ದ್ವಿಪದಿ
ಅರಸ ಕೇಳಿತ್ತ ಪಾಂಚಾಲಭೂಮಿಪನು |
ಪುರವ ಸಿಂಗರಿಸಿದನದೇನ ಬಣ್ಣಿಪೆನು ||225||
ಕಲಶಗನ್ನಡಿ ಗುಡಿಪತಾಕೆ ಚಾಮರದ |
ಹೊಳೆಹೊಳೆವ ಮಕರತೋರಣದ ಬಂಧುರದ ||226||
ಪನ್ನೀರ ಚಳೆಯ ಕಸ್ತುರಿಯ ಸಾರಣೆಯ |
ಬಿನ್ನಣದೊಳೆಸೆವ ಕುಂಕುಮದ ಕಾರಣೆಯ ||227||
ಅಗರು ಧೂಪದ ಮುತ್ತಿನುರುರಂಗವಲಿಯ |
ಮಘಮಘಿಪ ಸಾಲಿಂದಲೆಸೆವ ಪೂವಲಿಯ ||228||
ತರತರದ ಚಪ್ಪರದ ಮೇಲುಗಟ್ಟುಗಳ |
ಕುರುಜು ಮೇರುವೆಯ ಸಿಂಗರದ ಪಟ್ಟೆಗಳ ||229||
ಚಾರುತರ ರಚನೆಯ ವಿವಾಹಮಂಟಪವ |
ಭೂರಿಚಿತ್ರಿತವೆನಿಪ ರತುನದೋರಣವ ||230||
ಶೋಭಾಯಮಾನದಲಿ ಪುರವ ಸಿಂಗರಿಸಿ |
ಭೂಭುಜರಿಗಹ ಸುವಸ್ತುಗಳನನುಕರಿಸಿ ||231||
ಸಕಲ ಸನ್ನಾಹವಾಗಿರ್ದನವನತ್ತ |
ನಿಖಿಳ ದೇಶದ ನಪರು ಬರುತಿರ್ದರಿತ್ತ ||232||
ರಾಗ ಕೇದಾರಗೌಳ ಅಷ್ಟತಾಳ
ಬಂದರು ನಾನಾ ದೇಶದ ನಪರು || ಪಲ್ಲವಿ ||
ಚಂದದಿ ಪಾಂಚಾಲಪುರವರಕವರು || ಅನು ಪಲ್ಲವಿ ||
ವೀರ ಮಾಗಧ ಶಿಶುಪಾಲಕ ಶಲ್ಯ ಕಾ |
ಶ್ಮೀರ ಕಾಂಭೋಜ ಸೈಂಧವ ಭಗದತ್ತ |
ವೀರ ಪೌಂಡ್ರಕ ಭೋಜನು || ಮತ್ಸೇಶ ಹ |
ಮ್ಮೀರ ಕಾಶೀರಾಜನು | ಬಹದ್ರಥ |
ಭೂರಿಶ್ರವ ಸಾಲ್ವ ಮುಖ್ಯ ಭೂಭುಜರ್ ತಾವ್ ||233||
ರಾಗ ಭೈರವಿ ಮಟ್ಟೆತಾಳ
ಬಂದ ದೇಶದೇಶಗಳ ನಪಾಲವರ್ಗವ |
ಚಂದದಿಂದಲಿದಿರುಗೊಂಡು ದ್ರುಪದನವರವ ||
ರ್ಗಂದು ಬಿಡಾರಗಳನೆಸಗಿಯುಚಿತದಿಂದಲಿ |
ಕುಂದದಿತ್ತು ಮನ್ನಿಸಿದನದೇನ ಪೊಗಳಲಿ ||234||
ರಾಗ ಮಾರವಿ ಏಕತಾಳ
ಧರಣಿಪ ಕೇಳ್ ಕುರುವರನಿತ್ತಲು ನಿಜ | ಪರಿವಾರವು ಸಹಿತ ||
ಬರೆಮಾರ್ಗದಿ ದುಸ್ತರ ಶಕುನಂಗಳು | ನೆರೆ ತೋರ್ದುದು ಸುತ್ತ ||235||
ಎಡದಲಿ ವಾಯಸ ಬಂದುದು ಪನ್ನಗ | ನಡಗಟ್ಟಿತು ಪಥದಿ ||
ಕಡಲಿಟ್ಟುದು ಗಜಹಯ ಕಂಬನಿಗಳ | ನೊಡನೇನುಸಿರುವೆನು ||236||
ಇದಿರಲಿ ಬಂದಳು ಪತಿಶೂನ್ಯಾಂಗನೆ | ಮದಮುಖತನದಿಂದ ||
ಪದಜರು ಬಂದರು ಪೊಸಭಾಂಡವು ಕಾ | ಷ್ಠದಭಾರವು ಸಹಿತ ||237||
ಕಾಣುತಲಿದು ಮೊದಲಾದವ ಶಕುನವ | ದ್ರೋಣನು ವಿಸ್ಮಯದಿ ||
ಕ್ಷೋಣಿಪ ಕೌರವರಾಯನೊಳೆಂದನು | ಮೇಣಿದನೆಲ್ಲವನು ||238||
ರಾಗ ದೇಶಿ ಅಷ್ಟತಾಳ
ಕೇಳಯ್ಯ | ಭೂಪ | ಕೇಳಯ್ಯ || ಪಲ್ಲವಿ ||
ಕೇಳಯ್ಯ ಭೂಪ ನಾ ಪೇಳುವೀ ಮಾತ |
ಮೇಲೆ ನೀ ತಿಳಿದವೋಲೆಸಗು ಪ್ರಖ್ಯಾತ || ಅನು ಪಲ್ಲವಿ ||
ಹಲವು ದುಶ್ಯಕನವು ತೋರುವುದಲ್ಲ |
ಫಲಗಾಣೆ ಇದರಿಂದ ಕೀರ್ತಿಯದಿಲ್ಲ ||
ಲಲನೆ ಸೇರುವಳೆಂಬ ಯೋಚನೆ ಬೇಡ |
ಕಲಹವೆ ದೊರೆವುದು ನಿಶ್ಚಯ ನೋಡಾ ||239||
ರಾಗ ಭೈರವಿ ಅಷ್ಟತಾಳ
ಗುರುವೆಂದ ನುಡಿಯ ಕೇಳಿ | ಕರ್ಣನು ಪೇಳ್ದ | ನುರುತರ ಕೋಪದಲಿ ||
ಹರ ಹರ ಹಾರುವರಿರವಿನಿತೆಂಬುದ | ನರಿತೆವು ಛಲದಿಂದಲಿ ||240||
ಒದಗಿದ ಕಾರ್ಯದಲಿ | ಸರ್ವಾಪದ್ಧ | ವಿದ ನೀವು ಪೇಳುತಲಿ ||
ಎದೆ ಗೆಡಿಸುವುದು ನಿಮ್ಮಯ ಕುಲಪದ್ಧತಿ | ಯದಕೇನು ಸಂಶಯವು ||241||
ಎಲ್ಲಿ ಮಂಗಲದ ವಾರ್ತೆ | ಪ್ರಸ್ತಾಯವೆಂ | ದೆಲ್ಲ ವಿಚಾರಿಸುತೆ ||
ಡೊಳ್ಳ ತೋರುತ ಪೋಗಿ ಭೂರಿ ದಕ್ಷಿಣೆಗಳ | ಕೊಳ್ಳಲಾಗುವಿರಿ ನೀವು ||242||
ಹಣೆಗೆ ಬೂದಿಯ ಬರೆದು | ಧೋತ್ರದ ಚುಂಗ | ಕುಣಿಸುತ್ತ ಮೇಲ್ವರಿದು ||
ಮಣಿಗೆ ಮಂಡಿಸಿಯೊಬ್ಬರಿಂದೊಬ್ಬ ಶ್ರೇಷ್ಠರೆಂ | ದುಣಬಲ್ಲಿರಯ್ಯ ಮತ್ತೆ ||243||
ರಾಗ ಪಂತುವರಾಳಿ ಮಟ್ಟೆತಾಳ
ಎನಲು ಗುರುಕುಮಾರನೈದೆ | ಕನಲುತೆಂದನೆಲವೊ ಸೂತ |
ತನಯ ನೀನದೇನ ಬಲ್ಲೆ | ಘನದ ಶಕುನವ ||
ದಿನದಿನದಲೆ ಬಲೆಯನಿಕ್ಕಿ | ವನಧಿಯಲ್ಲಿ ಮತ್ಸ್ಯವಿಡಿದ |
ಜನದ ಕುಲಕೆ ತಕ್ಕ ಮಾತು | ನಿನಗದಲ್ಲದೆ ||244||
ಉಣಲು ಬಲ್ಲೆವಾವು ದ | ಕ್ಷಿಣೆಯ ಕೊಳ್ಳಬಲ್ಲೆವಿನ್ನು |
ರಣವ ಬಲ್ಲೆವುರುಗುಣಾವ | ಗುಣವ ಬಲ್ಲೆವು ||
ಬಣಗೆ ನೀನದೇನ ಬಲ್ಲೆ | ಗಣಿಸೆ ಕುರು ನಪತಿಯ ದ್ವಾರ |
ಶುನಕನಂತೆ ಬಂದು ಸೇರಿ | ಕುಣಿವೆಯಲ್ಲದೆ ||245||
ಎಲವೊ ವಿಪ್ರಕುಲದೊಳಧಮ | ಬಳಿದು ಬಂದು ಸೇರ್ದು ನಪನ |
ಹಲವು ಧನವ ತಿಂದು ಡೊಳ್ಳು | ಬೆಳೆದ ಕಾರಣ ||
ಹಳಿವೆಯೈಸೆ ನಾಲಿಗೆಯನು | ತಳೆಯಲುಗಿದು ತೆಗೆವೆನೆಂದು |
ಸೆಳೆದನಸಿಯನಿನಕುಮಾರ | ನಳುಕದಾ ಕ್ಷಣ ||246||
ಫಡ ಫಡೆಲವೊ ನಿನ್ನ ತಲೆಯ | ಕಡಿದು ಭೂತ ಗಣಕೆ ಬಲಿಯ |
ಕೊಡುವೆ ನೋಡೆನುತ್ತ ಗುರುಜ | ನೊಡನೆ ಮನದಲಿ ||
ಕಡುಗಿ ಸೆಳೆಯೆ ಕೂರಸಿಯನು | ತಡೆದು ಕುರುನಪಾಲನವರ |
ನೊಡಬಡಿಸಿದನೇನನೆಂಬೆ | ಪೊಡವಿಪಾಲನೆ ||247||
ರಾಗ ಮುಖಾರಿ ಅಷ್ಟತಾಳ
ಬೇಡವೈ ಛಲವು | ನಿಮ್ಮೊಳಗಿಂತು | ಬೇಡವೈ ಛಲವು || ಪಲ್ಲವಿ ||
ಬೇಡವೈ ಛಲವು ನಿಮ್ಮೊಳಗಿಂತು ಸುಮ್ಮನೆ |
ರೂಢಿಯೊಳಗಪಕೀರ್ತಿಗೀಡಾಗದಿರಿ ನೀವು || ಅನು ಪಲ್ಲವಿ ||
ದೇಶಕಾಲವನು ಹಿತಾಹಿತ ಗುಣಗಳ |
ಲೇಸಿನಿಂದರಿಯದೆ ಮೂರ್ಖರ ತೆರದಿಂದ |
ದ್ವೇಷವ ಪಡೆದು ನಿಮ್ಮೊಳಗೆ ವಿರೋಧಿಸಿ |
ಮೋಸಹೋಗುವಿರೆ ||
ಸುಕಾರ್ಯ ನಿ | ರ್ನಾಶಕರಾಗುವಿರೆ ||
ಸಾಸಿರ ಮಾತೇನು ಬಂದುದು ಬರಲಿಯೊಂ |
ದಾಸೆ ತೀರುವುದೈಸೆ ನಡೆಯಬಾರದೆ ಮುಂದೆ ||248||
ವಾರ್ಧಕ
ಎಂದು ಕುರುಭೂಪನ ವಚೋಭಂಗಿಯರಿದು ರವಿ |
ನಂದನ ಶಕುನಿವೀರ ದುಶ್ಯಾಸನಾದಿಗಳ್ |
ಮುಂದೆ ನಡೆಯಲ್ಕೊಡನೆ ನಡೆದನಾ ಕೌರವಂ ಸಕಲ ಜನಜಾಲ ಸಹಿತ ||
ಇಂದೆಮ್ಮ ನುಡಿಯ ಮೀರಿದ ಫಲವ ನೀವೆ ಮುದ |
ದಿಂದಲನುಭವಿಸಿ ನೀವರಿಯಬಹುದೆನುತ ನಡೆ |
ತಂದನಶ್ವತ್ಥಾಮ ಗುರು ಕಪಾದಿಗಳೊಡನೆ ಪಾಂಚಾಲನಗರಿಗಾಗಿ ||249||
ಕಂದ
ಇತ್ತಲುಮಿವರೈತಂದೀ |
ವತ್ತಾಂತವನಾಲಿಸುತ ದ್ರುಪದನಪಾಲಂ ||
ಪ್ರತ್ಯೇಕದೊಳೆಲ್ಲರನುಂ |
ವಿಸ್ತರದಿಂದುಚಿತವರಿದು ಮನ್ನಿಸುತಿರ್ದಂ ||250||
ರಾಗ ಮಾಧುಮಾಧವಿ ತ್ರಿವುಡೆತಾಳ
ಇಂತಿವರುಗಳಿರಲ್ಕೆ ಮಾಧವ | ನಂತರಂಗದಿ ದ್ವಾರಕೆಯೊಳಾ |
ಕಾಂತೆ ಭಾಮೆಯ ಮೇಳದೊಳಗಿರೆ | ಚಿಂತಿಸಿದನೀ ತೆರದೊಳು ||251||
ಕುಂಭಶಾಲೆಯೊಳಿರುವ ಪಾಂಡವ | ರೆಂಬವರಿಗಿನ್ನೆಂತು ಕ್ರತುಮುಖ |
ಸಂಭವೆಯ ಗಂಟಿಕ್ಕುವೆನು ನಾ | ನಂಬಿದರೆ ತೆತ್ತಿಗನಲೆ ||252||
ಏನ ಮಾಡುವೆನೆನುತ ಗಲ್ಲದ | ಲಾನಿಸಿದ ಕರತಳದಿ ಹರಿಯಿರೆ |
ಮಾನನೀಮಣಿ ಸತ್ಯ ಭಾಮೆಯು | ತಾನು ಕೇಳ್ದಳು ವಿನಯದಿ ||253||
ರಾಗ ವಸಂತಭೈರವಿ ಝಂಪೆತಾಳ
ಏನಿದಚ್ಚರಿ ಕಾಂತ ಚಾರು ಗುಣವಂತ |
ಧ್ಯಾನಿಸುವ ಪರಿಯೇನು ಪ್ರಾಣೇಶ ನೀನು ||254||
ಮಾನಿನಿೀಮಣಿ ಕೇಳೆ ಮುಕುರಕಪೋಲೆ |
ಧ್ಯಾನಿಸುವುದೊಂದಿಹುದು ಪೇಳಲೇನಹುದು ||255||
ನೀಲಮೇಘನಿಭಾಂಗ ಖಗಪತಿ ತುರಂಗ |
ಪೇಳಬಾರದೆ ಜೀಯ ನಿಮ್ಮ ಯೋಚನೆಯ ||256||
ನಿನ್ನಾಣೆ ಪರರಿಗುಸಿರೆನು ಮಾತದೇನು |
ಮನ್ನಾಥ ಪೇಳಬೇಕಿಂದು ಮನದಂದು ||257||
ಇನ್ನು ಪೇಳುವೆ ಕಾಂತೆ ಹೀರ ಗುಣವಂತೆ |
ಚೆನ್ನಾಗಿ ಕೇಳೆ ಶುಕವಾಣಿ ಫಣಿವೇಣಿ ||258||
ರಾಗ ರೇಗುಪ್ತಿ ಆದಿತಾಳ
ಹಿಂದೆ ಕೇಳ್ದೆಯಲ್ಲ ಲಾಕ್ಷಾ |
ಮಂದಿರದಿ ಪಾಂಡುಸುತರು ||
ಬೆಂದುಹೋದರೆಂಬ ವಿಧವ |
ನಿಂದು ಕೇಳೊಂದು ಚೋದ್ಯವ ||259||
ಬಿಲದ ಮುಖದಿ ಭೀಮನಿಂದ |
ಉಳಿದುಬಂದು ನಿಶಿಯೊಳಂದಾ ||
ಕಲಿ ಹಿಡಿಂಬನಂ ಮರ್ದಿಸಿ |
ಬಳಿಕ ದ್ವಿಜವೇಷವ ಧರಿಸಿ ||260||
ಏಕಚಕ್ರಪುರದಿ ಬಕನ |
ಭೀಕರವ ನಿಲಿಸಿ ಮೇಣಾ ||
ತಾಕೆ ಪಾಂಚಾಲೆ ವೈವಾಹಾ |
ಶ್ರೀಕರ ವಾರ್ತೆ ಕೇಳುತ್ತ ||261||
ಪೋಗಿ ಕುಂಭಕಾರಗಹದೊ |
ಳೀಗಲಿಹರು ಪಾಂಡುಸುತರು ||
ನಾಗವೇಣಿ ವೈವಾಹವು |
ಆಗ ಬೇಹುದವರಿಗಿನ್ನು ||262||
ವಾರ್ಧಕ
ಸುದತಿ ಕೇಳದರಿನಿಂ ಯೋಚಿಸುತಲಿರ್ದೆ ನಾ |
ನಿದಕೆಲ್ಲಮಂ ಮುಂದೆ ವಿರಚಿಪೆಂ ನೋಡೆನುತ |
ವಿಧುವದನೆ ಸತ್ಯಭಾಮೆಯೊಳರುಹಿ ಬಳಿಕ ಮುರಮರ್ದನಂ ತತ್ ಕ್ಷಣದೊಳು ||
ಮುದ ಮಿಗಲ್ ಬಲಭದ್ರನಾಲಯಕೆ ನಡೆದರ |
ಲ್ಕಧಿಕ ಸಂತೋಷದಿಂ ತಮ್ಮ ಬಾರೆಂದು ಕರೆ |
ದೊದಗಿನಿಂ ಹತ್ತಿರದಿ ಕುಳ್ಳಿರಿಸಿ ರೇವತೀರಮಣನೊಲಿದಿಂತೆಂದನು ||263||
ರಾಗ ಮಾಧವಿ ಏಕತಾಳ
ವಾರಿಜಾಕ್ಷ ಕೇಳು ನಿನ್ನಿನುದಯದಲ್ಲಿ | ದ್ರುಪದ |
ವೀರ ಪಾಂಚಾಲನು ನಮ್ಮ ವಿಷಯದಲ್ಲಿ ||
ನಾರಿ ಯಜ್ಞಸುತೆಯ ಸ್ವಯಂವರಕೆ ತಾನು | ಬೇರೆ |
ಬೇರೋಲೆಯ ಬರೆಸಿ ಕಳುಹಿಸರ್ಪನು ||264||
ಹೋಗಬೇಹುದೈಸೆ ನಾವು ಸರ್ವರಿಂದು | ತಡವ |
ನೀಗ ಮಾಡಲೇತಕೆನುತಾಕ್ಷಣವಂದು ||
ಆ ಗುಣಾಢ್ಯ ಬಲನು ಪೇಳೆ ಹರಿಯು ಬೇಗ | ಮನದಿ |
ನಾಗಾರಿಯ ಸ್ಮರಿಸಲಾಗಿ ಬಂದನಾಗ ||265||
ರಾಗ ಮಾರವಿ ಏಕತಾಳ
ಧರಣಿಪ ಕೇಳಾ ಹರಿ ತಾರ್ಕ್ಷ್ಯನ ಭುಜ |
ಶಿರವನಡರೆ ಕಂಡಿರದೆ ಬಲಾದ್ಯರು |
ತ್ವರಿತದಿ ತಂತಮ್ಮುರುವಾರಣ ರಥ |
ತುರಗಾದಿಗಳನು ಭರದಿಂದೇರ್ದು || ಬಂದರಾಗ ||266||
ವಾರ್ಧಕ
ಧರಣೀಂದ್ರ ಕೇಳ್ ಬಳಿಕ ಮುರಹರಂ ಸಕಲ ಯದು |
ವರರೈದುವನ್ನೆಗಂ ಗರುಡವಾಹನನಾಗಿ |
ಭರದಿ ಪಾಂಚಾಲಪುರಕೈತಂದು ಕುಂಭಕಾರರ ಗಹಕೆ ಬರೆ ಕಾಣುತ ||
ಪರಮ ಭಕುತಿಯಲಿ ಪಾಂಡವರು ನಿಜ ಮಾತೆಸಹಿ |
ತೆರಗಿ ಸಾಷ್ಟಾಂಗದಿಂ ಜಯ ಜಯ ಹಷೀಕೇಶ |
ದುರಿತಹರ ದೀನ ರಕ್ಷಕ ಶರಣೆನುತ್ತ ಸಂಸ್ತುತಿಸಿದರ್ ಭಕ್ತಿಯಿಂದ ||267||
ರಾಗ ನೀಲಾಂಬರಿ ರೂಪಕತಾಳ
ಬಳಿಕ ಮಾಧವನವದಿರನುಚಿತೋಕ್ತಿಯೊ |
ಳೊಲಿದು ಮನ್ನಿಸುತೆಂದನಾಗ ||
ಸಲಿಸಲು ಬಂದೆನು ನಿಮ್ಮಿಷ್ಟಸಿದ್ಧಿಯ |
ಹಲವು ಮಾತಿಂದಲಿನ್ನೇನು ||268||
ಎಲೆ ಪಾರ್ಥ ಕೇಳು ಮುಂದಣ ಕಾರ್ಯ ನಿನ್ನಿಂದ |
ಗೆಲುವಹುದದರಿಂದ ನಿನಗೆ ||
ಒಲಿದೊಂದು ಮುದ್ರಿಕೆಯೀವೆನು ಕೊಳ್ಳೆಂದು |
ನಲವಿಂದಲಿತ್ತನು ನರಗೆ ||269||
ಕ್ಷಣ ತಾಳು ತಾಳು ಮುಂದಣ ಕಾರ್ಯವಂತಿರ |
ಲುಣಬೇಹುದಾನು ಪುಷ್ಕಳದಿ ||
ಮಣಿಮುದ್ರಿಕೆಯನೀತಗೀಯಲು ಬಹುದೀಗ |
ಳೆನಗೆ ತಾರೆಂದನಾ ಭೀಮ ||270||
ಆಗಲಿ ನಿನ್ನಿಷ್ಟ ಸಲಿಸಿ ಬೇಗದಲುಂಡು |
ಸಾಗಿಬಾರೆಂದು ಮುದ್ರಿಕೆಯ ||
ಆ ಗುಣನಿಧಿ ಪಾರ್ಥ ಹರಿಯನುಮತದಿಂದ |
ನಾಗಾಯುತಬಲಂಗಿತ್ತ ||271||
ನರನ ಕೈಯಿಂದ ಮುದ್ರಿಕೆಯನಾಂತಾಕ್ಷಣ |
ಹರಿದನು ದ್ರುಪದನ ಮನೆಗೆ ||
ತರಳ ಧಷ್ಟದ್ಯುಮ್ನನತುಳ ವೈಭವದಿಂದ |
ಲಿರೆ ಕಂಡಾಶೀರ್ವಾದ ಗೈದ ||272||
ಕಂಡಾಗ ರಾಜಕುಮಾರಕನೀತನು |
ದ್ದಂಡ ಕುಲಾಲಲಕ್ಷಣವ ||
ಪಂಡಿತನಿವನಾರೆಂದೆನುತಾಗವನು ಚೋದ್ಯ |
ಗೊಂಡೀಕ್ಷಿಸಿದನು ವಿಸ್ಮಯದಿ ||273||
ಇರೆ ಕಂಡನವನ ಹಸ್ತದಿ ಕೋಟಿಸೂರ್ಯರ |
ಕಿರಣವನೈದೆ ಮುಕ್ಕುಳಿಪ ||
ವರ ದಿವ್ಯ ರಾಜಮುದ್ರಿಕೆಯ ಕಾಣುತ ಕಡು |
ಬೆರಗಾಗಿ ನುಡಿಸಿದನವನ ||274||
ರಾಗ ಕೇದಾರಗೌಳ ಝಂಪೆತಾಳ
ಆರು ನೀನೆಲೆ ಭೂಸುರ | ಮುದ್ರಿಕೆಯಿ |
ದಾರಿಂದ ದೊರೆದುದುಸಿರಾ ||
ಸಾರೆ ಮನವೆಳಸಿತಿದಕೆ | ಪೇಳೆನಲು |
ಮಾರುತಿಯು ನುಡಿದನದಕೆ ||275||
ನಾವು ದೇಶಿಗವಿಪ್ರರು | ಹಿರಿಯರಿದ |
ನಾವರೋ ಗಳಿಸಿರ್ಪರು ||
ಈವೆನಿದ ಮನಸಾದರೆ | ನಮ್ಮಿಷ್ಟ |
ಕೇವಲದಿ ಪೂರ್ಣವಹರೆ ||276||
ಧನಕನಕಭಾಂಡಾರವೊ | ರಾಜ್ಯವೋ |
ವಿನುತ ಗೋಗಜವಾರವೊ |
ಕನಕಾಂಗಿ ಯಜ್ಞಸುತೆಯೊ | ಅರಿಯೆನದ |
ಮನದೊಳಗದಾವ ರತಿಯೊ ||277||
ಭೋಜನಪ್ರಿಯರು ನಾವು | ಸ್ತ್ರೀಕೋಶ |
ರಾಜಧಾನಿಯ ಬೇಡೆವು |
ತೇಜದಿಂದಿತ್ತರದನು | ಸಾಕೆಂದ |
ನಾ ಜಗತ್ಪ್ರಾಣಸುತನು ||278||
ಏನು ದೊಡ್ಡಿತವಿದೆಂದು | ಪೇಳ್ವಿರೈ |
ಮಾನವಂತರಲಿ ಬಂದು |
ಮಾನವಲ್ಲಪಹಾಸವು | ನುಡಿಯದಿರಿ |
ಈ ನುಡಿಯನೈದೆ ನೀವು ||279||
ಸಾಕು ಸಾಕದುವೆ ತನಗೆ | ಮುದ್ರಿಕೆಯು |
ಬೇಕಾದರೀವೆ ನಿನಗೆ ||
ಪೋಕತನವಿಲ್ಲೆಮ್ಮೊಳು | ಕೊಳ್ಳೆಂದ |
ನಾ ಕುಮಾರನ ಕೈಯೊಳು ||280||
ಬೇಡ ಬೇಡಯ್ಯ ನಿನ್ನಾ | ಊರ್ಮಿಕೆಯು |
ಮಾಡು ಭೋಜನವ ಮುನ್ನ |
ಗಾಢೆ ತಪ್ತಿಯದಾದರೆ | ಕೊಡಬಹುದು |
ಆಡೆನದನಲ್ಲದಿಹರೆ ||281||
ಅರೆಗೆಲಸವಾದ ಮೇಲೆ | ನಿನ್ನ ನಾ |
ಕರೆದಿತ್ತು ಪೋಗುವೆನೆಲೆ ||
ಬರಿಯ ಮಾತೇತಕೆಂದು | ಛಲವ ನಾಂ |
ತುರೆ ಪೇಳ್ದನವನೊಳಂದು ||282||
ರಾಗ ಮಧುಮಾಧವಿ ಅಷ್ಟತಾಳ
ಏನನುಸಿರುವೆಯೊ | ಭೂಸುರನೆ ನೀ | ನೇನನುಸಿರುವೆಯೊ ||
ಹೀನರಂದದೊಳೆಮ್ಮೊ | ಳಣಕವಾಡುವರುಂಟೆ ||
ಏನನುಸಿರುವೆಯೊ || ಪಲ್ಲವಿ ||
ನಿನ್ನಂಥಾ ಕೋಟಿ ವಿಪ್ರರಿಗೆ | ಬಹ | ಳನ್ನದಾನವನೀವ ಬಗೆಗೆ ||
ಕನ್ನೆಯ ವಿಮಲ ಸ್ವ | ಯಂವರವಹುದೆಂದು | ಚೆನ್ನಾಗಿ ತಿಳಿದೆಯಲ್ಲ ||
ಮೂರ್ಖ ಮರು | ಳೆನ್ನಲು ಕಾಣಲಿಲ್ಲ |
ಪೇಳದಿರಿಂಥ | ಸಮ್ಮತ ಹೊಗದಾ ಸೊಲ್ಲ || ಭೂಸುರನೆ ||283||
ಅಧ್ವರದಲ್ಲಿ ದಕ್ಷಿಣೆಯ | ಮಹ | ಯುದ್ಧದಿ ಸತ್ತ್ವಸಾಧನೆಯ ||
ಸಿದ್ಧಿಸಿಕೊಂಡ ವಿ | ವಾಹದಲಶನವ | ವದ್ಧಿಯಿಂದೀಯದಿರೆ |
ಒಪ್ಪುವುದುಂಟೆ | ಬುದ್ಧಿವಂತನೆ ಭಳಿರೆ |
ಏನೆಂಬೆನು | ಶುದ್ಧ ನೀ ಮರುಳಹರೆ || ಭೂಸುರನೆ ||284||
ರಾಗ ನಾದನಾಮಕ್ರಿಯೆ ಅಷ್ಟತಾಳ
ಫಡ ನಪಸೂನು ಕೇಳ್ ಸುಮ್ಮನೆ | ಬಾಯ | ಬಡಿವಾರವೇತಕೊ ಘಮ್ಮನೆ ||
ನುಡಿಸ ಹೇಳನ್ನದ ರಾಶಿಯ | ಬೇಗ | ಬಡಿಸಹೇಳದಕಾಗುವಾಸೆಯ ||285||
ಉಣದಿರೆ ಮಾತಾಡು ಬಳಿಕೆಂದು | ಭೀಮ | ನಣಕವಾಡುತ್ತಿರೆ ಕೇಳ್ದೊಂದು ||
ಕ್ಷಣದೊಳು ಸಕಲ ಸನ್ನಹವನು || ಬಹು | ಗುಣದಿ ಮಾಡಿಸಿದ ಮೇಣ ತಾನು ||286||
ವಾರ್ಧಕ
ಅವನೀಂದ್ರ ಲಾಲಿಸಾಶ್ಚರ್ಯಮಂ ಶಾಲ್ಯನ್ನ |
ನವಭಕ್ಷ್ಯಭೋಜ್ಯಗಳ ರಾಶಿಯಾಗದ ಮುನ್ನ |
ತವಕ ಮಿಗಿಲೊಡಲ್ಗಿಳುಹಿ ಬರಿಗೈದು ಹೂಂಕರಿಸಿದಂ ಬರಲಿ ಬೇಗೆನುತ್ತ ||
ಶಿವ ಶಿವೇನಿದು ಚೋದ್ಯವೆಂದು ಜನ ನೋಡುತಿರೆ |
ಹವಣಿಸಿದರೆರಡು ಮಡಿಯಾಗಿ ರಾಶಿಯ ನಡುವೆ |
ಎವೆಯಿಕ್ಕುವನ್ನೆಗಂ ಸರಿಯಾಯ್ತು ಮತ್ತೆ ಸುರಿದರೆ ಕಾಣದಾಯ್ತು ಕ್ಷಣದಿ ||287||
ಸರಿಯಾದುದೆಲ್ಲವೆಂಬುದನರಿತು ಹತ್ತಿರಕೆ |
ಕರೆದು ಕೈವಿಡಿದು ಮುದ್ರಿಕೆಯನಾ ನಪಸುತನ |
ಸೆರಗಿನೊಳ್ ತಾ ಕಟ್ಟಿ ಹೋಗನ್ನವೆಲ್ಲಿ ಬರಲೆಂದೆನುತ ಗರ್ಜಿಸಲ್ಕೆ ||
ಬೆರಗಾದನಿವ ಮನುಜನಲ್ಲ ಪ್ರಳಯದ ರುದ್ರ |
ನಿರದೆ ವಿಪ್ರಾಕತಿಯೊಳೀಗ ಬಂದಿಹೆನೊ ಹರ ಹರ |
ಬಲ್ಲರಾರೆನುತ ನಿಂದಿರಲ್ ಮೂದಲಿಸಿ ನುಡಿದನಾ ಕಲಿ ಭೀಮನು ||288||
ರಾಗ ಭೈರವಿ ಏಕತಾಳ
ಭಳಿರೆ ನಪಾತ್ಮಜ ನಿನ್ನ | ವೋ | ಲಲಘು ನಪಾಲಕರಿನ್ನಾ ||
ವಿಳೆಯೊಳಿಹರೆ ಮಝಪೂತು | ಸಾ | ಕಲಸಿದೆ ಭೋಜನವಿತ್ತು ||289||
ಅನ್ನವನಿತ್ತೋರ್ವನನ್ನು | ಸಲೆ | ಮನ್ನಿಸಲಾಗದೆ ನೀನು |
ಇನ್ನೇನೆಸಗುವೆಯೆಂದು | ಬಹು | ವರ್ಣದಿ ಜರೆದನು ನಿಂದು ||290||
ವಾರ್ಧಕ
ರೂಢಿಪತಿ ಕೇಳ್ ಬಳಿಕ ನಪಕುಮಾರಕನಿವನ |
ಕೂಡೆ ಛಲಕೊಳ್ಳದೆಂದರಿದು ಮಣಿಮುದ್ರಿಕೆಯ |
ಗಾಢದಿಂದಿತ್ತು ಕೈಮುಗಿದೆಂದನೆಂತಾದಡಂ ನೀವು ದ್ವಿಜರಧಿಕರು ||
ಬೇಡ ನಿಮ್ಮಲಿ ಪಂಥವತಿ ಶೀಘ್ರದಿಂ ಕಪೆಯ |
ಮಾಡಿರೆಂದೆನೆ ಕೇಳ್ದು ಪೊರಮಟ್ಟು ನಡೆತಂದು |
ಪ್ರೌಢಿಯಿಂ ತನ್ನವರನೀಕ್ಷಿಸುತ ನಮಿಸಿ ಮುರಮರ್ದನನೊಳಿಂತೆಂದನು ||291||
ಏನಿದಚ್ಚರಿ ದೇವ ಹಿಂದೆ ಬಕಹರಣದೊಳ್ |
ತಾನುಂಡ ಭೋಜನಕೆ ಮಿತವಿರ್ಪುದದರಿಂದ |
ಲಾನಿರದೆ ತಪ್ತಿಯಿಂದಪರಿಮಿತ ಭೋಜನದಿ ನೆರೆ ಹಸಿದೆನೇತಕೆನಲು ||
ನೀನುಂಡುದಂದು ಸ್ವಭಾವಧರ್ಮವದಿಂದು |
ವೇಣು ಮನ್ಮುದ್ರಿಕೆಯ ಸತ್ತ್ವವೆಂದರುಹಿ ಪವ |
ಮಾನಸುತನಿಂದದಂ ಪಾರ್ಥಂಗೆ ಕೊಡಿಸಿ ತಾಂ ಮರಳಿದಂ ಮುರವೈರಿಯು ||292||
ಭಾಮಿನಿ
ಅನಿತರೊಳು ಬಲರಾಮ ಸತ್ಯಕ |
ತನಯ ಕತವರ್ಮಾನಿರುದ್ಧಾ |
ದ್ಯನುಪಮದ ಯದುವೀರರೈತರೆ ಕೂಡಿಕೊಂಡವರ ||
ವನಜನಾಭನು ದ್ರುಪದಸುತನರ |
ಮನೆಗೆ ಬರೆ ಕಾಣುತ್ತ ಭಕ್ತಿಯ |
ಘನತೆಯಿಂ ಕರೆತಂದು ಮನ್ನಿಸಿದನು ಸರಾಗದಲಿ ||293||
ಕಂದ
ಕುರು ಯದುಕುಲಜರ್ ಮೊದಲಾ |
ಗಿರುತಿಹ ತೆತ್ತೀಸವಂಶದರಸುಗಳಾಗಳ್ ||
ಭರದಿಂ ತಂತಮ್ಮವರೊಡ |
ವೆರದೆಲ್ಲರ್ ಕುಳಿತರಲ್ಲಿ ಸಭೆಯಾಗಿರ್ದುಂ ||294||
ರಾಗ ಕಾಂಭೋಜಿ ಝಂಪೆತಾಳ
ವಿವಿಧ ವಿದ್ಯಾವಿಶಾರದ ವಿಪ್ರಚಯವು ಮೇಣ್ |
ಕವಿ ಗಮಕಿ ಪಾಠಕಾದಿಗಳು ||
ತವೆ ಕುಬ್ಜ ಪಂಗು ಬಧಿರಾಂಧಕಾದಿಗಳಲ್ಲಿ |
ತವತವಗೆ ಬಂದು ಕೂಡಿದರು ||295||
ಬಳಿಕ ಧಷ್ಟದ್ಯುಮ್ನನನು ಕರೆದು ದ್ರುಪದನಪ |
ನೊಲಿದು ನೇಮಿಸಿದನೀ ತೆರದಿ ||
ಕಳೆಯದಿರು ವೇಳೆಯನು ಲಗ್ನ ಸನಿಹದೊಳಿಹುದು |
ಲಲನೆಯಳ ಸಿಂಗರಿಸಹೇಳು ||296||
ತರಿಸು ಧನುವನು ಮತ್ಸ್ಯಯಂತ್ರವನು ಬೇಗ ತಂ |
ದಿರಿಸು ದಂಡಿಗೆಯಲಬಲೆಯನು ||
ಕರೆಸಿ ತೋರಿಸು ವಸುಮತೀಪತಿಗಳವರನ್ನು |
ವರಿಸಲೆಂದನು ಧರಾಧಿಪನು ||297||
ಭಾಮಿನಿ
ಬಳಿಕ ದ್ರುಪದನ ನೇಮದಲಿ ಸ್ತ್ರೀ |
ಕುಲಶಿರೋಮಣಿಯೆಡೆಗೆ ಬಂದರು |
ಲಲನೆಯರು ರಭಸದಲಿ ಶತ ಸಾಹಸ್ರ ಸಂಖ್ಯೆಯಲಿ ||
ನಲಿದು ಮಂಗಲಮಜ್ಜನವನಾ |
ಸುಲಲಿತಾಂಗಿಗೆ ರಚಿಸಿ ಪಟ್ಟಾ |
ವಳಿಯ ನೆರವಿಡಿದುಡಿಸಿ ಸಿಂಗರಿಸಿದರು ಸೊಬಗಿಂದ ||298||
Leave A Comment