ವಾರ್ಧಕ
ಸಿಂಧೂರನಗರಪತಿ ಕೇಳ್ ಬಭ್ರುವಾಹನಂ |
ತಂದ ಸಕಲ ಸುವಸ್ತು ತಳಿಗೆ ಸತಿಯರ ಸೇಸೆ |
ಪೊಂಗಲಶಗನ್ನಡಿ ಸಹಿತ ವಾದ್ಯರವದಿಂದ ಮರಳಿಸಿದ ಮಣಿನಗರಕೆ ||
ಮಂದಿ ತುರಗಾನೆಗಳ್ ರಥ ರಾಜಕುವರರಂ |
ಸಂದಣಿಸಿ ಮಂತ್ರೀಶ ನೆರಹೆ ರಣರಂಗದೊಳ್ |
ನಿಂದು ಬಿಲು ಝೇಗೆಯ್ದು ಕಲಿ ಬಭ್ರುವಾಹನಧನಂಜಯರ್ ಸಂಗರದೊಳು           ||೨೯೧||

ದ್ವಿಪದಿ
ಸೃಷ್ಟಿಪಾಲಕ ಕೇಳು ಕರ್ಣ ಕೌಂತೆಯರ |
ದಿಟ್ಟತನಕೆರಡುಮಡಿ ಕಲಿ ಬಭ್ರುವಾಹನ        ||೨೯೧||

ಸೀತೆಯಣುಗರು ವನದಿ ಕಾಳಗವ ಬಲಿದು |
ಭೂತಳಾಧಿಪ ರಾಮಲಕ್ಷ್ಮಣರ ಗೆಲಿದು          ||೨೯೨||

ಎಂದ ಮಾತಿಗೆ ನಮಿಸಿ ಭೂಪಕುಶಲವರೊಳ್ |
ತಂದೆ ರಾಮನು ಸೋತ ಪೇಳೆನಗೆ ವಿವರ    ||೨೯೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳು ಭೂಮಿಪ ಸುರರಿಗೋಸುಗ |
ಶ್ರೀಲಲಾಮನು ಬಳಿಕಯೋಧ್ಯಾ |
ಪಾಲ ದಶರಥನಿಂಗೆ ತಾನೇ | ಬಾಲನಾಗಿ     ||೨೯೪||

ಮುನಿಯ ಯಾಗವ ಕಾಯ್ದು ಶೂಲಿಯ |
ಧನುವ ಮುರಿದಾ ಜನಕತನುಜೆಯ |
ನನುವಿನಿಂದೊಲಿಸುತ್ತ ನಿಜ ಪುರ | ವರಕೆ ಮರಳಿ       ||೨೯೫||

ಪಿತನನುಜ್ಞೆಗೆ ಸತಿಯನುಜ ಸಹಿ |
ತತಿಶಯದಿ ವನದೊಳಗೆ ಇರುತಂ |
ದತುಳಬಲ ಖರದೂಷಣಾದ್ಯರ | ಹತವ ಗೆಯ್ದು           ||೨೯೬||

ಕಂಡ ಕಾಂಚನಮೃಗದ ನೆವದಿಂ |
ಕೊಂಡುಪೋಗಲು ಸತಿಯ ರಾವಣ |
ಚಂಡವಿಕ್ರಮ ತರಣಿಜನ ಬಲ | ಗೊಂಡು ಭರದಿ          ||೨೯೭||

ಶರಧಿಬಂಧನ ಗೆಯ್ದು ಲಂಕೆಯ |
ನಿರದೆ ಮುತ್ತುತ ರಾವಣಾದ್ಯರ |
ತರಿದು ಸೀತೆಯ ಕೊಂಡು ಮರಳಿದ | ಹರುಷದಿಂದ    ||೨೯೮||

ಬಂದು ನಿಜ ರಾಜ್ಯವನು ಪಾಲಿಸು |
ತೆಂದ ಜನರಪವಾದಕೋಸುಗ |
ವಿಂದುಮುಖಿಯನು ಕಳುಹಿಸುತ್ತಿರ | ಲಂದು ವನಕೆ      ||೨೯೯||

ಭಾಮಿನಿ
ಅರಸ ಕೇಳಿಂತಿರುತ ಸೀತೆಯು |
ಮೆರೆವ ಕುವರದ್ವಯವ ಪಡೆಯಲು |
ಧರಣಿಪತಿ ಶ್ರೀರಾಮಚಂದ್ರನು ಯಾಗವನು ರಚಿಸಿ ||
ತೆರಿಗೆ ತುರಗದ ನೆವದಿಸುತರೊಡ |
ನಿರದೆ ಸಂಗರಮುಖದಿ ಮೂರ್ಛಿಸಿ |
ಪರಮಋಷಿ ವಾಲ್ಮೀಕಿಯಿಂ ಸತಿಸುತರನೊಡಗೊಂಡು ||೩೦೦||

ಕಂದ
ಕ್ಷಿತಿಯಂ ಪಾಲಿಸುತಿಹನೆಂ |
ಬತಿಶಯ ಕಥೆಯಂ ಪೇಳಿದೆ ನಿನಗೋಸುಗವಿ ||
ನ್ನತುಳಾನಂದದಿ ಕೇಳೈ |
ಕ್ಷಿತಿಪತಿಯೊರೆವೆಂ ಶಕ್ರಜ ಪಾರ್ಥಿಯ ರಣಮಂ           ||೩೦೧||

ವಾರ್ಧಕ
ಪೃಥ್ವಿಪಾಲಕ ಕೇಳು ಅರ್ಬುದ ಗಜಾವಳಿಯು |
ಹತ್ತು ಕೋಟಿ ವರೂಥ ರಾಜಕುವರರು ಸಹಿತ |
ಸುತ್ತಕೂಡಿದ ಪದಾತಿಗಳು ಮೂರರ್ಬುದಂ ಎರಡರ್ಬುದಶ್ವಂಗಳು ||
ಮತ್ತೆ ಸರಳಿನ ಭಂಡಿಯೈವತ್ತು ಸಾಸಿರಂ |
ಸುತ್ತ ಮಂತ್ರಿ ಸುಬುದ್ಧಿ ಕರೆಕರೆದು ನೆರಹುತಿರೆ |
ನಿತ್ತು ರಣರಂಗದೊಳ್ ಕಲಿ ಬಭ್ರುವಾಹನಂ ಚಾಪಟಂಕಾರದಿಂದ           ||೩೦೨||

ರಾಗ ಸಾಂಗತ್ಯ ರೂಪಕತಾಳ
ಭೂಪಾಲ  ಕೇಳಯ್ಯ ಭಟ ಬಭ್ರುವಾಹನ |
ನೀ ಪರಿಯಿಂದಿರುತಿರಲು ||
ಶ್ರೀಪತಿ ಶರಣೆಂದೇರಿಸಿ ಗಾಂಡೀವವ ಪಾರ್ಥ |
ತಾಪಿಸಿದನು ಜಗತ್ತ್ರಯವ ||೩೦೩||

ವೃಷಕೇತು ಸಾಂಬ ಸಾತ್ಯಕಿಯರ ಬಳಿಯಲಿ |
ಅಸಮ ಕಿರೀಟಿನಿಂದಿಹನು ||
ಮಸಗಿದಂಬುಧಿಯಂತೆ ಮಿಗೆ ಗರ್ಜಿಸುತ ಸೇನೆ |
ಬಿಸಜಾಕ್ಷಸುತನ ನೇಮದಲಿ           ||೩೦೪||

ಚೂಣಿಪಡೆಯ ನೂಕಿದರು ಪದಚರರನ್ನು |
ಕಾಣಿಸಿದರು ಗಾಯ ಕೆಡಹಿ ||
ಹೂಣಿಗಾರರು ಒದ್ದು ಮುರಿಯಲ್ಕೆ ಕುದುರೆಯ |
ಶೋಣಿತಮಯವಾಯ್ತು ರಣದಿ        ||೩೦೫||

ಆನೆಸಂಕುಲ ಬಹ ಹದನವರಿತು ಬಭ್ರು |
ವಾಹ ಸಂಹರಿಸಿ ಮುಂಬರಿದು ||
ಮಾನವಾಧಿಪರ ಲೆಕ್ಕಿಸದೆವೊಳಗೆ ಪೊಕ್ಕು |
ತಾನೆ ರಣದೊಳಿದಿರಾದ    ||೩೦೬||

ಭಾಮಿನಿ (ಅರ್ಧ)
ತಂದೆಯೊಳು ಮಾರ್ಮಲೆಯಬಾರದು |
ಎಂದು ನೋಡಿದರೆನ್ನ ಜರೆದೆಲ |
ಇಂದು ನಿನ್ನನು ಕಾಯ್ವ ಭಟನಾರೆಂದು ಗರ್ಜಿಸಿದ ||

ರಾಗ ಶಂಕರಾಭರಣ ಮಟ್ಟೆತಾಳ
ಎಂದ ಮಾತ ಕೇಳಿ ಸಾಲ್ವ | ಇಂದ್ರಮೊಮ್ಮನ ||
ಮುಂದೆ ರಥವ ಚಾಚಿ ಪೇಳ್ದ | ನೊಂದು ವಾಕ್ಯವ        ||೩೦೭||

ತಂದೆಯೊಡನೆ ತರುಬೆ ನಿಲುವ | ದಂದವಾವುದೊ ||
ಎಂದು ನಗುತ ಹತ್ತು ಬಾಣ | ದಿಂದಲೆಸೆದನು            ||೩೦೮||

ದಾನವನ್ನ ಶರವ ಬಭ್ರು | ವಹನ ತರಿದನು ||
ಭಾನುಮಾರ್ಗದಿಂದ ಖಳನ | ಗಾರುಗೆಡಿಸಿದ ||೩೦೯||

ಬೊಬ್ಬಿಡುತ್ತಲಸುರನೆಚ್ಚ | ಬಹಳ ವಿಸ್ಮಯ ||
ಇಬ್ಬರಂಗದೊಳಗೆ ಸೋಲು | ವಿಲ್ಲದಾಯಿತು  ||೩೧೦||

ಆರು ಕಣೆಗಳಿಂದ ಪಾರ್ಥಿ | ತೇರ ಕಡಿದನು ||
ಸಾರಥಿಯ ಗೆಲಿದು ಖಳನ | ಗಾರುಗೆಡಿಸಿದ   ||೩೧೧||

ಪಂಥವೇರಿ ಗದೆಯ ಕೊಂಡು | ನಿಂತು ಕಾದಿದ ||
ಕುಂತಿಸುತನ ತನಯನಸ್ತ್ರ | ದಿಂದಲೊರಗಿದ ||೩೧೨||

ಭಾಮಿನಿ (ಅರ್ಧ)
ಸಾಲ್ವರಕ್ಕಸ ಬೀಳಲಾ ಕ್ಷಣ |
ಮಾರ್ಮಲೆವ ಭಟರಿಲ್ಲದಾಯಿತು |
ಪಲ್ ಮೊರೆದು ಪ್ರದ್ಯುಮ್ನ ತಾ ನಡೆತಂದನಾಹವಕೆ ||

ರಾಗ ದೇಶಿ ಅಷ್ಟತಾಳ
ಮಣಿಪುರಾಧೀಶ ಕೇಳೆನ್ನ ಮಾತ |
ಮಣಿದು ಯೆನ್ನೊಳು ಮೊದಲೆ ಬಂದರೆ | ರಣವು ನಿನಗೇಕೆಂದನು            ||೩೧೩||

ಎಣಿಕೆ ತಪ್ಪಿತುಯೆನ್ನೊಳು ಇದಿರಾಗಿ |
ಸೆಣಸಿ ನೋಡೆಂದೆನುತ ಮನ್ಮಥ | ಮೊನೆಗಣೆಗಳಿಂದೆಚ್ಚನು      ||೩೧೪||

ಭಾಪುರೇ ಫಾಲಲೋಚನದಲಿ ಬೆಂದ |
ಕೋಪವೆನ್ನೊಳು ತೋರದಿರುಕಣೆ | ಮಾಪು ಗೆಯ್ ಬಲವುಳ್ಳಡೆ  ||೩೧೫||

ಐದು ಬಾಣದಿ ಅಸುರಾರಿತನಯನ |
ಮೈದುನನು ನೀನೆನುತ ಬಾಣವ | ಹೊಯ್ದು ರಥ ಪುಡಿಗೆಯ್ದನು  ||೩೧೬||

ಖಂಡಲಾತ್ಮಜಸುತನು ಇಕ್ಕಡಿಗೆಯ್ದು |
ಚಂಡಶರವನುಯೆಸೆಯಲಾಮಸೆ | ಗೊಂಡು ಮದನನು ಬೆದರಿದ           ||೩೧೭||

ಮತ್ತೆ ಬೇರೊಂದು ಮಣಿರಥದೊಳಗೇರೆ |
ಚಿತ್ತಜನ ಮೇಲೆಸೆದು ಕಣೆಗಳ | ಕತ್ತರಿಸಿ ಧನು ಕವಚವ           ||೩೧೮||

ಫುಲ್ಲನಾಭನ ಸುತ ಫಲುಗುಣಿಯೊಳು |
ಎಲ್ಲ ಆಯುಧದಲ್ಲಿ ಕಾದಿದ | ರಲ್ಲಿ ಜಯವನು ಕಾಣದೆ   ||೩೧೯||

ಪದಚರನಾಗಿ ಪರಿಪರಿಯಲಿ ಕಾದಿ |
ಬೆದರಿತೆಣ್ದೆಸೆಯಳುಕಿ ಮನದಲಿ | ಮದನ ಮೂರ್ಛೆಯ ಕೊಂಡನು          ||೩೨೦||

ವಾರ್ಧಕ
ಕ್ಷೋಣೀಂದ್ರ ಕೇಳ್ ಮುಂದೆ ಪ್ರದ್ಯುಮ್ನ ಮೆಯ್ಮರೆಯೆ |
ಬಾಣದಿಂ ಸಾಂಬ ಸಾತ್ಯಕಿ ಸುವೇಗರ ಕೆಡಹಿ |
ಕ್ಷೋಣಿಯೊಳಗೊರಗೆ ಯವನಾಶ್ವ ನೀಲಧ್ವಜರ್ ಬಭ್ರುವಾಹನನ ಧುರದಿ ||
ಕಾಣಿಸಿದ ಮೇಲಸುರ ಸಾಲ್ವ ಕೃತವರ್ಮರಂ |
ಕೇಣಮಿಲ್ಲದೆ ಕದಳಿವನವ ಗಜ ಪೊಕ್ಕಂತೆ |
ಸೇನೆ ಸವರಲ್ ಕಂಡು ಫಲುಗುಣಂ ರೋಷದಿಂ ವೃಷಕೇತಗಿಂತೆಂದನು   ||೩೨೧||

ರಾಗ ಭೈರವಿ ಝಂಪೆತಾಳ
ಕಂದ ಪೋಗೈ ಶೀಘ್ರದಿಂದ ಹಸ್ತಿನಪುರಕೆ |
ಒಂದುಳಿಯದೆಮಜ ಮಾ | ಧವರೊಡನೆ ಪೇಳು          ||೩೨೨||

ಮಖತುರಗ ಹೋಗಾಡಿ | ಮುಂಬರಿದು ಮಾರ್ಬಲವು |
ಮುಖವಾಗಿ ಸಾಗಿದರು | ಯಮನ ಪಟ್ಟಣಕೆ   ||೩೨೩||

ನಷ್ಟವಾಯಿತು ಸೇನೆ | ನಾವುಳಿವ ಪಾಡಿಲ್ಲ |
ದಿಟ್ಟ ಮಣಿಪುರಾಧೀಶ | ನೊಡನೆ ಕಾಳಗದಿ    ||೩೨೪||

ಅವಶಕುನ ಮುಂತಾಗಿ | ಅವನಿಪಾಲಗೆ ಪೇಳು |
ಬವರ ಕೊಡುವೆನು ನಾನು | ಬಲುಭಟನೊಳಿಲ್ಲಿ           ||೩೨೫||

ಇಂದುಕುಲತಿಲಕ ನಿ | ನ್ನಿಂದ ಸುಗತಿಯು ನಮಗೆ |
ಮುಂದೆ ಗಜಪುರ ಬಾಳ್ವೆ | ಕೆಡಿಸದಿರು ಪೋಗು          ||೩೨೬||

ಕುವರನನು ಬಿಗಿದಪ್ಪಿ | ಕಣ್ಣನೀರಲಿ ಪಾರ್ಥ |
ಬಲು ಮಮತೆಯಲಿ ಮೆಯ್ಯ | ತಡವರಿಸಿ ನುಡಿದ        ||೩೨೭||

ಭಾಮಿನಿ (ಅರ್ಧ)
ನುಡಿಯ ಕೇಳುತ ಕರ್ಣತನಯನು |
ನಡುನಡುಗಿ ಬೆವರಿಡುತ ಕಾಯದಿ |
ಒಡಲುರಿಯ ತಾಪದಲಿ ನುಡಿದನು ಬಿಕ್ಕಿಬಿರಿದಳುತ ||

ರಾಗ ಕೇದಾರಗೌಳ ಅಷ್ಟತಾಳ
ತಂದೆ ಸುರಪುರದಿ ನಿಂದ ಕಾರಣ ನೀವು | ತಂದು ಸಲಹಿದಿರೆನ್ನ |
ಇಂದು ನಿಮ್ಮಯ ಪಾದವಗಲಿ ಪೋದರೆ ಸುರ | ವೃಂದವು ನಗದಿಹುದೆ    ||೩೨೮||

ಏಕಪತ್ನೀವ್ರತವೇಕವಚನ ನಮ | ಗೇಕೆಂದು ತಪ್ಪಿದರೆ ||
ನಾಕದೊಳಗೆ ಸುರ ಸಭೆಯಿಂದ ಹಿರಿಯರು | ನೂಕೆ ನರಕಕಿಳಿಯುವರು   ||೩೨೯||

ಪಗೆಯವರೊಡನೆ ನಿಮ್ಮನು ಬಿಟ್ಟು ಪೋದರೆ | ಮಗನೆಂಬರೆ ಲೋಕದಿ ||
ನಗಧರಾದ್ಯರು ನಿಮ್ಮ ಬಗೆಯರಿಯದೆವುಂಟೆ | ಮಿಗೆ ಚಿಂತಿಸುವುದೇತಕೆ  ||೩೩೦||

ಬೊಪ್ಪ ಈ ಭಟನ ಕಾಳಗದಲ್ಲಿ ಹಿಡಿತಂದು | ಒಪ್ಪಿಸುವೆನು ಪಾದಕೆ ||
ಅಪ್ಪಣೆಯೆನಗಿತ್ತು ಕಳುಹು ಯಜ್ಞದ ವಾಜಿ | ಕಪ್ಪ ಸಹಿತ ಕೊಂಬೆನು        ||೩೩೧||

ಭಾಮಿನಿ
ಶ್ವೇತವಾಹನಗೆರಗಿ ಕರ್ಣಜ |
ಪ್ರೀತಿಯಲಿ ಬೀಳ್ಗೊಂಡು ರಥವ ಮ |
ಹಾತಿಶಯ ರೋಷದಲಿಯಡರಿದ ಚಾಪ ಧ್ವನಿಗೆಯ್ದು |
ಭೂತಳಕೆ ಮೆಯ್ಮರೆದ ಸೇನೆಯ
ನೂತನವ ಕಾಣುತ್ತಲಾ ವೃಷ |
ಕೇತುವರ್ಜುನಿಗಸ್ತ್ರಸಾರದಿ ಮುಸುಕುತಿಂತೆಂದ          ||೩೩೨||

ರಾಗ ಶಂಕರಾಭರಣ ಮಟ್ಟೆತಾಳ
ತನ್ನ ಪಿತನ ಬಲವ ಗೆಲಿದು | ಘನ್ನಘಾತಕ ಬಭ್ರುವಾಹನ |
ಎನ್ನೊಡನೆ ಸೆಣಸಿ ನೋಡು | ಕರ್ಣಜಾತನು  ||೩೩೩||

ಪಗೆಯ ಕರ್ಣ ಗೆಲಿದು ಪಾರ್ಥ | ಮಗನ ವಧೆಗೆ ಎನ್ನ ಕೈಯ |
ಬಗೆಯ ವಿಂಗಡಿಸಿದನೆನುತ | ನಗುತಲೆಚ್ಚನು ||೩೩೪||

ಹಿರಿಯ ಪೇಳ್ದ ಮಾತಿಗಾಗಿ | ಮರೆಯಲಾಗದೆನುತಲದ್ರಿ |
ಶರವನೆಚ್ಚು ಫಲುಗುಣಿಯನು | ಕೆರಳಿಸಿದನು  ||೩೩೫||

ಅಳಿವ ಭಟನ ಆಳುತನಕೆ | ಇಳೆಯೊಳಗೆ ಜೋಡಿಲ್ಲೆನುತ್ತ |
ಪೊಳೆವ ವಜ್ರದಿಂದ ಕಡಿದು | ಬೀಳಲೆಚ್ಚನು    ||೩೩೬||

ಕಾಯದಾಸೆಯೆನಗೆ ಇಲ್ಲ | ಕಾಯ್ದು ನಿನ್ನ ಬಿಡುವನಲ್ಲ ||
ಕಾಯ್ದುಕೊಳ್ಳೆನುತ್ತ ಕರ್ಣಿ | ಗಾಯಗಾಣಿಸೆ     ||೩೩೭||

ಭಾಮಿನಿ
ಎಚ್ಚರಿಸಿ ನುಡಿ ನುಡಿಯೆ ಕರ್ಣಜ |
ಹೆಚ್ಚಿತಿಬ್ಬರಿಗಾಳುತನವನು |
ಮುಚ್ಚಳವ ತೆಗೆದಿಟ್ಟ ಉರಗನ ಕ್ರೂರ ಫಣದಂತೆ ||
ಅಚ್ಚರಿಯನೇನೆಂಬೆ ಕರ್ಣಜ |
ನೆಚ್ಚು ಕಡಿದನು ತೇರು ತೇಜಿಯ |
ಕೊಚ್ಚಿ ಕೆಡಹುತ ಸೇನೆಯನು ಕಿರಿಯಯ್ಯಗಿಂತೆಂದ     ||೩೩೮||

ರಾಗ ಮಾರವಿ ಅಷ್ಟತಾಳ
ನೋಡಿದೆಯಾ | ಬೊಪ್ಪ | ನೋಡಿದೆಯಾ || ನಿಮಗೆ |
ಜೋಡಿಲ್ಲ ಜಗದೊಳೆಂಬಂತೆ |
ಮಾಡುವೆನು ಕಣ್ಣಮುಂದೆ || ನೋಡಿದೆಯಾ               || ಪ ||

ಬಭ್ರುವಾಹನ ತನ್ನ ತಾಯಿ | ಗೊಬ್ಬ ಮಗನಾಗಿಂತಿರ್ಪ |
ಅಬ್ಬರಿಸಿಕೊಂಡು ನಮ್ಮ ಸರ್ಬ ಬಲವನು ||
ಇಬ್ಬರು ನಾವೆಂಬ ಮನದಿ ವಿಭ್ರಮಿಸಬೇಡ ಬಹಳ |
ಕೊಬ್ಬಿದ ಸೇನೆಯ ಗೆಲಿದು ಉರ್ವಿಗೊರಗಿಸದೆ ಬಿಡೆನು || ನೋಡಿದೆಯಾ ||೩೩೯||

ತೆಬ್ಬ ಬಿಗಿದ ಬಿಲ್ಲ ಧ್ವನಿಗೆ ಗರ್ಭವೊಡೆವಂತೆ ಕರ್ಣಿ |
ಪೆರ್ಬುಲಿ ಮೃಗದೊಳ್ ಪೊಕ್ಕಂತೆ ಸರ್ಬರನೆಚ್ಚು ||
ಆರ್ಭಟಿಸಿ ಚಾಪವಿಡಿದು ಬಭ್ರುವಾಹನ ತರಿದು ಮತ್ತೆ |
ಕೂರ್ಗಣೆಯಿಂದಲಿ ಕರ್ಣಿ ಕಾರ್ಗೋಲ ಚಾಪ ಕಡಿದ || ನೋಡಿದೆಯಾ      ||೩೪೦||

ಬಲ್ಲೆ ನಿನ್ನ ಬಗೆಯನೆಂದು ಫಾಲಾಕ್ಷನಂದದಿ ಕರ್ಣಿ |
ಮಲ್ಲ ಪಾರ್ಥಜಗೆ ಸರಳಿನಲ್ಲಿ ಬಿಗಿದನು ||
ಭಲ್ಲೆ ಭಿಂಡಿವಾಲ ಮುಸಲದಲ್ಲಿ ಮುದ್ಗರ ಭುಸುಂಡಿ |
ಶಲ್ಯ ಕುಂತ ಖಡ್ಗ ಗದೆಗಳಲ್ಲಿ ಸೆಣಸಿದರೀರ್ವರು || ನೋಡಿದೆಯಾ          ||೩೪೧||

ಕಾದಿ ದಣಿದು ಕರ್ಣಜಾತ ಕ್ರೋಧದಿಂದ ಹರಿಸೆ ರಥವ |
ನಾದಿಮೂರ್ತಿ ಸೂರ್ಯನ ತೇಜದಿ ನೊಂದು ||
ಮಾಧವನ್ನಭಜಿಸಿ ಸಂಪಾತಿಯಂತೆ ಬಭ್ರುವಾಹನ |
ರಾಧೇಯಾತ್ಮಜನ ರಥವ ಸಾಗಿಸಿಕೊಂಡೊಯ್ದಾಗಸಕೆ || ನೋಡಿದೆಯಾ ||೩೪೨||

ವೀರ ವೃಷಕೇತುವಿಳಿದು ಕಾರಿ ಕೆಂಡಗಂಗಳಿಂದ |
ಮೂರು ಬಾಣದಿ ಗಗನಕೆ ಹಾರಿಸಿ ಮತ್ತೆ ||
ತೋರಿ ಫಲುಗುಣಗೆ ಕರ್ಣಿಯೇರಿದ ಠಾವ ನೋಡೆಂದು |
ವೀರ ಬಭ್ರುವಾಹನ ಮತ್ತೆ ಪುಟನೆಗೆದು ಧರೆಗೆ ಬಂದ | ನೋಡಿದೆಯಾ     ||೩೪೩||

ರಾಗ ಪಂಚಾಗತಿ ಮಟ್ಟೆತಾಳ
ಬಲ್ಲಿದೆಯಲಾ | ಭಾಸ್ಕರಜಸುತ ||
ಮಲ್ಲರಂಗದೊಳಗೆ ಸೋಲಿ | ಸಿನ್ನು ನೋಡುವ           ||೩೪೪||

ಗದೆಯ ಕೊಂಡರು | ಗಾಢ ಗರ್ವದಿ ||
ಕದನದಾಯ ಕಂಡು ಲೋಕ | ಬೆದರಿತಾಗಳೆ ||೩೪೫||

ಹೊಯ್ದನಭ್ರಕೆ | ಒರಗೆ ಕರ್ಣಜ ||
ಬಯ್ದು ವಿಧಿಯ ಮರುಗಿದನು | ಸುಯ್ದು ಫಲುಗುಣ       ||೩೪೬||

ಎಚ್ಚರೆದ್ದನು | ಇನಜನಂದನ ||
ನೆಚ್ಚ ಗಾಯಕಾಗಿ ಪಾರ್ಥಿ | ಮೂರ್ಛೆಗೊಂಡನು          ||೩೪೭||

ಸಂತವಿಸಿದರು | ಸೂತಮುಖದಲಿ ||
ಪಂಥವೇರಿ ಗದೆಯ ಕೊಂಡು | ನಿಂತುಕಾದಲು           ||೩೪೮||

ಶೇಷಮೊಮ್ಮನು | ಸ್ವರ್ಣಗರ್ಭ ಮ ||
ಹಾ ಶರವ ಪೂಡಿ ಕರ್ಣ | ಜಾತಗೆಂದನು       ||೩೪೯||

ಚಿತ್ತಜಯ್ಯನ | ಭಜಿಸುಯೆನ್ನುತ ||
ಮತ್ತೆ ಬಾಣ ಬಿಡಲು ಶಿರವ | ಕತ್ತರಿಸಿದುದು   ||೩೫೦||

ವಾರ್ಧಕ
ವಸುಧೇಶ ಕೇಳಿಂತು ವೃಷಕೇತು ಮಡಿಯಲ್ಕೆ |
ವಶಮಿಲ್ಲದಂತಾಯ್ತು ಸರ್ವೇಂದ್ರ್ಯ ಫಲುಗುಣಗೆ |
ವೃಷಕೇತುವಿನ ಮುಂಡ ಕನಲ್ದೆದ್ದು ಚಿತ್ರಾಂಗದೆಯ ಸುತನ ಬಲ ಸವರಿತು ||
ಅಸಮ ಗಾಂಡೀವಿ ಶಿರ ಪಿಡಿದು ತೊಡೆಯೊಳಗಿಟ್ಟು |
ಬಸವಳಿದು ಬಿಗಿದಪ್ಪಿ ಚುಂಬನವ ಗೆಯ್ದು ಮಿಗೆ |
ಶಶಿಕುಲದ ಬಾಳ್ವೆಯಳಿದುದೆ ಕಂದ ಹಾಯೆಂದು ಹಮ್ಮೈಸಿ ಶೋಕಿಸಿದನು            ||೩೫೧||

ರಾಗ ನೀಲಾಂಬರಿ ಆದಿತಾಳ
ಕರ್ಣಜಾತ ಕಾಮರೂಪ ಮ | ಹಾರ್ಣವಪ್ರತಾಪ ||
ವರ್ಣ ನಾಲ್ಕರಲಿ ನಿನ್ನ ಪೋಲ್ವ ವೀರರುಂಟೆ  ||೩೫೨||

ಶಾಪವಶವಲ್ಲದಿಂಥಾ | ಪಾಪ ನಮಗುಂಟೆ |
ಈ ಪರಿಯೊಳಳಿದ ಮೇಲೆ | ಯಜ್ಞವೇತಕಿನ್ನು ||೩೫೩||

ಇಂದು ಎನ್ನೊಡನೆ ಕೋಪ | ದಿಂದ ಇರಲೇಕೆ ||
ಮುನ್ನಿನಂತೆ ಮಾತನಾಡು | ಮೌನವ ನೀ ಬಿಡು         ||೩೫೪||

ಸೊಗಸಾಯಿತೆ ಕೃಷ್ಣ ನಿನಗೆ | ಮಿಗೆ ಪೇಳ್ವುದಿನ್ನೇನು ||
ಮಗನೆ ನಿನ್ನ ಮಡುಹಿದಂಥ | ಪಗೆಯವ ನಾನಾದೆ      ||೩೫೫||

ಕಂದ ಸುಭದ್ರೆ ಕುಂತಿಯರ್ಗೇ | ನೆಂದು ಪೇಳಲಿನ್ನು ||
ಚಂದ್ರನಂಥ ಕುವರ ನಿನ್ನ | ಕೊಂದೆನೆಂಬೆನೆಂತು        ||೩೫೬||

ಭಾಮಿನಿ
ಅರ್ಜುನನು ಬಿಗಿದಪ್ಪಿ ಮುದ್ದಿಸಿ |
ಪ್ರಜ್ವಲಿಪ ಕರ್ಣಜನ ಶಿರವನು |
ವಜ್ರ ಮಾಣಿಕ ಮೌಕ್ತಿಕದ ಕುಂಡಲ ಕಿರೀಟವನು ||
ಸಜ್ಜನರು ದುಃಖಿಸಲು ವರ್ಣಿಸಿ |
ನಿರ್ಜರೇಂದ್ರನ ಸೂನು ಮರುಗಲು |
ಮೂರ್ಜಗವು ಬೆರಗಾಗೆ ವೃಷಕೇತುವಿನ ಮರಣದಲಿ    ||೩೫೭||