ರಾಗ ಕಾನಡ ಆದಿತಾಳ
ನೋಡಿ ಬರುವ ಕೃಷ್ಣ ಪೋಗಿಯರ್ಜುನನ |
ರೂಢಿಯೊಳಗೆ ಯಾವ ದೇಶದೊಳಿಹನೆಂದು    || ಪ ||

ಯೋಗಿ ಪೇಳಿದ ಮಾತಿಗಾಗಿ ಯಜ್ಞವ ತಾಳ್ದೆ |
ನಗೆಗೀಡಾಗದ ರೀತಿ ಮಾಡು ಕರುಣದಿಂದ    ||೪೭೪||

ಪ್ರಾಣ ಪಾಂಡವರೆಂದು ಕಾಣಿಸಿ ಸುಜನಸು |
ಕ್ಷೋಣಿಯೊಳಿರುವಂತೆ ಮಾಡು ಕರುಣದಿಂದ  ||೪೭೫||

ಅಂಗರಕ್ಷೆಗೆ ವೃಷಕೇತುವನಿರುದ್ಧರು |
ಅಂಗಜನುರೆಯೇನಾದರೊ ಎಂದು ||೪೭೬||

ಜನನಿ ಪೇಳ್ದ ಸ್ವಪ್ನದಿ ಒಡಲುರಿವುತಿದೆನ್ನ |
ಅನುಜನ ಕಾಣದೆ ಇರಲಾರೆ ಕರುಣದಿಂದ     ||೪೨೭||

ಕುಂತಿ ದೇವಕ್ಯಶೋದೆ ಕಾಂತೆ ಸುಭದ್ರೆಯರ |
ಸಂತವಿಸಯ್ಯ ದ್ರುಪದರಾಜಕುವರಿಯ          ||೪೨೮||

ರಾಗ ಭೈರವಿ ಝಂಪೆತಾಳ
ಎಲೆ ಯುಧಿಷ್ಠಿರ ಕೇಳು | ನಿನ್ನ ಸತ್ಯಸ್ಥಿತಿಗೆ |
ಅಳಿವುಂಟೆ ಕಾಯದಲಿ | ರಣದಿ ಫಲುಗುಣಗೆ  ||೪೨೯||

ದೇವಕುಲದವರೆಂದು | ದೇವಕಿಯ ಮಗಳಿತ್ತೆ |
ಭಾವತನ ತೋರಿದೆನು | ಭಂಡಿಯಲಿ ನರನ  ||೪೩೦||

ಯಜ್ಞ ಬಿಡದಿರು ಇನ್ನು | ನುಡಿಯ ಪೂರಯಿಸುವೆನು |
ಶೀಘ್ರ ಬರುವೆನು ಕಂಡು | ವಿಜಯನೊಡಗೊಂಡು       ||೪೩೧||

ಭಾಮಿನಿ (ಅರ್ಧ)
ಇಂತು ಸ್ವಪ್ನದ ಬಗೆಯ ಕೇಳುತ |
ಚಿಂತೆರಹಿತನು ಅಭಯವಿತ್ತನು |
ಕುಂತಿ ದೇವಕ್ಯಶೋದೆ ಭೀಮನ ಕೊಂಡು ಪಯಣದಲಿ ||

ರಾಗ ಘಂಟಾರವ ಝಂಪೆತಾಳ
ಕಣ್ಣನೀರಬ್ಧಿಯಲಿ ಕೌಂತೇಯನರಸಿಯರು |
ಬಣ್ಣಗೆಟ್ಟೊರಲಿದರು ಒಡನೆ ಸಲಹೆನುತ        ||೪೩೨||

ಹೆಣ್ಣುಜನ್ಮವು ಸಾಕುಯೆನಗೆನುತ ಸೌಭದ್ರೆ |
ಅಣ್ಣನಡಿಗೆರಗಿದಳು ಬಹಳ ಬಸವಳಿದು         ||೪೩೩||

ತನಯನಳಿದಾ ದಿನವೆ ತೊರೆಯದಾದೆನು ಪ್ರಾಣ |
ಇನಿಯನೊಡನೊಪ್ಪಿಸುವೆನೆನುತ ಸೌಭದ್ರೆ    ||೪೩೪||

ಕಂಜಾಕ್ಷ ನಿನ್ನೊಡನೆ ಜನಿಸಿದರೆಯೆನಗೆ ವಿಧಿ |
ಭುಂಜಿಸಿತೆಯೆಂದಳು ಧನಂಜಯನ ರಾಣಿ     ||೪೩೫||

ನಿನ್ನ ದೆಸೆಯಿಂದಾದ ರಮಣರೈವರುಯೆನಗೆ |
ಇನ್ನೊಬ್ಬರನು ಕಾಣೆನೆನುತ ಪಾಂಚಾಲೆ        ||೪೩೬||

ಎತ್ತಿ ನಯನವನೊರೆಸಿ ಕೃಷ್ಣನವರವರಿಂಗೆ |
ಸಂತವಿಸಿ ಬರಲೇಕೆಯೆಂದವರ ನಿಲಿಸಿ         ||೪೩೭||

ಯಾಗರಕ್ಷೆಗೆ ನಿಲಿಸಿ ನಕುಲಸಹದೇವರನು |
ಬೇಗದಿಂದಲೆ ನೆನೆದ ನಾಗವೈರಿಯನು        ||೪೩೮||

ರಾಗ ಘಂಟಾರವ ಆದಿತಾಳ
ನಾಳೆ ಬರುವೆನೆಂದು ಅಳುವ ಸುಭದ್ರೆಯ |
ಪೇಳಿ ಮುದ್ದಿಸಿ ಕುಂತಿ ತಕ್ಕವಿಸಿದಳು            ||೪೩೯||

ವೀರ ಮೂಲೋಕಕ್ಕೆ ನಿನ್ನ ಪುರುಷನು |
ಈರೇಳು ಲೋಕದೊಡೆಯ ಕೃಷ್ಣ ರಕ್ಷಿಪನು     ||೪೪೦||

ಅರಗಿನ ಮನೆಯಲ್ಲಿ ಉರಿಸೆ ಕೌರವ ನಮ್ಮ |
ಪರಿಹರಿಸಿದ ಕೃಷ್ಣನಲ್ಲದಿನ್ನ್ಯಾರು      ||೪೪೧||

ತರಣಿನಂದನ ನೆಚ್ಚ ಉರಗಸ್ತ್ರ ಭರದೊಳು |
ಧರಣಿಗೊತ್ತಿ ಕಾಯ್ದ ಶಿರವನರ್ಜುನನ           ||೪೪೨||

ಅನ್ನವಸ್ತ್ರವಿಲ್ಲದೆ ಅಡವಿಯೊಳೈವರ |
ಅನ್ಯರ ತಿರುಕೂಳಿನಿಂದ ಸಾಕಿದನು ||೪೪೩||

ವಾರ್ಧಕ
ಅಣುಗ ಕೇಳೈ ಕುಂತಿ ಸೊಸೆಯರನು ಸಂತವಿಸೆ |
ವನಜನಾಭನು ಭೀಮ ದೇವಕಿ ಯಶೋದೆಯರು |
ಫಣಿಕುಲಾರಿಯನೇರಿಯರಸಿಕೊಂಡರ್ಜುನನ ಮಣಿನಗರದೊಳ್ ಕಂಡರು ||
ರಣದೊಳಗೆ ಮಲಗಿರುವ ಮಾರ್ಬಲದ ಮಧ್ಯದೊಳ್ |
ಗಣಿಕೆಯರು ಧೂಪದೀಪಗಳಿಂದಲರ್ಜುನನ |
ಗುಣವ ಪಾಡುತ ಕಿರೀಟಿಯ ಸತಿಯರಿರೆ ಕೃಷ್ಣನನಿಲಜಗೆ ತೋರಿಸಿದನು  ||೪೪೪||

ರಾಗ ಸೌರಾಷ್ಟ್ರ ಆದಿತಾಳ
ಮಾರುತಿ ನೋಡಿದ ಮಣಿನಗರ | ಮುಂದೆ |
ಧುರದೊಳಳಿದ ಸೈನ್ಯ ಸಾಗರ       ||೪೪೫||

ನಮ್ಮ ಬಲವೆ ನೋಡು ನೋಡಯ್ಯ | ಕೆಡೆದ |
ತಮ್ಮನಹುದೆ ತಿಳಿದು ಮಾತಾಡಯ್ಯ           ||೪೪೬||

ತಾಮರಸಮೊಗವೇನಾಯಿತು | ಶಿರ |
ಹೇಮಕಿರೀಟವೆತ್ತ ಪೋಯಿತು         ||೪೪೭||

ಭಾಮಿನಿ (ಅರ್ಧ)
ಸರ್ಪಶಯನನ ನುಡಿಯ ಕೇಳುತ |
ಕಲ್ಪತರು ನೆಟ್ಟಂತೆಯನಿಲಜ |
ಬಿಲ್ಪಿಡಿಯೆ ಕೈ ಸಡಲೆ ಬೆರಗಾಗುತ್ತಲಿಂತೆಂದ ||

ರಾಗ ಕಾಂಭೋಜಿ ಅಷ್ಟತಾಳ
ಶ್ರೀಲೋಲಲೋಚನ ಶ್ರೀವಿರೂಪಾಕ್ಷನೆ |
ಏಕಾಂತನುಡಿಯೇತಕಿನ್ನು  ||೪೪೮||

ಶ್ರೀಪತಿ ಸುರಪಜಾತನ ಮಡುಹಿದನ್ಯಾರು |
ಕೋಪದ ಭಟನೆಲ್ಲಿತೋರು ||೪೪೯||

ತುರಗ ತಡೆದೆಲ್ಲರ ಮುರಿದವನನು ನೋಳ್ಪೆ |
ಮುರಿದವನನು ಕಾಲವಶವ ನಾ ಮಾಳ್ಪೆ       ||೪೫೦||

ಭಾಮಿನಿ (ಅರ್ಧ)
ನಳಿನನಾಭನು ಭೀಮವಚನಕೆ |
ಇಳಿದು ಸಿತವಾಹನನ ಕಾಣುತ |
ಅಳುವ ಸತಿಯರ ಸಂತವಿಸಿ ಮರುಗಿದನು ನರರಂತೆ ||

ರಾಗ ಕಾಂಭೋಜಿ ಏಕತಾಳ
ಯಾರು ತಡೆದರಯ್ಯ ತುರಗ | ವೆಲೆ ಪಾರ್ಥ  || ಕಾದಿ |
ಯಾರ ಕಯ್ಯ ಮಡಿದೆ ನೀನು | ಎಲೆ ಪಾರ್ಥ  ||೪೫೧||

ಜೀವಸಖನು ನೀನು ಎನಗೆ | ಎಲೆ ಪಾರ್ಥ || ನಿನ್ನ |
ಭಾವನಾಗಿರ್ಪೆನೆಂದಿಗೆ | ಎಲೆ ಪಾರ್ಥ          ||೪೫೨||

ಒಂದು ನಿಮಿಷ ಬಿಟ್ಟಿರಲಾರೆ | ನೆಲೆ ಪಾರ್ಥ || ಈಗ |
ಕ್ಷಮಿಸು ಎನ್ನ ಅಪರಾಧವ | ನೆಲೆ ಪಾರ್ಥ      ||೪೫೩||

ಖ್ಯಾತಿವಡೆದೆ ಮೂಲೋಕಕ್ಕೆ | ಎಲೆ ಪಾರ್ಥ || ಈಗ |
ಭೂತಳಕ್ಕೊರಗಿದೆಯೇಕೊ | ಎಲೆ ಪಾರ್ಥ     ||೪೫೪||

ಭೀಮ ಕುಂತಿಯರ ನೋಡು | ಎಲೆ ಪಾರ್ಥ || ಮತ್ತೀ |
ದೇವಕೀ ಯಶೋದೆಯರ್ ನೋಡು | ಎಲೆ ಪಾರ್ಥ      ||೪೫೫||

ಭಾಮಿನಿ
ಚೇತನಾತ್ಮಕ ಮನುಜಲೀಲೆಯ |
ವಾತಜನು ಕೇಳುತ್ತಲೆಲೆ ಜಗ |
ನ್ನಾಥ ನಿನಗಿದು ಗಹನವೇ ರವಿಗಂಧಕಾರಹುದೆ ||
ಘಾತಿಸಿದನಿವರುಗಳ ವೀರನೊ |
ಳಾಂತು ನೋಡುವೆನೆನುತ ಕರ್ಣಜ |
ಪಾರ್ಥರಾ ದೇಹವನು ಕಂಡ್ಹಲವಂಗದಲಿ ಮರುಗಿ       ||೪೫೬||

ರಾಗ ಪಂಚಾಗತಿ ರೂಪಕತಾಳ
ತಮ್ಮ ಮಡಿದು ಎನಗೆ ಯಜ್ಞದಾಸೆ ತೀರಿತೆ |
ಧರ್ಮಜಂಗೆ ರಾಜ್ಯ ಪೋಗಿಯಡವಿಯಾಯಿತೆ            ||೪೫೭||

ಯಾಕೆ ಮಡಿದೆ ತಮ್ಮ ಎನಗೆ ಪೇಳು ಬಗೆಯನು |
ಲೋಕ ಮೂರೊಳಿರಲು ಸುಟ್ಟು ಗೆಲುವೆ ಪಗೆಯನು     ||೪೫೮||

ಈಸು ಬಲಗಳಿದ್ದು ತಮ್ಮ ಹೇಳಿ ಕಳುಹದೆ |
ಆ ಸುಭದ್ರೆಕುಂತಿಯರಿಗೆ ಧೈರ್ಯ ಪೇಳದೆ    ||೪೫೯||

ತಾತನಂತೆ ನಮ್ಮ ಪಿಡಿದು ತನುವ ತೆತ್ತೆಲಾ |
ಪ್ರೀತಿ ಪಲ್ಲಟಿಸಿತೆ ವೃಷಕೇತುಗೆನ್ನೊಳು         ||೪೬೦||

ಎಂದು ಭೀಮಸೇನ ಮೂರ್ಛೆಯಿಂದಲೊರಗಿದ |
ಮಂದಗಮನೆಯರು ದುಗುಡದಿಂದ ಕರಗುತ ||೪೬೧||

ಭಾಮಿನಿ
ಖಂಡಲನ ಮದದಂತಿ ಪೋಲುವ |
ಚಂಡವಿಕ್ರಮ ಪವನಜನ ಕರ |
ದಂಡೆಯನು ಪಿಡಿದೆತ್ತಿ ಸಂತವಿಸಿದನು ಮುರವೈರಿ ||
ಕಂಡು ಸಾತ್ಯಕಿ ಪೇಳೆ ಪಾರ್ಥನ |
ಹೆಂಡಿರಯ್ದಿದರಳುತ ಕುಂತಿಯ |
ಕಂಡು ಪದಕೆರಗುತ್ತ ಪೇಳ್ದರು ತಮ್ಮ ದುಃಖವನು        ||೪೬೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಅತ್ತೆ ಲಾಲಿಸಿಯರಿಯದೆನ್ನಯ | ಪುತ್ರ ಕಟ್ಟಿದ ಯಜ್ಞವಾಜಿಯ |
ನಿತ್ತು ಕಳುಹಿದೆ ಮರಳಿ ಸಕಲ ಸು | ವಸ್ತು ಸಹಿತ        ||೪೬೩||

ಕಂದನಲ್ಲೆಂದೊದೆದು ನಮ್ಮನು | ಎಂದ ಮಾತನು ಎಣಿಸಲರಿಯೆವು |
ನಿಂದು ಫಲುಗುಣ ಮಡಿದ ರಣದಲಿ | ಮಂದಿ ಸಹಿತ    ||೪೬೪||

ಪರಿಹರಿಸಲೆನ್ನಣುಗ ಪಾತಳ | ದುರಗರಾಜನು ಸಹ ಸಂಜೀವನ |
ತರಿಸಿಯಿಟ್ಟನು ಶಿರವ ಕಾಣದೆ | ಕೆಟ್ಟೆವಲ್ಲಾ    ||೪೬೫||

ಭಾಮಿನಿ (ಅರ್ಧ)
ಕುಂತಿ ಸೊಸೆಯರ ವಿನಯದಿಂದಲಿ |
ಸಂತವಿಸಿ ಕಳುಹಿದಳು ಕುರುಕುಲ |
ದಂತಕನು ಕಲಿ ಭೀಮ ಕ್ಲೇಶದಿ ಕೃಷ್ಣಗಿಂತೆಂದ ||

ರಾಗ ಘಂಟಾರವ ಅಷ್ಟತಾಳ
ಮಾಧವ ಮೈದುನನ | ರಕ್ಷಿಸಿ ಹಯ |
ಮೇಧವ ನಡೆಸು ಜಾಣ ||
ಪಾದ ಸೇವಕರಿಗೆ ಮರಣವಾದರೆ ಮುಂದೆ |
ಸಾಧುಜನರು ನಂಬುವರೆ   ||೪೬೬||

ಅಡವಿ ತೀರಿಸಿದೆಮಗೆ | ಮಮಕಾರದಿ |
ಪೊಡವಿಯ ಪಾಲಿಸಿದೆ ||
ಮಡಿದ ಪಾರ್ಥನ ಕಂಡು ಮಡದಿ ಸುಭದ್ರೆಯು |
ತಡೆವಳೆ ದುಃಖವನು        ||೪೬೭||

ಪಾರ್ಥಜ ನುಡಿ ಕೇಳಿ | ಯಾ ಕ್ಷಣ ಬಂದು |
ವಾತಜನಡಿಗೆರಗಿ |
ತಾತನ ಮಡುಹಿದ ಪಾತಕಿಯೆನ್ನನು |
ಘಾತಿಸು ಗದೆಯಿಂದಲಿ      ||೪೬೮||

ಭಾಮಿನಿ (ಅರ್ಧ)
ಅನುಜದುಃಖವ ಮರೆತು ಬಭ್ರುವಾ |
ಹನನ ತಕ್ಕವಿಸಲ್ಕೆ ಮಾರುತಿ |
ವನಜನೇತ್ರನ ಚರಣಕರ್ಜುನಿಯೆರಗಿ ಸ್ತುತಿಗೆಯ್ದ ||

ರಾಗ ನೀಲಾಂಬರಿ ಆದಿತಾಳ
ಲಾಲಿಸೋ | ಕೃಷ್ಣ | ಪಾಲಿಸೋ ||
ಲಾಲಿಸೆನ್ನ ಬಿನ್ನಪವ | ಲೋಕನಾಯಕ ಸುಚೆಲ್ವ || ಲಾಲಿಸೋ  || ಪ ||

ಪಾರ್ಥಿವಪಂಥಕಾಗಿ | ಪಾರ್ಥನ ವಾಜಿಯ ಕಟ್ಟಿದೆ |
ಅರಿಯದೆ | ತಾಯಿ | ಗೊರೆಯದೆ     ||೪೬೯||

ತಾತನೆಂದರಿತು ರಾಜ್ಯ | ಸಹಿತವೊಪ್ಪಿಸಿದರೆನ್ನ |
ಜರೆದನು | ಪ್ರಾಣ | ತೊರೆದನು       ||೪೭೦||

ಈ ತಪ್ಪಿಗೆನಗೇನಾಜ್ಞೆ | ನೀ ಮಾಳ್ಪುದಂತಕನ ಕಯ್ಯ |
ಕೊಡದಿರೋ | ಎನ್ನ | ಬಿಡದಿರೋ    ||೪೭೧||

ಭಾಮಿನಿ (ಅರ್ಧ)
ಭಾವಭಕ್ತಿಯ ಕಂಡು ಪಾರ್ಥಿಯ |
ಪಾವಮಾನಿಯು ಸಂತವಿಸಿದನು |
ಮೋಹದಲಿ ಬಿಗಿದಪ್ಪಿದನು ಮರುಗಿದನು ಮುರವೈರಿ ||

ರಾಗ ಸೌರಾಷ್ಟ್ರ ಅಷ್ಟತಾಳ
ಕಣ್ಣನೀರಿಲಿ ಕುಂತಿಪಾದಕ್ಕೆ ಎರಗಿದ | ಬಭ್ರುವಾಹನ || ನಿನ್ನ |
ಚಿಣ್ಣನ ಮಡುಹಿದ ಚಂಡಾಲ ಮೊಮ್ಮ ನಾ | ಬಭ್ರುವಾಹನ         ||೪೭೧||

ಮಗನೆ ನೀನೇನ ಮಾಡುವೆಯೆನ್ನ ಕರ್ಮಕ್ಕೆ | ಬಭ್ರುವಾಹನ || ಎಂದು
ಬಿಗಿದಪ್ಪಿ ಪರಸಿದಳ್ ಪಗೆಯಲ್ಲ ನಮಗೆ ನೀ | ಬಭ್ರುವಾಹನ      ||೪೭೨||

ಹೆತ್ತವ್ವೆಯರ ರಕ್ಷಿಸೆನುತ ದುಗುಡದಿಂದ | ಬಭ್ರುವಾಹನ || ತನ್ನ |
ಮುತ್ತವ್ವೆಯರಿಗೆ ಕೈಮುಗಿದು ಬೀಳ್ಗೊಂಡನು | ಬಭ್ರುವಾಹನ     ||೪೭೩||

ಭಾಮಿನಿ (ಅರ್ಧ)
ಚಿತ್ರಾಂಗದೆ ಲೂಪಿಯರ ಕಾಣಿಸಿ |
ಕುಂತಿದೇವಿಯರ್ಗೆರಗಿ ಫಲುಗುಣಿ |
ಮತ್ತೆ ದೇವಕ್ಯಶೋದೆಯರ ಪೊಡಮಟ್ಟು ಬೀಳ್ಗೊಂಡ ||

ರಾಗ ನೀಲಾಂಬರಿ ಅಷ್ಟತಾಳ
ಕುಂತಿ ಕಂದನ ನೋಡಿ ಮರುಗಿ | ಬಲು | ಚಿಂತಿಸಿ ಮೋಹದಿ ಕರಗಿ ||
ಕಂತುಪಿತನ ನೋಡಿದಳು | ಅಂತ | ರಂಗದಿ ಕ್ಲೇಶ ಮಾಡಿದಳು ||೪೭೪||

ಕಂಡೆಯ ಕೃಷ್ಣ ಮೈದುನನ | ಶಿರ | ಖಂಡಿಸಿ ಧರೆಗಿಳುಹಿದನ ||
ಭಂಡಿಯನ್ಯಾರಲ್ಲಿ ಹೊಡೆವೆ | ಕಾದಿ | ಕೊಂಡ ರಾಜ್ಯವನ್ಯಾರಿಗೀವೆ          ||೪೭೫||

ಪತಿಯ ಹಂಬಲವ ನಾ ತೊರೆದೆ | ಎನ್ನ | ಸುತರ ಸಲಹಿ ಕೀರ್ತಿ ಮೆರೆದೆ ||
ಜೊತೆಯಾಗಿರುವನಾಗಿ ಪೊರೆದೆ | ಈಗ | ಸಿತವಾಹನನೇಕೆ ಮರೆದೆ       ||೪೭೬||

ಹೋಮ ತೀರಿತು ಯುಧಿಷ್ಠಿರಗೆ | ರಾಜ್ಯ | ಸೀಮೆ ಹೋಯಿತು ಪಾಂಡವರಿಗೆ ||
ಕಾಮಸ್ವರೂಪ ಕರ್ಣಜಗೆ | ಕೃಷ್ಣ | ಸ್ವಾಮಿ ರಕ್ಷಿಸು ವಿಜಯನಿಗೆ   ||೪೭೭||

ಭಾಮಿನಿ (ಅರ್ಧ)
ಕುಂತಿ ದುಃಖಿಸಿ ಪೇಳ್ದ ಸಮಯದಿ |
ಕ್ರೂರ ಫಣಿಯೊಡಗೂಡಿ ಶೇಷನು |
ಸಾವಿರ‍್ಹೆಡೆಯಿಂದೆರಗಿ ಕೃಷ್ಣನ ಅಡಿಯೊಳ್ ಸ್ತುತಿ ಗೆಯ್ದ ||

ರಾಗ ನಾದನಾಮಕ್ರಿಯೆ ಅಷ್ಟತಾಳ
ಜಯ ಜಯ ಜಗದೀಶ | ವಿಷ್ಣು | ಪಾಹಿ ದೇವೇಶ   || ಪ ||

ನಾಕಪಾಲಾತ್ಮಜಗೇಕಭುಜನಾಗಿರ್ಪೆ |
ಯಾಕೆ ರಕ್ಷಿಸದೆ ಹೊತ್ತುಗಳೆವೆ        ||೪೭೮||

ರೂಢಿ ಪಾಲಾತ್ಮಜರೊಳೆಷ್ಟು ತಪ್ಪಿರ್ದರು |
ನಾಡ ತಳವಾರರು ಕೇಳುವರೆ         ||೪೭೯||

ನಿನ್ನ ನಂಬಿರ್ದವರು ಸಂಪನ್ನ ಬಲಯುತರು |
ಅನ್ಯಗ್ರಹಂಗಳಿಗಂಜುವುದೆ             ||೪೮೦||

ತಾತನೆಬ್ಬಿಸುವರೆ ತಂದು ಫಣಿಯ ಪಾರ್ಥ |
ಜಾತ ತಾ ತರಿಸಿದ ಮಣಿಯಿದಕೊ   ||೪೮೧||

ತರಿಸು ಶಿರವೆರಡರ ತರುಣಿಯರತಿ ಗಾಢ |
ಸ್ಮರನ ಜನಕವೊಡಂಬಡಿಸೊ ಈಗ ||೪೮೨||

ಭಾಮಿನಿ
ಫಣಿಪ ನುಡಿದುದ ಕೇಳಿ ಕೃಷ್ಣನು |
ಗಣಿಕೆಯರ ಮಧ್ಯದಲಿ ಸಂಜೀ |
ವಿನಿಯ ತೋರುತ ಸಂತವಿಟ್ಟರು ಸಕಲ ಜನನಿವಹ ||
ಅಣುಗ ಕೇಳೈ ಬ್ರಹ್ಮಚರ್ಯದ |
ಗುಣವು ತನಗುಂಟಾದಡೀ ಶರ |
ಬಣಗು ಅರಿಗಳ ಗೆಲಿದು ಬರಲೆಂದೆನುತ ನೇಮಿಸಿದ    ||೪೮೩||

ರಾಗ ಸಾಂಗತ್ಯ ರೂಪಕತಾಳ
ಶಕ್ರಸುತನ ಮೊಮ್ಮ ನೀ ಕೇಳು ಪಾಂಡವ |
ವಿಕ್ರಮಾಂಕಿತಕಿದಿರುಂಟೆ ||
ಚಕ್ರಧರನ ಭಾಷೆಗಂಜಿ ಮೂಜಗದೊಳು |
ದಿಕ್ಪಾಲಕರು ಬೆದರಿದರು    ||೪೮೪||

ದುಷ್ಟ ದುರ್ಬುದ್ಧಿ ದುಃಸ್ವಭಾವಿಗಳ ತಲೆ |
ಕುಟ್ಟಿ ಪಾರ್ಥನ ಮಹಶಿರವ ||
ಕೃಷ್ಣನಾಯುಧದಿಂದ ತರಿಸಲು ಶೇಷನ |
ಮುಟ್ಟಿ ಕೊಂಡಾಡಲು ಜನರು         ||೪೮೫||

ಮುರಹರನುರಗೇಂದ್ರನೊಡನೆ ಮಣಿಯ ಕೊಂಡು |
ಶಿರವೆರಡನು ಸಂಗಡಿಸಿ ||
ಅಭವನ್ನ ಸ್ಮರಿಸುತ್ತ ಮುಟ್ಟಿಸಿ ಜೀವಿಸೆ |
ತ್ರಿಭುವನಕತಿ ಚೋದ್ಯವೆನಿಸಿ          ||೪೮೬||

ಭರದಿಂದ ಮೈಮುರಿದೆದ್ದು ಮಾಧವ ಕೃಷ್ಣ |
ಹರಿಯೆಂದು ಸ್ಮರಿಸುತ್ತಲಾಗ ||
ಹರುಷದಿ ಕರ್ಣಜ ಕೌಂತೇಯರೆರಗಲಾ |
ಅರವಿಂದನಾಭ ತಕ್ಕವಿಸಿ   ||೪೮೭||