ಭಾಮಿನಿ (ಅರ್ಧ)
ಚಂಡವಿಕ್ರಮ ನುಡಿದ ನುಡಿಯನು |
ಪುಂಡರಿಕಲೋಚನೆಯು ಕೇಳುತ |
ಕೊಂಡವನು ರಚಿಸದಿರು ಸಾಕೆಂದಳು ನಯೋಕ್ತಿಯಲಿ ||

ರಾಗ ಘಂಟಾರವ ಝಂಪೆತಾಳ
ಜಾತ ಕೇಳೈ ನಿನ್ನ ತಾತನೆಬ್ಬಿಸುವುದಕೆ |
ಪಾತಾಳಗೊಳಗಿಹುದು | ಮತ್ತೆ ಸಂಜೀವ      ||೪೨೩||

ದಕ್ಷಮುಖಭಂಗನೊಳು | ತಕ್ಷಕಾದ್ಯರು ಕೂಡಿ |
ರಕ್ಷಣೆಗೆ ಕೊಂಡಿಹರು | ಪಕ್ಷೀಂದ್ರಭಯದಿ       ||೪೨೪||

ನರರಿಗಸದಳವಲ್ಲಿ | ನಾಗಲೋಕವನಿಳಿದು |
ತರುವ ವೀರರ ಕಾಣೆ | ತೀವ್ರ ಫಣಿಯೊಡನೆ   ||೪೨೫||

ಭಾಮಿನಿ (ಅರ್ಧ)
ಮಾತೆಯಂಘ್ರಿಗೆ ನಮಿಸಿ ಚಿಂತೆಗ |
ಳೇತಕಂಜದಿರೆಂದು ಕರ್ಣಜ |
ಪಾರ್ಥರನು ಜೀವಿಸುವೆ ನೇಮವ ಪಾಲಿಸೆನಗೆಂದ ||

ರಾಗ ಸೌರಾಷ್ಟ್ರ ಝಂಪೆತಾಳ
ಲೇಸು ಕಾರ್ಯವ ತೋರಿದೆ | ಎನಗವ್ವ | ಈ ಸುಗುಣನೆಬ್ಬಿಸುವೆ ||
ಈಶನಾ ಪಣೆಯೊಳಿರಲಿ | ಸಂಜೀವ | ವಾಸವನ ಮರೆಯೊಳಿರಲಿ           ||೪೨೬||

ತಾರದಿರೆ ನಿನ್ನ ಸುತನೆ | ನಾನಲ್ಲ | ಸರಸಿಜೋದ್ಭವ ತಡೆವನೆ ||
ಒರಗಿಸುವೆ ನಿಮಿಷದೊಳಗೆ | ಈಯದಿರೆ | ಉರಿಸುವೆನು ನಾಗಕುಲವ     ||೪೨೭||

ತಮ್ಮ ಕರ್ಣಜಪಾರ್ಥರ | ಹರಿಸುತರ | ನೊಮ್ಮೆಯೆಬ್ಬಿಸದಿರ್ದರೆ ||
ಧರ್ಮಜನ ಯಜ್ಞ ತಡೆದ | ಭವವೆನಗೆ | ಬ್ರಹ್ಮನಿರುವನಕ ಬಿಡದು           ||೪೨೮||

ಭಾಮಿನಿ
ಮಗನೆ ಮರುಳಾಗದಿರು ನಿನ್ನನು |
ಬಗೆವನಲ್ಲಾ ಶೇಷರಾಜನು |
ಬಗೆಯು ಬೇರುಂಟೆಂದು ಕರೆದಳು ಪುಂಡರಿಕಫಣಿಯ ||
ಸುಗುಣೆ ಶಿರ ಕೆಡದಂತೆ ಕಚ್ಚಿಸಿ |
ಮಿಗೆಯು ಶೇಷಂಗಿತ್ತು ಗುರುತವ |
ವಿಗಡ ಸಂಜೀವನವ ತಾರೆಂದಟ್ಟಿದಳು ತರಳೆ            ||೪೨೯||

ರಾಗ ಮಾರವಿ ಆದಿತಾಳ
ಲೂಪಿಯೊಳಪ್ಪಣೆಗೊಂಡು | ಉರಗ ತಾ ನಡೆತಂದು |
ಅಪರಿಮಿತ ಸಭೆಯಲ್ಲಿ | ಉರಗೇಂದ್ರನೊಡನೆ            ||೪೩೦||

ಕಂಡೊಡೆಯಗೆರಗಿ | ಪುಂಡರೀಕ ಗುರುತದ |
ಕುಂಡಲವ ಮುಂದಿಟ್ಟು ಉ | ದ್ದಂಡದೊಳ್ ನುಡಿದ      ||೪೩೧||

ದೇವ ಪಾಂಡವರು ಕೌ | ರವರ ಮರ್ದಿಸಿ ಯಜ್ಞ |
ಭಾವ ಕೃಷ್ಣನನುಜ್ಞೆ | ಯಿಂದ ರಚಿಸಲು          ||೪೩೨||

ತುರಗದೊಡನರ್ಜುನನು | ತಿರುಗಿ ಬಭ್ರುವಾಹನನ |
ಪುರದಿ ವಾಜಿಯ ಬಿಟ್ಟು | ರಣದೊಳು ಮಡಿದ ||೪೩೩||

ನಿನ್ನ ಮಗಳು ಲೂಪಿ | ತನ್ನ ದುಃಖದಿಂದಲಿ |
ಎನ್ನನಟ್ಟಿದಳ್ ಸಂಜೀ | ವನವ ತಾರೆನುತ    ||೪೩೪||

ಭಾಮಿನಿ
ಖಂಡಪರಶುವು ಮೂರು ಲೋಕದ |
ಗಂಡನರ್ಜುನನಿಳೆಯ ಕಪ್ಪವ |
ಕೊಂಡು ವಾಜಿಯ ಬಿಟ್ಟು ಮಡಿದನೆ ಬಭ್ರುವಹನನಲಿ ||
ದಂಡಧರ ಹಿರಿಯಯ್ಯ ಮೃತ್ಯುವ |
ಕಂಡು ನಮಿಸುವ ನಮಗೆ ರಾಜ್ಯವ |
ಕೊಂಡು ಕೊಡಿಸಿದ ಕೃಷ್ಣಸಾರಥಿ ವಜ್ರಕವಚವಲಾ       ||೪೩೫||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳಿದನು ಕೌಂತೆಯನ ಭಂಗವ | ತಾಳಿದನು ಕುಂಡಲವ ದುಃಖವ |
ಭಾಳ ಸಭೆಯಲಿ ಶೇಷ ನುಡಿದನು | ವ್ಯಾಳಕುಲಕೆ       ||೪೩೬||

ನೋಡಿದಿರೆ ಧೃತರಾಷ್ಟ್ರ ಮುಖ್ಯರು | ಬೇಡುವರು ಸಂಜೀವಮಣಿಯನು |
ನೀಡುವೆನು ನಮ್ಮಳಿಯ ಜೀವನ | ಮಾಡುವುದಕೆ        ||೪೩೭||

ವಚನ
ಇಂತೆಂದು ಶೇಷರಾಜನು ನುಡಿಯಲಾಗಿ, ಧೃತರಾಷ್ಟ್ರ ಉರಗನು ಏನೆಂದನು ಎಂದರೆ –

ರಾಗ ದೇಶಿ ಏಕತಾಳ
ಆಗದಾಗದು ಫಣಿಪಾಲ | ಸಾಧನವನಿ |
ತ್ತಾಗಲೆ ಬಂತೆಮಗೆ ಕಾಲ  ||
ಈಗ ಸಂಜೀವನ ನರರಿಗೆ ಕೊಟ್ಟರೆ |
ನಾಗವೈರಿಯು ಕೊಲುವಾಗ ಬರುವುದೆ || ಆಗದಾಗದು    || ಪ ||

ಮರೆವು ಮನುಜರಿಗೆ ಗಾಢ | ತಂದ ವಸ್ತುವ |
ಮರಳೀಯಬೇಕೆಂದು ನೋಡಾ ||
ಸರಸಿಜಭವ ಫಣೆಯಲಿ ಬರೆದ ಲಿಪಿ |
ಬರೆಸಿ ಮುನಿಗಳಂತೆ ಸ್ಥಿರದಿ ಬಾಳುವರೆ || ಆಗದಾಗದು           ||೪೩೮||

ನರಲೋಕದವರಲ್ಪಾಯುಷ್ಯದವರು | ಸಜ್ಜನರಂತೆ |
ಪರರುಪಕಾರವನರಿಯರು ||
ಧುರದೊಳಳಿದ ಲೂಪಿವರನ ರಕ್ಷಿಸದೀಗ |
ನರನ ಸಾರಥಿ ಮುರಹರನು ಬಿಡುವನೆ || ಆಗದಾಗದು            ||೪೩೯||

ಭಾಮಿನಿ
ದುಷ್ಟ ಧೃತರಾಷ್ಟ್ರುರಗಮಂತ್ರಿಗೆ |
ವಿಷ್ಣುರೂಪನನಂತ ಕೋಪಿಸಿ |
ಕಷ್ಟವನು ಗಳಿಸುತ್ತ ಕೆಡಿಸುವಿರುರಗಲೋಕವನು ||
ನಷ್ಟವಾಗದು ನರನ ಪ್ರಾಣವು |
ಕೃಷ್ಣರಾಯನ ಕಯ್ಯೊಳಿಹುದೆಲೆ |
ಭ್ರಷ್ಟ ಹೋಗೆಂದೆನುತ ಕರೆದನು ಪುಂಡರಿಕಫಣಿಯ      ||೪೪೦||

ರಾಗ ತೋಡಿ ಏಕತಾಳ
ಪುಂಡರೀಕ ನೀ ಬಾರಯ್ಯ | ಪೋಗಿ ಲೂಪಿಗೆ |
ಕುಂಡಲಂಗಳ ತೋರಯ್ಯ ||
ಕಂಡೆಯ ನಮ್ಮುಕ್ತಿಗಳ ಕೇಳದಿರುವ |
ಪುಂಡು ಫಣಿಗಳು ಮಣಿಯ ಕೊಡದಿಹ ಪಾಡು |
ನೀ ನೋಡು | ಬಹ ಕೇಡು | ಲೂಪಿಯೊಳ್ ಮಾತಾಡು ||೪೪೧||

ಒಪ್ಪಿ ಉರಗ ನಡೆದ | ರಣದೊಳು ಕಾ |
ದಿಪ್ಪ ಲೂಪಿಯೊಳ್ ನುಡಿದ ||
ಒಪ್ಪುಗೊಡದಿರುವ ಫಣಿಗಳ ಸಂಗತಿ |
ತಪ್ಪದೆ ಬಭ್ರುವಾಹನನು ಲಾಲಿಸಿ ಕೇಳಿ |
ಫಣಿಚಾಳಿ | ರೋಷವ ತಾಳಿ | ಕೆಟ್ಟಿತೀಹಾಳಿ   ||೪೪೨||

ಭಾಮಿನಿ
ಕುಂಡಲದ ಕುರುಹವನು ಕಾಣುತ |
ಪುಂಡು ಫಣಿಗಳಿಗ್ಹಾಸ್ಯವಾಯಿತೆ |
ಹಿಂಡಿ ಕಳೆವೆನು ಕರ್ಣದೋಲೆಯ ನಾಗಹೆಂಡಿರನು ||
ಕೆಂಡವನು ಕಾರುತ್ತರೋಷದಿ |
ಚಂಡವಿಕ್ರಮಿ ಪಾರ್ಥಿ ಧನು ಕೈ |
ಗೊಂಡು ಚಾಪವನೆರಗಿ ಜನನಿಗೆ ಪೊರಟನಾ ಕ್ಷಣಕೆ     ||೪೪೪||

ರಾಗ ನೀಲಾಂಬರಿ ಅಷ್ಟತಾಳ
ತಾಯಿಗೊಂದಿಸಿ ಬಿಲ್ಲ ಪಿಡಿದನು | ಅಶ್ವ |
ಲಾಯಕೆರಗಿ ಮೀಸೆಗಡಿದನು          ||೪೪೫||

ಮೂರು ಲೋಕದ ವೀರ ಮಡಿದರೆ | ಮಣಿ |
ಕ್ರೂರ ಫಣಿಗಳು ಕೊಡದೆ ತಡೆದರೆ   ||೪೪೬||

ನಾಗನಗರವನು ಸುಟ್ಟು ತರಿಸುವೆ | ರತ್ನ |
ಈಗ ಪಾರ್ಥನ ಪ್ರಾಣ ಬರಿಸುವೆ      ||೪೪೭||

ಎಣಿಸದಿರವ್ವ ಬಹಳ ಪರಿಯನು | ಶೇಷ |
ಮಣಿ ಸಹಿತಲೆ ಕೊಂಡು ಬರುವೆನು  ||೪೪೮||

ಬಿಡದೆ ಸೈನ್ಯವ ಪಾರ್ಥಿ ನಡೆಸಿದ | ಬೇಗ |
ಸಡಗರದಲಿ ಮಾರ್ಗ ಬಿಡಿಸಿದ        ||೪೪೯||

ಭಾಮಿನಿ
ಭೂಮಿಯನು ಹೊಡೆದಬ್ಬರಕೆ ದಿಗು |
ಸ್ತೋಮ ಬೆದರಿತು ದಿಗ್ಗಜಾವಳಿ |
ತಾಮಸಕೆಯೆದೆ ಬಿರಿದು ಕೂರ್ಮನು ಬಳಲಿ ಬಸವಳಿದ ||
ಆ ಮಹಾನಾಗರಿಕ ಕುಲ ನಿ |
ಸ್ಸೀಮ ಫಲುಗುಣಿಯೆಚ್ಚು ತರಿದನು |
ಭೀಮಬಲ ಶೇಷಂಗೆ ದೂರಿತು ಅಖಿಳ ಫಣಿನಿಕರ        ||೪೫೦||

ದ್ವಿಪದಿ
ಜೀಯ ಜಗದೊಳಗಿಲ್ಲ ಜೋಡು ಅರ್ಜುನಿಗೆ |
ಕಾಯಲಾಗದೆ ನಮ್ಮ ಕಣೆಯ ಪ್ರಜ್ವಲಕೆ        ||೪೫೧||

ಧೃತರಾಷ್ಟ್ರ ಮರೆಗೊಂಡು ಧುರದಿ ಬಸವಳಿದು |
ಅತಿಶಯದ ಫಣಿಸೇನೆ ಹೇರಾಳ ಅಳಿದು       ||೪೫೨||

ಗರಳ ಸುರಿವುತ ನಾವು ಗೆಲಿದವನ ಪಡೆಯ |
ಸರಳನೊಡ್ಡಿನೊಳಿಪ್ಪತ್ತೊಂದು ಸಾವಿರವ      ||೪೫೩||

ನರನ ಮಗ ಕೋಪಿಸುತ ನಾಗಸಂತತಿಯ |
ಸರಳಿನಲಿ ಸಂಹರಿಸಿ ತುಂಬಿದನು ಕ್ಷಿತಿಯ     ||೪೫೪||

ಸಿತವಾಹನಗೆ ಸಂಜೀವನವ ಕೊಡಿರೆನುತ ||
ಪ್ರೀತಿಯಹುದೆಮಗಿನ್ನು ಕೃಷ್ಣನೊಡನೆನುತ     ||೪೫೫||

ಆ ಮಣಿಯು ಪಾರ್ಥನಿಗೆ ಮಾಧವನು ಇರಲು |
ಈ ಮಣಿಯ ನೆವದಿಂದ ನಮ್ಮ ಕೊಲುತಿರಲು ||೪೫೬||

ಎಂದ ಮಾತಿಗೆ ಅಹಿಪನಂಜದಿರಿಯೆನುತ |
ಮಂದಮತಿ ಧೃತರಾಷ್ಟ್ರನೊಡನೆ ಕೋಪಿಸುತ            ||೪೫೭||

ಧರ್ಮ ಉಪಕಾರಗಳ ತಡೆದ ದುಷ್ಟರಿಗೆ |
ಕರ್ಮವುಣಿಸದೆ ಬಿಡದು ಕೇಳಿರೈ ಕಡೆಗೆ        ||೪೫೮||

ಭಾಮಿನಿ (ಅರ್ಧ)
ಫಣಿಪನಹಿಗಳ ಬಯ್ದು ಸಂಜೀ |
ವನ ಸುವಸ್ತುವ ಕೊಂಡು ಮೊಮ್ಮನ |
ಗುಣ ಪರಾಕ್ರಮ ಪೊಗಳಿ ಪೊರಟನು ಆ ರಣಾಂಗಣಕೆ ||

ರಾಗ ಶಂಕರಾಭರಣ ಏಕತಾಳ
ಶೇಷನೆದ್ದು ಸಿಂಗರಿಸಿ | ಆ ಸುರತ್ನವನ್ನು ಕೊಂಡು |
ಸಾಸಿರ ಚಕ್ರಂಗಳಿಂದ ಬಿಜಯಂಗೆಯ್ದನು      ||೪೫೯||

ಬಭ್ರುವಾಹನನ್ನು ನೋಡಿ | ಬಹಳ ಪ್ರೀತಿಯನ್ನು ಮಾಡಿ |
ಇಬ್ಬರೊಂದಾಗಿ ಪೋದರಿಳೆಯ ಭೂಮಿಗೆ      ||೪೬೦||

ಭಾಮಿನಿ
ಚಿತ್ತವಿಸು ಭೂಪಾಲ ಸಕಲ ಸು |
ವಸ್ತು ಮಣಿಸಹಿತಾಗಿ ಶೇಷನು |
ಪೌತ್ರನನು ಕರೆಕೊಂಡು ಕೃಷ್ಣಾರ್ಜುನರ ದರುಶನಕೆ ||
ಅತ್ತಲಾ ಧೃತರಾಷ್ಟ್ರ ಉರಗನು |
ಕೌಂತೆಯರ ಶಿರವನ್ನು ಮಾಯದಿ |
ಉತ್ತರಾಬ್ಧಿಯೊಳಡಗಿ ಸಿಟ್ಟನು ನಾಚಿ ಖತಿಗೊಂಡು      ||೪೬೧||

ರಾಗ ನೀಲಾಂಬರಿ ತ್ರಿವುಡೆತಾಳ
ಶಿರವ ಕಾಣದೆ ಚಿತ್ರಾಂಗದೆ ತಾನು | ಲೂಪಿ |
ಯರಸಿದಳೆಂಟು ದಿಕ್ಕುಗಳನ್ನು ||
ಮಗನ ದೂರುವುದಿನ್ನು ಸುಮ್ಮನೆ | ಅಕ್ಕ |
ಪಗೆಯವರೊಯ್ದರೊ ಘಮ್ಮನೆ         ||೪೬೨||

ಏನು ವಿಘ್ನಗಳೆಂದು ತಿಳಿಯದು | ತಂಗಿ |
ಮುತ್ತೈದೆತನ ನಮಗುಳಿಯದು ||
ತಾಳಬಲ್ಲೆವೆ ಈ ವೈಧವ್ಯವ | ತಂಗಿ |
ಕೇಳೀಗ ಜೀವವುಳಿಯದು ಕಾಣೆ       ||೪೬೩||

ಕ್ಲೇಶವ ಬಿಡುತ ಮನದೊಳಗಂದು | ಶೇಷ |
ಬಂದನೊ ಇಲ್ಲವೊ ತಿಳಿಯದು |
ಕೇಶವ ತಾ ಬಾರನೆನುತಲಿ | ಶೇಷ |
ಬಭ್ರುವಾಹನಸಹಿತಲೆ ಬಂದು         ||೪೬೪||

ಭಾಮಿನಿ (ಅರ್ಧ)
ನಾಗರಾಜನ ಕಾಣುತಬಲೆಯ |
ರಾಗ ಕ್ಲೇಶವ ಬಿಟ್ಟು ನಡೆದರು |
ಬಾಗಿ ಪೊಡವಂಟಾತ್ಮಜನ ಬಿಗಿದಪ್ಪಿ ಶೋಕದಲಿ ||

ರಾಗ ಆನಂದಭೈರವಿ ಏಕತಾಳ
ಬಂದನೆ | ಶೇಷ | ಬಂದನೆ ||
ಬಂದನೆ ಶೇಷಾಂಘ್ರಿಗೆರಗಿ | ನಂದನೆಯರು ದುಃಖದಿ ||  ಬಂದನೆ   || ಪ ||

ತಂದೆ ಲಾಲಿಸಯ್ಯ ಪಾರ್ಥನ | ಕಂದ ಕೈ ಮಾಡಿದ ಶಿರವು |
ತೋರದು | ಕಯ್ಗೆ | ಸೇರದು                      ||೪೬೫||

ಮುತ್ತಿ ಕಾದಿದ್ದೆವು ಪೆಣನ | ಸುತ್ತಲೂ ದೀಪಗಳಿಂದ |
ಒಯ್ದರು | ಬಾಯ | ಹೊಯ್ದರು                    ||೪೬೬||

ಇಷ್ಟಾದ ಮೇಲೆಮ್ಮ ರಮಣ | ನೊಟ್ಟಿಗೆ ಸುಡುವಂತೆ ಕಾಯ |
ಬಿಡುವೆವು | ಅಗ್ನಿಗೆ | ಕೊಡುವೆವು                 ||೪೬೭||

ಭಾಮಿನಿ (ಅರ್ಧ)
ಭಂಗವನು ಕಾಣುತ್ತಲಾ ಚಿ |
ತ್ರಾಂಗದೆಯ ಪಿಡಿದೆತ್ತಿ ಲೂಪಿಯ |
ಕಂಗಳುದಕವನೊರಸಿ ತಾನಿಂತೆಂದ ಫಣಿರಾಜಾ ||

ರಾಗ ಮಧ್ಯಮಾವತಿ ತ್ರಿವುಡೆತಾಳ
ಮಗಳೆ ಮರುಗುವುದೇಕೆ ಸುಮ್ಮನೆ |
ಪಗೆಯವರು ಕೊಂಡೊಯ್ದರಾಯಿತೆ |
ನಗಧರನು ತರಿಸಿತ್ತು ನಿನ್ನಯ |
ಮೊಗಕೆ ಮಂಗಳ ಮಾಳ್ಪನು          ||೪೬೮||

ಮನುಜನೇ ಮಾರುತಿ ಸಹೋದರ |
ವನಜನೇತ್ರನ ಪ್ರತಿಶುಭಾಕರ ||
ದನುಜಹರನೀಕ್ಷಿಸದೆ ತನ್ನಯ |
ಅನುಜೆಯಾಳ್ದನ ಬಿಡುವನೆ ||೪೬೯||

ಬಾಲೆ ನಿನ್ನಾತ್ಮಜನು ಬಿಡುವನೆ |
ಕಾಲನಂದದಿ ತರಿದು ಫಣಿಗಳ ||
ಸೋಲಿಸೆಮ್ಮಯ ಮಣಿಯ ಕೊಂಡನು |
ಲೋಲನಾಭನ ಕರುಣದಿ   ||೪೭೦||

ಭಾಮಿನಿ
ಇಂತು ನುಡಿದುದ ಕೇಳಿ ಫಲುಗುಣಿ |
ಯಂತರಂಗವ ತಿಳಿದು ಕರ್ಣಜ |
ಕೌಂತೆಯರ ಜೀವಿಸುವೆನೀ ಕ್ಷಣಕೆಂದು ಗರ್ಜಿಸಿದ ||
ಕುಂತಿ ಗಜಪುರದೊಳಗೆ ಕಂಡಳು |
ಕೌಂತೆಯರು ಮಡಿದಂತೆ ಸ್ವಪ್ನವ |
ನಂತಕಾತ್ಮಜ ಕೃಷ್ಣ ಭೀಮಾದಿಗಳಿಗುಸಿರಿದಳು           ||೪೭೧||

ರಾಗ ಕಲ್ಯಾಣಿ ಅಷ್ಟತಾಳ
ಕಂಡೆ ಕನಸಿನೊಳು | ಶ್ರೀಕೃಷ್ಣನೊಲಿದು | ಖಂಡಿತವನು ಪೇಳು ||
ದಂಡ ಧರನ ದೇಶಕಾಗಿ ಕತ್ತೆಯನೇರಿ |
ಖಂಡಲಾತ್ಮಜ ಪೀತವಸನವನುಟ್ಟುದ || ಕಂಡೆ     || ಪ ||

ದಾಸಣಕುಸುಮಮಾಲೆ | ಕಂಠದೊಳಿಟ್ಟು |
ಪೂಸಿ ಗೋಮಯ ಮೆಯ್ಯೊಳು ||
ಸೂಸಿ ತೈಲವ ಪಣೆಯೊಳಗೆ ಮೃತ್ತಿಕೆ ಬೊಟ್ಟು |
ವೇಷವ ಮರೆಸಿದ ಫಲುಗುಣನು  || ಕಂಡೆ     ||೪೭೨||

ಒಡಲುರಿವುತಿದೆನ್ನಯ ಮೆಯ್ಯ | ಮಮಕಾರದಿ |
ಸುಡುವುತಿದ್ಯಾತಕಯ್ಯ ||
ಮಡದಿ ಸುಭದ್ರೆ ಕಂಗಳ ನೀರಲಪಜಯ |
ಕಡಲಶಯನ ಕೇಳುತಲಂಜದಿರೆಂದ || ಕಂಡೆ ||೪೭೩||

ಭಾಮಿನಿ (ಅರ್ಧ)
ಇಂತು ಸ್ವಪ್ನದ ಬಗೆಯನೆಲ್ಲವ |
ಕುಂತಿ ಪೇಳುತಲಿರಲು ಧರ್ಮಜ |
ಚಿಂತೆಯಿಂದಲಿಯಳುತ ನುಡಿದನು ಮತ್ತೆ ಮುರಹರಗೆ ||