ರಾಗ ಸುರುಟಿ ಏಕತಾಳ
ಕೇಳು ಮಂತ್ರಿವರ್ಯ | ಪರಮಸು | ಶೀಲ ವಿಮಲಶೌರ್ಯ || ಪಲ್ಲವಿ ||
ತರುಣಿ ಯಜ್ಞಸುತೆಗೆ | ಯೌವನ | ದೊರೆತಿಹುದಾ ಸ್ಥಿತಿಗೆ ||
ವಿರಚಿಪೆನು ಸ್ವಯಂವರವನದರಿನಿಂ | ಕರೆಸಬೇಹುದಖಿಳವನೀಪತಿಗಳ ||164||
ಧಾತ್ರಿಯ ತಳದೊಳಗೆ | ಇರುತಿಹ | ಕ್ಷತ್ರಿನರಪತಿಗಳಿಗೆ ||
ಪತ್ರಿಕೆಗಳ ಬರೆದುಡುಗೊರೆ ಸಹಿತಲೆ |
ಮೈತ್ರಿಯೊಳ್ ಸಲೆ ಸರ್ವತ್ರದಿ ಕಳುಹಿಸು ||165||
ರಾಗ ಕಾಂಭೋಜಿ ಏಕತಾಳ
ಎಂದು ನಿರೂಪಿಸೆ ನಪವರನು | ಚಂದದೊಳೈದೆ ಮಂತ್ರೀಶ್ವರನು ||
ಕುಂದದೆ ಕೌರವ ಮುಖ್ಯ ನಪರಿಗಾ |
ನಂದದೊಳೋಲೆಯ ಬರೆಸಿದನು ||166||
ಪೊಡವೀಶರಿಗೆಲ್ಲಗೊಲಿದು | ಉಡುಗೊರೆ ಸಹಿತೋಲೆಯ ಬರೆದು ||
ಒಡನೆ ಚರರ ಮುಖದಿಂದಲೆ ಕಳುಹಿಸಿ |
ಬಿಡದೆ ಪುರವ ಸಿಂಗರಿಸಿದನು ||167||
ರಾಗ ಮಧ್ಯಮಾವತಿ ತ್ರಿವುಡೆತಾಳ
ಅರಸ ಕೇಳ್ ಮೇಣ್ ದೇಶದೇಶದ | ದೊರೆಗಳೆಲ್ಲರ ಬಳಿಗೆ ಚಾರರು |
ಭರದೊಳೈತಂದಿತ್ತರುಡುಗೊರೆ | ವೆರಸಿ ಶುಭಪತ್ರಿಕೆಯನು || ತೋಷದಿಂದ ||168||
ಬಂದು ಗಜಪುರದರಸ ಕೌರವ | ಗಂದು ಮಿಗೆ ಪತ್ರಿಕೆಯನೀಯಲು |
ಮುಂದುವರಿವಾನಂದದಲಿ ತಾ | ನಂದು ವಾಚಿಸುತಿರ್ದನು || ಸಭೆಯೊಳಾಗ ||169||
ರಾಗ ಕೇದಾರಗೌಳ ಝಂಪೆತಾಳ
ರಾಜೇಂದ್ರಕುಲಸುದೀಪ | ಕುರುವಂಶ | ರಾಜೀವಮಿತ್ರನೆನಿಪ ||
ರಾಜ ಕೌರವನಪತಿಗೆ | ಪಾಂಚಾಲ | ರಾಜ ತಾ ಕಳುಹಿದೊಸಗೆ ||170||
ನಮ್ಮ ಸುತೆಯೆಂದೆನಿಸುವ | ದ್ರೌಪದಿಯ | ಸುಮ್ಮಾನ ಮಿಗಲು ವಿಭವ ||
ಒಮ್ಮೆಗೆ ಸ್ವಯಂವರವನು | ಸಕಲ ನಪ | ಸಮ್ಮತದಲಾನೀವೆನು ||171||
ಅನುಜರಿಂ ನೀವು ಇದಕೆ | ಕರ್ಣಾದ್ಯ | ರನುವಿಂ ಸ್ವಯಂವರಕ್ಕೆ ||
ಮನವೊಲಿದು ಬಂದು ಸತಿಯ | ನೊಲಿಸಿದಪು | ದೆನುತ ಬರೆದಿರ್ಪೋಲೆಯ ||172||
ಕಂಡು ಪರಿತೋಷಗೊಳುತ | ನಪನು ಮಾ | ರ್ತಂಡಸುತನಂ ನೋಡುತ ||
ಭಂಡು ಮಾಡಿದುದವನನು | ಶಪಥ ಕೈ | ಗೊಂಡುದಿಲ್ಲವಗೆಂದನು ||173||
ರಾಗ ಮಾಧವಿ ಏಕತಾಳ
ಕೇಳಿದೆಯಾ | ಕರ್ಣ | ಕೇಳಿದೆಯಾ || ಪಾಂ | ಚಾಲ ಭೂಮಿಪಾಲಕನು |
ಆಲೋಚಿಸಿದ ಕಾರ್ಯವನ್ನು || ಕೇಳಿದೆಯಾ || ಪಲ್ಲವಿ ||
ಬವರದಿ ದ್ರೋಣನ ಗೆಲುವ | ಕುವರನನ್ನು ಪಾರ್ಥಗಾಹ |
ಯುವತಿಯನ್ನು ಪಡೆವೆನೆಂದು | ಸವನಮುಖದಲಿ ||
ತವೆ ಪಂಥದಿ ಪಡೆದನೈಸೆ | ಅವನಿಯೊಳಿಲ್ಲಾ ಪಾಂಡವರು |
ಶಿವಸಂಕಲ್ಪವ ನೋಡಲ್ಕೆ | ನಮಗೆ ದೊರೆವಳೇನೊ ಕಾಣೆ ||174||
ಈಗ ನಾವು ಸುಮ್ಮನಿರಲು | ಹ್ಯಾಗಾಗುವದೊ ಕಾರ್ಯವದರಿಂ |
ಪೋಗಬೇಹುದೆಲ್ಲರು ಸ | ರಾಗದಿಂದಲಿ ||
ನಾಗವೇಣಿಯೊಲಿವಂತೆ ಚ | ನ್ನಾಗಿ ವಸ್ತ್ರಾಲಂಕಾರ ವೈ |
ಭೋಗದಿಂದ ಯುಕ್ತರಾಗಿ | ಸಾಗಬೇಹುದೊಂದೆ ಮನದಿ ||175||
ರಾಗ ಭೈರವಿ ಝಂಪೆತಾಳ
ಅರಸನಿಂತೆನೆ ಕೇಳ್ದು | ತರಣಿಸುತನೆಂದನೆಲೆ |
ಧರಣೀಂದ್ರ ಚಿಂತೆಯೇ | ನಿರುವುದದಕಿನ್ನು ||176||
ಸಕಲ ಸನ್ನಹವೆರಸಿ | ನಿಖಿಳ ಜನರೊಂದಾಗಿ |
ಪ್ರಕಟಮಿಗೆ ಸಾಗಲು | ತ್ಸುಕದಿ ತತ್ಪುರಕೆ ||177||
ಸಿಂಗಾರದೊಲಪಿನ ಬೆ | ಡಂಗು ಬಿನ್ನಾಣದಿಂ |
ಮಂಗಳಾಂಗಿಯ ಮನವ | ಕಂಗೆಡಿಸಬೇಕು ||178||
ಎಂದು ಕರ್ಣನು ಪೇಳ | ಲಂದು ನಪ ತೋಷದಲಿ |
ಬಂದ ಚಾರರನುಚಿತ | ದಿಂದ ಕಳುಹಿದನು ||179||
ವಾರ್ಧಕ
ಧರಣಿಪತಿ ಕೇಳ್ ಬಳಿಕ ಸಿಂಧೂರನಗರದಿಂ |
ಪೊರಟುದು ಜನೌಘವಾ ಪಾಂಚಾಲಪುರಕೆ ಸಂ |
ವರಿಸಿರ್ದ ಗಜರಥತುರಂಗಾದಿಗಳಲಿ ನಪರೊಗ್ಗಾಗಿ ಸಂಭ್ರಮದೊಳು ||
ಇರಲು ಮೇಣೇಕಚಕ್ರಾಖ್ಯನಗರಿಗನೊರ್ವ |
ಧರಣಿಸುರನೈದೆ ಧರ್ಮಾತ್ಮಜನ ಪೊರೆಗಾಗಿ |
ಬರಲು ಕಾಣುತಲುಚಿತದಿಂದ ಮನ್ನಣೆಗೈದು ಕೇಳ್ದನೀ ಮಾತನಂದು ||180||
ರಾಗ ಮಧುಮಾಧವಿ ಏಕತಾಳ
ಎಲ್ಲಿಂದ ಬರಲಾಯ್ತು ಭೂಸುರೋತ್ತಮ ನಿಮ್ಮ |
ದೆಲ್ಲಿಗೆ ಗಮನವು ಪೇಳಬೇಕೆನಗೆ ||
ಒಳ್ಳಿತು ಇಂದಿನ ಸತ್ಸಹವಾಸವ |
ದೊಳ್ಳೆದಾಯಿತೆಂದನು ಧರ್ಮನಂದನನು ||181||
ಭೂಸುರೋತ್ತಮ ಲಾಲಿಸುವುದು ಹಸ್ತಿನಪುರ |
ವಾಸದಿಂದಿಲ್ಲಿ ಬಂದೆವು ದ್ರುಪದನಲಿ ||
ಲೇಸಾದ ವೈವಾಹವಹುದಂತೆ ನಾವ್ ಪೋಪೆ |
ವಾ ಸಂಬಂಧದಲಲ್ಲಿಗೆಂದನಾ ವಿಪ್ರ ||182||
ಆರಿಗಿತ್ತಪನಂತೆ ದ್ರುಪದನು ತನ್ನ ಕು |
ಮಾರಿಯನಲ್ಲಿ ಬಂದರೆ ನಮಗಲ್ಲಿ ||
ಭೂರಿ ದಕ್ಷಿಣೆಗಳೇನುಂಟು ಪೇಳೆನುತಲಿ |
ಧಾರಿಣೀಪತಿ ಕೇಳಲೆಂದನಾ ದ್ವಿಜನು ||183||
ಆದಡಾಲಿಸು ವಿಪ್ರ ಫಲುಗುಣಗೆಂದಾತ |
ನಾದಿಯೊಳ್ ಪಡೆದನು ದ್ರುಪದಯಜ್ಞಜೆಯ ||
ತೀರ್ದರು ಪಾಂಡುಜರುರಿಮನೆಯೊಳಗೆಂಬ |
ಭೇದವ ಕೇಳ್ದು ಖೇದವನಾಂತನರಸ ||184||
ವಾರ್ಧಕ
ಬಳಿಕಾ ಪುರೋಹಿತಂ ಶಕುನ ಸೂಚನೆಗಳಿಂ |
ದಿಳೆಯೊಳಗೆ ಪಾಂಡವರ್ ಜೀವಿಸಿರ್ಪರೆನುತ್ತ |
ತಿಳಿದು ಮಾಡಿಸು ಸ್ವಯಂವರವ ನೀನದಕೆ ಬಹರೆಂದು ನಂಬುಗೆಯನಿತ್ತು ||
ಇಳೆಯರಸನಾಸರಂ ಪರಿಹರಿಸಲೊಪ್ಪಿ ನಪ |
ಕುಲಕೆ ಬೀಡಾರಮಂ ರಚಿಸಿಯೋಲೆಯ ಬರೆಸಿ |
ಕಳುಹಿದಂ ಚಾರಕರ ಮುಖದಿಂದ ದಿಗ್ದೇಶಕತುಳ ಸಂತೋಷದಿಂದ ||185||
ಭಾಮಿನಿ
ನೆರೆವುತಿದೆ ಬಹು ದೇಶದೊಳಗಿಹ |
ದೊರೆಗಳದರಲಿ ನಿಮಗೆ ಕನ್ಯಾ |
ವರಣೆಯೋ ದಕ್ಷಿಣೆಯೊ ಮನದಭಿಲಾಷೆಯೇನೆನಲು ||
ಧರಣಿಸುರರಿಗೆ ರಾಜಕನ್ಯೋ |
ತ್ಕರುಷವೇ ಅಪಹಾಸ್ಯವೇಕೈ |
ಬರುವೆವೈ ನಿಮ್ಮೊಡನೆ ದಕ್ಷಿಣೆಗೆಂದು ನಪ ನುಡಿದ ||186||
ಕಂದ
ಬಳಿಕಾಲೋಚಿಸುತಿದ ತ |
ಮ್ಮೊಳಗೈತರಲಿಲ್ಲಿ ದೈತ್ಯವಧೆಯಾಯ್ತಿನ್ನಾ ||
ಲಲನೆಯ ಲಾಭಮದಿರ್ದಡೆ |
ಸಲಲಾ ಪುರಗಮನದಿಂದಲೆಂದೆನುತಾಗಳ್ ||187||
ರಾಗ ಕೇದಾರಗೌಳ ಅಷ್ಟತಾಳ
ಅರಸ ಕೇಳ್ ಮೇಣ್ ಮರುದಿನದುದಯದಿ ಶುಭ |
ಕರ ಲಗ್ನವೇಳೆಯಲಿ ||
ಪೊರಟರು ಪಾಂಚಾಲಪುರಕೆ ಪಾಂಡವರು ಭೂ |
ಸುರರ ಸಮಾಜದಲಿ ||188||
ಬರುತಿದಿರ್ಕಂಡರು ಕಲಶಗನ್ನಡಿ ಪುಷ್ಪ |
ವೆರಸಿರ್ ಸತಿಯರನು ||
ವರ ಪಕ್ಷಿ ಮಗ ಗಂಧ ಪವನ ಮುಂತಾದ ಸ |
ತ್ಕರ ಶುಭಶಕುನವನು ||189||
ಭೂರಿ ಸಚ್ಛಕುನ ಸೂಚನೆಯಿದರಿಂದಲಿ |
ಚಾರು ಕನ್ಯಾಲಾಭವು ||
ಆರಿಗೆಮ್ಮವರೊಳು ಪೂತುರೆಂದರು ಮತ್ತಾ |
ಧಾರಿಣಿಸುರರು ತಾವು ||190||
ವಾರ್ಧಕ
ಅವನೀಂದ್ರ ಕೇಳ್ ಬಳಿಕ ಭೂಸುರಸಮಾಜದೊಡ |
ನಿವರು ನಾಲ್ಕೆರಡು ಪಯಣದೊಳೈದಿ ಮಾರ್ಗದೊಳ್ |
ತವೆ ಋಷಿಗಳಾಶ್ರಮಕೆ ಬಂದು ಪಾರಾಶರಿಯನುಂ ಕಂಡು ಬಕವಧೆಯನು ||
ತವಕೆ ಮಿಗೆ ಪೇಳ್ದು ಪರಿತೋಷದಿಂ ಬೀಳ್ಗೊಂಡು |
ದಿವಸಾವಸಾನದೊಳ್ ಕಾಂತಾರಮಾರ್ಗವಿಡಿ |
ದವಸರದಿ ನಡೆದರುರೆ ಕತ್ತಲೆಯೊಳಾಂತಿರ್ದ ಬೀಸುಗೊಳ್ಳಿಯ ಬೆಳಕಲಿ ||191||
ರಾಗ ನಾದನಾಮಕ್ರಿಯೆ ಮಟ್ಟೆತಾಳ
ಹಿಂದೆ ಮುಂದೆ ಭೀಮ ಫಾರ್ಥ | ರಂದು ಪಿಡಿದ ಕೊಳ್ಳಿವೆಳಕಿ |
ನಿಂದ ಕುಂತಿ ಯಮಜ ಯಮಳ | ರೊಂದೆ ಭರದಲಿ ||
ಸಂದ ಮಾರ್ಗವಿಡಿದು ವಿಪಿನ | ವಂದದಲ್ಲಿ ಬರುತಿರಲ್ಕೆ |
ಬಂದುದೊಂದು ಘಾತ ಕೇಳ್ ನ | ಪೇಂದ್ರ ಸರಿಸದಿ ||192||
ವೀರ ಗಂಧರ್ವ ಅಂ | ಗಾರಪರ್ಣ ವಿಪಿನದಲ್ಲಿ |
ವಾರಿಕೇಳಿವ್ಯಸನದಿಂದ | ಸೇರಿ ಮುದದೊಳು ||
ನಾರಿಯರ ಸಮೇಳದಿಂದ | ಮೀರದರ್ಧರಾತ್ರೆಯಲಿ ವಿ |
ಹಾರಿಸುತ್ತಲಿರಲು ಇವರು | ಸಾರೆ ಕಂಡರು ||193||
ವಾರ್ಧಕ
ಲಲನೆಯರ್ ಚಾರು ಕಾಂತಿಗಳ ಮೊಗ ಮೊಗಸಿದರ್ |
ತಿಳಿಗೊಳನ ಜಲವೆಂದು ಕಂಗಳು ಬೆಳಗಲೈದೆ |
ಹೊಳೆವ ಮರಿಮೀನೆಂದು ಬೆದರಿದರ್ ಮುಖವನಂಬುಜದರಳೆನುತ ಪಿಡಿದರು ||
ಸುಳಿಗುರುಳನೈದೆ ತುಂಬಿಗಳೆಂದು ಕೈದುಡುಕ |
ಲಳುಕಿದರ್ ಕುಚವ ಚಕ್ರಾಂಗವೆಂದೆನುತ ಕೈ |
ಗಳ ಪಿಂತೆಗೆವರಂಬುಕೇಳಿಯೊಳು ನಿಶಿಯೊಳಾ ಮುಗುದೆಯರ್ ಖೇಚರಿಯರ ||194||
ರಾಗ ಕಾಂಭೋಜಿ ಝಂಪೆತಾಳ
ನಾರಿಯರ ವಿಮಲ ತನುಕಾಂತಿ ಕಂಗಳ ಬೆಳಕು |
ಚಾರು ರತ್ನಾಭರಣಗಳಲಿ ||
ಘೋರತರ ನಿಶಿಯಂಧಕಾರ ಪರಿಹರಿಸುತಿರೆ |
ವಾರಿಕೇಳಿಯು ರಂಜಿಸಿದುದು ||195||
ಇವರ ಬರವನು ಕಂಡು ಕಡು ನಾಚಿ ಕಾಂತೆಯರು |
ತವಕ ಮಿಗಲುಡಲು ವಸನವನು ||
ಅವರದಾರೆಂದೆನುತ ಕನಲಿ ಗಂಧರ್ವಪತಿ |
ತವೆ ಧನುವನಾಂತು ನುಡಿಸಿದನು ||196||
ರಾಗ ಸೌರಾಷ್ಟ್ರ ಆದಿತಾಳ
ಈಸು ಭರವದೇನು ಕಟ್ಟಾಸುರದಾ ಪಯಣವಿಂತು |
ದೇಶಕಾಲವರಿಯದೆ ಪೋಪವಸರವೇನು ||
ಲೇಸು ನಾವು ಕಾಲನಿಶಿಯಲೇ ಸಹಸಕಾರ್ಯಗಮನ |
ವೈಸೆ ಬಲ್ಲೆೀನೆಂದ ನಗುತ ವಾಸವಸೂನು ||197||
ಮುನ್ನ ನುಡಿಯೆ ಕೇಳ್ದ ಮಾತ್ರೋ | ತ್ಪನ್ನವಾಯ್ತು ಹರುಷವೆಲವೊ |
ನಿನ್ನಂತೆ ಗರ್ವಿತರ ಕಾಣೆನಿನ್ನು ಧರೆಯೊಳು ||
ಕನ್ನಡಿಯ ನೋಡೆ ಮೊಗವದನ್ಯವಾಗಿ ತೋರ್ಪುದುಂಟೆ |
ತನ್ನಂತೆ ಲೋಕವಲ್ಲವೆ ಚೆನ್ನಾಗಿ ನೋಡು ||198||
ನರರು ಪೂರ್ವರಾತ್ರಿಯೊಳು ಸುರರು ಪೂರ್ವದಿವದೊಳು ಸಂ |
ಚರಿಪ ಕಾಲವೀಗರುವ ಪರಿಕಿಸುವೆನು ||
ಭರದ ಕಾರ್ಯ ಬಂದಿರ್ಪಾಗಲೆರಡು ಕಾಲಧೀರರ್ಗೊಂದೆ |
ಬರುವುದೀಗ ಬರಲಿ ಮುಂದಿನ್ನಿರದೆ ನೋಳ್ಪೆನು ||199||
ಹೇಗೆ ಕಾರ್ಯಭಾರವಿರಲಿ ಸಾಗದ ಬಾಯ ಪೌರುಷವ |
ತೂಗಬಹುದು ಹೊಲ್ಲೆಹದಕೇನಾಗಲರಿಯದು ||
ಹೀಗೆ ಪೇಳದಿರೆಲೊ ನುಡಿಯ ಕೈಗುಣವ ಗರುವರೀಗೊಂ |
ದಾಗಿ ತೋರ್ಪುದು ಸಂಶಯ ಬೇಡೀಗ ಪರಿಕಿಸು ||200||
ರಾಗ ಶಂಕರಾಭರಣ ಮಟ್ಟೆತಾಳ
ಎಲನು ಕೇಳ್ದು ಕನಲಿಯಂಗಾರಪರ್ಣನು |
ಧನುವಿಗಂಬನೇರಿಸುತ್ತ ಕೂಡೆ ನುಡಿದನು ||
ಘನ ಸಮರ್ಥನಾದಡೀಗ ಸತ್ತ್ವದಿರವನು |
ತನಗೆ ತೋರು ಪರಿಕಿಸುವೆನೆನುತ್ತಲೆಸೆದನು ||200||
ಆಗಲಿದನು ಕೊಳ್ಳೆನುತ್ತ ನರನು ವಹ್ನಿಯ |
ಬೇಗ ನೆನೆದು ಮಂತ್ರಿಸುತ್ತ ಕರದ ಕೊಳ್ಳಿಯ ||
ತೂಗಿ ಬಿಡಲು ಕಡುಗಿ ಕೊನರುಗಿಡಿಯ ಸೂಸುತ |
ಪೋಗಿ ಮುಸುಕಿತವನ ರಥವನುರಿಯಕಾರುತ ||201||
ಧನುವನವನ ಸರಳನವನ ರಥವನೆಲನುರೆ |
ತನುವ ಸಾರಥಿಯನೈದೆ ಮುಸುಕಿ ಸುಡುತಿರೆ ||
ಮನದಿ ಬೆದರಿಯುರಿ ಛಡಾಳಿಸಲ್ಕೆ ಮೈಯಲಿ |
ಜನಪ ಕೇಳ್ ಸರೋವರದಲಿ ಪೊಕ್ಕನೊದಗಿಲಿ ||202||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಒಡನೆ ಕೊಳನೊಳು ಪೊಕ್ಕುದಸ್ತ್ರವು | ಕಿಡಿಗೆದರಿ ಸುರಿಸುರಿದು ಜಲವನು |
ಸುಡತೊಡಗಿತಂಗಾರಪರ್ಣನ | ಬಿಡದೆ ಭರದಿ ||203||
ತರುಣಿ ಹಾ ಹಾ ಕೆಟ್ಟನಕಟೆಂ | ದೊರಲಿದನು ಬಾಯ್ಬಿಟ್ಟು ಖೇಚರ |
ನುರಿಯ ಡಾವರಕಂಜಿ ಸತಿಯನು | ಕರೆಕರೆಯುತ ||204||
ಆ ಸಮಯದಲಿ ಬಂದು ಯಮಜನ | ಭಾಸುರಾಂಘ್ರಿಗೆ ಹಣೆಯ ಚಾಚುತ |
ಬೀಸರಲಿ ಚಾಲ್ವರಿದ ಬೇಡಿದ | ಳಾ ಸುದತಿಯು ||205||
ರಾಗ ಮಾಧುಮಾಧವಿ ಅಷ್ಟತಾಳ
ಪಾಲಿಸೈ ಪತಿಭಿಕ್ಷೆಯನೊಲಿದು | ಓಲೆಭಾಗ್ಯವ ಕಾಯಬೇಕು ನೀ ತಿಳಿದು || ಪಲ್ಲವಿ ||
ಉನ್ನತ ಸಾಹಸರ್ನೀವೆಂಬುದರಿಯದೆ | ಮುನ್ನ ಗರ್ವಿಸಿದನೆನ್ನಯ ಕಾಂತನು ||
ಇನ್ನದ ಮನದೊಳಗೆಣಿಸದೆಯಬಲೆಯ | ಬಿನ್ನಪವನು ಸಲಿಸಬೇಹುದು ನೀನು ||206||
ಕಂದ
ಗಂಧರ್ವೇಶನ ಸತಿಯಿಂ |
ತೆಂದಡಿಯೊಳ್ ಬಿದ್ದು ಮೊರೆಯಿಡುತಿರಲಾಗಳ್ ||
ಪೊಂದಿದ ಕರುಣದೊಳಂ ಸಂ |
ಕ್ರಂದನುಸುತನೊಡನೆ ಧರ್ಮಜ ನೊಲಿದೆಂದಂ ||207||
ರಾಗ ಕಾಪಿ ಏಕತಾಳ
ತಮ್ಮ ಸೈರಿಸು ಖಾತಿ ಬೇಡ | ಕೊಲಲು | ಧರ್ಮವಲ್ಲೀತನ ನೋಡಾ ||
ಒಮ್ಮೆಗೆಸಗಿದೀ | ದುಮ್ಮಾನವೆ ಸಾ |
ಕೆಮ್ಮನು ಮರೆಸಾ | ರ್ದಳ್ ಮೇಣಿವಳ್ || ತಮ್ಮ ಸೈರಿಸು || ಪಲ್ಲವಿ ||
ನಾಗವೇಣಿಯು ಮೊರೆಯಿಟ್ಟು | ಬಂದು | ಬಾಗಿದಳಯ್ಯ ಕಂಗೆಟ್ಟು ||
ಈಗಿವಳಿಷ್ಟವ ಕೊಟ್ಟು | ಕಳು | ಹಾಗದಿನ್ನಿವಳಲಿ ಸಿಟ್ಟು ||
ಬೇಗುದಿಗೊಳುತಲಿ | ಸೀಗುರಿವಸ್ತ್ರವ |
ಬೇಗ ನಿವಾರಿಪು | ದಾಗಲಿಯರ್ಥಿ || ತಮ್ಮ ಸೈರಿಸು ||208||
ರಾಗ ಮಾರವಿ ಏಕತಾಳ
ಎಂದೆನಲರ್ಜುನನಂದು ವರುಣಶರ | ದಿಂದಲುರಿಯನೆಲ್ಲ ||
ನೊಂದುವ ತೆರದಲಿ ಅಂದುಪಶಮಿಸಿದಾ | ನಂದದೊಳೇನೆಂಬೆ ||209||
ಶಿವ ಶಿವ ಬಹು ವೀರರು ನರರಾಗಿರ | ರಿವರೆನುತಾಕ್ಷಣದಿ ||
ತವಕದಿ ಬಂದು ಸಮೀಪದಿ ನುಡಿಸಿದ | ನವರನು ಸುಮನದಿ ||210||
ರಾಗ ಸೌರಾಷ್ಟ್ರ ರೂಪಕತಾಳ
ಆರು ನೀವತಿ ಬಲವಂತರು ಧರೆಯೊಳ |
ಗೀರೀತಿಯಿಂದೆನ್ನ ಗೆಲುವ ||
ಧೀರರ ಕಾಣೆ ನಿಮ್ಮಿರವ ಪೇಳುವುದೆಂದು |
ಚಾರುವರಿದು ಕೇಳ್ದನಂದು ||211||
ದೇಶಿಗರಾವು ಕಾರ್ಯಾನುಭಾಗದಿ ಪೋಪೆ |
ವೈಸಲ್ಲದಿಲ್ಲವೆಂದೆನುತ ||
ಭಾಷಿಸೆ ನಪಮಾಜಿ ಖರೇಂದ್ರನಿರದೆ ಮೇಣ್ |
ವಾಸವಾತ್ಮಜನ ಕೇಳಿದನು ||212||
ಕುರುಹ ನೋಡಲು ವಿಪ್ರವೇಷವು ಸತ್ತ್ವವ |
ಪರಿಕಿಸೆ ಸುರರಿಗಿಮ್ಮಿಗಿಲು ||
ಅರುಹಬೇಕಾರು ನೀವೆನುತಲಿ ಮಿಗೆ ಚಾಲು |
ವರಿದು ಕೇಳ್ದರೆ ಪಾರ್ಥನೆಂದ ||213||
ಕೇಳಿ ಬಲ್ಲೆ ಪಾಂಡುಸುತರನ್ನು ಧರೆಯೊಳು |
ಪೇಳುವರವರೆ ನಾವೆಂದು ||
ಕಾಲವರಿದು ವಿಪ್ರವೇಷವಾಂತೆವೆನುತ್ತ |
ಪೇಳಿದ ತಮ್ಮ ಸಂಗತಿಯ ||214||
ರಾಗ ಕೇದಾರಗೌಳ ಅಷ್ಟತಾಳ
ಶಿವ ಶಿವ ಕೇಳ್ದೆನು ಸಾಕ್ಷಾತ್ ಯಮಶಕ್ರ | ಪವನನು ಸತ್ಯಜರೆ ||
ತವೆ ನೀವು ಮತ್ತಾರಿಗಿನಿತು ಸಾಮರ್ಥ್ಯ ಸಂ | ಭವಿಸುವುದುಂಟೆ ಬೇರೆ ||215||
ಕೇವಲ ಸನ್ಮಾನನೀಯರು ಪೂಜ್ಯರು | ನೀವೆಮಗೈಸೆ ನೋಡೆ ||
ಈವೆನು ತುರಗಸಹಸ್ರವ ದಿವ್ಯ ರ | ತ್ನಾವಳಿಗಳನು ಕೂಡೆ ||216||
ಇದುವೆಯನರ್ಘದಿವ್ಯಾಭರಣಗಳಿವೆ | ಸುದಯದಿ ಕೊಳ್ಳಿರೆಂದು ||
ಮುದದಿ ಗಂಧರ್ವ ರಾಜನು ಪೇಳೆ ಫಲುಗುಣ | ನದಕೆ ಮತ್ತೆಂದನಂದು ||217||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂದಿನವೆ ಮೊದಲಾಗಿ ನೀನು ನೀನುರೆ | ಬಂಧುವೆಮಗೆಲೆ ಖಚರಪತಿ ಬೇ |
ರೆಂದು ಬಗೆಯವು ನೀನೆ ಸದ್ಧನ | ವೆಂದರಿವೆವು ||218||
ಈಗಳೀ ದ್ವಿಜವೇಷದಿಂದಲಿ | ಪೋಗುವೆವು ದ್ರುಪದನಲಿ ಪರಿಣಯ |
ವಾಗುವುದನೀಕ್ಷಿಸುವೆವೈ ಮುದ | ವಾಗಿ ನಿನ್ನ ||219||
ಮಂದಿರದಲಿರಲೀ ಸುವಸ್ತುವ | ದೊಂದು ಕಾಲಕೆ ತರಿಸಿಕೊಂಡಪೆ |
ವೆಂದು ಸಖ್ಯವನೆಸಗಿದರು ಸಾ | ನಂದದಿಂದ ||220||
ವಾರ್ಧಕ
ಅವನೀಂದ್ರ ಕೇಳ್ ಬಳಿಕ ಸತ್ಕಥಾಶ್ರವಣದಿಂ |
ದಿವರು ಬೀಳ್ಗೊಟ್ಟು ಖಚರೇಂದ್ರನಂ ಮುಂದೆ ಬರು |
ತವೆ ಧೌಮ್ಯಮುನಿಯನೊಡಗೊಂಡು ಪೌರೋಹಿತ್ಯಕೊಲಿದು ಸನ್ಮಾನದಿಂದ ||
ಸವನಿಸಿಯೆ ಸನ್ಮುಹೂರ್ತವನರಿದು ಬಂದರಾ |
ಭುವನಕುತ್ತಮವೆನಿಪ ಪಾಂಚಾಲನಗರಕು |
ತ್ಸವದಿಂದಲಖಿಳ ಜನಜಾಲಪೊಪ್ಪಿರಲದಂ ಕಾಣುತ ವಿಲಾಸದಿಂದ ||221||
ರಾಗ ಸಾಂಗತ್ಯ ರೂಪಕತಾಳ
ಎಲ್ಲಿ ನೋಡಿದರು ಭೂಪಾಲರ ಚತುರಂಗ |
ಝಲ್ಲರಿ ಸಿಂಧ ಚಾಮರವು ||
ಪಲ್ಲವಿಸಿರ್ದ ಸತ್ತಿಗೆಗೊತ್ತೊತ್ತುಗ |
ಳಲ್ಲಿ ಶೋಭಿಸಿತು ಪಟ್ಟಣವು ||222||
ಬರುತಿರ್ದುದಿಂತು ನಾನಾದೇಶದರಸುಗಳ್ |
ಧರೆಯಗಲಕೆ ತೆರಹಿರದೆ ||
ಪುರದೊಳಾ ಹೊರಗೆ ಬಿಡಾರವಾಯ್ತವರಿಗೀ |
ಪರಿಯ ಕಾಣುತ ಬಂದರವರು ||223||
ವರ ಭಿಕ್ಷಾವತ್ತಿಯೊಳ್ ಬಂದು ಕುಲಾಲಮಂ |
ದಿರದೊಳು ಬೀಡಾರವೆಸಗಿ ||
ನೆರೆ ಪೊಸ ಭಾಂಡದಿ ಪಾಕವನೆಸಗಿ ಮ |
ತ್ತಿರದೆ ಭೋಜನವಾಯಿತಿವರ್ಗೆ ||224||
Leave A Comment