ಕಾಮಮೋಹಿತರಲ್ಲ ವಿಷಯವಿಹ್ವಲರಲ್ಲ |
ವೀ ಮಹಾ ಮಾತೆಯಾಜ್ಞೆಯಲಿ ||
ಕಾಮಿನಿಗೆ ವರರಾದೆವಾವು ತಪ್ಪೇನೆಂದ |
ನಾ ಮಹೀಪಾಲ ಧರ್ಮಜನು ||434||

ಏಕಪತಿ ಬಹುಸತಿಯರಿಂಗೆಂದು ಪೇಳ್ವುದಿದು |
ಲೋಕಪದ್ಧತಿಯೊರ್ವ ಸತಿಗೆ ||
ಸಾಕು ತೆಗೆ ಪುರುಷಪಂಚಕವೆಂಬ ನುಡಿಗೆ ಕಿವಿ |
ಯೇಕರಿಸುತಿಹುದೆಂದನರಸ ||435||

ವಾರ್ಧಕ

ಧರಣಿಪತಿ ಲಾಲಿಸಾ ಸಮಯದೊಳ್ ವ್ಯಾಸಮುನಿ |
ವರನೈದಿ ದ್ರುಪದಾವನೀಶನ ಮನೋವ್ಯಥೆಯ |
ಪರಿಹರಿಸಲಾಗಿ ನಾರಾಯಣಾಹ್ವಯ ಮುನಿಯ ವತ್ತಾಂತವನ್ನು ಶಿವನು ||
ಭರದಿ ಮುಖವೈದರಿಂ ವರವಿತ್ತ ಕಾರಣವ |
ನುರುವ ಪಂಚೇಂದ್ರರ ಕಥಾಂತರವನೈದೆ ವಿ |
ಸ್ತರದಿಂದಲರುಹಿ ಸಂತೈಸಿದಂ ಪಾಂಡವರಿಗೀಕೆ ವಧುವಾದಳೆಂದು ||436||

ಭಾಮಿನಿ

ಬಳಿಕ ವಿಧ್ಯುಕ್ತದಿ ದ್ರುಪದನಪ |
ನೊಲಿದು ಪಾಂಚಾಲೆಯನು ವಿಪ್ರರ |
ಸುಲಲಿತಾಶೀರ್ವಾದ ಮಿಗೆ ಪಾವಕನ ಸಾಕ್ಷಿಯಲಿ ||
ಸಲಿಸಿದನು ವೈವಾಹವನು ಭೂ |
ವಳೆಯವಲ್ಲಭ ಪಾಂಡುಸುತರಿಂ |
ಗಲಘುತರದುತ್ಸವದಲೆಲೆ ಧರಣೀಶ ಕೇಳೆಂದ ||437||

ರಾಗ ಢವಳಾರ ತ್ರಿವುಡೆತಾಳ

ಆ ಸಮಯದಿ ಪಂಕಜಮುಖಿಯರು |
ಲೇಸಹ ಹಸೆಮಣೆಯನು ಬರೆದು ಮ |
ಹೀಶ ಪಾಂಡವರನೊಲವಿಂದ ||
ಒಲವಿಂದಲಿ ದ್ರೌಪದಿ ಸಹಿತ ವಿ |
ಲಾಸದಲಿ ಪಾಡಿ ಕರೆದರೆ || ಶೋಭಾನೆ ||438||

ಮಾಂದಳಿರನು ಪೋಲುವ ಕರದೊಳು |
ಕುಂದಣಮಯದ ಹರಿವಾಣದಲಿ |
ತಂದರು ರತುನಮಯವಾದ ||
ಮಯವಾದಾರತಿಯನು ಬೆಳಗಿದ |
ರಂದು ಶೋಭಾನರವಮಿಗೆ || ಶೋಭಾನೆ ||439||

ಯಮಧರ್ಮಕುಮಾರಗೆ ಭೀಮಗೆ |
ಸುಮನಸವಲ್ಲಭನಂದನಗೆ |
ಯಮಳರಿಗೆ ದ್ರುಪದಕುವರಿಗೆ ||
ಕುಮಾರಿಗೆ ಕುಂಜರಗಮನೆಯರು |
ಕಮಲದಾರತಿಯ ಬೆಳಗಿರೆ || ಶೋಭಾನೆ ||440||

ವಾರ್ಧಕ

ಇಂತು ವಿಭವದಿ ವಿವಾಹವು ನಾಗವಲ್ಲಿ ಪರಿ |
ಯಂತವೆಸೆದುದು ಭೂರಿ ದಕ್ಷಿಣೆ ಸುಭೋಜನಗ |
ಳಿಂ ತೋಷವೆತ್ತುದಖಿಳಾವನೀಸುರನಿಕರವೇನೆಂಬೆನಚ್ಚರಿಯನು ||
ದಂತಿ ಹಯ ಧನ ಕನಕ ರತ್ನ ಗೋವ್ ದಾಸಿಜನ |
ಮುಂತಾದ ವಸ್ತುವನಸಂಖ್ಯದಿಂ ಬಳುವಳಿಯ |
ನುಂ ತನ್ನ ಸುತೆಗಿತ್ತನಾ  ದ್ರುಪದಭೂಮಿಪಾಲಂ ಪರಮ ತೋಷದಿಂದ ||441||

ಭೂಧವನೆ ಕೇಳ್ ಬಳಿಕಮವರಿಂಗೆ ವೈವಾಹ |
ಮಾದ ವತ್ತಾಂತಮಂ ಕೇಳ್ದು ದಳಸಹಿತ ದು |
ರ್ಯೋಧನಂ ಪಾಂಚಾಲಪುರಿಗೆ ದಾಳಿಯನಿಡಲ್ಕಚ್ಯುತಂ ಪಾಂಡವರಿಗೆ  ||
ಯಾದವರ್ ಸಹಿತ ಬೆಂಬಲವಾಗಲರಿದದಂ |
ಮೇದಿನಿಪನಿವರೆಲ್ಲರಂ ಕರೆಸಿ ಗಜಪುರಿಗೆ |
ಮೋದಮಿಗೆ ಕೌಂತೇಯರೆಲ್ಲರಂ ಮನ್ನಿಸಿದನಖಿಳ ಸನ್ಮಾನದಿಂದ ||442||

ರಾಗ ಭೈರವಿ ಝಂಪೆತಾಳ

ಎಂದು ಜನಮೇಜಯನಿ | ಗಂದು ವೈಶಂಪಾಯ |
ನಂದ ಮಿಗೆ ಪೇಳ್ದ ಕಥೆ | ಯಂ ಧರೆಗೆ ಮುದದಿ ||443||

ಅರುಹಿದೆನು ಕನ್ನಡದ | ಲುರೆ ಯಕ್ಷಗಾನದಲಿ |
ವರ ಲೋಕನಾಥೇಶ | ನುರು ಕಟಾಕ್ಷದಲಿ ||444||

ಏಕ ಮಾನಸದಿಂದ | ಈ ಕಥೆಯ ಕೇಳ್ದರನು |
ಲೋಕನಾಥನು ಪೊರೆವ | ತಾ ಕಪೆಯೊಳೊಲಿದು ||445||

ಮಂಗಲ

ರಾಗ ಸೌರಾಷ್ಟ್ರ ಆದಿತಾಳ

ಮಂಗಲ ಇನಶತಭಾಸನಿಗೆ | ಮಂಗಲ ದನುಜಕುಲಾಂತಕಗೆ ||
ಮಂಗಲ ಮನುಮುನಿವಂದಿತನಿಗೆ ಜಯ | ಮಂಗಲ ವನಜಾಸನಪಿತಗೆ ||
ಮಂಗಲಂ ಜಯ ಮಂಗಲಂ ||446||

ಮತ್ಸ್ಯವತಾರಗೆ ಕಚ್ಛಪಗೆ | ಅಚ್ಚ ಸೂಕರನಾಗಿ ಬಾಳಿದಗೆ ||
ವತ್ಸನ ರಕ್ಷಿಸಿದವನಿಗೆ ಶೌರಿಗೆ | ಹೆಚ್ಚಿ ಕ್ಷಮೆಯನಳೆದಾತನಿಗೆ ||
ಮಂಗಲಂ ಜಯ ಮಂಗಲಂ ||447||

ಅಸಮ ಕ್ಷತ್ರಿಯರ ಸವರಿದಗೆ | ದಶಶಿರ ವಂಶಕುಠಾರನಿಗೆ |
ಪಶುಗಳ ಕಾಯ್ದಗೆ ಬುದ್ಧಕಲ್ಕ್ಯನಿಗೆ | ಕುಸುಮನಾಭಗೆ ಶ್ರೀವೆಂಕಟಗೆ ||
ಮಂಗಲಂ ಜಯ ಮಂಗಲಂ ||448||

 

ಯಕ್ಷಗಾನ ದ್ರೌಪದೀಸ್ವಯಂವರ ಮುಗಿದುದು