ರಾಗ ಸಾಂಗತ್ಯ ರೂಪಕತಾಳ
ಜನನಾಥ ಕೇಳಯ್ಯ ಜಗದ ಜೀವನು ನಿಮ್ಮ |
ನ್ವಯಕೆ ಬೆಂಬಲವಾದಪರಿಯ ||
ಅನುಜರ ಕಯ್ಯ ಕರೆಸಿಕೊಂಡು ಯಮಜಾತ |
ಮುನಿಕುಲಾಧಿಪರ ಭೂಮಿಪರ                    ||೬೦||

ಇಂತು ಸಕಲ ಜನಸಹಿತ ಕೂಡಿರಲಾಗ |
ಕಂತು ಪಿತನನುಜ್ಞೆಯಲಿ ||
ಅಂತರಹಿತನನು ಸ್ಮರಿಸುತ್ತ ಬರೆ ಮುನಿ |
ಅಂತಕಾತ್ಮಜನಿದಿರ್ಗೊಂಡು                       ||೬೧||

ಬಾದರಾಯಣನಿಗೆ ಭದ್ರಪೀಠವನಿತ್ತು |
ಪಾದವತೊಳೆದು ಪೂಜಿಸುತ ||
ಆದಿಮೂರುತಿ ಕೃಷ್ಣ ಯಮಜ ಪಾಂಡವರ್ ಸಹ |
ವೇದವ್ಯಾಸನ ತೀರ್ಥ ಧರಿಸಿ                      ||೬೨||

ಭಾಮಿನಿ
ಪಾಂಡವರು ಪದಕೆರಗಲಾ ಮಾ |
ರ್ತಾಂಡ ತೇಜದ ಮುನಿಪ ಪೇಳಿದ |
ಮಂಡಲೇಶ್ವರ ರಚಿಸು ಶಾಲೆಯ ಶಾಸ್ತ್ರವಿಧಿಯಿಂದ ||
ಚಂಡ ಋಷಿಕುಲ ವಿಪ್ರಮುಖದಲಿ |
ಕೊಂಡು ದೀಕ್ಷೆಯ ಯಮಜ ಯಜ್ಞದ |
ಕುಂಡವನು ರಚಿಸಿದನು ವೇದವ್ಯಾಸನಾಜ್ಞೆಯಲಿ         ||೬೩||

ರಾಗ ಶಂಕರಾಭರಣ ತ್ರಿವುಡೆತಾಳ
ತಂದು ಯಾಗದ ಹಯವ ಪನ್ನೀ | ರಿಂದ ಮೀಯಿಸಿ ಮೆಯ್ಯೊಳು ||
ಪೊಂದೊಡಿಗೆಯಾಭರಣವಿಟ್ಟರು | ಚಂದವಾಗಿ            ||೬೪||

ಹೊನ್ನ ಕಡಗವು ಗೆಜ್ಜೆ ಪಾದದೊ | ಳಿನ್ನು ಬಿಗಿದು ಕೊರಳಿಗೆ ||
ರನ್ನ ಮುತ್ತಿನ ಸರಗಳಿಟ್ಟರು | ಚೆನ್ನವಾಗಿ       ||೬೫||

ಶ್ಯಾಮಕರ್ಣಿಕೆ ಗಂಧಕುಸುಮಾ | ಕ್ಷತೆಗಳಿಂದಾ ಪೂಜಿಸಿ ||
ಭೂಮಿಪಾಲಕ ಲಿಖಿತ ಕುದುರೆಯ | ಹಣೆಗೆ ಕಟ್ಟಿ          ||೬೬||

ಭಾಮಿನಿ (ಅರ್ಧ)
ಸಕಲ ರಾಯರ ಕಪ್ಪಗೊಂಬುದ |
ಕಕಟ ಪರಪೀಡನವುಯೆನ್ನುತ |
ವಿಕಳಮತಿಯಲಿ ನಡೆದ ಧರ್ಮಜ ಕೃಷ್ಣನೆಡೆಗಾಗಿ ||

ರಾಗ ಮಾರವಿ ಝಂಪೆತಾಳ
ಪುಂಡರಿಕನಾಭನಡಿ | ಗೆರಗಿ ಯಮಸೂನು ಭಯ |
ಗೊಂಡು ಪೇಳಿದ ಮುಂದೆ | ದಂಡು ನಡೆವುದಕೆ          ||೬೭||

ಮುರಹರನು ಹಯಮೇಧ | ತುರಗದೊಡನರ್ಜುನಗೆ |
ಧುರವ ಜಯಿಸೆಂದಿತ್ತ | ಪರಮ ಶಕ್ತಿಯನು     ||೬೮||

ಸೇನಾಧಿಪತ್ಯವನು | ಮೀನಕೇತನಗಿತ್ತು |
ಮಾನನಿಧಿ ಕರ್ಣಜಗೆ | ಸೇನೆ ಬೆಂಬಳಿಯ     ||೬೯||

ನವಕುಸುಮದಲಿ ಪೂಜೆ | ನವಗ್ರಹಂಗಳಿಗಿತ್ತು |
ದಿವಿಜೇಂದ್ರಸುತ ನಮಿಸೆ | ದಿವಿಜರಿಗೆ ದ್ವಿಜಗೆ            ||೭೦||

ಕಂತುಪಿತನಡಿಗೆರಗಿ | ಕಾಲಾತ್ಮ ಭೀಮನಿಗೆ |
ನಿಂತು ತಲೆವಾಗಿದನು | ಕುಂತಿಯಡಿಗೆರಗಿ    ||೭೧||

ರಾಗ ದೇಶಿ ಝಂಪೆತಾಳ
ಬಲವಂತನಾಗು ನೀ ಬಲುಭಾಗ್ಯ ನೀನಾಗು |
ಜಲಜಾಕ್ಷನನು ಭಜಿಸಿ ಜಾಣನಾಗು    || ಪ ||

ಬಲುಭಟರೊಡನೆ ಪಂಥ ಬಳಸದಿರು ಹಯಕಾಗಿ |
ನೆಲೆಯರಿತು ಮಾಡು ಸಂಧಿಯ ಶೀಘ್ರದಿ ||
ಒಳವ ಸಾಧಿಸಿಕೊಂಡು ಅಲ್ಲಲ್ಲಿ ಅರಿಗಳೊಳು |
ಗೆಲವಾಗಲೆನುತೆತ್ತಿದಳು ಮಗನ ಶಿರವ                     ||೭೨||

ಮುನ್ನ ದ್ರೌಪದಿಯ ಮದುವೆಗೆ ಪೋಗಿ ಧನುವೆತ್ತಿ |
ಉನ್ನತಿಕೆಯಿಂದಲೂರ್ವೀಶರಂ ಗೆಲಿಸೆ ||
ಪನ್ನಗಧ್ವಜನ ಗಂಧರ್ವರಲಿ ಬಿಡಿಸಿದಗೆ |
ಕನ್ನೆ ಸೌಭದ್ರೆ ಸೇಸೆಯನಿಟ್ಟಳು                   ||೭೩||

ರಾಗ ನಾದನಾಮಕ್ರಿಯೆ ಝಂಪೆತಾಳ
ಬಿಸಜಾಕ್ಷಸಖ ಧನಂಜಯಗೆ | ಚೆಲ್ವ |
ಬಿಸಜಗಂಧಿನಿಯರಾರತಿಯೆತ್ತಿರೆ      || ಪ ||

ವೃಷಕೇತುವಿಗೆ ಸತ್ಯಭಾಮೆ ರುಗ್ಮಿಣಿಯರು |
ಅಸಮ ಮೋಹದಲಿ ಆರತಿಯೆತ್ತಿರೆ   ||೭೪||

ಸತಿ ಶಿರೋಮಣಿ ದ್ರೌಪದಿ ಸುಗುಣೆಯರೆಲ್ಲ |
ಸಿತವಾಹನಗಾರತಿಯೆತ್ತಿರೆ ||          ||೭೫||

ವಾರ್ಧಕ
ಕೇಳು ಜನಮೇಜಯನೆ ಮುರಹರನ ಬೀಳ್ಗೊಂಡು |
ಏಳಕ್ಷೌಹಿಣಿ ಬಲಂ ಪೊರಮಡಲ್ ಫಲುಗುಣಂ |
ಘೀಳಿಡುವ ಕಪಿಯಬ್ಬರಣೆಯಿಂದ ರಥವೇರಿ ಧನುವಿಡಿದು ಝೇಗೆಯ್ದನು ||
ಆಳುತನವುಬ್ಬೇರಿ ಸಾಲ್ವ ಸಾತ್ಯಕಿ ಸಾಂಬ |
ಮೇಳವಿಸಿ ವೃಷಕೇತು ಯವನಾಶ್ವ ಕೃತವರ್ಮ |
ಕಾಳಗಕೆ ರಥವೇರಿ ಪ್ರದ್ಯುಮ್ನ ಅನಿರುದ್ಧನಾ ಸುವೇಗಾದಿ ಭಟರು            ||೭೬||

ರಾಗ ಕಾಂಭೋಜಿ ಝಂಪೆತಾಳ
ಕಾಲಪಾಳಯದಂತೆ ಕಮಠನೆದೆ ಬಿರಿವಂತೆ |
ಮೂಲಬಲ ಯಾಗಹಯ ಸಹಿತ ||
ಮೂರುಲೋಕದ ಗಂಡ ಇಂದ್ರಸುತ ತೆಂಕುಮುಖ |
ವಾಗಿ ನೀಲಧ್ವಜನ ಪುರಕೆ               ||೭೭||

ಕಟ್ಟಿ ಕುದುರೆಯ ಕಾದಿ ಜಯವ ಕಾಣದೆ ಕಪ್ಪ |
ಕೊಟ್ಟು ನೀಲದ್ವಜನು ಇರಲು ||
ದಿಟ್ಟೆಯಾತನ ಕಾಂತೆಯಿಂದ ಸುರನದಿ ಶಾಪ |
ತಟ್ಟಿತರ್ಜುನಗೆ ಬೆಂಬಿಡದೆ             ||೭೮||

ರಕ್ಕಸಾರಿಯ ನೆನೆದು ವಿಜಯ ನೀಲಧ್ವಜನ |
ಪಕ್ಷದೊಡಗೂಡಿ ಬಲಸಹಿತ ||
ದೀಕ್ಷೆತುರಗದ ಬೆಂಬಳಿಯಲಿ ಮಾರ್ಬಲ ಸಹಿತ |
ದಕ್ಷಿಣಕೆ ನಡೆತಂದರೊಲಿದು                        ||೭೯||

ಪುಂಡರಿಕವದನೆ ಪುರುಷನ ಶಾಪ ಪರಿವುದಕೆ |
ಪಾಂಡವರ ಯಾಗಹಯ ಪಿಡಿಯೆ ||
ಕಂಡು ಸಿತವಾಹನನು ಸೌಭರಿ ಮುನಿಯಾಜ್ಞೆಯಲಿ |
ಚಂಡಿಯನು ಬಿಡಿಸಿ ಬೀಳ್ಗೊಡಲು                 ||೮೦||

ಭಾಮೆಯನು ಉದ್ಧರಿಸಿ ಬಲಸಹಿತ ನಡೆತಂದು |
ಆ ಮಹಾ ಹಂಸಧ್ವಜ ಪುರಕೆ ||
ಭೀಮಾನುಜನು ಪಾಳ್ಯ ಹೊರಬಾಗಿಲೊಳಗಿಟ್ಟು |
ಶ್ಯಾಮಕರ್ಣಿಕೆಯನೊಳಪೊಕ್ಕು                   ||೮೧||

ರಾಗ ಕೇದಾರಗೌಳ ಅಷ್ಟತಾಳ
ಭಾಪುರೇ ಹಯ ಭಾಗ್ಯದ ಹಿರಿದು |
ಭೂಪ ನೋಡಿದ ಫಾಲಲಿಖಿತದ ಬಿರುದು || ಭಾಪುರೇ    || ಪ ||

ಕಾಪಿನ ಭಟರನುಮಾನಿಸಿ ಕುದುರೆಯ |
ತೋಪಿನೊಳಗೆ ಕಟ್ಟಿ ತರಿಸಿ ಮಾರ್ಬಲ ಸಹ |
ತಾ ಕಾದಲೆನುತ ಬಂದು || ತೀರದೆ ಹಂಸ |
ಕೇತು ತಾ ತೊಲಗಿದನಂದು | ಅರ್ಜುನನೊಳು
ಸುಧನ್ವ ಸುರಥರು ಇದಿರಾಗಿ ನಿಂದು            ||೮೨||

ಭಾಮಿನಿ
ಕಂಸಹರ ಪಗೆಯಾಗಿಯರ್ಜುನ |
ವಂಶರತುನ ಸುಧನ್ವ ಸುರಥರ |
ಹಂಸವಾಹನ ವಿಷ್ಣು ಮಹದೇವಾಸ್ತ್ರದಿಂ ಕೆಡಹಿ ||
ಹಂಸಕೇತನು ಮರುಗಿ ತನ್ನಯ |
ಹಿಂಸೆ ಗತಿಗೇನೆನಲು ದಾನವ |
ಧ್ವಂಸಿ ನಯದುಕ್ತಿಯಲಿ ಸಹಯಕೆಂದೊಡಂಬಡಿಸಿ        ||೮೩||

ರಾಗ ತೋಡಿ ಅಷ್ಟತಾಳ
ಮರಾಳಕೇತನ ನಗರವ ಮೀರಿ | ಮುರ |
ಹರ ಗಜಪುರಕತ್ತ ಸಾರಿ ||
ನರನ ಮಾರ್ಬಲ ಬಹ | ಪರಿಯ ಕಾಣುತ ತುಂಡು |
ದೊರೆಗಳೆಲ್ಲರು ಕಪ್ಪ | ಹೊರಿಸಿ ತಂದಿತ್ತರು    ||೮೪||

ವಾರ್ಧಕ
ಬಳಿಕ ಪಾರಿಪ್ಲವಧರಿತ್ರಿಯಿಂದಾ ಹಯಂ |
ತಳೆದುದತಿ ವೇಗದಿಂದಖಿಳ ದೇಶಂಗಳಂ |
ಕಳೆದು ಬರೆ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದಾಗಳು ||
ಫಲುಗುಣನ ಸೇನೆ ನಡೆದುದು ಕೂಡೆ ಭಾರದಿಂ |
ದಿಳೆ ಮುಂದೆ ಕೂರ್ಗಡಿಸೆ ಮಗುಳೊಂದೆಡೆಯೊಳು |
ಬ್ಬಳಿಸಿದುವೊ ಮಂದಿ ಕುದುರೆಗಳೆಂಬ ತೆರನಂತೆ ಸಂದಣಿಸಿತೇವೇಳ್ವೆನು            ||೮೫|

ರಾಗ ಕಾಂಭೋಜಿ ಝಂಪೆತಾಳ
ಆಲಿಸವನೀಶ ಸ್ತ್ರೀ ರಾಜ್ಯವನ್ನಾಳ್ವ ಪ್ರ |
ಮೀಳೆಯೆಂಬುವಳು ಅರಸಾಗಿ ||
ಓಲಗದೊಳಿರ್ದಳತಿ ವಿಭವದಿಂ ಸ್ತ್ರೀಜನರ |
ಮೇಳವೆಸೆಯಲ್ಕೆ ಲೇಸಾಗಿ            ||೮೬||

ಪರಿವಾರ ಪ್ರಜೆ ಪ್ರಧಾನರು ಸಾವಂತರು ಕೆಲರು |
ಪರಿಜನರು ಪುರಜನರುಯೆಲ್ಲ ||
ಮೆರೆವ ಹೆಣ್ಣುಗಳಲ್ಲದಿಲ್ಲದೀ ರಾಜ್ಯದೊಳ್ |
ಪುರುಷರೆಂಬವರೊಬ್ಬರಿಲ್ಲ  ||೮೭||

ಫಲುಗುಣನ ತುರಗವದು ಪುರವ ಪೊಕ್ಕುದ ಕಂಡು |
ತಳವಾರರಯ್ತಂದರಸಿಗೆ ||
ನಲವಿನಿಂ ಪದಕೆ ತಲೆವಾಗಿ ಬಿನ್ನಯ್ಸಿದರು |
ಲಲನೆಯರ ಕುಲಶಿರೋಮಣಿಗೆ       ||೮೮||

ರಾಗ ಮಾರವಿ ಏಕತಾಳ
ಕನ್ನೆಯರಸಿ ದೇವಿ ನಿನ್ನ ಸೀಮೆಯೊಳೊಂದು |
ಚೆನ್ನಾದುತ್ತಮ ಹಯವು |
ತನ್ನಿಚ್ಛೆಯಿಂದ ನಮ್ಮುಪವನವನೆ ಪೊಕ್ಕು |
ದಿನ್ನೇನ ಪೇಳುವೆನು         ||೮೯||

ಮೂರು ಲೋಕದ ಗಂಡ ನರನೆಂಬಾತನು ಬಲು |
ಧಾರಿಣೀಶ್ವರರ ಕೂಡಿ ||
ಚಾರುತುರಗದ ಮೇಲಾರೈಕೆಯಿಂದ |
ಸ್ವಾರಿಗೆಯ್ದಿಹುದು ನೋಡಿ  ||೯೦||

ಮಖತುರಗದ ಫಾಲದೊಳಗಿರುತಿಹುದೊಂದು |
ಲಿಖಿತವ ಕಂಡು ನಾವು ||
ವಿಕಸಿತಾಂಬುಜವಕ್ತ್ರೆ ತಂದೆವೆಂದೀಯೆ ಭಾ |
ವಕಿ ವಾಚಿಸಿದಳದನು       ||೯೧||

ರಾಗ ಕಾಂಭೋಜಿ ಝಂಪೆತಾಳ
ಸೋಮವಂಶಾಂಬುನಿಧಿರಾಕೇಂದು ಭೂಭುಜ |
ಸ್ತೋಮಾಗ್ರಗಣ್ಯ ಪಾಂಡುವಿನ ||
ಪ್ರೇಮದ ಸುಪುತ್ರ ಧರ್ಮಜನ ಕ್ರತುಹಯವ ನಿ |
ಸ್ಸೀಮರಿದ ಕಟ್ಟಿ ಕಾದುವುದು          ||೯೨||

ಚಂಡವಿಕ್ರಮರು ಕಟ್ಟಲು ಹಯವ ಮೂಲೋಕ |
ಗಂಡನರ್ಜುನನವರ ಗೆಲಿದು ||
ದಂಡಿಸುವನೆಂದು ಲೇಖನವ ವಾಚಿಸೆ ಕೇಳ್ದು |
ಮಿಂಡೆದ್ದು ನಗುತಿರ್ದಳಾಗ            ||೯೩||

ವಾರ್ಧಕ
ಆಲಿಸಿದಳಾಗ ಲಿಖಿತಾರ್ಥಮಂ ಸ್ವಾರ್ಥಮಂ |
ಏಳಿಗೆಯ ನರನಂತರಂಗಮಂ ಸಂಗಮಂ |
ಬಾಳುವೆಂ ಪಾರ್ಥನೊಳ್ ಯೋಗಮಂ ಭೋಗಮಂ ಪಡೆವಡಿದು ಸಮಯವೆನುತ ||
ಆಲೋಚಿಸಿದಳಾ ಪ್ರಮೀಳೆ ಗುಣಜಾಲೆ ಜನ |
ಪಾಲಕನ ಅಶ್ವವನು ಹಿಡಿತರಿಸಿ ಕಟ್ಟಿ ನಿಜ |
ಪಾಳೆಯದ ಸೇನಾನಿವಂತೆಯರ ಕಾಂತೆಯರ ಕರೆಸಿದಳ್ ಧುರಕಾಗಲು  ||೯೪||

ರಾಗ ಅಹೇರಿ ಝಂಪೆತಾಳ
ಎದ್ದಳಾಹವಕಾ ಪ್ರಮೀಳೆ | ಉಭಯ |
ಯುದ್ಧದೊಳಗರ್ಜುನನ ಗೆಲುವರೆ ಸುಶೀಲೆ ||
ಎದ್ದಳಾವಹಕಾ      || ಪ ||

ದಿಟ್ಟೆ ಹರುಷಿಸಿ ನರನ ಮುಟ್ಟಿ ಕಾದುವೆನೆಂದು |
ತಟ್ಟನೆ ಚತುರ್ಬಲವನೊಟ್ಟುಗೂಡಿಸಿ ನೇಮ |
ಗೊಟ್ಟು ಕಳುಹಲ್ಕವರ ತಟ್ಟಿಗನುಕುಲವಾಗಿ |
ಕಟ್ಟಿ ಚಲ್ಲಣವ ಬಿಗಿದುಟ್ಟು ಕಾಸೆಗಳ ಮೊಲೆ |
ಗಟ್ಟುಗಳ ಮೇಲೆ ಬೆಳಕಿಟ್ಟೆಸೆವ ಹಾರಗಳ |
ನಿಟ್ಟು ಮೊಗ ಫಣೆಗಳಲಿ ಬೊಟ್ಟುಗಳನಿಡುತ ಜಗ |
ಜಟ್ಟಿಯರ ತೆರನಂತೆ ಥಟ್ಟನೇ ನಡೆತರಲು ||
ಎದ್ದಳಾಹವಕಾ    ||೯೫||

ಮರಿದುಂಬಿಗುರುಳೆ ಅಹಿವೇಣಿ ಪಲ್ಲವಪಾಣಿ |
ಮಿರುದರ್ಪ ವಿಧುಪಾಲೆ ಮಣಿದರ್ಪಣಕಪೋಲೆ |
ಮೆರೆವ ತಿಲಕವನಿಟ್ಟು ಮಣಿಭೂಷಣವ ತೊಟ್ಟು |
ಧುರದ ಸನ್ನಹ ತರಿಸಿ ಧನುಶರಂಗಳ ಧರಿಸಿ |
ವರ ರಥವನೇರುತಿರೆ ಮಂದಿಗಳು ಪೊಗಳುತಿರೆ |
ಪೊರಟಳತಿ ಸಂಭ್ರಮದಿ ಪೊಡೆವ ಭೇರೀರವದಿ |
ಬರುತರ್ಜುನನು ಬೇಗ ಬರಲಿಯಿದಿರೆನುತಾಗ |
ಕರೆಯಲಟ್ಟುತಲಂದು ಖಡುಗಮಂ ಕೊಂಡು ||
ಎದ್ದಳಾಹವಕಾ    ||೯೬||

ಬಾಣ ಬತ್ತಳಿಕೆ ಸಹ ಬತ್ತಿಸಾಯುಧಗಳಂ |
ಆನೆ ಹಯ ರಥಗಳನಡರ್ದಾಹವಕೆ ಚೆಲುವ |
ಮಾನಿನಿಯರಯ್ತರಲ್ ಕಂಡರ್ಜುನನು ತನ್ನ |
ಸೇನೆ ಸುಭಟಾವಳಿಯೊಳೆಂದನೀ ಪೆಣ್ಜನಕೆ |
ಮಾನಸದಿ ಮರುಳಾಗಿ ಮೆಯ್ಗೊಡದಿರೆನುತ ರವಿ |
ಸೂನುಸುತ ಮೊದಲಾದವರಿಗೆ ಬುದ್ಧಿಯ ಪೇಳ್ದು |
ತಾನೆ ರಥವೇರಿ ತವಕಿಸುವ ತರಳಾಕ್ಷಿಯರ |
ಸೈನಿಕಕ್ಕಿದಿರಾಗಿ ನಡೆಯಲರಸಾಗಿರುವ |
ಏಣಾಕ್ಷಿ ಬಂದಿದಿರು ನುಡಿಸಿದರಳುಕುತರ್ಜು |
ನನು ಬಳಿಕ ಮಾತಾಡಿಸಿದಳರ್ಜುನನೊಳು
ಎದ್ದಳಾಹವಕಾ    ||೯೭||