ಎರಡನೆಯ ಸಂಧಿ : ಕಂಸವಧೆ

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಹರುಷಂಗಳಲಿ ಸ್ತ್ರೀಯರು | ನಿಂತು ಆರತಿ ಬೆಳಗುತಿರಲಾ |
ಕಂತು ಜನಕನು ಕೆಳೆಯರೊಡನಾ | ಮುಂತೆ ನಡೆದ   || ೧ ||

ಬರಬರಲು ಧನುವಿರುವ ಭವನಕೆ | ಅರಿತು ಬಂದರು ದ್ವಾರದೊಳು ಮುಂ |
ದಿರುವ ಕಾಪಿನ ಭಟರ ಕಂಡರು ಹಿದನು ದಯದಿ       ||೨ ||

ಬಿಲ್ಲಹಬ್ಬವು ಗಡ ಮದಾಧನು | ವೆಲ್ಲಿ ತೋರಿದಡರಿಯಬಹುದೆನು |
ತಲ್ಲಿರುವ ಖಳರೊಡನೆ ಲಕ್ಷ್ಮೀ | ನಲ್ಲ ನುಡಿದ || ೩ ||

ತಡೆದ ಕಾಪಿನ ಭಟರ ಕರಗಳ | ಹಿಡಿದು ಅವರೊಡಗೂಡಿ ಒಳಪೊ |
ಕ್ಕೊಡನೆ ಹಲಧರ ಸಹಿತ ಧನುವಿ | ದ್ದೆಡೆಗೆ ಬಂದು     || ೪ ||

ಆ ಮಹಾ ಕೋದಂಡದಿದಿರೊಳು | ಕಾಮಜನಕನು ಸಹಿತ ಕೆಳೆಯರ |
ಸ್ತೋಮಕರುಹಿಸುತೆಂದನಾ ಬಲ | ರಾಮನೊಡನೆ     || ೫ ||

ರಾಗ ವೃಂದಾವನ ಸಾರಂಗ ತ್ರಿವುಡೆತಾಳ

ಕೇಳಿ ಗೋವಳರೆಲ್ಲ | ಎನ್ನಣ್ಣ ಕೃ | ಪಾಳು ಕೇಳೆನ್ನ ಸೊಲ್ಲ |
ಸಂತೋಷವ | ತಾಳಿ ನೋಡಿರಿ ಈ ಬಿಲ್ಲ | ಪಿಡಿದ ಮಹಾತ್ಮನ ||
ತೋಳ ಬಲವೇನಮಮ ಶಕ್ತಿ ಕ | ಪಾಲಧರನೇ ಬಲ್ಲ ನಾವಿದ |
ಕೇಳಿ ಕರ್ಣೇಂದ್ರಿಯದ ದುಷ್ಕೃತ | ಕೋಳು ಹೋದುದು ನಮಗೆ ದಿನ ದಿನ || ೧ ||

ಭರದೊಳೆಮ್ಮಾಂಸಕ್ಷಿಗೆ | ಗೋಚರಿಸಿತೀ | ಮೆರೆವ ಕಾರ್ಮುಕವೆಮಗೆ |
ನಮ್ಮಂತೆ ಧನ್ಯ | ರಿರುವರೇ ಜಗದೊಳಗೆ | ನೋಡಿರೀಗಳಿಗೆ ||
ಕರವ ಮುಟ್ಟಿಸಿ ಸಫಲ ಮಾಡದೆ | ಇರೆನು ನೋಡಾಯೆನುತ ತಾನೆಡ |
ಕರದಲೆತ್ತಿದ ಧನುವ ಮಂದರ | ಗಿರಿಯ ನೆತ್ತುವವೋಲ್ ಮುರಾರಿಯು   || ೨ ||

ಮೆರೆವ ಕೋದಂಡವನು | ಎತ್ತುತಲಿ ಶ್ರೀ | ಹರಿಯು ಬಗ್ಗಿಸುತದನು |
ತಿಬ್ಬೇರಿಸಿದ | ಕರದಿ ಝೇಂಕರಿಸಿದನು | ಇಕ್ಕಡಿಯ ಗೆಯ್ದನು ||
ಭರದಿ ಬ್ರಹ್ಮಾಂಡವನು ಒಡೆವಂ | ತಿರೆ ಸಗಾಢದಿ ಶಬ್ದಮಾಗಿರೆ |
ಯುರುಳಿ ಗದ್ದುಗೆಯಿಂದ ಕಂಸನು | ಧರೆಗೆ ಬಿದ್ದನು ನಡುಗಿದುದು ಸಭೆ || ಕೇಳಿ ||  || ೩ ||

ಭಾಮಿನಿ

ಪೊಡವಿಯಧಿಪತಿ ಕೇಳು ಖರ್ಪರ |
ವೊಡೆದುದೋಹೊ ಕುಲಾದ್ರಿ ಕಡಲೊಳು |
ಸಿಡಿದು ಕೆಡದುದೊಯೆಂಬ ತೆರನಂತಾಗೆ ಧನು ಮುರಿಯೆ ||
ಮೃಡಸರೋಜಜರೊಡಲು ಕಂಪಿಸ |
ಲೊಡನೆಯಿತ್ತಲು ಬಿಡದೆ ಹರಿಯನು |
ತಡೆದು ಬಾಗಿಲನೆಡೆಬಿಡದೆ ನಿಂದಿರ್ದರಾ ಖಳರು      || ೧ ||

ರಾಗ ಮಾರವಿ ಏಕತಾಳ

ಈ ಪರಿಯೊಳು ಧನು ಮುರಿಯಲು ಖಳತತಿ | ಕೋಪದಿ ಹಿಡಿದೆಳೆಯೆ ||
ಶ್ರೀಪತಿಯದ ಕಂಡಾ ಬಲರಾಮಗೆ ಚಾಪದ ಕಡಿಯೀಯೆ        || ೧ ||

ಹರಿಬಲರರ್ಧರ್ಧದ ಇಕ್ಕಡಿಗಳ | ಧರಿಸಿ ಬಾಗಿಲ ತಡೆವ ||
ದುರುಳರ ನೆರವಿಯ ಹೊಯ್ವುತ ಕೆಡಹಿದ | ರುರುವ ಖಳರ ಶಿರವ       || ೨ ||

ಹಿಡಿ ಹಿಡಿ ಬಿಡದಿರಿ ಕಡಿಕಡಿಯೆಂದಡಿ | ಗಡಿಗೆ ಗರ್ಜಿಸಿ ಖಳರು ||
ನುಡಿಯಲು ಹರಿ ತಡೆತಡೆದು ಬಡೆಯೆ ಸಿಡಿ | ಸಿಡಿದು ಬಿದ್ದರು ಭಟರು    || ೩ ||

ಘಸಣಿಸುತಸುರರ ಮುಸುಡನು ಹೊಯ್ಯಲು | ಕುಸುರಿ ನರಗಳೊಡೆಯೆ ||
ಬಿಸಿ ಬಿಸಿ ನೆತ್ತರು ಪಸರಿಸಿ ನಿಶಿಚರ | ರುಸಿರಲಿ ಮೆಯ್‌ಮರೆಯೆ || ೪ ||

ಥರ ಥರ ನಡುಗ್ಯುರುಳುರುಳಿ ಬಿದ್ದೋಡುತ | ಲಿರುವರು ಅದರೊಳಗೆ ||
ಭರದಿ ದುರುಳನರಮನೆಗಯ್ತಂದವ | ರರುಹೆ ಖಳಾಧಮಗೆ     || ೫ ||

ರಾಗ ಮುಖಾರಿ ಏಕತಾಳ

ಲಾಲಿಸಿ ಕೇಳು ಕಂಸರಾಯ | ಬೆದರದಿರು ಜೀಯ | ಲಾಲಿಸಿ ಕೇಳು       || ಪ ||

ಕರೆಯಲಟ್ಟಿದೆಯೈ ಯಾದವನ ಪೋಗಿಯಕ್ರೂರ | ಭರದಿ ಗೋಕುಲಕೆ
ಆ ಮಾಧವನ ಬರಿಸಲು ಬಲು ಗೋವಳರನು ನೆರಹಿಸಿ | ಶರಿಧಿ ತೆರದಿ ಬಲು

ತ್ವರಿತದೊಳೆಮ್ಮಯ ಪುರಕಯ್ತಂದರು ಅರುಹುವುದೇನಾ |
ವಿರುವಂತೆಸಗೈ ದೊರೆಯೆ ಪರಾಕೆ || ಲಾಲಿಸು         || ೧ ||

ಎಸೆವ ಶಸ್ತ್ರಶಾಲೆಗಯ್ತಂದ | ದ್ವಾರದಿ ನಿಂತ | ಅಸುರರ ದೂಡುತೊಳಗೆ ಬಂದ ||
ಮಸಿಬಣ್ಣನು ತಾ ಕುಶಲದಿ ಬಿಲ್ಲೆ | ಬ್ಬಿಸಿ ತುಸು ಬಗ್ಗಿಸಿ ನಸಿಯರಿವುತ ನ |
ಮ್ಮುಸುಡಿಗೊದೆದು ಖಳರಸುವನು ತೊಲಗಿಸಿ |
ರಸೆಯೊಳೊರಗಿಸಿದನುಸಿರ್ವೆ ಪರಾಕೆ || ಲಾಲಿಸಿ      || ೨ ||

ಒಡೆಯ ನಿನ್ನಿಂದ ನೀನೇ ಕೆಡುವೆ | ಬೆದರಿಸದಿರು |
ತಡೆಯದೆ ಕಂಡುದ ನಾ ನುಡಿವೆ ||
ಬೆಡಗಿನ ಗೋವಳ ಹುಡುಗರ ಬರಿಸಿ ನೀ |
ಕೆಡಲುಚಿತವೆ ಬಿಡು ಬಿಡು ನಿನ್ನಯ ಬಹು |
ಸಡಗರವವರೊಳು ನಡೆಯದು ನಮ್ಮನು |
ಬಡೆದು ಕೆಡಹಿದರೊಡೆಯ ಪರಾಕು || ಲಾಲಿಸು         || ೩ ||

ವಾರ್ಧಿಕ

ನುಡಿಯ ಕೇಳುತಲಿ ಕಿಡಿಗೆದರಿ ಕಂಸಾಸುರನು
ಪಡೆಯ ಕರೆಸಿದ ರಥ ಪದಾತಿ ಚತುರಂಗಬಲ
ನಡೆದು ಗೋವಳರ ಹಿಡಿಹಿಡಿದು ನಮ್ಮಡೆಗೆ ಬರ ಗೊಡದೆ ತಡೆಸುತ್ತವರನು
ಜಡಿದು ಮಾಂಸಗಳ ಕಡಿಕಡಿದು ಭೂತಾಹುತಿಯ
ಬಡಿಸಿಬಿಡಿರೆಂದು ನೇಮವ ಕೊಡುತ ಕಳುಹಲಾ
ಕಡು ಪರಾಕ್ರಮಿಗಳೆಡೆಬಿಡದೆ ನಡೆದುದು ನಿವಹ ಪೊಡವಿಯಗಲದೊಳಾಗಲು      || ೧ ||

ರಾಗ ಆಹೇರಿ ಝಂಪೆತಾಳ

ಬಂದರಾಹವಕೆ ಖಳರಾಗ | ಕುದುರೆ | ಮಂದಿ ಗಜ ರಥ ಚತುರ್ಬಲ ನೆರಹಿ ಬೇಗ  || ಪ ||

ಹೊಡೆವ ಭೇರಿಗಳ ತಂಬಟೆ ಪಟಹ ನಿಸ್ಸಾಳ |
ಗಡಿಬಿಡಿಯ ಢಕ್ಕೆ ಡಮರುಗ ಕೊಂಬು ಕಹಳೆಗಳ |
ನುಡಿವ ಮೌರಿಯು ಉಡುಕು ಚಕ್ರ ತಾಳಗಳ ಬಹು |
ಸಡಗರದ ನಿನಾದದ ವಾದ್ಯಗಳ || ಕೂಡು |
ತೊಡನೆ ಪಡೆ ನಡೆವ ಸಂಭ್ರಮದ ಚೋದ್ಯಗಳ        || ೧ ||

ರಥಕಡರಿ ಕುದುರೆಯೇರುತ ಗಜದಿ ಕುಳಿತು ಬಹು |
ಜತನದಲಿ ನಡೆವ ಅತಿರಥರು ಮಹಾರಥರುಗಳ |
ಪೃಥಿವಿ ನೆಗ್ಗಲು ಕಮಠ ಧರೆ ಬಿರಿವ ತೆರದಿಂ ಬಂ |
ದತುಳ ಧೈರ್ಯದೊಳಗೊಂದಾಗಿ || ಕಂಡು |
ಮಥಿನಿಸುತ ಹರಿಬಲರು ಬಂದರಿದಿರಾಗಿ      || ೨ ||

ಮೆರೆವ ಖಡ್ಗ ಕಠಾರಿ ಈಟಿ ತೋಮರ ಕುಂತ |
ಪರಶು ಶೂಲ ಭುಶುಂಡಿ ಮುದ್ಗರ ಕೃಪಾಣಗಳ |
ಧರಸಿ ಬರುತಿಹ ಖಳರ ನೆರವಿನೊಳು ಹೊಕ್ಕು ತರಿ |
ತರಿದು ಕೆಡಹಿದನು ಬಲರಾಮ || ಪಟುಭಟರ |
ಶಿರಗಳನು ಕಡಿದ ಶ್ರೀಕೃಷ್ಣ ರಣಭೀಮ        || ೩ ||

ರಾಗ ಶಂಕರಾಭರಣ ಪಂಚಾಗತಿ ಮಟ್ಟೆತಾಳ

ಒತ್ತಿ ಬರುವಧಟರು ಸುತ್ತ ಮುತ್ತ ಕವಿವುತ |
ಎತ್ತಿ ಬಿಲ್ಲ ಕಡಿಯೆ ಹರಿಯು ಎತ್ತಿ ಹಿಡಿವುತ ||
ಮತ್ತೆ ಹರಿ ಗೋವಳರಿಗಭಯವಿತ್ತನಾಗಲು |
ಧೂರ್ತಜನರ ತಡೆಸುತವರನೆತ್ತಿ ಹೊಡೆಯಲು         || ೧ ||

ಉಟ್ಟ ವಸನ ಸೆರಗ ಕಟಿಗೆ ಕಟ್ಟಿ ಲಂಘಿಸಿ |
ಅಟ್ಟಿ ಬೆರೆಸಿ ಖಳರ ಶಿರವ ಕುಟ್ಟಿ ಹಾರಿಸಿ ||
ದಿಟ್ಟರಾಗಿರುವರೆದೆಯ ಮೆಟ್ಟಿಯಡರಿದ |
ಹೊಟ್ಟೆ ಬೆಳೆದ ಭಟರಿಗಮರಬಟ್ಟೆ ತೋರಿದ  || ೨ ||

ಒಬ್ಬರುಳಿಯದಂತೆ ಕೊಂದ ಸರ್ಬ ದಳವನು |
ಉರ್ಬಿಪಾಲ ಕೆಳೆಯರೊಳು ತನುಬ್ಬಿ ಬೆರೆದನು        || ೩ ||

ವಾರ್ಧಿಕ

ಉತ್ತರೆಯ ಸುತನೆ ನೀ ಚಿತ್ತವಿಸು ಸುಭಟನ |
ಮೊತ್ತಮಂ ಸವರಿ ಹರಿಯಿತ್ತ ಕೆಳೆಯರ ತನ್ನ |
ಹತ್ತಿರಕೆ ಬರಿಸಿಯಿರಲಿತ್ತ ರವಿ ಪಶ್ಚಿಮದಲೊತ್ತಿಲಿಹ ಶರಧಿಗಿಳಿಯೆ |
ಧೂರ್ತ ಕಂಸನು ರಣದ ವರ್ತಮಾನವ ಕೇಳಿ |
ಚಿತ್ತದಲಿ ಬೆದರಿ ತಲೆಗುತ್ತಿಯಾ ಗೋವಳನ |
ವ್ಯರ್ಥ ಬರಿಸಿದೆನೆಂದು ಮತ್ತೆ ವೊಳಸರಿದು ಮಳಲುತ್ತ ಗುಪ್ತದೊರಗಿದ   || ೧ ||

ಕಂದ

ಈ ಪರಿಯಳಲುತ ಭಯದೊಳ್ | ಶ್ರೀಪತಿಯಂ ನೆನೆನೆನೆವುತ ಸಜ್ಜಾಗೃಹದಿಂ ||
ತಾ ಪವಡಿಸಿ ಕನಸಿನೊಳಂ | ಲೋಪದ ಸ್ವಪ್ನವ ಕಂಡಂಜುತಲಿಂತೆಂದಂ          || ೧ ||

ರಾಗ ನೀಲಾಂಬರಿ ರೂಪಕತಾಳ

ಏನ ಮಾಡಲಿ ನಾನಿನ್ನೇನ ಕಂಡೆನು ಕನಸಿನೊಳ್ |
ಏನಾಗುತಿದೆಯೊ ನಾನೇನ ಮಾಡುವೆನು    || ಪ ||

ನೆತ್ತಿಗೆ ತೈಲವನೊತ್ತುತ ಮೃತ್ತಿಕೆ ಲೇಪಿಸಿ ತನುವಿಗೆ |
ಕತ್ತೆಯನಡರುತ ದಕ್ಷಿಣಯಾತ್ರೆಗೆ ಗಮಿಸಿದುದ ||
ಕೃತ್ರಿಮವಹ ಕನಸಿನೊಳ್ ಪ್ರತ್ಯಕ್ಷದಿ ಕಂಡೆನು ಸ್ವಪ್ನವ |
ಮೃತ್ಯುವೆ ಸರಿ ತನಗದು ನಾ ಬಿತ್ತರಿಸಲರಿಯೆ         || ೧ ||

ಬೆದರುತ ನಾನೆದ್ದರೆ ಎನ್ನಿದಿರಿಗೆ ಸತ್ತವರಿದಕೋ |
ಕದುಕುತಲೆನ್ನಮರ್ದಪ್ಪುವರಿದೆಯೆನ್ನನು ಬಿಡದೆ ||
ಇದೆಯೆನ್ನಯ ತಲೆ ತಡವರಿಸಿದರೆನಗದು ಕಾಣದರಿಂ |
ದಧಿಕದೆ ದರ್ಪಣವೀಕ್ಷಿಸಲಿದರೊಳು ಕಾಣಿಸದು         || ೨ ||

ಉರಿವುದು ಒಂದೀಪವು ಇದು ಎರಡಾಗುತ ಕಾಣುತಿದೆ |
ಅರಮನೆಯೆಲ್ಲವನೀಕ್ಷಿಸೆ ಹರಿಮಯವಾಯ್ತಯ್ಯೊ ||
ಬರಿಸಿದೆ ತಂಗಿಯ ಮಕ್ಕಳ ಕರೆಸಿದೆ ಆ ಕೃಷ್ಣನು ಬಹು |
ಧರೆಯೊಳು ನಾಟಕಧಾರಿಯೆಂದರಿವೆನು ಮೊದಲವಗೆ  || ೩ ||

ಕಡಲೊಳಗವತರಿಸನೆ ಮುಂಮಡುವಿಲಿ ಜನಿಸನೆ ಕಂಭವ |
ನೊಡೆದುದಿಸನೆ ಪೂರ್ವದೊಳವ ಬೆಡಗಿನ ಮಾಯಕದಿ ||
ಬಿಡದೆನ್ನಯ ಮನೆಯೊಳಗೆಲಡ ಹಾಯ್ವುತ ಬರುವನೊಯೆಂ |
ದಡಿಗಡಿಗಂಜುತ ಝೇಂಪಿಸಿ ನಡನಡುಗಿದ ಮನದಿ    || ೪ ||

ಏತಕೆ ಕಳುಹಿದೆ ಕರೆವರೆಯೇತಕೆ ಬರಿಸಿದೆ ಕೃಷ್ಣನ |
ನೇತಕೆ ಈ ಪರಿ ಮಾಡಿದೆಯೇತಕೆ ಬಿಲು ಮುರಿದ ||
ಏತಕೆ ಸುಭಟರ ಕರೆದೆನೊ ಏತಕೆ ಕನಸನು ಕಂಡೆನೊ |
ಏತಕೆ ಸುಡು ಜನ್ಮವ ಇನ್ನೇತಕೆ ಹರ ಹರನೆ  || ೫ ||

ಭಾಮಿನಿ

ದುರುಳನೀ ಪರಿ ಮರುಗಿ ನಯನವ |
ತೆರೆದು ನೋಡಲು ತನ್ನ ಅರಮನೆ |
ಹೊರಗೊಳಗೆ ಶ್ರೀಕೃಷ್ಣಮಯವಾಗಿರಲು ನೆರೆ ಕಂಡ ||
ಭರದಿ ಭಯದಿಂ ನೆನೆ ನೆನೆದು ಶ್ರೀ |
ಹರಿಯ ಮೂರ್ತಿಯ ಹೃದಯಕಮಲದಿ |
ಸೆರೆವಿಡಿದ ಪುಣ್ಯಾತ್ಮರಾರಿವನಂತೆ ತ್ರಿಜಗದಲಿ         || ೧ ||

ಕಂದ

ಮುದದೊಳು ಕಂಸನು ಈ ಪರಿ | ಬೆದರುತಲಿರುತಿರಲಾಗನಿತರೊಳುಂ ||
ಪದುಮಾಪ್ತನು ಕಗ್ಗತ್ತಲೆ | ಯೊಡೆವುತ್ತುದಯಾದ್ರಿಗೆ ಬಂದಡರಿದನಾಗಳ್ ||

ರಾಗ ಕಾಂಭೋಜಿ ಏಕತಾಳ

ಪಾಹಿ ಪಾಹಿ ಗೌರೀಶ | ಪಾಹಿ ಪಾಹಿ ಭಕ್ತಸುಪೋಷ |
ಪಾಹಿ ಪಾಹಿ ಭೂತೇಶ | ಪಾಹಿ ಪಾಹಿ         || ಪ ||

ಉದಯಕಾಲದೊಳೆದ್ದು ಕಂಸನಿತ್ತಲು ಹರನ |
ಪದವ ಪೂಜಿಸಿ ಊಟವೊದಗಿ ಮಾಡಿದನು   || ೧ ||

ಬಂದು ಪೀಠದೊಳು ಆನಂದದಿಂದಡರುತ್ತ |
ಚಂದದಿಂ ಕರೆಸಿದನು ಮಂದಿಮಾರ್ಬಲವ ||  || ೨ ||

ಹಸ್ತಿ ಮಲ್ಲ ಚಾಣೂರ ಮುಷ್ಟಿಕಾದ್ಯರನು ಸ |
ಮಸ್ತರ ಬರಿಸುತ್ತ ಬಿತ್ತರಿಸುತಿರ್ದನು          || ೩ ||

ನಂದಗೋಕುಲದ ಗೋವಿಂದನೆಂಬವನೊರ್ವ |
ಬಂದ ರಜಕನು ಕೊಂಡ ಗಡ ಮತ್ತೀಗ        || ೪ ||

ಬರಿದೆ ನಮ್ಮಯ ಬಿಲ್ಲ ಮುರಿದು ದೈತ್ಯರನೆಲ್ಲ |
ತರಿದು ನಮ್ಮೆಡೆಗೆ ತಾ ಬರುವನಂತೆ ಮತ್ತಿಲ್ಲಿ || ೫ ||

ತಡೆದು ಬಾಗಿಲೊಳ್ ನೀವು ಬಿಡದೆ ಮತ್ತವರನ್ನು |
ಬಡಿದು ನಮ್ಮೆಡೆಗೆ ಬಂದೊಡನೆ ಪೇಳುವುದು || ೬ ||

ಪಂಕ್ತಿಪಂಕ್ತಿಯೊಳ್ ನೀವು ನಿಂತು ನಾನಡರುವ |
ದಂತಿ ಹೆಬ್ಬಾಗಿಲೊಳು ಮುಂತೆ ನಿಲಿಸುವುದು || ೭ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಧೂರ್ತ ಕಂಸಾಸುರನ ಬೆಸನದಿ | ಮತ್ತಗಜ ಕುವಲಯಾಪೀಡವ |
ಮತ್ತೆ ಮಾವುತನೇರಿ ನಡೆಸಲು | ಪೃಥ್ವಿ ನೆಗ್ಗುತ ನಡುಗಿತು ||
ಹಸ್ತಿಪನು ದೊಗ್ಗಾಲ ಮಂಡಿಸಿ | ನೆತ್ತಿಗಂಕುಶದಿಂದಿರಿಯೆ ಬಹು |
ಸತ್ತ್ವದಲಿ ಸುಂಡಿಲವೆ ನಿಗುರಿಸು | ತತ್ತಲಿತ್ತಲೋಲಾಡಿತು | ಕೇಳು ಭೂಪ || ೧ ||

ಉದಯದೊಳು ಬಲರಾಮ ಕೃಷ್ಣರು | ಮುದದಿ ಕೆಳೆಯರು ಸಹಿತಲಿತ್ತಲು |
ವಿಧವಿಧದಿ ದಧಿಘೃತದಿ ಭೋಜನ | ವೊದಗಿನಲಿ ರಚಿಸುತ್ತಲಿ ||
ಅಧಿಕ ಸರಸದೊಳಮರ ವೈರಿಯ | ಸದನವೀಕ್ಷಿಸಲೆನುತ ಬರುತಿರೆ |
ಇದಿರೊಳಿಹ ಮದಗಜವ ಕಾಣುತ | ಬೆದರಿದರು ಗೋಪಾಲಕರು | ಕೇಳು ಭೂಪ    || ೨ ||

ಹರಿಯು ಕೆಳಯರಿಗಭಯ ಕರತಳ | ಭರದಿ ತೋರಿ ಗಜೇಂದ್ರನಿದಿರೊಳು |
ಸರಿದು ಹಸ್ತಿಪಗರುಹಿದನುತಿರು | ತಿರುಹಿಸೆಲೊ ಖಳ ಹಿಂದಕೆ ||
ತೆರಹಗೊಡದಿರೆ ನಿನಗೆ ತರಣಿಜ | ನಿರುವ ಅರಮನೆ ತೋರಿಸುವೆನೆಂ |
ದಿರದೆ ಗಜಮಸ್ತಕವ ಹೊಯ್ಯಲು | ಸುರಿದುದರುಣಜಲೌಘವು | ಕೇಳು ಭೂಪ      || ೩ ||

ರಾಗ ಶಂಕರಾಭರಣ ಮಟ್ಟೆತಾಳ

ಮತ್ತೆ ಕರಿ ಸುಂಡಿಲವ ನಿಗುರಿ | ಸುತ್ತ ಹರಿಯ ಹಿಡಿದು ಸುತ್ತಿ |
ಸುತ್ತಿಯೆಳೆವುತಿರಲು ಗೋಪ | ಮೊತ್ತ ಬೆದರಲು ||
ಒತ್ತಿ ಬಿಡಿಸಿಕೊಳುತ ಹಿಂದೆ | ನಿತ್ತು ಬಾಲ ಹಿಡಿದುಕೊಂಡಿ |
ಪ್ಪತ್ತು ಬಿಲ್ಲಂತರಕೆಯತ್ತ | ಲಿತ್ತಲೆಳೆದನು      || ೧ ||

ತಿರುಗಿ ಗಜವು ಹರಿಯ ಬೆನ್ನ | ಬೆರೆಸಲಾಗ ಕೃಷ್ಣ ಧರೆಗೆ |
ಯುರುಳಿ ಬಿದ್ದ ತೆರದಿ ಕೆಡೆದು | ಭರದೊಳೋಡಿದ ||
ಹರಿಯನಟ್ಟಿ ಹಿಡಿವುತಿರೆ ಶ್ರೀ | ವರ ನುಲಿದರಡಿಯನು ಸರಿಯೆ |
ಸ್ಮರಿಸಿ ಶ್ರುತಿಗಳರಸುವಂತೆ | ಅರಸುತಿರ್ದನು ||      || ೨ ||

ಯುಗಸಹಸ್ರ ಕಾದಿದರೆ ತ್ರೈ | ಜಗದೊಳಾರು ಬಗೆವರಿದನು |
ಸಿಗಿದು ಬಿಡುವೆನೆಂದು ಕೃಷ್ಣ | ನಗುತ ಮುಷ್ಟಿಯ ||
ನಿಗುರಿಸುತಲಿ ಹಿಡಿದು ಕಿಡಿಯ | ನುಗುಳಿ ಗಜದ ಮಸ್ತಕವನು |
ನೆಗೆದು ಹೊಯ್ದ ಭರಕೆ ಧರೆಗೆ | ಮಗುಚಿ ಕೆಡೆದುದು    || ೩ ||

ಬಿಡದೆ ಗಜದ ಪೆಣನ ಮೆಟ್ಟಿ | ಯಡರಿ ಮುಸುಡಿಗೊಡೆದುದಂತ |
ಝಡಿದು ಕಿತ್ತ ಕಂಸನೃಪನ | ತುಡುಕಿ ಹಲ್ಲನು ||
ಹಿಡಿದು ಕೀಳ್ವ ತೆರದಿ ಕಿತ್ತು | ತಡೆಯದೊಂದು ಹಲಧರಂಗೆ |
ಕೊಡುತಲೊಂದ ತಾನು ಧರಿಸಿ | ನಡೆದ ಮುಂದಕೆ    || ೪ ||

ಅರಮನೆಯ ಸರಾಗದಿಂದ | ಭರದಿ ಹೊಗುತ ದ್ವಾರದೊಳಗ |
ಲ್ಲಿರುವವರನು ತರಿದು ಒಳಗೆ | ಸರಿಯೆ ಕಾಣುತ ||
ಮೆರೆವ ಚಾಣೂರ ಮುಷ್ಟಿಕರೆಂ | ದಿರುವ ಮಲ್ಲರುಗಳು ಹರಿಯ |
ಕರವ ಪಿಡಿದು ನಿಲಿಸಿ ಮೀಸೆ | ತಿರುಹುತೆಂದರು       || ೫ ||

ರಾಗ ಭೈರವಿ ಏಕತಾಳ

ಎಲೆ ಎಲೆ ಏನೈ | ನಿಲ್ ನಿಲ್ ಪೇಳುವೆ | ಬಲ್ ಬಲ್ ಬಗೆ ಬೀರುತ್ತ ||
ಗಲ್ ಗಲ್ ಮಾಡುವ | ಹಲ್ ಹಲ್ ಮುರಿವೆನು | ಛಲ್ ನಿಲ್ ಬಿಡು ನೋಡಿತ್ತ      || ೧ ||

ರಾಗ ಶಂಕರಾಭರಣ ಅಷ್ಟತಾಳ

ಹಲ್ಲ ಮುರಿವುದೇಕೆ ಮಧುರೆ | ಯೊಲ್ಲಭನೆನ್ನು ಮಾವನು ||
ಇಲ್ಲಿ ಬರಿಸಲು ನಾ ಬಂದೆ | ಮಲ್ಲ ಚಾಣೂರ  || ೧ ||

ರಾಗ ಭೈರವಿ ಏಕತಾಳ

ಧೊರೆ ನಿನ್ನ ಬರಿಸಿದ | ಧುರದೊಳ್ ಗೇಲವ |
ವರಿಸಲ್ ಬಗೆಯೊಳ್ ಗೆಣೆಯ ||
ಶರ ಗಿರಿ ಸಲ್ಲದು | ಬರಿ ಬರಿಗಯ್ಯೊಳ್ |
ಧುರದೊಳ್ ತೋರಿಸುವುದು ಭುಜಸಿರಿಯ   || ೧ ||

ರಾಗ ಶಂಕರಾಭರಣ ಅಷ್ಟತಾಳ

ಅಡವಿಯೊಳ್ ಗೋವುಗಳನು | ಬಿಡದೆ ಕಾವ ಗೊಲ್ಲ ಹುಡುಗ ||
ರೊಡನೆ ಯುದ್ಧ ತರವೆ ಮಲ್ಲ | ರೊಡಯ ಚಾಣೂರ    || ೧ ||

ರಾಗ ಭೈರವಿ ಏಕತಾಳ

ಬಿಡು ಬಿಡು ನಿನ್ನ ಬಹು | ಸಡಗರವೆನ್ನೊಳ್ |
ನಡೆಯದು ಕೇಳ್ ಗೊಲ್ಲರ ಹುಡುಗ ||
ಒಡೆಯನು ಅರ್ಥಿಯ ಪಡೆಯಲು ಯುದ್ಧವ |
ಕೊಡು ಕೇಳ್ ತೋರುವ ನಾವ್ ಬೆಡಗ       || ೧ ||

ರಾಗ ಶಂಕರಾಭರಣ ಅಷ್ಟತಾಳ

ಬಡವರಾವಲ್ಲವೆ ಜಗದಿ | ಒಡೆಯ ಗರಡಿ ವಿದ್ಯೆಯೆಮಗೆ ||
ಬಿಡದೆ ಕಲಿಸಿದ ನಾವಾತ | ನುಡಿಯೊ ಚಾಣೂರ       || ೧ ||

ರಾಗ ಭೈರವಿ ಏಕತಾಳ

ಶಕಟಾಸುರ ಧೇನುಕ ವಾತಾಸುರ | ಬಕ ವೃಷಭಾದ್ಯರ ನೀ ಮೊದಲು ||
ಚಕ ಚಕ ಕಡಿದಿಡಲಿಲ್ಲವೆ ಧುರದೊಳ್ | ಯುಕುತಿಯ ಬಲ್ಲೆನು ಕೇಳ್ ತಿಳಿದು ||

ರಾಗ ಶಂಕರಾಭರಣ ಅಷ್ಟತಾಳ

ಎಲ್ಲ ಖಳರು ನಿನ್ನಂಥವ | ರಲ್ಲ ಜಗದಿ ಪ್ರಬಲ ನೀನೆ ||
ಮಲ್ಲರೊಳ್ ಬಲ್ಲಿದನು ನಿನಗಿದಿ | ರಿಲ್ಲ ಚಾಣೂರ       || ೧ ||

ರಾಗ ದೇಶಿ ಅಷ್ಟತಾಳ

ಭಲೆ ಭಲೆ ಭಲೆ ಗೋವಿಂದ | ಎಲ ಎಲ ಮುಕುಂದ | ಗೋವಿಂದ || ಪ ||

ಬಿಡು ಬಿಡು ನೀ ಸಡಗರ ಬೀರುವೆಯ | ತಡೆಯದೆನ್ನೊಳು ಕೊಡು ನೀ ಕಯ್ಯ |
ಭುಜ ಹೊಡೆದೆಯ್ಯ ಸಿಡಿದಾಡಯ್ಯ   || ೧ ||

ಬಲ್ಲಿದ ನೀನಹುದಹುದು ಬಾರಯ್ಯ | ಮಲ್ಲ ರಣಾಗ್ರವ ತೋರಯ್ಯ |
ನೆಗೆದಾಡಯ್ಯ ಎಲೊ ರಂಗಯ್ಯ     || ೨ ||

ತಟ್ಟುತ ಜಂಘೆಯ ಬಿಡದೆ ನೀ ಯೆನ್ನ | ಕುಟ್ಟುವೆ ನಿನಗೆ ಪ್ರಸನ್ನ |
ಹೆಟ್ಟುವೆ ಆ ಮೇಲೆ ಕೇಳ್ ಗುಣರನ್ನ | ಮುಕುಂದ ಗೋವಿಂದ    || ೩ ||

ರಾಗ ಸುರುಟಿ ಏಕತಾಳ

ಅಡಿಗಡಿವರ್ ಧುರದಿ | ಬಿಡದೊದಗಿದರಾಗ ||
ಝಡಿದು ವಿಡಿದು ಬಡಿದು | ಹೊಡೆದು ಭುಜವ ಬೇಗ    || ೧ ||

ಖರ ಖರ ಖರ ಪಲ್ಗಡಿವುತ | ಘರಘರಘರ ತಿರುಗಿ ||
ಸರಸರ ಬಂದಪ್ಪಳಿಸ್ಯರೆ | ಢರಢರಿಸುತ ನರುಗಿ ||     || ೨ ||

ವರ್ಮದಿ ತಂತಮ್ಮೊಳು | ಘುಂ ಘುಮ್ಮನೆ ಗುದ್ದ್ಯವರು ||
ಘಮ್ಮನೆ ಮೆಯ್ ಜೋಂಪಿಸುತಿರೆ | ಸುಮ್ಮನೆ ನಿಲುತವರು      || ೩ ||

ಕಿಡಿಕಿಡಿಯುಗುಳತ ಕಣ್ಣೊಳು | ಸಿಡಿಸಿಡಿವುತ ಹರಿಯ ||
ಪಿಡಿಪಿಡಿಪಿಡಿದಿಹ ಬಂಧವು | ಬಿಡಿಬಿಡಿಸಿಮುರಾರಿ       || ೪ ||

ಅಪ್ಪುತ ಹರಿ ಚಾಣೂರನ | ಅಪ್ಪಳಿಸಿದ ಧರೆಗೆ ||
ಘಪ್ಪನೆ ಉಸಿರಡಗುತ ಮ | ತ್ತಪ್ಪದೆ ಬಂತವಗೆ        || ೫ ||

ಕ್ರಮತಪ್ಪುತ ಬಡೆಯದಿರೆಲೆ | ಕಮಲಾಕ್ಷನೆ ತಾಳು ||
ಕ್ರಮದಿಂದೊಂದಪ್ಪುತ ಸೆಣಸುವ | ನಮನಮಗೇ ಕೇಳು         || ೬ ||

ತಿವಿಯೆಲೊ ಚಾಣೂರನೆ ನೀ | ತಿವಿವೆನು ನಾ ಮತ್ತೆ ||
ಬವರವು ನಿನ್ನದು ಮೊದಲೆನೆ | ತಿವಿಯಲು ಕಾಣುತ್ತೆ   || ೭ ||

ಅಸಮ ಸಾಹಸ ಮಲ್ಲನ | ಮುಸುಡನು ಹರಿ ತಿವಿದ ||
ಬಿಸಿ ಬಿಸಿ ನೆತ್ತರ ಹೊರಡಿಸಿ | ವಸುಧೆಯೊಳೊರಗಿಸಿದ || ೮ ||

ಭಾಮಿನಿ

ಸುರಕದಂಬಕ ನಲಿಯೆ ಧುರದಲಿ |
ದುರುಳ ಚಾಣೂರನನು ಲಕ್ಷ್ಮೀ |
ವರನಭಸ್ಥಳಕೆತ್ತಿ ಸುಳಿಸುಳಿವುತ್ತಲಪ್ಪಳಿಸೆ ||
ಹರಣವದು ಜುಣುಗಾಡಿ ನಡೆಯಲು |
ಹರಿಯ ಸರಿಸದಿ ಸುರರು ಪೂಮಳೆ |
ಸುರಿಯಲಿತ್ತಲು ಭರದಿ ಹಲಧರಗೆಂದ ಮುಷ್ಟಿಕನು     || ೧ ||