ಶಾರ್ದೂಲವಿಕ್ರೀಡಿತಂ
ಶ್ರೀಕಾಂತಂ ಖಲಕೌರವಾದಿನಿಧನೇ ಸಾಕಂ ಪರಂ ಕಾರಣಂ
ನಾಕೀಂದ್ರಾದ್ಯವತಾರಕೈರ್ವರಗುಣೈಃ ಭೂಕಾಮುಕೈಃ ಪಾಂಡವೈಃ |
ಪಾಕಾರಿಸ್ತುತವಾಹಮೇಧಕರಣೇ ಸಾಕಾಂಕ್ಷಪಾರ್ಥಕ್ರಿಯಾ
ನೌಕಾನಾಏಕಮರ್ಜುನಪ್ರಣಯಿನಂ ಹೈಕಾಂತಿಸೇವ್ಯಂ ಭಜೇ ||
ರಾಗ ನಾಟಿ ಝಂಪೆತಾಳ
ಶರಣು ಶಶಿಧರಪುತ್ರ ಶರಣು ಸಕಲಪವಿತ್ರ |
ಶರಣು ಕೋಮಲಗಾತ್ರ | ಶರಣು ಸುಚರಿತ್ರ
ಶರಣು ವಿದ್ಯವಿಧಾತ್ರ ಶರಣು ಸುರಗಣಮಿತ್ರ |
ಶರಣು ವಿಘ್ನವಿಚಿತ್ರ ಶರಣು ಭವಹೋತ್ರ ||
ಶರಣು ಶರಣು ||೧||
ಹಿಮಕರನೊಳಿದಿರಾಗಿ ಶಾಪವನು ಮುನಿದಿತ್ತೆ |
ದ್ಯುಮಣಿಕೋಟಿಪ್ರಕಾಶ ಇಭವದನವೇಷ ||
ಅಮರಾರಿಕುಲನಾಶ ಅಮಿತಗುಣಗಣಧೀಶ |
ಸುಮನಸಾದ್ಯರ ಪೋಷ ಸುಪ್ರಸಿದ್ಧೇಶ ||
ಜಯತು ಜಯತು ||೨||
ಅಜ ವಿಷ್ಣು ದೇವತೆಗಳಂಬುನಿಧಿಮಥನದಲಿ |
ಭಜಿಸಿ ನಿನ್ನನು ಕರೆಯೆ ನೀ ಬಾರದಿರಲು ||
ಭಜಕರನು ಬಿಟ್ಟು ಪೋಗುವುದಕ್ಕೆ ಆಲಸ್ಯ |
ರಜತಪುರದೊಳು ವಾಸ ಭಳಿರೆ ವಿಘ್ನೇಶ |
ಶರಣು ಶರಣು ||೩||
ರಾಗ ಸೌರಾಷ್ಟ್ರ ಏಕತಾಳ
ಅಂಬ ಶಾರದೆ ಜಗ | ದಂಬ ಮಹಾಕಾಳಿ ||
ಶುಂಭನಿಶುಂಭಾರಿ | ನಂಬಿದೆ ಪದವ ||೪||
ಶಂಭುಶಿವನ ರಾಣಿ | ವರದೆ ಕಲ್ಯಾಣಿ ||
ಕಂಬು ಕಂಠಿನಿ ಕಾಮ | ಜನನಿ ಶರ್ವಾಣಿ ||೫||
ತಾಯೆ ಭಾರತಿ ಮಹಾ | ಮಾಯೆ ತುಂಬುರ ವೀಣಾ ||
ಗಾನೆ ಸನ್ಮತಿಯಿತ್ತು | ಬಾಯೊಳು ನೆಲಸೆ ||೬||
ದ್ವಿಪದಿ
ಗುರುವಿನಂಘ್ರಿಯ ಭಜಿಸಿ ಗಾರ್ಗ್ಯಗೌತಮರ |
ಚರಣಕಾನತನಾಗಿ ಚಂದ್ರಭಾಸ್ಕರರ ||೭||
ಬ್ರಹ್ಮ ಹರಿ ನಾರದರಿಗೊಮ್ಮೆ ಕೈಮುಗಿದು |
ಗಮ್ಮನೆರಗುವೆನು ದಿಕ್ಪಾಲಕರಿಗೊಲಿದು ||೮||
ತರಳನಾಡಿದ ಕೃತಿಯ ತಪ್ಪಿರಲು ನೋಡಿ |
ಸರಿಯಾಗಿ ಜನರು ತಿದ್ದುವುದು ಕೃಪೆ ಮಾಡಿ ||೯||
ವಾರ್ಧಕ
ಭಾರತಿಯ ಬಲಗೊಂಡು ಸೂತಶೌನಕಗೆರಗಿ |
ನಾರದಾದ್ಯರ ವ್ಯಾಸಮುನಿಯಂಘ್ರಿಯಂ ಸ್ಮರಿಸಿ |
ಭಾರತಾಮೃತಶರಧಿಯೊಳಗೆ ಪಿರಿದಾಗಿರುವ ಅಶ್ವಮೇಧದ ಕಥೆಯನು ||
ಧಾರಿಣಿಯೊಳರಿವಂತೆ ಯಕ್ಷಗಾನಕ್ರಮದಿ |
ಸಾರವಿದು ಪೇಳುವೆನು ಶ್ರುತಿತಾಳಬಂಧದಿಂ |
ವಾರಿಧಿಯ ತಡಿಯಲಿಹ ಉಡುಪಿಯಲಿ ನೆಲಸಿರುವ ಶ್ರೀಕೃಷ್ಣನ ಕಟಾಕ್ಷದಿ ||೧೦||
ರಾಗ ಮಾರವಿ ಝಂಪೆತಾಳ
ಇಂದುಕುಲಜಾತಜನಮೇಜಯಗೆ ಭಾರತವ |
ನಂದೊಲಿದು ಪೇಳ್ದ ವೈಶಂಪಾಯಮುನಿಪ ||೧೧||
ಹೀಗೆ ಕುರುಕುಲವೆಂಬ ಕಾನನವ ಸಂಹರಿಸಿ |
ಯಾಗವನು ಕೈಗೊಂಡನಾಗ ಧರ್ಮಜನು ||೧೨||
ರಣಕೆ ವಾಜಿಯ ಬಿಟ್ಟು ಬಭ್ರುವಾಹನನೊಡನೆ |
ಸೆಣಸಿ ಮಡಿದನು ಪಾರ್ಥ ಮಣಿನಗರದೊಳಗೆ ||೧೩||
ರಾಗ ಶಂಕರಾಭರಣ ತ್ರಿವುಡೆತಾಳ
ಮುನಿಕುಲಾಧಿಪ ಪಾಂಡುತನಯರ |
ಘನ ಪರಾಕ್ರಮವೆತ್ತಲಡಗಿತು |
ವನಜನಾಭನ ಕರುಣದಳತೆಯು | ಕನಸಿದೇನೈ ||೧೪||
ವಾಸವನ ಸುತ ಹರ ಸುರಾದ್ಯರೊ |
ಳೀಸು ಕಾಳಗವಾಗಿ ಪಡೆದಿಹ |
ಪಾಶುಪತ ಮುಂತಾಗಿ ಹೋಯ್ತೇ | ಗಾಸಿಯಾಗಿ ||೧೫||
ಆ ಸುಭದ್ರಾಪತಿಗೆ ಸಾರಥಿ |
ವಾಸುದೇವನು ಇರಲು ಮೋಹದ |
ಪಾಶವಡಗಿತೆ ರಣದಿ ಬೀಳುವ | ಮೋಸವೇನೈ ||೧೬||
ಮಗನೆ ಬಿಡು ಬಿಡು ಮನದ ಚಂಚಲ |
ವಗಣಿತಾತ್ಮನು ಕಲಿ ಧನಂಜಯ |
ವಿಗಡ ಶಾಪದಿ ಮಡಿದನಲ್ಲದೆ | ಪಗೆಗಳುಂಟೆ ||೧೭||
ಚಿಂತ್ಯರಹಿತನು ಕೃಷ್ಣ ನಿಮ್ಮಯ |
ಸಂತತಿಗೆ ಹೊಣೆಯಾಗಿ ಪಾಲಿಪ |
ನಂತಕನ ಸದೆಬಡಿದು ಆಳುವ | ರಂತೆ ಧರೆಯ ||೧೮||
ಜಗದ ರಾಜ ಕುಮಾರರೊಳಗೀ |
ಬಗೆಯ ಕಾಣೆನು ಕಥೆಯ ಕೇಳುವ |
ಸೊಗಸು ನಿನ್ನದು ಬೇರೆ ಪೇಳ್ವೆನು | ಮಖದ ಕಥೆಯ ||೧೯||
ಭಾಮಿನಿ
ತಂದೆ ಮುನಿಪತಿ ಕರುಣಿಸಿದ ಕಥೆ |
ಯಿಂದ ಗೆಲಿದನು ದುರಿತದುಃಖವ |
ನೊಂದುಳಿಯದೆನಗರುಹಬೇಕೆಂದೆರಗಿದನು ಪದಕೆ ||
ಮಂದಹಾಸದೊಳೆತ್ತಿ ಕರುಣಾ |
ಸಿಂಧು ತಕ್ಕೈಸುತ್ತ ನುಡಿದನು |
ಕಂದ ಕೇಳೈ ಪಾಂಡವರ ಸುಕೃತಾಬ್ಧಿಕಥನವನು ||೨೦||
ದ್ವಿಪದಿ
ಧಾರಿಣೀಪತಿ ಕೇಳು ದಂತಿನಗರದಲಿ |
ನೂರೊಂದು ಸುತರುದಿಸೆ ಧೃತರಾಷ್ಟ್ರನೃಪಗೆ ||೧೨೧||
ಸಾರಿ ವಿದ್ಯೆಯ ಕಲಿತು ಪಾಂಡವರ ಕೂಡಿ |
ಮಾರುತಿಯ ಕೆಣಕಿದರು ದಿನ ದಿನದಿ ನೋಡಿ ||೨೨||
ಅವರೊಳೆರಡಿಲ್ಲೆಂದು ದ್ವೇಷವನು ತಾಳಿ |
ಅವನಿಯೊಳಗಿರ್ದರಿಂದ್ರಪ್ರಸ್ಥವಾಳಿ ||೨೩||
ವಾರ್ಧಕ
ಅರಸ ಕೇಳರ್ಜುನಂ ಸಕಲ ತೀರ್ಥಕ್ಷೇತ್ರ |
ಚರಿಸಿ ಬರೆ ಶೇಷಸುತೆ ಲೂಪಿ ಚಿತ್ರಾಂಗದಾ |
ತರುಣಿಯರು ಬಿಡದೆ ಭೋಗಂಗೊಂಡು ಹರುಷದೊಳಗಾಗ ಸುತನಂ ಪಡೆದರು ||
ಮರುದಿವಸ ಫಲುಗುಣಂ ಇರದೆ ಯತಿವೇಷದಿಂ |
ಪರಮದ್ವಾರಕೆ ಪೊಕ್ಕು ಶ್ರೀಕೃಷ್ಣನನುಜೆಯಹ |
ವರ ಸುಭದ್ರೆಯ ಕೂಡಿಕೊಂಡು ನಡೆದನು ಪುರಕೆ ಮುರಹರನ ಕರುಣದಿಂದ ||೨೪||
ಸೋಮ ಕುಲಸಂಜಾತ ಲಾಲಿಸೈ ಮುಂಗಥೆಯ |
ಭೂಮಿಗೋಸುಗ ಗೆಯ್ದ ಸಮರದಲಿ ಕೌರವರ |
ಸ್ತೋಮವನು ಯಮಸದನಕಟ್ಟಿ ವರ ಪಾಂಡವರು ಹಸ್ತಿನಾವತಿಯೊಳಿರಲು ||
ಭೂಮಿಪಾಲಕ ಯುಧಿಷ್ಠಿರನೊಂದು ದಿನ ತಾನು |
ಪ್ರೇಮದಿಂದನುಜರೊಡಗೂಡುತಾಲೋಚಿಸಿದ |
ನಾ ಮಹಾ ಬಂಧುಹತ್ಯಾಪಾತಕವು ಬಿಡದೆ ಬಾಧಿಸುವುದೆಂದೆನುತಲಿ ||೨೫||
ರಾಗ ಶಂಕರಾಭರಣ ರೂಪಕತಾಳ
ಆ ಸಮಯದಿ ಯಮಸೂನು ಕಂಗಳ ನೀರು |
ಸೂಸಿ ದುಃಖದೊಳಿರಲಾಗ ||
ಈಶಸನ್ನಿಭ ಸುರವಾಸವಾರ್ಚಿತ ವೇದ |
ವ್ಯಾಸ ಬಂದನು ಇಭಪುರಿಗೆ ||೨೬||
ಯೋಗೀಂದ್ರನನು ಇದಿರ್ಗೊಂಡು ಪೀಠವನಿತ್ತು |
ಆಗ ಶಾಸ್ತ್ರೋಕ್ತ ಸತ್ಕರಿಸಿ ||
ಬೇಗದಿಂದಲಿ ಪಾಂಡುಸುತರು ಪಾದಕೆ ಬೀಳೆ |
ಯೋಗೀಂದ್ರನೊಲಿದು ತಕ್ಕೈಸಿ ||೨೭||
ಕಂದ ನಿನ್ನಯ ಮೊಗ ಕಂದಿತೇತಕೆ ರಾಜ್ಯ |
ಬಂದುದಿಲ್ಲವೆ ಕಾಳಗದಲಿ ||
ಒಂದೆ ಕುಲದಿ ಪುಟ್ಟಿ ಅಗ್ರಜಾದಿಗಳನ್ನು |
ಕೊಂದ ಪಾತಕಕೇನು ಮುನಿಪ ||೨೮||
ರಾಗ ಶಂಕರಾಭರಣ ಅಷ್ಟತಾಳ
ಧಾತ್ರಿಗಾಗಿ ಕಾದುವಲ್ಲಿ | ಪುತ್ರಮಿತ್ರರೆಂಬುದುಂಟೆ |
ಕ್ಷತ್ರಿಯರಲಿ ಜನಿಸಿದವರ್ಗೀ | ಚಿತ್ರವೇನಯ್ಯ ||೨೯||
ಹತ್ತು ವರುಷದ ಬಾಲರಿಗೆ | ಶಸ್ತ್ರವಿದ್ಯಾಭ್ಯಾಸ ಕಲಿಸಿ |
ದುತ್ತಮ ಹಿರಿಯರ ಕೊಂದದ್ದು | ಕ್ಷತ್ರಿಯೇ ಮುನಿಪ ||೩೦||
ಲೇಸಾಯಿತಯ್ಯ ನಿನ್ನೊಳು | ಈಸು eನವಿದ್ದ ಮೇಲೆ |
ಪಾಶಕ್ಕೆ ಸಿಲುಕುವರೇ ಭೂ | ಮೀಶ ಕೇಳಯ್ಯ ||೩೧||
ಈಶನಾಣೆಳ್ಳಿನಿತು ರಾಜ್ಯ | ದಾಸೆಯಿಲ್ಲವಡವಿಯೊಳು |
ಕೇಶವನ್ನ ಭಜಿಸಿರುವೆವು | ವ್ಯಾಸ ಮುನಿರಾಯ ||೩೨||
ಸೋಮವಂಶಜ ಕೇಳ್ ಹಿಂದೆ | ರಾಮ ರಾವಣನ ವಧೆಗೆ |
ಪ್ರೇಮದಿ ಕಯ್ಗೊಂಡ ಯಜ್ಞ | ನೀ ಮಾಳ್ಪುದೀಗ ||೩೩||
ಶ್ಯಾಮ ವರ್ಣ ಕುದುರೆ ಯಾವ | ಸೀಮೆಯೊಳುಂಟೆಂಬುದರಿಯೆ |
ಭೂಮಿಸುರರ್ಗೆ ಕೊಡುವುದೇನು | ಹೇ ಮಹಾಮುನಿಪ ||೩೪||
ತಡೆಯದೆ ಪೋಗಿ ಯೌವನಾಶ್ವ | ನೊಡನೆ ಕಾದಿ ಕುದುರೆ ತರಿಸು |
ಒಡವೆ ಹಿಮಾಚಲದಿ ತೋರಿ | ಕೊಡುವೆ ನಾ ಭೂಪ ||೩೫||
ಬಡವರಂತೆ ಇರದೆ ವಿಪ್ರರ್ | ಹಿಡಿದ ದಾನ ವಸ್ತುಗಳನು |
ತಡೆವರಿಂಗೆ ಪಾತಕವಿ | ಮ್ಮಡಿಸಿತೈ ಮುನಿಪ ||೩೬||
ಪೊಡವಿಯೊಳು ಬಿಟ್ಟ ವಸ್ತು | ಪೊಡವೀಶಗಲ್ಲದೆ ಮಿಕ್ಕ |
ಒಡೆಯರುಂಟೆ ತರುವುದಕ್ಕೆ | ಬಿಡು ಚಿಂತೆ ಭೂಪ ||೩೭||
ಬಿಡದೆ ಭೀಮಾರ್ಜುನರಿಂದ | ಕಡು ಬೇಗ ಕೃಷ್ಣನ ಕರೆಸು |
ಹಿಡಿ ದೀಕ್ಷೆ ಅಂಜದಿರೆಂದು | ನಡೆದ ಮುನಿರಾಯ ||೩೮||
ರಾಗ ಶಂಕರಾಭರಣ ತ್ರಿವುಡೆತಾಳ
ಮುನಿಪ ತನ್ನಾಶ್ರಮಕೆ ತೆರಳಲು |
ಮನದಿ ಯಮಜನು ಚಿಂತಿಸಿ ||
ಅನಿಲಜಗೆ ನೇಮಿಸಿದ ಕರೆವ | ದನುಜಹರನ ||೩೯||
ಭೀಮ ಕೇಳೈ ಬಲು ದಿನಾಯಿತು |
ಸ್ವಾಮಿ ಪೋಗಿ ಸದ್ಗುಣ ||
ಧಾಮನಿಲ್ಲದೆ ನಡೆವುದೆಂತೈ | ಹೋಮ ನಮಗೆ ||೪೦||
ರಾಮ ದೇವಕಿ ವಸುದೇವಾದ್ಯರು |
ಪ್ರೇಮದಿಂದವರೆಲ್ಲರು ||
ಕಾಮನಯ್ಯನು ಬರಲಿ ಸತಿಯರ | ಸ್ತೋಮ ಸಹಿತ ||೪೧||
ಅಪ್ಪಣೆಯ ಕೊಂಡರುಹಿ ಕುಂತಿಗೆ |
ಕೀಚಕಾರಿಯು ಭೋಜನ ||
ಕರ್ಪೂರವೀಳ್ಯವ ಕೊಂಡು ನಡೆದನು | ತೇರನೇರಿ ||೪೨||
ರಾಗ ಕಾನಡ ಆದಿತಾಳ
ವಾರಣಾಪುರ ಪೊರವಂಟನು ಭೀಮ |
ಕಾರಣೀಕರ ಕರೆತರಲು ನಿಸ್ಸೀಮ ||೪೩||
ದೇವ ಕೃಷ್ಣಾರ್ಜುನನ ಭಾವ ತಾನಾಗಿ |
ನಾ ಹೋದರಲ್ಲಿಗೆ ನುಡಿಯ ಲೇಸಾಗಿ ||೪೪||
ಧರಣೀಶನಪ್ಪಣೆ ಮೀರದೀ ಪಾಟಿ |
ದ್ವಾರಕೆ ಕಂಡ ಕುಶಸ್ಥಳ ದಾಟಿ ||೪೫||
ರಾಗ ಕೇದಾರಗೌಳ ಅಷ್ಟತಾಳ
ಧಾರಿಣೀಪತಿ ಕೇಳು ದ್ವಾರಕಾನಗರದ | ದ್ವಾರದ ಸಂಭ್ರಮವ ||
ಭೂರಿ ಮಾಣಿಕ ಮುತ್ತು ಹವಳದ ಕೆಲಸವು | ಕ್ಷೀರಸಾಗರದಂದದಿ ||೪೬||
ಓರಂತೆ ನೆಲಗಟ್ಟು ಹೊರಚಾವಡಿಯ ಮೇಲೆ | ಹೇರಾಳ ವಸ್ತುಗಳ ||
ತೋರಣ ಕುರುಜು ಮೇರುವೆ ವಜ್ರಕದಗಳು | ಮಾರುತತನಯ ಕಂಡ ||೪೭||
ಒಡನಿದ್ದ ಸೇನೆಯ ಹೊರಬಾಗಿಲೊಳಗಿಟ್ಟು | ವರ ರಥದಿಂದಿಳಿದು ||
ಪರಿಚಾರಕರ ಲೆಕ್ಕಿಸದೆ ಭೀಮನೊಳಪೊಕ್ಕ | ಕಡಲಶಯನನ ಬಳಿಗೆ ||೪೮||
ಭಾಮಿನಿ
ಅನಿಲತನಯನು ಭರದಿ ಬಂದಾ |
ವನರುಹಾಕ್ಷನ ಚೇಷ್ಟೆಯಲಿ ಮುನಿ |
ಜನಕಸಾಧ್ಯನ ಭೋಜನದ ಗೃಹಕಾಗಿ ನಡೆತಂದ ||
ವನಿತೆಯರು ಚಾಮರವ ಬೀಸುವ |
ಘನತರದ ಭಕ್ಷ್ಯಗಳನುಣುತಿರೆ |
ನೆನೆವ ಭಕ್ತ ಕುಟುಂಬಿ ಭೀಮನ ಕಂಡು ಸತ್ಕರಿಸಿ ||೪೯||
ರಾಗ ತೋಡಿ ಅಷ್ಟತಾಳ
ವಾತಜ ನೀನಿತ್ತಲೇತಕೋಸುಗ ಬಂದೆ |
ಮಾತೆ ಕುಂತಿಗೆ ಕ್ಷೇಮವೆ ||
ಭೂತಳಾಧಿಪ ಫಲುಗುಣ ಮಾದ್ರಿತನಯರು |
ಸ್ವಸ್ಥದೊಳಿಹರೇನಯ್ಯ ||೫೦||
ಅಡವಿಯ ಬಿಟ್ಟ ಮೇಲ್ ಹರುಷವೆ ನಿನ್ನಯ |
ಒಡಲಿಗೆ ತೃಪ್ತಿಯೇನೈ ||
ಅಡಿಗೆ ಮಾಡಿಸಿದೆನು ಬದಲೊಂದು ನಿನಗಾಗಿ |
ಒಡನುಂಬುದು ಕೇಳಯ್ಯ ||೫೧||
ರಾಗ ಭೈರವಿ ಝಂಪೆತಾಳ
ಸರ್ವದಾಯಕ ಕೇಳು ಸಕಲ ರಕ್ಷಕ ನೀನು |
ಓರ್ವ ಬಂದರೆ ಮನೆಗೆ ಅಂಜುವರೆ ಹೀಗೆ ||೫೨||
ಊರ್ವೀಶ ನೀನಲ್ಲ ಊರು ಉಂಬಳಿಯಿಲ್ಲ |
ಸರ್ವಗುಣವೆಲ್ಲಿಹುದು ಗೋವಳರ ಮತಕೆ ||೫೩||
ಸಾರಸಾಂಬಕ ಸಕಲವರಿತು ನೀನೀ ಹಲವು |
ನಾರಿಯರ ಕೂಡಿರುವ ಚೋರತನವೇನೈ ||೫೪||
ಯಾಗದೀಕ್ಷೆಯ ಹಿಡಿದು ಅಣ್ಣ ಧರ್ಮಜನಿಹನು |
ಬೇಗ ಬರಹೇಳಿದನು ಸರ್ವರಿಗು ನಿಮಗು ||೫೫||
ಯೋಗಿ ವೇದವ್ಯಾಸ ಸಕಲ ಋಷಿಗಳು ಪಾದ |
ಕಾಗಿ ಹಾರಯ್ಸುವರು ವಾಗೀಶಪಿತನೆ ||೫೬||
ಭಾಮಿನಿ
ಭೀಮ ಕೋಪಿಸಿಯೆದ್ದ ಸಮಯಕೆ |
ಕಾಮಪಿತ ತಕ್ಕಯ್ಸಿ ನುಡಿದನು |
ಆ ಮಹಾ ಆರೋಗಣೆಯ ಗೃಹಕಯ್ದಿ ಹರುಷದಲಿ ||
ಭಾಮೆಯರ ಸಂಗೀತದಿಂ ಹರಿ |
ಚಾಮರದ ಬೆಡಗಿನಲಿವುಣ್ಣುತ |
ಸ್ವಾಮಿ ಕರ್ಪುರವೀಳ್ಯವನಿಲಜಗಿತ್ತು ಪೊರವಂಟ ||೫೭||
ಅನಿಲಜನ ಕೂಡುತ್ತಲಾ ದಿನ |
ವನಜನಾಭನು ಬಂದು ತನ್ನನು |
ನೆನೆವ ಭಕ್ತರನರಸಿಕೊಂಡಯ್ತಂದ ಗಜಪುರಿಗೆ ||
ಘನಚರಿತ್ರವ ಕೇಳ್ದು ಧರ್ಮಜ |
ನನುಜರಾದ್ಯರ ಕೂಡುತಿದಿರ್ಗೊಂ |
ಡನಿಮಿಷಾವಳಿ ಮೆಚ್ಚಲೆರಗಿದ ಪಾದಪದ್ಮದಲಿ ||೫೮||
ವಾರ್ಧಕ
ಇಂತು ಹರಿ ಮೆಯ್ದೋರಲಾ ಬಳಿಕ ಭೂಮಿಪಂ |
ಕಂತುಪಿತನಂ ಸ್ಮರಿಸೆ ಕುದುರೆಯಂ ಒಪ್ಪಿಸುವೆ |
ವೆಂತೆನುತ ಭೀಮ ಕರ್ಣಜ ಮೇಘನಾದರು ಮಹಾಂತ ಶೌರ್ಯವ ತಾಳುತ ||
ನಿಂತು ಬೆಸನಂ ಬೇಡಿ ಭದ್ರಾವತೀ ನಗರ |
ಮಂ ತವಕದಿಂ ಪೊಕ್ಕು ಯೌವನಾಶ್ವನ ಗೆಲ್ದು |
ಪಂಥದಿಂದಶ್ವ ಸಹಿತಾ ನೃಪತಿ ಧರ್ಮಜಗೆ ಸಂತಸದೊಳೊಪ್ಪಿಸಿದರು ||೫೯||
Leave A Comment