ರಾಗ ಭೈರವಿ ಝಂಪೆತಾಳ
ಎಲವೋ ಗೋಪಕುಮಾರ | ನಿಲು ಎನ್ನೊಳ್ ರಣಧೀರ |
ಛಲವ ತೋರಿಸು ಭುಜದ | ಬಲವ ಬಲರಾಮ ||
ಛಲವ ತೋರಿಸಲು ಎನ | ಗಳವಲ್ಲ ನಿನ್ನೊಡನೆ |
ಬಲು ಭಟನು ನೀ ರಣದಿ | ಯೆಲೊ ಮಲ್ಲರೊಡೆಯ || ೧ ||
ಬಲ್ಲೆ ನಿನ್ನಯ ತಮ್ಮ | ಮಲ್ಲ ಚಾಣೂರನನು |
ಕೊಲ್ಲಲಿಲ್ಲವೆ ನಿನ್ನ | ಹಲ್ಲ ಕಳಚುವೆನು ||
ಹಲ್ಲ ಕಳಚುವೆನೆಂಬ | ಸೊಲ್ಲನಿನ್ನೊಮ್ಮೆ ನುಡಿ |
ಅಳ್ಳೆ ಬಿಚ್ಚಿಸುವೆ ಕೇಳ್ | ಖುಲ್ಲ ಮುಷ್ಟಿಕನೆ || ೨ ||
ಬಿಡು ಬಿಡು ಪರಾಕ್ರಮವ | ನುಡಿಯ ಬೇಡೆನುತ ಕರ |
ಹಿಡಿದೆಳೆದು ಮುಷ್ಟಿಕನು | ಜಡಿದಿಟ್ಟನೊಂದ ||
ನಿಡಿದು ಲಂಘಿಸಿ ರಾಮ | ಪಿಡಿದವನ ಕಿಬ್ಬದಿಯ |
ಹೊಡೆದಬ್ಬರಕೆ ರಕುತ | ಬುಡು ಬುಡಿಸುತಿಳಿಯೆ || ೩ ||
ತಟ್ಟಿ ಭುಜವನುಯಮಲ | ದಿಟ್ಟ ಬಲರಾಮನನು |
ಹೆಟ್ಟಿದನು ಹಡಕಿಗೊಂ | ದಿಟ್ಟ ಮತ್ತೊಡನೆ ||
ಸಿಟ್ಟಿನಲಿ ಪಲ್ ಗಡಿದು | ಕುಟ್ಟಿ ಮುಸುಡಿಗೆ ಖಳನ |
ಹೊಟ್ಟೆ ಗುಮ್ಮಿಡೆ ಮೆಟ್ಟಿ | ರಟ್ಟಿಸಿದ ರಾಮ || ೪ ||
ಮಲ್ಲ ಮುಷ್ಟಿಕ ಬಲನ | ಘಲ್ಲಿಸುತ ತುರುಬ ಹಿಡಿ |
ದುಲ್ಲಂಘಿಸುತ ಹೊಯ್ದ | ನಳ್ಳೆ ಗುಮ್ಮಿಡಲು ||
ಘುಳ್ಳು ಘಳುಘುಳಿಸ್ಯವನ | ಗಲ್ಲ ಸಂಧಿಗೆ ಹೊಯ್ದು |
ಹಲ್ಲ ಕಳಚುತ ರಕುತ | ಚೆಲ್ಲಿದನು ರಾಮ || ೫ ||
ನಡುನಡುಗಿ ಮುಷ್ಟಿಕನು | ಘುಡಿಘುಡಿಸಿ ಸೆರಗ ಹಿಡಿ |
ಹಿಡಿದೆಳೆದು ಹಲಧರನ | ಬಿಡದೆ ಧುರಕಾಗ || ೬ ||
ರಾಗ ಪಂಚಾಗತಿ ಮಟ್ಟೆತಾಳ
ಬಾರೊ ಬಾರೊ ಸಮರಕೆನ್ನೊಳು | ಬಲರಾಮ ಬೇಗ | ಬಾರೊ ಬಾರೊ || ಪ ||
ಬಾರೊ ಬಾರೊ ಕರಗಳೆರಡ | ತೋರೊ ಮಲ್ಲಯುದ್ಧ |
ಧೀರ ನೀನೆಂದೆನುತ ಸೆರಗ | ಮೀರಿ ಮೀರಿ ಹಿಡಿದು ಎಳೆದ | ಬಾರೊ || ಅ ||
ಒಡೆಯ ಕಂಸ ರಣವ ನೋಡಿ | ಬಿಡಲಿ ಸರಸವೆನುತ ಭುಜವ |
ಹೊಡೆದು ಗರ್ಜಿಸುತಲಿ ಕೈಯ | ಹಿಡಿದು ಎಳೆದ ಹಲಧರನು |
ಪೊಡವಿಯೊಳಗೆ ಕೆಡಹುತಿರಲದ | ಕಂಡ ರಾಮ |
ಬಿಡಿಸಿ ಬಂಧುಗಳನು ತುಡುಕಿದ | ಖಳನ ಮಗುಚು |
ತೊಡನೆಯಡರಿ ಮುಸುಡ ಮೆಟ್ಟಿದ | ಮತ್ತೆ ತನ್ನ |
ತೊಡೆಯ ಮೆಟ್ಟಿ ಹರಿಯ ನೋಡಿದ || ನಗುತಲಿರ್ದ | ಬಾರೊ || ೧ ||
ಮತ್ತೆ ರೋಹಿಣಿಜನ ತ | ಗ್ಗೊತ್ತಿ ತುಡುಕಿ ಖಳನು ಧೈರ್ಯ |
ವೆತ್ತು ಮುಷ್ಟಿ ಬಲಿದು ಗಗನ | ಕೆತ್ತಿ ತಿವಿದ ತಿವಿಯ ಸೈರಿ |
ಸುತ್ತ ರಾಮನವನ ಶಿರವನು || ಹೊಯ್ದ ಭರಕೆ |
ನೆತ್ತಿಯೊಡೆದು ಧರೆಗುರುಳ್ದನು | ಜವದಿ ಬಂದು |
ಕೃಷ್ಣನವನ ಎದೆಯಲೊದದನು | ಭಟನ ಜೀವ |
ವೆತ್ತ ಹೊಯಿತೆನುಲರಿಯೆನು || ನೃಪನೆ ಕೇಳು | ಬಾರೊ || ೨ ||
ಧುರವ ಕಂಡು ಬೆದರಿ ಕೆಲರ | ಲ್ಲಿರುವ ಮಲ್ಲರುಗಳು ತಮ್ಮ |
ಹರಣವುಳಿಸುವೆವೆಂದಾಗ | ಭರದಿ ಓಡುತಿರಲು ಕಂಸ |
ಸರಿದು ಪೇಳ್ದ ಕರೆದು ಅವರನು || ಕೃಷ್ಣ ಬಲರ ||
ತರಿದುಬಿಟ್ಟರವರ ಊರನು | ಗೋಕುಲವನು |
ಭರದಿ ನಿಮಗೆ ಸೂರೆಬಿಡುವೆನು | ಎನುತ ಪೇಳಿ |
ಇರದೆ ಗದ್ದುಗೆಯನು ಹೊಯ್ದನು || ಗರ್ಜಿಸಿದನು | ಬಾರೊ || ೩ ||
ಭಾಮಿನಿ
ಕೊಲ್ಲಿ ವಸುದೇವನನು ಮಕ್ಕಳ |
ನೆಲ್ಲರನು ವೃದ್ಧರನು ಕೊಲ್ಲೆಲೆ |
ಕೊಲ್ಲಿರೈ ಸಲೆ ಉಗ್ರಸೇನನನಾತನನುಜನನು ||
ಭಲ್ಲೆಯದೊಳಿರಿ ಕುಹಕಿ ಯಾದವ |
ರೆಲ್ಲರನು ಕಡಿ ಕಡಿಯೆನುತ ಪೂ |
ಮಲ್ಲ ಕೈವೀಸಲು ಮುರಾಂತಕನೆಂದ ಹಲಧರೆಗೆ ||
ರಾಗ ಮಾರವಿ ಏಕತಾಳ
ನೋಡಿದೆಯಾ | ಅಣ್ಣ | ನೋಡಿದೆಯಾ || ಪ ||
ಧುರದಿ ಚಾಣೂರ ಮುಷ್ಟಿಕರ | ಶಿರವ ನಾವ್ ಖಂಡಿಸಲಾಗೆಮ್ಮ |
ಪರಿಯ ನೋಡಿ ಬೆದರುತ್ತೆಮಗಿ | ಲ್ಲಿರುವ ಮಲ್ಲರು ||
ಭರದಿ ಓಡುತಿರಲು ಕಂಸ | ನರಿದು ಅಭಯವಿತ್ತು ನಮ್ಮ |
ಪುರವ ಸೂರೆ ಬಿಡುವೆನೆಂದು | ಕರೆದು ಕರೆದು ಪೇಳ್ದ ಮುಸುಡ | ನೋಡಿದೆಯಾ || ೧ ||
ನುಡಿಗೆ ತೆರಹಿಲ್ಲದೆ ಬಹು | ಬಡವರು ಮಲ್ಲರ ಪಡೆಯು |
ಬಿಡದೆವೋಡುವವರನಿದಕೊ | ತಡಸುತವರನು ||
ಕೊಡುತಲಭಯ ಕರೆತಾ ಹೋಗೆಂ | ದೊಡನೆ ಕಂಸನೃಪನ ದರ್ಪ |
ಜಡಿದು ಬಿಸುಡುವೆ ನೋಡೆಂದು | ನುಡಿದನು ಜಗದೊಡೆಯನಂದು | ನೋಡಿದೆಯಾ || ೨ ||
ಭರದಿ ರೋಹಿಣಿಜನಿಗೆ ಶ್ರೀ | ವರನು ಅರುಹಿ ಪೀತಾಂಬರವ |
ಸೆರಗ ಕಟಿಗೆ ಸುತ್ತಿಕೊಂಡ | ಲ್ಲಿರದೆ ಲಂಘಿಸಿ ||
ದುರುಳನೇರ್ದ ಪೀಠದಿ ಬಂದ | ಡರಲು ಗರ್ಜಿಸುತ ಖಳನು |
ತಿರುಗಿ ಸಿಡಿಲೊಲ್ ಖತಿಯಲ | ಬ್ಬರಿಸುತೆಂದನು | ನೋಡಿದೆಯಾ || ೩ ||
ರಾಗ ಶಂಕರಾಭರಣ ಮಟ್ಟೆತಾಳ
ಎಲವೊ ಕೃಷ್ಣ ಎನ್ನೊಳಿನಿತು ಸಲುಗೆಯೇನೆಲಾ |
ಛಲದಿ ಎನ್ನಾಸನವ ನೇರ್ವೆ ಕೊಲುವೆ ನೋಡೆಲಾ ||
ಸಲುಗೆಯಹುದು ಮಾವ ನಿನ್ನೊಳೆನಗೆ ದಿಟವದು |
ಒಲಿದು ಎನ್ನ ಬರಿಸಿದೇಕೆ ತಿಳುಹಿಸೆನಗದು || ೧ ||
ಬಗುಳಬೇಡ ಬಲ್ಲೆ ನಿನ್ನ ಕಪಟಿಯೆಂಬುದ |
ಮುಗುದೆ ಪೂತನಿಯನು ಕೊಂದುದೇಕೆ ಪೇಳದ ||
ಜಗದ ಜನರರ್ಭಕರುಗಳಿಗೆ ಅಗಡು ಮೊಲೆಯನು |
ವಿಗಡ ವಿಷವನಿತ್ತರಿಂದ ಮಗುಚಿ ಕೊಂದೆನು || ೨ ||
ಅದನು ಬಿಡು ಕೇಳಿತ್ತ ನಮ್ಮ ಚದುರ ಶಕಟನ |
ಮುದದಿ ಕೊಂದೆಯೇಕೆ ನಿನ್ನ ಸದೆವೆನೀ ಕ್ಷಣ ||
ವಿಧದಿ ಕಪಟದಿಂದಲೆಮ್ಮ ಸದನ ಹೊಕ್ಕಿದ |
ವದದರಿಂದ ಪದದಿ ಭಂಡಿಯೊದೆದೆ ಕೇಳದ || ೩ ||
ಘಾತಕಿಯೆ ನೀ ನಡೆವ ನಡತೆ ನೀತಿಯೇನಲಾ |
ವಾತಾಸುರನ ಕೊರಳ ತರಿದುದೇಕೆ ಪೇಳಲಾ ||
ಏತಕೆನ್ನ ಜರೆವೆ ಮಾವ ಆತನೆನ್ನನು |
ಭೀತಿಗೊಳಿಸುತಿರೆ ನಾ ಬೆದರಿ ನೀತಿ ತೊರೆದೆನು || ೪ ||
ಭಲರೆ ಬೆದರ್ವ ವೀರನಹುದು ತಿಳಿದೆ ನಿನ್ನನು |
ಮುಳಿದು ಬಕನ ಸೀಳ್ದುದೇಕೆ ಕೊಳದೊಳವನನು ||
ಖಳನು ಬಾಯ ತೆರೆದು ಎನ್ನ ಬಲಿದು ನುಂಗಲು |
ಬೆಳೆವುತವನ ಉದರ ಸೀಳ್ದು ಸೆಳೆದ ಜೀವವು || ೫ ||
ಮಲ್ಲ ವೃಷಭ ಲಘು ಕೇಶಿಯರನೆಲ್ಲ ತರಿದೆಲಾ |
ಅಲ್ಲಿ ಸವರಿ ಇಲ್ಲಿ ಬೆದರಿ ಹಲ್ಲ ಬಿಡುವೆಯ ||
ಹಲ್ಲ ಬಿಡಿಸುವೆನು ನೋಡೆಂದು ಮಲ್ಲ ಕಂಸನ |
ಘಲ್ಲಿಸುತ್ತ ಹಿಡಿದು ಎಳೆದ ಕೃಷ್ಣನಾ ಕ್ಷಣ || ೬ ||
ರಾಗ ಭೈರವಿ ಏಕತಾಳ
ಈ ತೆರದಲಿ ಪಿಡಿವುತಲಿ | ರೋ | ಷಾತುರನಾಗಿ ದೂಡತಲಿ ||
ಕಾತರದಿಂದೆದೆಗಡರಿ | ಒದ್ದ | ನಾ ತತ್ಕ್ಷಣಕಸುರಾರಿ || ೧ ||
ಮಾತೆ ಪಿತರಿಗಿವನಿಂದು | ಬಲು | ಯಾತನೆಬಡಿಸಿದನೆಂದು ||
ಮಾತುಳ ಕಂಸನ ಕೊಂದು | ಪ್ರ | ಖ್ಯಾತಿಯೊಳೆಳೆದನಂದು || ೨ ||
ಓಡುವರನು ಕರೆ ಕರದು | ಕರ | ನೀಡುತಲಭಯವನೊರೆದು ||
ಗಾಢದಿ ಪುರಗಳ ಬಲವ | ಹಲು | ನೋಡುತ ನಿಲಿಸಿದ ಭಯವ || ೩ ||
ಭಾಮಿನಿ
ಅರಸ ಕೇಳನವರತ ವೈರೋ |
ತ್ತರದ ಭಯಭಾರದಲಿ ನೆನೆ ನೆನೆ |
ದಿರುಳು ಹಗಲೋರಂತೆ ತನ್ಮಯನಾಗಿ ಮೂಜಗವ ||
ಬೆರೆಸಿ ಕಾಣುತ ಕಂಸನಾ ಮುರ |
ಹರನ ಸಾರೂಪ್ಯವನು ಪಡೆದನು |
ಪರಮ ಭಕ್ತರಿಗಿನ್ನು ದುರ್ಲಭವೇನು ಕೇಳೆಂದ || ೧ ||
ಕಂದ
ಧರಣಿಪ ಕೇಳಮರಾರಿಯು | ಮುರಹರನೊಳ್ ಬೆರಸುತ್ತಿರಲವನರ್ಧಾಂಗಿಯ ||
ರೀರ್ವರು ಬಂದವನಂಗದಿ | ಮರುಗುತ ಬಿದ್ದುರೆ ಬಾಯ್ಬಿಟ್ಟಳಲಿದರಾಗಳ್ || ೧ ||
ರಾಗ ನೀಲಾಂಬರಿ ತ್ರಿವುಡೆತಾಳ
ಲಾಲಿಸೆಮ್ಮಗಲಿ ಪೋದೆಯೊ ಕಾಂತ | ಯಾಕೀ | ಧೂಳಿಯೊಳೊರಗಿದೆಯೈ ವ್ಯರ್ಥ ||
ಬಾಳಲಾರೆವು ನಿನ್ನ ಕ್ಷಣ ಬಿಟ್ಟು | ಬೇಗ | ಏಳು ಧೈರ್ಯವ ಪೇಳಭಯಗೊಟ್ಟು || ೧ ||
ಶಿಶು ಪಶು ದ್ವಿಜರ ಹತ್ಯವನೆ | ಮಾಡಿ | ವಸರಿ ಹಾರಿತು ನಿನ್ನಾಯುಷ್ಯವ ||
ರಸೆಯೊಳೀ ಪರಿಯಾಯ್ತು ನಿನಗೆ | ಎದ್ದಿ | ನ್ನುಸಿರುವಲ್ಲಭನೆ ಬುದ್ಧಿಯೆಮಗೆ || ೨ ||
ಸಕಲಾಂತರ್ಯಾಮಿ ಮಾಧವ ನಿನ್ನ | ಬಹು | ಶಕುತಿಗಂಜುವನೆ ಕೇಳ್ ಸಂಪನ್ನ ||
ಮುಕುತಿಗಯ್ದಿದೆಯೆಂತಾದರು ದೇವ | ಮುಂದೆ | ಯುಕುತಿ ಪೇಳೆಮಗೆ ಮಹಾನುಭಾವ || ೩ ||
ಮುಗುದೆಯರೀರ್ವರು ಅಳಲುತ್ತ | ಕೂಗಿ | ನಿಗಮಗೋಚರಗೆ ಪೇಳ್ದರು ಮತ್ತಾ ||
ಜಗದೀಶನೆಮ್ಮ ವೈಧವ್ಯವ | ನೋಡಿ | ಸೊಗಸಾಯಿತಯ್ಯೊ ನಿನಗೆ ದೇವ || ೪ ||
ಮುನ್ನಿನ ಹಗೆಯ ಸಾಧಿಸಿದೆಯ | ಕೃಷ್ಣ | ಇನ್ನಾವ ಬಯಕೆಯುಂಟೆಲೊ ದೇವ ||
ಅನ್ಯರೆ ನಿನಗೆ ನಾವೆನ್ನುತ | ಶೋಕ | ವನ್ನು ತಾಳ್ದಳಲಿದರ್ ಪೊರಳುತ || ೫ ||
ಭಾಮಿನಿ
ಧರಣಿಪತಿ ಕೇಳ್ ಮಗಧಭೂಪನ |
ತರಳೆ ಹಸ್ತಿಪ್ರಹಸ್ತಿಯೆನಿಪರು |
ಮರುಗುತಿರಲಾಗನಿತರೊಳು ನರಕಾಂತಕನು ದಯದಿ ||
ಅರುಹಿದನು ಕೇಳತ್ತೆಯರಿರಾ |
ಬರೆಹ ಮೀರುವರಾರು ಜಗದೀ |
ಶ್ವರನ ತಂತ್ರವಿದೆಂದವರ ಸಂತವಿಸಿದನು ನಯದಿ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಸ ಕೇಳ್ ಕಂಸಾಖ್ಯನೀ ಪರಿ | ಹರಿಯ ಕರಸಂಸ್ತುತ್ಯದಲಿ ಮೆರೆ |
ದಿರುವ ವೈಕುಂಠಕ್ಕೆ ಗಮಿಸು | ತ್ತಿರಲಿಕಿತ್ತ || ೧ ||
ತುಂಟರವನನುಜರುಗಳವರೆಂ | ಬೆಂಟು ಜನರನು ರಣದಿ ಹಲಧರ |
ಕಂಠವನು ಬಿಗಿದೊತ್ತಿ ಕೊಂದನು | ತುಂಟರವರ || ೨ ||
ಅವರವರ ತರುಣಿಯರು ಬಾಯ್ ಬಿ | ಟ್ಟೊರಲಿ ಗೋಳಿಡುತಿರಲು ಲಕ್ಷ್ಮೀ |
ವರನು ಸಂತವಿಸಿದನು ಜ್ಞಾನವ | ನರುಹಿ ದಯದಿ || ೩ ||
ಬೆದರಿ ಕಂಸನ ಭಯದೊಳೋಡಿದ | ಯದುವರರಿಗಭಯವನು ಪಾಲಿಸಿ |
ಮುದದಿ ಕರೆಸುತ್ತವರವರ ಸದ | ನಗಳ ಕೊಡಿಸಿ || ೪ ||
ಕನಕ ವಸನವ ಧನ ಪಶು ವ್ರಜ | ವನಿಗೆ ಗೃಹ ಸಾಮ್ರಾಜ್ಯಭಾಗ್ಯವ |
ಸನುಮತದಿ ಕರುಣಿಸಿದನವರಿಗೆ | ಹರಿಯು ದಯದಿ || ೫ ||
ರಾಗ ಕೇದಾರಗೌಳ ಅಷ್ಟತಾಳ
ಅಂದು ಧೈರ್ಯವನು ಗೋವಿಂದ ಯಾದವರಿಗಾ | ನಂದದಿ ಪಾಲಿಸುತ ||
ಬಂದಿಯೊಳಿಹ ತಾಯಿತಂದೆಯರೆಡೆಗೆ ತಾ | ಬಂದನು ಜವಗೊಳುತ || ೧ ||
ಕಂದಿದಾನನವನೀಕ್ಷಿಸುತಳುವವರ | ಬಂದಿ ಸಂಕೋಲೆ ತೆಗೆಸಿ ||
ಚಂದದಿಂ ಉಗ್ರಸೇನನ ನಿಗಳವನು ತಾ | ನಂದು ಇಕ್ಕಡಿಗೆಯ್ಸಿದ || ೨ ||
ಹೆಡಗಯ್ಯ ಬಿಗಿದ ದೇವಕನ ನೇಣನೆ ತಾನು | ಕಡಿದು ಗೋವಿಂದ ಬೇಗ ||
ಒಡನೆ ದುಃಖಿಸಿ ತಾಯಿ ತಂದೆಯರಡಿಗಳ | ಹಿಡಿದಳಲಿದನಾಗ || ೩ ||
ಪಡೆದವರೊಡನೆ ನಾನಿರದೆ ನಿಮ್ಮೆಲ್ಲರ | ಬಿಡಲುಚಿತವೆ ಕೇಳೀಗ ||
ಕಡು ದುಷ್ಟನೆಂದೆನ್ನ ಪೊಡವಿಯ ಜನರೆಲ್ಲ | ನುಡಿದು ದೂರುವರೆನ್ನೀಗ || ೪ ||
ಹರಿ ಬಲರಾಮರೀರ್ವರು ತಮ್ಮ ಕಣ್ಣೀರ | ಸುರಿದು ದುಃಖಿಸುತ್ತಿರಲು ||
ಮರುಗಿ ದೇವಕಿವಸುದೇವರೀ ತರುಣರ | ಭರದಿ ಬಂದಪ್ಪಿದರು || ೫ ||
ವಿಗಡ ಪಾತಕಿಗಳಾವಲ್ಲವೆ ನಿಮ್ಮಂಥ | ಸುಗುಣದರ್ಭಕರ ಬಿಟ್ಟು ||
ನಿಗಳಕ್ಕೆ ಸಿಕ್ಕಿ ನಾವು ಪಡೆದ ಸೌಭಾಗ್ಯಕ್ಕೆ | ಜಗದೊಳಿನ್ನಾರಿಗುಂಟು || ೬ ||
ಇರಲಾ ಮಾತೆನುತಾ ದೇವಕಿ ತಮ್ಮ ತರಳರ | ಕರೆದು ಸಂತೋಷದೊಳು ||
ಭರದೊಳೀರ್ವರ ತನ್ನ ತೊಡೆಯ ಮೇಲಿರಿಸಿ ತಾ | ನಿರದೆ ಮುದ್ದಾಡಿದಳು || ೭ ||
ರಾಗ ಕಾಂಭೋಜಿ ಏಕತಾಳ
ಮಕ್ಕಳ ಮುದ್ದಾಡಿದಳಾಗ | ದೇವಕಿ ತನ್ನ | ಮಕ್ಕಳ ಮುದ್ದಾಡಿದಳಾಗ || ಪ ||
ಬಾರೊ ಇತ್ತ ಎಲೊ ರಂಗಧಾಮ | ಬಾ ಬಾ ಬಲರಾಮ |
ತಾರೊ ಮುತ್ತ ರಣರಂಗಭೀಮ || ಶ್ರೀಕೃಷ್ಣ ಮೊಗವ ತೋರಯ್ಯ |
ನೀಲಮೇಘಶ್ಯಾಮ | ಸುರಸಾರ್ವಭೌಮ || ೧ ||
ಇಂದೆನ್ನ ಸೌಭಾಗ್ಯದಾನಂದ | ಬಾರೊ ಗೋವಿಂದ |
ಚಂದದಿಂದಪ್ಪುವೆನು ನೋಡೆಂದ || ಬ್ರಹ್ಮಾದಿವಂದ್ಯ |
ಎಂದೆಂದಿಗುಯೆನ್ನೊಡನಿರು ಕಂದ | ಬಾರೊ ಮುಕುಂದ || ೨ ||
ಅತ್ತಿತ್ತ ಹೋಗದಿರು ರಂಗಯ್ಯ | ಮುತ್ತ ತಾರಯ್ಯ |
ಎತ್ತಿಕೊಂಬೆನಿತ್ತ ಬಾರಯ್ಯ | ಯಾದವರಾಯ |
ಒತ್ತಿನನುಜ ಬಲರಾಮಯ್ಯ | ಗೋವಿಂದರಾಯ || ೩ ||
ಕಷ್ಟಬಟ್ಟೆವು ಕೇಳೊ ರಂಗ | ನೋಡೆಮ್ಮ ಅಂಗ |
ದುಷ್ಟನೆಸಗಿದ ಮಾನಭಂಗ || ನೀನಿಂದು ಕಳೆದು |
ಇಷ್ಟ ಸಲಿಸಿದೆ ಮೋಹನಾಂಗ | ದಯದಿ ಕೃಪಾಂಗ || ೪ ||
ಎನುತ ದೇವಕಿಯು ಕೃಷ್ಣನ | ಬಾಯೊಳು ತನ್ನ |
ಘನದ ಮೊಲೆಯಿಡುತಲಿಯಾತನ || ನೆತ್ತಿ ವಾಸನಿಸೆ |
ಅನಿಮಿಷರ್ ಶಿರದ ಮೇಲೆ ಹೂವಿನ | ಮಳೆ ಸುರಿಸಿದಾರಾಗ || ೫ ||
ರಾಗ ಸಾಂಗತ್ಯ ರೂಪಕತಾಳ
ಈ ತೆರದಲಿ ಮುದ್ದಾಡುತಲಿರಲಾಗ ಶ್ರೀ | ಪತಿಯುಗ್ರಸೇನನಿಗೆ ||
ತಾ ತಡೆಯದೆ ಎರಗುತಲೆಂದ ಮಧುರೆಯ | ನಾಥನಾಗೆಂದು ನೇಮಿಸಿದ || ೧ ||
ಹರಿಯನಪ್ಪುತಲುಗ್ರಸೇನ ಪೇಳಿದ ಮುನ್ನ | ಹಿರಿಯ ಯಯಾತಿಯೆಂಬವನು ||
ಮೆರೆವ ವಿಷ್ಟರವನೇರದಿರೆಂದು ಶಪಿಸಿದ | ಧರೆಯ ನಾನೆಂತು ಆಳುವೆನು || ೨ ||
ಎನಲು ಶ್ರೀಕೃಷ್ಣ ಪೇಳಿದನುಗ್ರಸೇನಗೆ | ಮನದಿ ಚಿಂತಿಸದೆ ನೀನರಸ ||
ಘನಪಟ್ಟ ವರಿಸು ನಾನಿರುವೆ ನಿನ್ನೊಳಗೇನ | ನನುಮಾನಿಸದೆಯೇರಾಸನವ || ೩ ||
ಭಾಮಿನಿ
ಆ ಯಯಾತಿಯ ಶಾಪ ಕುಳ್ಳಿರಿ |
ಲೀಯದಿನ್ನೆಗ ನಮ್ಮ ಯಾದವ |
ರಾಯನನು ರಾಜಾಸನಾಗ್ರದಲಿನ್ನು ತಾನೆಂಬ ||
ಜೀಯ ಭೃತ್ಯನಿರಲ್ಕೆ ನಿನಗ |
ನ್ಯಾಯವಲ್ಲಂಜದಿರು ನಿರ್ಜರ |
ರಾಯರೆರಗುವರುಳಿದ ರಾಯರ ಮಾತದೇಕೆಂದ ||
ವಾರ್ಧಿಕ
ಅರುಹಿ ಧೈರ್ಯವನು ಮುರಹರನವಗೆ ನವರತ್ನ |
ಭರಿತವಾಗಿರುವ ಸಿಂಹಾಸನವನಡರಿಸುತ |
ಪುರದ ಪ್ರಜೆ ಪರಿವಾರ ಮಂತ್ರಿಜರನ್ನು ತಾ ಬರಿಸಿ ಶ್ರೀಹರಿಯು ಮುದದಿ ||
ಮೆರೆವ ಪೀತಾಂಬರದ ಸೆರಗ ಸೊಂಟಕೆ ಸುತ್ತಿ |
ನರರಂತೆ ಓಲಯಿಸುತಿರುತ ಕೈಗಾಣಿಕೆಯ |
ತರಿತರಿಸಿ ತೋರಿಸುತ ಅರಸಗಾರತಿ ಬೆಳಗಲರುಹಿದನು ನಾರಿಜನಕೆ || ೧ ||
ರಾಗ ಢವಳಾರ ತ್ರಿವುಡೆತಾಳ
ಸುದತಿಯರೆಲ್ಲ ಕೂಡುತಲಿ | ಮಧುಸೂದನನ ನೇಮದಲಿ |
ವಿಧವಿಧ ರತ್ನದ ಸರಗಳನಿಡುತ | ಪದಕದೆಡೆಯ ಕುಚ ಹರಿಗೆ ತೋರಿಸುತ ||
ಮುದದಿ ಬರುತ ಮಧುರೆಯನಾಳುವ ಮಹಾ |
ಚದುರಗಾರತಿಯ ಬೆಳಗಿರೆ || ಶೋಭಾನೆ || ೧ ||
ಮೆರೆವ ಜವ್ವನದ ನಾರಿಯರು ಶ್ರೀ | ವರನು ಪಾಲಿಸುವನೆಂದವರು |
ತ್ವರಿತದೊಳೊಬ್ಬರೊಬ್ಬರ ದೂಡುತಲಿ | ಭರದಿ ಬಂದರು ಆರತಿಯ ನೆವದಲಿ ||
ಹರಿಯ ನೋಡುತ ಮರುಳಾಗಿ ತಾವು ಮಧುರೆಯ |
ಅರಸಗಾರತಿಯ ಬೆಳಗಿರೆ || ಶೋಭಾನೆ || ೨ ||
ಲಜ್ಜೆ ನಾಚಿಕೆಯನ್ನು ತೊರೆದು | ಸಜ್ಜಿನಾಭರಣದಿ ಮೆರೆದು |
ಕಜ್ಜಳ ಕಣ್ಣಿಗಿಡುತ ಬಹು ಬೇಗ | ತಜ್ಜಣರೆನುತ ಹೆಜ್ಜೆಯನಿಡುತಾಗ ||
ಅಜ್ಜನು ನಿಮಗೆನುತುಗ್ರಸೇನನಿಗೆ ಮಹಾ |
ವಜ್ರದಾರತಿಯ ಬೆಳಗಿರೆ || ಶೋಭಾನೆ || ೩ ||
ವಾರ್ಧಿಕ
ಅರಸ ಕೇಳ್ ಹರಿಯ ಕರುಣದಿ ಮಧುರೆಯೊಳಗಿರುವ |
ಮೆರೆದು ಮುಪ್ಪಡರಿ ಚರ್ಮವು ಜೋಲುವರು ಎಳೆಯ |
ಹರೆಯದಂತವರಾಗೆ ಸರಸ ಸೌಭಾಗ್ಯದೊಳಗಿರಲನಿತರೊಳಗೆ ಹರಿಯು ||
ಕರೆದನಾ ನಂದಗೋಪಗೆ ಒರೆದು ಗೋಕುಲಕೆ |
ತೆರಳೆನಲು ನಿನ್ನ ನಾ ತೊರೆದು ಇರೆನೆಂದು ಬಹು |
ಮರುಗಿ ದುಃಖಿಸಲು ಮುರಹರನು ತಾ ಸಂತವಿಸಿ ಮರಳಿಸಿದನವನ ಪುರಕೆ || ೧ ||
ಹರಿಕಥಾಮೃತವ ಶುಕಯೋಗಿಯು ಪರೀಕ್ಷಿತಂ |
ಗೊರದಂದದೀ ಕಥೆಯ ನಾನೊರೆಯಲಸದಳು |
ತರಳ ನಾ ತಿಳಿದನಿತ ಪೇಳ್ದೆನಿದರೊಳಗನಂತಾನಂತ ದೋಷವಿರಲು ||
ಕರುಣದಿಂ ಕ್ಷಮಿಸಿ ಸಾಮ್ರಾಜ್ಯ ಸೌಭಾಗ್ಯ ಸಂ |
ಪದಮಾಯುರಾರೋಗ್ಯ ಮೈಶ್ವಯೃಮಿತ್ತೆನಗೆ |
ಪೊರೆಯೋ ವಳಲಂಕೆ ಶ್ರೀಗುರು ವೇಂಕಟನೆ ರಮಾರಮಣನೆನ್ನನು ಪಾಲಿಸು || ೨ ||
ವಚನ
ಈ ತೆರದೊಳು ಸೌಭಾಗ್ಯವನೀವ ಲಕ್ಷ್ಮೀಪತಿಯಂ ನೆನೆನೆನೆದು ದೇವಾಂಗನೆಯರು ಸುಸ್ವರದಿ ಹರಿಗೆ ಮಂಗಳಾರತಿಯೆತ್ತಿ ಪಾಡಿದರದೆಂತೆನೆ –
ಮಂಗಲ
ರಾಗ ಢವಳಾರ ಆದಿತಾಳ
ಜಯ ಮಂಗಳವೆನ್ನಿ ಶ್ರೀಮಾಧವಗೆ || ಗೋವಿಂದ ಹರಿಗೆ |
ಜಯ ಜಯ ದಯಾಸಾಗರ ಚಿನ್ಮಯಗೆ |
ಮ್ಮಯ ತಾಪತ್ರಯ ಭಯ ಪರಿದವಗೆ | ಜಯ ಮಂಗಳವೆನ್ನಿ ಶ್ರೀಮಾಧವಗೆ || ಪ ||
ಸಿಂಧುಶಯನ ಸರ್ವೋತ್ತಮಗೆ | ವಿಧಿಭವರೊಂದಾಗಿ |
ವೃಂದಾರಕರೆಲ್ಲರ ನೆರಹಿಸಿ ಮನ | ನೊಂದುಕೊಳುತ ಕ್ಷೀರಾಂಬುಧಿಗೆ |
ಬಂದರಿಕೆಯ ಗೆಯ್ಯಲಾಗ ಗೋವಿಂದ ಗಳಿಗೆ |
ನಂದ ಗೋಕುಲದೊಳಾನಂದದೊಳುದಿಸುತ | ನಂದಕುವರನೆಂದೆನಿಸಿದಗೆ ||
ಅಂದು ಪೂತನೀಯನು ಕೊಂದು ಶಕಟನ ಕೆಡೆ |
ವಂದದಿ ಚರಣಗಳಿಂದೊದೆವುತ್ತಹಿ | ಯಂದದಿ ಕಪಟದಿ ಬಂದ ಅಘಾಸುರ |
ನಂದಗೆಡಿಸಿ ಬೇರೊಂದಾಕೃತಿಯೊಳ | ಯ್ತಂದ ವಾತಾಸುರನೆಂದಿರುವ ಕಟಿ |
ಸಂದ ಕಳಚಿದ ಮುಕುಂದ | ಸುಂದರಾಂಗ ಮೂರುತಿಗೆ ||
ಜಯ ಮಂಗಳವೆನ್ನಿ ಶ್ರೀಮಾಧವಗೆ || ೧ ||
ಸುಳ್ಳಿಗೆ ಮಣ್ಣ ಮೆದ್ದು ನಗುತ | ಬಾಯಿ ಕಳೆದಾಡುತ |
ಘಲ್ಲಿಸಿ ಬ್ರಹ್ಮಾಂಡವನು ಯಶೋದೆಗೆ | ಎಲ್ಲವದರೊಳು ತೋರಿಸುತ |
ಬಲ್ಲಿದ ಬಕನ ಉದರವ ಹೊಗುತ | ಸಿಗಿದಾಕ್ಷಣ ಪೊರಡುತ |
ಗೊಲ್ಲಹುಡುಗರೊಳು ಕಲ್ಲಿಕೂಳುಣುತಲಿ | ನಲ್ಲೆ ಗೋಪಿಯರನು ಮೋಹಿಸುತ ||
ಕೊಲ್ಲುತ ಮಧುರೆಯೊಳಲ್ಲಿ ರಜಕನನು | ಬಿಲ್ಲ ಮುರಿದು ಮತ್ತಲ್ಲಿ ಗಜೇಂದ್ರನ |
ಹಲ್ಲ ಕಳಚಿ ಮಹಮಲ್ಲರ ರಣದಲಿ | ಚೆಲ್ಲಿ ಬಡಿದು ಸುರದಲ್ಲಣ ಕಂಸನ |
ಹಲ್ಲ ಕಳಚಿ ಪುರದೊಲ್ಲಭನುಗ್ರಸೇನಲ್ಲಿಟ್ಟಿಹ ಶ್ರೀನಲ್ಲ | ಬಿಲ್ಲ |
ನಮ್ಮೆಲ್ಲರ ವೊರೆವವಗೆ | ಜಯ ಮಂಗಳವೆನ್ನಿ ಶ್ರೀಮಾಧವಗೆ || ೨ ||
ಶರಧಿಯೊಳಾಡಿ ಮಂದರ ಕಡೆದು | ಹಿರಣಾಕ್ಷನ ಬಡಿದು |
ತರಳಗೊಲಿದು ಚರಣಗಳೆಳೆವುತ ಮಹಿ | ಪರಶುವಿಡಿದು ಕಪಿಗಳ ಬೆರೆದು |
ತುರುವಿಂಡೆಬ್ಬುತ ಸತಿಯರ ನೆರೆದು | ತುರಗಡರುತ ನಲಿದು ||
ವರವಳಲಂಕೆಯೊಳಿರುವ ಶ್ರೀ ವೇಂಕಟೇಶ್ವರನೆಮಗಮೃತ |
ಸುರಿಸುರಿದು ಪೊರೆವುತಜಗೆ ಶ್ರುತಿ ಕರೆದೀವುತ |
ಗಿರಿ ಧರಿಸಿ ಪಾದದಿ ನೆಲ ಕೊರೆದು ಖಳನಸಿ |
ಯರೆದು ನಯನವೊಂದಿರಿದು ಜನಪರನು |
ತರಿದು ಕೋಡಗರೊಳಸರಿದು ಮಾವನ ಗೋಣ | ಮುರಿದು ವಸನವನ್ನು |
ತೊರೆದು ರಾವುತನಾಗಿ ಮೆರೆದು ಕರೆದು ದಯ |
ವೆರೆದು ಪೊರೆವ ಶ್ರೀರಮಾರಮಣನಿಗೆ || ಜಯ ಮಂಗಳವೆನ್ನಿ ಶ್ರೀಮಾಧವಗೆ || ೩ ||
ಎರಡನೆಯ ಸಂಧಿ ಕಂಸವಧೆ ಮುಗಿದುದು
Leave A Comment