ಭಾಮಿನಿ

ಧಾರಣಿಯೆ ತಲೆಕೆಳಗೆ ಮಗುಚಲಿ |
ವಾರಿಧಿಗಳೊಣಗೀಗ ಪೋಗಲಿ |
ಮಾರವೈರಿಯೆ ಸಮರಗೆಯ್ಯಲಿ ಪಾಂಡುಕುವರರಿಗೆ |
ಪಾರಮಾರ್ಥಿಕದಿಂದ ಗೋಷ್ಪದ |
ಧಾರಿಣಿಯ ಕೊಡೆ ಸಾಮದಿಂದಲಿ |
ಸೂರೆಗೊಳ್ಳಲಿ ಎನ್ನ ಸಿರಿ ಸಾಮ್ರಾಜ್ಯವಿಂದಿನಲಿ  || ೫೬ ||

ರಾಗ ಬೇಗಡೆ ಏಕತಾಳ

ಮರುಳೆ ಕೌರವ ಕೇಳು ಪೇಳುವೆನು | ಮೂರ್ಖಂಗೆ ಬುದ್ಧಿಯ |
ನೊರೆಯೆ ಸಾರ್ಥಕವಲ್ಲ ಫಲವೇನು ||
ಉರಗನನು ಮಂತ್ರದಲಿ ಪುಷ್ಪದ | ಸರಗಳಂದದಿ ಮುಡಿಯಬಹುದೈ |
ಶರಧಿ ದಾಟಲು ಬಹುದು ಸಹಸದಿ | ಬರಿಸಬಹುದೈ ತೈಲ ಮಳಲೊಳು  || ೫೭ ||

ಪಥ್ಯವಾಗದು ರೋಗಿಗೌಷಧವು | ಪ್ರಾಚೀನ ಕರ್ಮದೊಳ್ |
ಮೃತ್ಯು ಬಾಯ್ದೆರೆದಿರಲು ಸತ್ಪಥವು |
ಮತ್ತರಿಗೆ ಕಂಗಾಣದಿರುವುದು | ವ್ಯರ್ಥ ಕೆಡುತಿಹೆಯೆಂಬ ಮನದಲಿ |
ಪೃಥ್ವಿಯರ್ಧವ ಕೊಟ್ಟು ನಿಮ್ಮೊಳು | ಚಿತ್ತಶುದ್ಧವ ತಾಳಿರೆಂದನು || ೫೮ ||

ರಾಗ ಕೇದಾರಗೌಳ ಝಂಪೆತಾಳ

ಕೆಟ್ಟವನು ನಾನೀಗಳು | ತತ್ತ್ವಗಳ | ನೆಷ್ಟು ಬೋಧಿಸೆ ಜಗದೊಳು ||
ಪುಟ್ಟಿಕೊಂಡಿಹ ಮನುಜನು | ಸಾಯುತಿಹ | ತೊಟ್ಟ ಛಲಗಳ ತ್ಯಜಿಸೆನು || || ೫೯ ||

ರಾಗ ಸಾರಂಗ ಅಷ್ಟತಾಳ

ಕರುಣದಿ ಕಿವಿಯ ಕೊಟ್ಟು | ಲಾಲಿಸು ಕೆಟ್ಟ | ದುರುಳತನಗಳ ಬಿಟ್ಟು |
ಬರಿದೆ ಕೊಡನ ಮಗುಚಿ ಸುರಿದ ಜಲಗಳಂತೆ | ತರಬೇಡ ಬುದ್ಧಿಗಳು | ಸೈರಿಸಿ ತಾಳು || ೬೦ ||

ರಾಗ ಕೇದಾರಗೌಳ ಝಂಪೆತಾಳ

ಧರೆಯನೇಕಚ್ಛತ್ರವ | ನಾಳುತಿಹ | ದೊರೆಯೆಂಬ ಬಹುಮಾನವ |
ಧರಿಸಿ ಪಿಂದಕೆ ಸರಿಯಲು | ರಣಹೇಡಿ | ಬರಿದೆಯೆಂಬರು ಸರ್ವರು || ೬೧ ||

ರಾಗ ಸಾರಂಗ ಅಷ್ಟತಾಳ

ಇಳೆಯೊಳುತ್ತಮ ಭೂಪನು | ಪೊಂದಿದ ಕೀರ್ತಿ | ಫಲಶೋಭೆ ವೃಕ್ಷವನ್ನು |
ಬಲವಂತನಾವನು ಛೇದಿಸಲಾರನು | ಹಲವರಾಶ್ರಯಿಸುವರು | ತೋಷಿಪರು || ೬೨ ||

ರಾಗ ಕೇದಾರಗೌಳ ಝಂಪೆತಾಳ

ಖ್ಯಾತಿವಡೆದಿಹ ಜಗದಲಿ | ಸಕಲಭೂ | ನಾಥರೆನ್ನಯ ವಶದಲಿ ||
ಓತು ಸೇವೆಯ ಗೆಯ್ವರು | ಸಮರಕೆಂ | ದಾತುರದಿ ಬಂದಿರ್ಪರು || ೬೩ ||

ರಾಗ ಸಾರಂಗ ಅಷ್ಟತಾಳ

ಸ್ಥಿರವಿದಾರಿಗೆ ಕೌರವ | ಗರ್ವಿಸಬೇಡ | ಬರಿದೆಯಸ್ಥಿರ ಭೋಗವ |
ಸ್ಮರಿಸಿ ದುಷ್ಟರ ಬೋಧೆಗೊಳಗಾಗಿ ಕೆಡದಿರು | ಬರರು ಕಡೆಯೊಳವರು || ನಗುತಿರ್ಪರು || ೬೪ ||

ರಾಗ ಕೇದಾರಗೌಳ ಝಂಪೆತಾಳ

ಧೀರ ರಾಧೇಯನಿಹನು | ಶಕುನಿಯತಿ | ಶೂರ ಸಾಹಸವಂತನು ||
ಪಾರಮಾರ್ಥದೊಳೆನ್ನಯ | ಮಾತುಗಳ | ಮೀರಿ ಪೋಗರು ನಿಶ್ಚಯ || ೬೫ ||

ಭಾಮಿನಿ

ತರಳ ಲಾಲಿಸು ಧರ್ಮಜಾತನು |
ಪರಮ ಸಜ್ಜನ ಸದ್ಗುಣಾಕರ |
ಕರುಣದಿಂದವನೊಡನೆ ಮೈತ್ರಿಯನೆಸಗಿದರೆ ನಿನಗೆ ||
ಬರುತಿಹುದು ಸಹವಾಸಗುಣದೊಳು |
ಧರೆಯೊಳಗೆ ಸತ್ಕೀರ್ತಿ ಸಹನೆಗ |
ಳೊರೆಯುವೆನು ಕರ್ಣಾದಿ ಮೂರ್ಖರ ನುಡಿಯ ಕೇಳದಿರು || ೬೬ ||

ರಾಗ ಕೇದಾರಗೌಳ ಝಂಪೆತಾಳ

ಜರೆವುದೇತಕೆ ಎನ್ನನು | ಪಾಂಡವರ | ಪರಿಪರಿಯ ಕೀರ್ತನವನು ||
ಮರುಕದಿಂ ಪೊಗಳಲೇಕೆ | ಎನ್ನೊಡನೆ | ಕೆರಳಿ ನುಡಿವಿರಿ ಮೇಲಕೆ || ೬೭ ||

ರಾಗ ಕೇದಾರಗೌಳ ಅಷ್ಟತಾಳ

ಭೇದವಿಲ್ಲೆನಗೆ ನಿಮ್ಮುಭಯರೊಳೆಲೆ ಕಂದ | ಕ್ರೋಧದಿ ಸಮರಗೆಯ್ಯೆ ||
ಬಾಧಿಪುದತಿಚಿಂತೆ ಸೈರಿಸಲಾರೆನು | ಮೇದಿನಿ ಕೊಡೊ ಸಾಮದಿ || ೬೮ ||

ರಾಗ ಕೇದಾರಗೌಳ ಝಂಪೆತಾಳ

ಭೇದಗಳು ನಿಮಗಿರದಿರೆ | ನಮ್ಮೊಳಗೆ | ವಾದ ಬೇಡೆನ್ನುತಿಹಿರೆ |
ಹೋದ ನುಡಿ ಹಿಂದಾದುದು | ನಮ್ಮಸೇ | ನಾಧಿಪತ್ಯವ ತಾಳ್ವುದು || ೬೯ ||

ವಾರ್ಧಕ

ತರಳ ಕೇಳೈ ಪಾಂಡುಪುತ್ರರೊಳಗೆನಗೀಗ |
ಮರುಕವಿರ್ಪುದಕಾಗಿ ಸಮರ ಬೇಡೆಂದೆನುತ |
ಒರೆದವನು ನಾನಲ್ಲ ನೀತಿಸಾರದ ಕಥೆಯ ಧೊರೆ ರಾಯನವಧರಿಪುದು ||
ನಿರತ ಸದ್ಗುಣ ಸತ್ಯಸಂಧರಿಗೆ ಜಯಲಕ್ಷ್ಮಿ |
ಹರುಷದಿಂ ವಶವಹಳು ಬೇಡ ಸಂಗರವೀಗ |
ಕುರುಪರಂಪರೆಯಾಳ್ದ ಧರಣಿಪರ ಖ್ಯಾತಿಯಂ ನೀಗಬೇಡಲೆ ಕುವರನೆ || ೭೦ ||

ರಾಗ ಭೈರವಿ ಝಂಪೆತಾಳ

ಎಷ್ಟು ಪೇಳಿದರೇನು ಪಾಂಡವರೊಳಿದೆ ಕರುಣ | ದಿಟ್ಟ ಕ್ಷತ್ರಿಯರಾಗಿ ನಾವು |
ತೊಟ್ಟಿರುವ ಛಲದಂತೆ ರಣಗೆಯ್ಯೆ ನೀವೇಕೆ | ಕಟ್ಟುವಿರಿ ವ್ಯರ್ಥ ಪಥಗಳನು || ೭೧ ||

ತರಳ ಕೇಳೆಲೊ ಕರುಣವೆಂತಾದಡಾಗಿರಲಿ | ಹಿರಿಯವನು ಭೀಷ್ಮ ಬಾಳಿರ್ದು |
ಧುರವ ಗೆಯ್ಸಿದನೆಂಬ ನಿಂದೆಗಳು ಬರುತಿಹುದು | ಕುರುರಾಯ ತ್ಯಜಿಸೀಗ ಛಲವ || ೭೨ ||

ಬಿಡದೆ ಖಾಡಾಖಾಡಿ ಹಳಚುವೆನು ಋಣವಿರಲು | ಪೊಡವಿ ಕೊಂಬರು ಪಾಂಡುಸುತರು ||
ಕಡು ಮಮತೆಯಿರಲವರ ಸೇರಿಕೊಂಬುವುದೀಗ | ತುಡುಕಿ ಸಮರವ ಗೆಯ್ಯದಿರೆನು || ೭೩ ||

ಭಾಮಿನಿ

ಅರಿಯೆ ಕೌರವನೆನ್ನ ಸತ್ತ್ವವ |
ಪರಿಕಿಸೆತ್ತಿದ ಧನುವನಿಳುಹಲು |
ಶಿರವರಿವೆ ಭೂಪರನು ದಶಸಾಸಿರವನನುದಿನದಿ ||
ಹರಿಹರಬ್ರಹ್ಮಾದಿಗಂಜೆನು |
ನಿರತವೆನ್ನಯ ಶಪಥ ಕೇಳಿಕೊ |
ಧುರದಿ ಜಯ ಪೊಂದುವುದು ನಿನ್ನಯ ಪುಣ್ಯಫಲವೆನುತ || ೭೪ ||

ಕಂದ

ಬರುವೆನು ಭಾಸ್ಕರನುದಯದಿ |
ತೆರಳೆಂದೆನುತಲೆ ಕಳುಹಿಸಿ ಜನಪನ ಗಂಗಾ ||
ತರಳಂ ತನ್ನಯ ಮನದೊಳ್ |
ಕೊರಗುತ ಮೂರ್ಖರ ಬೋಧನೆಯೆಂತುಟೊಯೆನುತಂ || ೭೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ದುರುಳಮೈತ್ರಿಗಳುದಯಕಿರಣದಿ | ನೆರಳು ವೃದ್ಧಿಯನಯ್ದಿ ನಶಿಸುವ |
ತೆರನು ಪೂರ್ವದೊಳೇರಿ ಕ್ಷಯಗಳ | ಪಡೆಯುತಿಹುದು || ೭೬ ||

ಪರಮ ಸಾಧುಸ್ನೇಹವಸ್ತದ | ನೆರಳು ಪೂರ್ವದೊಳಲ್ಪಕಡೆಯೊಳು |
ಭರಿತ ವೃದ್ಧಿಗಳಾಗುವಂದದೊ | ಳಧಿಕವಹುದು || ೭೭ ||

ದುರುಳನೀತನ ಪೊಂದಿಸಂಗರ | ವಿರಚಿಸಲು ಜಯವಿಲ್ಲ ಕಡೆಯೊಳು |
ತರಣಿಪೌತ್ರನ ಸೇರಿ ಪೋದರೆ | ವಿಜಯವಹುದು || ೭೮ ||

ತಿಂದಿಹೆನು ನಾನೀತನನ್ನವ | ನಿಂದೆಗಳು ತ್ಯಜಿಸೀಗ ಪೋದರೆ |
ಇಂದಿರಾಧವ ಮೆಚ್ಚುವಂದದಿ | ಸಮರಗೆಯ್ವೆ  || ೭೯ ||

ಎಂದು ಹಂಬಲಿಸುತ್ತ ಜಾಹ್ನವಿ | ನಂದನನು ಪವಡಿಸುತ ನಿದ್ರಿಸೆ |
ಚಂದದಿಂ ಮಾರ್ತಂಡನುದಯದೊ | ಳೆದ್ದು ಭರದಿ || ೮೦ ||

ವಿರಚಿಸಿಯೆ ನಿತ್ಯಾಹ್ನಿಕಂಗಳ | ಸುರನದೀಸುತ ಸಭೆಗೆ ಬರುತಿರೆ |
ಬರವ ಕಾಣುತಲೆರಗಿ ಕೌರವ | ಮುದವ ತಾಳಿ || ೮೧ ||

ರಾಗ ಮಾರವಿ ಏಕತಾಳ

ಹರುಷದಿ ಕೌರವನುಪಚರಿಸುತಲಾ | ಸುರನದಿನಂದನನ ||
ಕರೆತಂದಾಸನವೇರಿಸಿ ಸಕಲಾ | ಭರಣವನಿಡಿಸುತಲಿ || ೮೨ ||

ಗುರು ಕೃಪಮುಖ್ಯರ ಮತದೊಳು ಸೇನಾ | ಶರಧಿಗೆ ಪಟ್ಟವನು |
ಸುರನದಿಜಾತಗೆ ರಚಿಸಲು ವಾದ್ಯದ | ರವಗಳು ಭೋರ್ಗುಡಿಸೆ || ೮೩ ||

ಹೊಡೆಸಿದನಾ ಕ್ಷಣ ಕುರುಪತಿ ಡಂಗುರ | ವೊಡನತಿ ವಿಭವದಲಿ ||
ನಡೆಯಲಿ ಗಂಗಾತರಳನ ನೇಮದಿ | ಪಡೆಗಳು ಮುಂದೆನುತ || ೮೪ ||

ಭಾಮಿನಿ

ಅರಸ ಕೇಳಾ ಕ್ಷಣದಿ ಭೀಷ್ಮನು |
ಕುರುಪತಿಯೊಳಿಂತೆಂದ ವೇಗದಿ |
ಕರಿ ತುರಗ ರಥ ಪತ್ತಿ ಮಹರಥರೆಲ್ಲ ಪೊರಮಡಲಿ ||
ಸುರನರೋರಗರೆಲ್ಲ ಮೆಚ್ಚುವ |
ತೆರದಿ ರಿಪುಸೇನೆಯಲಿ ಹಳಚುವೆ |
ಕರಿಗೆ ಬೆದರುವುದುಂಟೆ ಕಂಠೀರವನು ಸಂಗರದಿ || ೮೫ ||

ರಾಗ ಘಂಟಾರವ ಏಕತಾಳ

ಎಂದು ಭೀಷ್ಮನು ಹರಿನಾದಗೆಯ್ಯುತ್ತ |
ಚಂದದಿಂದಲೆ ಧರಿಸಿ ಚಾಪವ | ಸ್ಯಂದನವ ತಾನೇರಿದ || ೮೬ ||

ಶರಧಿ ಭೋರ್ಗರೆವಂದದಿ ಪಟುಭಟ |
ಕರಿತುರಗರಥಪಂಙ್ಕ್ತ ಪೊರಡಲು | ಧರಣಿ ಬಾಯ್ದೆರೆವಂದದಿ || ೮೭ ||

ಭೇರಿಶಂಖ ನಗಾರಿ ದುಂದುಭಿಗಳು |
ಭೋರಿಡಲು ಕಲ್ಪಾಂತಕಾಲದ | ವಾರಿಧಿಯರವದಂದದಿ || ೮೮ ||

ವಾರ್ಧಕ

ಅರಸ ಕೇಳಂಧಕನ ಸುತರು ಸ್ಯಂದನವೇರೆ |
ಪರಿವಿಡಿದು ನಡೆತಂದ ಗುರುಕೃಪಾಶ್ವತ್ಥಾಮ |
ವರ ಬೃಹದ್ಬಲ ಶಲ್ಯ ಶರಧನ್ವ ಬಾಹ್ಲಿಕಂ ಸೋಮದತ್ತ ತ್ರಿಗರ್ತರು ||
ಧೊರೆ ಸುಶರ್ಮ ಕ್ಷೇಮಧನ್ವ ಭೂರಿಶ್ರವಂ |
ಭರದೊಳಗೆ ಸಿಂಧುಪತಿ ಸತ್ರಜಿತು ಸೃಂಜಯಂ |
ಪೊರಮಡಲ್ ತಂತಮ್ಮ ಸೇನೆಸಮುದಾಯದಿಂ ಕುರುಕ್ಷೇತ್ರರಣಭೂಮಿಗೆ || ೮೯ ||

ಭಾಮಿನಿ

ಪರಿಕಿಸುತಲವಶಕುನ ಗಂಗಾ |
ತರಳ ಚಿಂತೆಯ ತಳೆದು ಸೇನೆಯ |
ತರಣಿಪೌತ್ರನ ಬಿಡದಿಗಿದಿರೊಳು ಡೇರೆಗಳನಿಕ್ಕಿ ||
ಪರಮ ವೀರಾವೇಶದಿಂದಿರೆ |
ಸುರನದೀಸುತನೆತ್ತಿ ಕರವನು |
ಧುರದ ಸಂಕೇತಗಳ ಕೇಳುವುದೆನುತ ಪಡೆಗಳಿಗೆ || ೯೦ ||

ರಾಗ ಭೈರವಿ ಏಕತಾಳ

ಕುರುಸೇನೆಯ ಪಟುಭಟರು | ಮುಂ | ದರಿಯುವ ನೃಪರಿಗೆ ನೃಪರು |
ಧುರಕನುವಾಗದೆ ಬಿಡಲು | ಸಂ | ಹರಿಪೆನು ಬಿಡೆ ಕರುಣದೊಳು || ೯೧ ||

ಕರಿಘಟೆಯೊಳು ಕರಿವಿಂಡು | ಬಹ | ತುರಗಕೆ ತುರಗ ಮುಂಗೊಂಡು |
ಹರಿತಂದಿಹ ಕಾಲ್ಬಲಕೆ | ಮುಂ | ಬರಿಯಲಿ ಪತ್ತಿ ಸಂಗರಕೆ || ೯೨ ||

ಧುರಕಂಜುತಲೋಡುವರ | ಪದ | ಕೆರಗಿದ ಶರಣಾಗತರ |
ಬರಿಗಯ್ಯೊಳಗಿರ್ಪವರ | ಸಂ | ಹರಿಸದೆ ಸಲಹುವುದವರ || ೯೩ ||

ಮಾಡಿದ ಶಪಥಗಳಂತೆ | ಮೆರೆ | ದಾಡುತ ಗೆಲದಿರೆ ಪಿಂತೆ |
ಹೇಡಿಗಳಂದದಿ ತಿರುಗೆ | ಚೆಂ | ಡಾಡುವೆ ಶಿರ ನಾ ಕಡೆಗೆ || ೯೪ ||

ರಾಗ ಕೇದಾರಗೌಳ ಅಷ್ಟತಾಳ

ಎನುತಲಿ ಸುರಗಂಗಾತನಯನನೀಕಿಯ | ನನುಮೋದಿಸುತ ವೇಗದಿ ||
ಘನವಾಗಿ ಸರ್ವತೋಭದ್ರವ್ಯೂಹವ ಕಟ್ಟಿ | ಕಣನೊಳು ರಥವನೇರಿ || ೯೫ ||

ಭೋರನುಲೂಕನೊಳೆಂದನು ಪಾಂಡುಕು | ಮಾರರನನುವರಕೆ ||
ಸಾರಿಬರಲು ಪೇಳೆಂದಟ್ಟೆ ಪೋಗುತಲೆಂದ | ವೀರಧರ್ಮಜನೊಡನೆ || ೯೬ ||

ಯುದ್ಧಕೆ ಪ್ರತಿಭಟಿಸಲು ಬೇಕು ಭೀಷ್ಮನ | ಬದ್ಧ ಕಟ್ಟಳೆಗಳಿದು ||
ಸಿದ್ಧವಾಗಿದೆ ಬನ್ನಿರೆನುತ ಉಲೂಕ ತಾ | ನಿದ್ದಲ್ಲಿಗಾಗಿ ಬಂದ || ೯೭ ||

ಭಾಮಿನಿ

ಪರಮ ವೀರಾವೇಶದಿಂದಲಿ |
ಹರಿಯು ಮೊಳಗಿಸೆ ಪಾಂಚಜನ್ಯವ |
ಮರುತಸುತ ಪೌಂಡ್ರವನು ಪಾರ್ಥನು ದೇವದತ್ತವನು ||
ತರಣಿಪೌತ್ರನನಂತವಿಜಯವ |
ಧರಣಿ ಬಾಯ್ದೆರವಂತೆ ನಾದಿಸೆ |
ಬಿರಿಯಲೆದೆ ಪ್ರತಿಭಟರ ಫಲುಗುಣನಾಗ ಗರ್ಜಿಸುತ || ೯೮ ||

ರಾಗ ಮಾರವಿ ಏಕತಾಳ

ತ್ವರಿತದಿ ವಜ್ರವ್ಯೂಹದ ಕೋಟೆಯ | ವಿರಚಿಸಿ ಪರಿಖದೊಳು ||
ಕರಿಘಟೆ ಸ್ಯಂದನಬಲಗಳ ಪಙ್ಕ್ತಯೊ | ಳಿರಿಸಿ ಶಿಖಂಡಿಯನು || ೯೯ ||

ಪುರಜಿತು ಕಾಶೀಪತಿಯುಯುಧಾನನು | ಮರುತಜಶೈಬ್ಯರನು ||
ಧರಣಿಪ ಮತ್ಸ್ಯನ ಧೃಷ್ಟದ್ಯುಮ್ನನ | ನಿರಿಸಿದ ಮಸ್ತಕದಿ || ೧೦೦ ||

ನೋಡುತಲಿತ್ತಲು ಗಂಗಾತನಯನು | ಪಾಡಿ ಧನಂಜಯನ |
ಗಾಢದಿ ಕುರುಭೂಪಾಲನಿಗೆಂದನು | ಮೂಡಿದ ಸಂತಸದಿ || ೧೦೧ ||

ಭಾಮಿನಿ

ಪರಿಕಿಸತ್ತಲು ವೀರಪಾರ್ಥನ |
ಪರಮವಜ್ರವ್ಯೂಹಕೋಟೆಯ |
ಶರವ ಸಿಂಜಿನಿಯೊಳಗೆ ಪೂಡುತ ನಿಂತ ಪಟುಭಟರ ||
ಪರಮವಿಕ್ರಮರರರೆ ಭಾಪುರೆ |
ಧುರಕೆ ಮಹರಥ ಮತ್ತೆ ಷಡುರಥ |
ಕರವ ನೇವರಿಸುತ್ತಲತಿರಥರರ್ಧರಥರಿಹರು || ೧೦೨ ||

ಕಂದ

ಸುರನದಿನಂದನನಿಂತೆನೆ |
ಕುರುಪತಿ ಕೇಳಿದನವರೊಳಗಿರುತಿಹ ರಥಿಕರ ||
ಹರುಷದಿ ತೋರೈ ವಿವರದಿ |
ಪರಿಕಿಪೆ ನಿನ್ನಯ ಕರುಣದೊಳೊರೆಯೆನಲೆಂದಂ || ೧೦೩ ||

ರಾಗ ಕೇದಾರಗೌಳ ಅಷ್ಟತಾಳ

ನರ ವೃಕೋದರ ಮತ್ಸ್ಯ ಯುಯುಧಾನ ಸಮರಥ | ಪುರಜಿತು ಕುಂತೀಭೋಜ |
ನರನಸಂಭವ ಧೃಷ್ಟದ್ಯುಮ್ನ ಶಿಖಂಡಿಯು | ಮಹರಥರಾಗಿಹರು  || ೧೦೪ ||

ಪ್ರತಿಸೇನ ಚೇಕಿತಾನನು ಧೃಷ್ಟಕೇತನು | ಮತಿಯುತ ಧರ್ಮಜನು ||
ಸುತರು ದ್ರೌಪದಿಯಳ ಮತ್ತೆ ಯುಧಾಮನ್ಯು | ಷಡುರಥರಾಗಿಹರು || ೧೦೫ ||

ಧರಣಿಪನುತ್ತಮೋಜಸ ಶೈಬ್ಯನುತ್ತರ | ಸೃಂಜಯ ದ್ರುಪದಾಖ್ಯನು ||
ವರಮಾದ್ರೇಯರು ಕೃತವರ್ಮ ಸಾತ್ಯಕಿ ಮುಖ್ಯ | ರತಿರಥರಾಗಿಹರು || ೧೦೬ ||

ಉಳಿದಿಹ ಪಟುಭಟರೊಳಗರ್ಧರಥಿಕರು | ಕೆಲವು ಮಂದಿಗಳಿಹರು ||
ಬಲಪರಾಕ್ರಮರೆನೆ ಕೌರವ ವಿನಯದಿ | ಸುರನದೀಸುತನೊಳೆಂದ || ೧೦೭ ||

ಪರಿಭೇದವೇನುಂಟು ರಥಿಕವರ್ಗದಿ ಪೇಳು | ಧರಣಿಪರೆಲ್ಲರಲಿ ||
ಕರೆಯುವುದೇಕಿಂಥ ಭೇದಗಳೆನೆ ಪೇಳ್ದ | ಪರಮ ಸಂತೋಷದಲಿ || ೧೦೮ ||

ರಾಗ ಸೌರಾಷ್ಟ್ರ ಮಟ್ಟೆತಾಳ

ಕುರುಕುಲೇಶ ಕೇಳು ಮುದದೊಳು | ಭೇದವೊರೆವೆ | ಪರಿಕಿಸಯ್ಯ ನಿಂತು ರಥದೊಳು ||
ತುರಗ ರಥ ಪದಾತಿ ಸೂತ | ಕರಿಘಟಾಳಿಗಳನು ವೈರಿ |
ಶರದ ಹತಿಗೆ ಸಿಲುಕದಂತೆ | ಹೊರೆವನಾತ ಸಮರಥಾಖ್ಯನು |
ಪಡೆವನಿಂಥ | ಬಿರುದೆ ಮಹಾರಥಿಕನೆಂಬನು || ೧೦೯ ||

ವೀರಷಡುರಥಾಖ್ಯನೆಂಬನು | ತುರಗರಥವ | ಸಾರಥಿಯ ಪೊರೆದುಕೊಂಬನು |
ಸಾರಥಿಯು ತನ್ನ ಸಹಿತ | ಹೋರಿ ಸಲಹಿಕೊಂಬನೋರ್ವ |
ಶೂರನತಿರಥಾಖ್ಯ ಮತ್ತೆ | ಕ್ರೂರಶರದಿ ತಪ್ಪಿಕೊಂಬನು |
ಅರ್ಧರಥಿಕ | ನೊರ್ವ ತನ್ನನುಳುಹಿಕೊಂಬನು || ೧೧೦ ||

ರಾಗ ಶಂಕರಾಭರಣ ತ್ರಿವುಡೆತಾಳ

ಎಂದು ಕುರುಪತಿಯನ್ನು ತೊಲಗುತೆ | ನಿಂದಿರಲು ರಥವೇರುತ ||
ಬಂದು ಧರ್ಮಜನೆರಗಲಪ್ಪುತ | ಮುದವ ತಾಳಿ || ೧೧೧ ||

ಸತ್ಯಸಂಧನೆ ಸುಗುಣ ಮತ್ಪ್ರಿಯ | ಪೌತ್ರ ನಿನ್ನನು ಕಾಣಲು |
ಹೊತ್ತಿದುದು ಶೋಕಾಗ್ನಿ ಜಠರಕೆ | ಪೇಳ್ವುದೇನು || ೧೧೨ ||

ಕಂದ ಕೇಳೈ ವನದಿ ವಿಧವಿಧ | ದಿಂದ ಶೋಕಿಸುತಿರ್ದೆಯ |
ಬಂದುದೇ ಧುರವೀಗ ಗೆಲಿಸುವ | ಇಂದಿರೇಶ  || ೧೧೩ ||

ಅರಿಗಳುರೆ ನಾವ್ ನಿಮಗೆ ತರಳನೆ | ಧುರಕೆ ನಿಂದಿಹ ಕಾಲದಿ |
ಬರುವುದನುಚಿತ ಪ್ರತಿಭಟರು ನೀ | ನರಿತು ನೋಡು || ೧೧೪ ||

ಕುಳಿತು ಕೊಳ್ಳೈ ಸತ್ಯಸಂಧನೆ | ಘಳಿಲನೇತಕೆ ಬಂದೆಯ |
ತಿಳುಹೆನುತಲಿರೆ ಭೀಷ್ಮನಿತ್ತಲು | ಸೇನೆಯೊಳಗೆ || ೧೧೫ ||

ಭಾಮಿನಿ

ಪರಿಯ ನೋಡುತಲಿತ್ತ ಫಲುಗುಣ |
ಮರುತಸುತ ಸಾತ್ಯಕಿಯರೆಲ್ಲರು
ಧುರಪರಾಕ್ರಮರಾಗಿ ನಾವಿರೆ ವೈರಿಮೋಹರದಿ ||
ಅರಿಗಳೆಡೆ ಧರ್ಮಜನು ಸಾರುತ |
ಶರಣುವೊಕ್ಕನಿದೇನೆನುತ್ತಿರೆ |
ಪರಮರೋಷದಿ ಭೀಮ ಪಲ್ಗಡಿಯುತ್ತಲಿಂತೆಂದ ||೧೧೬||

ರಾಗ ಘಂಟಾರವ ಏಕತಾಳ

ಯುದ್ಧಕೋಸುಗ ಸನ್ನದ್ಧರಾಗಿರೆ |
ಶುದ್ಧ ಕ್ಷತ್ರಿಯಛಲವ ತ್ಯಜಿಸುತ | ಬಿದ್ದನೇತಕೆ ಚರಣಕೆ  || ೧೧೭ ||

ಷಂಡರಾದೆವೆ ಧರ್ಮಜನೆಸಗಿದ |
ಭಂಡತನಗಳು ಸರಿಯೆ ರಿಪುಗಳಿ | ಗಂಡಲೆದು ಮಣಿದಿರ್ಪುದು || ೧೧೮ ||

ತರಿವೆನೀ ಕ್ಷಣ ಕುರುಸೇನೆಯೆಲ್ಲವ |
ಧರಣಿ ಸೆಳೆಯದೆ ಬಿಡಲು ಭೀಮನೆ | ಪುರುಷನಲ್ಲವೆ ಶಿವ ಶಿವ || ೧೧೯ ||

ಧುರಕೆ ನಿಂತಪಹಾಸ್ಯವ ತಂದನು |
ಹರನೆ ಮುನಿದರು ಬಿಡೆನು ಗದೆಯೊಳ | ಗೆರಗಿ ರಿಪುಗಳ ಸದೆವೆನು || ೧೨೦ ||

ಎಂದು ಕಂಕಾಲರುದ್ರನಂದದಿ ಭೀಮ |
ಮುಂದುವರಿಯಲು ಕಂಡು ಶ್ರೀಗೋ | ವಿಂದಮೂರುತಿ ನುಡಿದನು || ೧೨೧ ||