ಮೊದಲನೆಯ ನೋಟ : ಬಾಲಕೇಳಿ

ನಾರಾಯಣಂ ನಮಸ್ಕೃತ್ಯ ನರಂಚೈವನರೋತ್ತಮಮ್ |
ದೇವೀಂಸರಸ್ವತೀಂ ವ್ಯಾಸಂ ತತೋಜಯ ಮುದೀರಯೇತ್ ||1||

ನಾರಾಯಣಂ ಸುರಗುರುಂ ಜಗದೇಕಾನಾಥಂ |
ಭಕ್ತಪ್ರಿಯಂ ಸಕಲಲೋಕ ನಮಸ್ಕೃತಂಚ ||
ತ್ರೈಗುಣ್ಯವರ್ಜಿತಮಜಂ ವಿಭುಮಾದ್ಯಮೀಶಂ |
ವನ್ದೇಭವಘ್ನ ಮಮರಾಸುರ ಸಿದ್ಧವಂದ್ಯಂ ||2||

ರಾಗ ದೇಸಿ ಏಕತಾಳ

ಪಾಲಿಸಂಬ ಮಹೇಂದ್ರ ಪೂಜಿತೇ | ಕಾಲಕರ್ಮ ವಿಭ್ರಾಜಿತೇ ||
ಬಾಲಕೇಳಿವಿಲೋಲೆ-ಮಾನಿತೇ | ನೀಲವೇಣಿ-ಸದಾನುತೇ || ಪಾಲಿಸಂಬ ||3||

ಸಾರಶಾಸ್ತ್ರ ವಿರಾಜಿತೇ ವಿದ್ | ಪೂರಿತೇ-ಸುರಪೂಜಿತೇ ||
ಪಾರಮಾರ್ಥ ಸುಚಾರಿತೆ | ಸಂಸಾರಿತೇ-ಸದ್ ಭಾವಿತೇ ಪಾಲಿಸಂಬ ||4||

ವಂದಿಸುವೆ ನಿಜಪದಕೇ | ಪೂರ್ಣೇಂದುವದನೇ-ಗುಣಸದನೇ |
ಕುಂದರದನೆ ಗೀರ್ವಾಣಿ ಪೊರೆ | ಸೌಂದರೀ-ಮಂತ್ರಾಕ್ಷರೀ || ಪಾಲಿಸಂಬ ||5||

ರಾಗ ಕೇತಾರಗೌಳ ತ್ರಿವುಡೆತಾಳ

ತಿರೆಗೆ ಪಂಚಮ ವೇದವೆನಿಸಿದ | ವರಮಹಾಭಾರತದ ಕಥೆಯನು |
ಧರಣಿಪತಿ ಜನಮೇಜಯಾಖ್ಯಗೆ | ಹರುಷದಿಂದಾ ||6||

ಮುನಿಪ ವೈಶಂಪಾಯನರುಹಲು | ಜನಪನಾತುರದಿಂದ ಕೇಳಿದ |
ನೆನಗೆ ಕರುಣಿಸು ಹಿರಿಯರಾಟದ | ವಿನುತಕಥೆಯಾ ||7||

ಎಂತು ಪಾಂಡವ ಕೌರವಾದ್ಯರು | ಪಿಂತೆ ಗುರಕುಲದೊಳಗೆ ಪಠಿಸಿದ |
ರೆಂತು ಸಾಹಸ ತೋರ್ದರವದಿರು | ಸಂತ ಪೇಳೈ ||8||

ಎಂದು ಮುನಿಪದಕೆರಗೆ ಭೂಮಿಪ | ಗಂದುಪೇಳಿದ ಬಾದರಾಂುಣ |
ನೆಂದ ಭಾರತದಾದಿ ಕತೆಯನು | ಚಂದವಾಗಿ ||9||

ಸ್ಥಳ :- ಹಸ್ತಿನಾವತಿಯ ಅರಮನೆಯ ಸಭಾಸದನ.

ಪ್ರವೇಶ :- ಧತರಾಷ್ಟ್ರ, ಗಾಂಧಾರಿ, ಭೀಷ್ಮರು, ವಿದುರ, ಕೌರವಾದಿಗಳು [ಧತರಾಷ್ಟ್ರನ ಮಕ್ಕಳಾದ ದುರ್ಯೋಧನ, ದುಶ್ಯಾಸನಾದಿಗಳು] ಮತ್ತು ಪಾಂಡವರು [ಪಾಂಡು ಚಕ್ರವರ್ತಿಯ ಮಕ್ಕಳಾದ ಧರ್ಮರಾಯ, ಭೀಮ, ಅರ್ಜುನಾದಿಗಳು] ಇತರ ಸಭಾಸದರು. ಧೃತರಾಷ್ಟ್ರಮಹಾರಾಜನ ಎಡಭಾಗದಲ್ಲಿ ಗಾಂಧಾರಿಯೂ, ಮುಂಭಾಗದಲ್ಲಿ ಕೌರವಾದಿಗಳೂ ಇರುವರು. ಉಭಯ ಪಾಶ್ವಗಳ ಪೀಠದಲ್ಲಿ ಭೀಷ್ಮರು, ವಿದುರ, ಸಂಜಯಾದಿಗಳಿರುವರು, ಭೀಷ್ಮರ ಮುಂಭಾಗದಲ್ಲಿ ಧರ್ಮರಾಯಾದಿ ಪಾಂಡವರಿರುವರು.

ಕಂದ

ಕರಿಪುರದೊಳ್ ಧತರಾಷ್ಟ್ರಂ |
ಧರಣಿಯ ಗಂಗಾತ್ಮಜ ವಿದುರರ್ಕಳ ನೆರವಿಂ ||
ಪರಿಪಾಲಿಸುತಿರೆ ತನ್ನಪ |
ತರಳರ್ ಪಾಂಡವ ಕುಮಾರಕರ್ ಸಹಿತೊಡನಂ ||10||

ರಾಗ ಕಾಂಭೋಜಿ ಝಂಪೆತಾಳ

ಧರಣಿಪತಿ ಧೃತರಾಷ್ಟ್ರಮುದ್ದಿಸುತ ತರಳರನು |
ಕರವಿಡಿಯುತಂಕದೊಳಗಿರಿಸೀ ||
ಹರುಷಮಿಗೆ ಗಾಂಧಾರಿ ಸಹಿತವನು ಕುಳ್ಳಿರ್ದ |
ಸುರನದಿಯಸುತ ವಿದುರರೊಡನೇ ||11||

ಸೋಮಕುಲ ತಿಲಕನತಿ ಬಲವೀರ್ಯ ಪಾಂಡುನಪ |
ಕಾಮನುರುಬೆಗೆ ಸಿಲುಕಿ ಮಡಿಯೇ ||
ಭೂಮಿಪನ ಬಾಲಕರ ತೋಳತೊಟ್ಟಿಲೊಳಿಟ್ಟು |
ಪ್ರೇಮದಿಂ ಸಲಹುತಿರೆ ಭೀಷ್ಮಾ ||12||

ಕುರುವಂಶದರ್ಭಕರ ನೆರವಿಯನು ಕಾಣುತ್ತೆ |
ಬರಸೆಳೆದು ಬಿಗಿದಪ್ಪುತವರಾ ||
ಸರಸ ವಚನದೊಳೆಂದ ಧರ್ಮಜನ ಮೊಗನೋಡಿ |
ಕಿರಿಯ ಮರಿಗಳೆ ನೀವು ನಿರತಾ ||13||

ದುರ್ವಚನ ಸಟೆ ಕಪಟ ಮರೆಮೋಸ ವಂಚನೆಯು |
ದುರ್ವಿಷಯ ಚಿಂತನೆಯ ತೊರೆದೂ ||
ನಿರ್ವೈರದಿಂದಾಟಪಾಟಗಳನೆಸಗುತ್ತ |
ಲಿರ್ವುದೆನೆ ಕೌರವನು ಪೇಳ್ದಾ ||14||

ದುರಳ ನೀ ಭೀಮನಿದೊ ಕೇಳಜ್ಜ ಬಡಿದೆಮ್ಮ |
ಪೊರಳಿಸುತೆ ತಿನಿಸುಗಳನೆಲ್ಲಾ ||
ತಿರಿತಿರಿದು ತಿಂದೆಮ್ಮ ವಸನಗಳ ಹರಿದಿಟ್ಟ |
ಪರಿಯನಿದ ನೋಡಜ್ಜ ನೋಡೂ ||15||

ಎನೆ ಪವನಸುತನೆಂದ ನೀ ಕುಹಕಿ ಕೌರವನು |
ಯೆನಗಿಕ್ಕಿದೆಲೆಗುಗುಳೆ ಧೂರ್ತಾ ||
ತಿನಿಸೆಂಜಲಾಗಿರಲು ತಿಂಡಿಗಳ ನಾ ತೆಗೆದೆ |
ನಿನಿತು ನಿಜ ಬೇರಿಲ್ಲ ತಾತಾ ||16||

ಬಾಲಕರೆ ನೀವಿನ್ನು ಮರುಳಾಟಕೆಡೆಗೊಡದೆ |
ಶೀಲಗುಣಯುತರಾಗಿ ನೆರೆದೂ ||
ಕೇಳಿಯೊಳು ಮನಮುನಿಸಿಗೆಡೆಗೊಡದೆ ಕಲೆತಿಹುದು |
ತಾಳಿ ಹರುಷವ ಪೋಗಿರೆನಲೂ ||17||

ರಾಗ ಕೇತಾರಗೌಳ ತ್ರಿವುಡೆತಾಳ

ರಾಜಭವನದ ಪೊರಗೆ ಬಯಲೊಳು | ರಾಜಪುತ್ರರು ಕಲೆತು ಬಹುವಿಧ |
ದೋಜೆಯಿಂದವರಾಡುತಿರ್ದರು | ಸೋಜಿಗದೊಳೂ ||18||

ಆಳಿನೇರಿಕೆ ಚೆಂಡುಹೊಡೆತದ | ತೋಳಸತ್ವದಲೆಳೆವ ಹಗ್ಗದ |
ಕೇಳಿ ಬಡಿಯುವ ಗುಮ್ಮಗುಡುಗಿನ | ಮೇಳದಾಟಾ ||19||

ಒಂದು ಕಡೆಯೊಳು ಪಾಂಡುಜಾತರ | ದೊಂದು ಬದಿಗಿರಲಂಧ ಪುತ್ರರು |
ನಿಂದು ಸಮರದ ಕೋಂಟೆಗೈದರು | ಚಂದವಾಗೀ ||20||

ನೇಮವಿತ್ತರು ಲಗ್ಗೆಗೊಳ್ಳಲು | ಭೀಮನೋರ್ವನೆ ತಿವಿದು ನೂಂಕಿದ |
ಕೋಮಲಾಂಗದ ಕೌರವಾದ್ಯರ ಧೂಮಕೇತೂ ||21||

ಮಂಡೆ ಕೈಕಾಲೊಡೆದು ನೂರ್ವರು | ಪುಂಡ ಭೀಮನ ದೂರ ಹೊತ್ತರು |
ಕಂಡು ಪೇಳಿದರಜ್ಜನಡಿಯೊಳು | ದಿಂಡುಗೆಡೆದೂ ||22||

ರಾಗ ಕಾಪಿ ಅಷ್ಟತಾಳ

ತಾತ ಕೇಳೆಮ್ಮ ಬಿನ್ನಪವಾ | ಆ | ಧೂರ್ತನೆಸಗಿದನಿದೊ ನೋಡು ನಮ್ಮಿರವಾ ||
ತಾತ ಕೇಳೆಮ್ಮ ಬಿನ್ನಪವಾ || ಪಲ್ಲವಿ ||

ಬಾಲರೆಲ್ಲರು ನಿಜಮತದೀ | ಸೇರಿ |
ಬಾಲಕೇಳಿಯ ಪಂಥಗೈದು ಸಾಹಸದೀ ||
ಗೋಲಕೋಂಟೆಯ ಗೈರು ಕರದೀ | ಇರ |
ಲಾಳಿಗೊಂಡನು ಭೀಮ ಮರುಳಿನ ತೆರದೀ || ತಾತ ||23||

ಹಾರಿರಿಂಗಣಗೊಂಡು ನೆಗೆದಾ | ಪಾಪಿ |
ಮಾರಿಯಂದದೊಳೇರಿ ಪಿಡಿದೆಮ್ಮ ಬಡಿದಾ ||
ಸಾರು ನೀನೆನಲೆತ್ತಿ ತುಳಿದಾ | ಅಜ್ಜ |
ಮೋರೆ ಮೂಗಿಗೆ ಗುದ್ದಿ ಚೀರ್ದೆಮ್ಮ ಬೈದಾ || ತಾತ ||24||

ಭಾಮಿನಿ

ಕೇಳಿ ತಲೆದೂಗುತ್ತ ಭೀಷ್ಮನು |
ಬಾಲಕರೆ ನೀವ್ ಜಾಣರಹುದೈ |
ಪೇಳಲಿಲ್ಲವೆ ನಿಮಗೆ ಭೀಮನ ಕೂಟಬೇಡೆನುತಾ ||
ನಾಳಿನಾಟದೊಳವನ ಸೇರದೆ |
ಕೀಳುಕಿರುಕುಳವೆಸಗದೆಲ್ಲರು |
ತಾಳ್ಮೆಯಿಂದಿಹುದೆನುತಲನಿಬರ ಸಂತವಿಸಿ ಕಳುಹೇ ||25||

ವಚನ

ಮತ್ತಾಬಾಲರ್ ಮರುದಿನದುದಯದೊಳ್ ||

ರಾಗ ಸುರುಟಿ ಏಕತಾಳ

ಆಡಿದರಾಟವನೂ | ಬಯಲೊಳು | ಕೂಡಿಸಿ ಬಾಲರನೂ || ಪಲ್ಲವಿ ||

ಜೋಡಿಸಿ ಗೆಳೆಯರ | ನಾಡುವ ಕಳವನು |
ಮಾಡುತ ಮುದದಿಂ | ಪಾಡುತೆ ನಲಿದರು || ಆಡಿದರಾಟವನೂ ||26||

ಮಾರುತಿಯೋರ್ವನನೂ | ಬಿಟ್ಟವ | ರಾರಿಸುತೆಲ್ಲರನೂ ||
ಮೀರದ ಮರಗೆರ | ದೇರಸಿಯಾಟವ |
ತೋರಿಸಿ ಕೂಟಕೆ | ಸೇರಿದರೆಲ್ಲರು || ಆಡಿದರಾಟವನೂ ||27||

ಪಾರುತೆ ರಭಸದಲೀ | ಕೌರವ | ರೇರಲು ಚೂತದಲೀ ||
ನೂರುವರೊಟ್ಟಿಗೆ | ಭಾರಿಯ ಮರದೊಳು |
ಹಾರುತೆ ಪಣ್ಗಳ | ನಾರಿಸುತಿರಲದ || ಆಡಿದರಾಟವನೂ ||28||

ದೂರದೆ ಕಾಣುತಲೀ | ಭೀಮನು | ಮಾರಿಯವೇಷದಲೀ ||
ಸಾರುತ ಮರದಡಿ | ಗಾರೆನುತಲಿ ಸಹ ||
ಕಾರವನಲುಗಿಸೆ | ಜಾರುತುರುಳ್ದರು || ಆಡಿದರಾಟವನೂ ||29||

ತಲೆತೊಡೆ ಕೈ ಮುರಿದೂ | ವಿಗಡರು | ನೆಲದೊಳು ಬಾಯ್ದೆರದೂ ||
ಅಳುತಿರೆ ಪವನಜ | ನಳುಕದೆ ಕೆಲದೊಳು |
ಭಳಿಭಳಿರೆನ್ನತ | ಪಳಿದನು ನಗುತಲೆ || ಆಡಿದರಾಟವನೂ ||30||

ಕಂದ

ಇಂತಣಕಿಸುತಾ ಭೀಮಂ |
ಸಂತಸದಿಂದೈದಲಾ ಸುಯೋಧನ ಮುಖ್ಯರ್ ||
ಚಿಂತಿಸುತಂ ಬಂದಾಗಳ್ |
ಮಂತಣದಿಂದಂಧಕಗಳುಹಿದರಾಪತ್ತಂ ||31||

ರಾಗ ಕೇತಾರಗೌಳ ಅಷ್ಟತಾಳ

ಪಿತದೇವ ಕೇಳೆಮ್ಮ ಸೊಲ್ಲಾ | ನಮ್ಮ | ಧೂರ್ತ ಭೀಮನು ಗೈದುದೆಲ್ಲಾ || ಪಲ್ಲವಿ ||

ಆತನಕಾಟದಿ | ಸೋತೆವು ನಾವೆಲ್ಲ |
ಪಾತಕಿ ಮರದಿಂದ | ಭೂತಳಕುರುಳಿಸೆ || ಪಿತದೇವ ||ಅ.ಪ.||

ಬನದೊಳಾವಿರೆ ಚೂತಕುಜದೀ | ಕಲ್ಲು |
ಮನದ ಪಾಪಿಯು ಬಂದು ಜವದೀ ||
ಧಣುರೆನುತಾಮರ | ವನುಪಿಡಿದಲುಗಿಸ |
ಲಿನಿತಾಯ್ತು ಹಾ ದೇವ | ಎನಿತಿರ್ದೊಡೇತಕೆ || ಪಿತದೇವ ||32||

ಭಾಮಿನಿ

ಬಾಲರೆಂದುದ ಕೇಳ್ದು ಬೆದರುತೆ |
ಶೀಲವಂತರ ದೇವ ವಿದುರನೊ |
ಳೂಳಿಗವ ಧತರಾಷ್ಟ್ರನರುಹುತಲೆಂದ ಮನಮರುಗೀ ||
ಪೇಳುಪಾಯವದೇನು ಮೂರ್ಖರ |
ಮೇಳವಾದುದು ನಮ್ಮ ಮಕ್ಕಳ |
ಬಾಳುವೆಯ ಗತಿಗೇನ ಕಂಡೈ ತಮ್ಮ ಹೇಳೆಂದಾ ||33||

ರಾಗ ಕಾಂಭೋಜಿ ಝಂಪೆತಾಳ

ಮರುಗದಿರು ಭೂಪಾಲ ಸುರನದಿಯ ಸುತನೆಮ್ಮ | ತರಳರನು ಸನ್ಮಾರ್ಗಕಿಳಿಸೇ ||
ಗುರುಕುಲವ ವಿರಚಿಸುವ ಮನದೊಳಿಹನಾತ್ಮವಿದ | ಬರಿದಹುದೆ ಸತ್ತೀರ್ಥನೆಣಿಕೇ ||34||

ಶರಧನ್ವ ಸಂಜಾತ ವೇದವಿದ ಕೃಪನಿಹನು | ಗುರುದೇವನನು ಕರೆದು ತರಲೂ ||
ಸುರತರಂಗಿಣಿಯಣುಗನಟ್ಟಿರುವನಾಪ್ತರನು | ಬರುವನಾ ಧೀಮಂತನೊಡನೇ ||35||

ವಿದುರನೆಂದುದ ಕೇಳಿ ಹರುಷವನು ತಾಳ್ದುಮಿಗೆ | ಬದಿಗಿರ್ದ ಬಾಲಕರಪರಸೀ ||
ಗದಿಸದಿರಿ ನಿಮಗೊಳ್ಳಿತಹುದಿನ್ನು ಕೆಲದಿನದಿ | ಕದನಬೇಡೆಂದವರ ಕಳುಹೇ ||36||

ವಚನ

ಎನೆಮನದೊಳಗಾಲೋಚಿಸುತ್ತಾ ದುರ್ಯೋಧನಂ ||

ಕಂದ

ದೂರಿದಡೆಮ್ಮಯ ಪಿತನೊಳ್ |
ತೋರಿಸುವಮ್ಮಾರಿಯಪುದು ವಾಳ್ಕೆಯ ನೆಮಗಂ ||
ಕಾರಿಸದಿರೆನಾಂ ಭೀಮನ |
ಭಾರಿಯಕೆಚ್ಚಂ ಸಹೋದರ ಶತಕ ಬಲನೇಂ ||37||

ಭಾಮಿನಿ

ಬಳಿಕ ಮರುದಿನ ಕೌರವಾದ್ಯರು |
ಪುಳಕದಿಂತಿನಲಿತ್ತು ಭೀಮನ |
ನೊಲಿಸಿಕೊಂಡರು ನೀರಕೇಳಿಗೆ ವರಭಗೀರಥಿಯ ||
ಪುಳಿನ ತೀರಕೆ ಬಂದು ಗಂಗೆಯ |
ಮಳಲರಾಸಿಯ ಬಳಸಿ ಕುಣಿಯುತೆ |
ಚಳಕ ಗತಿಯಲಿ ಪಿಡಿದು ನೂರ್ವರು ಬಿಗಿದು ಮಾರುತಿಯ ||38||

ರಾಗ ಮಾರವಿ ಏಕತಾಳ

ಭಳಿಭಳಿರೆನುತೆಲೆ ಕೌರವ ಬಳಗವು | ಬಲದಿಂದೌಕುತಲೀ ||
ತಳುವದೆ ಪೊತ್ತರು ಭೀಮನ ಮಡುವಿಹ | ಜಲಕತಿ ಹರುಷದಲಿ ||39||

ಭಾರದ ಶಿಲೆಯನು ಬಂಧಿಸಿ ಕೊರಳಿಗೆ | ಮಾರಿಯೆ ಸಾಯೆನುತಾ ||
ಭೋರನೆ ನೂಕಿದರಾ ಜಲರಾಶಿಗೆ | ತೋರಿ ಸಮಾಧಿಯನೂ ||40||

ಆಗಳೆ ಪವನಜ ಬಗಿದಾ ಬಂಧವ | ನೆಗೆದೊಡನತಿ ಭರದೀ ||
ಚಿಗಿದಾ ವಾರಿಯ ವಿಗಡನು ಪವನದೆ | ಲಗುಬಗೆಯುತ್ಸವದೀ ||41||

ಸೇರುತ ನೆಗೆದಾ ಗಂಗೆಯ ತೀರವ | ಮರುತಜರೋಷದಲೀ ||
ಧರಣಿಯ ನಡುಗುವ ತೆರದಿಂ ಘರ್ಜಿಸೆ | ಕುರುಪತಿ ಬೆದರುತಲೀ ||42||

ಕಂದ

ನಗೆ ಮೊಗದಿಂ ಬಂದಲ್ಲಿಗೆ |
ಬಗೆಯರಿದಾ ಭೀಮನ ಕರವಿಡಿದುತ್ಸವದಿಂ ||
ಬಗೆ ಬಗೆ ತಿನಿಸಂ ತೋರಿಸು |
ತೊಗುಮಿಗೆಯಿಂದಿತ್ತುಪಚರಿಸಿದ ಕುರುಭೂಪಂ ||43||

ರಾಗ ಸಾಂಗತ್ಯ ರೂಪಕತಾಳ

ಸಂತವಿಸಿ ಮಾರುತಿಯ ಮೆಲಲಿತ್ತು ಜೊತೆಗೂಡಿ | ಪಿಂತಿರುಗಲವರತ್ತ ಪುರಕೇ ||
ಚಿಂತಿಸಿದ ಕೌರವನು ಪಗೆಭೀಮನಳಿದಲ್ಲ | ದೆಂತಹುದು ಸೊಗಸೆಮ್ಮ ಕುಲಕೇ ||44||

ವಿಷದ ಹಾವುಗಳಿಂದ ಕಚಿ್ಚಸಲವಗೊರ್ಮ್ಮೆ | ಪುಸಿಯಾಗದಳಿಗೊಂಬನಹುದೂ ||
ಮಸಣದ ಕಡೆಗತ್ತ ಚಿತೆಗೊಯ್ಯಲಿದೆ ಸಾಕು | ಪೊಸತೊಂದ ಬಗೆಗಾಣಲೇಕೇ ||45||

ಎಂದಾಗ ದುಶ್ಯಾಸನಾದಿಗಳು ಸಮ್ಮತದೊಳೊಂದಾಗೆ ಕಾರ್ಯದಾತುರದೀ ||
ಮುಂದಿರ್ಪ ಕುಟ್ಟಿಮದಿ ನಿದ್ರಿಸುವ ಮರುತಜನ | ಮುಂದೋಳ ಪಿಡಿದೆತ್ತಿ ಜವದೀ ||46||

ಬುಸುಗುಟ್ಟುತಿಹ ಸರ್ಪಗಳ ಗೂಡಿನೆಡೆಗೊಯ್ದು | ಕಸುವಿಂದ ಕೆಡಹಿದರವನಾ ||
ಅಸುರಾರಿಯೊಲ್ ಭೀಮನಹಿತಲ್ಪದಿಂದೆದ್ದು | ಗಸಣಿಗೊಳ್ಳದೆ ಬರಲವರೂ ||47||

ದೂರದಿಂ ಕಾಣುತ್ತ ಕೌರವರ್ ಭಯಗೊಂಡು | ಪಾರಿದರ್ ಕಳ್ಳರೊಲ್‌ಬನಕೇ ||
ಆರಿದನಿಂತೆಸಗಿದವರೆಂಬುದರಿಯದೆ | ಸಾರಿದನವ ರಾಜಗಹಕೇ ||48||

ಕಂದ

ಇನಿತಾದುದನರಿದಾಗಳೆ |
ಮನದೊಳ್ಕುದಿದಳ್ಕುತೆ ಕುರುಪತಿಮತ್ತೊಡನಂ ||
ನೆನೆದೊಂದನುಚಿತ ಕಾರ್ಯವ |
ನನುಗೊಳಿಸಲ್ಕದನುಸಿರ್ದನನುಜಾತರೊಳಂ ||49||

ರಾಗ ಪಂತುವರಾಳಿ ರೂಪಕತಾಳ

ಧೂರ್ತ ಭೀಮನನ್ನು ಕೊಲ್ಲಲೂ | ನಂಜಗೂಳ | ನಾತಗೀಯಬೇಕು ಮೆಲ್ಲಲೂ || ಪಲ್ಲವಿ ||

ಕಾಳಕೂಟ ಬ್ರಹ್ಮಪುತ್ರ | ಹಾಲ ಹಲವು ಬಚ್ಚನಾಬಿ |
ಕೋಳುಗೊಂಬ ಸುಪ್ರದೀಪ ||
ಮೇಳವಿಸುತ ಕೆಂಪುಸಿಂಗಿ || ||50||

ಪೇಳಲೇನ ಬೆರಸಿಪಾತ್ರದೀ | ಕುಲಸುತುಂಡೆ |
ಗೋಳಗೈದು ಕೊಡಲು ಬೇಗದೀ | ಕೊಲುವುದೈಸೆ
ಬಾಳ್ವೆಗೇಡಿಯಿವ ಶೀಘ್ರದೀ ||
ಧೂರ್ತ ಭೀಮನನ್ನು ಕೊಲ್ಲಲೂ ||51||

ಎಂದು ಕೌರವಾದ್ಯರೆಲ್ಲ | ರೊಂದು ಬುದ್ಧಿಗೊಳ್ಳುತಾಗ |
ಚಂದವಾಗಿ ಪಾಕಗೈಸಿ | ತಂದು ಭಿಮಗಿತ್ತಡದನು ||
ಮುಂದುಗಾಣದಾತ ಕ್ಷಿಪ್ರದೀ | ಕೊಟ್ಟುದೆಲ್ಲ  |
ತಿಂದು ತೇಗೆ ಸತ್ಪ್ರಭಾವದೀ | ಕೌರವೇಂದ್ರ |
ನೊಂದನಧಿಕ ಮನದ ತಾಪದೀ ||
ಧೂರ್ತಭೀಮನನ್ನು ಕೊಲ್ಲಲೂ ||52||

ಕಂದ

ವಿಷದುಣಿಸಂ ಜೀರ್ಣಿಸುತಂ |
ವಿಷಮಾಂಬಕನೊಲ್ಪವನಜಮುಳಿದಿದ್ದಾಗಂ ||
ಮಸೆದುರೆ ಕೌರವ್ಯರನುಂ |
ದೆಸೆ ದೆಸೆ ಗೂಡಿಸಿ ಪಿಳಿರ್ದು ಪಿಡಿದೊದೆಯುತ್ತಂ ||53||

ಕೊಲ್ಲದೆ ಬಿಡೆಕುನ್ನಿಗಳಂ |
ಮೆಲ್ಲಲಿಕೀ ನಂಜುಣಲೆನಗಿತ್ತರನೆಲ್ಲಂ ||
ಬಲ್ಲಿದ ಕೌರವ ನಿನ್ನಯ |
ಕಲ್ಲೆದೆಯಿಂ ಕಾರಿಸದಿರೆ ನಾಂ ಕೆನ್ನೀರಂ ||54||

ವಚನ||ಎಂದು ಭೀಮಸೇನಂ ಪೂಣ್ಕೆಗೈದು ತೆರಳ್ದನೆಂಬಲ್ಲಿಗೆ ಮುಗಿದುದೀ ಬಾಲಕೇಳೀ ಕಥನಂ ||

 


ಯಕ್ಷಗಾನ ವರ್ಣಕ ಎರಡನೆಯ ನೋಟ

ರಾಗ ಕಾಂಭೋಜಿ ಝಂಪೆತಾಳ

ದ್ವಿಜರಾಜ ಗೋತ್ರಜರು ಕರಿಪುರದೊಳಿಂತಿರಲು |
ಸುಜನಜನ ಸುರಧೇನು ಭೀಷ್ಮಾ ||
ದ್ವಿಜವಂಶ ಧೀಷಣನ ಕರೆಸಿದನು ಗುರುತನಕೆ |
ನಿಜಬೊಮ್ಮರೂಪೆನಿಪ ಕೃಪನಾ ||55||

ರಾಜವೈಭವದಿಂದ ವಿದುರಾದಿ ಪ್ರಮುಖಜನ |
ರಾಜಿಯಿಂ ಕರೆತಂದು ಬಳಿಕಾ ||
ರಾಜಭವನದೋಜೆಯಿಂ ಪೂಜಿಸಿದಗುಣವಿ |
ರಾಜಿತನ ಸುರನದಿಯ ಸುತನೂ ||56||

ಹರುಷಮಿಗೆ ಸತ್ಕರಿಸಿ ಗುರುದೇವನೊಡನೆಂದ |
ಬರಡಾಯ್ತು ಭಾರತವಿದೆಮ್ಮಾ ||
ಕಿರಿಯರನು ಪಳಗಿಸುವ | ಗುರುಕುಲವದೆಮಗಿಲ್ಲ |
ನರಪಶುಗಳೆಂದಾದರೆಲ್ಲ ||57||

ಅದರಿಂದ ಭಾರತದೊಳುದಯಿಸಲು ಬೇಕೊಂದು |
ಸದಮಲದ ಗುರುಕುಲವು ದೇವಾ ||
ಅದನೆಮ್ಮ ಗಜಪುರದಿ ನಿರ್ಮಿಸಲು ಬಗೆದಿಂದು |
ಮುದದಿಂದ ಕರೆಸಿದೆವು ನಿಮ್ಮಾ ||58||

ಇವರೆಮ್ಮ ಕುರುಕುಲದ ಬಾಲಕರು ನೋಡಿರೆನ |
ಲವರೆಲ್ಲ ಗುರುಪದಕೆ ಮಣಿಯೇ ||
ಭುವನವಂದಿತನೆತ್ತಿ ಪರಸುತಿರೆ ಬಾಲಕರ |
ಪವಣರಿದು ಶಂತನುಜ ಪೇಳ್ದಾ ||59||

ಗುರುವರ್ಯ ಲಾಲಿಪುದು ಪಸುಳೆಗಳಿಗರಿವಿಲ್ಲ |
ಬರಿದಾದರಾಟದೊಳಗಿವರೂ ||
ಗುರುಕುಲದ ಪಾಠದೊಳು ಬೋಧಿಸುತ ಪಾಲಿಪುದು |
ತರಳರನು ನಿಮಗಿತ್ತೆನಿವರಾ ||60||