ಭಾಮಿನಿ

ಅರೆಗಳಿಗೆ ತಾಳೀಗ ಸೈರಿಸು |
ಶರಣುಹೋದವನಲ್ಲ ಧರ್ಮಜ |
ಧುರಕೆ ನೇಮವ ಕೊಳಲು ಹಿರಿಯರ ಬಳಿಗೆ ಗಮಿಸಿಹನು ||
ಪರಮ ಸುಜ್ಞಾನಿಗಳ ಮಹಿಮೆಗ |
ಳಿರುವುದೀ ಪರಿ ಧುರದಿ ಜಯವಹ |
ಪರಕೆಗೊಂಬುದೆನುತ್ತ ಸಂತೈಸಿದನು ಮುರಹರನು || ೧೨೨ ||

ಕಂದ

ಅನಿತರೊಳಿತ್ತಲು ಗಂಗಾ |
ತನಯನು ಹರುಷದೊಳಂತಕಸುತನನಪ್ಪುತ ||
ಕನಿಕರದಿಂದಲೆ ಮನ್ನಿಸಿ |
ಯಣುಗನೆ ಬಂದಿಹ ಕಾರಣವರುಹೆನಲೆಂದಂ || ೧೨೩ ||

ರಾಗ ನವರೋಜು ಆದಿತಾಳ

ಸುರನದಿನಂದನ ಕೇಳು | ನೀ | ನರಿತಿಹೆ ತಾತ ಕೃಪಾಳು |
ಕರಕೆ ದಾನಗಳಲ್ಲದೊಡವೆಯೊಳೇನಿದೆ | ಹಿರಿಯರಿಗೆರಗದ ಶಿರಕೆ ಮುಕುಟವೇಕೆ  || ೧೨೪ ||

ಪೊರೆದಿರಿ ಬಾಲಾಪ್ಯದೊಳು | ಸ | ದ್ಗುರುಗಳನು ಮೋದದೊಳು ||
ಕರೆಸುತ ಧನುಶರ ವಿದ್ಯೆಯನರುಹಿಸಿ | ಕರುಣವನಿರಿಸಿದಕಾಗಿ ಮಾರ್ಮಲೆತೆವು || ೧೨೫ ||

ಅರಿಗಳ ಜೈಸುವ ತೆರದಿ | ತವ | ತರಳರೊಳ್ ನೀವ್ ದಯದಿ |
ಪರಸುವುದುಚಿತದಿ ಹಿರಿಯರೊಳಸ್ತ್ರವ | ಧರಿಸಿ ಮಾರ್ಮಲೆವುದ ಕ್ಷಮಿಸಬೇಕೆನ್ನಲು || ೧೨೬ ||

ರಾಗ ಜಂಜೂಟಿ ಅಷ್ಟತಾಳ

ಮೆಚ್ಚಿದೆ ನಾನೆಮಸೂನು | ಭಕ್ತಿ | ನಿಶ್ಚಲತೆಯ ಪೇಳ್ವುದೇನು |
ಸಚ್ಚರಿತನೆ ಕಂದ ಪೇಳ್ದೆ ನೀತಿಯ ಕುರು |
ದುಶ್ಚರಿತ್ರನು ಮನಕೆ ತಾರದೆ | ಹಚ್ಚಿಹನು ಸಂಗರವನೀಗಳು || ೧೨೭ ||

ಹಲವಿಂದ್ರಿಯಂಗಳು ನರಗೆ | ಮತಿ | ಚಲಿಪುದಾಶ್ಚರ್ಯವೆ ಹೀಗೆ ||
ಜಲದೊಳಗಿಹ ಮತ್ಸ್ಯ ಗಾಳದ ಕ್ರಿಮಿಗಾಗಿ |
ಬಲದೊಳೊಂದಿಂದ್ರಿಯದ ಚಪಲದಿ | ಕೊಲಿಸಿಕೊಂಬುದು ಮಂದಮತಿಯಲಿ || ೧೨೮ ||

ವಿಧಿಯ ಮೀರಲು ಸಾಧ್ಯವಲ್ಲ | ಈ | ಕದನದಿ ನಿಮಗಳುಕಿಲ್ಲ ||
ಮುದದಿ ನಿಮ್ಮೈವರನೆನ್ನ ಸಂಗರದಲ್ಲಿ |
ನಿಧನವಾಗದ ತೆರದಿ ಕಾಯುವೆ | ಹೃದಯದೊಳು ಕಳವಳಿಸಬೇಡೆಲೆ || ೧೨೯ ||

ಕೊಡಲು ಭಾಷೆಯ ಶಂತಸುತನು | ತೋಷ | ಪಡುತ ವಂದಿಸಿ ಯುಧಿಷ್ಠಿರನು ||
ನಡೆತಂದು ದ್ರೋಣನಿಂಗೆರಗಿ ಕೈ ಮುಗಿದಾಗ |
ಮೃಡಸಮೋಪಮ ಗುರುವೆ ಜಯವೆಂ | ದೊಡನೆ ಪೊಗಳುತ್ತಿರಲು ಕಾಣುತ || ೧೩೦ ||

ರಾಗ ಭೈರವಿ ಝಂಪೆತಾಳ

ಏನು ಬಂದಿಹೆ ಧರ್ಮ | ಸೂನು ನಿನ್ನಭಿಮತಗ | ಳೇನು ಸಂಗರಕಾಗಿನಿಂತ ಪ್ರತಿಭಟನು ||
ಜ್ಞಾನವಂತನೆ ಸುಗುಣ | ಮಾನನಿಧಿ ನಿನ್ನಿರವ | ಸಾನುರಾಗದಿ ಪೇಳಬೇಕೆನಲು ನುಡಿದ ||೧೩೧||

ಕೇಳಯ್ಯ ಗುರುರಾಯ | ಕಾಳಗಕೆ ನಿಂದಿಹೆಯ | ಶೂಲಿಸಮವಿಕ್ರಮನೆ ಜಯವ ಪೊಂದುವರೆ||
ಪೇಳು ಯತ್ನಗಳನ್ನು | ಶಿಷ್ಯನೊಳು ಕರುಣದಲಿ | ತಾಳದಿರು ಕೋಪವನು ಸದ್ಗುಣಾಕರನೆ ||೧೩೨||

ಇಂತೆನಲು ಪೇಳ್ದ ಗುರು | ಕಂತುಪಿತ ಸಲಹುವನು | ನಿಂತು ಧುರದೊಳಗನೃತ ನುಡಿಯೆ ನೀನಾಗ||
ಸಂತು ಎನ್ನಾಯುಷ್ಯ | ಬಿಡುವೆನಾ ದಿನ ದೇಹ | ಚಿಂತೆಯಿಲ್ಲೆನಗೆ ನಿಮ್ಮೊಳು ಕಾದುವುದಕೆ ||೧೩೩||

ವಾರ್ಧಕ

ಲೇಸೆನುತ ಧರ್ಮಜಂ ದ್ರೋಣನಾಜ್ಞೆಯ ಧರಿಸಿ |
ಭಾಷೆಗೊಂಡಾ ಮಾದ್ರಪತಿಕೃಪಾಚಾರ‍್ಯರೊಳ್ |
ತೋಷದಿಂ ಪಿಂತಿರುಗಿಯುಭಯಸೇನೆಯ ನಡುವೆ ನಿಂತು ಕಯ್ಗಳನೆತ್ತುತ ||
ಆಸೆಯುಳ್ಳರು ಜೀವದೊಳಗೆ ಕುರುಸೇನೆಯೊಳ್ |
ಪೋಷಿಪೆವು ಬಂದೀಗ ಮರೆಗೊಂಬುದೆಂದೆನುತ |
ಘೋಷದಿಂದಾ ಯುಧಿಷ್ಠರನೃಪಂ ಸಾರಲ್ಕೆ ಕೌರವಾನುಜನೋರ್ವನು || ೧೩೪ ||

ಭಾಮಿನಿ

ಭರದೊಳಯ್ತಂದಾ ಯುಯುತ್ಸುರೆ |
ಚರಣಕೊಂದಿಸಿ ಧರ್ಮತನಯನೆ |
ಪೊರೆಯಬೇಹುದೆನಲ್ಕೆ ತೋಷದೊಳಭಯವೀಯುತಲಿ ||
ಕರೆದುತರೆ ಶ್ರೀಕೃಷ್ಣನಿತ್ತಲು |
ತುರಗವನು ಚಪ್ಪರಿಸಿ ಮುಂದಕೆ |
ಹರಿಸಿ ಸ್ಯಂದನವರವ ಪಾರ್ಥನ ಕರೆದು ಪೇಳಿದನು  || ೧೩೫ ||

ರಾಗ ಮಾರವಿ ಏಕತಾಳ

ಪರಿಕಿಸು ಪಾರ್ಥನೆ ನಿಂದಿಹ ರಿಪುಮೋ | ಹರದೊಳು ರಥಿಕರನು ||
ಕರದೊಳು ಶಸ್ತ್ರಾಸ್ತ್ರಗಳುರೆ ಧರಿಸುತ | ತಿರುಹುತ ಮೀಸೆಯನು || ೧೩೬ ||

ಕುರುಪತಿ ಭೀಷ್ಮನು ಗುರು ಮಾದ್ರಾಧಿಪ | ಗುರುಸುತ ಸಮರಥರು ||
ದೊರೆಭೂರಿಶ್ರವ ಕೃಪ ಕರ್ಣಾದ್ಯರು | ಮಹರಥರಾಗಿಹರು || ೧೩೭ ||

ಷಡುರಥ ವರ್ಗವ ನೋಡೈ ಸೈಂಧವ | ದೃಢರಥ ದುರ್ಮದನು ||
ಪೊಡವಿಪನುಗ್ರನು ಚಿತ್ರವಿಕರ್ಣನು | ಶಲಭನು ದುಸ್ಸಹನು || ೧೩೮ ||

ಅತಿರಥನಿವಹವ ಪರಕಿಸು ಪಾರ್ಥನೆ | ಕ್ಷತಜಿತು ದುಶ್ಯಾಸ ||
ಪೃಥಿವಿಪ ಸಮಿತಿಂಜಯ ಚಿತ್ರಾಕ್ಷನು | ಶ್ರುತಸೇನಾದ್ಯರನು || ೧೩೯ ||

ಭಾಮಿನಿ

ನೋಡು ಪಿಂದೆಸೆಯರ್ಧರಥಿಕರು |
ಹೂಡಿಹರು ಸಿಂಜಿನಿಗೆ ಬಾಣವ |
ಗಾಢದಲಿ ರಿಪುಗಳನು ಕಡಿದೀಡಾಡು ನೀನೆನಲು ||
ಕೂಡೆ ಪರಿಕಿಸುತಾಗ ಪಾರ್ಥನು |
ಮೂಡಿದಶ್ರುಗಳಿಂದ ಶಿರವೊಲೆ |
ದಾಡಿದನು ಹೃತ್ಕಮಲ ದಹಿಸುತ ಪೊರಡೆ ಮೋಹಾಗ್ನಿ || ೧೪೦ ||

ರಾಗ ಸಾಂಗತ್ಯ ರೂಪಕತಾಳ

ಧುರಕೆ ಮಾರ್ಮಲೆತಿಹ ಗುರು ಪಿತಾಮಹ ಭಾವ | ವರಮಾತೃವರ್ಗ ಬಂಧುಗಳ ||
ತರಳರ ಸನ್ಮಿತ್ರ ಭ್ರಾತ್ರಮಾತ್ಯರನೆಲ್ಲ | ನಿರುಕಿಸುತೆಂದನು ಹರಿಗೆ || ೧೪೧ ||

ಬಂಧುವರ್ಗವ ನಿಷ್ಕಾರುಣ್ಯದಿಂದಲೆ ಕೊಂದು | ಬಂದಿಹ ರಾಜ್ಯ ಬೇಡೆನಗೆ ||
ಇಂದಿರೇಶನೆ ಧುರಕಾಂಕ್ಷೆಯಿಲ್ಲೆನಗೀಗ | ಬೆಂದಿತೆನ್ನೊಡಲು ಮೋಹದೊಳು || ೧೪೨ ||

ರಾಗ ಕೇದಾರಗೌಳ ಝಂಪೆತಾಳ

ಕೆರಳಿ ಮುರಹರನಾಗಳು | ಎಲೆ ಮರುಳೆ | ಧುರದಿ ಮರುಕವೆ ರಿಪುಗಳು ||
ಕರುಣವಿಲ್ಲದೆ ನಿನ್ನನು | ಕೊಲುತಿಹರು | ತ್ವರಿತದಿಂ ಪಿಡಿ ಧನುವನು || ೧೪೩ ||

ರಾಗ ಸಾಂಗತ್ಯ ರೂಪಕತಾಳ

ತರಹರಿಪುದು ಎನ್ನ ದೇಹ ಕೇಳ್ ಮುರರಿಪು | ಕರದ ಕಾರ್ಮುಕ ಜಾರುತಿಹುದು ||
ಅರಿಗಳೆಮ್ಮನು ಕೊಂದು ಕಳೆಯಲಿ ಸರ್ವಥಾ | ಧುರಗೆಯ್ಯಲಾರೆ ಕೇಶವನೆ || ೧೪೪ ||

ರಾಗ ಕೇದಾರಗೌಳ ಝಂಪೆತಾಳ

ಅರಗಿನಾಲಯ ಗೆಯ್ದನು | ಎಲೆ ಪಾರ್ಥ | ಬೆರೆಸಿ ಮೆಲಿಸಿದ ವಿಷವನು ||
ತರುಣಿಮಾನವ ಕಳೆದನು | ಧರೆ ಸೆಳೆದು | ಧುರಕೆ ಬಂದಿದಿರಾದನು || ೧೪೫ ||

ರಾಗ ಸಾಂಗತ್ಯ ರೂಪಕತಾಳ

ಅರಿಗಳು ಪಂಚಪಾತಕರೆಂದು ಬಲ್ಲೆನು | ತರಿಯಲಿವರ ವಂಶವಳಿದು ||
ಪರದೊಳು ತಿಲಜಲಶೂನ್ಯರಾಪರು ಮತ್ತೆ | ತರುಣಿಯರಿಗೆ ಶೋಕವಹುದು || ೧೪೬ ||

ರಾಗ ಕೇದಾರಗೌಳ ಝಂಪೆತಾಳ

ಪಿಡಿ ಪಿಡೀ ಕ್ಷಣ ಧನುವನು | ಮರುಗದಿರು | ಕಡು ದುರುಳ ಕೌರವರನು ||
ಬಿಡದೆ ಹನನವ ಮಾಡೆಲೊ | ಕರುಣವ | ನ್ನಿಡಬೇಡ ಮರುಳಾದೆಲೊ || ೧೪೭ ||

ಭಾಮಿನಿ

ಬೇಡ ಮುರರಿಪು ಬಂಧುವರ್ಗದ |
ಕೂಡೆ ಸಮರವ ಗೆಯ್ಯೆನೆನ್ನನು |
ಕಾಡದಿರು ಶರಣೆಂಬೆನೆನ್ನುತ ಪಾರ್ಥ ಹಲುಬುತಲಿ ||
ರೂಢಿಯೊಳು ಬೀಳಲ್ಕೆ ಮಧುರಿಪು |
ನೋಡಿ ಬಿಗಿವಿಡಿದೆತ್ತಿ ಪೇಳ್ದನು |
ಮೂಢನಹೆಯೋ ತಾಳು ಸೈರಿಸೆನುತ್ತ ಪೇಳಿದನು || ೧೪೮ ||

ಆರು ನೀನೆಲೆ ಪಾರ್ಥ ಬಂಧುವರ್ಗಗಳೆಲ್ಲಿ | ತೋರಿಸು ರಣಕೆ ನಿಂದು ||
ಕಾರುಣ್ಯದಿಂದ ಶೋಕವ ಕೊಂಡು ಬರಿನಗೆ | ಗೇಡಾದೆ ಹೇಸಿಕೆಯು || ೧೪೯ ||

ನರ ನಿನ್ನೊಳಿಹ ಜೀವ ಕುರುಪತಿಯಾತ್ಮನು | ನೊರಜೆಯೊಳಿಹ ಪ್ರಾಣವು ||
ಸರುವವು ಒಂದೆ ಚೈತನ್ಯಕೆ ಲಯವಿಲ್ಲ | ಮರುಳಾಗದಿರು ಸುಮ್ಮನೆ || ೧೫೦ ||

ಒರೆವೆ ಕೇಳೈ ವಿಪ್ರನಿಗೆ ಕರ್ಮ ಮುಖ್ಯವು | ಧುರವೆ ಬಾಹುಜಗಧಿಕ |
ಪರಮ ವಾಣಿಜ್ಯ ವೈಶ್ಯನ ವೃತ್ತಿ ಶೂದ್ರಂಗೆ | ಕೃಷಿಸೇವಾವೃತ್ತಿಗಳು || ೧೫೧ ||

ಡಿಂಭ ಮಾತ್ರವೆ ಪುಟ್ಟಿ ಸಾಯುವುದೈ ಜೀವ | ನೆಂಬಂಗೆ ಚ್ಯುತಿಯಿಲ್ಲವು ||
ಹಂಬಲ ಬಿಡು ತನ್ನ ಕುಲಧರ್ಮದಿಂದಿರೆ | ಸಂಭ್ರಮದಿಂ ಮುಕ್ತಿಯು  || ೧೫೨ ||

ಚರಿಸಿಹ ಸದ್ಧರ್ಮದಿಂದೆನ್ನೊಳಂತ್ಯದಿ | ಸರ್ವ ಚೇತನವೈಕ್ಯವು |
ಪರಿಕಿಸೆನ್ನಯ ಮಾತ ನಿಜವೊ ಸುಳ್ಳೆಂಬುದ | ಸುರರಾಜಸಂಭವನೆ || ೧೫೩ ||

ಕರುಣಿಸುವೆನು ವಿಶ್ವಮೂರ್ತಿಸಂದರ್ಶನ | ವರ ಜ್ಞಾನಚಕ್ಷುವನು ||
ಪರಿಶೋಧಿಸೆನುತಲೆ ತೋರಿದ ಮುರಹರ | ಪರತರ ವಿಶ್ವವನ್ನು || ೧೫೪ ||

ನೋಡಿದನು ಕಲಿಪಾರ್ಥ ವಿಶ್ವಮೂರ್ತಿಯ ದಿವ್ಯ |
ಗಾಢದೇಹದೊಳಷ್ಟವಸು ರುದ್ರ ಸುಮನಸರು |
ಕೂಡಿರುವ ಸಪ್ತರ್ಷಿ ಗರುಡ ಕಿನ್ನರ ಸಾಧ್ಯರುರಗ ನದಿ ಸಾಗರಗಳು ||
ರೂಢಿ ನಭ ಕಾಂತಾರ ಗಿರಿ ತರುನಿಕಾಯದಿಂ |
ಬಾಡಬಾದಿ ಚತುರ್ಥವರ್ಣ ಮೃಗಪಕ್ಷಿಗಳ್ |
ಕೂಡಿರ್ದ ಗುರು ಭೀಷ್ಮ ಕರ್ಣ ಕೌರವ ಧರ್ಮಜಾದಿ ಸಕಲರ ಕಾಣುತ || ೧೫೫ ||

ರಾಗ ಘಂಟಾರವ ಏಕತಾಳ

ನರನು ನೋಡುತ | ಹರಿಯ ಪಾಡುತ | ಶಿರವ ಬಾಗಿಸಿ | ಕರವ ಜೋಡಿಸಿ ||
ತೊರೆದೆ ವ್ಯಥೆಯನು | ಹರಿಯೆ ನಿನ್ನನು | ಹೊರತು ಕಾಣೆನು | ಪರಮ ಪುರುಷನು || ೧೫೬ ||

ನಿನ್ನ ನಂಬಿ ನಾ | ಧನ್ಯನಾದೆನು | ನಿನ್ನ ಮಾತಿನೊ | ಳಿನ್ನು ನಡೆವೆನು ||
ಮುನ್ನ ಪೊರೆದಿಹ | ತೆರದಿ ಪಾಲಿಸು | ಸನ್ನುತಾಂಗನೆ | ವಿಜಯ ಪೊಂದಿಸು || ೧೫೭ ||

ಭಾಮಿನಿ

ನರನೆ ಕೇಳೈ ಮಾರ್ಗಶೀರುಷ |
ಭರಣಿಯುತ ಶುಕ್ಲ ತ್ರಯೋದಶಿ |
ಧುರವನಾರಂಭಿಸುವುದೆನ್ನುತ ಪಿಂತೆ ಕೌರವನು ||
ಒರೆದ ತೆರವೀದಿನದಿ ರಿಪುಗಳ |
ನುರವಣಿಸು ಮುಂದೆಸೆಯ ನಿಂದಿಹ |
ಸುರನದಿಯ ಸುತನೊಡನೆ ಪೌರುಷ ತೋರು ತೋರೀಗ || ೧೫೮ ||

ವಾರ್ಧಕ

ಕೆರಳಿ ಮುಂದೊತ್ತಿ ಧರ್ಮಜ ಕೌರವೇಶ್ವರಂ |
ಮರುತಸುತ ದ್ರೋಣಗಂ ಮಾರ್ಮಲೆಯೆ ದುಶ್ಯಾಸ |
ಧರಣೀಶ ದ್ರುಪದಗಂ ಕಲಿ ವಿಕರ್ಣ ವಿರಾಟ ಕೃಪ ಕುಂತಿಭೋಜರಿಂಗೆ ||
ಗುರುತನುಜಗಭಿಮನ್ಯು ಪ್ರತಿವಿಂಧ್ಯಸೋಮಕಂ |
ಶರಮಳೆಯ ಕರೆಯುತ್ತಲೆಚ್ಚು ಬೊಬ್ಬಿಡುತಿರಲ್ |
ನರನು ಗಾಂಗೇಯನೊಳ್ ಕಾದಬೇಕೆಂದೆನುತ ಧನುಶರಾವಳಿಗೊಂದಿಸಿ || ೧೫೯ ||

ರಾಗ ಸುರುಟಿ ಏಕತಾಳ

ಹರಿಪದಕೊಂದಿಸುತ | ಫಲುಗುಣ | ಧುರಕಪ್ಪಣೆಗೊಳುತ |
ಹರನಿತ್ತಿಹ ಕಾರ್ಮುಕವನು ನೆಗಹುತ | ಸುರನದಿಸುತನೊಳು ಪೇಳಿದನಾ ಕ್ಷಣ || ೧೬೦ ||

ಸುರನದಿನಂದನನು | ನಮ್ಮನು | ಪೊರೆದ ಪಿತಾಮಹನು |
ಶರಮುಖದೊಳು ತವ ಚರಣವ ಪೂಜಿಪೆ | ಪರಸುತ ಪ್ರತ್ಯಸ್ತ್ರಗಳನು ಕಳುಹೈ || ೧೬೧ ||

ನರನೆಂದುದ ಕೇಳಿ | ಜಾಹ್ನವಿ | ತರಳನು ಮುದ ತಾಳಿ |
ಧುರಗೆಯ್ಯುವ ಪ್ರತಿಭಟ ಜಯಪೊಂದದೆ | ಪರಸುವುದುಂಟೇ ವಿಜಯಕೆ ಮರುಳೆ || ೧೬೨ ||

ರಾಗ ಶಂಕರಾಭರಣ ಮಟ್ಟೆತಾಳ

ಬಾಲತನದೊಳೆಮ್ಮ ಸಲಹಿ | ತೋಳತಲ್ಪದೊಳಗೆ ಪೊರೆದ |
ಶೀಲ ತಾತಗಿದುವೆ ಧ್ಯಾನ | ವೆನುತಲೆಚ್ಚನು  || ೧೬೩ ||

ಅಸ್ತು ಕೈಗೊಂಬೆನೆನುತ | ಕತ್ತರಿಸುತಲೊಂದು ಶರದಿ |
ಸ್ವಸ್ಥದಿಂದ ನಿಲಲು ಪಾರ್ಥ | ಮತ್ತೆ ಬಾಣವ  || ೧೬೪ ||

ತಿರುಹಿನೊಳಗೆ ಪೂಡಿ ದಿವ್ಯ | ಚರಣಕಮಲಪಾದ್ಯಕಿದುವೆ |
ಪರಿಗ್ರಹಿಸಬೇಕು ಹಿರಿಯ | ರೆನುತಲೆಸೆದನು  || ೧೬೫ ||

ಅಹಹ ಭಳಿರೆಯೆನುತ ಭೀಷ್ಮ | ಗಹಗಹೀಸಿ ಮುರಿಯೆ ಪಾರ್ಥ |
ಮಹಿಮನಿದಕೊ ಸ್ನಾನಕೆನುತ | ಸುರಿದ ಶರವನು  || ೧೬೬ ||

ಮೆಚ್ಚಿತೆನ್ನ ಮನಗಳೆಂದು | ನುಚ್ಚಿನಂತೆ ಚೂರ್ಣಗೆಯ್ಯೆ |
ಸಚ್ಚರಿತನು ಗಂಧ ಪುಷ್ಪ | ಕೆನುತಲೆಚ್ಚನು  || ೧೬೭ ||

ನಸುನಗುತ್ತಲಾಗ ಭೀಷ್ಮ | ವಸುಧೆಯೊಳಗೆ ಮುರಿದು ಕೆಡಹೆ |
ಎಸೆವ ಭೋಜ್ಯಕೆನುತ ಪಾರ್ಥ | ನೆಸೆದನಸ್ತ್ರವ  || ೧೬೮ ||

ರಾಗ ಮಾರವಿ ಏಕತಾಳ

ದಿಟ್ಟತನದಿ ಮುರಿದದರನು ಭೀಷ್ಮನು | ಸೃಷ್ಟಿಗೆ ಕೆಡಹಿಸಿದ |
ಬಿಟ್ಟು ನೀರಾಜನ ಪ್ರಾರ್ಥನೆಗೋಸುಗ | ಸಿಟ್ಟಿನೊಳುರಿಶರವ || ೧೬೯ ||

ಪರಿತೋಷಗಳಾಯ್ತರರೇ ಫಲುಗುಣ | ಧುರವಿಕ್ರಮನೆನುತ |
ಸುರನದಿನಂದನ ವರುಣಾಸ್ತ್ರದೊಳದ | ಮುರಿದನು ಭರದಿಂದ || ೧೭೦ ||

ತೆರತೆರದಸ್ತ್ರವನಭಿಮಂತ್ರಿಸುತಲಿ | ಗುರಿಯೊಳು ಫಲುಗುಣನು ||
ತ್ವರಿತದಿ ಬಿಡಲದ ಮುರಿಯುತ ಭೀಷ್ಮನು | ನಿಂದಿರೆ ಕಂಡದನು || ೧೭೧ ||

ವಾರ್ಧಕ

ಅರಿತೊಮ್ಮೆ ಸಂಗರದಿ ಪರಮಾಸ್ತ್ರಗಳನೆಲ್ಲ |
ಹರಿಸಬಾರದೆನುತ್ತ ಪಾರ್ಥ ಯೋಚಿಸುತಿರಲ್ |
ಹರಿಯು ಸ್ಯಂದನವರವ ನಡೆಸಿದಂ ಸರ್ವತೋಭದ್ರ ವ್ಯೂಹದ ಕೋಟೆಗೆ ||
ಕುರುಬಲವನೆಲ್ಲ ನುಗ್ಗೊತ್ತುತಿರಲಿತ್ತಲಾ |
ಸುರತರಂಗಿಣಿತನಯ ಪಾಂಡವಾನೀಕದೊಳ್ |
ಭರದಿ ರಥಮಂ ನಡೆಸಿ ವಜ್ರವ್ಯೂಹವ ಪೊಗುತ ತರಿದೊಟ್ಟುತಿರೆ ಸೇನೆಯ || ೧೭೨ ||

ಭಾಮಿನಿ

ಮರುತನಂದನನಿತ್ತ ಗದೆಯನು |
ತಿರುಹಿ ಕುರುಸೇನಾಸಮುದ್ರವ |
ಕೆರಳಿ ಮಥಿಸುತ್ತಿರಲು ಕಂಡಾ ಕೌರವೇಶ್ವರನು ||
ಕರದಿ ಧನುಶರವಾಂತುರೋಷದಿ |
ಸರಿಸಕಿದಿರಾಗಿರಲು ಕಾಣುತ |
ಹರಿಯ ನಾದವ ಗೆಯ್ದು ಪಲ್ಗಡಿಯುತ್ತಲಿಂತೆಂದ || ೧೭೩ ||

ರಾಗ ಭೈರವಿ ಅಷ್ಟತಾಳ

ದುರುಳ ಕೌರವನೆ ನೀನು | ದ್ಯೂತದಿ ಮೋಸ | ವೆರಸಿಯಟ್ಟಿದೆಯೆಮ್ಮನು |
ಧರೆಯನೆಳೆದ ಗರ್ವ ಮುರಿದೀಗೆನ್ನಳಲನ್ನು | ಹರುಷದಿ ತೀರ್ಚಿಕೊಂಬೆ || ೧೭೪ ||

ಸಿಕ್ಕಿದನ್ನಗಳ ತಿಂದು | ಬಂದಿಹ ಡೊಳ್ಳ | ಘಕ್ಕನೆ ಒಡೆಸಿಕೊಂಡು |
ಮುಕ್ಕಬೇಡೆಲೆ ಮಣ್ಣ ಪರರ ಸಂಪತ್ತಿಗೆ | ದುಃಖಿಪುದೇಕೊ ಭೀಮ || ೧೭೫ ||

ಅರಗಿನಾಲಯದಿ ನೀನು | ವಂಚಿಸಿಯೆಮ್ಮ | ನುರುಹಲೆತ್ನವ ಗೆಯ್ದೆಯೊ ||
ಪರಮಪಾತಕಿಗಿಂಥ ರಾಜ್ಯ ದಕ್ಕುವುದುಂಟೆ | ಹೊರಳು ಭೂ ದೇವತೆಯು || ೧೭೬ ||

ಹಸಿದ ಬಕಾಸುರನ | ಕೂಳನು ತಿಂದು | ಯಸಕದೊಳಾ ದೈತ್ಯನ |
ಬಸವಳಿಸುತ ಕೊಂದ ಕ್ರೂರ ಪಾಪಿಯೆ ನೀನು | ವಸುಧೆ ಭಾರಕನಹುದೊ || ೧೭೭ ||

ಬಾಡಬಹತ್ಯವನ್ನು | ಮಾಡ್ದನ ಕೊಂದೆ | ಮೂಢ ಕೌರವನೆ ನೀನು |
ಖೋಡಿ ಬಕಾಸುರಗೆಣೆ ಭೋಜ್ಯದೊಳು ವಿಷ | ಗೂಡಿಸಿ ಮೆಲಿಸಿದೆಯ || ೧೭೮ ||

ರಾಗ ಮಾರವಿ ಏಕತಾಳ

ಮಾತುಗಳೇತಕೊ ವ್ಯರ್ಥದಿ ಭೀಮನೆ | ಪೂತುರೆ ತಾಳೆನುತ ||
ಖಾತಿಯೊಳಾಕರ್ಣಾಂತಕೆ ಸೆಳೆಯುತ | ಲಾತುರ ಶರವೆಸೆದ || ೧೭೯ ||

ಗದೆಯೊಳಗದರನು ಬಡಿಯುತ ಭೀಮನು | ಸದೆಯಲು ಕೌರವನ ||
ಚದರಿತು ಪಂಚೇಂದ್ರಿಯಗಳು ಮೂರ್ಛೆಗ | ಳೊದಗುತ ಚೇತರಿಸಿ || ೧೮೦ ||

ಭಳಿಭಳಿರೆನ್ನುತ ಕುರುಪತಿಯಾ ಕ್ಷಣ | ನೆಗಹುತ ಪರಿಘವನು |
ಬಲಿದೆತ್ತುತ ಮರುತಜನನು ಹೊಡೆಯಲು | ತಳೆದನು ಮೂರ್ಛೆಯನು || ೧೮೧ ||

ಹರುಷದೊಳಂಧಕನಣುಗನು ಷಡುರಥ | ಧರಣಿಪವರ್ಗವನು |
ತರಿಯುವೆನೆನ್ನುತ ಪೋಗಲು ಭೀಮನು | ಶಿರವೆತ್ತುತಲಾಗ || ೧೮೨ ||

ನರಕೇಸರಿಯೆನೆ ಭೋರ್ಗರೆಯುತಲಾ | ಮರುತಕುಮಾರಕನು |
ತಿರುಹುತ ಗದೆಯನು ನೋಡಿದ ಕೌರವ | ತೆರಳಿದನೆಲ್ಲೆನುತ || ೧೮೩ ||

ಭಾಮಿನಿ

ಇಂದು ಮೊದಲಾಗಂಧಕನ ಸುತ |
ರೊಂದುಶತವೀ ಗದೆಗೆಯಾಹುತಿ |
ಚಂದದಿಂದೀಯದಿರೆ ಕುಂತಿಯ ಪುತ್ರ ನಾನಲ್ಲ ||
ಎಂದು ಭಾಷೆಯ ಗೆಯ್ದು ಮಾರುತ |
ನಂದನನು ರೋಷದಲಿ ಪೊರಡಲು |
ಮುಂದುವರಿಯುತ ಕೌರವೇಂದ್ರನ ಸಹಜರಡ್ಡೈಸೆ  || ೧೮೪ ||

ವಾರ್ಧಕ

ಮರುತನಂದನನಾಗ ಪಲ್ಗಡಿದು ಹೂಂಕರಿಸಿ |
ತಿರುಹಿ ಗದೆಯನ್ನೆತ್ತುತುಗ್ರದುರ್ಮುಖಚಿತ್ರ |
ವರಸುಷೇಣಕ ವೀರಬಾಹು ಮುಖ್ಯಾಂಧಕನ ತರಳರಷ್ಟಕವರ್ಗವ ||
ಶಿರವ ಚೂರ್ಣಿಸಿ ಕೆಡಹಿ ಗಂಭೀರನಾದದೊಳ |
ಗರಸುತಿರೆ ಕೌರವನನಿತ್ತ ಭೀಷ್ಮಾಚಾರ್ಯ |
ನರಿತು ಭೀಮನಿಗೆದುರು ನರಕಸುತನೆಂದೆನುತ ಕರೆಯೆ ಬಂದಾ ಕ್ಷಣದಲಿ || ೧೮೫ ||

ಕಂದ

ಸುರನದಿಯಣುಗಗೆ ನಮಿಸಲ್ |
ಪರಸುತಲೆಂದ ವೃಕೋದರನೆಡೆಗಂ ತ್ವರೆಯೊಳ್ ||
ತೆರಳೈ ಸಮರಕೆ ನೀನೆನೆ |
ನರಕನ ಸಂಭವ ಮರುತಜನೆದುರಯ್ತಂದಂ || ೧೮೬ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭರಿತ ರೋಷದಿ ಸುಪ್ರತೀಕವ | ನರಕಸುತನಡರುತ್ತ ಬರುತಿಹ |
ಪರಿಯ ಕಾಣುತ ಭೀಮ ಗದೆಯನು | ತಿರುಹುತೆಂದ || ೧೮೭ ||

ಆರೆಲವೊ ಮುಂಬರಿದು ಬಂದಿಹ | ಶೂರ ನಿನ್ನಯ ಪೆಸರದೇನೈ |
ಭಾರಿ ದರ್ಪವ ತೋರಿ ಬರುತಿಹೆ | ಯಾರ ಸುತನು || ೧೮೮ ||

ನರಕಸುತ ಪ್ರಾಗ್ಜ್ಯೋತಿಷಾಖ್ಯದ | ಪುರದಧಿಪ ಭಗದತ್ತನಾಮಕ |
ಧರಣಿದೇವಿಯ ಪೌತ್ರನೆನುತಲೆ ಶರವನೆಚ್ಚ || ೧೮೯ ||

ರಾಗ ಶಂಕರಾಭರಣ ಮಟ್ಟೆತಾಳ

ಬರುವ ಶರವ ತರಿದು ಭೀಮ | ಗದೆಯ ತಿರುಹುತಾಗ ಬಂದು |
ಎರಗಲದರ ಹತಿಗೆ ತಪ್ಪಿ | ಭಿಂಡಿವಾಲವ || ೧೯೦ ||

ಎತ್ತಿ ತೂಗುತಾಗಲೆರಗೆ | ಕೃತ್ತಿವಾಸನಂತೆ ಕನಲಿ |
ಪೃಥ್ವಿಯೊಳಗೆ ಕೆಡೆದನದರ | ಭೀಮ ಭರದಲಿ  || ೧೯೧ ||

ಭಾರಿ ಶೂಲವನ್ನು ನೆಗಹಿ | ಧಾರಿಣೀಯ ಪೌತ್ರ ಕ್ರೋಧ |
ವೇರಿಭೀಮನುರಕೆ ತಿವಿಯೆ | ಮೂರ್ಛೆ ತಾಳಿದ || ೧೯೨ ||