ರಾಗ ಕೇತಾರಗೌಳ ಅಷ್ಟತಾಳ

ಧರಣೀಶ ಕೇಳು ಹಿಡಿಂಬನು ಬೀಳಲು | ಹರಿಣಾಕ್ಷಿ ಹೈಡಿಂಬೆಯು ||
ಮರುತನಂದನನಿಗೆ ಮನಸೋತು ಪೇಳ್ದಳು | ಸರಸ ಕಲಾಪದೊಳು ||159||

ಅಣ್ಣ ಹಿಡಿಂಬನಳಿದರಳಿಯಲಿ ಕರ್ಮ | ವುಣ್ಣಿಸಿತಾತನಿಗೆ ||
ಪುಣ್ಯದಿಂದೆನಗೆ ನೀ ದೊರಕಿದೆ ಬಿಡದೆನ್ನ | ಮನ್ನಿಸೆಂದೆರಗಿದಳು ||160||

ಪುಲ್ಲಲೋಚನೆ ಕೇಳೆ ಸರ್ವಥ ನಾ ನಿನ್ನ | ನೊಲ್ಲೆ ದೈತ್ಯಾಂಗನೆಯ ||
ಸಲ್ಲದ ನುಡಿನಮಗೇಕೆಂದು ಕುಂತಿಯಿ | ದ್ದಲ್ಲಿ ಬಂದರುಹಿದಳು ||161||

ಅಣುಗ ಕೇಳ್ ಸೋತು ಬಂದವಳ ನೀ ಬಿಡುವುದು | ಗುಣವಲ್ಲ ಭೀಮಸೇನ ||
ಎಣಿಕೆ ಬೇಡಿವಳಂಗೀಕರಿಸೆಂದು ಕುಂತಿ ತಾ | ನನುವಾಗಿ ಪೇಳಿದಳು ||162||

ಕಾಲನಂದನ ಕುಧರಾರಿಯ ಸುತರಿಂದ | ಹೇಳಿಸಿದಳು ಭೀಮಗೆ ||
ಕೇಳದಿರಲು ವೇದವ್ಯಾಸ ಮಹಾಮುನಿ | ಮೌಳಿ ತಾ ನಡೆ ತಂದನು ||163||

ರಾಗ ಮಧ್ಯಮಾವತಿ ತ್ರಿವುಡೆತಾಳ

ಬಂದ ವೇದವ್ಯಾಸ ಮುನಿಪನ | ನಂದಿದಿರ್ಗೊಂಡೆರಗುತಲೆ ಯಮ |
ನಂದನಾದಿಗಳುಪಚರಿಸೆ ಕರೆ | ದೆಂದನಾ ಕಲಿ ಭೀಮಗೆ | ವಿನಯದಿಂದ ||164||

ಮರುತ ಸುತ ಕೇಳಿವಳ ನೀ ಪತಿ | ಕರಿಸು ಸಂಶಯ ಬೇಡ  ಸನ್ಮತ |
ವರ ಕುಮಾರಕನುದಿಸುವನು ಮುಂ | ದುರುಗುಣೋದಯವೆಂದನು | ಪ್ರೇಮದಿಂದ ||165||

ಇಂತು ವೇದವ್ಯಾಸ ಪರಸುತ | ಸಂತಸದಿ ಪೊರಮಡಲು ಬಳಿಕಾ |
ಕಾಂತೆಯಳ ಪವನಜನು ಕೂಡಲು | ನಿಂತುದಾಕೆಗೆ ಗರ್ಭವು | ತಡೆಯದಾಗ ||166||

ಭಾಮಿನಿ

ಜನಪತಿಯೆ ಕೇಳಾ ಹಿಡಿಂಬೆಗೆ |
ಜನಿಸಲಂದು ಘಟೋತ್ಕಚನು ಮ |
ತ್ತನಿಲಸುತ ತದ್ದೇಶದೊಡೆತನವಣುಗನಿಂಗಿತ್ತು ||
ವನಿತೆಯನು ಸಂತೈಸಿ ಬರಬರು |
ತನಿಬರಿದಿರಲಿ ಶಾಲಿಹೋತ್ರನ |
ವಿನಯದಿಂ ಬೀಳ್ಕೊಂಡು ಕಂಡರು ಬಾದರಾಯಣನ ||167||

ರಾಗ ಸಾವೇರಿ ಅಷ್ಟತಾಳ

ಕೇಳು ಕೇಳೈ ಭೂಪ ಕೀರ್ತಿಕಲಾಪ | ಪೇಳುವೆನೊಂದು ವಿವರವ |
ಮುಂದಣ ಶುಭಕರವ || ಪಲ್ಲವಿ ||
ವ್ಯಾಸ ಮುನಿವರನಂದು ಪೇಳಿದ ನಿಮ್ಮ | ವಾಸವೇಕಚಕ್ರನಗರದೊಳೆಂದು ||
ಮಾಸವೊಂದರಲಿದ್ದದರ ಮೇಲೆ ನೀವಿನ್ನು | ಲೇಸ ಬಳಸುವಿರೆಂದು ಬೀಳ್ಕೊಂಡನಂದು ||168||

ವರವಿಪ್ರ ವೇಷವಾಂತಯ್ವರೆದ್ದರು ಶುಭ | ಕರವೇದಾಂತಾದಿ ದರ್ಭೆಯೊಳಲಂಕರಿಸಿ ||
ನಿರಿವಿಡಿದುಟ್ಟ ಶಡ್ಪುಚ್ಛ ಧೋತ್ರಗಳಿಂದ | ನೆರೆಪಟ್ಟಿ ನಾಮಗಳ್ಮೆರೆಯೆ ನೊಸಲೊಳಗೆ ||169||

ಇವರೇಕಚಕ್ರಪುರದೊಳಿಂತು ವಿನಯದಿ | ಭವನವಗೈದರಂದವನಿ ಸುರರಲಿ ||
ಸುವಿಲಾಸದಿಂದ ಭಿಕ್ಷಾಟನವೆಸಗುತ್ತ | ದಿವಸವ ಪುರದಿ ನೂಕಿದರಲ್ಲಿ ನಿಂತು ||170||

ತಂದ ಭಿಕ್ಷಾನ್ನವನಯ್ವರು ಜನನಿಯ | ಮುಂದಿಡಲದನು ವಿಭಾಗಿಸಿ ತೆಗೆದು ||
ಅಂದು ವಕೋದರನಿಂಗೆ ತಥರ್ಧವ | ದೊಂದು ಭಾಗವನು ಗೈವರು ಭುಂಜಿಸುವರು ||171||

ದಿನದಿನವಿಂತು ಯಾಚಕ ವತ್ತಿಯಿಂದಲಿ | ದಿನವ ಕಳೆವುತಿರ್ದರೇನೆಂಬೆನವರು ||
ಘನಸಿರಿ ಶೌರ್ಯವ ಮರೆಮಾಡಿ ಪವನ ನಂ | ದನ ಮುಖ್ಯರವರಿರ್ದರ್ ವಿಪ್ರ ವೇಷದಲಿ ||172||

ಭಾಮಿನಿ

ಅರಸ ಕೇಳ್ ಗಜಪುರದ ದೊರೆಗಳ |
ಸಿರಿಯ ಪೇಳ್ವಡಸಾಧ್ಯ ಶೌರ್ಯದ |
ಪರಿಯ ನೋಳ್ಪಡೆ ಶಕ್ರ ಸೂರ್ಯಾದ್ಯರುಗಳಿಗೆ ಮಿಗಿಲು ||
ತಿರಿದಶನವನು ಮಾತೆ ಹಸುಗೆಯ |
ನೆರಡುಭಾಗವ ಮಾಡಿ ಸುತರನು |
ಪೊರೆದಳಿನ್ನುಳಿದವರ ಪಾಡೇನೆಂದನಾ ಮುನಿಪ ||173||

ರಾಗ ಕೇತಾರಗೌಳ ಏಕತಾಳ

ಉದಯವಾಗಲೆದ್ದು ತಾಯ | ಪದಕೆರಗಿ ಭಕ್ತಿಯಿಂದ |
ನದಿಯೊಳ್ಮಿಂದು ಶುಚಿಯಾಗಿ ತಾವ್ | ಪದುಮಸಖನಿಗರ್ಘ್ಯವಿತ್ತು ||174||

ಸಂದುವಾಸ್ತೀ ಜಪನೇಮಗಳ | ಕುಂದದೆಸಗಿ ಸ್ಮೃತಿ ಶ್ರವಣ |
ದಿಂದಿರುತಲೆ ಭಿಕ್ಷಾಟನೆಗ | ಳಂದವರಿಗೆ ಮಧ್ಯಾಹ್ನದಲಿ ||175||

ಭೋಜನಗಳದರ ಮೇಲೆ | ರಾಜವರ್ತಮಾನ ಕಥೆಯು |
ರಾಜೋತ್ತಮರು ಮೆರೆದರಾ ದ್ವಿಜ | ರಾಜತನದೊಳಾನಂದದೊಳು ||176||

ಇರಲಿರಲು ಮಾಸಾಂತರದಿ | ನೆರೆಮನೆಯ ಶೋಕತಿಳಿದು |
ಭರದಿ ಸಾಯಂಕಾಲದಿ ಬಂದು | ನೆರೆಕೇಳ್ದಳಾ ವಿಪ್ರನ ಕುಂತಿ ||177||

ನಾಳೆ ಕಲ್ಯಾಣೋತ್ಸವಗಳು | ಬಾಲಕನಿಗಾಗುವಂಥ |
ಕಾಲದಿ ಸಿಡಿಲೆರಗಿದಂತೆ | ಬಾಳ ದುಃಖವೇನ್ ಪೇಳೆನಲು ||178||

ರಾಗ ಪಂಚಾಗತಿ ಮಟ್ಟೆತಾಳ

ಪೇಳೆಲೇನಮ್ಮಾ | ಬರಿದೆ | ಪೇಳಲೇನಮ್ಮಾ || ಪಲ್ಲವಿ ||

ಪೇಳಿ ಮಾಳ್ಪುದೇನು ಇದರ | ತಾಳಿಕೊಳ್ಳಲರಿದು ವಿಪ್ರ |
ಜಾಲಕೊದಗಿ ಬಂದ ದುಃಖ | ದೇಳಿಗೆಯನೆಲ್ಲವಿಂದು |
ಖೂಳನೋರ್ವ ಊರ ಹೊರಗೆ | ಶೈಲ ಶಿಖರದಲ್ಲಿ ಇರುವ |
ನಾಳೆ ಕೊಡುವ ಬಾರಿಯವಗೆ | ಕೂಳ ರಾಶಿಯನ್ನು ಕೊಂಡು || ಪೇಳ ||179||

ಎರಡು ಮಹಿಷ ಸಹಿತಲವಗ | ನ್ನೆರಡು ಖಂಡುಗದಕ್ಕಿಯನ್ನು |
ನಿರತವಿಂತು ಕೊಡಲು ಬಾ | ಹಿರಗೆ ತಪ್ತಿಯಿಲ್ಲದಿರಲು ||
ದುರುಳ ಖಳನು ಊರ ಜನರ | ನೊರಸಿ ತಿಂಬ ದಿನ ಪ್ರತಿಯಲಿ |
ಅರಿತು ಬಾರಿಯವಗೆ ಮಾಡಿ | ತೆರುತಲಿಹುದು ವಿಪ್ರ ಕುಲವು ||180||

ನಾಳೆ ಮಗನ ಮದುವೆಯದಕೆ | ಬಾಳ ಸಂಗ್ರಹಗಳಾಗಿಹುದು |
ಖೂಳಬಕನ ಭಾರಿ ಬಂದ | ಊಳಿಗವನೇನೆಂಬೆನೋರ್ವ ||
ಬಾಲನೆನಗೆ ಕೊಡಲು ವಂಶ | ದೇಳಿಗೆಯು ಸಮಾಪ್ತಿಯಾಯ್ತು |
ತಾಳಿ ತಾನೆ ಪೋಗೆ ಸುತನ | ಪಾಲಿಸುತ ಗುಣ್ಯಾಢ್ಯರಿಲ್ಲ ||181||

ಎಂದ ನುಡಿಗೆ ಕುಂತಿ ನಗುತ | ಲೆಂದಳೆಲವೊ ವಿಪ್ರ ನಿನ್ನ |
ಕಂದಗೊದಗಿದಸುರ ಕತ್ಯ | ಕಿಂದು ಎನ್ನ ಮಗನ ಕೊಡುವೆ ||
ತಂದ ಕೂಳೊಳವನ ಒಡಲಿ | ನಂದಗೊಳಿಸೆ ಎನಗಸಾಧ್ಯ |
ಕುಂದದೆನಗೆ ಸುತರು ನಾಲ್ವ | ರೊಂದು ಮತದೊಳಿಹರು ಸಾಕು ||182||

ಯಾಕಿದೆಂಬೆಯಪ್ಪ ಸುತರ | ಸಾಕಲಾರದುರಿಯೊಳವನ |
ನೂಕಿ ಕೊಲುವರುಂಟೆ ಬಿಡು ವಿ | ವೇಕವಲ್ಲ ನಿನ್ನ ಮಾತು ||
ಲೋಕದವರು ದೂರಿಕೊಳರೆ | ಕಾಕ ಬಳಸಿಕೊಂಬರುಂಟೆ |
ನಾಕದವರು ಮೆಚ್ಚರೆನಲಿ | ಕಾ ಕುರಂಗನೇತ್ರೆ ನುಡಿದಳ್ ||183||

ಭಾಮಿನಿ

ಪೃಥ್ವಿಸುರ ನೀ ಕೇಳು ಪರರಾ |
ಪತ್ತಿಗೊದಗಿದಡಜಭವಾದಿ ಸು |
ರೋತ್ತಮರು ನೆರೆ ಮೆಚ್ಚರೇ ಸಂದೇಹ ಬಿಡು ಸುತನ ||
ಸತ್ಯವಾಗೀವೆನು ನಿಶಾಚರ |
ಕತ್ಯಕಾಗುವುದೆಲ್ಲವನು ಬಲು |
ಹೊತ್ತುಗಳೆಯದೆ ಮಾಡಿಸೆನುತಯ್ತಂದಳಾ ಕುಂತಿ ||184||

ರಾಗ ಧನಶ್ರೀ ಆದಿತಾಳ

ಕರೆದಳು ಕುಂತಿ ಭೀಮನ | ಬಾರೆಂದು ಮಗನ ||
ಹಿರಿದು ಔತಣವೊಂದು | ದೊರಕಿತು ನಿನಗಿಂದು ||185||

ತಿರಿದ ಕೂಳೊಳರ್ಧವ | ನಿರನೀನುಂಡುಂಡು ||
ಅರೆ ಹೊಟ್ಟೆಯಾಗಿ ಹಸಿದು | ಸೊರಗಿದೆ ಕೇಳೆಂದು ||186||

ಊರ ಬಾಹ್ವೆಯೊಳೋರ್ವ | ಮಾರಿಯಾಗಿಹನಂತೆ ||
ಘೋರ ಬಕಾಸುರನ | ಬಾರಿಗೊದಗುವದೆಂದು ||187||

ಹನ್ನೆರಡು ಖಂಡುಗದಕ್ಕಿ | ಯನ್ನವ ನೀನುಂಡು ||
ಮುನ್ನ ದೈತ್ಯನ ಕೊಂದು | ಎನ್ನ ಬಳಿಗೆ ಬಾರೆಂದು ||188||

ತಾಯ ಮಾತನು ಕೇಳಿ | ವಾಯು ಸಂಭವ ಹಿಗ್ಗಿ |
ಪ್ರೀಯದೊಳೀರ್ದನಾತ | ನಾಯುತವೇನೆಂಬೆ ||189||

ಅಳುಕಿದರ್ ಧರ್ಮಜಾದ್ಯರ್ | ಖಳನ ವಾರ್ತೆಯ ಕೇಳಿ ||
ತಿಳಿದುದು ಭೀಮನವರ | ಮುಳಿದು ಧಿಕ್ಕರಿಸಿದ ||190||

ಭಾಮಿನಿ

ಕದನಕಲಿಗಳ ದೇವನುಬ್ಬೇ |
ರಿದನು ಬಳಿಕಾ ವಿಪ್ರನಿತ್ತಲು |
ಸದನದೊಳು ನಡುವಿರುಳು ತೊಡಗಿತು ಪಾಕಮಯ ರಭಸ ||
ವಿಧವಿಧದ ಭಕ್ಷ್ಯಗಳು ಶಾಖಗ |
ಳೊದಗಿದವು ಶಾಲ್ಯಾನ್ನ ಸಹಿತಂ |
ದುದಯವಹ ಪರಿಯಂತ ಮಾಡಿಸಿದನು ಮಹೀಸುರನು ||191||

ರಾಗ ಶಂಕರಾಭರಣ ಅಷ್ಟತಾಳ

ಮಾಡಿದ ಪರಿಪರಿ ಭಕ್ಷಭೋಜ್ಯಗಳ | ಕೂಡಿ ಭೂಸುರ ಸತಿಯರು ಚಮತ್ಕಾರದಿ || ಪಲ್ಲವಿ ||

ತರಗು ಚಕ್ಕುಲಿ ಕರ್ಜಿಕಾಯಿ ಕಡುಬು ಮದು |
ತರದ ಹೋಳಿಗೆ ಹೂರಣಗಳುಂಡಲಿಗೆ ದೋಸೆ |
ವರ ಸುಕುನುಂಡೆಗಳೆರೆಯಪ್ಪ ಉಪ್ಪಿಟ್ಟು ||
ಪರಮಾನ್ನ ವಡೆಗಾರಿಗೆ ರಸಾಯನ ಸಹ |
ಪರಿಪರಿ ಭಕ್ಷ್ಯಗಳ | ಮಾಡಿಸಿದನ್ಯೋ |
ಗರ ಷಡ್ರಸಾದಿಗಳ | ಒಪ್ಪುವ ತರ |
ತರ ಶಾಖ ಪಾಕಂಗಳ | ಹಪ್ಪಳಗಳ |
ಮೆರೆವ ಸಂಡಿಗೆ ಸಹಿತಾಗಿ ಸಂಭ್ರಮದೊಳು || ಮಾಡಿದ ||192||

ವಾರ್ಧಕ

ಧರಣೀಶ ಕೇಳ್ ಬಕಾಸುರನ ಬಾರಿಗೆ ಹಾಲ |
ಹರವಿಗಳು ಮೊಸರ ತುಪ್ಪಗಳ ಕೊಡಗಳು ಕೂಡೆ |
ನೆರೆದವಗಣಿತವಾಗಿ ಸಾರುಗಳು ಮಜ್ಜಿಗುಪ್ಪಿನ ಕಾಯಿ ಮರಿಗೆಂಗಳು ||
ಪರಿಪರಿಯ ಶಾಖ ಪಾಕಂಗಳೊಗ್ಗರಣೆಗಳು |
ಪರಿಮಳಿಸಿದವು ಪವನ ಸುತನ ನಾಸಿಕಕಂದಿ |
ನಿರುಳಿನೋಳ್ ನಿದ್ರೆ  ಬಾರದೆ ಜನನಿಯಂ ಕರೆದು ಬೆಳಗಾಯಿತೆಂದೆನ್ನಲು ||193||

ರಾಗ ಕಾಂಭೋಜಿ ಝಂಪೆತಾಳ

ಅರಸ ಕೇಳತಿ ಬೇಗ ಕುಂತಿ ಬಂದಳು ಬುಧನ | ಕರೆದೆಂದಳ್ಯಾಕೆ ತಡವಿನ್ನು |
ತರಿಸಿ ಸನ್ನಾಹಗಳು ಹೂಡು ಬಂಡಿಯ ಮೇಲೆ | ಇರಿಸು ಸಾಲಾಗಿ ಹವಣಿಸುತ ||194||

ಪರಿಪರಿಯ ಭಕ್ಷ್ಯಗಳ ತರತರದ ಶಾಖಗಳ | ಹರವಿಗಳ ಹಾಲು ಮೊಸರುಗಳ ||
ಪರಿಮಳಿಸುತಿರುವ ತುಪ್ಪದ ಭಾಜನಗಳು ಹ | ನ್ನೆರಡು ಖಂಡುಗದಕ್ಕಿ ಕೂಳ ||195||

ಏಸು ಬೇಕೈಸುಗಳ ನಿರಿಸು ಕುನಿಕಿಲಲಿ ಬಹು | ರಾಶಿ ಶೋಭಸ್ಕರವ ತುಂಬಿ ||
ಮೀಸಲುಳಿಯದೆ ಭರವಣಿಗೆ ಮಾಡು ಭಂಡಿಯನು | ಕ್ಲೇಶವಿನ್ಯಾಕೆ ನಿನಗೆನಲು ||196||

ಕುಂತಿ ದೇವಿಯ ಮಾತ ಕೇಳಿ ಭೂಸುರ ತನ್ನ | ಚಿಂತೆಯನು ಬಿಟ್ಟು ಬೇಗದಲಿ ||
ಅಂತರಿಸದಾಗ ಶೋಭಸ್ಕರಗಳನುಕರಿಸಿ | ನಿಂತು ತುಂಬಿದನು ಕುನಿಕಿಲಲಿ ||197||

ಮರಳಿ ಬಂದಳು ಮಗನ ಬಳಿಗಾಗಿ ಕುಂತಿ ತಾ | ಕರೆದು ಪೇಳಿದಳು ಭಾರಣೆಗೆ ||
ಭರದೊಳೇಳಿನ್ನು ಕಾತರಿಸದಿರು ಖಳನೊಡಲ | ನೊರಸುವದು ಸತ್ವದನುವರಿತು ||198||

ಎಂದು ತಾಯ್ಮಗನ ಹರಸಲು ಭೀಮನುಬ್ಬಿ ತಾ | ವಂದಿಸಿದ ತತ್ಪದಾಂಬುಜಕೆ ||
ಅಂದಾ ಯುಧಿಷ್ಟಿರನಿಗೆರಗಿ ದೌತಾಂಬರವ | ನಂದದಿಂದುಟ್ಟು ಪೊರಮಟ್ಟ ||199||

ಭಾಮಿನಿ

ಏರಿದನು ಕಲಿಭೀಮ ಘನ ಸಂ |
ಪೂರಣದ ಬಂಡಿಯನು ತಡೆಯದೆ |
ಭೇರಿಗಳ ಹೊಯ್ದುಬ್ಬರಿಸಿದನು ನಡುಗೆ ಸುರಪುರವು ||
ಊರ ಜನರೀಕ್ಷಿಸಲು ಪೇಳಿದ |
ದೂರದಲಿ ನೀವ್ ನಿಲ್ಲಿರೆನುತಲೆ |
ದಾರಿಯಲಿ ಬರಿಗೈದನುರು ಭಕ್ಷ್ಯಾದಿಕಂಗಳನು ||200||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪೊಡವಿಪತಿ ಕೇಳ್ ಭಕ್ಷ್ಯಗಳ ಬರಿ | ಹೆಡಿಗೆಯುಳಿದವು ಕೂಳೊಳರ್ಧವ |
ಹೊಡೆದನಾ ಪಾಲ್ಮೊಸರ ಕೊಡಗಳ | ಬಿಡದೆ ಭೀಮ ||201||

ಕುಡಿದ ಪಕ್ಕಲೆ ವೀರನೊಯ್ಯನೆ | ನಡೆಸಿ ತಂದನು ನೋಡಿ ದೈತ್ಯನ |
ನುಡಿದನೆಲವೋ ಕುನ್ನಿ ಕೂಳಿದೆ | ಕೊಡುವೆನೆನುತ ||202||

ಕಂಡು ಖಳ ಬೆರಗಾದನಿವನು | ದ್ದಂಡತನವಚ್ಚರಿಯಲಾ ಹರಿ |
ಖಂಡಪರಶುಗಳಳುಕುವರು ಭಯ | ಗೊಂಡು ತನಗೆ ||203||

ಭಂಡಿ ತುಂಬಿದ ಕೂಳನಿವನಿಂ | ದುಂಡು ದಣಿಯಲಿ ಪುರವ ಪಾರ್ವರ |
ಹಿಂಡುವೆನು ತಾನೆನುತ ಖಳ ಖತಿ | ಗೊಂಡನಾಗ ||204||

ಅರೆಗೆಲಸ ತನಗಾದುದೆಂದುಳಿ | ದಿರುವ ಶೇಷಾನ್ನಗಳನುಣುತಲೆ |
ಬೆರಳೊಳಣಕಿಸುತಿರ್ದ ಭೀಮನು  | ದುರುಳನಿದಿರೆ ||205||

ಉರಿಯನುಗುಳ್ದು ಸುರಾರಿ ಗರ್ಜಿಸು | ತೆರಡು ಮುಷ್ಟಿಗಳೆರಗಲೇನೆಂ |
ದರಿಯದನಿಲಜನಿರ್ದನೂಟದ | ತ್ವರಿತದಿಂದ ||206||

ಭಾಮಿನಿ

ಧರಣಿಪತಿ ಕೇಳ್ ವೀರ ಭೀಮನ |
ಪರಿಯನಾ ಘನ ಬಂಡಿ ತುಂಬಿದ  |
ಸರಕುಗಳನಳವಟ್ಟು ತನ್ನಯ ಭಾರಿ ಜಠರದಲಿ ||
ಮರನ ಮುರಿದು ಸುರಾರಿ  ಬಲು ಭೀ |
ಕರಿಸಿ ಹೊಯ್ದಡೆ ತಡೆದು ಕೈತೊಳೆ |
ದುರವಣಿಸಿ ತೇಗುತಲೆ ನಿಂದನು ಸಿಂಹನಾದದಲಿ ||207||

ರಾಗ ಕೇತಾಳಗೌಳ ಅಷ್ಟತಾಳ

ಖೂಳ ಕೇಳೆಲೊ ಬಾರೆಲೊ ಬಂಡಿಯ | ಕೂಳ ತಿನ್ನೆಲೊ  || ಪಲ್ಲವಿ ||

ಕಾಳು ರಕ್ಕಸ ನೀನಿಲ್ಲಿ | ಆಳ್ವೆಯರಸನಾಗಿ ||
ಖೂಳ ಕೊಡದಿರ್ದಡೆ ವಿಪ್ರ | ಜಾಲವನ್ನು ನೀಗಿ ||
ಧಾಳಿವಡದು ಸರಿಯಿಲ್ಲೆಂದು | ಬಾಳ ಸತ್ವನಾಗಿ ||
ಶೈಲ ಶಿಖರದಲ್ಲಿರ್ಪೆ ನೀ | ಕಾಳ ಮತ್ಯುವಾಗಿ ||208||

ರಾಗ ಘಂಟಾರವ ಮಟ್ಟೆತಾಳ

ನುಡಿದ ಮಾತನು | ಕೇಳ್ದು ದೈತ್ಯನು ||
ಘುಡು ಘಡಿಸಿದನು |  ತಡೆವುತೆಂದನು ||209||

ಎಲವೊ ಮನುಜನೆ | ಇಲ್ಲಿ ನಿನ್ನನೆ ||
ಬಲಿಯ ಕೊಡದೆನೆ | ಮಲೆತು ಬಿಡುವೆನೆ ||210||

ಛಲದಿ ಬಂಡಿಯ | ಕೂಳ ತಿಂದೆಯ ||
ಬಲುಹ ತೋರಿಸು | ಬಳಿಕ ಜೀವಿಸು ||211||

ಎಂದು ದೈತ್ಯನು | ಅಂದು ಮರನನು ||
ನಿಂದು ಮುರಿದನು | ಕಂಡು ಹೊಯ್ದನು ||212||

ಹೊಯ್ದ ಹೊಯ್ಲನು | ಜೈಸಿ ಭೀಮನು ||
ಬೈದು ನುಡಿದನು | ಪೊಯ್ದು ಖಳನನು ||213||

ಕುನ್ನಿಯಂದದಿ | ಇನ್ನು ಸಮರದಿ ||
ಮಣ್ಣತಿನದಿರೋ | ಮುನ್ನ ನಿಲದಿರೋ  ||214||

ಎಂದು ಭೀಮನು | ಪೊಂದುತವನನು ||
ನಿಂದು ತಿವಿದನು | ನೀಡಿ ಕರವನು ||215||

ರಾಗ ಶಂಕರಾಭರಣ ಮಟ್ಟೆತಾಳ

ಆತುಕೊಳ್ಳೆನುತ್ತಲನಿಲ | ಜಾತನಸುರನುರವ ಹೊತ್ತು |
ಖಾತಿಯಿಂದ ತಿವಿದಡಮರ | ವ್ರಾತ ಬೆದರಲು ||
ಕಾತರಿಸುತ ಕನಲುತುರುಳು | ತಾತನೆದ್ದು ತಿವಿದ ನುರುವ |
ಲಾತಿಶಯದೊಳಾ ಮಹಾತ್ಮ | ವಾತತನಯನ ||216||

ತಿವಿದ ತಿವಿಯನಾಂತು ಬಳಿಕ | ತಿವಿಯಲಾ ಬಕಾಸುರಾಖ್ಯ |
ನವನಿಗುರುಳುತೇಳುತೆಂದ | ಪವನ ಜಾತಗೆ |
ದಿವಿಜ ಮನುಜರೆನ್ನ ಕೂಡೆ | ಬವರಕಾನ್ವರಿಲ್ಲ ಭಳಿರೆ |
ಭುವಿಯ ಸುರನೆ ನಿಲ್ಲೆನುತ್ತ | ತವಕದಿಂದಲೆ ||217||

ಭಾರಿ ಮರನ ಮುರಿದ ಖಳನು | ಬ್ಬೇರಿ ಹೊಯ್ದಡುರಿಯನುಗುಳಿ |
ವೀರ ಬಂಡಿಯಿಂದನಿಲ ಕು | ಮಾರ ತಿವಿಯಲು ||
ಘೋರ ದನುಜನರುಣ ಜಲವ | ಕಾರಿ ಭೂಮಿಗೊರಗಲಸುವು |
ಜಾರಿತೆಮನ ನಗರಿಗಾಗಿ | ಮಾರಿಯಳಿದುದು ||218||

ಭಾಮಿನಿ

ಕೊಂದನಾ ಕಲಿ ಭೀಮ ಬಕನನು ||
ನಿಂದು ರಣದೊಳಗೆಳೆದು ಬಂಡಿಯ |
ಹಿಂದೆ ಬಂಧಿಸಿ ನಡೆಸಿ ತಂದನು ಪೂಡಿದೆತ್ತುಗಳ ||
ಬಂದವನು ತತ್ಪುರದ ಬಾಹ್ಯೆಯ |
ಮುಂದೆ ಬಿಸುಟೈತರಲು ಭೂಸುರ |
ವಂದ ಪೊಗಳಿತು ಭೀಮನನು ಬಲು ಜಯದ ರಭಸದಲಿ ||219||

ರಾಗ ಯರಕಲ ಕಾಂಭೋಜಿ ಅಷ್ಟತಾಳ

ಭಾಪು ಮಝ ಭಳಿರೆ | ಭೂಸುರ ಕುಲ | ದೀಪ ಮಝ ಭಳಿರೆ || ಪಲ್ಲವಿ ||

ಎಂದಿಗು ಭಯವಿಲ್ಲದಂತೆ | ಖಳನ | ಕೊಂದು ನೀ ಕೀರ್ತಿಯನಾಂತೆ |
ಇಂದೆಮ್ಮ ಕುಲದೊಳಗಿಂಥ ಮಹಾತ್ಮಕ | ಬಂದು ನಮ್ಮೆಲ್ಲವರ |
ರಕ್ಷಿಸುವೆ ಹೀ | ಗೆಂದು ನಿಶ್ಚಯ ವಿವರ |
ವರಿಯಲೀಗ | ಸಂದೇಹವಿಲ್ಲ ರಕ್ಷಿಸಿದೆ ಸಜ್ಜನರ ||220||

ಮಾಡಿದಂತುಪಕಾರಕಿಂದು | ಏನ | ಮಾಡಿದರ್ತುದಿ ಬಾರದೆಂದು |
ಗಾಢದಿ ಶಿವ ಬಹ್ಮನಾರಾಯಣಾದ್ಯರು | ನೀಡಲಿ ನಿಮಗಿಷ್ಟವ |
ಐಶ್ವರ್ಯ ಕೈ | ಗೂಡಲಿಯತಿ ಭಾಗ್ಯವ |
ಮೂರ್ಲೋಕದಿ | ಜೋಡಿಲ್ಲವಧಿಕ ಸಂತೋಷದಿ ಬಾಳಿರು ||221||

ಭಾಮಿನಿ

ಅರಸ ಕೇಳಾ ಪುರದ ವಿಪ್ರರ |
ಹರಕೆಗಳ ಕೈಗೊಂಡು ತಾ ಮಿಗೆ |
ವರ ಜನನಿಗುಸುರಿದನು ಧರ್ಮಜ ಹಸ್ತಿನಾಪುರವ ||
ಪೊರಟು ವತ್ಸರನವಾದುದೊಂದೀ |
ಪರಿಯೊಳೆನಲಯ್ತಂದನಾ ಗಜ |
ಪುರದ ವಿಪ್ರನದೋರ್ವನೆಮಜನು ಕಂಡು ಬೆಸಗೊಂಡ ||222||

ರಾಗ ಕೇತಾರಗೌಳ ಅಷ್ಟತಾಳ

ಬರವಿಂದಿಲ್ಲಿಗೆ ಬಂದುದೆಲ್ಲಿಂದ ನೀವೆಮ | ಗರುಹ ಬೇಕೀಗೊಲಿದು ||
ಪರಮ ಮಂಗಳ ನಿಧಿಯಾಯಿತು ನಿಮ್ಮಯ | ದರುಶನ ನಮಗಿಂದಿಲಿ ||223||

ಎಂದಡಾ ಭೂಸುರೋತ್ತಮ ಮಗಳೆಂದನು | ಸಿಂಧೂರ ನಗರದಿಂದ ||
ಬಂದೆವು ನಿಮಗ್ಯಾವ ದೇಶಗಳೆನೆ ಕೇಳು | ತಂದೆಮಜನು ಪೇಳ್ದನು ||224||

ನಾವು ನಿಮ್ಮಂತೆ ಭಿಕ್ಷಾದಿ ಜೀವಿಗಳು ಮ | ತ್ತಾವ ದೇಶಗಳೆಂಬುದು ||
ನೀವಿಭ ಪುರಿಯ ಪೊರಟು ದಿನೆಷ್ಟಾಯ್ತು ಭೂ | ದೇವ ನೀನರುಹ ಬೇಕು ||225||

ಅರಸನಲ್ಲಿಗೆ ಯಮಜನು ಕುರುರಾಯನು | ನೆರೆವಿಶೇಷಗಳೇನೇನು ||
ಒರೆಯ ಬೇಕೆನೆ ಭೂಸುರೋತ್ತಮ ನುಸುರಿದ | ಪರಿಹಾಸ್ಯವಾಯಿತೆಂದು ||226||

ಮರುಳಗಳ್ ನೀವೆಮ್ಮೊಳ್ ಕೇಳ್ವಿರಿ ಪಾಂಡವ | ರರಗಿನಾಲಯದೊಳಂದು ||
ಉರಿದು ಪೋದರು ಎಂಬ ಲೋಕ ಪ್ರಸಿದ್ಧವು | ಅರಿತುದಿಲ್ಲವೆ ನೀವಿಂದು ||227||

ಅಕಟ ಪಾಂಡವರಳಿದರೆ ಪರರಿಂಗೆ ಬಾ | ಧಕವೇನನೆಸಗಿದರು ||
ವಿಕಟರುಗಳ ಸುದ್ದಿ ಎಮ್ಮೊಳಗೆಂದಂತೆ | ಪ್ರಕಟವೆ ಜಗದೊಳಗೆ ||228||

ಆದಡಾ ಗುರು ಭೀಷ್ಮ ವಿದುರಾದಿಗಳೆಲ್ಲ | ಮೋದವೆ ಪುರದೊಳಗೆ ||
ಸಾಧು ಹದಯರು ನೀವೆಲ್ಲಿ ಪೋಗುವಿರೆನೆ | ಭೂದಿವಿಜನು ಪೇಳ್ದನು ||229||