ಭಾಮಿನಿ

ಅರಸಕೇಳ್ ಗುರು ಭೀಷ್ಮ ವಿದುರಾ |
ದ್ಯರಿಗೆ ಕುಶಲಾದಿಗಳು ದ್ರುಪದನ |
ವರ ಕುಮಾರಿಯ ಮದುವೆ ಗಡ ದಕ್ಷಿಣೆಯದೂಟಗಳು ||
ಭರಿತವಾಗೆಮಗುಂಟು ನಿಶ್ಚಯ |
ತೆರಳ ಬೇಕೆಂದೆನಲು ಕನ್ನೆಗೆ |
ವರನದಾವವನೆಂದು ಕೇಳ್ದಿಹಿರೆಂದನೆಮಜಾತ ||230||

ರಾಗ ಶಂಕರಾಭರಣ ಅಷ್ಟತಾಳ

ಕೇಳಯ್ಯ ಸದ್ಗುಣಶೀಲ ಭೂಪಾಲ ಪಾಂ |
ಚಾಲ ಪುತ್ರಿಗೆ ಪೋಲ್ವ ಬಾಲೆಯರಿಲ್ಲವೈ   || ಪಲ್ಲವಿ ||

ಉರಗ ಕನ್ನಿಕೆಯರೊಳಿಲ್ಲ | ಎಣೆ | ಸುರನಾರಿಯರು ಸಮನಲ್ಲ |
ಎಂದು | ಧರೆಯೊಳೆಂಬರು ಜನರೆಲ್ಲ || ಆಕೆ
ಪರಿಯ ನಾಣೆಂಬೆನಚ್ಚರಿಯ ರೂಪಿಣಿಯಂತೆ |
ಪರಿಕಿಸಲತಿ ಭಾಗ್ಯಭರಿತೆ ಲಕ್ಷಣವಂತೆ ||231||

ಸತಿಯಿವಳರ್ಜುನಗೆಂದು | ಆಕೆ | ಪಿತನ ಮನದೊಳಿರಲಂದು |
ಅಗ್ನಿ | ಗತವಾದರ್ಪಾಂಡವರೆಂದು | ಈಗ |
ಅತಿ ಕ್ಲೇಶದಿಂದ ಭೂಪತಿಯಿರುತಿರೆ ಪುರೋ |
ಹಿತ ಪೇಳ್ದನಂತರ್ಯ ಮತವಾದುದಿಲ್ಲೆಂದು  ||232||

ವರವೇದಜ್ಞಾದಿಗಳಲ್ಲಿ | ಯೋಗಿ | ವರರ ಸಿದ್ಧಾಂತ ತತ್ವದಲಿ |
ಲೋಕ | ಭರಿತವಾದುಪ ಸ್ಮೃತಿಗಳಲಿ || ಈಗ |
ಲಿರುವರ್ ಪಾಂಡವರು ಸಂಚರಿಸಿ ಭೂವಳಯದಿ |
ಬರುವರ್ ನಿಶ್ಚಯವೆಂಬ ಹರುಷದಿಂದಿಹನಂತೆ ||233||

ಭಾಮಿನಿ

ಭೂಮಿಪರು ಬುಧ ಜನದೊಳೈತರೆ |
ಪ್ರೇಮದಿಂ ದಿನವೆರಡು ತೀರಲಿ |
ಕಾ ಮಹಾ ಗಂಧರ್ವಪುರದಿಂ ಸತಿಯರೊಡಗೂಡಿ ||
ಪ್ರೇಮದಿಂದಂಗಾರ ವರ್ಮನು |
ತಾಮಸಿಯೊಳಯ್ತಂದು ಸತಿಯರ |
ಸ್ತೋಮದಿಂ ಜಲಕೇಳಿಗಯ್ದಿದನಾಗ ನಂದನಕೆ ||234||

ಕಂದ

ಇಂತಾ ಖಚರಿಯರೆಲ್ಲರ್ |
ಕಾಂತಾರವ ಭರದಿ ಪೊಕ್ಕು ಚರಿಸುತಲಾಗಂ ||
ನಿಂತಾ ವನಲಕ್ಷ್ಮೀಯನುಂ |
ಸಂತೋಷದಿ ನೋಡಿ ಪಾಡಿದರು ಗೆಲವಿಂದಂ ||235||

ವಾರ್ಧಕ

ವರ ನಿರ್ಮಲಾಪ ಕಾಸಾರದಿಂ ತೀರದಿಂ |
ಸುರಕಜವನ್ಹೇಡಿಸುವ ತರುಗಳಿಂ ಮರಗಳಿಂ |
ದಿರುವ ಮಗಜಾಲದ ವಿಲಾಸದಿಂ ತೋಷದಿಂ ಮೆರೆವ ಕೇತಕಿಗಳಿಂದ ||
ಸುರತ ಸುಮರಂಗ ಸಂಭ್ರಾಂತರಂ ಕಾಂತರಂ |
ಮೆರೆವ ನಾರಿಯರ ಹೋದರಿಗಳಿಂ ಗಿರಿಗಳಿಂ |
ದರಿಮಲ್ಲಿವಲ್ಲಿ ಮಿಳಿದಳಿಗಳಿಂ ಗಿಳಿಗಳಿಂದಾ ವನಂ ಕಂಗೊಳಿಸಿತು ||236||

ಕರಿರಾಜ ವರದನಂ ಗಿರಿಜೆ ಮಾರನ ಶಿವನ |
ಪರಮನಾಮಂಗಳಂ ಬರೆದು ಮೂರಕ್ಷರದಿ |
ಪರಿಕಿಸಲ್ಮಧ್ಯ ವರ್ಣದಲಿ ತೋರುತ್ತಿಹುದು ನಿರುತಮೀ ವನದ ಪೆಸರು |
ತರುಣಿ ನೀ ಕೇಳೆಂದು ಒರೆದಳೊರ್ವಳು ಬಂದು |
ಬರೆದು ನೋಡಲು ನಿಂದು ಇರಲು ಸ್ಮರನೈತಂದು |
ಸರಳ ಬಿಡಲವರಂದು ವಿರಹವೆಗ್ಗಳಿಸುತ್ತ ತರತರದಿ ಸತಿಯರರಿತು ||237||

ಕಮಲವಿಭವದನೆಯರ್ಕಾಳಾಹಿ ವೇಣಿಯ |
ರ್ಸಮನಗೆಯ ಜಾಣಿಯರ್ಕಲಕೀರ ವಾಣಿಯರ್ |
ಅಮಿತಶನಿರದನೆಯರ್ಮದನ ಗಜ ಸುಮನೆಯರ್ಕೇಯೂರ ಭೂಷಿತೆಯರು ||
ಕುಮುದದಳದಕ್ಷಿಯರ್ಕೋಮಲತರಾಂಗಿಯರ್ |
ದ್ಯುಮಣಿ ಸಂಕಾಶೆಯರ್ ಸರಸಿರುಹ ವದನೆಯ |
ರ್ಕಂಬು ಸಮಕಂಠೆಯರ್ಕುಂಜರ ಸುಗಮನೆಯರ್ಕಾಂತಾರಕೈತಂದರು ||238||

ಭಾಮಿನಿ

ನಾರಿಯರು ನಡೆತಂದು ನಿರ್ಮಲ |
ವಾರಿ ಪೂರಿತ ಕೊಳನ ತೀರದಿ |
ಮಾರನೆಂಬಾವೇಶ ಬಂದಿಹ ತೆರದ ವಿರಹದಲಿ ||
ಸೀರೆಗಳ ಸೆಳೆದಿಡುತ ತಮ್ಮಯ |
ನೀರನಂಗಕೆ ನೀರ ಸೂಸುತ |
ನೀರೆಯರು ಹಾರೈಸಿ ನಲಿದರು ಮೀರಿ ವಿರಹದಲಿ ||239||

ರಾಗ ಕಮಾಚು ಆದಿತಾಳ

ಆಡಿದರಾ ಜಲಕ್ರೀಡೆಯನು | ಗಾಡಗಾರ್ತಿಯರೆಲ್ಲ ಕೂಡಿ ಗಂಧರ್ವನೊ | ಳಾಡಿದರಾ || ಪ ||

ನೀರಜ ನಯನೆಯರತಿ ಮುದದಿ | ಮತ್ತಾ | ವಾರಿಯನಿಳಿಯುತ ಕರಯುಗದಿ ||
ಹಾರಿಸಿ ಜಲವನು ಧೀರತನದಿ ತಮ್ಮ | ನೀರಿನ ಮನವನು ಸೂರೆಗೊಳುತ ಬೇಗ ||240||

ಕಂಗಳ ತಿರುಹುತ ಖಚರಿಯರು | ಬರ | ಲಂಗಜ ಕೇಳಿಗೆ ಬೆರೆತವರು ||
ಸಂಗಡಿಗರ ಕೈ ಪಿಡಿವುತ ಸೆಳೆವುತ | ಹಿಂಗದೆ ರತಿಸುಖಂಗಳ ತೋರುತ ||241||

ಭಾಮಿನಿ

ಇತ್ತ ಪಾಂಡವರಾಗ ಭೂಸುರ |
ಉತ್ತಮರನುಳಿದೈದಿ ಬರುತಿರೆ |
ಲುತ್ತಮಾಶ್ರಮದೊಳಗೆ ಕಂಡರು ಬಾದರಾಯಣನ ||
ವಿಸ್ತರಿಸಿ ಬಕ ನಿಧನ ಮೊದಲಾ |
ದುತ್ತರೋತ್ತರ ಕಥೆಯ ಪೇಳುತ |
ಲತ್ಯಧಿಕ ತೋಷದಲಿ ತೆರಳಿದರಾ ಮಹಾ ವನದಿ ||242||

ರಾಗ ಭೈರವಿ ಝಂಪೆತಾಳ

ಮುಂದೆ ಬರುತಿಲಾಗ | ನಂದನದಿ ಪಾಂಡವರು |
ಸಂದುದಾ ದಿವಸ ಬಳಿ | ಕಂದು ಮಾರ್ಗದಲಿ ||243||

ಉರಿಯ ಕೊಳ್ಳಿಯ ಪಿಡಿದು | ಬರೆ ಮುಂದೆ ಫಲುಗುಣನು |
ಮರುತಜನು ಹಿಂದೈದಿ | ಹರಿತಂದನಾಗ ||244||

ತರುಣಿಯರ ನೂಪುರೋ | ತ್ಕರವಿದೆತ್ತಣವೆನುತ |
ಬರುತ ನೋಡಿದರವರ | ಸರಸ ಕೇಳಿಯನು ||245||

ಪುರುಷರೈದಿದರೆಂದು | ತರುಣಿಯರು ಲಜ್ಜಿಸುತ |
ಮರೆವಿಡಿದು ವಸ್ತ್ರವನು | ಶಿರವ ಬಾಗಿದರು ||246||

ತರಹರಿಸಿ ತಮತಮಗೆ | ವಿರಿದ ಲಜ್ಜೆಗಳಿಂದ |
ತರುಗುಲ್ಮಲತೆಗಳಲಿ | ಮರೆಯಾದರೆಲ್ಲ ||247||

ಭಾಮಿನಿ

ತರುಣಿಯರು ಲಜ್ಜಿಸಲು ಖೇಚರ |
ಪಿರಿದು ಕೋಪವನಾಂತು ನಿಶಿಯೊಳು |
ಬರುವರಾರೆಲೊ ಚೋರರಂದದಿ ಈ ಮಹಾವನಕೆ ||
ತೆರನನರಿಯದೆ ದೇಶ ಕಾಲದ |
ಸರಸಿಜಾಸನ ಸಾಹಸವ ಮೀ |
ರ್ದರಿಗೆ ತೋರುವೆನೌಷಧಿಯನೆಂದೆನುತ ಶರವಿಡಿದ ||248||

ರಾಗ ಶಂಕರಾಭರಣ ಮಟ್ಟೆತಾಳ

ಎಂದ ಮಾತ ಕೇಳಿ ಪಾರ್ಥ | ನಂದು ಖಚರನೊಡನೆ ನುಡಿದ |
ಮಂದಮತಿಯೆ ಕೇಳು ನಮ್ಮ | ನಿಂದ್ಯವ್ಯಾಕೆಲೊ ||
ಬಂದ ಪರಿಯ ಪೇಳದಿರಲು | ಮುಂದೆ ನಿಮ್ಮ ಬಿಡನೆಂದೆನಲು |
ಮಂದಹಾಸದಿಂದ ಪಾರ್ಥ | ನೆಂದನವನೊಳು ||249||

ದೇಶವಿದು ವನಾಂತಕಾಲ | ದೀಸು ರಾತ್ರೆಯೊಳಗೆ ಕಾರ್ಯ |
ವೈಸೆ ನಮಗೆ ಪೋಗಲದಕೆ | ದೋಷವೇನೆಲೊ ||
ಈಸು ಗರ್ವವ್ಯಾಕೆ ನರರಿ | ಗಾಸುರತ್ವವೆಂದು ಖಚರ |
ಮೀಸೆಯನ್ನು ತಿರುಹುತೆಂದ | ರೋಷದಿಂದಲಿ ||250||

ನಾರಿಯರನು ಕೂಡಿ ವನದಿ | ಘೋರ ರಾತ್ರಿಯೊಳಗೆ ಚರಿಪ |
ಜಾರಚೋರತನವನೆನಗೆ | ತೋರಬೇಡೆಲೊ ||
ಹಾರುವರಿಗೆ ನಮ್ಮ ಕೇಳ್ವ | ಪಾರುಪತ್ಯವ್ಯಾಕೆನುತ್ತ |
ಕ್ರೂರ ಶರವನೊಂದು ಬಿಟ್ಟ | ನಾರುಭಟೆಯಲಿ ||251||

ಉರಿಯ ಮಂತ್ರವನ್ನು ನೆನೆದು | ಕರದ ಕೊಳ್ಳಿಯಿಂದ ಪಾರ್ಥ |
ಭರದೊಳವನಿಗಿಡಲು ಮತ್ತೆ | ಉರಿಛಡಾಳಿಸೆ ||
ತುರಗ ರಥ ಪದಾತಿಗಳನು | ಉರುಹುತನುವ ಪೊಗಲು |
ಮರುಗುತಾಗ ಬಿದ್ದನವನು | ಸರಸಿ ಮಧ್ಯದಿ ||252||

ಉರಿಯು ನೀರಸುರಿಯುತಿರುವ | ಪರಿಯ ಕಂಡು ತರುಣಿ ಕಾಂತ |
ನಿರವ ಕಾಣದಿರಲು ಮನದಿ | ಮರುಗುತಾಕ್ಷಣ ||
ತಿರುಗಿ ನೋಡಲಿವರ ಕಂಡು | ಭರದಿ ಬಂದು ಧರ್ಮಸುತನ |
ಚರಣ ಯುಗಳದಲ್ಲಿ ಸೆರಗ | ನಿರಿಸಿ ಪೇಳ್ದಳು ||253||

ರಾಗ ನೀರಾವರಿ ಏಕತಾಳ

ಚರಣವ ಪಿಡಿವೆ ನಿನ್ನ | ದ್ವಿಜಾಗ್ರಗಣ್ಯ | ಕರುಣದಿ ಕಾಯೊ ಎನ್ನ ||
ಅರಿಯದೆನ್ನವ ನಿಮ್ಮೊಳು | ಮಾಡಿದ ತಪ್ಪ | ನಿರಿಸದಿರ್ಮನಸಿನೊಳು ||254||

ತರಳೆಯ ಮಾತ ಕೇಳು | ನಿನ್ನಯ ಮನ | ಕರಗದೇನೈ ದಯಾಳು ||
ಮರೆ ಹೊಕ್ಕವರ ಕಾಯ್ವುದು | ಧರ್ಮ ಶಾಸ್ತ್ರದಿ | ಧರಣಿಯೊಳಗೆ ಬಿರಿದು ||255||

ಕರುಣದೋಲೆಯ ಕಾಯಯ್ಯ | ನಿನ್ನಯ ಪಾದ | ಕೆರಗಿದೆನೈ ದಮ್ಮಯ್ಯ ||
ಎರೆಯನುರಿಯ ಪರಿದು | ಉದ್ಧರಿಪುದು | ಹಿರಿಯ ನೀ ನಿನಗರಿದು ||256||

ಎಂತು ಸೈರಿಸುವೆ ನಾನು | ಕಾಂತನನಗಲಿ | ಭ್ರಾಂತಿಯೊಳಿರುತಿಹೆನು ||
ಸಂತಸಬಡಿಸೆನ್ನನು | ನಿನ್ನಯ ಪಾದ | ಕ್ರಾಂತಳೆಂದೀಕ್ಷಿಸಿನ್ನು ||257||

ಕಂದ

ಇಂತೆಂದಾ ಸತಿ  ಮನದೊಳ್ |
ಚಿಂತಿಸುತತಿ ಕ್ಲೇಶವೆತ್ತು ಧರ್ಮಜನಡಿಯೊಳ್ |
ತಾಂತವಕದಿ ಪೊರಳುತಿರಲ್ |
ಸಂತೈಸುತ ಪಾರ್ಥಗೆಂದ ಭೂವರನಾಗಳ್ ||258||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುಂದುವರಿಯದಿರೆಲವೊ ಕೋಪದೆ | ಕೊಂದರೆನ್ನಾಣೀಕೆಯರಸನ |
ತಂದುತೋರಿಂತೆಂದಡರ್ಜುನ | ನೊಂದು ಕ್ಷಣದಿ ||259||

ಪರಿದನಾಗಳೆ ವರುಣ ಮಂತ್ರದೊ | ಳುರಿಯನಾ ಗಂಧರ್ವ ಮನದಲಿ |
ಕರಗುತಯ್ತಂದಾಗ ನುಡಿದನು | ಚರಣಕೆರಗಿ ||260||

ಭೂಸುರರ ತೆರನಲ್ಲ ನೀವತಿ | ಸಾಸಿಗಳು ಎಂಬೆಣಿಕೆ ತೋರಿದೆ |
ಬೇಸರದೆ ಕರುಣಿಸುವುದೆಂದನು | ತೋಷದಿಂದ ||261||

ಭಾಮಿನಿ

ಕೇಳೆಲವೊ ಗಂಧರ್ವ ಇಳೆಯನು |
ಪಾಲಿಸುವ ಪಾಂಡುವಿನ ಪುತ್ರರು |
ಕಾಲಗತಿಯಿಂದೆಮಗೆ ಬಂದುದು ಭೂಸುರರ ವೇಷ ||
ತಾಳಿ ಪೋಗುವೆವಾವು ದ್ರುಪದನ |
ಬಾಲೆ ಪರಿಣಯಕೆನಲು ಕೇಳುತ |
ಲೀಲೆಯಿಂ ಕೈಮುಗಿದು ಪಾರ್ಥನಿಗೆಂದನಾ ಖಚರ ||262||

ರಾಗ ತುಜಾವಂತು ಝಂಪೆತಾಳ

ಎನ್ನ ಮೇಲೀಪರಿಯು ಮುನಿವರೇನಯ್ಯ |
ನಿನ್ನ ಪೌರುಷಕ್ಯಾರು ಸರಿಯಿಲ್ಲವಯ್ಯ   || ಪಲ್ಲವಿ ||

ಸುರನರೋರಗರೊಳಗೆ | ಸರಿಯಾರು ನಿನಗಿನ್ನು |
ಮರೆಗೊಂಡು ಭೂಸುರರ | ತೆರದೊಳೀಗ ||
ಬರುತಿರಲು ನಾ ನಿಮ್ಮ | ಪರಿಯನರಿಯದೆ ಶರವ |
ಗರುವದಿಂದೆಸೆದುದನು | ಮರೆದು ಸಲಹುವದು ||263||

ರವಿ ತನಯ ವನ ಗೋ | ತ್ರಾರಿಯಶ್ವಿನಿಯರಿಗೆ |
ಭುವನದಲಿ ಜನಿಸಿರ್ದ ಮಹಿಮರೆಂದು ||
ಶಿವಶಿವಾ ನಾನರಿಯ | ದವಿವೇಕತನದಿಂದ |
ಹವಣಿಸಿದ ಕತಕವನು | ಕ್ಷಮಿಸಬೇಕಯ್ಯ ||264||

ಎನುತ ನವ ರತುನ ಕನಕಾಭರಣ ಮೊದಲಾಗಿ |
ವಿನಯದಿಂ ಖಚರ ಕಾಣಿಕೆಯನಿತ್ತು ||
ಎನಗೀಗ ಬಾಂಧವರು ಎನುತಲಾ ಫಲುಗುಣನ |
ಘನ ಹರುಷದಿಂದಾಗ ಮನ್ನಿಸಿದನವರ ||265||

ಭಾಮಿನಿ

ಇಂದು ಮೊದಲಾಗೆಮಗೆ ನೀನೇ |
ಬಂಧು ಕೇಳ್ ಗಂಧರುವ ಭೂಸುರ |
ರಂದದಿಂ ಪೋಗುವೆವು ದ್ರುಪದನ ಸುತೆಯ ಪರಿಣಯಕೆ ||
ತಂದ ವಸ್ತುಗಳೆಮ್ಮದಿವು ಕೇ |
ಳೊಂದು ಸಮಯದಿ ನೆನೆಯಲೀವುದು |
ಎಂದೆನುತ ಖೇಚರನ ಮನ್ನಿಸಿ ಪೊರಟರರ್ತಿಯಲಿ ||266||

ವಾರ್ಧಕ

ಅದು ನಿಮಿತ್ತದೊಳಖಿಳ ನಪರು ಬರುವರು ಗಡಾ |
ಮುದದಿ ನಾವಲ್ಲಿಗೊದಗುವದೆಂದು ನಿಶ್ಚೈಸಿ |
ವಿದಿತ ಸುಮುಹೂರ್ತದೋಳ್ ಪೊರಟರಾ ಪಾಂಡುಸುತರಮಿತ ಜಲಜಾಲಸಹಿತ ||
ವಿಧ ವಿಧದ ಋಷಿಗಳಂ ಕಂಡು ಒಡಗೂಡಿಬರ |
ಲಿದಿರಾದನಂಗಾರವರ್ಮನಂ ಗೆಲ್ದು ತೋ |
ಷದೊಳಯ್ತರಲ್ಮುಂದೆ ಶುಭ ಶಕುನವಾದುದೇನೆಂಬೆ ದ್ವಿಜಕುಲವಂದಕೆ ||267||

ಭಾಮಿನಿ

ಈ ಶಕುನ ಫಲವಾರಿಗೋ ಧರ |
ಣೀಶ ಸುತೆ ಸಿಕ್ಕುವತಿ ಪುಣ್ಯ ವಿ |
ಶೇಷ ವಾರಿಗೊ ನಮ್ಮೊಳೆಂದಯ್ತಂದರವರಲ್ಲಿ ||
ಲೇಸು ಕಾರ್ಯಗಳೆನುತ ಭೂಸುರ |
ರಾಶಿ ವರ ಪಾಂಚಾಲ ಪುರವ ಪ್ರ |
ವೇಶ ಗೈದರು ಪೌರ್ಣಮಿಯ ಚಂದ್ರಪ್ರಕಾಶದಲಿ ||268||

ದ್ವಿಪದಿ

ಮಗ ಮದುವೆಗೆ ದ್ರುಪದ ರಾಯ ಪಟ್ಟಣವ |
ಸೊಗಸಿನಲಿ ಶಂಗರಿಸಿದನು ಸುಚಿತ್ರಿಕವ ||269||

ಪೊಂಬಾಳೆ ವರಮಹಾಮಲೆಂುಜಾದಿಗಳ |
ಕಂಬಗಳ ನಿಲಿಸಿದರು ಸಾಲು ಸಾಲುಗಳ ||270||

ಮೂರು ಯೋಜನದಗಲ ಚಪ್ಪರವ ರಚಿಸಿ |
ತೋರಣಗಳಡಿಗಡಿಗೆ ದ್ವಾರದೊಳ್ ನಿಲಿಸಿ ||271||

ಪಟ್ಟೆ ಪೀತಾಂಬರಗಳಿಂದ ಮೇಲ್ಗಟ್ಟು |
ಕಟ್ಟಿಸಿದರೆಸೆವ ಚಿತ್ತಾರಗಳನಿಟ್ಟು ||272||

ಕೇರಿಕೇರಿಯೊಳು ಮೆತ್ತಿಗೆ ಸಾರಣೆಗಳ  |
ಓರಂತೆ ಮಾಡಿಸಿದ ರತಿ ನೂತನಗಳ ||273||

ಕಸ್ತೂರಿ ಕರ್ಪುರ ಜವಾಜಿಗಳುವೆರಸಿ |
ವಿಸ್ತರಿಸಿದರು ಪುರವ ಪರಿಮಳವವೆರಸಿ ||274||

ಪೊಂಗಲಶಗಳ ಬಹು ವಿಚಿತ್ರಲೋವೆಗಳ |
ಮುಂಗಡೆಯೊಳೆಸೆವ ಮುತ್ತಿನ ತೋರಣಗಳ ||275||

ನವರತ್ನಮಯವಾದ ಭವನಭವನಗಳ |
ವಿವರವಾಗೆಸೆವ ಚಿನ್ನದ ಚಾವಡಿಗಳ ||276||

ಪೊಡವಿಪಾಲರಿಗೆಲ್ಲ ಪಡಿ ಬಿಡಾರಗಳ |
ತಡೆಯದೆಸಗಿದರು ತರತರದ ಸಾಲುಗಳ ||277||

ರಾಗ ಮೆಚ್ಚು ಅಷ್ಟತಾಳ

ಇಂತು ಪಟ್ಟಣವ ಶಂಗರಿಸುತ್ತ | ಸೊಬ | ಗಾಂತು ಡಂಗುರಗಳ ಹೊಸುತ್ತ ||
ಸಂತೋಷದಿಂದ ಪಾಂಚಾಲನು | ಬರು | ವಂಥಾ ಭೂಪರ ನಿದಿರ್ಗೊಂಡನು ||278||

ಛಪ್ಪನ್ನ ದೇಶದ ದೊರೆಗಳು | ಬಂದ | ರೊಪ್ಪುವ ಕುದುರೆ ದಂಡಿಗೆಯೊಳು ||
ವಿಪ್ರರು ಬಲು ವಿದ್ಯಾವಂತರು | ಬಹು | ಕ್ಷಿಪ್ರದಿಂದಲೆ ಬರುತಿರ್ದರು ||279||

ಬಲು ವಾದ್ಯ ಘೋಷಗಳೆಸೆದವು | ಆಗ | ಕುಲಪರ್ವತಗಳ ನೀಡಿರಿದವು ||
ಗೆಲವಿನಿಂದಖಿಳ ಭೂಪಾಲರು | ಬಂದ | ರಸಲದೆ ಕೀರ್ತಿವಿಶಾಲರು ||280||

ವಾರ್ಧಕ

ಅರಸ ಕೇಳ್ ನಾನಾ ದಿಗಂತದ ಮಹೀಪಾಲ |
ರುರವಣಿಸೆ ಒದರಿದವು ಬಹಳ ವಾದ್ಯದ ಘೋಷ |
ಮೊರೆದುದಬ್ಬೇರಿ ನಿಸ್ಸಾಳ ಕೋಟಿಗಳೊಡನೆ ಭೇರಿ ತಂಬಟೆಗಳಿಂದ ||
ತರತರದೊಳೆಸೆವ ಮುತ್ತಿನ ಸತ್ತಿಗೆಗಳ ಝ |
ಲ್ಲರಿಗಳೊಪ್ಪಿದ ರಭಸದಂತಿಂಬುಗೊಡದಂತೆ |
ಚರಣಹತಿಗೆದ್ದುದಾಕಾಶಕ್ಕೆ ಕೆಂಧೂಳಿ ಪಾಂಚಾಲಪುರವನಡರಿ ||281||

ರಾಗ ಸಾಂಗತ್ಯ ರೂಪಕತಾಳ

ಈ ಪರಿಯಷ್ಟದಿಕ್ಕುಗಳಿಂದಲೈತಹ | ಭೂಪಾಲಕರ ಕಾಣುತಾಗ ||
ದ್ರೌಪದಿಯಗ್ರಜನಿದಿರುಗೊಂಡನು ಬಹ | ಳೋಪಚಾರವ ಮಾಡುತಂದು ||282||

ಬಂದಿರೆ ಮಗಧ ಭೂಪಾಲ ಚೈದ್ಯರು ಸಹ | ಬಂದಿರೆ ಕೌರವದಿಗಳು ||
ಬಂದಿರೆ ಮಾದ್ರೇಶ ಮೊದಲಾದ ನಪತಿಗ | ಳೆಂದಿದಿರ್ಗೊಂಡನು ನಗುತ  ||283||

ಮದನ ಜನಕ ಬಲ ರಾಮಾದಿಗಳು ಸಹ | ಯದುವೀರರನ್ನು ಕಾಣುತಲೆ ||
ಸದಮಲ ಭಾವ ಭಕ್ತಿಯಲಿ ಸತ್ಕರಿಸುತ್ತ | ಪದಕೆರಗುತಲಿದಿರ್ಗೊಂಡ ||284||

ಗುರು ಭೀಷ್ಮ ವಿದುರ ಕಪಾದಿಗಳನು ಕಂಡು | ಕರವ ಮುಗಿದು ಕರೆತಂದ ||
ಮೆರೆವ ರಾಜಾಸಭೆಯೊಳು ಕುಳ್ಳಿರಿಸಿದುಪ | ಚರಿಸಿದನಾ ದಷ್ಟದ್ಯುಮ್ನ ||285||

ವರ ವೇದ ತರ್ಕೋಪನ್ಯಾಸಂಗಳನ್ನು ತಾ | ವರದ ವಿಪ್ರರ ವಿದ್ಯಾಧರರ ||
ಪರಿ ಪರಿ ಮನ್ನಣೆಯಿಂದುಚರಿಸಿ ಕು | ಳ್ಳಿರಿಸಿದನಾಸನವಿತ್ತು ||286||

ಭಾಮಿನಿ

ಭೂಮಿಪತಿ ಕೇಳಿತ್ತ ನಿಮ್ಮ ಪಿ |
ತಾಮಹರು ಭೂದಿವಿಜರೊಗ್ಗಿನ |
ಲಾ ಮಹಾ ಪುರದೊಳಗೆ ಘಟ ಬಂಧುರದ ಶಾಲೆಯಲಿ ||
ಪ್ರೇಮದಲಿ ಜನನಿಯನು ನಿಲಿಸುತ |
ಲಾ ಮಹಾತ್ಮರು ಬುಧರೊಳತಿ ಸು |
ಕ್ಷೇಮದಲಿ ಭಿಕ್ಷೆಯನು ಮಾಡಿದರಲ್ಲಿ ಚರಿಸುತಲೆ ||287||

ರಾಗ ಕಲ್ಯಾಣಿ ಝಂಪೆತಾಳ

ಮಾಡಿದರು ಮಣಿಮಯದ ಭದ್ರ ಮಂಟಪದಿ |
ನೋಡೆ ನವನೂತನಗಳೆನಿಪ ವೈಭವದಿ || ಪಲ್ಲವಿ ||

ಕೀಲಿಸಿದ ಪಚ್ಚೆಗಳ ಕಳಕಳಿಸುತಿಹ ಹೊಸ ದು |
ಕೂಲಗಳವಂಬರದ ತೆರೆಗಳಿಂದ ||
ಚೂಳಿಕೆಯ ಕನ್ನಡಿಯ ತೋರಣ ಚಮತ್ಕೃತಿಯ |
ಮೇಲು ಮುತ್ತಿನ ಸೂಸಕದ ಸೊಬಗಿನಿಂದ ||288||

ಹೊಳೆವ ಭಿತ್ತಿಯ ಹೊಗರಿಡುವ ಮೌಕ್ತಿಕಾವಳಿಯ |
ಥಳಥಳಿಸುತಿಹ ವಜ್ರಮಯ ಧಾರೆಯೆ |
ಘಳಿಸಿ ಮಂಗಲ ಮಹಾರಮ್ಯದಲಿ ರಚನೆಗಳ |
ಬಳಸಿ ಬಹು ವಿಧದಿಂದ ಚಿತ್ರ ಮಂಟಪದಿ ||289||

ಧರೆಗಿಳಿವ ವರಮಹಾ ಪುಷ್ಪಕವೊ ಭಾಸ್ಕರನ |
ಪರಿಶೋಭಿಸುವ ರಥವೊ ಪರುಠವಿಸುವ ||
ಶರಧಿಶಯನನ ಸಜ್ಜೆ ಮನೆಯ ಶಾಶ್ವತವಾಗಿ |
ಅರಿಯೆವಾವೆಂದರತಿ ವಿಸ್ತಾರದಿಂದ ||290||

ಝಳಪಿಸುವ ರೊಂಪಿನಿಂ ಬೀಸಿದವು ಬಲಗೊಂಡು |
ಹೊಳೆವ ಬೀಸಣಿಗೆಗಳ ಮಕರಂದವ ||
ಸುಳಿವ ಸುತ್ತಣ ಸಾಲು ಪತ್ತಿಗೆಗಳಂತೆಳೆದು |
ಲಲನೆಯರ ಪಂಗಡದ ಅರಗಿಣಿಗಳಿಂದ ||291||

ವರ ಜವಾಜಿಯ ಶಂಗಗಳ ಪೊಳೆವ ಪಚ್ಚೆ ಕ |
ರ್ಪುರದ ಕವಲಾಯಿ ಸಾಧಿನ ಭರಣಿಯ ||
ಮೆರೆವ ಮಗ ನಾಭಿಗಳ ನಡುಗಿಹುದು ಬಂದಿಗಳು |
ತರತರದ ಪರಿಮಳದ ಪುತ್ರಪಂತಿಯಲಿ ||292||

ವಾರ್ಧಕ

ಅರಸ ಕೇಳ್ ಭದ್ರ ಮಂಟಪದ ವಿಸ್ತಾರಮಂ |
ಸುರಶಿಲ್ಪಿ ಮಯರಿಂದಸಾಧ್ಯಮೆನೆ ಪೊಗಳಲ್ಕೆ |
ಪರಿಶೋಭಿಸಿತ್ತರದ ನಿಲಯದೊಳು ವೀಣೆ ವಾದ್ಯಗಳು ನರ್ತನಗಳಿಂದ ||
ಇರಲಿದಕ್ಕೆಣೆಯಾಗಿ ಮೇಲೆ ಶೋಭಿಸುತ ನಿ |
ರ್ಜರ ಮಹೋರಗ ಯಕ್ಷ ರಾಕ್ಷಸ ಮರುದ್ಗಣರು |
ಗರುಡ ಕಿನ್ನರ ಸಿದ್ಧ ಗಂಧರ್ವರೊಲಿದೀಕ್ಷಿಸುತ್ತಿರ್ದರಂಬರದೊಳು ||293||

ಚಾರಣರ ಕೈವಾರ ಚೆಲುವ ತುಂಬುರ ಮಹಾ |
ನಾರದರ ಸಂಗೀತ ರಂಭೆಯೂರ್ವಶಿಯರೊಳು |
ಮೀರಿ ತೋರುವ ನರ್ತನದಿ ಚಿತ್ರರಥನ ಮದುತರ ಮದಂಗದ ಶಬ್ದವು ||
ಆರುಭಟೆ ಮಿಗಿಲಲ್ಲಿ ಮಗುಳೆ ರಾಜಿಸುವ ವಂ |
ದಾರಕಾಧಿಪನೋಲಗಕ್ಕೆ ತತ್ಸಮನಾಗಿ |
ಚಾರುತರ ರತ್ನದಿಂ ತಾರೆಗಳ ಪ್ರತಿಬಿಂಬವಾಗಿ ಶೋಭಿಸುತಿರ್ದುದು ||294||