ಭಾಮಿನಿ

ಎಲೆ ಧರಾಧಿಪ ಕೇಳು ನಿನ್ನವ |
ರೊಲಿದು ಪಾರ್ವರ ಬಿಲ್ಲ ವಿದ್ಯೆಯ |
ಕಲಿತನಂಗಳನರುಹಲೈದಿದರಜ್ಜನಿದ್ದೆಡೆಗೇ ||
ಬಳಿಕ ಧರ್ಮಜನೊರೆಯೆ ವಾರ್ತೆಯ |
ತಿಳಿದು ಭೀಷ್ಮನು ಕರೆಸಿಕೊಂಡನು |
ನಲವಿನಿಂದತಿ ಗೌರವದೊಳಾ ದ್ರೋಣ ಮುನಿವರನಾ ||132||

ಕುಶಲ ವಾರ್ತೆಯೊಾ ಮಹಾತ್ಮರ |
ನಸಮಬಲರೆಂದರಿದು ಭೀಷ್ಮನು |
ವಿಶಿಖದೆಸುಗೆಯನೆಮ್ಮ ಬಾಲರಿಗರುಹಬೇಕೆನುತಾ |
ಪಸದನಂಗಳನಿತ್ತು ಮನ್ನಿಸಿ |
ಶಶಿಕುಲಾನ್ವಯದರ್ಭಕರನಾ |
ವಸುಧೆಯಮರನ ಕಯ್ಗೆ ಬೆಸವೇಳ್ದಿತ್ತನಂದೊಲಿದೂ ||133||

ರಾಗ ಯರಕಲ ಕಾಂಭೋಜಿ ಅಷ್ಟತಾಳ

ಆಗಲೆ ಶಸ್ತ್ರಶಾಲೆ ಕಟ್ಟಿಸಲು | ಆ ಗರುವನಾಜ್ಞೆಯಿಂದಾಗೆಮಂಗಲವೂ || ಆಗಲೆ || ಪಲ್ಲವಿ ||

ನೂರು ಯೋಜನದುದ್ದಗರಡಿಯಾದುದು ಮತ್ತೆ |
ಭಾರಿಪೂಜೆಯಗೈದು ಬಲಿಯಚಂಡಿಕೆಗೇ ||
ನೆರೆದ ತಾಂತ್ರಿಕರೆಂದ ತೆರದೀ | ಇತ್ತ |
ರರಸುಮಕ್ಕಳು ಬಾಣ ಮುಖದೀ ಕಂಡು |
ಪರಸೆ ಪಾರ್ವರ ಮೊತ್ತ ಮುದದೀ || ಆಗಲೆ ಶಸ್ತ್ರ  ||134||

ವಸಗೆ ಕೇಳುತ ಬಂದನಧಿರಾಜ ಘೋಷಿಸಿದ |
ಬಿಸಜ ಬಾಂಧವಪುತ್ರ | ಕರ್ಣನೆಂಬವನೂ ||
ಅಸಮಸಾಹಸಿ ಕುಂತಿಸುತನೂ ತನ್ನ |
ವಿಷಮ ದುಃಸ್ಥಿತಿಯಿಂದಲವನು | ಮುನ್ನ |
ಕಸುವ ಕಾಣಿಸುತೆ ಶಾಪವನೂ || ಆಗಲೆ ಶಸ್ತ್ರ ||135||

ಪರಶುರಾಮನೊಳಾಂತು ಪೊರಟತ್ತ ಬಳಿಗೊಂಡು |
ತಿರುಗುತ್ತ ನಡೆತಂದ ವರದಂತಿಪುರಕೇ ||
ಅರಮನೆಗಡಿಯಿಟ್ಟ ಭರಕೇ | ಕಾಣು |
ತೆರಗೆ ಕೌರವನಂಘ್ರಿದ್ವಯಕೇ | ಮೆಚ್ಚಿ |
ಕುರುಭೂಪ ತೆಗೆದಪ್ಪಲುರಕೆ || ಆಗಲೆ ಶಸ್ತ್ರ ||136||

ಭಾಮಿನಿ

ರನ್ನಚಿನ್ನದೊಳೊಪ್ಪುವಂದದೆ |
ಕರ್ಣಕೌರವರಿಂಗೆ ಮೈತ್ರಿಯ |
ಬಣ್ಣಗೊಂಡುದದೊಂದೆ ಜೀವನವಂದು ಮೊದಲಾಗೀ ||
ಎಣ್ಣುವೆಡೆಯೊಳಗಾಟಪಾಠದಿ |
ಕಣ್ಣಿನುತ್ಸವದೂಟ ಕೂಟದಿ |
ಭಿನ್ನಗೊಳ್ಳದೆ ಜೊತೆಯೊಳಿರ್ದರು ಸುಖದೊಳನವರತಾ ||137||

ರಾಗ ಪಂಚಾಗತಿ ಮಟ್ಟೆತಾಳ

ಕಲಿತರವರು ಗರಡಿಯೊಳಗೆ | ಕಲೆತು ಸುರಗಿ ಸಬಳ ಕಿರಸೆ |
ಪಲಗೆಯೊಡ್ಡು ಪರಶುದಂಡ ಹಲವು ಮುದ್ಗರಾ ||
ನೆಲದ ಮಂಡಿಗೋಲಿನೆಸುಗೆ | ಕಳದ ಮಲ್ಲಜಟ್ಟಿಯುದ್ಧ |
ಸೆಳೆದು ಕರಿಯ ತುರಗವೇರ್ವ | ಕಲೆಯ ಕಲಿತರೂ ||138||

ಪವನಜಾತ ಕೌರವೇಂದ್ರ | ರಿವರುಗದೆಯೊಳಧಿಕರಾಗೆ |
ರವಿಕುಮಾರ ಪಾರ್ಥರಿವರು ಕವಲುಗಣೆಯಲೀ ||
ಅವನಿಯೊಳಗೆ ಕಡುಸಮರ್ಥ | ಬವರಗಾರರೆಂದು ಪೊಗಳೆ |
ಭುವನವಂದ್ಯ ಕೊಡನಕುವರ | ನಿವರ ಕಾಣುತಾ ||139||

ಇದರೊಳಾರಮನವು ಸೂಕ್ಷ್ಮ | ಚದುರಿಪೋಪುದಾರ ಮನವು |
ಚದುರಿನಂತರಂಗಗುರಿಯೊ | ಳಧಿಕ ನಿಪುಣರೂ ||
ವಿದಿತ ಶರದನೆಲೆಯನರಿವ | ಬುಧರನರಿಯಬೇಕೆನುತ್ತ |
ಬದಿಯ ಮರದೊಳಿರಿಸುತೊಂದು | ಸದೆವ ಗುರುತವಾ ||140||

ಕರೆದುತರಳರನ್ನು ತೋರಿ | ಕರಿಯ ವಸನದಿಂದಕಣ್ಣ |
ತೆರೆಯದಂತೆ ಬಿಗಿದು ಬಳಿಕ | ಗುರಿಗೆ ಬಡಿಯಲು ||
ಗುರುವರೇಣ್ಯನರುಹೆ ಕೇಳ್ದು | ಶರದಿ ಪೊಡೆಯುತವರು ಸೋತು |
ಬೆರಗುಗೊಳ್ಳೆನರಗೆಪೇಳ್ದ | ಗುರಿಯ ನೆಸೆಯಲೂ ||141||

ಭಾಮಿನಿ

ತಿಳಿದುಮನದಲಿ ಗುರಿಯಪಾರ್ಥನು |
ಸೆಳೆದು ಬಾಣವನೆಚ್ಚು ಕೆಡಹಿದ |
ಕಲಶಸಂಭವ ನೋಡಿ ಪಾರ್ಥಿವ ಕುಲದ ಕೇಸರಿಯಾ ||
ಭಳಿರೆ ಮೆಚ್ಚಿದೆ ಜಾಣನೆನುತಲಿ |
ಕಲಿಸಿಕೊಟ್ಟನು ಬಹು ರಹಸ್ಯದ |
ಜಲಜ ಸಂಭವನಸ್ತ್ರಸಿದ್ಧಿಯ ಮೂಲಮಂತ್ರಗಳಾ ||142||

ವಚನ || ಇಂತಿರಲನ್ನೆಗಂ ||

ಕಂದ

ಬಿಲ್ಲೋಜಂಬಿಲ್ವಿದ್ಯೆಯ |
ನುಲ್ಲಾಸದೆ ಪೇಳ್ವನೆಂಬೊಸಗೆಯಂ ಕೇಳ್ದಾ ||
ಭಿಲ್ಲಾತಕ ರಾಜಸುತಂ |
ಮಲ್ಲೋತ್ಸಾಹಸಿಕನೇಕಲವ್ಯಂ ಮನದೊಳ್ ||143||

ರಾಗ ಕಾಂಭೋಜಿ ಝಂಪೆತಾಳ

ಭಾವಿಸಿದ ತನ್ನೊಳಗೆ ಬಿಲ್ವಿದ್ಯ ಪರಿಣತಿಯ |
ನಾವಿಬುಧ ವಂದಿತನಿಗೆರಗೇ |
ಕೋವಿದನು ತನಗೊರೆವ ಕಲಶಭವನೆಂದೆನುತ |
ಸಾವಧಾನದಿ ಪೊರಟು ಪುರವಾ ||144||

ಪೆಗಲಿಗೇರಿಸಿ ಧನುವ ಶಬರಾಧಿಪತಿಸುತನು |
ನಗುಮೊಗದೆ ಪಾಡುತ್ತ ಜವದೀ ||
ಸೊಗಸಾಗಿ ರಂಜಿಸುವ ಗಜಪುರಕೆ ನಡೆತಂದು |
ಮಿಗಿಲೆನಿಪ ಗರಡಿಯನು ನೋಡೀ ||145||

ಕರಶರಾಸನವ ಕೆಳಗಿರಿಸಿ ಮುಂದೈತಂದು |
ಗುರುವರನ ಪದಕೆರಗಲವನೂ ||
ಹರುಷದಿಂ ಬಿಲ್ಲೋಜ ಪರಸುತ್ತ ಬಾಲಕನ |
ಸರಸವಚನದೊಳೆಂದನವಗೇ ||146||

ಯಾರಯ್ಯ ತರಳ ನೀನಾರವನು ಬಂದುದೇನ್ |
ಕಾರಣವು ಪೇಳಯ್ಯ ತನಗೇ ||
ಆರಿಹರು ಗಜಪುರದಿ ಊರಾವುದೆಲೆಬಾಲ |
ವೀರನಿಹೆ ನೀನೆನಲು ಪೇಳ್ದಾ ||147||

ರಾಗ ತೋಡಿ ರೂಪಕತಾಳ

ಗುರುರಾಯ ಲಾಲಿಸೈ ಶಬರೇಂದ್ರ ನಿರುತಿರ್ಪ |
ವರಭೇಳನಾತ್ಮಜನುತಾನೂ ||
ಕರೆಯುವರೇಕಲವ್ಯನೆಂದೆನುತೆನ್ನನು |
ಶರವೇದಮಾರ್ಗವನು ತಿಳಿಯೇ ||148||

ಭೂದೇವ ತವಪಾದದಾಶ್ರಯಕೆ ಬಂದಿಹೆನು |
ಮಾದೇವ ಪ್ರತಿರೂಪ ಸಲಹೋ ||
ಈ ದಿವ್ಯ ಗರಡಿಯೊಳ್ ನಿಜಛಾತ್ರರೊಡಗೂಡಿ |
ಸಾಧಿಸುವೆ ಶಸ್ತ್ರಾಸ್ತ್ರಕಲೆಯಾ ||149||

ಬಲುದುಷ್ಟ ಪ್ರಾಣಿಗಳ ಭಯದಿಂ ತತ್ತರಿಪ |
ಸಲಿಗೆಯ ಜೀವಿಗಳನುಳುಹೇ ||
ಬಲುಮೆಯ ಬಿಲ್ವಿದ್ಯೆಗರ್ಥಿಸಿದೆನೆನಲೆಂದ |
ನಲವಿನೊಳಾಚಾರ್ಯನವಗೇ ||150||

ರಾಗ ಕೇತಾರಗೌಳ ತ್ರಿವುಡೆತಾಳ

ತರಳ ಶಬರನೆ ವಿಪ್ರರಲ್ಲದ | ಬರಡು ಕುಲದವರಿಂಗೆ ಪಾರ್ವರು |
ಸರಳಮಂತ್ರದ ಗುರಿಯಪೇಳ್ವರೆ | ಮರುಳಿದೇಕೇ ||151||

ಗುರುವರೇಣ್ಯನೆ ಜಾತಿನೀತಿಯೊ | ಳಿರುವ ಕರ್ಮದ ಗುಣವಿ ಭಾಗವೆ |
ಗುರಿಯದಲ್ಲದೆ ವರ್ಣದಿರವಿಗೆ | ಕುರುಹದುಂಟೇ ||152||

ಎಲವೊ  ವನಚರ ರಾಜಗುರುಗಳು | ಕಲಿಸಲಾಪರೆ ನಿನಗೆ ವಿದ್ಯೆಯ |
ಇಳೆಗೆ ರೂಢಿಯೆ ನಡತೆಗೊಂಬುದು | ಗಳಹಬೇಡಾ ||153||

ಕಟುಕಹಸ್ತದ ಕತ್ತಿಕಬ್ಬುನ | ಪಟುತರಾತ್ಮಕ ಪರುಷ ಸೋಂಕಲು |
ಚಟುಲ ಶುದ್ಧಿಯ ಚಿನ್ನವಪ್ಪುದು | ದಿಟವೆ ದೇವಾ ||154||

ಹುಟ್ಟು ಬಣ್ಣದ ರೂಪಿನಿದಿರಲಿ | ಕಟ್ಟು ಬಣ್ಣದ ಬೊಂಬೆ ಕುಣಿಯುವ |
ದಿಟ್ಟತನವನು ಮಾಣು ಬರ್ಬರ | ಬಟ್ಟೆ ನೋಡೈ ||155||

ಸಾರಸಾತ್ವಿಕ ಕೊಳೆಯ ನೀರದು | ಸೇರೆ ಗಂಗೆಯ ತೀರ್ಥವಪ್ಪುದು |
ಸಾರಿ ನಿಮ್ಮಡಿ ಬಂದು ಸೇರ್ದೆನೆ | ಪಾರಮಹಿಮಾ ||156||

ಭಾಮಿನಿ

ಬರಿದೆ ಜಾಣ್ಮೆಯ ಮಾತನೆನ್ನೊಳ |
ಗರುಹ ಬೇಡೈ ರಾಜಪುತ್ರರ |
ಸರಿಗೆ ಬರುವವನಲ್ಲನಡೆಯೆನೆ ಮರುಗಿ ಮನದೊಳಗೇ ||
ತಿರೆಯ ಜಾತಿಯ ಭೂತನುಂಗಿದೆ |
ಗರಿಮನಪ್ಪೊಡೆ ಭಾವರೂಪದ |
ಗುರುವ ವಿರಚಿಸಿ ಬಿಲ್ಲಬಿಜ್ಜೆಯನರಿವೆನೆಂದೆನುತಾ ||157||

ಕಂದ

ಗುರುವರನಂಘ್ರಿಗೆಮಣಿದಾ |
ತರಳಂ ತನ್ನಾಲಯದೆಡೆಗೈದುತೆ ಮತ್ತಂ ||
ವಿರಚಿಸಿ ಮಣ್ಮಯ ಗುರುವಂ |
ಸರಳೆಸುಗೆಯನವನುದಾತ್ತದೆ ಕಲಿಯುತಿರ್ದಂ ||158||

ವಚನ || ಇಂತಾಗಲ್ ಕೆಲದಿವಸದ ಬಳಿಕಂ ||

ರಾಗ ಕಾಂಭೋಜಿ ಝಂಪೆತಾಳ

ಕಲಶಭನನೊಂದುದಿನ ನಡೆತಂದ ಗಜಪುರಕೆ || ನಲವಿನಿಂ ಸುರನದಿಯ ಸುತನಾ ||
ಬಳಿಗೈದಿ ಸಂಭಾವನೋಚಿತದೊಳಾಸನದಿ | ಕುಳಿತೆಂದನಾ ಭೀಷ್ಮನೊಡನೇ ||159||

ಕಾರುಣ್ಯ ವಾರಿಧಿಯೆ ಜನವಂದ್ಯ ಗಾಂಗೇಯ | ಸೂರಿಸೂನತ ಚರಿತಕೇಳೂ ||
ಧಾರಿಣಿಯ ಭೋಗವನು ತೊರೆದು ನೀ ವಿರಚಿಸಿದೆ | ಕಾರಣಿಕ ಶಸ್ತ್ರಶಾಲೆಯನೂ ||160||

ಕುರುಬಾಲರಿಂದೆಮ್ಮ ಗರಡಿಯೊಳು ಕಲಿತಿಹರು | ಶರಚಾಪದಾಗಮವನೆಲ್ಲಾ ||
ಕರಿತುರಗದೇರಾಟ ಗಣಿತಗಾರುಡತಂತ್ರ | ಪರಬಲವಿಭೇದನದ ಕಲೆಯಾ ||161||

ರಥಕಲ್ಪಚೋದಕರು ನಿಜಚಕ್ರವನು ಕಾಯ್ದು | ಮಥಿಸುವರು ರಿಪುದುರ್ಗಗಳನೂ ||
ರಥಪತ್ತಿ ಕೋಂಟೆಗಳ ರಚಿಸಲರಿದಪರಯ್ಯ | ಮತಿವಂತನೀ ನೋಡಬೇಕೂ ||162||

ಎನಲೆಂದ ಗಾಂಗೇಯ ಪರಿಶ್ರಮದ ಬಲುಹುಗಳ | ಜನಜಾಲ ಕಲೆತೆಲ್ಲ ನೋಡೇ ||
ಮನಕಧಿಕ ಪರಿತೋಷ ಕಲೆಗದುವೆ ಸಾರ್ಥಕ್ಯ | ನಿನಗರುಹಲೇಕದನು ಮುನಿಪಾ ||163||

ಆದಿಯಲಿ ಪುರವೈರಿ ಬಳಿಕಲಾ ಪರಶುಧರ | ಸಾಧಿಸಿದೆ ಬಿಲ್ಲೋಜನೀನೂ ||
ಮೇದಿನಿಗೆಯೀ ಧನುರ್ವೇದವನು ಕರುಣಿಸಿದ | ವೇದವಿದನೀನಹುದು ನಮಿಪೇ ||164||

ಕಂದ

ಬಾಲರ ಜಾಣ್ಮೆಯನರಿಯಲ್ |
ಕೇಳಿಯ ಕಳನಂ ಕುರುಬಯಲೊಳ್ವಿರಚಿಸಲಾಂ ||
ಪೇಳುವೆನೆನೆ ಕುಂಭಜ ತ |
ನ್ನಾಲಯಕೈದಲ್‌ನದೀ ಸುತನಾಜ್ಞೆಯೊಳತ್ತಂ ||165||

ವಚನ || ಶಿಲ್ಪಿಗರತ್ಯುತ್ಸವದಿಂ ವ್ಯಾಯಾಮದ ಕಳನಂ ವಿರಚಿಸೆ ಕಂಡವರಚ್ಚರಿವಡುತಿರ್ದರದೆಂತೆನೆ ||

ರಾಗ ಶಂಕರಾಭರಣ ಅಷ್ಟತಾಳ

ಆಯಿತು ಹಸ್ತಿನಾಪುರದೀ | ರಂಗ | ವಾಯಿತು ಶಿಲ್ಪಶಾಸನದೀ ||
ಆಯಕಟ್ಟಿನಗೇಹ ಭರದೀ | ಸುತ್ತು | ರಾಯರಿರ್ಕೆಯವಾಡ ಕೆಲದೀ |
ಮೇಲೆ | ತೋಯಜಾಕ್ಷಿರಿಂಗೆ | ಆಯವಾಗಿಹ ಸೌಧ |
ವಾಯಿತಲ್ಲಿಯ ಬಗೆ | ಬಾಯಿಬಣ್ಣಿಪುದೇ ||166||

ಈರಾರು ಯೋಜನಾಂತರದೀ | ಕಾಣ್ವ | ನೂರಾರು ಗುಡಿಯ ತೋರಣದೀ ||
ಭಾರಿ ರಂಜಿತದುಪಗಹದೀ | ನೋಡೆ | ದಾರಿದಾರಿಯೊಳಿಭಪುರದೀ |
ಘೋಷ | ವೇರೆ ಜನರು ರಾಜ | ರೋರುಗುಡಿಸಿ ಮುಂದೆ |
ನೀರಜಾಕ್ಷಿಯರೊಟ್ಟು | ಸೇರಿಸಂಭ್ರಮದೀ ||167||

ಸುಬಲನಂದನೆ ಕೊಂತಿಯವರೂ | ವೊತ್ತಿ | ನಬಲಜಾಲದೆ ಬಂದರವರೂ ||
ಸಭೆಗಂಧನಪತಿವೈದುರರೂ | ಮತ್ತೆ | ವಿಬುಧವಂದಿತ ಭೀಷ್ಮಕೃಪರೂ |
ಜೊತೆ | ಗಭವಸನ್ನಿಭದ್ರೋಣ | ನಿಭರಾಜಿಬರಲಂದು |
ಸಭೆಯನೀಕ್ಷಿಸೆರಾಜ | ಪ್ರಭೆಗೆ ಜುಮ್ಮೆನಲೂ ||168||

ವಂದಿಮಾಗಧ ಸೂತಪ್ರವರಾ | ಜಯ | ವೆಂದು ಪಾಡಲು ಕೇಳ್ದುವಿವರಾ ||
ಸಂದುಸಂದಿನ ವಾದ್ಯದವರಾ | ಮೊತ್ತ | ವೆಂದು ಬಾಜಿಸೆ ನಾದಕದರಾ |
ಜಗ | ದ್ವಂದ್ಯೆಗಾರತಿಯೆತ್ತಿ | ಬಂದುರಂಗದ ಪೂಜೆ |
ಯಂದವಾಗುತೆಗೈದ | ರೆಂದವರುಸುರಲು ||169||

ಭಾಮಿನಿ

ಬಂದರಲ್ಲಿಗೆ ರಾಜಪುತ್ರರು |
ನಿಂದುರಂಗದೆ ಬೀಸಿಕತ್ತಿಯ |
ಸಂದಪದಗತಿಯಿಂದ ತೋರ್ದರು ವಿವಿಧ ಕೌಶಲವ |
ಮುಂದೆ ಬಾಗಿಲ ಭಟರ ಕಾವಲು |
ಪಿಂದೆ ಗುರುಸುತ ಕೃಪರ ರಕ್ಷಣೆ |
ಯಿಂದ ನೆರೆದಿಹ ಸಭೆಗೆಮೈದೋರಿದನು ಧರ್ಮಜನೂ ||170||

ರಾಗ ಕೇತಾರಗೌಳ ತ್ರಿವುಡೆತಾಳ

ಗುರುವಿನಂಘ್ರಿಗೆ ಮಣಿದು ಹಿರಿಯರಿ | ಗೆರಗಿಚಾಪಕೆ ತಿರುವ ಜೋಡಿಸಿ |
ಭರದಿ ಝೇಂಕತಿಗೈದು ತೋರಿದ | ಸರಳಮಳೆಯಾ ||171||

ಸುರಗಿಚಕ್ರದ ಮುಸಲ ಮುದ್ಗರ | ದರಿವಕಾಣಿಸಿ ವಾಹನಂಗಳ |
ಪರಿಯ ತೋರಿಸೆ ಭೀಷ್ಮ ವಿದುರರು | ಹರುಷಗೊಳಲೂ ||172||

ಮತ್ತೆ ಕಳಕಳರವದೆ ಕೌರವ | ನತ್ತಪಾಯವ ಧಾರು ಭಳಿರೆನೆ |
ಒತ್ತುಗೊಂಡಿಹ ಭಟರು ಪಿಡಿದಿರೆ | ಸುತ್ತಸೊಡರಾ ||173||

ಭೂರಿ ಭೂಷಣ ಮಿರುಗೆ ಕುರುಪತಿ | ಭೋರನೈತರೆ ಕಳನ ಮಧ್ಯಕೆ |
ವೀರನಾತನ ಕಾಣುತಾಸಭೆ | ಯೋರು ಗುಡಿಸೇ ||174||

ಹಿರಿಯರಡಿಗಳಿಗೆರಗಿ ಕೌರವ | ಕರದ ಕತ್ತಿಯ ಬೀಸಿತೋರಿದ |
ಭರದ ಪೊಯ್ಲಿನ ಗದೆಯ ತಿರುಪಿಗೆ | ತಿರೆಯು ನಡುಗೇ ||175||

ಅರರೆ ಕುರುಕುಲ ಕೈರವಾಮತ | ಕಿರಣ ಭಳಿರೆನೆ ಸಭೆಯು ಸುಭಲಜೆ |
ತರುಣ ಕೌರವಗಿರದೆ ರಕ್ಷೆಯ | ವಿರಚಿಸಿದಳೂ ||176||

ಕಂದ

ವಿದುರಂ ಪೇಳ್ದೊಡೆ ಮುದದಿಂ |
ದದನಾಲಿಸುತಂಧಕನಪನತ್ಯತ್ಸುವದಿಂ ||
ಮುದಗೊಳೆಸುಬಲಜೆಗಂ ನಗೆ |
ವದನದಿ ಮಿನುಗಲ್ ಪವನಜನೈತರೆ ಕಳಕಂ ||177||

ರಾಗ ಭೈರವಿ ಝಂಪೆತಾಳ

ಮದಗಜದ ಕುಂಭವನು | ಸದೆದಿರುವಕೇಸರಿಯೊ |
ಮದಜಂಭಕುಲಿಶಧರ | ನಿದೊ ಭಳಿರೆ ಭೀಮಾ ||178||

ಬಂದನೆಂದಖಿಳಜನ | ಸಂದಣಿಯೆ ನೋಡುತಿರೆ |
ಮುಂದಿರುವ ಗುರು ಭೀಷ್ಮ | ರಿಂದೆಸವ ಸಭೆಗೇ ||179||

ತಲೆವಾಗಿ ನಮಿಸುತ್ತ | ಬಲವಂತ ತೋರಿಸಿದ |
ನಿಳೆಬೆರಗು ಗೊಳುವಧಿಕ | ಕಲಿತನದ ಕಲೆಯಾ ||180||

ಕರಿತುರಗದೇರಾಟ | ಬರಿಗೈಯ್ಯಳರಿಗಳನು |
ಮುರಿದಿಡುವ ಸಾಹಸವ | ನುರುದಂಡ ಬಲವಾ ||181||

ನೂರುಮಡಿ ಕುರುಪತಿಗೆ | ಮೀರಿರುವ ಜಗಜಟ್ಟಿ |
ವೀರನಿವನೆಂದು ಸಭೆ | ಮಾರುತಿಯ ಪೊಗಳೇ ||182||

ಗುರುಚರಣಕೆರಗುತ್ತ | ಲರುಹಿದನು ಪವನಸುತ |
ಕುರುಪತಿಗೆ ಬಲವಿರಲು | ಬರಲಿಲ್ಲ ಕಣಕೇ ||183||

ಕಂದ

ಎನೆ ಕೌರವನಬ್ಬರದಿಂ |
ನಲಕುತೆ ಮಾರ್ಕೋಲ್ವಿಡಿದೊಡನೈತರೆಕಳಕಂ ||
ಧಣುರೆತೆವರೇರ್ದೊಡನಂ |
ಮೊನೆಗಣೆಗದೆಯಬ್ಬಣಂಗಳಿಂ ಪೊಯ್ದಡಲ್ ||184||

ರಾಗ ಪಂಚಾಗತಿ ಮಟ್ಟೆತಾಳ

ರೋಷವೇರಿ ಪವನತನುಜ | ಬೀಸೆ ಗದೆಯ ಕೌರವೇಂದ್ರ |
ನಾಸಮೀರಸುತನಿಗೊದೆದು | ಘಾಸಿಗೊಳಿಸಿದಾ ||
ವಾಸಿಪಂತವೇರಿ ಭೀಮ | ನಾಸಮರ್ಥನುರಕೆಮೆಟ್ಟ |
ಲಾಸುಯೋಧನಾಖ್ಯ ತರುಬೆ | ಕೇಶರಾಜಿಯಾ ||185||

ಕಾಣುತೊಡನೆ ಭೀಷ್ಮನವರ | ಮಾನಿ ರೆಲವೊ ಸಾಕು ಶೌರ್ಯ |
ಜಾಣರೆನುತ ಪೇಳೆಕೇಳ್ದು | ಮಾನ್ಯರಾಕ್ಷಣಾ ||
ದ್ರೋಣತನುಜ ಕೃಪರು ಕೈಯ್ಯ | ತ್ರಾಣದಿಂದ ಪಿಡಿಯುತವರ |
ಮಾಣಿಸಿದರು ನಯದೊಳತ್ತ | ಲೇನನೆಂಬೆನೂ ||186||

ನರನ ಕಾಣುತಾಗ ದ್ರೋಣ | ಶಿರದೆ ಸನ್ನೆಗೊಡಲು ನೋಡಿ |
ಭರದೊಳಾತನೆದ್ದು ಬರಲು | ಶರಪ್ರವೀಣನೂ ||
ಮೊರೆವ ಭೇರಿ ವಾದ್ಯರವದೆ | ಸುರಪನಣುಗ ರಂಗಕೈದೆ |
ನೆರವಿ ಭಾಪು ಪಾರ್ಥನೆಂದು | ಕರೆದು ಪೊಗಳಲೂ ||187||

ವಾರ್ಧಕ

ಗುರು ಭೀಷ್ಮ ಧೃತರಾಷ್ಟ್ರಕೃಪವಿದುರರಿಂಗೆರಗಿ |
ಹಿರಿಯರ್ಗೆ ತಲೆವಾಗಿ ಗಾಂಧಾರಿಕೊಂತಿಯರ |
ಸಿರಿಚರಣಕಂಬಾಗಿ ಶಿರವೆತ್ತಿ ಗೀರ್ವಾಣ ಕೋಟಿಗಂ ಕೈಯ್ಯಮುಗಿಯೇ

ನೆರವಿಗರ್ ಕಂಡವನ ಬಲ್ಮೆಯಂ ಫಲುಗುಣನೆ |
ಚರಿತಾರ್ಥ ನಿಖಿಳ ವಿದ್ಯೆಗೆ ಪದಕ ವಿನಂುಗುಣ |
ಭರಿತನೆನೆ ತೋರಿದಂ ದಿವ್ಯಾಸ್ತ್ರನಿಕರಗಳ ಕೈಚಳಕದೆಸುಗೆಗಳನೂ ||188||

ರಾಗ ಭೈರವಿ ತ್ರಿವುಡೆತಾಳ

ಯೇನನೆಂಬೇ | ಸಾಹಸ | ಯೇನನೆಂಬೇ || ಪಲ್ಲವಿ ||

ಆನೆಯನು ಪಿಡಿದೇರ್ದು ತೋರಿದ | ತಾನೆ ವಿತರಣದಾನೆಯೆಂದೆನೆ ||
ಯೇನನೆಂಬೇ ಸಾಹಸ ಯೇನನೆಂಬೇ || ಅನು ಪಲ್ಲವಿ ||

ಗಗನ ಪಥದಲಿ ಕುಣಿಸಿ ಕುದುರೆಯ | ನೆಗೆದು ಪುಟಗೊಳೆಪಾರ್ಥನೂ ||
ತೆಗೆದು ಪಾವಕ ಶರಧಿ ನೆಲವನು | ಬಗಿಯುತಗ್ನಿಯ ತೋರ್ದನೂ ||
ಝಗೆಯ ವಾರುಣ ಬಾಣದಿಂದಲೇ | ವಿಗಡನಾರಿಸಲಾತನೂ ||
ಜಗದೊಳೀತನ ಪೋಲ್ವರಿಲ್ಲೆನೆ | ಪಗೆಗೆ ಕೊಂತವದಾಗಿ ತೋರಿದ || ಯೇನನೆಂಬೇ ||189||

ಕೊರಳ ಸೆರೆಗಳು ಬಿಗಿಯೆ ಭೀಷ್ಮನು | ಹರುಷ ಭಾರದಲಿರ್ದನೂ ||
ತರಳಗೆಣೆಯಿಲ್ಲೆನುತ ವಿದುರನು | ಭರಿತತೋಷವ ತಾಳ್ದನೂ ||
ಅರಳಿದಾನನವೆಸೆಯೆ ಕುಂತಿಗೆ | ನರ ವಿನೋದಿತನಾದನೂ ||
ನೆರವಿ ಬೆದರುವ ತೆರದಿ ಬೊಬ್ಬಿಡು | ತುರಿದು ಕರ್ಣನು ಬಂದನಾಗಾ || ಯೇನನೆಂಬೇ ||190||

ರಾಗ ಮಾರವಿ ಏಕತಾಳ

ತೆಗೆ ತೆಗೆ ನರನನ್ನು ಪೊಗಳುವ ಪಾಠಕ | ರೊಗುಮಿಗೆಯಾಳ್ತನವಾ ||
ಅಗಣಿತವೇನಹ ಪಾರ್ಥನ ಕೈಗುಣ | ಗೆವೆನೆ ತಾನದನೂ ||191||

ಗುರುಗಳಿಗೆರಗುತ ತರಣಿಯನೀಕ್ಷಿಸಿ | ಕರಗಳ ಮುಗಿದೊಡನೇ ||
ಧರಣಿಯೆ ನಡುಗುವ ತೆರದೊಳು ಘರ್ಜಿಸಿ | ತಿರುವಿಗೆ ಬಾಣವನೂ ||192||

ಜೋಡಿಸಿ ಪಾರ್ಥನು ತೋರಿದ ಕೌಶಲ | ಕೀಡೆನೆ ಗಾಢದೊಳೂ ||
ಮೂಡಿಸಿ ಕಣೆಯೊಳು ಕೋಂಟೆಯನದಕುರಿ | ಯೂಡಿಸಿ ತೋರಿಸಿದಾ ||193||

ಚದುರತೆಗಾತನ ಭಾಪೆನಲಾಸಭೆ | ಬದಿಗಿಹ ಫಲುಗುಣನಾ ||
ಕದನಕೆ ನಿಲುಬಾರೆನುತಲಿಜರೆಯುತ | ಕೆದರಿಸೆ ಶರಗಳನೂ ||194||

ಕಡಿದತಿ ಜವದೊಳಗರ್ಜುನ ಕಣೆಗಳ | ತಡೆದೊಡನಾತನನೂ ||
ಫಡಫಡ ಸೂತಜ ಸಲುಗೆಯೆ ತನ್ನೊಳು | ನಡೆಯೆನುತೆಸೆಯಲಿಕೇ ||195||

ತರಣಿಜನಾತನ ಶರಗಳ ಖಂಡಿಸಿ | ಸರಳಿನ ಸುರಿಮಳೆಯಾ ||
ಸುರಿಯಲು ಕಾಣುತೆ ಬೆದರಿದುದಾ ಸಭೆ | ಪರಿಯರಿತಾಕ್ಷಣದೀ ||196||

ಕಂದ

ಭರದೊಳ್ಪಾಯ್ದಾ ಭೀಮಂ |
ಗುರುಸುತ ಕೃಪಮುಖ್ಯರರ್ಜುನನ ತಡೆದೊಡನಂ ||
ಚುರಚುರನೀಕ್ಷಿಸಿ ಕರ್ಣನ |
ಶರಧನ್ವಾತ್ಮಜನುಸಿರ್ದನತಿರೋಷದೊಳಂ ||197||

ರಾಗ ಮಾರವಿ ಅಷ್ಟತಾಳ

ವೀರನಹುದಹುದೋ | ರಾಧೇಯನೆ | ಧೀರನಹುದಹದೋ ||
ಆರುನೀನೆಂಬುದ | ವಾರತೆ ಕೇಳ್ದಿಹೆ | ವೀರನಹುದಹುದೋ  || ಪಲ್ಲವಿ ||

ನೀನಾರು ಪೆತ್ತವರಾರಯ್ಯ | ಪಂದೆ | ಚೆನ್ನಾಗಿ ತಿಳಿದಿರುವೇನಯ್ಯ |
ಆ ನರಾಧಿಪ ಮಕ್ಕಳಿದಿರಾಟಕನುವಾಗೆ | ಪುಣ್ಯಾತ್ಮರಿಲ್ಲವೇನೂ ||
ಫಲುಗುಣನೊಡನೆ | ಮೇಣಾವಗುಣದಿ ನೀನೂ | ಸ್ಪರ್ಧಿಸೆನಿಂದು |
ಹೀನಾತ್ಮ ನುಡಿದೆಯೇನೂ | ಸೂತಜ ಮಹ | ವೀರನಹುದಹುದೋ ||198||

ಎನಲು ಕೇಳುತ್ತೆ ಕೌರವೇಂದ್ರಾ | ತನ್ನ | ಮನದೊಳುರಿಯುತ್ತಲವನೀಂದ್ರಾ ||
ಅನುವರದೊಳು ವೀರರೆಚ್ಚಾಡೆ ಕುಂದೇನು | ನಿನಗಾರು ಮಾತೆಯೆಂದೂ ||
ಪೇಳದ ನಿ | ನ್ನನು ಕೇಳ್ದರುಂಟೇನೂ | ಕಳಶದೊಳುದಿಸಿದ |
ಮುನಿದ್ರೋಣಗಾರವ್ವೆಯೊ | ಬಲ್ಲಿದನಹ | ವೀರನಹುದಹುದೋ |
ಆಚಾರ್ಯನೆ | ಧೀರನಹುದಹದೋ ||199||

ಭಾಮಿನಿ

ನೀತಿಯರಿಯದೆ ವಿಪ್ರರೀಪಂ |
ಜಾತಿಭೇದವಗೊಳಿಸಿ ಜಗವ ನಿ |
ಪಾತಗೈದರು ಕರ್ಮಗುಣಗಳ ಮರೆದು ಲೋಕದಲೀ ||
ಭೂತಳಾಧಿಪ ಕುವರರೊಟ್ಟಿನೊ |
ಳೀತಗೆಡೆಗೊಳಲೀವೆನಂಗಮ |
ಹೀತಳದ ನಿಜ ರಾಜಪದವಿಯನೆನುತ ಕರ್ಣನನೂ ||200||