ವಾರ್ಧಕ
ಧರಣೀಂದ್ರ ಲಾಲಿಸೈ ಭೀಷಣಂ ಮೂರ್ಛೆಗೊಂ |
ಡೊರಗಲಾಕ್ಷಣದೊಳಾ ಯೋಜನಸ್ತನಿಯೆಂಬ |
ದುರುಳೆ ಮೂರ್ಕೋಟಿ ರಕ್ಕಸಿಯರಂವೆರಸಿ ಲಂಬೋದರಿಯು ಸಹಿತ ಕನಲಿ ||
ತರಣಿಯುಪಟಳಕಂಜಿ ನಿಶಿ ಹಲವು ರೂಪಾಗಿ |
ನರನ ಪಡೆಯಂ ಮುಸುಕುವಂತೆ ಕಾರೊಡಲ ಭೀ |
ಕರಮಾದಕೋರ್ದಾಡೆ ಮಸೆವುತ್ತ ಊರ್ಧ್ವಕೇಶಿಗಳಾರ್ಭಟಿಸಿ ಬಂದರು ||೧೬೪||
ರಾಗ ಆರಭಿ ಅಷ್ಟತಾಳ
ಯಾವ ಮೂಢಾತ್ಮಕರೋ | ಇಲ್ಲಿ ಬಂದಿಹರ್ |
ಯಾವ ಮೂಢಾತ್ಮಕರೋ || ಪ ||
ಅಂಗಂಗವನು ತರಿತರಿದು | ಬೇಗ | ಕೆಂಗೆಂಡದಲಿ ಹುರಿ ಹುರಿದು ||
ತಿಂದು ರಕ್ತವ ಪಾನ ಮಾಡುತ | ತಂಗಿಯಂದಿರನೆಲ್ಲ ಕರೆಸುತ |
ಬೆಡಗಿನಿಂದೌತಣವ ಮಾಡುತ | ಹಿಂಗರಣ ಮುಂಗರಣ ತೋರ್ಪೆವು || ಯಾವ ||೧೬೫||
ನರಮಾಂಸ ಕರುಳ್ಗಳ ಮೆಲದೆ | ಬಲು | ದಿನವಾಯಿತೀಕ್ಷಣ ನಿಲದೆ ||
ಹುರಿದು ಕರುಳನೆ ಕಚ್ಚಿ ಪರ್ರನೆ | ಹರಿದು ತೊಗಲಿನ ನರವ ತುಪ್ಪದಿ |
ಹುರಿದು ಘಮ್ಮನೆ ಘರಘರನೆ ನಾವ್ | ಸರಸದಿಂ ನುಗ್ಗರಿದು ತಿಂಬೆವು || ಯಾವ ||೧೬೬||
ವಾರ್ಧಕ
ಗರಳಗಾಳಿಯೊ ಹರನ ಕಣ್ಗಿಚ್ಚೊ ಮೇಣು ಕೇ |
ಸರಿಯ ಝೇಂಕಾರವೋ ಜವನ ಕೋಲಾಹಲವೊ |
ವರ ಸಿಡಿಲಗಿಚ್ಚೊರವೊ ದಾವಾಗ್ನಿಯಾಟೋಪವೋಯೆಂಬ ತೆರನಾಗಲು ||
ಶರಧಿಯೋಲ್ ರಕ್ಕಸಿಯರಯ್ತರಲ್ ಫಲುಗುಣಂ |
ಬೆರಳಸನ್ನೆಯೊಳು ಹನುಮಂತನಂ ಕರೆಯಲ್ಕೆ |
ಎರಡನೆಯ ಜವನ ಕೋಪಾಂತು ಧರಣಿಗೆ ಹಾಯ್ದ ಮೂಲೋಕವಲ್ಲಾಡಲು ||೧೬೭||
ರಾಗ ಶಂಕರಾಭರಣ ಮಟ್ಟೆತಾಳ
ಅಷ್ಟ ದಿಕ್ಕು ನಡುಗೆ ಕಾರ | ಬೆಟ್ಟದಂತೆ ಸೆಳೆದು ವಜ್ರ |
ಮುಷ್ಟಿಯನ್ನು ಪಿಡಿದು ಪೇಳ್ದ | ದಿಟ್ಟ ಜನರಿಗೆ ||
ಕೆಟ್ಟ ದನುಜೆಯರಿರ ನಿಮ್ಮ | ರಟ್ಟೆಯನ್ನು ಮುರಿದು ಯಮನ |
ಪಟ್ಟಣಕ್ಕೆ ಪೋಪ ಬಗೆ ಹೆ | ಬ್ಬೆಟ್ಟ ತೀರ್ಪೆನು ||೧೬೮||
ಮಂಗ ನಿನಗೆ ಮೋರೆಯಲ್ಲಿ | ಕಂಗಳಿಲ್ಲ ನಮ್ಮ ದೇಹ |
ದಂಗಗಳನು ನೋಡಿ ಬರಿದೆ | ಪೆಂಗನಾದೆಲಾ ||
ನುಂಗೆ ಹುರಿದು ತುತ್ತಿಗಿಲ್ಲ | ದಂಗಮೈಸೆ ನಿನ್ನ ಬಿಸಿ ರ |
ಕ್ತಂಗಳೋಕುಳಿಯನೆಯಾಡಿ | ಭಂಗಿಸುವೆವು ||೧೬೯||
ಘೋರ ಪಾಪಿಗಳಿರ ಬುದ್ಧಿ | ಮದ್ಯಪಾನವೇರಿ ತಲೆಗೆ |
ಯೇರಿ ಕಣ್ಣು ಕಾಣದೆಂದು | ತೋರುತಿದೆಯೆಲೆ ||
ಮಾರಿಗಳಿಗೆಯಿತ್ತು ಟೆಂಕ | ಣೂರ ಪೊಗಿಸದಿರೆನೆನಲ್ಕೆ |
ಮಾರುತೀಯ ಕುರುಹ ತಿಳಿದು | ವೋರ್ವೆ ನುಡಿದಳು ||೧೭೦||
ರಾಗ ಸೌರಾಷ್ಟ್ರ ಅಷ್ಟತಾಳ
ಅಕ್ಕ ನೋಡಿವ ಕಾಡಕಪಿಯಲ್ಲ ಬಲವಂತ | ನೀತ ಕಾಣೆ || ಮೊದ
ಲರ್ಕನ ಹಣ್ಣೆಂದು ತಿನಲೊದಗಿದ ಮಂಗ | ನೀತ ಕಾಣೆ ||೧೭೧||
ಸೀತೆಯ ನೋಡಿಯುಂಗುರವ ನೀಡಿದ ಮಂಗ | ನೀತ ಕಾಣೆ || ಮುಂ |
ದೊತ್ತುತ ವನದಲಿ ಲೋಲಾಡಿದ ಕೋತಿ | ಯೀತ ಕಾಣೆ ||೧೭೨||
ಲಂಕೆಯನಗ್ನಿಯಿಂದುರುಹಿದ ವಾನರ | ನೀತ ಕಾಣೆ || ಮತ್ತೆ |
ಲಂಕೆಯೊಳಗೆ ರಾವಣನ ಮೀಸೆಯುರಿಸಿದ | ನೀತ ಕಾಣೆ ||೧೭೩||
ಧಿಂಕಿಟ್ಟು ಶರಧಿಯ ಹಾರಿದ ಕೋಡಗ | ನೀತ ಕಾಣೆ || ಪೊಕ್ಕು |
ಲಂಕೆಯೊಳ್ ಲಂಕಿಣಿಯನು ಕೊಂದ ಮರ್ಕಟ | ನೀತ ಕಾಣೆ ||೧೭೪||
ಸೇತುವೆಗಾಗಿ ಬೆಟ್ಟವ ಪೊತ್ತ ಮುದಿಮಂಗ | ನೀತ ಕಾಣೆ || ಪೋಗಿ |
ಪಾತಾಳದಸುರರ ಕೊಂದಿಹ ಮರ್ಕಟ | ನೀತ ಕಾಣೆ ||೧೭೫||
ಭಯವಹುದಿವನ ಮೊಗವ ನೋಡಲೆನಗಿನ್ನು | ಅಕ್ಕ ಕೇಳೆ ||
ಮುಂದೆ | ಲಯವಹುದಲ್ಲದೆವುಳಿವ ಸಂಗತಿಯಿಲ್ಲ | ಅಕ್ಕ ಕೇಳೇ ||೧೭೬||
ರಾಗ ತೋಡಿ ಅಷ್ಟತಾಳ
ಬೆದರಲೇಕೀ ಪರಿ ತಂಗಿ ಮರ್ಕಟನನ್ನು |
ತುದಿಮೊಲೆಯಿಂದಿರಿದು ||
ಸದೆಯದಿದ್ದರೆ ಯೋಜನಸ್ತನಿಯೆಂದೆಂಬ |
ಪೆಸರ ಪೇಳಲುಬಹುದೆ ||೧೭೭||
ಒಂದು ತುತ್ತಾಗದೀ ಮಂಕು ಮರ್ಕಟ ತುದಿ |
ಹೊಂದದೆನ್ನಯ ಕುಕ್ಷಿಗೆ ||
ತಿಂದರೆ ತಿಲಮಾತ್ರ ಹಶು ಮಾಣದೆಂಬುದ |
ರಿಂದ ಬಿಟ್ಟೆವು ಕಡೆಗೆ ||೧೭೮||
ಸ್ವಾದ ನೋಡಲಿಕೆಷ್ಟು ತಿನಬೇಕೆ ಎಳ್ಳಿನ |
ಷ್ಟಾದರುಂಡರು ಸಾಲದೆ ||
ಆದಾಯ ಬಂದುದ ಬಿಡಬೇಡ ತಿಂದು ವಿ |
ನೋದದಿ ಕುಣಿದಾಡುವ ||೧೭೯||
ಇಂತು ತಮ್ಮೊಳು ಮಾತನಾಡುತಿರಲು ಹನು |
ಮಂತ ದೈತ್ಯೆಯರ ನೋಡಿ ||
ಅಂತಕನೋಲ್ ಕೋಪಾಟೋಪದಿಂದಲಿ ಖತಿ |
ಯಾಂತು ಗರ್ಜಿಸುತೆಂದನು ||೧೮೦||
ರಾಗ ಭೈರವಿ ಏಕತಾಳ
ಎಲೆಲೆ ಪಿಶಾಚಿಗಳಿರ ರಣರಂಗದಿ | ತೊಲಗದಿರೀ ಕ್ಷಣವೆ ||
ತಲೆಯ ಮುರಿದು ಶಾಕಿನಿ ಡಾಕಿನಿಯರ | ಬಳಗಕುಣಿಸದಿರೆನು ||೧೮೧||
ಮಾನವರುಗಳ ಸಹಾಯದಿ ಬಂದೀ | ದಾನವರನು ಕೆಣಕಿ ||
ವಾನರ ಜೀವಿಸು ನಿನ್ನಯ ತಲೆ ಸು | ಮ್ಮಾನದಿ ತಿಂದಪೆವು ||೧೮೨||
ಎಂದ ಮಾತನು ಕೇಳುತಂದನಿಲಾತ್ಮಜ | ಬಂಧಿಸಿಯಸುರೆಯರ ||
ಸಿಂಧುವಿನಾಚೆಗೆ ಹಾಕಲು ಗಗನದೊ | ಳಿಂದ್ರಾದ್ಯರು ನಲಿಯೆ ||೧೮೩||
ಭಾಮಿನಿ
ಇತ್ತ ಮೂರ್ಛೆಯೊಳ್ ಬಿದ್ದ ಖಳನೆ |
ಚ್ಚರ್ತು ಖಡ್ಗವ ತುಡುಕಿ ಹೂಂಕರಿ |
ಸುತ್ತ ಪಾರ್ಥನ ಗಳವ ಕೊಳ್ಳದೆ ಬಿಡೆನು ತಾನೆನುತ ||
ಮತ್ತೆ ಕದಳೀವನವನುರೆ ನು |
ಗ್ಗೊತ್ತಿ ಬಹವೋಲ್ ಪಟುಭಟರ ಸದೆ |
ವುತ್ತ ಬರೆ ನೋಡುತ್ತ ಪಾರ್ಥನು ಗರ್ಜಿಸುತಲೆಂದ ||೧೮೪||
ರಾಗ ಶಂಕರಾಭರಣ ಮಟ್ಟೆತಾಳ
ಖಳರ ಸಹಸ ಸಾವತನಕ ಬೇಟೆಗೆಯ್ವುದು |
ಕುಲಸ್ವಭಾವ ನಿನ್ನ ಬಿಡುವುದುಂಟೆ ಲೇಸಿದು ||೧೮೫||
ಹಲವು ಮಾತಿನಿಂದಲೇನೆನುತ್ತ ಪಾರ್ಥನು |
ಖಳನ ಕರದ ಖಡುಗವನ್ನು ಕಡಿದು ಬಿಸುಟನು ||೧೮೬||
ಮತ್ತೆ ಶೂಲವನ್ನು ಕೊಂಡು ದೈತ್ಯ ಪಾರ್ಥನ |
ಎತ್ತಿ ಬಿಡಲಿಕಾಗ ವಿಜಯ ಕಡಿದನಾ ಕ್ಷಣ ||೧೮೭||
ಮನುಜ ನೀನು ವ್ಯರ್ಥವಾಗಿ ಸಾಯಬೇಡೆಲಾ |
ತಲೆಯ ಕೊಂಬೆನೀಗ ನಿಮಿಷದೊಳಗೆ ನೋಡೆಲಾ ||೧೮೮||
ಧನುವನೊದರಿಸುತ್ತ ಭೋರ್ಗುಡಿಸಿ ಭೀಷಣ |
ಕನಲಿ ಗರ್ಜಿಸುತ್ತ ಪೇಳ್ದ ಖಳರ ಭಾಷಣ ||೧೮೯||
ಎಲವೊ ಮನುಜ ಕೇಳು ನೀನು ಬಯಸಿ ಬಾಣವ |
ನಿಮಿಷದೊಳಗೆ ತೋರುತಿಹೆನು ಎನ್ನ ಶೌರ್ಯವ ||೧೯೦||
ನಿನ್ನ ಪಿಡಿದು ಈಗ ಯಜ್ಞಪಶುವ ಮಾಳ್ಪೆನು |
ಎನ್ನ ಪಿತನ ವೈರವೀಗ ನಿಲಿಸಿ ಕೊಡುವೆನು ||೧೯೧||
ಎನುತ ಬಿಟ್ಟ ಬಾಣವೃಷ್ಟಿ ಕಂಡು ಪಾರ್ಥನು |
ಕನಲಿ ಕಡಿದು ಪ್ರತಿಶರೌಘ ಬಿಡಲು ದೈತ್ಯನು ||೧೯೨||
ಭರದಿ ಕಡಿದು ಮಾಯದಸ್ತ್ರವನ್ನು ಎಸೆಯಲು |
ಉರುತರದಲಿ ಮಾಯವಾದುದೇನ ಪೇಳ್ವೆನು ||೧೯೩||
ಎಲ್ಲಿ ನೋಡೆಯಲ್ಲಿ ಕಾಸಾರಮುನಿಯ ಆಶ್ರಮ |
ಎಲ್ಲಿ ನೋಡೆ ಯಜ್ಞಶಾಲೆ ದೇವಪೂಜೆಯು ||೧೯೪||
ಮನದಿ ನೋಡಿ ಪಾರ್ಥ ಬೆದರಿ ವೈಷ್ಣವಾಸ್ತ್ರವ |
ಕನಲಿ ಬಿಡಲಿಕಾಗ ಮಾಯೆ ಸವರಿತೆಲ್ಲವ ||೧೯೫||
ಮಾಯೆ ಸವರಲಿಕ್ಕೆ ಖಳನು ರೋಷದಿಂದಲಿ |
ಬಾಯ ಬಿಡುತ ಪಿಡಿದು ಒಯ್ವೆನೆಂದು ಭರದಲಿ ||೧೯೬||
ಬರುವುದನ್ನು ಕಂಡು ಪಾರ್ಥ ಬೆದರಿ ಸ್ಮರಿಸಿ ಹರಿಯನು |
ಧನುವಿಗೇರಿಸಿದನು ಸರಳನಾಗ ವಿಜಯನು ||೧೯೭||
ಹತ್ತು ಬಾಣದಿಂದಲವನ ಮಸ್ತಕವನು |
ಕತ್ತರಿಸುತ ಬಿಸುಟ ರಣಸಮರ್ಥ ಪಾರ್ಥನು ||೧೯೮||
ಭಾಮಿನಿ (ಅರ್ಧ)
ಚಿಂತಿಸುತ ಕಪಟವನು ಕಾಣುತ |
ಲಿಂತು ಮುರಿದಾ ಭೀಷಣಾದ್ಯರ
ಕೌಂತೆಯನು ಬಲಸಹಿತ ದಕ್ಷಿಣಮುಖಕೆ ನಡೆತಂದ ||೧೯೯||
ದ್ವಿಪದಿ
ಭೂಪಾಲ ಕೇಳಿಂತು ಭೂರಿ ಬಲ ಸಹಿತ |
ದ್ವೀಪದ್ವೀಪವ ತೊಳಲಿ ದಿವಿಜೇಂದ್ರತನಯ ||೨೦೦||
ಗುಣವನಧಿ ಕೃಷ್ಣನನು ನೆನೆದು ನಡೆತಂದು |
ಮಣಿ ನಗರದಾ ಸಿರಿಯ ದೂರದೊಳ್ ಕಂಡು ||೨೦೧||
ಉಪವನದ ಮಧ್ಯದೊಳಗಿರುವ ತರುಲತೆಯ |
ಅಪರಿಮಿತ ಫಲ ಪುಷ್ಪ ಜಾಜಿ ಸೇವತೆಯ ||೨೦೨||
ಗೋಪುರದ ಚಾವಡಿಯ ಗೋಮೇಧಿಕದಲಿ |
ರೂಪಿಸಿದ ರೂಹುಗಳನೇಕ ಚಿತ್ರದಲಿ ||೨೦೩||
ನಗರದ್ವಾರದ ಮುಂದೆ ನವರತ್ನಕಂಭ |
ಸೊಗಸು ಇಮ್ಮಡಿಸುತಿದೆ ಸೂರ್ಯನಾ ಬಿಂಬ ||೨೦೪||
ಮಿಗೆ ಕುರುಜು ಮೇರುವೆಯು ಕಂಭ ಕಂಭದಲಿ |
ಬಗೆಬಗೆಯ ಚಿತ್ರಕವ ಬರೆದ ಬೊಂಬೆಯಲಿ ||೨೦೫||
ಹೇಮದಲಿ ರಚಿಸಿರುವ ಬಾಗಿಲ ಕವಾಟ |
ಸ್ತೋಮದಲಿ ಕೆತ್ತಿಸಿದ ಮಾಣಿಕದ ಮಾಟ ||೨೦೬||
ನೋಡಿ ಫಲಗುಣ ಹಂಸಕೇತನೊಡನಂದು |
ರೂಢಿಪಾಲಕನಿದಕದಾರು ಹೇಳೆಂದು ||೨೦೭||
ತುರಗ ತಡೆದೆಮ್ಮೊಡನೆ ತರುಬಿ ನಿಲುವಾತ |
ಅರಸು ಮಗನಾರಿದಕೆ ಪೇಳ್ ಹಂಸಕೇತ ||೨೦೮||
ಕೇಳಿದಾಕ್ಷಣ ಹಂಸಕೇತ ನಸುನಗುತ |
ಪೇಳಿದನು ಮಣಿಪುರದ ಸಂಗತಿಯನಾತ ||೨೦೯||
ರಾಗ ಸೌರಾಷ್ಟ್ರ ಅಷ್ಟತಾಳ
ನರನೆ ಕೇಳೀ ರಾಜ್ಯದರಸು ಶೇಷನ ಮೊಮ್ಮ |
ಬಭ್ರುವಾಹನ || ದಿಟ್ಟ |
ಪರಮ ಸದ್ಗುಣಿಯೀತ ಪರಮಾತ್ಮನ ಭಕ್ತ |
ಬಭ್ರುವಾಹನ ||೨೧೦||
ನೀತಿಶಾಸ್ತ್ರದೊಳತಿ ಖ್ಯಾತನೆಂದೆನಿಸುವ |
ಬಭ್ರುವಾಹನ || ಪುರು |
ಹೂತನಾತ್ಮಜ ನಿನ್ನ ಕುದುರೆ ಕಟ್ಟುವನೀತ |
ಬಭ್ರುವಾಹನ ||೨೧೧||
ಸಂಗರದೊಳಗತಿ ಖ್ಯಾತನೆಂದೆನಿಸುವ |
ಬಭ್ರುವಾಹನ || ರಣ |
ರಂಗದೊಳಿದಿರಿಲ್ಲ ಬಲುಕಪ್ಪಗೊಂಬಾತ |
ಬಭ್ರುವಾಹನ ||೨೧೨||
ರಾಗ ಮಾರವಿ ಏಕತಾಳ
ಮರಾಳಧ್ವಜನ ನುಡಿ ನರನು ಲಾಲಿಸಿ ಕೇಳೆ |
ಭರದಿಂದಂಬರವಿಳಿದು ಪಕ್ಷಿನಿವಾಳಿ ||೨೧೩||
ಮೃತ್ಯುವಿನಂತೆ ಮಸ್ತಕದಿ ನಿಂತು ಕಾಲೂರಿ |
ಗುರುತದವಶಕುನವ ಪಾರ್ಥಗೆ ತೋರಿ ||೨೧೪||
ಯೌವನಾಶ್ವ ಮುಂತಾಗಿ ಅವಶಕುನವ ಕಂಡು |
ಅವನಿಪರೆಲ್ಲ ಮನದಿಯಂಜಿ ಭ್ರಮೆಗೊಂಡು ||೨೧೫||
ಭಾಮಿನಿ
ಧಾರಿಣೀಪತಿ ಕೇಳು ಫಲುಗುಣ |
ನೀ ಪರಿಯೊಳಿರುತಿರಲು ಅತ್ತಲು |
ವಾರಿಧಿಯ ಘೋಷದಲಿ ಪೊಕ್ಕುದು ಅಶ್ವ ಮಣಿಪುರಕೆ ||
ವೀರ ವನಪಾಲಕರು ನೋಡುತ |
ಸಾರಿ ವನದೊಳು ಪೊಕ್ಕು ಕುದುರೆಯ |
ಕಾರ ನೋಡಲು ಭಯದಿ ಪೇಳ್ದರು ಬಭ್ರುವಾಹನಗೆ ||೨೧೬||
ರಾಗ ಕಾಪಿ ಏಕತಾಳ
ಸಲಾಮು ತಕ್ಕೋ ಮಣಿಪುರದೊರೆಯೆ |
ಗುಲಾಮ ನಿನ್ನ ಮಗ ದಿವಾಳಿ ಹನುಮ |
ಭರದೀ ಬಂದೆ ನಿನ್ನ ದರುಶನಕೆ ||
ಏ ಪರಾಕು ದೊರೆಯೆ ||೨೧೭||
ಎದೆಯೊಳು ದಡುಬುಡುಗುಟ್ಟುತಯ್ತೆ |
ಬೆದರಿಕೆಯಿಂದ ಬಾಯಾರುತಯ್ತೆ |
ಅಭಯ ಕೊಟ್ಟರೆ ಪೇಳ್ವೆ ನಮ್ಮ ಸ್ವಾಮಿ ||
ಏ ಪರಾಕು ದೊರೆಯೆ ||೨೧೮||
ಗಜಪುರದರಸನ ತಮ್ಮ ಪಾರ್ಥ |
ಭರದಿ ಯಾಗದ ಹಯವ ಕೊಂಡು |
ಭರದಿ ನಮ್ಮುಪವನಕೆ ಬಂದನೆ ||
ಏ ಪರಾಕು ದೊರೆಯೆ ||೨೧೯||
ಭರದಿ ನಮ್ಮುಪವನದೊಳಗೆ ಇರುವ |
ಬಂಗೀಬರಮನ ಹಿಡಿದುಕೊಂಡು |
ಬರೆದ ಸುಣ್ಣ ಅವನ ಮೂಗಿಗೆ ||
ಏ ಪರಾಕು ದೊರೆಯೆ ||೨೨೦||
ಹೋಗು ಹೋಗು ಛೀ ಸೂಳೆಯರವನೆ |
ಸಾಕಿದವನ ಕರೆತಾರೆಂದು |
ಭೀಕರದಿಂದ ಬಡಿದಟ್ಟಿದರೆನ್ನ ||
ಏ ಪರಾಕು ದೊರೆಯೆ ||೨೨೧||
ಮರುಗಾ ಮಲ್ಲಿಗೆ ಶೇವಂತಿಗೆಯು |
ಸುರಗಿಬುಡವು ಸಹಿತಲಾಗ |
ತರಿದೊಟ್ಟಿದರೆನ್ನ ಭಂಗಿಬುಡಸಹಿತ ||
ಏ ಪರಾಕು ದೊರೆಯೆ ||೨೨೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕಾಯದಲಿ ಕಳವಳಿಸಿ ಚಾರಕ |
ರಾಯನರ್ಜುನಿಗೆರಗಿ ಪೇಳ್ದರು |
ಜೀಯ ಬಂದರು ನಮ್ಮ ಪುರಕರಿ | ರಾಯರುಗಳು ||೨೨೩||
ಆಯದಲಿ ಪೊಕ್ಕಿರುವರೆಂಬವು |
ಪಾಯದಲಿ ಉಪವನದ ಮಧ್ಯದಿ |
ವಾಹಿನಿಯ ನಿಲಿಸುತ್ತ ಬಿಟ್ಟರು | ವಾಜಿ ಪುರಕೆ ||೨೨೪||
ಮುತ್ತಿದುದು ಸೇನಾಸಮುದ್ರವು |
ಕತ್ತರಿಸಿ ವನ ಕೆಡಹೆ ಕರಿಗಳು |
ಚಿತ್ತವಿಸು ರಣಧೀರ ಅಭಯವ | ನಿತ್ತು ನಮಗೆ ||೨೨೫||
ಭಾಮಿನಿ (ಅರ್ಧ)
ಚರರಿಗಭಯವನಿತ್ತು ಫಲುಗುಣಿ |
ಪುರದ ದುರ್ಗವ ಬಲಿದು ಕುದುರೆಯ |
ಕರೆದು ಕಾವಲನಿತ್ತು ತೆರಳಿದ ಸಿಂಹವಿಷ್ಟರಕೆ ||
ರಾಗ ಕೇದಾರಗೌಳ ಅಷ್ಟತಾಳ
ಉತ್ತಮ ಮಣಿಪುರದರಸನ ಚಾವಡಿ | ಹತ್ತು ಸಾವಿರ ಕಂಭದಿ ||
ಕೆತ್ತಿದ ಹವಳ ಮಾಣಿಕ ಮುತ್ತು ವೈಡೂರ್ಯ | ರತ್ನದ ಪ್ರಭೆಗಳಲಿ ||೨೨೬||
ಸುತ್ತಗೋಡೆಯ ಮೇಲೆ ಸುರನರಲೋಕದ | ವಿಸ್ತರಗಳ ರಚಿಸಿ ||
ಪುತ್ಥಳಿಬೊಂಬೆಯ ನಿಲಿಸಿದರಾನೇಕ | ವಸ್ತು ಪಟ್ಟಾವಳಿಯ ||೨೨೭||
ಕಂಭಕಂಭದೊಳ್ ಬರೆಸಿದ ರತ್ನ ಖಚಿತದ | ಬೊಂಬಾಳ ದೀವಿಗೆಯು ||
ಬಿಂಬದೋಲಗಕಾಗಿ ಭಟ ಬಭ್ರುವಾಹನ | ಸಂಭ್ರಮದಲಿ ಬಂದನು ||೨೨೮||
Leave A Comment