ರಾಗ ಸೌರಾಷ್ಟ್ರ ಏಕತಾಳ

ಸತಿಯರಲಂಕರಿಸಿದರಂದು | ಗುಣ |
ವತಿ ದ್ರೌಪದಿಯನು ಮನದಂದು || ಸತಿಯ || ಪಲ್ಲವಿ ||

ಕಣ್ಣಿಗಂಜನವ ಬಳಲ್ಮುಡಿಗೆ |
ಸಣ್ಣ ಮಲ್ಲಿಗೆಯನು ತಳಿರೆಡೆಗೆ ||
ಬಿನ್ನಾಣದ ಲಂಡಿಗೆ ತಿಲಕವ ಫಣೆ |
ಗುನ್ನತಿಕೆಯಲಿ ಸಿಂಗರಿಸಿದರು || ಸತಿಯ ||299||

ಕಂಚುಕವನು ಬಲ್ಮೊಲೆಗಳಲಿ |
ಮಿಂಚುವ ಹಾರವ ಕೊರಳಿನಲಿ ||
ಕಾಂಚಿಯೊಡ್ಯಾಣಕಿಂಕಿಣಗಳನುಡೆಯಲಿ |
ಚಂಚಲ ನೇತ್ರೆಗೆ ತೊಡಿಸಿದರು || ಸತಿಯ ||300||

ಸಿಂಧೂರವನು ಬೈತಲೆಯೆಡೆಗೆ |
ಗಂಧದ ನೀರ ಮುಂಗೈ ಕಡೆಗೆ ||
ಚಂದನಲೇಪನವನು ಕುಚಯುಗಳಕೆ |
ಚಂದಿರವದನೆಯರೆಸಗಿದರು || ಸತಿಯ ||301||

ಕರದಿ ಕಂಕಣ ಬೆರಳುಂಗುರವ |
ಚರಣದಲಂದುಗೆ ನೂಪುರವ ||
ಮೆರೆವ ನಾಸದಿ ಮೌಕ್ತಿಕವನು ಕರ್ಣಕೆ |
ಹರಳೋಲೆಯನಳವಡಿಸಿದರು || ಸತಿಯ ||302||

ಮಕರಪತ್ರವನು ಕಪೋಲದಲಿ |
ಸಕಲ ಭೂಷಣವ ಸರ್ವಾಂಗದಲಿ ||
ಸುಕರ ತಾಂಬೂಲವ ಮುಖದಲಿ ಸೇರಿಸಿ |
ಸುಕಲೆಯರಂದು ಸಿಂಗರಿಸಿದರು || ಸತಿಯ ||303||

ಭಾಮಿನಿ

ವಾರಿರುಹದಳನೇತ್ರೆಯರು ಮಗು |
ಳಾರತಿಯನೆತ್ತಿದರು ಶಿರದಲಿ |
ಚಾರುಮುತ್ತಿನ ಸೇಸೆಯಿಟ್ಟರು ಹರಸುತೊಲವಿನಲಿ ||
ಭೂರಿ ಸನ್ಮಾನದಲಿ ಕೈಗೊಡೆ |
ನಾರಿಮಣಿ ದಂಡಿಗೆಯನೇರ್ದಳು |
ಭೋರಿಡಲು ವಾದ್ಯಗಳು ಬರುತಿರ್ದಳು ಸಭಾಂತರಕೆ ||304||

ರಾಗ ಘಂಟಾರವ ಅಷ್ಟತಾಳ

ಬಂದಳು-ದ್ರುಪದಾತ್ಮಜೆಯೊಯ್ಯನೆ | ಸಂದಣಿಸಿ ಮುಸುಕಿರ್ದ ಸತಿಯರ |
ವಂದಮಧ್ಯದಿ ಮಾನಿನಿ ||305||

ಕುಂದಕು-ಡ್ಮಲರದನೆ ಚಂಚಲ ನೇತ್ರೆ | ಚಂದಿರಾನನೆ ಸುಂದರಾಂಗಿ ಪು |
ರಂದರನ ಸಮಭಾಷಿಣಿ ||306||

ಮಂದಗಾ-ಮಿನಿ ಮುಕುರಕಪೋಲೆ ಮಿ | ಳಿಂದಕುಂತಳೆ ಚಂದನೋಪಮ |
ಗಂಧಿ ನಾರೀಕುಲಮಣಿ ||307||

ಕಂದ

ಭೂಮಿಪ ಕೇಳ್ ಬಳಿಕಂದಾ |
ಕೋಮಲೆಗಂ ಸಕಲ ಭೂಪರ ತೋರ್ಪರೆ ತಾಂ ||
ಪ್ರೇಮದಿ ಧಷ್ಟದ್ಯುಮ್ನಂ |
ಕಾಮಿನಿಯೆಡೆಗೈದಿ ತೋರ್ದನೀತೆರದಿಂದಂ ||308||

ರಾಗ ಸಾಂಗತ್ಯ ರೂಪಕತಾಳ

ತರುಣಿ ನೋಡಿತ್ತ ಸೋದರವರ್ಗವೆರಸಿಹ |
ಕುರುರಾಯನೀತನು ಕಾಣೆ ||
ನೆರೆ ನೋಡದತ್ತ ಮುಂಬರಿಸು ದಂಡಿಗೆಯನೆಂ |
ದಿರದೆ ಮುಂದೈದಿದಳೊಡನೆ ||309||

ಇತ್ತ ನೋಡೆಲೆ ತಂಗಿ ಕೀಚಕನಿವನೆನೆ |
ಮತ್ತೆ ಮುಂದಕೆ ಹರಿಸೆನಲು ||
ಉತ್ತರ ವೀರ ವಿರಾಟರ ತೋರೆ ಮುಂ |
ದರ್ತಿಯಿಂದಲೆ ಗಮಿಸಿದಳು ||310||

ಧರೆಯೊಳು ರವಿಯಂತೆ ಹೊಳೆಯೊಳೆಯುವನೀತ |
ಧುರಧೀರ ಕರ್ಣ ನೋಡೆನಲು ||
ಭರದ ರೂಪಾತಿಶಯವ ಕಂಡಳಾರೆಂದು |
ತರುಣಿ ಮೇಣ್ ಮೊಗದಿರುಹಿದಳು ||311||

ರಾಗ ಸೌರಾಷ್ಟ್ರ ಅಷ್ಟತಾಳ

ನೀಲನೀತನು ಶಿಶುಪಾಲ ತಾನಿವನೀತ | ತಂಗಿ ನೋಡೆ || ಇತ್ತ
ಭೂಮಿಪಾಲಕ ಜಯದ್ರಥನಿವನೀತ ಬಾಹ್ಲಿಕ | ತಂಗಿ ನೋಡೆ ||312||

ಚೋಳ ಕೇರಳ ಪಾಂಡ್ಯರಿವರು ಸಂಜಯನೀತ | ತಂಗಿ ನೋಡೆ || ನಪ |
ಲೋಲ ಜರಾಸಂಧನೆಂಬವನೀತನು | ತಂಗಿ ನೋಡೆ ||313||

ಇತ್ತಲೀತನು ಭಗದತ್ತ ಪೌಂಡ್ರಕನೀತ | ತಂಗಿ ನೋಡೆ || ಸೋಮ |
ದತ್ತ ಬಹದ್ರಥ ದಂಡಧಾರಕನೀತ | ತಂಗಿ ನೋಡೆ ||314||

ಸತ್ಯಸಂಪನ್ನ ಮಾದ್ರಾಧೀಶನೀತನು | ತಂಗಿ ನೋಡೆ || ಖ್ಯಾತಿ |
ಯುಕ್ತನಶ್ವತ್ಥಾಮನಿವನು ಸೌಬಲನೀತ | ತಂಗಿ ನೋಡೆ ||315||

ರಾಗ ಶಂಕರಾಭರಣ ಅಷ್ಟತಾಳ

ಇತ್ತ ನೋಡೌ ತಂಗಿ ಹರಿಯ | ದಾನವಕುಲ | ಮತ್ತೇಭಕೇಸರಿಯ ||
ಮನ್ಮಥನನ್ನು | ಪೆತ್ತ ಸನ್ಮೂರುತಿಯ ||
ಮತ್ತಕಾಶಿನಿ ನಿನ್ನೊಳ್ ಮತಿಯಾಗೆ ವರಿಸೊಂದೆ |
ಚಿತ್ತದಿ ಯದುಪತಿಯ || ಎಂದು ತೋರಿದ | ನುತ್ತಮ ಮೂರುತಿಯ ||316||

ಕೇಳಿದಾಕ್ಷಣ ಭಕುತಿಯಲಿ | ಹೂಳಿ ರೋಮಾಂಚನವ ||
ಗದ್ಗದವೆತ್ತು | ಬಾಲೆ ತಾ ಬೆದರುತಲಿ ||
ಸಾಲಿಂದ ಸ್ತುತಿಸಿ ಸದ್‌ಬಂಧುತ್ವ ಗುರುಭಾವ |
ಕಾಲಿಟ್ಟುದಿವನಲೆಂದು || ಕೈಮುಗಿಯುತ್ತ | ಪೇಳಿದಳಬಲೆಯಂದು ||317||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆದಡೀಕ್ಷಿಸು ಹಿರಿಯನೀತನ | ಸೋದರನು ಬಲನೀತನಿವ ಮೇಣ್ |
ಮಾಧವಾತ್ಮಜ ಸ್ಮರನು ರೂಪಿನೊ | ಳೈದೆ ಚೆಲುವ ||318||

ಇವನ ಸುತನನಿರುದ್ಧನೀತನು | ಯುವತಿ ನೋಡಕ್ರೂರ ಸಾಂಬೋ |
ದ್ಧವರಿವರು ಕತವರ್ಮ ಸಾತ್ಯಕ | ರಿವರು ನೋಡೆ ||319||

ಸಾರಣನ ಸಾತ್ಯಕಿಯ ಕೃಷ್ಣ ಕು | ಮಾರರಖಿಳರ ಸಕಲ ಯಾದವ |
ವೀರರನು ನೋಡೆಂದು ತೋರ್ದನು | ನಾರಿಗಂದು ||320||

ವಾರ್ಧಕ

ಧರಣಿಪತಿ ಕೇಳ್ ಜಗವನಿಂದ್ರಿಯವನುರೆ ವಿಷಯ |
ಕರಣಾದಿಗಳ ನೆಲ್ಲಮಂ ನೆತ್ತಿ ಮುಖದಿಂದ |
ಲಿರದೆ ತೆಗೆತೆಗೆದು ಶ್ರುತಿಶಿರವಮಲ ತತ್ಪದವನರಸ್ವಂತೆ ಯಜ್ಞಸುತೆಯು ||
ನೆರೆ ಮನಕೆ ಬಯಕೆಯುಳ್ಳವನನರಸುತ ನಪಾ |
ಲರನೆಲ್ಲರಂ ಕುಡಿತೆಗಂಗಳಿಂ ಮೊಗೆಮೊಗೆದು |
ಹೊರಸೂಸುತೈತರಲ್ಕವಳ  ಭಾವವನರಿದು ತಿರುಹಿದರ್ ದಂಡಿಗೆಯನು ||321||

ರಾಗ ನೀಲಾಂಬರಿ ರೂಪಕತಾಳ

ನಪರನೆಲ್ಲರ ನಾರಿ ಬಿಟ್ಟು ಪೋಪುದ ಕಂಡು |
ದ್ರುಪದನು ಭೂರಿ ಚಿಂತೆಯಲಿ ||
ವಿಫಲವಾದುದೆ ಶಿವ ಶಿವ ಪುರೋಹಿತರೆನ್ನೊಳ್ |
ಶಪಥದಿ ಪೇಳ್ದ ಮಾತಿಂದು ||322||

ಕಾಣದೆ ಪೋದೆ ನಾನಕಟಿಲ್ಲಿ ಪರಿಯಂತ |
ಮಾನವಾಧಿಪ ಪಾಂಡುಸುತರ ||
ಕಾನನದಲಿ ಪೋಗಿ ಕಂಗಳ ತೆರದೊಲಾ |
ಯ್ತೇನ ಮಾಡುವೆನಯ್ಯ ವಿಧಿಯೆ ||323||

ಇನ್ನು ಯೋಚಿಸಲೇನು ಫಲವು ಮಾನಿನಿಯಳ |
ಪುಣ್ಯವಿರ್ದುದು ತಪ್ಪಿದಪುದೆ ||
ಉನ್ನತ ಮತ್ಸ್ಯಯಂತ್ರವ ನೆಗಹುವರಿರೆ |
ಕನ್ಯೆಗೆ ವರನಾಗಲೆಂದ ||324||

ವಾರ್ಧಕ

ಎಂದು ಸಲೆ ಚಿತ್ತದೊಳ್ ನಿಶ್ಚಯಿಸುತಾ ದ್ರುಪದ |
ನಂದು ಮಾಡಿಸಿ ಮತ್ಸ್ಯಯಂತ್ರಮಂ ಧನುವನುಂ |
ತಂದಿರಿಸಿ ಶರಗಳಂ ಸನ್ನಾಹಗೊಳಿಸಿ ವೈದಿಕವಿಧಾನದೊಳರ್ಚಿಸಿ ||
ಇಂದು ಭುಜಬಲವುಳ್ಳಭೂಪರೀ ಚಾಪಮಂ |
ಸಂಧಾನವೆಸಗಿ ಬಾಣವನೆಸೆದು ಗಗನದೊಳ |
ಗೊಂದಿರ್ದ ಯಂತ್ರಮಂ ಕೆಡಹಲೆಂದೆನುತ ಹೊಯ್ಸಿದನವಂ ಡಂಗುರವನು ||325||

ಕಂದ

ಆ ಸಮಯದಲಿದನುಂ ಕಾಂ |
ಬಾಸೆಯೊಳುಂ ಭದ್ರಮಂಟಪಕೈತಂದಾಗಳ್ ||
ಸಾಸಿರಸಂಖ್ಯೆಯೊಳೆಸೆವ ವಿ |
ಲಾಸಿನಿಯರ್ ಸಹಿತ ದ್ರುಪದಸುತೆ ಕುಳ್ಳಿರ್ದಳ್ ||326||

ರಾಗ ಭೈರವಿ ಝಂಪೆತಾಳ

ಧಾರಿಣೀಪತಿಯಿತ್ತ | ಸಾರಿಸಲು ಡಂಗುರವ |
ವೀರನಪರೊಗ್ಗಾಗು | ತೋರಣದೊಳಂದು ||327||

ಎನಗೆ ತನಗೆಂದೆನುತ | ಧನುವಿನೆಡೆಗೈತಂದು |
ಮಣಿಯುತಲ್ಲಾಡಿಸ | ಲ್ಕನುವಾಗದವರು ||328||

ತಿರುಗಲೀಕ್ಷಿಸಿ ಮಗಧ | ನಿರದೆ ಮದ್ಭುಜಬಲವ |
ಮೆರೆಸಲಿದು ಸಮಯವಾ | ಗಿರುವುದೆಂದೆನುತ  ||329||

ಇಳಿದು ಭದ್ರಾಸನವ | ಘಳಿಲನೈತಂದು ತೋ |
ಳ್ಗಳಲವುಕಿ ನೆಗಹೆ ಧನು | ನೆಲನ ಬಿಡದಿರಲು ||330||

ಒತ್ತಾಯದಿಂದ ಪಿಡಿ | ದೆತ್ತಿದಡೆ ಯವೆ ಮಾತ್ರ |
ಪೃಥ್ವಿಯನು ಬಿಡದಿರಲು | ಸತ್ತ್ವಗುಂದಿದನು ||331||

ಭಾಮಿನಿ

ಹರಿಯದಿದು ನಮ್ಮಿಂದ ಹೆಂಗಳ |
ಬಿರುನಗೆಯು ಘನವಾಯ್ತು ಸಾಕೆಂ |
ದರಸನೊಯ್ಯನೆ ಹಿಂದೆ ಸರಿದನಿದೇಕೆ ತನಗೆನುತ ||
ಹರ ಹರಳುಕಿದನೆ ಜರಾಸುತ |
ಧರಧುರದ ಧನುವಿಂಗೆ ನಮ್ಮದು |
ಹರಿಬವೆನುತೈತಂದನಾ ಶಿಶುಪಾಲನುರಿಮಸಗಿ ||332||

ರಾಗ ಕೇದಾರಗೌಳ ಅಷ್ಟತಾಳ

ದಮಘೋಷನಂದನನುಬ್ಬಟೆಯಿಂದೇಳೆ | ತಮತಮ್ಮೊಳೆಲ್ಲವರು ||
ಅಮಮ ತಪ್ಪಲ್ಲ ರಾವಣನು ಹಿಂದಿವನು ವಿ | ಕ್ರಮಿಯಾಗದಿರನೆಂದರು ||333||

ಬಂದು ಸತ್ತ್ವದಿ ಪಿಡಿದೆತ್ತಲು ನೆಲವಿಡಿ | ದೊಂದಿಷ್ಟು ಮಿಡುಕದಿರೆ ||
ಸಂದೇಹವಿಲ್ಲ ಭಾರಿಯ ಧನುವಪಹಾಸ್ಯ  | ಕಿಂದೆಡೆಯಾಯ್ತೆಂದನು ||334||

ಕಂಡು ಮಾಗಧನವನನು ಕರೆದೆಂದನು | ಚಂಡಿ ನೋಡಾ ಧನುವು ||
ಭಂಡುಗೈವುದು ನಪರನು ನಡೆ ಪುರಕೆಂದು | ಕೊಂಡೊಯ್ದನಾತನನು ||335||

ಭಾಮಿನಿ

ಮಗಧನಪ ಶಿಶುಪಾಲಕರು ನಿಜ |
ನಗರಿಗೈತರೆ ಮಿಕ್ಕ ನಪರದ |
ನೆಗಹಲಾರದೆ ಸತ್ತ್ವಗುಂದಲು ಕಂಡು ಖಾತಿಯಲಿ ||
ನಗೆಯನಿತ್ತುದೆ ಚಾಪವವನಿಪ |
ರಗಡುತನಕಿಂದಿನಲಿ ನೋಳ್ಪೆನು |
ಬಿಗುಹ ತಪ್ಪೇನೆನುತ ಶಲ್ಯ ನಪಾಲನೈತಂದ ||336||

ರಾಗ ಸೌರಾಷ್ಟ್ರ ಏಕತಾಳ

ಮಸಗಿ ಶಲ್ಯನು ಧನುವೆಡೆಗೆ ಪೋಪುದು ಕಂಡು |
ಕುಸುಮಲೋಚನೆಯರು ನಗುತ ತಮ್ಮೊಳಗೆ ||
ಶಿಶುಪಾಲ ಮಾಗಧರಂದವೊ ಗೆಲವೊ ಸಾ |
ಹಸವಂತನಿವನಹನೆಂದು ಪೇಳಿದರು ||337||

ತುಡುಕಿ ಸತ್ತ್ವದಿ ಫಣೆಗೊಂದಿಸಿ ನೆಗಹಲು |
ಮಿಡುಕದ ಧನುವನೊತ್ತಾಯದಿಂ ನೆಗಹೆ ||
ಹೊಡಕರಿಸುತಲೆ ಡೊಳ್ಳಡಿಯಾಗಿ ಬಿ್ದನು |
ಮಡದಿಯರ್ ಕೈಹೊಯ್ದು ನಗಲು ಹಿಂಗಿದನು ||338||

ರಾಗ ನಾದನಾಮಕ್ರಿಯೆ ಅಷ್ಟತಾಳ

ಸೋತು ಶಲ್ಯನು ಸರಿಯಲು ಹಿಂದೆ | ರವಿ | ಜಾತನೀಕ್ಷಿಸುತಲೆ ಖತಿಯಿಂದೆ ||
ಭೂತಳಾಧೀಶ್ವರರೆಲ್ಲರ | ಮನ | ಘಾತಿಯ ಗೈದ ಚಾಪದ ದೂರ ||339||

ತವಿಸದಿಂದಿರ್ದೇನು ಫಲವೆಂದು | ಬಹ | ತವಕವ ಕಂಡು ನಾರಿಯರಂದು ||
ತವೆ ರೂಪವಂತನಾಗಿರ್ಪನು | ನಮ್ಮ | ಯುವತಿಗೆ ಸಮನಾಗಿ ತೋರ್ಪನು ||340||

ಆದಡರ್ಜುನನಲ್ಲವೆನುತಿರೆ | ಕಲಿ | ರಾಧೇಯನೊಡನೆ ಚಾಪದ ಹೊರೆ ||
ಗೈದಿ ಸತ್ತ್ವವ ತೋರಲವನನು | ಕೊಳ್ಳ | ದಾದುದಾರೆಂದರಿಯದೆ ಧನು ||341||

ಬಲಿದು ಮಂಡಿಯಲೌಕಿ ಜೋಡಿಸಿ | ಹೆದೆ | ಗೊಳಿಸಲಾರದಲೆ ವಿಭಾಡಿಸಿ ||
ತಲೆಯ ಬಾಗಿಸುತ ದುಮ್ಮಾನದಿ | ಮೆಲ್ಲ | ನಲಸಿ ಹಿಂಗಿದನುರೆ ಮೌನದಿ ||342||

ಭಾಮಿನಿ

ಅಂಗದೇಶಾಧೀಶ್ವರನು ಹೊರ |
ಹಿಂಗಲೀಕ್ಷಿಸಿ ಕೌರವಾದ್ಯರು |
ಸಂಗಡವೆ ಹಿಮ್ಮೆಟ್ಟಿದರು ಬಿಲು ಸದರವಲ್ಲೆನುತ ||
ಭಂಗಗೈದುದೆ ಧನುವಕಟ ನಪ |
ಪುಂಗವರ ಸಾಹಸವನಿರಲಿದ |
ರಂಘವಣೆಯನು ನೋಳ್ಪೆನೆನುತೆದ್ದನು ಹಲಾಯುಧನು ||343||

ರಾಗ ಭೈರವಿ ಏಕತಾಳ

ಕತಕದ ಚಾಪವ ಮುರಿದು | ನಪ |
ಸುತೆಯನು ಮುಂದಲೆವಿಡಿದು ||
ಖತಿಯಿಂದೆಳೆತಹೆನೀಗ | ತಾನೆ
ನ್ನುತ ನೀಲಾಂಬರನಾಗ ||344||

ಭದ್ರಾಸನವಿಳಿದುದನು | ಒಡ |
ನದ್ರಿಧರನು ಕಂಡದನು ||
ಉದ್ರೇಕವ ಮಾಣೆನುತ | ಬಲ |
ಭದ್ರನೊಳೆಂದನು ನಗುತ ||345||

ರಾಗ ಶಂಕರಾಭರಣ ಏಕತಾಳ

ಎಲ್ಲಿಗೆ ಗಮನವಿದೇನು | ಮೆಲ್ಲನಿಳಿದಿರೀ ಪೀಠವನು |
ಸೊಲ್ಲಿಸಬೇಕಣ್ಣ ಕಾರ್ಯ | ವುಳ್ಳಡದರನು ||
ಇಲ್ಲವೈ ಕಾರ್ಯ ಬೇರಿನ್ನು | ಬಿಲ್ಲ ಮುರಿದಿಕ್ಕಿ ಕಾಂತೆಯನು |
ನಿಲ್ಲದೆ ಕೈವಿಡಿದು ತರುವ | ದಲ್ಲದೆ ಬೇರೆ ||346||

ಏನಹರು ನಿಮಗೆ ಪಾಂಡು | ಸೂನುಗಳ್ ಮೈದುನರೈಸೆ |
ಮೇಣವಂದಿರರಸಿ ಭಗಿನಿ | ತಾನೀಕೆಯೈಸೆ ||
ನೀನು ಭ್ರಾಂತನಕಟಾ ಕುಂತಿ | ಸೂನುಗಳುರಿಮನೆಯೊಳು |
ಹಾನಿಯಾಗದಿರುವರೆ ಸ | ನ್ಮಾನನೀಯರು ||347||

ಧರೆಯಲಿ ಪಾಂಡವರಿಲ್ಲೆಂ | ದರಿಯಬೇಡೀ ಯಂತ್ರವೆಸೆವ |
ರಿರುವರು ಬೇರೆಂದು ಮನದಿ | ತರದಿರಣ್ಣಯ್ಯ ||
ಬರಿಯ ಠಕ್ಕೊ ಸಹಜವೋ ಪೇ | ಳಿರುವರೆ ಪಾಂಡವರಿಲ್ಲಿ |
ಹರ ಹರ ವಿಚಿತ್ರವೆನಗೆ | ಮುರಹರ ಕೇಳು ||348||

ವೀರ ಪಾಂಡುಸುತರನೀಗ | ತೋರುವೆ ವಸುದೇವನಾಣೆ |
ಮೀರೆನು ಸುಳ್ಳಲ್ಲ ಕೇಳೀ | ಬಾರಿ ಸತ್ಯವು ||
ಭೂರಿ ಹಿತವಾಯ್ತವರಭ್ಯುದಯ | ಬೇರೆ ನಮ್ಮಭ್ಯುದಯವೈಸೆ |
ನಾರಿಯನಾಳಲೆಂದನು | ಸೀರಪಾಣಿಯು ||349||

ರಾಗ ಕಾಂಭೋಜಿ ಝಂಪೆತಾಳ

ಇತ್ತ ಚಿಂತಿಸುತ ದ್ರುಪದನ ನುಡಿದನಕಟ ಭೂ |
ಪೋತ್ತಮರದೆಲ್ಲರಳುಕಿದರು ||
ಮತ್ತಕಾಶಿನಿಗಾರು ವರರಿನ್ನು ಶಿವ ಪಾಂಡು |
ಪುತ್ತರಿಲ್ಲಿನ್ನೇನು ಗತಿಯೊ ||350||

ವರ ಸಮುದ್ರಾಂತ ನಪರಿರ್ದೇನು ಫಲವಿದರೊ |
ಳಿರದಿರಲು ಪಾಂಡುನಂದನರು ||
ಬರಿದೆ ನೆರಹಿದೆನಿವರನೆಂದರಸ ಚಿಂತೆಯಿಂ |
ದಿರಲು ಧಷ್ಟದ್ಯುಮ್ನ ನುಡಿದ ||351||

ಅವರ ಮಾತೇಕಿನ್ನದಿತ್ತಲಿದೆ ದಕ್ಷಿಣೆಗೆ |
ಹವಣಿಸಿದ ವಿಪ್ರಸಂತತಿಯು ||
ತವೆ ಸಮುದ್ರದ ತೆರದಿ ಬಾಹುಬಲವಿದರೊಳು |
ಳ್ಳವರು ಸಾಧಿಸಲಿ ಯಂತ್ರವನು ||352||

ಎಂದೆನುತ ಸಾರಿಸುತ ಡಂಗುರವನಾ ವಿಪ್ರ |
ವಂದಮಧ್ಯದಲಿ ಚಾರಕರು ||
ಇಂದು ನಿಮ್ಮಲ್ಲಿ ಮಿಡುಕುಳ್ಳರೇಳುವುದು ಶರ |
ಸಂಧಾನವೆಸಗಿ ಯಂತ್ರವನು  ||353||

ಎಚ್ಚು ಕೈಚಳಕವನು ತೋರಿ ಕಮಲಾಕ್ಷಿಯನು |
ಮೆಚ್ಚಿಸುವುದೀಗಳೆಂದೆನುತ ||
ಉಚ್ಚರಿಸಿ ಡಂಗುರವ ಸಾರೆ ಕೇುತ ದ್ವಿಜರು |
ಬೆಚ್ಚಿ ಬೆರಗಾಗುತುಸಿರಿದರು ||354||

ರಾಗ ತೋಡಿ ತ್ರಿವುಡೆತಾಳ

ಏಕೆ ನಮಗಾ ಮಾನಿನಿಯ ತಳ್ಳಿ | ತರವಲ್ಲ ಬೇಡ ವಿ |
ವೇಕಿಸದು ವಿಪ್ರೇಂದ್ರರಿರ ಕೇಳಿ ||
ಸಾಕು ದಕ್ಷಿಣೆ ಮಷ್ಟಭೋಜನ | ಹಾಕುವವರಾರೆಲ್ಲಿಧನುವದು |
ಸೋಕಿದವರನು ಕೆಡಹುವುದು ತೆಗೆ | ನೂಕದದು ನಮ್ಮಿಂದ ಸುಮ್ಮನೆ ||355||

ನಾವು ವಚನದಿ ಶೂರರಲ್ಲದೆ | ಸಲೆ ಕಾರ್ಯನಿಪುಣರೆ |
ಭಾವಿಸಲು ಧನು ಸದರವುಳ್ಳಡೆ
ಭೂವಧೂವಲ್ಲಭರು ಹಲಬರು | ತಾವೆ ಸೋತರು ನಮಗೆ ಸುಲಭವೆ |
ಕೋವಿದರು ನಮಗಿದಿರಹರೆ ವಿ | ದ್ಯಾವಳಿಯಲಿ ಪರೀಕ್ಷೆಯೀವೆವು ||356||

ಸಾಂಗವೇದಪುರಾಣದರ್ಥದಲಿ | ಮೀಮಾಂಸ ತರ್ಕೋ |
ಪಾಂಗದಲಿ ಸಲೆ ಧರ್ಮಶಾಸ್ತ್ರದಲಿ ||
ಸಂಗಿಸಿದ ನಾಟಕ ಭರತ ಕಾ | ವ್ಯಂಗಳಲಿ ವೈದ್ಯಾ ಅಲಂಕಾ |
ರಂಗಳಲಿ ಗಜತುರಗ ಲಕ್ಷಣ | ದಂಗದಲಿ ನಮ್ಮನು ಪರೀಕ್ಷಿಸಿ ||357||

ಅಲ್ಲದಿರೆ ವಿಧವಿಧದ ಶಾಕದಲಿ | ಘತಸೂಪ ಪಾಯಸ |
ಸಲ್ಲಲಿತ ಸುಸ್ವಾದುಪಾಕದಲಿ ||
ಬೆಲ್ಲ ಬೆರಸಿದ ಹೂರಿಗೆಯ ಮೆಲು | ವಲ್ಲಿ ಸಂಡಿಗೆ ಪರಡಿ ಹೂರಣ |
ದಲ್ಲಿ ನಮ್ಮ ಪರೀಕ್ಷೆಯನು ಭೂ | ವಲ್ಲಭನು ತಾ ಕರೆಸಿ ನೋಡಲಿ ||358||

ಭಾಮಿನಿ

ಅರಸ ಕೇಳ್ ಮೇಣ್ ಜೀವಭಾವದ |
ಪರಮನಂತೆ ದ್ವಿಜಾಕತಿಯೊಳಿಹ |
ವರ ಯುಧಿಷ್ಠರಭೂಪನಾ ಭೂಸುರರ ಮಧ್ಯದಲಿ ||
ಇರುತ ಕೇಳ್ದೀ ಧ್ವನಿಯನರ್ಜುನ |
ಗಿರದೆ ನೇತ್ರದಿ ಸೂಚಿಸಲ್ಕದ |
ನುರು ಪರಾಕ್ರಮದಿಂದ ಕೈಗೊಂಡೆದ್ದನಾ ಕ್ಷಣಕೆ ||359||

ಕಂದ

ಧರ್ಮಜ ಕುಂತಿ ವಕೋದರ |
ರ್ಗಂ ಮಣಿದಾ ಪಾರ್ಥನೇಳಲಾ ದ್ವಿಜನಸಭೆಯಿಂ ||
ತಮ್ಮೊಳಗೀಕ್ಷಿಸಿ ವಿಪ್ರಕು |
ಲಮ್ಮಾಣದೆ ಪೇಳ್ದರಿಂದ್ರಸುತನೊಡನಾಗಳ್ ||360||

ರಾಗ ಘಂಟಾರವ ಅಷ್ಟತಾಳ

ಏನು ಸಿದ್ಧಿವುಪಾಧ್ಯರೆದ್ದಿರಿ ಮಝ | ಹೀನ ಧನುವಿಂಗಲ್ಲದೇ ತಾ |
ನೇನು ಮನದಂಗವಣೆಯೊ ||
ಮಾನೀಮಣಿಯನು ಬಯಸಿದಿರೆ ಮ |
ಹಾನುಭಾವರು ತಾವಸಾಧ್ಯವ | ದೇನು ತಮಗೀ ಜಗದೊಳು ||361||

ಮದುವೆ ಬೇಕೆನೆ ಶ್ರೋತ್ರಿಯ ವಿಪ್ರವ | ರ್ಗದಲಿ ಕನ್ಯಾರ್ಥಿಗಳು ನಾವೆಂ |
ದೊದಗಿರುವ ಕುಲವಿದ್ಯದಿ ||
ಹೆದರದೀವುದು ನೀವು ಪರೀಕ್ಷೆಯ |
ನಿದು ಸುಖವು ನಿಮಗಲ್ಲದಿನ್ನಿಂ |
ತಿದು ಭಗೀರಥಯತ್ನವು ||362||

ಎನಲು ಪಾರ್ಥನೆಂದನು ನೀವು ಸೈರಿಸಿ | ವಿನುತ ನಿಮ್ಮ ಕಪಾಕಟಾಕ್ಷವ |
ದೆನಗಿಹುದು ನೀವು ಪರಸಿದ ||
ಘನತರಾಶೀರ್ವಾದದ ಶಕ್ತಿಯಿಂದ ಸಂ |
ಜನಿತ ಜಯರಾವೇನು ಘನವೀ | ಧನುವೆನಲು ಬಳಿಕೆಂದರು ||363||

ರಾಗ ಮಾರವಿ ಏಕತಾಳ

ಪಂಡಿತ ಜಟೆಘನಪಾಠಕರಿರ ನೀವು | ಕುಂಡಲದೀಕ್ಷಿತರು ||
ಕಂಡಿರೆನೀವಿವನುಭ್ರಮೆಯೊಳು ಕೈ | ಗೊಂಡಿಹ ಕಾರ್ಯವನು ||364||

ಮಹಿಯಮರರಿಗೇತಕೆ ಕ್ಷತ್ರಿಯರವೋ | ಲಹಹ ಶರವ್ಯಸನ ||
ತಹನಿವ ಶ್ರೋತ್ರಿಯವರ್ಗಕೆ ಹಳಿವನು | ಬಹು ಮಾತೇನಿಹುದು ||365||

ವಾರ್ಧಕ

ಕೆಲರೆಂದರೆಲವೊ ಹೋಗದಿರೆನುತ ಮೇಣು ಕೆಲ |
ರೊಲಿದು ತಾನೇ ಬಲ್ಲನೆಂದರದರೊಳ್ ಕೆಲರು |
ಸಲೆ ವಿಪ್ರಕುಲಕಾದುದವಮಾನವೆಂದರ್ ಕೆಲರ್ ತಪ್ಪದೇನೆಮಗೆಂದರು ||
ಕೆಲರು ಭದ್ರಾಂಗನುರು ಭಾಗ್ಯಮುಖನೀತ ನಿಂ |
ಗಳುಕುವುದು ಧನುವೆಂದು ಪೇಳುತಿಹ ಬ್ರಹ್ಮಸಭೆ |
ಯೊಳು ಮೆಲ್ಲ ಮೆಲ್ಲನೈತರುತಿರ್ದನೇನೆಂಬೆನಾ ಸವ್ಯಸಾಚಿಯಂದು ||366||