ರಾಗ ಮಾರವಿ ಏಕತಾಳ
ತಡೆದರಿ ಭಟರ ಸಮೂಹವ ಮುಸಲದಿ | ಹೊಡೆದುರೆ ನೋಯಿಸುತ ||
ಬಿಡದಟ್ಟಿದರಾ ದ್ರುಪದ ಸಹೋದರ | ರೆಡೆಗೊಡದಬ್ಬರಿಸಿ ||77||
ಕರ್ಣ ಜಯದ್ರಥ ಶಕುನಿಗಳುಗ್ರವ | ನಿರ್ಣಯಿಸಲು ಕಂಡು |
ಕರ್ಣ ಹೀನಾಂಗನೆಯಂತೀ ಬಲ ಬಲು | ಜೀರ್ಣಿಸಿ ತಿರುಗಿದರು ||78||
ಗುರು ಸಹಿತಲೆ ಪಾಂಡವರೈವರು ತ | ತ್ಪುರ ಬಾಹೆಯೊಳಿರಲು ||
ಧುರಕಿದಿರಪ್ಪ ಮಹಾಸನ್ನಾಹದಿ | ತರುಬುತ ನಿಂದಿರಲು ||79||
ಕೈದುಗಳನು ಬಿಸುಟಾ ಕೌರವ ಬಲ | ಮೈದೆಗೆದಯ್ತರಲು ||
ಹೊಯ್ದುರೆ ಭೀರ್ಮಾರ್ಜುನರರಿಬಲಕಡ | ಹಾಯ್ದಬ್ಬರಿಸಿದರು ||80||
ವಾರ್ಧಕ
ಮುರಿದೊತ್ತಿ ಬರುವ ಮದದಾನೆಯಂ ಸೇನೆಯಂ |
ತರಿದೊಟ್ಟಿದರ್ಭುಜ ಪ್ರತಾಪದಿಂ ಕೋಪದಿಂ |
ಧುರದೊಳತಿರಥರನೀಡಾಡಿದರ್ತೀಡಿದರ್ಭೀಮಾರ್ಜುನರ್ಭರದೊಳು ||
ದೊರೆಯಾವನೆನುತ ಕೋಪದಿ ಕಂಡು ಮುಂಕೊಂಡು |
ಸೆರೆವಿಡಿದು ಕಟ್ಟಿ ಪಾಂಚಾಲನಂ ಶೀಲನಂ |
ಗರುವಿಂಗೆ ಕಾಣಿಕೆಯನಿದಿರಿಟ್ಟು ಪೊಡಮಟ್ಟು ನಿಂದರಹನೇವೇಳ್ವೆನು ||81||
ರಾಗ ಭೈರವಿ ಝಂಪೆತಾಳ
ಧರಣಿಪತಿ ಲಾಲಿಸೈ | ಗುರುಕಾಣಿಕೆಯ ಕೊಟ್ಟ |
ಮರುತಾರ್ಜುನರ ಕಂಡು | ಉರುತರದಿ ಪೊಗಳಿ ||82||
ದ್ರೋಣನೆಂದನು ದ್ರುಪದ | ಕ್ಷೋಣಿಪಗೆ ದೊರೆತನದ |
ತ್ರಾಣವೆಲ್ಲಿಹುದೆಲವೊ | ಕಾಣಿಸಿತೆ ಮನಕೆ ||83||
ಸಂದಿತೇ ಪೂರ್ವದೊಳ | ಗೆಂದ ಭಾಷೆಯು ನಿನಗೆ |
ಮಂದಮತಿಯಾಗಿ ನೀ | ನಂದು ಗರ್ವದಲಿ ||84||
ನಾವು ವಿಪ್ರರು ನಮಗೆ | ಜೀವ ಹತ್ಯವದ್ಯಾಕೆ |
ಜೀವದಾನವ ಕೊಟ್ಟೆ | ಜೀವಿಸಿಕೊ ಎಂದ ||85||
ಹೆಡೆಮುಡಿಯ ಬಿಗಿದುದನು | ಬಿಡಿಸಿ ದ್ರುಪದನನು ಮ |
ತ್ತೊಡಬಡಿಸಿ ಕಳುಹಿದನು | ತಡೆಯದಾ ದ್ರೋಣ ||86||
ಭಾಮಿನಿ
ಸಿಂಧುವಸನೆಯ ಪತಿಯೆ ಕೇಳುರೆ |
ನೊಂದು ದ್ರುಪದನು ಮಾನಭಂಗದೊ |
ಳಂದು ತೆರಳಿದನಿವನ ಜೈಸುವ ಸುತನ ಕ್ರತು ಮುಖದಿ ||
ಇಂದ್ರಜಂಗೊಪ್ಪುವ ಸತಿಯು ಸಹಿ |
ತಂದು ಪಡೆವೆನೆನುತ್ತ ವಿಪ್ರರ |
ವಂದಗೂಡಿಸಿ ಪುತ್ರ ಕಾಮ್ಯಾಧ್ವರವ ತೊಡಗಿದನು ||87||
ರಾಗ ಸಾಂಗತ್ಯ ರೂಪಕತಾಳ
ಕ್ಷೀಣನುಳಿದಾಹುತಿಯಗೊಂಡು ಅಮರರ | ಬಾಣಸಿಗುಣಬಡಿಸುತಲಿ ||
ಮಾಣದೆ ಎಸಗಿದರಾ ದಿವಿಜರು ದ್ರುಪದ | ಕ್ಷೋಣಿಪಾಲಕನಭಿಮತದಿ ||88||
ವರಕುಂಡ ಮಧ್ಯದೊಳುರಿವಗ್ನಿ ಮುಖದಲ್ಲಿ | ಗರುವನಿಟ್ಟೆರೆದಂತೆ ಭರದಿ ||
ಶರ ಚಾಪಾಯುಧ ಸಹಿತಲೆ ದಷ್ಟದ್ಯುಮ್ನವ | ತರಿಸಿದ ರೌದ್ರಾಗ್ರದಿಂದ ||89||
ವೇದ ಮಧ್ಯಗ್ರದೊಳೊಡೆದು ಮೂಡಿದಳು ತಾ | ನಾದಿ ಶಕ್ತಿಯು ಎಂಬ ತೆರದಿ ||
ಶೋಧಿಸೆ ಕಾಮನ ಕೈದು ಜಗನ್ಮೋಹ | ನೋದಯ ಮಂತ್ರದೇವತೆಯೊ ||90||
ದ್ರೋಣನ ವಧೆಗೆ ಈ ಮಗನು ಪಾರ್ಥನಿಗಹ | ರಾಣಿಯು ಮಗಳೆಂದು ಮುದದಿ ||
ಕ್ಷೋಣಿಪ ದ್ರುಪದ ಸಂರಕ್ಷಿಸುತಿರ್ದನು | ಬಾಣ ವಿದ್ಯಂಗಳ ಕಲಿಸಿ ||91||
ಅತ್ತಲಾ ದ್ರುಪದನು ಸುತರ ಪಾಲಿಸುತಿರ | ಲಿತ್ತ ಕೌರವನೇಕಾಂತದಲಿ ||
ಚಿತ್ತದಿ ನೊಂದಾಗ ಶಕುನಿ ಕರ್ಣಾದ್ಯರೊ | ಳುತ್ತರವಾಡಿದನಂದು ||92||
ಭಾಮಿನಿ
ಇಂದು ಭೀಮಾರ್ಜುನರು ದ್ರುಪದನ |
ತಂದು ಕಾಣಿಕೆಗೊಟ್ಟು ಮನಕಾ |
ನಂದಗೊಳಿಸಿದರವರು ದ್ರೋಣಾಚಾರ್ಯಗತಿ ಹಿತರು ||
ಸಂಧಿಸಿದುದವಮಾನ ನಮಗಿದ |
ರಿಂದಲಿವರೊಳು ಕಾದಿರಣದೊಳು |
ನಿಂದು ಗೆಲಲರಿದವರು ಹೆಬ್ಬಲರ್ನಾವು ದುರ್ಬಲರು ||93||
ರಾಗ ಕಾಂಭೋಜಿ ಝಂಪೆತಾಳ
ಕೇಳಿರೈ ಕರ್ಣ ಶಕುನಿಗಳಿದಕುಪಾಯವನು | ಪೇಳಿ ಬಲ್ಲಡೆ ತತೂಕ್ಷಣದಿ ||
ಬಾಳಗೊಡರಾ ಸಮೀರಜನೆಮಸುತಾದಿಗಳು | ಧಾಳಿಯಿಲ್ಲೆನೆ ರವಿಜನೆಂದ ||94||
ದುಗುಡವೇಕೆಲೆ ಜೀಯ ದುಷ್ಟ ಪಾಂಡವರುಗಳ | ಬಿಗುಹ ನಿಲಿಸುವೆ ರಣಾಂಗಣದಿ ||
ಜಗದೊಳೇಕಚ್ಛತ್ರ ಪತಿಯಾಗಿ ಮೆರೆವಂತೆ | ಬಗೆಯನೆಸಗುವೆನೆಂದ ಕರ್ಣ ||95||
ವಿದುರ ಭೀಷ್ಮಾದಿಗಳು ಸದನದೊಳಗುಂಡುಂಡು | ಒದಗುವರು ಪರಹಿತಕ್ಕವರು ||
ಹದನ ನೀನೇ ಬಲ್ಲೆಯವರದೆಂದೆನೆ ಶಕುನಿ | ಚದುರತೆಯ ಪೇಳ್ದ ಕೌರವಗೆ ||96||
ಭೂಪ ಕೇಳ್ ಪಾಂಡವರ ಹಿಮ್ಮೆಟ್ಟಿಸಲ್ಕೆ ಕುಹ | ಕೋಪಾಯ ಮಾರ್ಗ ಹೊರತಿಲ್ಲ ||
ನೀ ಪರೀಕ್ಷಿಸು ಮನದೊಳೆಂದವನಿಪನ ಮನದ | ತಾಪ ತಣಿವಂತೆ ಪೇಳಿದನು ||97||
ಕಾಲಾಗ್ನಿ ರುದ್ರರೂಪನು ಭೀಮ ಸೇನನೊಳು | ಕಾಳಗದಿ ಗೆಲುವರ್ಯಾರುಂಟು ||
ಮೂಲ ಪುರುಷನು ಯುಧಿಷ್ಟಿರಗನುಜನಾಗಿಹನು | ಸೋಲದವರಾರೆಂದರವಗೆ ||98||
ಧರೆಯೊಳಗೆ ಮೂವರೆ ಕಣಾ ಧನುರ್ವಿದ್ಯೆಯಲಿ | ಮೆರೆವ ಸಾಮರ್ಥ್ಯ ಶೋಭಿತರು ||
ಪರಿಕಿಸಲಿಕೊಬ್ಬೊಬ್ಬರಲ್ಲಿ ಒಂದೊಂದು ಗುಣ | ನರನಲ್ಲಿ ತ್ರೈಗುಣವು ಭರಿತ ||99||
ಕಾಣಲಾ ರಘುನಾಥ ಚರಣುಗ್ರಭೀಷ್ಮ ಶಿರ | ದ್ರೋಣನೆದೆ ನಡುಗುವದು ಭರದಿ ||
ಮೇಣವನೊಳಾವನೈ ಮಾರಾಂತು ಜೀವಿಸುವ | ತ್ರಾಣನೀ ಜಗದಿ ಪಾರ್ಥನೊಳು ||100||
ಶತ್ರುಗಳ ಸಂಹರಿಸಿ ಧರೆಯನಾಳುವ ಮಹಾ | ಸತ್ವ ನಿನಗಿಲ್ಲವದರಿಂದ ||
ಕತ್ರಿಮದಿ ರಿಪುಗಳನು ಕಿತ್ತಿಟ್ಟು ಬಾಳಿರುವ | ದುತ್ತಮರ ಮತವು ಕೇಳೆಂದ ||101||
ಎಳತಿನೊಳು ಮುರಿಯದಡೆ ಬೆಳೆದಡಸದಳವವರಿ | ಗಿಳೆಯರ್ಧವಿತ್ತಡಾ ಮೇಲೆ ||
ಅಳುಕರಿನ್ನೆಲೆ ನೀನು ತಿಳಿಯೆನುತಲಾ ಶಕುನಿ | ಹಲವು ದುರ್ಭೋಧನೆಯನರುಹೆ ||102||
ಭಾಮಿನಿ
ಎಂದು ದುರ್ಭೋಧೆಗಳ ನಾನಾ |
ಚಂದದಲಿ ಬೋಧಿಸಿದು ನೀತಿಯ |
ನಂದ ಗೆಡಿಸಿದನಾ ಕಳಿಂಗನು ಕತಕವನು ನೆನೆದು ||
ಬಂದುದಾ ಕೌರವನ ಮನಸಿಗೆ |
ಬಂದನಿರುಳಿನೊಳವರು ಸಹಿತಲೆ |
ತಂದೆಯಿದ್ದೆಡೆಗಯ್ದಿಪೇಳಿದನಧಿಕ ವಿನಯದಲಿ ||103||
ರಾಗ ಕಾಂಭೋಜಿ ಅಷ್ಟತಾಳ
ಲಾಲಿಸು ಪಿತ ನಮ್ಮ ಮಾತ | ಗುಣ | ಶೀಲ ಸಂಪನ್ನ ಪ್ರಖ್ಯಾತ ||
ಪೇಳುವದೇನು ಭೀಮಾರ್ಜುನರಿಂದಲಿ | ಬಾಳುವ ತೆರ ನಾ ಕಾಣೆವು ಬಲು ಬಗೆಯಿಂದ ||104||
ಇರಲವರೇ ಪುರದೊಳಗೆ | ದೇಶಾಂ | ತರಕಪ್ಪಣೆಯನೀವುದೆಮಗೆ ||
ಸರಸಿಜವನವ ತೂರುಚಿಕರಿಯೆಳದಂತೆ | ಪರಿಭವವಪ್ಪುದು ಭೀಮನೊಳ್ಕೂಡದು ||105||
ಅಕಟ ಕೇಳಿದೆಯಲೈ ಮಗನೆ | ಧರ್ಮ | ಸುಕುಮಾರಕನು ಬಾಧಕನೆ ||
ವಿಕಟ ಭೀಮಾರ್ಜುನರವನೊಳಗಲ್ಲದೆ | ಪ್ರಕಟಿಸಲವರಿಂದಾಗುವದೇನು ಕತಕವು ||106||
ತಂದೆ ಕೇಳ್ ಧರ್ಮಜಾದಿಗಳ | ಮತ | ದಿಂದಾಳಿರುವದು ರಾಜ್ಯಗಳ ||
ನಂದದಿಂದವರಿಗೀವುದು ನಮ್ಮಿಂದಾಗದು | ಇಂದು ಜನನಿಯೊಳಪ್ಪಣೆ ಕೇಳ್ವೆನೆಂದನು ||107||
ಮಗನೆ ಬಾರೆನ್ನ ಮರಿಯಾನೆ | ಎನ್ನ | ನಗಲಿ ಪೋದರೆ ಬಾಳಿರುವೆನೆ ||
ದುಗುಡವ ಬಿಡು ಚಿತ್ತ ಬಂದಂತೆ ಮಾಡು ವೈ | ರಿಗಳ ಕಿತ್ತಿಡುವ ಯತ್ನವ ಮಾಡು ಬೇಗದಿ ||108||
ವಾರ್ಧಕ
ಅರಸ ಕೇಳಿಂತೆಂದು ಧೃತರಾಷ್ಟ್ರಮನ್ನಿಸಲ್ |
ಪರಿತೋಷಮಂಬಟ್ಟು ಕೌರವಂ ಪೇಳಿದಂ |
ಧರೆಯೊಳರ್ಧವನಿತ್ತು ಭೀಷ್ಮಾದಿ ಭಂಡಾರಮಂ ದಯದಿ ಹಸುಗೆಯಿಂದ ||
ತರಿಸಿ ನೀವಾ ಪಾಂಡವರಿಗೀವುದಾರೊಬ್ಬ |
ರರಿಯದಂತುರುಹುವೆವು ವಾರಣಾವತ ಪುರದೊ |
ಳರಗಿನರ ಮನೆಯನ್ನು ಪರುಠವಿಸಿ ರಿಪು ಬಾಧೆಯಂ ಕಳೆವೆನೆಂದನೊಲಿದು ||109||
ಭಾಮಿನಿ
ಇಂತು ಕೌರವನೆಂದುದನು ಕೇ |
ಳ್ದಂತರಂಗದಿ ಪೇಳ್ದನಿದರನು |
ತಂತು ಮಾತ್ರದಿ ವಿದುರ ಭೀಷ್ಮಾದಿಗಳು ಅರಿಯದೊಲು ||
ಗೊಂತುಗೊಳಿಸೆನಲಾ ಪುರೋಚನ |
ನಂ ತವಕದಿಂ ಕರೆದೊರೆದನಾ |
ಗಂತರಿಸದರಗಿನಲಿಯರಮನೆ ಮಾಡು ನೀನೆಂದು ||110||
ರಾಗ ಕಮಾಚು ಏಕತಾಳ
ಮಾಡಿದನರಗಿನಿಂದರಮನೆಯ | ನೋಡಲೊಬ್ಬರಿಗರಿಯದ ಬಗೆಯ || ಪಲ್ಲವಿ ||
ಅಷ್ಟಕಂಬವ ನಿಟ್ಟು ಚೌಕದುಪ್ಪರಿಗೆಯ | ನಿಟ್ಟುರೆ ಕೋಣೆ ಭವಂತಿಗಳ ||
ಹುಟ್ಟಿಸಿ ಹೊಳೆವ ಚಾವಡಿ ಮೊದಲಾದುದ | ತಟ್ಟನೆ ಎಸಗಿದ ಸಜ್ಜಾಗಹವ ||111||
ನವ ಸಜ್ಜಾಗಹ ಮಾಡಿ ವಿಧಿಯ ಮೀರಿಸುವಂಥ | ವಿವಿಧೋಪಾಯದ ಕತಕದಲಿ ||
ಭುವನದೊಳಿರುವ ವಸ್ತುಗಳ ಚಿತ್ತಾರದಿ | ವಿವರ ವಿವರವಾಗಿರುಹಿಸಿದ ||112||
ಗುಡಿ ತೋರಣಗಳ ಬೀದಿ ಬೀದಿಗಳ | ಅಡಿಗಡಿಗೆಸೆವ ವಿಚಿತ್ರಗಳ ||
ತಡೆಯದೆ ರಚಿಸಿದನಾಗ ನಗರ ಜನ | ಗಡಣವರಿಯದಂತೆ ನೂತನದಿ ||113||
ಭಾಮಿನಿ
ಭೂಪನಾಜ್ಞೆಯೊಳುರಿ ಮನೆಯನುಂ |
ಆ ಪುರೋಚನನೆಸಗಲಿತ್ತ ಪ್ರ |
ಳಾಪಿಸುತಲೇಕಾಂತದಲಿ ಪಾಂಡವರುಗಳ ಕರೆದು ||
ಭೂಪ ಧರ್ಮಜಗುಸುರಿದನು ನಾ |
ನಾ ಪರಿಗಳಿಂ ಮರುಳು ಮಾಡುತ |
ಕಾಪುರುಷರಾಲೋಚನೆಯ ಸಜ್ಜನರು ಬಲ್ಲಪರೆ ||114||
ರಾಗ ಭೈರವಿ ಝಂಪೆತಾಳ
ಮಗನೆ ಬಾ ಧರ್ಮಜನೆ ಮಾತ ಲಾಲಿಸು ನೀನು |
ವಿಗಡೆರೆಮ್ಮವರಿವರೊಳಿರಲರಿದು ನಿಮಗೆ ||
ನಗರವನು ಸೊಗಸಿನಲಿ ವಾರಣಾವತವೆಂಬ |
ನಗರದರುವತ್ತು ಯೋಜನದಳತೆಯಾಗಿ ||115||
ಅಲ್ಲಿ ನವನೂತನದ ರಾಜ ಮಂದಿರದಿ ನೀ |
ವೆಲ್ಲವರು ಪೋಗಿ ವಸತಿಯ ಮಾಳ್ಪುದಿನ್ನು ||
ಖುಲ್ಲರೆಮ್ಮವರು ಸಾಧುಗಳು ನೀವದರಿಂದ |
ಸಲ್ಲದಪ ಕೀರ್ತಿ ನಮಗೆಂದನಂಧನಪ ||116||
ಎಂದ ಮಾತನು ಕೇಳಿ ಯಮಜಾತನುಸುರಿದನು |
ತಂದೆ ನೀವೆಮಗೆಂದ ನುಡಿ ಮೀರ್ವರುಂಟೆ ||
ಇಂದು ಚಿತ್ತಕೆ ಬಂದ ರೀತಿ ಮಾಡಿಸುವುದೆನ |
ಲಂದು ಗುರು ಭೀಷ್ಮಾದಿ ಸಮುದಾಯದಿಂದ ||107||
ತರಿಸಿ ಮಣಿಮಯದ ಭಂಡಾರವ ವಿಭಾಗಿಸುತ |
ಕರಿತುರಗ ಮೊದಲಾದ ವಸ್ತುಗಳನೆಲ್ಲ ||
ಅರಿತು ದಾಯಾದ್ಯ ಪಾಲಿನಲಿ ವಂಚಿಸಿಕೊಟ್ಟು |
ತರಳರಿಂಗುಪಚಾರ ಮಾಡಿದನು ಭೂಪ ||108||
ವರ ಮುಹೂರ್ತದಲಿ ವಾರಣ ಪುರಕೆ ಪೊರಮಟ್ಟು |
ಇರದೆ ಧರ್ಮಜನನುಜನರ್ಜುನನು ಸಹಿತ ||
ಅರಸು ಮಕ್ಕಳಿಗರಣ್ಯ ದೊಳಿರವಿದೇನೆಂದು |
ಮರುಗಿದುದು ಪುರಜನವು ಮಮತೆಯಿಂದೊಲಿದು ||109||
ವಾರ್ಧಕ
ಕೇಳು ಜನಮೇಜಯ ಧರಿತ್ರಿನಪನಿರವನ್ನು |
ಬೀಳುಗೊಡಲೊಡನೆ ಬಂದಾ ವಿದುರ ಭೀಷ್ಮ ಗುಣ |
ಶೀಲ ಗುರು ಕೃಪ ಮುಖ್ಯರೊಲಿದು ಬೆಂಬಳಿಗೊಂಡು ಸುಯ್ದು ಮಮಕಾರದಿಂದ ||
ಕೇಳಲಾ ಬಾಲರ್ಗೆ ತಕ್ಕ ಬುದ್ಧಿಯ ನಂದು |
ಪೇಳುತಲೆ ತಿರುಗಲಾ ವಿದುರ ಕೂಡಯ್ತಂದು |
ಖೂಳ ಕೌರವನೆಸಗಿದುರಿಮನೆಯ ಸಂಗತಿಯ ಸೂಚಿಸುತ ಬೀಳ್ಕೊಂಡನು ||110||
ಭಾಮಿನಿ
ಪೊಡವಿಪತಿ ಕೇಳಿಭಪುರವ ಪೊರ |
ಮಡುವ ವೇಳ್ಯಕೆ ಧರ್ಮಸುತನಿಗೆ |
ತಡೆಯದಾದುದು ವರುಷ ಇಪ್ಪತ್ತೊಂಭತಂದಿನಲಿ ||
ಅಡವಿಯೊಳು ಹದಿನಾರು ವರುಷವು |
ನಡೆಯಲಾ ಮೇಲಿರ್ದ ಇಭಪುರ |
ದೆಡೆಯ ವರುಷ ತ್ರಯೋದಶವು ಇಂತೆಣಿಕೆ ನೋಡೆಂದ ||111||
ರಾಗ ಸೌರಾಷ್ಟ್ರ ಏಕತಾಳ
ನಲವಿಂದ ಪಾಂಡವರೈವರ್ಜನನಿ ಸಹ | ಒಳಪೊಕ್ಕರ್ವಾರಣವತವ ||
ಕಲಶ ಕನ್ನಿಡಿಯಿಂದಲಾ ಪುರ ಜನರೆಲ್ಲ | ರೊಲಿದಿದಿರ್ಗೊಂಡರುತ್ಸಹದಿ ||112||
ಕಂಡನಾ ಕಾಲನಂದನನುರಿವನೆ ಯಜ್ಞ | ಕುಂಡವ ರಚಿಸಿದಂದವನು ||
ಅಂಡಲೆವುತ ಬೊಪ್ಪನರು ಕಟ್ಟಿಸಿದರೆ | ಖಂಡಪರಶು ಬಲ್ಲನೆಂದ ||113||
ಸಮಿಧೆಗಳಾವು ನಾಲ್ವರು ಕುಂಡ ಮಧ್ಯದಲಿ | ರಮಣಿಯಾಹುತಿ ಭೀಮಸೇನ ||
ಕ್ರಮದಿಂದ ಪಶು ಕುಮತಿಯು ಕಟ್ಟಿಸಿದ ರಾಜೋ | ತ್ತಮನು ಕೌರವನು ದೀಕ್ಷಿತನು ||114||
ಎನುತ ಧರ್ಮಜ ಲಕ್ಷ್ಮೀನಾಥನ ಗತಿಯೆಂದು | ಮನದಿ ನೆನವುತಿರಲ್ಕಂದು ||
ಜನಪನಿದ್ದೆಡೆಗಾಗಿ ವಿದುರನಟ್ಟಲು ಬಂದ | ಕನಕನೆಂಬುವನು ಶೀಘ್ರದಲಿ ||115||
ವರ ಸಜ್ಜಾಗಹದಿಂದ ಸವೆದನು ಪಥವನು | ವಿರಳವಾಗಿಟ್ಟು ರಾತ್ರೆಯಲಿ ||
ಇರಲೊಂದು ದಿನದಿ ಭೂಸುರರ ವಂದವು ಸಹ | ಹರುಷದಿಂದುಂಡುದೆಲ್ಲವರು ||116||
ವಾರ್ಧಕ
ಇಂದುವಂಶ ಶಿಖಾಮಣಿಯೆ ಲಾಲಿಸೈ ಬಳಿಕ |
ಬಂದಲ್ಲಿ ಪಂಚ ಪುತ್ರಿಕೆಯೆಂಬ ಬೇಡತಿಯು |
ಕಂದರಯ್ವರ ಕೂಡಿಕೊಂಡುಳಿದಿರಲ್ ಪುರೋಚನನೊಡೆಯನಾಜ್ಞೆಯಿಂದ ||
ಅಂದಿರುಳಿನೋಳ್ಕಿಚ್ಚನಿಡೆ ದೈವಗತಿಯು ಬೇ |
ರೊಂದೆಣಿಸಿತೇನನೆಂಬೆನೆಚ್ಚರ್ತು ಪವಮಾನ |
ನಂದನಂ ಸಹಿತಿವರು ಹಾಯ್ದರು ಬಿಲದ್ವಾರದಿಂದುತ್ತರಿಸಿ ನಿಶಿಯೊಳು ||117||
ಅರಸಕೇಳ್ ಪಂಚಪುತ್ರಿಕೆಯೆಂಬ ಬೇಡತಿಯು |
ತರಳರಯ್ವರು ಸಹಿತ ಮರುತಸಖನಾದಿನದಿ |
ಹರುಷದಿಂದಾಹುತಿಯ ಕೊಂಡನು ಕ್ಷಣಾರ್ಧದಿ ಛಡಾಳಿಸುವ ಶಿಖಿ ವಹಿಲದಿ ||
ತರುಣರ್ಸಹ ಪುರಜನರ್ನೋಡುತಕಟಾ ಪಾಂಡ |
ವರು ಬೆಂದರೇ ಧರ್ಮದಿಂ ನಡೆದು ಕೌರವನ |
ದರಿಯ ಬಹುದೇ ಕತಕ ಹರ ಮಹಾ ದೇವೆಂದು ಮರುಗಿತಾ ಜನಜಾಲವು ||118||
ಭಾಮಿನಿ
ಮುನ್ನ ಬೆಂದನಲಾ ಪುರೋಚನ |
ಕುನ್ನಿಯದು ಲೇಸಾಯ್ತು ಸದ್ಗುಣ |
ರನ್ನರಳಿದರೆ ಹಾಯೆನುತ್ತಿಳೆಗೊರಗಿದುದು ಸುಜನ ||
ಇನ್ನು ಸುಡುಸುಡು ಧರ್ಮ ಲೋಕದಿ |
ಗನ್ನ ಘಾತಕವೆನಿಪುದಾಯ್ತು |
ತ್ಪನ್ನರಾರಿವರಂತೆ ಧಾರ್ಮಿಕರೆಂದು ಶೋಕಿಸುತ ||119||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ಪಾಂಡವರಳಿದರೆನುತಲೆ | ಹಸ್ತಿನಾಪುರದೊಳಗೆ ಸಕಲ ಜ |
ನೋತ್ತಮರು ನೆರೆಕೇಳಿ ಮರುಗಿದ | ರತ್ತು ಭರದಿ ||120||
ಹೊಗದುದಾನನ ವಿದುರ ಭೀಷ್ಮಾ | ದಿಗಳು ಬಲು ಶೋಕಿಸಲು ಮತ್ತಾ |
ದುಗುಡದಲಿ ಧೃತರಾಷ್ಟ್ರಭೂಪಾ | ದಿಗಳು ಮರುಗೆ ||121||
ಶೋಕದಡಿಯಾ ಹರುಷ ಸಿರಿ ತಾ | ಸೋಕಿದಳು ಕೌರವರ ಮುಖ ಸಿರಿ |
ಶಾಖೆಗಳನೇನೆಂಬೆ ಬಳಿಕ ವಿ | ವೇಕದಿಂದ ||122||
ಬಂದು ಸುರನದಿಯಲ್ಲಿ ಸರ್ವರು | ಮಿಂದು ಮೌನದಿ ಊರ್ಧ್ವದೇಹಿಕ |
ಸಂದ ವಿಧಿಯಲಿ ಮಾಡಿ ಮರಳಿದ | ರಂದು ಪುರಕೆ ||123||
ಪೃಥ್ವಿಪತಿ ಕೇಳಿಂದು ಕುಲ ಭೂ | ಪೋತ್ತಮರ ಪರಿಯನ್ನು ಬಳಿಕವ |
ರುತ್ತರಿಸಿ ಬಿಲ ಮುಖದಿ ಬಂದರು | ಕತ್ತಲೆಯೊಳು ||124||
ತೊಳಲಿದರು ಬಳಲಿದರು ಬಲು ಕಲು | ಮುಳುಗಳಲಿ ಕಾಲಿಡುತ ಮರುಗುತ |
ಕಳಿದರೈ ಬಹು ಯೋಜನವನಿಂ | ತಳುತ ವನದಿ ||125||
ಭಾಮಿನಿ
ದಾಟಿದರು ಗಂಗೆಯನು ರಾಯನ |
ಕೂಟದಲಿ ನಿಜ ಜನನಿ ಸಹಿತ ಮ |
ಹಾಟವಿಯನುತ್ತರಿಸಿ ಬಂದರು ಪಾಂಡುನಂದನರು ||
ಕೋಟಲೆಯನೇನೆಂಬೆ ಯಮಜ ಕಿ |
ರೀಟಿಯರ ಕಾಲೊಡೆದು ಯಮಳರ |
ಸೂಟಿಯಳಿದುದು ಕುಂತಿ ಸಹಿತಳಲಿದರು ಬೆಳತನಕ ||126||
ರಾಗ ಆನಂದ ಭೈರವಿ ಏಕತಾಳ
ನಟ್ಟಡವಿಯೊಳ್ನಡೆಯಲಾರೆವು | ಬೊಟ್ಟಿಡಲಿನಿತು ನೀರಿಲ್ಲವು |
ಕೆಟ್ಟೆವು | ಬಿಸಿಲೊಳ್ | ಸುಟ್ಟೆವು ||127||
ಉರಿಮನೆಯೊಳ್ ಸಾಯಲಿಸದೆ | ಸೆರಗ ಹಿಡಿದೆಳೆತಂದು ಬಿಡದೆ |
ನಡೆಸಿದ | ಭೀಮ | ಕೆಡಿಸಿದ ||128||
ಇಂದು ಕೌರವೇಂದ್ರ ಹಿಡಿದು | ಕೊಂದರೂ ಕೊಲಲಿಂದೇ ಬಡಿದು |
ಎಂದಳು | ಕುಂತಿ | ನೊಂದಳು ||129||
ಕರಡಿ ಹೆಬ್ಬುಲಿ ಸಿಂಹಾದಿಗಳು | ಮುರಿದು ತಿನ್ನಲಡವಿಯೊಳು |
ಸಾರ್ಥರು | ನಾವ್ಕ | ತಾರ್ಥರು ||130||
ಇಂತೆಂದು ಮಾದ್ರೀನಂದನರು | ಚಿಂತಿಸಿ ಬಲು ದುಃಖಿಸಿದರು |
ನಡೆಯದೆ | ತಷೆಯೊಳ್ | ತಡೆಯದೆ ||131||
ವಾರ್ಧಕ
ಭೂಕಾಂತ ಕೇಳ್ ಪವನ ಸುತ ನುಡಿದನಯ್ವರಿ |
ನ್ಯಾತಕಳುತಿಹಿರಿ ನಾನಿಹೆನೆನುತ ತಡವರಿಸಿ |
ಶೋಕಿಸುವ ಜನನಿಯಂ ಪೊತ್ತೆಮಜನ ಬಹಳ ಸಾಸದಿಂದೌಕಿ ಬಿಡದೆ ||
ಆ ಕಿರೀಟಯನೆಡದ ಕಂಕುಳೊಳಗಿಟ್ಟು ಮಾ |
ದ್ರೀಕುಮಾರರ ಎತ್ತಿ ಬಲದ ಬದಿಯೊಳಗವರ |
ನೌಕಿ ನಡೆದಂ ಭೀಮನಡಹಾಯ್ದು ಕಲ್ಮರವನೊದೆದನಿಲ ವೇಗದಿಂದ ||132||
ಭಾಮಿನಿ
ಇಂದು ವಂಶ ಶಿಖಾಮಣಿಯೆ ಕೇ |
ಳ್ಬಂದನೀ ಪರಿ ಹಲವು ಯೋಜನ |
ದಿಂದ ನಟ್ಟಡವಿಯಲಿ ಬಳಲಿದೆನೆಂದನೇ ಭೀಮ |
ಎಂದು ನೀರಡಸಿರದೆ ನಿದ್ರೆಯ |
ತಂದನೇ ಮನಸಿಂಗೆವನದೊಳು |
ತಂದಿಳುಹಿದನು ತರುಗಳಡಿಯಲಿ ವಿಶ್ರಮಿಸೆ ಬಳಿಕ ||133||
ರಾಗ ನೀಲಾಂಬರಿ ತ್ರಿವುಡೆತಾಳ
ತಳಿರನ್ನು ತರಿದೊಟ್ಟಿ ನೆಳಲಲ್ಲಿ | ಅವರ | ಮಲಗಿಸಿ ಮಂದಾಜದೆಲೆಯಲ್ಲಿ ||
ಘಳಿಲನೆ ನೀರ ತಂದೆರೆದನು | ಭೀಮ | ನಳಲುತಲವರ ಕಂಡೊರೆದನು ||134||
ತಾಯೆ ದಿಟವೆ ನಾಗನಗರಿಯ | ಮಹಾ | ರಾಯನರಸಿ ನಿಮ್ಮ ಬವಣೆಯ ||
ಆಯವೇನೆಂಬೆ ನಿನ್ನಣುಗರು | ಸರ್ವ | ರಾಯರೆದೆಗೆ ಶೂಲರೆನಿಪರು ||135||
ಈ ವಿಧಿಯಾಯ್ತೆ ಹಾ ಎಂದನು | ಕುಂತೀ | ದೇವಿಯ ಕಾಣುತ್ತನೊಂದನು ||
ತಾ ವಿಭ್ರಮಿಸುತಲೆ ಸೊರಗಿದ | ಮಹಾ | ದೇವೆಂದು ಮನದೊಳು ಮರುಗಿದ ||136||
ಮಾತೆಯ ಪದಗಳ ನೊತ್ತುತ | ಯಮ | ಜಾತನಡಿಯ ತಡವರಿಸುತ್ತ ||
ಈ ತೆರದೊಳು ಭೀಮನಳಲುತ್ತ | ಸಹ | ಜಾತಾದಿಗಳನು ವಿಶ್ರಮಿಸುತ್ತ ||137||
ಬರುವ ನೀರನು ಕಣ್ಣನೊರಸುತ್ತ | ಲನಿ | ಬರನು ಕಾದಿರ್ದನು ಮರುಗುತ್ತ ||
ಅರಿತು ಪೂರ್ವವನೆಲ್ಲ ನೆನೆವುತ್ತ | ಭೀಮ | ನಿರಲೆಡಬಲವನ್ನು ನೋಡುತ್ತ ||138||
ಭಾಮಿನಿ
ಪೊಡವಿಪತಿ ಕೇಳಿಂತು ಪವನಜ |
ನಡವಿಯಲಿ ಅಸುರಾದಿಗಳ ಭಯ |
ವಡಸುವದು ನಮ್ಮವರಿಗೆಂದೆಚ್ಚರ್ತು ಕಾದಿರಲು ||
ಧಡಿಗ ದೈತ್ಯ ಹಿಡಿಂಬನೆಂಬವ |
ನೊಡೆಯನಾಗಿರಲಾ ವನಕೆ ಬಲು |
ಸಡಗರದ ನರ ವಾಸನೆಯು ಬರಲನುಜೆಗಿಂತೆಂದ ||139||
ರಾಗ ಅಷ್ಟಪದಿ ಮಾರವಿ ಏಕತಾಳ
ಕೇಳೆಲೆ ತಂಗಿ ವಿ | ಶಾಲದ ನರ ಗಂ | ಧಾಳಿ ಬರುವದಿಂ | ದೇಳೆತ್ತಣದೆಂ ||
ದಾಲಿಸಿ ನೋಡಾ | ಖೂಳರ ಮುರಿದತಿ | ಲೀಲೆಯೊಳ್ತಿಂಬೆವೆಂ | ದೂಳಿಗ ಬೆಸಸೆ ||
ಬಂದಳಾಗ ||140||
ಹೂಕರಿಸುತ ರೌ | ದ್ರಾಕತಿಯಿಂದ ಮ | ಹಾ ಖಳನನುಜೆಯು |
ತಾ ಕಾಣುತ ಬರ || ಲಾಕಾನನದಿ ದಿ | ವ್ಯಾಕಾರವ ಕಂ | ಡಾ ಕಂಜಾಕ್ಷಿ ನಿ |
ರಾಕುಳತೆಯಲಿ || ಬಂದಳಾಗ ||141||
ನರನಿವ ತಾ ಭೀ | ಕರದಲಿ ಪೋದರೆ | ತರಹರಿಸುವನೆಂ | ದುರಗ ವೇಣಿಯು ಸುಂ ||
ದರ ರೂಪವ ತಾ | ಳ್ದರ ಸಂಚೆಗಮನದಿ | ಅರಸನಾದಡೆ ತನ | ಗೆರಕವೆಂದೆನುತ ||
ಬಂದಳಾಗ ||142||
ಪೊಳೆವ ಕುಡುತೆ ಕಂ | ಗಳ ಥಳಥಳಿಸುವ | ಸುಳಿಗುರುಳೈ ಪರಿ | ಮಳಗಳು ಬೆಂಬಳಿ ||
ಯಲಿ ಬರೆ ನಿರ್ಮಲ | ದಲಿಕಲಶ ಸ್ತನ | ದೊಲಪಿನಿಂದಿದಿರೊಳು | ಸುಳಿದೊಲೆದಾಡುತ || ಬಂದಳಾಗ ||143||
ಈತನೆನಗೆ ಸಂ | ಪ್ರೀತನಾದಡೆ ಪು | ಣ್ಯಾತಿಶಯವೆನುತ | ಸೋತು ಹಿಡಿಂಬೆಯು ||
ನೂತನದಲಿ ಬರೆ | ವಾತಜ ದಷ್ಟಿಸಿ | ಮಾತಾಡದಿರಲು | ಮಾತನಾಡಿಸುತ |
ಬಂದಳಾಗ ||144||
ರಾಗ ಯರಕಲ ಕಾಂಭೋಜಿ ಝಂಪೆತಾಳ
ಆರು ನೀವೆಂಬುದನು ಅರುಹ ಬೇಕೊಲಿದು |
ಘೋರರಣ್ಯದಿ ಬಂದು ಕುಳಿತ ಬಗೆಯೇನೆಂದು || ಪಲ್ಲವಿ ||
ಮರೆದೊರಗಿ ಕೊಂಡಿರುವ ಮರ್ತ್ಯರಿವರಾರು ವಿ |
ಸ್ತರಿಸಬೇಕೆಂದು ನೆಲೆ ನಿಲುಗಡೆಯ ತೋರಿ ||
ಸುರರೊ ಕಿನ್ನರರೊ ಭೂ ಪಾಲಕರೊ ನರರೊಳಿಂ |
ಥರನು ನಾ ಕಂಡುದಿಲ್ಲಿಂದಿನಾವರೆಗು ||145||
ತಾಮರಸಲೋಚನೆಯ ಬಗೆಯ ಕಂಡಾಗ ನಿ |
ಸ್ಸೀಮ ಮತಿಯೊಡನೆಂದನಾ ಭೀಮನು ||
ಸೋಮ ಮುಖಿ ಕೇಳೆಮ್ಮ ಪರಿಯ ಪೇಳುವದೇನು |
ನಾಮವೇನುಸುರು ನೀನ್ಯಾರ ಕಡೆಯವಳು ||146||
ವನಪತಿ ಹಿಡಿಂಬನೆನ್ನಗ್ರಜನು ಬಲು ದುಷ್ಟ |
ಮನುಜಮರರಿಂಗಿಲ್ಲ ಪೊಗಲರಿಯದು ||
ತಿನಲಿ ಮಲಗಿಹರೆ ನೀನೆನಗರಸನಾಗೇಳು |
ಘನ ಬೇಗದಿಂದ ಗಮಿಸುವ ಹಿಮಾಚಲಕೆ ||147||
ನಿನ್ನನೊಲ್ಲೆನು ನಾನು ದಾನವನು ಬರಲಿ ನೋ |
ಡೆನ್ನ ಬಗೆಗಾರಿಕೆಯ ತೋರ್ಪೆನೀಕ್ಷಣದಿ ||
ಪೆಣ್ಣಿಗೋಸುಗ ನಾವು ಮರುಳಾಗುವವರಲ್ಲ |
ತಿನ್ನಲನಿಬರನವನು ತಪ್ತಿಯಾಗಿರಲೆಂದ ||148||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅನುಜೆ ಬಾರದೆ ನಿಂತಳೇಕೆಂ | ದೆನುತಲಾ ಗದ್ದುಗೆಯ ಹೊದೆ |
ದ್ದನು ಮಹೀತಳವನು ಹಿಡಿಂಬನು | ಕನಲಿ ಭರದಿ ||149||
ಬರಬರುತ ಹೆಮ್ಮರನ ಮುರಿದ | ಬ್ಬರಿಸಿ ಧರೆಯೊಡೆವಂತೆ ಬೊಬ್ಬಿಡು |
ತುರವಣಿಸಿ ನಡೆತಂದನಾಕ್ಷಣ | ದುರುಳ ಖಳನು ||150||
ಕಂಡನಾ ಕಲಿಭೀಮ ಬಳಿಕು | ದ್ಧಂಡ ಬಲ ದಾನವನು ಬರುವುದ |
ನಂಡಲೆವುತೆದ್ದೊದಗಿ ತಾನುರಿ | ಗೊಂಡುಸುರ್ದ ||151||
ಒರಲಬೇಡೆಲೊ ಕುನ್ನಿ ಮೈಮರೆ | ದೊರಗಿದವರೇಳ್ವರು ಕಣಾ ನೀ |
ನುರುವ ಬಲನಹೆಯೆನುತ ಪೇಳಿದ | ನುರಿಯನುಗುಳಿ ||152||
ಎಲವೊ ಮಾನವ ಕೇಳು ತಂಗಿಯ | ಕಳವಿನಲಿ ಕೊಂಡೊಯ್ಯ ಬಂದೆಯ |
ತಲೆಯಗೊಂಬೆನು ಬಿಡೆನೆನುತ ಖಳ | ನುಲಿದು ನಿಂದ ||153||
ತಂಗಿಯನು ಕೊಂಡೊಯ್ವರಾರೆಲೊ | ಸಂಗಡಿಸುವೆನು ನಿನಗೆ ಕಾಲನ |
ತಂಗಿಯಂದಿರ ರಣಸಿರಿಯನೆನು | ತಂಗವಿಸಿದ ||154||
ರಾಗ ಶಂಕರಾಭರಣ ಮಟ್ಟೆತಾಳ
ಎಂದು ಭೀಮ ಮನದಿ ರೋಷದಿಂದ ದೈತ್ಯನ |
ಮುಂದಲೆಯನು ಪಿಡಿಯಲುರುಬಿ ಪವನ ತನಯನ ||
ಪೊಂದಿ ಮರನ ಕೊಂಬಿನಿಂದ ಪೊಯ್ಯಲಾಕ್ಷಣ |
ಬಂದೆರಗುವ ಹೆಮ್ಮರವನು ತಡೆವುತಾತನ ||155||
ಮುಷ್ಟಿಯಿಂದ ದೈತ್ಯನುರವನೊತ್ತಿ ತಿವಿಯಲು |
ಥಟ್ಟುಗೆಡೆದು ಮರುತಸುತನ ಕರದ ಹತಿಯೊಳು ||
ನೆಟ್ಟನೇಳುತಾಧರಿಸಿ ಹಿಡಿಂಬ ದೈತ್ಯನು |
ಕುಟ್ಟಿ ಬಿಸುಟ ಹೆಮ್ಮರದಲಿ ಪವನಸುತನನು ||156||
ಗದ್ಗದೆನುತಲಾ ಖಳನ ಎದ್ದು ತಿವಿದನು |
ರುದ್ರರೂಪ ವಕ್ಷಸಹಿತಲೊದ್ದು ಬಿಸುಟನು ||
ಗುದ್ದಿ ಭರದೊಳಮರ ರಿಪುವನುರುಬಿ ಕೆಡಹಲು |
ಎದ್ದರಾ ಯುಧಿಷ್ಟಿರಾದ್ಯರಧಿಕ ಭರದೊಳು ||157||
ಭಾಮಿನಿ
ಭೂಮಿಪತಿ ಕೇಳಾ ಹಿಡಿಂಬನು |
ಭೀಮ ಸೇನನ ಕರಹತಿಗೆ ನಿ |
ರ್ನಾಮವಾಗಲು ಕಾಣುತಾ ಯಮನಂದನಾದಿಗಳು ||
ಪ್ರೇಮದಿಂದುಪಚರಿಸಿ ಪೇಳ್ದರು |
ನೀ ಮೊದಲು ನಮಗೆಬ್ಬಿಸದೆ ಸಂ |
ಗ್ರಾಮ ತೊಡಗಿದೆ ಉಳಿದೆ ಪುಣ್ಯದೊಳೆಂದರಡಿಗಡಿಗೆ ||158||
Leave A Comment