ಭಾಮಿನಿ

ಅರಸ ಕೇಳಾ ಕೃಷ್ಣ ಮುನಿಯತಿ |
ಹರುಷದಿಂದಾ ದ್ರುಪದ ಕಾಶ್ಯಪ |
ಮೆರೆವ ಪಾಂಡವರುಗಳ ದಷ್ಟದ್ಯುಮ್ನರನು ಕೂಡಿ ||
ಭರದಿ ಬಂದೇಕಾಂತದಲಿ ವಿ |
ಸ್ತರಿಸಿದನು ಕೇಳೆಂದು ದ್ರುಪದಗೆ |
ಸರಸಿಜಾಂಬಕಿ ದ್ರೌಪದಿಯ ಪೂರ್ವದ ಕಥಾಮತವ ||432||

ರಾಗ ಕಾಂಭೋಜಿ ಝಂಪೆತಾಳ

ನೀ ಕೇಳು ಪಾಂಚಾಲನಣುಗೆಯನುಭವವನು ವಿ | ವೇಕದಲಿ ವಿಸ್ತರಿಪೆ ನಿನಗೆ ||
ಈ ಕನ್ನಿಕೆಗೆ ಮೊದಲು ಪೆಸರು ನಾರಾಯಣಿಯು | ಲೋಕ ಪ್ರಸಿದ್ಧ ಕೇಳೆಂದ ||433||

ಇವಳೋರ್ವ ಮುನಿವರನ ರಮಣಿ ಪತಿಭಕ್ತಿಯಲಿ | ಭುವನದೊಳಗಿಲ್ಲ ಸತಿಯರೊಳು ||
ಅವನು ಕುಷ್ಟವ್ಯಾಧಿಯಿಂದ ಕರಗಿರಲುತ | ದ್ಯುವತಿಯ ಪರೀಕ್ಷೆಗೋಸ್ಕರದಿ ||434||

ಕೊಳೆತ ಬೆರಳನು ಭುಕ್ತ ಶೇಷಾನ್ನದೊಳಗುಳುಹ | ಲಳುಕದದನುಣಲು ಭಕ್ತಿಯಲಿ ||
ಎಲೆಗೆ ಮೆಚ್ಚಿದೆ ಬೇಡಿ ಕೊಳ್ಳೆಂದರಾಗೊಲಿದು | ಜಲರುಹದಳಾಕ್ಷಿ ಪೇಳಿದಳು ||435||

ನಿರತ ದಿವ್ಯ ಸ್ವರೂಪದಿಂ ನೆರೆಯಬೇಕೆನಲು | ಸುರತ ಸುಖದಿಂದಿರುತ ಬಳಿಕ ||
ಅರಿತಾ ಮುನೀಂದ್ರ ಪೂರ್ವದ ತಪವ ನೆನೆದಾಗ | ತೆರಳುತಿರೆ ಕಂಡು ಕಾಮಿನಿಯು ||436||

ಸೆರಗ ಹಿಡಿಯಲು ಮುಳಿದು ಶಾಪಿಸಿದ ತನ್ಮುನಿಪ | ನರಸುಗಳಿಗಣುಗೆಯಾಗೆಂದು ||
ತೆರಳಲಂದೈ ದುಃಖದಿಂದ ನಟ್ಟಡವಿಯಲಿ | ಹರನ ಭಜಿಸಿದಳು ಭಕ್ತಿಯಲಿ ||437||

ವಾರ್ಧಕ

ಅಖಿಳ ದುರಿತಘರಟ್ಠನಂ ಸುಶ್ರೇಷ್ಟನಂ |
ಕತಕ ದನುಜಧ್ವಂಸನಂ ಪರಮ ಹಂಸನಂ |
ಸಕಲ ಕೀರ್ತಿ ಮಯೂಕನಂ ಧತವಿನಾಕನಂ ತ್ರ್ಯಕ್ಷನಂ ಸ್ಮರ ಶಿಕ್ಷನಂ ||
ನಿಖಿಳ ಗುಣ ಪರಿಪೂರ್ಣ ನಂ ಸ್ಫಟಿಕ ವರ್ಣನಂ |
ಭಕುತ ಜನ ಹತ್ಸದನನಂ ಪಂಚ ವದನನಂ |
ಸುಖಕರ ಸುಚಾರಿತ್ರನಂ ದಯಾಪಾತ್ರನಂ ಭಜಿಸಿದಳ್ ಭಕ್ತಿಯಿಂದ ||438||

ಅರಸ ಕೇಳಿಂತಬ್ಜವದನೆ ಭಜಿಸಲ್ಕೀಶ |
ನರಿತು ಬಂದವಳ ವರಮಂ ಬೇಡೆನಲ್ಕೆ ಶಂ |
ಕರ ಪತಿಂದೇಹಿ ಶಶಿಧರ ಪತಿಂದೇಹಿಯೆಂದೈದು ಬಾರಿಯು ಕೇಳಲು ||
ಹರನೆಂದನಂತಾಗಲೈವರಮಣರು ನಿನಗೆ |
ನೆರೆ ತಪ್ಪದೆನೆ ಚಿಂತಿಸಲ್ಕೆ ಮೈದಡವಿ ಮ |
ತ್ತೊರೆದನಂಜದಿರೆನ್ನ ನುಡಿ ವೇದ ವಾಕ್ಯ ನೀನತಿ ಪತಿವ್ರತೆಯೆನುತಲಿ ||439||

ಶಿವನಯ್ದಲಿತ್ತಣುಗೆ ಯಾದಳದರಿಂದ ಸಂ |
ಭವಿಸಿತಯ್ವರು ಪುರುಷರಿದಕೆ ಚಿಂತಿಸದೆ ಪಾಂ |
ಡವರ ಮನ್ನಿಪುದು ಇನ್ನಿವರ ಸ್ಥಿತಿಯಾಲಿಸೆಂದರುಹಿದಂ ವ್ಯಾಸ ಮುನಿಯು ||
ದಿವಿಜಪತಿಗಳು ಮಡನ ಶಾಪದಿಂ ಬಹುಕಾಲ |
ನವೆವುತಿರೆ ಕೈಲಾಸದುಪವನದಿ ಗೋತ್ರ ಸಂ |
ಭವೆಯನುಗ್ರಹದೊಳಿವರಿಂಗೆ ಬಿಡುಗಡೆಯಾಯ್ತು ಪಾಂಚಾಲ ಕೇಳಿಂದನು ||440||

ಭಾಮಿನಿ

ನೀವಿಳಾಧಿಪರಾಗಿ ಜಗದೊಳು |
ಭಾವೆ ನೀವಯ್ವರಿಗೆ ಒಬ್ಬಳು |
ಪಾವನರು ನೀವ್ ಜಗಕೆನುತ ಶಂಕರನು ಬೀಳ್ಕೊಡಲು ||
ದೇವವರರಿವರಯ್ವರುದಿಸಿದ |
ರಾ ವಿರೂಪಾಕ್ಷನ ಕಟಾಕ್ಷದೊ |
ಳೀ ವನಿತೆಯಯ್ವರಿಗೆ ಸನ್ಮತವೆಂದನಾ ಮುನಿಪ ||441||

ರಾಗ ಸಾಂಗತ್ಯ ರೂಪಕತಾಳ

ಆಡಿ ಬೋಳೈಸಿದ ಮುನಿಪನೆಣ್ಣದಿರೆಂದು | ರೂಢಿಪತಿಗೆ ದಿವ್ಯಾಕ್ಷಿಗಳ ||
ನೀಡಲೀಕ್ಷಿಸಿದನಿಂದ್ರರ ಮಹತೇಜವ | ನಾಡಲೇನಾ ಪಾಂಚಾಲಕನು ||442||

ಹೊಳೆವ ಕಿರೀಟ ಕುಂಡಲ ದಿವ್ಯಾಂಬರ ಕಾಂತಿ | ಗಳಲೆಸೆಯಲು ಪಾಂಡುಸುತರ ||
ತಿಳಿದು ಕತಾರ್ಥನಾದೆನು ದಿಟವೆನುತಾಗ | ಲಿಳೆಯೊಡೆಯನು ವ್ಯಾಸಗೆರಗೆ ||443||

ಕರೆಸು ವಿಪ್ರರ ಯಜ್ಞ ಸನ್ನಾಹ ಕಾಸ್ಯಪ | ವಿರಚಿಪವಿದೆ ಲಗ್ನ ಬಂತು ||
ಭರದಿ ಧಾರೆಯನೆರೆ ಎನಲು ದ್ರುಪದರಾಯ | ಪರಮತೋಷವನಾಂತು ಬಳಿಕ ||444||

ಸಾರಿದರ‌್ಮೆಟ್ಟಕ್ಕಿಯನು ಸಂಭ್ರಮದಿ ಗುಡ | ಜೀರಿಗೆಯೊಡನೆ ಲಗ್ನದಲಿ ||
ಧಾರಿಣಿ ಸುರರಾಶೀರ್ವಾದ ಸದ್ಘೋಷ ವಿ | ಸ್ತಾರವಾಯ್ತೇನೆಂಬೆನಂದು ||445||

ಮಗಳ ಧಾರೆಯನೆರೆದನು ಪಾಂಡು ಸುತರಿಂಗೆ | ಒಗುಮಿಗೆ ಹರುಷವುಕ್ಕುಳಿಸಿ |
ಜಗದೊಳಾಂ ಧನ್ಯನೆಂದೆನೆ ನಪಸತಿಯರು | ಪೊಗಳಿದರಾರತಿ ಪಿಡಿದು ||446||

ರಾಗ ಢವಳಾರ ಏಕತಾಳ

ಎಸೆವ ವೈವಾಹ ಮಂಟಪದಿ | ಹಸೆಮಣೆಗಳನಳವಡಿಸಿ |
ಮಿಸುನಿಯ ಪಟ್ಟಾವಳಿಗಳ ಹಾಸಿ |
ಕುಶಲದೊಳಾ ವಧುವರರ ಕುಳ್ಳಿರಿಸಿ | ನೊಸಲಿಗೆ ವರ ಅಕ್ಷತೆಗಳನಿಡುತಲೆ |
ಹಸನದಿ ಸೇಸೆಯನು ತಳಿದರು ||447||

ಹರಿಕುಲ ತಿಲಕ ಧರ್ಮಜಗೆ | ಹರಿಪುತ್ರನಾದ ಭೀಮನಿಗೆ |
ಹರಿರಾಯನಣುಗಗೆ ವರಯಮಳರಿಗೆ |
ಹರಿಣಾಂಕ ಮುಖಿ ದ್ರೌಪದಿಗೆ | ಹರಿ ಮಧ್ಯೆಯರೆಲ್ಲರು ಜಯ ಜಯವೆನುತಲಿ | ಹರಿಮಯದಾರತಿಯ ಬೆಳಗಿರೆ ||448||

ಶಿವನ ವರದೊಳುದಿಸಿದಗೆ | ಶಿವರೂಪನಾದ ವಕೋದರಗೆ |
ಶಿವಕುಲ ವೈರಿಯ ಮೋಹದ ಕುವರಗೆ |
ಶಿವಮುಖಿ ಮಾದ್ರಾದೇವಿಯ ಸುತರಿಗೆ | ಶಿವವಾಣಿಗೆ ಶಿವವೇಣಿಯರೆಲ್ಲರು |
ಶಿವಕರದಾರತಿಯ ಬೆಳಗಿರೆ ||449||

ಕಮಲಾಪ್ತನ ಸುತನಣುಗನಿಗೆ | ಕಮಲಬಾಂಧವ ಕುಲಾಗ್ರಣಿಗೆ |
ಕಮಲಾಪತಿಯನುಜೆಯ ವಲ್ಲಭೆಗೆ |
ಕಮಲಾದಿತ್ಯರಂತೆಸೆವಿಬ್ಬರಿಗೆ | ಕಮಲಗಂಧಿನಿ ಪಾಂಚಾಲ ಸುತೆಗೆ ವರ |
ಕಮಲದಾರತಿಯ ಬೆಳಗಿರೆ ||460||

ಸುರ ಹಿತಕರ ಯುಧಿಷ್ಟಿರಗೆ | ಅಸುರ ಹಿಡಿಂಬನ ಗೆಲಿದವಗೆ |
ಸುರಲೋಕದಿ ಖಳರನು ಗೆಲ್ದ ಭೂ |
ಸುರ ಜ್ಞಾನಾನ್ವಿತರಿಗೆ ಶೋಭಿಪಭೂ | ಸುರ ಪ್ರೀತಗೆ ಮಾನಿನಿಯರೊಳಾಡುತ | ಸುರಚಿರದಾರತಿಯ ಬೆಳಗಿರೆ || ಶೋಭಾನೆ ||461||

ಭಾಮಿನಿ

ಭೂಮಿ ಪತಿ ಕೇಳಂದು ನಿಮ್ಮ ಪಿ |
ತಾಮಹರ ವೈವಾಹದುನ್ನತ |
ರಾಮಣೀಯಕವೇನನೆಂಬೆನು ತ್ರಿಜಗ ನಲಿದಾಡೆ ||
ಹೋಮ ಸಮನಂತರದಲಖಿಳ ಧ |
ರಾಮರರ ಪೂಜಿಸುತ ಸುಜನ |
ಸ್ತೋಮವನು ಬಲು ತಪ್ತಿಪಡಿಸಿದನಮಿತ ದಾನದಲಿ ||462||

ರಾಗ ಶಂಕರಾಭರಣ ಏಕತಾಳ

ಭೂರುಹವಂದರೆ ಪೆಸರ | ನಾರಿವಡೆಯನೊತ್ತಿನವನ |
ಚಾರುಮಿತ್ರನಣುಗಧೀರ ಸಹಸಿ ಯಮಜನ ||463||

ನಾರಿ ದ್ರೌಪದಿಯ ಕೂಡಿ | ಆರಾಧಿಸುತ ಪಾದಕೆರಗೆ |
ಬೇರೆ ಬೇರೊಲಿದೆತ್ತು ತುಪ | ಚಾರದಿ ವ್ಯಾಸ ||464||

ಸಕಲ ಸಚರಾಚರರಾಂತ್ಯ | ಪ್ರಕಟಿತ ವಸ್ತುವಾಯುವಿನ |
ಸುಕುಮಾರ ನೀ ಬಾರೆಂದಾಗ | ಮುಕುಂದ ಮುನಿಯು ||465||

ದಯದಲಾಶೀರ್ವಾದವಿತ್ತು | ನಯನೀತಿ ಮಾರ್ಗವನರುಹಿ |
ಪ್ರಿಯದೊಳೀಕ್ಷಿಸಿದನಾ ಪರಿ | ಣಯದಾನಂದವ ||466||

ವರ ಚತುರ್ಥಿಯು ಮೊದಲಾದ | ಪರಮ ವೈಭವದೊಳಿರ್ದು |
ಭರದಿಂದ ಬದರಿಕಾಶ್ರಮಕೆ | ತೆರಳಿದನಂದು ||467||

ವಾರ್ಧಕ

ಕೇಳ್ದಲೈ ದ್ರುಪದಜೆಯ ವೈವಾಹ ವಾರ್ತೆಯಂ |
ಕೇಳ್ದಾಕುರುಕ್ಷಿತೀಶಂ ಕನಲಿ ಬಂದು ಧುರ |
ದೊಳ್ದಾಳಿ ತೆಗೆದುದೇನೆಂಬೆನಂಬುಜ ಸಖನೊಳಿದಿರಾದ ಮಂಜಿನಂತೆ ||
ಸೀಳ್ದಿಡಿವ ತೋಳ ಮಗಕಿದಿರಾದ ಟಗರಂತೆ |
ಬಾಳ್ದ ಪರದಾಪೇಕ್ಷೆಯೆನ್ನುತೆಬ್ಬುಲಿಯೂರ |
ನಾಳ್ದಪೆನೆನನುತ್ತ ಶರ ಕೆಣಕಿ ಕೇಡಯಿತೈ ಸಮರವವರಿವರಿಗಿಂದು ||468||

ಭಾಮಿನಿ

ಮುರಿದು ಕೌರವರಂದು ಬಲಸಹಿ |
ತಿರದೆ ಕರ್ಣ ಜಯದ್ರಥಾದ್ಯರು |
ಸೊರಗಿ ಪೊಕ್ಕರು ಹಸ್ತಿನಾಪುರವನು ತದಂತರದಿ ||
ಶರಣರನು ಕಾಂಬರ್ತಿಯಲಿ ಸಿರಿ |
ಯರಸ ನತ್ಯುತ್ಸಹದಿ ಯದುಬಲ |
ವೆರಸಿ ಬಂದನು ಪಾಂಡು ಸುತರಿಹ ದ್ರುಪದನರಮನೆಗೆ ||469||

ರಾಗ ಕೇತಾರಗೌಳ ಅಷ್ಟತಾಳ

ಬಂದ ಗೋವಿಂದನ ಸಂದರುಶನದೊಳಾ | ನಂದದೊಳಿದಿರ್ಗೊಳ್ಳುತ ||
ಮುಂದೆ ಪದಾಬ್ಧದೊಳೆರಗಲು ತೆಗೆದಪ್ಪು | ತೆಂದ ನಮ್ರತೆಯಿಂದಲಿ ||470||

ಆದುದೆ ಪರಿಣಯೋತ್ಸವವತಿ ಮುದದಲಿ | ವೇದವ್ಯಾಸನ ದಯದಿ ||
ಮೋದವಾಯಿತೆ ಪಾಂಚಾಲ ನಪನಿಗೆಂದು | ಮಾಧವ ನಗುತೆಂದನು ||471||

ಬಾಲೆ ಬಂದಳು ಭಾಗ್ಯಶಾಲಿ ದ್ರೌಪದಿಯಂದು | ನೀಲ ವರ್ಣನ ಬಳಿಗೆ ||
ಮೂಲೋಕಪತಿ ಜಯವೆಂದೆರಗಲು ಲಕ್ಷ್ಮೀ | ಲೋಲ ತಾ ಪರಸಿದನು ||472||

ತಂಗಿ ಬಾರೌ ನಿನ್ನ ಪುಣ್ಯದಿ ಸಜ್ಜನ | ಸಂಗಿಗಳೊದಗಿದರು ||
ಸಿಂಗಿ ನಿನ್ನಿಂದ ದುಷ್ಟರಿಗೆನುತಾ ಲಲಿ | ತಾಂಗಿಯ ಮನ್ನಿಸಿದ ||473||

ಮಗನೆ ಧರ್ಮಜ ಕೇಳು ಹರಿಯು ನಮ್ಮಣ್ಣನ | ಮಗ ನಿಮ್ಮ ಭಾವನಿಂದು ||
ಅಗಲದ ವಸುದೇವ ಮಾವನೆನುತಲಂದು | ತೆಗೆದಪ್ಪಿ ಐವರನು ||474||

ಕುಂತಿ ಕೊಟ್ಟಳು ಲಕ್ಷ್ಮೀಕಾಂತನ ಕೈಯಲಿ | ಅಂತರಂಗದ ಶುದ್ಧದಿ ||
ಎಂತಾದರಿವರ ರಕ್ಷಿಪ ಭಾರ ನಿನಗೆನು | ತಂತರಿಸದೆ ಬಳಿಕ ||475||

ಪಾಂಡು ಭೂಪತಿ ಪೋದ ದಿನದಿಂದಿವರ ಸಾಕಿ | ಕೊಂಡೆನು ದಣಿವುತಲೆ ||
ಪುಂಡರಿಕಾಕ್ಷ ನಿನ್ನೊಲುಮೆಯಿಂದುಳಿದೆವು | ತಂಡ ತಂಡದ ಭಯದಿ ||476||

ಲಾಕ್ಷಾ ಭವನದಿಂದ ತಪ್ಪಿದೆವಾ ಮೇಲೆ | ಭಿಕ್ಷಾಟನವ ಗೈದೆವು ||
ಕುಕ್ಷಿಯ ಪೊರೆದೆನೀ ಪರಿಯೊಳ್ ನಿಮ್ಮಂಘ್ರಿಯ | ನೀಕ್ಷಿಸಿದೆವು ಎಂದಳು ||477||

ಭಾಮಿನಿ

ದೇವಿ ಚಿತ್ತೈಸರಿತೆನೆಮ್ಮಯ |
ಭಾವ ಧರ್ಮಜ ಭೀಮಸೇನರು |
ದೇವನರ್ಜುನರೆಮಳರಿವರಿಂದೆಮಗೆ ಮೈದುನರು ||
ಜೀವ ನಿಮ್ಮವದಲ್ಲವೆಮ್ಮದು |
ಭಾವ ಶುದ್ಧವೆನುತ್ತಲಧಿಕಕ |
ಪಾವಲಂಬ ಮುಕುಂದನನಿಬರ ಮನ್ನಿಸಿದನಂದು ||478||

ರಾಗ ಬೇಗಡೆ ಏಕತಾಳ

ಲಾಲಿಸು ಜನಮೇಜಯ ರಾಯ | ನಿಮ್ಮವರ ಪುಣ್ಯ ವಿ |
ಶಾಲವಾದ ಕಥೆಯ ವಿಜ್ಞೇಯ ||
ನೀಲವರ್ಣದೇವದೇವನ | ಲೀಲೆಯಿಂದಲಿ ಪಾಂಡವರ್ಪಾಂ |
ಚಾಲ ಪುರದೊಳಿರಲು ವಾರ್ತೆಯ |
ಕೇಳಿ ಕೌರವ ಭಯವಗೊಂಡಿರೆ  || ಪ  ||

ಮತ್ತೆ ನಪ ಧೃತರಾಷ್ಟ್ರತನ್ನಯ ಪುತ್ರರಂ ಕರೆಸಿ | ಗಂಗಾ |
ಪುತ್ರ ದ್ರೋಣ್ಯಾದ್ಯರನು ಕೂಡಿಸಿ ಚಿತ್ತಕೇ ತಿಳಿಸಿ | ಇಂದತಿ |
ಉತ್ತಮದ ಕಾರ್ಯಂಗಳಾಯ್ತೆನೆ |
ನುತ್ತ ಯೋಚಿಸಿ | ವಿದುರನ್ನ ಕರೆಸಿ ||
ವಿಸ್ತರಿಸಿ ಸಂಧಿಗೆ ಕಳುಹಿ ನ |
ಪೋತ್ತಮರನುಪಚಾರದಲಿ ಕರೆ |
ಸುತ್ತ ನೆರೆ ದಾಯಾದಿಯೊಳೆಂ |
ದಿತ್ತ ಅರ್ಧ ಸುರಾಜ್ಯವವರಿಗೆ ||479||

ಭಾಮಿನಿ

ಅರಸ ಕೇಳಾ ಮೇಲೆ ಧರ್ಮಜ |
ನುರುತರೋತ್ಸಹದಿಂದಲನುಜರ |
ವೆರಸಿ ನಿಜ ಸತಿ ಸಹಿತಲಿಂದ್ರಪ್ರಸ್ಥಪುರದೊಳಗೆ ||
ಅರಸನಾಗಿರುತಿರ್ದನನುಪಮ |
ಚರಿತ ಮಧ್ವಾಧೀಶ ಕೃಷ್ಣನ |
ಕರುಣ ಕವಚವ ತೊಟ್ಟು ಬಲು ತರ ಕೀರ್ತಿಯೊಡೆವುತಿರೆ ||480||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸರಸ ಸದ್ಗುಣಭರಿತ ಸುಜನರು | ವಿರಚಿಸಿರ್ದವನಾವನೆಂದಡೆ |
ಗುರು ಶಿಖಾಮಣಿ ಮಧ್ವಚಾರ್ಯನ | ಚರಣ ಭಕತ ||481||

ಪಾದಜೋತ್ತಮನೆಂದು ತಿಳಿದು ವಿ | ನೋದಿಗಳು ಪೇಳುವರು ಶಾಸ್ತ್ರವ |
ನೋದಿ ಕೊಂಡವನಲ್ಲ ಹರಿಯ ಕ | ಪೋದಯದಲಿ ||482||

ವಿವರಿಸಿದೆನತಿ ಭಕ್ತಿಯಲಿ ಭಟ | ಕವಿತೆಗಳ ಲಕ್ಷಣಗಳರಿಯದೆ |
ಭುವನಪತಿ ಕುಡುಮೇಶನೊಲವಿಲಿ | ನವಿನವಾಗಿ ||483||

ಸಾರ ಹದಯ ಸಮಸ್ತ ವಿದ್ವ | ತ್ಸಾರ ಧೇನುವೆನಿಪ್ಪ ವರದ ಕು |
ಮಾರ ನಪ ರಚಿಸೆಂದ ವಚನಾ | ಧಾರಿದಿಂದ ||484||

ರಚಿಸಿದೆನು ವರ ಬಲದಿ ವಿದ್ಯಾ | ಪ್ರಚುರರುಗಳಿದ ತಿದ್ದಿ ಮೆರೆಸಲಿ |
ರುಚಿರಮಣಿ ಗಾಂಗೇಯ ವಾದಂ | ತುಚಿತದಂತೆ ||485||

ರಾಗ ಮೋಹನ ಅಷ್ಟತಾಳ

ಮಂಗಲ ಶ್ರೀ ಮಂಜುನಾಥನಿಗೆ | ಜಯ | ಮಂಗಲ ಕವಿ ಪಾರಿಜಾತನಿಗೆ  || ಪಲ್ಲವಿ ||

ಧರೆಗೆ ಚತುಸ್ಸಾಗರ ವಲಯದಿ ಕಪ್ಪ | ತರಿಸಿ ಭಕ್ತರ ಪೊರೆವಗೆ ಜಯ ಮಂಗಲಂ ||
ಪರಿಪರಿ ಧರ್ಮವ ಮಾಡಿ ಬೆಳಗುತಿರ್ಪ | ಪರಿ ಸಖನಿಗೆ ಜಯ ಮಂಗಲಂ ||486||

ವನಧಿಯ ಮಥನದಿ ಹರನ ಓಂಕಾರದಿ | ಜನಿಸಿದ ಕಾಳ ರಾಹುಗೆ ಮಂಗಳಂ ||
ಘನ ಮಹಿಮೆಯ ತೋರಿ ಸಿಂಹವಾಹಿನಿಯೆಂ | ದೆನಿಸುವ ಕಾಳರ್ಕಾಹಿಗೆ ಮಂಗಳಂ ||487||

ಉನ್ನತ ಬಾಹುದಂಡೆಯ ಸುಪ್ರಚಂಡಗೆ | ಚೆನ್ನ ಕುಮಾರ ಸ್ವಾಮಿಗೆ ಮಂಗಲಂ ||
ಮನ್ನಿಸಿ ಭಕುತರ ಸಲಹುವ ಸಿರಿವಂತೆ | ಕನ್ನೆ ಕುಮಾರಿಗೆ ಜಯ ಮಂಗಲಂ ||488||

ಕಡುಬು ಕಜ್ಜಾಯಗಳಳವಡಿಸುತ ಬಲು | ದಢ ಭಕುತರ ಪೊರೆವಗೆ ಮಂಗಲಂ ||
ಬಿಡದೆ ಪಶ್ಚಿಮ ದಿಕ್ಕಿನೊಳಗೆ ಪ್ರಜ್ವಲಿಸುವ | ಕುಡುಮದ ಗಣನಾಥಗೆ ಮಂಗಲಂ ||489||

ದುರಿತ ವಿದೂರಗೆ ಕರುಣ ಸಾಗರನಿಗೆ | ನಿರತ ಪಾಂಡವರ ರಕ್ಷಗೆ ಮಂಗಲಂ ||
ಉರುತ ಭಾಗೆ್ಯಿನ್ನತವಾದ ಉಡುಪಿಯ | ಗುರು ಮ್ವಪತಿ ಕೃಷ್ಣಗೆ ಮಂಗಲಂ ||490||

 

|| ಯಕ್ಷಗಾನ ದ್ರೌಪದೀಸ್ವಯಂವರ ಮುಗಿದುದು ||