ಯಕ್ಷಗಾನ ದ್ರೌಪದೀಸ್ವಯಂವರ

ಶಾರ್ದೂಲವಿಕ್ರೀಡಿಂ

ಲಾಕ್ಷಾಕ್ಲೇಶದಿ ಕಾಡಿನೊಳ್ ಬಹುತರಂ ರಕ್ಷರ್ಗಳಾ ಬಾಧೆಯಿಂ
ಸಾಕ್ಷಾದ್ಬೆಂಬಲನಾಗಿ ಪಾಂಡುಸುತರಂ ರಕ್ಷಿರ್ಪನಾ ಕೃಷ್ಣನುಂ |
ಪಕ್ಷೀಂದ್ರಧ್ವಜನಾ ಸುಪಾಂಡುತನಯರ್ಗಾಕ್ಷೋಣಿ ಪಾಂಚಾಲಿಯಾ
ತಾ ಕ್ಷೇಮೇಣ ವಿವಾಹ ಮಂಗಲಕರಂ ಸುಕ್ಷೇಮಮಂ ಮಾಡಲೀ ||

ಕಂದ

ಶ್ರೀವನಿತಾರಮಣಂ ಸುರ |
ಸೇವಕಜನವಂದಿತ ಮನರಂಜಿತ ಚರಣಂ ||
ಭಾವಜಜನಕಂ ಘನಕರು |
ಣಾವಾರಿಧಿ ಕೃಷ್ಣನೀಗೆಮಗತಿ ಶುಭಮಂ ||1||

ರಾಗ ನಾಟಿ ಝಂಪೆತಾಳ

ಜಯ ಜಯತು ಶುಂಡಾಲವದನ ವರ ಗುಣಸದನ |
ಜಯ ಜಯತು ವಿಘ್ನಗಜಗಂಡಭೇರುಂಡ ||
ಜಯ ಜಯತು ಜಯತು ||2||

ಪಂಕಜಾಪ್ತ ಸಹಸ್ರಭಾಸ ಪರಮವಿಲಾಸ |
ಕುಂಕುಮಾಂಕಿತ ಭರಣಗಾತ್ರ ಸುಪವಿತ್ರ ||
ಜಯ ಜಯತು ಜಯತು ||3||

ಅಂಕುಶಸ್ವಪಾಷಾಣ ಪಾಶ ವರದೋದ್ಘ್ರಾಣ |
ಶಂಕರಪ್ರಿಯ ಸತ್ಕುಮಾರ ಭವದೂರ ||
ಜಯ ಜಯತು ಜಯತು ||4||

ವಾರ್ಧಕ

ಶ್ರೀರಮಣಂನಘ್ರಿಯಂ ಸ್ಮರಿಸಿ ಸಿರಿಯಂ ಭಜಿಸಿ |
ಸಾರಸಾಸನ ಸರಸ್ವತಿ ಶಂಭು ಗುರು ಗಣಪ |
ಗೌರಿ ವೇದವ್ಯಾಸ ವಾಲ್ಮೀಕಿ ಶುಕ ಸೂತರಿಂದ ಮತಿಯಂ ಯಾಚಿಸಿ ||
ನಾರದಾದ್ಯಖಿಳ ಮುನಿಗಳಿಗೆರಗಿ ಭಕ್ತಿಯಿಂ |
ದೋರಂತೆ ದಿಕ್ಪಾಲರಂ ನೆನೆದು ಹರುಷದಿಂ |
ಧಾರಿಣಿಯ ದೇವ ಕವಿಜನರ ಬಲಗೊಂಡೊರೆವೆನೀ ಮಹಾ ಸತ್ಕಥೆಯನು ||5||

ದ್ವಿಪದಿ

ವರ ಮಹಾಭಾರತ ಕಥಾಬ್ಧಿಯೊಳಗಿರುವ |
ತರುಣಿಕುಲದೇವಿ ದ್ರೌಪದಿಸ್ವಯಂವರವ  ||6||

ಪೇಳುವೆನು ತಿಳಿದಂತೆ ಯಕ್ಷಗಾನದಲಿ |
ಶ್ರೀಲೋಕನಾಥನ ಕೃಪಾಕಟಾಕ್ಷದಲಿ  ||7||

ತಪ್ಪಿರಲು ನೋಡಿ ಸಮಗೈದು ಸಜ್ಜನರು |
ಒಪ್ಪುಗೊಂಡದ ತಿದ್ದಿ ಮೆರೆಸಿ ಸನ್ಮನರು ||8||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಯ ಜನಮೇಜಯನು ವೈಶಂ | ಪಾಯನನ ಪದಕೆರಗಿ ಕೇಳ್ದನು |
ಜೀಯನವರಹ ಪಾಂಡುಸುತರಿಂ | ಗಾಯತಿಯಲಿ ||9||

ದ್ರುಪದಸುತೆಯ ವಿವಾಹವೆಂತಾ | ಯ್ತಪರಿಮಿತ ಶುಭ ಪುಣ್ಯಕಥೆಯದ |
ನುಪಮಿಸಿಯೆ ಪೇಳೆನಲು ಮುನಿವರ | ಕಪೆಯೊಳೆಂದ ||10||

ರಾಗ ಭೈರವಿ ಝಂಪೆತಾಳ

ಧರಣಿಪತಿ ಲಾಲಿಸೈ | ಹರಿಪದಾಂಬುಜಭಕ್ತಿ |
ನಿರತರಹ ಪಾಂಡವರ | ವರ ಚರಿತ್ರೆಯನು ||11||

ವನದಲಿಹ ಪಾಂಡುನಂ | ದನರು ಹಸ್ತಿನಪುರದಿ |
ಘನಮಹಿಮ ಭೀಷ್ಮನಿಂ | ದನುಶೋಭಿಸಿದರು ||12||

ಬಳಿಕ ದ್ರೋಣನ ಮುಖದಿ | ಬಿಲುವಿದ್ಯೆಗಳನೆಲ್ಲ |
ಕಲಿತು ತಾವ್ ಪೂರೈಸಿ | ಸಲೆ ಮೆರೆದರವರು ||13||

ಮತ್ತೆ ಪಾಂಚಾಲನನು | ತೆತ್ತು ಗುರುದಕ್ಷಿಣೆಯ |
ನಿತ್ತರಹುದೆಂದೆನಲು | ಪಾರ್ಥನಾಕ್ಷಣಕೆ ||14||

ಗೆಲಿದು ದ್ರುಪದನನು ಕಡು | ಗಲಿತನದಿ ಹಿಡಿತಂದು |
ಸಲಿಸಿದರು ದಕ್ಷಿಣೆಯ | ನೊಲಿದು ದ್ರೋಣನಿಗೆ ||15||

ವಾರ್ಧಕ

ಧರಣಿಪತಿ ಕೇಳ್ ಬಳಿಕ ದ್ರುಪದಾವನೀಶ್ವರಂ |
ಗರುಡಿಯಾಚಾಯನಿರ್ಂ ಪರಿಭವವನಾಂತು ನಿಜ |
ಪುರಿಗಾಗಿ ಬಂದು ದ್ರೋಣನನೈದೆ ಗೆಲುವಸುತನಂ ಪಾರ್ಥಗಹ ಸುತೆಯನು ||
ವರ ಯಜ್ಞಮುಖದಿಂದ ಪಡೆಯೆ ಧಷ್ಟದ್ಯುಮ್ನ |
ತರುಣಿ ದ್ರೌಪದಿಯೆಂಬ ಪೆಸರಿನಿಂ ಬಳೆಯುತ್ತ |
ಲಿರುತಿರ್ದರಿತ್ತಲುಂ ಪಾಂಚಾಲಪಟ್ಟಣದೊಳರಸ ಕೇಳಚ್ಚರಿಯನು ||16||

ರಾಗ ಮಧುಮಾಧವಿ ತ್ರಿವುಡೆತಾಳ

ಇಂತಿವರುಗಳಿರಲ್ಕೆ ಬಳಿಕಾ | ಕುಂತಿ ಸಹಿತಲಿ ಪಾಂಡುತನಯರು |
ದಂತಿಪುರವರದೊಳಗೆ ತಾವ | ತ್ಯಂತ ಸೌಖ್ಯದೊಳಿರ್ದರು ||17||

ಇರಲಿರಲ್ಕೀ ಪಾಂಡವರ ಬಳೆ | ಸಿರಿಯ ಕಾಣುತ ಕೌರವರಿಗಂ |
ಕುರಿಸಿದುದು ದಾಯಾದ್ಯಮತ್ಸರ | ಭರಿತವಾಗುತಲಿರ್ದುದು  ||18||

ಬಳಿಕ ಶಕುನಿಯ ದುರ್ವಿನೀತಿಯ | ಬಳಕೆಯಿಂದಲಿ ವಾರಣಾವತ |
ದೊಳಗೆ ಲಾಕ್ಷಾಗಹವ ನಿರ್ಮಿಸಿ | ಇಳೆಯನುರೆ ಸರಿ ಭಾಗವ ||19||

ಕೊಟ್ಟು ದಹಿಸುವೆನೆಂಬ ಮನದೊಳು | ಸಷ್ಟಿಪಾಲಕ ಪಾಂಡುಪುತ್ರರ |
ನಿಟ್ಟಿನಲ್ಲಿ ಕುರುಕ್ಷಿತೇಶನ | ದುಷ್ಟತನವೇನೆಂಬೆನು ||20||

ವಾರ್ಧಕ

ಅವನೀಶ ಕೇಳ್ ಬಳಿಕ ವಿದುರನೀ ವತ್ತಮರಿ |
ದವಸರದಿ ಕಳುಹಿರ್ದಖನಿಕನೆಂಬಾತನಿಂ |
ದವೆ ಬಿಲದ್ವಾರವನು ರಚಿಸಿ ತನ್ಮುಖದಿ ತನ್ನವರನಾ ಕಲಿ ಭೀಮನು ||
ತವಕದಿಂದನ್ಯರರಿಯದ ತೆರದೊಳೊಡಗೊಂಡು |
ಭವನ ಪಂಕ್ತಿಗೆ ಕಿಚ್ಚನಿತ್ತುರುಹಿದಂ ನೋಡು |
ವವರಿಗಾದುದು ಪಾಂಡುಸುತರುರಿದರೆಂದು ಮತ್ತೇನೆಂಬೆನಚ್ಚರಿಯನು ||21||

ರಾಗ ಭೈರವಿ ಝಂಪೆತಾಳ

ಇತ್ತ ಬಿಲಮುಖದಿಂದ ಪೊರಮಟ್ಟು ಪಾಂಡವರು |
ಹೆತ್ತವ್ವೆ ಸಹಿತ ನಡೆದರು ಸೂಟಿಯಿಂದ ||22||

ಕತ್ತಲೆಯೊಳೈದೆ ತಡವರಿಸಿ ಕಾಲೊಡೆದರಿವ |
ನೆತ್ತರಿಂದಲೆ ನಡೆವ ಬಟ್ಟೆ ಕೆಸರಾಯ್ತು ||23||

ಉರಿಯ ಮನೆಯಲಿ ಸಾಯಲೀಸದೆಮ್ಮನು ತಂದು |
ಕೊರಳ ಕೊಯ್ದನು ಭೀಮನೆಂದಳಾಕುಂತಿ ||24||

ಅರಸ ಹಿಡಿಯಲಿ ದಾನವರು ತಿನಲಿ ಮುಂದಡಿಯ |
ಇರಿಸಲಾರೆವು ಎಂದರಾ ಮಾದ್ರಿಸುತರು ||25||

ಧರ್ಮನಂದನನು ತಡವರಿಸಿ ಬೀಳುತ್ತೊಡನೆ |
ಸುಮ್ಮನಿರ್ದನು ನಡೆಯಲಾರೆನೆಂದೆನುತ ||26||

ಒಮ್ಮೆ ಕೆಲವೆಡೆಗೈದಿ ಕಾಲೊಡೆದು ಸಲೆ ನೊಂದು |
ನಮ್ಮ ಪ್ರಾಪ್ತಿಯಿದೆಂದು ನಿಂದನಾ ಪಾರ್ಥ ||27||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಾಕು ಸಾಕಾನಿಹೆನು ಹೆಕ್ಕಳ | ವೇಕೆ ಹೋ ಹೋ ಮಾಣಿರೆಂದೆನು |
ತೌಕಿ ಹೊತ್ತನು ಭೀಮನವರನ | ನೇಕಮುಖದಿ ||28||

ಹಾಯ್ದನೊಂದೇ ಭರದಿ ಭೂತಳ | ವೈದೆ ಕಂಪಿಸೆ ತರುನಿಕರಗಳ |
ಮೈದಳದೊಳಿರಿಸುತ ಪರಾಕ್ರಮಿ | ಒಯ್ದನಾಗ ||29||

ನಿದ್ರೆ ಹಸಿತಷೆಗಳನು ಗಣಿಸದೆ | ಕ್ಷುದ್ರ ವನಚರಭಯವನೆಣಿಸದೆ |
ಅದ್ರಿಸನ್ನಿಭ ನಡೆದನೊಂದೇ | ಬುದ್ಧಿಯಿಂದ ||30||

ವಾರ್ಧಕ

ಎಲೆ ನಪತಿ ಕೇಳಿಂತು ಹಲವು ಯೋಜನವನುಂ |
ಕಳೆದು ಬರುತಿರೆ ಭೀಮನಿವರು ನಿದ್ರಾವಶದಿ |
ತಲೆಗುತ್ತಲರಿದು ತಳಿರುಗಳ ತರಿದೊಟ್ಟಿ ಮರದಡಿಯೊಳೆಚ್ಚರದಂದದಿ ||
ಇಳುಹಿ ಕಾಲ್ಗಳನೊತ್ತಿ ಮಲಗಿಸುತವರ್ಗಳಂ |
ಹಲವು ಪರಿಯಿಂದ ಮನದೊಳಗೆಣಿಸಿ ಮರುಗಿದಂ |
ಕಲಿಭೀಮನಕಟಕಟ ಇನಿತಾಗಬಹುದೆಯೆಂದೆನುತ ದುಮ್ಮಾನದಿಂದ ||31||

ರಾಗ ಕೇದಾರಗೌಳ ಅಷ್ಟತಾಳ

ಸುರಿವಶ್ರುಜಲವ ಮುಂಜೆರಗಿನಿಂದೊರೆಸಿಕೊಂ | ಡುರೆ ಶೋಕದಲಿ ಭೀಮನು ||
ಹರ ಹರ ಶಿವವಂಶದರಸುಗಳ್ಗೀವಿಧಿ | ದೊರಕಿತೆ ಹಾಯೆಂದನು  ||32||

ಇಂತಾಗಬಹುದೆ ಪೇಳ್ ತಾಯೆ ಹಾ ನಿನಗೆ ನ | ಮ್ಮಂಥ ಮಕ್ಕಳ ಪಡೆದು ||
ಕಾಂತಾರಮಧ್ಯದಿ ಮರದಡಿ ಪವಡಿಸು | ವಂತೇಕೆ ಘಟಿಸಿದುದು ||33||

ಮೆರೆವ ಸಜ್ಜೆಯ ಸಿರಿ ಮಂಚದಿ ಮದುವಾಸೊ | ಳೊರಗುವ ಕುಲಜರಿಗೆ ||
ಗಿರಿವನದಲಿ ಕಲ್ಲುನೆಲನು ಹಾಸಿಗೆಯಾಯ್ತೆ | ಹರ ಮಹಾದೇವ ಹೀಗೆ ||34||

ಆರು ಮೀರುವರಕಟಕಟ ಪ್ರಾಪ್ತಿಯ ವಿಧಿ | ವಾರಿಜಾಕ್ಷರಿಗರಿದು ||
ಮಾರವೈರಿಯ ಕರ ಭಿಕ್ಷವ ಗೈದುದು | ಬೇರಾರನುಳಿಸುವುದು ||35||

ಎಂದು ನಾನಾಪರಿಯಿಂದೆಣಿಸುತ ವಾಯು | ನಂದನನೈದೆತಾನು ||
ಗಂಧೇಭ ವಕ ವ್ಯಾಘ್ರ ವಂದಾದಿಗಳು ಹೊದ್ದ | ದಂದದಿ ಕಾದಿರ್ದನು ||36||

ಭಾಮಿನಿ

ಅವನಿಪಾಲಕ ಲಾಲಿಸೀಪರಿ |
ಪವನತನುಸಂಭವನು ಸಲೆ ತ |
ನ್ನವರನುರೆ ಸುಯ್ದನದಲಿ ಕಾದಿರ್ಪ ವೇಳೆಯಲಿ ||
ತವಕಮಿಗೆ ತದ್ವನದಧಿಪ ದಾ |
ನವ ಹಿಡಿಂಬಕನೆದ್ದು ಮೈಮುರಿ |
ದವಗಡದ ನರವಾಸನೆಯನರಿದೆಂದ ತನ್ನೊಳಗೆ ||37||

ರಾಗ ಕಾಂಭೋಜಿ ಝಂಪೆತಾಳ

ಏನಿದಚ್ಚರಿ ನರರ ಮೈಗಾಳಿ ನಾಸಿಕಕೆ |
ತಾನಿದೆಂಬಂತೆ ಬರುತಲಿದೆ ||
ಕಾನನಕದಾರೊ ಬಂದಿಹರು ಬಲು ದಿನಕಿನ್ನು |
ಮಾನವರು ಮಝಭಾಪು ಭಳಿರೆ ||38||

ಹಲವು ದಿನದಾರಭ್ಯ ನರರೊಡಲ ಮೆಲದೆ ಬಾಯ್ |
ಹೊಲಸಾದುದಕಟಕಟ ಬರಿದೆ ||
ಸಲೆ ಶುದ್ಧವಹುದಿಂದು ಪಾರಣೆಯು ದೊರಕಿದರೆ |
ಬಲು ಪುಣ್ಯಫಲವಾಗದಿಹುದೆ ||39||

ಎನುತಲಿ ಹಿಡಿಂಬೆಯೆಂದೆಂಬ ಸಹಜಾತೆಯನು |
ದನುಜನಿರೆ ದೂರದಲಿ ಕರೆದು ||
ವಿನಯಮಿಗಲವಳೊಡನೆ ಪೇಳ್ದನೀವಾರ್ತೆಯನು |
ಮನ ನಲಿವುತ್ಸವದೊಳಂದು ||40||

ರಾಗ ಕೇದಾರಗೌಳ ಝಂಪೆತಾಳ

ತರಳೆ ಬಾ ತಂಗಿ ಬಾರೆ | ಮಾನುಷರ | ಪರಿಮಳವಿದೇನು ಭಳಿರೆ ||
ಅರಿತಿರ್ದೆಯಾದಡುಸಿರು | ವನಕೆ ಬಂ | ದಿರಬೇಕು ಆರಾದರು ||41||

ಎನಲೆಂದಳಾಗಿರುವುದು | ನಿನ್ನ ವೋ | ಲೆನಗಾ ಪರಿಯೆ ಬರುವುದು ||
ಮನುಜರ ಸುಗಂಧವೆಂದು | ಪೇಳಲ್ಕೆ | ದನುಜ ಮಗುಳುಸಿರ್ದನಂದು ||42||

ಎಲ್ಲಿರ್ಪರೆಂದವರನು | ಪೋಗಿ ಪಿಡಿ | ದುಲ್ಲಸದಿ ತಂದು ನೀನು ||
ನಿಲ್ಲದಡಿಗೆಯ ಮಾಡೆನೆ | ಕೇಳುತ್ತ | ಖುಲ್ಲೆ ನಲಿದೆಂದಳೊಡನೆ ||43||

ಈಗಲಾಂಬೇಗ ನಡೆದು | ತಹೆನವರ | ಮೂಗಾಳಿಯಿಂದ ಹಿಡಿದು ||
ಮೇಗರೆಯ ಮಾತಿದೇಕೆ | ಔತಣವ | ಮಾಗಿಸುವೆ ಮಝ ಪರಾಕೆ ||44||

ರಾಗ ಕಾಪಿ ಅ್ಟತಾಳ

ಎಂದಗ್ರಜಾತಗೆ ಪೇಳಿ | ನಡೆ |
ತಂದಳರಣ್ಯದೊಳ್ ಹುಡುಕುತಲ್ಲಲ್ಲಿ ||
ಒಂದೆಸೆಯಲ್ಲಿ ತಾ ನಿಂತು | ಉಸಿ |
ರಂದವನಾಲಿಸಿ ಪೇಳಿದಳಿಂತು ||45||

ಇದಕೊ ದೂರದಿ ಮಲಗಿಹರೆ | ಎಚ್ಚ |
ರದವೊಲವಂದಿರನೊಯ್ವೆನು ಭಲರೆ ||
ಮುದದಿ ಪಾಕವನು ಮಾಡುವೆನು | ಅಣ್ಣ |
ಗೆದೆಯ ನಿಟ್ಟೆಲುವನಾಯ್ದುಣಬಡಿಸುವೆನು ||46||

ಮುನ್ನುಳ್ಳ ಮಿದುಳು ಮಾಂಸವನು | ಸಲೆ |
ಬೆಣ್ಣೆಕಾಸಿದ ತುಪ್ಪದಲಿ ತಾಳಿಸುವೆನು ||
ಚೆನ್ನಾಗಿ ಕುಳಿತುಕೊಂಡದನು | ಇದ |
ನನ್ಯರು ತಿಳಿಯದಂತುಂಡು ತೇಗುವೆನು ||47||

ಎನುತ ಮುಂದಡಿಯಿಡೆ ತಾನು | ಕಂಡ |
ಳನುಪಮವೀರ ಭೀಮನು ಕುಳ್ಳಿರ್ದುದನು ||
ಮನ ಸೋತಳಾತನ ಕಂಡು | ತನ್ನೊ |
ಳೆಣಿಸುತ್ತಲೆಂದಳು ಸಲೆ ಭ್ರಮೆಗೊಂಡು ||48||

ರಾಗ ಘಂಟಾರವ ಆದಿತಾಳ

ಅಹಹ ಇನ್ನೆಂಥವನೊ | ಈ ಮನುಜರೊ | ಳಿಹರನ್ನು ಕಾಣೆನಿನ್ನು ||
ಮಹಿಯೊಳ್ವಸಂತನೊ | ಸ್ಮರನೊ ಜಯಂತನೊ |
ಬಹು ರೂಪವಂತನಾ | ಗಿಹನು | ಮೇಣಿವ ತಾನು ||49||

ಇವನಂಥ, ಪುರುಷನನು | ಕೂಡದೆ ಜೀವ | ನವು ವ್ಯರ್ಥವಿದು ಮಾತೇನು ||
ಹವಣಿಲ್ಲದೆನ್ನಯ | ಮನ ಸೂರೆಯಾದುದು |
ಶಿವನಾಣೆ ಸುಳ್ಳಲ್ಲ | ತವೆ ಸೋತೆನೀತಗೆ ||50||

ಮದವೇರ್ದತೋಳ್ಗಳಿಂದ | ಅಮರ್ದಪ್ಪಿ | ಎದೆಗೆ ಬಲ್ಮೊಲೆಯನೊಂದ |
ಒದಗಿಸಿ ಕೂಡುತ್ತ | ವಿಧವಿಧ ಬಂಧದಿ |
ಕದಳಿ ತೊಡೆಯೊಳೌಕ | ದಿದು ಹೆಣ್ಣು ಜನ್ಮವೆ ||51||

ಹೆಣ್ಣುಗಳ್ ಸೋಲಬೇಕು | ಎನ್ನ ಮೈ | ಬಣ್ಣ ಮೂಜಗಕೆ ಸಾಕು ||
ಚಿಣ್ಣ ಬಲ್ಮೊಲೆಯ ಬಗೆಯ | ಒರೆಯೆ ಮು |
ಕ್ಕಣ್ಣಗಸದಳ ನಿಶ್ಚಯ  ||52||

ಘೋರರೂಪಿಂದಲಾನು | ಪೋದರೆ ಮೆಚ್ಚ | ನೀ ರೀತಿಯಿಂದಿವನು ||
ಬೇರೆ ನಾನುರೆ ದಿವ್ಯಾ | ಕಾರವನಾಂತು ಶಂ |
ಗಾರದಿ ಪೋಗೆ ವಿ | ಚಾರಿಸದಿರ್ಪನೆ ||53||

ರಾಗ ಮಧುಮಾಧವಿ ತ್ರಿವುಡೆತಾಳ

ಎಂದು ಜನಮೋಹಕದ ರೂಪವ | ನಂದು ತಾಳ್ದು ಹಿಡಿಂಬೆಯೊಯ್ಯನೆ |
ಬಂದಳಾ ವರ ಭೀಮಸೇನನ | ಮುಂದೆಸೆಯೊಳೇನೆಂಬೆನು ||54||

ಮುಡಿಗೆ ನವಿಲುಗ್ಘಡಕೆ ಕೋಗಿಲೆ | ನುಡಿಗೆ ಗಿಳಿ ಕಂಗೆಡೆಗೆ ಮಗ ಕಚ |
ದೆಡೆಗೆ ಭ್ರಮರವು ನಡೆಗೆ ಹಂಸಗ | ಳೊಡನೊಡನೆ ಮನಸೋಲಲು ||55||

ಅರರೆ ಮದನನ ಖಂಡೆಯದ ಜಯ | ಸಿರಿಯೊ ರತಿಯ ಸುಮಂತ್ರಮೂರ್ತಿಯೊ |
ವಿರಹಿ ಮಗಗಳ ಬಲೆಯೊ ಪೇಳೆನೆ | ತರುಣಿಮಣಿ ಶೋಭಿಸಿದಳು ||56||

ಭೀಮನಾಕೆಯ ನುಡಿಸದೀಕ್ಷಿಸ | ದಾ ಮಹಾಶೋಕದಲಿ ಬಳಿಕೀ |
ಕಾಮಿನೀಮಣಿ ತಾನೆ ಘನ ಸು | ಪ್ರೇಮದಿಂ ಬೆಸಗೊಂಡಳು ||57||

ರಾಗ ನವರೋಜು ಆದಿತಾಳ

ಆರು ನೀನೆಲೆ ವೀರ | ಮಾರಸಮ ಗಂಭೀರ ||
ಧೀರ ನಿನಗೆ ಮನ | ಸೂರೆಯದಾದೆನು |
ಕಾರಣವರಿತು ವಿ | ಚಾರಿಸಬೇಹುದು ||58||

ಮನವಿದಕೆ ಪತಿಯಾದ | ದನುಜ ಹಿಡಿಂಬನ ಸೋದ ||
ರನುಜೆ ಹಿಡಿಂಬೆಯೆಂ | ಬನುಪಮ ನಾಮವಿಂ |
ದೆನಗೆಲೆಯಪ್ರತಿ | ಘನತರಮಹಿಮ ||59||

ನಿನ್ನಾ ರೂಪವ ಕಂಡು | ನನ್ನೊಳು ನಾ ಭ್ರಮೆಗೊಂಡು ||
ಮನ್ಮಥನಸ್ತ್ರದಿ | ಭಿನ್ನೆಯದಾದೆನು |
ಮನ್ನಿಸಬೇಹುದು | ಪೂರ್ಣ ಕಪೆಯೊಳು ||60||

ಗಿರಿಕ್ರೀಡೋದ್ಯಾನದೊಳು | ಮೆರೆವ ಲತಾಭವನದೊಳು ||
ನೆರೆಯೇಳೈದೀ | ಮರದೆಡೆಯಲಿ ಮಲ |
ಗಿರುವರೆನಣ್ಣನು | ಕೇಳ್ದರೆ ತಿನಲಿ ||61||

ರಾಗ ಭೈರವಿ ಅಷ್ಟತಾಳ

ಎನೆ ಖಾತಿಯೊಳು ಭೀಮನು | ಪೇಳ್ದನು ಕೂಡೆ |
ದನುಜಕನ್ನಿಕೆಯೆ ನೀನು ||
ಮನಬಂದ ತೆರದಿಂದ ಪೇಳುವೆ ನಿನ್ನ ನೀ |
ಕ್ಷಣ ಕೊಲ್ವೆನೆನುತೆಂದನು ||62||

ಸೋತು ಬಂದಿರ್ಪಳನು | ಕೊಲ್ವುದು ಧರ್ಮ |
ರೀತಿಯೆ ಪೇಳು ನೀನು ||
ನೀತಿಯನರಿತೆನ್ನ ಕೂಡದಿರ್ದರೆ ಬಹು |
ಪಾತಕ ಬಹುದೆಂದಳು ||63||

ರಾಕ್ಷಸವಧುಗಳಿಗೆ | ಕಾಮವು ಬಹು |
ತೀಕ್ಷ್ಣವೆಂದು ಹೀಗೆ ||
ಸಾಕ್ಷಿಯನರಿತೆನು ಪೋಗು ಇನ್ನಿರ್ದರೆ |
ಶಿಕ್ಷಿಸಿದಪೆನೆಲೆಗೆ ||64||

ಹೇಗಾದರೀಗ ನಿನ್ನ | ಬಿಡುವಳಲ್ಲ |
ಪೂಗಣೆಗಾರ ಮುನ್ನ ||
ಮೋಘದಿಂ ಕೊಲ್ವ ನೀ ಕೊಂದರೆ ಕೊಲು ಮನ |
ವಾಗಲು ಸಲಹೆಂದಳು ||65||

ರಾಗ ಭೈರವಿ ಏಕತಾಳ

ತೆರಳಿ ಹಿಡಿಂಬಕನಿತ್ತ | ಸೋ | ದರಿಯೇಂ ತಳುವಿದಳೆನುತ ||
ಭರದಿಂ ಬಂದಿದನೆಲ್ಲ | ಕಂ | ಡರುಹಿದನಂದೀ ಸೊಲ್ಲ ||66||

ಕೊಂಡು ಬಾರೆನ ಲವದಿರನು | ಸಲೆ | ಮಿಂಡಾಟಿಕೆಯಲಿ ನೀನು ||
ಅಂಡಿದೆನೆಂದೆಂಬುದನು | ಫಡ | ದಿಂಡೆ ಹೆಂಗುಸೆ ಗ್ರಹಿಸಿದೆನು ||67||

ಕಡಿವೆನು ಮೊದಲಲಿ ನಿನ್ನ | ಮೇಣ್ | ಬಡಿವೆನು ಮರದಡಿಯಿಹನ ||
ಕಡೆಯಲಿ ಮಲಗಿರ್ದವರ | ಬಾಯ್ | ಗಡಸಿ ನುಂಗುವೆನೆಲ್ಲವರ ||68||

ಎನುತ ಹಿಡಿಂಬಕನಾರ್ದು | ತಾ | ಮನದೊಳಗೈದೆ ಕೆರಳ್ದು ||
ಘನ ರೋಷದಿ ಬರೆ ಕಂಡು | ಭೀ | ಮನು ಪೇಳ್ದನು ಖತಿಗೊಂಡು ||69||

ಭಾಮಿನಿ

ಕೂಗಬೇಡೆಲೊ ಕುನ್ನಿ ನಿದ್ರೆಯೊ |
ಳೀಗ ಮಲಗಿರುವರು ಕಣಾಮುದಿ |
ಗೂಗೆಯಂತೆಚ್ಚರದ ತೆರದಲಿ ಮೆಲ್ಲನೈತಂದು ||
ತಾಗಿದರೆ ಬಳಿ ಕರಿಯಬಹುದೀ |
ಕೈಗುಣವನೆಂದೆನುತ ಭೀಮನ |
ಮೋಘ ವಿಕ್ರಮದಿಂದನಿಂದಿರೆ ಕಾಣುತಿಂತೆಂದ ||70||

ರಾಗ ಶಂಕರಾಭರಣ ಮಟ್ಟೆತಾಳ

ಅರರೆ ಹುಲ್ಲು ಮನುಜ ನಿನ್ನ | ಕೊರಳ ಮುರಿದು ತಿನ್ನದಿಹೆನೆ |
ತರಳ ನಿನಗೆ ತೋರ್ಪೆನೆನ್ನ | ಪರಿಯನೆನುತಲಿ ||
ಮುರಿದು ಭಾರಿ ಮರನ ಭೀಮ | ನುರವ ಹೊಯ್ದನೇನನೆಂಬೆ |
ಸುರರು ಭೀತಿಗೊಳಲು ದೈತ್ಯ | ನಿರದೆ ಖತಿಯಲಿ ||71||

ಮರನ ಹತಿಯ ವಂಚಿಸುತ್ತ | ಮರುತಸುತನು ಮುಷ್ಟಿಯಿಂದ |
ಲೆರಗೆ ಮೂರ್ಛೆಯಿಂದಲಾಗ | ದುರುಳ ದೈತ್ಯನು ||
ಮರಳಿ ತ್ರಾಣಿಸುತ್ತ ಬಂದು | ಭರದಿ ಭೀಮನೆದೆಯ ತುಳಿಯೆ |
ಧರೆಗೆ ಮೂರ್ಛೆಯಿಂದ ಮೈ | ಮರೆಯುತೊರಗಿದ ||72||

ಚೇತರಿಸುತಲೆದ್ದು ಪವನ | ಜಾತನೊಡನೆ ಮರನ ಮುರಿದು |
ಖಾತಿಯಿಂದ ಹೊಯ್ದನದ್ರಿ | ಪಾತದಂದದಿ ||
ಆತುಕೊಳ್ಳಲಾರದವನು | ಭೂತಳದಲಿ ಬಿದ್ದು ಮಡಿದ |
ನೋತು ಸುರರು ಬಾಂದಳದಲಿ | ಪೂತು ಮಝರೆನೆ ||73||

ರಾಗ ಸೌರಾಷ್ಟ್ರ ಆದಿತಾಳ

ಇತ್ತಲೀ ಕಳಕಳಕೆದ್ದು ಕಂಡರು ತಲೆ | ಗುತ್ತಿ ಬಿದ್ದಿಹ ದೈತ್ಯನೊಡಲ ||
ಮತ್ತೆ ಚೋದ್ಯವನಾಂತು ಧರ್ಮಜಾದಿಗಳು ಬ | ಯ್ಯುತ್ತ ಭೀಮನೊಳುಸಿರಿದರು ||74||

ಏಳಿಸದೆಮ್ಮನೋರ್ವನೆ ಮೂರ್ಖತನದಿಂದ | ಖೂಳನನಿಂತು ತಾಗುವರೆ ||
ಕಾಳ ರಕ್ಕಸ ತಾನೆ ಮಡಿದನಲ್ಲದಡೆ ವಿ | ತಾಳಿಸದೀ ಬುದ್ಧಿಯೆನುತ ||75||

ಬಳಿಕಾ ಹಿಡಿಂಬೆ ಕುಂತಿಗೆ ಧರ್ಮ ರಾಯಗೆ | ಕಲಿಪಾರ್ಥರಿಂಗೆ ತನ್ನಿರವ ||
ತಿಳುಹಲು ಖತಿಗೊಂಬ ಭೀಮಸೇನನ ಕಂಡು | ಲಲಿತವಾಕ್ಯದೊಳುಸಿರಿದರು ||76||

ರಾಗ ನೀಲಾಂಬರಿ ತ್ರಿವುಡೆತಾಳ

ಸೋತುಬಂದಾಕೆಯ ಬಿಡುವರೆ | ವೀರ | ಈ ತೆರದಲಿ ಕೇಡ ನುಡಿವರೆ ||
ಮಾತೇನು ಕೂಡಬೇಕೆನುತಲಿ | ಪೇಳ್ದ | ರೋತೆಲ್ಲರೊಂದಾಗಿ ನಗುತಲಿ ||77||

ಆರೇನನೆನಲು ಕೂಡುವನಲ್ಲ | ಖಳ | ನಾರಿಯೊಳ್ ಸರ್ವಥಾ ಮನವಿಲ್ಲ ||
ಬೇರೆ ಮಾತಿನ್ನೇತಕೆನುತಲಿ | ಪೇಳ್ದ | ಮಾರುತಿ ಮೊಗದಿರುಹುತ್ತಲಿ ||78||

ರಾಗ ಕೇದಾರಗೌಳ ಆದಿತಾಳ

ಆ ಸಮಯಕಲ್ಲಿಗೆ ಪಾ | ರಾಶರಿಮೌನೀಂದ್ರನು ಬಂ |
ದಾಶುಗನಂದನಗೆಂದ | ನೀಸು ವಾಕ್ಯವ ||
ಆಸುರಕನ್ನಿಕೆಯ ಕೂಡೆ | ಲೇಸಹುದು ಮುಂದೆ ಕಾರ್ಯ |
ಶೇಷವಿರ್ಪುದದರಿಂದ | ಲೇ ಸಂಘಟಿಸಿತು ||79||

ಮುಂದೆ ಭಾರತಯುದ್ಧದೊ | ಳೊಂದಿರುಳು ಕಾದಲಿವಳ |
ಕಂದನಿಂದಲ್ಲದೆ ಬೇರಾ | ರಿಂದ ತೀರದು ||
ಎಂದು ಪವನಸುತನ ಮನದ | ಕಂದು ಕಸರಿಕೆಯ ಕಳೆದಾ |
ನಂದದಿಂದ ಸಾರ್ದನು ಸ್ವ | ಚ್ಛಂದಗತಿಯೊಳು ||80||

ವಾರ್ಧಕ

ಧರಣಿಪತಿ ಕೇಳ್ ಬಾದರಾಯಣನ ನುಡಿಗೊಪ್ಪಿ |
ಮರುತಜಂ ಕೂಡಿದಂ ಬಳಿಕಾ ಹಿಡಿಂಬೆಯಂ |
ಮೆರೆವ ಕೇಳೀ ವನಸುಶೈಲ ಕಾಸಾರ ಸುಲಲಿತಸುಮಂಟಪದೊಳಿರದೆ ||
ತರುಣಿಗುದಿಸಿದನಾ ಘಟೋತ್ಕಚಂ ಮೇಣವನು |
ನಿರಿಸಿದಂ ದಾನವ ಹಿಡಿಂಬನಾಳ್ವ ದೇಶ |
ದರಸುತನದಾಧಿಪತ್ಯದ ಪಟ್ಟವಂ ಕಟ್ಟಿಕೊಟ್ಟನುರೆ ಪ್ರೀತಿಯಿಂದ ||81||