ರಾಗ ಬೇಗಡೆ ಆದಿತಾಳ

ಹಿಂದೆ ಕಾಶೀಪತಿಯ ಸುತೆಯರನು | ತಂದಿರ್ಪನನುಜಗೆ |
ಅಂದಗೆಡಿಸುತ ಸಕಲ ಭೂಪರನು ||
ಮಂದಮತಿಯೊಳಗಂಬೆಯೆನ್ನನು | ಚಂದದಿಂವರಿಸೆನಲು ಪೇಳಿದೆ |
ತಂದೆಗೋಸುಗ ಬ್ರಹ್ಮಚರ್ಯವ | ಪೊಂದಿಹೆನು ನಾನೆನಲು ಸುದತಿಯು || ೪೬೭ ||

ಮನವನಿರಿಸಿಹೆ ಸಾಲ್ವನೊಳು ನಾನು |  ತೆರಳುವೆನೆಂದು |
ವನಿತೆ ಪೊರಡಲು ಕಳುಹಿಕೊಟ್ಟಹೆನು ||
ದನುಜನುಲ್ಲಂಘಿಸಲು ಸುದತಿಯು | ಘನತೆಯೊಳು ವರಿಸೆಂದು ಕಾಡಲು |
ಮನದ ನಿಶ್ಚಯ ಬಿಡೆನು ವ್ರತವೆನೆ | ವನಕೆ ಪೋದಳು ಶಪಥಗೈಯ್ಯುತ || ೪೬೮ ||

ದುರುಳೆ ತನ್ನಭಿಮತವ ನಡೆಸೆಂದು |  ಭೃಗುಜಾತನಾಗಿಹ |
ಪರಶುರಾಮಗೆ ನಮಿಸಿ ಬಲವಂದು ||
ಕರೆದು ತಂದಳು ಧುರಕೆ ಮಹಿಮನ | ನಿರತವೀ ಕ್ಷೇತ್ರದಲಿ ಹಳಚುತ |
ತೆರಳಿತಿಪ್ಪತ್ತೊಂದು ದಿವಸವು | ಗುರುವರೇಣ್ಯನ ಗೆಲಿದೆನಂತ್ಯದಿ  ||೪೬೯||

ಭಾಮಿನಿ

ಎರಡನೆಯ ಜನ್ಮದಲಿ ನಿನ್ನಯ |
ಕೊರಳ ಕೊಯ್ಯುವೆನೆನುತ ದುರುಳೆಯು |
ಭರದಿ ಪಾವಕನೊಳಗೆ ತನ್ನಯ ತನುವ ನೀಗಿದಳು ||
ತರುಣಿಯೇ ಬಂದೀಗ ದ್ರುಪದನ |
ತರಳೆಯಾಗುದ್ಭವಿಸಿ ಕಡೆಯೊಳು |
ಧರಿಸಿದಳು ವಿಧಿ ವಶದಿ ಪುಂಸತ್ವವನು ಕಡು ದುರುಳೆ || ೪೭೦ ||

ರಾಗ ಕೇದರಾಗೌಳ ಅಷ್ಟತಾಳ

ಅವಸಾನಕಾಲದಿಚ್ಛೆಗಳಂತೆ ಪ್ರಾಣಿಗೆ | ಭವಗಳು ನಿಶ್ಚಯವು |
ಯುವತಿಯೆನಗೆ ಮೃತ್ಯುವಾಗಿ ಶಿಖಂಡಿಯು | ಬವರಕೆ ನಿಂದಿಹಳು || ೪೭೧ ||

ತರುಣಿಯರಿದಿರಸ್ತ್ರ ಪೂಡೆನೆಂಬುವ ಭಾಷೆ | ಧರಿಸಿಹೆನದರಿಂದಲಿ ||
ಶರವ ಪೂಡೆನು ದೇಹ ತ್ಯಜಿಸಿ ಪೋಪೆನು ಸುರ | ಪುರಕೆಂದು ನೆನೆಯೆ ಭೀಷ್ಮ  || ೪೭೨ ||

ಅನಿತರೊಳಂಬರದೊಳಗಷ್ಟವಸುಗಳು | ಘನತರ ಘೋಷದಿಂದ ||
ಮನದಿ ನಿಶ್ಚಯಿಸಿದಂದದಿ ಬೇಗ ಬಾರೆಂದು | ಸುರಿದರು ಸುಮಮಳೆಯ  || ೪೭೩ ||

ಹರುಷದಿಂದಂತರಿಕ್ಷವ ನೋಡಿ ಭೀಷ್ಮನು | ಸುರರಿಷ್ಟದಂತೆ ನಾನು ||
ತೆರಳುವುದೊಳ್ಳಿತು ಹರಿಯ ಮೂರ್ತಿಯನೊಮ್ಮೆ | ಪರಿಕಿಪೆನೆಂದೆನುತ || ೪೭೪ ||

ರಾಗ ಜಂಜೂಟಿ ಅಷ್ಟತಾಳ

ಮುರಹರ ಕುಳಿತಿಹನಿಲ್ಲಿ | ಪುರಂ | ದರನಾತ್ಮಭವರಥದಲ್ಲಿ ||
ಕೊರಳ ಕೌಸ್ತುಭ ವೈಜಯಂತಿವಿರಾಜಿತ |
ವರಚತುರ್ಭುಜಶಂಖಚಕ್ರಾಂ || ಬುರುಹಗದೆ ಸರಸಿರುಲೋಚನ || ೪೭೫ ||

ಕಸ್ತೂರಿತಿಲಕಲಲಾಟ | ಭಕ್ತ | ಚಿತ್ತಾಪಹರಣನೋಟ |
ಮುಕ್ತಿದಾಯಕ ದೇವ ಧನ್ಯನಾದೆನು ಪಾರ್ಥ |
ನಸ್ತ್ರದೊಳಗೆನಗಿತ್ತು ಮುನ್ನಿನ | ಕೃತ್ಯದೊಳು ನೆಲೆಗೊಳಿಸು ಬೇಗನೆ || ೪೭೬ ||

ಶರಧಿಶಯನ ದೇವದೇವ | ಪರ | ತರವಸ್ತು ಕಾರುಣ್ಯಭಾವ |
ಶರಣರಂತರ್ಯಾಮಿ ಭವರೋಗಭಂಜನ |
ಪರಮಮಹಿಮನೆ ಜಯ ಜಯೆನ್ನುತ | ಸುರನದೀಸುತನೆಂದ ಪಾರ್ಥಗೆ || ೪೭೭ ||

ಭಾಮಿನಿ

ತರುಣ ಕೇಳೈ ಪಾರ್ಥ ನಿನ್ನಯ |
ಹಿರಿಯ ತಾತನ ಮೇಲೆ ಕರುಣಗ |
ಳಿರಲು ಶರಪುಷ್ಪಕದೊಳಂಬರಗತಿಗೆ ಕಳುಹೀಗ ||
ನೆರೆದ ರಾಯರ ಮುಂದೆ ಭೀಷ್ಮನ |
ತರಿವೆ ನಾನೆಂದನುತ ಪೂರ್ವದೊ |
ಳೊರೆದ ಭಾಷೆಗಳೆಲ್ಲಿ ಕ್ಷಾತ್ರಿಯೊಳಧಮನಾಗದಿರು || ೪೭೮ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದ ಮಾತನು ಕೇಳಿ ಮರುಕವ | ಕೊಂಡು ಪಾರ್ಥನು ಶಿರವ ತಗ್ಗಿಸಿ |
ನಿಂದಿರಲು ಮುರಹರನು ಪೇಳಿದ | ನೆಲವೊ ಮರುಳೆ || ೪೭೯ ||

ಮರುಕವಿರೆ ನಿನಗೀಗ ಭೀಷ್ಮನೊ | ಳರುಹು ಪಿಡಿದಿಹ ಚಕ್ರಮುಖದಲಿ |
ಕೊರಳನರಿದೀ ಕ್ಷಣವೆ ಕುರುಕುಲ | ದಹಿಪೆ ನೋಡು || ೪೮೦ ||

ಸ್ಥಿರಗೊಳಿಪೆ ಧರ್ಮಜಗೆ ಧರಣಿಯ | ತೆರಳುವೆನು ಶಿರವೆತ್ತಿ ನಿನ್ನನು |
ಪರಿಕಿಸೆನು ಗೆಯ್ದಿರ್ದ ಶಪಥಕೆ | ಹಿಂದೆ ಸರಿದೆ || ೪೮೧ ||

ಮೂರು ಲೋಕದಿ ಕೀರ್ತಿ ಪಡೆದಿಹ | ಧೀರನೆಂಬುವ ಬಿರುದದೆಲ್ಲಿದೆ |
ಧಾರಿಣೀಶರು ನಗರೆ ನಾಚಿಕೆ | ಬಾರದೇಕೊ || ೪೮೨ ||

ರಾಗ ಘಂಟಾರವ ಏಕತಾಳ

ಎಂದ ಮಾತನು ಕೇಳುತ್ತ ಪಾರ್ಥನು |
ಅಂಧಕಾರಿಯ ತೆರದಿ ಖತಿಯೊಳು | ಸಂಧಿಸಿದ ಕೂರ್ಗಣೆಯನು || ೪೮೩ ||

ಭರದಿ ಭೀಷ್ಮನು ಪರಶುವನೆಗಹುತ್ತ |
ತಿರುಹಿ ಬರೆ ಖಂಡಿಸಿದ ಪಾರ್ಥನು | ಪರಮ ರೋಷಾವೇಶದಿ  || ೪೮೪ ||

ಕೆರಳಿ ತೋಮರ ಭಿಂಡಿವಾಲಗಳನ್ನು |
ಸುರನದೀಸುತನೆತ್ತಿ ಪೊಯ್ಯುವ | ಭರಕೆ ಮುರಿದನು ಪಾರ್ಥನು || ೪೮೫ ||

ಕೆರಳುತಕ್ಷಯಶರವಭಿಮಂತ್ರಿಸಿ |
ನರನೆಸೆಯೆ ಗಾಂಗೇಯನಂಗವು | ಶರದ ಪಂಜರವಾಯಿತು || ೪೮೬ ||

ಬಂದನಾಗ ಶಿಖಂಡಿಯು ಭೀಷ್ಮನ |
ಮುಂದೆ ನಿಲ್ಲುತ ಶರವನೆಸೆಯಲು | ನೊಂದು ವ್ಯಾಕುಲದಿಂದಲಿ || ೪೮೭ ||

ಭಾಮಿನಿ

ಸುರತರಂಗಿಣಿತನಯ ಯೋಚಿಸಿ |
ತರುಣಿಜನ್ಮ ಶಿಖಂಡಿಯಸ್ತ್ರಗ |
ಳೆರಗಿದಾ ಕ್ಷಣ ತೊಡುವೆ ಶರಸಂನ್ಯಾಸವೆಂದೆನುತ ||
ವಿರಚಿಸಿದ ಶಪಥಂಗಳಂದದಿ |
ನಿರತವೊದಗಿತು ಪಾರ್ಥನಸ್ತ್ರವು |
ಕೊರೆವುತಿದೆ ರೋಮಾಂಚನಂಗಳನಿರೆನು ಧರಣಿಯಲಿ || ೪೮೮ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದು ನಿಶ್ಚಯಿಸುತ್ತ ಭೀಷ್ಮನು | ಸ್ಯಂದನದಿ ಶಸ್ತ್ರಗಳ ಧರಿಸದೆ |
ನಿಂದನದ ಕಾಣುತ್ತ ಕುರುಪತಿ | ದ್ರೋಣಕೃಪರು || ೪೮೯ ||

ಕೆರಳಿ ವಮ್ಮಡಿಯಾಗಿ ಪ್ರಾರ್ಥನ | ಪರಿಘದೊಳು ಮಾರ್ಮಲೆಯುತಯ್ತರೆ |
ಶರಮಯವ ತೂರಿದನು ಭೋರ್ಗರೆ | ದಾ ಕಿರೀಟಿ || ೪೯೦ ||

ನಿಲ್ಲಲಾರೆವೆನುತ್ತ ದಿಗ್ದೆಸೆ | ಗೆಲ್ಲ ಧನುಶರ ಬಿಸುಡುತೋಡಲು |
ಮೆಲ್ಲನಸ್ತಾಚಲಕೆ ಭಾಸ್ಕರ | ತೆರಳಲಾಗ || ೪೯೧ ||

ಅರಿತು ತನ್ನೊಳು ಭೀಷ್ಮನೀ ದಿನ | ಶರಶಯನಕುತ್ತರೆಯ ಫಲ್ಗುಣಿ |
ಪರಮಮಾರ್ಗಶಿರಾಚ್ಛ ಸಪ್ತಮಿ | ಯೊಳ್ಳಿತೆನುತ || ೪೯೨ ||

ನರನ ಶರ ಸರ್ವಾಂಗ ಜರ್ಝರಿ | ಕರಿಸುತಿದೆ ಹರಿಯೆಂದು ಧರೆಯೊಳು |
ಶಿರವು ಪ್ರಾಙ್ಮುಖವಾಗಿ ಭೀಷ್ಮನು | ಪವಡಿಸಿದನು || ೪೯೩ ||

ವಾರ್ಧಕ

ಸುರಿವ ನೇತ್ರೋದಕದಿ ಗುರುಕೃಪಾಶ್ವತ್ಥಾಮ |
ಕುರುರಾಯ ದುಶ್ಯಾಸನಾದಿಗಳ್ ಮೊರೆಯಿಡುತ |
ತೆರಳಿಸುತೆ ಸಕಲ ಸೇನೆಯನೆಲ್ಲ ಬಿಡದಿಗಂ ಧನುಶರಾವಳಿ ಬಿಸುಡುತ ||
ಶರತಲ್ಪದೆಡೆಗಾಗಿ ಬರಲಿತ್ತ ಯಮಜಾತ |
ವರವೃಕೋದರ ಪಾರ್ಥ ಮಾದ್ರೇಯರಾ ಕ್ಷಣದಿ |
ಮರುಗುತಾನೀಕಮಂ ಕಳುಹಿ ಪಿಂದಕೆ ಭೀಷ್ಮನಿರುವಲ್ಲಿಗಯ್ತಂದರು || ೪೯೪ ||

ಭಾಮಿನಿ

ಸುರಿವ ಕಣ್ಣೀರಿನಲಿ ಧರ್ಮಜ |
ನೆರಗಿ ತಾತನೆ ಎಮ್ಮ ಸಲಹುವ |
ಕರುಣನಿಧಿ ನಿನ್ನಗಲಿ ನಾವಿನ್ನೆಂತು ಬಾಳುವೆವು ||
ಒರೆಯುವವರಾರೆಮಗೆ ಬುದ್ಧಿಯ |
ತೊರೆದು ಪೋಪೆಯ ಪ್ರಾಜ್ಞ ಗುಣನಿಧಿ |
ಧರಣಿಯಾಸೆಗೆ ನಿನ್ನ ನೀಗಿದೆವಕಟ ನಾವೆಂದ || ೪೯೫ ||

ರಾಗ ಕಾಂಭೋಜಿ ಝಂಪೆತಾಳ

ಮೊರೆಯ ಕೇಳುತಲಾಗ | ಸುರನದಿಜ ಪೇಳಿದನು |
ತೊರೆವುದಿಲ್ಲೀ ದೇಹ ದಕ್ಷಿಣಾಯನದಿ |
ಬರಲು ಪೂಷನುದೀಚಿ ಸಮಯವನು ನಿರುಕಿಸುತ |
ಶರತಲ್ಪದೊಳಗಿರುವೆ ಮರುಗದಿರಿ ನೀವು || ೪೯೬ ||

ಬನ್ನಿರೈ ಪಾಂಡವರು ಬನ್ನಿರೀ ಕಡೆಗೀಗ |
ಬನ್ನಿರೈ ದ್ರೋಣ ಕೃಪ ಶಲ್ಯಾದಿ ಭಟರು |
ಬನ್ನಿರೈ ಗಾಂಧಾರಿತನಯರೆಲ್ಲರು ನೀವು |
ಬನ್ನಿ ನಿಮ್ಮನು ನೋಳ್ಪ ತವಕವಿಹುದೆನಗೆ || ೪೯೭ ||

ದೂರದಲಿ ನಿಂತಿರುವುದೇಕೆ ಬಾರೆಲೊ ಕರ್ಣ |
ಶೂರಾಗ್ರಗಣ್ಯಬಾರಿತ್ತ ಸುಕುಮಾರ |
ವೀರ ಪಾರ್ಥನ ಶರವು ತಲ್ಪವಾಯಿತು ಎನಗೆ |
ಧಾರಿಣಿಗೆ ಜೋಲುತಿದೆ ಶಿರಕೆ ದಿಂಬಿಲ್ಲ || ೪೯೮ ||

ಕುರುಪತಿಯೆ ರಚಿಸಯ್ಯ ತಲೆದಿಂಬ ದಯದಿಂದ |
ಶಿರವೆತ್ತಿ ನಿಮ್ಮನುರೆ ಪರಿಕಿಪೆನು ನಾನು ||
ಒರೆಯಲಂಜುವೆ ನಿನಗೆ ಧುರದಿ ಜಯಪೊಂದಿಸದೆ |
ಒರಗಿದೆನು ನರನಸ್ತ್ರಪರ್ಯಂಕದೊಳಗೆ || ೪೯೯ ||

ರಾಗ ರೇಗುಪ್ತಿ ಅಷ್ಟತಾಳ

ಕುರುಕುಲಾಧಿಪನದ ಕೇಳಿ | ಪದ | ಕೆರಗಿ ಮನದಿ ಶೋಕತಾಳಿ |
ತರಿಸಿದ ಪಟ್ಟೆಪೀತಾಂಬರದೊಳು ಗೆಯ್ದ | ಸುರುಚಿರವಾದ ದಿಂಬುಗಳನ್ನು ವೇಗದಿ || ೫೦೦ ||

ನೋಡಿ ಗಾಂಗೇಯನಾ ಕ್ಷಣದಿ | ಬೇಡ | ಬೇಡಿದು ಯೋಗ್ಯವೆ ಧುರದಿ |
ಮಾಡಿರುತಿಹ ವೀರಶಯನಕ್ಕೆ ಸರಿಯಲ್ಲ | ಗಾಢದಿ ಫಲುಗುಣ ರಚಿಸು ದಿಂಬುಗಳೀಗ || ೫೦೧ ||

ಎನೆ ಹಸಾದಗಳೆನ್ನುತಾಗ | ತನ್ನ | ಧನುವೆತ್ತಿ ಶರಗಳ ಬೇಗ |
ಕ್ಷಣದೊಳು ಧರಣಿಗೆ ಪೂಡಿ ದಿಂಬನುಗೆಯ್ದು | ವಿನಯದಿ ಭೀಷ್ಮನ ಶಿರವೆತ್ತಿ ನಿಲಿಸಿದ || ೫೦೨ ||

ಪರಿತೋಷವಾಯಿತೆಂದೆನುತ | ಗಂಗಾ | ತರಳ ನಿಂದಿಹರ ನೋಡುತ್ತ ||
ನರನಸ್ತ್ರದುರಿಯಿಂದಲೊಣಗಿತು ಜಿಹ್ವೆಯು | ಕುರುರಾಯ ತರಿಸೀಯಬೇಕು ಗಂಗೋದಕ || ೫೦೩ ||

ರಾಗ ಶಂಕರಾಭರಣ ತ್ರಿವುಡೆತಾಳ

ತರಿಸಿದನು ಎಳೆನೀರು ಶರ್ಕರೆ | ಮಿಶ್ರದಮೃತದ ಪಾನಕ ||
ಭರಿತ ಕ್ಷೀರದ ಭಾಂಡಭಾಂಡವ | ನಿರುಕಿಸುತ ನದಿತನಯನು || ೫೦೪ ||

ಬೇಡ ಬೇಡೆನಗಿಂಥ ಭೋಗವು | ರೂಢಿಪಾಲರಿಗ್ಯೋಗ್ಯವು ||
ಮಾಡಿಹೆನು ಪ್ರಾಯೋಪವೇಶವ | ಮೂಢತನಗಳಿದೇತಕೊ || ೫೦೫ ||

ತರಳ ತರಿಸೈ ಪಾರ್ಥ ವೇಗದಿ | ಭರಿತ ತೃಷೆಯಾಗಿರ್ಪುದು ||
ತ್ವರಿತವೆನೆ ವಂದಿಸುತಲೇರಿದ | ನಿರದೆ ಅನಲನ ರಥವನು || ೫೦೬ ||

ಹೂಡಿದನು ಗಾಂಡೀವಕಸ್ತ್ರವ | ನೋಡಿಭುವನಕೆ ಸೆಳೆಯುತ ||
ಗಾಢದಿಂ ಬಿಡಲಾಗ ಗಂಗೆಯು | ಓಡಿ ಬಂದಳು ಮೇಲಕೆ || ೫೦೭ ||

ವದನವನು ತೆರೆದಾಗ ಭೀಷ್ಮನು | ಮುದದಿ ಪಾನವ ಗೆಯ್ಯುತ ||
ಸದಮಲಾತ್ಮಕ ತೃಪ್ತಿಪಡುತಲೆ | ತಿರುಗಿ ನೋಡಿದ ಕುರುಪನ || ೫೦೮ ||

ರಾಗ ಸಾಂಗತ್ಯ ರೂಪಕತಾಳ

ಪರಿಕಿಸು ಕೌರವ ನರನ ಸಾಹಸಗಳ | ನರಿತು ಮೂರ್ಖತೆಯಾಕೊ ನಿನಗೆ ||
ಧುರದ ಬುದ್ಧಿಯು ಬೇಡ ಸಾರಿದೆ ಸುರನರ | ಗರುಡರೊಳಿವಗೆಣೆಗಾಣೆ || ೫೦೯ ||

ನಿಮ್ಮ ದ್ವೇಷವ ಬಿಟ್ಟು ಸಮ್ಮತಿಯೊಳು ರಾಜ್ಯ | ಧರ್ಮಜಂಗರ್ಧವನಿತ್ತು ||
ಒಮ್ಮನದೊಳಗಿರೆ ಕುರುರಾಜ್ಯಕೀರ್ತಿಯು | ಬ್ರಹ್ಮಾಂಡ ತುಂಬುವುದಯ್ಯ || ೫೧೦ ||

ದುರುಳರ ಬೋಧೆಯೊಳಿರಿಸುತ್ತ ಚಿತ್ತವ | ಕುರುಕುಲೇಂದ್ರನೆ ಕೆಡಬೇಡ ||
ಹರಿಯು ಪಾಂಡವಪಕ್ಷಕಿಹನು ಸಾರಿದೆನೀಗ | ಧುರ ಬೇಡ ತ್ಯಜಿಸೆನ್ನ ಮುಂದೆ || ೫೧೧ ||

ಕ್ಷಿತಿಯ ಬಿಟ್ಟಯ್ದಿದರಲ್ಲೆನ್ನ ಮನಕಿದು | ವ್ಯಥೆಯಾಪುದದಕೆ ಜೀವನದಿ ||
ಸತತ ನಾನಿರಲಿಂದೆ ನಿಮ್ಮ ವೈರಗಳನ್ನು | ಹಿತದಿ ಬಿಟ್ಟರೆ ಲೇಸು ಮನಕೆ || ೫೧೨ ||

ಭಾಮಿನಿ

ಎಷ್ಟು ಪೇಳಿದರಾನು ಪೊಡವಿಯ |
ಕೊಟ್ಟು ಸಂಗರ ಬಿಡೆನು ಜಗದೊಳು |
ದುಷ್ಟನೆಂದೆನಲೆನಗೆ ಚಿಂತೆಗಳಿಲ್ಲ ಕಾಡದಿರು ||
ತೊಟ್ಟ ಕ್ಷತ್ರಿಯ ಛಲವ ತ್ಯಜಿಸೆನು |
ಸೃಷ್ಟಿಯೊಳು ಋಣವಿರಲು ಬಾಳುವೆ |
ಬಿಟ್ಟರಸುವನು ಪಡೆವೆ ವೀರಸ್ವರ್ಗಸಂಪದವ || ೫೧೩ ||

ರಾಗ ಕೇದಾರಗೌಳ ಅಷ್ಟತಾಳ

ಕುರುರಾಯ ನಿನ್ನೊಳಗೇನೆಂಬೆ ಮನಬಂದ | ತೆರನ ಮಾಡುವುದೊಳ್ಳಿತು ||
ಅರಿಗಳೊಡನೆ ಸತ್ಯಯುದ್ಧ ಗೆಯ್ದರೆ ಮನ | ಹರುಷಗೊಂಬುದು ಎನಗೆ || ೫೧೪ ||

ವಂದಿಸುತಾಗ ಸುಯೋಧನನೆಂದನು | ಮುಂದೆನ್ನ ಸೇನೆಯನ್ನು ||
ಚಂದದಿ ರಕ್ಷಿಸಿಕೊಂಬರ್ ಯಾರಿಗೆ ಪಟ್ಟ | ವಿಂದು ನಾನೆಸಗುವುದು  || ೫೧೫ ||

ಸುರನದಿಸುತನಾಗಲೆಂದನು ದ್ರೋಣಗೆ | ಹರುಷದಿ ಪಟ್ಟಗಟ್ಟು ||
ನರನಿದಿರೊಳು ಕಾದಲರಿವಾತನವನೆನೆ | ಚರಣಕೆ ನಮಿಸಿದನು || ೫೧೬ ||

ದೂರ ಪೋಗಿ ಸ್ವಲ್ಪ ನೀವೆಂದು ಕಳುಹುತ್ತ | ಸೂರಿಯಾತ್ಮಜನ ನೋಡಿ ||
ಪಾರಮಾರ್ಥದಿ ಭೀಷ್ಮನಪ್ಪಿ ವ್ಯಾಮೋಹವ | ಬೀರುತಿಂತೆಂದನಾಗ || ೫೧೭ ||

ರಾಗ ರೇಗುಪ್ತಿ ಅಷ್ಟತಾಳ

ಮಾತ ಕೇಳೆಲೊ ಕರ್ಣ ನೀನು | ಕುಂತಿ | ಜಾತ ಮಾರ್ತಾಂಡಸಂಭವನು ||
ಖ್ಯಾತನಾಗಿಹೆ ಕೃಷ್ಣಪಾರ್ಥರ ಸರಿಸಮ | ಪ್ರೀತಿಯನೆಸಗಲುಬೇಕು ಪೇಳುವೆನೊಂದ || ೫೧೮ ||

ಅನುಜಾತ ಕೌಂತೇಯರನ್ನು | ನೀನು | ಘನತೆಯೊಳ್ ಕೂಡಿ ಕೀರ್ತಿಯನು ||
ದಿನದಿನಕಭಿವೃದ್ಧಿಗೊಳಿಸು ಕೌರವರೊಳು | ಸನುಮತವಲ್ಲ ಸೌಹಾರ್ದದೊಳಿಹುದಿನ್ನು || ೫೧೯ ||

ನುಡಿ ಕೇಳಿ ಕರ್ಣನಾ ಕ್ಷಣದಿ | ಭೀಷ್ಮ | ನಡಿಗೆರಗುತ ಪೇಳ್ದ ಮುದದಿ ||
ಪೊಡವಿಪ ಕೌರವನೊಳು ಜೀವ ಪೊರೆದಿಹೆ | ಬಿಡೆ ನಿಂದ್ಯವಾಪುದು ಕಡೆಗೆ ದುರ್ಗತಿಯಹುದು  || ೫೨೦ ||

ಹರಿಸಹಾಯದಿ ಕೌಂತೇಯರಿಗೆ |  ಜಯ | ವಿರುವುದಲ್ಲದೆ ಮಿಕ್ಕಾದರಿಗೆ ||
ಸರುವಥಾ ಗೆಲುವಿಲ್ಲ ಹುಟ್ಟಿದವಗೆ ಮೃತ್ಯು | ಬರದೆ ನಿಲ್ಲವುವುದುಂಟೆ ತೊರೆಯೆ ಕೌರವನನ್ನು || ೫೨೧ ||

ಪುಟ್ಟಿದೆ ಕ್ಷತ್ರಿಯಾನ್ವಯದಿ |  ಛಲ | ವಿಟ್ಟು ಕಾದಲು ದಿವಂಗತದಿ |
ಶ್ರೇಷ್ಠವಾಗಿಹ ವೀರ ಸ್ವರ್ಗ ಕೈಗೊಂಬೆನು | ಥಟ್ಟನೀ ಕ್ಷಣ ಧುರಕಪ್ಪಣೆ ಕೊಡುವುದು || ೫೨೨ ||

ವಾರ್ಧಕ

ತರಣಿಸುತ ಕೇಳ್ ನೀನು ವ್ಯರ್ಥ ಕಲಹವನಿಕ್ಕಿ |
ಧುರವೆಸಗುವಂದಮಂ ಗೆಯ್ದುದಕೆ ಕೋಪಿಸಿದೆ |
ನಿರತ ಸತ್ಯದಿ ಕಾದಿ ಸತ್ಕೀರ್ತಿ ಪಡೆಯೆನುತ ಕಳುಹಿಯಮಜನೊಳೆಂದನು ||
ತರಳ ಕೇಳೈ ನಿನಗೆ ಪರಮಾತ್ಮನನುಗ್ರಹದಿ |
ಧುರದಿ ಜಯವೊದಗುವುದು  ವ್ಯಥಿಸದಿರು ಪೋಗೀಗ |
ಬರುವ ಮಾಘದ ಶುಕ್ಲವಷ್ಟಮಿಯೊಳೀ ತನುವನುಳಿದುಪೋಗುವೆ ಸ್ವರ್ಗಕೆ || ೫೨೩ ||

ರಾಗ ಕಾಂಭೋಜಿ ಝಂಪೆತಾಳ

ಧರಣಿಪಟ್ಟವನೆಸಗಿ ಕೊಂಡೆನ್ನ ಬಳಿಗಾಗ | ಬರೆ ಧರ್ಮಬೋಧೆಗಳ ತಿಳಿದುದನು ಪೇಳ್ವೆ ||
ಮುರಹರನು ಕಾಯುವನು ಪೋಗು ಧರ್ಮಜಯೆನುತ | ತೆರಳಿಸಿದ ಸಕಲರನು ಹರಿಯ ನೆನೆನೆನೆದು || ೫೨೪||

ಪರಮತೇಜಃ ಪುಂಜಮೂರುತಿಯ ನಾಸಾಗ್ರ | ವಿರಿಸಿ ನಿರ್ಮಲಮನದೊಳುಪನಿಷತ್ತುಗಳ ||
ಹರುಷದಿಂದಲೆ ಪಠಿಸುತಿರ್ದ ಶರತಲ್ಪದಲಿ | ಕುರುರಾಯ ಮುಂತಾಗಿ ಶಿಬಿರಸಾರಿದರು || ೫೨೫ ||

ವಾರ್ಧಕ

ವೀರಪಾಂಡವರೆಲ್ಲ ಜಯನಿನಾದದ ವಾದ್ಯ |
ಭೋರಿಡುತಲಯ್ತಂದು ಶಿಬಿರಮಂ ಪೊಕ್ಕಾಗ |
ವಾರಿಜಾಕ್ಷಗೆ ನಮಿಸಿ ನಿನ್ನ ಕಾರುಣ್ಯದೊಳ್ ಧೀರ ಭೀಷ್ಮನ ಗೆಲಿದೆವು ||
ಭಾರತೇಯರ ಪೊರೆವ ದ್ವಾರಕಾವಾಸಿ ಹರಿ |
ಶ್ರೀ ರಮಣ ಜಯ ಜಯಾ ಜಯತೆಂದು ಸೌಖ್ಯದೊಳ್ |
ಶೂರ ಪಾಂಡವರಿತ್ತ ಬಂಧುಬಾಂಧವರೊಡನೆ ಶಿಬಿರದೊಳ್ ನೆಲಸಿರ್ದರು || ೫೨೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಭಾರತಕಥೆಯ ಮುನಿಪತಿ | ಸಂತಸದಿ ಜನಮೇಜಯಾಖ್ಯಗೆ |
ಪಿಂತೆಯುಸಿರಿದ ತೆರದಿ ಕೃತಿಗಳ | ಗೆಯ್ದೆ ನಾನು || ೫೨೭ ||

ಪರಿಸಮಾಪ್ತಿಯು ಸೌಮ್ಯವತ್ಸರ | ಶರಧಿಸಖಸುತವಾರ ಶ್ರಾವಣ |
ಪರಮ ಶುಕ್ಲತೃತೀಯವೇಕಾ | ದಶಿಯ ಕೃತಿಯು || ೫೨೮ ||

ಪರಮತುಂಗಾತೀರ ಪನಸಾ | ಪುರದ ನಾಗೇಂದ್ರಾಖ್ಯತನುಜನು |
ನರಹರಿಯ ನಾಮಕನು ಗೆಯ್ದಿಹ | ಕೃತಿಗಳಿದನು  || ೫೨೯ ||

ಒಪ್ಪುತಪ್ಪುಗಳಿರಲು ವಿಬುಧರು | ಒಪ್ಪದಿಂದಲೆ ತಿದ್ದಿ ಮನಸಿನೊ |
ಳಿಪ್ಪ ದೋಷವ ಮಾಜದೆನ್ನೊಳು | ತಿಳುಹಿ ದಯದಿ || ೫೩೦ ||

ಮಂಗಲ

ರಾಗ ಢವಳಾರ ಆದಿತಾಳ

ಮಂಗಲಂ | ಜಯ | ಮಂಗಲಂ   || ಪ ||

ಮಂಗಲ ಕಸ್ತುರಿ ತಿಲಕನಿಗೆ | ಜಯ
ಮಂಗಲ ವೇಣುವಿನೋದನಿಗೆ ||
ಮಂಗಲ ಅಘಹರಪುರದ ನಿವಾಸಿಗೆ |
ಮಂಗಲ ಶ್ರೀಗೋಪಾಲನಿಗೆ ||
ಮಂಗಲಂ | ಜಯ | ಮಂಗಲಂ || ೫೩೧ ||

ಮಂಗಲಂ ಮತ್ಸ್ಯವತಾರ ಕಚ್ಛಪಗೆ |
ಮಂಗಲ ವರಹ ಶ್ರೀನರಸಿಂಹಗೆ |
ಮಂಗಲ ವಾಮನ ಭಾರ್ಗವ ರಾಮಗೆ |
ಮಂಗಲ ಕೃಷ್ಣ ಬೌದ್ಧ ಕಲ್ಕ್ಯರಿಗೆ ||
ಮಂಗಲಂ | ಜಯ | ಮಂಗಲಂ || ೫೩೨ ||

ತರಳ ಪ್ರಹ್ಲಾದನ ಪೊರೆದವಗೆ |
ದುರುಳ ಹಿರಣ್ಯನ ತರಿದವಗೆ ||
ನರಕೇಸರಿಯವತಾರ ಸ್ತಂಭೋದ್ಭವ |
ಸಿರಿಯರಸಗೆ ಶ್ರೀನರಸಿಂಹಗೆ ||
ಮಂಗಲಂ | ಜಯ | ಮಂಗಲಂ || ೫೩೩ ||

ಯಕ್ಷಗಾನ ಭೀಷ್ಮಾರ್ಜುನರ ಕಾಳಗ ಮುಗಿದುದು