ರಾಗ ಯರಕಲಕಾಂಭೋಜಿ ಝಂಪೆತಾಳ
ಕಂಡನಕ್ರೂರ ನೀರೊಳಗೆ ಶ್ರೀಹರಿಯು |
ಕಂಡು ಭ್ರಮೆಯಡರಿ ಭಯ ಗೊಂಡೆದ್ದು ಕಳವಳಿಸಿ || ಕಂಡನಕ್ರೂರ || ಪ ||
ಶಿರವ ಮೇಲೆತ್ತಿ ಹಿಂತಿರುಗಿ ನೋಡಿದ ರಥದಿ |
ಹರಿಬಲರ ಕಾಣುತ್ತ ಸ್ಮರಿಸಿದನು ಮನದಿ ||
ಎರಡನೆಯ ಮುಳುಗಲಾ ಸ್ಮರಪಿತನ ಕಂಡು ತನು |
ಮರೆದೆದ್ದು ಮರಳಿ ಮುರಹನನೀಕ್ಷಿಸಿ ರಥದಿ || ಕಂಡನಕ್ರೂರ || ೧ ||
ಭ್ರಮೆಗೊಂಡೆನೆನುತ ಬಹು ಶ್ರಮದಿ ಮೂರನೆ ಮುಳುಗೆ |
ಕ್ರಮದಿ ನೋಡಿದ ನಿಗಮಾಗಮ ಶಿರೋಮಣಿಯ ||
ಅಮಿತ ವೈಕುಂಠದೊಳು ವಿಮಲ ಶೇಷಾಸನದಿ |
ಕಮಲನಾಭನು ರಾಜಿಸುವ ಕ್ರಮದೊಳಿರುವವನ || ಕಂಡನಕ್ರೂರ || ೨ ||
ಶತಕೋಟಿಯಜಭವರಮಿತ ಶಶಿದಿವಾಕರರ |
ಜತೆಗೊಂಡಿರುವ ರಮಾಪತಿಯನಂತನನು ||
ಪೃಥಿವಿ ಜಲ ಮರುತ ಪಾವಕ ಚತುರ್ದಶಭುವನ |
ರತಿಪತಿಯ ಪಿತನ ರೋಮದ ಕುಳಿಯ ಮಧ್ಯದಲಿ || ಕಂಡನಕ್ರೂರ || ೩ ||
ಭಜಕಪ್ರಹ್ಲಾದಾಂಬರೀಷ ವಿದುರ ಸುದಾಮ |
ಭುಜಗ ಬಲಿ ಗರುಡ ಕಲಿ ಪಾರ್ಥ ಭೀಷ್ಮರನು ||
ಸುಜನ ರುಕ್ಮಾಂಗದ ವಿಭೀಷಣರ ಸಮುದಾಯ |
ಭಜಿಸಿ ಕಯ್ ಮುಗಿದು ಮನ ನಿಜದಿ ನಿಂತಿಹ ಜನರ || ಕಂಡನಕ್ರೂರ || ೪ ||
ಸುರಗಂಗೆ ಗಂಡಕಿ ಗೌತಮಿ ವಿಮಲೆ ಮಲಹರೀ |
ಹರಿದ್ವತೀ ವಾರಾಹಿ ವೈಷ್ಣವಿ ಯಮುನೆಯು ||
ವರಸರಸ್ವತಿ ಭೋಗವತಿ ವಾರಣಾಸಿಮಿಗೆ |
ಪರಿಪರಿಯ ತೀರ್ಥಗಳ ಹರಿಯ ರೋಮಾಗ್ರದಲಿ || ಕಂಡನಕ್ರೂರ || ೫ ||
ಪರಿವರ್ಧಿನೀ
ಅತ್ರಿ ಮೃಕಂಡು ಪರಾಶರ ವಿಶ್ವಾ |
ಮಿತ್ರ ಕವಷ ಮುದ್ಗಲ ವೈಭಾಂಡಕ |
ಪುತ್ರಾಂಗೀರಸ ಗೌತಮ ಕಾಶ್ಯಪ ಗಾರ್ಗ್ಯ ಭರದ್ವಾಜ ||
ಉತ್ತಮ ಭೃಗು ಬಕದಾಲ್ಬ್ಯ ವಸಿಷ್ಠ ಅ |
ಗಸ್ತ್ಯ ಚ್ಯವನ ಜೈಮಿನಿ ನಾರದ ಮು |
ಖ್ಯಸ್ಥರ ಸಮುದಾಯವ ಕಂಡಕ್ರೂರಂ ನುತಿಗೆಯ್ದಂ ಮುದದೊಳ್ || ೧ ||
ರಾಗ ನೀಲಾಂಬರಿ ತ್ರಿವುಡೆತಾಳ
ತ್ರಾಹಿ ಕೇಶವ ತ್ರಾಹಿ ಮಾಧವ | ತ್ರಾಹಿ ಸಚರಾಚರಭರಿತ ಹರಿ || ಅ ||
ಕ್ಷೀರಸಾಗರಶಯನ | ವೈಕುಂಠವ | ತೋರಿ ರಕ್ಷಿಸಿದೆಯೆನ್ನ ||
ಮಾರಜನಕ ಅಪಾರಮಹಿಮನೆ | ಘೋರದುರಿತಸಂಹಾರ ಕುಜನಕು |
ಠಾರ ಭುವನಾಧಾರನಂತವ | ತಾರ ಸುಜನೋದ್ಧಾರ ಜಯ ಜಯ || ತ್ರಾಹಿ || ೧ ||
ನಿನ್ನ ವಿಶ್ವ ಮೂರುತಿಯ ಪ್ರತ್ಯಕ್ಷ | ನಾ ಕಣ್ಣಿಲಿ ಕಂಡೆನಯ್ಯ ||
ಧನ್ಯರಾರೆನ್ನಂತೆ ಜಗದಲಿ | ಮಾನ್ಯರಾರೆಲೆ ದೇವ ಜಯತು ಕೃ |
ಪಾರ್ಣವನೆ ಜಯ ಜಯ ಜಗನ್ಮಯ | ಎನ್ನ ಸಲಹೊ ಗೋವಿಂದ ಜಯ ಜಯ || ತ್ರಾಹಿ || ೨ ||
ಇಂತು ಅಕ್ರೂರ ಭಕ್ತಿಯೊಳು ಸ್ತುತಿಸಿರಲು ಶ್ರೀ | ಕಾಂತ ಕಾಳಿಂದಿಯೊಳು ||
ಅಂತರ್ಧಾನವಾಗುತಲಿ ನಡೆಯಲ | ನಂತಶಾಯಿಯ ಕಾನದಿರಲು ಮ ||
ಹಾಂತ ಭ್ರಮೆಯಲಿ ನೀರಿನೊಳು ತಾ | ನಿಂತು ಹುಡುಕುತ ಹುಡುಕಿ ಮುರುಗಿದ || ತ್ರಾಹಿ || ೩ ||
ರಾಗ ಆನಂದಭೈರವಿ ಆದಿತಾಳ
ಹರಿ ನಿನ್ನ ಮೂರುತಿಯ | ಭರದೊಳೆನಗೆ ತೋರಿ ||
ಮರಳಿ ಸರಿವುದಿದುವೆ ನಿನಗೆ ಸರಿಯೆ ಕೇಳ್ ಮುರಾರಿ || ೧ ||
ಶ್ರುತಿಗಳಿಗಗಮ್ಯವಾದಾ | ಕೃತಿಯ ತೋರಿ ಪೋದೆ ||
ಗತಿಯಿನ್ನಾರು ದೇವ ಲಕ್ಷ್ಮೀ | ಪತಿಯೆನ್ನಗಲಬಹುದೆ || ೨ ||
ಕರ್ಮಿಯು ನಾನೆಂದು ಪರ | ಬ್ರಹ್ಮಯೆನ್ನಗಲಿದೆಯ ||
ದಮ್ಮಯ್ಯ ತೋರೆನ್ನಕ್ಷಿಗಿ | ನ್ನೊಮ್ಮೆ ವಿಶ್ವಾಕೃತಿಯ || ೩ ||
ಶರಣರ ಬಂಧುವೆಂದೆಂಬ | ಬಿರುದುಂಟಾದರೆನ್ನ ||
ಪೊರೆಯೊ ಲಕ್ಷ್ಮೀವರನೆ ಹಾಯೆಂ | ದೊರಲ್ದ ನೀರೊಳ್ ಮುನ್ನ || ೪ ||
ಭಾಮಿನಿ
ಅರಸ ಕೇಳಕ್ರೂರನಚ್ಯುತ |
ನಿರವನಾ ಜಲದೊಳಗೆ ಕಾಣದೆ |
ಹೊರಳುತಿದ್ದನು ಕೃಷ್ಣ ಕೃಷ್ಣ ಕೃಪಾಕರನೆಯೆನುತ ||
ತಿರುಗಿ ಹರಿಬಲರುಗಳು ರಥದೊಳ |
ಗಿರಲು ಕಾಣುತ ಪರಮ ಹರುಷಾಂ |
ಕುರಿತಪುಳಕಿತನಾಗುತವರೆಡೆಗಾಗಿ ನಡೆತಂದ ||
ರಾಗ ಕೇದಾರಗೌಳ ಅಷ್ಟತಾಳ
ಧರಣೀಶ ಕೇಳು ಶ್ರೀವರನ ಕಂಡಕ್ರೂರ | ಶಿರವ ಬಾಗುತ್ತ ಬಂದು ||
ಮರುಗುತ್ತ ಭ್ರಮೆಯೊಳತ್ತಿತ್ತ ನೋಡಿದನು ಶ್ರೀ | ಹರಿಯ ದೂರದಲಿ ನಿಂದು || ೧ ||
ಬೆದರಿ ನಾಲ್ದೆಸೆಯ ನೋಡಲು ಕೃಷ್ಣ ತನ್ನಯ | ಇದಿರಿಗೆ ಕರೆದೆಂದನು ||
ಚದುರನೆ ಹೊಲಬುದಪ್ಪಿದವನಂತೇಕೆನ್ನ | ಮುದದಿ ನೋಡುವೆಯ ನೀನು || ೨ ||
ಕರುಣಾಬ್ಧಿ ಕೇಳು ನೀನಿರುವ ವೈಕುಂಠದ | ಸಿರಿಯ ನೀರೊಳು ತೋರಿದೆ ||
ಮರಳಿ ಶೋಧಿಸಲು ಕಾಣಿಸದಾದೆ ಭ್ರಮೆಯೊಳ್ ನಾ | ಕರಗಿ ನಿನ್ನನ್ನು ನೋಡಿದೆ || ೩ ||
ಬ್ರಹ್ಮರುದ್ರಾದಿ ದೇವತೆಯರ ನಯನಕ | ಗಮ್ಯಮಾದಾಕೃತಿಯ ||
ನೊಮ್ಮೆ ನೀನೆನಗೆ ಕಾಣುಸುತಗಲಿದೆ ಪರ | ಬ್ರಹ್ಮ ನೀ ದಿಟವು ಜೀಯ || ೪ ||
ಎಣಿಸಲೇನರುಹು ಬ್ರಹ್ಮಾಂಡವೇ ರೋಮದ | ಕುಣಿಯೊಳು ತೋರಿಸುತ
ಜಣುಗಲುಚಿತವೆ ಗೋವಿಂದ ನೀನೆನ್ನುವ | ಗುಣವ ನೋಡುವರೆ ದಾತ || ೫ ||
ಅಖಿಳ ಬ್ರಹ್ಮಾಂಡನಾಯಕ ನಿನ್ನ ನೀಕ್ಷೇಪ | ಶಕುತನೆ ಜಗದಿ ನಾನು ||
ಸಕಲಾಂತರ್ಯಾಮಿ ರಕ್ಷಿಸು ಕೃಷ್ಣ ನಿನ್ನಯ | ಭಕುತಿಯಿತ್ತೆನಗೆ ನೀನು || ೬ ||
ಭಾಮಿನಿ
ಎನಲು ನಗುತಪ್ಪಿದನು ಕರುಣಾ |
ವನಧಿ ರಥದೊಳು ಕುಳ್ಳಿರಿಸಿಕೊಂ |
ಡನುಪಮಾನಂದಾಬ್ದಿಯೊಳಗೋಲಾಡುತಿರೆ ನೋಡಿ ||
ಅನುಪಮನೆ ನಡೆ ರಥದಿ ನಿನಗೇ |
ಕಿನಿತು ಕೌತುಕಬುದ್ಧಿ ಬಿಡುಯೆಂ |
ದೆನುತ ಬೋಳಯಿಸಿದನು ನಿಜಭಕುತನನು ಮೆಯ್ದಡವಿ || ೧ ||
ರಾಗ ಶಂಕರಾಭರನ ಮಟ್ಟೆತಾಳ
ಧರಣಿಪತಿಯೆ ಲಾಲಿಸಯ್ಯ | ಹರಿಯು ದಯದೊಳಭಯವನ್ನು |
ಶರಣಗಿತ್ತು ನಡೆದ ಮುಂದೆ | ಭರದಿ ಮಧುರೆಗೆ ||
ಪುರದ ಬಾಗಿಲೊಳಗೆ ನಿಂದು | ಕರವ ಮುಗಿದು ಭಕುತನೊಡನೆ |
ಸರಸದಿಂದ ನುಡಿದ ಜಗದೋ | ದ್ಧರನು ಕರುಣದಿ || ೧ ||
ರವಿಯು ಪಶ್ಚಿಮಾಬ್ಧಿಗಿಳಿದ | ಕವಿವ ಕತ್ತಲೆಯೊಳು ನಡೆಯೆ |
ತವ ಗೃಹಕ್ಕೆ ಪೋಗು ನೀನು | ಜವದಿ ರಥದೊಳು ||
ನಿವಹಸಹಿತಲೆದ್ದು ನಾಳೆ | ದಿವದಿ ಬರುವೆ ನಾನು ರಾಜ |
ಭವನಕೆಂದು ನುಡಿದ ಯಾ | ದವಗೆ ಕೃಷ್ಣನು || ೨ ||
ಒಡನೆ ಕೃಷ್ಣ ನುಡಿಯಲಾಗ | ಬಿಡದೆಯವನ ಚರಣವೆರಡ |
ಹಿಡಿದು ಬೇಡಿಕೊಂಡ ದೈನ್ಯ | ವಡುತ ಭಕುತನು ||
ಒಡೆಯ ನಿನ್ನ ಬಿಡೆನು ಮನೆಗೆ | ನ್ನೊಡನೆ ಕೂಡಿ ಬರಲುಯೆನ್ನ |
ಮಡದಿ ಮಕ್ಕಳನ್ನು ಸಹಿತ | ಅಡಿಗೆ ನಮಿಪೆನು || ೩ ||
ತಡೆಯದೆರಡು ಅಂಘ್ರಿಗಳನು | ತೊಳೆದು ಕುಡುತೆ ತೀರ್ಥವನ್ನು |
ಕುಡಿದು ಮುಕ್ತಿ ಪಡೆವೆನೆಂದ | ನುಡಿಯ ಕೇಳುತ ||
ತಡೆಯದೆದ್ದಪ್ಪುತ್ತ ಮೆಯ್ಯ | ತಡವರಿಸುತ ಹರಿಯು ದಯದಿ |
ಒಡಬಡಿಸುತ ಕಳುಹಿದನು | ಬಿಡದೆ ಶರಣನ || ೪ ||
ಭಾಮಿನಿ
ಪೊಡೊವಿಪತಿ ಕೇಳೈ ಮುರಾಂತಕ |
ನೊಡನೆ ನೇಮವ ಕೊಳುತ ಶರಣನು |
ನಡೆಯಲಿತ್ತುದಯಾಚಲಕ್ಕಡರುತಲಿ ರವಿ ಮೆರೆದ ||
ಒಡನೆ ಕೆಳೆಯರು ಸಹಿತ ಮಧುರೆಗೆ |
ನಡೆದು ಪುರಬೀದಿಯೊಳು ಬರುತಿರೆ |
ಕಡು ಕಠಿನ ರಜಕನನು ಕಾಣುತ ನುಡಿಸಿದನು ಹರಿಯು || ೧ ||
ರಾಗ ಮಧುಮಾಧವಿ ಏಕತಾಳ
ಅರೆಲೊ ರಜಕ ನೀ ಕೇಳೆನ್ನ ಮಾತ | ಕಾರಿಯವೊಂದುಂಟು ಪೇಳ್ವೆ ನೋಡಿತ್ತ ||
ಚಾರು ವಸ್ತ್ರಗಳೆಲ್ಲ ತಂದೀವುದೆಮಗೆ | ಭೋರನೆ ಗಮಿಸುವೆ ಮತ್ತಾವ ಕಡೆಗೆ || ೧ ||
ರಾಗ ಭೈರವಿ ಅಷ್ಟತಾಳ
ನುಡಿಯ ಕೇಳ್ದೆಂದ ನೀನುಡುವ ವಸ್ತ್ರಗಳೆನ್ನ | ಕಡೆಯೊಳಿಲ್ಲವೊ ಮಾರ್ಗದಿ ||
ಹುಡುಕಿ ನೀ ಸಂದುಗೊಂದಿಲಿ ಕಂಡುದನುಟ್ಟು | ಬೆಡಗಿನೊಳ್ ನಡೆ ಮುದದಿ ||
ಅಡವಿಯರಣ್ಯವ ಬಿಡದೆ ಸಂಚರಿಸುವ | ಬಡವರು ಬಯಸಿ ನೀವು |
ತೊಡಲುಚಿತವೆಯೆಮ್ಮ ಒಡೆಯ ಕಂಸನದು | ಈ ಮಡಿಯ ಕೊಡೆವು ನಾವು || ೧ ||
ರಾಗ ಮಧುಮಾಧವಿ ಏಕತಾಳ
ಖಳರಾಜ ರಜಕ ಕೇಳ್ ತಿಳಿಯದು ನಿನಗೆ | ಅಳಿಯಂದಿರರು ನಾವ ನಿನ್ನಿಳೆಯಪಾಲಕಗೆ ||
ತಳುವದೆ ಮಡಿಯ ವಸ್ತ್ರವನೀಯದಿರಲು | ಸೆಳೆದು ಕೊಂಬೆವು ನಾವು ಉಳಿಸೆವೆಂದೆನಲು || ೧ ||
ರಾಗ ಭೈರವಿ ಅಷ್ಟತಾಳ
ತಡೆದು ಕೇಳುವೆಯ ನೀ ಮಡಿವಸನಗಳ ಇ | ದಡಿಯಲ್ಲವೊ ಬೀದಿಯು ||
ತಡೆಯದೆ ರಾಜದ್ವಾರವ ಕಾಣಿಸುವೆ ನಿನ್ನ | ಹುಡುಗಾಟ ಬಿಡು ಬುದ್ಧಿಯು ||
ಪೊಡವಿಪಾಲಕ ನಿಮ್ಮ ಪಿಡಿದೊಯ್ದು ಅಳಿಯರಿಂ | ಗಡುಗೊರೆಯೀವ ನಿಮ್ಮ ||
ಅಡಿಗಳಿಗವಚಿ ಸಂಕಲೆಯಿಕ್ಕಸದೆ ಬಿಡ | ಕೆಡಬೇಡ ಕೆಣಕಿಯೆಮ್ಮ || ೧ ||
ರಾಗ ಮಧುಮಾಧವಿ ಏಕತಾಳ
ಲೇಸನಾಡಿದೆ ರಾಜರಜಕ ವಸ್ತ್ರವನು | ಲೇಸಿನೊಳೆಮಗೀಯೆ ಲೇಸ ಪಾಲಿಪೆನು ||
ಗಾಸಿಯಾಗುವೆಯಲ್ಲದಿರೆ ನೀ ಕೇಳೆನುತ | ಕೇಶಿದ್ವೇಷಿಯು ಪೇಳ್ದ ದೋಷಿಗೆ ನಗುತ || ೧ ||
ರಾಗ ಭೈರವಿ ಅಷ್ಟತಾಳ
ಬರಿದೆ ಬಾಯಿಬಡಿಕತನದಲಿ ಸಾಯ್ವಿರಿ ವ್ಯರ್ಥ | ತೆರಳಿ ಮಾರ್ಗದೊಳೆನುತ್ತ ||
ಮುರುಹಿ ಮೀಸೆಯ ಕಣ್ಣ ತಿರುಹಿ ಝೇಂಕರಿಸಿ ಮುಂ | ಬರಿದನು ಜವದೊಳಾತ ||
ತರಣಿಜನಿರುವ ಮಂದಿರಕೆ ಪೋಪಂದದಿ | ತ್ವರಿತದಿ ನಡೆಯಲಾತ ||
ಹರಿ ತನ್ನ ಕೆಳೆಯರೊಳರುಹುತಣ್ಣನ ಮೊಗ | ವಿರದೆ ನೋಡಿದನು ಬೇಗ ||
ರಾಗ ಭೈರವಿ ಏಕತಾಳ
ಎನುತ ರಜಕ ಗರ್ವದಲಿ | ಮುಂ | ಬರಿಯಲು ಹರಿಯು ಬೇಗದಲಿ ||
ಘನತರ ವಸನ ಮೇಲೆತ್ತಿ | ಕೊಂ | ಡನುಪಮ ನಡೆದ ಬೆಂಬತ್ತಿ || ೧ ||
ಅಟ್ಟುತ ಶ್ರೀಹರಿ ರಜಕನ | ತಾ | ಮುಟ್ಟವಿಸುತ ಹಿಡಿದವನ ||
ಸೃಷ್ಟಿಯೊಳಡಗೆಡೆವುತ್ತ | ಎದೆ | ಮೆಟ್ಟುತಡರಿ ನಲಿವುತ್ತ || ೨ ||
ಜಗದಾಧಾರನುಗುರೊಳು | ಶಿರ | ಚಿಗುಟಲು ರಜಕ ಭೂಮಿಯೊಳು ||
ನಿಗುರುತಟ್ಟೆಯು ಸಹ ಬೀಳೆ | ಜನ | ನಗುತ ಸಂತೋಷವ ತಾಳೆ || ೩ ||
ಸಂಗಡಿಗರು ಬಿಟ್ಟೋಡೆ | ಬಲ | ರಂಗನು ಸಹಿತಲಿ ನೋಡೆ ||
ಹಿಂಗದೆ ವಸನ ಗಂಟೊಡೆದ | ಗೋಪ | ರಿಂಗೀವುತ ಮುಂದೆ ನಡೆದ || ೪ ||
ಒಪ್ಪಿ ಮುಂಬರಿಯಲು ಹರಿಯು | ಒಬ್ಬ | ಚಿಪ್ಪಿಗನೆರಡಂಗಿಕೆಯ ||
ಒಪ್ಪಿಸಿ ಪದಕೆರಗುತ್ತ | ನ | ಮ್ಮಪ್ಪನೆ ತೆಗೆದುಕೊಳ್ಳೆನುತ || ೫ ||
ನುತಿಸಲು ಸಾಯುಜ್ಯವನು | ಇ | ತ್ತತಿಸಂಪದ ಭಾಗ್ಯವನು ||
ಸತಿಸುತರಿಗೆ ಸಹವಿತ್ತು | ಮುರ | ಮಥನ ಮುಂದರಿದನು ಮತ್ತು || ೬ ||
ದ್ವಿಪದಿ
ಎಲೆ ಪರೀಕ್ಷಿತ ಕೇಳು ಚೆಲುವ ಹರಿ ದಯದಿ |
ಒಲಿದು ಸಾಯುಜ್ಯ ಚಿಂಪಿಗಗಿತ್ತು ಪಥದಿ || ೧ ||
ಗೆಲುವಿನಲಿ ಬರೆ ಪುರದ ನಿಳೆಯಲಕ್ಷ್ಮಿಯನು |
ತಳುವದೀಕ್ಷಿಸಿದ ಪರಿಯೇನನುಸಿರುವೆನು || ೨ ||
ಕೇರಿಕೇರಿಯನು ಹಲಧರನು ಗೋವಳಗೆ |
ತೋರಿಸುತ ಮುಂದೆ ಬಂದನು ಬೀದಿಯೊಳಗೆ || ೩ ||
ಮಾವುತರ ಸದುರೆ ರಾವುತರ ಕೇರಿಗಳ |
ಸಾವಂತರರಮನೆಯ ಬೇವಿನವರುಗಳ || ೪ ||
ಪಾಠಕರ ಮಲ್ಲರರಮನೆಯ ಕೇರಿಯನು |
ಈಟುಗಾರ್ತಿಯರ ದೇಶಿಯರ ಕೇರಿಯನು || ೫ ||
ದಾಟಿ ಬರೆ ಮನೆಮನೆ ಕವಾಟದಲಿ ಜನರು |
ನೋಟದಲಿ ಈಕ್ಷಿಸುತ ತನುವ ಮರೆದವರು || ೬ ||
ಲೀಲೆಯಲಿ ಮಾಧವನು ಮುಂದೆ ಬರಲಿತ್ತ |
ಮಾಲೆಗಾರ ಸುದಾಮ ಬರವ ಕಾಣುತ್ತ || ೭ ||
ಆದಿಮಧ್ಯಾಂತರಹಿತನನು ದೂರದಲಿ |
ಮೋದದಲಿ ಕಂಡಿದಿರು ಬಂದ ಬೀದಿಯಲಿ || ೮ ||
ಭಾಮಿನಿ
ಅರಸ ಕೇಳೈ ರಾಮಕೃಷ್ಣರ |
ಬರವ ಕಾಣುತ ಪರಮ ಹರುಷಾಂ |
ಕುರಿತ ಪುಳಕಿಗಾತ್ರನಂಘ್ರಿಸರೋಜಯುಗಳದಲಿ ||
ಶಿರವೆರಗಿ ಕಯ್ಗೊಟ್ಟು ನಿಜಮಂ |
ದಿರಕೆ ಬಿಜಯಂ ಗೆಯ್ಸಿ ತಂದಾ ||
ದರದಲಾರಾಧಿಸಿದನಂದು ಸುದಾಮನೊಲವಿನಲಿ || ೧ ||
ರಾಗ ಕಲ್ಯಾಣಿ ಆದಿತಾಳ
ನೋಡಿ ಹರಿಯ ಕೊಂಡಾಡಿ ಒಡಲನೀ | ದಾಡಿ ಸ್ತುತಿಯ ಮಾಡಿ ||
ನೋಡಿ ಪಾಡಿ ಕರ ಜೋಡಿಸಿ ದೈನ್ಯದಿ ಬೇಡಿ ಗೃಹಗೆ ತಂದಾಡುತರ್ಚಿಸುತಲಿ || ಪ ||
ತಡೆಯದೆ ಸುದಾಮ ಮೂರ್ಜಗ | ದೊಡೆಯಗೆ ರತ್ನಾಸನವಡರಿಸಿ ||
ಬಿಡದೆ ಪಿಡಿದೆರಡಡಿಗಳ ತಾ ಪಡಿಗದಿಯಿಡುತಾಗ ||
ಕಡು ಬೆಡಗಿಲಿ ಜಲವ ತಂದೊಡ | ನೊಡನೆ ತೊಳೆದು ಪಾದತೀರ್ಥವ ||
ಕುಡುತೆಕುಡುತೆಯಲಿ ಕುಡಿವುತ ಬಾಂಧವ |
ಮಡದಿ ಮಕ್ಕಳಿಗೆ ತಾ ಕೊಡುಕೊಡುತಾಡುತ್ತ || ನೋಡಿ || || ೧ ||
ತರಿಸುತ ಮುಲ್ಲೆ ಮಲ್ಲಿಗೆಯರಳುತಲಿಹ ಜಾಜಿ |
ಸುರಗಿ ಬೆರೆಸುತ ಶ್ರೀತುಳಸಿಯ ಮಾಲೆ ಕಟ್ಟಿರಿಸುತ ಮುಂದಿಟ್ಟು ||
ಪರಿಪರಿಯಲಿ ಬೇಡಿಕೊಳುತರ್ಪಿಸಿ ನೋಡಿ ಶರಣ ಸುದಾಮನು |
ತರುಣಿತರುಣಜನವೆರಸಿ ಬಂದಂಘ್ರಿಯೊಳೆರಗುತ್ತೆರಗುತಲಿ || ನೋಡಿ || ೨ ||
ನುತಿಸುತ ನಿಂದಿಹ ಶರಣನ ಪಿಡಿದಪ್ಪುತ |
ಮತಿಯುತನವಗೆಂದನು ನಿನ್ನಯ ಅತಿಹಿತವನು ಬೇಡು ಪ್ರತಿಯಿಲ್ಲದೆ ಕೊಡುವೆ ||
ನುತಿಸುತ್ತಾ ಸ್ತುತಿಯ ಕಾಣುತ ನುಡಿವೆನು ನಿನ್ನಯ |
ಖತಿಯ ಬಿಡಿಸಿ ಪರಗತಿಯ ತೋರಿಪೆನೆನೆ ರತಿಪತಿಪಿತಗೆರಗುತ ಶರಣ ನುಡಿದ || ನೋಡಿ || ೩ ||
ರಾಗ ಕಾಂಭೋಜಿ ಏಕತಾಳ
ಪಾಹಿ ಪಾಹಿ ಕೇಶವ ಶ್ರೀ | ಕೃಷ್ಣ ಕೃಷ್ಣ | ದೇವ |
ತ್ರಾಹಿ ತ್ರಾಹಿ ಮಾಧವ ಶ್ರೀ | ಕೃಷ್ಣ | ಕೃಷ್ಣ || ಪ ||
ಅನ್ಯ ಬಯಕೆಯಿಲ್ಲವಯ್ಯ | ಕೃಷ್ಣ ಕೃಷ್ಣ | ದೇವ |
ನಿನ್ನ ಭಕುತಿಯನ್ನು ಈಯೊ | ಕೃಷ್ಣ ಕೃಷ್ಣ ||
ಬನ್ನಬಟ್ಟೆ ಭವದೊಳಾನು | ಕೃಷ್ಣ ಕೃಷ್ಣ | ದೇವ |
ಮನ್ನಿಸುತೆನ್ನನು ಸಲಹು | ಕೃಷ್ಣ ಕೃಷ್ಣ || ೧ ||
ಕರುಣಾಬ್ಧಿಯಲ್ಲವೆ ನೀನು | ಕೃಷ್ಣ ಕೃಷ್ಣ | ನಿನ್ನ |
ಶರಣರ ಸಂಗವನೀಯೊ ಕೃಷ್ಣ ಕೃಷ್ಣ |
ಭರದಿಯೆನ್ನುದ್ಧರಿಸು ದೇವ | ಕೃಷ್ಣ ಕೃಷ್ಣ | ಎಂದು |
ಚರಣಕೆರಗಿದವ ಸುದಾಮ | ಕೃಷ್ಣ ಕೃಷ್ಣ || ೨ ||
ಭಾಮಿನಿ
ಆಯಿತೇಳಿತ್ತೆನು ಮನೋಭಿ |
ಪ್ರಾಯಸಿದ್ಧಿ ಯನಧಿಕವಹ ಪರ |
ಮಾಯುವನು ನಿನ್ನನ್ವಯಾನುಕ್ರಮವಿವರ್ಧನವ |
ಶ್ರೀಯನುತ್ತಮ ಕೀರ್ತಿಯನು ಸ |
ಶ್ರೇಯಸವನೈಶ್ವರ್ಯಗತಿಗಳ |
ನಾಯುವಂತನೆ ಕೊಟ್ಟೆನೆಂದನು ವರವನಾತಂಗೆ ||
ರಾಗ ಸಾಂಗತ್ಯ ರೂಪಕತಾಳ
ಇಂತು ಸೌಭಾಗ್ಯಸಂಪದವ ಸುದಾಮನಿ | ಗಂತಕಾಂತಕನಿತ್ತು ದಯದಿ ||
ಚಿಂತೆವಿರಹಿನಂತಾದ್ಯರನೊಡಗೂಡಿ | ಮುಂತೆಯಲ್ಲಿಂದ ತಾ ನಡೆದ || ೧ ||
ಬರಲು ಮುಮ್ಮಾರ್ಗದಿ ತರುಣಿಯೊರ್ವಳು ಹೊನ್ನ | ಹರಿವಾಣ ತುಂಬಿ ಗಂಧವನು |
ಧರಿಸಿ ಬೀದಿಯೊಳು ತಾ ಬರಲು ಶ್ರೀಹರಿ ಕಂಡು | ಬೆರಗಾಗುತಲಿ ನೋಡಿದನು || ೨ ||
ಶಿರವ ತಗ್ಗೊತ್ತಿ ಮೆಯ್ ಮುರುಟಿ ಡೊಂಕಾಗಿ ಜೋ | ಲಿರುವ ಚರ್ಮವು ಶ್ವೇತಕೇಶ ||
ಮೆರೆದು ಮುಪ್ಪಡರಿದಾಕೃತಿಯು ವಿಕೃತಿಯಾದ | ತರುಣಿಯ ಕಂಡನಚ್ಯುತನು || ೩ ||
ಸರ್ವಲೋಕೇಶನಣ್ಣನ ಮೊಗವ ನೋಡುತ್ತ ಲೊರ್ವರೊರ್ವರು ತಮ್ಮೊಳ್ ನಗುತ ||
ಊರ್ವಿಗಿಂತವಳು ಇಲ್ಲೆಂದು ಗೋವರ್ಧನ | ಪರ್ವತಧರನು ಕಂಡೆಂದ || ೪ ||
ಮತ್ತಕಾಶಿನಿಯ ಶ್ರೀಹರಿಯು ಕಂಡಾಕೆಯ | ಹತ್ತಿರ ನಿಂದು ನೋಡುತಲಿ ||
ಅತ್ಯಂತ ದಯದಿ ಮಂದಾಸ್ಯದೊಳ್ ಮೃದುವಾಕ್ಯ ಬಿತ್ತರಿಸಿದನಾಕೆಯೊಡನೆ || ೫ ||
ರಾಗ ಸೌರಾಷ್ಟ್ರ ಏಕತಾಳ
ನಾರೀ ನಿನ್ನನು ಪೋಲ್ವ | ರಾರೀ ತ್ರೈಜಗದೊಳಿ | ನ್ನಾರ ಕಾಣೆನು ಪೇಳ್ ನೀನಾರೆ ||
ವಾರಿಜಾಕ್ಷಿಯೆ ಚೆಲ್ವಾಕಾರಗುಂದಿರುತಿಹ ಕಾರಣವೇನೆನ್ನೊಳುಸಿರೆ || ೧ ||
ಎನ್ನ ಕೇಳುವೆಯ ಸಂಪನ್ನ ಪೇಳುವೆ ಚೆಲ್ವ | ಕನ್ನೆಯಲ್ಲವೆ ಮುನ್ನಾನು ||
ಬಣ್ಣಗುಂದೀಗ ತ್ರಿವಕ್ರೆಯೆಂಬಭಿಧಾನ | ವನ್ನು ಪಡೆದೆ ವಿಧಿ ಕೃತದಿ || ೨ ||
ನಾರಿ ಕೇಳ್ ಗಂಧವಿದಾರು ಲೇಪಿಸುವರಿ | ನ್ನಾರಿಗೊಯ್ದಪೆಯೆ ಪೇಳೆನಗೆ ||
ಚಾರು ಗಂಧವನು ನೀನೆಮಗೆ ಕೊಟ್ಟರೆ ಕ | ಯ್ಯಾರೆ ತೋರುವೆ ಶುಭೋದಯವ || ೩ ||
ಚದುರ ಕೇಳಿದನು ಭುವ್ಯಧಿಪ ಕಂಸಾಖ್ಯಗೀ | ವಿಧದಿ ತೇಯುವೆ ನಿರಂತರದಿ ||
ಅಧಿಕ ಮೋಹದಿ ದಾಸಿಯಳಿಗೆ ನೀನೀ ಲೇಸ | ಮುದದಿ ಈಯಲು ಬ್ರಹ್ಮನೇನೈ || ೪ ||
ಇಳೆಯಪಾಲಕಗೆ ನಾವಳಿಯಂದಿರು ಕಾಣೆ | ನಳಿನಾಕ್ಷಿ ಗಂಧ ತಾರೆನಲು ||
ಚೆಲುವ ನೀನಿರಲನ್ಯರಿಗೆ ಯೋಗ್ಯವಲ್ಲೆಂದು | ಒಲಿದು ಪಾತ್ರವೆಯಿತ್ತಳಾಗ || ೫ ||
ಭಾಮಿನಿ
ಧರಣಿಪತಿ ಕೇಳ್ ವಿಮಲ ವಿಶ್ವಂ |
ಭರನು ಹರಿಯಿವನೆಂದು ತಿಳಿಯದೆ |
ತರುಣಿಯೀತನ ಚೆಲುವಿಕೆಗೆ ತಾ ಮೆಚ್ಚಿ ಗಂಧವನು |
ಪರಮ ಹರುಷದಿ ಕೊಡಲು ಕೆಳೆಯರ |
ನೆರವಿಯಲಿಯೋಕುಳಿಯನಾಡುತ ಕರುಣನಿಧಿ |
ಕುಬುಜೆಯನು ಹತ್ತಿರ ಕರೆದು ಇಂತೆಂದ || ೧ ||
ರಾಗ ಸುರುಟಿ ಏಕತಾಳ
ಮಾನಿನಿಮಣಿ ಕೇಳೆ | ನಿನ್ನನು | ಮಾನವೇನಿದು ಪೇಳೆ ||
ನ್ಯೂನಾಕೃತಿಗೆ ನಾ | ಕಾಣಿಪೆ ಶುಭವ ನೀ ಮೌನವ ಬಿಡುಯೆ ನ್ನಾಣೆಯೆಂದರುಹಿದ || ೧ ||
ನಿನ್ನ ತೆರದೊಳಿರುವ | ಜನರಿಗೆ | ಮನ್ನಿಸಿ ರಚಿಸಿರುವ
ಎನ್ನ ಪೂರ್ವಜರರಿ | ತಿರುವರು ವೈದ್ಯವ | ದನ್ನು ನಾ ಬಲ್ಲೆ ನೋ | ಡೆನ್ನ ಕಯ್ಗುಣಗಳ || ೨ ||
ದಿಟ್ಟೆ ಬಾರೆನುತವಳ | ಕರೆವುತ | ಮೆಟ್ಟುತ ಪದಯುಗಳ ||
ನೆಟ್ಟನೆ ಕರಯುಗ | ಗೊಟ್ಟು ಗಲ್ಲದೊಳ್ ಮೇ | ಲಷ್ಟಾಂಗುಲವನೆ | ತ್ತಿಟ್ಟ ಶ್ರೀಕೃಷ್ಣನು || ೩ ||
ನಿಟಿನಿಟಿನಿಟಿಲೆನುತ | ಸಡಲಿತು | ಕಟಿ ಎಲು ನರ ಸಹಿತ || ನಟನೆ ಗಾರ್ತಿಯ ತನು |
ಸ್ಫಟಿಕದಂತಾಗಲು | ವಿಟರು ಕಾಣುತ ಮನ ದಿಟದಿ ಮೆಚ್ಚುತಲಿರೆ || ೪ ||
ಭಾಮಿನಿ
ಅರಸ ಕೇಳಾ ಸತಿಯನಚ್ಯುತ |
ಹರುಷದಲಿ ಮೇಲೆತ್ತುತಿರಲಾ |
ತರುಣಿ ದಿವ್ಯಾಕೃತಿಯೊಳೆಸೆದಳು ಏನನುಸಿರುವೆನು ||
ಧರೆಗೆ ರಂಭೆಯೊ ಊರ್ವಶಿಯೊ ಕಿ |
ನ್ನರವಧುವೊಯೆನೆ ಮೆರೆದು ಶಿರವನು |
ಧರೆಗೆ ಬಾಗುತ ನಾಚಿ ಹರಿಯೊಡನೆಂದಳಿಂದುಮುಖಿ || ೧ ||
ರಾಗ ಆನಂದ ಏಕತಾಳ
ಜಯತು ನಮೋ | ಕರುಣನಿಧಿ | ಜಯತು ಭಾ | ಗ್ಯವಿನೋದಿ
ಜಯವೆನಗಿ | ತ್ತೆಯೊ ದಯದಿ | ಜಯಿಸಿದೆ ನಾ | ಭವಶರಧಿ || ೧ ||
ಇಂದೆನ್ನ ಉ | ದ್ಧರಿಸಿದಕೆ | ಚಂದದಿಯೆ | ನ್ನಯ ಗೃಹಕೆ |
ಬಂದೆನ್ನಿಷ್ಟಾರ್ಥವನು | ಕುಂದದೆ ಪಾ | ಲಿಸುವ ನೀನು || ೨ ||
ಹರಣವು ಮ | ನ್ಮಥಶರಕೆ | ಕರಗುತಿದೆ | ನ್ನದು ದಿಟಕೆ ||
ನಡೆ ಗೃಹಕೆ | ನ್ನುತ ಸೆರಗ | ಹಿಡಿದಳು ನಾ | ಚುತ ಬೇಗ || ೩ ||
ತರುಣಿಮಣೀ | ಬಾರೆನುತ | ಕರುಣಿ ಬಂದ | ಪ್ಪಿದ ನಗುತ ||
ಮರುಗದಿರು | ಮನದೊಳಗೆ | ಬರುವೆನು ನಿ | ನ್ನಯ ಗೃಹಕೆ || ೪ ||
ಕಾರಿಯವುಂ | ಟೆಮಗಿಂದು | ತೀರಿಸು | ತಿಲ್ಲಿಗೆ ಬಂದು ||
ತೋರುವೆನು | ರತಿಸುಖವ | ನಾರಿಮಣಿ | ಕೇಳ್ ದಿಟವ || ೫ ||
ದ್ವಿಪದಿ
ಕೇಳು ಭೂವರನೆ ಗೋಕುಲವಾಸಿ ಹರಿಯು |
ಬಾಲೆ ಕುಬುಜೆಯ ಪಾಲಿಸಿಯೆ ಮುಂದೆ ಬರಲು || ೧ ||
ಲೋಲನೇತ್ರನ ಬರವ ಕೇಳುತಲಿ ಸತಿಯ |
ರ್ಜಾಲವೆದ್ದುದು ಮರೆದು ತಮ್ತಮ್ಮ ಮತಿಯ || ೨ ||
ರಾಗ ಕಾಂಭೋಜಿ ಅಷ್ಟತಾಳ
ಲಾಲಿಸು | ಭೂಪ | ಲಾಲಿಸು || ಪ ||
ಲಾಲಿಸಿ ಕೇಳು ಪರೀಕ್ಷಿತ | ಮಧು | ರಾಲಯದೊಳಗಜಬಜಿಪ ಆಶ್ಚರ್ಯವ || ಅ ||
ಕರುಣನಿಧಿಯು ಕೃಷ್ಣ | ಬರುವನೆನುತ ಕೇಳಿ | ತರುಣಿಯರೆಲ್ಲ ಕೂಡುತ ಬೇಗ | ತನು |
ಮರೆದು ಅತ್ತಿತ್ತ ಓಡಿದರಾಗ | ತಮ್ಮ | ತರಳರ ಬಿಸುಡುತಾಕ್ಷಣ ಬೇಗ | ಕಣ್ಣಿ |
ಗಿರಿಸಿದರವರು ಕುಂಕುಮವಾಗ ಕಾಡಿಗೆಯ ಬೇಗ | ಮೂಗಿನೊಳಗಾಗ | ತುಂಬಿ |
ಸಿರುವ ವೀಳ್ಯವ ಕಿವಿಯೊಳಗಾಗ | ಇಟ್ಟು | ಕೊರಳೊಳು ಪೂಮಾಲೆ ತೊಟ್ಟರು ಬೇಗ || ೧ ||
ಕರಗಳಿಗಿಟ್ಟು ಗೆಜ್ಜೆಯ ರತ್ನ | ಸೊಂಟಕೆ ಸುತ್ತಿ | ತಮ್ಮ |
ಶಿರಕೆ ಶ್ರೀಗಂಧ ತೇಯುತ ಮೆತ್ತಿ | ಕೊಂಡು | ಚರಣಕೆ ಬಳೆಯನಿಟ್ಟರು ಮತ್ತೆ |
ಗೋಡೆಗಳ ಹತ್ತಿ | ನೋಡುವರು ಅರ್ತಿ | ಕೆಲರ್ ಕರುವಿಗೆ ಮೊಲೆಯ ಕೊಟ್ಟರು ಎತ್ತಿ |
ತಮ್ಮ | ಎರೆಯರ ಬಿಟ್ಟು ಪೋದರು ಮುತ್ತಿ || ೨ ||
ಹರಿಯ ನೋಳ್ಪರ್ತಿಯೊಳಿರದೆ | ಎಣ್ಣೆಯನಿಟ್ಟು |
ತರುಣಿಯರ್ ಸ್ನಾನ ಮಾಡದೆ ಬಂದು ಉಣು |
ತಿರುವ ಬಟ್ಟಲ ಬೀಸಾಡಿದರಂದು ತಾವು | ಮರುಳರಂತೆ ಬೀದಿಯೊಳ್ ನಿಂದು |
ಕೆಲ | ರಿರದೆ ಹತ್ತಿದರು ಮಾಳಿಗೆಯಂದು | ನೋಡಿದರು ಬಂದು |
ಕೃಷ್ಣನ ನಿಂದು | ಕಂಡು | ಮರುಳಾದ ಪರಿಯ ನಾನೇನೆಂದು |
ಪೇಳ್ವ | ಹರಿಯ ನಾಟಕವ ನೀ ಕೇಳಿಂದು || ೩ ||
ಕಂದ
ಇಂತಾ ಸತಿಯರು ನೋಡುತ |
ಕಂತುವಿಗಂಗನೊಪ್ಪಿಸಿ ತತ್ಕ್ಷಣದೊಳಗಂ ||
ನಿಂತುಪ್ಪರಿಗೆಯೊಳ್ ಕೃಷ್ಣನ |
ತಂತಮ್ಮೊಳಗೊರ್ವರೊರ್ವರ್ ಬೆಸಗೊಳುತಿರ್ದರ್ || ೧ ||
ರಾಗ ತುಜಾವಂತು ಏಕತಾಳ
ಚಂದ್ರಾನನೆ ಬಾ ನೋಡಲೆ ನೀರೆ | ಗೋಪ |
ವೃಂದ ನೆರಹಿ ಬಂದನಿವ ನಾರೆ || ಚಂದ್ರನನೆ || ಪ ||
ತರಣಿಶತಕೋಟಿಪ್ರಭೆಯ ಪೋಲುವ |
ಮೆರೆ | ದಿರುವ ದಿವ್ಯಾಕೃತಿಯಾನನವ ||
ಪರಿಯ ಕಾಣಲು ಭ್ರಮೆಯ ತೋರುವ |
ನಿವ | ನಿರವನೀಕ್ಷಿಸುತೆನ್ನೊಳರುಹೆಯವ್ವ || ೧ ||
ನಾರಿ ಕೇಳಜಭವಾದ್ಯರು ಪೂರ್ವದಿ | ಪೇಳೆ |
ಕ್ಷೀರಸಾಗರಶಯನ ವಿನೋದದಿ ||
ತೋರೆ ನಾಟಕ ಉದ್ಭವಿಸೆ ಮುದದಿ |
ಆದಿ | ನಾರಾಯಣನಂತಿವನು ಜಗದಿ || ೨ ||
ಕರುಣಾಬ್ಧಿಯಿವನೆಂದಾಡಿದೆಯೆನ್ನೊಳು | ಈತ |
ನಿರುವನೆಲ್ಲೆಂದು ಕೇಳುವೆ ನಿನ್ನೊಳು ||
ಅರಿವೆ ಪೇಳಿವನ ನಿಶ್ವಯವಮ್ಮ | ಕಾಮ |
ಶರಕೆ ಸೋತೆನು ದಮ್ಮಯ್ಯ ಕಾಣಮ್ಮ || ೩ ||
ಮಂದಗಮನೆ ಕೇಳಾದರೆ ಈತನು | ಪೋಗೆ | ನಂದನ ಸದನದಿ ಗೋವ್ಗಳನು ||
ಚಂದದಿ ಕಾಯ್ದ ಶ್ರೀಹರಿಯು ತಾನೆ | ಆ | ನಂದದಿ ನೆರೆದ ಗೋವಿಂದ ಕಾಣೆ || ೪ ||
ಅಧಿಕ ಕೋಟ್ಯಾನುಕೋಟಿಯಜಾಂಡವ ತ | ನ್ನುದರದಿಯಡಗಿಸಿಟ್ಟು ಈ ಮಾಧವ ||
ಮುದದಿ ನಮ್ಮನು ಈತ ರಮಿಸಲಮ್ಮ | ನಮ | ಗಿದಿರ್ಯಾರು ಭಾಗ್ಯಸಂಪದದೊಳಮ್ಮ || ೫ ||
ಭಾಮಿನಿ
ಜನಪ ಕೇಳೈ ಮಧುರೆಯೊಳಗಿಹ |
ಜನರ ಭಾಗ್ಯವನೇನನೆಂಬೆನು |
ಜನುಮ ಸಾರ್ಥಕಗೆಯ್ದರಲ್ಲೇ ಹರಿಯ ದರುಶನದಿ ||
ಇನಿತು ಪುಣ್ಯೋದಯವು ಸನಕಾ |
ದ್ಯರಿಗಸಾಧ್ಯವು ಭೂಪ ಕೇಳೈ |
ವನಿತೆಯರು ಆರತಿಯ ಬೆಳಗುತಲಾಡಿ ಪಾಡಿದರು || ೧ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ಮಂಗಲಂ ಶ್ರೀಕೃಷ್ಣರಾಯನಿಗೆ |
ಜಯ ಮಂಗಲಂ ಜಯತು ಶ್ರೀಮಾಧವಗೆ | ಮಂಗಲಂ || ಪ ||
ಸರಸಿಜಭವ ಮುಖ್ಯ ಸುರರು ಕ್ಷೀರಾಬ್ಧಿಗೆ | ತೆರಳಿ ದೈತ್ಯರ ಉಪಟಳವೆಲ್ಲವ ||
ಅರಿಕೆ ಗೆಯ್ಯೆ ದೇವಕಿಯುದರದೊಳವ |
ತರಿಸಿದ ಮಹಿಮಗಾರತಿಯೆತ್ತಿರೆ || ಮಂಗಲಂ || ೧ ||
ಶಕಟ ಪೂತನಿ ವಾತಾಸುರ ಮುಖ್ಯ ಧೇನುಕ | ಬಕ ಕೇಶಿ ವೃಷಭಾದ್ಯರ ದ್ವೇಷದಿ ||
ಸಕಲರ ತರಿದು ಗೋಕುಲದ ಗೋವಿಂದನು |
ಯುಕುತದಿ ಕಾದ ನಾಟಕಧಾರಿಗೆ ಮಂಗಲಂ || ೨ ||
ಶ್ರುತಿಯ ಕಾಯ್ದದ್ರಿಯೆತ್ತ್ಯವನಿ ತಂದರ್ಭಕ | ಗತಿಯಿತ್ತು ಬಲಿಯ ಮೆಟ್ಟುತ ಕ್ಷತ್ರರ |
ಮಥಿಸಿ ವಾಲಿಯ ಕೊಂದು ಬೆಣ್ಣೆ ಕದ್ದು ಸ್ತ್ರೀಯರ
ವ್ರತ ಗೆಲ್ದ ಕಲ್ದ ಮಹಾನುಭಾವಗೆ || ಮಂಗಲಂ || ೩ ||
ಮೊದಲನೆ ಸಂಧಿ ಬಿಲ್ಲಹಬ್ಬ ಮುಗಿದುದು
Leave A Comment