ಭಾಮಿನಿ
ಧಾರಿಣೀಪತಿ ಕೇಳು ಕರ್ಣಜ |
ವೀರ ಪಾರ್ಥರು ಸ್ಮರಿಸೆ ಕೃಷ್ಣನ |
ಭೂರಿ ವಾದ್ಯದ ರವದಿ ಮಂಗಲವೆಸೆದುದಾ ಕ್ಷಣಕೆ ||
ವಾರಿಧಿಯ ಘೋಷದಲಿ ಮೊಳಗಿತು |
ಮಾರನಯ್ಯನ ಪಾಂಚಜನ್ಯವು |
ತೋರೆ ಪೂಮಳೆಗರೆದರಂಬರದಿಂದ ಸುರವರರು       ||೪೮೮||

ರಾಗ ಭೈರವಿ ತ್ರಿವುಡೆತಾಳ
ಭೀಮ ಬಿಗಿದಪ್ಪಿದನು | ಪಾರ್ಥ ಕರ್ಣಿಯ ನಿ |
ಸ್ಸೀಮತನಕೆವೊಪ್ಪಿದನು                      || ಪ ||

ಹಿಂದೆ ದ್ರೋಣಭೀಷ್ಮರ | ಕೊಂದ ಪಾತಕವ ಗೋ |
ವಿಂದನು ಪರಿಹರಿಸಿ | ಬಭ್ರುವಾಹನ |
ನಿಂದ ಮಣಿಯ ತರಿಸಿ |
ನಿನ್ನ ಶಿರವ ಕದ್ದ ಫಣಿಯ |
ಕೊಂದು ಕರುಣಿಸಿದನು ಪ್ರಾಣ        ||೪೮೯||

ಇನ್ನು ಅಂಜದಿರೆಮ್ಮ | ಯಜ್ಞಕೆ ತೊಡರಿಲ್ಲ |
ಮುನ್ನ ಪಾಪ ತೀರಿದುದಶ್ವಮೇಧದಿ |
ಖಿನ್ನನಾಗದಿರಿದಕೆ | ದೇವಕಿ ಕುಂತಿಯ |
ರನ್ನು ಮನ್ನಿಸು ಬೇಗದಿ |
ತನುಜನೀತನು ನಿನಗೋಸುಗ |
ಪೋಗಿ ಸವರಿದನು ಫಣಿಕುಲ          ||೪೯೦||

ಭಾಮಿನಿ (ಅರ್ಧ)
ವಾತಜನು ನುಡಿಯಲ್ಕೆ ಫಲುಗುಣ |
ಮಾತನಾಡದೆ ಸುಮ್ಮನಿರುತಿರೆ |
ಮಾತೆ ಕುಂತಿಗೆ ಕಂಡು ನಮಿಸಿದ ಭಾವ ಭಕ್ತಿಯಲಿ ||

ರಾಗ ಶಂಕರಾಭರಣ ಏಕತಾಳ
ಮಂದಗಮನೆ ಕುಂತಿ ಕರ್ಣ | ನಂದನನರ್ಜುನರ ಮೋಹ |
ದಿಂದ ಬಿಗಿದಪ್ಪಿ ಮುದ | ದಿಂದ ಮುದ್ದಿಸಿ ||
ಕಂದ ನಿದ್ರೆಯೊಳಗೆ ನಾನು | ಒಂದು ಸ್ವಪ್ನವನ್ನು ಕಂಡೆ |
ಬೆಂದೊಡಲನರಸುತಾಗ | ಬಂದೆನಿಲ್ಲಿಗೆ        ||೪೯೧||

ಮಕ್ಕಳ ಮಣಿ ಬಾರೆಂದು | ತಕ್ಕವಿಸಿ ಮೊಮ್ಮಗನ |
ಸೊಕ್ಕಿ ಕಳುಹಿದೆ ನಿನ್ನ | ಸಂಗರದೊಳು ||
ಚಿಕ್ಕ ಪ್ರಾಯದಿ ನೀ ಕಾದಿ | ದುಃಖ ತರಿಸಿದೆ ಎನಗೆ |
ಅಕ್ಕರಿಂದೆಬ್ಬಿಸಿದನು | ರಕ್ಕಸಾಂತಕ            ||೪೯೨||

ಭಾಮಿನಿ
ಇಂತು ಸುತನಿಗೆ ಬುದ್ಧಿ ಹೇಳುತ |
ಕುಂತಿಯಿರುತಿರಲಾ ಯಶೋದಾ |
ಕಾಂತೆ ದೇವಕಿಯರನು ಕಾಣುತ ವಿಜಯ ಪೊಡವಂಟ ||
ಕಂತುಜನಕನ ಪಾಂಚಜನ್ಯಕೆ |
ದಂತಿ ಹಯ ಮಾರ್ಬಲವು ಸಹಿತಲೆ |
ಚಿಂತೆಯನು ಪರಿ ಹರಿಸಿಯೆದ್ದುದು ಕೃಷ್ಣಪದಕೆರಗಿ       ||೪೯೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಉರಗರಾಜನಿಗೆರಗಿಯರ್ಜುನ | ನೆರೆದ ಜನರಿಗೆ ಕರವ ಮುಗಿದನು |
ಚರಣಕಾನತನಾಗಿ ಕೃಷ್ಣಗೆ | ಸ್ಮರಿಸಿ ಪೇಳ್ದ     ||೪೯೪||

ದೇವ ಗೆಲಿದೆನು ದೇಶ ದೇಶದ | ರಾಯರನು ನಿಮ್ಮಡಿಯ ನೆನೆವುತ |
ಮಾಯಕದಿ ಮಣಿಪುರದೊಳವಶಕು | ನಾಯಿತೆನಗೆ     ||೪೯೫||

ಕಡುಹಿನಿಂ ಭಟ ಯಜ್ಞತುರಗವ | ತಡೆದು ಎನ್ನೊಳು ಚರಣಕೆರಗಿದ |
ಕಡೆಗೆ ಸುತನಲ್ಲೆಂದು ಜರೆಯಲು | ಪಿಡಿದುಸಮರ       ||೪೯೬||

ಧುರವ ದುಃಖವ ಪೇಳಲರ್ಜುನ | ಮುರಹರನು ಕೇಳುತ್ತ ಕರುಣದಿ |
ವರದಹಸ್ತದಿ ಮೆಯ್ಯ ಗಾಯವ | ತಡವರಿಸಲು            ||೪೯೭||

ಸುರನದಿಯ ಶಾಪದಲಿ ಆಯಿತು | ಪರಿಭವವು ನಿನಗೆಂದು ತಿಳುಹಿಸಿ |
ತರುಣನಲಿ ತಪ್ಪಿಲ್ಲೆನುತ ತೋ | ರ್ದರಸಿಯರನು        ||೪೯೮||

ರಾಗ ಮಧ್ಯಮಾವತಿ ಏಕತಾಳ
ನಗರವನಿತ್ತಲಂಕರಿಸೆ ಪಾರ್ಥಜನು |
ನಗಧರಾರ್ಜುನರಿಗೆಯಡಿಗೆರಗಿದನು ||೪೯೯||

ತೆರಳಬೇಕೆನ್ನರಮನೆಗೆಂದು ಸ್ತುತಿಸೆ |
ದುರುಳಮರ್ದನ ಫಲುಗುಣ ಶೇಷರ್ ಗಮಿಸೆ ||೫೦೦||
ದೇವಕಿಕುಂತಿಯಶೋದೆಯರಂದಣದಿ |
ಭಾವೆ ಚಿತ್ರಾಂಗದೆ ಲೂಪಿಯರ್ ಮುದದಿ      ||೫೦೧||

ದ್ವಿಪದಿ
ವಸುಧೀಶ ಮೊಳಗಿದವು ಮಂಗಲದವೊಸಗೆ |
ಮಸಗಿದವು ಭೇರಿ ವಾದ್ಯಗಳೆಂಟು ದೆಸೆಗೆ     ||೫೦೨||

ಕಲಶಗನ್ನಡಿ ಪಿಡಿದನೇಕದಂದದಲಿ |
ಲಲನೆಯರು ಸೇಸೆ ಪೊಂಗಲಶ ಚಂದದಲಿ    ||೫೦೩||

ಬೋವತನದೋರಿದನು ಕೃಷ್ಣ ರಥದೊಳಗೆ |
ದೇವನಿಕರವು ಕಂಡು ದುಂದುಭಿಯ ಮೊಳಗೆ ||೫೦೪||

ಮಣಿಪುರದ ಮಂತ್ರಿ ಪರಿವಾರ ಪ್ರಜೆ ಕಂಡು |
ನಳಿನಾಕ್ಷಪಾರ್ಥರಿಗೆಯೆರಗಿ ಇದಿರ್ಗೊಂಡು    ||೫೦೫||

ರಾಗ ಕಾಪಿ ಅಷ್ಟತಾಳ
ಬಂದರು ನರನಾರಾಯಣರು | ನಲ |
ವಿಂದಲಿ ಬಭ್ರುವಾಹನ ಮಹಾರಥರು            ||೫೦೬||

ತೋರಣ ಕುರುಜು ಮೇರ್ವೆಯಲಿ | ಮಂಗ |
ಳಾರತಿಯನು ಕೊಂಡು ಕೇರಿಕೇರಿಯಲಿ        ||೫೦೭||

ಪುರದ ಶೃಂಗಾರವ ನೋಡಿ | ಮೆಚ್ಚಿ |
ಮುರಹರ ಬಭ್ರುವಾಹನನ ಕೊಂಡಾಡಿ          ||೫೦೮||

ತೇರನಿಳಿದು ಅರಮನೆಗೆ | ಯದು |
ವೀರಾರ್ಜುನರು ತೆರಳಿದರ್ ಸಿಂಹಾಸನಕೆ     ||೫೦೯||

ಭಾಮಿನಿ
ಏರಿ ಸಿಂಹಾಸನವರ್ಜುನ |
ಮಾರನಯ್ಯನು  ಸಹಿತ ಕುಳ್ಳಿರೆ |
ವೀರ ಪಾರ್ಥಜ ಚರಣಕಾನತನಾಗುತಿಂತೆಂದ ||
ಭಾರ ನಿಮಗಿದು ಸಕಲ ರಾಜ್ಯ ವಿ |
ಚಾರ ತನಗಿಲ್ಲೆನಲು ಸುತನೊಳು |
ಮಾರುವುತ್ತರ ಕೊಡದಿರನಿಲಜನೆಂದನನುಜನಿಗೆ         ||೫೧೦||

ರಾಗ ಕೇದಾರಗೌಳ ಅಷ್ಟತಾಳ
ತಮ್ಮ ಈ ಪಂಥವು ತನಯನೊಳೇತಕೆ | ಧರ್ಮವಲ್ಲದು ನಮಗೆ ||
ಒಮ್ಮೆ ಪೇಳಿದ ಸುರನದಿಯಿತ್ತ ಶಾಪವೆಂ | ದೆಮ್ಮೊಳು ದನುಜಾರಿ          ||೫೧೧||

ಮನ್ನಿಸು ಮಗನನು ಸತಿಯರ ಕೂಡಿಕೊ | ನಿರ್ಣಯ ನುಡಿಗಳಿವು ||
ಇನ್ನು ಇದಕೆ ಮರುಳಾಗದಿರೆನುತಲಿ | ಪನ್ನಗಪತಿ ನುಡಿದ         ||೫೧೨||

ವಾಸುದೇವನ ವಿನಯೋಕ್ತಿಯ ಮರೆಯದೆ | ಶೇಷನಂದನೆಯರನು ||
ಈ ಕ್ಷಣ ಕರೆಸೆಂದು ಕುಂತಿ ದೇವಕಿ | ಯಶೋದೆಯರು ಪೇಳ್ದರು            ||೫೧೩||

ಭಾಮಿನಿ (ಅರ್ಧ)
ಏಸು ಪೇಳ್ದರು ಕೇಳದಿರ್ಪನು |
ರೋಷದಲಿ ಕಲಿ ಪಾರ್ಥ ಸುತನೊಳು |
ಸೂಸಿ ದುಃಖದಿ ಬಭ್ರುವಾಹನ ಭೀಮನಡಿಗೆರಗಿ ||

ರಾಗ ತುಜಾವಂತು ಝಂಪೆತಾಳ
ಜಯ ಜಯ ಮಹತಾತ | ಪವನಸಂಜಾತ   || ಪ ||

ಇನ್ನು ಕೊರತೆಯ ನಾನು | ಧರಿಸಿಯಿರಲಾರೆನಗ್ನಿ |
ಗೆನ್ನ ಹರಚಿಸಿದರೆ | ಯಂದು ಬಿಡದೆ             ||೫೧೪||

ಚಂಡ ಶೇಷನ ಸುತೆಗೆ | ಜನಿಸಿ ಹಿರಿಯರ ಕಾಣೆ |
ಕಂಡೆ ನಿಮ್ಮಯ ಚರಣ | ಕೊಡಿಸೆನಗೆ ಮರಣ            ||೫೧೫||

ಮಾತೆ ಮಂತ್ರೀಶರನು | ಪ್ರೀತಿಯಿಂದಲಿ ನಡೆಸು |
ಪಾತಕವ ಕಳೆವೆ ನಾ | ಪೋಗಿ ಹಿಮಾಚಲಕೆ  ||೫೧೬||

ವಚನ
ಇಂತೆಂದು ಬಭ್ರುವಾಹನ ನುಡಿಯಲಾಗಿ ಭೀಮಸೇನನೇನೆಂದನು ಎಂದರೆ –

ರಾಗ ಕೇದಾರಗೌಳ ಅಷ್ಟತಾಳ
ತಪ್ಪನಾಡಿದೆ ಕಂದ ತರಣಿಪ್ರಕಾಶಕ್ಕೆ | ಬಪ್ಪುದೆ ಮುಗಿಲ ಬಣ್ಣ |
ಸರ್ಪಶಯನನಿರೆ ಶರಣರ್ಗೆ ಪಾಪವು | ಬಪ್ಪುದೇನೈ ಮರುಳೆ     ||೫೧೭||

ಒಂದು ಪಾತಕಕೆ ನೀ ಬೆದರುವೆ ನಾವು ನೂ | ರೊಂದು ಕೌರವರೊಳ್ ಕಾದಿ ||
ಕೊಂದೆವು ದ್ರೋಣ ಭೀಷ್ಮರ ಗಜಪುರಕಾಗಿ | ಮಂದರಧರನ ನಂಬಿ        ||೫೧೮||

ಕಂದ ನಿನ್ನೊಡನೆ ಸೋಲುವನೆ ಕೌಂತೇಯನು | ಸಿಂಧು ಮುನಿದುದಲ್ಲದೆ ||
ಇಂದು ಹರಿಯ ಸಭೆಯೊಳಗರ್ಜುನಗೆಯಶ್ವ | ಮುಂದಿಟ್ಟು ಪದಕೆರಗು      ||೫೧೯||

ಭಾಮಿನಿ
ಕಂದನೊಳು ಅರ್ಜುನಗೆ ಪ್ರೀತಿಯ |
ಪೊಂದಿಸಿತ್ತನು ಭೀಮ ವಾದ್ಯದ |
ಸಂದಣಿಯೊಳಶ್ವವನು ಅರ್ಜುನಗೆಂದುವೊಪ್ಪಿಸುತ ||
ಇಂದಿರೇಶನ ಪದಕೆರಗೆ ಭುಜ |
ಗೇಂದ್ರಭೂವರ ಹರುಷಬಟ್ಟನು |
ಬಂದು ಪೊಗಳುತ ಬಭ್ರುವಾಹನ ಕುಂತಿ ಹರಸಿದಳು   ||೫೨೦||

ಅಂತರಂಗವ ತಿಳುಹಿ ವಿಜಯನ |
ಚಿಂತೆಯನು ಬಿಡಿಸುತ್ತ ದೇವಕಿ |
ಕುಂತಿಯರು ಕರೆಸಿದರು ಲೂಪಿ ಚಿತ್ರಾಂಗದೆಯರನ್ನು  ||೫೨೧||

ರಾಗ ಕಲ್ಯಾಣಿ ಅಷ್ಟತಾಳ
ಪತಿಯ ಕಾಣುತ ಮುದದಿ | ಲೂಪಿ ಚಿತ್ರಾಂ | ಗದೆಯರು ಪದಕೆರಗಿ ||
ಸತಿಯ ಜನ್ಮದಿ ಬಂದು ಗತಿಯ ಕಾಣದೆ ನಾವು |
ಸತತ ನಿಮ್ಮಯ ಪಾದಗತಿಯ ನಂಬಿದೆವು    ||೫೨೨||

ಕಂದನ ಕುದುರೆಯಿತ್ತು | ಕರೆತಾರೆಂದು | ನಂಬಿಸಿ ಕಳುಹಿದೆವು ||
ಮುಂದ್ವರಿಯಿತು ಕಾರ್ಯ ಮೊದಲೆ ನಾವರಿಯದೆ |
ಸಿಂಧುಶಯನ ನಮ್ಮ ಸಿರಿಮುಡಿಗೊಲಿದ       ||೫೨೩||

ವಿಸ್ತರಿಸುವುದ್ಯಾಕೆಂದು | ವಿಜಯ ತನ್ನ | ಪತ್ನಿಯರನು ಮನ್ನಿಸಿ ||
ಹಸ್ತವಿಡಿದು ಸಿಂಹಾಸನದಿ ಸತಿಯರ್ ಸಹ |
ಸ್ವಸ್ಥದಿ ಕುಳ್ಳಿರೆ ಸಕಲರು ಸಭೆಯೊಳು           ||೫೨೪||

ಭಾಮಿನಿ (ಅರ್ಧ)
ಇಂತು ಫಲುಗುಣ ಸುತನ ಮನ್ನಿಸಿ |
ಕಾಂತೆಯರನೊಡಗೊಂಡು ಇರುತಿರೆ |
ಸಂತಸದಿ ಸಿಂಗರಿಸಿ ಸೇಸೆಯ ಬೇಗದಲಿ ತರಿಸಿ ||

ರಾಗ ಢವಳಾರ ಆದಿತಾಳ
ಪದ್ಮಿನಿಯರು ಪರಮವೈಭವದಲಿ |
ವಾದ್ಯವೀಣಾರವಸಂಗೀತದಿ |
ಮದ್ದಳೆಶ್ರುತಿತಾಳಗತಿಯಿಂದ ||
ಗತಿಯಿಂದಲಿ ಪಾರ್ಥನ ಹರಸುತ್ತ |
ಮುತ್ತಿನಾರತಿಯ ಬೆಳಗಿರೆ || ಶೋಭಾನೆ       ||೫೨೫||

ಧಾತ್ರಿಯೊಳತಿವೀರರ ಗೆಲಿದಗೆ |
ಕ್ಷತ್ರಿಯರ ಕುಲಸಂಜೀವಗೆ |
ಚಿತ್ತಜಪಿತಭಾವ ಫಲುಗುಣಗೆ ||
ಫಲುಗುಣಗೆ ಲೂಪಿ ಚಿತ್ರಾಂಗದೆಗೆ |
ರತ್ನದಾರತಿಯ ಬೆಳಗಿರೆ || ಶೋಭಾನೆ         ||೫೨೬||

ಜಾಣೆಯರತಿ ಹರುಷದಿ ನಡೆನುಡಿ |
ಕಾಣಿಸಿದರು ಮದನಮಂಟಪದೊಳು |
ಏಣಾಕ್ಷಿಯರಾಗ ಹರುಷದಿ ||
ಹರುಷದಿ ಕಮಲಾಕ್ಷಿಯರಿಗೆ |
ಕುಂಕುಮದಾರತಿಯ ಬೆಳಗಿರೆ || ಶೋಭಾನೆ  ||೫೨೭||

ಭಾಮಿನಿ (ಅರ್ಧ)
ಮತ್ತೆ ಮಂಗಲವೆಸಗಿ ವಿಜಯಗೆ |
ಯೆತ್ತಿ ಶೇಷಾರತಿಯ ಸತಿಯರು |
ಮತ್ತೆ ಭೂಸುರಸಂಕುಲವ ನೆರಹುತ್ತ ಮಣಿಪುರದಿ ||

ರಾಗ ಕಾಂಭೋಜಿ ಅಷ್ಟತಾಳ
ಧರೆಯಮರರು ಬಂದರಾಗ | ಕರೆಕರೆದು ಕೊಡುವ ಬೇಗ |
ನರನು ದಕ್ಷಿಣೆಯೆಂದು || ಧರೆಯಮರರು ಬಂದರಾಗ     || ಪ ||

ಛತ್ರ ಹೆಗಲೊಳಿಟ್ಟು ಶಾಲೆಯರ್ಧವನುಟ್ಟು |
ಹಸ್ತದಿ ಜಪಮಾಲೆ ಧರಿಸಿ ||
ಮಸ್ತಕದಲಿ ನಾಮವಿಟ್ಟು ಮೆಯ್ಯೊಳತಿ |
ಸ್ವಸ್ಥವಿಲ್ಲದೆ ದಂಡ ಹಸ್ತದಿ ಪಿಡಿದು || ಧರೆಯಮರರು    ||೫೨೮||

ಮೆಯ್ಯೊಳು ಗಂಧ ಕಸ್ತುರಿ ಜವ್ವಾಜಿಯ ಪೂಸಿ |
ಕಯ್ಯೊಳಗಿರ್ದ ಪುಸ್ತಕಗಳನು ||
ಅಯ್ಯ ಅಣ್ಣನ ವಂಟಿಜೋಡು ಕಿವಿಯೊಳಿಟ್ಟು |
ಮೆಯ್ಯು ಬಲಿಯದ ಚಿಕ್ಕ ಪ್ರಾಯದ ದ್ವಿಜರು || ಧರೆಯಮರರು   ||೫೨೯||

ವೇದಶಾಸ್ತ್ರವನೊಬ್ಬರೊಬ್ಬರಿಗೆ ಕಲಿಸುತ್ತ |
ಹಾದಿಯೊಳಗೆ ಬರಲಿವರೊಳಗೆಲ್ಲ ||
ಭೇದಭೇದದಿ ಆಶೀರ್ವಾದ ಎಚ್ಚರಿಸುತ್ತ |
ಮಾಧವಪ್ರಿಯರುಪಾಧ್ಯರು ಸುರರು || ಧರೆಯಮರರು ||೫೩೦||

ರಾಗ ಕೇದಾರಗೌಳ ಆದಿತಾಳ
ಆ ಸಮಯದಿ ವಾಸವಸುತ ಹರಿ ಬಭ್ರುವಾಹನರಿಗೆ |
ಕಾಂಚನವನು ನಿವಾಳಿಸಿದರು ಮತ್ತಾ |
ವಾಸುದೇವನ ಲೀಲೆಗೆ ಶೇಷ ಸಾವಿರ ಬಾಯಿಂದ |
ತೋಷದಲಿ ಪೊಗಳಿ ತನ್ನಾವಾಸಕಯ್ದಿದನು   ||೫೩೧||

ಮಜ್ಜನಗೆಯ್ದು ನಾರಿಯರ್ ಪ್ರಜ್ವಲಿಪಾಭರಣದಿಂದ |
ಕಜ್ಜಳ ಕುಂಕುಮದಿಂದ ಸಜ್ಜಾಗಿರಲು ||
ಅರ್ಜುನ ಕೃಷ್ಣ ಕರ್ಣಜರ್  ಮೂಜಗ ಭೂಪಾಲರಿಂಗೆ
ಭೋಜನವಧಿಕ ನಾನಾ ಕಜ್ಜಾಯದಿಂದ         ||೫೩೨||

ಇಂತಯ್ದು ದಿನದ ಮೇಲೆ ಕುಂತಿಯೊಳು ಕೃಷ್ಣ ನುಡಿದ |
ಅಂತಕಾತ್ಮಜನು ತಮ್ಮ ಚಿಂತಿಪನೆಂದು ||
ಕಾಂತೆ ಲೂಪಿ ಚಿತ್ರಾಂಗದೆ ಕುಂತಿ ದೇವಕಿ ಯಶೋದೆ |
ದಂತಿಪುರಕಾಗಿ ಭೀಮ ಮುಂತಾಗಟ್ಟಿದ        ||೫೩೩||

ಭಾಮಿನಿ (ಅರ್ಧ)
ತರುಣಿಯರ ಗಜಪುರಕೆ ಕಳುಹಿಸಿ |
ಮುರಹರನು ತಾನಿರಲು ಪಾರ್ಥನ |
ಧುರಕೆ ಬೆಂಬಲಮಾಗೆ ಬಭ್ರುವಾಹನನೊಳಿಂತೆಂದ ||

ರಾಗ ಮಾಧುಮಾಧವಿ ಏಕತಾಳ
ಬಭ್ರುವಾಹನ ನಿನಗೆ ಮೂಲೋಕದೊಳಗೆ |
ಒಬ್ಬರು ಸರಿಯುಂಟೆ ಸಂಗರದೊಳಗೆ           ||೫೩೪||

ಧರೆಯ ಕಪ್ಪವ ಕೊಂಡು ನರಗೂಡಿ ಮುನ್ನ |
ವರುಷವೊಂದರ ಮೇಲೆ ಪೂರ್ಣಾಹುದೆಜ್ಞ      ||೫೩೫||

ಪುರಕೆ ಮಂತ್ರಿಯನಿಟ್ಟು ಪಾಲಿಸೀ ರಾಜ್ಯ |
ಧುರಕೆ ಬೆಂಬಲವಾಗಿ ಬರುವೆಯ ಸಹಜ       ||೫೩೫||

ನಿನ್ನ ಪೂರ್ವಜರೆಂದು ನಿಜವನ್ನು ನೋಡು |
ಉನ್ನಂತ ಮಖದ ಊಳಿಗವನ್ನೆ ಮಾಡು        ||೫೩೬||

ಭಾಮಿನಿ
ಕೃಷ್ಣನಾಡಿದ ಮಧುರವಚನಕೆ |
ತುಷ್ಟನಾಗುತ ಬಭ್ರುವಾಹನ |
ಸೃಷ್ಟಿಯೀರಡಿ ಮಾಡಿ ತೋರಿದ ಪದಕೆ ಪೊಡಮಟ್ಟು ||
ಸೃಷ್ಟಿಯೊಡೆಯನೆ ದೇವ ನಿನ್ನನು |
ಬಿಟ್ಟವರಿಗಿನ್ನುಂಟೆ ಇಹ ಪರ |
ಇಷ್ಟ ಮೂರುತಿಯೆನ್ನ ಕಾಯೆಂದೆರಗಿ ನುತಿಗೆಯ್ದ         ||೫೩೭||

ರಾಗ ರೇಗುಪ್ತಿ ಏಕತಾಳ
ಕೃಷ್ಣ ಜಯ ಜಯ ಲೋಕನಾಯಕ | ಭಕ್ತ ಸಹಾಯಕ ||
ಕೃಷ್ಣ ಜಯ ಜಯ ಲೋಕನಾಯಕ                 || ಪ ||

ಆದಿಮೂರುತಿ ವಟಪತ್ರಶಯನನೆ |
ವೇದ ಸಿದ್ಧವಿಶ್ರುತರೂಪನೆ ||
ಸಾಧಕನೆ ಸಜ್ಜನರಘನಾಶನ |
ಮಾಧವ ಗುಣನಿಧಿ ಮೂಲೋಕೇಶನೆ ||  ಕೃಷ್ಣ ಜಯ ಜಯ       ||೫೩೮||

ವನಜನಾಭನೆ ನಿನ್ನನುಜೆಯನಿಂದ್ರ |
ತನುಜನಿಗಿತ್ತು ಮೈದುನನಾಗಿ ||
ಮುನಿಜನಗಳಿಗಗಗೋಚರ ವಸ್ತುವೆ |
ಮನುಜಲೀಲೆಯನು ತೊಡಗಿಹೆಯೇತಕೆ || ಕೃಷ್ಣ ಜಯ ಜಯ    ||೫೩೯||

ಎನ್ನ ಸಹಾಯ ಯಮಜಾತನಿಗೆಂದರೆ |
ಸಮ್ಮತಪಡುವರೆ ಸುರವರರು ||
ನಿನ್ನಡಿಕಮಲಪದವಿಗೆ ಸಲುವರೆ |
ಉನ್ನತ ಭವಭಯವಿನ್ನಿಹುದೆ || ಕೃಷ್ಣ ಜಯ ಜಯ                    ||೫೪೦||

ಭಾಮಿನಿ (ಅರ್ಧ)
ಚಿತ್ರಾಂಗದೆನಂದನನ ಮುಕುಟವ |
ನೆತ್ತಿ ತಕ್ಕಯಿಸುತ್ತ ಕೃಷ್ಣನು |
ಮತ್ತೆ ವಿಜಯನ ಮೊಗವ ನೋಡುತಲೆಂದನೀ ಹದನ ||

ರಾಗ ಮಾರವಿ ಏಕತಾಳ
ಏಕೆ ನೀ ನೋಳ್ಪೆ ಇಂದ್ರಜಾತ | ಲೋಕಪ್ರಖ್ಯಾತ  || ಏಕೆ ||   || ಪ ||

ಮಖತುರಗ ವಶವಾಯ್ತೆ ಸುಖದಿಂದ ಪಡೆ ಸಹಿತ |
ದಕ್ಷಿಣಮುಖವಾಗಿ ಪೊರಡು ||
ಅಖಿಳ ಪ್ರದ್ಯುಮ್ನನಿರುದ್ಧ ಶೇಷನ ಮೊಮ್ಮ ವಿ |
ವೇಕದೊಳು ಬರುವರು || ಏಕೆ        ||೫೪೧||

ಮಾತ ಕೇಳುತ ವೃಷಕೇತು ಹಂಸಧ್ವಜ ವಿ |
ಖ್ಯಾತ ಸಾತ್ಯಕಿ ನೀಲಕೇತು ||
ಪ್ರೀತಿಯಿಂದಲಿ ಯೌವನಾಶ್ವರು ಸಹಿತಘ |
ನಾಥೇಶನೆಡೆಗೆ ಬರೆ ಫೋಷದಲಿ || ಏಕೆ        ||೫೪೨||

ಚೇತನಾತ್ಮಕನು ಅರ್ಜುನ ಸಾರಥಿತ್ವವ |
ನಾಂತು ಮಂಡಿಸಿದನು ರಥದಿ ||
ಮೂಜಗ ಬೆದರಲು ದೃಡ ಶಂಖಧ್ವನಿ |
ದುರ್ಜನರೆದೆಯ ನಡುಗಿಸಿತು || ಏಕೆ            ||೫೪೩||

ವಾರ್ಧಕ
ಅರಸ ಕೇಳ್ ಕೃಷ್ಣನಪ್ಪಣೆಯಿಂದ ಪ್ರದ್ಯುಮ್ನ |
ಪೊರಡಿಸುತ ಹಯಮೇಧ ತುರಗ ಮಾರ್ಬಲ ಸಹಿತ |
ಬರುವ ಸಮಯದಿ ಶೇಷನಳವಳಿಯೆ ದಿಗ್ಗಜಗಳ್ ಕಳವಳಿಸಿ ಕಂಪಿಸಲ್ಕೆ ||
ತುರಗಮಂ ಚಪ್ಪರಿಸಿ ಕೃಷ್ಣ ರಥ ಹಾರಿಸುತ |
ನರಗೆ ಕರ್ಪುರವೀಳ್ಯ ಮಡಿದಿತ್ತ ಸಂಭ್ರಮದಿ
ಸುರರು ಪುಷ್ಪದ ವೃಷ್ಟಿಯಂ ದುಂದುಭಿಯ ರಭಸದಿಂ ಹರಿಯ ಮೇಲ್ಗರೆದರು         ||೫೪೪||

ಭಾಮಿನಿ
ಕೇಳು ಜನಮೇಜಯನೆ ಮುರರಿಪು |
ಲೀಲೆಯಿಂದಲಿ ವರುಷದುಂಬಿದ |
ಮೇಲೆ ಯಜ್ಞವ ಮುಗಿಸಿ ಸುಖದಿಂ ರಾಜ್ಯ ಪಾಲಿಸುತ ||
ಶ್ರೀಲತಾಂಗಿಯ ರಮಣ ಕೃಷ್ಣನ |
ಲೀಲೆಯಿಂದಿರುತಿರ್ದರೆನುತ ಸು |
ಶೀಲ ಜನಮೇಯಗೆ ವೈಶಂಪಾಯಮುನಿ ಪೇಳ್ದ          ||೫೪೫||

ವಾರ್ಧಕ
ಇಂತೆಂಬ ಕಥೆಯನುಂ ಪೇಳ್ದೆಕ್ಷಗಾನದಿಂ |
ತಾಂ ತಿಳಿದುಸಿರ್ದೆ ಶ್ರೀ ಕೃಷ್ಣನ ಅನುಜ್ಞೆಯಿಂ |
ಇಂತಿದಂ ಲಾಲಿಸುತ ಬಲ್ಲ ಸುಜನರು ತಿದ್ದಿ ಮೆರೆಸುವುದು ಈ ಕವಿತೆಯ ||
ಮಂಗಲವು ಶ್ರೀಧರಗೆ ವಾಸುದೇವನಿಗೆ ಜಯ |
ಮಂಗಲವು ಪಾಂಡವರನೆತ್ತಿ ಸಲಹುವಗೆ ಜಯ |
ಮಂಗಲವು ವಾರಿಧಿಯ ತಡಿಯವುಡುಪಿಯಲಿ ನೆಲಸಿರುವ ಶ್ರೀಕೃಷ್ಣನಿಂಗೆ ||೫೪೬||

ರಾಗ ಢವಳಾರ ಆದಿತಾಳ
ಮಂಗಲಂ ಮಂಗಲಂ | ಮಾಧವಗೆ |
ಮಂಗಲಂ ಮಂಗಲಂ              || ಪ ||

ಮತ್ಸ್ಯಗೆ ಕೂರ್ಮಗೆ ವರಹಗೆ ಮಂಗಲಂ |
ಉತ್ಸವಮೂರುತಿ ನರಸಿಂಹನಿಗೆ ಜಯ |
ಮಂಗಲಂ ಮಂಗಲಂ       ||೫೪೭||

ವಾಮನ ಭಾರ್ಗವ ರಾಮಗೆ ಮಂಗಲಂ |
ಕಾಮನ ಪೆತ್ತವ ಕೃಷ್ಣಯ್ಯನಿಗೆ ಜಯ |
ಮಂಗಲಂ ಮಂಗಲಂ       ||೫೪೮||

ಬತ್ತಲೆ ಬೌದ್ಧಗೆ ಕಲ್ಕಿಗೆ ಮಂಗಲಂ |
ಉತ್ತಮ ತಿರುಪತಿ ವೆಂಕಟೇಶಗೆ ಜಯ |
ಮಂಗಲಂ ಮಂಗಲಂ       ||೫೪೯||

ಯಕ್ಷಗಾನ ಬಭ್ರುವಾಹನ ಕಾಳಗ ಮುಗಿದುದು