ರಾಗ ಮಾರವಿ ಏಕತಾಳ

ತಿರುಗಿ ಸಕಲ ನಪರೀಕ್ಷಿಸುತಿವನನು |
ಬಿರುನೆಯಿಂದುಸಿರಿದರು ||
ಮರುಳೊ ಜಡನೊ ಬಹನಾರೀತನು ಭೂ |
ಸುರವೇಷದ ಸುರಪತಿಯೊ ||367||

ನಾವೇ ಮರುಳುಗಳಕಟ ಮನ್ಮಥನ ಶ |
ರಾವಳಿಯೆಸುಗೆಗಳುಕದ ||
ಭಾವಿಕರಾರೆಂದರು ಭೂಪಾಲರು |
ತಾವು ಮನದಿ ನಗುತ ||368||

ಧನುವ ನೆಗಹುವಡೆ ಶಾಲಗ್ರಾಮವೊ |
ಕೊನೆದರ್ಭೆಯೊ ಸಮಿಧೆಗಳೊ ||
ವಿನುತದುಪಾಸನಸವನಿಯೊ ಮಝರೆಂ |
ದೆನುತಿರ್ದರು ನಪತಿಗಳು ||369||

ರಾಗ ತೋಡಿ ಅಷ್ಟತಾಳ

ಮುಂದೈದುತಿಹ ಪಾರ್ಥನಂದವೀಕ್ಷಿಸಿ ಸಖಿ |
ವಂದ ದ್ರೌಪದಿಯೊಡನೆ ||
ಎಂದರು ನೋಡೆಲೆ ಚಂದಿರಮುಖಿ ನವ |
ಕಂದರ್ಪನೀತನಲ್ಲೆ  ||370||

ಕುಲದಲುತ್ತಮನೈಸೆ ವಿಪ್ರನು ಮತ್ತಿವ |
ನಳುಕದೆ ಧನುವನೆತ್ತೆ ||
ಸಲೆ ಮತ್ಸ್ಯಯಂತ್ರವನೆಸುವ ಗಡೆಂದರು |
ಒಲಿದು ದ್ರೌಪದಿಯೊಡನೆ ||371||

ಎನೆ ಕೇಳಿ ತಲೆಗುತ್ತಿ ನಾಚಿಯುಂಗುಟದಿ ಮೇ |
ದಿನಿಯನ್ನು ಬರೆಯುತಿರೆ ||
ವನಿತೆ ನೋಡಮಲ ವಿಭೂತಿಯ ಸ್ಮರದರ್ಭೆ |
ಯಿನಿತೆಲ್ಲ ಬೇಗೆಂದರು ||372||

ಚೆಲುವ ಮನ್ಮಥ ಧೋತ್ರದಮಲ ಕಷ್ಣಾಜಿನ |
ದಲರಂಬ ನೋಡೆ ನಿನ್ನ ||
ಒಲಿಸುವನೀಗಲೆ ನಾಚಿಕೆಯಾದರೆ |
ತಲೆವಿಡಿದಪೆವೆಂದರು ||373||

ಇದೊ ನೋಡು ವೀರ ಹಲಾಯುಧ ವಿಪ್ರಮ |
ಧ್ಯದಿ ಬಹ ಪಾರ್ಥನನು ||
ವಿದಿತ ಮೇಘದ ಹೊದಕೆಯ ರವಿಯದೆ ವಿಪ್ರಾಂ |
ಗದ ಸವ್ಯಸಾಚಿಯನು  ||374||

ವಸುದೇವನಾಣೆ ತೋರುವೆನೆಂದ ಮಾತಿಗೆ |
ಹುಸಿದೆನೆ ನೋಡು ಹಿಂದೆ ||
ವಸುಧೆಪಾಲಕ ಭೀಮಾದ್ಯರು ಕುಂತಿ ಸಹ ವಿಪ್ರ |
ವಿಸರದೊಳಿಹರೆಂದನು ||375||

ಭಾಮಿನಿ

ಮದನಪಿತನಿಂತೆನಲು ಸೀರಾ |
ಯುಧನು ನಸುನಗುತೆಂದನೆಂತಿದ |
ರುದಿತವನು ತಿಳಿದಿರ್ಪೆ ಬಹುಮಾಯಕನು ನೀನೆನುತ ||
ಮುದದಿ ಫಲುಗುಣನಿತ್ತ ವಿಪ್ರರ |
ಸುದತಿಯರ ಭೂಭುಜರ ಘನ ಹಾ |
ಸ್ಯದ ನುಡಿಯನಾಲಿಸುತ ಬರುತಿರ್ದನು ಸಭಾಂತರದಿ ||376||

ರಾಗ ಭೈರವಿ ತ್ರಿವುಡೆತಾಳ

ಬರುತ ಭೀಷ್ಮ ದ್ರೋಣ ಕೃಪರಿಂ | ಗೆರಗಿ ಮನದಲಿ ಯಾದವೇಂದ್ರಂ |
ಗಿರದೆ ನೇತ್ರದಿ ನಮಿಸಿ ಶಕ್ರಾ | ದ್ಯರಿಗೆ ಗುಹಗಣನಾಥ ದಿಕ್ಪಾ |
ಲರಿಗೆ ರುದ್ರಾದಿತ್ಯ ವಸು ಮು | ಖ್ಯರಿಗೆ ವಂದಿಸಿ ಬಂದನಗ್ಗದ |
ಧರಣಿಪಾಲರ ಮಾನಭಂಗವ | ವಿರಚಿದ ಧನುವಿರ್ದ ಬಳಿಗದ |
ನೇನನೆಂಬೆ | ಚೋದ್ಯವ | ನೇನನೆಂಬೆ ||377||

ಮೊದಲಲಂಬುಜಭವನನಾ ಮ | ಧ್ಯದಿ ಮಧುಸೂದನನ ಬಿಲು |
ತುದಿಯಲಾವಾಹಿಸಿ ಮಹೇಶನ | ನಿದು ಮಹಾ ಭೂಮಿಪರ ಬಿಂಕವ |
ನೊದೆದ ಧನುವೇ ಪೂತುರೆನುತೆ | ತ್ತಿದನು ಬಾಗುತ ತುತ್ತ ಬೆರಳಲಿ |
ಸದರವಲ್ಲಾ ಚಾಪವೆಂದೆನು | ತೊದರಿ ತಿರುವಿಂಗೇರಿಸಿದನದ |
ನೇನನೆಂಬೆ | ಸಾಹಸ | ವೇನನೆಂಬೆ ||378||

ತೆಗೆದು ಶರ ಪಂಚಕವನಾ ಧನು | ವಿಗೆ ಸರಾಗದಿ ಪೂಡಿ ಕಿವಿವರೆ |
ಗುಗಿದ ಯಂತ್ರದ ಹೊಳವನೀಕ್ಷಿಸಿ | ಮೊಗಸಿ ಬೀಳೆನುತೆಚ್ಚು ಕೆಡಹಲು |
ಹೊಗಳಿದರು ಮಝಪೂತುರೆಂದನು | ತಗಲದಲಿ ಜನಜಾಲವಮರರು |
ಗಗನದಲಿ ಪೂಮಳೆಯ ಕರೆದರು | ಸೊಗಯಿಸುವ ದುಂದುಭಿಯ ರವಮಿಗಿ |
ಲೇನನೆಂಬೆ | ಹರುಷವ | ನೇನನೆಂಬೆ ||379||

ವಾರ್ಧಕ

ಹಾಯೆನುತ ಕುಣಿದಾಡಿದರ್ ವಿಪ್ರರಬಲೆ ನಿ |
ರ್ದಾಯದಿಂ ಪಾರ್ವಂಗೆ ಸೇರಿದಳೆನುತ್ತ  ಮೇಣ್ |
ರಾಯಸಭೆಯೈದೆ ಬೆರಗಾಗಿ ಮೂಗಿನ ಬೆರಳೊಳ್ ಕುಳ್ಳಿರ್ದರ್ ಮೌನದಿಂದ ||
ಪ್ರೀಯದ ವಿಲಾಸಿನಿಯ ಜನವೆಸೆಯುತಿರೆ ಸುತ್ತ |
ಲಾಯೆಡೆಗೆ ಬಳುಕುತ್ತ ಪಾಂಚಾಲೆಯೈತಂದು |
ಘೇಯೆನಲು ಸುರನಿಕರವರ್ಜುನನ ಕೊರಳಿಗಿಕ್ಕಿದಳು ಸುಮಮಾಲಿಕೆಯನು ||380||

ಭಾಮಿನಿ

ಹತ್ತು ಸಾವಿರ ಕಂಚುಕಿಗಳುರೆ |
ಕಿತ್ತಡಾಯುಧದಿಂದ ಸುತ್ತಲು |
ಮುತ್ತಿರಲು ಮೈಗಾವಲಿಂ ಪಾರ್ಥನನು ಸತಿ ಸಹಿತ ||
ಸತ್ಕರದಲರಮನೆಗೆ ಕರೆತರ |
ಲಿತ್ತ ಖತಿಯಲಿ ಕುರುನಪಾಲಕ |
ನುತ್ತಮಾಂಗವ ತೂಗುತೆಂದನು ತನ್ನವರೊಳಂದು ||381||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಂಡಿರೇ ಪಾಂಚಾಲನಪನು | ದ್ದಂಡತನವನು ಸಕಲ ಪಥ್ವೀ |
ಮಂಡಲೇಶರ ಮಾನವನು ಸಲೆ | ಖಂಡಿಸಿದುದ ||382||

ಹುಲು ಧನುವನುರೆ ನೆಗಹಿ ಹಾರುವ | ಗೆಲಿದ ಗಡ ಯಂತ್ರವನು ಮತ್ತವ |
ಗೊಲಿದು ಮದುವೆಯ ಮಾಳ್ಪ ಗಡ ಸುತೆ | ಯಳನು ಭರದಿ ||383||

ಅಳಿಯನಾಗಲಿ ದ್ರುಪದನಿಗೆ ಕಿರುಕುಳಿಯು ನೀವಿನ್ನವನ ಲಲನೆಗೆ |
ಬಳುವಳಿಯ ಕೊಡಿ ನಿಮ್ಮ ಹೆಂಡಿರ | ನೊಲಿದು ಬೇಗ ||384||

ವಾಸಿಯುಳ್ಳಡೆ ಗೆಲಿದು ನಪನನು | ಭೂಸುರನ ತಿರಿದುಣಲು ಕಳುಹಿ ವಿ |
ಲಾಸಿನಿಯರೊಳು ಕೂಡಿಸುವುದವ | ನಾ ಸುದತಿಯ ||385||

ರಾಗ ಮಾರವಿ ಏಕತಾಳ

ಕುರುಪತಿಯೀಪರಿ ಜರೆದುನುಡಿಯೆ ಕೇಳ್ದ |
ರಿಮಸಗುತ ನಪವರರೆಲ್ಲರು ಖತಿ |
ವೆರಸಿಯೆ ದ್ರುಪದನ ಪುರವನು ಮುತ್ತಿದ |
ರರರೆ ಕವಿಯೆನುತಲುರು ಸಂಭ್ರಮದಿ | ಕೇಳೈ ಭೂಪ ||386||

ಕೂಡೆ ಭಯದಿ ಹರಿದೋಡಿತು ದ್ವಿಜಸಭೆ |
ಗಾಢದಲಾವಿಗೆಕೂಡಿದ ತಮ್ಮಯ |
ಬೀಡನು ಪಾಂಡವರೂಢಿಪರೈದುತ |
ನೋಡುತಲಿರ್ದರು ಗೂಢದಲಿದನು | ಕೇಳೈಭೂಪ ||387||

ರಾಗ ಶಂಕರಾಭರಣ ಮಟ್ಟೆತಾಳ

ಇತ್ತ ಸಕಲ ನಪರ ಕಟಕ | ಮುತ್ತೆ ಕಂಡು ದ್ರುಪದ ಸೇನೆ |
ಯಿತ್ತುದವರೊಳಾಹವವನು | ಸತ್ತ್ವದಿಂದಲಿ ||
ಹತ್ತಗೊಡದಿರಿರಿಯಿತಿವಿಯೆ | ನುತ್ತ ಶೂಲ ಸಬಳ ಕುಂತ |
ಕಿತ್ತ ಖಡುಗಗಳಲಿ ಹೊಯ್ದ | ರೆತ್ತಿ ಸುಭಟರು  ||388||

ಚೂಣಿಯಲ್ಲಿ ದಳವು ಮುರಿಯೆ | ಕಾಣುತಿನಜ ಶಲ್ಯ ಮುಖ್ಯ |
ರೂಣೆಯಿಲ್ಲದಳವಿಗೊಟ್ಟ | ರೇನನೆಂಬೆನು ||
ಸಾಣೆಯಂಬನೆಚ್ಚು ಗಾಯ | ಗಾಣಿಸುತ್ತ ರಿಪುಭಟರನು |
ಹೂಣೆಹೊಕ್ಕು ಹೊಯ್ದರಾಗ | ಕ್ಷಿಣಸತ್ತ್ವದಿ ||389||

ಕಂದ

ಕೊತ್ತಳವಂ ಮುರಿದೊಳಗೆ ಪೊ |
ಗುತ್ತಿರೆ ರಿಪುರಾಯಕಟಕವೀಕ್ಷಿಸಿ ಚಾರರ್ ||
ಮತ್ತಾ ಪಾಂಚಾಲಂಗೀ |
ವತ್ತಾಂತವನೈದೆ ಪೇಳ್ದರತಿವೇಗದೊಳಂ ||390||

ರಾಗ ಮುಖಾರಿ ಏಕತಾಳ

ಲಾಲಿಸು ಬಿನ್ನಪವ ರಾಯ | ರಣದೊಳು ಜೀಯ |
ಲಾಲಿಸು ಬಿನ್ನಪವ ರಾಯ || ಪಲ್ಲವಿ ||

ಕೊತ್ತಳವನ್ನೆ ಮುರಿದಿಕ್ಕಿ | ಪುರದ ಬೀದಿಯೊ |
ಳೊತ್ತಿ ಬಂದರು ಮದ ಸೊಕ್ಕಿ ||
ಸುತ್ತಲು ನಪರಕಟ | ಕೊತ್ತರವಾಗಿದೆ  ಪ್ರಸ್ತದ ಬೀಯಗ | ರಿತ್ತುಪಚರಿಸುವ
ದರ್ತಿಯನೀಗಳೆ | ಹತ್ತಿರವಳಿಯನ | ಬಿತ್ತರದೀಕ್ಷಣ | ಮತ್ತಾಗುವದೈ ||391||

ಭಾಮಿನಿ

ಚರರ ನುಡಿಯನು ಕೇಳಿ ಪಾರ್ಥನು |
ಕೆರಳಿ ತರಹೇಳ್ ಬಿಲುಸರಳ್ಗಳ |
ನರಿಯಬಹುದೆನ್ನಂಗವಣೆಯನೆನುತ್ತ ಸೂಟಿಯಲಿ ||
ವರ ನಿಷಂಗಶರಾಸ ಚಾಪಾ |
ದ್ಯುರುತರದ ಸನ್ನಾಹವೆರಸಿಯೆ |
ಭರದಿ ರಥವೇರ್ದಾಹವಕೆ ಪೊರಮಟ್ಟನಾ ಕ್ಷಣಕೆ ||392||

ಕಂದ

ಒಂದೆಸೆಯೊಳ್ ಭೀಮಂ ಕಡು |
ಪಿಂದಂ ಪೆರ್ಮರನ ಮುರಿದುೊಂಡರಿಬಲಮಂ ||
ಹಿಂದುಳಿಯದೆ ಹೊಯ್ವುತಲೈ |
ತಂದನದೇನನೆಂಬೆನಾಚೆಗೆ ಕಾಳಗಮಂ ||393||

ರಾಗ ಪಂಚಾಗತಿ ಮಟ್ಟೆತಾಳ

ವೀರ ಪಾರ್ಥನು | ವೈರಿದಳವನು ||
ಮೀರಗೊಡದೆ ತರುಬಿ ಸರಳ | ಮಳೆಯ ಕರೆದನು ||394||

ಸುರಪಸೂನುವ | ಸರಳ ಸಾರವ ||
ಧರಿಸಲಾರದರಿನಪೌಘ | ವೆರೆಯೆ ಚೋದ್ಯವ ||395||

ಕಂಡು ರವಿಜನು | ಚಂಡ ಧನುವನು ||
ಕೊಂಡು ಸವ್ಯಸಾಚಿಯನ್ನು | ತರುಬಿ ನುಡಿದನು ||396||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲವೊ ಹಾರುವ ಹುಲು ಧನುವನು | ಎತ್ತಿ |
ಗೆಲಿದೆ ಯಂತ್ರವನೆನ್ನುತಲಿ ನೀನು ||
ಸಲೆ ಗರ್ವಗೊಳದಿರೀಕ್ಷಣದೊಳು | ನಿನ್ನ |
ತಲೆಯ ಚೆಂಡಾಡುವೆ ರಣದೊಳು ||397||

ನುಡಿಯ ಬಿಂಕಕೆ ಹೆದರುವರಿಲ್ಲ | ನಿನ್ನೊಳ್ |
ಕಡುಹಿರ್ದಡೀಗ ತೋರುವುದೆಲ್ಲ ||
ಬಿಡೆಯವೇಕೆನುತಲಿ ಪಾರ್ಥನು | ಬಾಣ |
ಗಡಣವ ಕೆದರ್ದನೇನೆಂಬೆನು ||398||

ನರನ ಶರೌಘಸಾರವನಂದು | ತಾಳ |
ಲರಿಯದೆ ರಾಧೇಯನುರೆ ನೊಂದು ||
ಧುರದಿ ಪಲಾಯನದೀಕ್ಷೆಯ | ನಾಂತ |
ನಿರದೆ ಬೆಂಬತ್ತಲು ಕೌಂತೇಯ ||399||

ರಾಗ ಶಂಕರಾಭರಣ ಮಟ್ಟೆತಾಳ

ಇತ್ತ ಭೀಮಸೇನನರಿಗಳನ್ನು ತರುವಿಲಿ |
ಎತ್ತಿ ಚೆಲ್ಲ ಬಡಿಯುತೈ ತರಲ್ಕೆ ರಣದಲಿ ||
ಸತ್ತ್ವದಿಂದ ತಡೆಯುತೊಡನೆ ಶಲ್ಯಭೂಪನು |
ಬಿತ್ತರದಲಿ ಸರಳ ಮಳೆಯ ಸುರಿಯುತೆಂದನು ||400||

ಎಲವೊ ವಿಪ್ರ ಕೇಳು ನಮ್ಮ ಬಲವನೆಲ್ಲವ |
ಗೆಲಿದೆನೆಂಬ ಗರ್ವ ಬೇಡ ನಿನ್ನ ಸತ್ತ್ವವ ||
ನಿಲಿಸದಿರಲದೆಂತು ಶಲ್ಯನಹೆನು ತಾನೆನೆ |
ಉಲಿದು ಪವನಜಾತನೆಂದನವನೊಳೊಯ್ಯನೆ  ||401||

ಕಣ್ಣು ಮೂರೊ ತಲೆಗಳೈದೊ ಶಲ್ಯನಾದರೆ |
ಗಣ್ಯವೆನಗಿದಲ್ಲವೆಲವೊ ನಿನಗೆ ಸೋತರೆ ||
ಹೆಣ್ಣು ತಾನದೈಸೆ ನೋಡೆನುತ್ತ ಭೀಮನು |
ಬಣ್ಣಗುಂದುವಂತೆ ಹೆಮ್ಮರದಿ ಹೊಯ್ದನು ||402||

ವಾರ್ಧಕ

ಮಾರುತಿಯ ಮರನ ಹೊಯ್ಲಿಂದ ಮಾದ್ರಾಧಿಪಂ |
ಸಾರಥಿ ರಥಾಶ್ವಗಳ್ ಪುಡಿಯಾಗಿ ಭಯದಿ ಹೊರ |
ಸಾರಿ ಬೆಂಗೊಟ್ಟೋಡಿದಂ ಭೀಮನೊಡನೆ ಬೆಂಬತ್ತಿದಂ ಸಾಹಸದೊಳು ||
ಸೂರ್ಯಸುತನಿತ್ತಲರ್ಜುನನಿಂ ಪರಾಭವಕೆ |
ಸೇರಿ ಕಡು ದುಮ್ಮಾನದಿಂದಲೈತಂದು ಕುರು |
ವೀರನಂ ಕಾಣುತ್ತ ನುಡಿದನೀ ತೆರದೊಳಂ ಭೂಪ ಕೇಳ್ ಕೌತುಕವನು ||403||

ರಾಗ ಸಾವೇರಿ ಅಷ್ಟತಾಳ

ಕುರುವರ್ಯ ಕೇಳೆನ್ನ ಮಾತ | ನಿನ್ನೊ |
ಳರುಹುವೆನೊಂದು ಪ್ರಖ್ಯಾತ || ಪಲ್ಲವಿ ||

ಬೆದರದಿನ್ನಾವು ಕಾದಿದರೆ | ವಿಪ್ರ | ವಧೆ ದೊರೆಯದೆ ಮಾಣದಲ್ಲದೆ ಬೇರೆ ||
ಅದರಿಂದಲೆಮ್ಮಯ | ಸದನಕೈದುವ ಕೇ |
ಳಿದರಿಂದೇನವಮಾನ | ವೊದಗಿರ್ದುದೊದಗಲಿ ||404||

ಪಡಿಬಲ ಸಹಿತ ನಾವಿನ್ನು | ಬಂದು | ಪೊಡವಿಪ ದ್ರುಪದರಾಯನನು ||
ಪಿಡಿದು ಯುದ್ಧದಿ ಜವ | ಗೆಡಿಸಬೇಕೀಗೆನ್ನ |
ನುಡಿಗೊಪ್ಪಿ ಪುರಕಾಗಿ | ನಡೆವುದೆ ಹಿತವಿದು ||405||

ವಾರ್ಧಕ

ಭೂಮಿಪತಿ ಲಾಲಿಸಿಂತೆಂದು ಕುರುವರ್ಯನಂ |
ಸಾಮದಿಂದೊಡಗೊಂಡು ಕರ್ಣನೈದಿದನಿತ್ತ |
ಭೀಮನಾ ಶಲ್ಯನಂ ಸಲೆ ಪರಾಭವಿಸಿ ಸಾರ್ದಂ ಕುಲಾಲಗಹವನು ||
ತಾಮರಸಬಾಂಧವಕುಮಾರಕನನತ್ತ ಸಂ |
ಗ್ರಾಮದೊಳ್ ಬೆಂಬತ್ತಿ ಮರಳಿ ದ್ರುಪದಜೆಯೆಡೆಗೆ |
ಪ್ರೇಮದಿಂದೈತಂದು ಫಲುಗುಣಂ ನುಡಿದನೇಕಾಂತದೊಳಗಂದು ಮುದದಿ ||406||

ರಾಗ ತೋಡಿ ಅಷ್ಟತಾಳ

ವಾರಿಜಮುಖಿ ಕೇಳು ಬಾರೆನ್ನ ಸಂಗಡ | ಮೀರದೀ ವಚನವನು ||
ಕಾರಿಯ ಲೇಸಹುದಿದರಿಂದಲೆನುತಲೆ | ವೀರ ಪಾರ್ಥನು ಪೇಳ್ದನು ||407||

ಕಾಂತ ಸದ್ಗುಣವಂತ ಬರುವೆನು ನಿನ್ನೊಡ | ನಂತರವಿಲ್ಲಿದಕೆ ||
ಕಂತು ಸನ್ನಿಭನೆ ಚಿತ್ತವಿಸಬೇಕೆನುತಲಿ | ಕಾಂತೆ ಬಿನ್ನವಿಸಿದಳು ||408||

ರಾಗ ಸಾಂಗತ್ಯ ರೂಪಕತಾಳ

ಅವನೀಂದ್ರ ಕೇಳ್ ಬಳಿಕಬಲೆಯನೊಡಗೊಂಡು |
ದಿವಿಜೇಂದ್ರ ಸೂನುವಾಕ್ಷಣದಿ ||
ತವಕದಿ ನಡೆತಂದನಾ ಕುಂಭಕಾರರ |
ಭವನವಿರ್ದೆಡೆಗಾಗಿ ಭರದಿ ||409||

ಚಂದಿರಮುಖಿಯನಾ ಭವನದ ಪೊರಗಿಟ್ಟು |
ಬಂದುಮಾತೆಯ ಪಾದಕೆರಗಿ ||
ತಂದೆನು ದಿವ್ಯ ಮೌಕ್ತಿಕವನು ಭೂಪಾಲ |
ವಂದವ ಗೆಲಿದು ತಾನೆಂದ ||410||

ಎನೆ ಹರುಷದಿ ನುಡಿತೊದಲಿಸಲೊಳಿ ತಾಯಿ |
ತನುವಿಂದೈವರು ಸಮವಾಗಿ ||
ವಿನಯದಿ ಭೋಗಿಪುದೆನಲು ಹಸಾದವೆಂ |
ದನು ಪಾರ್ಥ ಕುಂತಿಯ ನುಡಿಗೆ ||411||

ಬಳಿಕ ದ್ರೌಪದಿಯನ್ನು ಕರೆತಂದು ಮಾತೆಗೆ |
ಫಲುಗುಣನುರೆ ಪೊಡಮಡಿಸೆ ||
ಜಲರುಹ ನೇತ್ರೆಯ ಪಿಡಿದೆತ್ತಿ ನುಡಿದಳು |
ತಳವೆಳಗಾಗುತ್ತ ಪಥೆಯು ||412||

ರಾಗ ನೀಲಾಂಬರಿ ಆದಿತಾಳ

ಏನಿದು ಪೇಳೊ ಕಂದ | ತಂದ ಮೌಕ್ತಿಕವು |
ನೀನಿದ ಸುಗುಣ ವಂದ ||
ಈ ನಾರಿಮಣಿಯ ನೀವೆಲ್ಲ | ಸಮನಿಂದೈವರು |
ಮೇಣಾಳ್ವಂತಾದುದಲ್ಲ ||413||

ನುಡಿ ತೊದಲಿಸಿತೆನಗೆ | ಐವರು ಸಮ |
ವಡೆದುವಿ ನೀವೆಂತು ಹೀಗೆ ||
ಮಡದಿಯೊರ್ವಳನು ಇನ್ನು | ಆಳುವಿರೆನ |
ಲೊಡನೆಂದನಾ ಪಾರ್ಥನು ||414||

ರಾಗ ಘಂಟಾರವ ಏಕತಾಳ

ಮಾತೆ ನಿಮ್ಮಂು ನುಡಿ ತಪ್ಪಲರಿವುದುಂಟೆ |
ಮಾತೇನು ಹಲವು ನಾವೈವರಿಗಿನ್ನು ||
ಈ ತಳೋದರಿ ವಧುವಾಳು ತವ ವಾಕ್ಯ |
ಪಾಥೋಧಿಯೆಮಗೆಯಲಂಘ್ಯವದೈಸೆ ||415||

ಎನೆ ಕೇಳ್ದು ಪಾರ್ಥನ ನುಡಿಗೆ ಧರ್ಮಜ ನೈದೆ |
ಕನಲ್ದನು ಭೀಮನಲ್ಲೆಂದು ಪೇಳಿದನು ||
ಅನುಚಿತವೆಂದರು ಮಾದ್ರೇಯರದಕೆ ಮ |
ತ್ತನುನಯದಿಂದವರ್ಗೆಂದನಾ ನರನು ||416||

ರಾಗ ತೋಡಿ ತ್ರಿವುಡೆತಾಳ

ಬಲ್ಲವರು ನೀವಖಿಳವನು ಮೇ | ಣೆಲ್ಲ ಶಾಸ್ತ್ರ ಪುರಾಣ ವೇದಗ |
ಳಲ್ಲಿ ಸಾರಾಂಸವನು ನೋಡಲ್ಕೆ ||
ಇಲ್ಲ ತಾಯಿಂದಧಿಕವಾಕೆಯ | ಸೊಲ್ಲು ತತ್ಸುತರಿಂಗಲಂಘ್ಯವು |
ತಲ್ಲಣವದೇಕದಕೆ ನಿಮಗಿಂತು ||417||

ರಾಗಲೋಭಗಳಿಂದಲುರೆ ನೀ | ವೀ ಗರುವೆಗಳುಪಿದರೆ ಸದ್ಧಿ |
ರ್ಮಾಗಮವ ರಚಿವುದೆಯನುಷ್ಠಾನ ||
ಈಗಳೀ ಗುರ್ವಚನ ಕರ್ಮ | ತ್ಯಾಗ ನಮಗಿದು ಧರ್ಮವೇ ಉಪ |
ಭೋಗವೈವರಿಗೆಂದು ತಿಳುಹಿದನು ||418||

ನಾಡಮಾತಿಂದೇನು ಶಾಸ್ತ್ರದ | ಗೂಢವನು ತಿಳಿದರ್ಗೆ ಸುಮ್ಮನೆ |
ಮಾಡದಿರಿ ಸಂಶಯವ ನೀವಿದಕೆ ||
ಗೂಡು ಹಲವಿಹ ಪಕ್ಷಿಯೊಂದರ | ರೂಢಿಯೆಮ್ಮದು ಸಾಕಿದಕೆ ಖಯ |
ಖೋಡಿಯಿಲೆಂದುಸಿರಿದನು ಪಾರ್ಥ ||419||

ವಾರ್ಧಕ

ಭೂಧವನೆ ಲಾಲಿಸೈ ಮಗುಳವರಿಗೆಲ್ಲರಿಂ |
ಗಾದುದೊಂದೇ ಮತಂ ಬಳಿಕೈವರೊಲವಿನಿಂ |
ದಾ ದ್ರುಪದಸುತೆಯನಂಗೀಕರಿಸೆ ದಿನಪನಿತ್ತ ಪಶ್ಚಿಮಾಂಬುಧಿ ಸೇರಲು ||
ಸಾದರದಿ ಸಂಧ್ಯಾದಿಕವನೆಸಗಿ ಮುರಹರನ |
ಪಾದಯುಗಮಂ ಸ್ಮರಿಸಿ ಮಾತೆಯಂಘ್ರಿಗೆಯೆರಗಿ |
ಆ ದಿನದ ರಾತ್ರಿಯೊಳ್ ಮಲಗಿ ಮಾತಾಡುತಿರ್ದರ್ ತಮ್ಮೊಳೊಲಿಯುತವರು ||420||

ಫಲುಗುಣಂ ಧರ್ಮಜನೊಳೆಂದನಂದಿನ ದಿನದ |
ಕಲಹದೊಳು ಕರ್ಣಾದ್ಯರಂ ಗೆಲಿದು ಗಜತುರಗ |
ದಳವೆಲ್ಲವಂ ಪರಾಭವಿಸಿದಾ ಪದ್ಧತಿಯನಾಯುಧದ ಲಕ್ಷಣವನು ||
ಹಲವು ನಪಧರ್ಮಮತ ಪೇಳುತ್ತಲಿವರು ಕ |
ತ್ತಲೆಯ ನೂಕುತ್ತಲಿರಲಲ್ಲಿವರ ಬೇವನರಿ |
ಯಲು ಬಂದು ನಿಂದು ಮರೆಯೊಳ್ ಕೇಳುತಿರ್ದನಾ ವೇಳೆ ಧಷ್ಟದ್ಯುಮ್ನನು ||421||

ಕಂದ

ಮೆಲ್ಲನೆ ಮರೆಯೊಳ್‌ನಿಂದಿದ |
ನೆಲ್ಲವನುಂ ಕೇಳ್ದು ಬಂದಾ ಧಷ್ಟದ್ಯುಮ್ನಂ ||
ಸೊಲ್ಲಿಸಿದಂ ಸ್ನೇಹದಿ ಭೂ |
ವಲ್ಲಭನಹ ದ್ರುಪದನೊಡನೆ ಸಾಂಗದೊಳಾಗಳ್ ||422||

ರಾಗ ಪಂತುವರಾಳಿ ಏಕತಾಳ

ಜನಕ ಕೇಳೈ ನಿನ್ನಿನಿರುಳು ಮುನಿರಾಯ ಕಾಶ್ಯಪರ |
ಅನುವಿನಿಂದ ಪೋಗಿ ತಿಳಿದೆನಿನಿತುವೆಲ್ಲ ವಿವರ ||
ಜನಪಾಲಕರಾಗಿ ತೋರುವರೆನಗೆ ನೋಡಲವರು |
ವಿನುತ ವಿಪ್ರರಹರೆ ಸದ್ಭೋಜನವಾರ್ತೆ ಪೇಳುವರು ||423||

ಮತ್ತೆ ದ್ವಿಜರಾಗಿರಲು ವೇದದರ್ಥ ತರ್ಕಾದಿಗಳ |
ಅರ್ಥದಿಂದ ಕಳೆಯಲಿಹರೇಯರ್ತಿಯಿಂದಲಿರುಳ ||
ಪೃಥ್ವಿಪತಿ ಗಜಾದಿಹಯ ಶಸ್ತ್ರಾಸ್ತ್ರವಿದ್ಯಾಧಿಕದಿ |
ಹೊತ್ತುಗಳೆವರಾರೆಂದವರ ಚಿತ್ತವಿಸು ನೀ ಮನದಿ ||424||

ವಾರ್ಧಕ

ಅವನೀಂದ್ರ ಲಾಲಿಸೈ ಚಿಂತೆಯಿನ್ನೇತಕಿದ |
ಕವರು ಪಾರ್ಥಿವಜಾತಿಯೊಳ್ ಪರಿಕಿಸಲ್ಕೆ ಪಾಂ |
ಡವರು ಸಂಶಯ ಬೇಡ ಬೇಗದೊಳ್ ಕರೆತಂದು ಮನ್ನಿಸುವುದವರನೆನುತ ||
ವಿವರವರಿದುಸಿರೆ ಧಷ್ಟದ್ಯುಮ್ನನಮಲ ವಾ |
ಕ್ಯವನೈದೆ ಕೇಳ್ದು ಪರಿತೋಷದಿಂದಾ ನಪಂ |
ರವಿಯುದಯದೊಳ್ ಸಕಲ ಸನ್ನಾಹವೆರಸಿ ಪೊರಮಟ್ಟನವರಿರ್ಪ ಬಳಿಗೆ ||425||

ಭಾಮಿನಿ

ಬಂದು ಬಳಿಕ ಕುಲಾಲಭವನದ |
ಲಂದಿವರನೀಕ್ಷಿಸುತ ನಪಕುಲ |
ನಂದನರು ಸರಿಯೆಂಬುದನು ಮುಖಕಾಂತಿಯಿಂದರಿದು ||
ಅಂದ ಮಿಗೆ ಮನ್ನಿಸುತವರ ನಪ |
ಮಂದಿರಕೆ ಪರಮೋತ್ಸವದಿ ಕರೆ |
ತಂದನೈವರ ಪಥೆಸಹಿತ ದ್ರುಪದಾವನೀಶ್ವರನು ||426||

ರಾಗ ಕಾಂಭೋಜಿ ಝಂಪೆತಾಳ

ಬಳಿಕೈವರೊಲಿದು ಮಂಗಳ ಮಜ್ಜನವನೆಸಗಿ |
ಲಲಿತ ದಿವ್ಯಾಂಬರವ ನುಟ್ಟು ||
ಜ್ವಲಿತ ಸರ್ವಾಭರಣದಿಂದಲಂಕತಿವೆತ್ತು |
ಲಲನೆಯರ ಶೋಭಾನವೆರಸಿ ||427||

ಬಾಸಿಗದ ನೊಸಲಲೈವರು ಮಂಟಪದಲಿ ಮೇ |
ಲ್ವಾಸಿನಲಿ ಬಂದು ಕುಳ್ಳಿರಲು ||
ಆ ಸೊಸೆಯು ಸಹಿತ ಕುಂತಿಯು ಕೆಲದೊಳಿರೆ ಜನ ವಿ |
ಲಾಸವನು ಕಂಡು ಬೆರಗಾಯ್ತು  ||428||

ಜನವನಂಜಲಿಯಿಂದ ಕೊಂಡು ನಿಮ್ಮೈವರೊಳ |
ಗಳುಕದುರೆ ಮತ್ಸ್ಯಯಂತ್ರವನು ||
ಗೆಲಿದಾತನಾರು ಬರಲೆಂದು ದ್ರುಪದನು ನುಡಿಯ |
ಲಿಳಿದು ಬಂದನು ಭೂಪನೊಡನೆ ||429||

ಕೂಡೆ ಮಾರುತಿಯವನ ಸಂಗಡವಡೆ ಪಾರ್ಥನಾ |
ಗಾಢದಿಂ ಯಮಳರೈತರಲು ||
ನೋಡಿ ವಿಸ್ಮಯದಿ ಎವೆ ಹಳಚದರನು ನುಡಿದ |
ನೀಡಿ ಜಲವನು ಕೆಲಕೆ ನಪನು ||430||

ಆರು ನೀವಸುರರೋ ಸುರರೊ ಭುಜಗರೊ ದಿಟ ಮ |
ಹೀರಮಣಕುಲದಲುದಿಸಿದಿರೋ ||
ಬೇರೆ ಮಾನವ ಪರುಠವವದಲ್ಲವೆಂದನಾ |
ಧಾರಿಣೀಪತಿಯು ವಿಸ್ಮಯದಿ ||431||

ನರನಿವನು ಭೀಮನೀತನು ಯಮಳರಿವರೆಮಗೆ |
ಕಿರಿಯರೈ ನಾವು ಪಾಂಡವರು  ||
ವರ ಮಾತೆ ಕುಂತಿಯವಳೀ ತಳೋದರಿಯೈವ |
ರರಸಿಯಹಳೆಂದನಾಭೂಪ ||432||

ಕಂಡು ತಿಳಿಯೆವು ಕೇಳೆವು ಸ್ಮೃತಿ ಶಾಸ್ತ್ರ ಭೂ |
ಮಂಡಲ ವಿರೋಧವಿದು ತಿಳಿಯೆ ||
ಪಾಂಡುತನಯರು ಮಹಾತ್ಮರದೆಂಬರೇತಕೀ |
ಭಂಡತನ ನಿಮಗೆಂದನರಸ ||433||