ಭಾಮಿನಿ

ಇಂತು ದ್ರುಪದನು ಚಿಂತಿಸುವ ಸಮ |
ಯಾಂತರದಿ ಬುಧ ಸಂತತಿಗೆ ತಾ |
ನಿಂತು ದಷ್ಟದ್ಯುಮ್ನ ಸಾರಿದನಾ ಸಭಾಗ್ರದಲಿ ||
ಕುಂತಿರದೆ ಮುಂಗೈಯ ಬಲುಹು |
ಳ್ಳಂಥವರು ಧನುವೆತ್ತಿ ವರ ಸೀ |
ಮಂತಿನಿಯ ವರಿಸುವದೆನಲ್ಕದ ಕೇಳಿ ಪೇಳಿದರು ||356||

ರಾಗ ಪೂರ್ವಿ ಕಲ್ಯಾಣಿ ಅಷ್ಟತಾಳ

ನಮ್ಮಿಂದಾಗುವದೆ ಈ ಕಾರ್ಯವು | ಬಲು | ಹಮ್ಮುಳ್ಳ ದೊರೆಗಳು ಹಿಮ್ಮೆಟ್ಟಿ ಪೋದರು || ಪ ||

ವೇದಶಾಸ್ತ್ರದಲಿ ಮೀಮಾಂಸ ತರ್ಕಗಳಲ್ಲಿ | ಆದಿ ಪುರಾಣ ತತ್ವಂಗಳಲಿ ||
ವಾದಿಸಿದಡೆ ಒಮ್ಮೆ ನೋಡುವೆವಲ್ಲದೆ | ಈ ಧನುವೆತ್ತುವುದುಂಟೆ ಹಾರುವರೆಲ್ಲ ||357||

ವಚನ ಶೂರರು ನಾವು ನಮ್ಮೊಳು ಪಂಡಿತ | ನಿಚಯವು ನಿಲಲಿ ವಾಗ್ವಾದದಲಿ ||
ಅಚಲಿಸದಿರದೆ ಹೊಯ್ದಡಿ ಹೋರಟೆಯಲಿ | ಪ್ರಚುರ ವಿಸ್ಮಯವ ತೋರಿಸುವೆವಾವಲ್ಲದೆ ||358||

ಹೋಳಿಗೆ ತುಪ್ಪ ಹೂರಣ ಕಡುಬೊಡೆಯಲಿ | ಮೇಲಾದ ಶಾಲ್ಯಾನ್ನ ಶಾಕದಲಿ ||
ಹಾಲು ಸಕ್ಕರೆ ಪಾಯಸಾದಿಗಳುಣುವಲ್ಲಿ | ಸೋಲಿಸುವರೆ ಒಮ್ಮೆ ನೋಡುವೆವಲ್ಲದೆ ||359||

ಭಾಮಿನಿ

ಅರಸ ಕೇಳಿಂತೆಂದು ಬುಧಜನ |
ರೊರೆವುತಿರಲದನರಿತು ಧರ್ಮಜ |
ನರುಹಿದನು ಸಂಜ್ಞೆಯೊಳು ನರನದ ತಿಳಿದು ಗಾಢದಲಿ ||
ವರ ಯುಧಿಷ್ಟಿರ ಭೀಮಸೇನರಿ |
ಗೆರಗಿ ದಢ ಭಕ್ತಿಯೊಳು ದರ್ಭೆಯ |
ಬೆರಳೊಳಳವಡಿಸುತ್ತ ಮೆಲ್ಲನೆ ಕಂಡನೆಡಬಲವ ||360||

ಕಂದ

ನರನೀ ಪರಿಯಿಂದಾಗಳ್ |
ವರ ಚಾಪವನೆತ್ತುವಡಾ ಸಭೆಯೊಳಗೇಳಲ್ ||
ನೆರೆದಿಹ ಬುಧ ಜನರೀಕ್ಷಿಸಿ |
ಪರಿಹಾಸ್ಯದೊಳೆಂದರು ಪರ್ವತ ರಿಪು ಸುತಗಂ ||361||

ರಾಗ ಅಷ್ಟಪದಿ ಮಾರವಿ ಏಕತಾಳ

ಏನಿರಯ್ಯ | ಉಪಾಧ್ಯರಿ | ದೇನಿರಯ್ಯ ||
ಏನಿರಯ್ಯ ಸುಮ್ಮಾನದೊಳೆದ್ದಿರಿ | ದೇನಾ ಧನುವ ನಿದಾನವನರಿಯದೆ  || ಪಲ್ಲವಿ ||

ಮದುವೆಯು ಬೇಕೆಂಬುದು ಚಿತ್ತದಿ ನಿಮ | ಗೊದಗಿರೆ ಶ್ರೋತ್ರಿಯರಿದಿಯಲಿ ವಿದ್ಯದ ||
ಹದಯವ ತೋರಿಸಿ ಬುಧಕುಲ ಜಾತೆಯ | ಮದುವೆಯಾಗುವದಿದು ಸದಮಲವೈಸೆ ||362||

ಭಾರಿಯ ಧನುವಿಂಗೂರಿದ ಯಂತ್ರವ | ಜಾರಿಸಿ ದ್ರುಪದ ಕುಮಾರಿಯ ತರಲು ||
ಬ್ಬೇರಿದುದಿದುವು ಭಗೀರಥ ಯತ್ನವು | ಧಾರುಣಿಪತಿಗಳ ಮೀರಿದವರೆ ನೀ ||363||

ಸ್ಮೃತಿ ಪೌರಾಣಾನತ ತರ್ಕಂಗಳ | ಸ್ಥಿತಿಗಾನುವದಿದು ಹಿತ ಭೂಸುರರಿಗೆ |
ಮತವೇ ಬಲು ಭೂಪತಿಗಳ ಕಾರ್ಯಕೆ | ಜತೆಯಾಗೆದ್ದುದು ಅತಿಶಯವಾಯಿತು ||364||

ವಡೆ ಹೋಳಿಗೆ ಬಲು ಕಡುಬು ಕಜ್ಜಾಯಗ | ಳೆಡೆಗಿಕ್ಕಿಹರೆಂದಡರಿದಂತಾಯಿತು ||
ತಡೆಯದೆ ವಿಪ್ರರ ಗಡಣಕೆ ಹಾನಿಯ | ಕೊಡಿಸುವಿರೆಂದರು ಬಡ ವಟು ನಿಕರ ||365||

ಆದಡೆ ನಿಮ್ಮ ಕಪೋದಯದಾಶೀ | ರ್ವಾದದಿ ಗೆಲುವೆನು ಭೇದಿಸಿ ಯಂತ್ರವ ||
ವಾದಿಸದಿರಿಯೆಂದಾಧರಿಸುತ ನರ | ನೈದಲು ಸತಿಯರು ಮೂದಲಿಸಿದರು ||366||

ರಾಗ ಬಿಲಹರಿ ಅಷ್ಟತಾಳ

ಇತ್ತನೋಡೆ ಬಂದ ಹಾರುವನ | ಕ | ಪ್ಪೊತ್ತಿ ಬರುವ ಕರಿಗಡ್ಡದೋರುವನ || ಪಲ್ಲವಿ ||

ಮಟ್ಟಿಯ ವಿಸ್ತಾರ ಮದನನ | ದರ್ಭೆ | ಗಟ್ಟಿದ ಶೀಲದನಂಗನ ||
ಕಷ್ಣಾಜಿನದ ಕಂದರ್ಪನ | ಉಟ್ಟ | ಪಟ್ಟೆ ತಳಿರು ಕಸೆಯ ಕಾಮನ ||367||

ನೆಲನನುಂಗುಷ್ಟದಿ ಕೆದರದಿರು | ನಾಚಿ | ತಲೆಯ ತಗ್ಗಿಸಿ ಮೌನ ಮಾಡದಿರು ||
ಕುಲದೊಳುತ್ತಮನಾದರಳುಕದಿರು | ಯಂತ್ರ | ಗೆಲಿದು ಭೇದಿಸಲ್ ನಿನ್ನ ಸರಿಯಾರು ||368||

ಫಲುಗುಣನಿವನೆಂದೆ ಭಾವಿಸಿಕೊ | ಪುಣ್ಯ | ಫಲವು ಕೈಗೂಡಿತೆಂದೀಕ್ಷಿಸಿಕೊ ||
ಕಳವಳ ಬಿಟ್ಟು ಸಂತೋಷಿಸಿಕೊ | ಮಹಾ | ಬಲ ರುದ್ರನಡಿಯನಾರಾಧಿಸಿಕೊ ||369||

ಭಾಮಿನಿ

ಇತ್ತಲರ್ಜುನನಾವ ಭಾವವ |
ವಿಸ್ತರಿಸಿ ದ್ರೌಪದಿಯೊಡನೆ ಪೇ |
ಳುತ್ತಿರಲು ಬಲರಾಮನಿಂಗಸುರಾರಿ ತೋರಿಸಿದ ||
ಇತ್ತಲೀಕ್ಷಿಸು ಫಲುಗುಣನು ಬಲು |
ಕತ್ತಲೆಯ ಕಳೆದೈತರುವನಾ |
ದಿತ್ಯನೋಪಾದಿಯಲಿ ಪ್ರಜ್ವಲಿಸುವವನ ನೋಡೆಂದ ||370||

ರಾಗ ಕಲ್ಯಾಣಿ ಝಂಪೆತಾಳ

ಅಣ್ಣ ನೋಡರ್ಜುನನ ವಿಪ್ರ ವೇಷಗಳನ್ನು |
ಮಿಣ್ಣನೀ ಸಭೆಯೊಳಗೆ ಬಂದು ಕುಳಿತುದನು  || ಪ ||

ದ್ವಿಜರ ಮಧ್ಯದೊಳಿರ್ಪ ಧರ್ಮಜಾನಿಲ ಸುತರು |
ಗಬಜಿಸದಾ ಯಮಳ ಕುಂತಿಸಹಿತಾಗಿ ||
ನಿಜವಾದುದೇ ತಂದೆಯಾಣೆ ಕೊಟ್ಟುದು ನಿಮಗೆ |
ಸುಜನರಳಿವರೆ ಸತ್ಯ ಬಿಡಲರಿಯದೆಂದ ||371||

ಎಂದ ಮಾತನು ಕೇಳಿ ಇಂದು ಅಚ್ಚರಿಯೆನುತ |
ನಿಂದು ಮಕುಟವ ತೂಗುತೆಂದ ಬಲರಾಮ ||
ಎಂದರಗಿನಾಲಯದಿ ಬೆಂದುದಿಲ್ಲೆಂಬುದದ |
ರಂದವೆಂತರಿವೆ ಗೋವಿಂದ ಭಳಿರೆಂದ ||372||

ಅಣು ಮಹತ್ವದೊಳಾಗುತಿಪ್ಪ ಪ್ರಪಂಚಗಳ |
ಎಣಿಕೆ ನಿನಗುಂಟು ಬಹು ಕಪಟನಾಟಕನು ||
ಗುಣವ ಬಲ್ಲವರ‌್ಯಾರು ಗುರುವಲೈ ಮಾಯೆಗೆ ನೀ |
ನೆನಗಿದಳವಲ್ಲ ತುದಿಗಾಣಲಿಕೆ ಇಲ್ಲ ||373||

ವಾರ್ಧಕ

ಅರಸ ಕೇಳಾ ಪ್ರಲಂಭಘ್ನಚ್ಯುತರ್ ತಮ್ಮೊ |
ಳಿರದೆ ಮಾತಾಡುತಿರಲಿತ್ತ ಮಹಿಳೆಯನಿಬ |
ರೊರೆದ ಪರಿಹಾಸ್ಯಮಂ ಭೂಸುರರ ಕಠಿಣ ಮಧುರೋಕ್ತಿ ವಿನ್ಯಾಸಗಳನು ||
ತೊರೆದು ಕೇಳುತ ಸಭೆಯನೀಕ್ಷಿಸುತ ಕುಳಿತಿರುವ |
ವರ ಭೀಷ್ಮ ದ್ರೋಣಾದ್ಯರಿಂಗೆ ಭಾವದೊಳೆರಗು |
ತರವಿಂದನಾಭನಂ ಕಣ್ಮನದಿ ಸ್ತುತಿಸಿದಂ ಭರದೊಳು ||374||

ಜಯ ಜಯಾಮತ ಸಾರ ಜಯ ಧಾರ್ಮಿಕೋದ್ಧಾರ |
ಜಯದಿನಪ ಶತಭಾಸ ಜಯ ದೀನ ಜನ ಪೋಷ |
ಜಯ ದುರಿತ ಕುಲ ಭಗ್ನ ಜಯ ದುಷ್ಟ ಕಂಸಘ್ನ ಜಯ ದೇವಕೀ ಕುಮಾರ ||
ಜಯದೈತ್ಯನಿರ್ನಾಮ ಜಯದೋಷಹರನಾಮ |
ಜಯ ದೌತಮಯ ಚೇಲ ಜಯ ದಂತಿ ವರ ಪಾಲ |
ಜಯ ದಕ್ಷ ಶಿಕ್ಷಸಖ ಜಯವೆಂದು ಮನದೊಳಾ ನರನು ಪ್ರಾರ್ಥಿಸಿದನಂದು ||375||

ರಾಗ ಭೈರವಿ ತ್ರಿವುಡೆತಾಳ

ಸುರಪ ಶಿಖಿ ಯಮರಿಂಗೆ ಶೋಭಿಪ | ವರ ಗಣಪ ಗುಹರಿಂಗೆ ವಸು ಭಾ |
ಸ್ಕರ ಮಹಾ ರುದ್ರಾದಿ ದಿಕ್ಪಾ | ಲರಿಗೆ ವಂದಿಸಿ ಬಂದನಾಕ್ಷಣ ||
ಧರಣಿಪರ ಧಿಕ್ಕರಿಸಿ ಮನ್ಮಥ | ಹರಮಹಾಚಾಪದಲಿ ಫಲುಗುಣ |
ಹರಿಹರಬ್ರಹ್ಮರನು ನೆಲೆಗೊಳಿ | ಸಿರುವ ಯಂತ್ರದ ಪರಿಯನೆಲ್ಲವ | ಕಂಡನಾಗ ||376||

ಮೊದಲಲಬುಜೋದ್ಭವಗೆರಗಿ ಮ | ಧ್ಯದಲಿ ಮಧುಸೂದನಗೆ ವಂದಿಸಿ |
ತುದಿಯೊಳಗಜೇಶ್ವರನ ಪ್ರಾರ್ಥಿಸಿ | ಹೆದೆಯನೇರಿಸಿ ಮಂತ್ರಶರ ಗೊಂ |
ಡೊದಗಿ ಕಿವಿವರೆಗುಗಿದು ವರ ಯಂ | ತ್ರದ ಹೊಳವ ಕಂಡೆಚ್ಚನರ್ಜುನ |
ನದು ಮಹಾದ್ಭುತವಾಗಿ ಸಭೆಗೆಸೆ | ದುದು ತಿಮಿಂಗಿಲ ತೆಗೆದು ಹಾರಿದು | ದೇನನೆಂಬೆ ||377||

ಒಂದು ಕಡೆಯಲಿ ವಸುಮತೀಶರ | ವಂದ ಮಝಭಾಪೆನುತಿರಲು ಮ |
ತ್ತೊಂದು ಬಳಿಯಲಿ ವಿಪ್ರತತಿ ಜಯ | ವೆಂದು ಬಲಿದುಬ್ಬೇರುತಿರೆ ಕಂ ||
ಡೊಂದು ದಿಕ್ಕಿಲಿ ವನಿತೆಯರುಘೇ | ಯೆಂದು ಬಲು ಪೊಗಳುತ್ತ ಪಾರ್ಥನಿ |
ಗೆಂದರಾ ಸಭೆಯೊಳಗೆ ಜಯ ಜಯ | ವೆಂದು ಪೊಗಳಿದರಖಿಳ ಜನವದ | ನೇನನೆಂಬೆ ||378||

ವಾರ್ಧಕ

ಪೃಥ್ವಿಪತಿ ಕೇಳಮರ ಮೊತ್ತ ಪೊಗಳ್ತಿರಲು ಅರು |
ವತ್ತು ಸಾವಿರ ಭಟರು ಕಿತ್ತ ಕೈದುಗಳಿಂದ |
ಸುತ್ತೀರ್ದುದಿರದೆ ಪಾರ್ಥನ ಅಂಗರಕ್ಷಣೆಗೆ ದ್ರುಪದೇಶನಾಜ್ಞೆಯಿಂದ ||
ಪಥ್ವೀಶರೆಲ್ಲರುಂ ಪೊತ್ತಿರ್ದ ದುಗುಡದಿಂ |
ದುತ್ತರವನಾಡದಂದತ್ಯಂತ ಮೌನದಿಂ |
ಚಿತ್ತ ವಿಭ್ರಮೆಯಾಗಿ ಮೂಗಿನಲಿ ಬೆರಳಿಡಲ್ಕಿತ್ತ ಪಾಠಕ ನಿಕರವು ||379||

ತೊಲತೊಲಗು ಮನ್ಮಥನ ಮಸೆದಲಗು ಬರುತಲಿದೆ |
ತೊಲತೊಲಗು ಸ್ಮರನ ಶಂಗಾರಗಜ ಬರುತಲಿದೆ |
ತೊಲತೊಲಗು ಕಾಮ ಚಕ್ರೇಶ್ವರನ ಮಂತ್ರದೇವತೆ ಮಲೆತು ಬರುತಲಿದಕೊ ||
ತೊಲತೊಲಗು ವೈರಿಗಳ ಎದೆಶೂಲ ಬರುತಿದೆಲೆ |
ತೊಲತೊಲಗು ವನಿತೆಯರ ಕುಲದೈವ ಬರುತಿದೆಲೆ |
ತೊಲತೊಲಗೆನುತ್ತೊದರುತಿರಲೊಡನೆ ನಿಸ್ಸಾಳಕೋಟಿಗಳು ಗರ್ಜಿಸಿದವು ||380||

ಭಾಮಿನಿ

ಕಳಕಳದ ರವದಿಂದ ದಂಡಿಗೆ |
ಯಿಳಿದಳಂದಿನ ಕಮಲೆ ಎನೆ ಪೊಂ |
ಗಲಶ ಕುಚ ಭಾರದಲಿ ಬಂದಳು ನರನ ಕಾಣುತಲೆ ||
ಪುಳಕರಸದುಬ್ಬಿನಲಿ ಲಜ್ಜೆಯೊ |
ಲಳುಕುತುರೆ ಬೆವರಿಡುತ ಪಾರ್ಥನ |
ಗಳಕೆ ಪೂಸರವಿಕ್ಕಿದಳು ಸುರನಿಕರ ಜಯವೆನಲು ||381||

ರಾಗ ಮಧ್ಯಮಾವತಿ ಏಕತಾಳ

ಇಳಿಯೆ ಘೇಯೆಂದು ಹೆಕ್ಕಳಿಸಿಯೆ ಹೊಳೆದುದು | ವಲಿಯೆ ತ್ರಿದಶರು ಸಂತಸದಲಿ ||
ಕಳಕಳಿಸುವ ನಾನಾ ವಾದ್ಯ ಘೋಷಗಳು ಮು | ಕ್ಕುಳಿಸಿತು ಮೂಜಗ ಬಾಳ ವೈಭವದಿ ||382||

ಕೊರಳ ಹೂವಿನ ದಂಡೆ ಎಸೆಯಲು ಕೈಯೊಳು | ಶರ ಮಹಾಚಾಪ ಪ್ರಜ್ವಲಿಸುತ್ತಲಿರಲು ||
ಪರಿಮಳವೆಸೆವ ನಿಟ್ಟೆಸಳುಗಂಗಳ ನಿಜ | ತರುಣಿ ಸಹಿತಲೊಪ್ಪಿ ಮೆರೆದನರ್ಜುನನು ||383||

ವರನ ಪರಿಯು ಪೊಸತಾಯಿತು ಪಾರ್ವತಿ | ವರನ ತೆರದೊಳಿಂದು ಪರಿಶೋಭಿಸಿದನು ||
ಮರಳೆಮ್ಮರಸಿಯತಿ ಹಾರುವತಿಯುಯೆಂದು | ಸರಸವಂತೆಯರು ಕೊಂಡಾಡಿದರೊಲಿದು ||384||

ಕಂದ

ಮತ್ತರ್ಜುನನಂ ಮುದದಿಂ |
ದುತ್ತಮ ಸತಿ ಸಹಿತೊಡನಾ ರಾಜಾಲಯಕಂ ||
ವಿಸ್ತರದಿಂ ಕರೆತರಲಮ |
ರೋತ್ತಮನೈದಿದನಮರರೊಳಮರಾವತಿಗಂ ||385||

ರಾಗ ಕಾಂಭೋಜಿ ಝಂಪೆತಾಳ

ಅರಸ ಕೇಳಾಗ ಕೌರವಾಯ ಖತಿಗೊಂಡು | ಜರೆದು ತನ್ನವರ ಝಡಿದೆಂದ ||
ಸರಿ ಬಂತೆ ನಿಮಗೆ ಪಾಂಚಾಲಗೈದವಮಾನ | ದಿರವು ಶಕುನಿ ಜಯದ್ರಥರಿಗೆ ||386||

ಹಳೆಯ ಹುಲುಧನುವಿದರ ಸೆಳೆದ ಹಾರುವನು ಗಡ | ಹಳಿದ ಮಾನವನು ಗಡ ನಪರ ||
ಬೆಳವಣಿಗೆ ಗರುವಾಯಲಳಿದ ಗಡ ಪಾರ್ಥಿವರಿ | ಗುಳಿದುದಿನ್ನೇನು ಗಡ ಮಾನ ||387||

ಕಮಲ ಮುಖಿ ತಿರುಕುಳಿಯ ಸೇರಿದಳು ಗಡ ಬಿಡದೆ | ಸುಮದ ದಂಡೆಯನಿಕ್ಕಿ ಸೊಕ್ಕಿ ||
ಕ್ರಮದಿ ನೀವೆಲ್ಲ ಮದುವೆಯ ಮಾಡಿ ಹಾರುವಗೆ | ನಮಿಸಿ ನಿಮಗ್ಯಾಕಿನ್ನು ಮಾನ ||388||

ಭಂಡರೋ ನೀವು ಬಾಹಿರರೊ ನೆರಹಿದ ಮಹೀ | ಮಂಡಲೇಶ್ವರರು ನೀವ್ ನಿಮ್ಮ ||
ಹೆಂಡಿರನು ಬಳುವಳಿಯ ಕೊಡಿ ಹಾರುವನಿಗಿಂದು | ಹೆಂಡತಿಯ ಹೊರೆಗೆ ಸಾಕಲಿಕೆ ||389||

ಗಂಡುಗಲಿಗಳು ನಿಮ್ಮ ನಿನಿಬರ ಸ್ಥಿತಿಗಳನು | ಕಂಡುಪೇಕ್ಷಿಸಿ ಯಾಚಕನನು |
ಗಂಡನನು ಮಾಡಿಕೊಂಡಳು ವಿಲಾಸಿನಿ ನಿಮಗಿ | ದಂಡಲೆವುದಿನ್ನು ದ್ರುಪದನನು ||390||

ಬಡಿದವನ ರಣದೊಳಗೆ ಬಲು ಹದ್ದು ಕಾಗೆಗಳಿ | ಗಡಬಳಗಕುಣಲಿಕ್ಕಿ ಬಿಡದೆ ||
ಹುಡುಗಿಯನು ಹಿಡಿತಂದು ನಮ್ಮಯ ವಿಲಾಸಿನಿಯ | ರೊಡನೆ ಕೂಡಿಸುವದಿನ್ನೆಂದ ||391||

ಭಾಮಿನಿ

ಏಳಿ ಲಗ್ಗೆಯ ಹತ್ತಿರೆನುತಲೆ |
ದೂಳಿಕೋಟೆಯ ಮುತ್ತಲಾ ಪಾಂ |
ಚಾಲ ನಾಯಕರಟ್ಟಿ ಹೊಡೆದರು ಮತ್ತೆ ಕೌರವನ ||
ಪಾಳಯವು ಕವಿವುತಿರೆ ವರ ವಿ |
ಪ್ರಾಳಿಯೋಡಿದರಿರದೆ ನಿನ್ನವ |
ರ್ಗಾಳುಗಳು ಬಂದರುಹಿದರು ರಿಪು ನಪರ ಸ್ಥಿತಿಗಳನು ||392||

ರಾಗ ಮುಖಾರಿ ಏಕತಾಳ

ಕೇಳಿ ಕೇಳಿರಿ ಉಪಾಧ್ಯರಿರ | ಪೇಳುವದೇನ್ ಮದುವೆ |
ಯೂಳಿಗತಿ ಘನವಾಯಿತಯ್ಯ ||393||

ನೆರೆದಿಹ ಭೂಮಿಪಾಲರೆಲ್ಲ | ಧಾಳಿಯಿಟ್ಟೀಗ |
ಬ್ಬರಿಸುವ ಬಗೆಯ ಶಿವನೇ ಬಲ್ಲ ||
ಭರದಲಿ ನೀವ್ ಬಂದಾ ದಿಬ್ಬಣಿಗರ |
ನರಿತಂದದೊಳುಪಚರಿಸುವದೊಯ್ಯನೆ |
ತ್ವರಿತದೊಳೇಳುವದೆನೆ ಕಳವಳವನು |
ನರನಾಲಿಸುತತಿ ತ್ವರಿತದೊಳೆದ್ದನು ||394||

ಹೊದರಂಬುಗಳ ತರ ಹೇಳಿದನು | ಹುರಿಗೊಂಡಬ್ಬರದೊ |
ಳೊದರಿ ಕೊರಂಬುಗಳ ನೆಬ್ಬಿದನು ||
ಯದು ಕ್ಷಯವಾಗೆ ಭೂಪರು ಕಂಡಪ್ರಳ |
ಯದ ಮುಮ್ಮೊನೆಯಂದದಿ ಬಲು ರುಧಿರಾಂ |
ಬುಧಿಯೊಳು ತೋದುದು ಕದನದ ರಿಪು ಬಲ |
ವದುಭುತವೇನೆಂಬುದು ನಿಮುಷದಲಿ ||395||

ಭಾಮಿನಿ

ಕದನಗಲಿ ಪಾರ್ಥನ ಶರೌಘಕೆ |
ಹೆದರಿ ಕೌರವರರಸ ಹಿಮ್ಮೆ |
ಟ್ಟಿದುದನೀಕ್ಷಿಸಿ ಕರ್ಣ ಒದಗಿದಡಟ್ಟಿದನು ಪಾರ್ಥ ||
ಮದನ ರಿಪುವಂದದಲಿ ಭೀಮನು |
ಕುದಿದು ಭಾರಿಯ ಮರನ ಕೊಂಬಿಲಿ |
ಸದೆದು ಪೊಕ್ಕನದೊಂದು ಮುಖದಲಿ ಪೊಯ್ದು ರಿಪು ಬಲವ ||396||

ರಾಗ ಶಂಕರಾಭರಣ ಮಟ್ಟೆತಾಳ

ಇಂದು ಕುಲಲಲಾಮ ಲಾಲಿ | ಸೊಂದು ಮುಖದೊಳನಿಲ ಸುತನು |
ನಿಂದು ಕಾದುತಿರಲು ಪಾರ್ಥ | ನೊಂದು ಕಡೆಯಲಿ ||
ಬಂದು ಸೆಣಸುತಿರ್ಪ ಪದ್ಮ | ಬಾಂಧವಾತ್ಮ ಸುತನ ಶರದ |
ಸಂದಣಿಯನು ಸವರುತಾಗ | ಲೆಂದನುಗ್ರದಿ ||397||

ಕಿರುಬರೇನಿರೆಲವೊ ನೀವು | ಭರದಿ ಯಂತ್ರವನ್ನು ಗೆಲದೆ |
ಧುರವೆ ವಿಪ್ರರೊಡನೆ ಬರಿದೆ | ಪರಿಕಿಸೆನುತಲಿ ||
ಎರಡು ಶರದೊಳೆಚ್ಚುತಲೆ ಬೊ | ಬ್ಬಿರಿವುತಾಗ ಸೂರ್ಯಸುತನ |
ಕರದ ಧನುವ ಕಡಿಯಲಮರ | ರರಿತು ಪೊಗಳಲು ||398||

ವೀರ ಪಾರ್ಥನಸ್ತ್ರಚಯಕೆ | ಮೋರೆ ತಿರುಹಿ ಕರ್ಣ ಹಿಂದೆ |
ಜಾರಲಂದು ಶಲ್ಯನಪನ | ತೇರು ಕುದುರೆಯ ||
ಭಾರಿ ಮರನಕೊಂಬಿನಿಂದ | ಮಾರುತಿಯು ನುಗ್ಗರಿಯಲಾತ |
ನಾರುಭಟೆಗೆ ನಿಲ್ಲದಾಯ್ತು | ಭೂರಿಸೇನೆಯು ||399||

ವಾರ್ಧಕ

ಮರುತಜನ ಕೈಮರನ ಘಾತಿಯಿಂ ಭೀತಿಯಿಂ |
ದಿರದೆ ಮಾದ್ರೇಶ ರಣರಂಗದೊಳ್ ಭಂಗದೋಳ್ |
ಸೊರಗಿ ಸೇನಾಜಾಲ ಸಹಿತಂದು ಬಲುನೊಂದು ಬೆವರಿಟ್ಟು ಕಂಗೆಟ್ಟನು ||
ಪುರುಹೂತ ಸುತನ ಕ್ರೂರಸ್ತ್ರದಿಂ ಶಸ್ತ್ರದಿಂ |
ತರಹರಿಸುತಾ ಕರ್ಣನಳುಕಿದಂ ಬಳುಕಿದಂ |
ಧುರದೊಳತಿರಥರುಗ್ರರ್ ಸಹಿತಾಗಿ ತಲೆದೂಗಿ ಪೋದರದನೇವೆಳ್ವನು ||400||

ನಾಗ ನಗರೇಶ ಕೇಳಖಿಳ ನಪವರ್ಗ ಕೈ |
ಲಾಗದೈದಿದರತ್ತ ಜಯ ವಧುವಿನೊಲುಮೆಯಿಂ |
ದಾ ಗರುವ ಪಾರ್ಥನಯ್ತಂದು ರಾಜಸ್ಥಾನಮಂ ಪೊಗಲು ಪ್ರೇಮದಿಂದ ||
ಜಾಗು ಧಣು ಧಣು ಧನುರ್ವಿದ್ಯಾ ಪ್ರವೀಣ ಜಯ |
ನಾಗತರನಮಲ ಚಾಪಾಗಮದೊಳೆಂದು ಸಲೆ |
ಸಾಗರದ ಘೋಷದಿಂ ಪೊಗಳಿದರ್ಜಯವೆಂದು ನೆರೆದ ಜನರೆಲ್ಲರಂದು ||401||

ಭಾಮಿನಿ

ಕೇಳು ಜನಮೇಜಯನೆ ಪಾರ್ಥನು |
ಲೋಲನೇತ್ರೆಯೆ ಬಾರೆನುತ ಸ |
ಮ್ಮೇಳದಲಿ ನಡೆತಂದನಾಗ ಕುಲಾಲ ಮಂದಿರಕೆ ||
ಬಾಲಕಿಯ ಹೊರಗಿರಿಸಿ ಭಾಗ್ಯ ವಿ |
ಶಾಲ ಬಂದೆರಗಿದನು ಕುಂತಿಗೆ |
ಪೇಳಿದನು ತನ್ನಯ ಪರಾಕ್ರಮದೇಳಿಗೆಯನೆಲ್ಲ ||402||

ರಾಗ ಶಂಕರಾಭರಣ ಏಕತಾಳ

ತಾಯೆ ಕೇಳಿಂದೆನ್ನ ಮಾತ | ಪ್ರೀಯದಿಂದಲಿಂದು ಸರ್ವ |
ರಾಯರನ್ನು ಗೆಲಿದು ಬಹಳ | ಶೌರ್ಯದಿಂದಲಿ ||
ಆಯತಾಕ್ಷಿಯೆಂಬಮೋಘ | ಮೌಕ್ತಿಕವ ನಾನು ತಂದೆ |
ನಾ ಯಶೋದೆ ನಂದನನ | ಕಪೆಯೊಳೆಂದನು ||403||

ಎಂದ ಮಾತ ಕೇಳಿ ಕುಂತಿ | ಚಂದದಿಂದ ಬೇಗ ತನ್ನ |
ಕಂದನ ಮೈದಡವಿ ಪೇಳ್ದ | ಳೊಂದು ದಢದಲಿ ||
ತಂದರೆ ಲೇಸಾಯ್ತು ಕೇಳು | ಕಂದರೈವರ್ ಹರುಷದಿಂದ |
ಒಂದಾಗಿ ಭೋಗಿಸಿಯಿರುವ | ದೆಂದಳಂದದಿ ||404||

ಎನೆ ಹಸಾದವೆಂದೆನುತ್ತ | ಘನ ಸವ್ಯಸಾಚಿಯು ಚೆಲ್ವ |
ವನಜಾಕ್ಷಿಯ ಪೊಡವಡಿಸಲ್ | ಕಂಡು ಕುಂತಿಯು ||
ತನುಜ ನೀ ತಂದಂಥ ಮೌಕ್ತಿಕ | ವನುವಿದೇನೈ ಮಹಾದೇವ |
ಎನಗೆ ಬಾಯಿ ತೊದಲಿಸಿ ಪೇಳ್ದೆ | ನೊಂದು ವಾಕ್ಯವ ||405||

ರಾಗ ಸಾಂಗತ್ಯ ರೂಪಕತಾಳ

ವನಿತೆಯೋರುವಳನೈವರು ಭೋಗಿಸುವುದುಂಟೆ | ಸನುಮತವಲ್ಲೆಂದು ಕುಂತಿ ||
ಮನದಿ ಚಿಂತಿಸಲು ಮತ್ತೆರಗಿ ಧನಂಜಯ | ನನುವಾಗಿ ಪೇಳ್ದನವ್ವೆಯೊಳು ||406||

ಅಮ್ಮ ನಿಮ್ಮಯ ಮಾತು ಗುರುವಾಕ್ಯ ನಮಗಿಂದು | ಸನ್ಮತ ಸಕಲ ಶಾಸ್ತ್ರದಲಿ ||
ಬೊಮ್ಮ ಸಂಕಲ್ಪವಿದೆಯನಲು ತದ್ವಾಕ್ಯವ | ಧರ್ಮಜ ಕೇಳಿ ಕನಲಿದನು ||407||

ಭೀಮನೊಪ್ಪದೆ ಮನ ತೆಗೆಯಲಂದೆಮಳರು | ಪ್ರೇಮದಿ ನಾಳುವರಿಂದೇ ||
ಸಾಮ ದಾನದಿ ಶಾಸ್ತ್ರ ಪದ್ಧತಿಯರುಹಿ ಸು | ತ್ರಾಮನಂದನ ಸಂತೈಸಿದನು ||408||

ವಾರ್ಧಕ

ಆದುದನುಮತವೈವರಿಂಗಸ್ತಮಾನಮಂ |
ದಾದುದಿರುಳಿನೊಳವ್ವೆಗಭಿನಮಿಸಿ ಭಕ್ತಿಯಿಂ |
ಮಾಧವನ ಧ್ಯಾನದಿಂದಿರುತಿರ್ದರಿತ್ತ ಪಾಂಚಾಲನಿವರುಗಳ ಕುಲವ ||
ಶೋಧಿಸಲ್ಕಾಗಿ ದಷ್ಟದ್ಯುಮ್ನ ಕಾಶ್ಯಪರ್ |
ಮೋದದಿಂ ಕಾದಿರಲ್ ಕಾಳಗದ ಸ್ಥಿತಿಗಳಂ |
ಸಾಧಿಸಿದ ಶೌರ್ಯಮಂ ಪಾರ್ಥಿವರ ಪರಿಗಳಂ ಮಾತಾಡುತಿರ್ದರೊಲಿದು ||409||

ಭಾಮಿನಿ

ಅರಸ ಕೇಳೀ ಪರಿಯೊಳವರೈ |
ವರು ವಿಲಾಸದೊಳಿರಲು ಜಾತಿಯ |
ಪರಿಯನರಿತಿವರುಗಳು ಕ್ಷತ್ರಿಯರೆಂದು ನಿಶ್ಚೈಸಿ ||
ಭರದಿ ಬಂದಾ ದ್ರುಪದ ರಾಯನಿ |
ಗರುಹಿದರು ಮಿಗೆ ನಿತ್ಯ ಕರ್ಮಗ
ಳಿರವನುರೆ ಸಂಗ್ರಾಮದಾಡಳಿತೆಗಳನೆಲ್ಲವನು ||410||

ರಾಗ ಬೇಗಡೆ ಅಷ್ಟತಾಳ

ಕೇಳಯ್ಯ ಪಾಂಚಾಲ ಭೂಪ ಚೆನ್ನಾಗಿ | ಪೇಳುವೆವವದಿರ ಸ್ಥಿತಿಯನುವಾಗಿ  || ಪಲ್ಲವಿ ||

ಸರಸಿಜಾಂಬಕಿ ಸಹ ಛತ್ರಯಾಲಯದಿ | ಇರುವರು ಇಂದಾದ ಕಾರ್ಯವಾರ್ತೆಯಲಿ ||
ಶರ ಶಸ್ತ್ರ ಚಾಪದಿ ಗಮಕ ವಿದ್ಯೆಯಲಿ | ನೆರೆ ಮಾತನಾಡುತ್ತಲಿಹರ ನಿಶ್ಚಯದಿ ||411||

ಕತಕ ಉಪಾದ್ಯರಲ್ಲದೆ ವಿಪ್ರರಲ್ಲ | ಸ್ಥಿತಿಯ ನೋಡಲು ಪಾರ್ಥಿವರ ಪರಿಯೆಲ್ಲ ||
ರಥತೇಜಿ ರಣದ ವಾರ್ತೆಯನಾಡುತಿಹರು | ಜತೆಯೊಳಿಂತಯ್ವರು ನಿಶಿಯ ಕಳೆವರು ||412||

ವರ ವಿಪ್ರರಿಂಗೆ ಭೋಜನಗಳ ವಾರ್ತೆ | ನೆರೆಕ್ಷತ್ರಿಯರ್ಗೆ ರಣಾಂಗಣ ವಾರ್ತೆ ||
ಅರಿಯೆ ವೈಶ್ಯರಿಗೆ ವ್ಯಾಪಾರದ ವಾರ್ತೆ | ಪರಿ ಚಿಂತೆ ಶೂದ್ರಗಾರಂಭದ ವಾರ್ತೆ ||413||

ಭಾಮಿನಿ

ಅವನಿಪತಿ ಬಿಡು ಸಂಶಯವ ಪಾಂ |
ಡವರು ನಿಶ್ಚಯವೇಳುದಯವ್ಯಾ |
ತವರನುಪಚಾರಂಗಳಲಿಯರಮನೆಗೆ ಕರೆತಂದು ||
ಕುವರಿಯನು ಮಿಗೆ ಧಾರೆಯೆರೆ ಸಂ |
ಭವಿಸಿತಭವನ ಕರುಣ ನಿನ್ನಲಿ |
ವಿವಿಧ ಸಂಭ್ರಮವೆಸಗು ನೀನೆಂದನು ಪುರೋಹಿತನು ||414||

ರಾಗ ಮೆಚ್ಚು ಅಷ್ಟತಾಳ

ಎಂದಾ ಕಾಶ್ಯಪನುಕ್ತಿ ಕೇಳುತ್ತ | ಮತ್ತೆ | ಚಂದದಿ ಪುರವ ಶಂಗರಿಸುತ್ತ ||
ಸಂದೇಹವದು ತೆಗೆದಿಟ್ಟನು | ಸತಿ | ವಂದ ಸಹಿತ ಪೊರಮಟ್ಟನು ||415||

ಕಲಶ ಕನ್ನಡಿ ವಾದ್ಯ ಘೋಷದಿ | ಛತ್ರ | ನಿಳಯಕಯ್ತಂದತಿ ತೋಷದಿ ||
ಚೆಲುವ ಭೂಪತಿಗಳ ಕಂಡನು | ಪ್ರೇಮ | ದಲಿ ಬಿಜಯಂಗೈವುದೆಂದನು ||416||

ಇಂತುಪಚಾರದಿ ದ್ರುಪದನು | ವರ | ಕುಂತಿ ಸುತರ ಕರೆತಂದನು ||
ಕಾಂತೆಯುಲ್ಲಾಸವ ನೋಡುತ್ತ | ಭೂಪ | ಸಂತತಿ ದಢಯಿವರೆನ್ನುತ್ತ ||417||

ಮಜ್ಜನಕನುಕೂಲ ಮಾಡಿಸಿ | ಆಗ | ಸಜ್ಜನರೆಲ್ಲರ ಕೂಡಿಸಿ ||
ಗರ್ಜಿಸುತಿಹ ವಾದ್ಯ ಘೋಷದಿ | ಭೂಪ | ಪ್ರಜ್ವಲಿಸಿದನು ಸಂತೋಷದಿ ||418||

ಮಿಂದು ದಿವ್ಯಾಂಬರಗಳನುಟ್ಟು | ಅತಿ | ಚಂದ ದಾಭರಣಗಳನು ತೊಟ್ಟು ||
ಗಂಧ ಕಸ್ತುರಿಯ ತಿಲಕವಿಟ್ಟು | ಐವ | ರಂದು ಬಾಸಿಗಗಳನಳವಟ್ಟು ||419||

ಭಾಮಿನಿ

ನಪತಿ ಕೇಳೈ ಭದ್ರ ಮಣಿ ಮಂ |
ಟಪದೊಳೈವರು ಕುಳಿತರಂದಾ |
ನಿಪುಣೆ ಸೊಸೆ ಸಹಿತಾಗಿ ಕುಂತಿ ವಿರಾಜಿಸುತ್ತಿರಲು ||
ದ್ರುಪದನಂಜಲಿಗೊಂಡು ಯಂತ್ರವ |
ನಪಹರಿಸಿದವನಾರು ಬರಲೆನು |
ತುಪಚರಿಸಂದೈವರೆದ್ದರು ರಾಜತೇಜದಲಿ ||420||

ರಾಗ ತುಜಾವಂತು ಝಂಪೆತಾಳ

ಕಂಡು ಕೌತುಕದಿ ಬೆಸಗೊಂಡ ಪಾಂಚಾಲ |
ಗಂಡೈವರೊಬ್ಬಳಿಗೆ ಭಂಡತನವುಂಟೆಂದು  || ಪಲ್ಲವಿ ||
ಅಸುರರೊಳಗೋ ನೀವು ಅಮರರೋ ಶೋಧಿಸಲು |
ಎಸೆವ ಭೂ ಜಂಗಮರೊ ಏನರಿಯೆನಿಂದು ||
ವಸುಮತೀಶರೊ ಬುಧರೊ ದಿಟವಾಗಿ ಮಾನವರೊ |
ಕುಶಲವಲ್ಲಾರೆಂದು ಉಸುರಬೇಕಿಂದು ||421||

ಈತನಗ್ಗದ ಭೀಮನೀತಜನರ್ಜುನರೆಮಳ |
ರೀತರೇ ಎಮಗೆ ಸಹಜಾತ ಪಾಂಡವರು ||
ಮಾತೆನಮ್ಮಯ್ವರಿಗೆ ಖ್ಯಾತೆ ಕುಂತೀ ದೇವಿ |
ಈ ತಳೋದರಿಯಯ್ವರಿಂಗೆಂದ ಯಮಜ ||422||

ಪಾಂಡವರೆಂಬುದ ಕೇಳಿ ಪರಮ ಸಂತೋಷ ಬ್ರ |
ಹ್ಮಾಂಡದಗ್ರಕ್ಕೇರಿದುದನೇನನೆಂಬೆ ||
ಗಂಡರೊಬ್ಬಳಿಗೈವರಾದರೆಂದಾಲೈಸಿ |
ಕೊಂಡು ಮುಳುಗಿತು ರಸಾತಳಕೆ ಭೂಪನ ಚಿತ್ತ ||423||

ಕಂಡು ಕೇಳುತ ನಿಮ್ಮ ತಾತ್ಪರ್ಯ ಬಯಸುತಿಹೆ |
ಪಾಂಡು ಪುತ್ರರು ಧರ್ಮವಂತೆರೆಂದೆನುತ ||
ಭಂಡತನವಿದು ಎನಲು ಬಳಿಕೆಂದ ನಸುನಗುತ |
ದಂಡಧರನ ಕುಮಾರ ಕೀರ್ತಿವಿಸ್ತಾರ ||424||

ಕಾಮಿತಜ್ಞಾನಿಕರು ತಾಯಿಯಪ್ಪಣೆಯಿಂದ |
ಕಾಮಿನೈವರಿಗೋರ್ವಳಾದಳಿಂದಿನಲಿ ||
ಪ್ರೇಮದಿಂ ನೋಡಲಾ ಸಕಲ ಶಾಸ್ತ್ರಂಗಳಲಿ |
ಸ್ವಾಮಿ ತಾಯಿಂದಧಿಕವಿಲ್ಲ ಹರಿಬಲ್ಲ ||425||

ಭಾಮಿನಿ

ಅರಸ ಕೇಳ್ ಪಾಂಚಾಲ ಭ್ರಮೆಗೊಂ |
ಡಿರದೆ ಪೇಳ್ದನು ಪುರುಷನೋರ್ವನಿ |
ಗರಸಿಯರು ಬಹು ಜನವಿದೆಂಬುದು ಲೋಕ ಸನ್ಮತವು ||
ತರುಣಿಯೋರ್ವಳಿಗೈವರೆಂಬುದು |
ನೆರೆಕುತೂಹಲೆವೆಂದು ಚಿಂತಿಸ |
ಲುರು ಕಪಾಕ್ಷದೊಳಾಗ ಬಂದನು ಬಾದರಾಯಣನು ||426||

ರಾಗ ಭೈರವಿ ಅಷ್ಟತಾಳ

ನಿಶಿಯೊಳು ಶಶಿಬಿಂಬವು | ಬಂದಿಳಿವಂತೆ | ಪಸರಿಸಿದತಿ ಭಾಸವು ||
ಕುಶಲದಿಂದಲೆ ವೇದವ್ಯಾಸ ಮಹಾಮುನಿ | ಯೆಸೆವುತ್ತಲಯ್ತಂದನು ||427||

ವ್ಯಾಸ ಮುನಿಂು ಬರವ | ಕಾಣುತ ಧರ | ಣೀಶನೆತ್ತುತ ಕರವ ||
ತೋಷದಿ ಮುಗಿದಿದಿರ್ಗೊಂಡುಪಚಾರದಿ | ಆಸನವಿತ್ತೆಂದನು ||428||

ಅಡಿಗಡಿಗೆಮಜಾದ್ಯರು | ಆ ಮುನಿಯ ಕಂ | ಡಡಿಗೆರಗುತಲಯ್ವರು ||
ಬಿಡದೆ ಸ್ತುತಿಸಲು ಮನ್ನಿಸಲನಿತರೊಳು ತಾ | ನುಡಿದನು ಪಾಂಚಾಲನು ||429||

ಜ್ಞಾನ ಸ್ವರೂಪ ನೀನು | ಬಂದುದರಿಂದ | ಜ್ಞಾನ ರಹಿತನಾದೆನು ||
ಏನೆಂಬೆನೊದಗಿದ ದೋಷ ಗರ್ಭಿತಕೆ ವಿ | ಧಾನವನುಸುರೆಂದನು ||430|

ಬಿಡು ನಿನಗ್ಯಾಕೆ ಚಿಂತೆ | ನಿನ್ನಣುಗೆಯು | ದಢತರ ಭಾಗ್ಯವಂತೆ ||
ಕಡು ಪತಿವ್ರತೆಯು ಪೂರ್ವದ ಕಥೆಗಳನೆಲ್ಲ | ನುಡಿವೆನು ನಿನಗೆಂದನು ||431||