ಭಾಮಿನಿ
ಬಳಿಕ ಪಥೆ ಸಹ ಪಾಂಡುನಂದನ |
ರಳಿಮನದಲಾ ಶಾಲಿ ಹೋತ್ರನ |
ನಿಳಯಕೈದಿ ನಿಜಾಕತಿಯನಾರರಿಯದೋಲ್ ಮರೆಸಿ ||
ತಳೆದು ವಿಪ್ರರ ವೇಷವನು ಕಡು |
ಗಲಿಗಳಿಂದೆಸೆವೇಕಚಕ್ರದ |
ಹೊಳಲೊಳಿಹ ದ್ವಿಜರಗ್ರಹಾರಕೆ ಬಂದರೊಡಗೂಡಿ ||82||
ರಾಗ ಘಂಟಾರವ ಏಕತಾಳ
ಇಂತು ಪಾಂಡವರೇಕಚಕ್ರಾಖ್ಯಪುರಕೈದಿ |
ಕುಂತಿ ಸಹಿತ ದ್ವಿಜವೇಷವನಾಂತು ||
ಅಂತರವರಿದು ಭಿಕ್ಷಾವತ್ತಿಪಥದಿಂದ |
ಸಂತತ ಕುಕ್ಷಿಯ ಪೊರೆದರೇನೆಂಬೆ ||83||
ತಿರಿದು ಮೇಣ್ಮನೆಯಿಂದ ತಂದನ್ನವ |
ನೆರಡು ಭಾಗವ ಮಾಡಿ ಕುಂತಿ ತಾನಂದು ||
ಮರುತಜಗೊಂದು ಪಾಲುಳಿದವರೆಲ್ಲರಿಂ |
ಗಿರದೊಂದು ಪಾಲಿಂದ ಪೊರೆದಳು ತನುವ ||84||
ಭಾಮಿನಿ
ಧರಣಿಪತಿ ಕೇಳ್ ಸಾಗರಾಂತದ |
ಧರೆಯನೇಕಚ್ಛತ್ರದಿಂದಾ |
ಳ್ವರಸುಕುವರರು ತೇಜದಲಿ ಶಕ್ರಂಗೆ ಸರಿಮಿಗಿಲು ||
ತಿರಿದು ತಂದನ್ನದಲಿ ಜನನಿಯು |
ಎರಡು ಭಾಗವ ಮಾಡಿ ಮಕ್ಕಳ |
ಪೊರೆದಳಿನ್ನುಳಿದವರ ಪಾಡೇನೆಂದನಾ ಮುನಿಪ ||85||
ರಾಗ ಸಾಂಗತ್ಯ ರೂಪಕತಾಳ
ಉದಯದ ಮುನ್ನ ಬ್ರಾಹ್ಮಿಯಲೆದ್ದು ಮಾತೆಯ |
ಪದಕಭಿನಮಿಸಿ ಸ್ನಾನಾದಿ ||
ವಿಧಿಜಪನಿಯಮ ಪೌರಾಣಗೋಷ್ಠಿಯು ಮಧ್ಯಾ |
ಹ್ನದಿ ಭಿಕ್ಷಾಟನವವರಿಗೆ ||86||
ಭೋಜನಾಂತರದೊಳು ನಪಗೋಷ್ಠಿ ವಿಪ್ರಸ |
ಮಾಜದೊಳಿಂತು ನಿತ್ಯದಲಿ |
ರಾಜವತ್ತಿಯ ಮರೆದವರು ಸಕಲ ದ್ವಿಜ |
ರಾಜರೆಂದೆನಿಸಿಯೊಪ್ಪಿದರು ||87||
ಇರಲು ಮಾಸಾಂತರಕಾ ನೆರೆಮನೆಯಲಿ |
ಇರುಳು ಶೋಕಧ್ವನಿಯೊಂದ ||
ನೆರೆ ಕೇಳ್ದು ಕುಂತೀದೇವಿಯು ಚೋದ್ಯಬಡುತಲಿ |
ಹರಿತಂದು ಕೇಳ್ದಳಿಂತೆಂದು ||88||
ರಾಗ ತೋಡಿ ಅಷ್ಟತಾಳ
ಏನಿದು ಭೂಸುರವರ್ಯ | ಸಾವ | ಧಾನದೊಳೆನಗೆ ಪೇಳಯ್ಯ ||
ಜ್ಞಾನವಂತನೆ ನಿನ | ಗೀ ನಿರೋಧದ ಶೋಕ |
ವೇನು ಕಾರಣ ಬಂತು | ನೀನರುಹೆನ್ನೊಳು ||89||
ನಾಳೆ ವೈವಾಹದುತ್ಸವವು | ನಿನ್ನ | ಬಾಲಕಗೆಂದರಿತಿಹೆವು ||
ಕೇಳಬಾರದೆ ನಾನು | ಬಾಲೆಯರೋಕುಳಿ |
ಕಾಲದಿ ಸಿಡಿಲು ಹೊ | ಯ್ದೋಲು ಕಾಣಿಸುತಿದೆ ||90||
ಎನಗೆ ಪೇಳ್ದೇನಹುದೆಂದು | ನೀನು | ನೆನೆಯದಿರೆನ್ನೊಡನಿಂದು ||
ಎನಿತಪ್ಪುದನಿತ ನೋ | ಳ್ಪೆನು ಚಿತ್ತದೊಳಗೆ ಬೇ |
ಡನುಮಾನ ವಿಪ್ರ ಪೇ | ಳೆನಲಾತನೆಂದನು ||91||
ರಾಗ ಸಾರಂಗ ರೂಪಕತಾಳ
ತಾಯೆ ಏನೆಂಬೆನು ಎನ್ನಯ ಶೋಕವ |
ಬಾಯಿಂದ ಪೇಳ್ದು ನಾಫಲಗಾಣೆನವ್ವ || ಪಲ್ಲವಿ ||
ಈ ಪುರವರದ ಬಾಹ್ಯದ ಗಿರಿಯೊಳಗೊರ್ವ |
ಪಾಪಿ ರಕ್ಕಸ ಬಕನೆಂಬವನಿಹನು ||
ಸೋಪಸ್ಕಾರವು ಸಹಿತೊಂದೊಂದು ಮನೆಯಿಂದ |
ಪೋಪುದಾತನಿಗೆ ತಿಂಬಡೆ ದಿನದಿನಕೆ ||92||
ಆಗಬೇಕೆವಗೆ ಹನ್ನೆರಡು ಖಂಡುದಕ್ಕಿ |
ಯೋಗರ ಶಾಖಭಕ್ಷ್ಯವು ಪರಿಪರಿಯ ||
ಹೀಗಲ್ಲದೆರಡು ಕೋಣಗಳು ಭಂಡಿಯ ಮೇಲೆ |
ಸಾಗಬೇಕೊರ್ವ ಮಾನುಷನು ಪಾರಣೆಗೆ ||93||
ಇನಿತನೆಲ್ಲವ ನಿತ್ಯವೊದಗಿಸದಿರೆ ಮರು |
ದಿನ ಮುನಿದೈತಂದಪನು ಊರೊಳೆಲ್ಲ ||
ಮನೆಬಾರಿ ನಾಳೆ ನಮ್ಮದು ತಾನು ಎನ್ನ ನಂ |
ದನನಲ್ಲದಾರೂ ಬೇರಿಲ್ಲ ಮಂದಿರದಿ ||94||
ಭಾಮಿನಿ
ಸುತನನಿತ್ತರೆ ಲೌಕಿಕಕ್ಕನು |
ಚಿತವು ಬಹುದಪಕೀರ್ತಿ ಮೇಣ್ಜನ |
ವಿತತಿ ನಕ್ಕಪುದಿಹದಿ ಪರದಲಿ ಸಂತತಿಯೆ ಛೇದ ||
ಮತವರಿಯಲೆಮ್ಮೀ ಶರೀರವೆ |
ಸತತ ಹಗೆಯಿನ್ನದರಿನಿಂದಾ |
ದಿತಿಜಗೀವೆನೆನಲ್ಕೆ ನಗುತಿಂತೆಂದಳಾಕುಂತಿ ||95||
ರಾಗ ಮಧುಮಾಧವಿ ಅಷ್ಟತಾಳ
ಈ ಸಲೆ ಚಿಂತೆಯನೆ ಬಿಡು | ಭೂಸುರವರ್ಯನೆ ಮೊದಲೊ |
ಳೇಸು ಖಂಡುಗದನ್ನ | ಐನೊದಗಿಸು ||
ಲೇಸಿನಿಂ ಶಾಖಭಕ್ಷ್ಯವ | ಮೋಸವಿಲ್ಲದೆ ಮಾಡಿಸು |
ಬೇಸರದಾಗಿಸು ಸನ್ನಾ | ಹಾ ಸಮಗ್ರವ ||96||
ತಿರಿದು ನಿಮ್ಮೂರೊಳಗೆನ್ನ | ತರಳರೊಡಲ ಪೊರೆವೆ ನಾನಾ |
ಧರೆಯನಾಳ್ವ ಶೌರ್ಯರಿದ್ದು | ಹುರುಡುಗಾಣೆನು ||
ಪೊರೆಯಲಾರೆನದರೊಳೋರ್ವ | ಹಿರಿದು ತೀಟೆಯಾದರವನ |
ಹೊರಡಿಸಿ ಕೊಟ್ಟಪೆನು ಖಳನ | ಹರಿಬಕೆಂದಳು ||97||
ಭಾಮಿನಿ
ಸಾಕಲಾರೆನು ಮಗನನೊಬ್ಬನ |
ಸಾಕು ತನಗುಳಿದವರು ನಾಳೆಗೆ |
ನೂಕಿ ಕಳೆದಪೆನವನನೆಂದಾ ಕುಂತಿ ಪೇಳಲ್ಕೆ ||
ಲೋಕದೊಳಗಿನ್ನೆಂತು ನಿರ್ದಯ |
ದಾಕೆರಿಹರೋ ಶಿವ ಶಿವೇಸು ಮ |
ಹಾ ಕಠಿನ ಮನವಿವಳದೆನುತಿಂತೆಂದನಾ ವಿಪ್ರ ||98||
ರಾಗ ಶಂಕರಾಭರಣ ಏಕತಾಳ
ಬೇಡವ್ವಾ ನಿಮ್ಮ ಸುದ್ದಿ | ಸಾಕು ಪೋಗಿರೆ |
ರೂಢಿಯೊಳಗೆ ಪಡೆದ ಸುತರ | ದೂಡುವರೆ ಮರುಳೆ ||99||
ಉರುವ ನೇಮವ್ರತಗಳನ್ನು | ಭರದೊಳೆಸಗಿ ಸಂತತಿಯನು |
ಹಿರಿದು ಯತ್ನದಿಂದ ಪಡೆಯು | ತಿರುವರೆಲ್ಲರು ||100||
ತರಳನನ್ನು ಸಾಕಲಾರ | ದುರಿಯೊಳೈದೆ ನೂಕುವವರ |
ಧರೆಯು ಹೊರುವುದೆಂತೊ ಕಾಣೆ | ಹರಹರಿಂತು ನೆನೆವರೇನೆ ||101||
ರಾಗ ನಾದನಾಮಕ್ರಿಯೆ ಮಟ್ಟೆತಾಳ
ಮರುಳು ವಿಪ್ರ ಸಾಕು ನೀನೆ | ನ್ನಿರವನೇನ ಬಲ್ಲೆ ತಾ |
ನರಿಯದವಳೆ ಧರ್ಮಶಾಸ್ತ್ರಾ | ಚರಣೆಯೆಂಬುದ ||102||
ಪರಹಿತಾರ್ಥವಾಗಿ ಹಿಂದೆ | ವರ ದಧೀಚಿ ಕೊಡನೆ ತನ್ನ |
ಶರೀರವನ್ನು ಶಿಬಿಯದೇವ | ನಿರದೆ ಕೊಟ್ಟನು ||103||
ಪರಹಿತಾರ್ಥಕಾಗಿ ವ್ಯರ್ಥ | ಶರೀರ ಸುತ ಕಳತ್ರ ಸಹಿತ |
ಮಿರದೆ ಕೊಟ್ಟುದುಂಟು ಬಲ್ಲೆ | ಅರಿಯೆ ನೀನಿದ ||104||
ತರಿಸು ಹಾಲು ಮೊಸರು ಸನ್ನ | ವರಿಸು ಭಂಡಿಯನ್ನು ಬೇಗ |
ತ್ವರಿತ ಭಕ್ಷ್ಯ ಭೋಜ್ಯಗಳನು | ವಿರಚಿಸೆಂದಳು ||105||
ಕಂದ
ಎಂದಾ ಭೂಸುರನಂ ಬ |
ಲ್ಪಿಂದಂ ಸಲೆ ತಿಳುಪಿ ಕುಂತಿಯಾಲಯದೆಡೆಗಂ ||
ಬಂದಾ ಮಾರುತಿಯಂ ಸಾ |
ನಂದದೊಳಂ ಕೆಲಕೆ ಕರೆದು ಪೇಳಿದಳಾಗಳ್ ||106||
ರಾಗ ಬೇಗಡೆ ಅಷ್ಟತಾಳ
ವೀರ ವಕೋದರ ಕೇಳು ನಾಳಿನಲಿ |
ಭಾರಿಯೊಂದೌತಣ ನಿನಗಿಹುದಿಲ್ಲಿ ||
ಊರ ಜನವನೆಲ್ಲ ಬಕನೆಂಬ ಖಳನು |
ಘೋರಿಸಿ ನಿತ್ಯವು ಬಲಿಯ ಕೊಂಡಪನು ||107||
ದಿನಕೆ ಹನ್ನೆರಡು ಖಂಡುಗದನ್ನವಂತೆ |
ಘನ ಶಾಕಭಕ್ಷ್ಯಭೋಜ್ಯಾದಿಗಳಂತೆ ||
ಜನವೊಂದು ಸಹಿತಲ್ಲಿ ಪೋಗಬೇಕಂತೆ |
ಇನಿತನೆಲ್ಲವನವ ತಿಂದಪನಂತೆ ||108||
ಬಾರಿ ನಾಳಿನದು ನಮ್ಮೀ ನೆರೆಮನೆಯ |
ಧಾರಿಣೀಸುರನಾತಗೊರ್ವನೆ ತನಯ ||
ಬೇರಿಲ್ಲ ಜನವು ನೀ ಪೋದರೊಪ್ಪುವನು |
ಭಾರಿಯೂಟವು ದೊರಕುವದು ಮತ್ತೇನು ||109||
ಖಳನ ಮರ್ದಿಸುವ ಸತ್ತ್ವವು ನಿನ್ನೊಳಿಹುದು |
ಕಳುಹುವೆನೆಂದೆ ನಿನ್ನುವನದನರಿದು ||
ಗೆಲುವು ತೋರಿದರೆ ಸಾಧಿಸಬಹದೆಂದು |
ಜಲಜಾಕ್ಷಿ ತನಯಗೆ ಪೇಳಿದಳಂದು ||110||
ರಾಗ ಷಟ್ಪದಿ ಏಕತಾಳ
ಮಾತೆಯ ನುಡಿಯನು | ಕೇಳ್ದ ವಕೋದರ |
ಆತುದು ಭೋಜನವಿನ್ನೇನು ||
ಪೂತುರೆನುತ ಕರ | ಘಾತಿಯ ತಾಳದಿ |
ಪ್ರೀತಿಯೊಳುರೆ ಕುಣಿದಾಡಿದನು ||111||
ಇದ ಕೇಳುತಲಾ | ಯಮಜಧನಂಜಯರ್ |
ಸದರವೆ ದೈತ್ಯನ ವಧೆಯೆನುತ ||
ಬೆದರಿಸುತಿರೆ ಕೇ | ಳಿದು ಭೀಮನು ಪೇ |
ಳಿದನವದಿರರನ್ನಣಕಿಸುತ ||112||
ಮರುಳರು ನೀವೇ | ನರಿವಿರಿಯೆನ್ನಯ |
ಪರಿಯನು ನಿಮಿಷಾರ್ಧದಿ ಖಳನ ||
ಧರೆಯಲಿ ಮಲಗಿಸ | ದಿರೆ ತಾ ವೀರನೆ |
ಬರದಿರಿಯಡ್ಡೆಂದನು ಭೀಮ ||113||
ರಾಗ ಸಾರಂಗ ಏಕತಾಳ
ನಡುವಿರುಳಿತ್ತಲು ದ್ವಿಜನ ಮಂದಿರದೊಳು |
ತೊಡಗಿತು ಪಾಕದ ರಭಸವೇನೆಂಬೆ ||
ಅಡುವ ಶಾಖಗಳ ಒಗ್ಗರಣೆಯ ಪರಿಮಳ |
ಕೊಡನೆ ತನ್ನೊಳಗೆಂದ ನಾ ಭೀಮ ನಗುತ ||114||
ಪೊರೆದಳೆನ್ನನು ತಾಯಿ ಪಾರಣೆ ವೇಳೆಯೊಳ್ |
ಪರಸುವೆ ಕುಂತಿಯನತಿ ಹರುಷದಲಿ ||
ಅರಸು ನಾಳಿನಲೈಸೆತಾನೆಂದು ಮನದಲ್ಲಿ |
ಪರಮ ಸಂತೋಷದಿ ಹೊರೆಯೇರ್ದನಂದು ||115||
ಪರಿಪರಿ ಶಾಖಭಕ್ಷ್ಯಗಳ ವಾಸನೆಯಿಂದ |
ಇರುಳು ನಿದ್ರೆಯು ಬಾರದಾಯ್ತು ಭೀಮನಿಗೆ ||
ತರಣಿ ತಾನುದಿಸದ ಮುನ್ನ ಮಾತೆಗೆ ಬಂದು |
ಭರದಿಂದ ಪೇಳಿದನೀ ಮಾತನವಳ್ಗೆ ||116||
ರಾಗ ಕೇದಾರಗೌಳ ಅಷ್ಟತಾಳ
ತಾಯೆ ಲಾಲಿಸು ವಿಪ್ರನಾಲಯಕೈದಿ ಪೂ | ರಾಯ ಸನ್ನಹಗಳನು ||
ಆಯಿತೇನೆಂಬುದ ತಿಳಿದು ಬಾರೆನುತಲಿ | ವಾಯುಜನರುಹಿದನು ||117||
ಎನೆ ಕೇಳ್ದು ವಿಪ್ರನ ಮನೆಗಾಗಿ ಬರೆ ಪಥೆ | ಯನು ಕಂಡು ಭೂಸುರನು ||
ಜನನಿ ಮತ್ತೇತಕೆ ಬಂದಿರಿ ಚಂಚಲ | ಮನದೊಳೇನಿಹುದೆಂದನು ||118||
ಪಗಲಾಣ್ಮನುದಿಸಿದನೇನೂ ಚಂಚಲವಿಲ್ಲ | ತೆಗೆ ಹೂಡು ಭಂಡಿಯನು ||
ಬಗೆಬಗೆ ಭಕ್ಷ್ಯಭೋಜ್ಯಂಗಳ ಹೊರಿಸು ಮಂ | ಟಿಗೆಯೊಳು ಬೇಗೆಂದಳು ||119||
ಎನೆ ಕೇಳ್ದು ವಿಪ್ರ ಸನ್ನಹವಾಂತುದುದನೆಲ್ಲ | ಮನದಿ ಸಂತಸವತಾಳಿ ||
ತನಯನುಸಹಿತ ತಂದಿಳುಹಿದನಾಕ್ಷಣ | ದನುಜ ಬಕನ ಭಂಡಿಗೆ ||120||
ವಾರ್ಧಕ
ನಳನಳಿಪ ವಿವಿಧ ಭಕ್ಷ್ಯಾವಳಿಯ ಹೆಡಿಗೆಗಳ |
ಬಳಸಿ ತುಂಬಿದ ತುಪ್ಪ ಪಾಲ್ಮೊಸರ ಹರವಿಗಳ |
ಕಳದೆಯಕ್ಕಿಯ ಕೂಳ ರಾಶಿಗಳ ಮುಚ್ಚಿರ್ದ ವಿವಿಧ ಶಾಖದ ರಚನೆಯ ||
ಚೆಲುವೆಸೆವ ಭಂಡಿಯೊಳ್ ಕಂಡು ಸಂತೋಷದಿಂ |
ಬಳಿಕಲಾ ಕುಂತಿ ಪವನಾತ್ಮಜನ ಪೊರೆಗೈದಿ |
ಸಲೆ ಸಕಲ ಸನ್ನಾಹವಾದುದೈ ಕಂದ ಕೇಳೆನುತ ಬಳಿಕಿಂತೆಂದಳು ||121||
ರಾಗ ಮಧ್ಯಮಾವತಿ ಏಕತಾಳ
ಕೇಳಯ್ಯ ಮಾರುತನಂದನ | ನಾನು |
ಪೇಳುವುದನು ಮನ | ದಾಲೋಚನದೊಳಿಟ್ಟು || ಕೇಳಯ್ಯ || ಪಲ್ಲವಿ ||
ಪಾರಣೆಯೊಳಗುರೆ ಚಿತ್ತವ | ನೀನು |
ಮಾರುಗೊಡದೆ ಖಳನ ಸತ್ತ್ವವ | ಸುವಿ |
ಚಾರವುಳ್ಳವನಾಗಿ | ಸಾರವರಿದು ಕಾದು || ಕೇಳಯ್ಯ ||122||
ಬಲುಗಯ್ಯನಸುರನು ಲಾಲಿಸು | ಅವನ |
ಗೆಲುವ ಯತ್ನಗಳನ್ನೆ ಸಾಧಿಸು | ಪೋಗಿ |
ಖಳನ ಜಯಿಸು ಎಂದು | ಸಲೆ ಹರಸಿದಳಂದು || ಕೇಳಯ್ಯ ||123||
ರಾಗ ಭೈರವಿ ತ್ರಿವುಡೆತಾಳ
ಧರಣಿಪತಿ ಕೇಳ್ ಬಳಿಕ ಭೀಮನು | ಬೆರಳ ದರ್ಭೆಯ ಹರಿದು ಧೌತಾಂ |
ಬರವನುಟ್ಟಾ ಕುಂತಿದೇವಿಯ | ಚರಣಧೂಳಿಯನಾಂತು ಶಿರದಲಿ |
ಭರದಿ ಧರ್ಮಜಗೆರಗಿ ಬಂದತಿ | ಹರುಷಮಿಗಲೇರಿದನು ಭಂಡಿಯ |
ನಿರದೆ ಹೂಡಿದ ಹೋರಿಗಳನ | ಬ್ಬರಿಸಿ ಝಡಿದನು ಮುಂದೆ ಸೂಟಿಯೊ |
ಳೇನನೆಂಬೆ ಸಾಹಸ | ವೇನನೆಂಬೆ ||124||
ಭಾಮಿನಿ
ಅವನಿಪತಿ ಕೇಳ್ನೋಟಕರಜನ |
ನಿವಹ ತಮತಮಗೆಯ್ದೆ ಮುತ್ತಿತು |
ಪವನತನುಸಂಭವನ ನೋಳ್ಪ ಮನೋನುರಾಗದಲಿ ||
ನಿವಗಿದೇತಕೆ ಸಾರಿರೈಸಾ ||
ವವನದೈಸಲೆ ತಾನೆನುತ್ತತಿ |
ಜವದಿ ಪುರದಿಂ ಹೊರಗೆ ಭಂಡಿಯ ನೂಕಿದನು ಭೀಮ ||125||
ರಾಗ ಕಾಂಭೋಜಿ ಝಂಪೆತಾಳ
ಇಂತು ಬಕನೆಡೆಗೆ ಭಂಡಿಯ ಹಾರಿಸುತ ಭೀಮ |
ನಂತರದೊಳೈದೆ ಮಾರ್ಗದಲಿ ||
ಸಂತಸದಿ ಬಾಯ ಚಪ್ಪರಿಸಿ ಭಕ್ಷ್ಯವನೆಲ್ಲ |
ವಂ ತನ್ನ ಜಠರಕಿಳುಹಿದನು ||126||
ಬರಿಯ ಕಜ್ಜಾಯ ಹೆಡಿಗೆಗಳುಳಿದುದನ್ನದಲಿ |
ಸರಿಯಾದುದರ್ಧಬಳಿಕಿನಲಿ ||
ಸುರಿದನಾ ಪಾಲ್ಮೊಸರು ತುಪ್ಪಗಳನೆಲ್ಲವನು |
ಬರಿಗೈದನಾಭಾಂಡಗಳಲಿ ||127||
ಕುಡಿದು ದ್ರವಶಾಖಗಳನೊಯ್ಯನೊಯ್ಯನೆ ಮುಂದೆ |
ನಡೆಸಿ ತಂದನು ಕಂಡು ಖಳನ ||
ನುಡಿದನೆಲವೆಲವೊ ಕೂಳಿದೆ ತಿನ್ನು ಬಾ ಕುನ್ನಿ |
ಫಡಯೆನುತ ಮೂದಲಿಸುತವನ ||128||
ಕಂಡು ಖಳ ಬೆರಗಾಗಿ ನುಡಿದನಿವನಾವನು |
ದ್ದಂಡಬಲನಾಗಿ ತೋರುವನು ||
ಪುಂಡರೀಕಾಕ್ಷ ಶೂಲಿಗಳೆನ್ನೊಳಳುಕಿದವ |
ರಂಡಲೆದು ತೋಟಿಯೆಸಗುವರೆ ||129||
ತಿಂದು ದಣಿಯಲಿ ಭಂಡಿ ತುಂಬಿದನ್ನವನೀತ |
ನಿಂದೆ ಹಿಂಡುವೆನೂರ ಜನರ ||
ಮಂದಮತಿಯಿವ ಸಹಿತ ನೋಡಬಹುದೆನುತ ಖತಿ |
ಯಿಂದ ಮುರಿದೆದ್ದನಮರಾರಿ ||130||
ಭಾಮಿನಿ
ಎಲವೊ ಫಡ ತಿಂದನ್ನವನು ಮೂ |
ಗಿನಲಿ ಬರಿಸುವೆನೆನುತ ಖತಿಯಲಿ |
ಬಲಿದೆರಡು ಮುಷ್ಟಿಯಲಿ ಬಂದೆರಗಿದನು ಮಾರುತಿಯ ||
ತಿಳಿಯದೇನನು ತೋರ ತುತ್ತಿನ |
ಕೆಲಸದಲಿ ಕಲಿಭೀಮನಡಸಿರೆ |
ಖಳನು ಕೋಪದಿ ಮರನ ಮುರಿದೆರಗಿದನು ಬಳಿಕವನ ||131||
ರಾಗ ನಾದನಾಮಕ್ರಿಯೆ ಅಷ್ಟತಾಳ
ಮರನ ಹೊಯ್ಗಳನಾಂತು ಭೀಮನು | ಹಿಂದೆ |
ತಿರುಗಿ ಮೆಲ್ಲನೆ ಕಾಣುತೆಂದನು ||
ಅರೆಗೆಲಸಗಳಾಗಿದೆ ನೋಡಾ | ತಾಳ |
ದಿರು ಪೂರಯಿಸಿಬಹೆನು ಗಾಢ ||132||
ಎಂದುಳಿದನ್ನದ ತುತ್ತನು | ತೋರ |
ದಿಂದಲಿ ತೂಗಿ ಬಾಯೊಳು ತಾನು ||
ಅಂದದೊಳಿಟ್ಟು ಚಪ್ಪರಿಸುತ | ಬೆರ |
ಳಿಂದಲೇಡಿಸಿನು ಚಲಿಸುತ್ತ ||133||
ಒತ್ತುವ ಹಸಿವದು ತಾನೊಂದು | ಬಾರಿ |
ತುತ್ತು ಹೋದಳಲದು ತಾನಂದು ||
ಮತ್ತೆ ತನ್ನಿದಿರೆ ತಿಂಬಳಲಿಂದು | ವಿಧಿ
ಸಿತ್ತೆನಗೆಂದನಾ ಖಳನಂದು ||134||
ಎನುತ ಪಲ್ಮೊರೆಯುತ್ತಲಿರಲಿತ್ತ ಭೀಮ |
ನನಿತನೆಲ್ಲವನುಂಡು ಮುಗಿಸುತ್ತ ||
ಘನ ಹರುಷದಲಿ ಕೈದೊಳೆದನು | ಸಮ |
ಮನದಿ ತೇಗುತಲೆದ್ದು ನುಡಿದನು ||135||
ರಾಗ ಘಂಟಾರವ ಅಷ್ಟತಾಳ
ಉಂಡೆವೈ ಸಮಚಿತ್ತದೊಳಿನ್ನು ಕೈ |
ಗೊಂಡೆವೈ ಕಾಳಗವ ನಾ ಸಹ | ಹಿಂಡುವಿರೆ ಪುರಜನವನು ||136||
ಕಂಡೆವೈಸಲೆ ನಿಮ್ಮಯ ಸತ್ತ್ವವ |
ದಿಂಡೆಯರಲೈ ನೀವು ನಮ್ಮು | ದ್ದಂಡತನವನು ಅರಿಯಿರೈ ||137||
ಹೊಯ್ದಿರೈ ಅರೆವೂಟದೊಳೆಮ್ಮನು |
ಬೈದಿರೈ ನೀವೇನ ಮಾಡಿದ | ರೈದೆ ನಾವ್ ಬಿಡಲಿಲ್ಲವೈ ||138||
ಐದೆನಿಂದಿನೂಟವೆಯೂಟ ಬಹುದಿನ |
ಕೈದುಮೊಗದವ ನಾಣೆ ಪುಸಿಯ | ಲ್ಲೆದಿದೆವು ಸಂತುಷ್ಟಿಯ ||139||
ರಾಗ ಶಂಕರಾಭರಣ ಮಟ್ಟೆತಾಳ
ಎಂದು ಭೀಮನಣಕಿಸಲ್ಕೆ ಖಳನು ಕಾಣುತ |
ಮುಂದುವರಿವ ರೋಷವನ್ನು ಮನದಿ ತಾಳುತ ||
ತಿಂದ ಕೂಳ ಬಲುಹ ತೋರು ತೋರೆನುತ್ತಲಿ |
ಒಂದು ಭರದಿ ತಿವಿದನುರಕೆ ಮುಷ್ಟಿಯಿಂದಲಿ ||140||
ಖಳನ ತಿವಿತಗಳನು ಕಂಡು ತಿರುಗಿ ಭೀಮನು |
ಬಲಿದು ಮುಷ್ಟಿಯಿಂದ ತಿವಿದನೇನನೆಂಬೆನು ||
ಕಲಹಗಲಿಗಳೀರ್ವರುಬ್ಬಿ ಸತ್ತ್ವದಿಂದಲಿ |
ಹಳಚಿದರು ಸುರೌಘ ಕೂಡೆ ಹೊಗಳೆ ನಭದಲಿ ||141||
ಕೆರಳಿ ಬಕನು ಬಳಿಕ ತರುವ ಮುರಿದು ಭೀಮನ |
ಎರಗೆ ಮುನಿದು ಸದಶ ಮುಷ್ಟಿಯಿಂದಲಸುರನ ||
ಉರವ ಹೊಕ್ಕು ತಿವಿದ ನೆಲುವು ಚೂರ್ಣವಹವೊಲು |
ಒರಲುತೈದೆ ಬಿದ್ದು ಮಡಿದನವನು ಧರೆಯೊಳು ||142||
ಭಾಮಿನಿ
ಮಡುಹಿ ದೈತ್ಯನ ಹೆಣನ ಬಂಡಿಯ |
ಕಡೆಗೆ ಬಂಧಿಸಿ ತಂದು ಬಿಸುಟದ |
ನೊಡನೆ ಪುರಬಾಹೆಯಲಿ ಜನತತಿಯೈದೆ ಬೆರಗಾಗಿ ||
ಎಡೆಬಿಡದೆ ನಡೆತಂದು ಕಾಣುತ |
ಪೊಡವಿಯಮರರು ಧನ್ಯ ನಿನ್ನನು |
ಪಡೆದ ತಾಯಿ ಕತಾರ್ಥೆಯೆಂದರು ಭೀಮಸೇನನೊಳು ||143||
ರಾಗ ನೀಲಾಂಬರಿ ಏಕತಾಳ
ಭಳಿರೆ ಭೂಸುರವಂಶಕ್ಕೆ | ತಿಲಕನು ನೀನಯ್ಯ ||
ಸಲೆ ನಿನ್ನಿಂದ ವಿಪ್ರಕುಲವೆ | ಗ್ಗಳವನಾಂತುದಯ್ಯ ||
ಹಲವು ಕಾಲ ಎಮ್ಮ ದುಃಖ | ಗೊಳಿಸಿದನಲ್ಲಯ್ಯ ||
ಖಳನ ಕೊಂದು ನಮ್ಮೆಲ್ಲರ್ಗೆ | ಗೆಲವ ಗೈದೆಯಯ್ಯ ||144||
ದುಷ್ಟನಳಿದನಿನ್ನೇನು ನಾವ್ | ಶಿಷ್ಟರಾದೆವಯ್ಯ ||
ಕಷ್ಟವು ಬಯಲಾಯಿತು ಮನ ಸಂ | ತುಷ್ಟಿಯಾದುದಯ್ಯ ||
ನಿಷ್ಠೆವಂತರಾಶೀರ್ವಾದ | ಕಿಷ್ಟನಾದೆಯಯ್ಯ ||
ವಿಷ್ಟರಶ್ರವನು ತಾ ನಿಮ್ಮಾ | ಭೀಷ್ಟವೀಯಲಯ್ಯ ||145||
ವಾರ್ಧಕ
ಧರಣೀಂದ್ರ ಕೇಳಿಂತು ಪವನಜಂ ಸಕಲ ಭೂ |
ಸುರರ ಪರಕೆಯನಾಂತು ಬಳಿಕ ಗಹಕೈತಂದು |
ವರ ಕುಂತಿದೇವಿಯಡಿಗೆರಗಿ ಧರ್ಮಜನ ಪದಯುಗಳಕಭಿವಂದಿಸುತಲಿ ||
ಸುಪನಂದನ ಮುಖ್ಯ ಸಹಭವರನುಚಿತಗಳ |
ನರಿದು ಮನ್ನಿಸಿ ಸುಖದೊಳಿರಲಿತ್ತ ಪಾಂಚಾಲ |
ಪುರದ ದ್ರುಪದಾವನೀಶನ ಬಳಿಗೆ ಬೇಹಿನಾ ಚರರೈದಿ ಪೇಳ್ದರಂದು ||146||
ರಾಗ ಸಾರಂಗ ಅಷ್ಟತಾಳ
ಲಾಲಿಸು ದ್ರುಪದಭೂಪ | ಮನ್ಮಥರೂಪ | ಲಾಲಿಸು ದ್ರುಪದಭೂಪ || || ಪಲ್ಲವಿ ||
ನೆರೆ ಲಾಕ್ಷಭವನವನು | ದಾಯಾದ್ಯಮ | ತ್ಸರದಿಂದ ಕೌರವನು ||
ವಿರಚಿಸಿ ಪಾಂಡುನಂದನರನ್ನು ಸಲೆ ಪರಿ |
ಪರಿಯೊಳ್ ಬೋಧಿಸಿದರಂತೆ | ಕೈಗೊಳುವಂತೆ ||147||
ಭೂಮಿಯೊಳರ್ಧವನು | ದಾಯದಲಿ ಕೊ | ಟ್ಟಾ ಮಹಾಸದನವನು ||
ಪ್ರೇಮವುಳ್ಳವರವೋಲ್ಕಪಟದಿ ಹೊಗಿಸಿ ಮೇಣ್ |
ಹೋಮಿಸಿ ಕಳೆದರಂತೆ | ನಿಶ್ಚಯವಂತೆ ||148||
ಕಂದ
ಚಾರಕರಿಂತೆನೆ ಕೇಳ್ದುಂ |
ಧಾರಿಣಿಯಧಿಪಾಲನೈದೆ ಚಿಂತಾ ಭರದಿಂ |
ಏರಿಸಿದಂಗೈ ಗಲ್ಲದಿ |
ಭಾರಿಯ ದುಮ್ಮಾನದಿಂದಲೊಯ್ಯನೆ ನುಡಿದಂ ||149||
ರಾಗ ನೀಲಾಂಬರಿ ಆದಿತಾಳ
ಅಕಟ ಪಾಂಡುಸುತರು ಸತ್ಯ | ಮುಖದಿಂದಾ ಕೌರವನ ||
ವಿಕಟಲಾಕ್ಷಾಭವನಕೈದಿ | ಪ್ರಕಟ ಮಡಿದೈದಿದರೆ ||150||
ಸುರಪಯಮ ಕುಬೇರ ವರುಣಾ | ದ್ಯರಿಗೆ ಸೋಲದವರ ||
ಮರೆಮೋಸಗೈದುರುಹಿದನಲ್ಲ | ದುರುಳ ಕುರುವೀರ ||151||
ಅರಿಯಲೊರ್ವರಿಂದೊರ್ವರು | ಗರುವರು ಪಾಂಡವರು |
ನೆರೆ ಸಮರ್ಥನದರೊಳ್ ಪಾರ್ಥ | ನುರೆ ರಣಕೋವಿದನು ||152||
ಅಂದು ಧುರದೊಳೆನ್ನ ಗೆಲಿದು | ತಂದು ಗುರುದಕ್ಷಿಣೆಯ ||
ಕುಂದದಿತ್ತ ಪಾರ್ಥನೆತ್ತ | ಹೊಂದಿದನಿಂದಕಟಾ ||153||
ಬಿಡದೆ ಪಂಥವಿಡಿದು ನರಗೆ | ಮಡದಿಯಾಹ ಸುತೆಯ ||
ಕೊಡನ ಮಗನ ಗೆಲುವ ಸುತನ | ಪಡೆದ ಯಜ್ಞಮುಖದಿ ||154||
ರಾಗ ಆನಂದಭೈರವಿ ಏಕತಾಳ
ಅಹಹಾ ಇಂತಾದ ಮೇಲೆನ್ನ | ಮೋಹದಾ ಕುವರಿಯನಿನ್ನಾ |
ರ್ಗೀವೆನು | ನಾನಿ | ನ್ನೇವೆನು ||155||
ಭೂರಿ ಚಿಂತಾಶರಧಿಯೊಳು | ಪಾರುಗಾಣದಿಂತು ಮುಳು |
ಗಿದೆ ನಾನು | ಗೈವೆ | ನೇನ್ನಾನು ||156||
ಭಾಮಿನಿ
ದ್ರುಪದನೀ ಪರಿಯಿಂದ ಮನದೊಳ |
ಗಪರಿಮಿತ ಚಿಂತೆಯನು ತಾಳುತೆ |
ಗುಪಿತದಲಿ ಕರೆಸಿದನು ಮೇಣ್ ತನ್ನಯ ಪುರೋಹಿತರ ||
ಶಪಥಕಿಂದೆಡರಾಯ್ತು ಕುರುಭೂ |
ಮಿಪನು ಪಾಂಡುಕುಮಾರಕರನುರೆ |
ಕಪಟದಿಂ ದಹಿಸಿದನು ಗಡ ಎನಲೆಂದನಾ ವಿಪ್ರ ||157||
ರಾಗ ಮಾರವಿ ಅಷ್ಟತಾಳ
ಎಲೆ ಭೂಪ ಚಿಂತೆ ಬೇಡ | ಪಾಂಡವರು ತಾ |
ವಳಿವವರಲ್ಲ ನೋಡಾ ||
ಹಲವಂಗದಿಂದ ನೋ | ಡಲಿಕೆಮ್ಮ ಭಾವದೊ |
ಳಿಳೆಯಲೇ ಜೀವಿಸಿಹರೆಂಬುದು |
ಸಲೆ ನಿಧಾನದಿ ನಮಗೆ ತೋರ್ಪುದು ||158||
ಶಕುನದಿ ಜ್ಯೋತಿಷ್ಯದಿ | ಉಪಶ್ರುತಿ |
ಮುಖದಿ ನಾನಾವಿಧದಿ ||
ಸಕಲ ಶಾಸ್ತ್ರದ ವಿ | ಧ್ಯುಕುತಿಯಿಂದೀಕ್ಷಿಸೆ |
ಸುಖವಿಹರು ಕೌಂತೇಹರೆಂಬುದು |
ಪ್ರಕಟದಿಂ ಮನ್ಮನಕೆ ತೋರ್ಪುದು ||159||
ರಾಗ ಯರಕಲಕಾಂಭೋಜಿ ರೂಪಕತಾಳ
ಬೇಡ ಚಿಂತೆಯಿನ್ನು ಸುಮ್ಮನೆ | ಸಕಲ ನಪರ |
ಕೂಡಿಸೈ ಮಹೀಶ ಘಮ್ಮನೆ ||
ಮಾಡಿಸೈ ಸ್ವಯಂವರವನು |
ಗಾಢದಿಂದ ಸುತೆಗೆ ನೀನು ||160||
ಆರು ಮೆಚ್ಚಿಸುವರೊ ಸುತೆಯನು | ಪತಿಗಳವರೆ |
ಬೇರಾರಿಲ್ಲವೆಂಬ ಪರಿಯನು ||
ಧಾರಿಣೀಶ ನೀನು ರಚಿಸು |
ಬಾರದಿರರು ಪಾಂಡುಸುತರು ||161||
ಸತಿಯ ಪುಣ್ಯಫಲಗಳಿಂದಲಿ | ನಿನ್ನಭೀಷ್ಟ |
ಪ್ರಥಿಸದಿರದು ಕೇಳು ಕಡೆಯಲಿ ||
ವ್ಯಥೆಯ ತ್ಯಜಿಸು ಬರೆಸು ಸಕಲ |
ಪಥವಿವರರಿಗೋಲೆಗಳನು ||162||
ಭಾಮಿನಿ
ಎಂದು ರಾಜಪುರೋಹಿತನು ನಲ |
ವಿಂದ ದ್ರುಪದನ ಮನದೊಳಿಡಿದಿಹ |
ಕುಂದನುರೆ ಪರಿಹರಿಸೆ ಬಳಿಕ ಮನೋನುರಾಗದಲಿ ||
ಮುಂದೆ ಮಾಡುವ ಕಾರ್ಯ ಸಂಗತಿ |
ಯಂದವನು ಯೋಚಿಸುತ ಮಂತ್ರಿಯ |
ನಂದಿರದೆ ತನ್ನೆಡೆಗೆ ಕರೆಸುತ ನುಡಿದನವನೊಡನೆ ||163||
Leave A Comment