ರಾಗ ಸೌರಾಷ್ಟ್ರ ತ್ರಿವುಡೆತಾಳ

ಅತ್ತ ರವಿಯುದಯಾಚಲಕೆ ಬರ | ಲಿತ್ತಲಕ್ರೂರನು ಭವಾಬ್ಧಿಯ |
ನುತ್ತರಿಪೆನೆಂದೆನುತ ರಥಕಡ | ರುತ್ತ ಬಂದ  || ೧ ||

ಏಸು ಜನ್ಮಾಂತರದಿ ತಪವ  ವಿ | ಶೇಷ ಪ್ರಕೃತಿಯೊಳೆಸೆಗಿದನೊ ನಾ |
ಕೇಶವನ ದರುಶನವು ದೊರಕುವು | ದೀ ಸಮಯದಿ    || ೨ ||

ಎಂದು ಜಿಹ್ವಾಗ್ರಹದಿ ಮುಕುಂದ ಗೋ | ವಿಂದಯೆನುತಡಿಗಡಿಗೆ ನುತಿಸುತಾ |
ನಂದಬಾಷ್ಪವನಿಳುಹಿ ರಥದಲಿ | ಬಂದ ಜವದಿ         || ೩ ||

ಬರಬರಲು ವೃಂದಾವನದಿ ಶ್ರೀ | ಹರಿಯ ಹೆಜ್ಜೆಯ ಕಂಡು ರಥದಿಂ |
ಧರೆಗೆ ಧೊಪ್ಪನೆ ಕೆಡೆದು ಹುಡಿಯೊಳು | ಹೊರಳುತಿರ್ದ         || ೪ ||

ಚರಣಧ್ವಜ ವಜ್ರಾಂಕುಶದ ಮಹಾ | ಬಿರುದ ರೇಖಾನ್ವಿತವು ಕ್ಷಿತಿಯೊಳು |
ಮೆರೆದುವೊತ್ತಿಹ ಕುರುಹ ಕಾಣುತ | ಪೊರಳ್ದ ರಜದಿ    || ೫ ||

ರಾಗ ಕೇದಾರಗೌಳ ಝಂಪೆತಾಳ

ತ್ರಾಹಿ ಶ್ರೀವರನೆ ದೇವ | ಜಯತು ಜಯ | ತ್ರಾಹಿ ಸುಜನರ ಸಂಜೀವ ||
ತ್ರಾಹಿ ನಿನ್ನಂಘ್ರಿಯುಗವ | ನಿದ ಕಂಡೆ | ತ್ರಾಹಿ ಜಯಿಸಿದೆನು ಭವವ      || ೧ ||

ಅಡಿಯೆರಡಳೆದು ಪೂರ್ವದಿ | ಖರ್ಪರವ | ನೊಡೆದಮರನದಿಯ ನಖದಿ ||
ಪಡೆದು ಬಲಿಯ ಪಾತಾಳದಿ | ನಿಲ್ಲಿಸಿದೆ | ನಡೆಯದೇನಿದೆ ಚರಣದಿ       || ೨ ||

ಪದನಖಾಗ್ರದೊಳಹಲ್ಯೆಯ | ನುದ್ಧರಿಸಿ | ಮುದದಿ ಋಷಿಗಿತ್ತೆ ಸತಿಯ ||
ಒದೆದು ದುಂದುಭಿಯಟ್ಟೆಯ | ಹಾರಿಸಿದ | ಮಧಿಕವಿದೆ ಚರಣಜೀಯ      || ೩ ||

ಖೂಳ ಶಕಟಾಖ್ಯಸುರನ | ಒದೆದು ಗೋ | ನಾಳಿಯೊತ್ತುತಲಹಿತನ ||
ಸೋಲಿಸುತಲಬುಧಿಗಾಗ | ಮುಟ್ಟಿಸಿದ | ಕಾಲ ಹೆಜ್ಜೆಗಳಿದೀಗ    || ೪ ||

ವಿಧಿಭವಾದ್ಯರು ಮೌನದಿ | ಧ್ಯಾನಿಸಿದ | ರಿದನು ಕಾಣರು ಠಾಣದಿ ||
ಇದು ಎನ್ನ ಮಾಂಸಾಕ್ಷಿಗೆ | ಗೋಚರಿಸಿ | ತಿದಿರಾರು ಜಗದೊಳೆನಗೆ       || ೫ ||

ಎನುತ ಮೆಯ್ಮರೆದು ಕರದಿ | ಹಾರಿಸುತ | ತನುವ ಹೂಳಿದನು ರಜದಿ ||
ಮನಕರಗಿ ಹೊರಳುತೆದ್ದ | ರಥಕಡರಿ | ಘನ ಬೇಗದಿಂದ ನಡೆದ          || ೬ ||

ರಾಗ ಭೈರವಿ ತ್ರಿವುಡೆತಾಳ

ಬಂದನಾಗ | ರಥದಲಿ | ಬಂದನಾಗ || ಪ ||

ಬಂದನಾ ಗೋಕುಲದೊಳಿರುತಿಹ | ಸಿಂಧುಶಯನನ ಕಾಂಬ ತವಕದಿ || ಬಂದನಾಗ        || ಅ ||

ಬರುತ ಮನದಲಿ ಹರಿಯ ನೆನೆಸಿದ | ದುರುಳ ಕಂಸನ ಚರನೆನುತ ಶ್ರೀ |
ಹರಿಯು ಎನ್ನನು ಕರೆಯನೋ ಮೇಣ್ | ಕರವಿಡಿದು ಮನ್ನಿಪನೊ ನಾನದ |
ನರಿಯೆನೀ ಬ್ರಹ್ಮಾಂಡಮುದರದೊ | ಳಿರಿಸಿಕೊಂಡಿಹನೆಂದು ಶ್ರುತಿಗಳು |
ಒರಲುತಿವೆಯೆನ್ನೊಬ್ಬನನು | ತಾ | ಕರುಣಿಸದೆ ಬಿಡನೆನುತ ತ್ವರಿತದಿ || ಬಂದನಾಗ        || ೧ ||

ನಳಿನಭವಭವವಂದ್ಯ ನಿಗಮಾ | ವಳಿಗಗೋಚರನೆಂಬ ಬಿರುದನು |
ತಳೆದು ಮೆರೆದಿಹುದೆನುತ ನಂದನ | ನಿಳೆಯದೊಳಗವತರಿಸಿ ಕೆಳೆಯರ |
ತಲೆಗೆ ಡೊಣವದಿದೆತ್ತ ಗೋಕುಲ | ವಲಯದೊಳು ನರನಾಟಕವನನು |
ಗೊಳಿಸಿರುವ ಪರವಸ್ತುವಿನ ಪದ | ನಳಿನಕೆರಗದೆ ಬಿಡೆನೆನುತ್ತಲೆ || ಬಂದನಾಗ    || ೨ ||

ಬರಲು ಶತಸಾವಿರ ದಿವಾಕರ | ತೆರೆದ ಪ್ರಭೆಯೊಳಗಿರುವ ಅರಮನೆ |
ಗಿರಿಸಿರುವ ಕಲಶವನು ಕಾಣುತ | ಶಿರವ ಬಾಗಿಸುತಿಳಿದು ರಥವನು |
ಧರೆಗೆ ದೊಪ್ಪನೆ ಕೆಡೆದು ದಂಡದೊ | ಲೆರಗಿ ಮುಂದುರುತರದಿ ಬರುತಿರೆ |
ಭರದಿ ದ್ವಾರವ ದಾಂಟಿ ವೊಳಮಂ | ದಿರವ ಪೊಗಲನಿತರೊಳು ಹರಿಯನು || ಕಂಡಾಗ     || ೩ ||

ರಾಗ ಶಂಕರಾಭರಣ ಅಷ್ಟತಾಳ

ಕಂಡನು | ಶ್ರೀಲೋಲನ ಕಂಡನು   || ಪ ||

ಕಂಡನು ರತ್ನವಿಷ್ಟರದಿ ಶ್ರೀಹರಿಯನು |
ದ್ದಂಡ ಮೂರುತಿಯ ಬ್ರಹ್ಮಾಂಡನಾಯಕನನ್ನು || ಕಂಡನು      || ಅ ||

ಚರಣನೂಪುರ ಗೆಜ್ಜೆ ಪರಿಯ | ಸೊಂಪಿ | ಕ್ಕೆರಕ ನೇವಳ ಸರಪಣಿಯ |
ಇಪ್ಪ | ಕೊರಳ ಕೌಸ್ತುಭಹಾರ ಮಣಿಯ | ರತ್ನ | ಹರಳಿಟ್ಟ ಭುಜಕೀರುತಿಯ ||
ದಿವ್ಯ | ಕರದೊಳೊಪ್ಪುವ ಶಂಖ ಚಕ್ರವ ಪಿಡಿದ ಸುಂ |
ದರಲಲಾಟದಿ ಮೆರದಿರುವ ಶ್ರೀನಾಮವ || ಕಂಡನು   || ೧ ||

ನಲಿದು ತೂಗುವ ಕುಂಡಲಗಳ | ಚೆಲ್ವ | ತಲೆಗಿಟ್ಟ ಮುಕುಟ ಹೀಲಿಗಳ |
ಉಟ್ಟು | ಹೊಳೆವ ಪೀತಾಂಬರಾದ್ಯಖಿಳ | ಕಂಡು | ಮುಳುಗುತ್ತಾನಂದಬಾಷ್ಟಗಳ ||
ಕಣ್ಣೊ | ಳಿಳುಹಿಸಿ ದಂಡದಂತಿಳೆಯೊಳೊರಗುತಲೆ |
ತಳುವದೆದ್ದೆದ್ದು ತಾ ನಲಿದು ಕೀರ್ತಿಸುತಲೆ || ಕಂಡನು          || ೨ ||

ಬಲದೊಳು ನಂದ ಯಶೋದಾ | ಮುಂದೆ ಹಲಧರ ಕುಳಿತ ವಿನೋದ |
ಕೃಷ್ಣ | ಕರದೊಳೂದುವ ವೇಣುನಾದ | ರುದ್ರ | ಬಲವೈರಿನುತಿಪ ಶ್ರೀಪಾದ ||
ಕಂಡು | ನಳಿನನಾಭನೆಯೆನ್ನನುಳುಹಿಸೊ ದೇವಯೆಂ |
ದಿಳುಹಿದ ತನ್ನಯ ತಲೆಯ ಶ್ರೀಚರಣದಿ || ಕಂಡನು    || ೩ ||

ವಚನ

ಇಂತಕ್ರೂರನು ಶ್ರೀಕೃಷ್ಣನ ದಿವ್ಯ ಮೂರ್ತಿಯಂ ಕಂಡು ಏನೆಂದು ಸ್ತುತಿಸುತಿರ್ದನೆನೆ –

(ಗದ್ಯ) ಚೂರ್ಣಿಕೆ

ಶ್ರೀಮದಖಿಲಾಂಡಕೋಟಿ ಬ್ರಹ್ಮಾಂಡನಾಯಕಂ ಅಜಭವೇಂದ್ರಾದಿವೃಂದಾರಕನಿಕರಶರಣಜನ ಸಹಾಯಕಂ ಕಪಟನಾಟಕಸೂತ್ರಧಾರಿ ಲೀಲಾವಿನೋದಾನಂತಾವತಾರಂ ದುರ್ಜನ ಪ್ರಾಣಾಪಹಾರಂ ಶ್ವೇತದ್ವೀಪಾನಂತಾಸನ ವೈಕುಂಠಾಧಿವಾಸಂ ಶ್ರೀಲಕ್ಷ್ಮೀಮನೋವಿಲಾಸಂ ಮಾರ್ಕಂಡೇಯಮೃಕಂಡು ಪರಾಶರಾಗಸ್ತ್ಯ ಗೌತಮಾತ್ರಿ ವಿಶ್ವಾಮಿತ್ತ ಗಾರ್ಗ್ಯ ಭರದ್ವಾಜ ಸನಕಸನಂದನ ನಾರದಾದಿ ಋಷಿ ಜನಸಮುದಾಯಾರ್ಚಿತ ಧ್ವಜವಜ್ರಾಂಕುಶರೇಖಾನ್ವಿತದಿವ್ಯಚರಣಾರವಿಂದಂ ಶ್ರೀಗೋವಿದಂ ಸೌಂದರ್ಯಮಯದೇವಕ್ಯುದರಾಬ್ಧಿ ಪೂರ್ಣಚಂದ್ರಂ ಸರಸ ಸದ್ಗುಣಸಾಂದ್ರಂ ವೃಂದಾವನ ಸಂಚಾರಿತ ನಂದಕಂದ ಮುಕುಂದ ಗೋಪೀಜನ ಮನಮೋಹಿತಮುದಾರಂ ಗೋಕುಲೋದ್ಧಾರಂ ಶಕಟ ಪ್ರಲಂಬ ಪೂತನಿ ಧೇನುಕ ವತ್ಸ ವಾತಾಸುರ ಬಕಾಶ್ವ ಕೇಶಿ ವೃಷಭಾಸುರಾದ್ಯಖಿಳಕುಜನಕುಠಾರಂ ಸಕಲ ಜಗದಾಧರಂ ಮುರಲೀಗಾನವಿನೋದಿ ವಜ್ರ ವೈಡೂರ್ಯ ಗೋಮೇಧಿಕ ಪುಷ್ಯರಾಗ ಪ್ರವಾಳ ಮೌಕ್ತಿಕರತ್ನಮಾಲಾಲಂಕೃತ ಶ್ರೀತರುಣತುಲಸೀಮಾಲಾಶೋಭಿತಂಧ್ರುವಪ್ರಹ್ಲಾದಾಂಬರೀಷ ಸುದಾಮೋದ್ಧವ ರುಕ್ಮಾಂಗದ ಧರ‍್ಮಾಂಗದ ವಿದುರ ಭೀಷ್ಮ ದ್ರೋಣ ಯುಧಿಷ್ಠಿರ ವಿಜಯ ಬಲಿ ವಿಭೀಷಣಾದಿ ಭಾಗತವತಜನನಿಕರಾರ್ಚಿತದಿವ್ಯ ಶ್ರೀಚರಣಂ ಗೋವರ್ಧನೋದ್ಧರಣಂ ಮಮ ರಕ್ಷಕ ಜಗನ್ನಿ ವಾಸಮಾದಿನಾರಾಯಣಂ ರಮಾರಮಣದೇವಂ ಶ್ರೀಕೃಷ್ಣಂ ಭಜೇsಹಂ ಭಜೇsಹಂ ಭಜಾಮಿ ||

ಭಾಮಿನಿ

ಅರಸ ಕೇಳೈ ವಿಮಲ ವಿಶ್ವಂ |
ಭರನ ನುತಿಸಿಯಕ್ರೂರನೊಡಲನು |
ಚರಣ ಕಮಲದೊಳಿಳುಹಿ ಮತ್ತೆದ್ದೆರಗಿದನು ಪದಕೆ ||
ಭರದಿ ಸುಖಬಾಷ್ಪವನು ಚರಣದಿ |
ಸುರಿದು ಮತ್ತೆರಗುತಿರೆ ಕರುಣಾ |
ಕರನು ಭಕುತನ ಶಿರವ ನೆಗಹುತ ಲಪ್ಪಿದನು ಬಿಡದೆ   || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಜಲಧಿಸುತೆಯಳನಪ್ಪುವಾ ಮೃದು | ಚೆಲುವ ತೋಳಿನೊಳೆಳೆದು ಭಕುತನ |
ತೊಲಗಿಸದೆ ಬಿಗಿದಪ್ಪಿದನು ಬರ | ಸೆಳೆದು ಬಿಡದೆ     || ೧ ||

ಕಡು ದಯದೊಳಾಸನವನಡರಿಸು | ತಡಿಗಳನು ತೊಳೆದರ್ಘ್ಯಪೂಜೆಯ |
ಬಿಡದೆ ರಚಿಸ್ಯುಣಿಸುತ ಸುಭಾಷಿತ | ನುಡಿಯುಸಿರಿದ   || ೨ ||

ಬಾಂಧವನು ನೀನೆಮಗೆ ನಮ್ಮಯ | ಮಂದಿರಕೆ ಬರಲಿಂದು ಸುದಿನವು |
ಸಂದುದೆಮ್ಮಯ ಕುಲ ಪವಿತ್ರತೆ | ಗೆಂದು ನುಡಿದ      || ೩ ||

ದೇವಕನು ದೇವಕಿಯು ಶೌರಿಯು | ಮಾವನುಗ್ರಸೇನಾಖ್ಯ ಯದುಕುಲ |
ಠೀವಿಯೊಳಗಿರುತಿಹರೆ ಮಧುರೆಯ | ಭೂವಲಯದಿ    || ೪ ||

ಮಾನನಿಧಿ ನೀ ಬಂದ ಕಾರಣ | ವೇನದರುಹೆನಲೆದ್ದು ದೈನ್ಯದಿ |
ದಾನವಾಂತಕಗೆರುಗುತೆಂದ ನಿ | ಧಾನದಿಂದ          || ೫ ||

ರಾಗ ಕಾಂಭೋಜಿ ಝಂಪೆತಾಳ

ಜಯತು ಜಗದೀಶ ಮಹಾ | ಭಯನಿವಾರಣ ನೀನೇನ | ರಿಯಲೊಲು ಕೇಳುವೆಯ ದೇವ ||
ದಯದಿ ಕೇಳಾದರೆ | ಮ್ಮಯ ಕುಲಕೆ ಬಂದ ಅಪ | ಜಯವ ಪೇಳುವೆ ಪರಾಭವವ  || ೧ ||

ಸುರಮುನಿಯು ಬಂದರುಹಿ | ದನು ಖಳಾಧಮಗೆ ಶ್ರೀ | ಹರಿಯೆ ನೀ ಜನಿಸಿದಾಕ್ಷಣದಿ ||
ಭರದಿ ತಂದಿಲ್ಲಿ | ನ್ನಿಟ್ಟು ಶೌರಿಯ | ಮಾಯಾ | ತರುಣಿಯನು ತಂದಿತ್ತನೆನುತ     || ೨ ||

ಶಕಟ ವಾತಾಸುರನ | ಬಕ ಧೇನುಕನ ಪ್ರಲಂ | ಬಕಶ್ವಾಸುರ ವೃಷಭಾಸುರರ ||
ಸಕಲರನು ತರಿದು ಯದು | ನಿಕರ ಪಾಲಿಪನೆಂದು | ಯುಕುತದೊಳಗರುಹಿದನು ಮುನಿಪ  || ೩ ||

ಕೇಳಿದಾಕ್ಷಣದಿ ಖಳ | ಬಾಳಗೊಡೆನೆನುತ ಯದು | ಜಾಲವನು ಹಿಡಿತರಿಸುತವರ ||
ಕಾಲಿಗಳಿಗವಚಿ ನಿಗ | ಳವ ಬಂಧಿಸಿದನು ಶ್ರೀ | ಲೋಲ ಕೇಳೆನ್ನ ಬಿನ್ನಪವ         || ೪ ||

ಮಿಕ್ಕ ಯಾದವರು ಬಹು | ದಿಕ್ಕಿಗೋಡಿದರೆನ್ನ | ಠಕ್ಕಿಸುತ್ತಿಲ್ಲ ಕಳುಹಿದನು ||
ಒಕ್ಕಣಿಸಲಿನ್ನೇನು | ದುಃಖಿಯಾಗಿಹೆನೆನಲು ನಕ್ಕನಸುರಾರಿ ಹರುಷದಲಿ  || ೫ ||

ರಾಗ ಶಂಕರಾಭರಣ ತ್ರಿವುಡೆತಾಳ

ಕೇಳು ಕೃತವರ್ಮಕಸಹೋದರ | ಪೇಳ್ವೆ ನಾ ನಿನಗೀಗ ಯದುಕುಲ |
ಜಾಲವೆಲ್ಲವ ದಣಿಸಿದನೆ ಮಹ | ಖೂಳನವನು         || ೧ ||

ತಾಳಿ ದಿನವು ಸಮೀಪವಿದೆ ನಿ | ಮ್ಮಾಳಿದನಿಗೇನಿನ್ನು ಕೃ |
ಪಾಳು ಶಿವ | ತಾ ಕರುಣಿಸದೆ ಬಿಡ | ಕೇಳಿ ನಿಮಗೆ     || ೨ ||

ಈ ತೆರದೊಳರುಹುತ ಕೃಪಾನಿಧಿ | ಮಾತೆಗೆರಗಿದ ಪಿತಗೆ ಸಹ ಸಹ |
ಜಾತರೊಡನಿಂತೆಂದ ಲಕ್ಷ್ಮೀ | ನಾಥನೊಲಿದು         || ೩ ||

ಬಿಲ್ಲಹಬ್ಬವ ನಡೆಸುವನು ಗಡ | ಮಲ್ಲ ಕಂಸನು ದಯದಿ ತಾ ನ |
ಮ್ಮೆಲರನು ಬರಲೆನುತಲಟ್ಟಿದ | ನಿಲ್ಲಿಗಿವನ   || ೪ ||

ದಧಿಮೊಸರ ಭಾಂಡಗಳ ಶಕಟದಿ | ಉದಯದೊಳ ಗತಿ ಬೇಗ ತುಂಬಿಸಿ |
ಮುದದಿ ಕೆಳೆಯರು ಸಹಿತ ಪೊರಡಲಿ | ಮಧುರೆಗಿನ್ನು  || ೫ ||

ಭಾಮಿನಿ

ಇಂದುವಂಶಾಧಿಪನೆ ಕೇಳರ |
ವಿಂದನಾಭನು ಕೆಳೆಯರೊಡನಾ |
ನಂದದಿಂ ಮಧುರೆಗೆ ವಿನೋದದಿ ಪೊರಟನಾಲಯವ ||
ಇಂದುವದನೆಯರರಿತು ಧೈರ‍್ಯವ |
ಕುಂದಿ ಮರುಗುತಲೊಂದು ಠಾಣದಿ |
ಬಂದು ನೆರೆವುತ ತಮ್ಮತಮ್ಮೊಳಗೆಂದ ರಬಲೆಯರು   || ೧ ||

ರಾಗ ಘಂಟಾರವ ಏಕತಾಳ

ಸಖಿಯರು ಕೇಳಿರೀಗ | ಪಯಣವ ಗೆಯ್ವ | ಬಕವೈರಿ ಮಧುರೆಗೀಗ ||
ಭಕುತವತ್ಸಲನ ಭೋಗ | ತಪ್ಪಿತಮ್ಮಮ್ಮ | ವಿಕಳಿಸಿತೆಮ್ಮ ಯೋಗ       || ೧ ||

ದುರುಳ ಕಂಸನ ನೆವದಿ | ಬಂದಿಹನೊರ್ವ | ಮರುಳಕ್ರೂರನು ಜವದಿ ||
ಹರಿಯ ಕೊಂಡೊಯ್ವನಂತೆ | ಗೋಕುಲದಿ ನಾ | ವಿರಲುಚಿವೇನೆ ಮುಂತೆ          || ೨ ||

ಕ್ರೂರ ಪಾಪಿಗೆ ಜನರು | ದಿವ್ಯ ನಾಮವ | ಕ್ರೂರನೆಂದಿಟ್ಟರಾರು ||
ತೀರಿತಿಂದೆಮ್ಮಾಸೆಯು | ವಿಧಾತನಿಂದು | ಬೇರು ತರಿದ ಪಾಪಿಯು      || ೩ ||

ಮಧುರೆಯೊಳಿಹ ಸ್ತ್ರೀಯರು | ಮಂತ್ರಮಾಯದಿ | ಚದುರೆಯರಾಗಿಹರು ||
ಮಧುದ್ವೇಷಿ ಹರಿಯ ನೋಡಿ | ಮೆಚ್ಚಿ ಮತ್ತಿಲ್ಲಿ | ಗೊದಗಲು ಬಿಡರು ಕೂಡಿ          || ೪ ||

ಎಷ್ಟು ತಪವ ಗೆಯ್ದರೊ | ಆ ಸತಿಯರಿ | ನ್ನೆಷ್ಟು ಭಾಗ್ಯಾಧಿಕರೊ ||
ಕೃಷ್ಣಮೂರುತಿಯ ನೋಡಿ | ಕೂಡುವರು ತ | ಮ್ಮಿಷ್ಟಾರ್ಥಗಳನು ಬೇಡಿ  || ೫ ||

ಕೆಟ್ಟೆವಲ್ಲಯ್ಯೊ ಹರಿಯೆ | ನಮ್ಮೆಲ್ಲರನ್ನು | ಬಿಟ್ಟು ಪೋಪೆಯೊ ಧೊರೆಯೆ ||
ಇಷ್ಟಾರ್ಥವೆಮಗೀವರು | ನಿನ್ನಂತೆ ದೇವ | ಸೃಷ್ಟಿಯೊಳಾರಿಹರು || ೬ ||

ಭಾಮಿನಿ

ಆರು ಗತಿ ಹೇಳೆಮಗೆ ನಿನ್ನವೊ |
ಲಾರು ಕಾಯ್ವವರಕಟ ಕರುಣಾ |
ವಾರಿಧಿಯೆ ಹಾ ಕೃಷ್ಣ ಹಾಯೆಮ್ಮಗಲುವೆಯ ಹರಿಯೆ ||
ದಾರಿಗಾಣದೆ ಘೋರ ಅಡವಿಯ |
ಸೇರಿದಂತಾಯ್ತೆಮಗೆ ಕರುಣೆಯ |
ಬೀರಿ ಸಲಹೊ ಕೃಪಾಕರನೆಯೆಂದಳಲಿ ಹೊರಳಿದರು  || ೧ ||

ರಾಗ ನೀಲಾಂಬರಿ ಆದಿತಾಳ

ಏನಮ್ಮಾ | ಮುಂದಿ | ನ್ನೇನಮ್ಮ || ಏನಮ್ಮ ಶ್ರೀರಂಗ | ಧಾಮನೀ ಊರಗಲುವನಂತೆ      || ಪ ||

ಚಿದ್ರೂಪ ಹರಿಯು ಬಲ | ಭದ್ರ ಕೂಡಕ್ರೂರನೊಡನೆ ನ |
ಮ್ಮಿದಿರಿಗೆ | ಪೋಪ | ಮಧುರೆಗೆ     || ೧ ||

ಸಕಲಂತರ್ಯಾಮಿಗಿನ್ನಾವ | ಶಕುನವಡ್ಡವಿಸದೆತ್ತ |
ಪೋದವೆ | ಕಾಣ | ದಾದವೆ          || ೨ ||

ಮಾರನ ಬಾಧೆಗೆ ಜೀವ | ಸೂರೆಬಿಟ್ಟೆಮ್ಮಗಲಿ ಪೋಪ |
ನೇನಕ್ಕ | ನಮಗಿ | ನ್ನವ ಸಿಕ್ಕ       || ೩ ||

ಜಗದಾಧಾರನನಾದರೆಮ್ಮ | ಬಗೆಯರಿಯನೇನೆ ದಿಟ್ಟ ಶ್ರೀ |
ವರನೇನೇ | ಈತ | ನರನೇನೇ     || ೪ ||

ಬಾಳುವೆನೆಂತಯ್ಯೊ ಗೋಕುಲ | ಹಾಳಾಯಿತು ವ್ಯರ್ಥ ನಾವಿ |
ಲ್ಲಿರುವುದು | ಊರ | ತೊರೆವುದು    || ೫ ||

ಈ ತೆರದೊಳೆಲ್ಲರು ಶ್ರೀ | ನಾತ ರಕ್ಷಿಸೆನುತ ಬಾಯ |
ಬಿಟ್ಟರು | ಬಹುಗೋ | ಳಿಟ್ಟರು       || ೬ ||

ಕಂದ

ಭೂಪಾಲಕ ಲಾಲಿಸಿ ಕೇಳ್ |
ಶ್ರೀಪತಿಯನೆ ನೆನೆನೆನೆದಳುತಿರೆ ಮನದೊಳಗಂ ||
ಗೋಪಾಂಗನೆಯರ್ ದುಗುಡದೊ |
ಳೀ ಪರಿ ಪ್ರೌಢೆಯೊರ್ವಳಿಂತೆಂದಳು ಧೈರ್ಯದೊಳಂ || ೧ ||

ರಾಗ ಸೌರಾಷ್ಟ್ರ ಅಷ್ಟತಾಳ

ಏತಕೆಲ್ಲರು ಸುಮ್ಮನೊರಲಿ ಬಾಯ್ ಬಿಡುವಿರಿ | ನ್ನೇಳಿರವ್ವ |
ಪ್ರಾಣ | ನಾಥ ಶ್ರೀಹರಿಯ ದಾರಿಯೊಳಡ್ಡಗಟ್ಟುವ | ಏಳಿರವ್ವ    || ೧ ||

ನೀತಿಕೋವಿದನೆಂದು ಸೋತೆವು ಮುನ್ನ ನಾವ್ | ನೋಡೆ ತಂಗಿ ||
ಇಂಥ | ಪಾತಕಿ ನಮಗೊಂದು ಮಾತರುಹದೆ ಪೋಪ | ನೋಡೆ ತಂಗಿ   || ೨ ||

ಎರೆಯರ ಬಿಟ್ಟು ಶ್ರೀಹರಿಯ ನಂಬಿದ್ದೆವು | ಅಮ್ಮ ಕೇಳಿ ||
ಇಂಥ | ಕೊರಳುಗೊಯಿಕನ ನಂಬಿ ಮರುಳಾಟವಾಯಿತು | ಅಮ್ಮ ಕೇಳಿ || ೩ ||

ಎಮಗೆ ನಾಚಿಕೆಯಿನ್ನೆಲ್ಲಿಹುದು ಮುಂಬರಿಯಬೇ | ಕೇಳಿರಮ್ಮ ||
ತೇರು | ಗಮಿಸದಂದದೊಳಡ್ಡ ಗಟ್ಟಿ ನಿಲ್ಲಿಸುವಾ ನಾ | ವೇಳಿರಮ್ಮ        || ೪ ||

ಭಾಮಿನಿ

ಅರಸ ಕೇಳಿತ್ತುದಯದಲಿ ಶ್ರೀ |
ಹರಿಯು ಹಲಧರನೊಡನೆ ಗಾಂಧಿನಿ |

ತರಳನೇರಿದ ರಥದೊಳಡರುತ ನಂದನಂದಣದಿ ||
ಭರದಿ ಗೆಳೆಯರು ಸಹಿತ ಮಧುರಾ |

ಪುರಕೆ ಪಯಣವ ಗೆಯ್ಯೆ ಮಾರ್ಗದಿ |
ಬರಲು ಗೋಪಿಯರರಿತು ಬಂದಡ್ಡಯಿಸಿದರು ಬಿಡದೆ   || ೧ ||

ರಾಗ ನೀಲಾಂಬರಿ ರೂಪಕತಾಳ

ಎಲ್ಲಿಗೆ ಪೋಗುವೆ ಭಾಗ್ಯ ಸಂ | ಪನ್ನನೆಯೆಮ್ಮಗಲುವೆ ತರ |
ವಲ್ಲವೊ ನಿಲ್ಲಲೊ ಲಕ್ಷ್ಮೀ | ವಲ್ಲಭ ನುಡಿ ದಯದಿ || ಎಲ್ಲಿಗೆ       || ಪ ||

ಪತಿಯರ ತೊರೆದಗಲುತ ಮುರ | ಮಥನನೆ ನಿನ್ನೊಳು ಮಾರನ |
ರತಿಗೊದಗುತ ಬಿಡಲಾರದೆ | ಜತೆಗೊಡುತಲಿಹೆವು ||

ಗತಿ ನೀನಲ್ಲದೆ ಬೇರಿ | ನ್ನಿತರರ ಕಾಣೆವು ಎಮಗೆ |
ಗತಿಯನು ತೋರಿಸಿ ಮುಂದಕೆ | ಜತನದಿ ನಡೆ ನೀನು          || ೧ ||

ತರುವಿಂಡೆಬ್ಬುತ ಕೆಳೆಯರ | ನೆರಹಿಸಿ ವೃಂದಾವನದೊಳು |
ತೆರಳಲು ಬರುವನಕ | ಸರಿದೆವು ಯುಗವಾಗಿ ||

ಮುರಲಿಯ ಧ್ವನಿ ಕೇಳುತ ಮನ | ಮರುಳಾಗುವ ನಾಚಿಕೆಯನು |
ತೊರೆದಿದಿರೆಗೆ ಬಂದಪ್ಪುತ | ಮರೆವೆವು ವಿರಹವನು    || ೨ ||

ದಧಿಘೃತಭಾಂಡಗಳೊಡೆವುತ ಕುದುಕುತ ಕುಚಗಳ ಪಿಡುವುತ |
ವಿಧವಿಧದಾಟಗಳಾಡುತ | ಬದಿಗೆ ನೀ ಬದಿಗೊಡುತ ||

ಎದೆಗಡರುತಲೆಮ್ಮನು ಬಲು | ಹದದಲಿ ರಮಿಸುತ ಸೌಖ್ಯವ |
ಮುದದಲಿ ತೋರಿಪರಿರುವರೆ (ಧರೆಯೊಳು) | ಚದುರನೆ ನಿನ್ನಂತೆ         || ೩ ||

ಬೇಸರವಾದರೆಯಮಗೆ ಯ | ಶೋದೆಗೆ ದೂರುವ ನೆಪದಿ ವಿ |
ಲಾಸದಿ ನಿನ್ನಯ ಮನೆಗೆ ನಾವ್ | ವಾಸಿಯೊಳಯ್ತಹೆವು ||

ಶ್ರೀಶನೆ ನಿನ್ನನು ನೋಡಿ ಸಂ | ತೋಷದಿ ದಿನಗಳೆದೆವು ಜಗ |
ದೀಶನೆ ನೀ ಪೋದರೆ ಪರ | ದೇಶಿಗರಾವೈಸೆ || ೪ ||

ಬೆಡಗಿನ ಮಧುರೆಯ ಸ್ತ್ರೀಯರು | ಬಿಡುವರೆ ನಿನ್ನನು ಹಿಂದಕೆ |
ಬಡವೆಯರಾವಲ್ಲವೆ ಜಗ ದೊಡೆಯ ನಮ್ಮಗಲುವೆಯ ||

ಬಿಡಲಾರೆವು ನಿನ್ನನು ಎಂ | ದಡಿಗಡಿಗೆರಗುತ ದೈನ್ಯದಿ |
ಒಡಲುಗಳನು ಕೆಡಹುತ ರಥ | ದಡಿಯೊಳು ಚಾಚಿದರು         || ೫ ||

ವಾರ್ಧಿಕ

ಕ್ಷಿತಿನಾಥ ಕೇಳ್ ಗೋಪಸತಿಯ ನಿಕುರಬ ಮುರ |
ಮಥನರಥದಡಿಯೊಳಗೆ ಮತಿಮರೆದು ಬಿದ್ದು ಪೊರ |

ಳುತಲಿ ಬಾಯ್ಬಿಡುತ ಹರಿ ಗತಿ ನೀನೆನುತ್ತ ಬಲು ಸ್ತುತಿಸುತೇಳದೆಯೆರಗುತ ||
ಜತೆಯಗಲುವನು ಪ್ರಾಣಪತಿಯೆನುತ ಮರುಗಲಾ |

ರತಿಪತಿಯ ಪಿತನುವುನ್ನತ ಕರಗಳೆತ್ತಿ ತೋ |
ರುತಲಭಯವಿತ್ತವತರೊಳತಿದಯದಿ ನುಡಿದ ಸನುಮತದಿ ಮೃದುವಚನದಿಂದ    || ೧ ||

ರಾಗ ಸಾರಂಗ ಅಷ್ಟತಾಳ

ಬಾಲೆಯರುಗಳು ಕೇಳಿ | ದುಃಖಿಸದಿರಿಯೆ | ದ್ದೇಳಿ ಧೈರ್ಯವನು ತಾಳಿ ||
ಪಾಲಿಪೆ ನಿಮ್ಮನಂಜದಿರಿನ್ನು ಗೋಕುಲ | ದಾಲಯದಲಿ ತೋಷವ | ತಾಳಿರಿ ನೀವು          || ೧ ||

ಮಧುರೆಯಧಿಪ ತನ್ನಲ್ಲಿ | ಬಿಲ್ಲಹಬ್ಬವೆಂ | ದಧಿಕ ಸಂತೋಷದಲ್ಲಿ ||
ಚದುರಕ್ರೂರನ ತಾನಿಲ್ಲಟ್ಟಿದನೆನ್ನ | ಸದನಕೆ ಒಯ್ಯಲೆಂದು | ಪೋಪೆವಾವಿಂದು    || ೨ ||

ಬರಿದೆ ದುಃಖಿಸಲು ಬೇಡಿ | ನಾಡ್ಡಿಲ್ಲಿಗೆ | ಬರುವೆನು ನಿಜವು ನೋಡಿ ||
ಕರಗದೆಲ್ಲರು ನಿಮ್ಮವರೊಳು ಬೆರಸುತ್ತ | ಲಿರಿ ನಿಮ್ಮ ಗೃಹದಿ ಬೇಗ | ಪೋಗಿ ನೀವೀಗ      || ೩ ||

ರಾಗ ಮಾರವಿ ಏಕತಾಳ

ಈ ತೆರದಲಿ ಸತಿ | ಯರಿಗಭಯವನು ಶ್ರೀ | ನಾತ ಪಾಲಿಸಿ ದಯದಿ ||
ತಾ ತಡೆಯದೆ ಸಹ | ಜಾತಸಹಿತಲಿ ಸ | ಮೇತಕ್ರೂರನು ರಥದಿ         || ೧ ||

ಏರಿ ಹಾರಿಸಲು ಆ | ನಾರಿಯ ನಿವಹ ಮು | ರಾರಿಯನೀಕ್ಷಿಸುತ ||
ಭಾರಿ ಪಿರಿದು ಬಾ | ಯಾರಿ ಬಿದ್ದುರುಳಿ ಶ | ರೀರವ ಮರೆದಳುತ          || ೨ ||

ನೀರೆಯರೆದ್ದು ಆ | ತೇರು ಮುಂಬರಿಯಲು | ದೂರದಿಂದೀಕ್ಷಿಸುತ ||
ತೇರಿನ ಕುದುರೆ | ಸಾರಥಿ ಧ್ವಜ ಕಲಶವ | ಮೀರಿ ಹಾರುವ ರಜವು        || ೩ ||

ತೋರುವನಕ ಶಿರ | ವೇರಿ ಮೇಲೆತ್ತಿ ಕಾ | ಲೂರಿ ನೆಗೆದು ನೋಡಿ ||
ತೀರಿತು ಋಣವೆನು | ತೂರಿಗೆ ಮರಳಿ ಬಾ | ಯಾರಿ ಬಂದರು ಕೂಡಿ     || ೪ ||

ವಾರ್ಧಿಕ

ಪೃಥ್ವೀಶ ಕೇಳಿತ್ತ ಹರಿಯು ರಾಮರು ಗೋಪ |
ಮೊತ್ತ ಸಹಿತಲಿ ಸುತ್ತು ಮುತ್ತು ಭಂಡಿಗಳೆಸೆಯೆ |
ಉತ್ತಮದ ಕಾಳಿಂದಿಹತ್ತಿರಕೆ ಬಂದಾಗ ಚಿತ್ತಜನ ಪಿತನು ನದಿಯ ||
ನುತ್ತರಿಸಲೆನುತ ಗುಹನಿಗೆ ನೇಮ |
ವಿತ್ತು ಸರ್ವರು ಜಲವ ದಾಂಟುತಾಚೆಗಡರಿರ |
ಲಿತ್ತ ಗಾಂಧಿಜ ನದಿಯ ಹತ್ತಿರಕೆ ಬಂದಾಗ ಬಿತ್ತರಿಸುತಿರುತಿರ್ದನು        || ೧ ||

ರಾಗ ಯರಕಲಕಾಂಭೋಜಿ ಅಷ್ಟತಾಳ

ಲಾಲಿಸಿ ದಯದಿ ಕೇಳು | ಬಿನ್ನಪವ ಶ್ರೀ | ಲೋಲ ಕರುಣಕೃಪಾಳು ||
ಬಾಲಕ ಧ್ರುವ ಪ್ರಹ್ಲಾದರ ಮುನ್ನ | ಪಾಲಿಸಿದಂತೆಯೆನ್ನ | ಕಾಯೊ ಪ್ರಸನ್ನ || ೧ ||

ನಿನ್ನಯ ಶ್ರೀಮೂರ್ತಿಯ | ಕಂಡಮೇಲೆನ | ಗಿನ್ನು ಬೇರೇನಾಸೆಯು ||
ಜನ್ಮದಿ ಜನಿಸಿ ಬಂದಾಮೇಲೆ ಸತ್ಕೀರ್ತಿ | ಯನ್ನು ರಚಿಸಬೇಕೆಂದು | ಮನಸಿಗಿಂದು         || ೨ ||

ಇಂದು ಕಾಳಿಂದಿಯೊಳು | ಸ್ನಾನವ ಗೆಯ್ವೆ | ನೆಂದಾಸೆಯೆನಗೆ ಕೇಳು ||
ತಂದೆಯಪ್ಪಣೆಯ ಪಾಲಿಸು ದೇವ ಜವದಿ ನಾ | ಮಿಂದು ಬರುವೆನಿಲ್ಲಿಗೆ | ಈ ಗಳಿಗೆಗೆ ||     || ೩ ||

ಶರಣನ ನುಡಿಯ ಕೇಳಿ | ಪೇಳಿದನು ಶ್ರೀ | ಹರಿಯು ಸಂತಸವ ತಾಳಿ ||
ತೆರಳಿ ಸ್ನಾನವ ಗೆಯ್ದು ಬರುವನಕಿಲ್ಲಿ ನಾ | ನಿರುವೆ ರಥದಲಿ ಈಗ | ಪೋಗಿ ಬಾ ಬೇಗ      || ೪ ||

ಭಾಮಿನಿ

ಇಂತು ಯಾದವಕುಲಶಿಖಾಮಣಿ |
ಯಂತರಾತ್ಮಕನೊಡನೆ ನೇಮವ ||
ಸಂತಸದಿ ಕೊಂಡಾಗ ನದಿಯೆಡೆಗಾಗಿ ನಡೆತಂದ |
ಮುಂತೆ ಸಂಕಲ್ಪಾದಿ ಸ್ನಾನವ |
ನಿಂತು ವಿರಚಸಿ ಮುಳುಗೆ ನೀರೊಳು |
ಕಂತುಜನಕನ ದಿವ್ಯಮೂರ್ತಿಯ ಕಂಡನಕ್ರೂರ        || ೧ ||