ಭಾಮಿನಿ
ಓಲಗವನಿತ್ತಖಿಳ ರಾಯರ |
ಜಾಲವನು ಮನ್ನಿಸುತ ಫಲುಗುಣಿ |
ಮೂಲಮಂತ್ರಿ ಸುಬುದ್ಧಿಯೊಡನಿಂತೆಂದನೀ ಹದನ ||
ಕೋಲನಾಯಕರಾದ ದೊರೆಗಳು |
ಮೇಳವಿಸಿಕೊಂಡಿರಲಿ ಧರಣೀ |
ಪಾಲಕರ ಕುದುರೆಂಬುದೇನಾಯ್ತೆಂದು ಬೆಸಗೊಂಡ ||೨೨೯||
ರಾಗ ಮಾರವಿ ಏಕತಾಳ
ಆರ ವಾಜಿ ನೋಡಿರಯ್ಯ | ವೀರ ಮಂತ್ರೀಶ ||
ಗಾರು ಆಗದಿರಿ ಕಂಡು | ಭೂರಿ ಮಾರ್ಬಲದ ದಂಡು ||
ಆರ ಮಾಜಿ ನೋಡಿರಯ್ಯ || ಪ ||
ಮಲ್ಲಭಟರೊಡಗೂಡಿ | ಮಸ್ತಕದ ಲಿಖಿತ ನೋಡಿ ||
ಬಲ್ಲಿದ ವಾಜಿಯನೆನ್ನ | ಬಳಿಗೆ ತಾರಯ್ಯ ಮುನ್ನ ||೨೩೦||
ತಂದು ಹಯವ ಮಂತ್ರೀಶನು | ಇಂದ್ರಜಾತತನಯನ ||
ಮುಂದೆ ನಿಲಿಸಿ ಮಸ್ತಕದಿ | ಬಂಧಿಸಿರುವ ಲಿಖಿತ ಬಿಚ್ಚಿ ||೨೩೧||
ಭಾಮಿನಿ (ಅರ್ಧ)
ಪತ್ರಿಕೆಯ ಕಲಿ ಬಭ್ರುವಾಹನ |
ನಿತ್ತು ಕರಣಿಕರೊಡನೆ ವಾಚಿಸೆ |
ವಿಸ್ತರಿಸಿ ಕೇಳಿದರು ಪರಿವಾರಾದಿ ನಾಯಕರು ||
ರಾಗ ತೋಡಿ ಅಷ್ಟತಾಳ
ಸೋಮವಂಶಜ ಸಾಧುಗುಣ ಧೀರ ಯಮಜಾತ |
ಭೀಮಬಲಾನ್ವಿತನು ||
ಭೂಮಿಗಧಿಕವಾದ ಭಟ ಮೂರು ಲೋಕದ |
ಭೂಮಿಪಾಲರೊಳ್ ಶ್ರೇಷ್ಠನು ||೨೩೨||
ಹಸ್ತಿನಪುರಪತಿ ಅಜವಿಷ್ಣುಹರಪ್ರೀತಿ |
ಸ್ವಸ್ಥದಿಂದಲಿ ಪಡೆದು ||
ವಿಸ್ತರದಲಿ ರಚಿಸಿದ ಯಜ್ಞಹಯವಿದು |
ಶಕ್ತಿಗಾರರು ಕಟ್ವುದು ||೨೩೩||
ರಾಗ ಆನಂದಭೈರವಿ ಅಷ್ಟತಾಳ
ಚಿತ್ರಾಂಗದೆಯ ನಂದನ | ಓಲೆಯ ನೋಡಿ ವಿ |
ಚಿತ್ರವಾಯಿತು ಎಂದನು ||
ಹಸ್ತಿನಾಪುರಪತಿಯೆನಗೆ ಒಡೆಯನಲ್ಲ |
ಸ್ವಸ್ತಿರವೇನು ಪಾಂಡವರು ತಾ ಶಿವನಂತೆ ||೨೩೪||
ಕರೆದು ಕಾವಲಿಗಟ್ಟಿದ | ಬಭ್ರುವಾಹನ |
ತುರಗ ಲಾಯದಿ ಕಟ್ಟಿದ ||
ಪರಮಂಡಲೀಕರ ನೆರಹಿ ಪಾರ್ಥನೊಡನೆ |
ಧುರಕೆ ನಿಲ್ಲುವುದೆಂದು ಒರೆದ ಮಂತ್ರೀಶಗೆ ||೨೩೫||
ಭಾಮಿನಿ (ಅರ್ಧ)
ದೇವಿ ಚಿತ್ರಾಂಗದೆಯ ದೂತಿಯು |
ಕೋವಿದಶ್ವವ ತಡೆದ ಪಾರ್ಥಿಯ |
ಠೀವಿಯನು ನೋಡುತ್ತ ಮರೆಯಲಿ ನಿಂದು ಭಯಗೊಂಡು ||
ರಾಗ ರೇಗುಪ್ತಿ ಅಷ್ಟತಾಳ
ತುರಗ ಲಿಖಿತ ದಾಳಿ | ತರುಣಿ ಕಟಕಿ ಕೇಳಿ |
ಅರಸಿಗರುಹಲೆಂದು | ಹರುಷದಿಂದಲಿ ಬಂದು ||೨೩೬||
ಮಾತೆಯೆನ್ನ ಬಿನ್ನಪವ | ಪ್ರೀತಿಯಿಂದ ಲಾಲಿಸವ್ವ |
ಭೂತಳೇಶರಿಂದುಕುಲ | ಜಾತರು ಧರ್ಮಾನುಜರಂತೆ ||೨೩೭||
ಯಾಗವ ರಚಿಸಿ ಕಪ್ಪ | ಕಾಗಿ ಹಯಗೊಂಡು ಪಾರ್ಥ |
ಸಾಗಿ ಬಂದ ನಮ್ಮ ಮೇಲೆ | ಸುಳ್ಳಲ್ಲ ಸುಗುಣಶೀಲೆ ||೨೩೮||
ಭಾಮಿನಿ (ಅರ್ಧ)
ಮಿತ್ರೆ ಕಟಕಿಯ ನುಡಿಯ ಕೇಳುತ |
ಪುತ್ರನನು ಕೋಪದಲಿ ಬಯ್ವುತ |
ಮತ್ತೆ ಚಿತ್ರಾಂಗದೆಯು ಕೇಳ್ದಳು ಅರ್ಜುನನ ಹದನ ||
ರಾಗ ಸಾವೇರಿ ಆದಿತಾಳ
ಅಹುದೆ ಎನ್ನಯ ರಮಣ | ಏ ಸಖಿಯೇ |
ಅಹುದೆ ಎನ್ನಯ ರಮಣ || ಪ ||
ಅಹುದೇನೆ ಪಾರ್ಥನೆಂಬವನ ಕಾಣದೆ ಬಲು |
ದಿನವಾಯಿತದರಿಂದ ಬಳಲಿ ಬೆಂಡಾದೆನು || ಅಹುದೆ || ಅ ||
ಚಂದ್ರಗಾವಿಯ ಶಾಲೆ | ಕೊಡುವೆ ನುಡಿ |
ಚಂದದಿಂದಲಿ ಬಾಲೆ |
ಇಂದ್ರನಂದನನಿದಿರಾಗಿ ಮಣಿಪುರಕೆ |
ಬಂದ ಸಕಲ ಸೇನೆಯಿಂದೆಂಬ ವಾರ್ತೆಯ || ಅಹುದೆ ||೨೩೯||
ಹಸ್ತಕಡಗವೀವೆ | ಪೇಳೆನಗದು |
ಸ್ವಸ್ಥದಿಂದಲಿ ಬಾಲೆ ||
ಹಸ್ತಿನಾಪುರಾಧೀಶ ಅರಿಗಳೆದೆಗಂಕುಶ |
ಸ್ವಸ್ತಿರವೇನೆ ಸಹಜಾತ ಬಂದಿಹ ಸೇನೆ || ಅಹುದೆ ||೨೪೦||
ವಚನ
ಇಂತೆಂದು ಚಿತ್ರಾಂಗದೆಯು ನುಡಿಯಲಾಗಿ ಸಖಿಯು ಏನೆಂದಳು ಎಂದರೆ –
ರಾಗ ತೋಡಿ ಏಕತಾಳ
ತಾಯೆ ಕೇಳ್ ಫಲುಗುಣನ | ಜಾಯೆಯೆಂದರಿಯದೆ |
ಆಯತಪ್ಪಿತು ಮುಂದು | ಪಾಯವೇನಿದಕೆ ||೨೪೧||
ಚಿತ್ರಾಂಗದೆಯೆ ನಿನ್ನ | ಪುತ್ರ ವಾಜಿಯ ಕಟ್ಟಿ |
ಮಂತ್ರಿಗೊರೆದ ಹರ | ನೇತ್ರಕೋಪದಲಿ ||೨೪೨||
ಸೇನೆಗಪ್ಪಣೆಕೊಟ್ಟು | ತಾನೆಯರ್ಜುನನೊಳ್ ಮುಂ |
ಜಾನೆ ನಿಲ್ಲುವ ಮರಿ | ಯಾನೆಕೇಳವ್ವ ||೨೪೩||
ಭಾಮಿನಿ (ಅರ್ಧ)
ಸಿಂಗರಿಸಿಯುರಗೇಂದ್ರನಂದನೆ |
ಯಂಗಜನ ಮದದಾನೆಯಂದದಿ |
ಅಂಗನೆಯರೊಡಗೂಡಿ ಬಂದಳು ಮಗನ ಪೊರೆಗಾಗಿ ||
ರಾಗ ದೇಶಿ ಅಷ್ಟತಾಳ
ನಾರಿ ಚಿತ್ರಾಂಗದೆ | ಬಂದಳ್ ಹರುಷದಿಂದ |
ಸಾರಸನೇತ್ರೆಯು ತನ್ನ | ಪುರುಷನ್ನ ಪೊಗಳುತ್ತ ||೨೪೪||
ಅಂದಣವಿಳಿದು ತಾಯಿ | ಗೊಂದಿಸೆ ಬಭ್ರುವಾಹನ |
ಕಂದನ ಕಾಣುತ ಕೋಪ | ದಿಂದ ಬಿಗಿದಪ್ಪಿದಳು ||೨೪೫||
ರಾಗ ನೀಲಾಂಬರಿ ತ್ರಿವುಡೆತಾಳ
ಮಗನೆ ನೀ ಮತಿಗೆಟ್ಟು ನಡೆವರೆ | ಕುಂತಿ |
ಮಗನ ವಾಜಿಯ ಕಟ್ಟಿ ತಡೆವರೆ ||
ಸೊಗಸೆ ಸಿಂಹನೊಡನೆ ವೃಷಭಗೆ | ಹಗೆ |
ಮಿಗುವರಿದರೆ ಬದುಕುವುದ್ಹೇಗೆ ||೨೪೬||
ವಾರಿಧಿ ಮಥಿಸೆ ಅಮೃತಕಾಗಿ | ವಿಷ |
ದೋರಿದಂತೆ ಪುಟ್ಟಿದೆ ಕಂದ ||
ವೀರ ಅರ್ಜುನನ ವೈಭವದಿಂದ | ಕರೆ |
ತಾರೆಲೋ ನಿನಗೆ ಒಳ್ಳಿತು ಕಂದ ||೨೪೭||
ಕಟ್ಟಾಳು ನರ ಮೂರುಲೋಕಕೆ | ಅಶ್ವ |
ಕೊಟ್ಟೊಡಂಬಡಿಸಿ ವಿವೇಕಕೆ ||
ಕೃಷ್ಣಮೈದುನನೊಳು ಛಲ ವ್ಯರ್ಥ | ನಿನ್ನ |
ದಿಟ್ಟತನಕೆ ಅಂಜುವನೆ ಪಾರ್ಥ ||೨೪೮||
ಮಂದಬುದ್ಧಿಯನು ನೀ ಮಾಡದೆ | ಮುಂದೆ |
ಕುಂದನೊಂದನು ನಮಗೆ ತಾರದೆ |
ತಂದೆಗೆರಗೊ ನೀ ವೈಭವದಿಂದ | ಕರೆ |
ತಂದು ಪಾದಕೆರಗೆಲೊ ಕಂದ ||೨೪೯||
ವಚನ
ಇಂತೀ ಚಿತ್ರಾಂಗದೆಯು ನುಡಿಯಲಾಗಿ ಬಭ್ರುವಾಹನನು ಏನೆಂದನು ಎಂದರೆ –
ರಾಗ ಕಾಂಭೋಜಿ ಏಕತಾಳ
ತಪ್ಪ ಪಾಲಿಸಿಕೊಂಬುದೆಲೆ ತಾಯೆ | ಎನ್ನ |
ಅಪ್ಪನೆಂದರಿಯದಾದೆನೆಲೆ ತಾಯೆ ||೨೫೦||
ಕ್ಷತ್ರಿಪಂಥಕಾಗಿ ನಾನು ಎಲೆ ತಾಯೆ | ಕೃಷ್ಣ |
ಮಿತ್ರನ ವಾಜಿಯ ತಡೆದೆನೆಲೆ ತಾಯೆ ||೨೫೧||
ತಾತನೆಂಬುದೆಂತು ಪೇಳು ಎಲೆ ತಾಯೆ | ಅವನ |
ಜಾತನು ನಾನೆಂಬುದೆಂತು ಎಲೆ ತಾಯೆ ||೨೫೨||
ಬುದ್ಧಿಯೇನಿದಕೆ ಪೇಳು ಎಲೆ ತಾಯೆ | ಮುಂದೆ |
ಸಿದ್ಧಿಯಾಗುವಂತೆ ಮಾಡು ಎಲೆ ತಾಯೆ ||೨೫೩||
ವಚನ
ಇಂತೆಂದು ಬಭ್ರುವಾಹನನು ನುಡಿಯಲಾಗಿ ಚಿತ್ರಾಂಗದೆಯೇನಂದಳು ಎಂದರೆ –
ರಾಗ ತೋಡಿ ಏಕತಾಳ
ಕಂದ ಕೇಳೆಲೊ ಪಾರ್ಥ | ನಂದು ತೀರ್ಥಯಾತ್ರೆಗೆ |
ಬಂದು ಕೂಡಿದ ನೆನ್ನ | ಮಿಂದಾರು ದಿವಸ ||೨೫೪||
ಇಂದುಕುಲಜನೊಲಿ | ದಂದು ಗರ್ಭವ ತಾಳ್ದೆ |
ತಂದೆಗೊಪ್ಪಿಸು ರಾಜ್ಯ | ವೆಂದಳಾ ಜನನಿ ||೨೫೫||
ನಡನಡುಗಿ ಬಭ್ರುವಾಹನ | ನುಡಿಯ ಕೇಳುತ ಮಾತೆ |
ಯಡಿಗೆರಗಿ ಬೀಳ್ಗೊಂಡ | ಕಡು ಹರುಷದಿಂದ ||೨೫೬||
ಭಾಮಿನಿ (ಅರ್ಧ)
ಜನನಿಯತ್ತಲು ಕಳುಹಿ ಫಲುಗುಣಿ |
ಮನದಿ ಹರುಷವ ತಾಳಿ ತನ್ನೊಳು |
ವಿನಯದಿಂ ಮಂತ್ರಿಯನು ಕರೆದಿಂತೆಂದನೀ ಹದನ ||
ರಾಗ ತೋಡಿ ಅಷ್ಟತಾಳ
ಏನಯ್ಯಾ | ಮಂತ್ರಿ | ಏನಯ್ಯಾ ||
ಏನಯ್ಯ ಲೂಪಿಚಿತ್ರಾಂಗದೆಯರ ಮಾತು |
ಆ ಪಾಂಡುತನಯನೆನಗೆ ತಾತನಂತೆ || ಏನಯ್ಯಾ || ಪ ||
ಭಾಷೆಗುರುತವಿತ್ತು ತೆರಳಿದನಂದು ||
ವಾಸವಸುತ ಯಜ್ಞನೆವದಿಂದ ಬಂದು ||
ಬೇಸರಿಲ್ಲದೆ ಬೇಗ ಕರೆದು ತಾರೆಂದು |
ಆ ಶೇಷಸುತೆಯೆನಗರುಹಿದಳಿಂದು || ಏನಯ್ಯಾ ||೨೫೭||
ಮೊದಲೆ ತುರಗ ಕಟ್ಟಿದೆನು ಮನಕಾಗಿ |
ಸದರ ನಿಲ್ಲುವುದಕ್ಕೆ ಬೆದರಿ ನಾ ಪೋಗಿ ||
ಪದಕೆರಗಿದರೆ ಹಯವು ಮುಂತಾಗಿ |
ಚದುರ ಕೇಳುವನಲ್ಲವಿದಕೆ ಲೇಸಾಗಿ || ಏನಯ್ಯಾ ||೨೫೮||
ರಾಗ ಭೈರವಿ ಝಂಪೆತಾಳ
ರಾಜರಾಜಾಧೀಶ | ಅರಿತರೆಮಗದು ದೋಷ |
ವಾಜಿ ಕಟ್ಟಿದರೇನು | ಪರಿಹರಿಪೆ ನಾನು ||೨೫೯||
ತಾಯಿ ಪೇಳಿದ ಮೇಲೆ | ತಪ್ಪು ತಿಳಿಯಿತು ಎನಗೆ |
ಕಾಯಬೇಕೆಂದೆರಗು | ಹಯವಿತ್ತು ನರಗೆ ||೨೬೦||
ನಗರವನು ಶೃಂಗರಿಸು | ನವರತ್ನಗಳ ತರಿಸು |
ದಿವಿಜೇಂದ್ರಸುತಗೆರಗು ಯಾಗಹಯವಿತ್ತು ||೨೬೧||
ಕೈಯ ಮೀರುವ ಮೊದಲೆ | ಕರೆಸು ವೈಭವದಿಂದ |
ಅಯ್ಯಗೊಪ್ಪಿಸು ರಾಜ್ಯ | ನಿಖಿಳ ಸಂಪದವ ||೨೬೨||
ಭಾಮಿನಿ
ಏನನೆಂಬೆನು ಅರಸ ಕುಂತೀ |
ಸೂನುವಿನ ಕಾಣಿಕೆಗೆ ತೆಗೆಸಿದ |
ಮಾಣಿಕವ ಮುತ್ತುಗಳ ವೈಢೂರ್ಯಾದಿ ವಸ್ತುಗಳ ||
ಮಾನನಿಧಿ ಪಾರ್ಥಜನು ತರಿಸಿದ |
ಮಾನಿನಿಯರಾ ನಾಗನಗರದ |
ನಾನ ಪರಿಮಳ ಗಂಧಕಸ್ತುರಿ ವಸ್ತ್ರದಾಭರಣ ||೨೬೩||
ರಾಗ ಸಾವೇರಿ ಝಂಪೆತಾಳ
ಬಂದಾ ಬಭ್ರುವಾಹನ | ಬಲು ವಾದ್ಯರವದಿಂದ ||
ಇಂದ್ರಜಾತನಕಾಂಬೆ | ನೆಂಬ ತವಕದಲಿ || ಪ ||
ಅಂದಣವೇರಿಯಧ್ವರತುರಗವು ಸಹ |
ಪೊಂದಳಿಗೆಯ ಸೇಸೆಗೊಂಡು ||
ಮಂದಯಾನೆಯರ್ ಮುತ್ತು ಕಲಶಗನ್ನಡಿಸೊಗ |
ಸಿಂದ ಪಿಡಿದು ಬರೆ ಮಂದಿಘೋಷದಲಿ ||೨೬೪||
ಪ್ರಮುಖಾದಿಗಳು ಕೇಳಿ ಪ್ರಬಲ ಪಾಂಡವರಿಗೆ |
ರಮಣಿಯೈವರಿಗೊರ್ವಳಂತೆ ||
ಯಮಜಾತನೆಲ್ಲರ್ಗೆ ಹಿರಿಯ ಭೂಪತಿಯಂತೆ |
ಎಮಗೆ ಕಾಂಬುವುದಕೆ ಅಣಿಯು ಎಂತಹುದೊ ||೨೬೫||
ತಂಡತಂಡದಿ ಪಾಠಕರ ವೀಣಾರವದಿಂದ |
ಹಿಂಡು ಸತಿಯರ ಶೋಭಾನದಿ ||
ಅಂಡಲ ಬಿರಿವುತಯ್ತಂದು ಪಾರ್ಥನ ಪಾದ |
ಕಂಡೆರಗಿದ ಹಯವಿತ್ತು ತಾ ಮುದದಿ ||೨೬೬||
ಭಾಮಿನಿ (ಅರ್ಧ)
ಬಭ್ರುವಾಹನ ಪದಕೆ ಮಾಣಿಕ |
ಮುತ್ತು ರತ್ನವ ಸುರಿದುಯೆರಗಲು |
ವಿಭ್ರಮಿಸಿ ಫಲುಗುಣನು ಇವನಾರೆಂದು ಬೆಸಗೊಂಡ ||
ರಾಗ ಕಾಂಭೋಜಿ ಏಕತಾಳ
ಆವ ರಾಯನಾತ್ಮಜನೊ ವೀರನೀತ | ನಮ್ಮ |
ಕೋವಿದಶ್ವ ತಡೆದುಕೊಂಡ ವೀರನೀತ ||೨೬೭||
ಮಂತ್ರಿಮಾರ್ಬಲಗಳಿದ್ದು ವೀರನೀತ | ಹಯ |
ಮುಂತಾಗಿ ಮರಳಿ ತಂದ ವೀರನೀತ ||೨೬೮||
ಯಾತರ ಕುಲಾಧಿಪನೊ ವೀರನೀತ | ಬಂದು |
ಸೋತು ಪಾದ ಕಟ್ಟಿಕೊಂಡ ವೀರನೀತ ||೨೬೯||
ಷಂಡರಂತೆ ಬಂದು ಬೇಗ ವೀರನೀತ | ನಮಿಸೆ |
ಗಂಡುಸಲ್ಲವೇನೊ ನೋಡೆ ವೀರನೀತ ||೨೭೦||
ವಚನ
ಇಂತೆಂದು ಅರ್ಜುನನು ನುಡಿಯಲಾಗಿ ಬಭ್ರುವಾಹನನು ಏನೆಂದನು ಎಂದರೆ –
ರಾಗ ರೇಗುಪ್ತಿ ಅಷ್ಟತಾಳ
ತಾತ ಬಿನ್ನಪ ಕೇಳೆನ್ನ | ಮಾತ ಲಾಲಿಸೋ ||
ಭೂತಳೇಶ ನಾ ಮಾಡಿದ | ಪಾತಕವುದ್ಧರಿಸಯ್ಯ ||೨೭೧||
ಪಾರ್ಥಿವಪಂಥದಿ ಹಯ | ಕರ್ತವ್ಯವೆಂದು ಕಟ್ಟಿದೆ |
ತೀರ್ಥಯಾತ್ರೆಗೆ ನೀ ಬಂದ | ಗುರ್ತ ಪೇಳ್ದಳು ಜನನಿ ||೨೭೨||
ತಾಯಿ ಚಿತ್ರಾಂಗದೆ ಲೂಪಿ | ಪ್ರೀಯದಿ ಸಾಕಿದರೆನ್ನ |
ಪ್ರೀಯೆಯುಳ್ಳಡೆ ನಿನಗೆ | ಸ್ತ್ರೀಯರು ಬರಪೇಳ್ದರಯ್ಯ ||೨೭೩||
ನಿನ್ನ ತನುಜ ಬಭ್ರುವಾಹನ | ನೆಂಬ ಪೆಸರಿನಿಂದಲೀಗ |
ಉನ್ನತ ಮಣಿಪುರದಿ | ಮಾನ್ಯಾಧಿಪತಿ ನಾನಾದೆ ||೨೭೪||
ಸಹಜ ಧರ್ಮಜನ ಯಜ್ಞ | ವಾಜಿ ತಡೆದ ತಪ್ಪಿಗಾಗಿ
ಮೂಜಗದವೀರ ನಿನಗೆ | ರಾಜ್ಯವೊಪ್ಪಿಸಿ ಕೊಡುವೆ ||೨೭೫||
ವಾರ್ಧಕ (ಅರ್ಧ)
ಭೂಪಾಲ ಕೇಳಿಂತು ಬಭ್ರುವಾಹನ ನುಡಿಯೆ |
ಕೋಪದಿಂ ಕೌಂತೇಯ ಮೊಗವ ತಿರುಹುತ್ತಿರಲು |
ಈ ಪರಿಯಿದೇನೆಂದು ಅನುಸಾಲ್ವ ಹಂಸಧ್ವಜಾದಿಗಳು ಇಂತೆಂದರು ||
ರಾಗ ನವರೋಜು ಅಷ್ಟತಾಳ
ಇಂದ್ರಜಾತ ಕೇಳು ಮಾತ | ಇಂದುಕುಲಾಧಿಪ ಖ್ಯಾತ |
ಕಂದನೊಳಿಷ್ಟು ಕೋಪವಿದೇಕೆ ಪರಾಕೆ ||೨೭೬||
ಅರ್ಕಲಾವಣ್ಯನಾಗಿರ್ಪ | ಮದನ ನಿನ್ನಂತೆ ರೂಪ |
ಪ್ರಕೃತಿ ತಿಳಿದು ಮಾತಾಡಯ್ಯ ಪರಮಪ್ರಿಯ ||೨೭೭||
ತಪ್ಪಿಗೆ ಅಂಜುವನಲ್ಲ | ತಾಮಸದೊಳು ಕುಂದಿಲ್ಲ |
ಅಪ್ಪನೆಂಬ ಭಕ್ತಿಗಾಗಿ ಬಂದಲೇಸಾಗಿ ||೨೭೮||
ರಾಗ ಮಧುಮಾಧವಿ ಆದಿತಾಳ
ಹಂಸಕೇತನಾದಿಗಳೆಲ್ಲ ಕೇಳಿ | ವಂಶಾಪರಾಧಿಗುಪಾಯವ ಪೇಳಿ || ಪ ||
ಎನ್ನಾತ್ಮಜನಾದರೆ ತಡೆದ ಯಜ್ಞದ ವಾಜಿ |
ಬಿನ್ನಾಣದಲಿ ತಂದು ಮರಳಿಯಿತ್ತು ||
ಹೊನ್ನಕಾಣಿಕೆ ಕೊಟ್ಟು ಹೊರಳಿ ಪಾದದ ಮೇಲೆ |
ತನ್ನೊಳು ಭೀತಿಗೊಂಡು ತಲೆಯ ತಗ್ಗಿಪನೆ || ಹಂಸಕೇತ ||೨೭೯||
ಚಿತ್ರಾಂಗದೆಯು ತನ್ನ ಮಿತ್ರರೊಡನೆ ಕೂಡಿ ವಿ |
ಚಿತ್ರ ಗರ್ಭವ ತಾಳಿ ಪಡೆದೀತನ ||
ಕ್ಷತ್ರಿಕುಲದವರು ಶರಣುಬರುವುದುಂಟೆ |
ಪುತ್ರ ಗಂಧರ್ವರ ಕುಲಕೆ ಪುಟ್ಟಿದನೀತ || ಹಂಸಕೇತ ||೨೮೦||
ಕಂದರೆನಗೆ ಇಲ್ಲ ಕಾಂತೆ ಸುಭದ್ರೆಯೊಳು |
ನಂದನನಭಿಮನ್ಯುವೊರ್ವ ತಾ ಪುಟ್ಟಿ ||
ಮುಂದುವರಿದು ರಣದಿ ಮುರಿದುರಾಯರನೆಲ್ಲ |
ಸಂದನು ಸುರಪುರಕೆ ಇಂದುಕುಲಾಧಿಪನು ||೨೮೧||
ಭಾಮಿನಿ
ಫಲುಗುಣನು ನುಡಿಯಲ್ಕೆ ಮೀಸೆಯ |
ನಲುಗಿ ತಿರುಹುತ ಬಭ್ರುವಾಹನ |
ನನಲನಂತಕ್ಷಿಗಳು ಕೆಂಪಡರಿದುವು ನಿಮಿಷದಲಿ ||
ಎಲವೊ ಎನ್ನಯ ಜನನಿಯಿಕ್ಕಿದ |
ಬಲೆಗೆ ಸೈರಿಸಿದೊಮ್ಮೆ ನಿನ್ನಯ |
ತಲೆಯಕೊಂಬೆನು ತೃಣಕೆ ಬಲಸಹಿತೆಂದು ಗರ್ಜಿಸಿದ ||೨೮೨||
ರಾಗ ಶಂಕರಾಭರಣ (ಪಂಚಾಗತಿ) ಮಟ್ಟೆತಾಳ
ತಾತ ಫಲುಗುಣ | ಕೇಳು ನಿನ್ನಯ |
ಜಾತನೆನಿಸುವೆ | ಜನರ ಮಧ್ಯದಿ ||೨೮೩||
ಚಿತ್ರಾಂಗದೆಯರ | ಬೈದು ಭಂಗಿಸಿ |
ಪುತ್ರನಲ್ಲೆಂದು | ಜರೆದೆಯೆನ್ನನು ||೨೮೪||
ಎನ್ನ ಉದ್ಭವ | ವೈಶ್ಯನೆಂದೆಲಾ |
ಮುನ್ನವಾಡಿದ | ಗುರುತ ಕಟ್ಟಿಕೊ ||೨೮೫||
ನಿನ್ನ ರಣದಲಿ | ಕೆಡಹದಿರ್ದರೆ |
ಪನ್ನಗೇಂದ್ರನ | ಮೊಮ್ಮನೇಯಲ್ಲ ||೨೮೬||
ಮಿತ್ರ ಕೃಷ್ಣನ | ಕರೆಸಿಕೊಂಡಿರು |
ಕ್ಷತ್ರಿ ಪಂಥವ | ನೀಗತೋರುವೆ ||೨೮೭||
ಮಂತ್ರಿಶೇಖರ | ಮಾನಿನೀಯರ |
ಮೊತ್ತ ನಡೆಯಲಿ | ಪುರಕೆ ಶೀಘ್ರದಿ ||೨೮೮||
ಕುಂತಿಸುತನೊಳು | ಕಾದುವುದಕ್ಕೆ |
ಪಂಥವುಳ್ಳಡೆ | ಕರೆಸು ಪಾಳ್ಯವ ||೨೮೯||
ಕುಂತಿಯಾತ್ಮಜ | ಕೇಳೊ ನಿನ್ನಯ |
ಪಂಥವೇ ನಿನ್ನ | ತಲೆಯ ಕೊಂಬೆನು ||೨೯೦||
Leave A Comment