ಕಥಾನುಸಾರ

ಪರೀಕ್ಷಿನ್ಮಹಾರಾಜನಿಗೆ ಶುಕಮಹಾಮುನಿಯು ಹೇಳುವನು : ಶ್ರೀಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿರಲು ಇತ್ತ ಮಧುರೆಯಲ್ಲಿ ಒಂದು ದಿನ ಕಂಸನು ತನ್ನ ವೈರಿಯನ್ನು ತಿಳಿದು ಬರಲು ಕಳುಹಿಸಿದ್ದ ತನ್ನ ಆಪ್ತರು ಹಿಂದೆ ಬರಲಿಲ್ಲವೆಂದು ಚಿಂತಿಸುವನು. ಅಲ್ಲಿಗೆ ನಾರದನು ಬಂದು ಕಂಸನ ಪೂರ್ವ ವೃತ್ತಾಂತವನ್ನು ತಿಳಿಸಿ ಬಿಲ್ಲಹಬ್ಬದ ನೆವದಿಂದ ಬಲರಾಮಕೃಷ್ಣರನ್ನು ಮಧುರೆಗೆ ಕರೆಸಿ ಕೊಲ್ಲುವಂತೆ ಪ್ರೇರೇಪಿಸುವನು. ಕೋಪಗೊಂಡ ಕಂಸನು ವಸುದೇವ ದೇವಕಿಯರನ್ನು ಸೆರೆಯಲ್ಲಿಟ್ಟು, ಬಿಲ್ಲಹಬ್ಬಕ್ಕೆ ರಾಮಕೃಷ್ಣರನ್ನು ಕರೆತರಲು ಅಕ್ರೂರನನ್ನು ನಂದಗೋಕುಲಕ್ಕೆ ಕಳುಹುವನು.

ಅಕ್ರೂರನು ಶ್ರೀಕೃಷ್ಣನ ದರ್ಶನಾಕಾಂಕ್ಷಿಯಾಗಿ ಬಂದು ಕಂಸನ ನಿರೂಪಣೆಯನ್ನು ತಿಳಿಸುವನು. ಕೃಷ್ಣನು ಬಲರಾಮ ಗೆಳೆಯರು ಸಹಿತ ಹೊರಡಲು ಗೋಪಿಯರು ಕೃಷ್ಣನ ವಿಯೋಗಕ್ಕಾಗಿ ಮರುಗುವರು. ಕೃಷ್ಣನು ಅವರನ್ನು ಸಂತವಿಸಿ ಮಧುರೆಗೆ ತೆರಳುವನು. ದಾರಿಯಲ್ಲಿ ಯಮುನಾ ನದಿಯಲ್ಲಿ ಅಕ್ರೂರನು ಸ್ನಾನಕ್ಕಿಳಿದು ನೀರೊಳಗೆ ಶ್ರೀಹರಿಯ ವಿಶ್ವರೂಪವನ್ನು ಕಂಡು ಸ್ತುತಿಸುವನು.

ಮಧುರೆಗೆ ಬಂದು ಶ್ರೀಕೃಷ್ಣನು ಅಕ್ರೂರನನ್ನು ಅವನ ಮನೆಗೆ ಕಳುಹುವನು. ರಾಜಬೀದಿಯಲ್ಲಿ ಬರುವಾಗ ರಜಕನೊಬ್ಬನು ಮಡಿವಸ್ತ್ರಗಳನ್ನು ಕೇಳಿದರೂ ಕೊಡದಿದ್ದುದಕ್ಕಾಗಿ ಕೃಷ್ಣನು ಅವನನ್ನು ಕೊಂದು, ಭಕ್ತಿಯಿಂದ ಎರಡು ಅಂಗಿಗಳನ್ನಿತ್ತ ಚಿಪ್ಪಿಗನೊಬ್ಬನಿಗೆ ಸಾಯುಜ್ಯವನ್ನಿತ್ತು, ತನ್ನನ್ನು ಸತ್ಕರಿಸಿದ ಸುದಾಮನನ್ನು ಅನುಗ್ರಹಿಸಿ, ಕುಬ್ಜೆಯ ಡೊಂಕನ್ನು ತಿದ್ದಿದನು. ಅವನನ್ನು ಕಂಡು ಆಬಾಲವೃದ್ಧರೂ ಅನಂದತುಂದಿಲರಾಗುವರು. ನಾರಿಯರು ಆರತಿಯೆತ್ತುವರು, ಶ್ರೀಕೃಷ್ಣನು ಮಧುರೆಯಲ್ಲಿ ಧನುರ್ಯಾಗಕ್ಕಾಗಿ ಪೂಜಿಸಿಟ್ಟ ಮಹಾಧನುಸ್ಸನ್ನು ಮುರಿದು, ತಡೆದವರನ್ನು ಗೆದ್ದು, ಇದಿರಿಸಿದ ಸೇನೆಯನ್ನು ಸಂಹರಿಸುವನು. ದೂತರಿಂದ ಇದನ್ನು ತಿಳಿದ ಕಂಸನು ಮಹಾಸೇನೆಯನ್ನು ಕಳುಹಲು ರಾಮಕೃಷ್ಣರು ಅದನ್ನು ನಾಶಗೊಳಿಸುವರು. ಅಂದಿನಿರುಳಲ್ಲಿ ಕಂಸನಿಗೆ ದುಃಸ್ವಪ್ನ ಬೀಳುವುದು. ಮರುದಿನ ಕೃಷ್ಣನು ರಂಗಸ್ಥಲದ ದ್ವಾರದಲ್ಲಿ ತನ್ನನ್ನು ತಡೆದ ಕುವಲಯಾಪೀಡವೆಂಬ ಆನೆಯನ್ನು ಕೊಂದುಹಾಕುವನು. ಚಾಣೂರನೆಂಬ ಮಲ್ಲನನ್ನು ಕೃಷ್ಣನೂ, ಮುಷ್ಟಿಕನೆಂಬುವನನ್ನು ಬಲರಾಮನೂ ಕೊಲ್ಲುವರು. ಇತರ ಮಲ್ಲರನ್ನೂ ಕೊಂದಮೇಲೆ ಕೃಷ್ಣನು ಕಂಸನನ್ನು ಮಡುಹುವನು. ಅವನ ತಮ್ಮಂದಿರು ಬಲರಾಮನಿಂದ ಸಾಯುವರು. ಆ ಮೇಲೆ ಶೋಕಿಸುವ ಕಂಸನ ಮಡದಿಯರಾದ ಹಸ್ತಿಪ್ರಹಸ್ತಿಯರನ್ನು ಸಮಾಧಾನಗೊಳಿಸಿದ ಬಳಿಕ ಕೃಷ್ಣನು ಸೆರೆಯಲ್ಲಿದ್ದವರನ್ನು ಬಿಡಿಸಿ ಉಗ್ರಸೇನನಿಗೆ ಮಧುರೆಯ ಪಟ್ಟಗಟ್ಟುವನು. ಮಾನಿನಿಯರು ಮಂಗಲಾರತಿಯೆತ್ತವರು.