ಭಾಮಿನಿ

ಲಾಲಿಸೆಲೆ ಜನಮೇಜಯನೆ ಪಾಂ |
ಚಾಲ ನಪನಿತ್ತಲು ಮಹಾ ಭೂ |
ಪಾಲಕರ ನುಚಿತೋಕ್ತಿಯಿಂದವರುಗಳ ಮನ್ನಿಸುತ ||
ಮೇಲೆ ಚಿಂತೆಯೊಳಿರ್ದನಮಲ ವಿ |
ಶಾಲ ಸುರ ಪತಿ ಜಾಲ ರೂಪದಿ |
ಕೀಲಿಸಿದಡೆ ಕತಾರ್ಥ ಎನ್ನಾತ್ಮಜೆಯ ಕಾರಣದಿ ||295||

ರಾಗ ಮಧ್ಯಮಾವತಿ ಏಕತಾಳ

ಸಾರಿದರ್ ಮರುದಿನ ಡಂಗುರ ಹೊಸಿ | ನಾರಿ ದ್ರೌಪದಿ ಸ್ವಯಂವರವೆಂದುಚ್ಚರಿಸಿ || ಪಲ್ಲವಿ ||

ಕೇಳಿ ಭೂಪರ ವರ್ಗ ತವತವಗೆನುತ | ಬಾಳ ವಶ್ಯಾದಿ ಯಂತ್ರವ ಕಟ್ಟಿಕೊಳುತ ||
ಸೋಲುತ ನೆರನೆರದೊಡನೆ ಬರುತಲಿ | ಬಾಲಕಿ ತಮಗಹಳೆಂಬ ಭ್ರಮೆಯಲಿ ||
ಸಾಲು ಸಾಲಿನಲಿ ಒಬ್ಬೊಬ್ಬರರಸರು | ಓಲಗವನ್ನು ಈಕ್ಷಿಸಿ ಮಂಡಿಸಿದರು ||296||

ವರ ದಷ್ಟದ್ಯುಮ್ನನೆಂದನು ದ್ರೌಪದಿಯನು | ಭರದಿ ಶಂಗರಿಸಿ ಏರಿಸಿ ದಂಡಿಗೆಯನು ||
ನೆರೆದಗಣಿತ ನಪ ನೆರವಿಯನೆಲ್ಲ | ಕರೆತರಲಿಲ್ಲ ತೋರಿಸಿ ಮನಸುಳ್ಳ ||
ವರನನು ನೋಡಲೆಂದೆನುತಲೆ ಬೆಸಸಿ | ಅರಸರಲ್ಲಿಗೆ ತಕ್ಷಣವನುಕರಿಸಿ ||297||

ನೂರು ಸಾವಿರ ಮಾನಿನಿ ವಂದಗೂಡಿ | ನಾರಿ ಪಾಂಚಾಲೆಗರಸಿನೆಣ್ಣೆ ತೀಡಿ ||
ಓರಂತೆ ಪಾಡುತ್ತ ಮಜ್ಜನ ಗೈಸಿ | ಚಾರು ದುಕೂಲವ ನಿರಿವಿಡಿದುಡಿಸಿ ||
ಚಾರುತರದ ರತ್ನಾಭರಣವ ತೊಡಿಸಿ | ಮೀರಿ ಶಂಗರಿಸಿ ಕುಂಕುಮ ತೇಜವಿಡಿಸಿ ||298||

ವಾರ್ಧಕ

ಪದುಮದಳ ನೇತ್ರದಿಂ ಪಾವನ ಸುಗಾತ್ರದಿಂ |
ಮದಗಜ ಸುಯಾನದಿಂ ಮೆರೆವ ಪಿಕಗಾನದಿಂ |
ವದನಾಬ್ಜದಂದದಿಂ ರತಿ ಶತಾನಂದದಿಂ ವಿಧು ಕಳೆಯ ಧಿಕ್ಕರಿಸುವ ||
ವದನ ಸಂಕಾಶದಿಂ ನವರತ್ನ ಭಾಸದಿಂ |
ಪದಿನಾರು ಕಲೆಗಳಿಂ ಮಲೆಯಜದ ನೆಲೆಗಳಿಂ |
ಮಧುರತರ ವಚನದಿಂ ಸೌಧಮ್ಯ ರಚನದಿಂ ದ್ರುಪದಸುತೆ ಕಣ್ಗೆಸೆದಳು ||299||

ತಿಲಕ ಸುಮ ಪ್ರತಿನಾಸ್ಯದಿಂ ಮಂದಹಾಸ್ಯದಿಂ |
ಸುಲಲಿತ ಸ್ತನ ಯುಗ್ಮದಿಂ ಕಾಂತಿ ರುಗ್ಮದಿಂ |
ನಳಿನಾಕ್ಷಿ ಸ್ಮರಸತಿಯನುಂ ಧಿಕ್ಕರಿಪ ರತಿಯಳಧಿಕ ಸೌಂದರ್ಯದಿಂದ ||
ಇಳೆಗಧಿಕ ಚೋದ್ಯದಿಂದಾ ಸಿಂಹ ಮಧ್ಯದಿಂ |
ಸಲೆ ಪತಿವ್ರತಾಭಾವದಿಂ ಸುಪ್ರಭಾವದಿಂ |
ಕೆಳದಿಯರ ಸಮ್ಮೇಳದಿಂ ಜನರ ಮೇಳದಿಂದ ವಧುವು ಕಣ್ಣೆಸೆದಳು ||300||

ಭಾಮಿನಿ

ಅರಸ ಕೇಳಿಂತೆಸೆವ ರಮಣಿಯ |
ನುರುತರ ಪ್ರೇಮದಲಿ ಹರಸುತ |
ಹರುಷದಲಿ ವರ ಸೇಸೆಯಿಟ್ಟಾರತಿಯ ಬೆಳಗಿದರು ||
ಸುರುಚಿರದ ದಂಡಿಗೆಯನೇರಿಸಿ |
ಮೆರೆವ ನಾನಾ ವಾದ್ಯಘೋಷದಿ |
ತರುಣಿಯರು ಕರೆತಂದರಾ ಸ್ಮರ ತಂತ್ರ ದೇವತೆಯ ||301||

ರಾಗ ಘಂಟಾರವ ಅಷ್ಟತಾಳ

ತಂದರಂಗನೆಯರು ಕುಲದೇವಿಯ |
ಇಂದು ಮುಖಿಯರು ಪಾಡುತಲೆ ಹೊ | ನ್ನಂದಣವನೊಲಿದೇರಿಸಿ ||302||

ಕಾಮದೇವನ ವರ ಮದದಾನೆಯ |
ಕಾಮರತ್ನ ನಿದಾನೆಯಾಗಿಹ | ರಾಮಣಿಯಕರ ಮೂರ್ತಿಯ ||303||

ನಾರಿಯರೊಳಗುತ್ಸಹಕಾರಿಯ |
ತೋರಿ ಸುಖ ಮುನಿ ವರ್ಗ ದೈತ್ಯ ವಿ | ದಾರಿಯಾ ಶಂಗಾರಿಯ ||304||

ಮೆರೆವ ಪುತ್ಥಳಿ ಬೊಂಬೆಯಂತೆಸೆವಸವುಂ |
ದರ ಸುರಭಿ ತಕ್ಷಣದಿ ಸಾವಿರ | ಸತಿಯರಿಂದಂದೊಲಿವುತ ||305||

ಮೊರೆದುದಾಕ್ಷಣ ಭೇರಿ ತಂಬಟೆಗಳು |
ತರತರದೊಳೊದರಿದವು ಕಹಳೆಗ | ಳಿರದೆ ಡಾವರಿಸುತ್ತಲಿ ||306||

ಸಾಲೊಳೊಪ್ಪುವ ಬಿರಿದು ಬಾವಲಿಗಳ |
ಸಾಲ ಝಲ್ಲರಿಗಳಲಿ ರಾಜಿಪ | ಡಾಳಿಸುವ ಚಾಮರಗಳ ||307||

ಭಾಮಿನಿ

ಅರಸ ಕೇಳ್ ದ್ರೌಪದಿಯ ರೂಪೋ |
ತ್ಕರವನೊರೆಯಲ್ಕರಿದು ಬಳಿಕಂ |
ದುರುತರದ ವೈಭವದಿ ಕರೆತಂದರು ನಪರ ಸಭೆಗೆ ||
ವರನನಿದರೊಳು ನೋಡಿಕೊಳ್ಳೆಂ |
ದಿರದೆ ತಂಗಿಗೆ ತೋರಿಸಿದ ಸಭೆ |
ವೆರಸಿ ಕುಳಿತವನಿಪರ ದಷ್ಟದ್ಯುಮ್ನ ವಿವರಿಸುತ ||308||

ರಾಗ ಸಾವೇರಿ ಅಷ್ಟತಾಳ

ತಂಗಿ ನೋಡೆಲೆ ತಾಯೆ ನೀನು | ನಿನ್ನ | ಕಂಗಳಿಗೊಪ್ಪುವ ವರನು ||
ಮುಂಗಡೆ ಸಭೆಯೊಳಿರ್ದವರನ್ನು ಮನದಂತ |
ರಂಗಗೂಡುವಡೆ ವಿಸ್ತರಿಸುವೆ ನಿನಗೀಗ ||309||

ಈತನೆ ಕೌರವೇಶ್ವರನು | ಅನು | ಜಾತನಿವನು ದುಶ್ಯಾಸನನು ||
ಈತ ದುರ್ಜಯ ದುಸ್ಸಹಾದಿಗಳಿವರು ವಿ |
ಖ್ಯಾತರು ಕುರುಕುಲಾನ್ವಯದವನಿಪರು ||310||

ಮೂಡಣ ದೊರೆಗಳಿಂದಿವರು | ಮುನ್ನ | ನೋಡುತ್ತರಾದಿ ಕೀಚಕರು ||
ರೂಢಿಪನಾತ ಶತಾಯುಧ ಶಸ್ತ್ರವಿ |
ಭಾಡ ರವಿಧ್ವಜನಾ ಚಮನೌಕರು ||311||

ನೀಲ ಚಿತ್ರಾಯುಧರಿವರು | ನೋಡು | ಚೋಳ ಕೇರಳ ಪಾಂಡ್ಯದವರು ||
ಭೂಲೋಲರಿವರು ದಕ್ಷಿಣ ದೇಶದವರು ಸು |
ಶೀಲರು ಚಂದ್ರ ಸಮುದ್ರ ಸೇನಕರು ||312||

ವಾರ್ಧಕ

ಹರಿಣಾಕ್ಷಿ ನೋಡೀ ಕಳಿಂಗಾವನೀಶ ಸಂ |
ಗರ ಭಾನುದತ್ತ ಪಥ್ವೀಪಾಲರಿವರು ಸಂ |
ಗರ ವಿಜಯ ಭೂರಿಶ್ರವ ಸುಚರಿತ ಭಗಿರಥಾದ್ಯಖಿಳ ದಕ್ಷಿಣ ವೀರರು ||
ಹರಿವೇಣಿ ನೋಡು ಮಹಾರಾಷ್ಟ್ರ ಗೋರಾಷ್ಟ್ರರಿವ |
ರರಿಭಯಂಕರ ತುರಗ ದೇಶಾಧಿಪರು ಸರ್ವಾ |
ಭರಣ ಭೂಷಿತರ ನೋಡಿವರ ವಿದ್ಯಾಧರರೊಳ್ಯಾರು ನಿನಗಹರಿದರೊಳು ||313||

ಇತ್ತ  ನೋಡೌ ತಾಯೆ ಫೌಂಡ್ರಕನ ಭೂಪ ಭಗ |
ದತ್ತಾಖ್ಯ ಕಾಂಭೋಜ ವರ ಹಂಸ ಡಿಬಿಕ ಹರಿ |
ದತ್ತ ಮಾದ್ರಾವನೀಶ್ವರರ ನೀ ನೋಡು ಕಮಲಾಕ್ಷಿ ಸಭೆಯೊಳ್ ಕುತಿಳಿಹ ||
ಪೃಥ್ವಿಪಾಲಕ ಜರಾಸಂಧ ಮಣಿಮನ್ಯು ರಾ |
ಜೋತ್ತುಂಗ ಸಹದೇವ ಬಲು ವೀರವರ ಸಮರ |
ಸತ್ವಯುತ ದಂಡಧರ ವರ ನಪಾಲಕರ ಶಶಿವದನೆ ನೀ ನೋಡೆಂದನು ||314||

ಈತ ರುಕ್ಮಾಂಗದ  ವಿಜಯ ಸುಲಕ್ಷಣ ವರ ಗು |
ಣಾತಿಶಯ ನಿರತ ದೀರ್ಘಾಯುಷ್ಯದಿಂ ಮೆರೆವ |
ನೀತ ಶಿಶುಪಾಲನಶ್ವತ್ಥಾಮರನ್ನು ನೀ ನೋಡು ಸೌಬಲ ಮುಖ್ಯರ |
ಭೂತಳರ ರವಿಯಂತೆ ಪ್ರಜ್ವಲಿಸುತಿರುವ ವಿ |
ಖ್ಯಾತ ಕರ್ಣ ನ ನೋಡೆನಲ್ಕಂಡಳಬಲೆ ರೂ |
ಪಾತಿಶಯನೆಂದಕ್ಷಿಯಂ ತಿರುಹಿದಳ್ಮೊಗವ ಭೂವಲ್ಲಭರ ನೋಡದೆ ||315||

ಭಾಮಿನಿ

ಇತ್ತ ನೋಡೌ ತಂಗಿ ಯದು ಭೂ |
ಪೋತ್ತಮರ ಸ್ಮರ ರಾಮ ಕೃಷ್ಣರ |
ನರ್ತಿಯುಳ್ಳಡೆ ವರಿಸು ನೀನೆಂದನು ನಿಜಾನುಜೆಗೆ ||
ವತ್ತ ಕುಚಯುಗೆ ನೋಡಿ ಗುರು ಭಾ |
ವತ್ವದಲಿ ನಮಿಸಿದಳು ಸಕಲ ನ |
ಪೋತ್ತಮರ ಮೊಗದಿಕ್ಕಿದಳು ಸಲೆ ಕುಡುತೆಗಣ್ಣಿನಲಿ ||316||

ರಾಗ ಶಂಕರಾಭರಣ ಅಷ್ಟತಾಳ

ಕಂಡಳು | ಬಾಲೆ | ಕಂಡಳು || ಪಲ್ಲವಿ ||

ಕಂಡಳು ತನಗಹ ಗಂಡನ ಸಭೆಯೊಳು | ಕಂಡು ತಿರುಹಿದಳು ಮೊಗನ್ನು ||ಅ . ಪ ||

ಕಲಿ ಕೌರವಾದಿಗಳನು ಕಂಡು ಕಾಮಿನಿ | ಕುಲ ಶಿರೋಮಣಿ ಮಾತನಾಡದೆ | ಮತ್ತೆ |
ಚೆಲುವ ಕರ್ಣನ ನೋಡಿ ನೋಡದೆ | ಕೃಷ್ಣ | ಬಲರಾಮರೊಳು ಮನಗೂಡದೆ | ಭಕ್ತಿ |
ಯೊಳು ಎರಗುತ ತಡಮಾಡದೆ | ಎತ್ತ ಸಾರದೆ | ಚಿತ್ತ ಬಾರದೆ | ಯುಕ್ತಿ ದೋರದೆ | ಬಳಿ |
ಕಿಳಿದಳು ದಂಡಿಗೆಯನು ಸಖಿಯರ ಕೂಡೆ | ಘಳಿಲನೈತಂದಳೊಬ್ಬರಿಗೆಡೆಗೊಡದೆ ||317||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳ್ ನಾನಾ ದಿಗಂತದ | ಧರಣಿಪರ ಕಂಡಬಲೆ ಚಿತ್ತವು |
ಬರದೆ ಮೊಗದಿರುಹಿದಳು ತಾನೆಂ | ದರಿತು ಬೇಗ ||318||

ತರಿಸಿದನು ಪಾಂಚಾಲ ಭೂಪನ | ವರ ಮಹಾ ಚಾಪವನು ಸಭೆಯೊಳ |
ಗಿರಿಸಿ ಡಂಗುರ ಹೊಸಿದನು ಭೂ | ವರರಿಗಂದು ||319||

ಮಂತ್ರದಲಿ ಪೂಜಿಸುತ ಧನುವಿಂ | ಗೆಂತ್ರಕಾವಾಹನೆಯ ಗೊಳಿಸುತ |
ಮಂತ್ರ ಶರಗಳ ನಿಲಿಸಿದನು ಬಲು | ಮಂತ್ರಿಸುತಲೆ ||320||

ಸತ್ವವುಳ್ಳ ನಪೋತ್ತಮರು ಧನು | ವೆತ್ತಿ ಪೊಡೆಯಲು ಮತ್ಸ್ಯವನು ನಿಜ |
ಪುತ್ರಿಯಹ ದ್ರೌಪದಿಯ ನೀವೆನೆ | ನುತ್ತ ಮುದದಿ ||321||

ಮಸಗಿದವು ವಾದ್ಯಗಳು ನಾಲ್ದೆಸೆ | ದೆಸೆಗಳಲಿ ನಿಸ್ಸಾಳಗಳು ಗ |
ರ್ಜಿಸಿದವಾ ಪರಿಣಯದ ವಸಗೆಯು | ಪಸರಿಸಿದುದು ||322||

ನೆರೆದ ನಪರವಘಡಿಸಿ ತವತವ | ಗುರುವಣಿಸಿ ಬರಲವರ ಹಮ್ಮನು |
ಮುರಿದುದಾ ಧನುವೇನನೆಂಬೆನು | ಧರೆಯ ಬಿಡದೆ ||323||

ಭಾಮಿನಿ

ಧಾರುಣೀಶ್ವರ ಕೇಳು ನೆರೆದಿಹ |
ಭೂರಮಣರೆದೆಗುಂದುತಿರಲು |
ಬ್ಬೇರಿ ಗದ್ದುಗೆ ಹೊಯ್ದು ನಡೆತಂದನು ವಿಲಾಸದಲಿ ||
ಭಾರಿ ಧನುವಿದ ನೋಳ್ಪೆನೆಂದು ಸು |
ರಾರಿ ಮುಂಗೈ ಸರಪಣಿಯ ಮೇ |
ಲೇರಿಸುತ ಮಾಗಧನು ಮಾರಾಂತನು ಮಹೋಗ್ರದಲಿ ||324||

ರಾಗ ಶಂಕರಾಭರಣ ಮಟ್ಟೆತಾಳ

ಬಿಲ್ಲನೀತಲೆತ್ತಲಿವನ | ನೊಲ್ಲಳೋಯೆನುತ್ತ ಸತಿಯ |
ರೆಲ್ಲರುಲಿವುತಿರಲು ಸಮರ | ಮಲ್ಲನಾಕ್ಷಣ ||
ಘಲ್ಲಿಸುತ್ತ ಘಾಡಿಕೆಯಲಿ | ಬಲ್ಲತನದೊಳೆತ್ತಲಿವನ |
ಬಲ್ಲುದೇ ಮಹಾತ್ಮ ಧನುವು | ಕೊಳ್ಳದೊಮ್ಮಿಗೆ ||325||

ಒಡೆದುದವನಿ ತಳಕೆ ಬಿಡದೆ | ಮದಮುಖತ್ವ ದನುಜನುರವ |
ನೊದಗಿ ಬಹಳ ಭಾರದಿಂದ | ಲದುರುತಾಕ್ಷಣ ||
ಎದೆಯಗುಂದದೆದ್ದು ಧನುವ | ನೆದೆಗಮರ್ದು ಮಂಡಿಯಿಂದ |
ಲೊದಗುತೆತ್ತುತಿರಲು ಪೊದ್ದ | ದಧಿಕ ಬಲವನು ||326||

ಶ್ವಾಸಕುರಿತದಿಂದ ಬೆವರು | ಸೂಸಿ ವಿಶ್ರಮಿಸುತ ಬಹಳ |
ರೋಷದಿಂದ ಮಗಧ ಧಾರು | ಣೀಶ ಧನುವನು ||
ವಾಸಿ ಪಂಥದಿಂದಲೆತ್ತಿ | ಘಾಸಿಯಾಗಲಂಗನೆಯರು |
ಘೋಷದಿಂದ ನಗುತಲಿರ್ದ | ರಾ ಸಮಯದೊಳು ||327||

ಕಂದ

ಮಾಗಧ ಭೂಪಂ ಸಭೆಯೊಳ್ |
ಸಾಗದೆ ಧನುವಿಂಗುರೆ ಸೋತುದನೀಕ್ಷಿಸುತಂ ||
ಬೇಗದೊಳಾ ಶಿಶುಪಾಲಂ |
ತಾಗಿದನಾ ಧನುವ ನೋಳ್ಪೆನೆನುತಲೆ ಭರದಿಂ ||328||

ರಾಗ ಕಾಪಿ ಅಷ್ಟತಾಳ

ಶಿಶುಪಾಲನಯ್ತಂದು ಕಂಡ ಖಿಡಿ | ಮಸಗುತ್ತ ಮನದೊಳು ಬಲು ಖಾತಿಗೊಂಡ || ಪಲ್ಲವಿ ||

ದೆಸೆಗೆಟ್ಟು ನಡೆವ ಕನ್ಯೆಯರ | ಇನ್ನು | ಮಿಸುಕುವ ಸೊಗಸನೀಕ್ಷಿಸುವನೆಲ್ಲವರ ||
ಕುಶಲವ ನೋಡಲೆಂದವನು | ರಾ | ಜಿಸುತಿಪ್ಪ ಚಾಪಕ್ಕೆ ಕರವನಿಕ್ಕಿದನು ||329||

ಇವನಲ್ಲೆ ದಶಕಂಠ ಹಿಂದೆ | ಬಲು | ಬವರ ಸಮರ್ಥನೆಂತಹುದೇನೊ ಮುಂದೆ ||
ಯುವತಿಯ ಪುಣ್ಯವೆಂತಿಹುದು | ಸಖಿ | ನಿವಹವೆಲ್ಲವು ಚಿಂತಿಸುತ್ತಿರಲಂದು ||330||

ತ್ರಾಣದಿ ಧನುವ ಬೋಳೈಸಿ | ಮಹಾ | ತ್ರಾಣದಿಂದಿದರನೆತ್ತುವೆನೆಂದಬ್ಬರಿಸಿ ||
ಆನುತೆತ್ತುತಲಾದರಿಸದೆ | ಬಿದ್ದ | ನೇನೆಂಬೆ ಹೊಯ್ದುದಾತನ ಧನು ಬಿಡದೆ ||331||

ಭಾಮಿನಿ

ಬಿಲ್ಲಹತಿಯಲಿ ಧರೆಗುರುಳಿ ರಣ |
ಮಲ್ಲ ಸಾಹಸಿ ಬರಲು ಸತಿಯರು |
ಝಲ್ಲೆನಲು ಶಿಶುಪಾಲನೆಂದನು ಮಾನಭಂಗದಲಿ ||
ಸಲ್ಲದೀ ಧನು ಚಂಡಿ ಸುಡಲಿವ |
ರೆಲ್ಲರಧಮರು ಕುಳಿತ ನಪರಾ |
ಖುಲ್ಲೆಯರ ಬೇಳುವೆಗೆ ಬೆರದಿಹರೆಂದನಾ ಚೈದ್ಯ ||332||

ರಾಗ ಭೈರವಿ ಏಕತಾಳ

ಮಾಗಧ ಶಿಶುಪಾಲಕರು | ಕೈ | ಲಾಗದೆ ಪುರಕಯ್ದಿದರು ||
ಆಗುಳಿದವನೀಶ್ವರರು | ತಲೆ | ದೂಗುತ ಹಿಮ್ಮೆಟ್ಟಿದರು ||333||

ಶಲ್ಯ ನಪನು ನಡೆತಂದ | ರಣ | ದಲ್ಲಣ ಗರ್ಜಿಸಿ ನಿಂದ ||
ನಿಲ್ಲದೆ ನಗುವರಿಗೆಂದ | ನಿಮ್ಮ | ಪಲ್ಲ ಮುರಿವೆ ಖತಿಯಿಂದ ||334||

ಎನುತಲೆ ಭುಜಗಳ ತಟ್ಟಿ | ತಾ | ಧನುವ ನೋಡುತ ಜಗಜಟ್ಟಿ ||
ಮನದೊಳೆಂದನು ಹುರಿಗುಟ್ಟಿ | ಈ | ಧನುವ ಭರದಿ ಪ್ರತಿಸಿಟ್ಟಿ ||335||

ನೋಡುವೆನೆನುತೆತ್ತಿದನು | ಕೈ | ಗೂಡದೆ ಧರೆಗುರುಳಿದನು ||
ನೋಡುತಲಾ ಸುದತಿಯರು | ತಡ | ಮಾಡದೆ ನಗಲೆಲ್ಲವರು ||336||

ಭಾಮಿನಿ

ಬಿಲ್ಲ ಭಾರವ ಧರಿಸಲಾರದೆ |
ಡೊಳ್ಳು ಮೇಲಾಯ್ತವನಿಗುರುಳಲು |
ಶಲ್ಯಭೂವರನೆದ್ದು ಬರೆ ಕಲಿ ಕರ್ಣ ಕಾಣುತಲೆ ||
ಹೊಳ್ಳುಗಳೆವೆನು ಧನುವ ನಗುವರ |
ಹಲ್ಲ ಮುರಿವೆನೆನುತ್ತ ಚೌಪಟ |
ಮಲ್ಲನೈತಂದೀಕ್ಷಿಸಿದನುರು ಯಂತ್ರಮಯ ಧನುವ ||337||

ಕಂದ

ದಿನಮಣಿ ಸುತನಂ ಕಂಡಾ |
ವನಿತೆಯರೆಲ್ಲರ್ ಪ್ರೇಮದೊಳಾ ದ್ರೌಪದಿಗಂ ||
ವಿನಯದೊಳರುಹಿದರಿವನ |
ರ್ಜುನನಂತಿಹನೀಕ್ಷಿಸೆಂದುಮತಿ ಪ್ರೀತಿಯೊಳುಂ ||338||

ರಾಗ ಸೌರಾಷ್ಟ್ರ ಅಷ್ಟತಾಳ

ಈತನು ಬಹು ರೂಪಾತಿಶಯದೊಳಿಹ | ನೋಡೆಯಮ್ಮ | ಪುರು |
ಹೂತ ನಂದನನಂತೆ ಹೊಳೆವುತ್ತಲೈದನೆ | ನೋಡೆಯಮ್ಮ ||339||

ಶೀತಾಂಶುವಂದದಿ ಮೊಗ ಥಳಥಳಿಸುವ | ನೋಡೆಯಮ್ಮ | ಮನ |
ಪ್ರೀತಿಯುಳ್ಳಡೆ ಈತನಾವ ಭಾವಂಗಳ | ನೋಡೆಯಮ್ಮ ||340||

ಕಬ್ಬು ಬಿಲ್ಲೊಂದಿಲ್ಲ ಕಾಮನೆಂದೆಂಬಡೆ | ಅಮ್ಮ ನೋಡೆ | ಈತ |
ನೊಬ್ಬನು ಸೂರ್ಯನು ಅರುಣ ಸಾರಥಿಯಿಲ್ಲ | ಅಮ್ಮ ನೋಡೆ ||341||

ಹುಬ್ಬು ಬಿಲ್ಲೆಸಗಿ ನೋಡುವ ನಯನಾಸ್ತ್ರವ | ಅಮ್ಮ ನೋಡೆ | ಮಿತ್ರ |
ದುಬ್ಬುಗಳದು ಧನುವೆತ್ತಿದಡಾಹುದು | ಅಮ್ಮ ನೋಡೆ ||342||

ಭಾಮಿನಿ

ಬಿಡದೆ ಸತಿಯರು ಪೊಗಳುತಿರಲಡಿ |
ಯಿಡುತ ಕರ್ಣನು ಧನುವನೆತ್ತಲು |
ಕೊಡಹಿತೇನೆಂಬೆನು ಶರಾಸನವಾ ಮಹಾಬಲನ ||
ಪೊಡವಿ ಬಿಡದಿರಲಾಗ ರವಿಸುತ |
ಸಡಲಲೀಕ್ಷಿಸಿ ಕೌರವಾದ್ಯರು |
ಮಿಡುಕದಿರಲು ಹಲಾಯುಧನು ಕಂಡೆದ್ದು ಗರ್ಜಿಸಿದ ||343||

ರಾಗ ಮಾರವಿ ಏಕತಾಳ

ದೂಷಿತ ದ್ರುಪದನ ಸುತೆಯ ಕಟಾಕ್ಷದ | ಬೀಸುವಲೆಯನಿಕ್ಕಿ ||
ವಾಸಿ ಪಂಥದಿ ಧನುವೆಂಬದಡಿವಲೆಯ | ಹಾಸಿ ಹವಣಿಸುತಲೆ ||344||

ಧರಣಿಪರೆಂಬ ಮಗಾವಳಿಗಳ ಹಿಡಿ | ದೊರಸುವನಿವನಿಂದು ||
ಮುರಿದೀ ಧನುವನು ಸತಿಯ ಮುಂದಲೆ ಹಿಡಿ | ದಿರದೈತಹೆನೆಂದು ||345||

ಹಲಧರ ಪೀಠವನಿಳಿದುದನೊಯ್ಯನೆ | ಜಲಜಾಂಬಕ ಕಂಡು ||
ತಿಳಿದಿಹ ಗಮನವಿದೆಲ್ಲಿಗೆ ಕಾರ್ಯದ | ಗೆಲವೇನೆಂದೆನುತ ||346||

ಅವಧರಿಸಾದರೆ ಯಂತ್ರವ ಗೆಲಿದಾ | ಯುವತಿಯ ಮುಂದಲೆಯ ||
ತವಕದಿ ಪಿಡಿದೆಳೆತಹೆನೆನೆ ಲಕ್ಷ್ಮೀ | ಧವ ಮಗುಳಿಂತೆಂದ ||347||

ರಾಗ ಕಮಾಚು ಅಷ್ಟತಾಳ

ಲಾಲಿಸಿ ಮಾತನು ಕೇಳಣ್ಣ | ಗುಣ | ಶೀಲ ನೀ ತರುವುದುಚಿತವೆ ಆ ಹೆಣ್ಣ || ಪಲ್ಲವಿ ||

ಅತ್ತೆಯಲ್ಲವೆ ಕುಂತಿ ದೇವಿಯರು | ತ | ತ್ಪುತ್ರರೆಮಗೆ ನೋಡಲು  ಮೈದುನರು ||
ಮತ್ತವರರಸಿಯರ್ ತಂಗಿಯರು | ಇದು | ಸತ್ಯದಿಂದಾಕೆಗೆ ಅವರೆ ವಲ್ಲಭರು ||348||

ಹರಿಯ ಮಾತನು ಕೇಳಿ ಬಲರಾಮ | ಆ | ಶ್ಚರಿಯದ ನುಡಿಯಿದೆಂದನು ತಾ ನಿಸ್ಸೀಮ ||
ಅರಗಿನುರಿಯೊಳವರ್ನಿರ್ನಾಮ | ವಾದು | ದರಿತೆಂಬರೂ ಕಂಡವರು ಜನಸ್ತೋಮ ||349||

ಕ್ಷಿತಿಯೊಳಗವರುಗಳಿಲ್ಲೆಂದು | ಯಂತ್ರ | ಚುತಿಗೆ ಬೇರ‌್ಯಾರಾದರುಂಟೆಂದು ||
ಹಿತಗೊಳಿಸಿತೆ ನಿಮ್ಮ ಮತಿಗಿಂದು | ನಮ್ಮ | ಪಿತನಾಣೆ ತೋರುವೆ ದಢವೆಂದು ||350||

ಇದು ಚಿತ್ರವಲೆ ಗತಾಯುಗಳು | ಮ | ತ್ತುದಿಸಿದರೊಳ್ಳಿತಲ್ಲವೆ ಲೋಕದೊಳು ||
ಮುದದಿ ಬಾಳಿರಲವರುಗಳು | ದ್ರೌ | ಪದಿಯನ್ನು ವರಿಸಲಿ ಬಂದು ಪ್ರೇಮದೊಳು ||351||

ಭಾಮಿನಿ

ಶ್ರೀ ಮುಕುಂದನ ಮಾತಿಗಾ ಬಲ |
ರಾಮನೊಡಬಡಲಿತ್ತ ನಾರೀ |
ಸ್ತೋಮ ಚಿಂತಿಸಿತಿವಳಿಗಿನ್ಯಾರೊಡೆಯರೋಯೆಂದು ||
ಭೂಮಿಪತಿಗಳೊಳಿಲ್ಲ ಯಂತ್ರ ವಿ |
ರಾಮವೆಸಗೀ ಕುವರಿಗಧಿಕ |
ಪ್ರೇಮಗೊಳಿಸುವರಿಲ್ಲೆನುತಲಾ ದ್ರುಪದ ಚಿಂತಿಸಿದ ||352||

ರಾಗ ನೀಲಾಂಬರಿ ರೂಪಕತಾಳ

ಇನ್ಯಾರೆಂತ್ರವ ಭೇದಿಸಿ | ಕನ್ನೆಯ ಕೈವಿಡಿವವರೂ |
ಮುನ್ನವೆ ನೆರೆದರಸುಗಳೂ | ಮನಗುಂದಿದರವರು ||
ಬಿನ್ನಾಣದ ಬೆಡಗಿಲಿ ಪುರ | ವನ್ನೂ ಶಂಗರಿಸಿದೆ ಬಲು |
ಸನ್ನಾಹವ ಮಾಡಿಸಿದೆನು | ಸಾರಿಸಿ ಡಂಗುರವ ||353||

ಯಾತಕೆ ಕರೆಸಿದೆ ಭೂಪರ | ಯಾತಕೆ ಇರಿಸಿದೆ ಚಾಪವ |
ಯಾತಕೆ ಪರಿಣಯವೆಂಬ | ಖ್ಯಾತಿಯ ಪರ್ಬಿಸಿದೆ ||
ಭೂತಳದೊಳಗಾ ಪಾಂಡುವ | ಜಾತರು ಇದ್ದರೆ ಬಾರರೆ |
ಜಾತೆಗೆ ಯಾರೊಡೆಯರೊ ಜಗ | ನ್ನಾಥನೆ ತಾಬಲ್ಲ ||354||

ಸುಳ್ಳಾದುದೊ ಜೋಯಿಸರೆಂ | ದುಲ್ಲಾಸದ ನುಡಿಯಲ್ಲವು |
ಬಿಲ್ಲಿನ ದೆಸೆಯಿಂದಲಿ ಪಗೆ | ಎಲ್ಲವರೊಡನಾಯ್ತು ||
ವಲ್ಲಭನಿನ್ಯಾರೆಂಬುದ | ಫುಲ್ಲ ಸಂಭವ ಬರೆದಿಹನೋ |
ಎಲ್ಲ ಸ್ಥಿತಿಗಳ ಲಕ್ಷುಮಿ | ವಲ್ಲಭ ತಾ ಬಲ್ಲ ||355||