ಮೊದಲನೆಯ ಸಂಧಿ

ಶಾರ್ದೂಲವಿಕ್ರೀಡಿತಂ

ಶ್ರೀಮನ್ಮಂಗಳದೇವತಾಪ್ರಿಯತಮಂ ಸೋಮಾಖ್ಯ ದೈತ್ಯಾಂತಕಂ |
ಕೂರ್ಮೇಣೋದ್ಧೃತಮಂದರಾದ್ರಿವಿಭವಂ ಹೇಮಾಕ್ಷವಿಧ್ವಂಸಕಮ್ ||
ಶ್ರೀಮರ್ತ್ಯಾರ್ಧಹರಿಂ ಪಟುಂ ಬಲಿಜಯಂ ಭೂಮೀಶದರ್ಪಾಪಹಂ |
ರಾಮಂ ಯಾದವಮಂಗನಾವ್ರತಹರಂ ನೌಮೀಷ್ಟದಂ ಕಲ್ಕಿನಮ್  || ೧ ||

ರಾಗ ಕಾಂಭೋಜ ಝಂಪೆತಾಳ

ಶ್ರೀಶಿವನ ತನುಜಾತ ವಂದಿಸುವೆ ವಿನಯದೊಳ್ | ಈಶಾನನಂಕದೊಳ್ ಕುಣಿವಾತ ಗಣಪ ||
ದೋಷಲೇಶಗಳ ದೊರಕಿಸದೆ ಮುಂದಣದ ಮನ | ದಾಸೆ ಪೂರಯಿಸುವುದು ಮುದದಿ || ೨ ||

ಶ್ರೀ ಸತ್ಯಕಾಂತನಂ ನಮಿಸಿ ವಾಕ್ಪತಿಯ ಸಂ | ತೋಷಿಸುತ ವಾದಿರಾಜರನು ||
ವಾಸವೀ ಯದುಪತಿಯು ಭೀಮ ಮೊದಲಾಗಿ ಶರ | ದೈಶಿಕರ ರಣದಿ ಜಯಿಸಿದರು || ೩ ||

ಎಂತೆನುವ ಕಥೆಯ ಲೇಶದಲಿ ನಾನೊರೆವೆ ಶ್ರೀ | ಕಾಂತನನು ಭಜಿಸಿ ಭಕ್ತಿಯಲಿ ||
ಸಂತರಿದ ಮನ್ನಿಪುದು ಹರಿಕಥಾಮೃತವೆಂದು | ಎಂತು ಪೇಳಲು ಬಾಲನೆನುತ || ೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಯ ಜನಮೇಜಯನು ವೈಶಂ | ಪಾಯಮುನಿಪದಕೆರಗಿ ಕೇಳಿದ |
ನ್ಯಾಯದಲಿ ಪಾಂಡವರು ಹರಿಯ ಸ | ಹಾಯದಿಂದ  || ೫ ||

ಸಿಂಧುದೇಶಕ್ಕೊಡೆಯ ಸೈಂಧವ | ನೆಂದೆನಿಪ ಖೂಳನನು ಸಂಯಮಿ |
ಮಂದಿರಕೆ ಕಳುಹಿಸಿದ ಫಲುಗುಣ | ನೆಂದಮೇಲೆ  || ೬ ||

ಹೀನ ಕೌರವ ಸೋತು ರಣದಲಿ | ಭಾನುಜಾದ್ಯರ ಕೂಡಿ ತಾ ಮುಂ |
ದೇನು ಗೆಯ್ದಿದನೆಂಬ ಕಥೆಯ ನಿ | ಧಾನ ದಿಂದ  || ೭ ||

ಅರುಹಬೇಕೆನಲಾಗ ಮೌನಿಗ | ಳರಸ ವೈಶಂಪಾಯನಾಖ್ಯನು |
ಹರಿಯ ಚರಣಾಂಬುಜಕೆ ವಂದಿಸು | ತೊರೆದ ಕಥೆಯ  || ೮ ||

ವಾರ್ಧಕ

ಅರಸ ಕೇಳ್ ಸಂಗರದಿ ಸೈಂಧವನ ತಲೆಯ ಕ |
ತ್ತರಿಸಿ ವಿಜಯನು ಜಯವ ಹೊಂದಿ ಕೃಷ್ಣಾದಿಗಳ |
ಚರಣಮಂ ಪಿಡಿದಪ್ಪಿ ಸಂತಸದಿ ಶಿಬಿರದೊಳು ತರುಣಿ ಸೌಭದ್ರೆ ಸಹಿತ ||
ಇರುತಿರಲು ಮೋದದಿಂ ಪಾಳಯದ ಷಡುರಥರು |
ಬರುತ ಕಾಲಜನಂಘ್ರಿಗೆರಗಲ್ಕೆ ತಕ್ಕಯ್ಸು |
ತುರುಮಾನದೊಳಗವರ ಕುಳ್ಳಿರಿಸಿ ಕಾಳಗದ ಕುಶಲಮಂ ಕೇಳುತೆಂದಂ || ೯ ||

ದ್ವಿಪದಿ

ಭೂಮಿಪತಿ ಕೇಳು ಜನಮೇಜಯನೆ ಮತ್ತಾ | ಕಾಮಪಿತನೊಡಗೂಡಿ ಜಯಿಸುತಿರಲಿತ್ತ ||೧೦||

ಕುರುಪತಿಯು ಬೆಚ್ಚಿ ಬೆರಗಾಗುತಿರಲಂದು | ಶರದ ಪಂಡಿತ ಧೈರ್ಯ ಪೇಳ್ದ ನಡೆತಂದು ||೧೧||

ತೊಟ್ಟು ಕವಚವ ಪಾರ್ಥನಿದಿರು ಬರೆ ನರನು | ಸಿಟ್ಟಿನಿಂದಲಿ ಸೋಲಿಸಿದನು ಗುರುಗಳನು ||೧೨||

ಮತ್ತೆ ಕೌರವನಾಜ್ಞೆಯಿಂದ ಸೂತಜನು | ಶಕ್ತಿಸಹಿತಲಿ ಬರಲ್ಕಿತ್ತ ಮಾಧವನು ||೧೩||

ಸಾತ್ಯಕಿಯ ಕಳುಹು ರಾಧೇಯನಿದಿರೀಗ | ಯುಕ್ತಿಯಿಂ ಗೆಲುವ ವೈರಿಯನೆನಲು ಬೇಗ ||೧೪||

ಕಳುಹಿದನು ಸಾತ್ಯಕಿಯ ನರನು ಜಯಿಸೆಂದು | ಕೊಳುಗುಳದಿ ಸೂತಜನ ಜಯಿಸುತರಲಿಂದು ||೧೫||

ಅರಸನಾಜ್ಞೆಯೊಳಲಂಬುಸನು ಬರಲಿತ್ತ | ನರನ ವಾಕ್ಯದಿ ಭೈಮಿಯಾತನನು ಕೊಲುತ ||೧೬||

ಅದ್ಭುತದ ಮಾಯದಲಿ ಕುರುಧೊರೆಯ ಚಮುವ | ಸದೆಗೊಳಿಸೆ ರವಿಸೂನು ನೋಡಿ ರಿಪುಭರವ ||೧೭||

ಯುಕ್ತಿ ಕಾಣದೆ ಒಲಿದು ಸುರಪ ತನಗಿತ್ತ | ಶಕ್ತಿ ಹೊಡೆಯಲು ಪೋದ ಸುರಧಾಮಕಾತ ||೧೮||

ಅಂಧಕನ ಸುತನಾಜ್ಞೆಯಿಂದ ಕಲಶಜನು | ಅಂಧಕಾರಿಯ ತೆರದಿ ಬರಲಿತ್ತ ನರನು ||೧೯||

ಉತ್ತರನ ಪಿತ ದ್ರುಪದರನ್ನು ಕಳುಹಿದನು | ಮತ್ತೆ ಕಾಲನ ಪುರಕೆ ದ್ರೋಣ ಕಳುಹಿದನು ||೨೦||

ಹರಿಯಾಜ್ಞೆಯಿಂದ ದುರ್ನುಡಿಯ ಧರ್ಮಜನು | ಧುರಮಧ್ಯದಲಿ ಪೇಳೆ ಕೇಳಿ ಕಲಶಜನು ||೨೧||

ಬಿಟ್ಟು ಪೊಡವಿಯ ಪೋಗಲಿತ್ತಲಾಹವದಿ | ಧೃಷ್ಟದ್ಯುಮ್ನನು ಕಾಯ ಖಂಡಿಸಿದ ಭರದಿ ||೨೨||

ಪಿತನಯ್ದ ಸುರಪುರಕ್ಕೆನುವ ವಾರ್ತೆಯನು | ಸುತ ಭವಾಂಶಜ ಕೇಳಿ ಧುರಕೆ ಬರೆ ತಾನು ||೨೩||

ಖತಿಗೊಂಡು ಬಿಡಲು ನಾರಾಯಣಾಸ್ತ್ರವನು | ರತಿಪತಿಯ ಪಿತನದನು ವ್ಯರ್ಥಗೆಯ್ಸಿದನು ||೨೪||

ಕಾಣುತಲಿ ಕಲಹ ತನಗೇತಕೆಂದೆನುತ | ದ್ರೌಣಿ ತೆರಳಲು ವೇದವ್ಯಾಸ ತಡೆವುತ್ತ ||೨೫||

ಮಾಡು ಸಂಗರವೆಂದು ನುಡಿಯೆ ಋಷಿವರನು | ಕೂಡದಿಂದಿಲಿ ತೋರ್ಪೆ ನಾಳೆ ಧುರ ತಾನು ||೨೬||

ಎಂದು ನಮಿಸುತ ಜವದಿ ನಡೆಯೆ ಗುರುಸೂನು | ಮಂದಹಾಸದಿ ಪಾರ್ಥರೊಡನೆ ಹರಿ ತಾನು ||೨೭||

ಬಂದು ಶಿಬಿರದೊಳಿರ್ದರೆಂಬ ಕಥನವನು | ಇಂದು ವಂಶಜ ಕೇಳಿ ನಮಿಸಿ ಪೇಳಿದನು ||೨೮||

ಚಂದದಲಿ ಇನ್ನೊಮ್ಮೆ ಪೇಳಿ ಕಥನವನು | ಇಂದುಸಿರು ಎನಲೆಂದ ಮುನಿವರ್ಯ ತಾನು || ೨೯ ||

ಭಾಮಿನಿ

ಚಿಂತೆಗಳ ಬಿಡುತಾಗ ಧರ್ಮಜ |
ನಂತರಂಗದಿ ಯೋಚಿಸಿದ ಶ್ರೀ |
ಕಂತುಜನಕನು ಪಾರ್ಥ ಶೋಕದಿ ಪೇಳ್ದ ಭಾಷೆಗಳ ||
ನಿಂತು ರಥದೊಳಗರಿಯ ನಿವಹವ |
ಪಂಥದಲಿ ಗೆಲಿಸುತಲಿ ಸಲಹಿದ |
ನೆಂತು ದಯವೋ ಭಕುತರಲಿ ಶ್ರೀಕಾಂತಗೆಂದೆನುತ  || ೩೦ ||

ಶಕಟ ಪದ್ಮವ್ಯೂಹ ಮೊದಲಾ |
ದಖಿಲ ಕಪಟಾಹವದಿ ಲಕ್ಷ್ಮೀ |
ಸಖನ ದಯದಿಂದಿನಲಿ ಸೈಂಧವನನ್ನು ಜಯಿಸಿದೆವು ||
ಸುಖದಿ ನಾವಿನ್ನಾವ ಪರಿಯಲಿ |
ಸಕಲರನು ಜಯಿಸುವೆವೊ ಹಾ ಶ್ರೀ |
ಲಕುಮಿಯಾಳ್ದನೆ ಬಲ್ಲನೆಂದೆನುತಾಗ ಯೋಚಿಸುತ  || ೩೧ ||

ರಾಗ ಕಾಂಭೋಜ ಝಂಪೆತಾಳ

ಸೋಮವಂಶಜ ಧರ್ಮರಾಯ ಸೋದರನನ್ನು | ಪ್ರೇಮದೊಳಗಪ್ಪಿ ಪೇಳಿದನು ||
ಕಾಮಪಿತ ನಮ್ಮಗಳನುದ್ದಂಡಸ್ನೇಹದೊಳ | ಗಾ ಮಹಾ ಮಹಿಮ ಸಲಹಿದನು || ೩೨ ||

ಕುಟಿಲಪಗಡೆಯ ವಿದ್ಯದಿಂದ ನಮ್ಮನು ಜಯಿಸಿ | ಭಟನು ತಾನೆಂದಿರ್ಪ ನೃಪನ ||
ಕಟಿತಟವ ಪುಡಿಗೆಯ್ವನನುಜ ದುಶ್ಶಾಸನುರ | ದಿಟ ಬಗಿವೆ ರಕುತವನು ಕುಡಿವೆ || ೩೩ ||

ಶ್ವೇತವಾಹವ ಪೇಳ್ದ ಪೀತವಾಸನ ದಯದಿ | ಭೂತಳದ ಸಾಮ್ರಾಜ್ಯದೊಡೆತನವ ನಿಮಗೆ ||
ವಾತಸುತನೊಡಗೊಂಡು ನಾ ಮಾಳ್ಪೆ ಮನದೊಳರಿ | ಭೀತಿ ಬೇಡೆಂದು ನಮಿಸಿದನು || ೩೪ ||

ಸಹದೇವ ನಕುಲರಾಡಿದರಹಿತರೆಮ್ಮ ಜತು | ಗೃಹದಿ ಮೋಸವ ತೋರ್ದರವರು ||
ವಿಹಗವಾಹನ ದಯದಿ ಸಹಜ ಯುದ್ಧದಿ ಗೆದ್ದು | ಮಹಿಯ ಕೈವಶ ಗೆಯ್ವೆವೆನುತ || ೩೫ ||

ಭಾಮಿನಿ

ಜನಪ ಕೇಳೀ ತೆರದೊಳನುಜನರ |
ಘನಪರಾಕ್ರಮದಿಂದ ತನ್ನಯ |
ಮನದ ಚಿಂತೆಯ ಬಿಟ್ಟು ಧರ್ಮಜನೊರೆದ ಹರುಷದಲಿ ||
ಇನಿತು ಚಂದ್ರಾನ್ವಯದ ಸಿರಿಯೊಡೆ |
ತನವು ಸೋದರರಿಂದಲಾಯ್ತೆಂ |
ದೆನುತ ನೆಲೆಗೊಂಡಿರ್ದ ಭೀತಿಯ ಬಿಡುತಲಿರಲಂದು  || ೩೬ ||

ವಾರ್ಧಕ

ಅತ್ತಲಾ ಕುರಕುಲದಿ ಮತ್ತೇಭಸದೃಶ ಭೂ |
ಪೋತ್ತಮನು ಮನದಿ ಮರುಗುತ್ತ ಚಿಂತಿಸುತೆಂದ |
ಶಕ್ತಿಯಲಿ ಪಾಂಡುಸುತರೆತ್ತಲೊಡಿವಡೆಯೆ ಈ ಹೊತ್ತಿನಲಿ ನಮ್ಮ ಬಲದಿ ||
ಮುತ್ತಯ್ಯನವರು ಮಾರುತನ ಸುತಮುಖ್ಯರಂ |
ಸತ್ಯದಿಂದಲಿ ಜಯಿಪೆನೆನುತ ಪೊರಟವರು ಬಳಿ |
ಕಿತ್ತ ಬಾರದೆ ಶರ ಸುಪತ್ತಿಯೊಳು ಮಲಗಿರಲು ಶಕ್ತಿ ಸಾಲದು ರಣದಲಿ || ೩೭ ||

ರಾಗ ನೀಲಾಂಬರಿ ರೂಪಕತಾಳ

ಇಂತೆಂದು ಮರುಗುತ್ತ ಲಂತರಂಗದಿ ಕುರು | ಕಾಂತನು ಚಿಂತಿಸುತೆಂದ ||
ಕಂತುಪಿತನ ಬಲದಿಂದ ಪಾಂಡವರು ತಾ | ವೆಂತೆಂಥ ಶಪಥ ಮಾಡಿದರು || ೩೮ ||

ಸೋದರಿಪತಿಯು ತಾ ಮೋದದಿ ಯುದ್ಧದಿ | ಸಾಧಿಪೆನೆನುತ ಮಾರ್ಬಲವ ||
ಕ್ರೋಧದಿಂ ವೆರಸುತ್ತ ಬಂದು ಪಾರ್ಥನ ಶರ | ಬಾಧೆಯ ಸಹಿಸದೆ ಧುರದಿ || ೩೯ ||

ಮಲಗಿರ್ಪನಿನ್ನೇನು ಗೆಲುವುಪಾಯವ ಕಾಣೆ | ಫಲುಗುಣ ಪಾರ್ಷತರೊಡನೆ ||
ಬಲಶಾಲಿ ಕಲಶಜ ಮುಖರಿದ್ದು ಸೋಲಾಯ್ತು | ಗೆಲುವ ಸುಭಟರನ್ನು ಕಾಣೆ || ೪೦ ||

ಭಾಮಿನಿ

ಈ ತೆರದಿ ಯೋಚಿಸುತಲಿರಲಾ |
ಭೂತಲೇಶನ ಕಂಡು ಕಲಶಜ |
ನಾ ತತುಕ್ಷಣ ಬಂದು ನಯನದ ವಾರಿಗಳನೊರಸಿ ||
ಕಾತರವ ಬಿಡು ಭೂಪ ಸಮರದೊ |
ಳಾತತಾಯಿಗಳನ್ನು ನಿಮಿಷದಿ |
ಧಾತುಗೆಡಿಸುವೆನೆಂದು ಧನುಶರಗೊಂಡು ಗರ್ಜಿಸಲು  || ೪೧ ||

ರಾಗ ಸಾಂಗತ್ಯ ರೂಪಕತಾಳ

ಶಸ್ತ್ರಪಂಡಿತರೆ ಕೇಳಿರಿ ನಿಮ್ಮ ಸಾಹಸ | ವ್ಯರ್ಥವಾಯಿತು ವ್ಯೂಹ ರಚಿಸಿ ||
ಪಾರ್ಥ ಸಾತ್ಯಕಿ ಭೀಮರೊಡಗೂಡಿ ನಮ್ಮಯ | ಸಾರ್ಥವೆಲ್ಲವ ಸೂರೆಗೊಳ್ಳೆ || ೪೨ ||

ತೋಷವಾಯಿತೆ ನಿಮಗಿನಿತು ಸಂಗರದೊಳು | ವಾಸವಸುತನೊಳು ಕರುಣ ||
ಭಾಷೆಯೆಲ್ಲಿಹುದು ಸೈಂಧವನ ಪಾಲಿಪೆನೆಂಬ | ಲೇಸಾಯ್ತೆ ಸೈಂಧವನೃಪಗೆ || ೪೩ ||

ಶಿಷ್ಯವಾತ್ಸಲ್ಯ ಕೈಗೊಂಡೀಗ ನಮ್ಮಭ | ವಿಷ್ಯವ ಮರೆತಿರಿ ಧುರದಿ ||
ಪೋಷ್ಯವಾಗಿಹ ನಮ್ಮ ಕುಂದಿರ್ದ ಬಲ ನೋಡಿ || ತೋಷಪಡುವರೀಗ ಪರರು || ೪೪ ||

ಭಾಮಿನಿ

ಅಂದುದನು ಕೇಳ್ದಾಗ ಕಲಶಜ |
ಬಂಧಿಸುತ ಭ್ರುಕುಟಿಯನು ಪ್ರಳಯದ |
ನಂದಿಯೇರ್ದನ ತೆರದಿ ಬಾಯೊಳಗಾರ್ಭಟಿಸುತಲೆಂದ ||
ಅಂಧಭೂಪನ ಸುತನೆ ಕೇಳ್ ನಾ |
ಬಂಧಿಸಿದ ಕವಚವನು ತೆಗೆಯದೆ |
ಇಂದುಶೇಖರ ಬರಲು ನಾ ಬಿಡೆನೆಂದು ಕಿಡಿಗೆದರಿ  || ೪೫ ||

ರಾಗ ಮಾರವಿ ಏಕತಾಳ

ಭೂಪತಿ ಬಿಡು ಬಿಡು ಚಿಂತೆಯ ಧುರದಲಿ | ಚಾಪವ ಪಿಡಿಯುತಲಿ ||
ಶ್ರೀಪತಿ ಮೆಚ್ಚುವ ತೆರದೊಳು ಶೌರ್ಯವ | ನಾ ಪರರಿದಿರಿನಲಿ  || ೪೬ ||

ಹಗಲಿರುಳಲಿ ಹಿಮ್ಮೆಟ್ಟದೆ ಸಮರದಿ | ಜಗ ನಡುಗುವ ತೆರದಿ ||
ಹಗೆಯವರನು ಹಿಮ್ಮೆಟ್ಟಿಸುವೆನು ನಾ | ನಗಧರನಿದಿರಿನಲಿ  || ೪೭ ||

ಕಟ್ಟುವೆ ಮತ್ಸ್ಯ ವಿರಾಟನ ದ್ರುಪದನ | ನಟ್ಟುವೆ ಸುರಪುರಕೆ ||
ತಟ್ಟನೆ ನಿಲಿಸುವೆ ಪಾರ್ಥನ ರಣದಿ ನಾ | ಕೆಟ್ಟೆನೆಂಬುವ ತೆರದಿ  || ೪೮ ||

ಉಳಿದವರನು ಕಳವಳಿಸುತ ಸರ್ವರು | ಭಳಿರೆಂಬುವ ತೆರದಿ ||
ನಳಿನಭವಾದ್ಯರು ನೋಡಲಿ ವೃದ್ಧನ | ಚಳಕವ ಸಮರದಲಿ  || ೪೯ ||

ಭಾಮಿನಿ

ಕ್ಷಿತಿಪತಿಯೆ ಪಾಂಚಾಲರೆಲ್ಲರ |
ತತಿಯನುಳುಹದಿರೆಂದು ತನ್ನಯ |
ಸುತನಿಗರುಹೆಂದೆನುತ ಬೀಳ್ಗೊಟ್ಟಾಗ ಕಲಶಜನು ||
ಅತಿರಥರನೊಡಗೊಂಡು ಶಸ್ತ್ರಾ |
ಹತಿಯೊಳಿಂದಿನ ಧುರದಿ ಪಾರ್ಥನ |
ಪೃತನ ಮುಂಬರದಂತೆ ಗೈವೆನೆನುತ್ತ ಧುರಗೈದಂ  || ೫೦ ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಗೂಢಚಾರನು ಪಾರ್ಥನ | ಬೇಗದೊಳ್ | ನೋಡುತ್ತ ಭಯದಿ ತನ್ನ ||
ರೂಢಿಪಪೃತನವ ಪೊಗುತಾಗ ಪಾರ್ಥನೊ |
ಳಾಡಿದನು ಶುಚಿತುರಗ ಕೇಳ್ ಗುರು | ವಾಡಿದನು ಕುರುವರನೊಳ್ ಭಾಷೆಯ || ೫೧ ||

ಮಾಧವ ಸಖನೆ ಕೇಳೊ | ದ್ರೋಣನು | ಕ್ರೋಧದಿ ಭೂಪನೊಳು ||
ಪೇಳ್ದ ವೈರಿಗಳನ್ನು ಹಗಲಿರುಳೊಳು ತಾನು |
ಕಾದುತಾಹವದೊಳಗೆ ದ್ರುಪದರ | ನೈದಿಸುವೆ ಯಮಧಾಮಕೆನುತಲಿ || ೫೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದ್ರೋಣ ಪೊರಟಿಹನೆಂಬ ವಾರ್ತೆಯ | ತ್ರಾಣಿ ಪಾರ್ಥನು ಕೇಳಿ ಚಾರರ |
ವಾಣಿಮುಖದಿಂದಾಗ ಸೈನ್ಯದ | ಶ್ರೇಣಿಸಹಿತ  || ೫೩ ||

ಭರದಿ ಮಣಿಮಯ ರಥವನೇರುತ | ಪರಮಪಾವನ ಯದುಕುಲೇಶನ |
ಸ್ವರಥದಲಿ ಕುಳ್ಳಿರಿಸಿ ಭಕ್ತಿಯೊಳ್ | ಪೊರಟನಾಗ  || ೫೪ ||

ಹರಿಯನುಜೆ ತಾ ಕಂಡು ಮಾಧವ | ನರರ ಶಿಬಿರದ್ವಾರಭಾಗದಿ |
ಹರುಷದಿಂ ನಡೆತಂದು ಪೇಳ್ದಳು | ಕರವ ಮುಗಿದು  || ೫೫ ||

ರಾಗ ಸೌರಾಷ್ಟ್ರ ಏಕತಾಳ
ಕಾಂತ ಲಾಲಿಪುದೆನ್ನ ಬಿನ್ನಪ ಮನವಿಟ್ಟು | ಪಂಥ ಮಾಡಿದ ಕಲಶಜನು ||
ಎಂತು ಯುದ್ಧದಿ ಜಯ ಬರುವುದೆಂಬುದನೀಗ | ಕಂತುಪಿತನು ತಾನೆ ಬಲ್ಲ || ೫೬ ||

ತೊಟ್ಟಿರ್ದ ಕವಚವ ಬಿಚ್ಚದೆ ರಣದಿ ಹಿಂ | ಮೆಟ್ಟದೆ ಪಾಂಡುಜಾತರಿಗೆ ||
ಪಟ್ಟ ಕೌರವಗೆತಾ ಸ್ಥಿರವ ಮಾಡುವೆನೆಂದು | ಸಿಟ್ಟಿನೊಳ್ ನಡುಗಿ ಪೇಳಿದನು || ೫೭ ||

ಹಗಲಿರುಳೊಳು ರಣರಂಗವ ಬಿಡದೆ ವೈ | ರಿಗಳ ದರ್ಪವ ನಿಲಿಸುವೆನು ||
ಮೃಗರಾಜನಂತೆ ಗರ್ಜಿಸುತ ಪೇಳಿಹನಂತೆ | ಅಗಸಮ ವಿಪ್ರ ಕೇಳ್ ರಮಣ || ೫೮ ||

ವಚನ
ಈ ತೆರದಿ ಭಾಮಾಮಣಿ ನುಡಿಯಲ್ ಸುತ್ರಾಮನ ಸುತ ಕೋಪಿಸುತಂ ಭೀತಿಯ ಬಿಡು ಮನದೊಳ್ ಶಾತೋದರಿ ಕೇಳೆನುತೆಂದ –

ರಾಗ ಕೇದಾರಗೌಳ ಝಂಪೆತಾಳ

ಮತ್ತೇಭಗಮನೆ ಕೇಳೆ | ನಾ ನುಡಿವ | ದರ್ಥಿಯಿಂ ಸಾಧುಶೀಲೆ ||
ಶಸ್ತ್ರಪಂಡಿತರ ಧುರದಿ | ಭಾಷೆಗಳ | ವ್ಯರ್ಥಗೆಯ್ವೆನು ನಿಮಿಷದಿ  || ೫೯ ||

ಹಿಂದೆ ಸೈಂಧವನೃಪತಿಯ | ಬದುಕಿಸುವೆ | ನೆಂದು ಪೇಳಿದ ಭಾಷೆಯ ||
ಇಂದುಮುಖಿ ಕೇಳೆ ಬಲಿಯ | ಯೆನ್ನ ಶರ | ಕಂದು ಕೊಟ್ಟಿಹೆ ಮರೆತೆಯ || || ೬೦ ||

ಯಾದವೇಶ್ವರನು ಧುರದಿ | ಇಲ್ಲದಿರೆ | ಆದಪುದೆ ನೋಡು ಮನದಿ ||
ಕಾದುವುದು ಸಾಕು ಗೈಸು | ಮಾಧವನ | ಪಾದಸಂಸ್ತುತಿಯೆ ಲೇಸು || ೬೧ ||

ಸಾಕು ನುಡಿಯದಿರೀ ಪರಿ | ಎನ್ನೊಡನೆ | ಕಾಕುವಾಕ್ಯವನೀ ಪರಿ ||
ನಾಕ ನಾಯಕನ ದಯವು | ಭಕ್ತರಿಗೆ | ಸೋಕುವುದೆ ಪುಣ್ಯಫಲವು || ೬೨ ||

ಪ್ರಾಣಪತಿ ಜಾಣ ನೀನು | ಮುಂದಿರುವ | ಕ್ಷೆಣೀಶರೊಳು ಬಲ್ಲೆನು ||
ಹೀನ ರಿಪುಗಳ ಧುರದೊಳು | ಜಯಿಸೆಂದು | ತಾನೆ ತಿಲಕವನಿಟ್ಟಳು || ೬೩ ||

ರಾಗ ಹಿಂದುಸ್ಥಾನಿ ಕಾಪಿ ಆದಿತಾಳ

ಮಂಗಳಾರತಿ ಪಾಡಿರೆ | ಅಂಗನೆಯರು | ಮಂಗಳಾರತಿ ಪಾಡಿರೆ   ||ಪ||

ಮಂಗಳಾರತಿ ಕುರು | ಪುಂಗವ ಪಾರ್ಥಗೆ ||
ಅಂಗಜಪಿತ ಮೋಹ | ನಾಂಗ ಶ್ರೀಕೃಷ್ಣಗೆ || ಮಂಗಳಾರತಿ  || ೬೪ ||

ಅಂಗರಾಗಕೆ ತ್ರಿ | ಭಂಗಿ ಕುಬ್ಜೆಯನು ||
ತ್ತುಂಗ ಭೋಗದೊಳಾಳ್ದ | ಮಂಗಳಮಹಿಮಗೆ || ಮಂಗಳಾರತಿ  || ೬೫ ||

ಅಂಗಧೀಶನ ಮಾನ | ಭಂಗ ಗೋಗ್ರಹ ರಣ ||
ರಂಗದಿ ಗೆಯ್ದ ಶ್ರೀ | ರಂಗನ ಸಖನಿಗೆ || ಮಂಗಳಾರತಿ  || ೬೬ ||

ಭಾಮಿನಿ

ಕ್ಷೆಣಿಪತಿ ಕೇಳಿನಿತು ಕಿನ್ನರ |
ವಾಣಿ ನುಡಿಯಲ್ ಕಂಡು ಪನ್ನಗ |
ವೇಣಿಯನು ಮುದ್ದಿಸುತ ಶಿಬಿರಕೆ ಕಳುಹುತಲಿ ಪಾರ್ಥ ||
ದ್ರೋಣ ಮೊದಲಾಗಿರುವ ಷಡುರಥ |
ಶ್ರೇಣಿಯನು ಕಂಡಾಗ ಝೇಂಕಿಸು |
ತಾಣಿಶರಗಳನೆಸೆದ ನಿಜಸೈನಿಕರನೊಡಗೊಂಡು  || ೬೭ ||

ವಚನ
ಈ ತೆರದಿಂದ ನರವರ ಶರವ್ರಾತದಿ ಮುಸುಕಲ್ ಕಂಡಾ ದ್ರೋಣಂ ಭೂತೇಶನ ಪರಿ ಖತಿಗೊಂಡಾಗಳ್ ಪಾರ್ಥನೊಳಿಂತೆಂದಂ –

ರಾಗ ಕಾಂಭೋಜ ಮಟ್ಟೆತಾಳ

ಬಲ್ಲೆ ಬಲ್ಲೆ ನಿನ್ನ ಸರಳ ನಿಲ್ಲು ಪಾರ್ಥನೆ |
ಹುಲ್ಲು ವಿಪ್ರನೆಂತಲೆಣಿಸಬೇಡ ಸುಮ್ಮನೆ ||
ನಿಲ್ಲು ಶರದ ಸವಿಯ ನೋಡಲಿಲ್ಲವೇನೆಲಾ |
ಬಿಲ್ಲವಿದ್ಯೆ ಗುರುಗಳೆಂದು ಮರೆತೆಯೇ ಭಲಾ  || ೬೮ ||

ಸರಳ ಸವಿಯ ನೋಡಲಿಕ್ಕೆ ತರಳನಲ್ಲವೆ |
ಗರಳ ಕೊಟ್ಟ ದುರುಳ ಭೂಪನರುಹನಲ್ಲವೆ ||
ಗುರುಗಳೆಂಬ ಭಾವ ತಿಳಿದು ಶರವ ಪಿಡಿಯದೆ |
ಚರಣ ಪಿಡಿದು ಬೇಡಿದಾಗ ಮರೆತಿರಲ್ಲವೆ  || ೬೯ ||

ತರಳನಿಂದಲಧಿಕ ಭಾವದಿಂದ ನಿನಗೆಲಾ |
ಸರಳು ವಿದ್ಯೆ ಕಲಿಸಿದಕ್ಕೆ ಫಲವಿದೇನೆಲ ||
ಹರನ ಕೂಡೆ ಸೆಣಸಿ ತಂದ ಶರವ ತೋರೆಲ |
ಧುರಜಯಾಶೆ ತೊರೆದು ಸಮರಕಿದಿರು ನಿಲ್ಲೆಲ  || ೭೦ ||

ಸರಳಗುರುವೆ ಜನಕಸದೃಶನೆಂದು ಬಿಡುವೆನೆ |
ಕುರುಕುಲೇಶ ಬರಲು ಮೃಡನ ಶರವ ತೋರ್ಪೆನು ||
ಪರಮಮಾನ್ಯರಹುದು ನೀವು ದ್ವಿಜಕುಲೇಂದ್ರರು |
ಶರದ ಗುರಿಗೆ ಪಾತ್ರರಲ್ಲ ಶೂರವರ್ಯರು  || ೭೧ ||

ಜಾಣನಹುದೊ ಪಾರ್ಥ ನಿನಗೆ ಕುರುಕುಲೇಶನೆ |
ಚೂಣಿಪತಿಗಳಿರಲುಯಿಂಥ ವಾಣಿ ಸುಮ್ಮನೆ ||
ಆಣಿಶರವ ನೋಡಬಹುದು ತ್ರಾಣವುಳ್ಳಡೆ |
ದ್ರೋಣನಿಂತು ಸರಳ ಮಳೆಯ ಕರೆದನಾಗಲೆ  || ೭೨ ||

ಪೃತನ ಪುಡಿಯ ಗೆಯ್ದ ಪರಿಯ ಕಂಡು ಪಾರ್ಥನು |
ಸತತ ಸರಳ ಮಳೆಯ ಕರೆದು ಖತಿಯಕೊಂಡನು ||
ಶತಮಖಾಸ್ತ್ರ ನರನು ಜಪಿಸಿ ತೊಡಲು ಭರದೊಳು |
ತತೂಕ್ಷಣದಿ ಬೆದರಿ ರಿಪುವ್ಯೂಹವೊಡೆಯಲು  || ೭೩ ||

ಭಾಮಿನಿ

ಅರಸ ಕೇಳಾಕ್ಷಣದಿ ನಿರ್ಜರ |
ರರಸಸುತನಾಹವದ ವಿಶಿಖವು |
ಕುರುಬಲವ ಭೋರ್ಗುಡಿಸೆ ವಿಪ್ರನು ಬೆರಗುತಿಂತೆಂದ ||
ಅರರೆ ನಮ್ಮಯ ಬಲದ ಬಾಹುಜ |
ರರಿಶರಕೆ ಭಯಪಡುವುದುಚಿತವೆ |
ಸುರಪಸದನವು ರಣದೊಳಲ್ಲದೆ ದೊರಕಲಸದಳವು  || ೭೪ ||