ರಾಗ ಕೇತಾರಗೌಳ ತ್ರಿವುಡೆತಾಳ

ಯೇರಿಸಿದನಾಸನಕೆ ಕುರುಪತಿ | ವೀರಕರ್ಣನ ಕುಲಪುರೋಹಿತ |
ರೇರಿಸಿದ ಸುರಧುನಿಯ ಕಲಶದ | ವಾರಿಯಿಂದಾ ||201||

ಮಾಡಿಸುತಲಭಿಷೇಕವಂಗದ | ರೂಢಿಪಾಲಕನೆಂದು ಘೋಷಿಸಿ |
ಪಾಡಿ ಪರಸಲು ಮಾಗಧಾದ್ಯರು | ಕೂಡೆ ಮುದದಿ ||202||

ಇನಜನಾಸನವಿಳಿದು ಕೌರವ | ಜನಪನಂಘ್ರಿಗೆ ಮಣಿಯೆ ಕಾಣುತ |
ಲನಿಲಸಂಭವ ಖತಿಯೊಳೆಂದನು | ದಿನಪಸುತಗೆ ||203||

ಕಾಗೆ ಮಹಡಿಯ ಮೇಲಕೇರಲು | ಸೋಗೆಯಪ್ಪುದೆ ರಾಜಹಂಸದ |
ಭೋಗಗೊಂಬುದೆ ಗೂಗೆ ನಿನಗಿದು | ಯೋಗವಹುದೇ ||204||

ರಾಜನಲ್ಲದ ರಾಜನಿತ್ತರೆ | ರಾಜನಾಗುವದುಂಟೆ ಪೇಳೈ |
ರಾಜ್ಯವಾರದು ಮರುಳರೀರ್ವರು | ಸಾಜವಾಯ್ತೂ ||205||

ಕಂದ

ಪವನಜನೆಂದುದ ಕೇಳ್ದುಂ |
ಜವನೊಲ್ಮುಳಿದೇಳುತಂಧನಪತಿಯ ಕುವರಂ ||
ಭುವನಾಧಿಪನಾರೆನುತಂ |
ಪವಮಾನಿಯೆ ಕೊಂತಿಯೊಳದಕೇಳೆನೆ ಭೀಮಂ ||206||

ರಾಗ ಕೇತಾರಗೌಳ ಝಂಪೆತಾಳ

ಫಡ ಧೂರ್ತ ಕುರುಡಸುತನೇ | ಕೇಳ್ದೆನದ | ನುಡಿಯಲೇನಜಪುತ್ರನೇ ||
ಧಡಿಗತನ ಪಿಂದಾದುದೂ | ಕುರುಧರೆಯ | ಕೊಡಲೆಂತು ನಿನಗಾದುದೂ ||207||

ಭಂಡ ಮುಚ್ಚೆಲೊ ಬಾಯನೂ | ಜನಕನಿರೆ | ಮಂಡಲಾಧಿಪನು ತಾನೂ ||
ಚಂಡಕರಸುತ ಕರ್ಣನೂ | ಮಾರ್ಕೊಳುವ | ಗಂಡುಗಲಿ ಯಾರವನನೂ ||208||

ಸೆಳೆದಡಾಯುಧ ಭೀಮನೂ | ಕೌರವನ | ಬಳಿಸೇರೆ ತಡೆದ ಕೃಪನೂ ||
ಕಳಕಳದೆ ಕೌರವ್ಯರೂ | ಉರಿದೆದ್ದು | ಕಳನೆಡೆಗೆ ಹಾಯ್ದರವರೂ ||209||

ಕಂದ

ತರುಬಿದರಿತ್ತಂಡಿಕರಂ |
ಗುರುಕೃಪರತ್ತಿತ್ತೆಳೆದೊಡನವರಂ ಬಿಡಿಸಲ್ ||
ತೆರಳಿದ ಗಂಗಾಪುತ್ರಂ |
ಮರುಗಿದರೆಲ್ಲರ್ ಮರುಕದೆ ಬಿಸುಗುದಿಗೊಳುತಂ ||210||

ವಾಕ್ಯರೂಪ ಸಂಭಾಷಣೆ

(ಪರೀಕ್ಷಾರಂಗದಿಂದ ಹೊರಟು, ಕುಪ್ಪಾಭಟ್ರು ಮತ್ತು ಗಂಗಾಚಾರ್ಯರು ಮಾತನಾಡುತ್ತಾ ಹೋಗುವರು.)

ಕುಪ್ಪಾಭಟ್ರುಏನ್ರೀ ಗಂಗಾಚಾರ‌್ರೇ ಚುಟ್ಕಿನೊಳ್ಗೇ ಕರ್ಣಪ್ನಿಗೊಂದು ಪಟ್ಟಾಭಿಷೇಕಾನ ಮಾಡ್ಬಿಟ್ರಲ್ವೇ?  ನಿಮ್ಮ ದಶಾ ಬಹಳ ನೆಟ್ಟಗಿದೆ ಕಾಣ್ರೀ.

ಗಂಗಾಚಾರ್ಯಓಂ್ ಕುವ್ರಾಜ ಪುರೋಹಿತ್ರೇ, ಬಂಡೀಚಕ್ರಾನ ತಿರ್ಗಾಟ್ದೊಳ್ಗೇ ಮೇಲುಗೂಂಟ ಕೆಳ್ಗೇ, ಅಡೀಗೂಂಟ ಮೇಲೆ ಹೋಗ್ತಿದೆ ಕಾಣ್ರಿ, ಕಾಲ್ಚಕ್ರಾದೊಳ್ಗೂನೂ ಹಾಂಗೇನೇ ಆಗ್ತಾ ಇದೆ. ಕಾಲ್ ಶತ್ಮಾನ್ದ ಹಿಂದಾಕಡೆ, ನೀವೂ, ನಿಮ್ಮಗಾ ವಾಸಪ್ನೂ ಕೂಡಿ ಗಾಂಧಾರಿ ಮಹಾರಾಣಿಗೂ, ಹೋತರಾಜ್ನಿಗೂ, ಒಂದು ಮದ್ವೇನ ಮಾಡ್ಸಿಬಿಟ್ರಲ್ವೇ | ಆ ಮೇಲೇ ನಮ್ಮ ರಾಜ್ಪುರೋಹಿತ್ಕೇಯೊಳ್ಗೆ ಅಡಿಮೇಲು ಆಗ್ಬಿಟ್ಟಿದೆ ನೋಡ್ರಿ.

ಕುಪ್ಪಆ ಮಾತೆಲ್ಲಾ ಹಾಂಗಿರ್ಲಿ ಆಚಾರ‌್ರೇ, ಜಗತ್ತಿನ್ಮೇಲೇ ಜಗತ್ತೇ ಹೊಸ ದಾರಿಯೊಳ್ಗೆ ನುಗ್ಗುತ್ತಿರುವ ಸಮಯಾ ನಾವೂನೂ ಹಾಂಗೆಯೇ ಮಾಡ್ಬೇಕಲ್ಲ. ಆಚಾರ‌್ರೇ, ಈ ಹೊತ್ತಿನ ಸಮಾರಂಬದೊಳ್ಗೆ ಭೀಮಪ್ನೂ, ಕೌರವಪ್ನೂ ಲಡಾಯಿ ಮಾಡ್ಕೊಂಡು, ಭೀಮಪ್ಪ ಎಲ್ಲಿ ನಿಂ ತಲೇನ ಜಪ್ಪಿ ಬಿಡ್ತಾನಂತ, ನನ್ನ ಎದೇ-ತಕಾಪಕಾ, ಪಕಾಪಕ, ಅಂತ್ಲೇ ಹಾರ್ತಿತ್ತು ಕಾಣ್ರಿ.

ಗಂಗಾಹೌದ್ರಿ ಭಟ್ರೇ, ಕೌರವ ಹೇಳ್ಬಿಟ್ಟಾ ಅಂತ, ಕರ್ಣಪ್ನಿಗೇ ಅಭಿಷೇಕಾನ ಮಾಡ್ಬಿಟ್ಟೇ, ಸಾಕಷ್ಟು ದಾನ ದಕ್ಷಿಣೆ, ವಸ್ತ್ರ, ಚಿನ್ನ, ಅಕ್ಕಿ, ಧಾನ್ಯ ಎಲ್ಲಾ ಸಿಕ್ಕಿತೆನ್ನಿ. ಆದ್ರೂನೂ, ಕೌರವ ಮಾಡಿದ ಅತಿಕ್ರಮ, ಸಹಿಸಲಾರ್ದೆ ಭೀಷ್ಮರು, ಎದ್ದು ನಡ್ದೇ ಬಿಟ್ರು, ಆ ಮೇಲೆ, ನಂಗೂನು ಹೆದ್ರಿ ದೇಹದೊಳ್ಗೆ ಜೀವ ಇದಿಯಾ ಇಲ್ವೋ ಅಂತಾಯಿತು. ಕುರುಡಪ್ನಾ ಮಗಾ ಮಾಡಿದ್ದು ನಿಮ್ಗೆ ಸರಿ ಕಾಣ್ತತಿದಿಯೇ ಹೇಳಿಬಿಡ್ರಿ ನೋಡೋಣ.

ಕುಪ್ಪಆಚಾರ‌್ರೇ ! ಆ ಮಕ್ಳು ಇಂದಲ್ಲ ನಾಳೆಯಾದ್ರೂನೂ ಬಡಕೊಳ್ತಾವೆ ಖಂಡಿತ. ಆ ಕೌರವ, ಕರ್ಣ, ದುಶ್ಯಾಸನ, ಎಲ್ಲಾ ಅಧಿಕ ಪ್ರಸಂಗಿಗಳಿದ್ದಾವಿ. ಇಲ್ವಾದ್ರೇ ಕರ್ಣಪ್ನಿಗೆ ಅಂಗದೇಶ್ದ ಪಟ್ಟಾಕಟ್ಟಿ ಬಿಡೋಕೆ, ಕೌರವಪ್ನಿಗೆ ಹಕ್ಕೆಲ್ಲಿದೆ | ಭೀಮಪ್ಪ ಹೇಳಿದ್ದು ನ್ಯಾಯವಿದೆ ಕಾಣ್ರಿ.

ಗಂಗಾಭಟ್ರೇ, ಕುರುಡಪ್ಪ ರಾಜ್ನ ಕಾಲದಲ್ಲಿ ಮಗಾ ಕೌರವಪ್ಪ ಮಾಡಿದ್ದಾಗಿ ಹೋಗ್ತದಿ, ನ್ಯಾಯ, ಅನ್ಯಾಯ, ಅಂತ, ಯಾರ್ಕೇಳ್ತಾರ‌್ರೀ.

ಕುಪ್ಪಆಚಾರ‌್ರೇ, ಈ ಕೌರವಪ್ನಾ ಅಧಿಕಾರ ಎಲ್ಲಾ ಭೀಮ, ಅರ್ಜುನಪ್ಪಾನವ್ರ ಬಡ್ದು ಬಡ್ದೇ ನಿಲ್ಲಿಸುತ್ತಾರೆ ಕಾಣ್ರಿ. ಆ ಧತರಾಷ್ಟ್ರನ ನೂರ್ಮಕ್ಳೂನೂ ಮನೆ ಹಾಳ್ಮಾಡೋಕೆ ಹುಟ್ಟಿದ್ದಾವಿ ನೋಡ್ರಿ.

ಗಂಗಾಭಟ್ರೇ, ನಮಗ್ಯಾಕ್ರೀ ದೊಡ್ಡವರ ಮಕ್ಳಾ ಮನೇಮಾತು. ನೀವು ಹೀಗನ್ತೀರಿ ಅಂತಾ ವರ್ತಮಾನ ಕೇಳ್ದ್ರೇ ಕೌರವಪ್ಪ ಟೊಂಕಾ ಮುರ‌್ಸಿಬಿಟ್ಟಾನು. ನಮಗೆ, ನಿಮಗೆ, ಆ ಸುದ್ದೀ ಬೇಡ್ರೀ, ಸಂಧ್ಯಾವಂದನೆಗೆ ಹೊತ್ತಾಯಿತು ಮನೆಗೆ ಹೋಗ್ಬಿಡೋಣ, ನಮಸ್ತೇ.

ಕುಪ್ಪಆಚಾರ‌್ರೇ ! ನಾವು ಮಾತನಾಡಿದ ವಿಷಯಗುಟ್ಟಾಗಿರಲು, ನಮಸ್ತೇ.

ಗುರುದಕ್ಷಿಣಿ ನಾಲ್ಕನೆಯ ನೋಟ

ಭಾಮಿನಿ

ಬಳಿಕ ಮರುದಿನದುದಯವಾಗಲು |
ಕಲಶಸಂಭವ ತಿಳಿದು ಕಾರ್ಯವ |
ಕಲಿತ ಶಿಷ್ಯರೊಳಧಿಕರೆನಿಸುವ ಪೌರವೇಯರನೂ ||
ವೊಲಿದು ಪರಸುತಲೆಂದನಿದರೊಳು |
ಬಲದೊಳಧಿಕರು ಹಸ್ತಿನಾಪುರ |
ದಿಳೆಯ ನಾಳ್ವಿಕೆಗೊಳುವ ಕುಲಜರು ಕೇಳ್ವುದಭಿಮತವಾ ||211||

ರಾಗ ಮಧ್ಯಮಾವತಿ ಏಕತಾಳ

ಎಲೆ ವೀರರಿರ ಕೇಳಿ ನಾವೆಂಬ ನುಡಿಯಾ | ಸಲೆ ಶಸ್ತ್ರಶಾಸ್ತ್ರಾದಿ ಸಾರ್ಥಕ ಕಲೆಯಾ ||
ಕಲಿಸಿದೆವಾವಿಂದು ಯಾಚಕರೆಮಗೇ | ನಲವಿಂದ ಕೊಡಲಿಷ್ಟವಾವುದು ನಿಮಗೇ ||212||

ಯೆನಲೆಂದ ದುರ್ಯೋಧನಾಖ್ಯನು ಜವದೀ | ಮನದಿಷ್ಟವಾವುದು ಬೆಸವೇಳಿ ಮುದದೀ ||
ಅನುಮಾನಗೊಳಬೇಡ ಗುರುದೇವ ಪದಕೇ | ತನುಮನಧನಗಳನಿತ್ತೆನಾನದಕೆ ||213||

ರಾಗ ನವರೋಜು ಏಕತಾಳ

ಯೆಂದುದ ಕೇಳುತಲಾಗಾ | ಗುರು |
ಮುಂದಿನ ಕಾರ್ಯವ ಬೇಗಾ ||
ಅಂದವರೊಡನತಿ | ಚಂದದೊಳುಸುರಿದ |
ಸಂಧಿಸಿ ದ್ರುಪದನ | ಬಂಧಿಸಿ ತರುವುದ || ಎಂದುದ ||214||

ಸುರನದಿಯುತ್ತರ ದಿಸೆಗೇ | ಆ |
ಪುರವಿಹುದತ್ತಣ ಕಡೆಗೇ ||
ತೆರಳುತ ಪಾಂಚಾಲಕನನು ಧುರದೊಳ |
ಗುರುಳಿಸಿ ಸೆರೆವಿಡಿದೆಮಗೊಪ್ಪಿಸುವುದು || ಎಂದುದ ||215||

ಕುಂಭಜನೆಂದುದ ಕೇಳೀ | ನಗೆ |
ದುಂಬುತೆ ಕೌರವರಾಳೀ ||
ಜಂಭಿತ ಮದಕರಿಗಂಬುಜವಿದುಸರಿ |
ಸಂಭ್ರಮದೊಸಗೆಯು ಗುರುಗಳ ದಕ್ಷಿಣೆ || ಎಂದುದ ||216||

ಆಗಲಿದೇ ಶುಭಯೋಗ | ಬಲ್ |
ಬೇಗನೆ ಮಾಳ್ವೆವುಯೀಗಾ ||
ತಾಗುತೆ ದ್ರುಪದನ ಪಿಡಿದೆಳೆ ತರುವೆವು |
ಶೀಘ್ರದೆ ಪರಸೆನುತೆರಗಲು ಕೌರವ || ಎಂದುದ  ||217||

ಭಾಮಿನಿ

ಶಿರವನೆತ್ತುತೆ ಪರಸೆ ಕಲಶಜ |
ಭರದೊಳಾಕ್ಷಣ ನೆರಹಿ ಸೈನ್ಯವ |
ಧುರಪರಾಕ್ರಮಿ ಕರ್ಣ ದುಶ್ಯಾನರನೊಡಗೊಂಡೂ ||
ಕುರುಕಲೇಶ್ವರ ಜವದೊಳಾನಪ |
ವರನ ದುರ್ಗವ ಮುರಿಯೆ ಕೇಳುತ |
ಧುರಕೆ ಚಿತ್ರಕನೆನಿಪ ಭೂವರನದುಜನಿದಿರಾಗೇ ||218||

ರಾಗ ಪಂತುವರಾಳಿ ಏಕತಾಳ

ಆರಿವರಿಹರೂ || ಬಂದಿಹೆ | ಚೋರಾಧಮರೂ  || ಪಲ್ಲವಿ ||

ತಡೆತಡೆ  ಖಳರನು ಬಡಿದಿಡೆ ನಾಯ್ಗಳ | ಬಿಡದಿರಿ ನೀವೆನುತಾ ||
ಪಡೆಗೊಡನರುಹುತ ರಭಸದೊಳೆಸೆಯಲು | ಕಡಿಯುತೆ ಶರಗಳನೂ ||219||

ತವಕದಿ ಕರ್ಣನು ಕವಿಸಿದನಸ್ತ್ರವ | ನವನೆದೆಗೇರಿಸುತಾ ||
ಭವರದಿ ನೋಡಿಕೊ ಕವಲಿನ ಕಣೆಯೊಳೆ | ಸವರುವೆ ನಿನಗೆನುತಾ ||220||

ಫಡಫಡ ಚೋರನೆ ನುಡಿಯದಿರೆನ್ನುತ | ಕಡಿದವನಸ್ತ್ರಗಳಾ |
ಕಡುಹಿನ ಬಾಣದೆ ಪೊಡೆಯಲು ಕರ್ಣನು | ತಡೆದದನಾಕ್ಷಣದೀ ||221||

ಯೇರಿಸಿ ಶರಗಳ ನೂರರ ಗಣಿತದಿ | ತೂರಿಸಲವನುರಕೇ ||
ದಾರಿಯ ಗೊಡದದ ಭೋರನೆ ಚಿತ್ರಕ | ಶೌರ‌್ಯದಿ ಖಂಡಿಸುತಾ ||222||

ತುಂಡಿಸಿ ಚಾಪವ ಮಂಡೆಗೆ ಬಡಿದುರೆ | ದಂಡಿಸೆ ಕರ್ಣನನೂ ||
ಕಂಡದ ಕೌರವ ಕೆಂಡವೆ ಕಾರುವ | ಗಂಡೆನೆ ರೌದ್ರದಲೀ ||223||

ಭಾರಿಯ ಗದೆಯನು ಯೇರಿಸಿ ಭುಜದಲಿ | ಸಾರಿದನವನೆಡೆಗೇ ||
ಆರೆಲೊ ಚಿತ್ರಕ ತೋರಿಸು ಶೌರ‌್ಯವ | ವೀರನು ನೀನಹಡೇ ||224||

ರಾಗ ಭೈರವಿ ಅಷ್ಟತಾಳ

ಎಲವೊ ಕೌರವನೆ ಕೇಳೂ | ಇಲ್ಲಿಗೆ ನೀನು | ಬಲವಸೇರಿಸಿ ಬಂದುದ್ಯಾಕೆಂದು ಪೇಳೂ ||
ಇಳೆಯನೆಲ್ಲವ ನಿನ್ನ | ಬಲದರ್ಪಕಂಜಿಪ | ಛಲದಿಂದ ನೀ ಧುರ ಕೈತಂದೆಯಾ ||225||

ಭಳಿರೆ ಚಿತ್ರಕಯೆನ್ನನೂ | ಕೇಳಲು ನೀನು | ಬಲವಂತ ಸಾಮ್ರಾಟನಹುದೆ ಪೇಳಿನ್ನೂ ||
ಗಳಿತವಿಕ್ರಮ ನಿನ್ನ | ಬಲಿತ ಸೋದರನನ್ನು | ತುಳಿದು ಕಟ್ಟಲು ಬಂದೆ ಗುರುವಿಗೀಯೇ ||226||

ಕುರುಡನಾತ್ಮಜನೆ ತಾಳೂ  | ನಿನ್ನಯದೊಡ್ಡ | ಗುರುವದಾರವನು ಪೇಳೂ ||
ಬೆರಳಬೇಡಿದನೋರ್ವ | ಗುರುವೇಕಲವ್ಯನ | ತಿರೆಯೊಳಾತನ ಶಿಷ್ಯ | ನಿರುವೆಯೇನೂ ||227||

ಮುಚ್ಚುಮುಚ್ಚೆಲೊ ಬಾಯನೂ | ಪಾಂಚಲ ನಿನ್ನ | ಕೆಚ್ಚಿಗೀಗದೆಯೊಳಿನ್ನೂ ||
ನುಚ್ಚುನೂರನು ಗೈವೆ | ಚಚ್ಚರಿಸಲು ಬೇಡ | ವೆಚ್ಚರ ನೋಡೆನ್ನುತೆಚ್ಚನಾಗಾ ||228||

ರಾಗ ಶಂಕರಾಭರಣ ಮಟ್ಟೆತಾಳ

ಬೀಸಲವನ ಗದೆಯ ಪಿಡಿದು | ರೋಷವೇರಿ ಸೆಳೆಯುತದನು |
ಘಾಸಿಗೊಳಿಸೆ ಕೌರವನ್ನ | ಸಾಸಿ ಚಿತ್ರಕಾ ||
ಮೀಸಲಳಿದು ಸೋತರೆಲ್ಲ | ವಾಸಿಪಂಥಗಳನು ಬಿಟ್ಟು |
ಲೇಸಿದಲ್ಲವೆನುತಲೋಡೆ | ಮಾಸಿಮೌನದೀ ||229||

ಅರಿಯುತಿದನು ಭೀಮ ಪಾರ್ಥ | ರಿರದೆ ಬಂದು ಗುರುವಿನಡಿಗೆ |
ಶಿರವಬಾಗಿ ಪೇಳುತೊಡನೆ | ಪರಕೆಗೊಂಡರೂ ||
ಕರಿರಥಾಶ್ವನಿಚಯದಿಂದ | ನೆರವಿಗೊಳುತ ಬಂದರವರು |
ಧುರಕೆ ದ್ರುಪದರಾಜನಿರುವ | ಪುರಕೆ ಶೀಘ್ರದೀ ||230||

ಭಾಮಿನಿ

ನರವಕೋದರರಿಂತು ಸನಿಹಕೆ |
ಬರಲು ಕೇಳ್ದಾದ್ರುಪದರಾಯನು |
ಕರೆಸುತನುಜರಬಲಿದು ಕೋಂಟೆಯ ಪೊರಟನಾಹವಕೇ ||
ಕುರಿಗಳವದಿರ ಮಾರಿಗೌತಣ |
ವಿರಿಸಬೇಕೆನುತೊಡನೆ ಚಿತ್ರಕ |
ಭರದೆ ತಡೆದನು ಭೀಮಸೇನನ ಪಥದೊಳಿದಿರಾಗೀ ||231||

ರಾಗ ಕೇತಾರಗೌಳ ತ್ರಿವುಡೆತಾಳ

ಆರು ನೀನಲೊ ಭಾರೀಗದೆಯನು | ಮೀರಿಬೀಸುವ ವೀರನಾಗಿಹೆ |
ಪಾರುಪತ್ಯವದೇನು ನಮ್ಮಯ | ಧಾರಿಣಿಯೊಳೂ ||232||

ಸಾರು ಸಾರೆಲೊ ಬಣಗ ನಿನ್ನನ | ದಾರುಕಳುಹಿದರಿಲ್ಲಿನಡೆನಡೆ |
ತೋರುವೀಪುರದರಸನೆಲ್ಲಿಹ | ಕಾರಣಿಕನೂ ||233||

ಅರಸನೆನ್ನಯ ಹಿರಿಯನಾಗಿಹ | ಬರಿಸಲೇತಕೆ ಕಾರ್ಯವೇನಿದೆ |
ಮೆರೆಸಲಾಪಡೆ ತೋರು ಶೌರ್ಯವ ಗರಿಮನಹಡೇ ||234||

ಕಟ್ಟಿನೋಡ್ನಿನ್ನಗ್ರಜಾತನ | ರಟ್ಟೆಗಳ ಬಿಗಿದೊಯ್ಯಲೆಮಗಾ |
ಬಿಟ್ಟಿಗಾಯಿತು ಗುರುವಿನಪ್ಪಣೆ | ತಟ್ಟಿನೊದಗೇ ||235||

ಮುನ್ನ ಬಂದವನೊರ್ವನಾಡಿದ | ನಿನ್ನತೆರದೊಳಗವನ ಬಲ್ಲೆಯ |
ಮಣ್ಣುಗೂಡಿಪೆ ನೋಡೆನುತ್ತಲಿ | ಮಿಣ್ಣನೆಸೆಯೇ ||236||

ಬಡವಗೇತಕೆ ಬಿರಿಸುಬಲ್ಲಿದ | ರೊಡನೆ ನೋಡೆನುತಡಸಿಮುಂದಲೆ |
ವಿಡಿದು ಕೆಡಹುತೆ ಕಾಲೊಳೊದ್ದನು | ನಡುಗಲೆದೆಯೂ ||237||

ಕಂದ

ಅನುಜಂ ಮೈಮರೆದುದಕಂ |
ಡನುವರಕಂ ದ್ರುಪದನೇಳ್ತರಲ್ಕತಿ ಜವದಿಂ ||
ದನುವರಿತೊಡನಾಪಾರ್ಥಂ |
ಮೊನೆಗಣೆಯಿಂತಡೆದುರುಳ್ಚಲವನೆದ್ದಾಗಂ ||238||

ರಾಗ ಕೇತಾರಗೌಳ ಝಂಪೆತಾಳ

ತರಳತನದೇರಿಕೆಯೊಳೂ | ಪೊಡೆದೆಯೇ | ನ್ಬರಿದಿದನು ಕೈಗುಣದೊಳೂ ||
ಮರುಳುತನ ದಾಟವೇಕೇ | ಪೇಳದನು | ದುರುಳತನಗೊಳದೆ ಜೋಕೇ ||239||

ಮಾನ್ಯರನು ಧಿಕ್ಕರಿಸಲೂ | ಕೇಳ್ಬುದ್ಧಿ | ಶೂನ್ಯನವಜಗವರಿಯಲೂ ||
ಹೀನತನ ಗೈದನಿನಗೇ | ಪೇಳ್ದನಿದ | ದ್ರೋಣಮುನಿಯೆಸಗಲೆನಗೇ ||240||

ಯೇನಹನು ಮುನಿಪ ನಿನಗೇ | ಬಡತಿರುಕ | ಮಾನಿತನೆ ಭೂವರನಿಗೇ ||
ಹೀನತನ ವೆಸಗಬೇಡಾ | ಬಾಳುವಡೆ | ನೀನಡೆಯೊ ಮೂಢಾ ||241||

ಗುರುವಚನ ಮೀರಬಹುದೇ | ತೋಳ್ಬಿಗಿದು | ದೊರೆ ನಿನ್ನನೊಯ್ದು ಜವದೇ ||
ಶರದಗುರು ದ್ರೋಣಮುನಿಗೇ | ಕಾಣಿಕೆಯ | ನಿರಿಸುವೆನು ನೋಡು ಕೊನೆಗೇ ||242||

ರಾಗ ಮಾರವಿ ಏಕತಾಳ

ಹುಡುಗನೆ ಬಿಡು ಬಿಡು | ಬಡಿವಾರವನಿದ | ಕಡುಗಲಿನೀನಹೆಯಾ ||
ಬಡಿದಿಡೆ ನಿನ್ನನು | ಬಿಡಿಸುವನಾರೈ | ಕಡುಗಲಿ ತೋರವನಾ ||243||

ರೀತಿಯನರಿಯದ | ಪಾತಕಿ ನಿನ್ನೊಳು | ಸೋತವನಾಗುವೆನೇ ||
ಮಾತಿನ ಮಲ್ಲನೆ | ಆತುಕೊ ಶರವಿದ | ಘಾತಿಯ ಸೈರಿಸುತಾ ||244||

ಹುಲುಗಣೆ ಯೆಸೆಯಲು | ಕಲಿಸಿದನೈ ಭಲೆ | ಬಿಲುಗುರು ಜಾಣ್ಮೆಯೊಳೂ ||
ಕಲಿತನ ತೋರೆನು | ತಲಗನು ಕೀಲಿಸೆ | ಬಳಿಕವನಂಗದೊಳೂ ||245||

ಕೆರಳುತೆ ಪಾರ್ಥನು | ಪುರಿಗಣೆಯಿಂದಲಿ | ನರಗುರಿಬೀಳೆನುತಾ ||
ಸರಳನುತೂರಿಸೆ | ಧರೆಗವನುರುಳಲು | ಭರದೊಳಗಾತನನೂ ||246||

ಬಿಗಿಯುತೆ ಪಾಶದಿ | ಸೊಗಸಿನ ರಥದೊಳು | ತೆಗೆದವಗೇರಿಸುತಾ ||
ಮಿಗುವರಿದೊಯ್ದರು | ನಗರದವೀಧಿಯೊ | ಳಗಣಿತರೀಕ್ಷಿಸಲೂ ||247||

ಭಾಮಿನಿ

ಭರದಿ ಬಂದಾ ಭೀಮಪಾರ್ಥರು |
ಶರದಪಂಡಿತನಡಿಗೆ ನಮಿಸುತ |
ಗುರುವಿಗರ್ಪಿಸೆ ಪಾಂಚಲೇಂದ್ರನ ಪರಸಿ ಬಾಲಕರಾ ||
ಹರುಷದಿಂದಲಿ ಕೇಳ್ದನೆಲ್ಲವ |
ನೆರೆದಸಭೆ ಬೆರಗಾಗೆ ಕಲಶಜ |
ಧುರದ ಶೌರ‌್ಯಕೆ ಮೆಚ್ಚಿಪೊಗಳುತಲೆಂದನವನಿಪಗೇ ||248||

ರಾಗ ಕೇತಾರಗೌಳ ತ್ರಿವುಡೆತಾಳ

ಯೆಲವೊ ಪಾಂಚಾಲೇಶನಿನ್ನಯ | ಬಳಿಗೆಬಂದವರಂದು ಪೇಳಿದ |
ಛಲದಭಾಷೆಯು ಸಂದುದೇನೈ | ತಿಳಿದುನೋಡೂ ||249||

ಇವರು ಹಸ್ತಿನಪುರದ ನಪಕುಲ | ದವರು ಭೀಮಾರ್ಜುನರು ತನ್ನೊಳು |
ವಿವರವರಿತರು ಶಸ್ತ್ರವಿದ್ಯೆಯ | ಭುವನವರಿಯೇ ||250||

ಪೂರ್ವಮೈತ್ರಿಯ ಮರೆದು ನೀ ಸಂ | ಭಾವನೆಯನುಡಿಯೊಂದನಾಡದೆ |
ಆ ವಿಕಾರವಗೈದತಪ್ಪಿಗೆ | ಭೂವರೇಣ್ಯಾ ||251||

ಧರೆಯೊಳರ್ಧವು ನಿನ್ನ ರಾಜ್ಯದ | ಕುರುಕುಲಾನ್ವಯದವರಿಗಾಗಲಿ |
ಬರಡ ಜೀವವದಾನವಿತ್ತೆನು | ತೆರಳು ಪುರಕೇ ||252||

ಕಂದ

ಎಂದವನಂ ಜರೆದಟ್ಟ |
ಲ್ಕಂದವನತಿ ದುಗುಡದೊಳ್ಪುರವ ಪೊಗದತ್ತಂ ||
ಕುಂದೊದಗಿಸಿದನ ಪಗೆಯಂ |
ಬಂಧಿಸಿದಂಗೀವ ಸುತೆಯ ಜನ್ನದೆ ಪಡೆದಂ ||253||

ರಾಗ ಸಾವೇರಿ ಝಂಪೆತಾಳ

ಮಂಗಳಂ ಶ್ರೀ ಸರಸ್ವತಿದೇವಿಗೇ | ನಿತ್ಯಶುಭಮಂಗಳಂ |
ಶ್ರೀಸರಸ್ವತಿದೇವಿಗೇ || ಪಲ್ಲವಿ ||

ಭಾರತದ ನಿಗಮಾಗ | ಮಾರವದ ಗೀರ್ವಾಣಿ |
ಶಾರದೆಗೆವರವೀಣ | ಧಾರಿಣಿಗೆ ಸತ್ಕಲಾ |
ಪೂರಿಣಿಗೆ ಭೂವಿನುತ | ಧೀರ ಪುಂಗವನುತೆಗೆ | ಭಾರತಿಗೆ ಮಂಗಲಂ ||
ಶ್ರೀ ಸರಸ್ವತೀ ದೇವಿಗೇ | ನಿತ್ಯಶುಭಮಂಗಲಂ ||254||

ಯುಗ ಯುಗದೊಳವತರಿಸಿ | ಪಗೆಗೊಂಡ ದುರುಳರನು |
ಬಗೆದಿಕ್ಕಿ ಸಾಧುಗಳ | ತೆಗೆದೆತ್ತಿ ಪಾಲಿಸಿದ |
ಜಗದೇಕ ನಾಥನಿಗೆ | ಖಗವರೂಥ ಕವಿಭೂಷಣಗೆ ಜಯಮಂಗಳಂ ||
ಶ್ರೀಸರಸ್ವತೀ ದೇವಿಗೇ | ನಿತ್ಯ ಶುಭಮಂಗಲಂ ||255||

 

|| ಸಂಪೂರ್ಣಂ ||