗಯ್ದಿದರೋ ||
ಕಾಣೆ ಜಯಲೇಶವನು ಕಲಿಗುರು |
ದ್ರೋಣ ತತ್ಸುತರುಎನ್ನಯ |
ಗೋಣ ಕೊಯ್ದರು ಶಿವ ಶಿವಾ ದುರ್ವಿಧಿಯನೇನೆಂಬೆ  || ೯೪ ||

ಭೂಪತಿಯ ಶೋಕವನು ಕಾಣುತ |
ಲಾ ಪರಕ್ರಮಿ ಕರ್ಣ ವರಶರ |
ಚಾಪವನು ಝೇಂಕರಿಸುತಾ ಕುರುಭೂಪಗಿಂತೆಂದ ||
ತಾಪವನು ಬಿಡು ಭೂಪ ವೈರಿಪ್ರ |
ತಾಪ ನಿಲಿಸುವೆ ಧುರದಿ ದಿಟವಿದು |
ಲೋಪವಿಲ್ಲದ ತೆರದಿ ನಿನ್ನಯ ಭಾಷೆ ಪಾಲಿಪೆನು  || ೯೫ ||

ರಾಗ ಕೇದಾರಗೌಳ ಝಂಪೆತಾಳ

ಕುರುವರನೆ ಕೇಳು ಎನ್ನ | ಸಾಹಸವ | ಧುರದಿ ನಿನ್ನರಿಗಳನ್ನ ||
ಸೆರೆಪಿಡಿದು ಸಾಕೆನಿಸುವೆ | ಸಂಗ್ರಾಮ | ಶರಧಿ ನಮಗೇಕೆನಿಸುವೆ  || ೯೬ ||

ಯಾದವನ ಬಲದಿ ಜೀಯ | ಯುದ್ಧಜಯ | ವಾದುದವರಿಗೆ ನಿಶ್ಚಯ ||
ಕಾದಲಸದಳ ಎನ್ನೊಳು | ನೀ ನೋಡು | ಹಾದಿ ತೋರ್ಪೆನು ಕ್ಷಣದೊಳು || ೯೭ ||

ಹಿಂದೆ ದೇವೇಂದ್ರನೆನಗೆ | ಒಲಿದಿತ್ತ | ನೊಂದು ಶಕ್ತಿಯ ನರನಿಗೆ ||
ಎಂದು ಇಟ್ಟಿರುವೆನದರ | ತೆಗೆವೆ ನೋ | ಡೆಂದೆನಲ್ಕಂಧಕುವರ  || ೯೮ ||

ನುಡಿದನೀವರೆಗೆ ನೀನು | ಪಾರ್ಥನಿಗೆ | ಬಿಡದಿರಲು ಬೀಜವೇನು ||
ಕೆಡುಕು ಮಾಡಿದೆ ಕಾರ್ಯವ | ಎಂದೆನಲ್ | ನುಡಿದ ಕನ್ಯಾತನುಭವ || ೯೯ ||

ಕುಂಭಜಾದಿಗಳಿರುತಿರೆ | ಅಪಜಯವ | ಹಂಬಲಿಸಲುರೆ ಬಿಡುವರೆ ||
ಎಂಬುದನು ನೋಡಿ ನಿತ್ತೆ | ನಲ್ಲದಿರ | ಲಿಂಬುಗೊಡೆ ನರಗೆ ಮತ್ತೆ || ೧೦೦ ||

ಅಕ್ಷಯೇಷುಧಿ ಬೆನ್ನಿಲಿ | ರಥದಲ್ಲಿ | ಪಕ್ಷಿವಾಹನ ಧುರದಲಿ ||
ಲಕ್ಷ್ಯಗೊಂಬನೆ ನಮ್ಮನು | ಗಾಂಢೀವಿ | ದಕ್ಷನಂತಿಹನು ತಾನು  || ೧೦೧ ||

ಭಾಮಿನಿ

ಎಂದೆನಲು ಭೂಪನೊಳು ಕೋಪಿಸು |
ತೆಂದನೆಲೆ ನೋಡಕ್ಷಯೇಷುಧಿ |
ಸ್ಯಂದನವು ವಿಜಯಾಖ್ಯ ಭಾರ್ಗವನಿತ್ತ ಧನು ಶರವು ||
ಇಂದಿನಾಹವದೊಳಗೆ ಪಾರ್ಥನ |
ಚಂದ ನೋಡೈ ಬರಲು ನಾ ಬಿಡೆ |
ನೆಂದು ಕಂಗಳನುರುಹಿ ನರಗಿದಿರಾಗುತಿಂತೆಂದ  || ೧೦೨ ||

ರಾಗ ಕಾಂಭೋಜ ಮಟ್ಟೆತಾಳ

ಅರರೆ ಪಾರ್ಥ ಕೇಳು ಭೀಷ್ಮ ಗುರುಗಳನ್ನು ನೀ |
ಧುರದಿ ಗೆಲಿದೆನೆಂಬ ಗರ್ವ ಬೇಡ ಸುಮ್ಮನೆ ||
ತರಣಿಸುತನು ಬಂದನೆಚ್ಚರಿಕೆಯಿಂದಲಿ |
ಹರಿಯೊಳಾಲೋಚನೆಯ ಗೆಯ್ದು ನಿಲ್ಲು ಭರದಲಿ  || ೧೦೩ ||

ಎನಲು ಕೇಳುತುಬ್ಬಿ ಪಾರ್ಥ ಕಿಡಿಯನುಗುಳುತ |
ಇನಕುಮಾರನಿದಿರು ಬರಲು ಸಂತವೀಸುತ ||
ವನಜನಾಭನೆಂದ ನರನ ಕರವ ಪಿಡಿಯುತ |
ಶಿನಿಯತನಯನನ್ನು ಕಳುಹು ಧುರಕೆ ಕರೆಯುತ  || ೧೦೪ ||

ಇಂದ್ರದತ್ತ ಶಕ್ತಿಯನ್ನು ಧರಿಸುತಿದಿರಲಿ |
ಬಂದನಾತನೊಡನೆ ಸಮರ ಬೇಡವಿಂದಿಲಿ ||
ಒಂದು ನಿಮಿಷದಿಂದಲರಿಯ ಗರ್ವ ನಿಲಿಸುವ |
ಸ್ಯಂದನವು ನಮ್ಮದಿಹುದು ನೋಡು ಜಯಿಸುವ  || ೧೦೫ ||

ಹರಿಯ ಮಾತ ಕೇಳಿ ಸಾತ್ಯಕಿಯ ಪಾರ್ಥನು |
ಕರೆದು ಕರ್ಣನಿದಿರು ಯುದ್ಧಕ್ಕಾಗಿ ನಿನ್ನನು ||
ಭರದಿ ಕಳುಹಿಸುವೆನು ಪೋಗೆನುತ್ತ ವೀಳ್ಯವ |
ಧುರದಿ ಜಯಿಸಿ ಬಾರೆನುತ್ತಲಿತ್ತ ಪಾಂಡವ  || ೧೦೬ ||

ಭಾಮಿನಿ

ನರನೊಳಪ್ಪಣೆಗೊಂಡು ಸಾತ್ಯಕಿ |
ಪರಮಹರುಷಿತನಾಗಿ ಕೃಷ್ಣನ |
ಚರಣಕಭಿವಂದಿಸಲು ಹರಿ ನಿಜರಥದೊಳೇರಿಸುತ ||
ನರಿಗಳಿದಿರಲಿ ಗರ್ಜಿಸುವ ಕೇ |
ಸರಿಯವೋಲ್ ತೆರಳೆಂದು ಕಳುಹಲು |
ತರಣಿಸುತಗಿದಿರಾಗಿ ಶರಮಳೆಗರೆವುತಿಂತೆಂದ  || ೧೦೭ ||

ರಾಗ ಯರಕಲಕಾಂಭೋಜ ಆದಿತಾಳ

ಕೀಳುವಂಶಜನೆ ನೀನು | ಕೌರವನೊಳು | ಬಾಳಿ ಬದುಕಿದವನು ||
ಕಾಳಗದೊಳಗಿದಿರಾಗುತೆನ್ನಯ ಕ | ಟ್ಟಾಳುತನವ ನೀ ನೋಡು  || ೧೦೮ ||

ಬಾಯಿಗೆ ಬಂದ ಪರಿ | ಪೇಳಲು ಯಾವ | ರಾಯನ ಮಗನುಸಿರೈ ||
ಆ ಯಯಾತಿಯ ಶಾಪದಿಂದ ನಿಮ್ಮವರೊಳು | ರಾಯತನವು ಉಂಟೇನೈ || ೧೦೯ ||

ಆಧಿರಥಿಯೆ ನೀ ಕೇಳು | ಕ್ಷತ್ರಿಯರಲ್ಲಿ | ಯಾದವರಲ್ಲೊ ಪೇಳು ||
ಸಾಧುಗ್ರಸೇನಗೆ ದಯದಿ ರಾಜ್ಯವನಿತ್ತು | ಮಾಧವ ಪಾಲಿಪನೈ  || ೧೧೦ ||

ಸರಿ ಹಿಂದೆ ಬೇಗ ನೀನು | ನಿನ್ನೊಡನೆ ಸಂ | ಗರ ತರವಲ್ಲ ನಾನು ||
ನರನ ಬರಿಸು ಶೌರಿಯಿದಿರೊಳು ಶರಗಳ | ಪರಿಯನೆಲ್ಲವ ತೋರ್ಪೆನು || ೧೧೧ ||

ಹೊಳೆಯನು ದಾಟದವ | ವಾರಿಧಿ ಕಾಲ್ | ಹೊಳೆಯೆಂಬುದಾವ ಭಾವ ||
ಕಲಹದೊಳೆನ್ನೊಳಗುಳಿದು ಮತ್ತರ್ಜುನ | ಗಳವಿ ಕೊಡುವುದುಚಿತ || ೧೧೨ ||

ಹಿಂದೆ ನಿಮ್ಮಯ ಸಾಂಬನು | ಸ್ವಯಂವರ | ಕೆಂದು ಬಂದಿರಲು ತಾನು ||
ಮಂದಗಮನೆ ಲಕ್ಷಣೆಯ ಸೆಣಸಲು ಕಟ್ಟಿ | ದಂದವ ಮರೆತೆ ನೀನು || ೧೧೩ ||

ಹಲಧರ ನೋಡು ಮತ್ತೆ | ಹಸ್ತಿನಾವತಿ | ನೆಲವ ಕೋಪಿಸುತಲೆತ್ತೆ ||
ಕಳವಳಗೊಂಡು ಕೌರವನ ಪ್ರಾಣವ ಸಂಧಿ | ಯೊಳಗುಳುಹಿದ ಮರೆತೆ || ೧೧೪ ||

ರಣದಿ ಭೂರಿಶ್ರವಸ | ಬಿದ್ದಿರೆ ಕಂಡಾ | ಕ್ಷಣ ತೋರಿದೆ ಸಾಹಸ ||
ಘನ ಪರಾಕ್ರಮಿ ನಿನಗಣೆ ಕಾಣೆ ವೀರರೊ | ಳೆನಲೆಂದ ಶೈನೇಯನು || ೧೧೫ ||

ಹಿಂದಿನಿಂದಲಿ ಪಾರ್ಥಿಯ | ತೋಳ್ಗಳ ಶರ | ದಿಂದ ಛೇದಿಸುತ ಜಯ ||
ಹೊಂದಿದ ವೀರಾಧಿವೀರ ನೀನೈಸೆ ನೋ | ಡಿಂದೆನ್ನ ಶರಸವಿಯ  || ೧೧೬ ||

ಭಾಮಿನಿ

ಯಾದವರು ಬಾಯ್‌ಬಡುಕರೆಂಬುದ |
ನಾದಿಯಲಿ ನಾನರಿತಿಹೆನು ಕುರು |
ಮೇದಿನೀಶನ ಕಾರ್ಯ ಸಾಧಿಸಲಾಡಿ ಫಲವೇನು ||
ನೀ ಧನಂಜಯನಾಜ್ಞೆಯನು ಬೇ |
ಕಾದ ಪರಿಯಲಿ ತೋರೆನುತ ಬಲು |
ಮೂದಲಿಸಿ ಸಾತ್ಯಕಿಗೆ ಬಾಣವನೆಚ್ಚನಾ ಕರ್ಣ  || ೧೧೭ ||

ರಾಗ ನೀಲಾಂಬರಿ ಪಂಚಾಗತಿ ಮಟ್ಟೆತಾಳ

ಬಿಟ್ಟ ಬಾಣವ ಕಡಿದು ಯಾದವ | ಸಿಟ್ಟಿನಿಂದಲಿ ಮಸೆದ ಕಣೆಗಳ ||
ಬಿಟ್ಟು ಕರ್ಣನ ರಥವ ಮುಚ್ಚುತ | ದುಷ್ಟ ನಿನ್ನಯ ತೋರು ಸತ್ತ್ವವ || ೧೧೮ ||

ಎನಲು ಕೇಳುತಲಿನತನೂದ್ಭವ | ಮನದಿ ರೋಷವಗೊಂಡ ಚಾಪವ ||
ಬಿನುಗು ಯಾದವ ನಿಲ್ಲೆನುತ್ತಲಿ | ಅನಲಬಾಣವನೆಚ್ಚ ರಣದಲಿ  || ೧೧೯ ||

ಕಂಡು ಯಾದವ ವಾರುಣಾಸ್ತ್ರವ | ಗೊಂಡು ಮಂತ್ರಿಸಿ ಬಿಡಲು ಶರದಲಿ ||
ಪುಂಡರೀಕಗಳಂತೆ ರಥಿಕರ | ಮಂಡೆ ತೋರ್ಪುದೇನೆಂಬೆ ಚೋದ್ಯವ || ೧೨೦ ||

ಭಾಮಿನಿ

ಈ ತೆರದ ಶಸ್ತ್ರಾಸ್ತ್ರದಲಿ ದಿನ |
ನಾಥಸುತ ಸಾತ್ಯಕಿಯರಿರ್ವರು ||
ಧಾತುಗೆಡುತೆಚ್ಚರಿಸಿ ಸರಿಸಮವಾಗುತಿರಲಂದು ||
ಸೂತಜನು ಕೋಪಿಸುತ ಕಲ್ಪದ |
ಭೂತನಾಥನ ತೆರದಿ ವೈರಿವ ||
ರೂಥವನು ಪುಡಿಗೆಯ್ದು ಚಾಪವ ಪಿಡಿವುತಿಂತೆಂದ  || ೧೨೧ ||

ರಾಗ ಮಾರವಿ ಏಕತಾಳ

ಫಡ ಸಾತ್ಯಕಿ ನಿನ್ನಸ್ತ್ರದ ಪೌರುಷ | ನುಡಿಯದಿರೀ ತೆರದಿ ||
ಪಿಡಿದಿಹ ಚಾಪದಿ ಹೊಡೆದೊಡಲರಿವೆನು | ತಡೆಯುವರನು ಕರೆಸೈ || ೧೨೨ ||

ನಾನಿರಲನ್ಯರ ಕರೆಸುವುದೇತಕೆ | ಕಾನೀನನೆ ಕೇಳೈ ||
ತ್ರಾಣವುಳ್ಳಡೆ ನಿಲ್ ನಿಲ್ಲೆನುತಾಕ್ಷಣ | ಶೈನೇಯನು ಕರದಿ  || ೧೨೩ ||

ವರಚಾಪವ ಗೊಂಡೀರ್ವರು ಪ್ರಹರಿಸ | ಲುರಿಯೇಳುವ ತೆರದಿ ||
ಸುರರಾಶ್ಚರ್ಯವ ಕೊಂಡಂಬರದಲಿ | ಬೆರಗಾದರು ಭಯದಿ  || ೧೨೪ ||

ಮತ್ತೆ ಸೂತಜನ ಧನುವೆತ್ತುತ ಸಾತ್ಯಕಿ | ಮಸ್ತಕದಲಿ ಹೊಡೆಯೆ ||
ಪೃಥ್ವಿಗೊರಗಿ ಬಲು ಸತ್ವದೊಳರ್ಧ ಮು | ಹೂರ್ತದೊಳೆದ್ದು ಮಿಗೆ || ೧೨೫ ||

ಭಾಮಿನಿ

ಕೂರಸಿಯ ಕೊಂಡಾಗ ಕರ್ಣನ |
ತೀರಿಸುವೆನೆಂದೆನುತ ಕಲ್ಪದ |
ಘೋರ ಭೈರವನಂತೆ ಗರ್ಜಿಸಿ ಯೋಚಿಸುತಲಂದು ||
ವೀರಪಾರ್ಥನ ಭಾಷೆ ನಿನಗುಪ |
ಕಾರವಾಯ್ತೆಂದೆನಲು ಸೂತಜ |
ನಾರುಭಟಿಸುತ ದಿವ್ಯ ಕರವಾಲವನು ಕೈಗೊಂಡು  || ೧೨೬ ||

ರಾಗ ಘಂಟಾರವ ಅಷ್ಟತಾಳ

ಭೂವರೇಣ್ಯನೆ ಕೇಳಿತ್ತಲಸಿಯುದ್ಧ |
ಕೋವಿದರು ಪುಲಕಾದಿ ಬಹುಪರಿ | ಭಾವಗಳ ತೋರಿಸಿದರು  || ೧೨೭ ||

ಅಂಗದೇಶಾಧಿಪತಿಯು ಕೋಪಿಸಿ ಯದು |
ಪುಂಗವನ ಕರದಸಿಯ ಕೋಪದಿ |  ಭಂಗಗಯ್ದನು ನಿಮಿಷದಿ  || ೧೨೮ ||

ಗದೆಯ ಗೊಂಡೆದುಕುಲಜಮರ್ಷದೊಳೆಂದ |
ನಧಮ ನಿನ್ನೆದೆ ಬಗಿವೆ ರಣದೊಳ | ಗಿದಿರು ನಿಲ್ ನಿಲ್ಲೆನುತಲಿ  || ೧೨೯ ||

ಆಗ ಕರ್ಣ ಮಹಾಗದೆಗೊಂಡಿದಿ |
ರಾಗುತೀರ್ವರು ರಣದಿ ಸರಿಸಮ | ವಾಗುತಿರಲಾ ಸಮಯದಿ  || ೧೩೦ ||

ಗದೆಯ ಬಿಟ್ಟಿದಿರಿದಿರಿನಲಿ ಮಲ್ಲ |
ಕದನವನು ಕೈಕೊಂಡರೀರ್ವರು | ಅದುಭುತವನೇನೆಂಬೆನು  || ೧೩೧ ||

ಭಾಮಿನಿ

ಸೃಷ್ಟಿಪತಿ ಕೇಳುಭಯತರು ಬಲು |
ಸಿಟ್ಟಿನಿಂದಾರ್ಭಟಿಸುತಲಿ ನಿಜ |
ಮುಷ್ಟಿಯುದ್ಧವನೆಸಗಿದರು ಸಿಡಿಲೆರಗಿದಂದದಲಿ ||
ಕೃಷ್ಣನಂಘ್ರಿಯ ನೆನೆದು ಪಾಂಡವ |
ರಿಷ್ಟವನು ಸಾಧಿಸುತ ಕರ್ಣನ |
ರಟ್ಟೆಯನು ಪಿಡಿದೆತ್ತಿ ಬಿಸುಟನು ನೆಲದೊಳೇನೆಂಬೆ  || ೧೩೨ ||

ಧರಣಿಪತಿ ಕೇಳತ್ತ ರವಿಸುತ | ಧುರದಿ ಸಾತ್ಯಕಿಯೊಡನೆ ಮಲ್ಲರ |
ತೆರದಿ ಬಹುಪರಿ ಬಾಹುಯುದ್ಧದೊಳ್ ಧರೆಗೆ ಮೈಗೊಡಲು ||
ಭರದೊಳದ ಕಾಣುತ್ತ ಕರಿಪುರ | ದರಸ ಚಿಂತಾಭಾರದಲಿ ತರ |
ಹರಿಸಿದನು ತನಗಾರು ಮುಂದಕೆ ಕದನಕೋವಿದರು  || ೧೩೩ ||

ರಾಗ ಶಂಕರಾಭರಣ ರೂಪಕತಾಳ

ಶಿವ ಶಿವ ಸಂಗರದೊಳಗರಿ | ನಿವಹವ ನಿಮಿಷದಿ ಕರ್ಣನೆ |
ಸವರುವೆಯೆಂದೆನುತೀಪರಿ | ಭವಣೆಯು ನಿನಗಾಯ್ತೆ  || ೧೩೪ ||

ನೀನಿರೆ ರಣದಲಿ ಪಾಂಡವ | ಕಾನನಕನಲನ ವೋಲ್ ನದಿ |
ಸೂನು ಕೃಪಾದ್ಯರನೊಲಿಸದೆ | ಮಾನದಿ ಸಲಹಿದೆನೈ  || ೧೩೫ ||

ಈ ತೆರಮಾದುದೆ ಹಾ ಪುರು | ಹೂತನ ಸುತಗಿದಿರ್ಯಾರು ||
ಭೂತದಳದೊಳಗೆಂದೆನುತಲಿ | ಕಾತರಿಸಿದನಂದು  || ೧೩೬ ||

ಭಾಮಿನಿ

ಕುಂಭಿನೀಶನೆ ಕೇಳು ಬಳಿಕಾ |
ಲಂಬುಸನು ನಡೆತಂದು ಧುರಕಾ |
ರೆಂಬುದನು ಯೋಚಿಸುವ ಕುರುಭೂವರನ ಸಂತವಿಸಿ ||
ಕಂಬನಿಯನೊರಸುತ್ತ ಪಾರ್ಥನ |
ಬೆಂಬಿಡದೆ ಸೋಲಿಸುವೆ ವೀಳ್ಯ ವಿ |
ಲಂಬಿಸದೆ ಎನಗಿತ್ತು ಕಳುಹೆಂದೆನುತಲಿರಲಂದು  || ೧೩೭ ||

ವಚನ
ಆಸುರನೆಂದುದ ಕೇಳ್ದಾ ನೃಪ ಸಂತೋಷದೊಳಪ್ಪಣೆಯಿತ್ತು ಕಳುಹಲ್ ವಾಸವಸುತನಿದಿರಿಗೆ ಖಳ ಕೇಸರಿಯಂತಾರ್ಭಟಿಸುತೈತಂದಂ

ರಾಗ ಸೌರಾಷ್ಟ್ರ ತ್ರಿವುಡೆತಾಳ

ಖಳನು ಬರುತಿರೆ ಕಂಡು ಯಾದವ | ತಿಲಕ ಪಾರ್ಥನ ಕರೆದು ಪೇಳಿದ |
ನಳಿನಸಖನಸ್ತಮಿಸಿದನು ಕ | ತ್ತಲೆಯೊಳಿಂದು  || ೧೩೮ ||

ಅರಿಗಳಾರೆಮ್ಮವರು ಯಾರೆಂ | ದರಿಯದೆಲೆಸಾದಿಗಳು ರಥಿಕರು |
ಧುರದಿ ಕಂಗೆಟ್ಟಿಹರು ಶಕ್ತಿಯ | ತರಣಿಸುತನು  || ೧೩೯ ||

ಇಟ್ಟಿಹನು ನಿನಗೆಂದು ಮುಂದಿನ | ದೃಷ್ಟನಮಗೆಂತಿಹುದೊ ಭೀಮಗೆ |
ಪುಟ್ಟಿಹನ ಕಳುಹೀಗ ಬಂದಿಹ | ದುಷ್ಟನಿದಿರು  || ೧೪೦ ||

ನಿನ್ನಸುವ ಪಾಲಿಸುವ ಕೌರವ | ರನ್ನು ಕಂಗೆಡಿಸುವನು ಕರ್ಣನ |
ಘನ್ನತಿಗೆ ನಿಲಿಸುವನು ನೋಡೀ | ಗನ್ಯರೇಕೆ  || ೧೪೧ ||

ಅಂಬುಜಾಕ್ಷನ ನುಡಿಗೆ ನರ ಹೈ | ಡಿಂಬಿಯನು ಕರೆದೆಂದ ವೈರಿ ಕ |
ದಂಬವನು ಜಯಿಸೆಂದು ಕಳುಹಿದ | ಸಂಭ್ರಮದಲಿ  || ೧೪೨ ||

ಭಾಮಿನಿ

ಅಪ್ಪಣೆಯಗೊಂಡಾಗ ಕರಗಳ |
ಚಪ್ಪಳಿಸುತಾರ್ಭಟಿಸಿ ಕಂಗಳ |
ರೆಪ್ಪೆಯನು ಹಾರಿಸುತ ಬಂದಾಲಂಬುಸನ ಕಂಡು ||
ಸರ್ಪನಿದಿರಿಗೆ ಕಪ್ಪೆಯಂದದೊ |
ಳೊಪ್ಪಿಸಿದರಾರೆನುತ ವೈರಿಯ |
ನಪ್ಪಳಿಸಿ ಪುಡಿಗೆಯ್ವೆ ಧುರದೊಳಗೆಂದು ಗರ್ಜಿಸಿದ  || ೧೪೩ ||

ರಾಗ ಮಾರವಿ ಏಕತಾಳ

ಫಡ ದಾನವ ನಿನ್ನಣ್ಣನಿಗನುದಿನ | ಬಡ ಪಾರ್ವರು ಬಲಿಯೆ ||
ಕೊಡುತಿರೆ ಕಂಡೆಮ್ಮಯ್ಯನು ಕೋಪದಿ | ಕಡೆ ತೋರಿದನರಿಯೆ  || ೧೪೪ ||

ಮರುಳು ಘಟೋತ್ಕಚ ನಿಶಿಗಣ್ಣನು ಮೈ | ಮರೆತಿರೆ ಕಂಡದನು ||
ಭರದಲಿ ಕೆಡಹಿದ ತೆರವಲ್ಲಿಂದಿನ | ಧುರದಲಿ ಬರಹೇಳು  || ೧೪೫ ||

ಮರುಳು ನಿನಗೆ ಬಲು ಬಿರು ನುಡಿಯನು ಸಂ | ಗರದೊಳು ನೀ ನಮಗೆ ||
ದುರುಳನೆ ಜನಕನ ಬರಲೆನ್ನುವ ನಿನ್ನ | ಕೊರಳನು ದಿಟ ಮುರಿವೆ  || ೧೪೬ ||

ದಾನವ ಕೇಳ್ ನಿನಗೇತಕೊ ರಣದಭಿ | ಮಾನವು ಕದನ ಮುದಿ ||
ಕೋಣಗೆ ಕೋಡ್ಕಲ್ಲಿನ ಮೇಲಣ ತೃಣ | ಶ್ರೇಣಿಯಂದದೊಳಿಹುದೈ || ೧೪೭ ||

ಭಾಮಿನಿ

ಕೊಡತಲೆಯ ದನುಜೇಂದ್ರ ನೀ ಕೇಳ್ |
ಪೊಡವಿಪತಿ ಕಾಲಜನು ನಿನ್ನಯ |
ಒಡಲ ತೀರ್ಚುವಡಿನಿತು ನಮ್ಮಯ ಕಡೆಗೆ ಕಳುಹಿದನು ||
ಸಡಗರದೊಳದನರಿಯದಲೆ ರಣ |
ಪೊಡವಿಗೆಯ್ತಂದಿರುವೆ ಮರುಳೆಲೆ |
ಕೊಡಲಿಕಾವ್ ಕೇಡ್‌ಕುಲಕೆಯೆಂಬುವ ನಡತೆಗಳ ನೋಡು  || ೧೪೮ ||

ಬಪ್ಪನಿಗೆ ಪೂರ್ವದೊಳು ನೀನೆಲೊ | ತಪ್ಪಿ ಬದುಕಿದ ಹೇಡಿ ಭೂಮಿಯೊ |
ಳಿಪ್ಪ ಮನ ನಿನಗಿದ್ದಡೀ ಕ್ಷಣ ಭಜಿಸು ಧರ್ಮಜನ ||
ತಪ್ಪುಗಳನೆಲ್ಲವನು ಪಾಲಿಪ | ತಪ್ಪಿದರೆ ನಿನ್ನಸುವನೀಗಳೆ |
ಒಪ್ಪಿಸುವೆ ಕೂರಸಿಗೆ ದಿಟವೆಂದೆನುತ ಗರ್ಜಿಸಿದ  || ೧೪೯ ||

ರಾಗ ಮಾರವಿ ಏಕತಾಳ

ಇಂತೀರ್ವರು ಧುರದೊಳಗೆ ಸರಿಸರಿ | ಪಂಥದಿ ಹೊಡೆಯುತಲಿ ||
ನಿಂತರು ಜೊತೆಯೊಳಗಾ ಕ್ರವ್ಯಾದರು | ದಂತೀಶ್ವರರಂತೆ  || ೧೫೦ ||

ಆಗ ಘಟೋತ್ಕಚ ಬೇಗದೊಳರಿಶರ | ಪೂಗಗಳನು ತರಿದು ||
ವೇಗದೊಳಗವನನು ಎತ್ತುತ ಸೈನ್ಯದ | ಭಾಗವ ಪುಡಿಗೆಯ್ದ  || ೧೫೧ ||

ಬಲ್ಲಿದವರು ಶರವೆಲ್ಲ ಬಿಡುತ ಮನ | ತಲ್ಲಣಿಸಲು ಕಂಡು ||
ಬಿಲ್ಲು ಶರಗಳನು ಬಿಡುತಲಿ ಮಾಯವ ಗೊಳ್ಳುತಲಂಬುಸನು  || ೧೫೨ ||

ಅಂಬರದೊಳಗವಲಂಬಿಸಿ ಧುರ ಸಾ | ಕೆಂಬುವ ತೆರದಿಂದ ||
ಅಂಬುಗಳನು ಸೌರಂಭದಿ ಬಿಡುತಲಿ | ಡಂಭಕದನ ಗೆದ್ದ  || ೧೫೩ ||

ಭಾಮಿನಿ

ಕ್ಷತ್ರಿವರ ಕೇಳಿತ್ತ ಸಮರದಿ |
ರಾತ್ರಿಚರರೀತೆರದ ಮಾಯದೊಳ್ |
ಧಾತ್ರಿ ನಡುಗುವ ತೆರದಿ ರಥಿಕರ ಗಾತ್ರ ನಡನಡುಗೆ ||
ಕೃತ್ರಿಮವ ಕಡಿದಾ ಘಟೋತ್ಕಚ |
ಶತ್ರುವರ ಕುರುರಾಯನೆದೆಯೊಳ್ |
ಚಿತ್ರದಲಿ ಚೆಂಡಾಡಿದಾಲಂಬುಸನ ಶಿರ ಕಡಿದು  || ೧೫೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರುಂಡವನು ಚೆಂಡಾಡಿ ದೈತ್ಯನು | ಚಂಡವಿಕ್ರಮದಿಂದ ನಲಿಯುತ |
ಭಂಡ ಕೌರವಗೆಂದ ತಾನು | ದ್ದಂಡತನದ  || ೧೫೫ ||

ಮಾನವಾಧಿಪ ಕೇಳು ರಾಜನ | ಕಾಣುವಡೆ ಬಹರೆಲ್ಲ ಕಯ್ಯೊಳು |
ಕಾಣ್ಕೆ ತಂದೀವರಿದು ನೋಡೈ | ಶಾಣೆ ಶಿರವು  || ೧೫೬ ||

ಮುನ್ನ ನೋಡೈ ತರಿವೆ ನಿನ್ನಯ | ರನ್ನ ಕರ್ಣನ ಶಿರವನೀಕ್ಷಣ |
ಮನ್ನಿಸಷ್ಟರ ವೇಳ್ಯ ತತ್‌ಕ್ಷಣ | ನಿನ್ನ ಮುರಿವೆ  || ೧೫೭ ||

ದಯವು ಎನ್ನೊಳಗಿರಲಿ ಯುದ್ಧದ | ರಯವು ನೋಡೆಂದೆನುತು ತಾ ನಿ |
ರ್ಭಯದಿ ಭೈಮಿಯು ಕೂಗುತಲಿ ಮುಂ | ಪಯಣಗೆಯ್ಯೆ  || ೧೫೮ ||

ಭಾಮಿನಿ

ಉರಕೆ ಬಿದ್ದಿಹ ದೈತ್ಯಕಂಧರ |
ಪೊರಳುವುದ ಕಂಡಾಕ್ಷಣದ ಕುರು |
ದೊರೆಯು ವಿಸ್ಮಿತನಾಗಿ ಶೋಕದೊಳ್ ಧರೆಗೆ ಮಕುಟವನು ||
ಭರದಿ ಚಾಚುತ ಬೀಳುತಿರುವುದ |
ತರಣಿಸುತ ತಾ ನೊಡುತಲಿ ಮನ |
ಕರಗಿ ಬಂದೆಬ್ಬಿಸುತ ಪೇಳಿದ ದೊರೆಗೆ ಮೂದಲಿಸಿ  || ೧೫೯ ||

ರಾಗ ಯರಕಲಕಾಂಭೋಜ ಝಂಪೆತಾಳ

ಎಲವೊ ಕೌರವರರಸನರುಹುವುದ ನೀ ಕೇಳು | ಕಲಹದೊಳು ಮಲಗಿರ್ಪ ಸುಭಟರನು ಕಂಡು ||
ಅಳಲದಿರು ಮನದಿ ಕೊಳುಗುಳದೊಳಗೆ ಮೈ ಮರೆವು | ದಿಳೆಯಪಾಲರಿಗೆ ಕೈವಲ್ಯಕಾರಣವು ||೧೬೦||

ಸತತ ಸಂಗರದೊಳಗೆ ಮತಿಗೆಟ್ಟು ಮಲಗಿ ಭೂ | ಪತಿಯಾಗಿ ಮಲಗಿರ್ಪೆಯಲ್ಲೊ ನೀನಿಂದು ||
ಅತುಳ ಬಲಗಳನು ಪರಿಮಿತಿ ತಪ್ಪಿ ಸವರುವ | ಸ್ಥಿತಿ ನೋಡಿ ಬಳಲುತಿಹ ಗತಿಯಾಯಿತಲ್ಲೊ ||೧೬೧||

ನಾವು ಕದನವ ಮಾಡಲೆಂದರೀ ದೊರೆಪತಿಯ | ಸೋವು ನೋಡುತಲಿರ್ಪ ಪಾವಮಾನಿಯನು||
ಆವ ಭೂಪನು ತಡೆಯುವನು ಭೂಪತಿಯನಾರು | ಕಾವಾತ ಭೈಮಿಯನು ಗೆಲುವಾತನಾರು  ||೧೬೨||

ಹೊಳೆಯ ತರಳನು ಪೇಳ್ದ ಸರಳಮಾರ್ಗವ ಬಿಟ್ಟೆ | ಇಳೆಗಾಗಿ ಸಹಜರನು ಅಡವಿಯೊಳಗಿಟ್ಟೆ ||
ಬಳಲುವುದು ನೀನಿಂದು ಕೊಳುಗುಳದಿ ಜಯವೆಂತೊ | ತಿಳಿಯೆ ನಾ ನಳಿನಾಕ್ಷನೊಲವೆಂತೊ ನಿನಗೆ  ||೧೬೩||

ಭಾಮಿನಿ

ರವಿಜನೆಂದುದ ಕೇಳ್ದು ಕೌರವ |
ಪವಿಧರನವೊಲ್ ಧೈರ್ಯದಲಿ ತಾ |
ವಿವಿಧ ವ್ಯಸನವ ಬಿಟ್ಟು ಕರ್ಣನ ಜರೆವುತಿಂತೆಂದ ||
ಅವಿಯ ಹೆಬ್ಬುಲಿಗಿತ್ತ ತೆರದೊಳ |
ಗಿವನ ರಿಪುಬಲದೊಳಗೆ ಸಿಲುಕಿಸು |
ತವನಿಗರ್ಪಿಸುತುಳಿದ ಷಡ್ರಥರಿದ್ದು ಫಲವೇನು  || ೧೬೪ ||

ಕುರುಪತಿಯ ನುಡಿ ಕೇಳುತಲಿ ರವಿ | ತರಳ ಕೋಪದೊಳಾಗ ಧನು ಶರ |
ಕರದಿ ಪಿಡಿದಿಂತೆಂದ ಭೂಪತಿಯೊಡನೆ ಗರ್ಜಿಸುತ ||
ಧುರದೊಳಗೆ ದಾನವನ ಕೊರಳನು | ತರಿದ ಹೈಡಿಂಬಿಯನು ನೈಋತ ||
ಪುರಕೆ ಕಳುಹುವೆನೆಂದು ನಂಬಿಗೆಯಿತ್ತನಾ ಕರ್ಣ  || ೧೬೫ ||

ಕಂದ

ಈ ಪರಿಯಲಿ ರವಿಜಂ ಕುರು |
ಭೂಪನ ಸಂತಯಿಸುತ ಜಯ ಧೈರ್ಯೋಕ್ತಿಗಳಿಂ ||
ದಾ ಪುರುಹೂತಸುತನ ಪ್ರ |
ತಾಪವ ನಿಲಿಸುವೆನೆಂದಾರ್ಭಟಿಸುತಯ್ತಂದಂ  || ೧೬೬ ||