ಕಂದ

ಯೆನುತವರಂತೆಯ್ ಗೊಳಿಸುತೆ |
ಗುಣನಿಧಿ ಭೀಷ್ಮಂ ಗಜಾಶ್ವ ಗೋವ್‌ಭೂಮಿಗಳಂ ||
ಮನದಣಿವಂದದೊಳೀಯಲ್ |
ಘನತೆಗೆ ಬೆರಗಾಗುತೆ ಕೃಪನವಗಿಂತೆಂದಂ ||61||

ರಾಗ ಬೇಗಡೆ ಆದಿತಾಳ

ದೇವ ವ್ರತ ಭೋ ಕೋವಿದನೆ ಧೀರಾ |
ಸೂಚಿಸುವುದೆನಗದ |
ಭಾವಿಸುತ ನಿಯಮಾವಳಿಯ ಸಾರಾ  || ಪಲ್ಲವಿ ||

ಆವ ವಿಧದೊಳಗಾವ ಕಾಲದಿ | ಗಾವಿಲರ ಮತಿಗಾವ ಪಾಠವ |
ನೋವಿ ಕಲಿಸಲಿ ಭಾವ ಶುದ್ಧಿಗೆ | ಪಾವನತ್ವದ ಠಾವನರಿಯಲಿ |
ಕಾವುದತಿಪ್ರೀತ || ದೇವವತ ಭೋ | ಕೋವಿದನೆ ಧೀರಾ || ಅನು ಪಲ್ಲವಿ ||

ಆದಿಯಲಿ ತಿಳಿದೋದಲಿಷ್ಟದ | ಸಾಧನಗಳೇನೂ | ಚಿತ್ತಕೆ |
ಬೋಧಿಸಲು ಬೇಕಾದ ಪಠ್ಯವ | ನಾದರಿ ಸಿನೀನೂ || ಮತ್ತದ |
ಬೋಧಿಸುತಲೊರೆ ಸಾಧಿಸುವೆನದ | ಕಾದಿರಿಸಿ ನಾನೂ | ಬಾಲರ |
ಮೋದಕತಿ ಸೊಗಸಾದ ಕೇಳಿಗೆ | ಗೋದದೆಡೆಯನ್ನೂ || ಪೇಳಿದ |
ಭೇದವಿರಹಿತ | ಸಾಧುಸನ್ಮಿತ | ಭೂ ದಿವೋನ್ನತ | ನಾದಶಿಕ್ಷಿತ |
ವೇದವಿದ ಗುರು | ಬಾದರಾಯಣ | ಪಾದ ಸೇವಿತ | ನಾದಮಹಿಮನೆ ||
ದೇವವತ ಭೋ ಕೋವಿದನೆ ಧೀರಾ ||62||

ಲಾಲಿಸೆಲೆ ಗುಣಶೀಲ ಗುರುವರ | ಪೇಳುವುದನಿದನೂ | ನಮ್ಮಯ |
ಬಾಲರೇಳಿಗೆಯಾಲಯದೆ ನರ | ಪಾಲಕುವರರನೂ || ನಿಚ್ಚದ |
ಕಾಲನಿಯಮಕೆ ಸಾಲಿಗಿರಿಸುತ ಪೇಳಿ ವಿಧಿಗಳನೂ | ಸಂಧ್ಯೆಯ |
ಮೂಲಮಂತ್ರದ ಕೀಲಕಾದಿಯ | ನೋಳಿ ಗೈದವನೂ || ವಿರಚಿಸಿ |
ತಾಲುಮೂರ್ಧನಿ | ಮೇಳದಕ್ಕರ | ಜಾಲದುಚ್ಚರ | ಬಾಲಕಾವ್ಯವಿ |
ಶಾಲಚರಿತೆಯ | ಸಾಲನೋದಿಸಿ | ಪೇಳವೇದವ | ತಾಳ್ಮೆಗೊಂಬರು |
ಲಾಲಿಸೆಲೆ ಗುಣಶೀಲ ಗುರುವರನೇ ||63||

ಕಂದ

ಛಂದಂಗಳ ಬಂಧವನುಂ |
ಅಂದಂಗೊಳೆ ಲಾಕ್ಷಣಿಕದ ಬಹುಬಿನ್ನಣಮಂ ||
ಮುಂದಂ ಗಾಣಿಸೆ ತತ್ವಾ |
ನಂದಂವೇದಾರ್ಥದರ್ಶನಂಗಳ ಕಲೆಯಂ ||64||

ತಿಳಿಸಲ್ ಬೇಕದ ನೆಳೆಯರ್ |
ಕಲಿಯಲ್ಲನಿತಂಗಳ ಸಲೆಪಾಠಕ್ರಮದಿಂ ||
ಬಲಿಯಲ್ಕಾಯಕ ಬಯಲೊಳ್ |
ಕಲೆತಾ ವ್ಯಾಯಾಮದೆ ನುರಿಯಲ್ಬೇಕನಿಶಂ ||65||

ವಾರ್ಧಕ

ಇದುಮಹಾ ಭಾರತದ ವಿಶ್ವವಿದ್ಯಾಲಯವು |
ಇದು ಚುತುರ್ದಶ ಕಲಾಮಂದಿರವು ಭುವನಜನ
ಕಿದುವೆ ನಿಜ ಭಾಗ್ಯನಿಧಿ ಕುಲಗೋತ್ರ ಬಡವ ಬಲ್ಲಿದನೆಂಬುದಿಲ್ಲಿದರೊಳೂ ||
ಬುಧವಂದ್ಯ ಜೊತೆಗೊಳಿಪೆನತಿಕುಶಲ ಬೋಧಕರ |
ಸದಮಲದ ಸಂಗೀತ ಸಾಹಿತ್ಯ ಚಿತ್ರಕಲೆ |
ಯುದಯಿಸುತ ನೆಲೆಯಾಗಿ ವರ್ಧಿಸಲಿ ಗುರುರಾಯ ಪಾಲಿಸೀ ಗುರುಕುಲವನೂ ||66||

ರಾಗ ಕೇತಾರಗೌಳ ತ್ರಿವುಡೆತಾಳ

ದೇವಗಂಗಾ ಸುತನ ವಚನವ | ಸಾವಧಾನದಿ ಕೇಳುತಾ ಕೃಪ |
ಭಾವಶುದ್ಧದೊಳೊಪ್ಪುತೆಂದನು | ಪಾವನಾತ್ಮಾ ||67||

ಲಾಲಿಸೈ ಮಹ ಭಾಗ್ಯವಂತೆನೆ | ನಾಳೆ ನವಮಿಗೆ ನಮ್ಮ ಗುರುಕುಲ |
ಬೆಳಗುತುದಯವಗೊಳಲಿ ಕರಸೈ | ತಿಳಿದ ಬುಧರಾ ||68||

ಭೂಸುರೋತ್ತಮನೆಂದ ತೆರದಲಿ | ಸಾಸಿದರ ಘನವೇದ ವಿದರನು |
ತೋಷದಿಂದಲಿ ಬರಿಸಿ ಭೀಷ್ಮನು | ಈಶಸುತನಾ ||69||

ವ್ಯಾಸಪೀಠದೊಳಿರಿಸಿ ಪೂಜಿಸಿ | ಆ ಸುಯೋಧನ ಮುಖ್ಯ ತರಳರ |
ಭೂಷಣದಿ ಸಿಂಗರಿಸಿ ಪರಕೆಯ | ಘೋಷಗೊಳಿಸಿ ||70||

ಶಾರದಾಂಬೆಯ ಪದವ ಭಕ್ತಿಯ | ಸಾರ ಮಂತ್ರಗಳಿಂದಲರ್ಚಿಸು |
ತಾರತಿಯ ಬೆಳಗುತ್ತ ಬಾಲರು | ಸೇರಿ ನಮಿಸೇ ||71||

ಹಿರಿಯರಂಘ್ರಿಗೆ ಮಣಿದು ಕುವರರು | ಗುರುವರೇಣ್ಯನ ಪದವನರ್ಚಿಸಿ |
ಪರಕೆಗೊಂಡಿರಲೋದಿಸಿದನಾ | ತರಳರನ್ನೂ ||72||

ಕಂದ

ಗಜಮುಖನಂ ಪೂಜಿಸಿ ಬಳಿ |
ಕಜನರಸಿಯ ಪಾಡುತೆ ಗುರುಪದಕೊಂದಿಸುತಂ ||
ನಿಜಮತಿಯಿಂದಾ ಬಾಲರ್ |
ಭಜನೆಯ ಗೈದೋದುತಲಿರೆ ನಿತ್ಯೋತ್ಸವದಿಂ ||73||

ವಾರ್ಧಕ

ಧರಣೀಶ ಕೇಳಿಂತು ಹಸ್ತಿನಾಪುರದೊಳಗೆ |
ನೆರೆಕಲೆತು ಶಾಸ್ತ್ರಂಗಳಧ್ಯಯನಮಂ ಮಾಳ್ಪ |
ಗುರುಕುಲವದಿಂತಾಗೆ ಬಾಲಕರ್ ಬರುತಿರ್ದರಗಣಿತದ ಸಂಖ್ಯೆಯಿಂದಾ ||

ಸಿರಿಮಂತನರುಹ ಬಲ್ಲಿದ ಬಡವನಿಂತೆಂಬ |
ಕಿರುಕುಳವಲ್ಲಿಲ್ಲ ಪಾನಭೋಜನ ಸುಖದೊ |
ಳುರುತರದ ಸಂತುಷ್ಟಿಯಂಗೊಳಿಸೆ ಕುಲಪತಿಯೆ ತಾನಾಗಿ ಕೃಪದೇವನೂ ||74||

ರಾಗ ಸಾಂಗತ್ಯ ರೂಪಕತಾಳ

ಇಂತು ವೈಭವದಿಂದ | ಸಂತಸದೆ ಬಾಲಕರ್ | ಚಿಂತಿತಾರ್ಥಗಳನ್ನು ತಿಳಿಯೇ ||
ಪಿಂತಿರುವ ನವರಾತ್ರಿ | ಯಂತ್ಯದುದುತ್ಸವಕೊರ್ಮೆ | ಗೊಂತಿರುವ ಸುರನದಿಯಸುತನಾ ||75||

ಕರೆತಂದು ಮೆರೆವಗ್ರ | ದುರಪೂಜೆಯವಗಿತ್ತು | ಗುರುಕುಲದ ಬಾಲಕರ ಕಲೆಯಾ ||
ಪರಿಕಿಸಲ್ಬೇಕೆಂದು | ಅರುಹಲ್ಕೆ ನಡೆತಂದ | ಗುರುದೇವ ಸಿರಿಭೀಷ್ಮನೆಡೆಗೇ ||76||

ದೂರದಿಂ ಕಂಡವನ ಭೋರನೆ ಸುರಸಿಂಧು | ನಾರಿಯಸುತನಿದಿರ್ಗೊಂಡೂ ||
ಚಾರುಮನ್ನಣೆಯಿತ್ತು | ಯೇರಿಸುತ್ತಾಸನವ | ಧಾರುಣೀಸುರನ ಪೂಜಿಸುತಾ ||77||

ಹರುಷದಿಂ ಬೆಸಗೊಂಡ | ಗುರುವರ್ಯ ನೀವ್ ಬಂದು | ದರಿವಾಗ ಬೇಕೆಮಗೆ ನಿಮ್ಮಾ || ಮರಿಗಳೆಂತಿಹರೆಲ್ಲ | ಮರುಳಾಟವಿಲ್ಲೆಸೆ | ಅರುಹಬೇಕೆನಲೆಂದ ನಗುತಾ ||78||

ಬಲ್ಲಿದ ಸ್ಥಿರಯೋಗಿ | ಸೊಲ್ಲಿಸಲೇನುಂಟು | ಯೆಲ್ಲವು ನೀ ಪೇಳ್ದ ತೆರದೀ ||
ಅಲ್ಲಿಯ ಕಾರ್ಯಗಳು | ಒಳ್ಳಿತಾಗಿಹವೆಲ್ಲ | ಎಲ್ಲಿಯು ದುರ್ನಯವದಿಲ್ಲಾ ||79||

ದರುಶನವನಿತ್ತೊರ್ಮೆ | ತರಳರೆಲ್ಲರನೋಡಿ | ಬರುವಂತೆ ನಾನಿಮ್ಮ ಕರೆಯೇ ||
ಸಿರಿಮಂತ ಬಂದಿರ್ಪೆ | ಸಿರಿಸರಸ್ವತಿದೇವಿ | ಬರಪೇಳ್ದಳರಿಕೆಯಾಗಿರಲೀ ||80||

ವಚನ || ಆಗಳ್ ಭೀಷ್ಮಂ ||

ರಾಗ ಮಧ್ಯಮಾವತಿ ಏಕತಾಳ

ಗುರುದೇವ ಕೇಳ್ದೆ ನಾನೀವೆಂದ ಸೊಲ್ಲಾ |
ಸರಿಗಾಣ್ಬುದಹುದೆಂಬೆ ಕಿರಿಯರನೆಲ್ಲಾ ||
ಗುರುಕುಲದೊಳಗೇನ ಕಲಿತಿಹರೆಂದೂ |
ಹಿರಿಯರು ಕಾಣಲುಬೇಕಯ್ಯ ಬಂದೂ ||81||

ಧತರಾಷ್ಟ್ರನನುಜಾತನದನೆಲ್ಲವೆಮಗೇ |
ಪ್ರತಿದಿನಕರಿವಂತೆ ಪೇಳ್ದಪ ಕೊನೆಗೇ ||
ಸುತರಿತ್ತ ಬರಲಾನು ಬೆಸಗೊಂಬೆನವರಾ |
ಮತಿವಂತರಿಹರೆಲ್ಲ ಕೇಳ್ಮುನಿಪ್ರವರಾ ||82||

ಶರಧನ್ವ ಸಂಜಾತ ತೆರಳಿರಿ ನೀವೂ |
ಗುರುಕುಲದುತ್ಸವದೊಳು ಸೇರಲಾವೂ ||
ಬರುವೆವೈ ವಿದುರನು ಸಹಿತರೆಲ್ಲರೊಡನೇ |
ಹಿರಿಮೆಯದೆಮಗಾಯ್ತು ಭೂದೇವ ಮಡನೇ ||83||

ವಚನ || ಎಂದಭಿನಮಿಸುತಲಾಚಾರ್ಯನ ಬೀಕ್ಕೊಳುತಾ ಭೀಷ್ಮಂ ವಿದುರಾದಿಗಳೊಡವೆರಸುತೆ, ತೆರಳ್ದನಾ ಶಾರದ ಮಹೋತ್ಸವಕಾಗಳ್, ವಿಶ್ವವಿದ್ಯಾಲಯದೆಡೆಗಂ ||

ಕಂದ

ತಾತನ ಬರಮಂ ಕಂಡಾ |
ಭೂತಳದರಸರ ಕುಮಾರಕರ್ ಸಹಿತೊಡನಂ ||
ಪ್ರೀತಿಯೊಳವದಿರಿದಿರ್ ವಂ |
ದಾತನ ಪದಕಂ ಮಣಿದತಿ ಭಕ್ತಿಯೊಳೆರಗಲ್ ||84||

ರಾಗ ಸಾಂಗತ್ಯ ರೂಪಕತಾಳ

ಪಿಡಿದೆತ್ತಿ ಪಸುಳೆಗಳ ಪರಸಿ ಮುದ್ದಿಡುತೆಂದ | ಕಡುಹರುಷವಾಯ್ತಿಂದು ನಮಗೇ ||
ಬೆಡಗು ರಂಜಿಪುದೆನ್ನ ಚಿನ್ನಗಳೆ ನೀವ್ಕಲಿತು | ಪೊಡವಿಯೊಳ್‌ಜಾಣರೆಂದಾಗೇ ||85||

ನಿಜವಂಶ ವರ್ಧಿಪುದು ಸತ್ಕೀರ್ತಿ ಕೆಳೆಗೊಂಬು | ದಜನರಸಿಯೊಲ್ಮೆಯೊಂದಿರಲೂ ||
ವಿಜಯವಪ್ಪುದು ನಿಮಗೆನಲೆಂದನಾಚಾರ್ಯ | ಸುಜನೌಘವಂದಿತಗೆ ನಮಿಸೀ ||86||

ವರದಗ್ರ ಪೀಠವನು ಆರೋಪಿಸಲು ಬೇಕು | ಕರಿವದನಗರ್ಚಿಸಲಿಕಾಯ್ತು ||
ಪುರುರಾಜಕುಲದೀಪ ಚಿತ್ತೈಸಬೇಕೆಂದು | ಕರೆತಂದು ಭೀಷ್ಮನ ಮುದದೀ ||87||

ಉನ್ನತಾಸನವಿತ್ತು ಕುಳ್ಳಿರಿಸಿ ಮಗುಳವರ್ | ಸನ್ನುತಗೆಸುಮವಷ್ಟಿಗೈದೂ ||
ಮನ್ನಿಸುತೆ ಗಜವದನಗಾರತಿಯನೆತ್ತಿದರು | ಚೆನ್ನಿಗರ್ ಜೊತೆಗೂಡಿ ನಮಿಸೀ ||88||

ವಚನ || ಮತ್ತಂ ನಕುಲ ಸಹದೇವರ್ಕಳಾರತಿಯಂ ಪಿಡಿದಾಗಳ್ ||

ರಾಗ ಖರಹರಪ್ರಿಯ ಏಕತಾಳ

ಶ್ರೀ ಗಜಮುಖಸುರಸೇವಿತ ಜಯ ಜಯತೂ |
ನಾಗಾವತ ಗುಣವಾರಿಧಿ ಜಯ ಜಯತೂ ||
ಭೋಗಿ ವಿರಾಜಿತ ಕುವರನೆ ಜಯ ಕರುಣಿಸು |
ಯೋಗೇಶ್ವರ ಸನ್ಮತಿಯನುದಯದೀ || ಶ್ರೀ ಗಜಮುಖ ||89||

ವಚನ || ಇಂತಾ ಬೆನಕಂಗಾರತಿಯಂ ಬೆಳಗುತೆ ಮತ್ತಾಭಾರತಿಯಂ ಪೂಜಿಸಿ ಪಾಡಿದರಾಗಳ್ ||

ವತ್ತ || [ಇದನ್ನು ಮಠ್ಯತಾಳದಿಂದಲೂ ಹಾಡಬಹುದು]

ಆದಿಶಕ್ತಿ ಚಿತ್ಸ್ವರೂಪೆ ತತ್ವ ಬೋಧಶಾಲಿನೀ |
ನಾದಬಿಂದು ನಿಷ್ಕಳಾಂಕೆ ಶೂನ್ಯ ಪೀಠವಾಸಿನೀ ||
ಭೂ ದಿವಾದಿ ಲೋಕಮಾನ್ಯೆ ಪಾತು ವಿಶ್ವರೂಪಿಣೀ |
ವೇದವೇದ್ಯೆ ಪಾಲಿಸಂಬ ಪಾರ್ವಣೇಂದು ಭಾಸಿನೀ ||90||

ಮಂತ್ರ ಶಾಸ್ತ್ರ ತಾಂತ್ರಿಕಾದಿ ಬೀಜ ದಕ್ಷರಾತ್ಮಿಕೇ |
ಯಂತ್ರಗುಹ್ಯಚಕ್ರವಾಸೆ ಧೀಮಹೀತ್ವದಾಣ್ಮಿಕೇ ||
ಅಂತರಾಟ್ವಿರಾಟದಗ್ರೆ ಸತ್ಪದಾರ್ಥ ಭೂತಿಕೇ |
ಸಂತಶರ್ವನಂತರಾತ್ಮೆ ಪಾತುಪಾಲಿಸಂಬಿಕೇ ||91||

ಭಾಮಿನಿ

ಇಂತು ಸಂಭ್ರಮದೊಸಗೆ ಮೆರೆಯಲು |
ಸಂತಸದೊಳಾಭೀಷ್ಮ ಯಮಜನೊ |
ಳಿಂತು ಕೇಳಿದ ವೇದ ಸಂಹಿತೆ ಸೂತ್ರದರ್ಥಗಳಾ ||
ಗೊಂತನರಿವೈ ಬ್ರಾಹ್ಮಣಂಗಳ |
ನೆಂತು ವಿಭಜಿಸಬಹುದು ಪೇಳೆನೆ |
ಕುಂತಿಯಾತ್ಮಜ ನಮಿಸುತಜ್ಜನೊಳೆಂದ ವಿನಯದಲಿ ||92||

ರಾಗ ಕೇತಾರಗೌಳ ಅಷ್ಟತಾಳ

ಚಾರು ವೇದವೆ ನಾಲ್ಕು | ಮೂರು ಭಾಗಗಳಾಗಿ | ಮೇರೆಗೊಂಡಿಹವದಕೇ |
ಸಾರ ಸಂಹಿತೆ, ಶತಿ | ಸೇರಿಕೊಂಡಿಹ ಸೂತ್ರ | ದಾರಿ ತೋರಿಸುತಿಹವೂ ||93||

ಬಲಿಯನರ್ಪಿಸಿಪಾಡೆ | ಚೆಲುವಿನ ಗೀತಗಳ್ | ಪೊಳೆಯೆ ಸಂಹಿತದೊಳಗೇ ||
ತಿಳಿದತ್ತಲದರರ್ಥ | ಗಳ ಪೇಳೆ ಶ್ರುತಿಗಳು | ನೆಲೆಗೊಂಡ ಬಳಿಕತ್ತಲೂ ||94||

ಬೆಳೆದ ಗ್ರಂಥಗಳನ್ನು | ಸುಲಭಗೊಳ್ಳಿಸಲಾಗಿ | ಬಳಕೆ ಗೈದರು ಸೂತ್ರವಾ ||
ತಿಳಿದಷ್ಟನರುಹಿದೆ | ನೆಲೆ ತಾತ ಸಲಹೆನೆ | ವೊಲಿದು ಮೋದದೆ ಭೀಷ್ಮನೂ ||95||

ಕರೆದಾಗ ಭೀಮನ | ಬರಿದೆ ತಿಂಡಿಯ ತಿಂಬ | ಗುರುವ ನೀನರಿತುದೇನೂ ||
ಸ್ವರ ವರ್ಣ ಧಾತುಗಳ್ | ನೆರೆ ಶಬ್ದ ಸೂತ್ರದ | ನಿರುಗೆಯೆಂತದನು ಪೇಳೂ ||96||

ಎನೆಕೇಳ್ದು ನಮಿಸುತ್ತ | ಲನಿತು ಶಾಸನಗೊಂಡ | ವಿನುತ ಶಬ್ದಾರ್ಥಗಳಾ ||
ತನಿರೂಪ ಪದಸಂಧಿ | ಗುಣಲಿಂಗಗಳ ಪೇಳೆ | ಗುಣವಂತನಗೆಯ ಸೂಸೇ ||97||

ಬಳಿಕ ಕೌರವಗೆಂದ | ನಿಳೆಯಪಾಲಕಗಿರ್ಪ | ಕಲೆಯೊಳುತ್ತಮವಾವುದೂ ||
ತಿಳಿಯಬೇಕದನೆಂತು | ನಲವಿಂದ ಪೇಳೆನೆ | ತಲೆವಾಗುತವನೆಂದನೂ ||98||

ರಾಗ ಶಂಕರಾಭರಣ ಮಟ್ಟೆತಾಳ

ತಾತ ಕೇಳು ಪ್ರೀತರಾರು ಧೂರ್ತರೆಂಬುದಾ |
ಭೂತಳೇಶ ತಿಳಿಯಬೇಕು ಜಡರ ಸರ್ವದಾ ||
ರೀತಿಗುಚಿತವೆನಲು ಬೀರಿ ಮುಗುಳುನಗೆಯನೂ |
ಮಾತನರಿದು ನುಡಿಯಬೇಕು ಮನದ ಬಗೆಯನೂ ||99||

ದಂಡನೀತಿಯೊಂದೆ ಸಕಲ ಶಾಸ್ತ್ರಸಾರವೂ |
ಖಂಡಪರಶು ಮೊದಲೆ ಗೈದ ರಾಜತಂತ್ರವೂ ||
ಮಂಡಲೇಶರರಿಯಲಿದುವೆ ನೈಜ ಸೂತ್ರವೂ |
ಗಂಡುಗಲಿಗೆ ಸಾಧ್ಯವಿದುವೆ ತಿರೆಗೆ ಕಲಶವೂ ||100||

ವಚನ : ಎಂದುದಂ ಕೇಳ್ದು ಗಂಗಾಭವಂ, ಮುದವಡೆದು ಪಾರ್ಥನಂ ಕರೆದಾಗಳ್ ||

ರಾಗ ಕೇತಾರಗೌಳ ಝಂಪೆತಾಳ

ಎಂತಿಹುದು ಸಮ್ಮಿತಗಳೂ | ಭೇದವೇ | ನಾಂತಿಹವು ರಚನೆಗಳೊಳು ||
ಗೊಂತಿರಲು ಪೇಳ್ವುದದನೂ | ತಿಳಿದ ಪರಿ | ಚಿಂತಿಸುತಲರುಹು ನೀನೂ ||101||

ಎನುತಾಜ್ಞೆಗೊಡೆ ಪಾರ್ಥನೂ | ಮಣಿದೆಂದ | ಗುಣವಿಧಿಯ ಧರ್ಮಗಳನೂ ||
ಜನಕರುಹೆ ಶಾಸನದೊಳೂ | ಪ್ರಭುಸಮ್ಮಿ | ತೆನೆ ಶಬ್ದಗುಣವದರೊಳೂ ||102||

ಇದೆ ಮಿತ್ರ ಸಮ್ಮಿತದೊಳೂ | ನಯನೀತಿ | ಮೊದಲಾದ ಕಥೆಯದರೊಳೂ ||
ಅದುವೆ ಪೌರಾಣಿಕದೊಳು | ಅರ್ಥಗುಣ | ಗುದಿಸುತಿಹ ಕತಿಯದರೊಳೂ ||103||

ಸಲೆಕಾಂತ ಸಮ್ಮಿತದೊಳೂ | ಮುದಗೊಳಿಪ | ಕಲೆಕಾವ್ಯನಾಟಕಗಳೂ ||
ಬಳಸಿರ್ಪ ರಸಿಕ ಜನಕೇ | ರಸಗುಣದ | ಪೊನಲೆಂಬರದನು ಮನಕೇ ||104||

ಕಂದ

ಎಂದವನುತ್ತರಿಸಲ್ಕಾ |
ನಂದದೆ ಭೀಷ್ಮಂ ಯಮಳರ ಬೆಸಗೊಳುತತ್ತಂ ||
ನಿಂದಿಹ ಬಾಲರ್ಕಳನುಂ |
ಚಂದದೊಳುಚಿತೋಕ್ತಿಯಿಂ ಪರೀಕ್ಷಿಸಿ ಮತ್ತಂ ||105||

ರಾಗ ಕಾಂಭೋಜಿ ಝಂಪೆತಾಳ

ಆ ನೆರೆದ ನೆರವಿಯನು ನೋಡುತ್ತ ಕೈಮುಗಿದು |
ತಾನೊರೆದ ವಿಬುಧ ಗುರುಜನಕೇ ||
ಮಾನನಿಧಿ ಕೃಪದೇವ ಕಪೆಗೈದ ಕಾರಣದಿ |
ಈ ನವೋನವತೆ ನಮಗಾಯ್ತೂ ||106||

ಯಮತನುಜ ಕೋವಿದನು ಶಾಸ್ತ್ರನಿಧಿ, ಪವನಸುತ |
ಸಮುಚಿತಾ ವ್ಯಾಕರಣ ಚತುರಾ ||
ಸಮನಿಹನು ವರದಂಡ ಶಾಸ್ತ್ರದೊಳು ಕೌರವನು |
ವಿಮಲರಸ ಲಾಕ್ಷಣಿಕ ಪಾರ್ಥಾ  ||107||

ಯಮಳರತಿ ತಜ್ಞರಾ ಸುಜ್ಞಾನ ನೈಷ್ಠಿಕರು |
ಸುಮನ ವೈದ್ಯೋತ್ತಮರು ಸಹಜಾ ||
ತಮತಮಗೆ ಬಲ್ಲಿದರು ಬಾಲರತಿ ಚೋದಕರು |
ನಮಗಧಿಕ ಸಂತಸವಿದಾಯ್ತೂ ||108||

ಬಿರುದಾಂಕನಾದೋರ್ವ ಚಾಪಾಗಮಾಚಾರ್ಯ |
ದೊರೆತೊಡನೆ ಬಿಲ್ಗರಡಿಯೊಂದಾ ||
ವಿರಚಿಸಲು ಬೇಕೆಂಬುದಿಚ್ಛೆಯೆನೆ ಭಳಿಭಳಿರೆ |
ನರದೇವ ಜಯತೆನಲು ಸಭೆಯೂ ||109||

ಸುರನದಿಯ ಸುತನಾಗ ಗುರುಕುಲದ ಬಾಲರನು |
ಕರೆದುಚಿತವಿತ್ತವರ ನೋಡೀ ||
ಸರಸತಿಯ ಸಿಂಗರದ ಮಣಿಗಳೆನೆ ಬೆಳಗುತ್ತ |
ತಿರೆಗರುಹರಿಹುದೆಂದು ಪರಸೇ ||110||

ಕಂದ

ಗುರುಕುಲದಾಚಾರ‌್ಯರ್ಕಳ್ |
ನರಪತಿಗಳ್ಬಾಲಕರಖಿಳರ್ | ಪೊಡಮಡಲಾ ||
ಸುರನದಿಯಣುಗನವರ್ಗಂ ||
ಶಿರವಾಗುತ್ತಂ ತೆರಳ್ದನಿಭಪುರದತ್ತಂ ||111||

ಮೂರನೆಯ ನೋಟ

ಭಾಮಿನಿ

ಕಾಲದುನ್ನತ ಲೀಲೆ ಮೆರೆಯಲು |
ಮೂಲಗಂಗೆಯ ತಟದಿ ಋಷಿಕುಲ |
ಜಾಲಸೇವಿತ ಭರದ್ವಾಜನು ಮಾಡುತಾಶ್ರಮವಾ ||

ಶೂಲಪಾಣಿಯ ಭಜಿಸುತಿರಲಾ |
ವೇಳೆಗುದಿಸಿದ ಕಲಶಸಂಭವ |
ಮೇಲೆ ಪಿತನಳಿಯಲ್ಕೆ ಬಡತನವಡಸೆ ಮರುಕದಲೀ ||112||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪತಿ ಕೇಳಿತ್ತಲಾ ಮುನಿ | ವರನು ಭಾರದ್ವಾಜ ತನುಭವ |
ನುರುಗುಣಾನ್ವಿತ ಘನದರಿದ್ರದೊ | ಳುರಿದು ಬಳಲೀ ||113||

ಪೊರಟನಾಶ್ರಮದಿಂದ ತನ್ನಯ | ತರಳನಶ್ವತ್ಥಾಮ ಸಹಿತಲೆ |
ಗಿರಿಮಹೇಂದ್ರಾಚಲದಿ ಕಂಡನು | ಪರಶುಧರನಾ ||114||

ವರತಪೋನಿಧಿಗೆರಗೆ ಭಾರ್ಗವ | ಪೊರಡುತಿರೆ ತಪವೆಸಗಲಾ ಕ್ಷಣ |
ಧರಣಿಯಮರನ ಕಂಡು ಮನ್ನಿಸಿ | ಮರುಗುತೆಂದಾ ||115||

ಸರ‌್ವನೈವೇದಿಕದ ಯಜ್ಞದೊ | ಳಿರುವುದೆಲ್ಲವ ಜನರಿಗಿತ್ತೆನು |
ತಿರೆಯ ಕಾಶ್ಯಪಮುನಿಪಗರ್ಪಿಸಿ | ಬರಡನಾದೇ ||116||

ಇದುವೆ ಮಣ್ಣಿನ ಮಡಿಕೆಯರ್ಘ್ಯಕೆ | ಬದಲ ಕಾಣೆನು ಬಾಣ ಧನುವಿದೆ |
ವಿದಿತವಾಯ್ತೇ ಕೊಡುವೆನಿದನೆನೆ | ಪದದೊಳೆರಗೀ ||117||

ಕೇಳಿಕೊಂಡನು ಪರಮವೈಷ್ಣವ | ಮೂಲಬಾಣವ ಪರಶುಧರನೊಳು |
ತಾಳ್ದುಹರುಷವನಿತ್ತನಾತಗೆ | ಪೇಳಲೇನಾ ||118||

ಭಾಮಿನಿ

ಬಳಿಕ ಗಂಗಾತೀರವಿಡಿದವ |
ರಿಳೆಯ ತಿರುಗುತ ಬಂದುಪೊಕ್ಕರು |
ಬಳಲಿಮತ್ತಾ ದ್ರುಪದರಾಯನ ರಾಜಮಂದಿರಕೇ ||
ದ್ವಾರಪಾಲಕರಿಂದ ನಪತಿಗೆ |
ವಾರತೆಯನರುಹಿಸಲು ಭೂಪನು |
ದಾರಿಪೋಕರನತ್ತಕಳುಹಿಸು ಪೋಗಿ ಪೇಳೆನಲೂ ||119||

ಕಂದ

ಎನೆಕೇಳ್ದೊಡನಾ ದೂತಂ |
ಮುನಿವರಗರುಹಲ್ಕಲಶಜನುರಿದೇಳುತ್ತಂ ||
ಜನಪನದಾವೆಡೆ ತೋರೆನೆ |
ಮುನಿಸಿಂ, ತಡೆದಾಕವಾಟಪಾಲರನಿರಿದುಂ ||120||

ವಚನ || ವಡನಾಸ್ಥಾನವ ಪೊಗುತಾಸನದೊಳ್ ಮದಾನ್ವಿತನಾಗಿ ಮಂಡಿಸಿರ್ಪ ದ್ರುಪದನನೀಕ್ಷಿಸಿ, ಕನಲ್ದು ರೌದ್ರದೊಳಿಂತೆಂದಂ ||

ರಾಗ ಕೇತಾರಗೌಳ ಅಷ್ಟತಾಳ

ಎಲವೊ ಪಾಂಚಾಲಕ ದ್ರುಪದನೆ ಸುಡುನಿನ್ನ | ಬಲದ ವಿಕ್ರಮವೆಲ್ಲವಾ ||
ಮುಳಿಸದೇತಕೋ ನಿನ್ನ ಮನೆಗೆ ಬಂದೊಡೆ ನಾವು | ದಳಿತರೇನ್ ಧೂರ್ತಪೇಳೂ ||121||

ರಾಗ ಮಾರವಿ ಏಕತಾಳ

ಬಗುಳದಿರಲೊ ಹಾರುವ ಮೂರ್ಖನೆನಡೆ | ನಗುವರು ಬಲ್ಲಿದರೂ ||
ವಿಗಡರೊಳೇತರ ಕಾರ್ಯವು ಬರಡಗೆ | ಜಗಳವನೊಡ್ಡದಿರೂ ||122||

ರಾಗ ಕೇತಾರಗೌಳ ಅಷ್ಟತಾಳ

ತಿಳಿಯದಾದೆಯ ಖಳ ಬಾಲ್ಯದಿ ನೀನೆಮ್ಮ | ತಳಿರ ಮಂದಿರವ ಸೇರ್ದೂ ||
ಕಲಿತುದಿಲ್ಲವೆ ಶಸ್ತ್ರಶಾಸ್ತ್ರಾದಿಗಳನೆಲ್ಲ | ಪಳಿದೆ ಪಾರ್ಥಿವ ಧೀರುರೆ ||123||

ರಾಗ ಮಾರವಿ ಏಕತಾಳ

ಬಿಟ್ಟಿಗೆ ಕಲಿಸಿದಿರೇನೈ ವಿದ್ಯೆಯ | ಕೊಟ್ಟುದನೆಲ್ಲವನೂ ||
ಹೊಟ್ಟೆಯ ಪಿಟರಕೆ ತುಂಬಿಸಿ ನಟಿಸುವ | ಗಟ್ಟಿಯೆ ಹಾರುವನೂ ||124||

ರಾಗ ಕೇತಾರಗೌಳ ಅಷ್ಟತಾಳ

ಸುಡಲು ಬಲ್ಲೆನು ಫಡ ನಿನ್ನನು ಕೊಲಲೇಕೆ | ಪಿಡಿದು ಬಂಧಿಸುತೆನ್ನಯಾ ||
ಕಡೆಯಛಾತ್ರರ ಕೈಯಗುಣದಿ ಕಾಣಿಕೆಗೊಂಬೆ | ನೆಡದ ಪಾದವನೋಡಿಕೋ ||125||

ರಾಗ ಮಾರವಿ ಏಕತಾಳ

ಬಿಡುಬಿಡು ಬಾಯ್ಬಡಿವಾರವ ಬಣಗನೆ | ಕಡೆಗಿದೊ ಸಾರಿದೆನೂ ||
ನಡೆನಡೆ ಕರೆತಾ ಕಾಂಬೆನು ಶಿಷ್ಯರ | ಗಡಣದ ಶೌರ್ಯವನೂ ||126||

ಕಂದ

ಕಳ್ಳೊಡವುಟ್ಟಿದ ಸಿರಿಯಂ |
ಯೆಳ್ಳಿನಿತುಂ ಸೇವಿಸಲ್ಕೆ ಮದದುದ್ರೇಕಂ ||
ಮೆಳ್ಳೆಯ ಕಣ್ಣಂಗೆಯ್ವುದು |
ತೆಳ್ಳನೆ ಪರೆಗೊಂಡತೀವಮರ್ಬಿನಕಾಚಂ ||127||

ವಚನ : ಎಂದವರಲ್ಲಿಂ ಪೊರವಂಟತಿವೇಗದೊಳುಂ ||

ರಾಗ ಪಂತುವರಾಳಿ ಏಕತಾಳ

ಬಂದರವರು ತಿರೆಯ ತಿರುಗೀ | ಬಹುಪರಿ | ನೊಂದುಕೊಳುತೆ ಮನದಿ ಮರುಗೀ ||
ಮುಂದಡಿಯಿಡುತವರೈದಿದ ರಾಮಹ | ಸಿಂಧುರ ನಗರಿಯ ಬಳಿಗತಿ ಜವದಿಂ ||
ಬಂದರವರು ||128||

ಬಾಲರಲ್ಲಿ ಕೂಟಗೂಡೀ | ಬಯಲೊಳು | ಕೋಲಿನೆಸುಗೆಯಾಟವಾಡೀ ||
ಧಾಳಿಯೊಳೆಸೆಯಲು ತೊಗಲಿನ ಮಿಗವದು | ಬೀಳಲು ಕೂಪಕೆ ಬಾಣದ ಬಡಿತದಿ ||
ಬಂದರವರು ||129||

ಸೇರುತವರು ಕೂಪದೆಡೆಯಾ | ತೆಗೆಯಲು | ತೋರದೇನು ಮನಕುಪಾಯಾ ||
ವಾರಿಯನಿಣುಕುತ ಮರುಕವಗೊಂಡಿರೆ | ತೋರಿಸೆ ಕಲಶಜ ತನ್ನಯ ತರಳಗೆ ||
ಬಂದರವರು ||130||

ಶರದ ಮೊನೆಯೊಳದಕೆ ಬಡಿದೂ | ಕ್ಷಿಪ್ರದಿ | ಶರದ ಬುಡಕೆ ಶರದೊಳಿದು ||
ಗುರುಸುತನೆತ್ತಿಡೆ ಮೇಲಕೆ ಚಳಕದಿ | ಹರುಷದೊಳೆಲ್ಲರು ಪೊಗಳುತುಘೇಯೆನೆ ||
ಬಂದರವರು ||131||