ಶಾರ್ದೂಲವಿಕ್ರೀಡಿತಂ

ಗೋಪಾಲಂ ಕರುಣಾಕರಂ ಗುಣನಿಧಿಂ ದೈತ್ಯಾಂತಕಂ ಕೇಶವಂ
ಶ್ರೀ ಪದ್ಮಾಕ್ಷಸುರತ್ನಭೂಷಣಯುತಂ ಶ್ರೀಶಂ ಸುರೇಶಾರ್ಚಿತಮ್ |
ಗೋಪಸ್ತ್ರೀಪರಿವೇಷ್ಟಿತಂ ಮುರರಿಪುಂ ಕ್ಷೀರಾಬ್ಧಿವಾಸಂ ಹರಿಂ
ಅಪದ್ಭಾಂಧವಭಕ್ತ ವತ್ಸಲವಿಭುಂ ಲಕ್ಷ್ಮೀನೃಸಿಂಹಂ ಭಜೇ ||

ರಾಗ ನಾಟಿ ಝಂಪೆತಾಳ

ಕರಿವದನ ಹರಜಾತ | ಶರಣಜನಸಂಪ್ರೀತ |
ಪೊರೆಯೆನ್ನ ಗಣನಾಥ | ಗಿರಿಜೆಸಂಭೂತ || ಜಯ ಜಯತು ಜಯತು || ೧ ||

ತರುಣಾರ್ಕಕೋಟಿಸಂ | ಕಾಶ ಕುಂಡಲಭೂಷ |
ಸುರನರೋರಗನಮಿತ | ಸದ್ಗುಣಭರಿತ | ಜಯ ಜಯತು ಜಯತು  || ೨ ||

ನಂಬಿದೆನು ನಾ ನಿನ್ನ | ಸಂಭ್ರಮದಿನೀನೆನ್ನ |
ಬೆಂಬಿಡದಿರು ಮುನ್ನ | ಭಜಿಪೆ ಸಂಪನ್ನ | ಜಯ ಜಯತು ಜಯತು || ೩ ||

ಭಾಮಿನಿ

ಕಾಳಿ ಕಾತ್ಯಾಯನಿ ಕಪರ್ದಿನಿ |
ಫಾಲಲೋಚನೆ ಚಂಡಿ ಶಾಂಭವಿ |
ಜ್ವಾಲಿನೀ ತ್ರಿಪುರೇಶಿ ಭ್ರಾಮರಿ ದುರ್ಗಿ ವಾರಾಹಿ ||
ಕಾಲರಾತ್ರೇಂದ್ರಾಣಿ ಭಗವತಿ |
ಶೂಲಿನೀ ಹ್ರೀಂಕಾರಿ ಪಾರ್ವತಿ |
ಪಾಲಿಸೆನ್ನನು ತ್ರಿಪುರಸುಂದರಿ ರಾಜರಾಜೇಶಿ || ೪ ||

ದ್ವಿಪದಿ

ಹರಿ ಹರಬ್ರಹ್ಮಾದಿಗಳಿಗೆ ವಂದಿಸುವೆ |
ಸಿರಿ ಗೌರಿ ವಾಗ್ದೇವಿಯರನು ಪೂಜಿಸುವೆ || ೫ ||

ಪರಮವೇದವ್ಯಾಸಮುನಿಪಗಭಿನಮಿಸಿ |
ವರಮಾತೃಪಿತೃವರ್ಗಗಳನು ಸಂಸ್ತುತಿಸಿ || ೬ ||

ನರಹರಿಯ ಕರುಣದೊಳಗೆಕ್ಷಗಾನದೊಳು |
ವಿರಚಿಸುವೆ ಸಕಲರಿದ ಮೆರೆಸಿ ಮೋದದೊಳು || ೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುನಿಪ ವೈಶಂಪಾಯ ಜನಮೇ | ಜಯಗೆ ಬೋಧಿಸೆ ಭಾರತಾಮೃತ |
ವನಧಿಯೊಳು ಕುರುಪಾಂಡುಸೇನೆಯ | ಧುರದ ಪರಿಯ || ೮ ||

ಸುರ ತರಂಗಿಣಿತನಯ ಸೇನಾ | ಶರಧಿಯಧಿಪತಿಯೆನಿಸಿ ದಶದಿನ |
ಧುರವೆಸಗಿ ಶಯನಿಸಿದನೇತಕೆ | ಶೂರನವನು || ೯ ||

ಅರುಹಬೇಹುದೆನುತ್ತಲೆರಗಿದ | ಧರಣಿಪನ ತಕ್ಕೈಸಿ ಪೇಳಿದ |
ವರಮುನಿಪ ಸತ್ಕಥೆಯನೆಲ್ಲವ | ವಿವರವಾಗಿ || ೧೦ ||

ಒಂದು ದಿನ ಧರ್ಮಜನು ವಿಭವದಿ | ಬಂದು ಒಡ್ಡೋಲಗದಿ ಮಂಡಿಸಿ |
ಚಂದದೊಳಗನುಜಾತರೆಲ್ಲರ | ಕರೆದು ಪೇಳ್ದ || ೧೧ ||

ರಾಗ ಕೇದಾರಗೌಳ ಅಷ್ಟತಾಳ

ಅನುಜಾತರಿರ ಕೇಳಿ ಧುರದೊಳು ರಾಜ್ಯವ | ನನುಕರಿಸುವುದೆನ್ನುತ ||
ಚಿನುಮಯನೊಳು ಪೇಳಿ ಕಳುಹಿದ ಕೌರವ | ನೆಣಿಸೆ ದುರ್ಬುದ್ಧಿಗಳು || ೧೨ ||

ಹರಿಯ ನೇಮದಿ ಧುರಕೋಸುಗ ಸಹಯಕೆ | ಪುರಜಿತು ದ್ರುಪದ ಶೈಬ್ಯ |
ಧರಣಿಪ ಪ್ರತಿವಿಂಧ್ಯ ಕಾಶೀಶ ವೈರಾಟ | ಸರುವರ ಕರೆಸಿಹೆವು || ೧೩ ||

ಸೇನಾಧಿಪತ್ಯವ ಧೃಷ್ಟದ್ಯುಮ್ನಗೆ ನಾವು | ಮಾನಿಸಿರ್ಪೆವು ಮೊದಲೆ |
ಚೂಣಿಗಳೆಣಿಸಲೇಳಕ್ಷೌಹಿಣಿಗಳಾಯ್ತು | ದಾನವಾರಿಯ ದಯದಿ || ೧೪ ||

ಒಂದೇ ವಂಶಾವಳಿಯೊಳು ಪುಟ್ಟಿ ದುಷ್ಕರ್ಮ | ಬಂಧದಿ ಬಿಗಿವಡೆದು ||
ಬಂಧುಬಾಂಧವಗುರುಹಿರಿಯರೊಳ್ ಕಲಹವ | ತಂದನು ಕೌರವನು || ೧೫ ||

ಮೂರು ದಿನದ ಹಗರಣಕೀಗ ನಮ್ಮೊಳು | ಹೋರುವುದೇಕೆನಲು ||
ಮಾರುತಾತ್ಮಜ ಖತಿಯೇರಿ ಗರ್ಜಿಸಿ ಹೂಂ | ಕಾರದೊಳಿಂತೆಂದನು || ೧೬ ||

ರಾಗ ಭೈರವಿ ಏಕತಾಳ

ಕೂಡಿದ ಸಭೆಯೊಳು ಸತಿಯ | ಎಳೆ | ದಾಡುತ ಬಿಚ್ಚಿದ ಮುಡಿಯ |
ಗಾಢದಿ ಸೀರೆಯ ಸೆಳೆದು | ಮತಿ | ಗೇಡಿಯು ಕುಣಿದಿಹ ನಲಿದು || ೧೭ ||

ಕಂಡಿರೆ ನೀವದ ಹಿಂದೆ | ಬಹು | ಭಂಡರು ನಾವೈ ಮುಂದೆ |
ಮಂಡೆಯ ತಗ್ಗಿಸಿ ವನಕೆ | ಹೋ | ಗ್ಯಂಡಲೆದೆವು ಜೀವನಕೆ || ೧೮ ||

ಮುನಿಪತಿ ದುರ್ವಾಸನನು | ಬಲು | ಘನತೆಯೊಳ್  ಕಳುಹಿದನವನು ||
ಚಿನುಮಯ ಕಾಪಾಡಿದನು | ಇದ | ನೆಣಿಸದೆ ಎನ್ನಗ್ರಜನು || ೧೯ ||

ಕುರುಪತಿಯನು ಪೊಗಳುತಲಿ | ತಾ | ತೆರಳಲಿ ವಿಪಿನಕಿಂದಿನಲಿ |
ಹರನಡ್ಡೈಸಲು ಬಿಡೆನು | ಸಂ | ಹರಿಪೆನು ಕೌರವರನ್ನು || ೨೦ ||

ತಿರುಹುತಲಾ ಕ್ಷಣ ಗದೆಯ | ಹೆ | ಮ್ಮರಗಳ ನೋಡುವ ಪರಿಯ ||
ಪರಿಕಿಸಿ ಧರ್ಮಜನಾಗ | ತಾ | ಳರೆಕ್ಷಣವೆನ್ನುತ ಬೇಗ || ೨೧ ||

ಭಾಮಿನಿ

ತಮ್ಮ ಲಾಲಿಸು ತಾತ ಗುಣಸಂ |
ಪನ್ನ ನಿನ್ನಭಿಮತವ ಮೀರೆನು |
ನಮ್ಮವರು ಮತ್ತೊಮ್ಮೆ ಸಾರುತ ಕೊಲಲು ದೋಷಿಲ್ಲ ||
ತಮ್ಮ ಸೈರಿಸು ಸೈರಿಸೆನುತಲಿ |
ಧರ್ಮಜನು ಫಲುಗುಣನ ನೋಡುತ |
ಲೊಮ್ಮೆ ನಿನ್ನಯ ಮತಗಳೇನೆನೆ ಪೇಳ್ದ ಕೈಮುಗಿದು || ೨೨ ||

ವಾರ್ಧಕ

ಸಂಧಿಗಯ್ದಿದ ಹರಿಯ  ದುರುಳರತ್ಯುಗ್ರದಿಂ |
ಬಂಧಿಸಲ್ ಮನಮಾಡಿಯಪಮಾನಗೆಯ್ದಿಹರು |
ಹಿಂದೆ ಲಾಕ್ಷಾಗೃಹದೊಳುರಿಯಿಕ್ಕಿ ಗರಳಮಂ ಮೆಲಲಿತ್ತ ಕಡುಮೂರ್ಖರ ||
ಹಿಂದೆಗೆಯದೀಗ ಸಂಹರಿಸಿ ರಾಜ್ಯವ ಸೆಳೆವು |
ದೊಂದೆ ಛಲವಿಹುದೆನಗೆ ಮರುಕವಿಲ್ಲಗ್ರಜನೆ |
ವಂದಿಪೆನು ಕ್ಷಾತ್ರಧರ್ಮಗಳಂತೆ ಸಂಗರವ ವಿರಚಿಪುದೆ ಸರಿಯೆಂದನು || ೨೩ ||

ಭಾಮಿನಿ

ಸುರಪಸುತನಿಂತೆನಲು ಧರ್ಮಜ |
ಸೊರಗಿ ಚಿಂತಾಂಬುಧಿಯೊಳಾಳು |
ತ್ತಿರುವ ಕಾಲದೊಳಲ್ಲಿಗಯ್ತಂದನು ಮುರಾಂತಕನು ||
ಹರುಷದಿಂದಭಿನಮಿಸಿ ವೇಗದಿ |
ಸುರುಚಿರಾಸನವಿತ್ತು ಮನ್ನಿಸಿ |
ಪರಿಪರಿಯ ಸತ್ಕರಿಸೆ ಮಗುಳಿಂತೆಂದ ಶ್ರೀಹರಿಯು || ೨೪ ||

ರಾಗ ಸುರುಟಿ ಏಕತಾಳ

ಅರಿಗಳು ಶೌರ್ಯದೊಳು | ಮುಂದೈ | ತರುವರು ಸಮರದೊಳು ||
ಪರಿಭವ ಕಾಂಬುತ್ಸಾಹದೊಳಿಲ್ಲದೆ | ಮರುಕವಕೊಂಡಿಹುದೇತಕೆ ಧರ‍್ಮಜ  || ೨೫ ||

ಕುಂಭಿನಿಪರ ಬಿರುದು | ಸಮರಾ | ರಂಭದಿ ಖತಿವೆರೆದು |
ಮುಂಬರಿದುತ್ಸಾಹದೊಳುರೆ ಪೋಪುದು | ಸಂಭ್ರಮಕಾಲದಿ ಮರುಗುವುದೇತಕೆ || ೨೬ ||

ಕಾರ್ಯಾರಂಭದೊಳು | ಶೋಕಿಸ | ಲಾರರು ತಿಳಿದವರು ||
ಭೋರನೆ ಸಮರಕೆ ಪೊರಡೇಳೇಳೆನೆ | ವಾರಿಜನಾಭಗೆ ನಮಿಸುತಲೆಂದನು || ೨೭ ||

ರಾಗ ಶಂಕರಾಭರಣ ಆದಿತಾಳ

ಶ್ರೀಲಲನಾಪತೇ | ಪಾಹಿ ಮುರಾರೇ || ಭೂಲಲನೆಯು ಬೇಡ | ಬೇಡೆಲೊ ಶೌರೇ   || ಪ ||

ಬಂಧುಬಾಂಧವ ಗುರು | ಹಿರಿಯರೊಳಿಂದು ||
ನಿಂದು ಕಾದುವುದೆಂತು | ಸದ್ಗುಣಸಿಂಧು || ಶ್ರೀಲಲನಾಪತೇ || ೨೮ ||

ಲೇಸೆನಗಾರಣ್ಯ | ವಾಸವೆ ಕೇಳು ||
ದೋಷಕಾರ್ಯವ ಗೆಯ್ಯ | ಲಾರೆ ದಯಾಳು | ಶ್ರೀಲಲನಾಪತೇ || ೨೯ ||

ಅಸ್ಥಿರ ಸಾಮ್ರಾಜ್ಯ | ಕನಸಿನ ನಂಟು ||
ಅಸ್ಥಿರದೇಹದ | ರ್ಪಣದೊಳಗಂಟು || ಶ್ರೀಲಲನಾಪತೇ || ೩೦ ||

ರಾಗ ಕೇದಾರಗೌಳ ಝಂಪೆತಾಳ

ಅಂತಕಾತ್ಮಜನುಡಿಯನು | ಕೇಳುತಲಿ | ಕಂತುಪಿತ ಮಗುಳೆಂದನು |
ಪಿಂತೆ ಕೌರವ ಮೂರ್ಖನು | ಉಪಕೃತಿಯ | ಸಂತಸದೊಳೆಸಗಿರ್ಪನು || ೩೧ ||

ಹಿರಿಯರೆಂದುದ ಕೇಳದೆ | ಧಾತ್ರಿಯನು | ಬರಸೆಳೆದ ನಿಮಗೀಯದೆ ||
ಪೊರಡಿಸಿದ ಪುರದಿಂದಲಿ | ಪರಿಪರಿಯ | ಮರುಗಿಸಿದ ದುರ್ಮದದಲಿ || ೩೨ ||

ಇರೆ ನಿನಗೆ ಕೃಪೆಯವನಲಿ | ನರವೃಕೋ | ದರರಿಂದ ಸಂಗರದಲಿ ||
ದುರುಳನನು ಸಂಹರಿಸುವೆ | ಎನ್ನಳಲ | ಹರುಷದಿಂದಲಿ ತೀರ್ಚುವೆ || ೩೩ ||

ಎನುತ ಚಿನ್ಮಯನೇಳಲು | ಯಮತನುಜ | ಮನದಿ ಯೋಚಿಸುತಾಗಳು ||
ದನುಜಾರಿ ನಿನ್ನ ಮತವ | ಮೀರುವೆನೆ | ಸನುಮತವು ಶ್ರೀಕೇಶವ || ೩೪ ||

ಭಾಮಿನಿ

ಇಂತೆನಲು ಗೋವಿಂದನೆಂದನು |
ಸಂತಸದಿ ಕುರುರಂಗಭೂಮಿಗೆ |
ದಂತಿತುರಗಪದಾತಿ ಸೇನೆಗಳೆಲ್ಲ ಪೊರಮಡಲಿ ||
ಕುಂತಿಸುತ ತಡಮಾಡಬೇಡೆನೆ |
ಚಿಂತೆಗಳ ನುಗ್ಗೊತ್ತಿ ಧರ್ಮಜ |
ಕಂತುಪಿತನಾಜ್ಞೆಯಲಿ ಗಜಮುಖನನ್ನು ಪೂಜಿಸುತ || ೩೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧನುಶರಾವಳಿಗಳನು ಧರ್ಮಜ | ವಿನಯದಿಂದರ್ಚಿಸುತ ಮಾತೆಯ |
ಘನಪದಾಬ್ಜಕೆ ಮಣಿದು ಮನದಲಿ | ತವಕದಿಂದ || ೩೬ ||

ಕರೆದು ಧೃಷ್ಟದ್ಯುಮ್ನಗಂತಕ | ತರಳ ಪೇಳಿದ ಸಕಲ ಸೇನೆಯ |
ನನುಕರಿಸಬೇಕೆನಲು ದ್ರುಪದಕು | ಮಾರನಾಗ || ೩೭ ||

ರಾಗ ಮಾರವಿ ಏಕತಾಳ

ಕರೆಸುತ ದೊರೆಗಳ ತುರಗಪದಾತಿಯ | ಕರಿಸಮುದಾಯಗಳ |
ಪರುಠವಿಸಲು ಗೋವಿಂದನು ಪಾರ್ಥನ | ಕರೆದುಸಿರಿದನಾಗ || ೩೮ ||

ಏರೈ ರಥವನು ಪಿಡಿ ಗಾಂಡೀವವ | ಸಾರೀ ಕ್ಷಣವೆನಲು ||
ವಾರಿಜನಾಭಗೆ ನಮಿಸುತಸ್ಯಂದನ | ವೇರಿದ ಕ್ಷಣದೊಳಗೆ || ೩೯ ||

ಮುಂದೆಸೆ ಧರ್ಮಜ ಬಲಗಡೆ ಮಾರುತ | ನಂದನ ಪೊರಮಡಲು ||
ಚಂದದಿ ಮಾದ್ರಿಕುಮಾರರು ಪಾರ್ಶ್ವದಿ | ಬಂದರು ವಿಭವದಲಿ || ೪೦ ||

ಏಳಕ್ಷೌಹಿಣಿ ಸೇನೆಯ ಮಧ್ಯದಿ | ಪಾಲಾಂಬುಧಿಶಯನ |
ಭೂಲಲನೆಯು ಬಾಯ್ದೆರೆಯುವ ತೆರದಲಿ | ಶಂಖವಮೊಳಗಿಸಿದ || ೪೧ ||

ಭೇರಿನಗಾರಿಯು ತಮ್ಮಟೆರವಗಳು | ಭೋರಿಡೆ ಮೋಹರವು ||
ಸೂರಿಯಮಂಡಲ ಮುಸುಕಿತು ಕೆಂಧೂ | ಳೇರುತ ರವದಿಂದ || ೪೨ ||

ವಾರ್ಧಕ

ತೋರೆ ಮಂಗಲಶಕುನ ಪರಿಕಿಸುತ ಧರ್ಮಜಂ |
ಭೂರಿ ತೋಷವ ತಳೆದು ಕುರುಕ್ಷೇತ್ರಕಯ್ತಂದು |
ಡೇರೆಗಳನಿಕ್ಕಿ ಸಂತೋಷದಿಂ ನೆಲಸಿರಲು ವಾರಿಜಾಕ್ಷನ ನೇಮದಿ ||
ಧಾರಿಣಿಪ ಕೇಳಿತ್ತ ಕುರುರಾಯನೋಲಗಕೆ |
ಸಾರಿ ಮಾದ್ರೇಶ ಗುರು ಶಕುನಿ ಮುಂತಾದ ಮಣಿ |
ಹಾರಕರನೆಲ್ಲ ಸಂತಸದಿಂದ ಕುಳ್ಳಿರಿಸಿ ವೈಭವದೊಳಿಂತೆಂದನು || ೪೩ ||

ರಾಗ ಕಾಂಭೋಜಿ ಝಂಪೆತಾಳ

ಕೇಳಿರೈ ಮಾದ್ರೇಶಮುಖ್ಯರೆಲ್ಲರು ಕುಂತೀ |  ಬಾಲಕರು ಸೇನೆಗಳ ಕೂಡಿ ಮೋದದಲಿ |
ಕಾಳಗಕೆ ಕುರುಕ್ಷೇತ್ರಕಾಗಿ ಬಂದಿಹರಂತೆ | ವೇಳೆಗಳೆಯಲು ಬಾರದಿನ್ನು (ಯೋಚಿಸಿರಿ) || ೪೪ ||

ಧುರಕಾಗಿ ಕಾಂಭೋಜ ಮಗಧ ಮಾಲವ ಹೂಣ | ದೊರೆಗಳಯ್ತಂದಿಹರು ಪರಮವಿಕ್ರಮರು ||
ಪರುಠವಿಸಿ ಹನ್ನೊಂದಕ್ಷೌಹಿಣಿಯು ಕರಿತುರಗ | ಭರಿತ ಕಾಲ್ಬಲ ರಥವು ಸಂದಣಿಗಳಿಹುದು || ೪೫ ||

ಆರು ಸೇನಾಧೀಶರಹರು ನಮ್ಮಯ ಬಲದಿ | ಶೂರಾಗ್ರೇಸರರಾಗಿ ನಡೆಸುವರು ಪಡೆಯ ||
ಪಾರಮಾರ್ಥದೊಳರುಹಿ ಸೇನಾನಿ ಪಟ್ಟವನು | ಯಾರಿಗೀಯುವುದೀಗ ತೋರಿರೆನಲವರು || ೪೬ ||

ಹರಿಯ ಮಾಯವನುಳಿದು ಮೆರೆದು ಸೇನೆಗಳನ್ನು | ಪರಿಪಾಲಿಸುವನೊಬ್ಬ ಗಾಂಗೇಯ ಶೂರ |
ಧುರ ಪರಾಕ್ರಮಿಯವನ ಬಿಟ್ಟನ್ಯರಿಲ್ಲೆಂದು | ಕುರುರಾಯಗರುಹಿದರು ಸಕಲ ಧರಣಿಪರು || ೪೭ ||

ಸರಿಯೆನುತ ಕೌರವನು ಪೊರಟು ನಿಶಿಕಾಲದಲಿ | ತೆರಳಿದನು ಗಾಂಗೇಯನಿರುವ ಬಳಿಗಾಗಿ ||
ಹರಿಯ ನೆನೆಯುತ ಮಂಚದೊಳಗೆ ಮಲಗಿರೆ ಭೀಷ್ಮ | ಗೆರಗಿದನು ಕುರುರಾಯನೆತ್ತಿ ಮುದ್ದಿಸುತ || ೪೮ ||

ರಾಗ ಮಧುಮಾಧವಿ ತ್ರಿವುಡೆತಾಳ

ಕುರುಕುಲಾನ್ವಯತಿಲಕ ಬಾ ಬಾ | ತರಳ ಬಾರೀ ನಿಶಿಥಕಾಲದಿ |
ತೆರಳಿ ಬಂದಿಹುದೇತಕೋರ್ವನೆ | ಪೇಳು ಪೇಳೈ ಮಾಜದೆ || ೪೯ ||

ಕುಂಭಿನಿಪ ಶಶಿಬಿಂಬದಂತಿಹ | ಸಂಭ್ರಮದ ಮುಖಕಮಲ ನೋಡಲು |
ಡಂಭಕಾವ್ಯಥೆಯೆಂಬ ಬಿಸಿಲಿನೊ | ಳಿಂಬುಗೊಂಡಿಹುದೇತಕೆ || ೫೦ ||

ಧರೆಯ ಸಾಮದಿ ಕೊಡೆನು ಸಂಗರ | ವಿರಚಿಸುವುದೆಂದೆನುತ ಚಿನ್ಮಯ |
ಗರುಹಿ ಕಳುಹಿದೆ ನೀನು ಮುಂದಣ | ಪರಿಯನರಿಯದೆ ತರಳನೆ || ೫೧ ||

ರಾಗ ಮಾರವಿ ಏಕತಾಳ

ಹರಿಯೊಳು ಧುರವೆಂದೆನುತಲೆ ಕಳುಹಿದೆ | ಮರುಕದಿ ಪಾಂಡವರ ||
ಪೊರೆಯುವರಾರೈ ಎಮ್ಮನು ಕೆಣಕುತ | ಬರುವರು ದಿನದಿನದಿ || ೫೨ ||

ರಾಗ ಸಾಂಗತ್ಯ ರೂಪಕತಾಳ

ಆದಿನಾರಾಯಣ ದುಷ್ಟ ಶಿಕ್ಷಣಕಾಗಿ | ಮೋದದಿ ದೇವಕಿಗುದಿಸಿ ||
ಸಾದರದೊಳು ಪಾಂಡುಜಾತರ ಪೊರೆಯುವ | ಛೇದಿಸಿಹನು ಕಂಸಾದಿಗಳ || || ೫೩ ||

ರಾಗ ಮಾರವಿ ಏಕತಾಳ

ಪೊರೆಯುವ ಮಹಿಮನು ವಿಪಿನಾಂತರಗಳ | ಚರಿಸುವ ಕಾಲದೊಳು ||
ಧರಣಿಯ ಕೊಡಿಸದೆ ಬಿಟ್ಟಿಹನೇತಕೆ | ಸರುವಥ ಕೊಡೆನಿನ್ನು || ೫೪ ||

ರಾಗ ಸಾಂಗತ್ಯ ರೂಪಕತಾಳ

ಕೆಡುಕ ಯೋಚಿಸಬೇಡ  ಸತ್ಯಮಾರ್ಗಗಳನ್ನು | ಪಿಡಿದು ಪೋದರು ವನಕವರು ||
ಕೊಡದಿರೆಯರ್ಧರಾಜ್ಯವ ಕೃಷ್ಣ ಧುರದೊಳು | ಬಿಡದೆ ಹೊಂದಿಪಜಯಗಳನು || ೫೫ ||