ಯಕ್ಷಗಾನ ಬಿಲ್ಲಹಬ್ಬ ಮತ್ತೂ ಕಂಸವಧೆ
ಮೊದಲನೆ ಸಂಧಿ : ಬಿಲ್ಲಹಬ್ಬ

ಶಾರ್ದೂಲವಿಕ್ರೀಡಿತಂ

ಶ್ರೀರಾಧಾಮನಲೋಲಮೋಹಿತಕರಂ ಗೋಪಾಂಗನಾವಲ್ಲಭಂ
ಮಾರಾರೂಪಸಹಸ್ರಕೋಟಿಸದೃಶಂ ದೇವಾದಿದೇವಂ ಹರಿಮ್ |
ಕಾಮಾರಾತಿಸಖಂ ಕರೀಂದ್ರವರದಂ ಕಾರುಣ್ಯಕಲ್ಪದ್ರುಮಂ
ಕ್ಷೀರಾಂಭೋನಿಧಿವಾಸಶೇಷಶಯನಂ ಶ್ರೀಕೃಷ್ಣದೇವಂ ಭಜೆ ||

ಭಾಮಿನಿ

ನಿಗಮಕೋಟಿಗಳರಸಿಯರಸು |
ತ್ತಗಲಿದವು ನಾಚುತಲಿ ನಿನ್ನಯ |
ಅಗಣಿತದ ಮಹಿಮೆಯನು ಬಲ್ಲವರಾರು ತ್ರಿಜಗದಲಿ ||
ಮುಗಿದು ಕರಪುಟಿಯುಗದಿ ನಾ ಮರೆ |
ಹುಗುವೆ ಸೌಭಾಗ್ಯದಿ ಸಂಪದ |
ಯುಗವ ಪಾಲಿಸು ಲಕ್ಷ್ಮಿಯೆನ್ನಯ ಮತಿಗೆ ಮಂಗಲವ  || ೧ ||

ರಾಗ ನಾಟಿ ಝಂಪೆತಾಳ

ಶರಣು ಶ್ರೀಗಣನಾಥ ಶರಣು ಕೀರ್ತಿಖ್ಯಾತ |
ಶರಣು ತ್ರಿಭುವನದಾತ | ಶರಣು ಶಿವಜಾತ   || ಪ ||
ಬಿಜಸಜಾಪ್ತನದೃಶವೊಂ | ದಶನಾದರಿತ ದೇವ |
ಋಷಿಜನೋದ್ಧಾರ ವರ | ಶಶಿಧರಕುಮಾರ ||
ಅಸು ರಕ್ತವರ್ಣ ದ್ವಯ | ವೆಸೆವ ಶೂರ್ಪವು ಕರ್ಣ |
ಅಸಮಗುಣಗಂಭೀರ | ನಿಶಿಚರಕುಠಾರ       || ೧ ||

ಮೂಷಕ ವರೂಥ ಫಣಿ | ಭೂಷ ಲಂಬೋದರ ಗ |
ಣೇಶ ಕರಧೃತಪರಶು | ಪಾಶಾಂಕುಶೇಶ ||
ದೋಷವಿಘ್ನವಿನಾಶ | ದಾಸಜನಪೋಷ ಜಗ |
ದೀಶ ಪಾಲಿಸುಯೆನಗೆ | ಲೇಸ ವಿಘ್ನೇಶ       || ೨ ||

ಅಪ್ಪ ಮೋದಕ ಕಜ್ಜ | ತುಪ್ಪ ಸಕ್ಕರೆಯು ಸಹ |
ಚಪ್ಪರಿಸಿ ಮೆಲುತಲಿರು | ತಿಪ್ಪ ಕರಿವದನ | ತಪ್ಪುಗಳ ಕ್ಷಮಿಸುಯೆ |
ನ್ನೊಪ್ಪುಗಳ ಮೂಲಿಕೆಯ | ಬಪ್ಪಪುರಧೀಶನ | ಮ್ಮಪ್ಪ ವಿಘ್ನೇಶ || ಶರಣು || ೩ ||

ರಾಗ ಶಂಕರಾಭರಣ ಮಟ್ಟೆತಾಳ

ಜಯ ನಮೋ ಜಗನ್ನಿವಾಸ ಜಯತು ಮರುತಜ |
ಭಯವಿದೂರ ನುತಿಪ ಜನರಿಗಮಲಸುರಕುಜ          || ಪ ||

ನಿಶಿಚರಾನ್ವಯಾದಿ ಖಲಕುಠಾರ ಸುಚರಿತ |
ವ್ಯಸನಭಯವಿದೂರಪ್ರಸರಪೂಜಿತ  || ೧ ||

ಧರಣಿಧರ ಸರಿತ್ಸುಪೇಂದ್ರ ವರ ಸುಖಪ್ರದ |
ದುರಿತತಿಮಿರದಿನಪ ನಿರತ ಸ್ಮರಿಪೆ ತವ ಪದ         || ೨ ||

ಕವಿತೆಯೊಳಗನಂತ ದೋಷವಿರಲುಯೆನ್ನನು |
ಕ್ಷಮಿಸಿ ಸಲಹೊ ಸತತ ಹನುಮ ನಮಿಪೆ ನಿನ್ನನು      || ೩ ||

ರಾಗ ಸೌರಾಷ್ಟ್ರ ಅಷ್ಟತಾಳ

ಅಖಿಲಬ್ರಹ್ಮಾಂಡನಾಯಕನ ಪಟ್ಟದ ರಾಣಿ | ತ್ರಾಹಿ ತಾಯೆ | ನಿನ್ನ |
ಭಕುತಿಯಿತ್ತೆನಗೆ ರಕ್ಷಿಸು ದಾತೆ ಭಾರತಿ | ತ್ರಾಹಿ ತಾಯೆ        || ೧ ||

ನಿಗಮಾಭಿಮಾನಿ ದೇವತೆಯೆ ರಕ್ಷಿಸುಯೆನ್ನ |  ಶ್ರೀಮೂಕಾಂಬಾ | ತಾಯೆ |
ಸೊಗಸಿಲಿ ಕವಿತೆಯನುಸಿರ್ವಂತೆ ಮಾಡವ್ವ | ಶ್ರೀಮೂಕಾಂಬಾ || ೨ ||

ಭಜಕವತ್ಸಲ ಗಂಗಾಧರನೆ ತ್ರಿಯಂಬಕ | ಪಾಹಿ ದೇವ |
ದಿವ್ಯ | ರಜತಾದ್ರಿವಾಸ ಪಾಲಿಸುಯೆನ್ನ ಗೌರೀಶ | ಪಾಹಿ ದೇವ || ೩ ||

ರಾಗ ಸಾಂಗತ್ಯ ರೂಪಕತಾಳ

ಅಜಗೆ ಶಾರದೆಗೆ ನಾ ನಮಿಪೆ ಭೂಧರನಿಗೆ | ತ್ರಿಜಗವಂದಿತ ಖಗೇಶ್ವರಗೆ ||
ಸುಜನ ಸನಕಸನಂದನನಾರದಾದ್ಯರ | ಭಜಿಸುತೀ ಕೃತಿಯ ವಿಸ್ತರಿಪೆ    || ೧ ||

ಅಷ್ಟದಿಕ್ಪಾಲರಿಗೆರಗಿಯಸ್ಮದ್ಗುರು | ಇಷ್ಟದೇವತೆಗಳ ಭಜಿಸಿ ||
ಶ್ರೇಷ್ಠ ಶ್ರೀಕುಲದೇವತೆಯೆ ಪಾಲಿಸೆನುತ ಸಂ | ತುಷ್ಟನಾಗುವ ವಿರಚಿಸುವೆ         || ೨ ||

ಬಲಿ ಪ್ರಹ್ಲಾದಾಂಬರೀಷ ರುಕ್ಮಾಂಗದ | ಕಲಿಪಾರ್ಥವಿದುರನಕ್ರೂರ ||
ಕಲುಷ ವರ್ಜಿತ ಭೀಷ್ಮ ಗುರು ಕೃಪಾದ್ಯರಿಗೆ ನಾ | ಬಲವಂದು ಕವಿತೆ ವಿಸ್ತರಿಪೆ     || ೩ ||

ಬುದ್ಧಿಶೂನ್ಯನು ನಾನಿನ್ನೇನನರಿಯೆ ತಪ್ಪು | ಇದ್ದಡೀ ಕೃತಿಯ ನೋಡುತಲಿ ||
ತಿದ್ದಿಕೊಳ್ಳುವುದು ಬಲ್ಲವರು ಈ ಕವಿತೆಯ | ಚಿದ್ರೂಪ ಹರಿಯು ರಕ್ಷಿಪನು  || ೪ ||

ವಾರ್ಧಿಕ

ಸೃಷ್ಟಿಸ್ಥಿತಿಲಯದ ಕಾರಣಕೆ ನಾಭಿಯೊಳು ಪರ |
ಮೇಷ್ಠಿಯನು ಪೆತ್ತಿಕ್ಕು ತವನ ಮುಖದೊಳು ಜಗವ |
ದೃಷ್ಟಿಗೋಚರಕೆ ತಂದಖಿಳಜನಜನಿತ ಸ್ಥಾವರ ಜಂಗಮಾದಿಗಳನು ||
ಇಷ್ಟದಿಂದವರವರ ತಾರತಮ್ಯದಿ ಬಲುಹ |
ಕೊಟ್ಟು ನಡೆಸುವ ದೇವ ನೀನೆಯೇಕೋವಿಷ್ಣು |
ಶ್ರೇಷ್ಠ ಶ್ರೀಮೂಲಿಕೆಯ ನರಸಿಂಹ ದೇವ ಮಾರಮಣನೆನ್ನನು ಪಾಲಿಸು   || ೧ ||

ವಚನ

ಇಂತೀ ಗುರುದೇವಕವಿಪ್ರಾರ್ಥನೆಯಂ ಮಾಡಿ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –

ದ್ವಿಪದಿ

ಹಿಮಕರಕುಲಾನ್ವಯ ಪರೀಕ್ಷಿತನು ನಯದಿ |
ವಿಮಲ ಶುಕಯೋಗೀಂದ್ರ ನಡಿಗೆರಗಿ ಮುದದಿ          || ೧ ||

ನಮಿಸಿ ಕೇಳಿದ ಭಾಗವತಕಥಾಮೃತದಿ |
ಕಮಲಲೋಚನನು ಅವತರಿಸಿ ಗೋಕುಲದಿ  || ೨ ||

ಬಾಲಲೀಲೆಯ ತೋರಿದನಿತು ಸತ್ಕಥೆಯ |
ಪೇಳುತಲಿ ಉದ್ಧರಿಸಿದೆಯೊ ಮುನಿಕುಲಾರ್ಯ         || ೩ ||

ಮತ್ತೆ ಶ್ರೀವರನು ಮಧುರೆಗೆ ಪೋಗಿ ಪಥದಿ |
ಒತ್ತಿ ಗಂಟಲ ರಜಕನನು ಸದೆದು ಮುದದಿ    || ೪ ||

ಸಾಲೋಕ್ಯಪದವಿಯನು ಚಿಪ್ಪಿಗನಿಗಿತ್ತು
ಮಾಲೆಗಾರಗೆ ಭಾಗ್ಯ ಕರುಣದಿಂದಿತ್ತು        || ೫ ||

ಮುರುಟಿರುವ ಕುಬುಜೆಡೊಂಕನೆ ತಿದ್ದಿ ನಡೆದು |
ಮೆರೆವ ಧನು ಮುರಿದು ಗಜವನು ಕೊಂದು ಬಡೆದು    || ೬ ||

ಮಲ್ಲ ಚಾಣೂರಮುಷ್ಟಿಕರ ಮರ್ದಿಸುತ |
ಖುಲ್ಲ ಕಂಸಾಸುರನ ಹಿಡಿದೆಳೆದು ಕೊಲುತ   || ೭ ||

ಸಕಲ ಜಗದಾಧಾರನುಗ್ರಸೇನನಿಗೆ |
ಪ್ರಕಟದಿಂ ಮಧುರೆಯೊಲಿದಿತ್ತ ಕಥೆಯೆನಗೆ    || ೮ ||

ಕೃಪೆಯಿಂದಲರುಹಬೇಕೆನುತಲಡಿಗೆರಗಿ |
ಉಪಚಾರದಿಂದೊಪ್ಪುತೆಂದ ಭೂವರಗೆ       || ೯ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭೂಲಲಾಮನೆ ಕೇಳು ರಾಧಾ | ಲೋಲನಮಲ ಕಥಾಮೃತದ ರಸ |
ಲೀಲೆಯನು ನಿನ್ನಂತೆ ಸೇವಿಪ | ಶೀಲರುಂಟೆ || ೧ ||

ಖತಿಯೊಳಶ್ವತ್ಥಾಮ ಬಿಟ್ಟ | ಸ್ತ್ರವ ನಿವಾರಿಸಿ ನೀ ಪರೀಕ್ಷಿತ |
ಪತಿಯೆನುತ ಪೆಸರಿಟ್ಟು ಕಾಯ್ದ ಶ್ರೀ | ಪತಿಯು ನಿನಗೆ  || ೨ ||

ಅರಿಯದಜ್ಞನೆ ನೀನು ಲಕ್ಷ್ಮೀ | ವರನ ಭಕುತನು ಲೋಕದವರುಪ |
ಕರಕೆ ಕೇಳುವೆ ಪೇಳ್ವೆ ಶ್ರೀನರ | ಹರಿಯ ಕಥೆಯ       || ೩ ||

ಶ್ರೀರಮಣ ಗೋಕುಲದೊಳಿರಲಿ | ತ್ತಾ ಮಹಾಕಂಸಾಖ್ಯ ಮಧುರೆಯ |
ಧಾರಿಣಿಯ ಪಾಲಿಸುತಲಿರ್ದನು | ದಾರತನದಿ         || ೪ ||

ಭಾಮಿನಿ

ರಣದಿಶಾಪಟಮಲ್ಲ ಕಂಸನು |
ಗಣನೆಯಿಲ್ಲದ ಕರಿ ತುರಗ ಭಟ |
ಗಣರಥಾರೋಹರ ಚತುರ್ಬಲವೆರಸಿ ವಿಭವದಲಿ ||
ಮಣಿಖಚಿತ ಪೀಠದಲಿ ಗಗನಾ |
ಮಣಿಯ ಸೋಲಿಪ ತೆರದಿ ಮಂಡಿಸಿ |
ಗಣದಿ ಮಧುರೆಯನಾಳುತಿರ್ದನುದಾರ ತೇಜದಲಿ     || ೧ ||

ರಾಗ ಭೈರವಿ ಝಂಪೆತಾಳ

ಇಂತು ವೈಭವದೊಳಿರ | ಲಂತಸ್ಥಮನದಿ ಬಹು |
ಚಿಂತೆಯನು ತಾಳಿತನ | ಗಂತಕನು ಜಗದಿ  || ೧ ||

ಪುಟ್ಟಿ ಬೆಳೆವುತಲೆನ್ನ | ಕುಟ್ಟುವನೆನುತಲೆ ತಲೆ |
ಮೆಟ್ಟ್ಯುಸಿರಿಯಡರಿದಳು | ದಿಟ್ಟೆ ಚಂಡಿಕೆಯು  || ೨ ||

ಎನ್ನ ವೈರಿಯ ತಿಳಿದು | ಬನ್ನಿರೆನುತಸುರಾಪ್ತ |
ರನ್ನು ಕಳುಹಿದೆನವರು | ಇನ್ನು ಬರಲಿಲ್ಲ      || ೩ ||

ಏನ ಮಾಡಲಿಯೆಂದು | ಮೌನದೊಳಗಿರಲು ಅಜ |
ಸೂನು ನಾರದ ನಿವನ | ಸ್ಥಾನಕಯ್ತಂದ      || ೪ ||

ರಾಗ ಕೇದಾರಗೌಳ ಅಷ್ಟತಾಳ

ಹರಿ ಸರ್ವೋತ್ತಮ ಲಕ್ಷ್ಮೀ | ವರ ಸಚ್ಚರಿತ ದಾಮೋ | ದರ ಮುರಹರ ಪಾಹಿ ಮಾಮ್ ||
ಶರಣವತ್ಸಲ ದೀನೋದ್ಧರಣ ಕೌಸ್ತುಭರತ್ನಾ | ಭರಣ ಭೂಷಿತ ಪಾಹಿ ಮಾಮ್     || ೧ ||

ಮೃಡಸರೋಜಜಸುರ ಗಡಣವಂದಿತ ಕ್ಷೀರ | ಕಡಲಶಯನ ಗೋವಿಂದ ||
ಬಿಡದೆ ರಕ್ಷಿಪುದೆಂದುನುಡಿಸಿ ವೀಣೆಯ ಹಂಸೆ | ಯಡರಿ ಕೀರ್ತಿಸುತ ಬಂದ         || ೨ ||

ಒಡನೆದ್ದು ಕಂಸ ಮುಂ | ದಡಿ ಯಿಟ್ಟು ನಮಿಸಿ ಕಯ್ | ವಿಡಿದು ಪೀಠವನೇರಿಸಿ ||
ಪಡಿಗದೊಳಡಿಗಳ | ನಿಡುತುದಕದಿ ತೊಳೆ | ದಡಗೆಡೆದರ್ಚಿಸಿದ || ೩ ||

ಕಂದ

ಅಮರಾರಿಯು ಈ ಪರಿಯೊಳು |
ಕಮಲಾಸನಕುವರಂಗಭಿವಂದಿಸಿ ಭಕ್ತಿಯೊಳ್ ||
ನಮಿಸುತ ನಿಂದಿರುತಿರಲಾ |
ಸುಮನಸ ಋಷಿಯವನಂಗವ ತಡವರಿಸುತ್ತೆಂದು      || ೧ ||

ರಾಗ ಸಾಂಗತ್ಯ ರೂಪಕತಾಳ

ಮಗನೆ ಕೇಳ್ ನಿನ್ನಂಥ | ಅಗಣಿತ ಸೌಭಾಗ್ಯ | ಜಗದೊಳಗಾರಿಗುಂಟಿನ್ನು ||
ಸುಗುಣ ಕಾಂತಿಯು ತಗ್ಗಿ | ಮೊಗವು ಕಪ್ಪೆಸಗಿದ | ಬಗೆಯ ಪೇಳೆನಗೆ ನೀನರಸ    || ೧ ||

ಪರಮಪ್ರೀತಿಯ ಶಿಷ್ಯ | ರಿಹರೆ ಕೇಳ್ ನಿನ್ನಂತೆ | ಧರಣಿಯೊಳೆನಗೆ ಭೂವರನೆ ||
ಕರಗದೆ ಮನದಲ್ಲಿ | ಕೊರತೆಯನೊರೆಯಲು | ಅರುಹುವೆ ಕೇಳುಪಾಯುವನು     || ೨ ||

ರಾಗ ಕಾಂಭೋಜಿ ಝಂಪೆತಾಳ

ಪೇಳನರಿಯೆನುಯೆನ್ನ | ಬಾಳುವೆಗೆ ಬಂದೆಡರ | ಕೇಳಲಿಲ್ಲವೆಯಮರ ಮುನಿಪ ||
ಶೀಲೆ ದೇವಕಿಯುದರ | ದಾಲಯದೊಳುದಿಸೆ ಶಿಶು | ಬಾಲೆ ಚಂಡಿಕೆಯೆಂದೆನಿಪ್ಪ  || ೧ ||

ಪುಟ್ಟಿದವಳಸು ಕಳಚಿ | ಕುಟ್ಟುವೆನುಯೆನುತ ಸೆಳೆ | ದಿಟ್ಟೆ ಗಗನಾಂತರದೊಳವಳು ||
ಮೆಟ್ಟುತೆನ್ನಯ ತಲೆಯ | ದಿಟ್ಟೆ ಚಿಗಿದಳು ಅಮರ | ಬಟ್ಟೆವಿಡಿದೆನಗೆ ಅರುಹಿದಳು   || ೨ ||

ಮುದದಿ ನಿನ್ನನ್ನು ಕಳಚಿ | ಸದೆವನೊಬ್ಬನು ಜಗದೊ | ಳುದುಭವಿಸಿ ಬಳೆವನೆಂದೆನುತ ||
ಚದುರೆ ಯವಳೆನಗರುಹಿ | ಬೆದರಿಕೆಯ ಮನಸಿನಲಿ | ಹುದುಗಿಸುತ್ತಡರಿದಳು ನಭಕೆ         || ೩ ||

ಚಿಗಿದವಳು ಗಮಿಸಲಾ | ಬಗೆಯರಿಯಲೆನುತ ಸಹ | ಸಿಗ ಶಕಟ ಪೂತನಿ ಪ್ರಲಂಬ ||
ವಿಗಡ ವತ್ಸಾಸುರನ | ಮಿಗೆ ಧೇನುಕರ | ಜಗವ ಶೋಧಿಸಲೆನುತ್ತವರ    || ೪ ||

ಪರಿಯನರಿವರೆ ಪೋದ | ವರನು ಕಾಣದೆ ಮನದಿ | ಕರಗುವೆನು ತಾಪಸೋತ್ತಮನೆ ||
ಧರಣಿಯನು ಸಂಚರಿಪ | ಕರುಣಿ ನೀ ತಿಳಿದರೆನ | ಗುರುಹು ಬೇಗದೊಳು ಮುನಿವರನೆ      || ೫ ||

ರಾಗ ಕೇದಾರಗೌಳ ಅಷ್ಟತಾಳ

ಕೇಳು ಸುಶೀಲ ನೃಪಾಲ ಸತ್ಕಥೆಯ |
ಪೇಳುವೆ ನಿನ್ನಯ ಮೂಲ ಸಂಗತಿಯ || ಕೇಳು ಸುಶೀಲ        || ಪ ||

ಪಿತನುಗ್ರಸೇನನೆಂದೆನುತ ನೀ ಮನದಿ ಸ |
ನ್ಮತ ಗೊಂಡಿರುವೆಯವನಲ್ಲ ಮುನ್ನೋರ್ವನು | ನ್ನುತ ದ್ರವಿಳನೆಂಬ ತಾನು ||
ಗಂಧರ್ವ ಕೂ | ಡುತ ನಿನ್ನ ಮಾತೆಯನು | ಪುಟ್ಟಿದೆ ನಿನ್ನ |
ಸ್ಥಿತಿಯುಸಿರುವೆನು ನಾನು | ಪೂರ್ವದೊಳು ನೀ |
ನತಿ ಬಲಾನ್ವಿತ ಕಾಲನೇಮಿಯೆಂಬಾತನು || ಕೇಳು ಸುಶೀಲ    || ೧ ||

ಯಾದವರೆಲ್ಲ ನಿನ್ನವರೆಯೇ ಮರುಳೆ ಮು |
ನ್ನಾದಿಯೊಳಜ ಮುಖ್ಯ ಸುರರೆಲ್ಲ ದೂರೆ ಶ್ರೀ | ಮಾಧವ ದೇವಕಿಗೆ ||
ಬಾಲಕನಾಗಿ | ಮೋದದಿ ಪುಟ್ಟಲಾಗೆ | ಈ ಶೌರಿ ವಿ |
ನೋದದಿ ಗೋಕುಲಕೆ | ಒಯ್ದಿರಿಸಿ ಕೊಂ |
ಡಾದಿಮಾಯೆಯನು ತಂದಿತ್ತನು ನಿನಗೆ | ಕೇಳು ಸುಶೀಲ        || ೨ ||

ಸುರರು ಯಾದವರು ಎಂದರಿತುಕೊ ಮನದಿ ನೀ |
ನರಿಯಲಟ್ಟಿದ ವತ್ಸ ಬಕ ಪ್ರಲಂಬಾದ್ಯರ | ತರಿದ ಶ್ರೀಹರಿಯು ತಾನು ||
ಬಿಲ್ಲ್ಹಬ್ಬವೆಂ | ದರುಹಿ ನಿನ್ನಾಪ್ತರನು | ಅಟ್ಟುತ ಕರೆ |
ತರಿಸು ಇಲ್ಲಾತನನ್ನು | ಕೊಲುತಲೀ |
ಧರಣಿಯಾಳುತ ಸುಖದಿರು ಎಂದರುಹಿದನು || ಕೇಳು ಸುಶೀಲ  || ೩ ||

ಭಾಮಿನಿ

ನುಡಿಯ ಕೇಳುತ ಕಂಸ ಕಂಗಳು |
ಕಿಡಿಗೆದರಿ ಝಡಿದಾರ್ಭಟಿಸಿಯಡಿ |
ಗಡಿಗೆಯೌಡೊತ್ತುತ್ತ ಶೌರಿಯ ಕಡಿವೆನೆಂದೆನುತ ||
ಮಿಡುಕಿ ಲಂಘಿಸಿ ತುರುಬ ಹಿಡಿದೆಡ |
ಗೆಡಹಿ ಖಡ್ಗವ ಚಿಮ್ಮಿ ಕೊರಳಿಂ |
ಗಿಡಲು ಮುನಿ ನಾರದನು ಕಂಠವ ಬಿಡಿಸುತಿಂತೆಂದ   || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭಳಿರೆ ಭೋಜನೃಪಾಲ ಮೂರ್ಖರ | ತಿಲಕ ವಿಷ ತುಂಬಿರುವ ಉರಗನ |
ಗಳವ ಕತ್ತರಿಸದೆಯೆ ಬಾಲವ | ಕಳಚಲೇಕೆ   || ೧ ||

ನಂದಗೋಕುಲದೊಳಗಿರುವನಾ | ನಂದಮೂರುತಿ ವಿಷ್ಣುವಿನ ಬಿ |
ಟ್ಟಿಂದು ವಸುದೇವನನು ಕೊಲುವುದು | ಚಂದವೇನೈ  || ೨ ||

ಇವನ ಕೊಲಲೋಸುವೆ ನಾ ಬಂ | ದವನೆನುತು ಜನರೆನ್ನ ದೂರರೆ |
ಜವಗೆ ತುತ್ತಾಗದಿರು ಬಿಡು ನೀ | ನವನಿಯಧಿಪ        || ೩ ||

ವಾರ್ಧಿಕ

ಋಷಿವರ್ಯನೀ ತೆರದೊಳರುಹಿಸುತ ಬಿಡಿಸಲಾ |
ಗಸಮಬಲ ಕಂಸನಾಕ್ಷಣ ಶೌರಿದೇವಕಿಗೆ |
ವಿಷಮಸಂಕಲೆ ಕಾಲಿಗವಚಿಸುತ ಬಂಧನವನೆಸಗುತಿರಲಾಗ ಮುನಿಪ ||
ಝಷ ಕೂರ್ಮ ಕ್ರೋಡ ಕನಕಸುರಹರ ಬಲಿಬಂಧ |
ಪಶುಪಾಲಕ ಸಮದಶಮುಖನಾಸ ನರಪೋಷ |
ಭಸತಾಂಗ ಕಲ್ಕಿಯೆಂದೆನುತುಸರಿ ನುತಿಸ್ಯಮರ ಋಷಿ ನಭಕ್ಕಡರೆ ಬಳಿಕ          || ೧ ||

ಭಾಮಿನಿ

ಕರುಣನಿಧಿಯನು ಸ್ಮರಿಸಿ ನಾರದ |
ತೆರಳಲಿತ್ತಲು ಕಂಸ ಕೇಶಿಯ |
ಕರೆದು ನಂದನ ಮನೆಗೆ ಹೋಗುರುತರದಿ ಹರಿಬಲರ ||
ತರಿದು ಬಾರೆಂದಟ್ಟಿಯಿತ್ತಲು |
ಭರದಿ ಸಚಿವರಿಗಾಪ್ತ ಮಾವಂ |
ತುರು ಪ್ರಬಲ ಚಾಣೂರ ಮುಷ್ಟಿಕರೊಡನೆಯಿಂತೆಂದ  || ೧ ||

ರಾಗ ಮಧುಮಾಧವಿ ಆದಿತಾಳ

ಕೇಳಿ ಸುಭಟ ಮಲ್ಲಾಳಿ ಮಂತ್ರಿಗಳು | ಪೇಳುವೆ ನಿಮಗೆಯೆನ್ನಾಲೋಚನೆಗಳು || ಕೇಳಿ      || ಪ ||

ಬಂದು ನಾರದನೆನಗಿಂದರುಹಿದ ಮಹಾ | ಸಿಂಧುಶಯನನೆನ್ನಜುಜೆಗೆ ಪುಟ್ಟಿ ||
ಮಂದಭಾಗ್ಯ ಶೌರಿಯು ನಂದಸದನದೊ | ಳಂದು ಬಾಲನ ಬಿಟ್ಟು ಬಂದನೆನುತ್ತ || ಕೇಳಿ   || ೧ ||

ಬಗೆಯರಿದು ಶೂರಾತ್ಮಜಗೆ ದೇವಕಿಯಳಿಂಗೆ | ನಿಗಳನಿಕ್ಕ್ಯವರ ಬಂಧನದೊಳಿಟ್ಟೆ ||
ವಿಗಡ ಶ್ರೀಹರಿಬಲರುಗಳ ಬರಿಸುವೆನು | ಜಗದೊಳವರ ನೀವು ಮಗುಚಿ ಕೊಲ್ಲಲು ಬೇಕು || ಕೇಳಿ     || ೨ ||

ರಾಗ ಭೈರವಿ ಅಷ್ಟತಾಳ

ಕೇಳಯ್ಯ ಕಂಸರಾಯ | ನಾವೆಲ್ಲರು | ಪೇಳುವ ಮಾತ ಜೀಯ ||
ಫಾಲಾಕ್ಷ ಪ್ರಮುಖ ಮುಖ್ಯರ ನಾವು ಗಣಿಸೆವೀ | ಬಾಲಕರಿದಿರಹರೆ || ಕೇಳಯ್ಯ    || ೧ ||

ಅಳಿಯಂದಿರು ನಿಮಗೆ | ಕೊಂದರೆ ನಮ್ಮ | ಇಳೆಯೊಳ್ ದೂರರೆ ಕಡೆಗೆ ||
ತಿಳಿದುಕದಕ್ಕಂಜಿ ಪೇಳಿದೆವು ನಿಮ್ಮಯ ಮನ | ದೊಳು ನೋಡಿ ಪೇಳಮಗೆ || ಕೇಳಯ್ಯ     || ೨ ||

ಈಸು ನಿನ್ನಯ ಮನದಿ | ಇದ್ದರೆ ಕರೆ | ಸಾ ಶಿಶುಗಳ ಜವದಿ ||
ಗಾಸಿಮಾಡುವೆವು ನಿನ್ನಾಸೆ ತೀರಿಸುತಲಾ | ದೋಷವ ನಿನಗರ್ಪಿಸಿ || ಕೇಳಯ್ಯ   || ೩ ||

ರಾಗ ಶಂಕರಾಭರಣ ಮಟ್ಟೆತಾಳ

ಧೀರಮಲ್ಲರುಗಳು ಕೇಳಿ | ನಾರದಾಂಕನೆನಗೆ ಪೇಳ್ದ |
ವಾರಿತೆಯನುಸಿರ್ವೆ ಜಗದಾ | ಧಾರ ದೇವನು ||
ಧಾರಿಣಿಯೊಳು ಜನಿಸಿ ಇಳೆಯ | ಭಾರವಿಳಿಸಲೆಂದು ಕುಲ ಸಂ |
ಹಾರ ಗೆಯ್ವನೆಂದು ಅಜಕು | ಮಾರನುಸಿರಿದ || ೧ ||

ಮುನ್ನ ದ್ರವಿಳನೆಂಬ ಖಚರ | ನೆನ್ನ ಜನನಿ ನೆರೆಯಲಾ ಸಂ |
ಪನ್ನ ಪುಟ್ಟಿದೆನು ಜಗದೊ | ಳೆನ್ನ ಬೀಜವು ||
ಇನ್ನು ಕೇಳಿ ಕಾಲನೇಮಿ | ಯೆನ್ನುತೆನಗೆ ಪೆಸರನಾದ |
ಯಾರ್ಣವನು ಪೇಳಿಯನಗೆ | ಮನ್ನಿಸಿದನು   || ೨ ||

ಕುಹುಕಿ ಯಾದವರು ಎನಗೆ | ಅಹಿತರವರು ಕೃಷ್ಣಬಲರು |
ಬಹು ಕುತಂತ್ರದಿಂದ ಬರಿಸಿ | ಜವನಿಗೊಪ್ಪಿಸಿ ||
ಸಹಸದಿಂದ ರಾಜ್ಯವಾಳೆಂ | ದ್ವಿಹಿತವಚನ ತಿಳುಹುಮರ |
ನಿವಹದೆಡೆಗೆ ಹಂಸೆಯಡರಿ | ಯಮಿಯು ಪೋದನು   || ೩ ||

ಬರುವ ಚತುರ್ದಶಿಯೊಳವರ | ಕರೆಸಿ ಕೊಡುವೆ ಹಸ್ತಿಮಲ್ಲ |
ರುರುಬಲಾನ್ವಿತರು ಕೂಡ್ಯವರ | ಶಿರವ ತರಿವುದು ||
ದುರಿತ ನಿಮಗೆ ಹೊದ್ದದೆನ್ನು | ತರುಹುತಕ್ರೂರನ್ನ ಕರೆದು |
ಕರದಿ ಪಿಡಿದು ವಿಷ್ಟರದಿ ಕು | ಳ್ಳಿರಿಸುತೆಂದನು         || ೪ ||

ರಾಗ ಸುರಟಿ ಏಕತಾಳ

ಕೇಳು ಸುಗುಣನಿಧಿಯೆ | ಯದುಕುಲ | ಮಾಲಶಿಖಾಮಣಿಯೆ ||
ಬಾಲೆ ಗಾಂಧಿನಿಯುದ ರಾಲಯಕುಮುದ ವಿ |
ಲೋಲಶಶಾಂಕ ಸು | ಶೀಲ ನೆನ್ನಯ ನುಡಿ || ಕೇಳು   || ೧ ||

ಮೃಡಸರಸಿಜಮರರು | ದೂರಲು | ಕಡಲ ಶಯನನಿದಿರು ||
ಕೊಡುತಭಯವನವ | ಪೊಡವಿಗವತರಿಸಿ |
ಕೆಡುಹುತೆಮ್ಮನು ಯದು | ಪಡೆಯ ರಕ್ಷಿಪನಂತೆ        || ೨ ||

ನಂದಸದನದೊಳಗೆ | ಬಲ ಗೋ | ವಿಂದಿಹರೆಂದೆನಗೆ ||
ಚಂದದಿ ಸುರಮುನಿ | ಯಿಂದೆನಗರುಹಿದ ||
ನಂದದಿ ಗಮಿಸಿ ನೀ | ತಂದು ನಿಲಿಸವರ || ಕೇಳು     || ೩ ||

ಬಿಲ್ಲಹಬ್ಬದ ನೆವದಿ | ಚತುರ್ದಶಿ | ಯಲ್ಲವರನು ಜವದಿ ||
ನಿಲ್ಲದೆ ಕರೆತಂ | ದಿಲ್ಲಿಗೊಪ್ಪಿಸೆ ಗುದ್ದಿ |
ಕೊಲ್ಲುವೆ ನಾ ಮನಸಲ್ಲೆರಡೆಣಿಸದೆ || ಕೇಳು  || ೪ ||

ನಿನ್ನ ತೆರದೊಳೆನಗೆ | ಆಪ್ತರು | ಇನ್ನಿಲ್ಲ ಜಗದೊಳಗೆ ||
ಎನ್ನಭ್ಯುದಯದ ಸಂ | ಪನ್ನ ನೀ ಪೋಗಲೆ |
ಪನ್ನಗಾರಿಧ್ವಜ | ನನ್ನು ಬರಿಸು ಬೇಗ || ಕೇಳು || ೫ ||

ಕಂದ

ಎಂದಾ ಮಾತಂ ಕೇಳುತ | ಗಾಂಧಿಜನೊಪ್ಪುತ ಸಂತಸ ತಾಳ್ದಾ ಕ್ಷಣದೊಳ್ ||
ಬಂದಾತನ್ಮನೆಗನಿತರೊ | ಳಂದದಿ ರವಿ ಪಶ್ಚಿಮಾಬ್ಧಿಗಿಳಿಯಲ್ ಹಂಬಲಿಸಿದಂ ||

ರಾಗ ಕೇದಾರಗೌಳ ಅಷ್ಟತಾಳ

ಧರಣೀಶ ಕೇಳ್ ಮುರಹರನ ಕಾಂಬರ್ತಿಯೊ | ಳೊರಗದೆಯಿರುಳಿನಲ್ಲಿ ||
ಮರುಗಿ ಎದ್ದೆದ್ದು ಬಂದ್ಹೊರಗೆ ಯಾದವ ಪೂರ್ವ | ಗಿರಿಯತ್ತ ನೋಡುತ್ತಲಿ || ೧ ||

ಉದಯಾದ್ರಿಗಡರಿ ಬಂದುದಿಪ ಭಾಸ್ಕರನೇಕೆ | ನ್ನಿದಿರಿಗೆ ಬರಲೊಲ್ಲನು ||
ಮಧುದ್ವೇಷಿ ಹರಿಯ ಶ್ರೀಪದವ ಕಾಣುವ ಯೋಗ | ವಿಧಿಯು ತಪ್ಪಿಸುವನೇನೋ   || ೨ ||

ತ್ರಿದಶಮೌನಿಗಳ ಸದ್‌ಹೃದಯದಿ ನೆಲಸಿಹ | ಪದುಮನಾಭನ ಪಾದವ ||
ಮುದದಿ ಕಾಂಬೆನೊ ಕಾಣದಾಪೆನೊ ಬಲ್ಲರಾ | ರಿದನು ಪುಣ್ಯೋದಯವ  || ೩ ||

ಶ್ರುತಿಗಳಾಶ್ರಯಿಸಿ ಸಂಸ್ತುತಿಸಿ ಕಾಣಿಸದ ಶ್ರೀ | ಪತಿ ಕೃಷ್ಣ ಮೂರುತಿಯು ||
ಮತಿಗೆ ಪ್ರತ್ಯಕ್ಷ ಗೋಚರಿಸಲು ಎನ್ನಂತೆ | ಕ್ಷಿತಿಯೊಳಿನ್ನಾರಿಹರು || ೪ ||

ಭಾಮಿನಿ

ಶರಣಜನಸುರಧೇನು ಕರುಣಾ |
ಕರ ಸುಧಾರ್ಮಿಕ ವಿಷ್ಣು ಶ್ರೀ ನರ |
ಹರಿಯೆ ನಿನ್ನನು ಕಂಡೆನಾದಡೆ ತಾನೆಂದ ||
ದರಣಿಪತಿ ಕೇಳ್ ಮೊದಲು ನಿನಗಾ |
ನರುಹಿದಾ ಖಳ ಕೇಶಿಯೆಂಬನ |
ತರಿದು ಹರಿಯಿರಲಿತ್ತ ಪೂರ್ವಾ ಚಲದಿ ರವಿ ಮೆರೆದ   || ೧ ||