ರಾಗ ನೀಲಾಂಬರಿ ರೂಪಕತಾಳ
ಯಾರಿಗೆ ಪೇಳಲಿ ನಾನು ಈ ಶೋಕಾಂಬುಧಿಯನ್ನು |
ವೀರ ವೃಷಕೇತುವನು ಎಂತು ಮರೆಯಲಿ      || ಪ ||

ಕಂದ ನಿನ್ನಯ ತ್ರಾಣದಿಂದಲಾಯಿತು ಯಜ್ಞ |
ವೆಂದಾಕ್ಷಣಕೆ ಪೋಗಿ ಯೌವನಾಶ್ವಾಧಿಪರ ||
ತಂದು ಸಹಾಯಕಿತ್ತೆ ಅನುಸಾಲ್ವರನು ಗೆಲ್ದೆ |
ಸಿಂಧೂರನಗರದ ಸಿರಿಯೆ ಎನ್ನಣುಗ            ||೩೫೮||

ಎಂದು ದುಃಖಿಸಿ ಚಾಪಕೊನೆಯಲ್ಲಿ ಮೊಗವಿಟ್ಟು |
ಇಂದ್ರನಂದನನು ಚಿಂತಿಸುತಿರಲಾಗ ||
ಮಂದಹಾಸದಿ ಬಭ್ರುವಾಹನ ಪೇಳಿದನಾಗ |
ಮಂದಮತಿಯೆ ವೇಶ್ಯಜನೆಂದೆನ್ನ ಜರೆದೆಯ  ||೩೫೯||

ರಾಗ ರೇಗುಪ್ತಿ ಅಷ್ಟತಾಳ
ಮಾತೆಯೆನ್ನ ಚಿತ್ರಾಂಗದೆ | ಮಾನಿನಿಯರೊಳ್ ವಿಖ್ಯಾತೆ |
ಕಾತರಿಸಿ ಕುರೂಪಿಟ್ಟು | ಸೋತೆ ನೀ ಸಂಗರದೊಳು    ||೩೬೦||

ಮಿತ್ರಜಾತ ಕರ್ಣನಿಗೆ | ಮತ್ಸರದಿಂದ ಗೆಲಿದೆ |
ಪುತ್ರ ವೃಷಕೇತು ಪಗೆ | ಪೂರ್ಣವಾಯಿತೇನೊ ನಿನಗೆ  ||೩೬೧||

ಪ್ರಾಣದಾಸೆಗಾಗಿ ತಂದು | ಪೊಡವಿಪಾಲರನ್ನು ಕೊಂದು |
ಕಣನೇರಿ ಕಾದುವೆಯೊ | ಕುದುರೆ ಬಿಟ್ಟು ಪೋಪೆಯೊ   ||೩೬೨||

ಭಾಮಿನಿ
ನುಡಿಯ ಕೇಳುತ ಪಾರ್ಥ ಕೋಪದಿ |
ಕಿಡಿಯಿಡುತ ಗಾಂಡೀವವೊದರಿಸೆ |
ಅಡಿಮಗುಚಲಂಬುಧಿಗಳಲ್ಲಾಡಿದವು ಗಿರಿನಿಕರ |
ಕಡು ಭಯಂಕರ ಬಿಲ್ಲಬೊಬ್ಬೆಗೆ |
ಹೊಡಕರಿಸಿ ಮುದುರಿದವು ದಿಗ್ಗಜ |
ಪೊಡವಿ ತಲೆಕೆಳಗಾಗಲದ್ಭುತಧ್ವನಿಗೆ ಜಗ ಬೆದರೆ        ||೩೬೩||

ರಾಗ ಶಂಕರಾಭರಣ ಮಟ್ಟೆತಾಳ
ಏನೆಲವೊ ಬಭ್ರುವಾಹ | ನೆನ್ನ ಜರೆದೆಲಾ ||
ಮಾನವರು ಎನಗೆ ಇದಿರೆ | ಯೆನುತಲೆಚ್ಚನು  ||೩೬೪||

ಗಾಯವಡೆದು ಬಭ್ರುವಾಹನ | ಕಾಯ ಕಂಪಿಸೆ ||
ತೋಯಜಾತ್ಮಜನ್ನ ಶರವ | ನೆಚ್ಚು ಗರ್ಜಿಸಿ   ||೩೬೫||

ಕ್ಷೀಣಬಲನೆ ತಾನು ಶಿವನ | ಏಣೆಗಾರನು ||
ಕಾಣಬಹುದೆನುತ್ತ ಸರಳ | ಶ್ರೇಣಿ ಸುರಿದನು  ||೩೬೬||

ಚಿತ್ರಾಂಗದೆಯ ತನಯನದನು | ಕತ್ತರಿಸಿದನು ||
ಮತ್ತೆ ಮಾರುತಾಸ್ತ್ರದಿಂದ | ಮುರಿಯಲೆಚ್ಚನು ||೩೬೭||

ಪರಿಹರಿಸೆ ವಿಜಯನೆಚ್ಚ | ಪರ್ವತಾಸ್ತ್ರವ ||
ತರಿದು ಬಿಸುಟ ವಜ್ರದಿಂದ | ಉರಗಮೊಮ್ಮನು          ||೩೬೮||

ಕಾಮಹರನ ಕಣೆಯ ಕನಲಿ | ಪಾರ್ಥನೆಸೆಯಲು ||
ಸೋಮದತ್ತದಿಂದ ಪಾರ್ಥಿ | ಸಂತವಿಸಿದನು  ||೩೬೯||

ರಾಗ ಪಂಚಾಗತಿ ಮಟ್ಟೆತಾಳ
ಖುಲ್ಲ ಫಲುಗುಣ ಕಾದ | ಲೇಕೆ ಸುಮ್ಮನೆ || ಹರ |
ನಲ್ಲಿ ಪಡೆದ ಬಾಣವನ್ನು | ತೋರು ಘಮ್ಮನೆ  ||೩೭೦||

ಹರನ ಪಾಶುಪತಕೆ ನೀನು | ಗುರಿಯೆ ನೋಡೆಂದು || ಬಡ |
ಹೋರಿ ಹೋಗೆಂದೆಸೆದನು | ವಾರುಣಾಸ್ತ್ರವ   ||೩೭೧||

ಯಾತಕೀ ಪೊಳ್ಳು ಕಣೆಗ | ಳೆಂದು ತುಂಡಿಸಿ || ಬಾಣ |
ವ್ರಾತದಿಂದ ಪಾರ್ಥನ ಸಾ | ರಥಿಯ ಖಂಡಿಸಿ            ||೩೭೨||

ಭಾಮಿನಿ
ಹಲವು ವೀರರ ಗೆಲಿದ ಕಣೆಗಳು |
ಅಲಸಿದವು ಕಾಳಗದಿ ಕೌರವ |
ಕುಲವ ಸಂಹರಿಸಿರ್ದ ಅಸ್ತ್ರಗಳಂದು ಪುಸಿಯಾಯ್ತು ||
ಗೆಲವು ಇನ್ನೆಲ್ಲಿಹುದೊ ಶಾಪದ |
ಬಲುಮೆಯೆಂತುಟೊ ಶಿವ ಶಿವಾ ಫಲು |
ಗುಣನ ಸಾರಥಿ ಮಡಿದು ಕೈಗುಂದಿತು ರಣಾಗ್ರದಲಿ     ||೩೭೩||

ರಾಗ ನಾದನಾಮಕ್ರಿಯೆ ಮಟ್ಟೆತಾಳ
ನಮ್ಮ ಭಾವ ಕೃಷ್ಣನೆಂದು | ನಂಬಿ ಗುರುಹಿರಿಯರ ಕೊಂದು |
ಬ್ರಹ್ಮರುದ್ರರೆನಗೆ ಸಹಾಯ | ವೆಂಬ ಗರ್ವದಿ ||
ಬ್ರಹ್ಮರುದ್ರರೆನಗೆ ಸಹಾಯ | ವೆಂಬ ಗರ್ವದಿಂದ ಕಾದಿ |
ಕರ್ಮವೊದಗಿತೆನ್ನ ಕಂದ | ಕರ್ಣಜಾತಗೆ || ಕರ್ಣಜಾತಗೆ         ||೩೭೪||

ಚಂಡ ಚಿತ್ರಸೇನನ ಗೆಲಿದು | ಕೊಂಡು ಬಂದೆ ಕುರುಪತಿಯ |
ಖಾಂಡವನವನಗ್ನಿಗಿತ್ತು | ದಿಂಡುದರಿದೆನು ||
ಖಾಂಡವನವನಗ್ನಿಗಿತ್ತು | ದಿಂಡುದರಿದು ದೇವಗಜ ಭೂ |
ಮಂಡಲಕ್ಕೆ ಇಳುಹಿದೆನು | ಮಾತೆಗೋಸುಗ || ಮಾತೆಗೋಸುಗ            ||೩೭೫||

ಕೃಷ್ಣನೊಡನೆ ದ್ರೋಹವೆಸಗಿ | ನಟ್ಟ ನಡುವೆ ಬಂದ ಗಯನ |
ಸೃಷ್ಟಿಯಿರುವ ತನಕ ಭಾಷೆ | ಕೊಟ್ಟು ಉಳುಹಿದೆ ||
ಸೃಷ್ಟಿಯಿರುವ ತನಕ ಭಾಷೆ | ಕೊಟ್ಟು ಉಳುಹಿ ಹುಡುಗನೊಡನೆ |
ಭ್ರಷ್ಟವಾಯಿತೆನ್ನ ಜನ್ಮ | ಹುಟ್ಟಿ ಕುಲದೊಳು || ಹುಟ್ಟಿಕುಲದೊಳು           ||೩೭೬||

ಭಾಮಿನಿ
ಪಿತನ ಚಿಂತೆಯ ಕಂಡು ಚಿತ್ರಾಂ |
ಗದೆಯ ಸುತ ಪರಿಹಾಸ್ಯ ನುಡಿದನು |
ಅತಿಶಯದ ಶಸ್ತ್ರಾಸ್ತ್ರ ನಿನಗಿರೆ ಮಥನವೇಕೆಂದ ||
ಅತಿರಥ ಮಹಾರಥರನೆಲ್ಲರ |
ಹತವ ಮಾಡಿದೆನೆಂಬ ಶೌರ್ಯದ |
ಸ್ಥಿತಿಯ ನಿನ್ನೊಳು ನೀನೆ ಪೊಗಳಿದರೇನು ಫಲವೆಂದ   ||೩೭೭||

ರಾಗ ನಾದನಾಮಕ್ರಿಯೆ ಮಟ್ಟೆತಾಳ
ಗೌರಿಯರಸನೊಡನೆ ಗೆಲಿದ | ಶೌರ್ಯವೆತ್ತ ಹೋಯಿತೆಲವೊ |
ಕೌರವರನು ಸಂಹರಿಸಿದ | ಶೌರ್ಯವೆಲ್ಲಿದೆ ||
ಕೌರವರನು ಸಂಹರಿಸಿದ | ಶೌರಿಯನ್ನು ಭಜಿಸುಯೆನುತ |
ತೀವ್ರ ಬಾಣದಿಂದಲವನ | ತೇರನೆಚ್ಚನು       ||೩೭೮||

ಕೃಷ್ಣನನ್ನು ಕಾಂಬ ಸುಕೃತ | ದುಷ್ಟರಿಂಗೆ ಸಾಧ್ಯವಹುದೆ |
ಕೆಟ್ಟು ನುಡಿಯದೆಮನ ಪುರಕೆ | ಬಟ್ಟೆಯರಸಿಕೊ |
ಕೆಟ್ಟು ನುಡಿಯದೆಮನ ಪುರದ | ಬಟ್ಟೆಯರಸುಯೆನುತ ಬಾಣ |
ಬಿಟ್ಟು ಬಭ್ರುವಾಹನವನ | ದಟ್ಟ ಮುರಿದನು    ||೩೭೯||

ಬೇರೆಯೊಂದು ಮಣಿವರೂಥ | ವೇರಿ ಬಭ್ರುವಾಹನಸ್ತ್ರ |
ಸಾರದಿಂದ ಮುಸುಕಿದನು | ವೀರ ವಿಜಯನ ||
ಸಾರದಿಂದ ಮುಸುಕಿದನು | ವೀರ ವಿಜಯನದರ ತರಿದು |
ಸೂರ್ಯನಸ್ತ್ರದಿಂದ ಸೇನೆ ಸೇರಿತೆಮನಲಿ     ||೩೮೦||

ಭಾಮಿನಿ
ಅರಸ ಕೇಳರ್ಜುನನು ಸಿಡಿಲಿನ |
ಗರ ಹೊಡೆದ ವಟವೃಕ್ಷದಂತಿರೆ |
ತಿರುವನೇರಿಸಿ ತುಡುಕುವರೆ ಹೆಳವಾದವಸ್ತ್ರಗಳು ||
ಮರವೆಯಾಯಿತು ಮಂತ್ರತಂತ್ರಗ |
ಳಿರದೆ ತಲೆಕೆಳಗಾಗಿ ಹೋಯಿತು |
ಸರಸವಾಗಿರೆ ಕಂಡು ಚಿತ್ರಾಂಗದೆಯ ಸುತ ನುಡಿದ    ||೩೮೧||

ರಾಗ ಭೈರವಿ ತ್ರಿವುಡೆತಾಳ
ಜಾಣನಹುದಹುದೋ | ಭಳಿರೆ ಶಸ್ತ್ರ | ತ್ರಾಣನಹುದಹದೋ    || ಪ ||

ದ್ರೋಣನೊಲಿದಿತ್ತಸ್ತ್ರಶಸ್ತ್ರವು | ಕಾಣದೆಡೆಯಲಿ ಹೋಯಿತೇ |
ಏಣಗರ್ಭನ ಹರಿಹರರ ಕ | ಟ್ಟಾಣಿ ಕಣೆಗಳು ಹೋಯಿತೇ ||
ತ್ರಾಣವನು ಕಂಡಿತ್ತ ದಿಗಧಿಪ | ರ್ಬಾಣಗಳು ಪುಸಿಯಾದುವೇ |
ಸಾಣೆಯಲಗಿನ ಸರಳ ಮೇಘವ | ಕಾಣಿಸುತ ಪಾರ್ಥನ ಪಚಾರಿಸಿ |
ಜಾಣನಹುದಹುದೋ        ||೩೮೨||

ಎಚ್ಚಬಾಣವ ವಿಜಯನೆಡೆಯಲಿ | ಕೊಚ್ಚಿ ಮಹಶರ ಪೂಡಿದ |
ಅಚ್ಯುತನ ನೆನಹಿನಲಿ ಸೇನೆಯ | ನುಚ್ಚುನುರಿಯನು ಮಾಡಿದ ||
ಮೆಚ್ಚಿ ಸುರರು ಪೂಮಳೆಯ ಕರೆಯುತ | ಅಚ್ಚರಿಯವನು ಕಾಣುತ ||
ನಿಶ್ಚಟನನೆದೆಗಯ್ದು ಸರಳನು | ಎಚ್ಚು ರಥದಲಿ ಮೂರ್ಛೆಗೆಯ್ಸಿದ ||
ಜಾಣನಹುದಹುದೋ        ||೩೮೩||

ರೋಷದಲಿ ಕಲಿ ಬಭ್ರುವಾಹನ ಮ | ಹಾಸ್ತ್ರವನು ತೆಗೆದ್ಹೂಡಿದ |
ಈಶ ಇಂದ್ರಾದಿಗಳು ದಿಗಧಿಪ | ರಾ ಸುರರು ಕೊಂಡಾಡುತ ||
ಏಸು ಕಣೆಯರ್ಜುನನು ಎಸೆದರೆ | ಬೇಸರದೆ ಪುಡಿಮಾಡುತ |
ಸೂಸಿ ಕಿಡಿಯ ಜ್ವಾಲೆ ಶರ ಸಿತ | ವಾಹನನ ಶಿರ ಕಡಿದು ಹಾಯ್ದುದು ||
ಜಾಣನಹುದಹುದೋ        ||೩೮೪||

ಅಕ್ಷಭಾರದ ಚಾಪವನು ಬಿಡ | ಲಾ ಕ್ಷಣಕೆ ಪೆಣವೊರಗಿತು ||
ಅಕ್ಷಯದ ಬತ್ತಳಿಕೆ ಬೆನ್ನಿನೊ | ಳೀಕ್ಷಿಸುತ ಜನ ಮರುಗಿತು ||
ಯಕ್ಷ ಕಿನ್ನರ ಇನ ಹಿಮಾಂಶುಗೆ | ಪಕ್ಷದಲಿ ಮನ ಕರಗಿತು |
ಪಕ್ಷಿವಾಹನಯೆನುತ ಮಹಶಿರ | ಚಕ್ಷುಮಂಡಲ ತಿರುಗಿ ಬಿದ್ದುದು |
ಜಾಣನಹುದಹುದೋ        ||೩೮೫||

ಭಾಮಿನಿ
ಪೃಥಿವಿಪಾಲಕ ಕೇಳ್ ಮಹಾಶಿರ |
ಸ್ತುತಿಸಿ ಕೇಶವ ಮಾಧವೆನುತಲೆ |
ಕ್ಷಿತಿಗೆ ಕರ್ಣಜನೊಡನೆ ಬಿದ್ದುದು ಮೋಹಪಾಶದಲಿ ||
ವ್ರತ ಭಯಂಕರ ಪಾರ್ಥ ಭಾಗೀ |
ರಥಿಯ ಶಾಪದಿ ಕಾರ್ತ್ತಿಕೈಕಾ |
ದಶಿಯ ಕುಜವಾರದಲಿ ಮಡಿದನು ವಂಶದ್ರುಮದಂತೆ  ||೩೮೬||

ದ್ವಿಪದಿ
ಮರಳಿದರು ಸುರವರರು ಮರುಗಿಯಂಬರದಿ |
ತೆರಳಿದನು ಬಭ್ರುವಾಹನನು ಸಂಭ್ರಮದಿ      ||೩೮೭||

ವಾದ್ಯವೀಣಾರವದಿ ಪೊಡೆವ ಭೇರಿಯಲಿ |
ಪದ್ಯ ಪಾಠಕರಿಂದ ಪೊಗಳೆ ಹರುಷದಲಿ        ||೩೮೮||

ಮಂತ್ರಿ ಮಾರ್ಬಲ ಸಹಿತ ಮಣಿಪುರಕೆ ಬಂದು | ಮ |
ಹಾಂತ ಪ್ರಜೆಗಳು ಸಹಿತ ಕಾಣಿಸಿದರಂದು     ||೩೮೯||

ಭಾಮಿನಿ (ಅರ್ಧ)
ಇಂತು ಪ್ರಜೆಪರಿವಾರಸಹಿತಲೆ |
ಸಂತಸದಿ ಪುರಬಾಹ್ಯೆಯೊಳಗಿರೆ |
ಅತ್ತ ಚಿತ್ರಾಂಗದೆಯು ಲೂಪಿಯು ಚಿಂತಿಸುತ ಕೂಡೆ ||

ರಾಗ ಯರಕಲಕಾಂಭೋಜಿ ತ್ರಿವುಡೆತಾಳ
ಚಿತ್ರಾಂಗದೆಯೆ ನಾನು | ಚಿಂತಿಸಿ ಕಬರಿ ಬಾ |
ಚುತ್ತ ಗೋಪುರದೊಳಿರೆ ||
ಮೃತ್ಯು ಪೋಲುವ ಗೌಳಿ | ಮುಡಿಗೆನ್ನ ಕೆಡೆದುದು |
ಮುತ್ತೈದೆ ತನಕೆ ಶುಭವೇನೆ ಕೋಕಿಲಗಾನೆ    ||೩೯೦||

ಅಕ್ಕ ಲೂಪಿಯೆನಗೆ | ಎಡಗಣ್ಣಿನಲಿ ಬಹಳ |
ದುಃಖ ಸುರಿವುತಿದೇಕೆ ||
ಮಕ್ಕಳ ಮಣಿ ಬಭ್ರುವಾಹ ಪಂಥಗಳಿಂದ |
ಮಿಕ್ಕು ನಡೆವನೆ ಹೇಳು ಅರ್ಜುನನೊಳು       ||೩೯೧||

ಮಡದಿ ರನ್ನಳೆ ಮಂತ್ರಿ | ನುಡಿಯ ಮೀರದಿರೆಂದು
ಹುಡುಗನಿಗರುಹಿದೆನು ||
ತಡೆದ ವಾಜಿಯನಿತ್ತು ಅಡಿಗೆರಗಿದರೆಮ್ಮ |
ಬಿಡುವೆವೆ ಸುರಪಜಾತ ಲೋಕ ಪ್ರಖ್ಯಾತ      ||೩೯೨||

ಭಾಮಿನಿ
ಭೋಗಿರಾಜನ ಸುತೆಯುವೊಳಗಣ |
ಬಾಗಿಲಲಿ ಕಾಯುತಿರೆ ತೋಯದ |
ಮೇಘಕತಿ ಬಾಯಾರಿ ಕಪ್ಪೆಗಳಿರುವ ತೆರನಂತೆ ||
ಆಗ ಬಂದಳು ಕಟಕಿ ಪೇಳಿದ |
ಆಗಮವ ಕೇಳುತ್ತ ತರುಣಿಯ |
ರಾಗ ಕ್ಲೇಶದೊಳಿರಲು ಬಂದನು ಬಭ್ರುವಾಹನನು       ||೩೯೩||

ದ್ವಿಪದಿ
ತೋರಣದ ಮೇಲ್ಗಟ್ಟು ಕುರುಜು ಮೇರ್ವೆಯಲಿ |
ಆರತಿಯ ಕಯ್ಗೊಂಡು ಕೇರಿಕೇರಿಯಲಿ           ||೩೯೪||

ಪಿತನ ಛೇದಿಸಿ ಬಂದ ಬಭ್ರುವಾಹನನ |
ಸ್ಥಿತಿಗೆ ಪುರಜನವು ಶಂಕಿಸಿ ನುಡಿವುತಿರಲು    ||೩೯೫||

ನಾರಿ ಚಿತ್ರಾಂಗದೆ ಲೂಪಿಮರುಗುವ ಪರಿಯ |
ವೀರ ಕೇಳುತ ತಿಳಿದು ಪೊಕ್ಕನರಮನೆಯ     ||೩೯೬||

ಭಾಮಿನಿ (ಅರ್ಧ)
ಮಾತೆ ಚಿತ್ರಾಂಗದೆಗೆಯೆರಗುತ |
ಯಾತಕೀ ಕ್ಲೇಶಗಳುಯೆನುತಿರೆ |
ಸೋತವನು ತಾನಲ್ಲ ರಣದಲಿ ನಿಮ್ಮ ಸತ್ಯದಲಿ ||

ರಾಗ ಸೌರಾಷ್ಟ್ರ ಅಷ್ಟತಾಳ
ಮಂಗಲಯೋಗದಿ ಮರುಗುವೆಯೇತಕೆ | ಅಮ್ಮ ಕೇಳು || ಇಂಥ |
ಸಂಭ್ರಮಕಾಲದಿ ಶೋಕ ಮಾಡುವುದುಂಟೆ | ಅಮ್ಮ ಕೇಳು        ||೩೯೭||

ನಿನ್ನ ಮಾತಿನ ಮೇಲೆ ಅಡಿಗೆರಗಿದೆ ಹೋಗಿ | ಅಮ್ಮ ಕೇಳು || ಆತ |
ನುನ್ನತ ಕುರುಪಿಟ್ಟು ಜರೆದೆನ್ನ ನುಡಿದನು | ಅಮ್ಮ ಕೇಳು           ||೩೯೮||

ಅಪಜಯ ನಮಗಿಲ್ಲವಿಂದಿನ ರಣದಲಿ | ಯಮ್ಮ ಕೇಳು || ಬಲು |
ಅಪರಿಮಿತವು ಸೇನೆ ಕೆಡಹಿದ ನಾನಿಂದು | ಅಮ್ಮ ಕೇಳು          ||೩೯೯||

ಅಂಗಜ ಅನುಸಾಲ್ವಾದಿಗಳ ಸಂಹರಿಸಿದೆ | ನಮ್ಮ ಕೇಳು || ರಣ |
ರಂಗದೊಳಗೆ ರಾಜಕುವರರ ಮಡುಹಿದೆ | ನಮ್ಮ ಕೇಳು           ||೪೦೦||

ವಿಜಯಾನಿರುದ್ಧರ ಕೆಡಹಿದೆ ನಾನಿಂದು | ಅಮ್ಮ ಕೇಳು || ಬಲು |
ಭುಜಪರಾಕ್ರಮಿ ಕರ್ಣತನಯನ ಮಡುಹಿದೆ |  ನಮ್ಮ ಕೇಳು      ||೪೦೧||

ಭಾಮಿನಿ
ಕಂದನಾಡಿದ ನುಡಿಯ ಕೇಳುತ |
ಚಂದ್ರಮುಖಿ ಹೆಮ್ಮೈಸಿ ಬೀಳುತ |
ಬೆಂದ ಹುಣ್ಣಿಗೆ ಹುಳಿವೆರಸಿದಾ ತೆರದಿ ಬಸವಳಿದು ||
ಚಂದವಾಯಿತು ಪಿತನ ಛೇದಿಸಿ |
ಅಂದಚಂದವ ಕೆಡಿಸಿದೆನ್ನಯ |
ಮಂದಮತಿ ಪಗೆ ತೀರಿತೇ ಮತ್ಕಾಂತನೊಳು ನಿನಗೆ   ||೪೦೨||

ರಾಗ ಕಾಂಭೋಜಿ ಏಕತಾಳ
ಏನು ನಮ್ಮೊಳ್ ಹಗೆಯು ಬಂತು | ಕಂದಾ ಕಂದಾ || ಮುತ್ತೈದೆ ತನಕೆ |
ಮಾನಭಂಗ ತರಿಸಿದಲ್ಲೊ | ಕಂದಾ ಕಂದಾ               ||೪೦೩||

ದಾನವಾರಿ ಮೈದುನನು | ಕಂದಾ ಕಂದಾ || ರಣದಲಿ ಮತ್ತು |
ಸೇನೆಸಹಿತ ಮಡಿದನೇನೊ | ಕಂದಾ ಕಂದಾ             ||೪೦೪||

ಭಾಷೆಗುರುತವಿತ್ತುಯೆಮಗೆ | ಕಂದಾ ಕಂದಾ || ಬರುವನೆಂದು |
ಆಸೆಯಿಂದ ಕಾದಿರ್ದೆವು |  ಕಂದಾ ಕಂದಾ                ||೪೦೫||

ದೇಶಾದಿ ದೊರೆಗಳೆಲ್ಲ | ಕಂದಾ ಕಂದಾ ||  ಕೂಡಿ ರಣದಿ |
ವಾಸವಸುತನಳಿದನೇನೊ | ಕಂದಾ ಕಂದಾ              ||೪೦೬||

ಇಂದುವಂಶವಳಿಯಿತೇನೋ | ಕಂದಾ ಕಂದಾ || ನಿನ್ನ ಉದ್ಭವ |
ಅಂದಚೆಂದ ಕೆಡಿಸಿತಲ್ಲೊ | ಕಂದಾ ಕಂದಾ                ||೪೦೭||

ಮಂದಮತಿಗಳಾದೆವಲ್ಲೋ | ಕಂದಾ ಕಂದಾ || ನಿನ್ನ ಕಳುಹಿ |
ಮುಂದೆಮಗಿನ್ನೇನು ಗತಿಯೊ | ಕಂದಾ ಕಂದಾ           ||೪೦೮||

ಧರ್ಮಜ ನಕುಲ ಕೃಷ್ಣರು | ಕಂದಾ ಕಂದಾ || ಕೇಳುತಲಿದ |
ವರ್ಮವ ಬೆಳಸುವರಲ್ಲೋ | ಕಂದಾ ಕಂದಾ  ||೪೦೯||

ಶರ್ಮವಿಡುವ ವಾತಜನು | ಕಂದಾ ಕಂದಾ || ನಿನ್ನಯ ಶೌರ್ಯ |
ಧರ್ಮಕೆ ಇನ್ನೇನು ಮಾಳ್ಪೆ | ಕಂದಾ ಕಂದಾ              ||೪೧೦||

ಕಾಮಸ್ವರೂಪನರ್ಜುನನ | ಕಂದಾ ಕಂದಾ || ದೊರೆಕುವರರನ್ನು |
ಯಾರಿಂದ ಜೀವಿಸುವೆ ನೀನು | ಕಂದಾ ಕಂದಾ          ||೪೧೧||

ಭಾಮಿನಿ
ಪೃಥ್ವಿಪಾಲಕ ಕೇಳು ಪಾರ್ಥನ |
ಪತ್ನಿಯರು ಮೆಯ್ಮರೆದು ಗೋಳಿಡೆ |
ಮತ್ತೆ ಲೂಪಿ ದಾಳಿಂಬ ದ್ರುಮದಲಿ ಕುರುಹುಗಳ ನೋಡಿ ||
ಚಿತ್ರಾಂಗದೆ ದುಃಖದಲಿ ತನ್ನಯ |
ಪುತ್ರನನು ಕರೆಕೊಂಡು ಸತಿಯರ |
ಮೊತ್ತ ಸಹಿತಲಿ ನಡೆದು ಬಂದಳು ಆ ರಣಾಂಗಣಕೆ      ||೪೧೨||

ರಾಗ ಆನಂದಭೈರವಿ ಏಕತಾಳ
ಪುತ್ರಶೋಕದಲ್ಲಿ ಸೂರ್ಯ | ಮಿತ್ರಮಂಡಲವ ಬಿಟ್ಟು |
ಧಾತ್ರಿಯೊಳೇಕೊರಗಿದ | ನೆಂದರು | ಬಲು | ನೊಂದರು           ||೪೧೩||

ಸೋಮವಂಶವಳಿಯಿತೆಂದು | ತಾಮಸದೊಳಗಯ್ತಂದು |
ಕಾಮಸ್ವರೂಪನರ್ಜುನನ | ಕಂಡರು | ಭ್ರಮೆ | ಗೊಂಡರು         ||೪೧೪||

ಕರ್ಣಜ ಪಾರ್ಥರ ಶಿರವ | ವರ್ಣಿಸಿ ನಾಗಕನ್ನೆಯರು ಮ |
ಹಾರ್ಣಘೋಷದಿ ಬಾ | ಯಾರುತ್ತ | ಮೋಹ | ದೋರುತ್ತ          ||೪೧೫||

ಭಾಮಿನಿ
ಪತಿಯ ಶಿರವನು ಕಂಡು ಚಿತ್ರಾಂ |
ಗದೆಯು ಧೊಪ್ಪನೆ ಕೆಡಹಿಯವನಿಗೆ |
ಯತಿಶಯದ ರೋದನದಿ ಬಿದ್ದುರುಳಿದಳು ಹುಡಿಯೊಳಗೆ ||
ಗತಿಯೆಮಗೆ ದಾರೆಂದು ಚಿತ್ರಾಂ |
ಗದೆಯು ಶಿರದಲಿ ಮೆಯ್ಯ ಚಾಚುತ |
ಸುತನು ಕಂಟಕನಾದನೇಯಕಟಕಟ ನಿನಗೆಂದು         ||೪೧೬||

ರಾಗ ನೀಲಾಂಬರಿ ಝಂಪೆತಾಳ
ದೇವತಾಂಶಜನೆ ರಣಧೀರ | ಎನ್ನರಸ |
ದಾವಾಗ್ನಿಯುಳಿಯದೆ ದೇವೇಂದ್ರ ಸುಕುಮಾರ    || ಪ ||

ಈಶ್ವರಾಜ್ಞೆಯಲಿ ಜನಿಸಿದರು | ಪಾಂಡವರು |
ವಿಶ್ವದಿಗಧಿಪನು ಮೈದುನನು ಮಾಧವನು | ನಿಮ್ಮ |
ಶಾಶ್ವತಕೆ ಹೊಣೆಯಾದ ಕೃಷ್ಣನಗಲಿದನೆ       ||೪೧೭||

ಸಹಾಯವಾಗಿರೆ ಸಚರಾಚರರು | ಪ್ರಾಣವನು |
ಮಾಯಕದಿ ಕದ್ದೊಯ್ದ ಭಟನ್ಯಾರು | ನಿಮಗಿನ್ನು |
ಬಾಯ ಬಡಿದನೆ ಬ್ರಹ್ಮನೆಂದು ತರುಣಿಯರು  ||೪೧೮||

ಭಾಮಿನಿ
ಮಗನೆ ಈ ವೈಧವ್ಯ ದುಃಖವು |
ಸೊಗಸಿದಾಯಿತೆ ನಿನಗೆ ಖಡುಗವ |
ತೆಗೆದು ನಮ್ಮೀರ್ವರ ಶಿರಂಗಳನಿಳುಹು ಬೇಗದಲಿ ||
ಅಘವ ಪೊತ್ತೆನು ಪಿತನ ಛೇದಿಸಿ |
ಹಗೆಗನಾದೆನು ಪಾಂಡುಸುತರಿಗೆ |
ಮೊಗವ ಕೃಷ್ಣನಿಗೆಂತು ತೋರುವೆನೆನುತ ಚಿಂತಿಸಿದ   ||೪೧೯||

ರಾಗ ನೀಲಾಂಬರಿ ಏಕತಾಳ
ಕ್ಷತ್ರಿಯಲ್ಲವೆಂಬುದಕ್ಕೆ | ಶಿರವರಿದೆನು |
ಅತ್ತು ನೀವು ಸಾಯಲೇಕೆ ||
ಪುತ್ರ ನಾ ಮಾಡಿದ ತಪ್ಪಿಗೆ | ಪೊಗುವೆ ವೀತಿ |
ಹೋತ್ರನಾಹುತಿಮುಖಕೆ    ||೪೨೦||

ಪಾಪ ಧರಿಸಿ ಇರಲೇಕೆ | ಈ ದೇಹವಗ್ನಿ |
ಕೂಪಕೆ ಅರ್ಪಿಸುವೆ ನಾನು ||
ಧೂಪ ಕರ್ಪೂರ ಶ್ರೀಗಂಧ | ಕಾಷ್ಠಗಳನ್ನು |
ಈ ಪರಿಯಲಿ ತರಿಸಿದ       ||೪೨೧||

ಸಿತವಾಹನನ ರಕ್ಷೆಗೆ | ಬರುವನೀಗ |
ಶತಪತ್ರದಳಲೋಚನ ||
ಖಾತಿಯಿಂದೆಮಜ ಭೀಮ | ಬರುವನಕ |
ಹುತವಾಹನನ ಪೊಗುವೆ   ||೪೨೨||