ರಾಗ ಭೈರವಿ ಅಷ್ಟತಾಳ
ಪಾರ್ಥನೆಂಬವನೆ ನೀನು | ನಿನ್ನಶ್ವವ |
ಸ್ವಾರ್ಥದಿ ಕಟ್ಟಿದೆನು ||
ವರ್ತಿಪ ಉಭಯ ಯುದ್ಧಗಳುಂಟು ನಿನಗೇನು |
ಅರ್ತಿಯು ಮುಂದಿನ್ನೇನು  ||೯೮||

ಪೆಣ್ಣಿನೊಡನೆ ಯುದ್ಧವು | ಮಾಳ್ಪರೆ ಅಗ್ರ |
ಗಣ್ಯರು ಕೇಳ್ ನಿಜವು ||
ಬಣ್ಣವೆಲ್ಲವ ಬಿಡು ಹಯವನೆನ್ನಯ ಮಾತ |
ಮನ್ನಿಪುದುಚಿತವಿದು         ||೯೯||

ತರುಣಿಯರೊಳು ಸೆಣಸಿ | ಜೀವಿಸಬಲ್ಲ |
ಗರುವನಾತನೆ ಸಾಹಸಿ ||
ಸ್ಮರನಶಾಸ್ತ್ರದೊಳಿಂತೊರೆವುದು ನೀನದ |
ನರಿತುದಿಲ್ಲವೆ ಸಾಹಸಿ       ||೧೦೦||

ಅರಸು ನೀನೀ ರಾಜ್ಯಕೆ | ಆಯುಧಗಳ |
ಧರಿಸಿಹೆ ನೋಡಲಿಕೆ ||
ಸರಿಯೆ ವೇಶ್ಯೆಯರಂತೆ ಸ್ಮರನಾಗಮದ ಮಾತ |
ನರುಹುತಲಿರುವೆಯೇಕೆ     ||೧೦೧||

ಪೆಂಡಿರು ಈ ರಾಜ್ಯದಿ | ಪುರುಷರನ್ನು |
ಕಂಡೆವೆಂದರೆ ಇಲ್ಲವು || ಭೂ |
ಮಂಡಲದೊಳಗುಳ್ಳ ಗಂಡುಸರೆಮ್ಮಯ |
ಗಂಡರು ಕೇಳ್ ನಿಜವು      ||೧೦೨||

ಪುರುಷ ಕಾಮಿಗಳು ನೀವು | ನಿಮ್ಮ ಕೂಡಿದ |
ನರರಿಗೇಳಿಗೆಯಿಲ್ಲವು ||
ವಿರಹ ಹೆಚ್ಚಿದ ವಿಷ ಸ್ತ್ರೀಯರೆಂಬುದ ಕೇಳಿ |
ಮರುಳಾಹರಲ್ಲ ನಾವು      ||೧೦೩||

ವಿಷಸ್ತ್ರೀಯರಲ್ಲ ನಾವು | ಪೂರ್ವದ ಪುಣ್ಯ |
ವಶದಿಂದೆಮ್ಮಯ ಸಂಗವು ||
ರಸೆಯೊಳುದೊರಕಲು ಪೊಸ ಜವ್ವನರ ಮಾಡಿ |
ರಸಿಕದಿ ಕೂಡುವೆವು         ||೧೦೪||

ಜಾಲವಿದ್ಯೆಯು ನಿಮ್ಮಲಿ | ಪುಟ್ಟಿಹುದೆಂದು |
ಕೇಳಿಹೆ ಪೂರ್ವದಲಿ ||
ಜಾಲವೆಮ್ಮೊಳು ನಡೆಯದು ಹಯವನು ಬಿಡು |
ಲೋಲಾಕ್ಷಿ ವಿನಯದಲಿ     ||೧೦೫||

ಪ್ರಣಯಕಲಹದೊಳಗೆ | ಸೋಲಿಸಬಲ್ಲ |
ಡನುವಾಗು ಬೇಗೆನಗೆ ||
ಮನವೊಡಂಬಡದಿರೆ ರಣದಿ ಕಾದುವೆ ಹಯ |
ವನು ಬಿಡೆ ಕೇಳ್ ನಿನಗೆ    ||೧೦೬||

ಹೆಂಗೊಲೆಗಳುಕಿ ನಾನು | ಪೇಳ್ದರೆ ಮಾತ |
ಹಂಗಿಸಿ ನುಡಿದೆ ನೀನು ||
ಭಂಗಿಸುವೆನು ಕೇಳು ಸಾರಿದೆ ನಮ್ಮ ತು |
ರಂಗವ ಬಿಡುವುದಿನ್ನು       ||೧೦೭||

ರಾಗ ಶಂಕರಾಭರಣ ಮಟ್ಟೆತಾಳ
ಭಂಗಿಸುವ ಸಹಸಗಳ ರ | ಣಾಂಗಣದಲಿ ತೋರೆನುತ್ತ |
ಹಿಂಗದಸ್ತ್ರವೆಸೆದಳಾ ಕು | ರಂಗಲೋಚನೆ     ||೧೦೮||

ಮುಂಗೊಳಿಸುವಸ್ತ್ರಗಳ ಕಡಿದು | ಹಿಂಗದವಳ ಶ್ರವಣ ನಾಸಿ |
ಕಂಗಳನ್ನು ಕತ್ತರಿಪೆನೆಂ | ದಂಗವಿಸಿದನು      ||೧೦೯||

ಬಿಡಲು ಮೋಹನಾಸ್ತ್ರವನ್ನು | ಕಡಿದಳಾ ಪ್ರಮೀಳೆ ಶರವ |
ತೊಡುತಲಿರ್ದಳಗಣಿತಾಸ್ತ್ರ | ಗಡಣವಾಗಲು  ||೧೧೦||

ತುಡುಕಿದವು ಶರೌಘ ಪಾರ್ಥ | ನೊಡಲ ಪೊಕ್ಕುದೇನನೆಂಬೆ |
ಕಡುಗಿ ಕೋಪದಿಂದ ಕಡೆಯ | ಮೃಡನೊಲಾದನು      ||೧೧೧||
ಕೊಲುವೆನಿವಳನೆನುತಮೋಘ | ಹಿಳುಕಿ ಪೂಡಲಾಗಲಭ್ರ |
ದೊಳಗೆ ವಾಣಿಯಾದುದೀ ಹೆಂ | ಗೊಲೆಗೆ ಹೇಸದೆ      ||೧೧೨||

ಮುಳಿದು ಸಾಸಿರಬುದ ಸೆಣಸೆ | ಗೆಲಲಿಕರಿಯದಿವಳನಿಂದು |
ಹರುಷವಾಂತು ವಿನಯದಿಂದ | ಒಲಿಸಿಕೊಂಬುದು      ||೧೧೩||

ಭಾಮಿನಿ
ಆಲಿಸಿದನಂಬರದ ನುಡಿಯನು |
ಕೋಲನಿಳುಹಿಯೆ ಯೌವನಾಶ್ವ ಮ |
ರಾಳಧ್ವಜ ಮುಖ್ಯರೊಳಗಾಪ್ತಾಲೋಚನೆಯ ಮಾಡಿ ||
ಬಾಲಕಿಯ ಕೊಲಲನುಚಿತವು ನಯ |
ಚೋಳಿಯಿಂದನುಕರಿಸೆನಲ್ಕೆ  ಪ್ರ |
ಮೀಳೆಯನು ತನ್ನೆಡೆಗೆ ಬರಿಸುತ ನುಡಿದ ವಿನಯದಲಿ ||೧೧೪||

ರಾಗ ಸಾವೇರಿ ರೂಪಕತಾಳ
ಎಣಿಕೆ ಬೇರೆ ಗುಣಮಣಿಯೆ ಪ್ರಮೀಳೆ ಕೇಳ್ |
ಮನಮೆಚ್ಚಿದೆನು ನಿನಗೆಣೆಗಾಣೆ ಶೀಲೆ       || ಪ ||

ಅಗ್ರಭವನು ಅಶ್ವಮೇಧದೀಕ್ಷೆಯ ಕೊಂಡ |
ನುಗ್ರ ತಾಪದಿ ಒಂದು ವರುಷ ||
ನಿರ್ಗಮಿಸುವುದು ಸ್ತ್ರೀಸಂಗಗಳೆನುತಲ |
ನುಗ್ರಹವೆಮಗೆಮ್ಮ ಗುರುನಿರೂಪವು ||೧೧೫||

ಪುಸಿಯಲ್ಲ ಕೇಳಿಭಪುರಿಗೆ ತೆರಳು ಕಂಸ |
ದ್ವಿಷನ ದರ್ಶನವಪ್ಪುದಲ್ಲಿ ||
ವಿಷವಧುತ್ವವು ಪೋಗಿ ಶುಚಿಯಪ್ಪೆ ಹಯಮೇಧ |
ವೆಸಗುತಲಂತ್ಯದಿ ವರಿಸುವೆ ನಿನ್ನ    ||೧೧೬||

ಧೀರ ಕೇಳ್ ನಿನ್ನಂಗಸಂಗಕೆನ್ನಯ ಮನ |
ಸೂರೆಹೋದುದು ಸುಖಕ್ಕೆಳಸಿ ||
ಮೂರು ಲೋಕದ ವೀರ ಎನಗಂಡ ನೀನಾಗು |
ಮೀರೆನೆಂದಭಯವ ಕೊಡು ಪೋಪೆ ನಾನು   ||೧೧೭||

ಎನಲು ನಂಬುಗೆಯ ಕೊಟ್ಟನು ಪಾರ್ಥ ತಾ ಮತ್ತೆ |
ಇನಿಯಳ ಮಾಡಿಕೊಂಡಾಳ್ವೆ
ಸನುಮತವಿದು ಕೇಳು ಅನುಮಾನಬೇಡೆನೆ |
ವಿನಯದಿಂ ಪಾರ್ಥನ ಅಡಿಗೆರಗಿದಳು           ||೧೧೮||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇನ್ನು ಕೇಳ್ ಮಖಹಯವನೊಪ್ಪಿಸಿ | ರನ್ನದೊಡವೆ ಸುವಸ್ತುನಿಕರ ಸು |
ವರ್ಣವಸ್ತುವನಿತ್ತು ಪಾರ್ಥನ | ಮನ್ನಿಸಿದಳು   ||೧೧೯||

ಕೇಳು ಜನಮೇಜಯನೆ ಪಾರ್ಥನ | ಬೀಳುಕೊಂಡಿಭಪುರಿಗೆ ಸೇನಾ |
ಜಾಲ ಸಹಿತಯ್ತಂದಳಾಗ ಪ್ರ | ಮೀಳೆ ಮುದದಿ          ||೧೨೦||

ರಾಗ ಕಾಂಭೋಜಿ ಝಂಪೆತಾಳ
ಗಜನಗರಿಗಾಕೆಯನು ಕಳುಹಿ ತುರಗದ ಕೂಡೆ |
ವಿಜಯನಯ್ತರೆ ಮುಂದೆ ಭರದಿ ||
ಅಜ ಮನುಜ ಗೋಶ್ವ ಮಹಿಷಾದಿಗಳ ಪಾಲಿಸುತ |
ವ್ರಜದಂದದಲಿಹ ದೇಶಗಳ ||೧೨೧||

ಕಳೆದು ಮುಂದಯ್ತರಲು ತೊಗಲುಡಿಗೆ ವಕ್ರಾಂಗಿ |
ಗಳನೊಂದು ಕಂಗಳುಳ್ಳವರ ||
ಪೊಸಲ ಕಳೆದುತ್ತುಂಗನಾಸಿಕದವರ ರಾಜ್ಯ |
ದೊಳು ಪೊಕ್ಕು ಮೀರಿ ಮತ್ತೆಸೆವ     ||೧೨೨||

ನೆತ್ತಿಕೋಡೆರಡುಳ್ಳವರನೊಂದು ಕೋಡವರ |
ಕತ್ತೆಮೊಗಕುದುರೆಮೊಗದವರ ||
ಮತ್ತೆ ಮೂರಕ್ಷಿಯುಳ್ಳವರ ದೇಶಂಗಳನು |
ಸುತ್ತಿ ಮುಂದಯ್ತಂದ ಪಾರ್ಥ          ||೧೨೩||

ವಾರ್ಧಕ
ಧಾರಿಣೀಶ್ವರ ಲಾಲಿಸೇನೆಂಬೆ ಬಲುತರ ವಿ |
ಕಾರದೇಶಂಗಳಂ ಕಳೆವುತ್ತಲಾ ಹಯಂ |
ಘೋರಭೀಷಣನೆಂಬ ಕೌಣಪನ ಪಟ್ಟಣದ ಬಾಹ್ಯೋಪದೇಶದೆಡೆಗೆ ||
ಸಾರಿ ಬರುತರ್ಜುನಂ ಸಕಲ ಸೈನಿಕಸಹಿತ |
ಕ್ರೂರನಾಗಿಹ ವಜ್ರಪುರದರಸುಭೀಷಣಂ
ಮೂರ್ ಕೋಟಿ ಕಾಳರಕ್ಕಸರೆಂಬವರು ಖೂಳಗೆ ಸರಿಸವನೊಳಿರುವರಾ ||೧೨೪||

ಭಾಮಿನಿ (ಅರ್ಧ)
ಮತ್ತೆಯಾತಗೆ ಬ್ರಹ್ಮರಾಕ್ಷಸ |
ಉತ್ತಮನುಯೆಂದೆನಿಪ ಗುರು ಬಲು |
ಧೂರ್ತ ಮೇದೋಹೋತನೆಂಬುವ ಪಾಪಿಯಾಚಾರ್ಯ            ||೧೨೫||

ವಾರ್ಧಕ
ಅಡವಿಯೊಳು ಆಹಾರ ಹುಡುಕುತಿರಲಾ ನರನ |
ಪಡೆ ನಡೆವುದಂ ಕಾಣುತಾ ಬ್ರಹ್ಮರಾಕ್ಷಸಂ |
ತುಡುವೆದ್ದು ಬಾಯ ಚಪ್ಪರಿಸುತ್ತ ಫಲುಗುಣನ ಪಡೆಗಿಡೆಯನೆಲ್ಲ ಪಿಡಿದು ||
ತಡೆಗಡಿದು ರಕ್ತಮಂ ಕುಡಿಯದಿರೆನೆಂದೆನುತ |
ಬಿಡದೆ ಬಾಯ್ದೆರೆದಟ್ಟಹಾಸದಿಂ ಪಥವಿಡಿದು |
ನಡೆತಂದನಾ ಘೋರಭೀಷಣನ ಬಳಿಗಾಗ ಸಡಗರದೊಳೇನೆಂಬೆನು       ||೧೨೬||

ರಾಗ ಮಾರವಿ ಏಕತಾಳ
ಬಂದನಾ ಮೇದೋಹೋತ ಪುರೋಹಿತ | ಬ್ರಹ್ಮರಕ್ಕಸನಾಗಿ ||
ವೃಂದದಿದಾನವನೋಲಗಗೊಟ್ಟಾ | ಭೀಷಣನೆಡೆಗಾಗಿ  ||೧೨೭||

ಕುರಿಚರ್ಮವು ಮಕುಟಕೆ ಸುತ್ತಿದ ಎಳೆ | ಗರುಳಿನ ಚೆಲುವಿಕೆಯು ||
ಮಿರುಪುವ ಜುಂಜುರಗೂದಲು ಪಣೆಗೊ | ಪ್ಪಿರುವ ದಂತಾಕ್ಷತೆಯು         ||೧೨೮||

ಪೊಸದೊಂಪೆಯೆಲುವಿನ ಕುಂಡಲಿ ಕರಿ | ಮುಸುಡ ಕಮಂಡಲವು |
ಹಸಿದೊಗಲಿನ ಧೋತ್ರ ಸೊಗಹಕೆ ಬಲು | ನುಸಿ ನೊಣಗಳ ರವವು         ||೧೨೯||

ರಾಗ ಸೌರಾಷ್ಟ್ರ ಅಷ್ಟತಾಳ
ವರ ಮೇದೋಹೋತನನು | ಕಾಣುತ ಭಕ್ತಿ |
ವೆರಸಿ ಭೀಷಣ ದೈತ್ಯನು ||
ಹರುಷದಿಂದಿರ್ಗೊಂಡು ಕರೆತಂದು ಸಿಂಹವಿ |
ಷ್ಟರದಿ ಕುಳ್ಳಿರಿಸಿ ಬೇಗ      ||೧೩೦||

ಪಾದಯುಗವ ತೊಳೆದು | ಮಸ್ತಕದಿ ಸಿ |
ದ್ಧೋಕದವನು ತಳಿದು ||
ಸಾದರದಿಂ ಚಂದದಿಂದಲಿ ಪೂಜೆಯ |
ಗೆಯ್ದು ಮತ್ತಿಂತೆಂದನು      ||೧೩೧||

ಪುಣ್ಯಸಾಗರನೆ ನಿನ್ನ | ದಿವ್ಯಾಂಘ್ರಿಕಾ |
ರುಣ್ಯದಿ ಧರೆಯೊಳೆನ್ನ ||
ಪುಣ್ಯಕೆ ಸರಿಯುಂಟೆ ನೀ ಬಂದ ಕಾರ್ಯವೇ |
ನೆನ್ನುತ ಬೆಸಗೊಂಡನು     ||೧೩೨||

ರಾಗ ಕೇದಾರಗೌಳ ಅಷ್ಟತಾಳ
ಘನ ತೋಷವಾಯ್ತು ಕೇಳ್ ಖಳರಾಯ ಬಹಳ ಮ |
ನ್ನಣೆ ಗೆಯ್ದೆ ಭಕ್ತಿಯಿಂದ ||
ಮನುಜಾನಿಮಿಷದಾನವರೊಳ್ ನಿನ್ನೈಶ್ವರ್ಯ |
ಕೆಣೆಯುಂಟೆ ಬಿಡು ಶಭಾಸೈ           ||೧೩೩||

ವೀರ ಕೇಳಾದಡಿನ್ನೊಂದುಂಟು ಪೇಳ್ವೆನು |
ಭೋರನೆ ಗ್ರಹಿಸಿಕೊಂಡು ||
ಕಾರಿಯವನು ಗೆಯ್ದೆಯಾದರೆ ನಿನಗೆಣೆ  |
ಮೂರುಲೋಕದೊಳಿಲ್ಲವೈ ||೧೩೪||

ಕಾರಿಯವೇನದ ಬೇಗದಿ ಪೇಳಿರಿ |
ತೀರಿಸಿ ಕೊಡುವೆನೆಂದು ||
ಭೋರನೆಯರುಹಲ್ಕೆ ಕೇಳುತ್ತಲಾ ಕ್ಷಣ |
ಪೇಳಿದನಸುರೇಂದ್ರಗೆ       ||೧೩೫||

ರಾಗ ಸಾಂಗತ್ಯ ರೂಪಕತಾಳ
ದನುಜೇಶ ಕೇಳ್ ತವ ಪಿತನ ಕೊಂದವ ಭೀಮ |
ನನುಜನರ್ಜುನನು ಬಂದಿಹನು ||
ಎಣಿಕೆಯಿಲ್ಲದ ಚಾತುರಂಗವಿಹುದು ನಿನ್ನ |
ಘನ ಪುಣ್ಯವೇನ ಪೇಳುವೆನು                      ||೧೩೬||

ತಾತನ ಕೊಂದವನನುಜನ ಕೊಂದು ಮ |
ತ್ತಾತನ ಕೂಡಿ ಬಂದಿಹರ ||
ತಾ ತರಿಸುತ ಹಿಡಿದೀ ಕ್ಷಣ ನರಮೇಧ |
ಪ್ರೀತಿಲಿ ಮಾಡೆಂದನಾಗ               ||೧೩೭||

ರಾಗ ಕೇದಾರಗೌಳ ಅಷ್ಟತಾಳ
ಎಂದ ಮಾತನು ಕೇಳಿ ನರಮೇಧಯಾಗವ | ಚಂದದಿ ಗೆಯ್ದವರು ||
ಹಿಂದೆ ಯಾರುಂಟು ಋತ್ವಿಜರಾರು ವಿಧಿಯ ಪೇ | ಳಿಂದೆನಲಿಂತೆಂದನು   ||೧೩೮||

ರಾಗ ಕಾಂಭೋಜಿ ಝಂಪೆತಾಳ
ತರಳ ಕೇಳೈ ಪೂರ್ವದಲಿ ರಾವಣಾಸುರನು |
ನರಮೇಧಯಾಗವನು ರಚಿಸಿ ||
ಧರೆಯ ಮೂರನು ಜಯಿಸಿದರಿಯೆಯಾ ಋತ್ವಿಜರ |
ಪರಿಯನುಸಿರುವೆನೊಲಿದು ಕೇಳು    ||೧೩೯||

ನರರ ನರ ಜನಿವಾರ ನರರ ತಲೆ ಜಪಸರದಿ |
ನರನೊಸಲ ಧೋತ್ರದಿಂದೆಸೆವ ||
ಪಿರಿದೆನಿಪ ಒಂಟೆಯೆಲುವಿನ ಕುಂಡಲಂಗಳಿಂ |
ಕರಿಶಿರಕಮಂಡಲುಗಳಿಂದ ||೧೪೦||

ಉರಗಜದ ಬೆನ್ನಿನಸ್ಥಿಯ ಉಟ್ಟ ಈ ಭಯಂ |
ಕರ ರೂಪಿನಿಂ ವಿರಾಜಿಸುವ ||
ಪರಿಪರಿಯ ಮಾಂಸೋಪಹಾರದಿಂ ತಲೆಮಿದುಳ |
ಹರುಷದಿಂ ತಿಂದು ಕುಳಿತವರ        ||೧೪೧||

ಚೈತ್ರ ವೈಶಾಖ ಜ್ಯೇಷ್ಠಾಷಾಡದೊಳು ಮದ್ಯ |
ನೆತ್ತರಂ ಕುಡಿದು ದೀಕ್ಷೆಯಲಿ ||
ಇನಿತು ಚಾತುರ್ಮಾಸ್ಯವ್ರತವನುರೆ ಸಾಧಿಸುವ |
ವರ ವಿಪ್ರರನು ಕೇಳಯ್ಯ    ||೧೪೨||

ನರಮೇಧ ಗೆಯ್ಯುವಡೆ ಪಿರಿದು ನಿಷ್ಠೆಗಳುಂಟು |
ಮೆರೆವ ಚಾತುರ್ಮಾಸ್ಯದೊಳಗೆ ||
ಸುರನೆತ್ತರಿನ ಪಾನದೊಳಗಿರಲು ಬೇಕುದಕ |
ಸ್ಪರುಶವಾಗದು ವ್ರತಂಗಳಿಗೆ          ||೧೪೩||

ಮಾಸೋಪವಾಸಿಗಳ ಮಿಥುನ ಮಾಂಸಗಳಿಂದ |
ಪೋಷಣವು ಶ್ರಾವಣಕೆ ಕೇಳು ||
ಭಾಷಿಸುವ ಯತಿಮಾಂಸ ಭಾದ್ರಪದಕೊದಗಿಸುವ |
ವೀಸು ನಿಷ್ಠೆಯ ಬಿಡದೆ ತಾಳು         ||೧೪೪||

ತರುಣಿಯರ ಜಡೆಮುಡಿಯು ಶಿರಬುರುಡೆ ಕರುಳ್ಗಳನು |
ವರಿಸಬೇಕಾಶ್ವಯುಜನಕೆ ||
ಮೆರೆವ ಎಳೆವೆಣ್ಗಳೆದೆಗುಂಡಿಗೆಯ ನರಮಾಂಸ |
ವುಣುತಿರಲು ಬೇಕು ಕಾರ್ತಿಕಕೆ        ||೧೪೫||

ಮಾರ್ಗಶಿರ ಪುಷ್ಯ ಮಾಘಾದಿ ಫಾಲ್ಗುನ ತಾಪ |
ಸರ್ಗಳುದರದ ಮಾಂಸವನ್ನು ||
ಶೀಘ್ರದಿಂ ಭಕ್ಷಿಸಿಯೆ ವ್ರತವ ನೆರೆ ಸಾಧಿಸಿದ |
ವರ್ಗಳೇ ಋತ್ವಿಜೋತ್ತಮರು          ||೧೪೬||

ವಟವೃಕ್ಷದೊಳು ವಾಸವಾಗಿರ್ಪ ರನ್ನವರ |
ದಿಟವಹ ಕಾರಣಿಕರವರ ||
ಪಟುಪರಾಕ್ರಮಿಯೆ ನೀ ತಂದೆಜ್ಞವನುಗೆಯ್ಯೆ |
ಘಟಿಪುದು ಜಯವು ರಣಾಗ್ರದೊಳು  ||೧೪೭||

ವಾರ್ಧಕ
ದಿನದಿನಕೆ ದಾನವರ ದಂಪತಿಸಹಸ್ರಮಂ |
ವಿನಯದಿಂ ಮಾನವರ ಮಾಂಸಭೋಜನದಿಂದ |
ದಣಿಸಬೇಕಾದವರನುಪಚರಿಸಿ ದೀಕ್ಷೆಯಂ ತಾಳ್ದು ಮಂಟಪವ ರಚಿಸಿ ||
ಘನ ವೇಗದಿಂದಯ್ದಿ ಪಾರ್ಥನಂ ಪಿಡಿದು ತಾ |
ರೆನಲು ಮೇದೋಹೋತನಿಂತೆಂದುದಂ ಕೇಳ್ದು |
ಘನಪರಾಕ್ರಮಿ ಶರಧಿಯಂತೆ ಭೋರ್ಗುಡಿಸಿ ಕಲ್ಪಾಂತಕನವೋಲ್ ಕನಲ್ದ            ||೧೪೮||

ರಾಗ ಭೈರವಿ ಏಕತಾಳ
ಸಿಡಿಲಂದದೊಳಾರ್ಭಟಿಸಿ | ಕೆಂ | ಗಿಡಿಯುಗುಳುತ ಭೋರ್ಗುಡಿಸಿ ||
ನುಡಿಯನು ಕೇಳ್ದಾ ಸಾರ | ಎನ್ನ | ಪಡೆದನ ಮಡಿದಿಹ ವೈರ     ||೧೪೯||

ತಾಳ್ದಪೆನೇ ತಾನಿನ್ನು | ನೀ | ಪೇಳ್ದತಿ ಹಿತ ವಾಕ್ಯವನು ||
ಕೇಳ್ದಾಂ ಮರೆವೆನೆ ಭರದಿ | ನರ | ಬಾಧಿಪನೇ ಸಂಗರದಿ          ||೧೫೦||

ಕಾದಿ ಪಿತನ ಕೊಂದವನ | ನಿಜ | ಸೋದರನೆನಿಪರ್ಜುನನ ||
ಸಾಧಿಸಿ ಪಿಡಿದವನನ್ನು | ನರ | ಮೇಧಕೆ ಪಶುವೆನಿಸುವೆನು        ||೧೫೧||

ಘಾತಿಸದೆಳೆತರಬೇಕೇ | ಸ | ತ್ತಾತಪನಹನೇ ಮಖಕೆ ||
ಆತನೆರಡು ಸರಳಿಂದ | ಸ | ತ್ತಾತಪನಾದಪನೆಂದ     ||೧೫೧||

ಅದಕೆ ಪುರೋಹಿತನೆಂದ | ಕೊ | ಲ್ಲದೆ ತಂದರೆ ಬಹು ಚಂದ ||
ಒದಗಿಲಿ ನಡೆಯಿಂದೆಂದ | ತಾ | ನದ ಕೇಳುತಲಿದಿರೆದ್ದ            ||೧೫೨||

ವಾರ್ಧಕ
ಕೂಡಿದಂ ಮೂರ್ಕೋಟಿ ರಕ್ಕಸರ ನಿಮಿಷದಿಂ |
ಪೂಡಿದಂ ಕಾಂಚನ ವರೂಥಮಂ ಸಲೆ ಸಜ್ಜು |
ಮಾಡಿದಂ ಬಿಲ್ತಿರುವನಳವಡಿಸಿ ಪರಬಲವ ತಾಗಿದಂ ತವಕದಿಂದ |
ನೋಡಿದಂ ಪಾರ್ಥನ ಪತಾಕಿನಿಯ ಧನುವಿಂಗೆ |
ಪೂಡಿದಂ ಮಾರ್ಗಣವ ಪಟುಭಟರ ಕಾಯದೊಳ್ |
ಮಾಡಿದಂ ಗಾಯಮಂ ಪಾರ್ಥನಡಹಾಯ್ದ ಭೋರ್ಗುಡಿಸುತ್ತಲಿಂತೆಂದನು            ||೧೫೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಲವೊ ನರಗುರಿ ಸಿಕ್ಕಿದೆಯಲಾ |
ಬಲು ದಿನದೊಳಾ ನಿನ್ನ ರಕುತವ |
ಬಲಿಯ ಕೊಡಬೇಕೆನುತಲಿರ್ದೆನು | ಸುಲಭದಿಂದ        ||೧೫೪||

ಪುಣ್ಯವಶದಿಂದೆನಗಿದನು ಮು |
ಕ್ಕಣ್ಣ ದೊರಕಿಸಿಕೊಟ್ಟನಲ್ಲದೆ |
ನಿನ್ನ ಇಚ್ಛೆಯಿದಲ್ಲ ಮಾನವ | ಕುನ್ನಿ ಕೇಳೈ     ||೧೫೫||

ಸೊಕ್ಕ ಮುರಿದಪೆ ನಿನ್ನ ನರಮೇ |
ಧಕ್ಕೆ ಪಶುವೆನಿಸುವೆನು ನೋಡಾ |
ರಕ್ಕಸರಿಗಾಹಾರವಾದೆಲೊ | ಸಿಕ್ಕಿ ಮರುಳೆ   ||೧೫೬||

ಜನಕನನು ಕೊಂದವನ ಸುಮ್ಮನೆ |
ನಿನಗೆ ನಿಮಿಷಾರ್ಧದಲಿ ಯಮಪ |
ಟ್ಟಣವ ತೋರ್ಪೆನು ತಾಳೆನಲು ಪಾ | ರ್ಥನು ಕನಲ್ದ   ||೧೫೭||

ರಾಗ ಕಾಂಭೋಜಿ ಝಂಪೆತಾಳ
ಗಾಂಡೀವಧನುವ ಝೇಂಕರಿಸಿ ಮಾರ್ಗಣವ ಕೋ |
ದಂಡಕ್ಕೆ ಸೇರಿಸುತ ಭರದಿ ||
ಖಂಡಪರಶುವಿನ ಕೋಪಕ್ಕಯ್ದು ಮಡಿಯೆನಲು |
ಚಂಡವಿಕ್ರಮನೆಂದ ಮುನಿದು                      ||೧೫೮||

ಎಲವೊ ಪಾತಕಿ ಬರಿದೆ ಗಳಹದಿರು ನಿನ್ನಪ್ಪ |
ನಳಿದು ಪೂರ್ವದಿ ರಣಾಗ್ರದಲಿ ||
ಬಲುಪರಾಕ್ರಮಿಯಣ್ಣ ಭೀಮಸೇನನ ಕೈಗೆ |
ತಲೆಯ ತೆತ್ತುದನರಿಯೆ ಮರುಳೆ                 ||೧೫೯||

ತಾತರ ಸಮೀಪದೊಳ್ ಜಾತರಿರ್ಪುದು ಸಹಜ |
ನೀತಿಪಥವನ್ನರಿಯೆ ಧೂರ್ತ ||
ಆತನಿರ್ಪೆಡೆಗೆ ನಿನ್ನನೆ ಕಳುಹಿಕೊಡುವೆನೆನು |
ತಾತನಂ ತೆಗೆದಚ್ಚ ಪಾರ್ಥ                        ||೧೬೦||

ದನುಜ ಬೆದರದೆಯೆಂದನೆಲವೊ ಮನುಜಾಧಮನೆ |
ಬಗುಳು ನೀ ಬಾಯ್ಗೆ ಬಂದಂತೆ ||
ಬಿಗಿದು ನಿನ್ನಯ ಕರುಳ ಮೃತ್ಯುದೇವತೆಗೆ ಸೊಗ |
ಸಿಂದಲುಣಬಡಿಸುವೆನು ತಾಳು                   ||೧೬೧||

ಎಂದು ಕೇಶಾಕೇಶಿಯಿಂದ ಹೊಯ್ದಾಡಿದರು |
ಇಂದ್ರಸುತ ಘೋರಭೀಷಣರು ||
ಹಿಂದೆ ಕಲಿ ಭೀಮಬಕರಿಂದಾದ ರಣರಂಗ |
ಕಿಂದುನೂರ್ಮಡಿಯಾಯ್ತು ರಣವು               ||೧೬೨||

ಭಾಮಿನಿ
ಗಂಡುಗಲಿ ರಣರಂಗ ಜಗದೋ |
ರ್ದಂಡ ತ್ರಿಭುವನಗಂಡ ಕಲಿಮಾ |
ರ್ತಂಡ ಭಾಸುರಗಂಡ ಗಂಡರ ಗಂಡ ಭೇರುಂಡ ||
ಕೆಂಡ ಕಾರುತ ಕೊಂಡಶರ ಕೋ |
ದಂಡಕೇರಿಸಿ ಖಂಡಲಾತ್ಮಜ |
ಕೊಂಡೆಸೆಯಲು ಪ್ರಚಂಡ ಖಳ ಭೂಮಂಡಲಕೆ ಬಿದ್ದ    ||೧೬೩||