ಶಾರ್ದೂಲವಿಕ್ರೀಡಿತಂ

ಶ್ರೀದುರ್ಗಾ ವದನಾಂಬುಜಂ ಸ್ತಿರರತಿಂ ಶ್ರೀ ಶೈಲನಾಥಂ ಶಿವಂ |
ಶ್ರೀ ಧಾತಾರ ಸಖಂ ಜಗತ್ರಯನುತಂ ಶ್ರೀ ಕಂಠಮೀಶಂ ಮಡಂ ||
ಶ್ರೀ ದಂಶಾಂಕ ಕಲಾನಿಧಿಂ ಸುಲಲಿತಂ ಶ್ರೀ ಮತ್ಕರಂ ಶಂಕರಂ |
ಶ್ರೀ ಧರ್ಮಸ್ಥಳ ಮಂದಿರಂ ಶುಭಕರಂ ಶ್ರೀಮಂಜುನಾಥಂ ಭಜೇ ||1||

ರಾಗ ನಾಟಿ ಝಂಪೆತಾಳ

ಶ್ರೀ ಗಣಾಧೀಶ ಶತಕೋಟಿ ರವಿ ಸಂಕಾಶ |
ನಾಗಾಭರಣ ಭೂಷ ನಮಿತ ಜನ ಪೋಷ  || ಪಲ್ಲವಿ ||

ನಾಗ ಸನ್ನಿಭ ವರ್ಣ ಶೂರ್ಪ ಸನ್ನಿಭ ಕರ್ಣ |
ನಾಗರೂಢಾರಾಧ್ಯ ಭವರೋಗ ವೈದ್ಯ ||
ನಾಗಶಯನ ಪ್ರೀತ ನವ ಮೂಷಿಕ ವರೂಥ |
ನಾಗ ವರದನಚಿಂತ್ಯ ವರ ಏಕದಂತ ||2||

ಪಾಶಮೋದಕ ಹಸ್ತ ಪಾಲಿತ ಸುರ ಸಮಸ್ತ |
ಭಾಸುರಾಂಗ ಕಪಾಂಗ ಭಾಗವತ ಸಂಗ ||
ದೋಷ ದುಃಖ ವಿದೂರ ದುಗ್ದಾಬ್ಧಿ ಗಂಭೀರ |
ಶೇಷ ಭೂಷನ ಪುತ್ರ ಪಾವನ ಚರಿತ್ರ ||3||

ಭವ್ಯ ಕೀರ್ತಿ ಕಲಾಪ ಮೇರು ಸನ್ನಿಭ ರೂಪ |
ದಿವ್ಯ ರತ್ನ ಕಿರೀಟ ಕನಕಮಯ ಪೀಠ ||
ಕಾವ್ಯ ಕತಜನಪಾಲ ವರ ಭೂತ ಗಣ ಜಾಲ |
ಸೇವ್ಯ ಶ್ರೀ ವಿಘ್ನೇಶ ಕುಡುಮಪುರ ವಾಸ ||4||

ವಾರ್ಧಕ

ಪರಮ ಪುರುಷೋತ್ತುಂಗನಂ ದಯಾಪಾಂಗನಂ |
ವರ ಪೂರ್ಣರೂಢನಂ ಖಳಕುಲ ವಿಭಾಡನಂ |
ತರುಣ ತುಳಸೀ ಮಾಲನಂ ರಮಾಲೋಲನಂ ಬಾಲನಂ ಗೋಪಾಲನಂ ||
ಸ್ಮರಕೋಟಿ ಲಾವಣ್ಯನಂ ಸುರಸ್ಸೇವ್ಯನಂ |
ಸಿರಿಯರಸನಂ ಶಾಂತನಂ ಸುಗುಣವಂತನಂ |
ಗುರು ಮಧ್ವಹಧ್ವಾಂಸನಂ ಗೋಕುಲೇಶನಂ ಸ್ಮರಿಸಿ ಕತಿಯಂ ಪೇಳ್ವೆನು ||5||

ಕಂದ

ದಶಮುಖ ದರ್ಪವಿರಾಮಂ |
ದಶರಥ ಸುತ ರಾಮನಂಘ್ರಿ ವಾರಿಜಮದುಪಂ ||
ಅಸುರಹರಂ ಅಣುವಂತಂ |
ಕುಶಲದೊಳೆನಗೀವುದು ಮತಿಯತಿ ಕಪೆಯಿಂದಂ ||6||

ವಾರ್ಧಕ

ಕಮಲಜನ ರಾಣಿಯಂ ವೀಣಾ ಸುಪಾಣಿಯಂ |
ಕಮಲದಳ ನೇತ್ರೆಯಂ ಕನಕಾಭ ಗಾತ್ರೆಯಂ |
ಕಮಲಾರಿ ವದನೆಯಂ ಮುಕ್ತಾಭರದನೆಯಂ ಸಾಧುಜನ ವತ್ಸದನೆಯಂ ||
ಕಮಲ ಸಖ ಭಾಷೆಯಂ ಸಾತ್ವಿಕೋಲ್ಲಾಸೆಯಂ |
ಕಮನೀಯ ಚರಿತೆಯಂ ತ್ರೈಜಗದ್ಭರಿತೆಯಂ |
ವಿಮಲೆ ವಾಗ್ದೇವಿಯಂ ಭಕ್ತ ಸಂಜೀವಿಯಂ ಭಜಿಸಿ ಮತಿಯಂ ಪಡೆವೆನು ||7||

ಭಾಮಿನಿ

ಕಮಲಭವ ಭವ ಮುಖ್ಯಮರರಿಗೆ |
ನಮಿಸಿ ವೇದವ್ಯಾಸ ಮುನಿಪೋ |
ತ್ತಮನ ನೆರೆಕೊಂಡಾಡಿ ನಿರ್ಮಲ ಭಾವ ಭಕ್ತಿಯಲಿ ||
ವಿಮಲ ಶುಕಯೋಗಿಯನು ಧ್ಯಾನಿಸಿ |
ಯಮಿತ ಸತ್ಕವಿಗಳನು ಪೊಗಳುತ |
ಸುಮತಿಗಳು ಕೇಳ್ವಂತೆ ಪೇಳುವೆನೀ ಪ್ರಬಂಧವನು ||8||

ದ್ವಿಪದಿ

ಭಾರತ ಪುರಾಣದೊಳು ಪಾಂಡು ಭೂವರನು |
ಘೋರ ಋಷಿ ಶಾಪದಿಂದಾಗ ಸ್ವರ್ಗವನು ||9||

ಸರಿದರೆ ಬಳಿಕ ಬಂದಿರದೆ ಪಾಂಡವರು |
ವಾರಣಾವತವೆಂಬ ಪುರದೊಳಿದ್ದವರು ||10||

ದೈವ ತಂತ್ರದಲಿ ಲಾಕ್ಷಾಭವನದಿಂದ |
ಐವರಂದುಳಿದವರು ಬಿಲಮಾರ್ಗದಿಂದ ||11||

ಪೋಗಿ ವನದೊಳು ಹಿಡಿಂಬಾಸುರನ ತರಿದು |
ಆಗಲಾ ಭೀಮನು ಹಿಡಿಂಬಿಯನು ನೆರೆದು ||12||

ಕಲಿ ಘಟೋತ್ಕಚನ ಪಡೆದಲ್ಲಿಂದ ಬಂದು |
ಬಳಿಕೇಕ ಚಕ್ರನಗರದಲಿ ನೆರೆನಿಂದು ||13||

ಬಕನ ಮುರಿದನಿಲಜಾದ್ಯರು ಸುಭಿಕ್ಷೆಯಲಿ |
ಪ್ರಕಟಿಸದೆ ಬಂದು ದ್ರೌಪದಿಯ ಪ್ರೇಮದಲಿ ||14||

ವರಿಸಿದಾ ಕಥನವನು ಯಕ್ಷಗಾನದಲಿ |
ಒರೆವೆನೈ ಮಧ್ವೇಂದ್ರ ಕೃಷ್ಣನೊಲುಮೆಯಲಿ ||15||

ಕವಿತೆಯೊಳು ತಪ್ಪಿರಲು ತಿದ್ದಿಬಲ್ಲವರು |
ಸುವಿಲಾಸದಿಂದೊಲಿದು ಕೇಳ್ವುದೆಲ್ಲವರು ||16||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಯ ಜನಮೇಜಯಗೆ ವೈಶಂ | ಪಾಯ ಮುನಿ ಭಾರತ ಪುರಾಣವ |
ಪ್ರೀಯದಿಂ ಪೇಳ್ತಿರಲು ಗುಣ ಸಮು | ದಾಯಗಂದು ||17||

ಕ್ಷಿತಿವರಾಗ್ರಣಿ ಕೇಳಿಕೊಂಡನು | ಮಿಥುನ ಶಾಪದಿ ಪಾಂಡು ನಪ ಸುರ |
ಪತಿಯ ಸನ್ನಿಧಿಗಯ್ದನಂತ್ರದೊ | ಳತುಳ ಬರಲು ||18||

ಪರಮ ವೈರವ ಮನದಿ ಯೋಚಿಸಿ | ದುರುಳ ಕೌರವನೆಸಗಿದುನ್ನತ |
ದರಗಿನಾಲಯದಿಂದ ನಮ್ಮವ | ರರಿತು ಬಳಿಕ ||19||

ಪೋಗೀ ಮತ್ತೇನೆಸಗಿದರು ಶುಭ | ಯೋಗ ಮುಂದಣ ಕಥೆಯನೆಲ್ಲವ |
ನೀಗ ವಿವರಿಸಬೇಕೆನುತ ತಲೆ | ವಾಗಲಂದು ||20||

ಅರಸನನು ತಕ್ಕೈಸಿ ಯೋಗೀ | ಶ್ವರನುಸುರ್ದನ ಮತ್ತೆ ಹರುಷದಿ |
ಕರುಣನಿಧಿ ಕೇಳೆನುತಲವ ತಾ | ಹರುಷದಿಂದ ||21||

ರಾಗ ಭೈರವಿ ಝಂಪೆತಾಳ

ಧರಣೀಶ ಲಾಲಿಸೈ | ವರ ಪಾಂಡು ನಂದನರ |
ಚರಿತ ಸುಧೆಯಿದು ದುರಿತ | ಗಿರಿ ವಜ್ರದಂಡ ||22||

ನೀ ಪರೀಕ್ಷಿಸು ಪಾಂಡು | ಭೂಪ ಬಳಿಕಾ ಋಷಿಯ |
ಶಾಪ ವಶದಿಂ ಹಸ್ತಿ | ನಾ ಪುರವ ಪೊರಟು ||23||

ಸಷ್ಟಿಯೊಡೆತನವ ಧತ | ರಾಷ್ಟ್ರನಿಂಗಿತ್ತು ನಿಜ |
ಪಟ್ಟದರಸಿಯರು ಸಹ | ಪಟ್ಟಣವ ಪೊರಟು ||24||

ಶತ ಶಂಗ ಪರ್ವತದಿ | ಯತಿಗಳ ಸಮೂಹ ಸಹಿ |
ತತುಳ ಭುಜ ಬಲನಿರ್ದೆ | ನತಿ ಭಕುತಿಯಿಂದ ||25||

ಹುಲಿ ಕರಡಿ ಸಿಂಹ ಸಹಿ | ತುಲಿವ ಬಾಧೆಯ ಬಿಡಿಸಿ |
ಗೆಲವಿನಿಂದಾಗ ಮುನಿ | ಕುಲದಾಶ್ರಯದಲಿ ||26||

ಕುಂತಿ ಮಾದ್ರಿಯರಲ್ಲಿ | ಸಂತಸದಿ ಋಷಿ ಕೊಟ್ಟ |
ಮಂತ್ರದಿಂ ಸುತರಯ್ವ | ರಂ ತಳುವದಂದು ||27||

ಪಡೆದು ಪರಮೋತ್ಸಹದ | ಕಡಲೊಳಾಳುತಲೆ ನಿಜ |
ಪೊಡವಿಪತಿ ಸಹಿತಿರ್ದ | ರಡವಿಯಾಲಯದಿ ||28||

ಸುರಪತಿಯ ಸಿರಿಯಿದಕೆ | ಸರಿಬಾರದೆನೆ ಪುಣ್ಯ |
ಚರಿತರುದಿಸಿದ ಮೇಲೆ | ಹರುಷಮಯವಾಯ್ತು ||29||

ಇಂತಿರಲಿಕಾಗಮ ವ | ಸಂತ ಋತು ಬಂದುದೊಡ |
ನೆಂತು ಪೇಳುವೆನು ಭೂ | ಕಾಂತ ಕೇಳೆಂದ ||30||

ವಾರ್ಧಕ

ಯೋಗಿಗೆತ್ತಿದ ಖಡ್ಗಧಾರೆಯೆನೆ ರಂಜಿಪ ವಿ |
ಯೋಗಿಗೊಡ್ಡಿದ ಕತಕ ಸುರಗಿಯೊ ಬಲಾತ್ಕರ ವಿ |
ರಾಗಿಗಳ ಹೆಡತಲೆಯ ದಡಿಯಾಗಿ ಪರಮ ನೈಷ್ಣಿಕರಿಗಲಗಣಸೆನಿಸುವ ||
ಆಗಮಿಕರೆದೆ ಶೂಲಮಾಗಿ ಘನ ಗರ್ವಿತದ |
ಗೂಗೆಗಳ ನಖಸಾಳವೆಂದೆನಿಸಿ ಪರಿಮಳಿಪ |
ಭೋಗಿಗಳ ಕುಲದೈವಮೆನೆ ತೋರಿದುದು ಸಕಲ ಕುಸುಮಮಯ ಸಮಯವಂದು ||31||

ಮೊರೆವ ತುಂಬಿಯ ಗಾಯಕರ ಮುಂದೆ ಪೊಗಳ್ವ ನಯ |
ಸ್ವರದ ಕೋಗಿಲೆಯ ಪಾಠಕರ ಪೊಸತೆನಿಸಿ ಬಂ |
ಧುರದ ಗಿಳಿಗಳ ಪಂಡಿತರ ಸಮೂಹದೊಳೆಸವ ಮದವೇರ್ದ ಕರಿಘಟೆಗಳ ||
ಅರಳಿರ್ದ ತಾವರೆಯ ಸತ್ತಿಗೆಯ ಮೊತ್ತಮಂ |
ಬಿರಿವ ಕುಸುಮಚಾಮರಗಳ ಚತುರಂಗ ಬಲ |
ವೆರಸಿ ದಂಡೆತ್ತಿ ಸಂಭ್ರಮದಿಂದ ಬಂದಾಗ ಪಾಂಡು ಭೂಪತಿಯ ಮೇಲೆ ||32||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಫಲಿತ ಚೂತದ ಸೊಂಪುಗಳ ನೆರೆ | ಕಲಿತ ಶಾಖೆಯ ಕೆಂಪುಗಳ ಪರಿ |
ಮಳಿಪ ಕಮಲದ ಕಂಪುಗಳು ವೆ | ಗ್ಗಳಿಸಿತಾಗ ||33||

ಎಳೆಲತೆಯ ಸೊಂಪುಗಳೆಸೆವ ಪರಿ | ಮಳಿಪ ನವಗುಂಪುಗಳ ಮಿಗೆ ಪ್ರ |
ಜ್ವಲಿಸಿ ವನದೊಳು ಸೂರೆ ಝಳಪಿಸಿ | ಬೆಳೆವುತಾಗ ||34||

ಪಸರಿಸಿತು ಮಧುಮಾಸ ತಾವರೆ | ಎಸಳ ದೋಣಿಯ ಮೇಲೆ ಹಾಯ್ದವು |
ಕುಸುಮ ರಸ ಸೌರಭದಿ ತುಂಬಿಗ | ಳೆಸೆವುತೊಡನೆ ||35||

ಒಸರ್ವ ಮಕರಂದದ ತುಷಾರವ | ಕೆಸರೊಳದ್ದುದು ಕೊಂಚೆಗಳು ಪಗ |
ಲೆಸೆವ ದಂಪತಿಯವಯಹಂಸೆಗೆ | ಳೆಸೆವುತಾಗ ||36||

ಒಗುವ ಕಾಮನ ದಳದ ಚೂಣಿಯ | ಸೊಗಡು ಹೊಯ್ದಡೆ ಕೈದು ವಿಕ್ಕಿತು |
ವಿಗಡ ಮುನಿಜನ ಏನನೆಂಬೆನು | ಒಗೆಯದರಿತು ||37||

ಭಾಮಿನಿ

ವಸುಧೆ ಪತಿ ಕೇಳಾ ವಸಂತದೊ |
ಳೆಸೆವ ಮಾದ್ರಾದೇವಿ ನಾನಾ |
ಕುಸುಮದಿಂ ಶಂಗಾರಮಾಗಿಯೆ ವನದೊಳಾಡುತಿರೆ ||
ಶಶಿವದನೆಯಿವಳ್ಯಾವಳೋ ಊ |
ರ್ವಶಿಯೊ ರಂಭೆಯೊ ದೇವ ವಧುವೋ |
ಉಸುರಲಮ್ಮೆನು ಶಿವ ಶಿವಾಯೆಂದರಸ ಭ್ರಮೆಗೊಂಡ ||38||

ರಾಗ ತುಜಾವಂತು ಝಂಪೆತಾಳ

ಕಂಡು ಭ್ರಮೆಗೊಂಡು ವರ ಪಾಂಡು ಭೂವರನು |
ಪುಂಡರೀಕಾಕ್ಷಿ ಮಾದ್ರಾದೇವಿಯಳನು  || ಪಲ್ಲವಿ ||

ರೋಮಕೂಪೆಂಟು ಕೋಟಿಯಲಿ ನಾಟಿರುವಂಥ |
ಕಾಮನಾಸ್ತ್ರದ ಬಗೆಯನರಿವರಾರು ||
ಆ ಮಹೀಪಾಲನಳುಕಿದನು ಪ್ರಜ್ಞಾಂಬುಧಿ ವಿ |
ರಾಮವಾಯ್ತವಳ ಕಟಿ ಜಾನು ಪದಕೆ ||39||

ಮರೆದು ಹಿಂದಣದನ್ನು ಮಾಯೆಯಲಿ ಮುಳುಗಿ ಮಿಗೆ |
ಸರಸವ್ರತೆ ಕುಂತಿ ಸತಿ ತಾನರಿಯದಂತೆ ||
ಮೆರೆವ ಎಳೆಲತೆವನೆಯೊಳಾಡುವಂಗನೆಯ ಕಂ |
ಡುರವಣಸಿ ಸಾರಿದನು ಸ್ಮರ ತಂತ್ರದಿಂದ ||40||

ತರಳಾಕ್ಷಿ ನಿಲ್ಲು ಬಾರೆನುತ ಸೆರಗನು ಪಿಡಿಯ |
ಲೆರಗಿದಳು ಬೇಡೆನುತ ಪತಿಯ ಪದಕೆ ||
ತುರುಬ ಹಿಡಿದೆತ್ತಿ ಮುದ್ದಿಸಲೊಡನೆ ಹೆಣಗಿದಳು |
ಕರವ ಮುಗಿದುಸುರಿದಳು ದೂರ ನಿಂತು ||41||

ರಾಗ ಯರಕಲ ಕಾಂಭೋಜಿ ಝಂಪೆತಾಳ

ಆಗದಾಗದು ನಲ್ಲ ವಿರಹ ತರವಲ್ಲ | ನೀಗದಿರು ಪ್ರಾಣವನು ನೀ ನಿಧಾನಿಸು ಸೊಲ್ಲ || ಪಲ್ಲವಿ ||

ಕೊಂದ್ಯಲಾ ಕಡುಪಾಪಿ ಸ್ಮರಗೆ ಗುರಿಯಾಗಿ ನೀ |
ಹಿಂದೆ ಮಾಡಿದ ಕತ್ಯಗಳನು ನೀ ಮರೆದು ||
ಎಂದಿಗಾದರು ಋಷಿಯ ಶಾಪ ತಪ್ಪುವುದುಂಟೆ |
ಕಂದರಿಂಗಾರು ಗತಿಯೆಂದು ಹಲುಬಿದಳು ||42||

ಸುಡು ಸುಡೀ ದುರ್ವಿಷಯಕೆಳಸಿ ಮರುಳಾಗದಿರು |
ಉಡಿಯೊಳುರಿ ಕಟ್ಟಿರಿಸೆ ಸುಡದಿರುವುದೆ ||
ಕೆಡಬೇಡ ನಿನ್ನ ದಢಜ್ಞಾನವಿಂದೇನಾಯ್ತು |
ಬಿಡುವೇಕೆ ನಿಜ ತನುವನಲ್ಪ ಸುಖಕಾಗಿ ||43||

ಅಕ್ಕ ಕುಂತಿಯೊಳೇನನೆಂಬೆ ನಾನಕಟ ಕೈ |
ಸಿಕ್ಕಿದೆನೆಲಾ ಶಿವನೆ ತಪ್ಪಿಸೆನುತ ||
ದುಃಖದಲಿ ಕರಗಿ ಕಂಗೆಟ್ಟು ಬೆಂಡಾದಳುರೆ |
ಕಕ್ಕುಲಿತೆಗೊಳುತ ಕಾಂತನೊಳು ಪೇಳಿದಳು ||44||

ಭಾಮಿನಿ

ಕುಂಭಿನೀಶ್ವರ ಕೇಳು ಬಳಿಕಾ |
ಅಂಬುಜಾಕ್ಷಿಯು ಹಲುಬೆ ನೀತಿಯ |
ಕೊಂಬುದೇ ಮನುಮಥನ ಸಬಳಂ ಬೆನ್ನ ಮೂಡಿದುದು ||
ಮುಂಬರಿವುತವ ಭಯವನರಿಯದೆ |
ಡಂಭಕತ್ವದೊಳುಸುರಿದನು ವರ |
ಕುಂಭ ಕುಚಯುಗೆ ಯಾಕೆ ನಿರ್ದಯಳಾದೆ ನೀನೆನುತ ||45||

ರಾಗ ಭೈರವಿ ಏಕತಾಳ

ಕೇಳೆಲೆ ಕಾಳಾಹಿವೇಣಿ | ಕಲ್ಲೆದೆಯಾಗುವರೇನೆ |
ಅಳಿದನೊಡನೇ ಇಂಥಾ | ಮುನಿಸೇನೆ ಪಿಕಗಾನೆ  || ಪಲ್ಲವಿ ||

ಬಿಡೆ ನಿನ್ನ ಋಷಿ ಶಾಪಗೀಪದ | ಗೊಡವೆಯರಿಯೆ ನಾನು |
ದಢವಾಗಿ ತಾ ಬ್ರಹ್ಮ ಬರೆದ | ಬರಹವಿರಲು ತಾನು ||
ಬಡ ಕಂಟಕಾದಿಗಳೆಲ್ಲಾ ಬಂದು | ಬಿಡದೆ ಮಾಳ್ಪುದೇನು |
ಕಡುಪಾಪಿ ಕಾಮನಸ್ತ್ರಕೆ | ಸಿಲುಕಿದೆನು ನಾನು ||46||

ಮರಿದುಂಬೆಗುರುಳೆ ಮನ್ಮಥ | ನರಗಿಣಿ ಕೇಳ್ನಿನ್ನ |
ನೆರೆದ ಮೇಲೆ ಜೀವ ತೆರಳಿ | ಪೋದರೇನು ಮುನ್ನ ||
ಸುರ ಸ್ವರ್ಗ ಸಿಕ್ಕುವುದು | ಅರಿತು ಕೂಡೀಗೆನ್ನ |
ವಿರಹದಿ ಬಳಲಿಸದೆ ಸ | ತ್ಕರಿಸಿ ಸಲಹೆನ್ನ ||47||

ಇಂತೆಂದು ಒತ್ತಾಯದಿಂದ | ಕಾಂತೆಯೊಳ್ಮಾತಾಡಿ |
ಅಂತರಂಗವರಿತಳಾಗ | ಕಾಂತೆ ಪತಿಯ ನೋಡಿ ||
ಸಂತಸದಿಂ ಸಮರತಿಯೊ | ಳಂತರಿಸದೆ ಕೂಡಿ |
ಕಂತು ಬಾಣನುದ್ರೇಕದಿ ಭೂ | ಕಾಂತನ ಈಡಾಡಿ ||48||

ವಾರ್ಧಕ

ಆ ಸುಖದ ಝೇಂಪಿನಿಂದವನೀಶ ಮೈಮರೆಯ |
ಲೋಸರಿಸಿದುದು ವದನ ನಯನೇಂದ್ರಿಯಂಗಳುರೆ |
ಪೈಸರಿಸಿದುದು ತೆಕ್ಕೆ ಸಡಲಿತಾಕ್ಷಣದೊಳೀ ದೇಹ ಬರಿಸಿದುದೊಯ್ಯನೆ ||
ಸೂಸಿದುದು ನಿಟ್ಟುಸಿರು ಸೊರಗಿ ಸಂಗಳೆದು ಮಾ |
ದ್ರಾಸತಿಯುರಸ್ಥಳದೊಳೊಡನೆ ಕದಪಿಟ್ಟು ನಿ |
ರ್ಭಾಸದೊಳಿರಲ್ಕಂಡು ಕಣ್ದೆರೆದು ಕಮಲಾಕ್ಷಿ ಮೊರೆಯಿಟ್ಟಳೇನೆಂಬೆನು ||49||

ರಾಗ ಕಾಂಭೋಜಿ ಏಕತಾಳ

ಏನು ಮುನಿದೆಯೆನ್ನೊಳಿಂತು | ಕಾಂತ ಕಾಂತ | ಬರಿದೆ |
ಮೌನವೇನು ಮಾತನಾಡು | ಕಾಂತ ಕಾಂತ ||
ಆನನ ಸಿರಿ ಕಂದಿದ್ಯಾಕೊ |  ಕಾಂತ ಕಾಂತ | ಮಹಾ |
ಮಾನನಿಧಿ ಕಣ್ದೆರೆದು ನೋಡು | ಕಾಂತ ಕಾಂತ ||50||

ವಿಷಕನ್ನಿಕೆ ನಾನಾದೆನಯ್ಯ | ಕಾಂತ ಕಾಂತ | ಎನ್ನ |
ದೆಸೆಯಿಂದ ಹೀಗಾಯಿತಯ್ಯ | ಕಾಂತ ಕಾಂತ ||
ಉಸುರುವೆ ನಾನಕ್ಕನೊಡನೆ | ಕಾಂತ ಕಾಂತ | ಅಕಟ |
ಕುಸುಮಾಸ್ತ್ರ ಕೊರಳ ಕೊಯ್ದ | ಕಾಂತ ಕಾಂತ ||51||

ಪಾಂಡು ಭೂಪನೆಂಬ ಪೆಸರು | ಕಾಂತ ಕಾಂತ | ಈ ಭೂ |
ಮಂಡಲದೊಳಡಗಿತಲ್ಲೋ | ಕಾಂತ ಕಾಂತ ||
ಹೆಂಡ್ಯರಿಬ್ಬರೇನ ಮಾಳ್ವೆವು | ಕಾಂತ ಕಾಂತ || ಇನ್ನು |
ದ್ದಂಡ ಸುತರಿಂಗಾರುಗತಿಯೊ | ಕಾಂತ ಕಾಂತ ||52||

ಭಾಮಿನಿ

ಇಂತು ಮಾದ್ರಾದೇವಿ ದುಃಖವ |
ನಾಂತು ವರ್ಣಿಸುತಿರಲಿಕಾ ಸಮ |
ಯಾಂತರದೊಳೈವರು ಕುಮಾರರು ಸಹಿತ ಗಾಢದಲಿ ||
ಕುಂತಿ ಬಂದೀಕ್ಷಿಸುತ ಧೊಪ್ಪನೆ |
ಕಾಂತನಂಗದಿ ಬಿದ್ದಳಾಗ ಮ |
ಹಾಂತ ಶೋಕದಿ ಕೇಳು ಜನಮೇಜಯ ಮಹೀಪತಿಯೆ ||53||

ರಾಗ ನೀಲಾಂಬರಿ ರೂಪಕತಾಳ

ಪ್ರಾಣೇಶನೆ ಮುನಿದೆಮ್ಮನು ಬಿಟ್ಟಿಂದೆಲ್ಲಿಗೆ ಪೋದೈ |
ಕಾಣಿಸೊ ನುಡಿಗೆನ್ನರಸನೆ ಮೋಹದಿ ಜವಗೆಡದೆ ||
ಕ್ಷೋಣಿಯನಾಳುವ ನಿನ್ನಯ ಸುತರಿಂಗಿನ್ಯಾರೋ ಗತಿ |
ಬಾಣವು ತಾಗಿತೆ ಇಂದಿಗೆ ಮುನಿಯಾ ಶಾಪವದು ||54||

ಒಂದೆಸೆಯೊಳು ಕುಂತಿಯು ಹೀಗೆಂದುರೆ ದುಃಖಿಸಿದಳು ಮಿಗೆ |
ನಂದನರೈವರು ಪಿತ ಹಾಯೆಂದೆನುತ್ಹಲುಬಿದರು ||
ಇಂದಿಗೆ ದೇಶಿಗರಾದೆವು ಮುಂದ್ಯಾರೂ ಗತಿ ನಮಗೇ |
ಕಂದೆರೆದೆಮ್ಮೊಳು ಮಾತನ್ನಾ ಡೆಂದೊರಲಿದರು ||55||

ಮುಪ್ಪಿನ ಕಾಲಕೆ ನಿಮಗಿನ್ನೀದೆಸೆ ಬಂದುದೆ ಹಾಹಾ ||
ಧೊಪ್ಪನೆ ಕೆಡೆದಿರುವಿರೆ ಈ ನಟ್ಟಡವಿಯೊಳಕಟ ||
ಸರ್ಪಿಣಿಯಾದಳೆ ಜನನಿಯು ಸಾಕಿನ್ನೀ ವಿಧಿವಶದಿಂ |
ಮುಪ್ಪುರ ಹರ ಶಿವ ಮಹದೇ ವೆಂದಳಲಿದರವರು ||56||

ಭಾಮಿನಿ

ಹೆಂಡಿರಿಬ್ಬರು ತನಯರೈವರು |
ಪಾಂಡು ಭೂಪನ ಶವದಿ ಬೀಳು |
ತ್ತಂಡಲೆವುತಳುತಿರಲಿದೇನೀ ರಭಸವೆಂದೆನುತ ||
ಕಂಡು ವನದೊಳಗಿರುವ ಋಷಿಗಳ |
ತಂಡವಯ್ತಂದಚ್ಚರಿಯ ಬೆಸ |
ಗೊಂಡು ಸಂತೈಸಿದರು ಮತ ಸಂಜೀವನೋಕ್ತಿಯಲಿ ||57||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಲ್ಲ ಮುನಿಗಳು ಕುವರರನು ಮಿಗೆ | ಭುಲ್ಲವಿಸಲನಿತರೊಳು ಮೂರ್ಛೆಯ |
ಮೆಲ್ಲನಿರುತಾ ಕುಂತಿ ಪೇಳ್ದಳು | ವಲ್ಲಭನಿಗೆ ||58||

ಅರಸ ಬಿಟ್ಟೆಮ್ಮುವನು ಸುರ ಸತಿ | ಯರಿಗೆ ಸೇರಿದೆ ಎನಗೆ ತಿಳಿಯದೆ |
ತುರುಬು ಕೊಸುವೆನವರನೆಸಗುವೆ | ಹೊರಗೆಲಸಕೆ ||59||

ಎಂದು ಕುಂತಿಯು ಧೈರ್ಯದಲಿ ನಿಜ | ನಂದನರನಿಂದೊಲಿದು ಸಲೆ ಕರೆ |
ದೆಂದಳಾಕ್ಷಣ ಮಾದ್ರಿ ನುಡಿದಳು | ನೊಂದು ಕೊಳುತ ||60||

ಮರುಳೆಲವೊ ನೀನಕ್ಕ ತನ್ನಯ | ವರ ಕುಮಾರರು ನಿನ್ನ ಕೈಯೆಡೆ |
ಧರಣಿಪತಿಯೆನಗಾಗಿ ಮಡಿದುದ | ನರಿಯೆ ನೀನು ||61||

ಸುರವಧುಗಳೊಡನಿರಲಿ ನಿನ್ನಯ | ಹರಿಬವೆನ್ನದು ನೋಡೆನುತ ಪದ |
ಕೆರಗಿ ಕೊಟ್ಟಳು ಸುತರನೆಮಜನ | ಕರದೊಳಂದು ||62||

ವಾರ್ಧಕ

ಪತಿಯ ಸಹಗಮನದಿಂ ಪರುಠವಿಸಿ ಮಾದ್ರಿಯಂ |
ದತಿಶಯದೊಳಂಗಮಂ ಬಿಡಲೊಡನೆ ಕುಂತಿ ನಿಜ |
ಸುತರಯ್ವರೊಗ್ಗಿನಲಿ ಬಂದುರೆ ಪುನೀತ ಕತ್ಯವನಮಲ ಸ್ಮೃತಿ ಮತದಲಿ ||
ಯತಿಗಳನು ಮುಂದಿಟ್ಟು ಮಾಡಿಸಿ ಕುಮಾರರಂ |
ಶತಶಂಗಶೈಲದೊಳ್ ರಕ್ಷಿಸುತಿರಲ್ ತಮಗೆ |
ಮತವಲ್ಲವೆನುತ ವನದೊಳಗಿರುವರಖಿಳಮುನಿಪತಿಗಳಾಲೋಚಿಸಿದರು ||63||

ರಾಗ ಸಾಂಗತ್ಯ ರೂಪಕತಾಳ

ಅರಸ ತಾನಪಘಾತನಾದನಿಂದಾತನ | ತರುಣಿ ಬಾಲಕರು ಚಿಕ್ಕವರು ||
ನಿರತವಲ್ಲೀಗ ನಾವಿರುವದಾರಣ್ಯ ಇ | ಲ್ಲಿರಿಸಿಕೊಂಬುದು ಮತವಲ್ಲ ||64||

ಎಂದೊಂದುಗೂಡಿ ಮೌನಿಗಳೆಲ್ಲ ಮಾತಾಡಿ | ತಂದಿಭಪುರಿಯೊಳೆಲ್ಲರನು ||
ಒಂದುಳಿಯದೆ ಭೀಷ್ಮಗರುಹಿ ಒಪ್ಪಿಸಿ ನಡೆ | ತಂದರು ತಮ್ಮಯಾಶ್ರಮಕೆ ||65||

ವರ ಭೀಷ್ಮಾಚಾರ್ಯನಾ ಕುಂತಿ ಸಹಿತಣುಗರ | ಕರೆತಂದು ಧತರಾಷ್ಟ್ರಗರುಹಿ ||
ನೆರೆ ಊರ್ಧ್ವ ದೈಹಿಕಾದಿಗಳನ್ನು ವಿರಚಿಸಿ | ಒರೆಯೆ ಜನಂಗಳಿಗೆಲ್ಲ ||66||

ಮುಂದೆ ಯೋಜನ ಗಂಧಿಯಿರುವುದಲ್ಲನುಚಿತ | ವೆಂದು ವ್ಯಾಸನು ತನ್ನಾಶ್ರಮಕೆ ||
ಚಂದದಿ ಕರೆದೊಯ್ಯಲಿತ್ತ ಬಾಲತ್ವದೊ | ಳೊಂದಾಗಾಡುತಲಿರಲವರು ||67||

ಆಳಿನೇರಿಕೆ ಹಿಡಿಗಾವಡೆಗಳು ಚಿಣಿ | ಗೋಲು ಮುಂತಾದಾಟಗಳನು ||
ಲೀಲೆಯೊಳ್ ಹಕ್ಕಿಯಾಟಗಳಾಡುತಿರ್ದರು | ಮೇಲಾದ ಕಥೆಯ ಕೇಳೆಂದ ||68||

ವಾರ್ಧಕ

ಅರಸಕೇಳ್ ದ್ರೋಣನಶ್ವತ್ಥಾಮನೊಡಗೊಂಡು |
ವರ ದ್ರುಪದನೆಡೆಗೆ ಬರೆ ಪೂರ್ವ ಸ್ನೇಹಂಗಳಂ |
ಮೆರೆದು ಸತ್ಕರಿಸದಿರೆ ಕೋಪದಿಂ ಶಪಥಮಂ ತೊಟ್ಟು ತಾನಿಂತೆನುತಲೆ ||
ನೆರೆಶಿಷ್ಯರಿಂ ನಿನ್ನ ಕಟ್ಟಿತರಿಸುವೆನೆಂದು |
ಮರಳಿ ಬಂದಸ್ತ್ರ ವಿದ್ಯಾಭ್ಯಾಸವೆಲ್ಲಮಂ |
ಭರತ ಕುಲಜರ್ಗರುಹಿವರು ಕಾಣಿಕೆಯನವರುಭಯರೊಡನೆ ಕೇಳ್ದನೊಲಿದು ||69||

ರಾಗ ತುಜಾವಂತು ಝಂಪೆತಾಳ

ಏನಿರೈ ಕುರುಕುಲಾಂಬುಜ ಭಾನುಗಳಿರ | ಏನನೀವಿರಿ ನೀವು ಗುರುದಕ್ಷಿಣೆಗಳ || ಪಲ್ಲವಿ ||

ರಾಜ ಕೌರವ ನೀನು ನಿನ್ನ ಸಹಜಾತರ್ಸಹ |
ರಾಜೀವ ಸಖ ಸುತನು ಸಿಂಧು ಭೂಪತಿಯು ||
ಮಾಜದೇ ಧರ್ಮಜನು ಮಾರುತರ್ಜುನರು ನಮ |
ಗಾ ಜನಪ ದ್ರುಪದನನು ಕಟ್ಟಿತರುವವರ್ಯಾರು ||70||

ಅರಿತು ಪೂರ್ವದ ಸ್ನೇಹವೆಂದು ನಾ ಪೋದರೆಯು |
ಅರಸುತನದುಬ್ಬಿನಲಿ ಪಾಂಚಾಲನಪನು ||
ಕರೆದು ಮನ್ನಿಸದಿರಲು ಭಾಷೆಯನು ಪೇಳಿದನು |
ಕರಕಟ್ಟಿ ಶಿಷ್ಯರಿಂ ತರಿಸುವೆನುಯೆನುತ ||71||

ಇನ್ನು ಪೇಳುವದೇನು ಕನಕ ಮಣಿ ಭಂಡಾರ |
ವನ್ನು ತಂದಿತ್ತಡೆಮಗದು  ತಪ್ತಿಯಲ್ಲ ||
ಪನ್ನತಿಕೆಯಿಂದವನ ಕೈ ಕಟ್ಟಿ ತಂದು ಪದ |
ವನ್ನು ಹಿಡಿಸಿದರೆ ಮಮ ಮನಕೆ ಪರಿತೋಷ ||72||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದ ಮಾತನು ಕೇಳಿ ಕೌರವ | ನೆಂದನಾ ದ್ರುಪದನನು ಸೆರೆವಿಡಿ |
ದೊಂದು ನಿಮಿಷಕೆ ತರುವೆನೆನುತಾ | ನಂದದಿಂದ ||73||

ರವಿಜ ಶಕುನಿ ಜಯದ್ರಥಾದ್ಯರ | ನವನಿಪತಿಯೊಡಗೊಂಡು ಪೊರಟನು |
ತವಕದಿಂ ಬಲು ಪಟು ಭಟರು ಸಹೀ | ತವಘಟಿಸುತ ||74||

ಧಾಳಿಯಿಟ್ಟರು ಗಂಗೆಯೆತ್ತರ | ಕ್ಕೂಲ ದೇಶಕ್ಕಾಗಿ ಬಲು ನೀ |
ಸ್ಸಾಳಕೋಟಿಗಳೊದರಿದವು ಸ | ಮ್ಮೇಳದಿಂದ ||75||

ಧೂಳಿ ಕೋಟೆಯಗೊಂಡುರಿಪು ರಾ | ಜಾಲಯಕೆ ಚೂಣಿಯಲಿ ಬರೆ ಪಾಂ |
ಚಾಲನನುಜರು ಹೊಯ್ದರಾ ರಿಪು | ಜಾಲಗಳನು ||76||